ಕುಡಿಕೆ, ಮಡಿಕೆಗಳನ್ನು ಮಾಡುವ ಕಾಯಕವನ್ನುಳ್ಳ ಕುಂಬರ ಗುಂಡಯ್ಯನು ಶಿವನನ್ನು ನಿತ್ಯಪೂಜೆಯಲ್ಲಿ ತನ್ನ ನರ್ತನದಿಂದ ತಣಿಸುವಾಗ ಆತನಿಗೆ ಒದಗಿದ ವಾದ್ಯಗಳ ಬಗ್ಗೆ ಹರಿಹರ ವಿಶೇಷವಾಗಿ ವಿವರಿಸುತ್ತಾನೆ.

ತಟಪಟಧಂಧಣದಿಂಧಿಮಿಕೆನಿಸುವ
ತಟಕಂ ಕಟ ದಿಕ್ಕಟ ತಟಕೆನಿಸುವ
ಹಲಗೆಯ ಶಬ್ದಂ ಕರಡೆಯ ಶಬ್ದಂ
ಹಲಗೆಯ ಶಬ್ದಂ ಮುರುಜೆಯ ಶಬ್ದಂ
ಮಡಕೆಯ ದನಿಯಾವುಜದ ಸುನಾದಂ
ಮಡಕೆಯ ದನಿ ಹೊಸ ಕಹಳೆಯನಾದಂ
ತಾಳಂ ಕೌಸಾಳದ ಹೊಸ ನಾದಂ
ಶೂಲಿಗೆ ವೇಳವಣಿಯ ಮೃದುನಾದಂ (ಹರಿರ, ಕುಂಬರ ಗುಂಡಯ್ಯ ಪು. ೬೨, ೬೩)

ಗುಂಡಯ್ಯನ ನೃತ್ಯಕ್ಕೆ ಹರಿಹರ ಅವನದ್ಧ, ಸುಷಿರ ಹಾಗೂ ಘನವಾದ್ಯಗಳನ್ನು ಬಳಸಿದ್ದಾನೆ.

ಹಲಗೆಯು ಅತ್ಯಂತ ಸರಳವಾದ ಒಂದು ಚರ್ಮವಾದ್ಯ. ವೃತ್ತಾಕಾರದಲ್ಲಿ ಮಣಿಸಿದ ಕಬ್ಬಿಣದ ಬಳೆಗೆ ಚರ್ಮವನ್ನು ಹಗ್ಗಗಳ ಮೂಲಕ ಬಂಧಿಸಿರುತ್ತಾರೆ. ಈ ವಾದ್ಯದ ಮುಖವು ಮೇಲಾಗಿರುವ ಎಡಗೈಯಲ್ಲಿ ಹಿಡಿದು ಕೋಲು ಅಥವಾ ಕೈಯಿಂದ ಹೊಡೆದು ನಾದವನ್ನು ಹೊರಡಿಸುತ್ತಾರೆ. ಇದನ್ನು ಕುತ್ತಿಗೆಯಿಂದ ತೂಗಿ ಹಾಕಿಕೊಂಡು ಎರಡೂ ಕೈಗಳಿಂದ ನುಡಿಸಬಹುದು. ಡಪ್ಪು, ತಮ್ಮಟೆ, ತಪ್ಪಟೆ ಎಂದು ಭಾರತದ ನಾನಾ ದೇಶಭಾಗಗಳಲ್ಲಿ ಪ್ರಸಿದ್ಧವಿರುವ ಈ ಹಲಗೆ ಕರ್ನಾಟಕದ ಪ್ರಮುಖ ಜಾನಪದ ವಾದ್ಯಗಳಲ್ಲಿ ಒಂದು.

[1]

4_6_PP_KUHಕರಡೆಯನ್ನು ಶಾರ್ಙ್ಗದೇವ ಕರಟಾ ಎಂದಿದ್ದಾನೆ. ಬೀಜ ವೃಕ್ಷದ ಮರದಿಂದ ಕೊರೆದು ಎರಡೂ ಮುಖಗಳೂ ಒಂದೇ ಅಳತೆಯಲ್ಲಿದ್ದು ಆಕಾರದಲ್ಲಿ ದೊಡ್ಡದಾಗಿರುತ್ತದೆ. ಎರಡೂ ಮುಖಗಳ ಕಬ್ಬಿಣದ ಬಳೆಗೆ ಚರ್ಮಾಚ್ಛಾದನವನ್ನು ಮಾಡಿರುತ್ತಾರೆ. ಹಗ್ಗಗಳಿಂದ ಎರಡೂ ಮುಖಗಳನ್ನು ಬಿಗಿದಿರುತ್ತಾರೆ. ಇದನ್ನು ಹೆಗಲಿಗೆ ತೂಗು ಹಾಕಿಕೊಂಡು ಕೋಲುಗಳಿಂದ ಹೊಡೆದು ನಾಧವನ್ನು ಉತ್ಪತ್ತಿ ಮಾಡುತ್ತಾರೆ. ಇದೂ ಕೂಡ ಒಂದು ದೇಶೀ ವಾದ್ಯ.[2] ಇದರಲ್ಲಿ ತಿರಿಕು ತಿರಿಕು ತಿರಿಕಿಟ ಎಂಬ ಪಾಟಗಳು ಹೆಚ್ಚಾಗಿ ಕೇಳಿ ಬರುತ್ತವೆ.

ಮುರಜೆಯ ನುಡಿಕಾರವನ್ನೂ ಕವಿ ವಿವರಿಸುತ್ತಾನೆ. ಪ್ರಮುಖ ಅವನದ್ಧ ವಾದ್ಯಗಳಲ್ಲಿ ಮುರಜೆಗೆ ಪ್ರಥಮ ಸ್ಥಾನ.[3]

ಮುಂದೆ  ಮಡಕೆಯ ದನಿಯನ್ನೂ ಹೇಳುತ್ತಾನೆ. ಮಡಕೆ, ಕುಡಿಕೆಗಳನ್ನು ತಯಾರಿಸುವ ಕುಂಬಾರ ಅದನ್ನೇ ಒಂದು ವಾದ್ಯವನ್ನಾಗಿ ನಾದವನ್ನು ಹೊರಡಿಸುತ್ತಾನೆ. ಮಡಕೆಯೇ ಘಟ ಎಂದು ಈಗ ಪ್ರಸಿದ್ಧವಾಗಿರುವ ತಾಳವಾದ್ಯವೆಂದು ವಿದ್ವಾಂಸರ ಮತ.[4] ಮಡಕೆಯ ನಾದದ ಜೊತೆಗೆ ಕಹಳೆಯ ನಾದವೂ ಸೇರಿದುದಾಗಿ ನಿರೂಪಿಸುತ್ತಾನೆ.

ಕಹಳೆಯು ಒಂದು ಸುಷಿರ ವಾದ್ಯ. ಇದೂ ದೇವಾಲಯಗಳಲ್ಲಿ ಬಳಸುತ್ತಿದ್ದ ಒಂದು ವಾದ್ಯ.[5] ಕಂಸಾಳೆ (ಕೌಸಾಳೆ) ತಾಳವು ಗುಂಡಯ್ಯನ ನೃತ್ಯದಲ್ಲಿ ಒಂದು ಅಂಗವಾಗಿದ್ದಿತು. ಬಟ್ಟಲು ಹಾಗೂ ತಟ್ಟೆಯಾಕಾರದ ತಾಳಗಳನ್ನು ಎರಡೂ ಕೈಗಳಲ್ಲಿ ಹಿಡಿದು ಕುಣಿಯುತ್ತ  ತಾಳಗಳನ್ನು ತಟ್ಟತ್ತಾ ಸಾಗುವ ಕಂಸಾಳೆ ನೃತ್ಯ ಕರ್ನಾಟಕದ ಆಕರ್ಷಕವೂ, ಪ್ರಮುಖ ಜಾನಪದ ನೃತ್ಯವೂ ಆಗಿದೆ.[6] ಹೀಗೆ ಹರಿಹರನು ಜಾನಪದ ವಾದ್ಯಗಳನ್ನೇ ಬಳಸಿ ಮಾನವನು ಭಾವ ಸ್ಪಂದನಗಳಿಗೆ ಸ್ವಯಂ ಪ್ರೇರಿತವಾಗಿ ಕುಣಿಯುವ ಲಯಬದ್ಧವಾದ ಅಮೋಘ ನೃತ್ಯ ಚಿತ್ರವನ್ನು ದೃಶ್ಯಮಾನವಾಗಿಸುತ್ತಾನೆ.

ಕವಿ ಪದ್ಮಣಾಂಕನು ಪದ್ಮರಸವನ್ನು ಎದುರುಗೊಳ್ಳುವಾಗ ನಡೆದ ಸಂಗೀತ ಪ್ರಸಂಗದಲ್ಲಿ ತತ ಮೊದಲಾದ ಚತುರ್ವಿಧ ವಾದ್ಯಗಳ ಎಲ್ಲ ಪ್ರಭೇದಗಳನ್ನು ಉಲ್ಲೇಖಿಸುತ್ತಾನೆ. ನಂತರ ಪ್ರತಿಯೊಂದು ಅವನದ್ಧ ವಾದ್ಯಕ್ಕೂ ಒಂದೊಂದು ನಿರ್ದಿಷ್ಟ ತಾಳವನ್ನೂ ಸೂಚಿಸಿ ಅವುಗಳ ಮುಲಕ ವಾದ್ಯ ಪ್ರಬಂಧಗಳನ್ನು ನುಡಿಸಿದರೆಂದೂ, ತಾಳಧರನು ಮಾರ್ಗತಾಳಗಳನ್ನು ಹಾಗೂ ಸುಡಾಡಿ (ಸೂಳಾದಿ) ತಾಳಗಳನ್ನು ಬಾಯಿಯಲ್ಲಿ ಉಚ್ಚರಿಸುವುದನ್ನು ಅತ್ಯಂತ ದೀರ್ಘವಾಗಿ ಅವನು ವರ್ಣಿಸುತ್ತಾನೆ. ಅಲ್ಲದೆ ಗಾಯನ ವಿಧಾನ, ಗಾಯಕರ ಗುಣದೋಷಗಳನ್ನು ಸಹ ಹೇಳುತ್ತಾನೆ.[7] ಕವಿ ಪದ್ಮಣಾಂಕನು ಇಲ್ಲಿ ಸಂಗೀರ.ದಲ್ಲಿ ಉಕ್ತವಾದ ವಾದ್ಯ ಪ್ರಭೇದಗಳನ್ನೇ ಹೇಳುತ್ತಾನೆ. ಒಟ್ಟಿನಲ್ಲಿ ಈತನ ವಾದ್ಯಗಳ ವಿವರಣೆ ಸಂಗೀತ ಕ್ಷೇತ್ರಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ.

ಹಂಪೆಯ ವಿರೂಪಾಕ್ಷನ ಎದುರು ನಡೆಯುವ ನೃತ್ಯ ಪ್ರಸಂಗವನ್ನು ಕವಿ ಚಂದ್ರಶೇಖರನು ಸೂಕ್ಷ್ಮ ವಿವರಗಳೊಂದಿಗೆ, ಕನ್ನಡ ಸಾಹಿತ್ಯದಲ್ಲೇ ಅದ್ವಿತೀಯವಾಗಿ ವರ್ಣಿಸಿದ್ದಾನೆ. ಈತ ಪೂರ್ವರಂಗ ವಿಧಿಗಳನ್ನು ಹೇಳದೆ, ನೇರವಾಗಿ ನೃತ್ಯಕ್ಕೆ ಒದಗುವ ಹಾಡುಗಾರಿಕೆಯಿಂದ ಆರಂಭಿಸುತ್ತಾನೆ.

ಎಕ್ಕಲ, ಯಮಳ ಹಾಗೂ ವೃಂದಗಾರರೆಂಬ ಮೂರು ತರಹದ ಗಾಯಕರಲ್ಲಿ ಮುಖರಿ ಗಾಯಕನು ದಂಡಿಗೆಯನ್ನು ಅದರ ಚೀಲದಿಂದ ಹೊರತೆಗೆದು ಶ್ರುತಿ ಮಾಡುವ ವಿಧಾನವನ್ನು ಸ್ಪಷ್ಟವಾಗಿ ಕೊಡುತ್ತಾನೆ.

ಗವಸಣಿಗೆಯನುರ್ಚಿ ತುದಿವೆರಲಿಂ ತಂತಿಗಳಂ ಮಿಡಿದು ನೋಡಿ ಎಡಗೈಯಿಂದ ಜೀವಾಳಮಂ ತಿರ್ದಿ ಭೂಸುರನಂತೆ ಶ್ರುತಿಯ ನಾರೈದು ಷಡ್ಜ ಪಂಚಮ ಕಟ್ಟಳೆಯಂ ತನ್ನ ಶಾರೀರಕ್ಕೆ ಸರಿಯಾಗಿ ಮೇಳೈಸಿ (ಪಂಪಾವ. ೭೪ .)

ಶಾಸ್ತ್ರಗಳು ಎಕ್ಕಲ (ಒಂಟಿ) ಯುಗಳ ಹಾಗೂ ವೃಂದಗಾಯಕರು ಹಿನ್ನೆಲೆ ಗಾಯನದಲ್ಲಿರಬೇಕಾದ ತ್ರಿವಿಧ ಗಾಯಕರನ್ನು ಹೇಳುತ್ತವೆ.[8] ಇವರಿಗೆ ನಾಯಕನೇ ಮುಖರಿ ಗಾಯಕ ವಾದ್ಯವೃಂದ ಹಾಗೂ ಗಾಯಕರ ನಾಯಕನಿಗೆ ಮುಖರಿ ಎಂಬ ಹೆಸರು ಇದೆ.[9] ಗಾಯಕರ ಸಂಬಂಧವಾಗಿ ಅಷ್ಟೇ ಅಲ್ಲದೇ ಆಯಾ ವಾದ್ಯಗಳ ಗುಂಪಿನ ನಾಯಕರಿಗೆ ಮುಖರಿ ಗಾಯಕ, ಮುಖರಿ ವಾದಕ, ಮುಖರಿ ಮಾರ್ದಂಗಿಕ ಹೀಗೆ ಕಾವ್ಯಗಳಲ್ಲಿ ಬಳಸುವ ಪದಗಳಿಗೆ ಶಾಸ್ತ್ರಾಧಾರವೂ ಇದೆ. ಮುಖರಿ ಮಾರ್ದಂಗಿಕನು ಗೀತ, ವಾದನ ನೃತ್ತಗಳಲ್ಲಿ ವಿಚಕ್ಷಣನಾಗಿ ರಂಗಭೂಮಿಯಲ್ಲಿ ನರ್ತಿಸುವ ನರ್ತಕಿಯ ಅರ್ಧಾಂಗದಂತೆ ಮೃದಂಗವನ್ನು ನುಡಿಸುತ್ತಿದ್ದು, ಮಾರ್ಗದರ್ಶಕನಾಗಿ ಇಡಬೇಕೆಂದು ಶಾಸ್ತ್ರಕಾರರು ಹೇಳುತ್ತಾರೆ.[10]

ಮೇಲಿನ ಸಂದರ್ಭದಲ್ಲಿ ಮುಖರಿಯು ಗಾಯಕರ ನಾಯಕ, ಈತ ಶ್ರುತಿಗೆ ಆಧಾರವಾದ ದಂಡಿಗೆಯನ್ನು ಶ್ರುತಿಮಾಡುವ ವಿಧಾನದಲ್ಲಿ ಬಲಗೈಯಲ್ಲಿ ತಂತಿಯನ್ನು ಮೀಟುತ್ತ, ಶ್ರುತಿಯ ಹೇಳುತ್ತಾನೆ. ಜೀವಾಳವು ದಂಡಿಗೆ[11] ಅಥವಾ ತಂಬೂರಿಯ ತುದಿಯಲ್ಲಿ ನೂಲಿನ ಅಥವಾ ಕಂಬಳಿಯ ದಾರದ ತುಣುಕುಗಳನ್ನು ತಂತಿ ಹಾಗೂ ಬ್ರಿಡ್ಜ್‌ನ ಮಧ್ಯೆ ತೂರಿಸಿ ನಾದದಲ್ಲಿ ಝೇಂಕಾರವನ್ನು ಹೊರಡಿಸಲಾಗುತ್ತದೆ. ಹೀಗೆ ಶ್ರುತಿಯು ದೊರಕಿದ ನಂತರ ತ್ರಿಸ್ಥಾನ[12]ಗಳಲ್ಲಿ ಗ್ರಾಮರಾಗ[13]ಗಳನ್ನು ಗಮಕ ಸಹಿತವಾಗಿ, ದೋಷರಹಿತವಾಗಿ ಹಾಡಿದ ವಿವರಣೆ ಬರುತ್ತದೆ. ನಂತರ ಸೂಳಾದಿ[14] ಸಪ್ತತಾಳಗಳ ಬಂಧಗಳ ಹಾಡನ್ನು ತಾಳಲಯಬದ್ಧವಾಗಿ ಹಾಡಿದರೆಂದು ಚಂದ್ರಶೇಖರನು ವಿವರಿಸುತ್ತಾನೆ.

ಎರಡನೆಯದಾಗಿ ಗೀತ, ವಾದ್ಯ ಹಾಗೂ ನೃತ್ಯಗಳ ಪ್ರಾಣದಂತಿರುವ ತಾಳ ಹಾಘೂ ತಾಳವನ್ನು ಸಮರ್ಥವಾಗಿ ನಡೆಸಬಲ್ಲ ತಾಳಧಾರಿಯ ಬಗ್ಗೆ ಚಂದ್ರಶೇಖರ ಕವಿ ವಿಶೇಷವಾದ ಮಹತ್ವ ಕೊಟ್ಟಿರುವುದನ್ನು ಗಮನಿಸಬಹುದು. ಶಾರ್ಙ್ಗದೇವ ಸೋಮೇಶ್ವರರೂ ತಾಲ ವಿಹೀನವಾದ ಗೀತ, ವಾದ್ಯ ಹಾಗೂ ನೃತ್ಯಗಳು ಶೋಭಿಸಲಾರವು ಎಂದಿದ್ದಾರೆ.[15]

ತಾಳದಲ್ಲಿ ಮಾರ್ಗ ಹಾಗೂ ದೇಶಿ ಎಂದು ಎರಡು ವಿಧ.[16] ವಿರೂಪಾಕ್ಷನ ಓಲಗದಲ್ಲಿ ದೇಶಿ ತಾಳಧರನ ಪ್ರಸ್ತಾಪವಿದೆ. ತಾಳಧರನು ತನ್ನ ಕೈಗಳಲ್ಲಿ ತಾಳವನ್ನು ಎತ್ತಿಕೊಂಡು ಅದಕ್ಕೆ ಕಟ್ಟಿದ ಕುಚ್ಚುಗಳನ್ನು ಸರಿಮಾಡಿ ನಮಸ್ಕರಿಸಿ ಶಿವಶಕ್ತಿ ಸ್ವರೂಪದ ತಾಳವನ್ನು ಬಲ ಹಾಗೂ ಎಡಗೈಗಳಲ್ಲಿ ಕ್ರಮವಾಗಿ ಹಿಡಿದು ಕಹಳೆ[17] ಮತ್ತು ಉಪಾಂಗ[18]ದ ಶ್ರುತಿಗೆ ಸೇರಿಸಿ, ತಾಳವನ್ನು ವಿವಿಧ ಲಯಗಳಲ್ಲಿ ತಟ್ಟಲು ಆರಂಭಿಸುತ್ತಾನೆ. ತಾಳಧಾರಿ[19]ಯು ರಂಗದ ಮೇಲೆ ನಡೆಯುವ ನೃತ್ಯ, ಆಟ, ಹಿಮ್ಮೇಳವಾಗಿ ಒದಗುತ್ತಿರುವ ಗಾಯನ ಹಾಗೂ ಪಕ್ಕವಾದ್ಯಗಳಿಗೆ ಅನುಗತವಾಗಿ ತಾನು ನುಡಿಸಬೇಕಾಗುತ್ತದೆ. ಈತನ ಕಾರ್ಯ ನೃತ್ಯ ಸಂದರ್ಭಗಳಲ್ಲಿ ಅತ್ಯಂತ ಗುರುತರವಾಗಿರುತ್ತದೆ.

ಈತ ಒತ್ತೆರಟ ಹಾಗೂ ಮೂವೆರಟ ಮೊದಲಾದ ಲಯಗಳನ್ನು ದೇಶೀಯ ತಾಳದೊಳಗೆ ದ್ರುತ, ಲಘು, ಗುರು ಹಾಗೂ ಪ್ಲುತಗಳ ಪ್ರಮಾಣವನ್ನು ಅರಿತು ಪ್ರಯೋಗಿಸಿದನೆಂದು ಕವಿ ಹೇಳುತ್ತಾನೆ. ಒತ್ತೆರಟ, ಮೂವೆರಟ ಪದಗಳೂ ಶುದ್ಧ ದೇಶೀಯವಾಗಿವೆ. ಒತ್ತೆರಟ ಎಂದರೆ ಒಂದೆರಟ (೧೨) ಎಂದರೆ ಹನ್ನೆರಡು ಮಾತ್ರಾಕಾಲ, ೩ x ೪ ರ ಲಯದಲ್ಲಿ, ಎಂದರೆ ತ್ರಿಶ್ರಲಯದಲ್ಲಿ ನಡೆಯುವ ತಾಳ ಎಂದು ಅನುಮಾನಿಸಬಹುದು. ಹಾಗೆಯೇ ಮೂವೆರಟವನ್ನು ಮೂವತ್ತೆರಡು ಮಾತ್ರಾಕಾಲವನ್ನಾಗಿಸಿದರೆ ಅದು ೪ x ೮ ರ ಲಯದಲ್ಲಿ ನಡೆದ ತಾಳವಾಗುತ್ತದೆ ಎಂದರೆ ಅದು ಚತುರಶ್ರಲಯದ ತಾಳವೆಂದಾಗುತ್ತದೆ. ಶಾರ್ಙ್ಗದೇವನೂ ತಾಳದಲ್ಲಿ ಚತುರಶ್ರ ಹಾಗೂ ತ್ರಿಶ್ರವೆಂಬ ಎರಡು ಭೇದವನ್ನು ಹೇಳುತ್ತಾನೆ.[20]

ಚಂದ್ರಶೇಖರ ದೇಶೀತಾಳಧರನು ದೇಶೀತಾಳವನ್ನೇ[21] ಪ್ರಯೋಗಿಸಿದನೆಂದು ಹೇಳಿದರೂ ಮುಂದೆ ಚಿತ್ರತರ ಮೊದಲಾದ ಮಾರ್ಗಗಳಿಂದ ಚಚ್ಚಪುಟ, ಚಾಚಪುಟ, ಆದಿತಾಳ, ಕಂದರ್ಪ, ದರ್ಪಣ, ಚರ್ಚರಿ ಮೊದಲಾದ ತಾಳಗಳನ್ನು[22] ಎಡರದೆ ಸರಿಯಾದ ಮಾನಗಳಲ್ಲಿ ಪ್ರಯೋಗಿಸಿದ ಬಗ್ಗೆಯೂ ಹೇಳುತ್ತಾನೆ. ಈ ತಾಳಗಳನ್ನೂ ಸಮ ಮೊದಲಾದ ಯತಿಗಳಲ್ಲಿಯೂ,[23] ಸಮ, ವಿಷಮಗ್ರಹಗಳಲ್ಲಿ[24] ಯೂ ನುಡಿಸಿ ಕಳಾಸ[25]ದಲ್ಲಿ ಕುಶಲತೆಯಿಂದ ತಾಳವನ್ನು (ವಾದ್ಯಗಳು ತೋರುವ ಪ್ರಬಂಧದಲ್ಲಿ) ನುಡಿಸಿದ ತಾಳಧರನ ಜಾಣ್ಮೆಯನ್ನು ಕವಿ ಹೊಗಳುತ್ತಾನೆ.

ಮೂರನೆಯದಾಗಿ ಕವಿ ನೃತ್ಯಕ್ಕೆ ಹಿನ್ನೆಲೆ ವಾದ್ಯದಲ್ಲಿ ನುಡಿಸುವ ಕೊಳಲಿನ ನಾದದ ಬಗ್ಗೆ  ಹೇಳುತ್ತಾನೆ. ಜಾತಿ, ವಿಜಾತಿ ಮೊದಲಾದ ಹದಿನೆಂಟು ತರಹದ ವೇಣುಗಾನ ಚತುರನಾದ ವಂಶಿವಾದಕನು ಪೂತ್ಕಾರಗಳ ಗುಣ ದೋಷಗಳನ್ನು[26] ಅರಿತು ಗವಸಣಿಗೆಯಿಂದ ಕೊಳಲನ್ನು ಹೊರ ತೆಗೆದು, ರಂಧ್ರಗಳಲ್ಲಿ ಗಾಳಿಯನ್ನು ತುಂಬಿ, ಮೇಣದಿಂದ ಮುಖ ರಂಧ್ರವನ್ನು ಉಜ್ಜಿ ಅದಕ್ಕೆ ಜೀವಾಳವನ್ನು ತುಂಬಿ, ಪರಿಶುದ್ಧವಾದ ಕೊಳಲು ನಾದವನ್ನು ವಿರೂಪಾಕ್ಷನ ಓಲಗದ ತುಂಬೆಲ್ಲ ಅತ್ಯಂತ ಚೆಲುವಿನಿಂದ ಹರಡಿಸುತ್ತಾನೆ. ಶ್ರುತಿ ಸೇರಿಸಿ ವಿವಿಧವಾಗಿ ನುಡಿಸಿದ ರಾಗಗಳ ಉದ್ದ ಪಟ್ಟಿಯನ್ನೇ ಕೊಡುತ್ತಾನೆ. ಪ್ರಸ್ತುತ ಅಧ್ಯಯನಕ್ಕೆ ಈ ವಿಷಯಗಳು ಸಂಬಂಧಿಸಿಲ್ಲ.

ನಾಲ್ಕನೆಯದಾಗಿ ನೃತ್ಯಕ್ಕೆ ತಾಳದಷ್ಟೇ ಪ್ರಾಮುಖ್ಯವಾದ ಅವನದ್ಧ ವಾದ್ಯಗಳ ನುಡಿಸಾಣಿಕೆಯನ್ನು ವಿಶದೀಕರಿಸುತ್ತಾನೆ. ಮದ್ದಳೆಕಾರನು ಅದಕ್ಕೆ ಹೊದಿಸಿದ ಬಣ್ಣದ ಬಟ್ಟೆಯನ್ನೇ ನಿಧಾನವಾಗಿ ತೆಗೆದು, ತೊಡೆಯಲ್ಲಿ ತಳೆದು, ಎರಡೂ ಮುಖದ ಬಳೆಗಳಿಗೆ ಕಟ್ಟಿದ್ದ ಹಗ್ಗವನ್ನು ಸರಿಸಿ ಹೆಗಲಿಗೆ ಹಾಕಿಕೊಂಡು, ನಿಂತು, ಎಡಭಾಗಕ್ಕೆ ಗಂಟನ್ನು ಹಾಕಿ ಮೃದಂಗದ ಶ್ರುತಿಯನ್ನೇ ಆಲಿಸಿ ಸರಿಮಾಡುವ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಚಂದ್ರಶೇಖರನು ಚಿತ್ರಿಸುತ್ತಾನೆ. ಮದ್ಧಳೆಯನ್ನು ಶ್ರುತಿಮಾಡುವ ವಿಧಾನವು ಬಾಹುಬಲಿಯು ನಾಗಚದಲ್ಲಿ ವಿವರಿಸುವಂತೆಯೇ ಇದೆ.[27] ಈ ಮದ್ದಳೆ ವಾದಕನನ್ನು ಕವಿ ಠವಣೆ ಮದ್ದೆಗ ಎಂದೂ ಹೇಳುತ್ತಾನೆ. ಠವಣೆ[28] ಮೃದಂಗಿಯು ಇತರ ವಾದಕರನ್ನು ಯುಕ್ತಿಯಿಂದ ಪರಾಭವಗೊಳಿಸಿ ಬೋನ[29] ವಿಲ್ಲದೆಯೇ ಮೃದಂಗದಲ್ಲಿ ಇಂಪಾದ, ಕೋಮಲವಾದ ನಾದವನ್ನು ಹೊರಡಿಸಬಲ್ಲ ಸಾಮರ್ಥ್ಯ ಉಳ್ಳವನಂತೆ ಇಂತಹ ಅಸಮಾನ ಪ್ರತಿಭೆಯ ಮದ್ದಳೆಗಾರನು ನುಡಿಸುವ ಜಾಯಿ, ಅನುಜಾಯಿ, ಕಡೆಗಟ್ಟು, ಎಡೆಗಟ್ಟು, ಜತಿ, ಖಂಡಜತಿ, ಉಪ್ಪರಜತಿ, ಮಡುಪು, ಪಹರಣೆ ಮೊದಲಾದ ಶಬ್ದ ಪ್ರಬಂಧಗಳನ್ನು[30] ಸಮಹಸ್ತ, ಅರ್ಧ ಸಮಹಸ್ತ, ಕರ್ತರಿ, ಅರ್ಧ ಕರ್ತರಿ, ವಿಷಮ ಕರ್ತರಿ, ಅಲಗ, ಬೊಟ್ಟಳಗ ಮೊದಲಾದ ಹಸ್ತಪಾಟ[31]ಗಳಿಂದ ಕೇಳುವವರ ಚಿತ್ತರಂಜನೆಯಾಗುವಂತೆ ನುಡಿಸಿದಂತೆ. ಕವಿ ಹೀಗೆ ವಿವರಿಸುತ್ತಾನೆ.

ಠವಣಿಕನು ನುಡಿಸಿದ ಲಯಬದ್ಧವಾದ ಜತಿಯನ್ನೂ ಬಿಡದೆ ಚಂದ್ರಶೇಖರ ಕವಿ ಕೇಳಿಸುತ್ತಾನೆ.

ತತ ಧಿಧಿ ಕಿಟ ಧಿಧಿ ತತ ಕಿಟ
ತತ ಧಿಧಿಕಿ ತತ ಕಧಿತ್ತಾಧಿಕಿ ಧಿಧಿ ತತಕಿಟ
ತತಕಿಟ ಧಿತ ಧಿಕ್ಕಟ ತೋ
ತತಕಿಟ ದೊಮ್ಮೆಂದು ಠವಣಿಗಂ ಬಾಜಿಸಿದಂ ||           (ಪಂಪಾವ. ೮೧)

ಕಂದ ಪದ್ಯದಲ್ಲಿ ಅಡಕಗೊಂಡ ಈ ಜತಿ ಚತುರಶ್ರಗತಿ (೪ ಮಾತ್ರೆ)ಯಲ್ಲಿದ್ದು ಚೇತೋಹಾರಿಯಾದ ಲಯವನ್ನು ಹೊಂದಿದೆ.

ಮುಂದೆ ಆವುಜ[32]ಗಳ ಬಗ್ಗೆ ಚಂದ್ರಶೇಖರ ಕವಿ ನಿರೂಪಿಸುತ್ತಾನೆ. ಅಡ್ಡಾವುಜ, ಕಂದಾವುಜ (ಸ್ಕಂಧಾವುಜ), ಪಟ್ಟಾವುಜ ಹಾಗೂ ಕುಡುಪಾವುಜಗಳ ಗವುಸಣಿಗೆಯನ್ನು ಎಚ್ಚರದಿಂದ ತೆಗೆದು ಅವುಗಳ ಗುಂಟಿಕೆಗಳಿಂದ ಶ್ರುತಿಯನ್ನು ನೇರ ಮಾಡಿ, ಗಂಟುಗಳಲ್ಲಿ ಸಿಕ್ಕಿಸಿದ ಕುಡುಪನ್ನು ತೆಗೆದು ಆಯತ[33] ಮಂಡಲದಲ್ಲಿ ನಿಂತು ಆವುಜಗಳನ್ನು ನುಡಿಸುವ ವಿಧಾನ ರಮ್ಯವಾಗಿದೆ. ಆವುಜಗಳು ಮೃದಂಗವನ್ನು ಹೋಲುವ ಅವನದ್ಧ ವಾದ್ಯಗಳೆಂದೂ ದೇಶಭಾಷೆಯಲ್ಲಿ ಅವುಗಳಿಗೆ ಆವುಜಗಳೆಂದು ಕರೆಯುತ್ತಾರೆಂದೂ ಶಾರ್ಙ್ಗದೇವ ಹಾಗೂ ಸುಧಾಕಲಶ[34]ರಿಬ್ಬರೂ ಹೇಳುತ್ತಾರೆ. ಇವನ್ನು ಅಡ್ಡಾವುಜ, ಸ್ಕಂದಾವುಜ ಪಟ್ಟಾವುಜವೆಂದು ಅನ್ವರ್ಥವಾಗಿ ಗುರುತಿಸಬೇಕೆಂದು ಶಾರ್ಙ್ಗಧರ ಹೇಳುತ್ತಾನೆ. ಮೃದಂಗವನ್ನು ಹೋಲುವ ವಾದ್ಯವು ಅಡ್ಡಾವುಜ, ಹೆಗಲಿನಿಂದ ಇಳಿಬಿದ್ದು ಕೈಗಳಲ್ಲಿ ಅಥವಾ ಕುಡುಪಗಳ ಮೂಲ ನುಡಿಸುವುದನ್ನು ಸ್ಕಂಧಾವುಜ, ಬೆರಳುಗಳಿಂದ ನುಡಿಸುವುದನ್ನು ಪಟ್ಟಾವುಜ (ಪಖಾವು) ಎಂದು ಶಾಸ್ತ್ರಕಾರರ ಭಾವಿಸಿದಂತೆ ತೋರುವುದು.

ಚಂದ್ರಶೇಖರನು ಇವುಗಳ ಜೊತೆಗೆ ಕುಡುಪಾವುಜವನ್ನು ಸೇರಿಸುತ್ತಾನೆ. ಕುಡುಪಾವುಜ ವಾದ್ಯಗಳನ್ನು ಸುಮಾರು ೧೮ ಅಂಗುಲ ಉದ್ದದ ಕೋಲುಗಳಿಂದ ಬಡಿದು ನಾದವನ್ನು ಹೊರಡಿಸುತ್ತಾರೆ.[35] ಚೆಂಗು, ನಗಾರಿ, ಮುಂತಾದ ವಾದ್ಯಗಳನ್ನು ಕುಡುಪಾವುಜ ಎನ್ನಬಹುದು. ಆವುಜಕಾರ ಪಂಚಸಂಚಗಳನ್ನು ಬಳಸಿ ಮಲಪು, ರಿಗ್ಗವಣಿ, ಒಡ್ಡಾಸರ ಮುಂತಾದ ಶಬ್ದ ಪ್ರಬಂಧಗಳನ್ನು ಬಾಜಿಸಿದನೆಂದು ಚಂದ್ರಶೇಖರ ನಿರೂಪಿಸುತ್ತಾನೆ. ನಾದಕನ ಎಡಭಾಗದ ಚರಣ, ಅಂಗುಲಿಗಳ ಕಂಪನವನ್ನು ಸಂಚ[36] ಎಂದು ಶಾರ್ಙ್ಗದೇವನು ಹೇಳುತ್ತಾನೆ.  ಆತ ಐದು ವಿಧ ಸಂಚಗಳನ್ನು ಗುರುತಿಸುತ್ತಾನೆ. ಅವು ಹೆಗಲು (ಸ್ಕಂಧ), ಕೂರ್ಪರ, ಮುಡುಪ (ಅಂಗುಷ್ಟದ ಹಿಂಭಾಗ) ಎಡಪಾದ, ಹಾಗೂ ಮುಂಗೈಗಳು[37]. ಮಲಪು, ರಿಗ್ಗವಣಿಗಳು[38] ಶಾಸ್ತ್ರೋಕ್ತ ಶಬ್ದಪ್ರಬಂಧಗಳಾಗಿವೆ. ಒಡ್ಡಾಸರವು ವರ್ಣಸ್ವರ ವಿರಬಹುದೇನೋ.

ಮೇಲೆ ವಿವರಿಸಿದ ಆವುಜಕಾರ ಕೇವಲ ವಾದ್ಯವನ್ನು ನುಡಿಸುವುದಷ್ಟೇ ಅಲ್ಲದೆ ಗಾಯನ, ನರ್ತನಗಳನ್ನೂ ಜೊತೆಗೇ ಮಾಡುತ್ತ, ವಿವಿಧ ರೀತಿಯ ಚಾಳಿಯ, ಕಳಾಸಗಳನ್ನು ಸಂಗೀತದಲ್ಲಿನ ತ್ರಿಮಾರ್ಗ ಕ್ರಿಯೆಯನ್ನೂ ತಾನೇ ಮಾಡುತ್ತ ನಡೆದನೆಂದು ಕವಿ ಆವುಜಕಾರನ ವಿಶೇಷತೆಯನ್ನು ವಿಶದೀಕರಿಸುತ್ತಾನೆ.

5_6_PP_KUH6_6_PP_KUH ದೇಶೀ ಆವುಜದ ನಂತರ ನೃತ್ಯಕ್ಕೆ ಕೊನೆಯಾಗಿ ಹಿನ್ನೆಲೆ ವಾದ್ಯದಲ್ಲಿ ಕಹಳೆ ವಾದನವನ್ನೂ ಕವಿ ಸೇರಿಸುತ್ತಾನೆ. ಒಳ್ಳೆಯ ಚೀನಾಂಬರದ ಚೀಲದಿಂದ ತೆಗೆದು ಟಿಪಿಯನ್ನೆತ್ತಿ ಶ್ರುತಿಸೇರಿಸ, ಗೀತಾನುಣವಾಗಿ ಕಹಳೆ ತುತ್ತುಕು ತುಕುತುಕು ತುತು ತೋಂ (೮೫) ಎಂದು ವಾದ ಹೊರಡಿಸಿದ ಪರಿಯನ್ನು ಕವಿ ವಿಸ್ತಾರವಾಗಿಸುತ್ತಾನೆ.

ಚಂದ್ರಶೇಖರನು ಅತ್ಯಂತ ಶ್ರದ್ಧೆಯಿಂದ, ದಕ್ಷತೆಯಿಂದ ಚತುರ್ವಿಧ ವಾದ್ಯಗಳ ಮಾರ್ಗ, ದೇಶಿ ಪ್ರಭೇದಗಳನ್ನು ಹೇಳುತ್ತಾನೆ. ಅವುಗಳ ನುಡಿಕಾರ ಹಸ್ತಾಪಾಟ, ಗುಣದೋಷಗಳನ್ನು ಹೇಳುತ್ತಾನೆ. ಅಲ್ಲದೇ, ವಾದ್ಯಗಳನ್ನು ಚೀಲದಿಂದ ಹೊರತೆಗೆದು ನುಡಿಸಿ ಆಯಾ ಶಬ್ದ ಪ್ರಬಂಧಗಳನ್ನು ಹೊರಡಿಸುವವರೆಗೂ ನಿರೂಪಣೆಯಲ್ಲಿ ಒಂದೇ ಸಮನಾದ ಆಸಕ್ತಿಯನ್ನೂ ಕಲಾಭಿಜ್ಞತೆಯನ್ನು ಮರೆದಿದ್ದಾನೆ. ಇವುಗಳಿಂದ ಚಂದ್ರಶೇಖರನಿಗೆ ವಾದ್ಯ ವಾದನ ಕಲೆಯಲ್ಲಿದ್ದ ಪರಿಶ್ರಮ, ಪರಿಜ್ಞಾನಗಳ ಅರಿವು ನಮಗೆ ವೇದ್ಯವಾಗುತ್ತದೆ.

ಸಿಂಗಿರಾಜ ಕವಿಯೂ ನರ್ತನದ ಪರಿಕರಗಳಲ್ಲಿ ಒಂದಾದ ಚತುರ್ವಿಧ ವಾದ್ಯಗಳ ಅನೇಕ ಬಗೆಯಾಗಿ ಹೇಳಿದ್ದಾನೆ.

ಮುಂದೆ ತಾಳಧಾರಿಗಳ ಸಂದರ್ಭದಲ್ಲಿ ಸ್ತ್ರೀ ತಾಳಧರರನ್ನು ಇವನು ಹೇಳುತ್ತಾನೆ. ಸಾಮಾನ್ಯವಾಗಿ ಶಾಸ್ತ್ರ ಹಾಗೂ ಕಾವ್ಯಗಳಲ್ಲಿ ಪುರುಷ ತಾಳಧಾರಿಗಳ ಪ್ರಸ್ತಾಪವೇ ಇರುತ್ತದೆ.[39] ಕಾವ್ಯದಲ್ಲಿನ ಕಥಾಪ್ರಸಂಗಕ್ಕೆ ಸ್ತ್ರೀತಾಳಧಾರಿಗಳೇ ಅವಶ್ಯವೆಂದಾದರೂ ಈ ಬದಲಾವಣೆ ಗಮನಿಸುವಂತಹುದಾಗಿದೆ.

ಚತುರಶ್ರಮಿಶ್ರಖಂಡಂಶ್ರ್ಯಶ್ಯ ನಾಲ್ಕರೊಳು
ದ್ರುತ ಲಘು ಗುರು ಪ್ಲುತ ಚತುಷ್ಟಯಾದಿ ಕ್ರಮೋ
ನ್ನತ ಕಾಲ ಮಾರ್ಗ ಕ್ರಿಯಾಂಗಕಳೆ ಮೊದಲಾದ ದಶವಿಧ ಪ್ರಾಣಂಗಳ
ಮತದೊಳು ಪ್ರಸ್ತಾರ ಜಾತಿಯುಪ ಜಾತಿಗಳ
ನರೆ ವಿವೇಕದೊಳರಿದು ನೂರೊಂದು ತಾಳಮಂ
ಶತಸಹಸ್ರ ಮುಖದಿಂದ ಲೊತ್ತುತಿಹ ತಾಳ ಧರಾಂಗಗನೆಯರೊಪ್ಪಿರ್ದರು (ಸಿಂಗಿಪು. ೩೮)

ತಾಳಧರಾಂಗನೆಯರು ನೂರೊಂದು ತಾಳಗಳನ್ನು, ಚತುರಶ್ರ (೪ಮಾತ್ರೆ) ಮಿಶ್ರ (೭ ಮಾತ್ರೆ), ಖಂಡ (೫ ಮಾತ್ರೆ), ತ್ರಶ್ಯ (೩ ಮಾತ್ರೆ) ಜಾತಿಯ ತಾಳಗಳನ್ನು ದಶಪ್ರಾಣಗಳ ಸಹಿತ ಜಾಣ್ಮೆಯಿಂದ ನುಡಿಸಿದ ಬಗ್ಗೆ ಕವಿ ನಿರೂಪಿಸುತ್ತಾನೆ.

ಮುಂದೆ ಚತುರ್ವಿಧ ವಾದ್ಯಗಳನ್ನೂ ಸೇರಿಸಿ ನರ್ತಕಿಯರಿಗೆ ಹಿಮ್ಮೇಳ ಒದಗಿಸಿದುದನ್ನು ಈ ಕವಿ ವಿವರಿಸುತ್ತಾನೆ.

