ಕನ್ನಡ ಸಾಂಸ್ಕೃತಿಕ ಜಗತ್ತಿನಲ್ಲಿ ಇಬ್ಬರು ನರಸಿಂಹಯ್ಯರು ಪ್ರಸಿದ್ಧರು. ಒಬ್ಬರು, ವಿಜ್ಞಾನಿ, ವಿಚಾರವಾದಿ, ಶಿಕ್ಷಣತಜ್ಞ ಎಚ್. ನರಸಿಂಹಯ್ಯನವರಾದರೆ ಇನ್ನೊಬ್ಬರು, ತಮ್ಮ ಪತ್ತೇದಾರಿ ಕಾದಂಬರಿಗಳಿಂದ ಹೆಸರು ಮಾಡಿದ, ಕನ್ನಡಿಗರ ವಾಚನಾಭಿರುಚಿ ಬೆಳೆಸಿದವರು ಎಂಬ ಪ್ರಶಂಸೆ ಗಳಿಸಿಕೊಂಡಿರುವ ಎನ್. ನರಸಿಂಹಯ್ಯ. ಸುಮಾರು ಕಾಲು ಶತಮಾನ ಕಾಲ (೧೯೫೭-೧೯೮೧ರ ತನಕ) ಜನಪ್ರಿಯ ಪತ್ತೇದಾರಿ ಕಾದಂಬರಿಗಳನ್ನು ಬರೆದು “ಪತ್ತೇದಾರರ ಪತ್ತೇದಾರ’ ಎಂಬ ಮನ್ನಣೆಗೊಳಗಾದ ನರಸಿಂಹಯ್ಯ ತಮ್ಮ ಎಂಬತ್ತಾರನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ತೀರಿಕೊಂಡರು. “ಸತ್ಯ ಶೋಧನೆ’ಯ ಚಾತುರ್ಯದ ಪುರುಷೋತ್ತಮ, ಮಧುಸೂದನ, ಅರಿಂಜಯ, ಗಾಳಿರಾಯ ಹೆಸರಿನ ಪತ್ತೇದಾರರನ್ನು ಸೃಷ್ಟಿಸಿದ ಈ ಲೇಖಕ, ೧೯೬೦-೭೦ರ ದಶಕದಲ್ಲಿ “ಪುರುಷೋತ್ತಮನ ನೂರು ಸಾಹಸಗಳು’, “ಮಧುಸೂದನನ ನೂರು ಸಾಹಸಗಳು’, “ಕೆರಳಿದ ಕೇಸರಿ’, “ಭಯಂಕರ ಬೈರಾಗಿ’ ಹೆಸರಿನ ಸುಮಾರು ಐನೂರಿಪ್ಪತ್ತು ಪುಸ್ತಕಗಳನ್ನು ಬರೆದು, ಅವು ಬೇಕಾದಷ್ಟು ಪುನರ್ಮುದ್ರಣ ಕಂಡು ವಿಪುಲ ಪತ್ತೇದಾರಿ ಸಾಹಿತ್ಯ ಸೃಷ್ಟಿಸಿದ್ದು ಚಾರಿತ್ರಿಕ ದಾಖಲೆ. ಇವುಗಳ ಮೂಲಕವೇ ಸಾಮಾನ್ಯ ಕನ್ನಡಿಗರು, ಸಾಹಿತ್ಯಾಸಕ್ತರು, ಪತ್ತೇದಾರಿ ಸಾಹಿತ್ಯ ಪ್ರಿಯರು ಓದುವ ಆಸಕ್ತಿ ಬೆಳೆಸಿಕೊಂಡದ್ದು ಮರೆಯಬಾರದ ವಿವರ. ದೃಶ್ಯ ಮಾಧ್ಯಮಗಳ ಹಾವಳಿಯಿಂದಾದ ಭರಪೂರ ಟೀವಿ ವೀಕ್ಷಣೆಯ ಈ ದಿನಗಳಲಿ, ಸಾಮಾನ್ಯ ಕನ್ನಡಿಗರು ಪುಸ್ತಕಗಳತ್ತ ಮತ್ತೆಂದಾದರೂ ಮುಖ ಮಾಡಿಯಾರೇ ಎನ್ನುವ ಕಳವಳ ತುಂಬಿರುವ ಈ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿಟ್ಟು ನೋಡಿದಾಗ ನರಸಿಂಹಯ್ಯನವರ ಸಾಧನೆ ಅಸಾಮಾನ್ಯವಾಗಿಯೇ ತೋರುತ್ತದೆ. ಅಂದಹಾಗೆ, ಕನ್ನಡಿಗರ ಓದುವ ಹವ್ಯಾಸ ಈ ಬಗೆಯಲ್ಲಿ ಕುಂಠಿತವಾಗುವುದನ್ನು ಮುಂಗಾಣಿದ್ದರೋ ಎಂಬಂತೆ “ಟೀವಿ ಬಂದಲಾಗಾಯ್ತು, ನಾನು ಬರೆಯುವುದನ್ನು ನಿಲ್ಲಿಸಿಬಿಟ್ಟೆ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

೧೯೩೫ರಲ್ಲಿ ತಂದೆ ತೀರಿಕೊಂಡ ಕಾರಣ ವಿದ್ಯಾಭ್ಯಾಸವನ್ನು ನಾಲ್ಕನೇ ತರಗತಿಗೇ ಮೊಟಕುಗೊಳಿಸಿ ತಾಯಿಯ ತವರಾದ ಚಿಕ್ಕಮಗಳೂರನ್ನು ಸೇರಬೇಕಾಗಿ ಬಂದ ಬಾಲಕ ನರಸಿಂಹಯ್ಯ ಜೀವನ ನಿರ್ವಹಣೆಗಾಗಿ ಟೈಲರ್, ಕ್ಲೀನರ್, ಡ್ರೈವರ್, ಕಬ್ಬಿಣ ಕೆಲಸ ಹೀಗೆ ನಾನಾ ಕೆಲಸ ಮಾಡಬೇಕಾಗಿ ಬಂತು. ಆದರೆ ಆಗ ಚಾಲ್ತಿಯಲ್ಲಿದ್ದ ಚಾರ್‌ಕೋಲ್ ಬಸ್ಸುಗಳ ಕಂಡಕ್ಟರ್ ಕೆಲಸ ಅವರ ಬದುಕಿಗೊಂದು ಮುಖ್ಯ ತಿರುವು ನೀಡಿತು ಎನ್ನಬಹುದು. ಕೋಲ್‌ಬಸ್ಸನ್ನು ಓವರ್‌ಲೋಡ್ ಮಾಡಿದ್ದೀರಿ ಅಂತ ಪದೇ ಪದೆ ಕೇಸುಗಳಾಗುತ್ತಿದ್ದವು. ಅದರ ಸಲುವಾಗಿ ಕೋರ್ಟಿಗೆ ಹೋದರೆ ಅಲ್ಲಿ ದಿನಗಟ್ಲೆ ಕಾಯಬೇಕಾಗುತ್ತಿತ್ತು…ಆಗ ಸುಮ್ಮನೆ ಕೂತು ಕೊಲೆ, ದರೋಡೆ ಕೇಸುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಇವರು, ಮುಂದೊಮ್ಮೆ ಪುಂಖಾನುಪುಂಖವಾಗಿ ಖೂನಿ, ಕಳ್ಳತನ ಕುರಿತ ಕಾದಂಬರಿಗಳನ್ನು ಬರೆಯಬೇಕಾದಾಗ ನೆನಪಿನಾಳದಿಂದ ಪತ್ತೇದಾರಿಕೆಯ ನಂಬಲರ್ಹ ವಿವರ, ವಿವರಣೆ, ತಿರುವುಗಳನ್ನು ತೆಗೆದು ಬಳಸಿಕೊಂಡಿದ್ದೂ ಬರವಣಿಗೆಯ ಒಂದು ಕೌಶಲವೇ. ಹಾಗಾಗಿಯೇ ಅಪರಾಧ-ಪತ್ತೇದಾರ-ಪತ್ತೇದಾರಿಕೆ-ಸತ್ಯಶೋಧನೆಯ  ನಿಯಮಿತ ಚಪ್ಪರಗೋಲುಗಳ ಮೇಲೆ ಅವರ ಪತ್ತೇದಾರಿಕೆ ಸಾಹಿತ್ಯದ ಹಂದರ ಹದವಾಗಿ ಹಬ್ಬಿತು. ಅಷ್ಟೇ ಅಲ್ಲ, ಒಂದು ದೇಸಿ ಸೊಗಡನ್ನೂ ಗಳಿಸಿಕೊಂಡಿತು. ಕಂಡಕ್ಟರ್

ಕೆಲಸದಲ್ಲಿ ಊರೂರು ಅಲೆಯುವಾಗ ಸದಾ ಪುಸ್ತಕಗಳನ್ನು ಓದುತ್ತಿದ್ದರು. ಅದು ಅವರಲ್ಲಿ ತಾವೂ ಲೇಖಕರಾಗಬೇಕೆಂಬ ಮಹದಾಸೆ ಮೂಡಿಸುತ್ತಿತ್ತು. ಇದಕ್ಕೆ ತದ್ವಿರುದ್ಧವಾಗಿ ಅವರ ಓರಗೆಯ ಲೇಖಕರು ಇಂಗ್ಲಿಷ್ ಪತ್ತೇದಾರಿ ಕಾದಂಬರಿಕಾರರಾದ ಅಗಾಥಾ ಕ್ರಿಸ್ಟಿ, ಅರ್ಲ್ ಸ್ಟ್ಯಾನ್ಲೆ ಗಾರ್ಡ್‌ನರ್ ಮುಂತಾದವರನ್ನು ಯಥಾವತ್ ಭಟ್ಟಿ ಇಳಿಸುತ್ತಿದ್ದರು. ಅದರಿಂದಾಗಿ ಜನರಿಗೆ ಬೇಗ ಬೇಸರವಾಗಿಬಿಟ್ಟರು ಎನ್ನುವ ವಿಶ್ಲೇಷಣೆಯೂ ಇದೆ. ಪತ್ತೇದಾರಿ ಕಾದಂಬರಿಗಳ ಮುಖ್ಯ ಲಕ್ಷಣವಾದ, ಅಪರಾಧಿ ಇವರಿರಬಹುದೆ, ಅವರಿರಬಹುದೆ ಎಂದು ಓದುಗರಲ್ಲಿ ಕುತೂಹಲ ಕೆರಳಿಸುತ್ತಾ, ಅದಕ್ಕೆ ಪುರಾವೆಗಳನ್ನು ಒದಗಿಸುತ್ತಾ, ಮುಕ್ತಾಯದಲ್ಲಿ “ಇವರನ್ ಬಿಟ್ ಇವರನ್ ಬಿಟ್ ಅವರು’  