ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸ್ವಾಭಾವಿಕ ಸ್ಪಂದನವೇ ನೃತ್ಯ ಅಥವಾ ಕುಣಿತ. ಜನಾಂಗಿಕ ಭಾವನೆಗಳ, ಗುಣಗಳ ಪ್ರತಿಫಲನದಂತಿರುವ ನೃತ್ಯವು ಒಬ್ಬ ವ್ಯಕ್ತಿಯ ಅಭಿವ್ಯಕ್ತಿಯ ಎಲ್ಲೆಯನ್ನು ಮೀರಿ ಸಮಷ್ಟಿಯಾಗಿ, ರಾಷ್ಟ್ರದ ಸಂಸ್ಕೃತಿಯ ಪ್ರತಿನಿಧಿಯಾಗಿ, ಪ್ರತೀಕವಾಗಿ ತನ್ನ ಅಸ್ತಿತ್ವವನ್ನು ನಿರಂತರವಾಗಿ ಬೆಳೆಸಿಕೊಂಡು ಬಂದಿದೆ. ಮಾನವನ ಮೂಲಸ್ಪಂದನ ಕುಣಿತ. ಶಾರೀರಕ ಸಮತೋಲನವನ್ನು ಪಡೆಯುವ ಮೊದಲೇ ಮಾನವ ಶಿಶು ಕುಣಿಯುವುದು ಒಂದು ಸಹಜ ಚಟುವಟಿಕೆ.

ಆದಿಮಾನವನ ಗವಿಗಳಲ್ಲಿ ಕಾಣುವ ರೇಖಾಚಿತ್ರ ಮತ್ತು ಕಲ್ಲಿನಲ್ಲಿ ಒಡಮೂಡಿಸಿದ ವಿವಿಧ ಭಂಗಿಗಳ ಆಕೃತಿಗಳಿಂದ, ಮಾನವಶಾಸ್ತ್ರಜ್ಞರು ಕುಣಿತ ಅಥವಾ ನರ್ತನವನ್ನು ಒಂದು ಸಮಯಸ್ಫೂರ್ತಿಕ್ರಿಯೆ ಎಂದು ಗುರುತಿಸುತ್ತಾರೆ

[1] ಪಾಶ್ಚಾತ್ಯರಲ್ಲಿ ನರ್ತನವು ಆರೋಗ್ಯವನ್ನು ವರ್ಧಿಸುವ, ಶರೀರ ಸೌಷ್ಠವವನ್ನು ಕಾಪಾಡಿಕೊಳ್ಳುವ ಸಾಧನವಾಗಿ ಕಂಡುಬಂದರೆ, ಭಾರತೀಯರಲ್ಲಿ ಅದು ಒಂದು ಶಿಕ್ಷಣವಾಗಿಯೂ, ಕಲೆಯಾಗಿಯೂ ಸಾಮಾಜಿಕ ಸಮಾರಂಭದ ಅವಿಭಾಜ್ಯ ಚಟುವಟಿಕೆಯಾಗಿ ಹಿಂದಿನಿಂದಲೂ ನಡೆದು ಬಂದಿದೆ. ಸಂತೋಷ, ಸಂಭ್ರಮ, ಸಮಾಧಾನ, ತೃಪ್ತಿ, ಉತ್ಸಾಹ ಉಲ್ಲಾಸಗಳಂತಹ ಭಾವಗಳೇ ನೃತ್ಯದ ಮೂಲಸೆಲೆ.

ನೃತ್ಯವು ಸೌಂದರ್ಯದ ಪ್ರತೀಕ. ಸಾಮೂಹಿಕ ಚಟುವಟಿಕೆಯಂತೆ ನೃತ್ಯವು ಮಾನವ ಬದುಕಿನಲ್ಲಿ ಅನೇಕ ವೇಳೆ ನಡೆಯುವಂತಹದು. ವಿಜಯೋತ್ಸಾಹ, ವಿವಾಹ, ಪುತ್ರಜನನ, ನಾಮಕರಣ, ಯೋಧನೃತ್ಯ, ದೇವಾಲಯದ ಪೂಜಾ ವಿಧಿಗಳ ಅಂಗವಾಗಿ ನೃತ್ಯವು ಸಾಮೂಹಿಕ ಚಟುವಟಿಕೆಯಾಗಿ ಬೆಳೆದು ಬಂದಿದೆ. ಕುಣಿತ ಅಥವಾ ನೃತ್ಯದ ಉದ್ದೇಶ ಆನಂದ ಅಥವಾ ಪುಳಕಿತ ಭಾವವನ್ನು ಹರಡುವಂತಿರಬೇಕು[2] ಎನ್ನುವ ಅಭಿಪ್ರಾಯವು ಮೇಲೆ ಉಲ್ಲೇಖಿಸಿದ ಸಂದರ್ಭಗಳಲ್ಲಿ ಸತ್ಯವೆನಿಸುವುದು.

ಶಾಸ್ತ್ರಬದ್ಧವಾದ ನೃತ್ಯದ ಉಗಮ ಕಾಲದ ಖಚಿತತೆ ಭಾರತೀಯ ಸಂಸ್ಕೃತಿಯಲ್ಲಿ ಚರ್ಚಾಸ್ಪದ ವಿಷಯ. ಮಾನವ ನಾಗರೀಕನಾಗಿ ಸುಸಂಘಟಿತ, ಸುಸಂಸ್ಕೃತ ಜೀವಿಯಾಗಿ ಆರಂಭಿಸಿದಾಗಿನಿಂದ ನೃತ್ಯವು ಒಂದು ಕಲೆಯಂತೆ ಆತನ ಜೊತೆಯಲ್ಲೇ ಬೆಳೆದು ಬಂದಿದೆ. ಅಂತೆಯೇ ಜಗತ್ತಿನ ಯಾವ ದೇಶ ಮೊದಲಿಗೆ ನಾಗರಿಕತೆಯನ್ನು, ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿತು ಎಂಬುದೂ ಚರ್ಚಾಸ್ಪದ. ಕ್ರಿ.ಪೂ. ೧೫೦೦ ಕ್ಕಿಂತ ಹಿಂದೆ ರಚಿತವಾದ ಋಗ್ವೇದದ ಕಾಲಕ್ಕಿಂತ ಮೊದಲೇ ಹಿಂದೂ ಸಂಸ್ಕೃತಿಯನ್ನು ಸ್ಥಾಪಿಸಬಹುದು ಎಂದು ಕಲಾ ಇತಿಹಾಸಜ್ಞರ ಮತ. ಋಗ್ವೇದದ ಸೂಕ್ತಗಳಲ್ಲಿ ನೃತ್ಯದ ಉಲ್ಲೇಖಗಳಿವೆ.[3]

ಭಾರತದ ಪ್ರಾಚೀನ ಹಾಗೂ ಅರ್ವಾಚೀನ ಚರಿತ್ರೆಗಳು ಸುಮಾರು ಕ್ರಿ. ಪೂ. ೨ನೇ ಶತಮಾನದಿಂದ ಇಂದಿನವರೆಗೆ ನೃತ್ಯ ದಿಂದ ಶಿಲ್ಪ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಉಂಟಾದ ಪರಿಣಾಮಗಳನ್ನು ಮನದಟ್ಟು ಮಾಡುತ್ತವೆ. ಹರಪ್ಪ, ಮೊಹಂಜೋದಾರೋ ಸಂಸ್ಕೃತಿಯಲ್ಲಿ ದೊರಕಿರುವ ನೃತ್ಯ ಭಂಗಿಯ ಮೂರ್ತಿಗಳು ವೇದಗಳಲ್ಲಿನ ನೃತ್ಯದ ಕಲ್ಪನೆಗೆ ಪುರಾವೆಯನ್ನು ಒದಗಿಸುತ್ತವೆ.

