ಆನಂದಕಂದರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ, ಆಗ ಬೆರಳ ಮೇಲಿನ ಎಣಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸವನ್ನಿರಿಸಿಕೊಂಡಿದ್ದು, ಮುಂದೆ ಈ ಹವ್ಯಾಸವೇ ಅವರನ್ನು ಪತ್ರಿಕಾ ವ್ಯವಸಾಯಕ್ಕೆ ಹಚ್ಚಿದ್ದು ವಿಶೇಷ.

ಆನಂದಕಂದರು ತಮ್ಮ ೨೧ರ ತಾರುಣ್ಯದಲ್ಲಿಯೇ ಬೆಳಗಾವಿಯಲ್ಲಿ ಕರಗುಪ್ಪಿ ಕೃಷ್ಣರಾಯರ ‘ಮಾತೃಭೂಮಿ’ಲ್ಲಿ ಪತ್ರಿಕಾ ಕರ್ತರಾಗಿ ಶ್ರೀಕಾರ ಹಾಕಿದ್ದರು. ಈ ಪತ್ರಿಕೆಯ ಮೂಲಕ ಅಂದಿನ ರಾಜಕೀಯ ಧುರೀಣ, ‘ಕರ್ನಾಟಕ ಸಿಂಹ’ ಎಂದು ಹೆಸರು ಪಡೆದ, ಗಾಂಧೀಜಿಯವರ ಆತ್ಮೀಯ ಬಳಗಕ್ಕೆ ಸೇರಿದ, ಮರಾಠಿ ಪ್ರಭಾವಕ್ಕೆ ಒಳಗಾದ ಗಾಂಗಾಧರರಾವ್‌ ದೇಶಪಾಂಡೆಯವರ ಒಲವನ್ನು ಕನ್ನಡದತ್ತ ತಿರುಗಿಸಿದ್ದಲ್ಲದೆ, ಬೆಳಗಾವಿಯಲ್ಲಿ ಕನ್ನಡ ಕಾವ್ಯದ ಸೊಂಪನ್ನು -ಕಂಪನ್ನು ಹರಡಿದ್ದರು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಕಾವ್ಯದ ಬಗೆಗೆ ಒಲವಿದ್ದ ಆನಂದಕಂದರು ಕವಿತೆ ಬರೆಯುತ್ತಿದ್ದು, ಗದ್ಯದಲ್ಲಿ ಕೈಯಾಡಿಸಿರಲಿಲ್ಲ. ಈಗ ಅನಿವಾರ್ಯವಾಗಿ ಪತ್ರಿಕೆಗಾಗಿ ಗದ್ಯವನ್ನು ರೂಢಿಸಿಕೊಳ್ಳಬೇಕಾಯಿತು.

ಆನಂದಕಂದರು ‘ಮಾತೃಭೂಮಿ’ ಪತ್ರಿಕೆ ಸೇರಿದ ದಿನವೇ’ ಬಣ್ಣದ ಭಿನ್ನಹ’ ಎಂದು ಸಂಪಾದಕೀಯ ಬರೆದು ಗದ್ಯಕ್ಕೆ ನಾಂದಿ ಹಾಡಿದರು. ಗಂಗಾಧಾರರಾವ್‌ ದೇಶಪಾಂಡೆ ಅವರಿಂದಲೆ ಆನಂದಕಂದರಿಗೆ ಈ ಪತ್ರಿಕೆಯ ಸಂಪರ್ಕ ಬಂದಿತ್ತು. ಗಂಗಾಧರರಾವ್‌ ದೇಶಪಾಂಡೆ ಅವರು ಆನಂದಕಂದರ ಮೇಲಿನ ಅಭಿಮಾನದಿಂದ ಬೆಳಗಾವಿ ಸಾಹಿತ್ಯ ಸಮ್ಮೇಲನದಲ್ಲಿ ಹಾಗೂ ಜಮಖಂಡಿ ಸಾಹಿತ್ಯ ಸಮ್ಮೇಲನದಲ್ಲಿ ‘ನನಗೆ ಕರ್ನಾಟಕದ ಇತಿಹಾಸ ಸರಿಯಾಗಿ ಗೊತ್ತಿರಲಿಲ್ಲ. ಅದರ ಘನವಾದ ಪೂರ್ವ ಚರಿತ್ರೆಯ ಬಗ್ಗೆ ನನ್ನಲ್ಲಿ ಈ ತರುಣನ ಕವಿತೆಗಳಿಂದ ಅಭಿಮಾನ ಹುಟ್ಟಿತು. ನನಗೆ ಕನ್ನಡ ಪಾಠ ಕಲಿಸಿದವನು ಈತನೇ” ಎಂದು ಮೆಚ್ಚುಗೆಯಿಂದ ಹೇಳಿದ್ದರು. ಆನಂದಕಂದರ ಮೊದಲ ಕಥೆ ‘ನನ್ನ ಗೆಳೆಯ’ ಇದೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

೧೯೨೫ ರ ಜುಲೈ ತಿಂಗಳಿನಲ್ಲಿ ಆನಂದಕಂದರು ಧಾರವಾಡಕ್ಕೆ ರಾಷ್ಟ್ರೀಯ ಶಾಲೆಯ ಶಿಕ್ಷಕರಾಗಿ ಬಂದರು. ಇವರು ಶಿಕ್ಷಕರಾಗಿ ಸೇರಿದ ದಿನವೇ ಶಾಲೆಯಲ್ಲಿ ಹುಣ್ಣಿಮೆ-ಅಮವಾಸ್ಯೆಗಳನ್ನು ಕುರಿತು ಇವರದೇ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಆನಂದಕಂದರ ಆಳವಾದ ಅಧ್ಯಯನ, ವಿಷಯ ನಿರೂಪಣೆ, ಸಾಹಿತ್ಯ ಅಭಿರುಚಿ ಕಂಡ ಪ್ರಿನ್ಸಿಪಾಲ್‌ ಸುರೇಂದ್ರ ದೇಸಾಯಿ ಅವರು ಶಾಲೆಯ ಅಂಗವಾಗಿ ಪ್ರಕಟವಾಗುತ್ತಿದ್ದ ‘ಸ್ವಧರ್ಮ’ ಮಾಸ ಪತ್ರಿಕೆಯ ಸಂಪಾದಕರನ್ನಾಗಿ ಇವರನ್ನೇ ನೇಮಿಸಿದರು. ಈ ಪತ್ರಿಕೆಯಲ್ಲಿ ಆನಂದಕಂದರು ಬರೆದ ‘ನವರಾತ್ರಿ’ ಹಬ್ಬದ ಕುರಿತಾದ ಲೇಖನವೇ ನಾಡಿನಲ್ಲಿ ನಾಡಹಬ್ಬದ ಆಚರಣೆಗೆ ಪ್ರೇರಣೆ ನೀಡಿತು. ಇದೊಂದು ಆನಂದಕಂದರ ಮಹತ್ಸಾಧನೆ ಎಂದೇ ಹೇಳಬಹುದು.

ಮುಂದೆ ‘ಸ್ವಧರ್ಮ’ ಪತ್ರಿಕೆ ಗೆಳೆಯರ ಗುಂಪಿನ ಕಡೆಗೆ ಬಂದರೂ ಆನಂದಕಂದರೇ ಸಂಪಾದಕರಾಗಿದ್ದರು. ಈ ಪತ್ರಿಕೆ ಬೆಂಗಳೂರಿನಲ್ಲಿ ಮುದ್ರಣವಾಗುತ್ತಿದ್ದು, ಎಲ್ಲ ಲೇಖನಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳಿಸಬೇಕಾಗುತ್ತಿತ್ತು. ಆನಂದಕಂದರ ಕಥೆಗಳು ಇದರಲ್ಲಿ ಪ್ರಕಟವಾಗುತ್ತಿದ್ದು, ಆದಾಗಲೇ ಒಳ್ಳೆಯ ಕಥೆಗಾರರೆಂದು ಹೆಸರು ಪಡೆದಿದ್ದರು. ೧೯೨೭ ರವರೆಗೆ ಈ ಪತ್ರಿಕೆಯ ಹೊಣೆ ಹೊತ್ತ ಆನಂದಕಂದರು ಬೆಂಗಳೂರಿನ ಆರ್ಯ ವಿದ್ಯಾಶಾಲೆಗೆ ಶಿಕ್ಷಕರಾಗಿ ಹೋದರು.

ಬೆಂಗಳೂರಿಗೆ ಹೋದ ಬಳಿಕ ಆನಂದಕಂದರಿಗೆ ಅಲ್ಲಿ ‘ಜನಲಜೀವನ’ ದಿನಪತ್ರಿಕೆಯ ಸಂಪಾದಕರಾದ ಅಶ್ವತ್ಥನಾರಾಯಣರ ಪರಿಚಯವಾಗಿತ್ತು. ಅವರ ಆನಂದಕಂದರಿಂದ ಪತ್ರಿಕೆಗೆ ಅನೇಕ ಪ್ರಾಸಂಗಿಕ ಲೇಖನಗಳನ್ನು ಬರೆಯಿಸಿಕೊಂಡರು. ಆನಂದಕಂದರ ಸಂಪಾದಕತ್ವದ ಯೋಗ್ಯತೆಯನ್ನರಿತ ಅಶ್ವತ್ಥ ನಾರಾಯಣರು ‘ಜನಜೀವನ’ ಪತ್ರಿಕೆಯ ನವರಾತ್ರಿ ವಿಶೇಷಾಂಕದ ಎಲ್ಲ ಜವಾಬ್ದಾರಿಯನ್ನು ಆನಂದಕಂದರ ಮೇಲೆ ಹಾಕಿದರು. ಆನಂದಕಂದರು ತುಂಬ ಕಾಳಜಿಯಿಂದ ಆ ಪತ್ರಿಕೆಯನ್ನು ಸಿದ್ಧಪಡಿಸಿದ್ದು ಅದು ಸಾಹಿತಿಗಳ-ಓದುಗರ ವಿಶೇಷ ಮನ್ನಣೆ ಪಡೆಯಿತು. ಅದೇ ಸಂಚಿಕೆಯಲ್ಲಿ ಆನಂದಕಂದರು ಬರೆದ ‘ಸತಿವಾಣಿ’ ಎಂಬ ವಿಡಂಬನಾತ್ಮಕ ಪ್ರಹಸನವು ಜನಪ್ರಿಯವಾಗಿತ್ತು.

ಸ್ವಾಭಿಮಾನದ ಕಾರಣದಿಂದ ಬೆಂಗಳೂರಿನ ಶಿಕ್ಷಕ ವೃತ್ತಿಗೆ ಎಳ್ಳು ನೀರು ಬಿಟ್ಟು ೧೯೩೦ ರಲ್ಲಿ ಆನಂದಕಂದರು ತಮ್ಮ ಊರಾದ ಬೆಟಗೇರಿಗೆ ಬಂದರು. ‘ಜಯಕರ್ನಾಟಕ’ ಮಾಸ ಪತ್ರಿಕೆಯ ಸಂಪಾದಕರಾಗಿ ಬರಲು ಧಾರವಾಡದಿಂದ ಕರೆ ಬಂದಿತು. ಮತ್ತೆ ಆನಂದಕಂದರು ಧಾರವಾಡಕ್ಕೆ ಬಂದು ಕೃಷ್ಣಕುಮಾರ ಕಲ್ಲೂರ ಅವರ ಜತೆ ೧೯೩೧ ರಿಂದ ೧೯೩೬ ರವರೆಗೆ ‘ಜಯಕರ್ನಾಟಕ’ದ ಸಂಪಾದಕರಾಗಿ ಪತ್ರಿಕೆಯನ್ನು ಎತ್ತರ ಮಟ್ಟಕ್ಕೆ ಒಯ್ದರು. ಜಯಕರ್ನಾಟಕದ ವಿಜಯನಗರದ ವಿಶೇಷ ಸಂಚಿಕೆಯಂತೂ ಒಂದು ದಾಖಲಾಯಿತು.

೧೯೩೮ರ ಸುಮಾರಿಗೆ ಎಂ.ಎ. ಪದವಿಪಡೆದ ಆನಂದಕಂದರ ತಮ್ಮ ವಿಜಯೀಂದ್ರ ಅಕಾಲ ಮರಣಕ್ಕೀಡಾದಾಗ, ಆ ದುಃಖ ಪ್ರಸಂಗದಲ್ಲಿ ಆನಂದಕಂದರು ಮರಳಿ ಬೆಟಗೇರಿಗೆ ಹೋದರು. ಧಾರವಾಡದ ಕೆಲವು ಜನ ಸ್ನೇಹಿತರು ಸೇರಿ ‘ಜಯಂತಿ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿ, ಸಂಪಾದಕರ ಬಗೆಗೆ ಶಂ.ಬಾ. ಜೋಶಿಯವರನ್ನು ವಿಚಾರಿಸಿದಾಗ, ಅವರು ಆನಂದಕಂದರ ಹೆಸರನ್ನು ಸೂಚಿಸಿದರು. ಅವರೆಲ್ಲರ ಸಲಹೆಯಂತೆ ಶಂ.ಭಾ.ಅವರು ಆನಂದಕಂದರಿಗೆ ಪತ್ರ ಬರೆದು ‘ಜಯಂತಿ’ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸೂಚಿಸಿದರು. ಆಗಲೂ ಆನಂದಕಂದರಿಂದ ಉತ್ತರ ಬಾರದಿದ್ದಾಗ “ನೀವು ಅಲ್ಲಿ ಕೂತು ದುಃಖವನ್ನು ದ್ವಿಗುಣಿಸಬೇಡಿರಿ. ಕರ್ತವ್ಯವನ್ನು ಜ್ಞಾಪಿಸಿಕೊಳ್ಳಿರಿ” ಎಂದು ಇನ್ನೊಂದು ಪತ್ರ ಬರೆದಾಗ, ಆನಂದಕಂದರು ಧಾರವಾಡಕ್ಕೆ ಬಂದು ಹೊಸ ಮಾಸ ಪತ್ರಿಕೆ’ ‘ಜಯಂತಿ’ಯ ಸಂಪಾದಕರಾಗಿ ಅಧಿಕಾರ ಸ್ವೀಕರಿಸಿದರು.

‘ಜಯಂತಿ’ ಒಂದು ಸ್ಥಿತಿಗೆ ಬಂದು, ತನ್ನ ಖ್ಯಾತಿಯನ್ನು ಬೆಳೆಸಿಕೊಳ್ಳುತ್ತಿರುವ ಸಮಯದಲ್ಲಿಯೇ ಈ ಪತ್ರಿಕೆಯ ಪಾಲುದಾರರಿಗೆ, ಇದರಿಂದ ಅಂಥ ಯಾವ ಆರ್ಥಿಕ ಲಾಭವಿಲ್ಲವೆಂದು ತಿಳಿದು ೧೯೪೧ ರಲ್ಲಿ ‘ಜಯಂತಿ’ಯನ್ನು ನಿಲ್ಲಿಸಲು ಆಲೋಚಿಸಿದರು. ಇದು ಆನಂದಕಂದರಿಗೆ ತುಂಬ ನೋವನ್ನುಂಟು ಮಾಡಿತು. ಕೈಯಲ್ಲಿ ಕಾಸಿಲ್ಲದಿದ್ದರೂ, ಧೈರ್ಯಮಾಡಿ, ಅವರಿಂದ ‘ಜಯಂತಿ’ಯನ್ನು ತಾವೇ ಪಡೆದುಕೊಂಡು ಅದಕ್ಕೆ ಬೇರೊಂದು ಸ್ವರೂಪ ಕೊಡಲು ಸ್ವತಂತ್ರರಾದರು. ಮುಂದೆ ‘ಜಯಂತಿ’ ಶುದ್ಧ ಸಾಹಿತ್ಯಿಕ ಪತ್ರಿಕೆಯಾಗಿ ಇತಿಹಾಸ ನಿರ್ಮಿಸಿತು.  ಸಾಹಿತ್ಯದ ಜತೆ ಜತೆಯಲ್ಲಿಲಯೇ ಕನ್ನಡದ ಏಳ್ಗೆ, ಕರ್ನಾಟಕ ಏಕೀಕರಣ, ರಾಷ್ಟ್ರೀಯ ಸ್ವಾತಂತ್ಯ್ರ, ಮಾನವೀಯ ವಿಕಾಸ ಈ ಎಲ್ಲ ಗುರಿಗಳನ್ನು ಇರಿಸಿಕೊಂಡು ಈ ಪತ್ರಿಕೆ ಕನ್ನಡದ ಅನೇಕ ಸೃಜನಶೀಲ ಲೇಖಕರನ್ನು ಹುಟ್ಟು ಹಾಕಿತು. ಜಯಂತಿಯಲ್ಲಿ ಲೇಖನ ಪ್ರಕಟವಾಗುವುದೇ ಒಂದು ಮಹತ್ಸಾಧನೆ ಹಾಗೂ ಸಾಹಿತ್ಯಿಕ ಮೌಲ್ಯ ಎಂಬ ಭಾವನೆ ಆ ಕಾಲದ ಹೊಸಬ ಲೇಖಕರಲ್ಲಿತ್ತು.

ಆನಂದಕಂದರು ತರುಣ ಲೇಖಕರ ಭಾಷಾ ಶುದ್ಧಿಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದರು. ಇವರು ಅಂಥ ಉಚ್ಚ ಶಿಕ್ಷಣ ಪಡೆಯದಿದ್ದರೂ, ಸ್ವಾಧ್ಯಾಯ ಹಾಗೂ ಪ್ರತಿಭೆಯಿಂದ ಕನ್ನಡ ಭಾಷೆಯ ಮೇಲಿನ ಆನಂದಕಂದರ ಪ್ರಭುತ್ವ ಆಗಾಧವಾಗಿತ್ತು. ಉತ್ತಮ ದರ್ಜೆಯ ಲೇಖನಗಳೇ ಅದರಲ್ಲಿ ಪ್ರಕಟವಾಗುತ್ತಿದ್ದವು. ವಿಜಯರಸ್ತೆಯ ಬಲಬದಿಯ ಒಂದು ಮಹಡಿಯ ಮೇಲೆ ‘ಜಯಂತಿ’ಯ ಕಚೇರಿಯಿದ್ದು, ಅದು ಧಾರವಾಡದ ಹಾಗೂ ಪರಸ್ಥಳದ ಸಾಹಿತಿಗಳಿಗೆ ತೀರ್ಥಕ್ಷೇತ್ರವಾದಂತಿತ್ತು. ಸಂಜೆಯ ಹೊತ್ತು ಎಲ್ಲ ಸಾಹಿತಿಗಳು ಸೇರುವ ಸಾಹಿತ್ಯದ ಚರ್ಚೆ, ಹರಟೆ ನಡೆಯುವ ಅಟ್ಟ ಅದಾಗಿತ್ತು.

ಕನ್ನಡದ ಹಿರಿಯ ಸಾಹಿತಿಗಳ ಕಿರಿಯ ಬರಹಗಾರರ ಯೋಗ್ಯ ಕವಿತೆಗಳು, ಲೇಖನಗಳು ಕಥೆ-ಏಕಾಂಕಗಳು, ವಿಮರ್ಶೆಗಳು ಪ್ರಕಟವಾಗುತ್ತಿದ್ದವು. ಈಗಿನ ಅನೇಕ ಹಿರಿಯ ಸಾಹಿತಿಗಳು ಅಂದು ಕಿರಿಯರಿದ್ದಾಗ ‘ಜಯಂತಿ’ಯಿಂದಲೇ ಹೊಸಲು ದಾಟಿ ಸಾಹಿತ್ಯ ಪ್ರಪಂಚಕ್ಕೆ ಕಾಲಿಟ್ಟವರಾಗಿದ್ದಾರೆ.

ಬಸವರಾಜ ಕಟ್ಟೀಮನಿ, ಬೀಚಿ, ಗೋಪಾಲಕೃಷ್ಣ ಅಡಿಗ, ನಿರಂಜನ, ಕೃಷ್ಣಮೂರ್ತಿ ಪುರಾಣಿಕ, ಮಿರ್ಜಿ ಅಣ್ಣಾರಾಯ, ಎ.ಎಂ. ಇನಾಮದಾರ, ರಾ.ಯ. ಧಾರವಾಡಕರ, ಅಶ್ವತ್ಥ, ಎನ್ಕೆ, ಕೋ.ಚೆ., ದ.ಬಾ.ಕು. ಎನ್‌.ಎಸ್‌. ಗದಗಕರ, ವಿ.ಜಿ. ಭಟ್ಟ, ಬೇಂದ್ರೆ ಲಕ್ಷ್ಮಣರಾಯ, ಮುದೇನೂರ ಸಂಗಣ್ಣ, ಹಾ.ಮಾ. ನಾಯಕ, ವರಗಿರಿ, ಸಿದ್ಧಣ್ಣ ಮಸಳಿ, ಕೆ.ವಿ. ಸುಬ್ಬಣ್ಣ, ಎಸ್‌.ಎಸ್‌. ಬಸುಪಟ್ಟದ, ಭುಜೇಂದ್ರ ಮಹಿಷವಾಡಿ, ಶ್ರೀನಿವಾಸ ಹಾವನೂರ, ಚೆನ್ನವೀರ ಕಣವಿ, ವೆಂ. ಮು. ಜೋಶಿ, ಗೋವಿಂದಮೂರ್ತಿ ದೇಸಾಯಿ, ಗಂಗಾಧರ ಚಿತ್ತಾಲ, ಅರವಿಂದ ನಾಡಕರ್ಣಿ, ಯಶವಂತ ಚಿತ್ತಾಲ, ಬುದ್ಧಣ್ಣ ಹಿಂಗಮಿರೆ,ಶಾಂತಿನಾಥ ದೇಸಾಯಿ, ದೇವಳೆ ಕೃಷ್ಣರಾವ್‌ , ಗಿರೀಶ ಕಾರ್ನಾಡ, ವೀ.ಚ. ಹಿತ್ತಲಮನಿ, ಎಂ.ಕೆ. ಜಯಲಕ್ಷ್ಮೀ, ಹಾ.ವೆಂ. ನಾಗೇಶ್‌, ರಾಘವೇಂದ್ರ ಖಾಸನಿಸ, ಚಂದ್ರಶೇಖರ ಪಾಟೀಲ,ಚಂದ್ರಶೇಖರ ಕಂಬಾರ, ಇನ್ನೂ ಅನೇಕ ಹಿರಿಯ ಹಾಗೂ ಮಧ್ಯವಯಸ್ಕ ಸಾಹಿತಿಗಳು ಜಯಂತಿಯಲ್ಲಿ ಮೂಡಿ ಬಂದವರೇ ಆಗಿದ್ದಾರೆ.

ಇದಕ್ಕೂ ಹಿರಿಯ ತಲೆಮಾರಿನವರಾಗಿದ್ದ ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, ಮಂಗಳವೀಡು ಶ್ರೀನಿವಾಸರಾಯರು, ಸಾಲಿ ರಾಮಚಂದ್ರರಾಯರು, ಮಾಸ್ತಿ, ಆನಂದ, ಶಂ.ಭಾ., ಗೋಕಾಕ, ಬೇಂದ್ರೆ, ಶ್ರೀರಂಗ, ಕಾರಂತ, ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ) ಡಿ.ಎನ್‌.ಕರ್ಕಿ, ಬಿ.ಎಚ್‌. ಶ್ರೀಧರ, ನೆರಂಗ, ರಾವಬಹಾದ್ದೂರ ಹಾಗೂ ಇನ್ನೂ ಅನೇಕರು ‘ಜಯಂತಿ’ಯಲ್ಲಿ ಬರೆದವರೇ ಆಗಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಕೆ. ರಾಜಾರಾವ್‌ ಹಾಗೂ ಎ.ಕೆ. ರಾಮಾನುಜನ್‌ ಅವರ ಲೇಖನಗಳು ಕೂಡ ಜಯಂತಿಯಲ್ಲಿ ಪ್ರಕಟವಾಗಿವೆ.

ಕನ್ನಡದ ಸದಭಿರುಚಿಯ ಈ ಪತ್ರಿಕೆಯನ್ನು ಕಂಡು ಸವಿಯುಂಡವರಿಗೆ, ಇದರ ಮಹತ್ವ ನೆಲೆ-ಬಗೆಲೆ ತಿಳಿದಿದೆ. ಜಯಂತಿಯಂಥ ಆದರ್ಶ, ಸುಸಂಸ್ಕೃತ ಪ್ರೌಢವಾದ ಸಾಹಿತ್ಯಿಕ ಪತ್ರಿಕೆ ಕನ್ನಡದಲ್ಲಿ ಇನ್ನೊಂದು ಬೆಳೆದು ಬರಲಿಲ್ಲ ಎಂದರೆ, ಅತಿಶಯೋಕ್ತಿಯಲ್ಲ.

“ಈಗ ಬಣ್ಣ ಬಣ್ಣದ ಪುಟಗಳನ್ನೊಳಗೊಂಡ ಮಾಸಪತ್ರಿಕೆಗಳು ಬೇಕಾದಷ್ಟು ಹೊರಡುತ್ತಿರುವವಾದರೂ ‘ಜಯಂತಿ’ಯನ್ನು ಸರಿಗಟ್ಟುವ ಪತ್ರಿಕೆ ಎಲ್ಲಿಯೂ ಇಲ್ಲ. ಅಂತಹ ವಿಚಾರಧಾರೆಗಳನ್ನು ಆಕರ್ಷಕವಾಗಿ ಕೊಡುವ ಪತ್ರಿಕೆ ತನ್ನ ಅಭಾವದಿಂದ ಕನ್ನಡಿಗರ ಬಡತನವನ್ನು ಸೂಚಿಸುತ್ತದೆ”-ಎಂದು ಡಾ.ಹಾ.ಮಾ. ನಾಯಕರು ತಮ್ಮ ‘ಸಾಹಿತ್ಯ ಸಲ್ಲಾಪ’ದಲ್ಲಿ ಬರೆಯುತ್ತಾರೆ.

ಆನಂದಕಂದರು ಜಯಂತಿಗಾಗಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿಯೂ, ಒಂದು ಧ್ಯೇಯದಿಂದ ಅದನ್ನು ಸ್ವಂತವಾಗಿ ೨೦ ವರ್ಷಗಳ ಕಾಲ ನಡೆಸಿಕೊಂಡು ಬಂದು ಶ್ರೇಷ್ಠದರ್ಜೆಯ ಮಾಸಪತ್ರಿಕೆಯನ್ನಾಗಿ ಮಾಡಿದರು. ಹೊರಲಾರದಷ್ಟು ಸಾಲದ ಭಾರವನ್ನು ಹೊತ್ತರು. ಆನಂದಕಂದರು ತಮ್ಮ ಗೆಳೆಯರ ಮುಂದೆ ಮೇಲಿಂದ ಮೇಲೆ ಹೇಳುತ್ತಿದ್ದ ಒಂದು ಮಾತು:“ನನ್ನ ಮನೆಯಲ್ಲಿ ಇಬ್ಬರು ಕ್ಷಯರೋಗಿಗಳು ಒಬ್ಬಳ ನನ್ನ ಹೆಂಡತಿ, ಇನ್ನೊಂದು ಜಯಂತಿ”.