ಎಂದು ಮೂರನೆಯವರ‍್ಯಾರನ್ನೋ ಬೆರಳು ಕಚ್ಚುವಂತೆ “ಕೊಲೆಗಾರ’ ಎಂದು ಪತ್ತೆಹಚ್ಚುವ ತಂತ್ರವನ್ನೂ ಅವರ ಕಾದಂಬರಿಗಳು ಸೊಗಸಾಗಿ ಮೈಗೂಡಿಸಿಕೊಂಡಿವೆ. ಜತೆಗೆ ಆಯಾ ಕಾಲಘಟ್ಟಕ್ಕೆ ಅನ್ವಯಿಸುವ ವಿವರ, ವೈದೃಶ್ಯಗಳನ್ನು ಪೋಣಿಸಿ ತಮ್ಮ ಕಥಾವಸ್ತುವನ್ನು ಪುಷ್ಟಿಗೊಳಿಸುವುದನ್ನೂ ಅವರು ಮರೆಯುವುದಿಲ್ಲ.

“ಯಾವುದಾದರೂ ಸಂಗತಿಯನ್ನು ಅತ್ಯುತ್ತಮವಾಗಿ ಪ್ರಶಂಸಿಸುವ ಪರಿಯೆಂದರೆ ಅದನ್ನು ಅನುಕರಿಸುವುದು’ ಎಂದು ಅರ್ಥ ಬರುವ ಹೇಳಿಕೆಯೊಂದು ಇಂಗ್ಲಿಷ್‌ನಲ್ಲಿದೆ. ಇದರಂತೆ ಪತ್ತೇದಾರಿ ಲೇಖಕನೊಬ್ಬನ “ಕ್ರೈಮ್ ಥ್ರಿಲ್ಲರ್’ ಓದಿ ಪ್ರಭಾವಿತನಾಗಿ ವ್ಯಕ್ತಿಯೊಬ್ಬ ಅದನ್ನು ಅನುಕರಿಸಿಬಿಟ್ಟರೆ?!…ಇದೊಂಥರಾ ಇರುಸುಮುರುಸಿನ ವಿಷಯವಾದರೂ ಚಿಕ್ಕಮಗಳೂರಿನಲ್ಲಿ ಕೊಲೆ ಕೇಸೊಂದು ನಡೆಯುವಾಗ ಆರೋಪಿ “ನರಸಿಂಹಯ್ಯನವರ ಕಾದಂಬರಿ ಓದಿ ಕೊಲೆ ಮಾಡಿದೆ’ ಎನ್ನುವ ಹೇಳಿಕೆ ಕೊಟಿದ್ದನಂತೆ! ಇದು ಖುದ್ದು ಅವರ ಬಾಯಿಂದಲೇ ಕೇಳಿದ್ದು. ಪರೋಕ್ಷವಾಗಿ ಅವರ ಬರವಣಿಗೆಯ ನೈಪುಣ್ಯ ಹೇಳುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಸ್ಫುಟವಾದ ಕೈ ಬರಹದ ಒಂದೇ ಡ್ರಾಫ್ಟಿನಲ್ಲಿ ಅವರ ಕಾದಂಬರಿಗಳನ್ನು ಮುದ್ರಣಕ್ಕೆ ಹೋಗುತ್ತಿದ್ದವು ಎನ್ನುವುದು ಅದನ್ನು ಇಮ್ಮಡಿಗೊಳಿಸುವ ಬಾಹ್ಯ ವಿವರವಷ್ಟೆ. ಬಡತನದ ಹಿನ್ನೆಲೆ, ಬರವಣಿಗೆಯಿಂದಲೇ ಜೀವನ ಮಾಡಬೇಕೆಂಬ ದೃಢ ನಿರ್ಧಾರಕ್ಕೆ ಬದ್ಧರಾದ ಅವರು ಅಪರಾಧ ಸಾಹಿತ್ಯ ಸೃಷ್ಟಿಸಿಯೂ ಒಂದು ಸಾತ್ವಿಕ ಶಿಸ್ತಿನ ಜೀವನ ನಡೆಸಬಹುದೆಂದು ತೋರಿಸಿಕೊಟ್ಟಿದ್ದು ಒಂದು ಹೆಚ್ಚುಗಾರಿಕೆಯೇ. ತಮ್ಮ ಗೆಳೆಯರೆಲ್ಲ – ಮಾಭಿಶೇ, ಬಿ.ಕೆ. ಸುಂದರ ರಾಜ್, ಮ. ರಾಮಮೂರ್ತಿ, ಅನಕೃ, ಬಸವರಾಜ ಕಟ್ಟೀಮನಿ ಮುಂತಾದವರು- ಸಂಜೆ ಆರಾಗುತ್ತಲೇ ತಮ್ಮ ಎಂದಿನ ದಿನಚರಿ ಕಡೆ ನಡೆದರೆ ನರಸಿಂಹಯ್ಯ ವಿದಾಯ ಹೇಳಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದರು. ಬರೆದೇ ಬದುಕಬೇಕಾದ ಅನಿವಾರ್ಯತೆಯಲ್ಲಿ ವ್ಯವಹಾರ ಕುಶಲತೆ, ಪ್ರಕಾಶಕರಿಂದ ಶೋಷಣೆಗೊಳಗಾಗದೇ ಉಳಿಯುವ ಎಚ್ಚರವನ್ನೂ ಅವರು ಕ್ರಮೇಣ ರೂಢಿಸಿಕೊಂಡರು.

