ಪಡುಬಿದ್ರೆ-ಮೂಡಬಿದ್ರೆ ಎಂಬ ಹಳ್ಳಿಗಳು ಮಂಗಳೂರಿನ ಉತ್ತರಕ್ಕಿವೆ. ಇವು ಉಡುಪಿಯ ದಕ್ಷಿಣಕ್ಕಿವೆ. ಉಡುಪಿಯಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿ ಪಡುಬಿದ್ರೆ ಇದ್ದರೆ ಆ ರಾಷ್ಟ್ರೀಯ ಹೆದ್ದಾರಿಯ (ನಂ.೧೭) ಅಕ್ಕ ಪಕ್ಕದಲ್ಲಿ ಮಾತ್ರ ಪಡುಬಿದ್ರೆ ಪೇಟೆ ಇದೆ. ಖಡ್ಗೇಶ್ವರಿ ಬ್ರಹ್ಮಸ್ಥಾನದ ಡಕ್ಕೆಬಲಿಗೆ ಪಡುಬಿದ್ರೆ ಪ್ರಸಿದ್ಧ.

ಸುಬ್ರಾಯ ಮಾಣಿ ಭಾಗವತರು ಪಡುಬಿದ್ರೆಯವರು. ಪಡುಬಿದ್ರೆಯು ಸಂಗೀತದ ಗಂಧಗಾಳಿಯೇ ಇಲ್ಲದ ಊರು. ಅಂತಹ ಊರಿನ ಮಧ್ಯೆ ಒಂಟಿ ಸಲಗ ಭಾಗವತರು. ಇವರ ತಂದೆ ಅಕ್ಕಮ ನಾರಾಯಣ ಆಚಾರ್ಯರು . ಹೊಟ್ಟೆಪಾಡಿಗಾಗಿ ಆಚಾರ್ಯರು ಕೇರಳದ ತ್ರಿಪುಣಿತ್ತುರಕ್ಕೆ ನಡೆದರು. ಅಲ್ಲಿನ ಅರಮನೆಯ ಪೂಜೆಯ ಕೆಲಸ ಮಾಡುತ್ತಾ ‘ಎಂಬ್ರಾಂದ್ರಿ’ಯಾದರು. ಮಗ ಸುಬ್ರಾಯನಿಗೆ ಸಂಗೀತ ಕಲಿಸುವುದಕ್ಕೆ ತ್ರಿಪುಣಿತ್ತುರ ವಿಶ್ವನಾಥ ಅಯ್ಯರ್ ಅವರಲ್ಲಿ ಬೇಡಿಕೊಂಡರು. ಸುಬ್ರಾಯನ ಸಂಗೀತ ಶಿಕ್ಷಣ ಹೀಗೆ ಪ್ರಾರಂಭವಾಯಿತು.

ಕೇರಳದಲ್ಲಿ ಆಗ ಚೆಂಬೈ ವೈದ್ಯನಾಥ ಭಾಗವತರ ಉಚ್ಚ್ರಾಯ ಕಾಲ. ಆಚಾರ್ಯರು ಚೆಂಬೈಯವರ ಸಂಗೀತಕ್ಕೆ ಶರಣಾಗಿದ್ದರು ಹಾಗೂ ಅವರಿಗೆ ತನ್ನಿಂದಾದ ಸೇವೆಯನ್ನು ಸಲ್ಲಿಸುತ್ತಿದ್ದರು. ಪ್ರಸನ್ನರಾದ ಚೆಂಬೈಯವರು ತನ್ನಿಂದ ಏನಾದರೂ ಸಹಾಯಬೇಕೇ ಎಂದು ಕೇಳಿದಾಗ, ತನ್ನ ಮಗನಿಗೆ ಸಂಗೀತ ಕಲಿಸಿಕೊಟ್ಟರೆ ತಮಗದೇ ಮಹಾಪ್ರಸಾದ ಎಂದು ಬಿನ್ನವಿಸಿದರಂತೆ. ಅಂದಿನಿಂದ ಸುಬ್ರಾಯನಿಗೆ ಚೆಂಬೈಯವರಲ್ಲಿ ಶಿಷ್ಯವೃತ್ತಿ ಪ್ರಾಪ್ತವಾಯಿತು.

