ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ  ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಚೇತೋಹಾರಿಯೂ ಆನಂದಸ್ಯಂದಿಯೂ, ಸತತ ಸಾಧನೆ ಮತ್ತು ಗಂಭೀರ ಅನುಷ್ಠಾನಸಾಧ್ಯವೂ, ಸೋಪಜ್ಞಶೀಲ ಪ್ರತಿಭಾಯುಕ್ತವೂ ಆದ ಕಲೆಗಳಲ್ಲಿ ನೃತ್ಯ ಕಲೆ ಮುಖ್ಯವಾದದ್ದು. ವಿಶಾಲ ದೃಷ್ಟಿಯಿಂದ ಗಮನಿಸಿದಾಗ ಅಖಂಡ ಪ್ರಕೃತಿಯೇ ಒಂದು ವಿಶಾಲ ನಾಟ್ಯಶಾಲೆಯಾಗಿರುವುದು ಗೋಚರವಾಗುತ್ತದೆ. ಮಳೆಯ ವಿವಿಧ ಭಂಗಿಯ ಸುರಿತ, ಮೇಘಗಳ ವೈವಿಧ್ಯಮಯ ಚಲನೆ, ಮಿಂಚು-ಗುಡುಗುಗಳ ಲಯಬದ್ಧ ಶಬ್ಧ ವಿನ್ಯಾಸ, ಬಗೆ ಬಗೆಯ ಗಾಳಿಯ ವಿವಿಧ ಗತಿಯ ಬೀಸುವಿಕೆ, ಗಿಡ ಮರಗಳ ಲಾಸ್ಯದಿಂದ ತಾಂಡದವರೆಗಿನ ಬಹುಬಗೆಯ ಚಲನ ವಿನ್ಯಾಸ, ಹರಿವ ಹೊಳೆ, ಮೆಲ್ಲನೆ ಸುರಿಯುವ ಜರಿ, ಚಿಲ್ಲನೆ ಚಿಮ್ಮುವ ಚಿಲುಮೆ, ಬೆಟ್ಟಗಳಿಂದ ಧುಮ್ಮಿಕ್ಕುವ ರೌದ್ರಗತಿಯ ಜಲಪಾತ, ಗುಡ್ಡ ಬೆಟ್ಟಗಳ ವೈವಿಧ್ಯಮಯ ಭಂಗಿ, ಸಾವಿರಾರು ಪಕ್ಷಿಗಳ ಹಾರುವಿಕೆಯ ಲಯವಿನ್ಯಾಸ, ತೆಂಗುಗಳ ತೂಗಾಟ, ಅಡಕೆಗಳ ಒನೆದಾಟ – ಹೀಗೆ ಕಣ್ಣಿಟ್ಟ ಕಡೆ ಮತ್ತು ಮನವಿಟ್ಟ ಕಡೆಗಳಲ್ಲೆಲ್ಲ ಅಸಂಖ್ಯ ಬಗೆಯ ಲಯಬದ್ಧ ಚಲನಗತಿಗಳು ನಮ್ಮನ್ನು ಆಕರ್ಷಿಸಿ ಸಂತೋಷದಲ್ಲಿ ಅದ್ದುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಪ್ರತಿಯೊಂದು ಪ್ರಾಣಿ, ಪಕ್ಷಿ, ಕೀಟ, ಮನುಷ್ಯರ ಚಲನೆಯಲ್ಲಿಯೂ ಒಂದೊಂದು ವಿಶಿಷ್ಟ ಬಗೆಯ ಗತಿಶೀಲತೆ ಮತ್ತು ನಿರ್ದಿಷ್ಟ ಲಯಬದ್ಧತೆ ಗೋಚರವಾಗುತ್ತದೆ. ಇದನ್ನು ಗಮನಿಸಿದಾಗ ಇಡೀ ನಿಸರ್ಗವೇ ಒಂದು ಅದ್ಭುತ ವಿಶಾಲ ನರ್ತನ ರಂಗವಾಗಿ ಆಸ್ವಾದನಾಯೋಗ್ಯವಾಗುತ್ತದೆ. ಈ ಪ್ರಕೃತಿಯ ವಿವಿಧ ಬಗೆಯ ಗತಿ, ಚಲನೆ, ವಿನ್ಯಾಸಗಳ ಅನಂತಕಾಲದ ಅವಲೋಕನ, ವಿಶ್ಲೇಷಣೆ, ವರ್ಗೀಕರಣ ಮುಂತಾದವುಗಳ ಕಾರಣದಿಂದಲೇ ನೃತ್ಯಕಲೆ ಸಹಜ ಜನ್ಮಧಾರಣೆ ಮಾಡಿದೆ. ವಿಶ್ವದ ಲಯಕರ್ತವಾಗಿ ನಮ್ಮ ಪುರಾಣಗಳಲ್ಲಿ ಪ್ರಸಿದ್ಧನಾದ ಶಿವ ಅದ್ಭುತ ಭಯಂಕರ ತಾಂಡವ ನೃತ್ಯಕ್ಕೆ ಪ್ರತಿಮೆಯಾಗಿದ್ದಾನೆ. ಶಿವ ಸತಿಯಾದ ಪಾರ್ವತಿಯನ್ನು ಲಾಸ್ಯದ ಅಧಿದೇವತೆಯೆಂದು ಬಣ್ಣಿಸಲಾಗಿದೆ. ಆದಿಮಾನವನ ಕಣ್ಣು ಲೋಕವೀಕ್ಷಣೆಗೆ, ಸೌಂದರ್ಯದರ್ಶನಕ್ಕೆ ತೆರೆದಂದಿನಿಂದ ಆತನ ಸೂಕ್ಷ್ಮಾವಲೋಕನ ಶಕ್ತಿಯಿಂದಾಗಿ ಮತ್ತು ಪ್ರಕೃತಿಯ ಬಗೆ ಬಗೆಯ ಋತುಗಳ ವಿಶಿಷ್ಟ ಗತಿಶೀಲತೆಯಿಂದಾಗಿ ಸಾವಿರಾರು ಬಗೆಯ ನೃತ್ಯ ಭಂಗಿಗಳು ರೂಪುಗೊಳ್ಳುತ್ತ ಬಂದಿವೆ. ಇವು ಗುಹಾಚಿತ್ರಗಳಲ್ಲಿ, ಶಿಲ್ಪಗಳಲ್ಲಿ ಮೈದಾಳಿವೆ. ನವಿಲಿನ ನಡಿಗೆ, ಹಂಸದ ನಡಿಗೆ, ಸಿಂಹದ ದಾಟು, ಜಿಂಕೆಯ ನೆಗೆತ, ಬೇಟೆಗಾರನ ಹೊಂಚು ಹಾಗೂ ಬೇಟೆಯ ವಿಧಾನ ಇವೆಲ್ಲ ಪ್ರತ್ಯೇಕ ನೃತ್ಯ ವಿಧಾನವನ್ನೇ ರೂಪಿಸಿಬಿಟ್ಟಿವೆ. ಹೀಗೆ ಲೋಕದಲ್ಲಿ ಸಾಹಿತ್ಯ ಆರಂಭವಾಗುವ ಮುಂಚಿನಿಂದಲೇ ಈ ನೃತ್ಯ ಸಂಗೀತಗಳು ಜೀವಸಹಚರಿಗಳಾಗಿ ಸಹಜವಾಗಿ ಅವಿರ್ಭವಿಸಿ ಕಾಲಕಾಲಕ್ಕೆ ವಿಶೇಷ ವರ್ಗೀಕರಣಕ್ಕೆ ಬದ್ಧತೆಗೆ ಒಳಗಾಗುತ್ತ ಸಾವಿರಾರು ರೀತಿಯ ನೃತ್ಯ ಶೈಲಿಗಳು ಒಳಮೂಡುತ್ತ ಬಂದಿವೆ. ಅವನ ಗಮನಕ್ಕೆ ಪ್ರಕೃತಿ ಒಡ್ಡಿದ ಈ ನೃತ್ಯಕಲಾ ವಿನ್ಯಾಸ ಮತ್ತು ವಿಲಾಸಗಳು ಅನಂತರ ಸಾಹಿತ್ಯದಲ್ಲೂ ಮೈದೆಳೆಯುತ್ತಾ, ವಿಶಿಷ್ಟ ಕಲಾಪ್ರಕಾರವಾಗಿ ಬೆಳೆಯುತ್ತಾ, ಮನರಂಜನೆಯಿಂದ ಮುಕ್ತಿಯವರೆಗಿನ ವಿವಿಧ ಹಂತಗಳ ಉದ್ದೇಶಗಳನ್ನು ಇಟ್ಟುಕೊಂಡು ವಿಕಾಸವಾಗುತ್ತ ಬಂದಿವೆ.