ಆಗ ಬಿಕರಿಯಾಗುತ್ತಿದ್ದ ಕೇವಲ ೨೪ ಪುಟಗಳ ಪತ್ತೇದಾರಿ ಪುಸ್ತಿಕೆಗಳಿಗೆ ಸವಾಲು ಹಾಕುವಂತೆ ನರಸಿಂಹಯ್ಯ ಮೊದಲ ಬಾರಿಗೆ ೨೦೦ ಪುಟದ ಕಾದಂಬರಿಯನ್ನು ಟಿ. ನಾರಾಯಣಯ್ಯಂಗಾರ್ ಎಂಬ ಪ್ರಕಾಶಕರ ಉತ್ತೇಜನದಿಂದ ಬರೆದರು. ಅದು ಹದಿನೈದೇ ದಿನಕ್ಕೆ ಖಾಲಿಯಾಯಿತು. ಈ “ಬೇಡಿಕೆ’ ಯಿಂದ ಉತ್ಸಾಹಗೊಂಡು ಈ ಲೇಖಕ-ಪ್ರಕಾಶಕ ಜೋಡಿ ತದನಂತರ ಪ್ರಕಟಿಸಿದ ಎಂಟು  ಕಾದಂಬರಿಗಳೂ  ಮಾರುಕಟ್ಟೆಯಲ್ಲಿ ಬಿಸಿ ದೋಸೆಗಳಂತೆ ಖರ್ಚಾದವು. ಆದರೆ ಲೇಖಕರಿಗೆ ಗೌರವಧನ ಕೊಡುವ ಸೊಲ್ಲೇ ಇಲ್ಲ! ಇದನ್ನು ಪ್ರಕಾಶಕ ಗೆಳೆಯರಲ್ಲಿ ಪ್ರಸ್ತಾಪಿಸಿದ್ದೇ ತಡ, ಅವರೆಲ್ಲ ಸಂಚು ಹೂಡಿದವರಂತೆ ನರಸಿಂಹಯ್ಯನವರ ಕಾದಂಬರಿಗಳನ್ನು ದೂರವಿಟ್ಟರು. ಆದರೆ ಡಕಾಯಿತಿ, ಸಸ್ಪೆನ್ಸ್, ಭೂತ-ಪಿಶಾಚಿ, ಮಂತ್ರವಾದಿ ಕತೆ…ಹೀಗೆ ಏನು ಕೇಳಿದರೆ ಅದನ್ನು ೨೪ ಗಂಟೆಯಲ್ಲಿ ಬರೆದು “ಬಿಸಾಡುವ’ ಈ ಪ್ರಚಂಡ ಲೇಖಕನ ಆಕರ್ಷಣೆಯನ್ನು ಪ್ರಕಾಶಕ ಪ್ರಭುಗಳಿಗೆ ಹತ್ತಿಕ್ಕಿಕೊಳ್ಳಲಾಗಲಿಲ್ಲ. ಒಬ್ಬೊಬ್ಬರಾಗಿ ಸಂಧಾನಕ್ಕೆ ಬಂದು, ಈ ಬಾರಿ ರಾಯಲ್ಟಿ ಕೊಟ್ಟು, ನರಸಿಂಹಯ್ಯನವರ ಕಾದಂಬರಿಗಳನ್ನು ಪ್ರಕಟಣೆಗೆ ಪಡೆದರು. ವಿವಿಧ ಪ್ರಕಾಶನ ಸಂಸ್ಥೆಗಳಿಂದ ಅವರ “ಭಯಂಕರ ಬೈರಾಗಿ’ಯ ೩೫ ಸಾವಿರ ಪ್ರತಿಗಳು ಅಚ್ಚಾಗಿದ್ದು ಈ ಉತ್ತುಂಗದಲ್ಲಿಯೇ. ” ಆ ಟೈಮ್ ಈ ಟೈಮ್, ಸ್ಫೂರ್ತಿ ಬೇಕು ಎನ್ನುವುದೆಲ್ಲಾ ಆಸ್ಥಾನ ವಿದ್ವಾಂಸರ ಠೀವಿ…ನಾನೋ ಶಾರದಾಂಬೆಯ ಕೃಪಾಕಟಾಕ್ಷ ಇರುವ ಕಾಳಿದಾಸ…ದಿನದ ಇಪ್ಪತ್ನಾಲ್ಕು ಗಂಟೆಯೂ ಬರೆಯಬಲ್ಲೆ’ ಇದು ಅವರದೇ ಉವಾಚ. ದೈನಿಕದ ಗದ್ದಲ, ಟೀವಿ ಗಲಭೆಗಳ ನಡುವೆಯೇ ಪಡಸಾಲೆಯಲ್ಲಿ ಮುಗುಮ್ಮಾಗಿ ಕುಳಿತು ಬರೆಯಬಲ್ಲ ಅವರನ್ನು ಆಗ ಯಾರೂ ಮುಟ್ಟಬಾರದು, ಮಾತನಾಡಿಸಬಾರದು ಎನ್ನುವುದು ಅವರ ಪತ್ನಿ ಬಹಿರಂಗಗೊಳಿಸಿದ ಗುಟ್ಟು!

ಅಪಾರ ಜನಪ್ರಿಯತೆಯೊಂದಿಗೆ ೧೯೯೨ರ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ನೀಡಲಾದ “ಸಾಹಿತ್ಯ ರತ್ನ’ ಪ್ರಶಸ್ತಿಗಳೂ ನರಸಿಂಹಯ್ಯನವರಿಗೆ ಸಂದಿವೆ. ಬಿಡಿಎ ಸೈಟ್, ಮಾಸಾಶನ ಇತ್ಯಾದಿಯನ್ನು ಸರಕಾರ ಕೊಡಮಾಡಿದರೂ ಅವರ ಕೊನೆಗಾಲ ಅಷ್ಟೇನೂ ನೆಮ್ಮದಿಯಿಂದ ಕೂಡಿರಲಿಲ್ಲ. ಒಂದು ಅವಧಿಯಲ್ಲಿ ಅವರನ್ನು ತೇಲಿಸಿದ ಜನಪ್ರಿಯತೆಯ ಅಲೆ ಕ್ರಮೇಣ ಹಿಂದೆ ಸರಿಯಿತು. ಬಿಡಿಎ ಸೈಟಿಗಾಗಿ ಓಡಾಡುತ್ತಿದ್ದಾಗ “ಡೂಪ್ಲಿಕೇಟ್ ನರಸಿಂಹಯ್ಯ’ ಎಂದು  ಅಧಿಕಾರಿಯೊಬ್ಬರು ಅವರನ್ನು ಬಂಧಿಸಲು ಮುಂದಾದ ಕಹಿ ಪ್ರಸಂಗವೂ ಜರುಗಿತು. ವಾರಾಂತ್ಯ ಪುರವಣಿಗಳಲ್ಲಿ ಲೇಖನಗಳು ಪ್ರಕಟವಾಗಲಿಲ್ಲ…ಶ್ರದ್ಧಾಂಜಲಿ ಸಭೆಗಳು ನಡೆಯಲಿಲ್ಲ. “ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ಓದುತ್ತ ಓದುತ್ತ ನನ್ನಲ್ಲಿ ಸಾಹಿತ್ಯಾಸಕ್ತಿ ಹುಟ್ಟಿತು’ ಎಂದು ಯಾವ ಸೆಲೆಬ್ರಿಟಿಯೂ ಹೇಳಿಕೆ ಕೊಡಲಿಲ್ಲ. ಅಪಾರ ನಿರೀಕ್ಷೆ ಇಟ್ಟುಕೊಂಡು ಅವರು ಇತ್ತೀಚೆಗೆ ಪ್ರಕಟಿಸಿದ ನಿರಂತರ ಸಂಘರ್ಷಗಳ, ಏಳುಬೀಳಿನ ಆತ್ಮಕತೆಯನ್ನು ಜನ ಹೇಗೆ ಸ್ವೀಕರಿಸಿದರು ಎನ್ನುವುದು ಗೊತ್ತಾಗಲಿಲ್ಲ. ಆದರೂ “ಬರೆವಣಿಗೆಯನ್ನೇ ನೆಚ್ಚಿ ಒಂದು ಮಟ್ಟದಲ್ಲಿ ಬದುಕಿ ತೋರಿಸಿದೆ’ ಎನ್ನುವ ಆತ್ಮಗೌರವವನ್ನು  ಅವರು ಹೊಂದಿದ್ದರು. “ಗಂಭೀರ ಸಾಹಿತ್ಯ’ದ ಸಮಕಾಲೀನ “ನಕ್ಷತ್ರ’ಗಳಾದ ಅನಕೃ, ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ತಮ್ಮ ಕೃತಿಗಳನ್ನು ಕುರಿತು ಚರ್ಚಿಸುತ್ತಿದ್ದರು ಎಂಬ ಹೆಮ್ಮೆ ಇತ್ತು. “ಏನಯ್ಯಾ ಪತ್ತೇದಾರ’ ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಶಿವರಾಮ ಕಾರಂತರ ಎಲ್ಲ ಕೃತಿಗಳನ್ನೂ ಅವರು ಓದಿದ್ದರು. ಎಲ್ಲಕ್ಕಿಂತ ಮಿಗಿಲಾಗಿ “ತಮ್ಮದನ್ನೂ ಸೇರಿಸಿ, ಜನಪ್ರಿಯ ಸಾಹಿತ್ಯವೆಲ್ಲವೂ ಮಸಾಲೆದೋಸೆ ಸಾಹಿತ್ಯ…ಪುರಂದರ ದಾಸರು, ಕನಕದಾಸರು ಬರೆದದ್ದು…ಸರ್ವಜ್ಞನ ವಚನಗಳು ಚಿರಂತನ ಗಂಭೀರ ಸಾಹಿತ್ಯ’ ಎಂಬ ಸ್ವವಿಮರ್ಶೆಯೂ ಅವರಿಗೆ ಸಾಧ್ಯವಿತ್ತು!

ಗಂಭೀರ ಹಾಗೂ ಜನಪ್ರಿಯ ಲಘು ಸಾಹಿತ್ಯ ಎನ್ನುವ ವರ್ಗೀಕರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಮಾನ್ಯ. ಪಾಶ್ಚಾತ್ಯರಲ್ಲಿ ಸುಮಾರು ಅರವತ್ತರ ದಶಕದವರೆಗೂ ಕ್ರೈಮ್ ಕಾದಂಬರಿ ಓದುವುದನ್ನು ಒಂದು ಅಗ್ಗದ ಮನರಂಜನೆ ಎಂದು ಪರಿಗಣಿಸಲಾಗುತ್ತಿತ್ತು. ಅಭಿಜಾತ ಸಂಗೀತ ಆಲಿಸುವವರು, ಖ್ಯಾತನಾಮರ ಪೇಂಟಿಂಗ್ ಸವಿಯುವವರು, ಶೇಕ್ಸ್‌ಪಿಯರನನ್ನು ಓದುವವರು…ಸುಶಿಕ್ಷಿತರು ಎಂಬ ರೂಢಿಗತ ಅಭಿಪ್ರಾಯವಿತ್ತು. ಜನಪದ, ಜ್ಯಾಸ್, ರಾಕ್ ಅಂಡ್ ರೋಲ್ ಪ್ರಕಾರಗಳ ಸಂಗೀತ ಅಲಿಸುವುದು, ಛಾಯಾಗ್ರಹಣ, ದಿನಬಳಕೆಯ ವಸ್ತುಗಳನ್ನು ವಿನ್ಯಾಸಗೊಳಿಸುವುದು, ಕಾಮಿಕ್ಸ್, ಸೈನ್ಸ್ ಫಿಕ್ಷನ್ ಪಠಣಗಳನ್ನು “ಜನಪ್ರಿಯ’ ಎಂದು ಭಾವಿಸಲಾಗುತ್ತಿತ್ತು. ಇವುಗಳನ್ನು ಸವಿಯುವವರು ಸುಶಿಕ್ಷಿತರಲ್ಲದವರು, ನಯನಾಜೂಕಿನ ನಡಾವಳಿ ಇಲ್ಲದವರು ಎಂಬ ವಿಭಾಗದಡಿ ಸೇರಿಹೋಗುತ್ತಿದ್ದರು. ಸಾಮಾನ್ಯವಾಗಿ ಸಮಾಜದ ಕೆಳ ಸ್ತರಗಳಿಗೆ ಸೇರಿದವರಾಗಿರುತ್ತಿದ್ದ ಇವರನ್ನು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿರುತ್ತಿದ್ದ ವಿದ್ವಾಂಸರು, ವಿಮರ್ಶಕರು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವಷ್ಟೇ ಅಲ್ಲ ಅವರ  ಸಾಹಿತ್ಯ, ಕಲೆ ಕುರಿತು ಒಂದು ಬಗೆಯ  ಅವಜ್ಞೆ ಪ್ರದರ್ಶಿಸುತ್ತಿದ್ದರು. ಆದರೆ  ಜನಪ್ರಿಯ ಸಾಹಿತ್ಯ ಮತ್ತು ಕಲೆಗಳ ಉತ್ಪನ್ನ ಬರಬರುತ್ತಾ ಎಷ್ಟೊಂದು ಪ್ರವರ್ಧಮಾನಕ್ಕೆ ಬಂದಿತೆಂದರೆ ಅವನ್ನು ಬದಿಗೆ ಸರಿಸುವುದು, ಕಡೆಗಣಿಸುವುದು ಅಸಾಧ್ಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಯಿತು. ಕ್ರಮೇಣ, ವಿದ್ವಾಂಸರು, ವಿಮರ್ಶಕರೇ ಅದರ ದಾರಿಗೆ ಬಂದು ಹುಷಾರಾಗಿ ಪ್ರಶ್ನಿಸತೊಡಗಿದರು : “ಇಂತಹದೊಂದು ಕಂದರ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯಗಳ ನಡುವೆ ಯಾಕಾದರೂ ಇರಬೇಕು?’ ಈ ಯೋಚನಾಧಾಟಿಯ ಹರಿಕಾರನೆಂದರೆ ಅಮೆರಿಕದ ವಿಮರ್ಶಕ ಲೆಸ್ಲಿ ಫಿಡ್ಲರ್. “ಕ್ರಾಸ್ ದಿ ಬಾರ್ಡರ್-ಕ್ಲೋಸ್ ದಿ ಗ್ಯಾಪ್’ ಶೀರ್ಷಿಕೆಯ  ತನ್ನ ಪುಸ್ತಕದಲ್ಲಿ ಲೆಸ್ಲಿ, ವೈಜ್ಞಾನಿಕ ಸಾಹಿತ್ಯ, ಅಶ್ಲೀಲ ಸಾಹಿತ್ಯ ಮತ್ತಿತರ “ಹೈ ಆರ್ಟ್’ ಎಂಬ ಹಣೆಪಟ್ಟಿಯಿಂದ ವಂಚಿತವಾದ ಸಾಹಿತ್ಯ ಪ್ರಕಾರಗಳನ್ನು ಸಾಹಿತ್ಯಕ ಮಾನದಂಡಗಳಿಂದ ಚರ್ಚಿಸತಕ್ಕದ್ದು ಎಂಬ ತನ್ನ ಪ್ರಮುಖ ಪ್ರತಿಪಾದನೆಯನ್ನು ಮಂಡಿಸಿದ. ಶ್ರೇಣೀಕೃತ ವರ್ಗೀಕರಣವನ್ನು ದಿಟ್ಟವಾಗಿ ಧಿಕ್ಕರಿಸಿದ ಈ ಪ್ರಯತ್ನ  ಕಲಾಕೃತಿಗಳನ್ನು “ಒಳ್ಳೆಯದು’ ಮತ್ತು “ಕೆಟ್ಟದ್ದು’ ಎಂದಷ್ಟೇ ವರ್ಗೀಕರಿಸಬೇಕು ; ಉತ್ತಮ ಹಾಗೂ ಅಧಮ ಎಂದಲ್ಲ ಎಂಬ ಯೋಚನೆಯನ್ನು ಹುಟ್ಟುಹಾಕಿತು. ಗುಣಗ್ರಹಣ ಉತ್ತಮ, ಅಧಮ ಲೇಬಲ್ಲುಗಳನ್ನು ದಾಟಿ ನಡೆಯಲಿ ಎಂಬ ಸದಾಶಯ ಅದರಲ್ಲಿ ಇತ್ತು.

ಕನ್ನಡದ ವಾತಾವರಣಕ್ಕೆ ಬಂದರೆ “ಗಾಂಭೀರ್ಯ ಹಾಗೂ ಜನಪ್ರಿಯತೆಗಳನ್ನು ಎರಡು ಹೋಳುಗಳಾಗಿ ನಾವು ಒಡೆದುಬಿಟ್ಟಿದ್ದೇವೆ. ಮಾತ್ರವಲ್ಲ ಇಡೀ ಜನಪ್ರಿಯ ಪರಂಪರೆಯನ್ನೆ ಸಾರಾಸಗಟಾಗಿ ಮನರಂಜನೆಯ ಕೈಗಾರಿಕೆಗೆ ಮಾರಿಬಿಟ್ಟಿದ್ದೇವೆ… ಇದು ಕೂಡದು’ ಎಂಬ ಎಚ್ಚರಿಕೆಯ ಗಂಟೆಯನ್ನು ನಾಟಕಕಾರ, ಚಿಂತಕ ಪ್ರಸನ್ನ ಆಗಾಗ ಮೊಳಗಿಸುತ್ತಿರುತ್ತಾರೆ. ಮನರಂಜನೆಯ ಕೈಗಾರಿಕೆಯಲ್ಲಿ ಅಗತ್ಯಕ್ಕಿಂತ ಹೆಚ್ಚೇ  ರೋಚಕಗೊಂಡಿರುವ “ಕ್ರೈಮ್ ಸ್ಟೋರಿ’ಗಳ ಕುಕ್ಕುವ ಬೆಳಕಲ್ಲಿ ನರಸಿಂಹಯ್ಯ ಮತ್ತು ಅವರ ಪರಂಪರೆ ಮುಂದುವರಿಸಿದವರು ಎನ್ನಬಹುದಾದ ಟಿ.ಕೆ. ರಾಮರಾವ್, ಎಚ್.