ಮಿಸುಪ ನವರತ್ನ ಖಚಿತೋನ್ನತ ಮೃದಂಗಗಳ
ವಿಸರ ದೊಳ್ಕನಕವಾಸಂಗಳ ಸಮೂಹದೂ
ಳ್ವಸರಿಸುವ ವರ್ನಗಹಳೆಗಳುಪಾಂಗಗಳಿಂದ ಮೋಹನ ಕಳಾಭೇದದಿಂ |
ದೆಸೆವ ಪಣಹಪಟಾವುಜಂ ಚಂದ್ರ ಮಂಡಲ
ಪ್ರಸರದೊಳ್ತಾಳದಂಡಿಗೆ ಸರ್ವಮೇಳದೊ
ಳ್ಳೊಸತೆನಿಸಿ ವಿತತಘನ ಸುಷಿರ ವಾದ್ಯಗಳ ಶಶಿಮುಖಿಯರುಗಳೆಸದಿರ್ದರು || (ಸಿಂಗಿಪು. ೩೮)

ಕವಿಯು ವಿವರಿಸುವ ವಾದ್ಯ ವೃಂದದಲ್ಲಿ ಮೂರು ತರಹದ ಸುಷಿರ ವಾದ್ಯಗಳಾದ ಕೊಳಲು, ಕಹಳೆ, ಉಪಾಂಗ, ತತವಾದ್ಯವಾದ ದಂಡಿಗೆ, ಘನವಾದ್ಯವಾದ ತಾಳ, ಮೂರು ತರಹದ ಅವನದ್ಧ ವಾದ್ಯಗಳಾದ ಮೃದಂಗ, ಪಣವ ಹಾಗೂ ಪಟ್ಟಾವುಜಗಳನ್ನು ಉಲ್ಲೇಖಿಸುತ್ತಾನೆ.

ನೃತ್ಯದಲ್ಲಿ ಹಿನ್ನೆಲೆಯಾಗಿ ಬಳಸುವ ವಾದ್ಯಗಳನ್ನು ಭಸಾಸಂ. ಕಾರನು ಸಂಗ್ರಹಿಸುತ್ತಾನೆ.[40] ಅದರಲ್ಲಿ ಎರಡು ವಿಧವಾದ ಆನದ್ಧ (ಅವನದ್ಧ) ವಾದ್ಯ, ಒಂದು ತತವಾದ್ಯ, ಒಂದು ಘನವಾದ್ಯ ಹಾಗೂ ಎರಡು ಸುಷಿರ ವಾದ್ಯಗಳು ಇವೆ. ಆದರೆ ಸಿಂಗಿರಾಜ ಕವಿ ಇಲ್ಲಿ ಒಂದು ಸುಷಿರ ಹಾಗೂ ಒಂದು ಅವನದ್ಧ ವಾದ್ಯಗಳನ್ನು ಹೆಚ್ಚಿಗೆ ಸೇರಿಸಿದ್ದಾನೆ.

ಕವಿ ಹೇಳಿರುವ ಚಂದ್ರಮಂಡಲ ವಾದ್ಯದ ಸ್ವರೂಪ ನಮಗೆ ಸ್ಪಷ್ಟವಾಗುತ್ತಿಲ್ಲ. ಚಂದ್ರ ವಾದ್ಯ (ಜನಪದ ವಾದ್ಯ) ವಿರಬಹುದೇನೋ? ಈ ಎಲ್ಲಾ ವಾದ್ಯಗಳ ಜೊತೆಯಲ್ಲಿ ಶ್ರುತಿ ಶುದ್ಧವಾಗಿ ದೋಷರಹಿತವಾಗಿ ಅನೇಕ ರಾಗಗಳನ್ನು ಹಾಡಿದ ಮಾಹಿತಿಯನ್ನು ಅವನು ಕೊಡುತ್ತಾನೆ.

ಸಿದ್ಧನಂಜೇಶನು ಶಿವನ ಆರಾಧನೆಗೆ ನಡೆವ ಪೂಜಾ ಕೈಂಕರ್ಯದಲ್ಲಿ ನೃತ್ಯಕ್ಕೆ ಬಳಸುವ ವಾದ್ಯಗಳನ್ನು ಐದು ವಿಧವಾಗಿ ವಿವರಿಸುತ್ತಾನೆ. ಪಂಚ ಭೂತಗಳ ಮೂಲಕವಾಗಿ ಸೃಷ್ಟಿಗೊಂಡ ಈ ಪಂಚ ವಿಧವಾದ್ಯವನ್ನು ವಾದನಪ್ರಿಯ ಶಿವನಿಗೆ ಅರ್ಪಿಸುವ ಭಾವ ಕವಿಯದು ಎನ್ನಿಸುವುದು.

ಧರಣಿ ಜಲವಗ್ನಿ ಮಾರುತಗಗನದಂಶದಿಂ
ಪರಿಭೂತವಾದವೇಪಂಚಮಹಾ ವಾದ್ಯಗಳು
ಕರಡೆ ಮದ್ದಳ ಹುಡುಕು ಡೋಳು ಮುಂತಾದುವುಂ ಪೃಥ್ವಿಸಂಬಂಧ ಶಂಖಂ
ಪರಿಕಿಪೊಡೆ ವುದಕಸಂಬಂಧ ಜೇಗಟೆ ಘಂಟೆ
ವರತಂತಿ ಚೆಂಗು ಮೊದಲಾದವಗ್ನಿಯ ವಂಶ
ಮರುತಾಂಶ ನಾಗಸರ ಕಹಳೆ ಯುಷ್ಟಾಂ (ಪಾ) ಗವಾಕೊಳಲು ಮುಂತಾದವೆನಲು
ರಾಗವಾಕಾಶಾಂಶವಿವು ಪಂಚ ಮಹಾವಾದ್ಯ | (ಗುರುಚ. ೬೬, ೬೭)

ಕರಡೆ, ಮದ್ದಳ, ಹುಡುಕು (ಕ್ಕಾ), ಡೋಲುಗಳನ್ನು ಕವಿ ಪೃಥ್ವಿ, ಮೂಲವಾದ್ಯಗಳನ್ನಾಗಿಸಿದ್ದಾನೆ. ಕರಡೆ ಹಾಗೂ ಮದ್ದಳೆಗಳ ಸ್ವರೂಪ ಲಕ್ಷಣಗಳನ್ನುಹಿಂದೆ ವಿವರಿಸಲಾಗಿದೆ.[41] ಶಾರ್ಙ್ಗದೇವ ಆವುಜಗಳಿಗೆ ಉದಾಹರಣೆಯನ್ನು ಹೇಳುವಾಗ ಹೆಗಲಿನಿಂದ ಇಳಿಬೀಳುವ ಹುಡುಕ್ಕಾ ಎಂಬ ವಾದ್ಯವನ್ನು ಸ್ಕಂದಾಯುಜ ಎಂದೂ ಕರೆಯಬಹುದು ಎನ್ನುತ್ತಾನೆ. ಎರಡು ಮುಖವುಳ್ಳ, ೨೮ ಅಂಗುಲ ಪರಿಧಿಯಿಂದ ಕೂಡಿದ ಏಳು ಅಂಗುಲ ಮುಖವುಳ್ಳ ಹುಡುಕ್ಕಾವಾದ್ಯ ನೋಡಲು ಡಮರುಗದಂತೆ ಇದ್ದರೂ ಗಾತ್ರದಲ್ಲಿ ದೊಡ್ಡದು ೩೨ ಎಳೆಯ ಹಗ್ಗಗಳಿಂದ ಎರಡೂ ಮುಖಗಳನ್ನು ಬಂಧಿಸಿರುತ್ತಾರೆ. ಇದನ್ನು ಹೆಗಲಿಗೆ ಹಾಕಿಕೊಂಡು ಕೋಲಿನಿಂದ ಅಥವಾ ಬೆರಳಿನಿಂದ ಬಾರಿಸಬೇಕು. ದೇಂಕಾರ ಒಂದು ಹೊರತಾಗಿ ಎಲ್ಲಾ ವರ್ಣಗಳೂ ಇದರಲ್ಲಿ ಹೊರಡುತ್ತವೆ.[42]

ಢೋಲು[43] ವಾದ್ಯವು ಭಾರತದ ಎಲ್ಲೆಡೆಗೂ ಪ್ರಚಾರದಲ್ಲಿರುವ ವಾದ್ಯ. ಇದರ ಪ್ರಸ್ತಾಪವನ್ನು ಇತರ ಶಾಸ್ತ್ರಗ್ರಂಥಗಳು ಮಾಡದಿದ್ದರೂ ಮುಮ್ಮಡಿ ಚಿಕ್ಕಭೂಪಾಲನು ಭಸಾಸಂ.ನಲ್ಲಿ ಇದರ ಲಕ್ಷಣವನ್ನು ಮತಾಂತರ ಗ್ರಂಥದ ಅಡಿಯಲ್ಲಿ ಸಂಗ್ರಹಿಸಿದ್ದಾನೆ.

ಕುಂಭಕರ್ಣವನ್ನು ಎಚ್ಚರಿಸಲು ರಾವಣನಿಂದ ನಿರ್ಮಿತವಾದ ವಾದ್ಯ. ಇದು ಹದಿನಾರು ಅಂಗುಲ ವಿಸ್ತೀರ್ಣವಿದ್ದು, ಎರಡು ಮುಖಗಳಿರುವಂತಹುದು ದೈತ್ಯರಿಗಾಗಿ, ದೇವತೆಗಳಿಗಾಗಿ ಬಾಜಿಸುವಂತಹುದು. ಇದರ ಮೂಲದಲ್ಲಿ ಬ್ರಹ್ಮನೂ, ಮಧ್ಯದಲ್ಲಿ ಹರಿಯೂ ಅಗ್ರಹದಲ್ಲಿ ಶಿವನು, ಸ್ಥಾಪಿತನೆಂದೂ ಸಿದ್ಧನಂಜೇಶ ಹೇಳುತ್ತಾನಾದರೂ ಇದನ್ನು ನುಡಿಸುವ ಕ್ರಮವಾಗಲಿ ಚರ್ಮಗಳನ್ನು ಆಚ್ಛಾದಿಸುವ ಬಗ್ಗೆಯಾಗಲೀ ಮಾಹಿತಿ ಇಲ್ಲ.

ಡೋಲಕ್ ಎಂದು ಪ್ರಚಾರದಲ್ಲಿರುವ ಈ ವಾದ್ಯಗಳಲ್ಲಿ ಅನೇಕ ಪ್ರಕಾರಗಳಿರುವುದಾಗಿ ಕಂಡುಬಂದರೂ, ಡೋಲು (ಡೋಳು) ವಾದ್ಯವು ೧೮ ರಿಂದ ೨೦ ಇಂಚು ಉದ್ದ ವ್ಯಾಸವಿರುವ ಪೀಪಾಯಿ ಆಕಾರದ ಪೊಳ್ಳು ಕಟ್ಟಿಗೆಯ ವಾದ್ಯ. ಎರಡೂ ಬದಿಯ ಮೇಲಿನ ಚರ್ಮಾಚ್ಛಾದನವನ್ನು ಚರ್ಮದ ತುದಿಯಲ್ಲಿರುವ ರಂಧ್ರಗಳಲ್ಲಿ ದಾರವನ್ನು ಪೋಣಿಸಿ ಕಟ್ಟಿಗೆಯ ಭಾಗಕ್ಕೆ ಗಟ್ಟಿಯಾಗಿ ಬಿಗಿದಿರುತ್ತಾರೆ. ದಾರಗಳಲ್ಲಿ ಪೋಣಿಸಿದ ಉಂಗುರಗಳನ್ನು ಹಿಂದೆ, ಮುಂದೆ ಸರಸಿ ವಾದ್ಯವನ್ನು ಇಚ್ಛಿನ ಶ್ರುತಿಗೆ ಮೇಳೈಸುತ್ತಾರೆ. ಢೋಲನ್ನು ಕೈಗಳಿಂದ ಬಾರಿಸಿ ನಾದವನ್ನು ಉತ್ಪತ್ತಿ ಮಾಡುತ್ತಾರೆ.[44]

ಶಂಖವಾದ್ಯವನ್ನು ಜಲ ಮೂಲವಾಗಿ ಕವಿ ತೆಗೆದುಕೊಂಡಿದ್ದಾನೆ. ಇದೊಂದು ಪುರಾತನ ಸುಷಿರವಾದ್ಯ. ಇದರ ಆಕಾರದಲ್ಲಿ ಯಾವುದೇ ಬದಲಾವಣೆ ಮಾಡದೆ, ಮುಚ್ಚಿದ ಭಾಗದಲ್ಲಿ ರಂಧ್ರವನ್ನು ಕೊರೆದು ಗಾಳಿಯನ್ನು ಊದುತ್ತಾರೆ. ಶಂಖಕ್ಕಿರುವ ನೈಸರ್ಗಿಕ ರಂಧ್ರಗಳಿಂದಲೂ ಗಾಳಿಯು ಹೊರದೂಡಲ್ಪಟ್ಟು ತೀವ್ರವಾದ ಶಬ್ದವೂ ಉಂಟಾಗುತ್ತದೆ. ಇದು ದೇವಾಲಯಗಳಲ್ಲಿ ಇರಲೇಬೇಕಾದ ಪೂಜಾ ವಿಧಾನದ ಅಂಗವಾಗಿರುವ ಒಂದು ವಾದ್ಯ. ಜಾಗಟೆ, ಘಂಟೆ, ತಂತಿ ಹಾಗೂ ಚೆಂಗು ಇವುಗಳನ್ನು ಅಗ್ನಿಮೂಲವಾದ ವಾದ್ಯಗಳಾಗಿ ಕವಿ ವಿಭಾಗಿಸುತ್ತಾನೆ. ಜಾಗಟೆ, ಘಂಟೆಗಳು ಪೂಜಾವಿಧಾನದಲ್ಲಿ ಬಳಸುವ ವಾದ್ಯಗಳಾಗಿವೆ. ಶಾಸ್ತ್ರಗ್ರಂಥಗಳು ಇವನ್ನೂ ಘನವಾದ್ಯವೆಂದು ಕರೆದಿವೆ.[45][1] (ಸಂಗೀತ ವಾದ್ಯಗಳು) ಬಿ.ಸಿ.ದೇವ ಪು.ಸಂ. ೩೮ ಹಾಗೂ ನೋಡಿ ರೇಖಾಚಿತ್ರ ಪು. ೨೯.೪೨.

[2] ಸಂಗೀರ. (ಸಂ. ಸುಬ್ರಹ್ಮಣ್ಯಶಾಸ್ತ್ರೀ) ೬-೧೦೭೮-೧೦೮೪. ನೋಡಿ ರೇಖಾಚಿತ್ರ ಅದೇ.

[3] ವಿವರಣೆಗೆ ಪು.೩೩.

[4] ಭಾರತೀಯ ವಾದ್ಯಗಳು. ಎಂ.ಎ. ಪುರಂದರೆ, ಪು. ೧೧೫.

[5] ವಿವರಣೆಗೆ ಇದೇ ಅಧ್ಯಾಯ, ಉಪ.೩೧.

[6] ನೋಡಿ ಕವುಸಾಳೆ- ಅನುಬಂಧ. ಅ.ಪರಿಭಾಷೆ ಹಾಗೂ ರೇಖಾಚಿತ್ರ ಘನ. ಪು.೩.

[7] ಪದ್ಮುಪು. (ಸಂ.ಆರ್.ಸಿ.ಹಿರೇಮಠ್) ೩-೫೨ ರಿಂದ ೬೪ ಪದ್ಯಗಳು.

[8] ಏಕಲೋ ಯಮಲೋ ವೃಂದಗಾಯನೆಶ್ಚೇತಿ ಸತ್ರಿಧಾಃ ||
(ಸಂ.ರಾ. ಸತ್ಯನಾರಾಯಣ) ನರ್ತನಿ. ಪು.

[9] Mukharin leader of the troupe. (tran-Kunjini Raja and Radha Burnier), p. 188.

[10] ಮುಖರೀ-ಮಾರ್ದಾಲಿಕಃ
ವಾದ್ಯ ಪ್ರಬಂಧ ನಿರ್ಮಾತಾಗೀತ ವಾದನಕೋವಿದಃ|
ಊಹಾನ್ವಿತಶ್ಚ ಸರಸೋ ನೃತ್ತ ಶಿಕ್ಷಾ ವಿಚಕ್ಷಣಃ ||
ಅರ್ಧಾಂಗ ಭೂತೋ ನರ್ತಕ್ಯಾರಂಗಭೂಮಿ ವಿಭೂಷಣಮ್|
ಕುರ್ವಾನೃತ್ತಾನುಗಂ ವಾದ್ಯಂ ಸರಸೈರ್ವಾದಕ್ಕೆ ಸಹ |
ಸುಸಂಪ್ರದಾಯ ಶಿಕ್ಷಾವಾನ್ ಮುಖರೀ ಪ್ರಕೀರ್ತತಃ |
(ರಾಮಕೃಷ್ಣ ಕವಿ, ಭರಕೋ, ಪು. ೪೧೭)

[11] ನೋಡಿ. ಪು. ೩೭.

[12] ನೋಡಿ ೨೩. ೨೪.

[13] ನೋಡಿ ೨೩. ೨೪.

[14] ನೋಡಿ ಪು. ೨೬.

[15] ನತಾಲೇನ ವಿನಾ ಗೀತಂ ನವಾದ್ಯಂ ತಾಲವರ್ಜಿತಮ್|
ನ ನೃತ್ಯಂ ತಾಲಹೀನಂ ಸ್ಯಾದತಸ್ತಾಲೋತ್ರ ಕಾರಣಮ್|
ಗೀತಂ ವಾದ್ಯಂ ತಥಾ ನೃತ್ಯಂ ತ್ರಿತಯಂ ಯೇನ ಲಭ್ಯತೇ||
ಮಾನಸ. ೧೬-೪-೮೩೭ (ಸಂ.ಶ್ರೀ. ಗೊಂಡೇಕರ್)
ಅಲ್ಲದೇ ಗೀತಂ ವಾದ್ಯಂ ತಥಾ ನೃತ್ತಂ ಯತಸ್ತಾಲೇ ಪ್ರತಿಷ್ಠಿತಮ್.
ಸಂಗೀರ.ಅ. ೫-೨. (ಸಂ.ಸುಬ್ರಹ್ಮಣ್ಯಶಾಸ್ತ್ರೀ)

[16] ಗೀತಾದೇರ್ವಿದ ಧತ್ತಾಲಃ ಸ ಚದ್ವೇಧಾ ಬುಧೈಃ ಸ್ಮೃತಃ |
ಮಾರ್ಗದೇಶೀಗತತ್ಯೇನ ತತ್ರಾಧ್ಯಸ್ಯ ಕ್ರಿಯಾ ದ್ವಿಧಾ|| ಅದೇ ೫-೩.

[17] ನೋಡಿ ಪು. ೩೧.

[18] ನೋಡಿ ಪು. ೩೧.

[19] ನೋಡಿ ಅನುಬಂಧ ಅ.ಪರಿಭಾಷೆ

[20] ಚತುರಶ್ರಸ್ತಥಾ ತ್ರ‍್ಯಶ್ರ ಇತಿ ತಾಲೋ ದ್ವಿಧಾ ಮತಃ ||
ಸಂಗೀರ. ಅ. ೫-೧೭ (ಸಂ.ಸುಬ್ರಹ್ಮಣ್ಯ ಶಾಸ್ತ್ರಿ)

[21] ಪ್ರಾಂತೀಯವಾಗಿ ಅಕ್ಷರಕಾಲವನ್ನು ತೋರುವ ಒಂದು ರೀತಿ. ಇದರಲ್ಲಿ ಒಂದು ಅಕ್ಷರಕಾಲಕ್ಕೆ೧ ಮಾತ್ರ – ಎಲ್. ರಾಜಾರಾವ್, ಸಂ.ಶಾ.ಚಂ. ಪು.೫೩.

[22] ಪ್ರಸಿದ್ಧವಾದ ೧೦೮ ತಾಳಗಳಲ್ಲಿ ಹಲವು.

[23] ನೋಡಿ ಪು.೨೧.

[24] ನೋಡಿ ಅನುಬಂಧ ಅ.ಪರಿಭಾಷೆ

[25] ಒಂದು ವಾದ್ಯ ಯಂತ್ರ ನೋಡಿ ಅನುಬಂಧ ಅ.ಪರಿಭಾಷೆ

[26] ಕೊಳಲಿನಲ್ಲಿ ಗಾಳಿಯನ್ನು ತುಂಬಿ ಊದುವಾಗ ಪಾಲಿಸಬೇಕಾದ ಕೆಲವು ವಿಧಿ ಹಾಗೂ ನಿಯಮಗಳು.

[27] ನೋಡಿ ಪು.೩೬.

[28] ಸ್ಪಪಕ್ಷ ಸಾಧನಂ ತದ್ಪತ್ ಪರಪಕ್ಷಸ್ಯ ದೂಷಣಮ
ಕರೋತಿಯುಕ್ತಿಃ ಶಾಸ್ತ್ರಾತ್ ಪ್ರಹೇಲ್ಯಾದಿಕಭೇದತಃ ||
ಸರಕ್ತಿಕೋಮಲಧ್ವಾನೈರ ವೋಹಣಕ ಪಾಟಜೈಃ|
ವಿವಿಧೈರ್ವಾದ್ಯ ಭೇದ್ಯಶ್ಚ ಜೇತಾಸ್ಯಾ ಪ್ರತಿವಾದಿನಾಮ್ |
ಕೇವಲ ಶ್ರಾವ್ಯಕತ್ಪಾತ್ ತಂ ಜನಾಷ್ಠವಣಕಂ ಜಗುಃ
(ನರ್ತನಿ. ೨ ಪ್ರ. ೨-೪ ಸಂ.ರಾ. ಸತ್ಯನಾರಾಯಣ

[29] ಮೃದಂಗದ ಶ್ರುತಿಜಮಾವಣೆಗೂ ನಾದದ ಇಂಪನ್ನು ಹೆಚ್ಚಿಸಲು ಲೇಪಿಸುವ ತೆಳ್ಳಗಿನ ಗೋಧಿ ಹಿಟ್ಟಿನ ಲೇಪ. ಇದನ್ನು ಕವಳ ಎಂದು ಕವಿ ಕರೆದಿದ್ದಾನೆ.

[30] ಇವುಗಳ ವಿವರಣೆಗೆ ನೋಡಿ ಅನುಬಂಧ ಅ.ಪರಿಭಾಷೆ

[31] ಇವುಗಳ ವಿವರಣೆಗೆ ನೋಡಿ ಅನುಬಂಧ ಅ.ಪರಿಭಾಷೆ

[32] ಪಟಹಗಳಲ್ಲಿ ಎರಡು ವಿಧವೆಂದೂ, ದೇಶೀಪಟಹವನ್ನು ಆವುಜಗಳೆಂದು ಕರೆಯುತ್ತಾರೆ.
ದೇಶೀಪಟಹಮೇವಾಹುರಿಮಡ್ಡಾವುಜಂ ಜನಾಃ||
ಸಂಗೀರ. ೬-೮೨೪ (ಸಂ.ಸುಬ್ರಹ್ಮಣ್ಯಶಾಸ್ತ್ರಿ

[33] ನೋಡಿ ಅನುಬಂಧ ಅ.ಪರಿಭಾಷೆ

[34] ಆವುಜೋಲೋಕ ಭಾಷಾಯಾಂ ಖಂದಾಉಪಖಾಉಜಾ
ಮತಾಃ ಪಟ್ಟಾಉಜಶ್ಚೇತಿ ಸ್ಸಸ್ವನಾಮಾನುಸಾರಿಣೀಃ|
ಸಂಗೀಉ. ೪-೯೨ (ಸಂ. ಉಮಾಕಾಂತ ಪ್ರೇಮಾನಂದಶಾ)

[35] ಅಷ್ಟಾದ ಶಾಂಗುಲಃ ಕಿಂಚಿನ್ನತಾಗ್ರೋ ಮಧ್ಯತಃ ಪೃಥುಃ
ಸಂಗೀರ. . ೮೨೪/ (ಸಂ. ಸುಬ್ರಹ್ಮಣ್ಯಶಾಸ್ತ್ರಿ)

[36] ವಾಮಸ್ಯಚರಣಸ್ಯಾಪಿ ಕಂಪಃ ಸಂಚೋಭಿಧೀಯತೇ|

[37] ಸ್ಕಂಧ ಕೂರ್ಪರಯೋ ಸ್ತದ್ವದಂಗುಷ್ಠ ಮಣಿಬಂಧಯೋಃ||
ಸಂಗೀರ. ೮೯೬೮೯೭ (ಸಂ.ಸುಬ್ರಹ್ಮಣ್ಯಶಾಸ್ತ್ರಿ.)

[38] ನೋಡಿ ಅನುಬಂಧ ಅ.ಪರಿಭಾಷೆ

[39] ಅರ್ಧವೇ. (೩/೯೭ವ) ನಾಗಚ. (೨೨/೭೦) ಪಂಪಾವ (೭೬ವ) ಇತ್ಯಾದಿ.

[40] ನೃತ್ತೋಪ್ಯೋಗಹೋತೂನಿವಾದ್ಯಾನಿ ವದಾಮ್ಯಹಮ್|
ಆನದ್ಧಂ ದ್ವಿವಿಧಂ ಪ್ರೋಕ್ತಂ ಏಕಂ ವೀಣಾದಿ ವಾದ್ಯಕಮ್|
ಘನಮೇಕಂ ತಥಾ ಖ್ಯಾತಂ ಸುಷಿರಂ ದ್ವಯ ಮೇವ ಚ||
(ಸಂ.ರಾ. ಸತ್ಯನಾರಾಯಣ ಭಸಾಸಂ.೧೪೧೫)

[41] ನೋಡಿ ಇದೇ ಅಧ್ಯಾಯ ಪು. ೩೬, ರೇಖಾ ಚಿತ್ರ ಪು. ೨೯. ೪೨.

[42] ಸಂಗೀರ – ಅ.  ೬-೧೦೭೩-೧೦೭೭ (ಸಂ. ಸುಬ್ರಹ್ಮಣ್ಯಶಾಸ್ತ್ರೀ) ಹಾಗೂ ನೋಡಿ ರೇಖಾಚಿತ್ರ ಪು. ೨೯,೪೨.

[43] ಭಸಾಸಂ. -೧-೬೩೮ – ೬೪೦(ಸಂ.ರಾ. ಸತ್ಯನಾರಾಯಣ).

[44] ಭಸಾಸಂ. -೧-೬೩೮ – ೬೪೦(ಸಂ.ರಾ. ಸತ್ಯನಾರಾಯಣ).

[45] ಸಂಗೀರ-ಅ. ೬-೧೧೮೩, (ಸಂ. ಸುಬ್ರಹ್ಮಣ್ಯ ಶಾಸ್ತ್ರಿ) ಹಾಗೂ ಮಾನಸ (ಸಂ. ಗೊಂಡೇಕರ್) ೧೬-೪, ೫೭೬ ಇತ್ಯಾದಿ.