ನೃತ್ಯದ ಬಗ್ಗೆ ಭರತನ ನಾಟ್ಯಶಾಸ್ತ್ರದಿಂದ ಮೊದಲುಗೊಂಡು ಇತ್ತೀಚಿನವರೆಗೆ ಸಂಸ್ಕೃತದಲ್ಲಿ ಹಾಗೂ ದೇಶೀಯ ಭಾಷೆಗಳಲ್ಲಿ ನೂರಾರು ಗ್ರಂಥಗಳು ರಚಿತವಾಗಿವೆ. ಆದರೆ, ನಮ್ಮ ಸಾಹಿತ್ಯ ಗ್ರಂಥಗಳಲ್ಲಿ ಒಡಮೂಡಿರುವ ನೃತ್ಯ ಕಲೆಯ ವಿವಿಧ ರೂಪ ಮತ್ತು ಸ್ವರೂಪಗಳನ್ನು, ಅವುಗಳ ವಿವಿಧ ಪದ್ಧತಿ ಹಾಗೂ ಲಕ್ಷಣಗಳನ್ನು ಸಾಹಿತ್ಯದ ವಿವಿಧ ಸಂದರ್ಭಗಳಲ್ಲಿ ಅಳವಡಿಸಿ ಅದಕ್ಕೆ ವೈವಿಧ್ಯತೆಯನ್ನು ವೈದುಷ್ಯವನ್ನು ರಸೋಚಿತವಾಗಿ ನಮ್ಮ ಕವಿಗಳು ಕಲ್ಪಿಸುತ್ತ ಬಂದಿದ್ದಾರೆ. ಒಂದು ರೀತಿಯಲ್ಲಿ ಸಾಹಿತ್ಯವೆಂಬುದು ಕೇವಲ ಅಕ್ಷರಗಳ ಸಮುದಾಯವಾಗದೆ ಜೀವನ ಸಂಬಂಧಿಯಾದ ಸರ್ವಕಲೆಗಳನ್ನು ಹದವರಿತು ಬಿಂಬಿಸುವ ಸಂಕೀರ್ಣ ಪ್ರಕಾರವಾಗಿದೆ. ಈ ಕಾರಣದಿಂದಾಗಿ, ಮುಖ್ಯವಾಗಿ ಪ್ರಾಚೀನ ಸಾಹಿತ್ಯದ ಕವಿಗಳು ಭಾಷಾ ಪಾಂಡಿತ್ಯ ಮತ್ತು ಅಭಿವ್ಯಕ್ತಿ ಕಲೆಗಳ ಜೊತೆಗೆ ಹಲವು ಕಲಾ ವಿಷಯಗಳಲ್ಲಿ ಆಳವಾದ ಅಧ್ಯಯನವನ್ನು ಮಾಡುವ ಮೂಲಕ ಅವುಗಳ ಸಾರವನ್ನು ಸಂದರ್ಭೋಚಿತವಾಗಿ ತಮ್ಮ ಕೃತಿಗಳಲ್ಲಿ ಎರಕಹೊಯ್ದಿದ್ದಾರೆ. ಪಂಪ, ರನ್ನ, ಪೊನ್ನ ನಾಗಚಂದ್ರ, ಹರಿಹರ, ರಾಘವಾಂಕ, ರತ್ನಾಕರ, ಚಾಮರಸ, ಕನಕದಾಸ ಮುಂತಾದ ನೂರಾರು ಕವಿಗಳು ತಮ್ಮ ಕಾವ್ಯ ಸಂದರ್ಭಗಳಲ್ಲಿ ನೃತ್ಯ ಸನ್ನಿವೇಶಗಳನ್ನು ಸೃಷ್ಟಿಸಿ ತಮ್ಮ ನೃತ್ಯ, ಸಂಗೀತ ಕಲಾಚಾತುರ್ಯವನ್ನು ಅಲ್ಲಿ ಬಿಂಬಿಸಿ ಕಾವ್ಯ ಕ್ಷೇತ್ರವನ್ನು ಆಕರ್ಷಕವಾಗಿ ವಿಸ್ತಿರಿಸಿದ್ದಾರೆ. ಹಳೆಗನ್ನಡದಿಂದ ಹಿಡಿದು ಆಧುನಿಕ ಕಾಲದವರೆಗಿನ ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ನೃತ್ಯ ಸಂದರ್ಭಗಳು ಮನಮೋಹಕವಾಗಿ ಚಿತ್ರಿತವಾಗಿದ್ದು, ನಮ್ಮ ಕವಿಗಳ ಬಹುಮುಖ ಪ್ರತಿಭೆಗೆ ಪ್ರತೀಕವಾಗಿವೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕಂಡರಣೆಗೊಂಡಿರುವ ನೃತ್ಯ ಕಲೆಗೆ ಸಂಬಂಧಿಸಿದ ಸಂದರ್ಭಗಳನ್ನು, ವಿವರಗಳನ್ನು ಕಲೆಹಾಕಿ, ಅವುಗಳನ್ನು ನಾಟ್ಯಶಾಸ್ತ್ರದ, ಶಾಸ್ತ್ರೀಯ ನಾಟ್ಯ ಕಲೆಯ ಪರಿಣತಿಯ ಹಿನ್ನೆಲೆಯಲ್ಲಿ ವಿವೇಚಿಸಿ ಅವುಗಳ ವಿಶಿಷ್ಟತೆ, ವಿನ್ಯಾಸ, ಔಚಿತ್ಯ, ವಿಲಾಸ ಮತ್ತು ವೈವಿಧ್ಯಗಳನ್ನು ವೈಚಾರಿಕವಾಗಿ ವಿಶ್ಲೇಷಣೆ ಮಾಡುವ ಸಾಹಿತ್ಯಕಲಾ ಸಾಹಸವನ್ನು ಇದುವರೆಗೆ ಸಮಗ್ರವಾಗಿ ಯಾರೂ ಮಾಡಿರಲಿಲ್ಲ. ಅಲ್ಲಲ್ಲಿ ಕೆಲವು ಲೇಖನಗಳು ಪ್ರಕಟವಾಗಿದ್ದರೂ ಅವೆಲ್ಲ ಸೀಮಿತ ಪರಿಧಿಯ ಮತ್ತು ಅನುಭವದ ಸಂಕ್ಷಿಪ್ತಚಿತ್ರಗಳು ಮಾತ್ರವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಮತಿ ತುಳಸಿ ರಾಮಚಂದ್ರ ಅವರು ಸಾವಿರ ವರ್ಷಗಳ ಕನ್ನಡ ಕಾವ್ಯ ಪರಂಪರೆಯ ಎಲ್ಲಾ ಮಜಲುಗಳನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಅಭ್ಯಸಿಸಿ, ಸಮುದ್ರ ವಿಸ್ತಾರದ ಸಾಹಿತ್ಯ ಗರ್ಭದಿಂದ ಸಾಂದರ್ಭಿಕ ನೃತ್ಯ ಚಿತ್ರಗಳನ್ನು ಮತ್ತು ಅವುಗಳ ವಿವಿಧ ರೂಪ ಸ್ವರೂಪಗಳನ್ನು ಹೆಕ್ಕಿ ಇಲ್ಲಿ ಶಾಸ್ತ್ರೀಯವಾದ ವಿಶ್ಲೇಷಣೆಗೆ ಒಡ್ಡಿದ್ದಾರೆ. ಸಾಹಿತ್ಯ, ಸಂಗೀತಗಳ ಶ್ರೀಮಂತ ಪರಂಪರೆಯಿಂದ ಬಂದ ಡಾ. ತುಳಸಿ ರಾಮಚಂದ್ರ ಅವರು ನೃತ್ಯ, ಸಾಹಿತ್ಯ ಮತ್ತು ಸಂಗೀತ ಕಲೆಗಳನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ, ಸಾಧನೆ ಮಾಡಿದ್ದಾರೆ ಮತ್ತು ಅವುಗಳನ್ನು ಸಂಶೋಧನೆಯ ನಿಕಷಕ್ಕೆ ಒಡ್ಡಿದ್ದಾರೆ. ಪ್ರಸಿದ್ಧ ವಿದ್ವಾಂಸರಾದ ಡಾ. ವೆಂಕಟಾಚಲ ಶಾಸ್ತ್ರಿಗಳ ಸಮರ್ಥ ಮಾರ್ಗದರ್ಶನ ಅವರಿಗೆ ದೊರಕಿರುವುದರಿಂದ ಈ ಮಹಾಪ್ರಬಂಧ ಈ ವಿಷಯದಲ್ಲಿ ಮೊಟ್ಟಮೊದಲ ಶ್ರೇಷ್ಠಪ್ರಬಂಧವಾಗಿ ರೂಪುಗೊಂಡಿದೆ. ಅಪಾರವಾದ ಅಧ್ಯಯನ, ಆಯಾ ಕ್ಷೇತ್ರಗಳಲ್ಲಿ ತಲಸ್ಪರ್ಶಿಯಾದ ವಿದ್ವತ್ತು ಆ ಮೂಲಕ ಲಭ್ಯವಾದ ವಿಶೇಷ ಸಂಶೋಧನಾ ದೃಷ್ಟಿಗಳು ಮೇಳೆವಿಸಿಕೊಂಡು ಇಂಥದೊಂದು ಆಕರಗ್ರಂಥ ಲಭ್ಯವಾಗಿದೆ.

ಈ ಕೃತಿ ಸಾಹಿತ್ಯ ಮತ್ತು ನೃತ್ಯಾಭ್ಯಾಸಿಗಳಿಗೆ ಒಂದು ಮಾರ್ಗದರ್ಶಕ ಕೃತಿಯಾಗಿದೆ. ಇಂಥ ವಿಶಿಷ್ಟ ಸ್ವರೂಪದ ಆಕರ ಕೃತಿಯನ್ನು ರಚಿಸಿರುವ ಡಾ. ತುಳಸಿ ರಾಮಚಂದ್ರ ಅವರಿಗೆ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.

ಡಾ.ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು