ತಂತಿ ವಾದ್ಯದಲ್ಲಿ ಕವಿಯು ದಂಡಿಗೆ, ಕಿನ್ನರಿಗಳನ್ನು ಉದ್ದೇಶಿಸಿ ಹೇಳಿದ್ದಾನೆ. ಮುಂದಿನ ಪದ್ಯಗಳಲ್ಲಿ ಅವುಗಳನ್ನು ನುಡಿಸಿದರೆಂದೂ ಹೇಳುತ್ತಾನೆ. ಚಂಗು ಕುರಿತು ಈ ಹಿಂದೆ ಚರ್ಚಿಸಿದೆ.

[1]

ನಾಗಸರ (ನಾಗಸ್ವರ), ಕಹಳೆ, ಉಪಾಂಗ, ಕೊಳಲುಗಳನ್ನೂ ಮಾರುತ (ಗಾಳಿ) ಮೂಲ ವಾದ್ಯಗಳಾಗಿ ಕವಿ ವಿಂಗಡಿಸಿದ್ದಾನೆ.

ನಾಗಸ್ವರವು ಚಿರಪರಿಚಿತವಾದ ವಾದ್ಯ. ಇದನ್ನು ವಿವಾಹ, ದೇವರಪೂಜೆ ಹಾಗೂ ಮಂಗಳ ಕಾರ್ಯಗಳಲ್ಲಿ ಬಳಸುತ್ತಾರೆ. ಸಂಗೀತ, ನೃತ್ಯಗಳಿಗೆ ಇದನ್ನು ಹಿಮ್ಮೇಳವಾಗಿ ಬಳಸುವುದು ಅಷ್ಟಾಗಿ ಕಂಡುಬರುವುದಿಲ್ಲ. ಕಹಳೆ, ಉಪಾಂಗ ಹಾಗೂ ಕೊಳಲಿನ ಸ್ವರೂಪ, ಲಕ್ಷಣಗಳನ್ನು ಹಿಂದೆಯೇ ವಿವರಿಸಿದೆ.[2] ರಾಗ ಅಥವಾ ಗಾನವನ್ನು ಕವಿ ಆಕಾಶ ಮೂಲವಾದ ವಾದ್ಯವೆಂದು ತಿಳಿಸಿದ್ದಾನೆ. ಮಾನವನ ಶಾರೀರವನ್ನು ಸೇರಿಸಿ ಪಂಚ ವಿಧವಾದ್ಯವೆಂದು ವರ್ಗೀಕರಿಸುತ್ತಾನೆ.

ವೈದಿಕ ಕಾವ್ಯಗಳಲ್ಲಿ ಇಲ್ಲಿಯವರೆಗೆ ಚರ್ಚಿಸಿದ ವಾದ್ಯಗಳೇ ನೃತ್ಯ ಪ್ರಸಂಗಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ಕನಕದಾಸರು ಉಲ್ಲೇಖಿಸುವ ಹಸ್ತಿವಾವುಜ (ಮೋಹತ-೧೮-೪೬)ವನ್ನು ಹೊರತುಪಡಿಸಿದರೆ, ಇಲ್ಲಿ ವಿಶೇಷವಾದ ವಾದ್ಯಗಳ ಪ್ರಸ್ತಾಪ ಕಂಡು ಬರುವುದಿಲ್ಲ.

ಅಧ್ಯಾಯ ೪ರಲ್ಲಿ ವೈದಿಕ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳನ್ನು ಕುರಿತು ಚರ್ಚೆಯಲ್ಲಿ ವಾದ್ಯಗಳ ಬಳಕೆಯನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಲಾಗಿದೆ.

ಕನ್ನಡ ಕಾವ್ಯಗಳಲ್ಲಿ ಪ್ರಸ್ತಾಪಗೊಂಡಿರುವ ವಾದ್ಯಗಳ ಬಳಕೆಯ ಒಂದು ವಿಹಂಗಮ ನೋಟ ಅವುಗಳ ವಿಕಾಸ ಶೀಲತೆಯನ್ನು ಪರಿಸ್ಪುಟಗೊಳಿಸುತ್ತದೆ. ಪ್ರಾಚೀನ ಕಾವ್ಯಗಳಿಂದ ಹಿಡಿದು ಈಚಿನ ಕಾವ್ಯಗಳವರೆಗೂ ವಾದ್ಯಗಳು ಹಲವು ಬಾರಿ ಹಲವು ಸನ್ನಿವೇಶಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿರುವುದು ಗೋಚರವಾಗುತ್ತದೆ.

ಪ್ರಚಾರದಲ್ಲಿರುವ ಸಮಕಾಲೀನ ವಾದ್ಯಗಳನ್ನು ಕವಿಗಳು ಬಿಡದೇ ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ಈ ಒಂದು ಮಾರ್ಪಾಡಿನಿಂದ ಮಾರ್ಗ ಹಾಗೂ ದೇಶಿ ವಾದ್ಯಗಳ ಪರಿಚಯ ಸಾಕಷ್ಟು ದೊರೆಯುತ್ತದೆ.

ವಾದ್ಯವೃಂದವನ್ನು ಭರತನು ಕುತಪ[3] ಎಂದರೆ ಶಾರ್ಙ್ಗದೇವನು ಸಂಪ್ರದಾಯ[4] ಎಂದಿದ್ದಾನೆ. ಚತುರ್ವಿಧ ವಾದ್ಯಗಳ ವಾದನಕಾರರು ಗಾಯಕ ಹಾಗೂ ಗಾಯಕೀ ನರ್ತಕಿ ಜನರೆಲ್ಲರೂ[5] ಸೇರಿ (ಒಟ್ಟು ನೂರ ಹನ್ನೆರಡು ಜನರು) ಸಂಪ್ರದಾಯವೆನಿಸುತ್ತದೆ. ಇಲ್ಲಿಯೂ ಉತ್ತಮ, ಮಧ್ಯಮ ಹಾಗೂ ಅಧಮ ಸಂಪ್ರದಾಯಗಳ ಲಕ್ಷಣಗಳನ್ನು ಶಾರ್ಙ್ಗದೇವ ಹೇಳುತ್ತಾನೆ. ಎಲ್ಲ ವರ್ಗದ ಸಂಪ್ರದಾಯಕ್ಕೂ ನಾಯಕನಾದ ಮುಖರಿಯನ್ನು ಆತ ಸೂಚಿಸುತ್ತಾನೆ.

ಇದೇ ಪದ್ಧತಿಯನ್ನು (ಸಂಪ್ರದಾಯ) ಸುಮಾರು ಎಲ್ಲ ಜೈನ ಕವಿಗಳೂ ಪಾಲಿಸಿರುವುದನ್ನು ಈ ಹಿಂದೆ ನಡೆದ ಚರ್ಚೆಯಿಂದ ತಿಳಿಯಬಹುದು. ಕವಿಗಳು ಇಲ್ಲಿ ತಮ್ಮ ಸ್ಪೋಪಜ್ಞತೆಯನ್ನು ತೋರಲೋ ಎಂಬಂತೆ ವಾದ್ಯವೃಂದದಲ್ಲಿ ಮುಖರಿ ಗಾಯಕ, ಉಪವಾದಕ ಹಾಗೂ ಪರಿವಾದಕರನ್ನು ನೇಮಿಸಿರುವುದು ಅವುಗಳ ಅಧ್ಯಯನದಿಂದ ತಿಳಿದು ಬರುವ ಅಂಶ. ಮುಖರಿಯು ಗಾಯನ ಸಂದರ್ಭದಲ್ಲಿ ಮುಖರಿ ಗಾಯಕವಾಗಿಯೂ ವಾದ್ಯಗಳ ಸಂದರ್ಭದಲ್ಲಿ ಮುಖರಿ ವಾದಕನಾಗಿಯೂ ನಿರೂಪಿತವಾಗಿದ್ದಾನೆ. ಇವನ ಜೊತೆಯಲ್ಲಿ ಉಲ್ಲೇಖಿಸುವ ಉಪವಾದಕನನ್ನು ಮುಖರಿ ವಾದಕನನ್ನು ಅನುಸರಿಸಿ ನುಡಿಸುವಾತ ಎಂತಲೂ, ಪರಿವಾದಕನನ್ನು ತಂತೀ ವಾದ್ಯಗಳ ನಾಯಕನನ್ನಾಗಿಯೂ ಪರಿಗಣಿಸಬಹುದು.[6]

ಶಾಸ್ತ್ರಗಳು ಉಲ್ಲೇಖಿಸುವಂತೆ ವಾದ್ಯಗಳನ್ನು ಕವಿಗಳು ವಿವಾಹ, ಸ್ವಯಂವರ, ಪುಂಸವನ, ಪುತ್ರಜನನ ಉತ್ಸವ, ದೇವಾಲಯಗಳಲ್ಲಿ ಪೂಜಾ ಸಂದರ್ಭಗಳಲ್ಲಿ ರಾಜ ಹಾಗೂ ಸಾಮಾಜಿಕರ ಮನೋರಂಜನೆಗಾಗಿಯೂ ಬಳಸುವುದನ್ನು ಕಾಣಬಹುದು. ಇವುಗಳ ಬಳಕೆ, ನುಡಿಸುವ ಕ್ರಮ, ವಾದ್ಯಗಳ ವೈವಿಧ್ಯ ಇವು ಅದಿಪು.ದಿಂದ ಆಧುನಿಕ ಕಾವ್ಯಗಳವರೆಗೆ ಹಲವು ಹಂತಗಳನ್ನು ದಾಟಿ ಮುನ್ನಡೆದಿದೆ.

ಆದಿಪುರಾಣದಿಂದ ಚಂದ್ರಪ್ರಭಾ ಪುರಾಣದವರೆಗೆ ವಾದ್ಯಗಳು. ಮಾರ್ಗ ರೀತಿಯಲ್ಲಿ ಬಳಕೆಯಾಗಿ ಏಕತಾನತೆ ಕಂಡು ಬಂದರೂ ಪ್ರತಿಯೊಬ್ಬ ಕವಿಯೂ ಒಂದೊಂದು ವಾದ್ಯವನ್ನು ವಿಶಿಷ್ಟವಾಗಿ ವಿವರಿಸುತ್ತಾರೆ. ಉದಾಹರಣೆಗೆ ನಾಗಚಂದ್ರನು ಕೊಳಲನ್ನು, ನೇಮಿಚಂದ್ರನು ತಾಳವನ್ನು,  ಗುಣವರ್ಮನು ಆವದ್ಧ ವಾದ್ಯಗಳನ್ನು ಹೀಗೆಯೇ ಇತರ ಕವಿಗಳು ತಮ್ಮ ಇಷ್ಟ ಚಾದ್ಯವನ್ನು ಹೆಚ್ಚಿನ ಆಸಕ್ತಿಯಿಂದ ವಿವರಿಸಿದ್ದಾರೆ ಎಂದೆನ್ನಿಸುವುದು. ಅಗ್ಗಳ ದೇವನಿಂದ ಬಾಹುಬಲಿ (ನಾಗಚ)ಯವರೆಗೆ ಮಾರ್ಗ ಹಾಗೂ ದೇಶೀ ವಾದ್ಯಗಳು ಹೆಗಲೆಣೆಯಾಗಿ ಸಾಗುವುದನ್ನು ನೋಡಬಹುದು. ದೇಶೀ ವಾದ್ಯಗಳ ಜೊತೆಗೆ ದೇಶೀಗಾನ, ದೇಶೀತಾಳ, ಸೂಳಾದಿ ಸಪ್ತತಾಳ, ಶಬ್ದಪ್ರಬಂಧ ಹಾಗೂ ವಾದ್ಯ ಪ್ರಬಂಧಗಳು ಕಾರ್ಯತತ್ಪರರಾಗಿ ಶ್ರವಣೇಂದ್ರಿಯಗಳನ್ನು ತಣಿಸುತ್ತದೆ. ರತ್ನಾಕರ ವರ್ಣಿಯಂತೂ ತನ್ನ ಕಲಾಸಕ್ತಿಯನ್ನು ವಾದ್ಯಗಳ ವಿಷಯದಲ್ಲಿಯೂ ಸಾಕಷ್ಟು ಮೆರೆದಿದ್ದಾನೆ. ಈತ ಅನೇಕ ಹೊಸ ರೀತಿಯ ವಾದ್ಯಗಳನ್ನು ಉಲ್ಲೇಖಿಸಿರುವನು.

7_6_PP_KUH

ಹರಿಹರನ ರಗಳೆಗಳಲ್ಲಿ ಶಿವನೇ ಆರಾಧ್ಯದೈವ. ಈತ ಸ್ವಯಂ ನಾದಮಯವಾಗಿದ್ದಾನೆ. ಇಲ್ಲಿ ವಾದ್ಯಗಳು ನೃತ್ಯಕ್ಕೆ ಒಂದು ಪರಿಕರದಂತೆ ರೂಪಿತವಾಗಿದೆ ಎಂದೆನ್ನಿಸುವುದಿಲ್ಲ. ಆದರೂ ನೃತ್ಯ ಪ್ರಸಂಗವನ್ನು ನೋಡುವ, ರಚಿಸುವ ದೃಷ್ಟಿ ಉತ್ಕೃಷ್ಟವಾಗಿದೆ. ನೃತ್ಯಕ್ಕೆ ಒದಗುವ ಪ್ರತಿಯೊಂದು ವಾದ್ಯದ ಲಕ್ಷಣ, ಸ್ವರೂಪ ನುಡಿಕಾರ ಇತ್ಯಾದಿಗಳನ್ನು ಆತ ಏಕ ನಿಷ್ಠೆ, ಶ್ರದ್ಧೆಗಳಿಂದ ಸಾದ್ಯಂತವಾಗಿ ವಿವರಿಸುತ್ತಾನೆ. ಪದ್ಮಣಾಂಕನೂ ತನ್ನ ಕೃತಿ ಪದ್ಮಪು. ಮೂಲಕ ಸಂಗೀತದ ಲಕ್ಷ್ಯ ಲಕ್ಷಣ ಗ್ರಂಥವನ್ನೇ ಎತ್ತಿ ಬರೆದಂತಾಗಿದೆ. ಸಿಂಗಿರಾಜನೂ ಅಂದು ನೃತ್ಯಕ್ಕೆ ಹಿನ್ನೆಲೆಯಾಗಿ ಬಳಸುತ್ತಿದ್ದ ವಾದ್ಯಗಳನ್ನು ಸೂಚಿಸುತ್ತಾನೆ. ಕನಕದಾಸ ಮತ್ತು ಗೋವಿಂದ ವೈದ್ಯರು ಮೆರವಣಿಗೆ, ಅರಮನೆಗಳಲ್ಲಿ ನೃತ್ಯಕ್ಕೆ ಬಳಸುವ ವಾದ್ಯಗಳತ್ತ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುತ್ತಾರೆ.

ಒಟ್ಟಿನಲ್ಲಿ ಕನ್ನಡ ಕಾವ್ಯಗಳಲ್ಲಿ ನೃತ್ಯ ಸನ್ನಿವೇಶಗಳಲ್ಲಿ ವರ್ಣಿತವಾಗಿರುವ ಪ್ರಮುಖ ನೃತ್ಯ ಪರಿಕರವಾದ ವಾದ್ಯಗಳ ವರ್ಣನೆಯು ಕುತಪ ಹಾಗೂ ಸಂಪ್ರದಾಯದಿಂದ ದೇಶೀ ವಾದ್ಯಗಳು ಬಳಕೆಯವರೆಗೂ ವಿಕಾಸಗೊಂಡ ಕ್ರಮ, ಕ್ರಿಯಾಶೀಲವಾದುದು ಕಲಾಸಂಪನ್ನವಾದುದು. ವಾದ್ಯವೃಂದದಲ್ಲಿ ವಾದ್ಯಗಳ ಸಂಖ್ಯಾ ಬಾಹುಳ್ಯ ಕ್ರಮೇಣ ಇಳಿಯುತ್ತ ಮೂರು ಅಥವಾ ನಾಲ್ಕು ಜನರ ವಾದ್ಯವರಂದಕ್ಕೆ ಸೀಮಿತವಾಗಿರುವುದನ್ನೂ ಕಾಣಬಹುದಾಗಿದೆ.

ಇತ್ತೀಚೆಗೆ ಭರತನಾಟ್ಯ ಶೈಲಿಯ ನೃತ್ಯಕ್ಕೆ ವಾದ್ಯ ವೃಂದದಲ್ಲಿ ಒಂದು ಅವನದ್ಧವಾದ್ಯ (ಮೃದಂಗ) ಒಂದು ತತ (ಪಿಟೀಲು), ಒಂದು ಸುಷಿರ (ಕೊಳಲು) ಹಾಗೂ ಒಬ್ಬ ಗಾಯಕಿ ಅಥವಾ ಗಾಯಕ, ಒಬ್ಬ ನಟುವಾಂಗ ವಾದಕ, ಹೀಗೆ ಕನಿಷ್ಠ ಪ್ರಮಾಣದ ವಾದ್ಯವೃಂದವಿರುತ್ತದೆ. ಉತ್ತರ ಭಾರತದ ಕಥಕ್, ಮಣಿಪುರ, ಒಡಿಸ್ಸಿ ಮುಂತಾದ ನೃತ್ಯ ಶೈಲಿಗಳಲ್ಲಿ ಸಿತಾರ್, ಸ್ವರಮಂಡಲ್, ಸಾರಂಗಿ, ಪಖವಾಜ್, ಖೋಲ್, ಡೋಲಕ್, ಬಾಂಸುರಿ ಮುಂತಾದ ವಾದ್ಯಗಳ ಬಳಕೆ ಇದೆ. ದಕ್ಷಿಣದ ಕಥಕ್ಕಳಿ, ಮೋಹಿನಿ ಅಟ್ಟಂ ಮುಂತಾದ ನೃತ್ಯ ಶೈಲಿಗಳಲ್ಲಿ ಚಂಡೆ, ಮದ್ದಳೆ, ವೀಣೆ, ಜಾಗಟೆ, ಮುಂತಾದ ವಾದ್ಯಗಳು ಬಳಸಲ್ಪಡುತ್ತವೆ.

. ನೃತ್ಯ ಪರಿಕರ : ವೇಷಭೂಷಣ :

ಕಾವ್ಯ, ನೃತ್ಯ, ಶಿಲ್ಪ, ಚಿತ್ರಗಳಲ್ಲಿ ವೇಷಭೂಷಣವು ಪ್ರಧಾನ ಪಾತ್ರವನ್ನು ವಹಿಸಿದೆ. ಕವಿಗಳು ತಮ್ಮ ಕಾವ್ಯಗಳಲ್ಲಿನ ಪಾತ್ರಗಳ ಅಂಗೋಪಾಂಗಗಳನ್ನೂ ವರ್ಣಿಸುವುದರ ಜೊತೆಗೇ ಅವುಗಳನ್ನು ವಿವಿಧ ರೀತಿಯ ವೇಷಭೂಷಣಗಳಿಂದ ಅಲಂಕರಿಸಿ ತಣಿದಿದ್ದಾರೆ. ಇಂತಹ ವರ್ಣನೆಯಿಲ್ಲದಿರುವ ಕಾವ್ಯಗಳು ದುರ್ಲಭ. ನೃತ್ಯ, ಶಿಲ್ಪ ಹಾಗೂ ಚಿತ್ರಗಳಂತಹ ಪ್ರದರ್ಶಕ ಕಲೆಗಳಲ್ಲಂತೂ ವೇಷಭೂಷಣವೂ ಒಂದು ಕಲೆಯಂತೆಯೇ ಪ್ರಕಟಗೊಳ್ಳುತ್ತದೆ.

ಯಾವುದೇ ವ್ಯಕ್ತಿಯು ಗೋಚರನಾಗುವುದು ಆತನ ಬಾಹ್ಯರೂಪದ ಮೂಲಕವೇ. ಆದ್ದರಿಂದ ವೇಷಭೂಷಣಕ್ಕೆ ಭರತನು ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟಿದ್ದಾನೆ. ಪಾತ್ರಗಳು ಅಡಿಯಿಂದ ಮುಡಿಯವರೆಗೆ ಸಿಂಗರಿಸಿಕೊಳ್ಳುವುದನ್ನು ನೇಪಥ್ಯ ವಿಧಿಯೆಂದೂ, ಆಯಾ ಪಾತ್ರಗಳ ಅನುಕರಣೆಯನ್ನು ವೇಷಭೂಷಣಗಳ ಮೂಲಕ ಮಾಡುವುದರಿಂದ ಆಹಾರ್ಯಾಭಿನಯ ಎಂದೂ ಹೇಳಿದೆ. ಭರತ ಇದನ್ನು ಚತುರ್ವಿಧ ಅಭಿನಯಗಳಲ್ಲಿ ಒಂದಾಗಿ ಹೇಳಿದ್ದಾನೆ. ನಾಟ್ಯಗೃಹದ ನಿರ್ಮಾಣದಲ್ಲಿ ನೇಪಥ್ಯಕ್ಕಾಗಿ ಮೂರನೆಯ ಒಂದು ಭಾಗವನ್ನು ಮೀಸಲಿಡಬೇಕೆಂದು ನಿರ್ದೇಶಿಸುವ ಭರತನ ಸೂಚನೆ ಆಹಾರ್ಯದ ಮಹತ್ವವನ್ನು ವ್ಯಕ್ತಪಡಿಸುತ್ತದೆ. ಭರತನು ವಿವರಿಸುವ ಆಹಾರ್ಯಾಭಿನಯ[7]ವು ಸಂಪೂರ್ಣವಾಗಿ ನಾಟಕದ ದೃಷ್ಟಿಯಿಂದ ರಚಿತವಾಗಿರುವುದು

ನಂದಿಕೇಶ್ವರನು ಆಹಾರ್ಯವನ್ನು ಪ್ರತ್ಯೇಕವಾಗಿ ಹೇಳದೆ ಪಾತ್ರ ಲಕ್ಷಣದಲ್ಲಿ ಕೇವಲ ಪಾತ್ರದ ಬಾಹ್ಯರೂಪ, ಬುದ್ಧಿಶಕ್ತಿ, ರಚನಾಸಾಮರ್ಥ್ಯಗಳನ್ನು ಹೇಳುತ್ತಾನೆ.[8] ನಟನ ಸಂದರ್ಭದಲ್ಲೂ ಇದೇ ಮಾದರಿಯನ್ನು ಅನುಸರಿಸಿದ್ದಾನೆ. ಸೋಮೇಶ್ವರನೂ ಇದರ ಬಗ್ಗೆ ಚರ್ಚಿಸುವುದಿಲ್ಲ. ಶಾರ್ಙ್ಗದೇವನು ನರ್ತಕಿಯ ವೇಷಭೂಷಣದ ಬಗೆಗೆ ಚರ್ಚಿಸುವುದರಲ್ಲಿ ಮೊತ್ತಮೊದಲಿಗನೆನ್ನಬೇಕು. ಆತ ನರ್ತಕಿಯ ಅಲಂಕರಣವನ್ನು ವಿವರವಾಗಿ ಹೇಳುತ್ತಾನೆ.

ನರ್ತಕಿಯು ಕೂದಲನ್ನು ಬಾಚಿ ಹಿಂದುಗಡೆ ಸಡಿಲವಾದ ತುರಬನ್ನು ಕಟ್ಟಿ ಅದನ್ನು ಹೂವುಗಳಿಂದ ಅಲಂಕರಿಸಬೇಕು, ಇಲ್ಲವೆ ನಟ್ಟಗೆ ಉದ್ದವಾದ ತುರಬನ್ನು ಕಟ್ಟಿ, ಅದನ್ನು ಮುತ್ತುಗಳಿಂದ ಅಲಂಕರಿಸಬೇಕು. ಹಣೆಯನ್ನು ಮುಂಗುರುಳಿನಿಂದ ಅಲಂಕರಿಸಿ ಶ್ರೀಗಂಧ ಹಾಗೂ ಕಸ್ತೂರಿಯಿಂದ ತಿಲಕವನ್ನು ಹಚ್ಚಬೇಕು. ಕಣ್ಣುಗಳನ್ನು ಕಾಡಿಗೆಯಿಂದ ಅಲಂಕರಿಸಿಕೊಂಡು ಕಿವಿಗಳಿಗೆ ಕೊಳವೆಯಾಕಾರದ ಸುಂದರವಾದ ಕರ್ಣಾಭರಣವನ್ನು ಧರಿಸಿಕೊಳ್ಳಬೇಕು. ದಂತಪಂಕ್ತಿಗಳು ಶುಭ್ರವಾಗಿದ್ದು ಕಾಂತಿಯನ್ನು ಪ್ರದರ್ಶಿಸಬೇಕು. ಕಪೋಲಗಳನ್ನು ನವಿರಾದ ಮಕರಿಕಾ ಪತ್ರಗಳಿಂದ ಲೇಪಿಸಿಕೊಳ್ಳಬೇಕು. ದೊಡ್ಡದಾದ ಮುತ್ತಿನಹಾರದಿಂದ ಕುತ್ತಿಗೆಯನ್ನು ಅಲಂಕರಿಸಿಕೊಳ್ಳಬೇಕು. ಉತ್ತಮವಾದ ಮಣಿಗಳಿಂದ ತಯಾರಿಸಿದ ಬಳೆಗಳನ್ನು ಕೈಗಳಿಗೂ, ಕೆಂಪು, ವಜ್ರ, ಹವಳದಂತಹ ಬೆಲೆಬಾಳುವ ರತ್ನಗಳಿಂದ ಕೂಡಿಸಿದ ಉಂಗುರುಗಳನ್ನು ಕೈಬೆರಳುಗಳಿಗೂ ಅಲಂಕರಿಸಬೇಕು. ಶ್ರೀಗಂಧದಿಂದ ಇಡಿಯ ಶರೀರವನ್ನು ಲೇಪಿಸಿಕೊಳ್ಳಬೇಕು. ಬಿಳಿಯ ರೇಷ್ಮೆ ವಸ್ತ್ರದಿಂದ ತಯಾರಿಸಿದ ಉಡುಪನ್ನು ಧರಿಸಿ ಸಣ್ಣದಾದ ಒಳ ಉಡುಪನ್ನು ಧರಿಸಬೇಕು. ಉಡುಪಿಗೆ ಒಪ್ಪುವ ಕುಪ್ಪಸವನ್ನೂ, ಬಿಗಿಯಾಗಿ ಹೊಂದುವ ಕುಚಬಂಧವನ್ನೂ ಧರಿಸಬೇಕು. ದೊಡ್ಡ ಮುತ್ತಿನಿಂದ ಮಾಡಿದ ಮೊಲೆಕಟ್ಟಿನಿಂದ ವಕ್ಷಸ್ಥಳವನ್ನು ಅಲಂಕರಿಸಿಕೊಳ್ಳಬೇಕು[9] ಎಂದು ವಿವರಿಸುತ್ತಾನಾದರೂ ನರ್ತಕಿಯ ಕಾಲು, ಪಾದಗಳ ಅಲಂಕರಣದ ಬಗ್ಗೆ ಏನೂ ಹೇಳುವುದಿಲ್ಲ.

ಜಾಯ ಸೇನಾಪತಿಯೂ ನೃತ್ತರದಲ್ಲಿ ನರ್ತಕಿಯ ಕಾಲು ಮತ್ತು ಪಾದಗಳ ಅಲಂಕರಣದ ಬಗ್ಗೆ ಹೇಳುವುದಿಲ್ಲ. ಆದರೂ ತರುಣಿಯಾದ ನರ್ತಕಿಯು ಅಂಗುಷ್ಠದಿಂದ ಮುಡಿಯವರೆಗೂ ವಿಭೂಷಿತೆಯಾಗಿರಬೇಕೆಂದು ಹೇಳುತ್ತಾನೆ.[10] ಈತನೂ ಶಾರ್ಙ್ಗದೇವನಂತೆಯೇ ನರ್ತಕಿಯ ವೇಷಭೂಷಣವನ್ನು ವಿವರಿಸುತ್ತಾನಲ್ಲದೇ ಕೆಲವು ಹೊಸ ವಿಷಯಗಳನ್ನೂ ಹೇಳುತ್ತಾನೆ. ನರ್ತಕಿಯು ತನ್ನ ಕೇಶವನ್ನು ತುರುಬಿನಂತೆ ಕಟ್ಟಿ ಅಥವಾ ಜಡೆಯನ್ನು ಹೆಣೆದು ಅದಕ್ಕೆ ಮುತ್ತಿನ ಅಲಂಕಾರವನ್ನು ಮಾಡಿಕೊಳ್ಳಬೇಕು ಎಂದು ಹೇಳುತ್ತಾನೆ.[11] ಆಭರಣಗಳಲ್ಲಿ ಈತ ನಾಸಿಕಾಭರಣವನ್ನು ಹೇಳುತ್ತಾನೆ. ಮುಖಕ್ಕೆ ಚಂದ್ರನಂತೆ ಮುತ್ತಿನ ಮೂಗುತಿ ಶೋಭಿಸುವುದು ಎಂದೂ ಸಮರ್ಥಿಸುತ್ತಾನೆ.[12]

8_6_PP_KUHನರ್ತಕಿಯ ಉಡುಪಿನ ಬಗ್ಗೆಯೂ ಈತ ಸ್ಪಷ್ಟವಾದ ಚಿತ್ರವನ್ನು ಕೊಡುತ್ತಾನೆ. ಚಾರಿ, ಕರಣಾದಿಗಳನ್ನು ಸುಲಭವಾಗಿ ಪ್ರಚಾರಿಸಲು ಅನುವಾಗುವಂತೆ ನರ್ತಕಿಯು ಬಿಗಿಯಾದ ಚಲ್ಲಣವನ್ನು ಒಳಗೆ ಧರಿಸಿದ್ದು, ಅದರ ಮೇಲೆ ಸುಂದರವೂ, ಆಕರ್ಷಕವೂ ಆದ ಬಂಗಾರದ ಝರಿ ಹಾಗೂ ರತ್ನಗಳ  ಕಸೂತಿಯ ಕುಸುರಿಗಳಿಂದ ಅಲಂಕೃತವಾದ ಹತ್ತಿಯ ಅಥವಾ ರೇಷ್ಮೆಯ ವಸ್ತ್ರದಿಂದ ತಯಾರಿಸಿದ ನಿರಿಗೆಗಳುಳ್ಳ, ಹರಡುವಂತಹ ಸೌಲಭ್ಯವಿರುವ ವಸ್ತ್ರವನ್ನು ವಿನ್ಯಾಸಗೊಳಿಸಬೇಕು. ಇದು ಮಂಡಿಯಿಂದ ಮೇಲು ಭಾಗದಲ್ಲಿದ್ದು ಅರ್ಧೋರುಕವಾಗಿರುವುದು. ಮುತ್ತುಗಳಿಂದ ಅಲಂಕೃತವಾದ ಕಂಚುಕವನ್ನು ಧರಿಸಬೇಕೆಂದೂ ಜಾಯ ಸೇನಾಪತಿ ಹೇಳುತ್ತಾನೆ.[13]

ನರ್ತಕಿ ಅಥವಾ ನರ್ತಕನಿಗೆ ಅಗತ್ಯವಾದ ಬಾಹ್ಯ ಪರಿಕರವನ್ನು ಒದಗಿಸುವ ವೇಷಭೂಷಣವನ್ನು ಕುರಿತು ವರ್ಣಿಸಿದ ಕವಿಗಳ ವರ್ಣನೆಯು ಶಾಸ್ತ್ರ ಸಮರ್ಪಕವೂ, ಸಮ್ಮತವೂ ಆಗಿದ್ದರೆ, ಒಮ್ಮೊಮ್ಮೆ ಕವಿಕಲ್ಪನೆ. ಭರತನು ಆಹಾರ‍್ಯಾಭಿನಯವನ್ನು ನಾಲ್ಕು ವಿಧವಾಗಿ ಗುರುತಿಸಿದ್ದಾನೆ.[14] ಅವುಗಳಲ್ಲಿ ಪುಸ್ತ (ಕೃತಕ ವಸ್ತುಗಳನ್ನು ರಂಗದ ಮೇಲೆ ನಿರ್ಮಿಸುವುದು) ಹಾಗೂ ಸಂಜೀವ (ರಂಗದ ಮೇಲೆ ಜೀವಂತ ಪ್ರಾಣಿಗಳನ್ನು ತರುವುದು). ಇವು ನಾಟಕಕ್ಕೆ ಅನ್ವಯವಾಗುವುದು. ಕಾವ್ಯಗಳಲ್ಲಿ ಅವುಗಳ ಪ್ರಸ್ತಾಪವಿಲ್ಲ. ಭರತನು ಹೇಳುವ ಮತ್ತೆರಡು ಪ್ರಕಾರದ ನೇಪಥ್ಯ ವಿಧಿಗಳಾದ ಅಂಗರಚನೆ (ಮುಖ ಮತ್ತು ದೇಹಕ್ಕೆ ಲೇಪಿಸುವ ಬಣ್ಣ ಕೇಶಾಲಂಕಾರ ಇತ್ಯಾದಿ) ಹಾಗೂ ಅಲಂಕಾರ (ದೇಹದ ವಿವಿಧ ಅಂಗಗಳನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವುದು). ಪ್ರಕಾರಗಳನ್ನು ಕುರಿತ ವಿವರಣೆಗಳು ಕಾವ್ಯಗಳಲ್ಲಿ ಲಭ್ಯವಿದೆ. ಆ ನಿಟ್ಟಿನಲ್ಲಿ ಪರಿಶೀಲನೆಯನ್ನು ನಡೆಸಲಾಗುವುದು.

ಪಂಪನು ಇಂದ್ರನ ಆನಂದ ನೃತ್ಯ ಪ್ರಸಂಗದಲ್ಲಿ ಆತನ ವಿಕ್ರಿಯಾ ಬಲದಿಂದ ಪಡೆದ ಭವ್ಯ ರೂಪವನ್ನೂ ಆದರ ಸೊಬಗು ಸೋಜಿಗಗಳನ್ನೂ ವರ್ಣಿಸುತ್ತಾನೆಯೇ ಹೊರತು, ಆತನ ವೇಷ ಭೂಷಣದ ಬಗ್ಗೆ ಶಾಸ್ತ್ರೋಕ್ತವಾಗಿ ಪ್ರಸ್ತಾಪಿಸುವುದಿಲ್ಲ. ತಾಂಡವಮನ್ ಆಡಲುದ್ಯೋಗಂಗೆಯ್ದು ಮಂಗಳಾಳಂಕೃತನಾಗಿ (ಆದಿಪು. ೭-೧೬೬ ವ.) ಎಂದಷ್ಟೇ ಹೇಳುತ್ತಾನೆ.

ಆದರೆ ಸುರನರ್ತಕಿಯಾದ ನೀಲಾಂಜನೆಯ ನೃತ್ಯ ಪ್ರಸಂಗದಲ್ಲಿ ಆಕೆಯ ವೇಷಭೂಷಣವನ್ನು ಪ್ರತ್ಯೇಕವಾಗಿ ಹೇಳದೆ, ಅವಳ ನರ್ತನವು ಮುಂದುವರಿಯುತ್ತಿದ್ದಂತೆಯೇ ಆಕೆಯ ವೇಷಭೂಷಣವನ್ನೂ ಕವಿ ಸುಂದರವಾಗಿ ಬೆಸುಗೆ ಗೈಯುತ್ತಾನೆ. ಆಕೆಯ ಕೇಶಾಲಂಕಾರ, ಆಭರಣ ಹಾಗೂ ಉಡುಪುಗಳು ಆಕೆಯ ತಾಳಬದ್ಧ ನರ್ತನದಲ್ಲಿ ಪಾಲ್ಗೊಂಡ ಪರಿಯನ್ನು ಹೀಗೆ ಪ್ರಕಟಿಸುತ್ತಾನೆ :

ತಾಳದ ಲಯಮಂ ನಿಱೆ |
ನೀಳಾಳಕ ಮಾ (ಹಾ)ರದ ಪೊದೞ್ದ ಮುತ್ತೆಂಬಿವು ಮುಮ ||
ಮೇಳಿಸಿ ಕಯ್ಕೊಂಡುವು ಲುಳಿ |
ತಾಳಕಿ ಕಯ್ಕೊಂಡಳೆಂಬುದೊಂದಚ್ಚರಿಯೇ || (ಆದಿಪು. ೨೪)

ನೀಲಾಂಜನೆಯು ಮುತ್ತಿನ ಹಾರವನ್ನು ಧರಿಸಿದ್ದಳು. ಕೂದಲು ಮುಂಗುರುಳುಗಳು ಅನುಕೂಲಕರವಾಗಿ ಓಲಾಡುವಂತಹ ಕೇಶಾಲಂಕಾರವನ್ನು ಮಾಡಿಕೊಂಡಿದ್ದಳು. ಅಲ್ಲದೆ ಆಕೆಯ ಉಡುಪಿನಲ್ಲಿ ಓರಣವಾಗಿ ಜೋಡಿಸಿದ ನಿರಿಗೆಯೂ ಇತ್ತೆಂದು ಈ ಪದ್ಯದಿಂದ ತಿಳಿಯುತ್ತದೆ.

ಮುತ್ತಿನಹಾರ ಹಾಗೂ ಇತರ ಕಂಠಾಭರಣಗಳನ್ನು ಭರತನು ಅಲಂಕಾರ ಪ್ರಕಾರ ನೇಪಥ್ಯದಲ್ಲಿ ಆಭರಣ ಎಂಬ ವರ್ಗದಲ್ಲಿ ನಾಲ್ಕನೆಯದಾದ ಆರೋಪ್ಯ[15] ಎಂಬ ವಿಧದಲ್ಲಿ ಸೇರಿಸುತ್ತಾನೆ. ಹಣೆಯನ್ನು ಮುಂಗುರುಗಳುಗಳಿಂದ ಅಲಂಕರಿಸಬೇಕು ಶಾರ್ಙ್ಗದೇವ ಹಾಗೂ ಜಾಯಸೇನಾಪತಿ ಹೇಳುತ್ತಾರೆ.[16] ನಿರಿಗೆಯುಳ್ಳ ಉಡುಪನ್ನು ಧರಿಸಿ ನರ್ತಿಸಬೇಕೆಂದು ನೃತ್ತರತ್ನಾವಲಿಯೂ ನಿರ್ದೇಶಿಸುತ್ತದೆ.[17]

ನೀಲಾಂಜನೆಯು ಧರಿಸಿದ ಉಡುಪು ಮತ್ತು ಕಂಠಹಾರಗಳ ಪ್ರಸ್ತಾಪವನ್ನು ಪಂಪ ಪುನಃ ಮಾಡುತ್ತಾನೆ.

ಅವಯವದಿಂದಮೆ ದೇವಾಂ
ಗವಸ್ತ್ರದುಳ್ಳುಡೆಯನಾಕೆಯೋಸರಿಸುವ ಸೂ
ಸುವ ಹಾರಲತೆನಳವಡಿ
ಸುವ ಭಂಗಿಯೆ ಮದನರಾಜ ರಾಜ್ಯವಿಳಾಸಂ (೩೬)

ನೀಲಾಂಜನೆ ರೇಷ್ಮೆ ವಸ್ತ್ರದ ಒಳ ಉಡುಪನ್ನು ಧರಿಸಿದ್ದಳೆಂದೂ ಆಕೆಯ ಕಂಠಹಾರಗಳು ಆಕೆ ಎತ್ತ ಬಾಗಿದರೆ ಅತ್ತ ಬಾಗುತ್ತ ಇರುತ್ತಿದ್ದವಂತೆ. ಶಾಸ್ತ್ರ ಸಮ್ಮತವಾಗಿ ಅಲಂಕರಣಗೊಂಡ, ನರ್ತಕಿಯಾಗಿ ನೀಲಾಂಜನೆ ಶೋಭಿಸಿದ ಚಿತ್ರವನ್ನು ಈ ಪದ್ಯ ಕೊಡುತ್ತದೆ. ನರ್ತಕಿಯು ರಭಸವಾದ ಭ್ರಮರಿಗಳನ್ನು ಮಾಡುವಾಗ, ಕೆಲವು ಚಾರಿ,[18] ಕರಣ[19]ಗಳನ್ನು ಪ್ರಚಾರಿಸುವಾಗ ಕಾಲುಗಳನ್ನು ಮೇಲಕ್ಕೆ ಎತ್ತಬೇಕಾಗುವುದು. ಆಗ ನರ್ತಕಿಯ ಒಳ ಉಡುಪು ಕಾಣುವುದು ಸಹಜ. ಇಂತಹ ಉಡುಪು ರೇಷ್ಮೆ ವಸ್ತ್ರದ್ದಾಗಿರಬೇಕೆಂದು ಶಾಸ್ತ್ರಕಾರರ ಮತ.[20]

ಹೀಗೆ ಪಂಪನು ನೀಲಾಂಜನೆಯ ವೇಷಭೂಷಣವನ್ನು ವರ್ಣಿಸುವುದರಲ್ಲಿ ತನ್ನ ಕಲಾಪ್ರಜ್ಞೆಯನ್ನು ಮೆರೆದಿದ್ದಾನೆ.

ರನ್ನನು ಆಹಾರ್ಯವನ್ನು ಪ್ರತ್ಯೇಕವಾಗಿ ವರ್ಣಿಸದೆ ಚತುರ್ವಿಧ ಅಭಿನಯಗಳನ್ನೂ ಇಂದ್ರನು ಆನಂದನೃತ್ಯದಲ್ಲಿ ಪ್ರದರ್ಶಿಸಿದನೆಂದು ಹೇಳುತ್ತಾನೆ. ಆತನೊಡನೆ ನರ್ತಿಸುವ ಅಮರಿಯರ ವೇಷಭೂಷಣವನ್ನೂ ಹೆಚ್ಚಾಗಿ ಹೇಳುವುದಿಲ್ಲ. ಆದರೆ ನರ್ತನಕ್ಕೆ ಅಗತ್ಯವಾಗಿರಬೇಕಾದ ಕಾಲಿನ ಆಭರಣವಾದ ನೂಪುರದ ಬಗ್ಗೆ ಕವಿಯ ವ್ಯಾಖ್ಯೆ ಗಮನಾರ್ಹವಾಗಿದೆ.

ರಂಜಿಸುವ ಹಂಸರವ ಮುಂ
ರಂಜಿಸದನ್ನಿದಿಱ ಕೆಲದೊಳೆಂಬಿನೆಗಮದೇಂ
ಲಂಜಿಕೆಯರ ಗುಂಜನ್ಮಣಿ
ಮಂಜೀರಕಮಂಜುಸಿಂಜಿತಂ ರಂಜಿಸಿತೋ (ಅಜಿಪು. ೪೨)

ಅಮರಿಯರು ಧರಿಸಿದ ಕಾಲಿನ ನೂಪುರವು ಹಂಸದ ಗತಿ ಹಾಗೂ ಹಂಸಗಳ ಕಲರವಕ್ಕಿಂತಲೂ ಅತಿಶಯವಾದ ಧ್ವನಿಯನ್ನು, ಪಾದಗತಿಗಳ ಮೂಲಕ ಗುಂಜಾರವದಲ್ಲಿ ಕೇಳಿಸುತ್ತ ರಂಜಿಸುತ್ತಿತ್ತು ಎಂಬುದಾಗಿ ನೂಪುರವು ನೃತ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಒಂದು ಅಂಗದಂತೆ ಎಂದು ಕವಿ ಚಿತ್ರಿಸುತ್ತಾನೆ.

ನೂಪುರ, ಕಾಲುಕಡಗ, ಕಿಂಕಿಣಿಗಳನ್ನು ಪ್ರಕ್ಷೇಪ್ಯ ಆಭರಣಗಳ ಗುಂಪಿಗೆ ಸೇರಿಸಲಾಗಿದೆ. ಇವುಗಳ ಪಾದಗಳಲ್ಲೂ ಹಿಮ್ಮಡಿಗಳಲ್ಲೂ ಹರಡಿಕೊಳ್ಳುವುದರಿಂದಲೂ ಮತ್ತು ಆ ಪ್ರದೇಶದಲ್ಲಿ ಕಟ್ಟಿಕೊಳ್ಳುವುದರಿಂದಲೂ ಪ್ರಕ್ಷೇಪ್ಯ ವರ್ಗಕ್ಕೆ ಸೇಸಿದೆಯೆಂದು ವಿದ್ವಾಂಸರ ಅಭಿಪ್ರಾಯ.[21]

ನೂಪುರವನ್ನುಳಿದು ಬೇರೆ ಯಾವ ಆಭರಣಗಳನ್ನಾಗಲಿ ಉಡುಪುಗಳನ್ನಾಗಲಿ ರನ್ನ ಪ್ರತ್ಯೇಕವಾಗಿ ನೃತ್ಯ ಪ್ರಸಂಗಗಳಲ್ಲಿ ವಿವರಿಸುವುದಿಲ್ಲ.

ನಾಗಚಂದ್ರನು ರಾಜವೈಶ್ರವಣನಿಗಾಗಿ ನರ್ತಿಸುವ ನರ್ತಕಿಯ ವೇಷಭೂಷಣವನ್ನು ಶಾಸ್ತ್ರ ಸಮ್ಮತವಾದ ಅಲಂಕರಣ ವಿಶೇಷದೊಂದಿಗೆ ವಿಶದೀಕರಿಸುತ್ತಾನೆ.

ನಯಮಳವಟ್ಟು ತೊಟ್ಟಪಸುರ್ವಟ್ಟೆಯ ಕಂಚುಕ ಮುಟ್ಟನೇತ್ರವ
ಟ್ಟೆಯ ಪೊಸಚಲ್ಲಣಂ ಮುಡಿದ ಮುತ್ತಿನ ದಂಡೆ ತೊಡರ್ಚಿದೊಂದು ದೇ
ಸೆಯ ತೊಡವೊಪ್ಪಮಂ ಪಡೆಯ ಮೂಱೆದ ಬಳ್ಕಿದ ಶಕ್ರಚಾಪಲೇ
ಖೆಯ ತೆಱದಿಂ ತ್ರಿಭಂಗದೊಳದೇನೆಸೆದಿರ್ದಳೊ ಕಾಂತೆ ರಂಗದೊಳ್  || (ಮಲ್ಲಿಪು. ೨೮)

ಕವಿ ನರ್ತಕಿಯ ಕೇಶಾಲಂಕಾರ, ಉಡುಪು ಹಾಗೂ ಆಭರಣಗಳನ್ನು ವಿಶೇಷವಾಗಿ ಉಲ್ಲೇಖಿಸುತ್ತಾನೆ. ಆಕೆ ತನ್ನ ಮುಡಿಯನ್ನು ಮುತ್ತಿನ ದಂಡೆಯಿಂದ ಅಲಂಕರಿಸಿಕೊಂಡು, ರೇಷ್ಮೆ ವಸ್ತ್ರದಿಂದ ತಯಾರಿಸಿದ ಹೊಸ ಚಲ್ಲಣವನ್ನು ಧರಿಸಿ, ಅದಕ್ಕೆ ಸೊಗಸಾಗಿ ಒಪ್ಪುವ ಹಸುರು ಬಟ್ಟೆಯ ಕಂಚುಕ (ಕುಪ್ಪಸ)ವನ್ನು ಧರಿಸಿದ್ದಳೆಂದು ಕವಿಯ ವರ್ಣನೆ. ಮೊಳಕಾಲಿನವರೆಗೆ ಬಿಗಿಯಾಗಿ ಇರುವ ಚಲ್ಲಣದಿಂದ ನರ್ತಕಿಗೆ ನೃತ್ಯದಲ್ಲಿ ಪ್ರಯೋಗಿಸುವ ವೈವಿಧ್ಯಮಯ ಚಾರಿ, ಕರಣಾದಿಗಳನ್ನು ಪ್ರದರ್ಶಿಸಲು ಸುಲಭವಾಗುವುದು. ಅಲ್ಲದೆ ಆಕೆಯ ನಿಲುವು, ಭಂಗಿಗಳು ಸ್ಪಷ್ಟವಾಗಿ ಗೋಚರಿಸಲು ಅನುಕೂಲವಾಗುತ್ತದೆ. ಜಾಯಸೇನಾಪತಿಯೂ ನರ್ತಕಿಗೆ ಈ ತರಹದ ಉಡುಗೆಯನ್ನು ವಿಧಿಸುತ್ತಾನೆ.[22]

ನರ್ತಕಿಯು ತುರುಬನ್ನೂ, ಜಡೆಯನ್ನೂ ಮುತ್ತುಗಳಿಂದ ಅಲಂಕರಿಸಿಕೊಳ್ಳಬೇಕೆಂಬುದು ಶಾಸ್ತ್ರಕಾರರ ಮತ. ಅಂತೆಯೇ ನರ್ತಕಿಯು ತನ್ನ ಕೇಶವನ್ನು ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳೆಂದು ನಾಗಚಂದ್ರ ಸೂಚಿಸುತ್ತಾನೆ. ಆಭರಣಗಳ ಪ್ರತ್ಯೇಕ ವಿವರಣೆಗಳನ್ನು ಆತ ಮಾಡದೆ, ಸೊಗಸಾದ ಆಭರಣಗಳು ಆಕೆಯನ್ನು ಒಪ್ಪವಾಗಿ ಅಲಂಕರಿಸಿದ್ದುವು. ತ್ರಿಭಂಗಿಯ ಸೌಂದರ್ಯವನ್ನು ಪ್ರಕಾಶಿಸಲು ಅನುಕೂಲ ಮಾಡಿ ಕೊಟ್ಟವೆಂದು ಮಾತ್ರ ಹೇಳುತ್ತಾನೆ. ಕೇಶವನ್ನು ಮುತ್ತುಗಳಿಂದ ಅಲಂಕರಿಸಿಕೊಳ್ಳುವ ಪರಿಪಾಠವನ್ನು ಶಾಸ್ತ್ರಗಳೂ ನಿಯಮಿಸುತ್ತವೆ.[23] ಮತ್ತೊಂದೆಡೆ ನಾಗಚಂದ್ರನು ಅಪ್ಸರೆಯರು ಧರಿಸಿದ ‘ಕಾಂಚಿ’ಯ ವರ್ಣನೆಯನ್ನು ಹೀಗೆ ಮಾಡುತ್ತಾನೆ.

ದೆಸೆಬಿದ್ದಂ ಕುಣಿವ ಜನಾಂಗದ ಕಾಂಚೀ ಘಂಟಿಕಾ ಘೋಷ ಮಾಂ
ದೆಸೆಯೊಳ್……………. (ಮಲ್ಲಿಪು. ೧೨೧೧)

ಕಾಂಚಿಯು ಸ್ತ್ರೀಪಾತ್ರದ ಆಭರಣಗಳಲ್ಲಿ ಒಂದು. ಕಾಂಚೀ, ರಶನಾ, ಮೇಖಲಾ, ಕಲಾಪ ಇವು ನಾಭಿಯಿಂದ ಕೆಳಗೆ ಧರಿಸುವ ಆಭರಣಗಳೆಂದು ಭರತಮುನಿ ವಿವರಿಸುತ್ತಾನೆ.[24] ಆತ ಒಡ್ಯಾಣದ ಈ ವಿವಿಧ ಆಭರಣಗಳ ಎಳೆಗಳ ಸಂಖ್ಯೆಯನ್ನು ಹೇಳುತ್ತಾನೆ. ಕಾಂಚಿಗೆ ಒಂದು ಎಳೆ. ಇದರಲ್ಲಿ ಅಳವಡಿಸಿದ್ದ ಚಿಕ್ಕ ಚಿಕ್ಕ ಗೆಜ್ಜೆ (ಘಂಟೆ)ಗಳು ನರ್ತಕಿಯು ನರ್ತಿಸುವ ಪಾದಗಳಿಗೆ ಸರಿಯಾಗಿ ಅನುರಣನಗೊಂಡು ಘೋಷವಾಗುತ್ತಿತ್ತೆಂದು ಹೇಳುತ್ತಾನೆ.

ಬಂಧುವರ್ಮನೂ ನೃತ್ಯ ಸ್ಪರ್ಧೆಯಲ್ಲಿ ಜಯಸೇನೆಯನ್ನು ಗೆದ್ದು ಆಕೆಯನ್ನು ಸ್ವಯಂವರ ಮಂಟಪದಲ್ಲಿ ಎದುರಿಸುವವರಿಗೆ ಕರೆ ಕೊಟ್ಟಂತೆ ಚಲ್ಲಣಮಂ ತುಡುವುದುಮೀಕೆಯ ಗೆಲ್ಪರೊಳರಪ್ಪೊಡೆ ಎಂದು ಘೋಷಿಸುತ್ತಾನೆ. (ಹರಿವಂ. ೨-೩೨ವ.) ನರ್ತನಕ್ಕೆ ಯೋಗ್ಯವಾದ ಉಡುಪವನ್ನು ಧರಿಸಿ ಬನ್ನಿರೆಂದು ಆದೇಶವೀಯುವ ವಿಧಾನ ಬಂಧುವರ್ಮನದು. ಚಲ್ಲಣವು ಸೊಂಟದಿಂದ ಮೊಣಕಾಲಿನವರೆಗೂ ಚಡ್ಡಿಯ ಮಾದರಿಯಲ್ಲಿ ಬಿಗಿಯಾಗಿ ತೊಡೆಗಳಿಗೆ ಸೇರುವಂತೆ ಹೊಲೆದು ತಯಾರಿಸಿದ ಉಡುಪಾಗಿರಬಹುದು. ಕೆಲವು ಶಿಲ್ಪಗಳಲ್ಲಿ ಇದು ಪಾದಗಳವರೆಗೂ ಇಳಿದಿರುವುದುಂಟು, ಚಲ್ಲಣದಲ್ಲೂ ಕಾಲದಿಂದ ಕಾಲಕ್ಕೆ ಉಂಟಾದ ಮಾರ್ಪಾಟುಗಳನ್ನು ಶಿಲ್ಪಗಳಿಂದ ತಿಳಿಯಬಹುದು. ಇದು ಅರ್ಧೋರುಕ.

ಇಂದ್ರನ ವೇಷಭೂಷಣವನ್ನು ಪ್ರತ್ಯೇಕವಾಗಿ ಹೇಳುವಲ್ಲಿ ಜನ್ನ ಕವಿ ಮೊದಲಿಗನಾಗುತ್ತಾನೆ. ಉಳಿದ ಕವಿಗಳು (ಪಂಪ, ನಾಗಚಂದ್ರ, ಆಚಣ್ಣ, ಪಾರ್ಶ್ವಪಂಡಿತ ಮೊದಲಾದವರು) ಇಂದ್ರನು ನೃತ್ಯಕ್ಕೆ ತಕ್ಕ ನೇಪಥ್ಯವನ್ನು ಧರಿಸಿದನೆಂತಲೋ ಮಂಗಳಾಲಂಕಾರನಾಗಿ ಎಂತಲೂ ಆಂಗಿಕ, ವಾಚಿಕ, ಆಹಾರ್ಯ, ಸಾತ್ಪಿಕಾದಿ ಅಭಿನಯದಿಂದ ಕೂಡಿ ಎಂತಲೋ ಉಲ್ಲೇಖಿಸಿದರೆ ಜನ್ನನು ಆತನ ಉಡುಪಿನ ಬಗ್ಗೆ, ಕಟ್ಟಿದ ಗೆಜ್ಜೆಯ ಬಗ್ಗೆ ಗಮನಿಸುತ್ತಾನೆ. ಗತಿಗೆೞ್ದಾಡುವ ಎಂದು ಆರಂಭವಾಗುವ ಪದ್ಯದಲ್ಲಿ.

ವಿನೇಯಂ ಕಟ್ಟಿದುಟ್ಟಟ್ಟ ದೇ
ವತರಂ ಮಂಡಿಸಿಕೊಂಡ ಗೆಜ್ಜೆಮಿಗೆ ರಂಗಂ ಬೊಕ್ಕನಾಖಂಡಲು (ಅನಂಪು. ೯೩)

ಇಂದ್ರನು ರೇಷ್ಮೆ ವಸ್ತ್ರವನ್ನು ಕಟ್ಟಿ ಉಟ್ಟಿದ್ದ ಮಾದರಿಯನ್ನು  ಕವಿ ಸೂಚಿಸುತ್ತಾನೆ. ಅಂದರೆ ಕಚ್ಚೆಯ ಮಾದರಿಯಲ್ಲಿ ಕಟ್ಟಿ ಉಟ್ಟಂತಹ ಉಡುಪಾಗಿರಬಹುದು. ಇಂದ್ರನು ಕಾಲುಗಳಿಗೆ ಗೆಜ್ಜೆಯನ್ನು ಕಟ್ಟಿಕೊಂಡನೆಂದೂ ಜನ್ನವಿಶದ ಪಡಿಸುತ್ತಾನೆ.

ನರ್ತನದ ಪರಿಕರಗಳಲ್ಲಿ ವಾದ್ಯ ಪರಿಕರದಂತೆಯೂ ವೇಷಭೂಷಣದ ಪರಿಕರದಂತೆಯೂ ಗೆಜ್ಜೆಯನ್ನು ಪರಿಗಣಿಸಬಹುದು. ಕಾವ್ಯಗಳಲ್ಲಿ ಇದು ಬಳಕೆಗೊಂಡ ಸಂದರ್ಭದಲ್ಲಿ ವಾದ್ಯ ಅಥವಾ ವೇಷಭೂಷಣದ ಒಂದು ಅಂಗದಂತೆ ಪರಿಗಣಿಸಿ ಅರ್ಥೈಸಬಹುದು.[25] ಇಂದ್ರನ ಆಭರಣಗಳ ಕಾಂತಿಯಿಂದ ಆತನ ಸುತ್ತಮುತ್ತಲೆಲ್ಲ ಪ್ರಕಾಶಮಾನವಾಗಿತ್ತೆಂದೂ ಮುಂದಿನ ಪದ್ಯದಲ್ಲಿ ಇಂದ್ರನ ತೊಡವಿನ ಬಗ್ಗೆಯೂ ಕವಿ ಪ್ರಸ್ತಾಪಿಸುತ್ತಾನೆ.

ಬಾಹುಬಲಿ ಪಂಡಿತನು ಇಂದ್ರನ ಉಡುಪಿನ ಬಗ್ಗೆ ಹೇಳುತ್ತ, ಆತ ರೇಷ್ಮೆಯ ವಸ್ತ್ರವನ್ನು ಉಟ್ಟು ಮುತ್ತಿನ ಕಂಚುಕವನ್ನೂ ಧರಿಸಿದ್ದನೆಂದು ಇಂದ್ರನ ಆನಂದ ನೃತ್ಯದ ವೇಷಭೂಷಣವನ್ನು ವಿವರಿಸುತ್ತಾನೆ.

ಉಟ್ಟದೇವಾಂಗಮಂ ನೆಱೆ
ತೊಟ್ಟುಳ್ಮುತ್ತಿನ ನವೀನ ಕಂಚುಕಮಂ ಸಮ
ಕಟ್ಟಿ ನರ್ತನ ನಿಮಿತ್ತಂ
ಕಟ್ಟಾಯತನಾದನಂದು ಸೌಧರ್ಮೇಂದ್ರಂ (ಧರ್ಮಪು. )

ಮುತ್ತಿನ ಕಂಚುಕವನ್ನು ಪುರುಷರು ಧರಿಸುವ ವಿಧಿಯನ್ನು ಭರತ, ಶಾರ್ಙ್ಗದೇವ, ಜಾಯಸೇನಾಪತಿಗಳು[26] ಹೇಳುವುದಿಲ್ಲ. ಬಾಹುಬಲಿ ಪಂಡಿತನ ಈ ಕಲ್ಪನೆ ಸ್ವತಂತ್ರವಾಗಿರಬಹುದು.

ಬಾಹುಬಲಿ ಮುಂದೆ ನರ್ತಕಿಗೆ ನರ್ತಿಸಲು ಅಗತ್ಯವಿರುವ ಪೂರ್ಣಪ್ರಮಾಣದ ವೇಷಭೂಷಣವನ್ನು ವಿವರಿಸುತ್ತಾನೆ.

ಪಸುರು ವಟ್ಟೆಯ ಕಾಲುಗುಪ್ಪಸರತ್ನಕೀ | ಲಿಸಿದ ಪೊಂಬರಹದ ಕಾಸೆ
ತ್ರಿಸರ ವಿರಾಜಿತ ಮುತ್ತಿನ ಮೊಲೆಕ | ಟ್ಟೆಸುದುದಂದಾ ನರ್ತಕಿಗೆ ||
ನವರತ್ನಮಯಮಪ್ಪ ಕಂಠವಿಭೂಷಣ | ರವಿಯ ಮುದ್ರಿಕೆ ಸೂಡಂಗ
ರವೆಯದ ಕಡಗ ಕಂಕಣ ಮಣಿಕಾಂಚಿಕ | ವಳಂಗದೊಳೊಪ್ಪಿದುವು || (ನಾಗಚ. ೨೨೮೭೮೮)

ನರ್ತಕಿಯು ಧರಿಸಿದ ಚಲ್ಲಣವನ್ನು ಕವಿ ಕಾಲುಕುಪ್ಪಸವೆಂದು ಬಳಸಿದ್ದಾನೆ. ಬಾಹುಬಲಿಯ ಕಾಲದ ಹೊತ್ತಿಗಾಗಲೇ ಅರ್ಧೋರುಕವಾಗಿದ್ದ ಚಲ್ಲಣವು ಪಾದಗಳವರೆಗೆ ವಿಸ್ತೃತಗೊಂಡಿರಬೇಕು. ನರ್ತಕಿ ಹೆಸರು ಬಣ್ಣದ ಚಲ್ಲಣವನ್ನು ಧರಿಸಿ ಅದಕ್ಕೆ ರತ್ನದಿಂದ, ಬಂಗಾರದ ಜರಿಯಿಂದ ಕೋದ ಕಾಸೆಯನ್ನು ಜೋಡಿಸಿ ಧರಿಸಿದ್ದಳು. ಚಲ್ಲಣ ಮತ್ತು ಕಾಸೆಯ ಉಡುಗೆ ನರ್ತಕಿಗೆ ಅತ್ಯಂತ ಅನುಕೂಲಕರವಾದುದು. ಇಂತಹ ಉಡುಗೆಯು ಈಗಲೂ ಭರತನಾಟ್ಯ, ಕೂಚಿಪುಡಿ, ಒಡ್ಡಿಸ್ಸಿಯಂತಹ ನೃತ್ಯಶೈಲಿಗಳಲ್ಲಿ ಬಳಕೆಯಲ್ಲಿರುವುದು.[27]

ನರ್ತಕಿಯು ಮುತ್ತಿನ ಮೊಲೆಕಟ್ಟು, ಮೂರಳೆಯ ಸರ, ನವರತ್ನದ ಕಂಠಾಭರಣ, ಬೆರಳಿಗೆ ಸೂರ್ಯಕಾಂತ ಶಿಲೆಯ ಪ್ರಕಾಶಮಾನವಾದ ಉಂಗುರ, ಕೈಗಳಲ್ಲಿ ಶಬ್ದಮಾಡುವ ಕಡಗ ಕಂಕಣಗಳು ಹಾಗೂ ಮಣಿಮಯ ಕಾಂಚೀಯಿಂದ ತನ್ನನ್ನು ಅಲಂಕರಿಸಿಕೊಂಡಿದ್ದಳೆಂದು ಕವಿ ಆಕೆಯ ವೇಷಭೂಷಣವನ್ನು ವಿಸ್ತಾರವಾಗಿ ಹೇಳುತ್ತಾನೆ. ಆದರೂ ಆತ ನರ್ತಕಿಯ ಕೇಶಾಲಂಕಾರ, ಕರ್ಣಾಭರಣ, ಪಾದಾಭರಣಗಳನ್ನು ಉಲ್ಲೇಖಿಸುವುದಿಲ್ಲ. ನರ್ತಕಿಯ ಅಲಂಕರಣದಲ್ಲಿ ಸಂಗೀರ.ದಲ್ಲಿ ಪ್ರಸ್ತಾಪಿಸುವ ಆಭರಣಗಳಲ್ಲಿ ಕೆಲವನ್ನು ಮಾತ್ರ ಬಾಹುಬಲಿಯು ಪ್ರಸ್ತಾಪಿಸುತ್ತಾನೆ. ಆದರೆ ಉಡುಗೆಯ ವಿಚಾರದಲ್ಲಿ ಶಾರ್ಙ್ಗದೇವನನ್ನೇ ಸಂಪೂರ್ಣವಾಗಿ ಅನುಸರಿಸುತ್ತಾನೆ.[1] ನೋಡಿ ನೃತ್ಯ ಪರಿಕರ, ವಾದ್ಯಗಳು, ಪು. ೩೭.

[2] ನೋಡಿ ಇದೇ ಅಧ್ಯಾಯ, ಪು. ೩೧.

[3] ನೋಡಿ ಇದೇ ಅಧ್ಯಾಯ, ಪು. ೩೧.

[4] ಸಂಗೀರ. -೭-೧೨೬೩ (ಸಂ. ಸುಬ್ರಹ್ಮಣ್ಯಶಾಸ್ತ್ರಿ).

[5] ಅದೇ – ೧೨೬೪-೧೨೬೮.

[6] ಶಾರ್ಙ್ಗಾದೇವ ತಂತೀ ವಾದ್ಯವನ್ನು ‘ಸಂಪ್ರದಾಯ’ದಲ್ಲಿ ಸೇರಿಸಿಲ್ಲ. ಭರತನು ಕುತಪದಲ್ಲಿ ಸೇರಿಸಿದ್ದಾನೆ. (ನೋಡಿ ಪೂರ್ವರಂಗ, ಇದೇ ಅಧ್ಯಾಯ, ಪು.೩೮, ೩೯)

[7] ನಾಟ್ಯಶಾ. (ಸಂ. ಕೇದಾರನಾಥ, ನಿರ್ಣಯ ಸಾಗರ ಪ್ರ) ಅ.೨೧,
ಆಹಾರ‍್ಯಾಭಿನಯೋ ನಾಮಜ್ಞೇಯೋ ನೇಪಥ್ಯಜೋ ವಿಧಿಃ |ಅ. ೨೧.೧.

[8] ಅಭಿದ. ೨೩ ರಿಂದ ೨೫.

[9] ಸಂಗೀರ. ಅ. ೭-೧೨೫೩-೫೭ ಸಂ. ಸುಬ್ರಹ್ಮಣ್ಯ ಶಾಸ್ತ್ರಿ.

[10] ಪಾದಾಂಗುಲೀ ಪರ್ಯಂತೈಃ ಮುಕುಟಾದ್ಯೋರ್ ವಿಭೂಷಿತೈಃ||
ನೃತ್ತರ. ಅ. ೮-೪ (ಸಂ.ವಿ. ರಾಘವನ್)

[11] ಅದೇ. ಅ. ೮-೩೪

[12] ಅದೇ ಅ. ೮-೩೭.

[13] ಅದೇ ಅ. ೮-೩೫-೪೪.

[14] ಚತುರ್ವಿಧಂತು ನೇಪಥ್ಯಂ ಪುಸ್ತೋಲಂಕಾರ ಏವಚ |
ತಥಾಂಗರಚನಾ ಚೈವ ಜ್ಞೇಯಃ ಸಂಜೀವ ಏವಚ ||
ಪು.ನಾಟ್ಯಶಾ. . ೨೧(ಸಂ. ಕೇದಾರನಾಥ)

[15] ನಾಟ್ಯಶಾ. (ಸಂ.ಕೇದಾರನಾಥ, ಪ್ರ. ನಿರ್ಣಯ ಸಾಗರ). ಅ.೨೧-೧೨-೧೪.

[16] ನೋಡಿ ಸಂಗೀರ. ಅ.೭ ನೃತ್ತರ ಅ.೮.

[17] ಅದೇ

[18] ನೋಡಿ ಅನುಬಂಧ ಅ. ಪರಿಭಾಷೆ

[19] ನೋಡಿ ಅನುಬಂಧ ಅ. ಪರಿಭಾಷೆ

[20] ನೋಡಿ ಅದೇ ಅಧ್ಯಾಯ, ಪು.೫೦.

[21] ಚತುರ್ವಿಧಂತು ವಿಜ್ಞೇಯಂ ದೇಹಸ್ಯಾಭರಣಂ ಬುಧ್ಯೆ|
ಆವೇಧ್ಯಂ ಬಂಧನೀಯಂ ಚ ಪ್ರಕ್ಷೇಪ್ಯಾರೋಪಕೇತಥಾ |
ಪ್ರಕ್ಷೇಪ್ಯಂ ನೂಪುರಂ ವಿದ್ಯಾದ್ವಸ್ತ್ರಾಭರಣ ಮೇವಚ ||
(ನಾಟ್ಯಶಾ.ಅ ೨೧-೧೨-೧೩ ಪೂ.) ಸಂ.ಕೇದಾರನಾಥ. ಪು.ನಿರ್ಣಯ ಸಾಗರ

[22] ನೋಡಿ ರೇಖಾಚಿತ್ರ ಪು. ೫೩, ೫೬.

[23] ನೋಡಿ ಅದೇ ಅಧ್ಯಾಯ, ಪು. ೪೯, ೫೦.

[24] ನಾಟ್ಯಶಾ. -ಸಂ.ಕೇದಾರನಾಥ (ಪ್ರ.ನಿರ್ಣಯಸಾಗರ)
ಕಾಂಚೀ ಮೌಕ್ತಿಕಜಾಲಾಡ್ಯಾ ಕುಲಕಂ ವೇಖಲಂ ತಥಾ|
ರಶನಾಚ ಕಲಾಪಶ್ಚ ಭವೇಚ್ಫ್ರೋಣೀವಿಭೂಷಣಮ್ || (ಅ.೨೧-೩೬)

[25] ನೋಡಿ ರೇಖಾ ಚಿತ್ರ. ಪು. ೪೨.

[26] ಹಿಂದೆ ಚರ್ಚಿಸಿದೆ.

[27] ನೋಡಿ ರೇಖಾಚಿತ್ರ ಪು. ೫೩, ೫೬.