ಸುಬ್ರಾಯನನ್ನು ಚೆಂಬೈ ಅವರು ಮನೆಯಲ್ಲೇ ನಾಲ್ಕೈದು ವರ್ಷಗಳ ಕಾಲ ಇಟ್ಟುಕೊಂಡಿದ್ದರು. ಸುಬ್ರಾಯನನ್ನು ‘ಮಾಣಿ’ ಎಂದೇ ಕರೆಯುತ್ತಿದ್ದುದರಿಂದ ಆ ಹೆಸರೂ ಇವರಿಗೆ ಅಂಟಿತು. ಮಾಣಿಗೆ ಬೆಳಗ್ಗೆ ನಾಲ್ಕರಿಂದ ಆರರವರೆಗೆ ಸಂಗೀತದ ಅ.ಉ. ಓಂ ಕಾರ ಸಾಧನೆಗಳ ಕಠಿಣ ತಪಸ್ಸು . ಮುಂದೆ ಗುರು ಚೆಂಬೈಯವರಿಗೆ ಉಪಚಾರ, ಹಗಲಿಡೀ ಮನೆಗೆಲಸ, ಭತ್ತ ಒಣಗಿಸುವುದು, ತೆಂಗಿನ ಗಿಡಗಳಿಗೆ ನೀರೆರೆಯುವುದು. ರಾತ್ರಿ ೮ ರಿಂದ ೧೨ ರವರೆಗೆ ಮತ್ತೆ ಸಂಗೀತ ಸಾಧನೆ. ಗುರುಗಳೆದುರು ಹಾಡುವಾಗ ತಪ್ಪುಗಳಾದಲ್ಲಿ ಹೊಡೆತ ತಪ್ಪುತ್ತಿರಲಿಲ್ಲ. ಗುರುಗಳಿಲ್ಲದಾಗ ಚೆಂಬೈಯವರ ಚೆಂಬೈಯವರ ತಮ್ಮ ಸುಬ್ರಹ್ಮಣ್ಯ ಭಾಗವತರಿಂದ ಪಾಠಗಳಾಗುತ್ತಿದ್ದವು. ವರ್ಷ ಕಳೆದಂಥೆ ಚೆಂಬೈಯವರ ಶಿಷ್ಯ ಸಂಖ್ಯೆ ಬೆಳೆಯತೊಡಗಿತು. ಮನೆಯ ಪಾಠ ಚೆಂಬೈಯವರಿಗೆ ಕಾಟವಾಗಿ ಪರಿಣಮಿಸಿತು. ಸುಮಾರು ನಾಲ್ಕು ವರ್ಷಗಳ  ಕಾಲ ಕಳೆದ ‘ಗುರುಕುಲ’ ರದ್ದಾಯಿತು. ಗುರುಗಳ ಮನೆಯ ಬಳಿಯ ಹಾಸ್ಟೆಲಿನಲ್ಲಿ ಮಾಣಿಯವರೂ ಉಳಿಯಬೇಕಾಯಿತು. ಹೀಗೆ ಹತ್ತು ವರ್ಷ ಚೆಂಬೈಯವರಲ್ಲಿ ಪಾಠಗಳು ನಡೆದವು. ಈ ಅವಧಿಯಲ್ಲಿ ಹೇಳಿಸಿಕೊಂಡಿದ್ದ ರಾಗಗಳು ಸುಮಾರು ಐವತ್ತು ಮಾತ್ರ ಮತ್ತು ಕೃತಿಗಳು ಸುಮಾರು ಅರುವತ್ತು ಮಾತ್ರ! ಪಾಠಗಳೆಲ್ಲವೂ ಕಂಠಪಾಠ. ಒಂದೇ ಒಂದನ್ನೂ ಬರವಣಿಗೆಯ ರೂಪದಲ್ಲಿ ಬರೆದಿಡುವಂತಿಲ್ಲ. ಆದರೆ ಕಲಿತದ್ದಷ್ಟೂ ಬಂಗಾರ.

ಚೆಂಬೈಯವರು ಇಲ್ಲದಿದ್ದಾಗ, ಉಳಿದೆಲ್ಲಾ ಶಿಷ್ಯರಿಗೆ ಪಾಠ ಹೇಳುವ ಜವಾಬ್ದಾರಿ ಮಾಣಿಗೇ ಬೀಳುತ್ತಿತ್ತು. ಗುರುಗಳು ವಾಪಸಾದ ಮೇಲೆ ಆ ಶಿಷ್ಯರ ಪರೀಕ್ಷೆ. ಮಾಣಿಗೆ ಅದೊಂದು ಅಗ್ನಿ ಪರೀಕ್ಷೆ. ಶಿಷ್ಯಂದಿರು ಹಾಡುವಾಗ ತಪ್ಪಿದರೆ ‘ಮಾಣಿ’ಗೇ ಶಿಕ್ಷೆ! ಅಷ್ಟಿದ್ದರೂ ಗುರುಗಳಿಗೆ ಮಾಣಿಯ ಮೇಲೆ ಅಗಾಧ ಮಮತೆ. ಕಚೇರಿಗಳಿಗೆಂದು ಪಕ್ಕದ ಊರುಗಳಿಗೆ ಗುರುಗಳು ‘ಮಾಣಿ’ಯನ್ನೇ ಕಳುಹಿಸಿ ಪ್ರೋತ್ಸಾಹಿಸುತ್ತಿದ್ದರು.

೧೯೬೫ರ ಸುಮಾರಿಗೆ ಮಾಣಿಯವರು ಕೇರಳ ಬಿಟ್ಟು ತಾಯ್ನಾಡಿಗೆ ಮರಳಿದರು. ಯಕ್ಷಗಾನದ ಹಾಡುಗಳನ್ನು ಹಾಡುವ ಭಾಗವತರಂತೆ ಸುಬ್ರಾರಾಯರೂ ಹಾಡುತ್ತಿದ್ದಾರೆ ಎಂದುಕೊಂಡರು ಜನ. ಹಾಗಾಗಿ ಭಾಗವತೆಂಬ ಹೆಸರೂ ಇವರೊಂದಿಗೆ ಹೊಸೆದುಕೊಂಡಿತು. ಪಡುಬಿದ್ರೆಯ ಸುಬ್ರಾಯ ಮಾಣಿ ಭಾಗವತರು ಸಂಗೀತ ವೃತ್ತಿಗಾಗಿ ತೊಡಗಿಸಿಕೊಂಡರು. ಮನೆವಾರ್ತೆ, ಕೃಷಿ, ತೋಟಗಾರಿಕೆ ಇವುಗಳ ಜವಾಬ್ದಾರಿ ಇದ್ದುದರಿಂದ ಸಂಗೀತ ವೃತ್ತಿ ಎರಡನೆಯ ಕಸುಬಾಗಬೇಕಾಯಿತು. ಪಡುಬಿದ್ರೆಯಲ್ಲಿ ಇವರ ಸಂಗೀತ ಯಾರಿಗೂ ಬೇಡವಾದ್ದರಿಂದ, ತನ್ನ ಆಸಕ್ತಿಯಿಂದಲೇ ಮಂಗಳೂರು, ಕಾಸರಗೋಡು, ಎಡನೀರು, ಸಂಪತ್ತಿಲ, ಉಪ್ಪಂಗಳ, ಕಾಂಗಾಡುಗಳವರೆಗೂ ಹೋಗಿ ಮನೆಪಾಠ ಆರಂಭಿಸಿದರು.

ಸಂಗೀತ ಪಾಠ ಹೇಳುವಾಗ ಮಾಣಿ ಭಾಗವತರಿಗೆ ಚೆಂಬೈಯವರದೇ ಮರ್ಜಿ. ಸಂಗೀತವೆಂದರೇನೆಂದು ತಿಳಿಯದ ದಕ್ಷಿಣ ಕನ್ನಡ ಜಿಲ್ಲೆಯ ಹಲವರಿಗೆ ಇವರ ಸಂಗೀತ ಶಿಕ್ಷೆಯಾಗಿತ್ತಂತೆ. ಈ ನಿರಾಸೆಯ ವಾತಾವರಣದಲ್ಲೇ ಮಾಣಿ ಭಾಗವತರು ಸಂಗೀತ ಪಾಠ ಹೇಳಿದರು. “ಪಾಪ! ಹೊಟ್ಟೆ ಪಾಡಿಗಾಗಿ ಪಾಠ ಹೇಳಲು ಬರುತ್ತಿದ್ದಾನೆ”. ಎಂಬ ಜನರ ಅನುಕಂಪ ಭಾಗವತರನ್ನು ಕಿಡಿ ಕಿಡಿಯಾಗಿಸುತ್ತಿತ್ತಾದರೂ, ಸಂಗೀತವನ್ನು ಅವರು ಬಿಡಲಿಲ್ಲ. ಸಾರ್ವಜನಿಕವಾಗಿ ಪ್ರತಿಷ್ಠೆ ಸಿಗಬಹುದೆಂದು ಅಂದುಕೊಂಡು ಅವರಲ್ಲಿ ಸಂಗೀತ ಕಲಿತವರೇ ಅನೇಕ. ಪ್ರೀತಿಯಿಂದ ಯಾರೂ ಕಲಿಯುವ ‘ಸಾಧನೆ’ಗೆ ಇಳಿಯಲಿಲ್ಲ. ‘ಗುರು -ಶಿಷ್ಯ ಗೌರವ ಇಟ್ಟುಕೊಳ್ಳುವುದೇ ಗೊತ್ತಿಲ್ಲದವರು’- ಎಂದು ಈ ಬಗೆಗೆ ಮಾಣಿ ಭಾಗವತರು ನೊಂದು ಹೇಳುತ್ತಾರೆ. ಮಾಣಿ ಭಾಗವತರಿಗೆ ವಯಸ್ಸು ಎಷ್ಟಾಯಿತೆಂದು ಅವರಿಗೇ ತಿಳಿದಿಲ್ಲ. ನಳ ಸಂವತ್ಸರದ ಮೀನ ಮಾಸದಲ್ಲಿ ಹುಟ್ಟಿದುದೆಂದು ಕೆಲವು ಕಾಗದ ಪತ್ರಗಳ ಸಮೀಕ್ಷೆಯಿಂದ ಈ ಲೇಖಕನಿಗೆ ತಿಳಿಯಿತು. ಹಾಗಾಗಿ ೧೯೧೬ ರಲ್ಲಿ ಹುಟ್ಟಿದವರೆಂದಾಯಿತು. ಎಂಬತ್ತೇಳರ ವಯಸ್ಸಿನಲ್ಲಿರುವ ಮಾಣಿ ಭಾಗವತರ ದೇಹ ಬಲಿಷ್ಠವಾಗಿಯೇ ಇದೆ. ಹಾಡುವ ಹುಮ್ಮಸ್ಸು ಇನ್ನೂ ಅತೀವವಾಗಿಯೇ ಇದೆ. ಪರ್ಯಾಯ ಶ್ರೀ ಶ್ರೀ ವಿಶ್ವೇಶತೀರ್ಥರು, ಪೇಜಾವರ ಮಠ ಇವರು ನಿಮಗೆ ಈ ಬಾರಿ (೨೦೦೨) ಸನ್ಮಾನಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ನೀವು ಬರಬೇಕೆಂದು ಆಹ್ವಾನಿಸಲು ಈ ಲೇಖಕ ಹೋಗಿದ್ದಾಗ ‘ನಾನು ಹಾಡುವುದು ಬೇಡವಂತೋ?’ ಎಂದು ತಮ್ಮ ಉತ್ಸಾಹವನ್ನು ತೋರಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಉಡುಪಿಯ ಅಕಾಡೆಮಿ ಸಂಗೀತ ಶಾಲೆ, ಸೂರಳಿಯ (ಶೃಂಗೇರಿಯ ಸಮೀಪ) ಶ್ರೀ ತ್ಯಾಗರಾಜ ಪುರಂದರ ಆರಾಧನಾ ಸಮಿತಿಯವರು ಹಾಗೂ ಮಂಗಳೂರಿನ ‘ಕಲಾ ದರ್ಶನ’ದವರು ಸದ್ದುಗದ್ದಲವಿಲ್ಲದೆ ಭಾಗವತರನ್ನು ಸನ್ಮಾನಿಸಿದ್ದರು. ಉಡುಪಿಯ ‘ರಾಗ ಧನ’ಸಂಸ್ಥೆಯವರು ಭಾಗವತರನ್ನು ೧೯೯೩ ರಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಿ “ದಕ್ಷಿಣ ಕನ್ನಡದ ಚೆಂಬೈ” ಎಂಬುದಾಗಿ ಗುರುತಿಸಿ, ನಿಧಿ ಸಮರ್ಪಣೆ ಮಾಡಿ ಲವರಿಂದ ಕಾಂಭೋಜಿ ರಾಗದ ಅಪೂರ್ವ ಎಂದೆನಿಸಬಲ್ಲ ರಾಗ-ತಾನ-ಪಲ್ಲವಿ ಕಚೇರಿಯನ್ನೂ ಏರ್ಪಡಿಸಿ ಗೌರವಿಸಿತು. ಅಲ್ಲಿಂದ ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಪ್ರದಾನಗಳಾದುವು. ೨೦೦೨ನೇ ಸಾಲಿನ ‘ಅನನ್ಯ ಸಂಗೀತ ಸಂಸ್ಥೆಯು ಉಡುಪಿಯಲ್ಲಿ ನೀಡಿ ಭಾಗವತರನ್ನು ಸನ್ಮಾನಿಸಿದ್ದು ಈ ಜಿಲ್ಲೆಗೆ ಸಂದ ಗೌರವ. ತಮ್ಮ ಚತುರ್ಥ ಪರ್ಯಾಯದ ಕೊನೆಯಲ್ಲಿ ಪೇಜಾವರ ಶ್ರೀಗಳು ಜಿಲ್ಲೆಯ ಇಪ್ಪತ್ತೊಂದು ಹಿರಿಯ  ಸಂಗೀತ ಪರಿಶ್ರಮಿಗಳನ್ನು ಸನ್ಮಾನಿಸುವ ವೇಳೆ ಶ್ರೀ ಮಾಣಿ ಭಾಗವತರನ್ನೂ ಸನ್ಮಾನಿಸಿದ್ದರು. ತನಗೆ ಸಂದ ಗೌರವಗಳೆಲ್ಲ ತನ್ನ ಗುರುಗಳಿಗೇ ಸಲ್ಲಬೇಕು ಎಂಬ ವಿನೀತ ಭಾವ ಮಾಣಿ ಭಾಗವತರದಾಗಿತ್ತು. ಸರಕಾರದಿಂದ ಶ್ರೀ ಭಾಗವತರಿಗ ಈವರೆಗೆ ಯಾವ ಸಹಾಯ ದೊರೆತಿಲ್ಲ ಎನ್ನುವುದು ಗಮನಾರ್ಹ.

