ಮಂದ್ರ

[1] –  ಆಧಾರ ಷಡ್ಜದ ಕೆಳಗಿನ ಶ್ರುತಿಯ ಸ್ಥಾನ ಅವರೋಹಣ ಕ್ರಮದಲ್ಲಿ ಬರುವ ಸಪ್ತಸ್ವರ ಸಮುದಾಯ.

ಮಧ್ಯ88 ಆಧಾರ ಷಡ್ಜದಿಂದ ಆರಂಭವಾಗಿ ಆರೋಹಣ ಕ್ರಮದಲ್ಲಿ ಮೇಲಿನ ಷಡ್ಜವನ್ನು ಸೇರುವ ಸಪ್ತಸ್ವರ ಸಮುದಾಯ.

ತಾರ88 ಆಧಾರ ಷಡ್ಜದಿಂದ ಮೇಲಿನ ಇನ್ನೂ ಮೇಲಿನ ಷಡ್ಜವನ್ನು ಆರೋಹಣ ಕ್ರಮದಲ್ಲಿ ಸೇರುವ ಸಪ್ತಸ್ವರ ಸಮುದಾಯ.

ಮುಂದಿನ ವಚನದಲ್ಲಿ ನಾಗಚಂದ್ರ ತನಗೆ ಸಂಗೀತ ಶಾಸ್ತ್ರದಲ್ಲಿ ಇದ್ದ ಪರಿಜ್ಞಾನವನ್ನು ತೋರಿಸಿದ್ದಾನೆ. ಗ್ರಾಮರಾಗ,[2] ಜಾತಿಭೇದ,[3] ಸಪ್ತಸ್ವರಗಳಲ್ಲಿ ಸಂಚರಿಸುವ ಮೂವತ್ತೆರಡು ರಾಗಗಳು, ಚಚ್ಚಪುಟ, ಚಾಚಪುಟ ಮುಂತಾದ ಮಾರ್ಗತಾಳಗಳ ಮಿಶ್ರಣ ಭೇದಗಳನ್ನು ಅರಿತು ಪ್ರೌಢವಾದ ಗಾಯನವನ್ನು ಮುಖರಿ ಗಾಯಕನು ಆರಂಭಿಸುವುದನ್ನು ವಿಸ್ತರಿಸುತ್ತಾನೆ. ಮುಂದೆ ಚತುರ್ವಿಧ ವಾದ್ಯಗಳೂ ಕೂಡಿಕೊಂಡು ಮೇಘದ ಗರ್ಜನೆ, ಸಮುದ್ರದ ಭೋರ್ಗರತೆಯಂತೆ ಧ್ವನಿಗೈಯುತ್ತ ಪೂರ್ವರಂಗ[4]ವನ್ನು ಆಚರಿಸಿದುದರ ವರ್ಣನೆಯನ್ನು ಕವಿ ಕೊಡುತ್ತಾನೆ.

ಕವಿಯು ನರ್ತಕಿಯ ನೃತ್ಯಕ್ಕಾಗಿ ಸಿದ್ಧವಾಗಿ ರಂಗಭೂಮಿಯಲ್ಲಿ ಉಪಸ್ಥಿತರಾಗಿದ್ದ ಅವನದ್ಧ ವಾದ್ಯಕಾರರನ್ನು ಅನಂತ ವಾದ್ಯಗಳನ್ನು ನುಡಿಸುವ ಕ್ರಮವನ್ನು ಹೇಳುತ್ತಾನೆ. ಇದರಲ್ಲಿ ಢಕ್ಕಾ ವಾದ್ಯವನ್ನು ನುಡಿಸುವ ಕ್ರಮ

ತಳದಿಂದವುಂಕಿತೊಡೆದು
ದ್ದಳಕೆಯನೊಳ್ಪಾಸಮೆಸೆಯೆ ಝೇಂಕಾರಮನಿ
ತ್ತಳವಡೆ ಬಾಜಿಪ ಶಶಿಮಂ
ಡಳ ಮುಗುಳ್ಪದುರ್ದೆನಿಸಿದತ್ತು ಢಕ್ಕಾ ನಿನದಂ (ಮಲ್ಲಿಪು. ೧೮)

ಅಂಗೈನಿಂದ ತಡೆದು, ತಿಕ್ಕಿ, ಅಮುಕಿ, ನೂಲಿನಿಂದ ಬಿಗಿದ ಎಳೆಗಳನ್ನು ಬಿಗಿಯನ್ನು ಸಡಿಲಗೊಳಿಸುವುದರಿಂದ ಗಾಯಕನ ಶಾರೀರಕ್ಕೆ ಸರಿಯಾದ ಶ್ರುತಿಯನ್ನು ಉಂಟು ಮಾಡಲು ಸಾಧ್ಯ ಎಂದು ಢಕ್ಕಾ ವಾದನ ಕ್ರಮವನ್ನೂ ಹೇಳುತ್ತಾನೆ. ಶಾರ್ಙ್ಗದೇವನು ದೇಶಿ ಪಟಹಗಳನ್ನು ವಿವರಿಸುತ್ತ ಢಕ್ಕಾ ವಾದ್ಯದ ಲಕ್ಷಣ, ವಾದನ ಕ್ರಮವನ್ನು ಹೇಳುತ್ತಾನೆ. ಎರಡು ಮುಖಗಳುಳ್ಳ, ಹದಿಮೂರು ಅಂಗುಲದ ಈ ವಾದ್ಯವನ್ನು ಎಡಗೈನಿಂದಲೂ, ಬಲಗೈ ಕುಡುಪಿನಿಂದಲೂ ದೇಂಕಾರವು ನುಡಿವಂತೆ ಬಾಜಿಸುವುದನ್ನು ಢಕ್ಕಾ ಎಂದು ಹೇಳುತ್ತಾನೆ.[5] ಮುಂದಿನ ಪದ್ಯಗಳಲ್ಲಿ ವಾದನಕಾರರು ಮಾರ್ಗಪದ್ಧತಿಯಲ್ಲಿ ವಾದ್ಯಗಳನ್ನು ನುಡಿಸುವ ವಿಧಾನಗಳನ್ನು ರನ್ನನಂತೆಯೇ ಹೇಳುತ್ತಾನೆ.[6]

ನಾಗಚಂದ್ರನು ವಾದನಕಾರರು ಕೈ ಮತ್ತು ಮನಸ್ಸುಗಳೆರಡನ್ನು ಏಕತ್ರಗೊಳಿಸಿ ಅತ್ಯಂತ ಚಮತ್ಕಾರದಿಂದ ಕೈಯೇ ಮನಸ್ಸು ಎಂಬಂತೆ ನುಡಿಸಿದರೆಂದೂ ಪ್ರಶಂಸಿಸುತ್ತಾನೆ. (ಮಲ್ಲಿಪು. ೮-೩೦ವ) ನಾಗಚಂದ್ರನು ಹಿನ್ನೆಲೆ ಗಾಯನಕ್ಕೆ ಹೆಚ್ಚಿನ ಮಹತ್ವನ್ನು ಕೊಟ್ಟಿದ್ದಾನೆ. ಗಾಯನದ ಸಾಹಿತ್ಯವನ್ನು ಈತ ವಸ್ತುಗೀತಿ ಎಂದು ಗುರುತಿಸುತ್ತಾನೆ. ನೃತ್ಯಕ್ಕೆ ಹಿನ್ನೆಲೆ ಗಾಯನ ಪ್ರಾಣವಾಯುವಿನಂತೆ. ಗಾನದ ಪಾಠ್ಯವನ್ನು ನರ್ತಕಿ ಅಭಿನಯಿಸಬೇಕಾದರೆ ಸಮರ್ಥರಾದ ಗಾಯಕರು ಹಿನ್ನೆಲೆ ಗಾಯನವನ್ನು ಒದಗಿಸಬೇಕಾಗುತ್ತದೆ. ಇಲ್ಲವಾದಲ್ಲಿ ನರ್ತನ ಹಾಗೂ ಗಾಯನಗಳ ಸಾಮಂಜಸ್ಯವಿಲ್ಲದೆ ಅರ್ಥಪ್ರಾಪ್ತಿಯಾಗುವುದಿಲ್ಲ. ಕವಿ ಈ ಅಂಶವನ್ನು ಮನದಲ್ಲಿ ಗ್ರಹಿಸಿಯೇ ತನ್ನ ಕಾವ್ಯದಲ್ಲಿ ಅಡಕಗೊಳಿಸಿದ್ದಾನೆ ಎನ್ನಿಸುವುದು. ಅಲ್ಲದೇ ದೇಶಿ ವಾದ್ಯಗಳಾದ ಉಪಾಂಗ, ಢಕ್ಕಾವನ್ನೂ ಈತ ನೃತ್ಯಕ್ಕೆ ಪಕ್ಕವಾದ್ಯವಾಗಿ ಹೇಳಿದ್ದಾನೆ.

ನೇಮಿಚಂದ್ರನು ನೃತ್ಯದ ಜೀವಾಳವಾದ ತಾಳಧರನ ಪ್ರಸ್ತಾಪವನ್ನು ಮಾಡುವುದರಲ್ಲಿ ಮೊತ್ತಮೊದಲಿಗ. ನೃತ್ಯಸ್ಪರ್ಧೆಗೆ ಒದಗಲು ಸಜ್ಜಾಗಿ ಕುಳಿತಿರುವ ವಾದ್ಯಕಾರರ ಪಟ್ಟಿಯಲ್ಲಿ ನೇಮಿಚಂದ್ರ ತಾಳಧರನನ್ನು ನೇಮಿಸುತ್ತಾನೆ. ನೃತ್ಯದಲ್ಲಿ ಬಳಸಲಾಗುವ ತಾಳವನ್ನು ನಟುವಾಂಗ[7] ಎಂದು ಕರೆಯುತ್ತಾರೆ. ಉಕ್ಕಿನ ದೊಡ್ಡ (೬ ಅಂಗುಲ ವ್ಯಾಸ) ದೊಂದು ತಾಳ ಹಾಗೂ ಕಂಚಿನ ಚಿಕ್ಕ (೩ ಅಂಗುಲ ವ್ಯಾಸ) ತಾಳಗಳು ಸೇರಿ ನಟುವಾಂಗ ತಾಳ ಎನಿಸಿದೆ. ಎರಡೂ ತಾಳಗಳಲ್ಲಿ ಮಧ್ಯ ರಂಧ್ರವಿದ್ದು ಅದರಲ್ಲಿ ಸಣ್ಣ ಚರ್ಮದ ಪಟ್ಟಿಯನ್ನು ತೂರಿಸಿ ಅದಕ್ಕೆ ಹುರಿಯಿಂದ ಅಥವಾ ಗಟ್ಟಿಯಾದ ರೇಷ್ಮೆ ನೂಲಿನ ದಾರದಿಂದ ಬಿಗಿದಿರುತ್ತಾರೆ. ದೊಡ್ಡದಾದ ಉಕ್ಕಿನ ತಾಳವನ್ನು ಎಡಗೈನ ಹೆಬ್ಬೆರಳು ಹಾಗೂ ತರ್ಜನಿಗಳ ಮಧ್ಯ ಕೂಡಿಸಿ, ಬಲಗೈಯಲ್ಲಿ ಚಿಕ್ಕದಾದ ಕಂಚಿನ ತಾಳವನ್ನು ನೂಲಿನ ಮೂಲಕ ಹೆಬ್ಬೆರಳು ಹಾಗೂ ತರ್ಜನಿಯ ಮೂಲಕ ಹಿಡಿದುಕೊಂಡು ಬಲಗೈಯಿಂದ ಎಡಗೈಯ ತಾಳಕ್ಕೆ ತಟ್ಟಿ ನಾದವನ್ನು ಹೊರಡಿಸಲಾಗುತ್ತದೆ. ಎಡ ಹಾಗೂ ಬಲ ತಾಳಗಳು ಒಂದಕ್ಕೊಂದು ತಟ್ಟುವುದು, ಮುಚ್ಚುವುದು, ಜಾರಿಸುವುದು ಹೀಗೆ ವಿವಿಧ ಕ್ರಿಯೆಗಳನ್ನು ಒಳಗೊಂಡ ಈ ನಟುವಾಂಗವಾದನಕ್ಕೆ ವಿಶೇಷವಾದ ತರಬೇತಿಯ ಆವಶ್ಯಕತೆಯೂ ಇದೆ. ಸಾಮಾನ್ಯವಾಗಿ ನಾಟ್ಯಾಚಾರ್ಯರು ಈ ಕಾರ್ಯವನ್ನು ನಿರ್ವಹಿಸುತ್ತಾರೆ. ನೃತ್ಯದಲ್ಲಿ ನರ್ತಕಿಯ ಪಾದಗತಿಗಳನ್ನು ನಟುವಾಂಗದಲ್ಲಿ ನುಡಿಸುತ್ತ, ಬಾಯಿಯಲ್ಲಿ ಜತಿಗಳ ಪಾಟಾಕ್ಷರಗಳನ್ನು ಹೇಳುತ್ತ, ನರ್ತಕಿಗೆ ನೃತ್ತ ಬಂಧಗಳ ಗತಿಗಳನ್ನು ನಿರ್ದೇಶಿಸುವ ನಟುವಾಂಗ ವಾದಕರ ಪಾತ್ರ ಅತ್ಯಂತ ಮಹತ್ವವುಳ್ಳದಾಗಿರುತ್ತದೆ. ಈತನನ್ನೇ ತಾಳಧರನೆಂದು ಕಾವ್ಯಗಳಲ್ಲಿ ಗುರಿತಿಸಿದಂತಿದೆ.

ವಿವಿಧ ವಾಯ ವಾದನ ವಾಚಳಮುಂ ಗಾಯಿಕಾಜನ ಸಂಛನ್ನಮುಂ ವಾಂಶಿಕಸಂಕುಳ ಸಂಕೀರ್ಣಮುಂ ಶೈಲೂಷ ಸಮೂಹ ಸಮ್ಮರ್ದಮುಂ ಭಾರತಿಕ ವೃಂದ ಭರಿತಮುಂ ವಾಗ್ಗೇಯಕಾರ ವಿಳಸಿತಮುಂ ಪ್ರಗೀತಪ್ರಕೀರ್ಣ ಮುಂ ತಾಲಧರಾಭಿಷ್ಠಿತ ಮುಮಪ್ಪ ಮಣಿಮಯ ನೃತ್ಯಮಂಟಪಕ್ಕೆ ಇಭ್ಯಕೇತು ಕುಮಾರ ನಂ ಬರಿಸಿ (ಅರ್ಧನೇ. ೯೭ವ)

ನರ್ತಕಿಯಷ್ಟೇ ಏಕಾಗ್ರಚಿತ್ತತೆ ಹಾಗೂ ತನ್ಮಯತೆಗಳಿಂದ ನಟುವಾಂಗ ವಾದಕನೂ ತನ್ನ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆಗಲೇ ನೃತ್ಯವು ಒಂದು ಯಶಸ್ವೀ ಪ್ರೇಕ್ಷಣವಾಗುವುದು. ನರ್ತಕಿಯು ತನ್ನ ಕಾಲಿಗೆ ಕಟ್ಟಿಕೊಂಡ ಗೆಜ್ಜೆಗಳಿಂದ ತಾಳವಾದ್ಯದವರಿಗೆ ನಿರ್ದೇಶಕಿಯಾಗಿ ಕಂಡ ಕವಿ ಕಲ್ಪನೆ ಅಭಿನಂದನೀಯ.

ಜತಿತೊಡರೆ ರಣಿತ ನೂಪುರ
ರುತಿಗಳ ಬೞಿವಿಡಿದು ವಾದಕಂ ಬಾಜಿಸಿದಂ
ಧೃತ ದಾವುಜ್ಜಮದಾರಸ
ವತಿಯುಂ ನೃತ್ಯಾಂಗಮುಂಬೊಲಾಗಿರೆ ವಾದ್ಯಂ         (ಲೀಲಾವ. ೧೨೯)

ಜತಿ[8]ಗಳನ್ನು ನರ್ತಿಸುತ್ತ ಕಾಲಿನಲ್ಲಿ ಕಟ್ಟಿದ ಗೆಜ್ಜೆಗಳಿಂದ ತಾಳವನ್ನು ತೋರಿಸುತ್ತಿದ್ದ ನರ್ತಕಿಯ ಮಾರ್ಗವನ್ನೇ ಅವನದ್ಧ ವಾದಕರೂ ಹಿಡಿದು ನುಡಿಸಿದರೆಂದು ಕವಿಯ ಇಂಗಿತ.

ಅವನದ್ಧ ವಾದ್ಯವನ್ನು ಶಾರ್ಙ್ಗದೇವ ಆವುಜ[9] ಎಂದು ಕರೆದಿದ್ದಾನೆ. ಸಂಸ್ಕೃತದ ಆತೋದ್ಯ ಪ್ರಾಕೃತದಲ್ಲಿ ಆಉಜ್ಜವಾಗಿ, ದೇಶ್ಯಭಾಷೆಯಲ್ಲಿ ಆವುಜ ಎಂದಾದರೂ ಸಂಸ್ಕೃತದ ಆತೋದ್ಯದ ಅರ್ಥವ್ಯಾಪ್ತಿಯನ್ನು ಆವುಜಪೂರ್ತಿ ಪಡೆದಂತೆ ಕಂಡುಬರುವುದಿಲ್ಲ. ಭರತನು ಆತೋದ್ಯವು ಸಂಗೀತ ವಾದ್ಯವೆಂಬ ಸಾಮಾನ್ಯ ಅರ್ಥದಲ್ಲಿ ಬಳಸುತ್ತಾನೆ. ಆವುಜ[10]ಕ್ಕೆ ಕೇವಲ ಅವನದ್ಧ ವಾದ್ಯವೆಂಬ ಅರ್ಥವನ್ನು ಶಾರ್ಙ್ಗಧರ ಹೇಳುತ್ತಾನೆ. ಇದೇ ಅರ್ಥದಲ್ಲಿ ಕನ್ನಡ ಕವಿಗಳು ಆವುಜ ಪದವನ್ನು ಸಾಮಾನ್ಯವಾಗಿ ಬಳಸಿದ್ದಾರೆ.[11]

ರಂಗದ ಮೇಲೆ ನೃತ್ಯದ ವಾದ್ಯಗಳನ್ನು ನೃತ್ಯಾಂಗವೆಂದು ಕರೆದು ಅದರ ಪ್ರಾಯೋಗಿಕ ದರ್ಶನವನ್ನು ಕವಿ ನೇಮಿಚಂದ್ರ ಮಾಡಿಸುತ್ತಾನೆ.

ಚಂದ್ರಪ್ರಭನ ಜನನದ ಸಂತೋಷದಿಂದ ನರ್ತಿಸುವ ಇಂದ್ರ ಹಾಗೂ ಅಪ್ಸರೆಯರ ನೃತ್ಯವನ್ನು ಅಗ್ಗಳದೇವನು ರಂಗ ಸಂಗೀತಕ ಎಂದಿರುವುದು ಸಮರ್ಪಕವಾಗಿದೆ.

ಕಿವಿಗಿಂಪಂ ಮೃದು ಗೇಯಮೀಯ ಮೃದುಗೇಯಕ್ಕಾದಮೋರನ್ನಮೆಂ
ಬವೊಲಿಂಬಾಗಿರೆ ವಾದ್ಯಶಬ್ದಮತಿಸಾಮ್ಯಂ ವಾದ್ಯಶಬ್ದಕ್ಕೆ ನೋ
ಡುವೊಡೆಂಬೊಪ್ಪದೊಳೊಂದೆ ನೃತ್ಯಮಳವಟ್ಟಾ ನೃತ್ಯದಿಂದುಣ್ಮಿಪೊ
ಣ್ಮೆ ವಿಶೇಷಂ ರಸವೃತ್ತಿಯೇನೆಸೆದುದೊ ತದ್ರಂಗ ಸಂಗೀತಕಂ ||
(
ಚಂದ್ರಪು. ೧೨೧೭೯)

ಇಂಪಾದ ಗಾಯನ, ಗಾಯನಕ್ಕೆ ಎಡಬಿಡದೇ ಒಪ್ಪುವಂತಹ ವಾದ್ಯಗಳ ವಾದನ ಇವೆರಡಕ್ಕೂ ಅನುಗತವಾದ ನೃತ್ಯ ಇದು ರಂಗದ ಮೇಲೆ ರಸೋತ್ಪತ್ತಿಯ ಸಂಗೀತಕ[12]ವಾಗಿ ಪರಿಣಮಿಸಿದುದರಲ್ಲಿ ಸಂದೇಹವೇ ಇಲ್ಲ. ಹಿನ್ನೆಲೆಗಾಯಕರು, ವಾದಕರು ನಿಬದ್ಧ ಹಾಗೂ ಅನಿಬದ್ಧ ಸಂಗೀತವನ್ನು ಒದಗಿಸಿದುದನ್ನು ಅಗ್ಗಳದೇವ ಹೇಳುತ್ತಾನೆ. ನಿಬದ್ಧವು ತಾಲಸಹಿತವಾದುದು; ಅದು ಹಲವು ಅಂಗಧಾತುಗಳಿಂದ ರಚಿತವಾದ ಗಾನ ವಿಶೇಷ[13] ಅನಿಬದ್ಧವು ತಾಲ ಮೊದಲಾದ ಯಾವ ನಿರ್ಬಂಧವೂ ಇಲ್ಲದೆ ಇರುವ ಗಾನ ಇದನ್ನು ಆಲಪ್ತಿ ಎಂದೂ ವಿದ್ವಾಂಸರು ಕರೆಯುತ್ತಾರೆ.[14] ಇದಲ್ಲದೆ ತ್ರಿಮಾರ್ಗ ಗೀತಗಳನ್ನೂ ಹಾಡಿದರೆಂದು ಕವಿ ಹಾಡುಗಾರಿಕೆಯ ವಿಶೇಷತೆಯನ್ನು ಮುಂದೆ ನಮ್ಮ ಗಮನಕ್ಕೆ ತರುತ್ತಾನೆ. (೧೨-೧೭೯ವ) ಇಲ್ಲಿ ಪ್ರಬಂಧವೆಂದರೆ ರೂಪಕ ಹಾಗೂ ವಸ್ತು ಗೀತಗಳು.[15]

ಪುನಃ ಸಮವಸರಣ ಕಲ್ಯಾಣ ಮಂಟಪದ ನಾಟಕ ಶಾಲೆಯ ಗೀತವಾದ್ಯ ಪರಿಕರಗಳನ್ನು ವಿಸ್ತರಿಸುತ್ತ ಸೂತ್ರ ತಾಳ ಹಾಗೂ ನ್ಯಾಸ ತಾಳಗಳ ಪ್ರಸ್ತಾಪವನ್ನು ಅಗ್ಗಳನು ಮಾಡುತ್ತಾನೆ. ಈ ತರಹದ ತಾಳ ಪರಿಜ್ಞಾನವನ್ನು ತೋರುವಲ್ಲಿ ಈತನೇ ಮೊದಲಿಗ.

ಮತ್ತುಮವರೊಂದೊಂದು ಭೂಮಿಕೆಗಳೊಳ್ ಏಕತಾಳ ಧ್ರುವತ್ರಿವುಡೆ ಮಟ್ಠೆಯ ಝಂಪೆ ಆಟತಾಳರೂಪಕಂ ಮೊದಲಾದ ಸೂತ್ರತಾಳಂಗಳೊಳ್ ನೊಱೆಂಟು ನ್ಯಾಸ ತಾಳಂಗಳೊಳಂ ಕೊಡಿ
(
ಚಂದ್ರಪು. ೧೫೫೧ವ)

ಅಗ್ಗಳನು ಸೂಚಿಸುವ ಸೂತ್ರತಾಳಗಳು ಸೂಳಾದಿ ಸಪ್ತತಾಳಗಳೆಂದು ಪ್ರಸಿದ್ಧವಾಗಿದೆ. ಇವು ಸಂಗೀರ, ಮಾನಸ, ಸಂಸಸಾ. ದಂತಹ ಸಮಕಾಲೀನ ಶಾಸ್ತ್ರಗ್ರಂಥಗಳಲ್ಲಿ ಅಲಭ್ಯ. ದೇಶಭಾಷೆ, ದೇಶೀ ಸಂಗೀತದಲ್ಲಿ ಅಳವಡಿಸಲಾಗುತ್ತಿದ್ದ ಈ ಸಪ್ತತಾಳಗಳ (ಧ್ರುವ, ಮಟ್ಟ, ರೂಪಕ, ಝಂಪೆ, ತಿವುಡೆ (ತ್ರಿಪುಟ), ಅಟ್ಟ ಹಾಗೂ ಏಕ ತಾಳಗಳು) ಪ್ರಬಂಧವನ್ನು ಒಂದು ಗೀತಗುಚ್ಛವನ್ನಾಗಿ, ತಾಳ ಪ್ರಧಾನವಾಗಿ ಹಾಡುವ ಕ್ರಮವಿದ್ದಿರಬಹುದು. ಆದ್ದರಿಂದ ಇವು ಶಾಸ್ತ್ರ ಮರ‍್ಯಾದೆಯನ್ನು ಪಡೆದು ಕಾವ್ಯಗಳಲ್ಲೂ ಸೇರಿರಬಹುದು. (ಅನಂಪು. ೧೦.೮ ವ) (ನಾಗಕು. ೨೨-೯೮) ಎಂಬ ಅಭಿಪ್ರಾಯವನ್ನು ಒಪ್ಪಬಹುದಾಗಿದೆ.[16] ಆದರೆ ಈ ತಾಳಗಳ ಬೇರು ಪೂರ್ವೋಕ್ತ ಶಾಸ್ತ್ರಗ್ರಂಥಗಳ ದೇಶೀ ತಾಳಗಳ ಪಟ್ಟಿಯಲ್ಲಿದೆ.

ಮುಂದೆ ನೂರೆಂಟು ನ್ಯಾಸತಾಳ, ದೇಶಾದಿ ತಾಳಗಳ ಪ್ರಸ್ತಾಪವಿದೆ. ಅಲ್ಲದೆ ಚಾಚಪುಟ, ಚಚ್ಚ ಪುಟಾದಿ ಷಟ್ಪತಿ ಪುತ್ರಿಕ ದರ್ಪಣ ಹಾಗೂ ದೇಶಾದಿ ತಾಳಗಳ ಮಾಹಿತಿ ಇದೆ. ಹೀಗೆ ಅಗ್ಗಳದೇವ ಸಮಕಾಲೀನ ಹಾಡುಗಾರಿಕೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಮಗೆ ಒದಗಿಸುತ್ತಾನೆ.

ಜನ್ನನು ಅನಂತನಾಥ ಪುರಾಣದಲ್ಲಿ ಶುಭ ಪ್ರಸಮಗಗಳಾದ ಸೀಮಂತ, ಮೆರವಣಿಗೆ, ಪುತ್ರಜನನಗಳಲ್ಲಿ ವಾದ್ಯಗಳ ಬಳಕೆಯನ್ನು ಅವುಗಳ ತಾಂತ್ರಿಕ ವಿವರಣೆಯೊಂದಿಗೆ ವಿಶದೀಕರಿಸುತ್ತಾನೆ.

ಒಬ್ಬ ಅಪ್ಸರೆಯು ತಿಸರಿ ಕಿನ್ನರೆ ವೀಣೆಯನ್ನು ನುಡಿಸಿದ ಉಲ್ಲೇಖವನ್ನು ಜನ್ನ ಹೀಗೆ ಮಾಡುತ್ತಾನೆ.

ಎಸಗಿದುದು ಸವಿಯ ಸೋನೆಯ
ನಸದಳವೆನಿಸಿದುದು ಮೆಚ್ಚಿನಚ್ಚರಿಯಂ ಬಾ
ಜಿಸುವಮರರ ಮಣಿಯರ್ಕಳ
ತಿಸರಿಯ ಕಿನ್ನರಿ ವೀಣೆಯ ನವವಿಧದ ರವಂ || (೮೭)

ಕಿನ್ನರಿಯು[17] ವೀಣೆಗೆ ಪ್ರಾಚಿನರಿತ್ತ ನಾಮಾಂಕಿತ. ಪಾಲ್ಕುರಿಕೆ ಸೋಮನಾಥನು ಮೂವತ್ತೆಂಟು ತರಹದ ವೀಣೆಗಳನ್ನು ಪಂಡಿತಾರಾಧ್ಯ ಚರಿತಮು ಎಂಬ ಗ್ರಂಥದಲ್ಲಿ ಹೇಳುತ್ತಾನೆ.[18] ಅವುಗಳಲ್ಲಿ ಹದಿನೇಳನೆಯ ತರಹದ ವೀಣೆ ತ್ರಿಸರಿ ಎಂದಿದೆ. ಆದರೆ ಇದರ ಲಕ್ಷಣವನ್ನು ಸೋಮನಾಥನು ಕೊಡುವುದಿಲ್ಲ. ಆದರೂ ಇದು ಮೂರು ತಂತಿಯ ವೀಣೆ ಎಂದು ಅನುಮಾನಿಸಬಹುದು.

ಮುಂದೆ ಮಂಜುಘೋಷೆಯೆಂಬ ಸುರಗಾಯಕಿಯು ಹಾಡಿದ ಪರಿಯನ್ನು ಜನ್ನ ಹೀಗೆ ವಿವರಿಸುತ್ತಾನೆ :

ವಳಿಯ ತೆರಳ್ಕೆಯಂ ವಹಣಿಯೊಟ್ಟಜೆಯ ಪಸರಂಗಳಿಂಪನು
ಜ್ಜಳಿಸುವ ಡಾಳಮಂ ನಡೆವ ಠಾಯೆಯ ಜಾಯಾನುಜಾಯಿಯೋಜೆಯಂ
ಗಳನಱೆವನ್ನರಾರ್ ಸುಖ ಸುಧಾರಸದೊಳ್ ಪರಿಷಜ್ಜನಂಗಳಂ
ಮುೞುಗಿಸಿದತ್ತು ಚಾಳಿಸಿದ ರಾಗಮೆ ನೆಚ್ಚಿನ ಮಂಜುಘೋಷೆಯಾ (ಅನಂಪು. ೮೮)

ಪಾರ್ಶ್ವದೇವನು[19] ಸಂಸಸಾ. ದಲ್ಲಿ ವಳಿ, ವಹನಿ, ಪಸರ, ದೌಳ, ಠಾಯ ಜಾಯಾನುಜಾಯಗಳನ್ನು ಸ್ಥಾಯಿಗಳೆಂದು ಕರೆದು ಇನ್ನೂ ಅನೇಕ ಸ್ಥಾಯಿಗಳನ್ನು ದ್ವಿತೀಯಾಧಿಕರಣದಲ್ಲಿ ವಿವರಿಸಿದ್ದಾನೆ. ಅವನು ರಾಗದ ಅವಯವಗಳನ್ನು ಸ್ಥಾಯಿ ಎಂದು ಕರೆದಿದ್ದಾನೆ. ಇವುಗಳ ವಿವರಣೆಯನ್ನು ಅನುಬಂಧ ಅ.ನಲ್ಲಿ ಕೊಡಲಾಗಿದೆ. ಅಪ್ಸರೆಯರು ಹೆಗಲಿನಿಂದ ಇಳಿಬಿಟ್ಟುಕೊಂಡ ವಾದ್ಯಗಳನ್ನು ನುಡಿಸುತ್ತಿರಲು, ಅವರ ಕೈಬಳೆಗಳನಾದವೂ ವಾದ್ಯಗಳ ಝೇಂಕಾರವೂ ಸಮಶ್ರುತಿಯಾಗಿ ಸೇರಿ ಸೊಗಸುತ್ತಿತ್ತು. ಜನ್ನನ ವರ್ಣನೆ ಹೀಗೆ :

ಸಮಶ್ರುತಿಯಾಗೆ ಝಂಕೃತಿಗೆ ಕಂಕಣ ಝಂಕೃತಿ ವಾಮಹಸ್ತವಿ
ಭ್ರಮದ ತೆರಳ್ಕೆಗಳ್ ಪೆಗಲ ಸಂಚದೊಳಂಚಿರಮಾಗೆ ಕೊಂಕುಬಿಂ

3_6_PP_KUHಕಮನೊಳಕೊಂಡು ಮೆಚ್ಚಡರ್ವಡರ್ಪುಗಳಂತಿರೆ ಪೋಗಿ ಪುಕ್ಕುವಾ

ದ್ಯಮನೊಳಕೊಂಡು ಬಾಜಿಸಿದರಾವುಜ ಮಂ ದಿವಿಜೇಂದ್ರ ಕಾಂತೆಯರ್ (ಅನಂಪು. ೪೯)

ಅಗ್ಗಳದೇವನಿಗಿಂತ ಹೆಚ್ಚಿನ ಮಾಹಿತಿಯನ್ನೂ ಜನ್ನ ಗಾಯನದ ವಿಚಾರದಲ್ಲಿ ಕೊಡುತ್ತಾನೆ ಎಂಬುದು ವಿದಿತವೇ ಇದೆ.

ಅರಸನ ಒಡ್ಡೋಲಗದಲ್ಲಿ ನಡೆಯಲಿರುವ ನೃತ್ಯ ಪ್ರಸಂಗಕ್ಕಾಗಿ ಮುಖರಿಗಾಯಕ[20] ಸುತ್ತ ಅವನನ್ನು ಅನುಸರಿಸಿ ಧ್ವನಿ ಮಾಡುವ ಚತುರ್ವಿಧ ವಾದ್ಯಗಳ ವಾದನ ವೈಖರಿಯನ್ನು ಪಾರ್ಶ್ವಪಂಡಿತನು ವಿವರಿಸುತ್ತಾನೆ. (ಪಾರ್ಶ್ವಪು ೧೨೧೭ ರಿಂದ ೨೦)

ಮುಂದೆ ಮಾರ್ದಂಗಿಕರು ನುಡಿಸುವ ವಾದ್ಯ ಪ್ರಬಂಧಗಳನ್ನು ಕವಿ ಪ್ರಸ್ತಾಪಿಸುತ್ತಾನೆ. ವಿವಿಧ ವಾದ್ಯಗಳ ವಾದನವನ್ನೂ ಕಂಠದ ಮೇಳನವನ್ನು ತಿಳಿದಿದ್ದು ಪಾಟ, ತಾಲ ಇತ್ಯಾದಿಗಳನ್ನೂ ತಿಳಿದು, ಮೃದಂಗವನ್ನು ನುಡಿಸ ಬಲ್ಲಾತನನ್ನು ಮಾರ್ದಂಗಿಕ[21] ಎನ್ನುತ್ತಾರೆ.

ಕವುತಂ ದೇಂಕಾರಂ ಮಲ
ಪವಥ ತುಡುಂಕೊತ್ತೊ ಜಂಕೆಯಂತರಿ ಜತಿ ರಿ ||
ಗ್ಗವಣೆ ಪಹರಣೆಯನಿಪ್ಪೀ
ಪ್ರವಂದಮಂ ಶ್ರೋತ್ರಬಂಧುವೆನೆ ಬಾಜಿಸಿದರ್ ||        (ಪಾರ್ಶ್ವಪು. ೧೨೨೧)

ವಾದ್ಯಗಳಲ್ಲಿ ಹೊರಡುವ ಪಾಟಾಕ್ಷರ ಹಾಗೂ ಲಯಾಧಾರಿತವಾದ ಈ ಮೇಲಿನ ಪ್ರಬಂಧಗಳನ್ನು ವಾದ್ಯಪ್ರಬಂಧ[22] ಎನ್ನುತ್ತಾರೆ. ಆನಂದ ಭರಿತನಾದ ಇಂದ್ರನು ಪಾರ್ಶ್ವನಾಥನ ಪರಿನಿಷ್ಕ್ರಮಣ ಕಲ್ಯಾಣದಲ್ಲಿ ಹಿನ್ನೆಲೆ ವಾದ್ಯದೊಂದಿಗೆ ನರ್ತಿಸುವ ವರ್ಣನೆ ಇದೆ. ಇಲ್ಲಿ ಪಾರ್ಶ್ವಪಂಡಿತನು ವಾದ್ಯಗಾರರ, ಗಾಯಕರ ಸ್ಥಾನವನ್ನು ಹೀಗೆ ಹೇಳುತ್ತಾನೆ :

ಸುರವಾದಕರಿರ್ಕೆಲದೊಳ
ಮಿರೆ ಗಾಯಕೀಜನಂ ಪಿಂದಿರೆ
ತ್ಸುರ ನರ್ತಕಿಯರ್ ಕೂಡಿರೆ
ಸುರ ಪತಿಯಾನಂದ ನಾಟಕೋದ್ಯತನಾದಂ (ಪಾರ್ಶ್ವಪು. ೧೬೧೭೬)

ಹೀಗೆ ವಾದ್ಯ ಪ್ರಬಂಧಗಳನ್ನೂ ವಾದಕರ ಸ್ಥಾನಗಳನ್ನೂ ಗುರುತಿಸುವಲ್ಲಿ ಪಾರ್ಶ್ವಪಂಡಿತನು ಮೊದಲಿಗನಾಗುತ್ತಾನೆ. ಈ ದೃಶ್ಯಗಳನ್ನು ಶಿಲ್ಪಗಳೂ ಕೊಡುತ್ತವೆ.[23]

ಇಮ್ಮಡಿ ಗುಣವರ್ಮನು ಶ್ರುತಿ ಸಹಿತ, ಲಯಾಧಾರಿತ ಗಾನದ ಪರಿಣಾಮದ ಉತ್ಕೃಷ್ಟತೆಯನ್ನು ಹೇಳುವನಲ್ಲದೇ ವಾದ್ಯಗಳು ಅಂತಹ ಗಾಯನಕ್ಕೆ ಅನುಸಾರವಾಗಿ ನುಡಿಸುವುದನ್ನು ಕೆಯ್ಗೆ ನಾಲಿಗೆ ಕವಲ್ತವೊಲಾಗಿರೆ (ಪುಷ್ಪಪು. ೧೨೨೭) ಎಂಬ ಸುಂದರ ರೂಪಕವನ್ನು ಕೊಡುತ್ತಾನೆ. ವಾದ್ಯಗಳ ನುಡಿಸಾಣಿಕೆಯ ಸ್ಪಷ್ಟತೆಯನ್ನು ಕವಿ ಕೈಗಳೇ ನಾಲಗೆಯಂತೆ ಆಗಿ ವಾಧ್ಯಗಳಲ್ಲಿ ಹರಿತಂದ ನಾದ ತರಂಗದತ್ತ ನಮ್ಮ ಗಮನ  ಸೆಳೆಯುತ್ತಾನೆ. ಇಂತಹ ರೂಪಕಗಳು ಕವಿಗಳಿಗೆ ಅತಿ ಪ್ರಿಯವಾಗಿ ಅವರು ಬಳಸುವುದು ಸಾಮಾನ್ಯ ಎನಿಸುತ್ತದೆ.[24]

ಗುಣವರ್ಮನು ಮಾರ್ಗ, ದೇಶಿ[25] ಎರಡೂ ವಿಧವಾದ ಗಾಯನ ಹಾಗೂ ವಾದ್ಯಗಳ ವಾದನವನ್ನು ವರ್ಣಿಸುತ್ತಾನೆ.

ಕಂಕರಿಯ ಸಿವಿಱ ಪೆಂಪಿನ
ಝಂಕಟೆ ಬೊಂಬೞಯ ಪಱವದುಳಿಕೆಯ ಢಕ್ಕಾ
ಸಂಕುಳದ ತಾಳದುಲಿ ನೆಗ
ೞ್ದೇಂ ಕರ್ಣಾಮೃತ ಸಮುದ್ರ ಘೂರ್ಣನ ಮಾಯ್ತೊ (ಪುಷ್ಪಪು. ೧೨೨೭)

ಪುಷ್ಪದಂತನು ಕಂಕರಿ, ಸಿವಿಱ, ಝಂಕಟ, ಬೊಂಬುಱಿ, ಪಱವ, ಉಳಿಕೆ, ಢಕ್ಕಾ ಎಂಬ ವಾದ್ಯ ವೈವಿಧ್ಯದ ನಾದದ ಬಗ್ಗೆ ಹೇಳುತ್ತಿದ್ದಾನೆ. ಇವುಗಳೆಲ್ಲವೂ ತಾಳ ವಾಯಗಳೆಂಬುದಂತೂ ಖಚಿತ. ಕಂಕರಿಯನ್ನು ಒಂದು ಬಗೆಯ ವಾದ್ಯವೆಂದು ನಿಘಂಟುಕಾರರು ಹೇಳುತ್ತಾರೆ.[26] ಕಂಕರಿಯ ದನಿಗೆ ಕುಣಿಯನೇ ಸರ್ವೇಶ್ವರಂ ಎಂಬ ಪ್ರಯೋಗವನ್ನೂ ಹೇಳುವುದರಿಂದ ಇದು ತಾಳವಾದ್ಯವೆಂದು ಸ್ಪಷ್ಟವಾದರೂ ಅದರ ಸ್ವರೂಪ ಸ್ಪಷ್ಟವಾಗುವುದಿಲ್ಲ.

ಸಿವಿಱ ಎಂಬ ವಾದ್ಯ ವಿಶೇಷವನ್ನು ರನ್ನನೂ ಬಳಸುತ್ತಾನೆ. ಇದರ ಬಗ್ಗೆ ಅಲ್ಲಿ ಚರ್ಚಿಸಲಾಗಿದೆ. ಝಂಕಟೆಯು ಘನವಾದ್ಯದ ಜಯ ಘಂಟೆಯ ದೇಶೀ ಪದವೆಂದು ಅನುಮಾನಿಸಬಹುದು. ಝಂಕಟೆ>ಝಗಟ>ಜಯಘಂಟೆ. ಹೀಗೆ ಪದಪ್ರಯೋಗವನ್ನು ಊಹಿಸಬಹುದು. ಬೊಂಬುಳಿಯು ಬೊಮ್ಮಡಿ (ಬೊಂಬಡಿ) ಎಂಬ ಚರ್ಮ ವಾದ್ಯವಾಗಿರಬಹುದು.

ಪೞವವು ಪಣವವೆಂಬ ಅವನದ್ಧ ವಾದ್ಯ : ಹದಿನಾರು ಅಂಗುಲ ಉದ್ದ, ಎಂಟು ಅಂಗುಲ ವಿಸ್ತಾರವಿದ್ದು, ಐದು ಅಂಗುಲ ಮುಖದ ಪಣವದಲ್ಲಿ ಹತ್ತು ರಂಧ್ರವಿದ್ದು, ಮುಖವನ್ನು ಚರ್ಮದಿಂದ ಬಿಗಿದಿರುತ್ತಾರೆ. ಕುತ್ತಿಗೆಯಿಂದ ಇಳಿ ಬೀಳುವಂತೆ ಹಗ್ಗವನ್ನು ಹೊಂದಿಸಿರುತ್ತಾರೆ. ಕುತ್ತಿಗೆಯಿಂದ ಇಳಿ ಬೀಳುವಂತೆ ಹಗ್ಗವನ್ನು ಹೊಂದಿಸಿರುತ್ತಾರೆ. ವಾದ್ಯವನ್ನು ಮೇಲ್ಮುಖವಾಗಿ ಅಥವಾ ವಕ್ರವಾಗಿ ಹಿಡಿದು ಕ, ಠ, ನ, ತ, ಣಿಗಳಿಂದ ಕೂಡಿದ ಪಾಟಾಕ್ಷರಗಳನ್ನು ನುಡಿಸುತ್ತಾರೆ.[27] ವಾದ್ಯಗಳನ್ನು ನುಡಿಸುವುದು ಹಸ್ತಪ್ರಹಾರದಿಂದ. ಉಳಿಕೆಯು ಉಡುಕ್ಕಾ (ಹುಡುಕ್ಕಾ)ದ ರೂಪವಿರಬಹುದು. ಇದೊಂದು ಆಲಿಂಗ್ಯ ಪ್ರಕಾರದ ತಾಳವಾದ್ಯ. ಎರಡು ಮುಖದ ಒಂದು ಹಸ್ತ ಉದ್ದದ ಇಪ್ಪತ್ತೆಂಟು ಅಂಗುಲ ವ್ಯಾಸದ ಹುಡುಕ್ಕಾ ಎಂಬ ವಾದ್ಯಕ್ಕೆ ಆರು ರಂಧ್ರಗಳಿದ್ದು ಅವುಗಳನ್ನು ಹಗ್ಗಗಳಿಂದ ಬಿಗಿದಿರುತ್ತದೆ. ಹೆಗಲಿನಿಂದ ಇಳಿ ಬಿಟ್ಟುಕೊಂಡು ಬಲಗೈನಿಂದ ಈ ವಾದ್ಯವನ್ನು ನುಡಿಸಬೇಕು. ಎಲ್ಲ ವರ್ಗದ ಅಕ್ಷರಗಳೂ ನುಡಿವಂತೆ ನುಡಿಸಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಹುಡುಕ್ಕಾವನ್ನು ಆವುಜ ಎಂತಲೂ ಕರೆಯುವುದುಂಟು.[28]

ಢಕ್ಕಾ ಸಹ ಒಂದು ಚರ್ಮವಾದ್ಯ. ಇದರ ಲಕ್ಷಣ, ಸ್ವರೂಪಗಳನ್ನು ಹಿಂದೆ ವಿವರಿಸಿದೆ.[29] ಗುಣವರ್ಮನು ಉಲ್ಲೇಖಿಸುವ ಕಂಕರಿ, ಸಿವಿಱ, ಬೊಂಬುಳಿ ವಾದ್ಯಗಳು ಸಂಶೋಧನಾರ್ಹವಾಗಿವೆ. ಈಗ ಇವುಗಳ ಬಳಕೆ ಇಲ್ಲದೇ ಇರುವುದರಿಂದಲೂ ಅಥವಾ ಅವು ಇದೇ ಹೆಸರಿನಿಂದ ಬಳಕೆಯಾಗದೇ ಇರುವುದರಿಂದಲೂ ಈ ವಾದ್ಯಗಳ ಖಚಿತ ಸ್ವರೂಪವನ್ನು ನಿರೂಪಿಸಲು ಸಾಧ್ಯವಾಗದೆ ಇರಬಹುದು.

ಕಮಲಭವನೂ ಜಿನಮಾತೆಯ ಮುಂದೆ ನಡೆಯುವ ಸಂಗೀತಕ ಪ್ರಸಂಗವನ್ನು ವರ್ಣಿಸುತ್ತಾನೆ. ವೀಣೆಯನ್ನು ನುಡಿಸುತ್ತ ಹಾಡುತ್ತಿದ್ದ ದಿವಿಜಯವತಿಯರ ಗಾಯನವನ್ನು ಹೀಗೆ ಕೇಳಿಸುತ್ತಾನೆ :

ಅವಧಾನಂ ಸ್ಪರ ಪದತಾ
ಳವಿವರದೊಳಳಂಕೆಗೊಂಡು ರಾಗೋಚ್ಚರಣಂ |
ಸವಿಯಂ ಸಾಲಿಡುತಿರೆ ದಿವಿ
ಜವಧು ಜಿನಾಂಬಿಕೆಯ ಮುಂದೆ ಪಾಡುತ್ತಿರ್ದಳ್ ||       (ಶಾಂತೀಶ್ವ. ೧೩೨೨೫)

ಗಾಯಕಿ ಗೀತದಲ್ಲಿನ ಸಾಹಿತ್ಯ (ಪದ)ವನ್ನೂ, ವೀಣೆಯಲ್ಲಿ ಸ್ವರಗಳಿಂದ ನಾದವನ್ನು, ಸಾಹಿತ್ಯ ಹಾಗೂ ಗಾನಕ್ಕೆ ತಕ್ಕ ಹಾಗೆ ತಾಳವನ್ನು ಅಳವಡಿಸಿ ನುಡಿಸುತ್ತಿದ್ದಳು. ಸಾಹಿತ್ಯ (ಪದ) ಸ್ವರೋಚ್ಚಾರಣೆ, ಗಾನ ಹಾಗೂ ತಾಳ ಈ ನಾಲ್ಕರ ಅವಧಾನದೊಂದಿಗೆ ಹಾಡುತ್ತಿದ್ದ ಯುವತಿಯ ಗಾನದ ಅಪೂರ್ವಚಿತ್ರ ಇದು. ಶುದ್ಧ ಗಾನಾಮೃತದ ಸವಿಯನ್ನು ಜಿನಮಾತೆಗೆ ಉಣಬಡಿಸಿದುದನ್ನು ಕವಿ ವೀಣಾಗಾನದ ಪ್ರಾಯೋಗಿಕ ಅಂಶಗಳೊಡನೆ ನಿರೂಪಿಸುತ್ತಾನೆ. ಇದರ ನಂತರ ತಾಳವಾದ್ಯವನ್ನು ನುಡಿಸುತ್ತಿರುವ ಯುವತಿಯ ಸುಂದರ ಚಿತ್ರವನ್ನು ಕವಿ ಹೀಗೆ ರೇಖಿಸುತ್ತಾನೆ.

ತಳೆದೆಡಗಯ್ಯೊಳ್ ಡಕ್ಕೆಯ
ನಳವಡೆ ಮುರಿದಂಗಮೊಪ್ಪಿ ಕುಡುಪಿನ ಘಾತಂ |
ಗಳೊಳತಿ ಮೃದು ಶಬ್ದಂ ಸಂ
ಗಳಿಸುತ್ತಿರೆ ಬಾಜಿಸುತ್ತುಮಿರ್ದುಳದೊರ್ವಳ್ || (ಶಾಂತೀಶ್ವ. ೧೩೨೨೬)

ತ್ರಿಭಂಗಿ[30]ಯಲ್ಲಿ ನಿಂತು ಎಡಗೈಯಲ್ಲಿ ಢಕ್ಕೆಯನ್ನು ಹಿಡಿದು ಬಲಗೈಯಲ್ಲಿ ಕುಡುಪನ್ನು  (ಅವನದ್ಧ ವಾದ್ಯವನ್ನು ಬಾರಿಸುವ ಕೋಲು) ಹಿಡಿದು ಢಕ್ಕೆಗೆ ಪಾತ್ರವನ್ನು ಮಾಡುತ್ತ ಮೃದುವಾದ ಶಬ್ದವನ್ನು ಹೊರಡಿಸುತ್ತಿರುವ ಈ ವಾದಕಿಯ ಚಿತ್ರವನ್ನು ಕವಿ ಇಲ್ಲಿ ಕೊಡುತ್ತಾನೆ.[31]

ಮೃದಂಗದಲ್ಲಿ ವಾದ್ಯ ಪ್ರಬಂಧಗಳಾದ ಜತಿ[32] ತುಡುಕು[33], ಪಹರಣೆ[34], ಗತಿ[35], ಗಮಕ[36], ಕೌತ[37]ಗಳನ್ನು ವಿಶೇಷ ಜೋಕೆಯಿಂದ ಅಥವಾ ಅವಧಾನತ್ವದಿಂದ ಗಾನಕ್ಕೂ, ವೀಣಾ ವಾದನಕ್ಕೂ, ನರ್ತನಕ್ಕೂ ಸಂಗತವಾಗುವಂತೆ ನುಡಿಸಿದ ಮುರಜವಾದಕಿಯ ಬೆಡಗನ್ನು ಕವಿ ವರ್ಣಿಸುತ್ತಾನೆ :

ಜತಿ ಜೋಕೆ[38] ತುಡುಕು ಪಹರಣೆ
ಗತಿ ಗಮಕಂ ಕೌತ ಖಿಣಿ ಬೆಡಂಗಿನಿತುಂ ಸಂ
ಗತಿ ವಡೆಯ ವಾದನಕಳಾ
ವತಿ ಬಾಜಿಸುತಿರ್ದಳಂತು ಮುರಜಮನೊರ್ವಳ್ ||      (ಶಾಂತೀಶ್ವ. ೧೩೨೨೭)

ಖಿಣಿಯ ಸ್ವರೂಪ ಸ್ಪಷ್ಟವಾಗುವುದಿಲ್ಲ, ಕಮಲಭವ ಹೇಳುವ ವಾದ್ಯ ಪ್ರಬಂಧಗಳು ಪಾರ್ಶ್ವಪಂಡಿತನು ಹೇಳುವ ವಾದ್ಯ ಪ್ರಬಂಧಗಳಿಗಿಂತ ಭಿನ್ನವಾಗಿದ್ದರೂ, ಇವೂ ೨೦ ವಾದ್ಯ[39] ಪ್ರಬಂಧಗಳಲ್ಲೇ ಸೇರುವಂತಹ ಪ್ರಬಂಧಗಳು.

ಉತ್ಸವಗಳಲ್ಲಿ ವಾದ್ಯಗಳ ಬಳಕೆಯನ್ನು ಕಮಲಭವನೂ ಉಲ್ಲೇಖಿಸುತ್ತಾನೆ. ಶಾಂತೀಶ್ವರನ ಜನನದಿಂದ ಸುರರೂ ಪುರ ಜನರೂ ಸಂತೋಷದ ಉತ್ಸವಗಳನ್ನು ಮಾಡುತ್ತಾರೆ. ಇಂದ್ರನೂ ಮೆರವಣಿಗೆಯಲ್ಲಿ ಆನಂದ ನೃತ್ಯವಾಡಲು ಬರುತ್ತಾನೆ.

ಜೈನಧರ್ಮದ ಒಂದು ಧಾರ್ಮಿಕ ನಂಬಿಕೆಯಿಂದ ೩೨ ಮುಖಗಳುಳ್ಳ ಆನೆಯನ್ನು ಏರಿ ಇಂದ್ರನು ಸಕಲ ಗಾಯಕರು ಹಾಗೂ ನರ್ತಕ, ನರ್ತಕಿಯರೊಡನೆ ಜಿನಜನ್ಮಾಭಿಷೇಕಕ್ಕೆ ಬರುತ್ತಾರೆ. ಈ ೩೨ ಮುಖದ ಗಜದ ದಂತಗಳಲ್ಲಿ ೩೨ ಕೊಳಗಳು ಅವುಗಳಲ್ಲಿ ೩೨ ದಳಗಳುಳ್ಳ ಕಮಲಗಳು, ಆ ಕಮಲಗಳಲ್ಲಿ, ೩೨ ಜನ ಅಪ್ಸರೆಯರು ನರ್ತಿಸುತ್ತಿರುತ್ತಾರೆ. ಇದು ಸಾಮಾನ್ಯವಾಗಿ ಎಲ್ಲ ಜೈನ ಕಾವ್ಯಗಳಲ್ಲಿ ಬರುವ ಒಂದು ಪರಿಕಲ್ಪನೆ ಇವರ ನರ್ತನಕ್ಕೆ ಮೃದಂಗ, ವೀಣೆ ಹಾಗೂ ಕಹಳೆಗಳು ವಾದ್ಯಗಳಾಗಿ ಒದಗಿರುವುದನ್ನು ಕವಿ ಹೀಗೆ ಹೇಳುತ್ತಾನೆ.

ಅಲಿತಂಡಕ್ಕಾರವಂ ಮಿಕ್ಕೆಸೆಯ ಮೃದು ಮೃದಂಗ ಪ್ರಣಾದಂ ಪದೞ್ದು ||
ಣ್ಮೆಲಸದ್ವಾಂಶಾದೀವೀಣಾ ತಳಕಳರುತಿಗೀತಸ್ವರಂ ಪೂಣ್ಮೆತತ್ಕಾ |
ಹಲರಾವಂ ಮೇಳವಂಬೆತ್ತೊಗೆಯ ಮಿಗೆ ಚತುರ್ಭಂಗಿ ನೃತ್ಯಂ ವಿಚಿತ್ರಾ
ವಿಲ ಮಾಗಲ್ ರಾಗದಿಂ ನರ್ತಿಸುತಿರೆದಳದೊಳ್ದೇವ ಕಾಂತಾಕದಂಬಂ || (ಶಾಂತೇಶ್ವ. ೧೪೭೩)

ಕಹಳೆ ವಾದ್ಯವನ್ನು ನೃತ್ಯಕ್ಕೆ ಹಿನ್ನೆಲೆಯಾಗಿ ಕಮಲಭವ ಹೇಳಿದ್ದಾನೆ. ಕಹಳೆಯು ಒಂದು ಗಾಳಿವಾದ್ಯ (ಸುಷಿರ) ಇದು ಕರ್ನಾಟಕದಲ್ಲಿ ಅನೇಕ ಶತಮಾನಗಳಿಂದ ಪ್ರಚಾರದಲ್ಲಿದ್ದ ವಾದ್ಯವೆಂದು ತಿಳಿದು ಬಂದಿದೆ. ದೇವಸ್ಥಾನದಲ್ಲಿ ಮತೀಯ ಆಚರಣೆಗಳ ಸಂಗೀತ ನೃತ್ಯಗಳಲ್ಲಿ ಇದನ್ನು ಬಳಸುತ್ತಿದ್ದ ಉಲ್ಲೇಖಗಳಿವೆ. ಇದನ್ನು ಬೆಳ್ಳಿ, ತಾಮ್ರ, ಚಿನ್ನ ಮುಂತಾದ ಲೋಹಗಳ ಮಿಶ್ರಣದಿಂದ ಮಾಡುತ್ತಿದ್ದರೆಂದು ಮಾಹಿತಿ ಇದೆ.[40] ಇಂದು ಕಂಚಿನ ಕಹಳೆಗಳು ಆ ಸ್ಥಾನವನ್ನು ತುಂಬಿವೆ. ಸುಮಾರು ಮೂರು ಮೀಟರ್ ಉದ್ದ, ಅರ್ಧ ಮೀಟರ್ ವ್ಯಾಸ ಕೆಳಮುಖದ ವ್ಯಾಸವಿದ್ದು ~ ಈ ಆಕಾರದ ಕೊಳವೆಯದು. ಊದುವ ತುದಿಯ ಚಿಕ್ಕದಾಗಿರುತ್ತದೆ. ಇದರ ಉದ್ದ ಮತ್ತು ಭಾರಕ್ಕಾಗಿ ಇದರ ಅಗಲವಾದ ಮುಖವನ್ನು ನೆಲದ ಮೇಲೆ ಅಥವಾ ಪೀಠದ ಮೇಲೆ ಇಟ್ಟು ನಿಂತು ಊದುತ್ತಾರೆ.[41] ಹರಿಪಾಲನು ಕಹಳೆಯ ಲಕ್ಷಣವನ್ನು ಹೇಳುತ್ತಾನೆ. ಇದು ದತ್ತೂರ ಪುಷ್ಪದ ಆಕಾರದ್ದೆಂದು ವರ್ಣಿಸುತ್ತಾನೆ.[1] ಸಂ.ಶಾ.ಚಂ. (ಎಲ್.ರಾಜಾರಾಮ್) ಪು.೧೮.
(ಉಪಾಂಗ ನೋಡಿ ರೇಖಾ ಚಿತ್ರ ಗಾಳಿವಾದ್ಯಗಳು)

[2] ಪ್ರತಿಸ್ವರದಿಂದಲೂ (ಸಪ್ತಸ್ವರದಲ್ಲಿ) ಆರೋಹಣ ಕ್ರಮದಲ್ಲಿ ಸಪ್ತಸ್ವರಗಳ ಮೂರ್ಛನೆ ನಿರ್ಮಿಸಲ್ಪಟ್ಟರೆ ಗ್ರಾಮ. ಇವು ೩ ಷಡ್ಜ, ಮಧ್ಯಮ, ಗಾಂಧಾರ ಗ್ರಾಮಗಳು. ಸಂ. ಶಾ. ಚಂ. (ಎಲ್.ರಾಜಾರಾಮ್) ಪು. ೧೯.

[3] ಜಾತಿ – ಶ್ರುತಿ, ಸ್ವರ ಹಾಗೂ ಗ್ರಹಗಳ ಸಮೂಹ. (ಭರಕೋ. (ಸಂ. ರಾಮಕೃಷ್ಣ ಕವಿ) ತಿರುಪತಿ) ಪು. ೨೨೭.

[4] ಜಾತಿ – ಶ್ರುತಿ, ಸ್ವರ ಹಾಗೂ ಗ್ರಹಗಳ ಸಮೂಹ. (ಭರಕೋ. (ಸಂ. ರಾಮಕೃಷ್ಣ ಕವಿ) ತಿರುಪತಿ) ಪು. ೨೨೭.

[5] ಢಕ್ಕಾ – ವ್ಯಾಖ್ಯತಾ ಡವಸೇ ನೈವ ಢಕ್ಕಾ ಕಿಂತು ಮುಖದ್ವಯಮ್
ತ್ರಯೋದಶಾಂಗುಲಂ ತಸ್ಯಾ ಧೃತ್ವಾತಾಂ ವಾಮಪಾಣಿನಾ ||
ತಜ್ಞೇ ದಕ್ಷಿಣ ಹಸ್ತಸ್ಥಕೋಣಘಾತೇನ ವಾದಯೇತ್ |
ದೇಂಕಾರಃ ಪಾಟವರ್ಣಃಸ್ಯುರ್ನಿಶಂಕೇನೇತಿ ಕೀರ್ತಿತಮ್ ||
ಸಂಗೀರ. . ೧೦೯೫೯೬ (ಸಂ. ಸುಬ್ರಹ್ಮಣ್ಯಶಾಸ್ತ್ರಿ ಹಾಗೂ ಅನುಬಂಧ . ಪರಿಭಾಷೆ)

[6] ನೋಡಿ ಇದೇ ಅಧ್ಯಾಯದಲ್ಲಿ ಚರ್ಚಿಸಿದೆ. (ಪು.೨೧-೨೨).

[7] ನಟುವಾಂಗ – ನೋಡಿ ರೇಖಾಚಿತ್ರ. (ಪು. ೪೭, ೪೮).

[8] ನೋಡಿ ಆದಿಪು. ನೃತ್ಯ ಪ್ರಸಂಗ. (ಅಧ್ಯಾಯ-೩).

[9] ದೇಶೀ ಪಟಹವೇವಾಹುರಿಮಡ್ಡಾವುಜಂ ಜನಾಃ||
ಸಂಗೀರ. (ಸಂ.ಪಂ.ಎಸ್.ಸುಬ್ರಹ್ಮಣ್ಯಶಾಸ್ತ್ರಿ) ಅ. ೬-೮೨೪

[10] ಅ.೨೯, ಆತೋದ್ಯ ವಿಧಾನ. ಅ.೩೦, ಸುಷಿರಾತೋದ್ಯ.

[11] ನಾಗಚ. ೨೨.೭೧,  ಭರಚ. ೧೨-೩೯, ಗುರುಚ. ೨-೨೩.

[12] ಸಂಗೀತಕ – ನೋಡಿ ಪು. ೨೩.

[13] ಅಂಗೈಶ್ಚ ಧಾತುಭಿರ್ಬದ್ಧಂ ನಿಬದ್ಧಂತ್ಪಧುನೋಚ್ಯತೇ
ಅನಿಬದ್ಧಮಬಂಧತ್ಪಾದಾಲಪ್ತಿಃ ಸಾ ಪುರೋದಿತಾ ||
ನರ್ತನಿ – (ಸಂ.ರಾ. ಸತ್ಯನಾರಾಯಣ ಗಾಯಕ ಪ್ರಕರಣ )

[14] ಅಂಗೈಶ್ಚ ಧಾತುಭಿರ್ಬದ್ಧಂ ನಿಬದ್ಧಂತ್ಪಧುನೋಚ್ಯತೇ
ಅನಿಬದ್ಧಮಬಂಧತ್ಪಾದಾಲಪ್ತಿಃ ಸಾ ಪುರೋದಿತಾ ||
ನರ್ತನಿ – (ಸಂ.ರಾ. ಸತ್ಯನಾರಾಯಣ ಗಾಯಕ ಪ್ರಕರಣ )

[15] ಪ್ರಬಂಧೋ ರೂಪಕಂ ವಸ್ತು ನಿಬದ್ಧ ಸ್ತ್ವಾಭಿಧಾತ್ರಯಮ್ ||
ಸಂ..ಸಾ. . (ಸಂ.ಗಣಪತಿ ಶಾಸ್ತ್ರಿ)

[16] ನರ್ತನಿ (ಸಂ.ರಾ. ಸತ್ಯನಾರಾಯಣ) ಪು. ೫೦೬-೭ರ ಅಡಿಟಿಪ್ಪಣಿ.

[17] ನೋಡಿ ಪು. ೧೪.

[18] ಪಂಡಿತಾ, ಪಾಲ್ಕುರಿಕೆ ಸೋಮನಾಥ – ಪು. ೪೪೩ (ಚಿಲಕುರಿ ನಾರಾಯಣ ರಾವ್ ಪರಿಷ್ಕತ) ೧೯೩೯.

[19] ಪಂಡಿತಾ, ಪಾಲ್ಕುರಿಕೆ ಸೋಮನಾಥ – ಪು. ೪೪೩ (ಚಿಲಕುರಿ ನಾರಾಯಣ ರಾವ್ ಪರಿಷ್ಕತ) ೧೯೩೯.

[20] ನೋಡಿ ಇದೇ ಅಧ್ಯಾಯ ಪು ೨೩ ಹಾಗೂ ಅನುಬಂಧ ಅ.ಪರಿಭಾಷೆ.

[21] ಮಾರ್ದಂಗಿಕ – ನೋಡಿ ಅನುಬಂಧ ಅ. ಪರಿಭಾಷೆ.

[22] ವಿವರಗಳಿಗೆ ನೋಡಿ ಅನುಬಂಧ ಅ. ಪರಿಭಾಷೆ (ಕವುತ, ದೇಂಕಾರ, ಮಲಪ, ತುಡುಂಕು, ಜಂಕೆ, ಅಂತಿರಿ, ಜತಿ, ರಿಗ್ಗವಣೆ, ಪಹರಣೆ).

[23] ನೋಡಿ ರೇಖಾಚಿತ್ರ ಪು. ೪೭.

[24] ನಾಗಚಂದ್ರ (ಮಲ್ಲಿಪು ೮-೧೫).

[25] ನೋಡಿ ಅನುಬಂಧ ಅ. ಪರಿಭಾಷೆ.

[26] ಕಸಾಪ. ನಿಘಂಟು ಸಂ.೨ ಪು.೧೩೨೪.

[27] ನಾಟ್ಯಶಾ. (ಅನು: ಶ್ರೀರಂಗ) ಅ. ೩೩ ಪು. ೪೬೯.

[28] ಸಂಗೀರ, (ಸಂ. ಸುಬ್ರಹ್ಮಣ್ಯ ಶಾಸ್ತ್ರಿ) ಅ. ೬. ಪು. ೧೦೭೩-೧೦೭೭ ನೋಡಿ ರೇಖಾ ಚಿತ್ರ ಅವನದ್ಧ ವಾದ್ಯಗಳು

[29] ನೋಡಿ ಪು. ೨೪.

[30] ತ್ರಿಭಂಗಿ – ಮೂರು ಕಡೆಗೆ ಬಾಗಿದ ಶರೀರ ಸೌಷ್ಠ.

[31] ಬೇಲೂರಿನ ಚನ್ನಕೇಶವ ದೇವಾಲಯದ ಮುರಜಾಮೋಜಿ (ಸಂ.೧೧) ಮದನಿಕೆಗೆ ಈ ಭಂಗಿಯನ್ನು ಸಮೀಕರಿಸಬಹುದು.

[32] ನೋಡಿ ಅನುಬಂಧ ಅ. ಪರಿಭಾಷೆ.

[33] ನೋಡಿ ಅನುಬಂಧ ಅ. ಪರಿಭಾಷೆ.

[34] ನೋಡಿ ಅನುಬಂಧ ಅ. ಪರಿಭಾಷೆ.

[35] ನೋಡಿ ಅನುಬಂಧ ಅ. ಪರಿಭಾಷೆ.

[36] ನೋಡಿ ಅನುಬಂಧ ಅ. ಪರಿಭಾಷೆ.

[37] ನೋಡಿ ಅನುಬಂಧ ಅ. ಪರಿಭಾಷೆ.

[38] ನೋಡಿ ಅನುಬಂಧ ಅ. ಪರಿಭಾಷೆ.

[39] ಇಪ್ಪತ್ತು ವಾದ್ಯ ಪ್ರಬಂಧಗಳು – ಜತಿ, ಓತಾ, ಜೋಡಣಿ, ಅವಚ್ಛೇದ, ಚಂಡಣಿ, ಪದ, ಸಮಹಸ್ತ, ಪೈಸಾರ, ತುಡುಕು, ಓತ್ಪರಂ, ಝೇಂಕಾರ ದೇಂಕಾರ, ಮಲಪ, ಮಲಪಾಂಗ ಪಹರಣ, ಅಂತಿರಿ, ದುವಕ್ಕರಿ, ಜವನಿಕ, ಪುಷ್ಪಾಂಜಲಿ. ಸಂ.ಸ.ಸಾ (ಸಂ. ಗಣಪತಿಶಾಸ್ತ್ರಿ)

[40] ಬಿ.ಸಿ. ದೇವ. ಸಂಗೀತ ವಾದ್ಯಗಳು ಮತ್ತು ನೋಡಿ ಅನುಬಂಧ ಅ. ಪರಿಭಾಷೆ.

[41] ನೋಡಿ ರೇಖಾಚಿತ್ರ ಪು. ೨೯.