ಕೆ. ಅನಂತರಾವ್, ಕೌಂಡಿನ್ಯ, ಸುದರ್ಶನ ದೇಸಾಯಿಯಂತಹವರ  ಅಪರಾಧ ಸಾಹಿತ್ಯ ಸೃಷ್ಟಿ  ಬಸವಳಿದಿದೆ ಎನ್ನಬಹುದು. ಹಾಗಾಗಿಯೇ ಒಂದು ಕಾಲದಲ್ಲಿ ಅವಕ್ಕೆ ದಕ್ಕಿದ್ದ ಜನಪ್ರಿಯತೆ ಇಂದು ಕ್ಷೀಣಿಸಿದೆ. ಆದರೆ ಯಾವಾಗ ಬೇಕಾದರೂ ಪುನರುಜ್ಜೀವನಗೊಳ್ಳುವ ತಾಕತ್ತು ಅವುಗಳಿಗಿದೆ ಎನ್ನುವುದನ್ನೂ ಮರೆಯಲಾಗದು. ತಮ್ಮದು ಅಭಿಜಾತ ಭಾಷೆ, (ಕ್ರಿ.ಪೂ. ಆರನೇ ಶತಮಾನದಲ್ಲಿಯೇ ಚಾಲ್ತಿಯಲ್ಲಿತ್ತು) ಸಾಹಿತ್ಯ ಎಂದು ಹೆಮ್ಮೆ ಪಡುವ ತಮಿಳು ಸಾಹಿತ್ಯ ಪರಂಪರೆಯಲ್ಲಿ ಅಪರಾಧ ಸಾಹಿತ್ಯವನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಈಗ್ಗೆ ಕೆಲ ವರ್ಷಗಳಿಂದ ಸಾಗಿದೆ. ಇರಬಹುದು, ಪಲಾಯನವಾದಿ, ಉತ್ಪ್ರೇಕ್ಷೆಯಿಂದ ಕೂಡಿದುದು…ಸೌಮ್ಯ ಅಶ್ಲೀಲತೆ ಸಹ ಹೊಂದಿವೆ ಎಂಬೆಲ್ಲ ವಿಶೇಷಣಗಳನ್ನೂ ಜನಪ್ರಿಯ ಸಾಹಿತ್ಯ (ಅದರಲ್ಲಿ ಒಂದು  ಶಾಖೆಯಾದ ಅಪರಾಧ ಸಾಹಿತ್ಯ) ಹೊಂದಿರಬಹುದು, ಪಾತ್ರಗಳು ಸರ್ವಾತರ್ಯಾಮಿಯಾಗಿ ಸಮಯಕ್ಕೆ  ಸರಿಯಾಗಿ ಕಾಣಿಸಿಕೊಂಡು ಆನಂತರ ತರ್ಕಾತೀತವಾಗಿ ಕಣ್ಮರೆಯಾಗಿ, ಲೇಖಕನ ತಾಳಕ್ಕೆ ತಕ್ಕಂತೆ ಕುಣಿದು, ಮದಿರೆ-ಮಾನಿನಿಯರ ಜಗತ್ತಿನಲ್ಲೂ ಅಡ್ಡಾಡಿ, ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆಯ ಪರಿಹಾರಗೈದಿರಬಹುದು…ಆದರೂ ಅವು ಸೃಷ್ಟಿಗೊಂಡ ಕಾಲಘಟ್ಟದ ಪ್ರತೀಕವಾಗಿ, ಅಂದಿನ ಸಂವೇದನೆಯ ಫಲಿತವಾಗಿ, ಅಂದು ಘಟಿಸಿದ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅವು ಮೂಡಿವೆ ಮತ್ತು ಈ  ಎಲ್ಲ ಗುಣಗಳಿಂದ ಮೌಲಿಕವಾದ ಏನನ್ನೋ ನಮ್ಮ ಪರಂಪರೆಗೆ ಜೋಡಿಸುತ್ತಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ನರಸಿಂಹಯ್ಯನವರ ಕೃತಿಗಳ ಪುನರುಜ್ಜೀವನದ ಕುರಿತಾಗಿಯೂ ಮುಂದೊಮ್ಮೆ ಇಲ್ಲಿ ಪ್ರಸ್ತಾಪಿಸಲಿದ್ದೇವೆ ಎಂಬ ನಂಬಿಕೆ ಇಟ್ಟುಕೊಳ್ಳೋಣ.

(ಲೇಖಕಿ, ೨೦೦೦ನೇ ವರ್ಷದಲ್ಲಿ ಎನ್. ನರಸಿಂಹಯ್ಯನವರನ್ನು ಸಂದರ್ಶಿಸಿದುದನ್ನು ಆಧಾರವಾಗಿ ಬಳಸಲಾಗಿದೆ.)