ನೃತ್ಯಕಲೆ, ಬಾಲ್ಯದಿಂದಲೂ ನನ್ನ ಸಹಚರಿಯಾಗಿದೆ. ಅದರ ಆಳವಾದ ಅಧ್ಯಯನ ನಡೆಸಬೇಕೆಂಬ ಹಂಬಲ ನನ್ನದಾಗಿತ್ತು. ಪ್ರಾಯೋಗಿಕ ನೃತ್ಯಕ್ಷೇತ್ರದಲ್ಲಿ ಹಲವಾರು ವರ್ಷಗಳ ಉನ್ನತಮಟ್ಟದ ಅಭ್ಯಾಸವನ್ನು ನಡೆಸಿದರೂ ನನ್ನ ಅಧ್ಯಯನದ ಬಯಕೆ ಪೂರ್ಣವಾಗಿ ಈಡೇರಿರಲಿಲ್ಲ. ಈ ಮಧ್ಯೆ, ವಿಜ್ಞಾನ ಪದವೀಧರೆಯಾಗಿದ್ದ ನಾನು ಸಾಹಿತ್ಯದ ಪರಿಚಯ ಮಾಡಿಕೊಳ್ಳಲು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದೆ. ಕನ್ನಡ ಕಾವ್ಯಗಳಲ್ಲಿ ವರ್ಣಿತವಾದ ನೃತ್ಯಪ್ರಸಂಗಗಳು ನನ್ನ ಮನಸ್ಸನ್ನು ಸೆಳೆದವು. ಹೊಸದಾದ ನಾಟ್ಯಾಗಮವನ್ನೇ ತನ್ನ  ‘ನಾಟ್ಯರಸ’ದಲ್ಲಿ ಪ್ರತಿಬಿಂಬಿಸುವ ನೃತ್ಯ ನಿಪುಣೆ ನೀಲಾಂಜನೆಯ ಹೆಜ್ಜೆಯ ಗೆಜ್ಜೆಯ ಘಲರವ, ಪಂಪನ ಪದಗತಿಯೊಡನೆ ಸಮರಸವಾಗಿದೆ. ಪೊನ್ನ, ರನ್ನ, ಜನ್ನ, ನಾಗಚಂದ್ರಾದಿಗಳ ನರ್ತಕಿಯರ ಪಾದಗತಿಯ ಕೌಶಲ ಆ ಕವಿಗಳ ನುಡಿಗಳಲ್ಲಿ ಸೇರಿ, ಶಾಸ್ತ್ರ ಶುದ್ಧ ನೃತ್ಯದ ಸೌಂದರ್ಯವನ್ನು ಪ್ರತಿಫಲಿಸುತ್ತವೆ.

ರತ್ನಾಕರವರ್ಣಿಯ ಸಮೂಹ ನೃತ್ಯಗಳ ಸಮಾರಾಧನೆ, ಹಂಪೆಯ ಚಂದ್ರಶೇಖರ ಕವಿಯ ದೇಶೀ ನೃತ್ಯಗಳ ಸೊಗಸು, ಕನಕದಾಸರು ಹಾಗು ಗೋವಿಂದ ವೈದ್ಯನ ದೇಶೀ ಮತ್ತು ಮಾರ್ಗೀ ನೃತ್ಯಗಳ ಬೆಡಗು ಉಲ್ಲಾಸವನ್ನು ನೀಡುತ್ತವೆ. ಹೀಗೆ ನಮ್ಮ ಕವಿಗಳ ಪದಗತಿಗಳು ಅವರುಗಳು ನಿರೂಪಿಸುವ ನರ್ತಕಿಯರ ಪಾದಗತಿಗಳಿಗೆ ಹೊಯ್ ಕೈಯಾಗಿ ಸೇರಿ ಆ ನರ್ತನ ಪ್ರಸಂಗಗಳನ್ನು ತನ್ಮೂಲಕ ಅಲ್ಲಿಯ ನೃತ್ಯಗಳನ್ನು ಮತ್ತಷ್ಟೂ ಲಾಲಿತ್ಯಮಯವನ್ನಾಗಿಸಿದೆ.

