ಮಬ್ಬುಗತ್ತಲಕೂಪ,
ಸುತ್ತಲೂ ಹಲವಾರು ಅಸ್ಪಷ್ಟ ರೂಪ,
ನನ್ನಂತೆಯೇ ಇತ್ತ ಎಂದೊ ಹೇಗೋ ಬಂದು
ಬಿದ್ದ ಬಾಳಿನ ಮುರುಕು,
ನೀರೆಳೆವಾಗ ಹಗ್ಗವು ಹರಿದು ಬಿದ್ದಂಥ
ಬಿಂದಿಗೆಯ ಸರಕು !

ಒಂದೆ ಮಾರಗಲ ;
ಸುತ್ತಲೂ ಗೋಡೆ,
ಮೇಲೆ ಎಲ್ಲೋ ಆ ದೂರದಲಿ ಕಾಣುತಿದೆ
ಮುಗಿಲ ಮುಚ್ಚಳವು.
ಇಲ್ಲಿ ಒಳಗಡೆ ದಿನವು ಕಲ್ಲು ಗೋಡೆಗೆ ಬಡಿವ
ಕೊಳೆ ನೀರ ಹರವು !

ಕಪ್ಪೆಗಳ ಪರಿವಾರ, ಸೊಳ್ಳೆಗಳ ಸಂಸಾರ
ದುರ್ನಾತಗಳ ಅಂಗಡಿಯ ಬೀದಿ,
ಎದ್ದರೂ ಬಿದ್ದರೂ, ನುಡಿದರೂ ನಡೆದರೂ
ಇದೇ ರಾಜವೀಧಿ !

ದಿನಕ್ಕೊಮ್ಮೆ ಓ ಒಂದೇ ಒಂದು ಸಲ ಬಂದು
ಬೆಳ್ಳಿ ಕಡೆಗೋಲಂತೆ ಬಿಸಿಲು ಕೋಲೊಂದು
ಅಂತರಂಗವ ಕಡೆದು ಮೇಲೆ ಬಾ ಎಂದು
ನುಡಿದು ಮತ್ತಡಗುವುದು ಬಂದಂತೆ ಸಂದು !

ಬೆಟ್ಟು ಸೀಪುವ ಹಸುಳೆ ತಾಯ್ಮೊಲೆಯನುಣುವಂತೆ
ಭ್ರಾಂತಿಗೊಂಡು
ತನ್ನ ತಾನೇ ಹೇಗೊ ಸಂತೈಸಿಕೊಂಡು
ನಗುವಂತೆ ಇದೆ ಬಾಳು ಕೂಪದೊಳಗೆ
ತನ್ನದೇ ಅದೊಂದು ಲೋಕದೊಳಗೆ.

ಯಾವ ಬೆಳಕಿನ ಪಾತಾಳಗರುಡವು ಬಂದು
ಮಿಂಚುಕೊಂಡಿಯೊಳಿದನು ಮೇಲಕೆತ್ತಿ,
ಗಡಿಯಾರದೊಳಗಡೆಗೆ ಸುತ್ತಿದಲ್ಲೇ ಸುತ್ತಿ
ನಮೆವ ಮುಳ್ಗಳ ತೆರದ ಬದುಕನೆತ್ತಿ,
ಎಂದು ಒಯ್ವುದೊ ಕಾಣೆ ಬಿತ್ತರದ ನೆಲೆಗೆ
ಕಾಯಬೇಕೇ ಇನ್ನು ಎಲ್ಲಿವರೆಗೆ ?