‘ಮಾಣಿ’ ಚೆಂಬೈ: ಭಾಗವತರ ಯೌವನ ಕಾಲದ ಹಾಡುಗಾರಿಕೆಯನ್ನು ಈ ಲೇಖಕ ಕೇಳಿಲ್ಲ. ಈಗ ಇಳಿವಯಸ್ಸಿನಲ್ಲಿ ಗಂಟಲಿನ ಸೌಕರ್ಯ ಕಡಿಮೆಯಾದರೂ ಅವರಿಗೆ ಹಾಡುವುದರಲ್ಲಿ ತಲ್ಲೀನತೆ. ಮಂಗಳೂರು, ಉಡುಪಿ, ಸೂರಳಿ, ಕಾಸರಗೋಡು, ಕಞಂಗಾಡು, ತ್ರಿಚೂರ್‌, ಎರ್ನಾಕುಲಂಗಳಲ್ಲಿಕ ಅವರ ಕಚೇರಿಗಳು ನಡೆದಿವೆ. ಭಾಗವತರದು ಹಳೆಯ ಶೈಲಿ. ಅದರಲ್ಲಿ ಮುಚ್ಚುಮರೆ ಇಲ್ಲ. ಅದಕ್ಕೆಕ ಮೆರುಗು ಕೊಡುವ ಗೋಜಿಗೂ ಅವರು ಹೋಗಲಾರರು. ಗಂಟಲು ಕಿರಿಕಿರಿ ಮಾಡುತ್ತಿದೆ ಎಂಬುದರ ಕಡೆಗೆ ಗಮನವೇ ಇಲ್ಲ. ಕಾರ್ಮಿಕನೊಬ್ಬ ಮೈಮುರಿದು ಕೆಲಸ ಮಾಡುವಂತೆ ಗಂಟಲನ್ನು ‘ಮುರಿದು’ ನುಡಿಸುತ್ತಾರೆ ಭಾಗವತರು. ಮೈಕ್‌ಗಾಗಿ ತಮ್ಮ ಶಾರೀರವನ್ನು  ಪರಿವರ್ತಿಸದೇ ಇದ್ದುದರಿಂದ ಆಕಾಶವಾಣಿಯ ಎದುರೂ ಭಾಗವತರು ತಮ್ಮನ್ನು ಸಮರ್ಪಿಸಿಕೊಳ್ಳಿಲಿಲ್ಲ. ಅವರ ಶಾರೀರದ ‘ಸಾಧಕ’ ಅಗಾಧತೆಯ ಜತೆ, ಕರಕಲುಗಳೂ ಮೈಕ್‌ನಲ್ಲಿ ವರ್ಧಿಸಿ ಕೇಳುತ್ತವಷ್ಟೆ. ಪ್ರಾಯಶಃ ಈ ಕಾರಣದಿಂದಲೇ ಭಾಗವತರ ಸಂಗೀತ ವಿದ್ವತ್ಪ್ರಪಂಚಕ್ಕೆ ತಿಳಿಯದೇ ಹೋಯಿತು. ಅವರ ಕಚೇರಿಯ ಅರ್ಧಭಾಗ ಕಳೆದ ಮೇಲೆ ಅವರ ಗಂಠಲು ಹೊರಡಿಸುವ ಧ್ವನಿಗುಣ ನಿಜಕ್ಕೂ ಪರಿಣಾಮಕಾರಿಯಾದದ್ದು. ಅವರು ತೋಡಿ, ಕಲ್ಯಾಣಿ, ಶಂಕರಾಭರಣ, ಖರಹರಪ್ರಿಯಗಳಂತಹ ರಾಗಗಳ ಮೇಲೆ ಅಸಾಧ್ಯ ಹಿಡಿತ ಸಾಧಿಸಿದ್ದಾರೆ. ಹೊಸ ಹೊಸ ರಾಗ, ಕೃತಿಗಳ ಗೊಡವೆಗೇ ಅವರು ಹೋಗಲಾರರು. ಹಿಂದೋಳ ರಾಗದಿಂದ ಪ್ರಾರಂಭಿಸಿದರೆಂದು ಇಟ್ಟುಕೊಳ್ಳಿ. ಆಲಾಪನೆ ಮಾಡಿ ವಯೊಲಿನ್‌ನವರಿಗೆ ಬಿಟ್ಟು ಮತ್ತೆ ಎತ್ತಿಕೊಳ್ಳುವುದು ಹರಿಕಾಂಭೋಜಿ, ಕಲ್ಯಾಣಿ! ಇದೇನಿದು ಎಂದಂದುಕೊಳ್ಳುವಾಗ ತೋಡಿ ರಾಗವು ತೆರೆದುಕೊಳ್ಳುತ್ತದೆ. ‘ಮ’ ದಿಂದ ‘ಮ’ ದ ವರೆಗಿನ ಗ್ರಾಮದಲ್ಲಿಕ ವರ್ಜ್ಯ ಸ್ವರಗಳನ್ನು ಬಿಟ್ಟು ಆಯ್ದ ರಾಗ ಹಿಂದೋಳ. ಹಾಗೆ ‘ಗಾ’ದಿಂದ ‘ಗಾ’ ದವರೆಗಿನ ವರಸೆಯಲ್ಲಿ ಹರಿಕಾಂಭೋಜಿ, ‘ರಿ’ಯಿಂದ ‘ರಿ’ಯವರೆಗಿನ ಗ್ರಹ ಭೇದದಲ್ಲಿ ಕಲ್ಯಾಣಿ ಮಾಡಿ ತೋರಿಸಿ, ಷಡ್ಜಕ್ಕೆ ಇಳಿದು ತೋಡಿರಾಗಕ್ಕೆ ಬರುವಷ್ಟರಲ್ಲಿ ವಯೊಲಿನ್‌ನವರು ಬೆವರು ಒರೆಸಿಕೊಂಡದ್ದೇ ಸರಿ. ಮಾಣಿ ಭಾಗವತರು ತೋಡಿ ರಾಗವನ್ನಾಗಲೀ, ಶಂಕರಾಭರಣ, ಖರಹರಪ್ರಿಯ ರಾಗಗಳನ್ನಾಗಲೀ ಆಯ್ದುಕೊಂಡಾಗ ಮಾಡುತ್ತಿದ್ದ ವರಸೆಗಳು ಇಂತಹವು. ಸ್ವರ ಪ್ರಸ್ತಾರಗಳಲ್ಲಿ ಅತೀತ ಎಡುಪುಗಳು. ಕಾಲು ಅಕ್ಷರಗಳ ವಿನಿಕೆಗಳನ್ನು ನಿಖರವಾಗಿ ತಾಳ ತಟ್ಟುವುದರೊಂದಿಗೆ ತೋರಿ, ದಂಗು ಪಡಿಸುತ್ತಿದ್ದರು. ಅವರಿಗೆ ಸರಿಸಮನಾಗಿ, ವಿದ್ವತ್ತಿಗೆ-ವಿದ್ವತ್ತೆಂದು ಸಂವಾದವನ್ನು ನೀಡಬಲ್ಲ ಪಕ್ಕವಾದ್ಯದವರು ಕುಳಿತದ್ದನ್ನು ನಾನು ಕಂಡಿಲ್ಲ. ಅಷ್ಟಿದ್ದರೂ, ಪಕ್ಕವಾದ್ಯದವರಿಗೆ ‘ಭೇಷ್‌’, ‘ಶಹಭಾಸ್‌’ಗಿರಿ ಹಚ್ಚುತ್ತಾ ಮಾಣಿ ಭಾಗವತರು ಪ್ರೋತ್ಸಾಹಿಸುತ್ತಿದ್ದರು.

ಮಾಣಿ ಭಾಗವತರಿಗೆ ಎರಡು ಮದುವೆಗಳಾಗಬೇಕಾಯಿತು. ಒಂದನೇ ಪತ್ನಿಯಲ್ಲಿ ಮೂರು ಮಕ್ಕಳು. ಈಗಿರುವ ಎರಡನೇ ಪತ್ನಿ ಶಾರದಮ್ಮನವರಿಗೆ ಎರಡು ಗಂಡು ಮಕ್ಕಳು. ಮಕ್ಕಳೆಲ್ಲ ತಕ್ಕ ಮಟ್ಟಿಗೆ ತೃಪ್ತಿಯಿಂದಿದ್ದಾರೆ. ಮನೆಯಲ್ಲಿ ಭತ್ತದ ಸಾಗುವಳಿ. ಮಕ್ಕಳೀರ್ವರ ಪೂಜೆ ಮತ್ತು ಅಡುಗೆ ವೃತ್ತಿಯಲ್ಲಿ ಒಂದಿಷ್ಟು ಆದಾಯವಿದೆ. ಮನೆಯ ಮಂದಿಯಲ್ಲಿ ಯಾರಿಗೂ ಸಂಗೀತದ ‘ಗಾಳಿ’ ಬಂದಿಲ್ಲ ಎಂಬ ಭಾಗವತರ ನೋವು ಸೂಕ್ಷ್ಮ ಸಂವೇದಿಗಳಿಗೆ ತಿಳಿಯದಿರದು. ಐದನೆಯ ತರಗತಿಯಲ್ಲಿದ್ದಾಗಲೇ “ಫೇಲು” ಪದವಿಗಿಟ್ಟಿಸಿದ ಭಾಗವತರಿಗೆ ಇಂಗ್ಲಿಷ್‌ ಭಾಷೆಯ  ಪರಿಚಯವೇ ಇಲ್ಲ. ಹಳೆಯ ಕಾಲದ ಮೋಡಿ ಅಕ್ಷರದಲ್ಲಿ ಮುದ್ದಾಗಿ ಬರೆಯುವುದಲ್ಲದೆ ತುಳುಲಿಪಿಯಲ್ಲೂ ಬರೆಯಬಲ್ಲವರಾಗಿದ್ದಾರೆ.

ಉಡುಪಿಯ ಶ್ರೀ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರು ಭಾಗವತರ ಹೆಮ್ಮೆಯ ಶಿಷ್ಯ. ಕು.ಚಂದ್ರಮಾ, ಕು. ಶ್ರೀ ಲಕ್ಷ್ಮೀ ಮೊದಲಾದ ಬೆರಳೆಣಿಕೆಯ ಶಿಷ್ಯರನ್ನು ಬಿಟ್ಟರೆ ಮಾಣಿ ಭಾಗವತರ ಇತರ ಶಿಷ್ಯರು ಪ್ರಕಾಶಕ್ಕೆ ಬರಲಿಲ್ಲ. ವಿಶಾಲ ಹಣೆ, ಹಳದಿ ಬಿಲಿ ತಲೆ ಕೂದಲನ್ನು ಹಿಂದಕ್ಕೆ ಬಾಚಿ ಕಟ್ಟಿದ ಸೂಡಿ (ಕುಡುಮಿ), ಬಿಳಿ ಹರಳಿನ ಕಿವಿ ಓಲೆ, ಹಲ್ಲಿದ್ದರೂ ಹಲ್ಲಿಲ್ಲದಂತೆ ಕಾಣು ತಾಂಬೂಲ ರಂಜಿತ ‘ಬೊಚ್ಚು’ ಬಾಯಿಯಿಂದ ಕೂಡಿದ ಮಾಣಿ ಭಾಗವತರಿಗೆ ಮೆಳ್ಳೆಗಣ್ಣು. ಆಜಾನುಬಾಹು ಜೀವ. ಊರುಗೋಲಿನ ಸಹಾಯವಿಲ್ಲದೆ ಊರಿಂದೂರಿಗೆ ಬಿರುಸುನಡಿಗೆಯಿಂದ ಈಗಲೂ ಮನೆಪಾಠ ಹೇಳುತ್ತಾ ನಡೆದಾಡುವ ಬಿಳಿ ಜುಬ್ಬ-ಧೋತಿ ವಸ್ತ್ರಧಾರಿ-ಪಡುಬಿದ್ರಿ ಸುಬ್ರಾಯ ಮಾಣಿ ಭಾಗವತರು.