ಮೇಲಿನ ಅಂಶಗಳು ನನ್ನನ್ನು ನೃತ್ಯ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ನಡೆಸಲು ಪ್ರೇರೇಪಿಸಿತು.

ಈ ಪ್ರೇರಣೆಯನ್ನು ಕಾರ್ಯರೂಪಕ್ಕೆ ತರಲು, ಕನ್ನಡ ನಾಡಿನ ಉದ್ದಾಮ ವಿದ್ವಾಂಸರೂ, ನನ್ನ ಪೂಜ್ಯ ಗುರುಗಳು ಆದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಸೂಕ್ತ ಮಾರ್ಗದರ್ಶನ ಕಾರಣವಾಯ್ತು. “ಕನ್ನಡ ಸಾಹಿತ್ಯದಲ್ಲಿ ನೃತ್ಯಕಲೆಯ ಉಗಮ ಮತ್ತು ವಿಕಾಸಗಳ ಅಧ್ಯಯನ” ಎಂಬ ವಿಷಯದ ಬಗ್ಗೆ ಸತತ ಅಧ್ಯಯನ ನಡೆಸಿ ೧೯೯೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ ಪಡೆದ ನನ್ನ ಮಹಾ ಪ್ರಬಂಧ ಈಗ ಅನಿವಾರ್ಯ ಮಾರ್ಪಾಟುಗಳೊಡನೆ ಪುಸ್ತಕ ರೂಪದಲ್ಲಿ ಬರುತ್ತಿದೆ.

ನನ್ನ ಮಹಾ ಪ್ರಬಂಧವನ್ನು ಸಿದ್ಧಪಡಿಸಲು ಸಮರ್ಥ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ನನ್ನ ಪೂಜ್ಯ ಗುರುಗಳಾದ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಅವರಿಗೆ ಚಿರ ಋಣಿಯಾಗಿದ್ದೇನೆ. ಈ ಮಹಾಪ್ರಬಂಧ ಪುಸ್ತಕ ರೂಪವನ್ನು ಪಡೆಯಲು ಕಾರಣಕರ್ತರಾಗಿ ಪ್ರೋತ್ಸಾಹ, ಸಹಕಾರಗಳನ್ನು ನೀಡಿದ ಕನ್ನಡ ವಿಶ್ವವಿದ್ಯಾನಿಲಯದ ಅಂದಿನ ಕುಲಪತಿಗಳಾದ ಡಾ.ಎಂ.ಎಂ. ಕಲಬುರ್ಗಿ, ಈಗಿನ ಕುಲಪತಿಗಳಾದ ಡಾ. ಲಕ್ಕಪ್ಪಗೌಡರು, ಪ್ರೊ. ಎ.ವಿ. ನಾವಡ, ಶ್ರೀ ಬ.ಸುಜ್ಞಾನಮೂರ್ತಿ ಮತ್ತು ಇತರ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುವುದು ನನ್ನ ಆದ್ಯ ಕರ್ತವ್ಯ.

ನನ್ನ ಯಾವುದೇ ಪ್ರಯತ್ನಕ್ಕೆ ಸ್ಫೂರ್ತಿ, ಪ್ರೇರಣೆ ಉಂಟಾಗಲು ಕಾರಣರಾದ ಪುಣ್ಯಚೇತನಗಳು, ನನ್ನ ಮಾವನವರು ಗಮಕ ವಿದ್ವಾಂಸರಾಗಿದ್ದ ದಿ. ಕೃಷ್ಣಗಿರಿ ಕೃಷ್ಣರಾಯರು, ಹಿರಿಯ ವಿದ್ವಾಂಸರಾಗಿದ್ದ ದಿ. ಜಿ. ವರದರಾಜರಾಯರು ಮತ್ತು ದಿ. ಎ.ಪಿ. ಶ್ರೀನಿವಾಸಮೂರ್ತಿ ಇವರುಗಳಿಗೆ ನನ್ನ ನಮ್ರ ನಮನಗಳನ್ನು ಸಲ್ಲಿಸುತ್ತೇನೆ.

ನೃತ್ಯ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡು ಬೆಳೆಯಲು ಕಾರಣರಾದ ಗುರುಗಳಾದ ಡಾ. ಚೂಡಾಮಣಿ ನಂದಗೋಪಾಲ್, ದಿ. ಲಲಿತಾ ದೊರೈ, ಡಾ. ಕೆ. ವೆಂಕಟಲಕ್ಷಮ್ಮ, ಸಿ. ರಾಧಾಕೃಷ್ಣ, ಸಿ.ಆರ್. ಆಚಾರ್ಯಲು, ಪಂಡಿತ ತೀರ್ಥರಾಮ್ ಆಜಾದ್ ಮತ್ತು ಸಂಗೀತ ಗುರುಗಳಾದ ಶ್ರೀ ವೆಂಕಟೇಶ್‌ ಭರದ್ವಾಜ್ ಹಾಗೂ ಡಾ. ಸುಕನ್ಯಾ ಪ್ರಭಾಕರ್ ಅವರುಗಳಿಗೆ ನನ್ನ ಕೃತಜ್ಞತೆ ಸಲ್ಲಬೇಕಾಗುತ್ತದೆ.

ನೃತ್ಯ ಪ್ರಸಂಗಗಳ ವಿಶ್ಲೇಷಣೆಯಲ್ಲಿ ಉಂಟಾದ ಕೆಲವು ಸಂದೇಹಗಳನ್ನು ನಿವಾರಿಸಿಕೊಳ್ಳಲು ನೆರವಾದ ಹಿರಿಯ ಕಲಾವಿಮರ್ಶಕ ಶ್ರೀ ಬಿ.ವಿ.ಕೆ. ಶಾಸ್ತ್ರೀ ಹಾಗೂ ಸಂಗೀತಜ್ಞ ಡಾ.ರಾ. ಸತ್ಯನಾರಾಯಣ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಪ್ರಬಂದ ಸಿದ್ಧಪಡಿಸಲು “ಪ್ರಾಚ್ಯ ವಿದ್ಯಾ ಸಂಶೋಧನಾಲಯ”, “ಕೇಂದ್ರ ಸರ್ಕಾರದ ಶಾಸನಾಧಿಕಾರಿಗಳ ಕಛೇರಿ”, “ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ” ಹಾಗೂ ಹಸ್ತಪ್ರತಿ ವಿಭಾಗ “ಕರ್ನಾಟಕದ ಪುರಾತತ್ತ್ವ ಇಲಾಖೆ”, “ಅರಮನೆಯ ಪತ್ರಾಗಾರ” ಮತ್ತು “ಬೆಂಗಳೂರಿನ ಮಿಥಿಕ್ ಸೊಸೈಟಿ” ಇವುಗಳ ಗ್ರಂಥಾಲಯಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ನನಗೆ ನೀಡಿದ ನೆರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಈ ಪುಸ್ತಕದಲ್ಲಿ ಅಳವಡಿಸಲು ಬೇಕಾದ ನೃತ್ಯಪ್ರಸಂಗಗಳ, ಕರಣಗಳ, ಹಸ್ತಗಳ ರೇಖಾಚಿತ್ರಗಳನ್ನು ಸಕಾಲಕ್ಕೆ ಬರೆದುಕೊಟ್ಟು ಸಹಕರಿಸಿದ ಅರಮನೆಯ ಕಲಾವಿದರಾಗಿದ್ದ ಶ್ರೀ ಕುಪ್ಪಾಚಾರಿ ಅವರಿಗೂ ಹಾಗೂ ಛಾಯಾಚಿತ್ರಗಳನ್ನು ಒದಗಿಸಿದ ಕಲಾವಿದ ಶ್ರೀ ಜಂಬುಕೇಶ್ವರ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನನ್ನ ಈ ಪುಸ್ತಕಕ್ಕೆ ಶೀರ್ಷಿಕೆಯನ್ನು ಯೋಚಿಸುತ್ತಿರುವ ಸಂದರ್ಭದಲ್ಲಿ, “ಪದಗತಿ-ಪಾದಗತಿ”, ಎಂಬ ಶೀರ್ಷಿಕೆಯನ್ನು ಸೂಚಿಸಿದ ಪ್ರಸಿದ್ಧ ಕಾದಂಬರಿಕಾರರಾದ ಡಾ. ಎಸ್.ಎಲ್.ಭೈರಪ್ಪನವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಹಸ್ತಪ್ರತಿಯನ್ನು ಸಿದ್ಧಪಡಿಸುವಲ್ಲಿ ನೆರವಾದ ನನ್ನ ಆತ್ಮೀಯ ಗೆಳತಿಯರಾದ ಡಾ. ಸರಸ್ವತಿ ರಾಜೇಂದ್ರ, ಮತ್ತು ಡಾ. ಉಷಾಫಾಟಕ್, ಶಿಷ್ಯೆಯರು ಕುಮಾರಿಯರಾದ ರೇಖಾ, ರಮ್ಯ ಹಾಗೂ ಹರಿಣಿ ಇವರುಗಳಿಗೂ ನನ್ನ ಕೃತಜ್ಞತೆಗಳು ಸಲ್ಲಬೇಕಾಗುತ್ತದೆ.

ಲಲಿತಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿ, ಮನೆಯಲ್ಲಿ ಸುಸಂಸ್ಕೃತ ವಾತಾವರಣವನ್ನು ಕಲ್ಪಿಸಿ ನನಗೆ ಕಲೆಗಳಲ್ಲಿ ಅಭಿರುಚಿ ಉಂಟಾಗಲು ಕಾರಣರಾದ ನನ್ನ ತಂದೆ ರಂಗಭೂಮಿ ಕಲಾವಿದರಾಗಿದ್ದ ಎಂ.ಎಸ್. ಮಾಧವರಾಯರು ತಾಯಿ ದಿ. ರುಕ್ಮಿಣಿಯಮ್ಮ ಇವರುಗಳನ್ನು ಸ್ಮರಿಸದಿರಲಾರೆ.

ಈ ಮಹಾ ಪ್ರಬಂಧದ ಪುಸ್ತಕ ರೂಪದ ಡಿ.ಟಿ.ಪಿ. ಕಾರ್ಯವನ್ನು ಸಕಾಲಕ್ಕೆ ಸಿದ್ಧಪಡಿಸಿಕೊಟ್ಟ ಉದಯರವಿ ಪ್ರಿಂಟರ್ಸ್‌ನ ಮಾಲಿಕರಾದ ಶ್ರೀಯುತರಾದ ಕೃಷ್ಣಮೂರ್ತಿ ಮತ್ತು ಬ್ರಹ್ಮಣ್ಯತೀರ್ಥ ಹಾಗೂ ಅವರ ಸಿಬ್ಬಂದಿ ವರ್ಗಕ್ಕೆ ನನ್ನ ಧನ್ಯವಾದಗಳು.

ನನ್ನ ಎಲ್ಲ ಸಾಧನೆಗಳ ಮೂಲಾಧಾರವಾಗಿ ನಿಂತು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನನ್ನ ಪತಿ ಶ್ರೀ ಕೃ. ರಾಮಚಂದ್ರ ಮತ್ತು ಪುತ್ರ ಚಿ. ಹರಿಚರಣ ಇವರ ಸಹಕಾರವನ್ನು ಮರೆಯಲಾರೆ.

– ತುಳಸಿ ರಾಮಚಂದ್ರ