ಸುಮಾರು ಕ್ರಿ.ಪೂ. ೫೦೦ ರಲ್ಲಿ ಶಿಲಾಲಿ ಮತ್ತು ಕೃಶಾಶ್ವರಿಂದ ರಚಿತವಾದ ನಟಸೂತ್ರವು ನೃತ್ಯದ ಮೊತ್ತ ಮೊದಲ ಗ್ರಂಥ ಎಂದು ಹೇಳಲಾಗಿದೆ. ಆದರೆ ಈ ಗ್ರಂಥವು ದುರ್ಲಭ. ಇದರಲ್ಲಿ ನೃತ್ಯದ ಸ್ಥಾನಕ, ಹಸ್ತಮುದ್ರೆಗಳು ಮತ್ತು ನರ್ತಕ, ನರ್ತಕಿಯರು ಬಳಸಬೇಕಾದ ವೈವಿಧ್ಯಮಯ ಮಾದರಿಗಳ ಬಗ್ಗೆ ವಿವರಣೆ ಇರುವುದನ್ನು ಇತರ ಗ್ರಂಥಗಳು ಉಲ್ಲೇಖಿಸುತ್ತವೆ.[4]

ನೃತ್ಯದ ಚರಿತ್ರೆಯನ್ನು ಸ್ಥೂಲವಾಗಿ ಎರಡು ಅವಧಿಗಳಲ್ಲಿ ವಿಭಾಗಿಸಬಹುದು. ಕ್ರಿ.ಪೂ. ೨ನೆಯ ಶತಮಾನದಿಂದ ಕ್ರಿ. ಶ. ೯ರವರೆಗೆ ಮೊದಲ ಅವಧಿ. ಸುಮಾರು ಕ್ರಿ.ಶ.೧೦ ಮತ್ತು ೧೧ ರಿಂದ ೧೮ ರ ವರೆಗೆ ಎರಡನೆಯ ಅವಧಿ[5]. ಮೊದಲನೆಯ ಅವಧಿಯಲ್ಲಿ ಬೌದ್ಧಿಕ ಸ್ತರದಲ್ಲಿ ಸಂಸ್ಕೃತವು ತನ್ನ ಭದ್ರವಾದ ಅಧಿಪತ್ಯವನ್ನು ಸ್ಥಾಪಿಸಿತ್ತು. ಇದರಿಂದ ದೇಶದ ಸಾಹಿತ್ಯವು ಸಂಸ್ಕೃತದ ಮೂಲವನ್ನು ಹಿಡಿದು, ಶಾಸ್ತ್ರ ಗ್ರಂಥಗಳು ಸಂಸ್ಕೃತದಲ್ಲೇ ರಚಿತವಾಯಿತು. ಮೊದಲ ಅವಧಿಯಲ್ಲಿ ನಾಟ್ಯಶಾಸ್ತ್ರದ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ನೃತ್ಯ, ನಾಟಕ ಹಾಗೂ ಸಂಗೀತಗಳಲ್ಲಿ ಬಳಸಿರುವುದು ಕಂಡು ಬರುತ್ತದೆ. ಅಮರಾವತಿ, ನಾಗಾರ್ಜನಕೊಂಡ, ಎಲ್ಲೋರ ಹಾಗೂ ಬೇಲೂರು ಮೊದಲಾದ ಕಡೆಗಳಲ್ಲಿನ ಶಿಲ್ಪಗಳನ್ನು ಅವಲೋಕಿಸಿದಾಗ ಮೇಲಿನ ಅಭಿಪ್ರಾಯದ ಸತ್ಯತೆ ಗೋಚರವಾಗುತ್ತದೆ. ಶಿಲ್ಪಿಗಳು ಅಥವಾ ಅವರ ಗುರುಗಳು ನಾಟ್ಯ ಶಾಸ್ತ್ರ ಸಂಪ್ರದಾಯದಲ್ಲಿ ಪರಿಣಿತರಾಗಿದ್ದರೆ ಮಾತ್ರ ಇಂತಹ ನೈಜಶಿಲ್ಪಗಳು ಒಡಮೂಡಲು ಸಾಧ್ಯ. ಇದೇ ರೀತಿ ಪ್ರಾಂತೀಯ ಶೈಲಿಗಳ ಶಿಲ್ಪ ಕೃತಿಗಳನ್ನು ಬಾದಾಮಿ, ಹೊಯ್ಸಳ, ವಿಜಯನಗರ ಮುಂತಾದ ಶಿಲ್ಪಗಳಲ್ಲಿ ಕಾಣಬಹುದು.

ಕಾಲಿದಾಸಾದಿಗಳ ಪ್ರಾಚೀನ ಸಂಸ್ಕೃತ ಕಾವ್ಯಗಳನ್ನು ಅವಲೋಕಿಸಿದಾಗ ಕವಿ ಮತ್ತು ನಾಟಕಕಾರಿಬ್ಬರೂ ನಾಟ್ಯ ಶಾಸ್ತ್ರದ ಆಳವಾದ ಅಧ್ಯಯನವನ್ನು ಮಾಡಿ, ನೃತ್ಯದ ಸೂಕ್ಷ್ಮ ತಂತ್ರಗಳನ್ನೂ ಬಲ್ಲವರಾಗಿರುತ್ತಿದ್ದರು ಎಂದು ಅರಿವಾಗುತ್ತದೆ.

ಕನ್ನಡ ಕಾವ್ಯಗಳ ಮಟ್ಟಿಗೆ ಹೇಳುವುದಾದರೆ ಪಂಪ, ಪೊನ್ನ, ರನ್ನರು ತಮ್ಮ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ನಾಟ್ಯಾಶಾಸ್ತ್ರ ಸಂಪ್ರದಾಯವನ್ನು ಸಮಗ್ರವಾಗಿ ಪ್ರತಿಪಾದಿಸಿದ್ದಾರೆ. ಅವರ ನಂತರ ಬಂದ ಕವಿಗಳು ನಾಟ್ಯಶಾಸ್ತ್ರ ಸಂಪ್ರದಾಯದ ಜೊತೆಗೆ ದೇಶೀ ಸಂಪ್ರದಾಯದ ನೃತ್ಯ ಶೈಲಿಗಳನ್ನೂ ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ.[6]

ಶಾಸ್ತ್ರ ಗ್ರಂಥಗಳ ರಚನಕಾರರು ಗುರುತಿಸಿದ ವೈವಿಧ್ಯಮಯ ಶೈಲಿಗಳಿಂದ ನೃತ್ಯ ಕ್ಷೇತ್ರದಲ್ಲಿ ಪ್ರಾಂತೀಯ ನೃತ್ಯ ಶೈಲಿಗಳು ತಮ್ಮ ತನವನ್ನು ಸ್ಥಾಪಿಸಿ ಜನರಲ್ಲಿ ಪ್ರಭಾವವನ್ನು ಬೀರಲು ಸಾಧ್ಯವಾಯಿತು. ಭರತ ವಿವರಿಸುವ ಶಾಸ್ತ್ರಾಂಶಗಳನ್ನು ವಿವಿಧ ಪ್ರಾಂತ್ಯಗಳಲ್ಲಿ ಅಭ್ಯಸಿಸಿದ ಪರಿಣಿತರು ದೇಶೀ ನಡೆ, ನುಡಿಗಳನ್ನು ಪ್ರತಿಫಲಿಸುವ ನೃತ್ಯ ಶೈಲಿಗಳ ಉಗಮಕ್ಕೆ ಕಾರಣರಾದರು. ದಕ್ಷಿಣ ಭಾರತದ ಭರತನಾಟ್ಯ ಕೂಚಿಪುಡಿ, ಕಥಕ್ಕಳಿ ಉತ್ತರ ಭಾರತದ ಕಥಕ್, ಒಡಿಸ್ಸಿ, ಮಣಿಪುರಿ ನೃತ್ಯ ಶೈಲಿಗಳು ಹೀಗೆ ಜನ್ಮ ತಳೆದು, ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಗಳಿಸಿ ಬೆಳೆದವು.

ಸಾರ್ವಜನಿಕ ಸಂತೋಷ ಸಮಾರಂಭಗಳಲ್ಲಿ ಸಹಜ ಸ್ಪಂದನದಂತೆ ಅಭಿವ್ಯಕ್ತಿಗೊಳ್ಳುತ್ತಿದ್ದ ನೃತ್ಯ ಒಂದು ನಿಯಮಬದ್ಧವಾದ ರೂಪವನ್ನು ಪಡೆಯಿತು. ಮೌಖಿಕ ಸಂಪ್ರದಾಯವಾಗಿ ಶಿಷ್ಯರು ಗುರುಗಳ ಪರಂಪರೆಯನ್ನು ರಕ್ಷಿಸಿ, ಪೋಷಿಸಿಕೊಂಡು ಬಂದರು.

ವೇದಗಳ ಕಾಲದಲ್ಲಿ ಯಜ್ಞ-ಯಾಗಾದಿಗಳಲ್ಲಿ ನೃತ್ಯವು ಒಂದು ಧಾರ್ಮಿಕ ವಿಧಿಯಾಗಿ ನಡೆದು ಬಂದ ಉಲ್ಲೇಖಗಳಿವೆ. ನಾಗರೀಕತೆ ಬೆಳೆದಂತೆ ದೇವಾಲಯಗಳು ಸಾಂಸ್ಕೃತಿಕ ಧಾರ್ಮಿಕ ಕೇಂದ್ರಗಳೂ ಆಗಿ ನಾಡಿನ ಸಂಸ್ಕೃತಿ, ಸಭ್ಯತೆಯನ್ನು ಪ್ರತಿಬಿಂಬಿಸುವ ಪ್ರಮುಖ ಸಾಧನವಾಗಿ ಸ್ಥಾಪನೆಗೊಂಡವು. ಮಾನವನ ಸಹಜ ಸ್ಪಂದನವಾಗಿದ್ದ ಕುಣಿತ ಹಲವು ನಿಯಮಗಳ ಚೌಕಟ್ಟಿನಲ್ಲಿ ಶಿಷ್ಟರೂಫದ ನೃತ್ಯವಾಗಿ ಬೆಳೆಯಿತು. ರಾಜಸಭೆಗಳಲ್ಲಿ ನರ್ತನ ಅವಿಭಾಜ್ಯ ಅಂಗವಾಯಿತು. ರಾಜನ ದಶವಿಧ ಭೋಗಗಳಲ್ಲಿ[7] ನರ್ತನವೂ ಒಂದಾಗಿರುವುದರಿಂದ ರಾಜ ಸಭೆಗಳಲ್ಲಿ ನರ್ತಕಿಯರಿಂದ ನರ್ತನವೇರ್ಪಡಿಸುವುದು ಆ ನಾಡಿನ ಸಂಸ್ಕೃತಿ ಹಾಗೂ ರಾಜನ ಪ್ರತಿಷ್ಠೆಯ ಕುರುಹಾಗಿ ಬೆಳೆದು ಬಂತು. ದೇವಾಲಯ ಹಾಗೂ ರಾಜಸಭೆಗಳಿಗಾಗಿ ನೂರಾರು ನರ್ತಕಿಯರನ್ನು ನೇಮಿಸಿ ಅವರ ಜೀವನೋಪಾಯಕ್ಕಾಗಿ ಭೂಮಿ, ಬಳುವಳಿಗಳನ್ನು ದತ್ತಿ ಬಿಟ್ಟ ಶಾಸನಗಳು ನಮ್ಮ ದೇಶದಲ್ಲಿ ಹಲವಾರಿವೆ. ಕರ್ನಾಟಕದಲ್ಲೂ ಇಂತಹ ಶಾಸನಗಳು[8] ದೊರಕುತ್ತವೆ.

ನೃತ್ಯ ಒಂದು ಸರ್ವಾಂಗೀಣ ಕಲೆಯಾಗಿ, ದೈವೀ ಗುಣಗಳ ಅಗರವಾಗಿ ಜನರಿಗೆ ಸಂತೋಷ ಮನರಂಜನೆ ಹಾಗೂ ಆತ್ಮಾನಂದವನ್ನು ನೀಡುವ ಸಾಧನವಾಗಿ ಬೆಳೆಯುತ್ತ ಬಂತು. ಸಂಗೀತ, ಸಾಹಿತ್ಯ ಹಾಗೂ ನೃತ್ಯಗಳ ತ್ರಿವೇಣಿ ಸಂಗಮದಂತಿರುವ ಈ ನೃತ್ಯಕಲೆ ಸಮಾಜದಲ್ಲಿ ಪ್ರಚಾರ, ಪ್ರಾಶಸ್ತ್ಯಗಳನ್ನು ಪಡೆಯಿತು. ಶುದ್ಧಾಂತಃಕರಣರಾಗಿ ದೈವ ಸಮರ್ಪಣಾಭಾವದಿಂದ ನರ್ತಿಸುವ ನೃತ್ಯ ಕಲಾವಿದರು ತಾವೂ ಆನಂದವನ್ನು ಅನುಭವಿಸಿ, ಪ್ರೇಕ್ಷಕರಿಗೂ ರಸಾನುಭವದ ದರ್ಶನವನ್ನು ಮಾಡಿಸಿದರು. ಹೀಗೆ ನೃತ್ಯ ಕಲೆ ಭರತ ಪ್ರಶಂಸಿರುವ ರೀತಿಯಲ್ಲೇ[9] ವೈಭವೀಕರಣಗೊಂಡು ಸಮಾಜದಲ್ಲಿ ಉನ್ನತ ಸ್ಥಾನವನ್ನೂ ಗೌರವಾದರಗಳನ್ನೂ ಪಡೆಯಿತು.

ಆದರೆ ಮುಸಲ್ಮಾನರ ದಾಳಿಯಿಂದ ನೃತ್ಯಕಲೆ ಅಪಾರ ಸಂಕಟವನ್ನು ಅನುಭವಿಸಬೇಕಾಯ್ತು. ನವಾಬರ ಭೋಗ, ಐಷಾರಾಮಗಳಿಗೆ ತುತ್ತಾದ ನೃತ್ಯಕಲೆ ಉತ್ತರ ಭಾರತದಲ್ಲಿ ನಾಚ್ ಆಗಿ ಪರಿವರ್ತನೆಗೊಂಡರೆ ದಕ್ಷಿಣದಲ್ಲಿ ಸಾದಿರ್, ತಾಪೆ ಎಂದೆನಿಸಿತು. ನೃತ್ಯದಲ್ಲಿನ ಕಲಾತ್ಮಕತೆ, ದೈವೀಭಾವ, ಆಂತರಿಕ ಸೌಂದರ್ಯಗಳೆಲ್ಲ ಮಾಯವಾಗಿ ರಾಜನ, ನವಾಬರ ಕಾಮಪಿಪಾಸೆಯನ್ನು ತಣಿಸುವ ಬಾಹ್ಯ ಸೌಂದರ್ಯ, ಶೃಂಗಾರ ಸಾಧನವಾಗಿ ಮಾರ್ಪಟ್ಟಿತು.

ಬ್ರಿಟಿಷ್ ಆಳ್ವಿಕೆಯಲ್ಲಂತೂ ದೇವಾಲಯಗಳಲ್ಲಿ ನಡೆಯುತ್ತಿದ್ದ ನೃತ್ಯಕ್ಕೆ ಸಂಪೂರ್ಣವಾಗಿ ನಿಷೇಧವನ್ನು ಜಾರಿಗೊಳಿಸಲಾಯ್ತು. ನರ್ತನವನ್ನೇ ವೃತ್ತಿಯಾಗಿ ನಡೆಸಿಕೊಂಡು ಬಂದಿದ್ದ ದೇವದಾಸಿಯರಿಗೆ, ನೃತ್ಯ ಗುರುಗಳಿಗೆ ಇದರಿಂದ ಅಪಾಯ ನಷ್ಟವಾಯಿತು. ರಾಜತ್ವ ನಶಿಸಿ ಹೋಗಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡಾಗಲೂ ನೃತ್ಯಕಲೆ ಪೋಷಕರಿಲ್ಲದೇ ನಲುಗುವ ಪರಿಸ್ಥಿತಿ ಒದಗಿತು.

ಕಲಾಸಕ್ತರು, ನೃತ್ಯಗುರುಗಳ, ರಾಜನರ್ತಕಿಯರ, ದೇವದಾಸಿಯರ ಮನೆಗಳಿಗೇ ಹೋಗಿ ನೃತ್ಯ ಶಿಕ್ಷಣವನ್ನು ಪಡೆಯಲಾರಂಭಿಸಿದರು. ಇಪ್ಪತ್ತನೇ ಶತಮಾನದ ಹೊತ್ತಿಗೆ ತನ್ನ ವೈಭವವನ್ನು ವಂಚಿಸಿಕೊಂಡು ಅವಸಾನ ಸ್ಥಿತಿಯನ್ನು ತಲುಪುವ ಪರಿಸ್ಥಿತಿ ನೃತ್ಯಕಲೆಗೆ ಒದಗಿತು.

ಆದರೆ ಭಾರತೀಯ ಸಂಸ್ಕೃತಿಯ ಹೆಮ್ಮೆಯ ಸಂಕೇತವಾದ ನೃತ್ಯಕಲೆಯ ಪುನರುತ್ಥಾನವನ್ನು ಮಾಡಿದ ಕೀರ್ತಿ ಶ್ರೀಮತಿ ರುಕ್ಮಿಣಿದೇವಿ ಅರುಂಡಾಲೆ, ರಾಜನರ್ತಕಿ ಜಟ್ಟಿತಾಯಮ್ಮ, ನವಾಬ ವಾಜಿದ್ ಅಲಿಷಾಹ್, ಕೆ.ಇ.ಕೃಷ್ಣ ಅಯ್ಯರ್, ಬೆಂಗಳೂರಿನ ನಾಗರತ್ನಮ್ಮ, ಉದಯ್‌ಶಂಕರ್, ರಾಮಗೋಪಾಲ್ ಮುಂತಾದವರಿಗೆ ಸಲ್ಲುತ್ತದೆ. ಹೀಗೆ ಪುನರುತ್ಥಾನಗೊಂಡ ನೃತ್ಯಕಲೆ ಸಮಾಜದಲ್ಲಿ ಪುನಃ ತನ್ನ ಸ್ಥಾನಮಾನವನ್ನು ಗಳಿಸಲಾರಂಭಿಸಿತು. ಶಿಕ್ಷಣ ಪದ್ಧತಿಯಲ್ಲಿ ನೃತ್ಯ ಒಂದು ಬೋಧನಾ ವಿಷಯವಾಗಿ ಸೇರಿತು. ಹಲವಾರು ಸಂಘ ಸಂಸ್ಥೆಗಳ, ಪೋಷಕರ, ದೂರದರ್ಶನದ ಹಾಗೂ ಅಕಾಡೆಮಿಗಳ ನೆರವಿನಿಂದ ಇಂದು ನೃತ್ಯಕಲೆ ಪುನಃ ತನ್ನ ಗತವೈಭವವನ್ನು ಮರುಪಡೆಯಲು ಸಾಧ್ಯವಾಗಿದೆ.

ಭರತನ ನಾಟ್ಯ ಶಾಸ್ತ್ರದ ತಂತ್ರಗಳನ್ನೇ ಆಧರಿಸಿ ಅನೇಕ ನೃತ್ಯ ಶೈಲಿಗಳು ಭಾರತದಲ್ಲಿ ಪ್ರಸಿದ್ಧಿಯಾಗಿದೆ. ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ, ಕಥಕ್, ಒಡಿಸ್ಸಿ, ಮಣಿಪುರಿ, ಮೋಹಿನಿಅಟ್ಟಂ ನೃತ್ಯಶೈಲಿಗಳು ಭೌಗೋಳಿಕವಾಗಿ ಆಯಾ ರಾಜ್ಯಗಳಲ್ಲಿ ಬೆಳೆಯುತ್ತ ಬಂದಿವೆ. ಇವು ಮಾರ್ಗೀನೃತ್ಯಗಳಾಗಿ ಪರಂಪರೆಯನ್ನು ಸ್ಥಾಪಿಸಿಕೊಂಡು ಬಂದ ನೃತ್ಯಶೈಲಿಗಳು. ಅಷ್ಟೇ ಅಲ್ಲದೆ ಆಯಾ ಪ್ರಾಂತೀಯ, ಜಾನಪದ ಸಂಸ್ಕೃತಿ, ನಡೆ, ನುಡಿಗಳನ್ನು ಮೈತಳೆದುಕೊಂಡು ಬೆಳೆದ ನೃತ್ಯಶೈಲಿಗಳು ದೇಶೀ ಸೊಗಡನ್ನು ಹೊಂದಿದ್ದು ಪ್ರಾಂತೀಯ ಹಾಗೂ ಜಾನಪದ ನೃತ್ಯಗಳಾಗಿ ಜೀವಂತವಾಗಿವೆ. ಕರ್ನಾಟಕದ ವೀರಗಾಸೆ ನೃತ್ಯ, ಪೂಜಾ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ನಂದಿ ಕುಣಿತ, ಸುಗ್ಗಿ ಕುಣಿತ,  ಕೋಲಾಟಗಳಂತಹ ಜಾನಪದ ನೃತ್ಯಗಳು ಚೇತೋಹಾರಿಯಾದ ಲಯ, ಆಂಗಿಕ ಚಲನವಲನಗಳನ್ನು ಹೊಂದಿದ್ದು ಆಕರ್ಷಕ ನೃತ್ಯಗಳಾಗಿವೆ. ಮೇಲೆ ಉಲ್ಲೇಖಿಸಿದ ನೃತ್ಯಗಳ ಪರಿಶೀಲನೆ ಪ್ರಸ್ತುತ ಅಧ್ಯಯನದ ವ್ಯಾಪ್ತಿಗೆ ಒಳಪಡುವುದಿಲ್ಲ.

ಆಯಾ ಪ್ರಾಂತ್ಯಗಳ ದೇಶೀ ಸಂಸ್ಕೃತಿಯನ್ನು ಅಳವಡಿಸಿಕೊಂಡು ಮೈತಳೆದ ಪ್ರಾಂತೀಯ ನೃತ್ಯಗಳು ನಮ್ಮ ಕರ್ನಾಟಕದಲ್ಲಿ ಲಭ್ಯ. ಗೌಂಡಲೀ, ಪ್ರೇರಣೆ, ಸೂಚಿನೃತ್ಯ, ಕೈವಾಡ, ಕಟ್ಟರೆ, ಪ್ರೇಂಖಣ ನೃತ್ಯಗಳು ಅಂತಹವು. ಇವು ತಮ್ಮ ರಚನೆಗಳಲ್ಲಿ ಶಾಸ್ತ್ರೀಯತೆಯನ್ನು ಹೊಂದಿದ್ದರೂ ದೇಶೀ ಸೊಗಡನ್ನು ಮೈಗೂಡಿಸಿಕೊಂಡು ಸುಂದರವಾಗಿ ಅರಳಿರುವುದನ್ನು ಕಾಣುತ್ತೇವೆ. ಈ ನೃತ್ಯಗಳ ಪೂರ್ಣ ವಿವರಣೆಯನ್ನು ಮುಂದಿನ ಅಧ್ಯಾಯಗಳಲ್ಲಿ ಪ್ರಸ್ತಾಪಿಸಿದೆ.

ಕನ್ನಡ ನಾಡಿನಲ್ಲಿ ಹತ್ತನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಮಾರ್ಗೀ, ದೇಶೀ ಹಾಗೂ ಈ ಎರಡರ ಮಿಶ್ರ ಶೈಲಿಗಳ ನೃತ್ಯ ಬಂಧಗಳು ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದವು. ಪಂಪ, ಪೊನ್ನ, ನೇಮಿಚಂದ್ರ, ನಾಗಚಂದ್ರ, ಜನ್ನ, ಅಗ್ಗಳದೇವ, ಬಾಹುಬಲಿ, ರತ್ನಾಕರವರ್ಣಿ, ಚಾಮರಸ, ಚಂದ್ರಶೇಖರ, ಗೋವಿಂದ ವೈದ್ಯ ಮೊದಲಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಈ ನೃತ್ಯಗಳ ಸುಂದರ ನಿರೂಪಣೆಯನ್ನು ಮಾಡಿದ್ದಾರೆ.

ಕಾವ್ಯ ಜನಜೀವನದ ಪ್ರತಿಬಿಂಬ. ಪ್ರಾಚೀನ, ಮಧ್ಯಕಾಲೀನ ಕರ್ನಾಟಕದಲ್ಲಿ ಮಾರ್ಗೀ, ದೇಶೀ ಹಾಗೂ ಈ ಎರಡರ ಮಿಶ್ರ ಶೈಲಿಗಳ ನೃತ್ಯ ಪ್ರಕಾರಗಳು ಕಲಾ ಜಗತ್ತಿನಲ್ಲಿ ಜೀವಂತ ಸಂಪ್ರದಾಯವಾಗಿದ್ದ ಮಾಹಿತಿಯನ್ನು ಅಂದಿನ ಕನ್ನಡ ಕಾವ್ಯಗಳು ವಿವರಿಸುತ್ತವೆ.

ಕರ್ನಾಟಕದ ಪ್ರಮುಖ ರಾಜವಂಶಗಳಾದ ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ, ಮೈಸೂರು ಅರಸರುಗಳು ನೃತ್ಯವನ್ನು ಸಾಮಾಜಿಕ, ಬೌದ್ಧಿಕ, ಆಧ್ಯಾತ್ಮಿಕ, ಮನೋರಂಜಕ ಚಟುವಟಿಕೆಯಾಗಿ ಪರಿಭಾವಿಸಿದ್ದಾರೆ. ಈ ದೊರೆಗಳು ತಮ್ಮ ಆಳ್ವಿಕೆಯ ಸರಹದ್ದಿನಲ್ಲಿ ಅನೇಕ ಸುಂದರ ಬೃಹತ್ ದೇವಾಲಯಗಳನ್ನು ನಿರ್ಮಿಸಿ ಅಲ್ಲಿ ಶಾಶ್ವತವಾಗಿ ನೃತ್ಯಕಲೆ ವಿಜೃಂಭಿಸುವಂತೆ ಸಹಸ್ರಾರು ವೈವಿಧ್ಯಮಯ ನೃತ್ಯಶಿಲ್ಪಗಳನ್ನು ನಿರ್ಮಿಸಿದ್ದಾರೆ.

ಕನ್ನಡ ನಾಡಿನಲ್ಲಿ ಕ್ರಿ.ಶ. ೮೫೦ ರಷ್ಟು ಹಿಂದೆಯೇ ನೃತ್ಯ ಪಾರಂಗತನಾದ ಅಚಲನ್ ಎಂಬ ನರ್ತಕನ ಪ್ರಶಂಸೆಯನ್ನು ಕಾಣುತ್ತೇವೆ. ಈತ ನಟಸಿಂಹನೆಂದೂ ಉಳಿದ ನರ್ತಕರ ಮದವನ್ನು ಅಡಗಿಸುವನೆಂದು ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಕಂಬದ ಮೇಲಿನ ಶಾಸನ[10] ಸ್ಪಷ್ಟಪಡಿಸುತ್ತದೆ. ಹೊಯ್ಸಳರ ಅರಸಿ ಶಾಂತಲೆ, ಗಂಗೆ ಪೆರ್ಮಾಡಿಯ  ಪತ್ನಿ ಬಾಚಲದೇವಿ, ತ್ರಿಭುವನಮಲ್ಲನ ಪಟ್ಟದ ರಾಣಿ ಚಂದಲದೇವಿ, ಪಿರಿಯಕೇತಲದೇವಿ ಮುಂತಾದವರು ತಮ್ಮ ನರ್ತನ ಕೌಶಲದಿಂದ ಗೀತವಾದ್ಯ ನೃತ್ಯಸೂತ್ರಧಾರೆ, ಶ್ರೀ ನೃತ್ಯ ವಿದ್ಯಾಧರಿ, ಅಭಿನವ ಸರಸ್ವತಿ, ಪಾತ್ರಜಗದಳೆ ಮುಂತಾದ ಬಿರುದುಗಳನ್ನು ಪಡೆದಿದ್ದರೆಂದು ಶಾಸನಗಳು ಉಲ್ಲೇಖಿಸುತ್ತವೆ.[11]

ಪ್ರಾಚೀನ ಕರ್ನಾಟಕದಲ್ಲಿ ನೃತ್ಯಕಲೆ ಉನ್ನತ ಸ್ಥಾನವನ್ನು ಪಡೆದಿತ್ತು. ನೀಲಂಜನೆ, ಮಗಧಸುಂದರಿ, ಜಯಸೇನೆ ಶ್ರೀಮತಿ, ನೇತ್ರಮೋಹಿನಿ, ಮಾಯೆ, ಹಂಪೆಯ ವಿರೂಪಾಕ್ಷ ದೇವಾಲದಯಲ್ಲಿ ನರ್ತಿಸುವ ನರ್ತಕಿಯರನ್ನು ಕವಿಗಳು ಗೌರವಾನ್ವಿತರಾಗಿ ಚಿತ್ರಿಸಿದ್ದಾರೆ. ಅಲ್ಲದೆ ಅಂದು ನರ್ತಕಿಯರ ಸಾಮಾಜಿಕ ಸ್ಥಾನಮಾನಗಳ ಬಗ್ಗೆಯೂ ಅವರು ತಿಳುವಳಿಕೆಯನ್ನು ಮೂಡಿಸುತ್ತಾರೆ.

ಕನ್ನಡ ಕವಿಗಳು ನೃತ್ಯ ಪ್ರಸಂಗಗಳ ವಿಶ್ಲೇಷಣೆಗೆ ಭರತನ ನಾಟ್ಯಶಾಸ್ತ್ರ, ನಂದಿಕೇಶ್ವರನ ಅಭಿನಯ ದರ್ಪಣವಷ್ಟೇ ಅಲ್ಲದೇ ಶಾರ್ಙ್ಗದೇವನ ಸಂಗೀತ ರತ್ನಾಕರ, ಎರಡನೆ ಸೋಮೇಶ್ವರನ ಮಾನಸೋಲ್ಲಾಸ, ಚತುರದಾಮೋದರನ ಸಂಗೀತ ದರ್ಪಣ, ವೇದನ ಸಂಗೀತಮಕರಂದ, ಅಶೋಕಮಲ್ಲನ ನೃತ್ತರತ್ನಾವಲಿ, ಪುಂಡರೀಕವಿಠಲನ ನರ್ತನ ನಿರ್ಣಯ, ಪಾರ್ಶ್ವದೇವನ ಸಂಗೀತ ಸಮಯಸಾರ, ಪಂಡಿತ ಲಕ್ಷ್ಮೀ ನಾರಾಯಣನ ಸಂಗೀತ ಸೂರ್ಯೋದಯದಂತಹ ಶಾಸ್ತ್ರಗ್ರಂಥಗಳನ್ನು ಆಧರಿಸಿದ್ದಾರೆ ಎಂದು ತಿಳಿಯುವುದು. ಕೆಲವು ಕವಿಗಳು ವರ್ಣಿಸುವ ನೃತ್ಯ ಬಂಧಗಳು, ಅವುಗಳ ತಾಂತ್ರಿಕತೆಗಳು ಶಾಸ್ತ್ರಗಂಥಗಳಲ್ಲೂ ಅಲಭ್ಯ.

ಕನ್ನಡ ಕವಿಗಳು ಒಂದು ನೃತ್ಯಪ್ರಸಂಗವನ್ನು ನಾಲ್ಕು ಸ್ತರಗಳಲ್ಲಿ ವರ್ಣಿಸಿ ನೃತ್ಯಕಲೆ ನೀಡಬಹುದಾದ ಆನಂದವನ್ನು ದೃಶ್ಯಮಾನ ಮಾಡಿದ್ದಾರೆ. ನೃತ್ಯ ಪ್ರಸಂಗಗಳಲ್ಲಿ ಅವರು ಬಳಸುವ ಛಂದಸ್ಸು, ಲಯ, ನಾದಮಯತೆಗಳು ಶ್ರವಣ ಸುಖವನ್ನು ನೀಡುತ್ತವೆ. ಅಲ್ಲಿಯ ಭಾಷಾ ವೈವಿಧ್ಯ, ಶಬ್ದ ಸಂಪತ್ತು, ಮಸ್ತಿಷ್ಕವನ್ನು ಪ್ರವೇಶಿಸಿ ಮಾನಸಿಕ ವಿಕಾಸವನ್ನು ಉಂಟುಮಾಡುತ್ತದೆ. ಚತುರ್ವಿಧಾಭಿನಯಗಳಿಂದ ಸಂಪತ್‌ಭರಿತವಾದ ನೃತ್ಯ ಪ್ರಸಂಗಗಳು ಕಣ್ಣುಗಳ ಮುಂದೆ ಸಾಕಾರವಾಗಿ, ದೃಶ್ಯಕಾವ್ಯ ನೀಡುವ ಸೌಂದರ್ಯ, ಸೊಬಗನ್ನು ತರುತ್ತದೆ. ಹೀಗೆ ಪರಿಭಾವಿಸಿದ ನೃತ್ಯಗಳಲ್ಲಿನ ಹಾವ, ಭಾವ, ಲಾವಣ್ಯ, ರಸೋತ್ಕರ್ಷಗಳು ಹೃದಯವನ್ನು ಹೊಕ್ಕು ಆನಂದದ ದರ್ಶನವನ್ನು ಮಾಡಿಸುತ್ತದೆ. ಹೀಗೆ ಮನವನ್ನು ಮುಟ್ಟಿ, ಹೃದಯವನ್ನು ತಟ್ಟಿ ಮಾನವನನ್ನು ವ್ಯಕ್ತಿತ್ವ ವಿಕಸನದತ್ತ ಕರೆದೊಯ್ಯುವ ನೃತ್ಯಕಲೆಯ ಹಿರಿಮೆಯ ಬಗೆಗಿನ ಮಹಾಕವಿ ಕಾಲಿದಾಸನ ಈ ಹೇಳಿಕೆ ಸತ್ಯಸ್ಯ ಸತ್ಯ.

ತ್ರೈ ಗುಣ್ಯೋದ್ಭವ ಮತ್ರ ಲೋಕಚರಿತಂ ನಾನಾರಸಂ ದೃಶ್ಯತೇ!
ನಾಟ್ಯಂ ಭಿನ್ನರುಚೀರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್[12] ||
(
ಮೂರು ಗುಣಗಳಿನೊಗೆದ ನಾನಾರಸದ ಲೋಕದ ಚರಿತೆಯ
ತೋರ್ಪ ನಾಟ್ಯವೆ ಭಿನ್ನರುಚಿಗಳಿಗೇಕಮಾತ್ರಾರಾಧನಾ[13])

ಕನ್ನಡ ಕಾವ್ಯಗಳಲ್ಲಿನ ನೃತ್ಯ ಪ್ರಸಂಗಗಳು ಸರ್ವಾಂಗ ಸುಂದರವಾಗಿ ದೇಶೀಛಾಪನ್ನು, ಕನ್ನಡತನವನ್ನು ಸಾಕಷ್ಟು ಪ್ರತಿಬಿಂಬಿಸುತ್ತವೆ. ಕವಿಗಳು ವರ್ಣಿಸುವ ನೃತ್ಯ ಪ್ರಸಂಗಗಳ ವರ್ಣನಾ ಕೌಶಲವು ಅವರ ಕಲಾಭಿಜ್ಞತೆ, ಕಲಾಭಿನಿವೇಶನಗಳಿಗೆ ಸಾಕ್ಷಿಯಾಗಿದೆ.

ಅಧ್ಯಯನದ ಸ್ವರೂಪ ಮತ್ತು ಆಕರ

ನಮ್ಮ ಕಾವ್ಯಗಳಲ್ಲಿ ವರ್ಣಿತವಾದ ನೃತ್ಯ ಪ್ರಸಂಗಗಳ ಚರ್ಚೆ ಅಲ್ಲಲ್ಲಿ ಪ್ರಾಸಂಗಿಕವಾಗಿ ನಡೆದಿರುವುದು ದಿಟ. ಆದರೆ ಅಮೂಲಾಗ್ರವಾಗಿ ಈ ವಿಷಯದ ಕುರಿತು ಸಂಶೋಧನೆ ನಡೆದಿಲ್ಲ. ಪ್ರಸ್ತುತ ಮಹಾಪ್ರಬಂಧದಲ್ಲಿ ಈ ವಿಷಯವನ್ನು ಕುರಿತು ಆಳವಾದ ಅಧ್ಯಯನ, ಸಂಶೋಧನೆಗಳನ್ನು ನಡೆಸಿ, ಕನ್ನಡ ಕಾವ್ಯಗಳಲ್ಲಿ ನೃತ್ಯದ ಉಗಮ ಮತ್ತು ವಿಕಾಸಗಳ ದೀರ್ಘ ವಿಶ್ಲೇಷಣೆಯನ್ನು ಮಾಡಲಾಗಿದೆ. ಪ್ರಮುಖವೂ, ಪ್ರಾತಿನಿಧಿಕವೂ ಆದ ಕನ್ನಡ ಕಾವ್ಯಗಳನ್ನು ಈ ಉದ್ದೇಶಕ್ಕೆ ಬಳಸಿಕೊಂಡಿದೆ.

ಆದಿಕವಿ ಪಂಪನಿಂದ ಆರಂಭಿಸಿ, ಗೋವಿಂದ ವೈದ್ಯನವರೆಗೆ ಹಾಗೂ ಆಧುನಿಕ ಕವಿಗಳು ಬಣ್ಣಿಸುವ ನೃತ್ಯ ಪ್ರಸಂಗಗಳ ಶೈಲಿ, ತಂತ್ರ, ಸಂಪ್ರದಾಯ, ಕವಿಗಳ ರುಚಿ ವೈವಿಧ್ಯ, ಅವರ ಪಾಂಡಿತ್ಯ ಇತ್ಯಾದಿಗಳ ಕುರಿತು ವ್ಯಾಪಕವಾದ ಅಧ್ಯಯನವನ್ನು ಇಲ್ಲಿ ಮಾಡಲಾಗಿದೆ. ನೃತ್ಯ ತಂತ್ರದ ಸ್ಪಷ್ಟತೆಗಾಗಿ ಅಲ್ಲಲ್ಲಿ ರೇಖಾಚಿತ್ರ ಹಾಗೂ ಛಾಯಾಚಿತ್ರಗಳನ್ನೂ – ಅಳವಡಿಸಲಾಗಿದೆ.

ಹತ್ತನೆಯ ಶತಮಾನದಿಂದ ಕಪ್ಪತ್ತನೆಯ ಶತಮಾನದವರೆಗೆ ವಿಸ್ತೃತವಾಗಿ ವರ್ಣಿತವಾದ ನೃತ್ಯ ಪ್ರಸಂಗಗಳನ್ನು ಒಳಗೊಂಡ ಕಾವ್ಯಗಳನ್ನು ಅಧ್ಯಯನದ ಸೌಕರ್ಯಕ್ಕಾಗಿ ಜೈನ, ವೀರಶೈವ, ವೈದಿಕ ಹಾಗೂ ಆಧುನಿಕ ಕಾವ್ಯಗಳೆಂದು ವಿಭಜನೆ ಮಾಡಲಾಗಿದೆ.

ನಮ್ಮ ಕವಿಗಳು ನೃತ್ಯ ಪ್ರಸಂಗಗಳನ್ನು ವರ್ಣಿಸುವಲ್ಲಿ ಪ್ರಾಚೀನ ಹಾಗೂ ಸಮಕಾಲೀನ ಶಾಸ್ತ್ರಗ್ರಂಥಗಳನ್ನು ವಿಷಯ ನಿರೂಪಣೆಗಾಗಿ ವ್ಯಾಪಕವಾಗಿ ಬಳಸಿರುವುದು ಕಂಡುಬಂದಿದೆ. ನೃತ್ಯ ಪ್ರಸಂಗಗಳ ವಿಶ್ಲೇಷಣೆಗಳಲ್ಲಿ ಸಾಂದರ್ಭಿಕವಾಗಿ ಶಾಸ್ತ್ರ ಗ್ರಂಥಗಳನ್ನು ಕಾವ್ಯ ಬಂಧಗಳೊಡನೆ ಸಮೀಕರಿಸಿ  ಚರ್ಚಿಸಿದೆ.

ಯಾವುದೇ ನರ್ತಕಿ ಅಥವಾ ನರ್ತಕನ ರಂಗಪ್ರವೇಶಕ್ಕೆ ಸೂಕ್ತ ಪರಿಕರಗಳು ಅವಶ್ಯ. ರಂಗಭೂಮಿ, ನೇಪಥ್ಯವಿಧಿ, (ವೇಷಭೂಷಣ) ಹಿನ್ನೆಲೆ- ವಾದ್ಯ ವೃಂದಗಳು ನೃತ್ಯ ಪರಿಕರಗಳಾಗಿ ಕನ್ನಡ ಕಾವ್ಯಗಳಲ್ಲಿ ಅತ್ಯಂತ ರೋಚಕವಾಗಿ ವರ್ಣಿತವಾಗಿದೆ. ರಂಗವನ್ನು ಪ್ರವೇಶಿಸಿದ ನಂತರ ಜವನಿಕೆ, ಸ್ಥಾನಕ, ಪುಷ್ಪಾಂಜಲಿಗಳು ರಂಗದ ಆರಂಭಿಕ ಚಟುವಟಿಕೆಗಳಾಗಿ ಭೂಮಿಕೆಯಂತೆ ರೂಪಿತವಾಗಿದೆ. ನಮ್ಮ ಕವಿಗಳ ಈ ನಿಟ್ಟಿನ ದಕ್ಷತೆಯನ್ನು ಕನ್ನಡ ಕಾವ್ಯಗಳಲ್ಲಿ ನೃತ್ಯ ಪರಿಕರ ಮತ್ತು ಭೂಮಿಕೆ ಎಂದು ಗುರುತಿಸಿ, ಕನ್ನಡ ಕಾವ್ಯಗಳಲ್ಲಿ ಕಂಡುಬರುವ ರಂಗಭೂಮಿ ಹಾಘೂ ಅದರ ಚಟುವಟಿಕೆಗಳು ಶಾಸ್ತ್ರಾಧಾರಗಳೊಡನೆ ಚರ್ಚಿಸಿದೆ. ಹೀಗೆ ಚರ್ಚಿಸುವಲ್ಲಿ ನಮ್ಮ ಕವಿಗಳು ಅನೇಕ ನೃತ್ಯ ಶೈಲಿಗಳ ರೂಪುರೇಷೆಗಳನ್ನು ಚಿತ್ರಿಸಿರುವುದು ಗೋಚರವಾಗಿದೆ.[1] ಕಪಿಲಾ ವಾತ್ಸಾಯನ – Indian Classical Dance, p.2.

[2] However it is surely not all that may be said about the art, be in music, painting or dancing there should also be in art a sensation of life. An infection of pleasure and peculiar thrill (Talstoy) ‘The Art of Hindu Dance’, pp. 3, 4.

[3] ಋಗ್ವೇದ-೫-೩೩-೬, ೧೦-೧೮-೩.

[4] Projesh Banerje – Dance of India, p. 38

[5] Kapila Vatsayan, Indian Classical Dance, p.3

[6] ಮುಂದಿನ ಅಧ್ಯಾಯಗಳಲ್ಲಿ ಈ ಕುರಿತು ಚರ್ಚಿಸಿದೆ.

[7] ಭಾಜನ, ಭೋಜನ, ಶಯ್ಯಾ, ಚಮೂ, ವಾಹನ, ಆಸನ, ನಿಧಿ, ರತ್ನ, ಪುರ, ನಾಟ್ಯ-ವೆಂಕಟಾಚಲಶಾಸ್ತ್ರಿ- ಶ್ರೀ ವತ್ಸ ನಿಘಂಟು, ಪು. ೩೧೨.

[8] EI. XIII, p. 41, 1112 A.D.

[9] ಲೋಕೋಪದೇಶ ಜನನಂ ನಾಟ್ಯಮೇ ತದ್ ಭವಿಷ್ಯತಿ |
ನತತ್‌ಜ್ಞಾನಂ ನತತ್‌ಚ್ಛಿಲ್ವಂ ನ ಸಾ ವಿದ್ಯಾ ನಸಾಕಲಾ |
ನಸಾ ಯೋಗೋ ನತತ್ಕರ್ಮ ನಾಟ್ಯೀ ಸ್ಮಿನ್ನನ್ಯದೃಶ್ಯತೇ || (ನಾಟ್ಯ ಶಾ.ಅಅ. ೧-೧೧೬-೧೧೭)

(ಲೋಕಕ್ಕೆ ಉಪದೇಶ ನೀಡುವುದಕ್ಕೆ ಉಂಟಾದ ಈ ನಾಟ್ಯದಲ್ಲಿ ಜಗತ್ತಿನ ಎಲ್ಲ ಜ್ಞಾನಗಳು, ಎಲ್ಲ ಶಿಲ್ಪಿಗಳು ಎಲ್ಲ ವಿದ್ಯೆಗಳು, ಎಲ್ಲ ಕಲೆಗಳು, ಎಲ್ಲ ಯೋಗಗಳು, ಎಲ್ಲ ಚಟುವಟಿಕೆಗಳು ಇವೆ. ಇದರಲ್ಲಿ ಇಲ್ಲದ್ದು ಬೇರೆ ಎಲ್ಲಿಯೂ ದೊರೆಯದು.)

[10] || ಭರತನುತ ವಚನ ರಚನಾಧಿಕ ಜಿತನಟ ಸೇವ್ಯ ಸಿಂಘನಾದೇನ | ಪರನಟ ಮದಾನ್ಧ ಹಸ್ತಿ ಪರಿಹೀನ ಮದೋಭವತ್ಯೇವ | ನಟಸೇವ್ಯ ಭರತ ಮತಯುತ ಪಟುತರ ವಚನಾಶನಿಪ್ರಪಾತೇನ| ಕುಟಿಲೋನ್ನತ ನಟಶೈಲ : ಸ್ವುಟಿತಾನತ ಮಸ್ತಕ ಱ್ಪತತಿ || ಅಚಲನ್ ||
(IA, X P. 167, C, 850 A.D)
ಇದರ ಕನ್ನಡ ರೂಪಾಂತರವನ್ನು ಹೀಗೆ ಕೊಟ್ಟಿದೆ.
|| ಖ್ಯಾತ ಮಹಾ ಪ್ರಭಾವ ಭರತಾಗಮ ಯುಕ್ತಾ ಬಹುಪ್ರಕಾರದಾ
ಮಾತಿನೊಳಲ್ಲಮೇ ನೊ ನಟಸೇವ್ಯನ ಮುನ್ತೆಯಥೋಕ್ತ ಮಾರ್ಗದಿ
ನ್ದೀತೆಱದಿ ಱ್ದುದಗ್ರತಲ ಸ ಞ್ಚರ ಮೆಳ್ದುದಿನೆನ್ದು ಪೇಱ್ದೂಡಿ
ತ್ತಾತನೆ ನರ್ತಕಂ ನಟರೊಳರ್ಗೆನುದೇಂ ಭುವನಾನ್ತರಾ (ಳ) ದೊಳ್
ದೇವಂಗಳ ಮಗ ಅಚಲನ್|| (ಉದೃತಿ-ಆರ್.ಎಸ್. ಪಂಚಮುಖಿ ಕರ್ನಾಟಕದ ಇತಿಹಾಸ)

[11] Ec. II, 132, 1123, A.D.
Ec.II, 143, 1131, A.D.
Ec. VII, Sk 97, 1113, A.D.
Ec. VII Sk, 1009, C 1070 A.D
SII IX, i 159. C 1090 A.D.

[12] ಮಲವಿಕಾಗ್ನಿ ಮಿತ್ರಂ – ಅಂಕ.೧.

[13] ಎಸ್.ವಿ.ಪರಮೇಶ್ವರ ಭಟ್ಟ-ಕನ್ನಡ ಕಾಳಿದಾಸ ಮಹಾಸಂಪುಟ. ಪು. ೪೦೩.