ರತ್ನಾಕರವರ್ಣಿಯು ಪೂರ್ವ ನಾಟಕ ಸಂಧಿಯಲ್ಲಿ ನರ್ತಿಸುವ ನರ್ತಕಿಯರ ವೇಷಭೂಷಣವನ್ನು ಬಾಹುಬಲಿಯಂತೆಯೇ ವರ್ಣಿಸುತ್ತಾನೆ. ನೇತ್ರ ಮೋಹಿನಿ, ಚಿತ್ತ ಮೋಹಿನಿಯ ಹಸುರು ಬಣ್ಣದ ಚಲ್ಲಣ ಹಾಗೂ ಅದೇ ಬಣ್ಣದ ಕಾಸೆ ಇವನ್ನು, ಮುತ್ತಿನ ಮೊಲೆಗಟ್ಟನ್ನೂ ಧರಿಸಿದ್ದರೆಂದೂ, ಅದರಿಂದ ಅವರ ರೂಪ ಮತ್ತಷ್ಟೂ ಆಕರ್ಷಕವಾಗಿ ಕಂಡಿತೆಂದು ಹೇಳುತ್ತಾನೆ.

ಪಚ್ಚೆಯ ಚಲ್ಲಣ ಪಂಚವರ್ಣದ ಕಾಸೆ | ಬೆಚ್ಚ ಮುತ್ತಿನ ಮೊಲೆಗಟ್ಟು |
ಅಚ್ಚ ಜವ್ವನೆಯರಿದ್ದರು ನೋಡುವರ ಮನ ಹುಚ್ಚೆದ್ದು ಧರೆಗೆ ಬೀಳ್ವಂತೆ ||
(
ಭರಚ. ಪೂ.ನಾ.ಸಂ. ೫೮)

ಹದಿನಾರು ಜನ ನರ್ತಕಿಯರ ವೇಷಭೂಷಣವನ್ನು ಕವಿ ಉತ್ತರ ನಾಟಕ ಸಂಧಿಯಲ್ಲಿ ವರ್ಣಿಸುತ್ತಾನೆ. ನವರತ್ನದ ಆಭರಣಗಳಿಂದ ಭೂಷಿತೆಯರಾಗಿ, ರತ್ನವನ್ನು ಕೋದು ತಯಾರಿಸಿದ ಕಾಸೆಯನ್ನು ತೊಟ್ಟುಕೊಂಡ ಈ ಷೋಡಶ ರಮಣಿಯರು ರತ್ನದ ಗೊಂಬೆಗಳಂತೆ ಕಾಣುತ್ತಿದ್ದರೆಂದು ಅವರ ಸಮಾಹಿತ ಸೌಂದರ್ಯವನ್ನು ವೈಭವೀಕರಿಸುತ್ತಾನೆ.

ಜಾಯಸೇನಾಪತಿಯು ಅಭಿಪ್ರಾಯಿಸು

[1]ವಂತೆ ರತ್ನಾಕರವರ್ಣಿಯೂ ನರ್ತಕಿಯರಿಗೆ ತಿಲಕರಿಂದ ಆರಂಭಿಸಿ ಮುಖದ ಅಲಂಕಾರದವರೆಗೆ ಮುತ್ತಿನ ಆಭರಣಗಳನ್ನೇ ಅವರ ಅಲಂಕರಣಕ್ಕೆ ಬಳಸುತ್ತಾನೆ.

ಮುತ್ತಿನ ಬೊಟ್ಟು ಮುತ್ತಿನ ಸರ ತುರುಬಿನ | ಮುತ್ತಿನ ಜಡೆ ಮುತ್ತಿನೋಲೆ |
ತತ್ತ ಮೂಗುತಿಯಿಂದ ಮೊಗಗಳಿದ್ದವು ತಾರೆ | ಮುತ್ತಿದ ಬಹುಚಂದ್ರರಂತೆ ||
(
ಭರಚ. – ಉನಾಸಂ. ೫೨)

ಹಳದಿ, ಬಿಳಿ, ಕೆಂಪು, ಕಪ್ಪು, ಹಸುರು ಬಣ್ಣದ ಚಲ್ಲಣ, ಅದಕ್ಕೊಪ್ಪುವ ಕಾಸೆ, ಮೊಲೆಗಟ್ಟುಗಳನ್ನು ಧರಿಸಿದ ಹದಿನಾರು ಜನ ನರ್ತಕಿಯರು ತಮ್ಮ ವಿಲಾಸ, ಮೈಕಾಂತಿಗಳಿಂದ ಅತಿಶಯವಾಗಿ ಕಂಗೊಳಿಸಿದರೆಂದೂ ಕವಿ ಹೇಳುತ್ತಾನೆ.

ರತ್ನಾಕರವರ್ಣಿ ಈ ಸಂದರ್ಭದಲ್ಲಿ ವೈವಿಧ್ಯಮಯ ರೇಷ್ಮೆ ವಸ್ತ್ರದ ಕಾಸೆ, ಚಲ್ಲಣಗಳನ್ನು ಹೆಸರಿಸುತ್ತಾನೆ. ಪುಲ್ಲಿಪಟ್ಟ-ಕಾಗಿನಲ್ಲಿ ರಂಗಿಪಟ್ಟೆಯ ಚಲ್ಲಣಗಳೆಂದು ಹೆಸರಿಸುತ್ತಾನೆ. ಇವು ಒಂದು ರೀತಿಯ ರೇಷ್ಮೆ ವಸ್ತ್ರವಿರಬಹುದು.

ಜೈನ ಕವಿಗಳು ವಾದ್ಯ ಹಾಗೂ ನೃತ್ಯವನ್ನು ವಿವರಿಸಿದಷ್ಟು ವ್ಯಾಪಕವಾಗಿ ವೇಷಭೂಷಣಗಳನ್ನು ವಿವರಿಸುವುದಿಲ್ಲ. ನೀಲಾಂಜನೆಯ ಪ್ರಸಂಗದಲ್ಲಿ ಕವಿ ಪಂಪನಂತೆ ಆಹಾರ್ಯವನ್ನು ನೃತ್ಯದ ಜೊತೆಗೆ ಮಿಳಿತಗೊಳಿಸಿ ಎರಡರ ಸೊಬಗನ್ನೂ ನೂರ್ಮಡಿಗೊಳಿಸುವ ಕಲೆ ಇತರ ಕವಿಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಕೆಲವು ಕವಿಗಳು, ಹೇಳಲೇಬೇಕಾದ ಅನಿವಾರ್ಯ ವಿಷಯದಂತೆ ವೇಷಭೂಷಣವನ್ನು ಉಲ್ಲೇಖಿಸುತ್ತಾನೆ. (ಆಚಣ್ಣ, ಗುಣವರ್ಮ, ಅಗ್ಗಳದೇವ ಮುಂತಾದವರು). ಇಲ್ಲಿನ ನೃತ್ಯ ಪ್ರಸಂಗಗಳಲ್ಲಿ ಪ್ರಧಾನ ನರ್ತಕ ಇಂದ್ರನೇ ಆಗಿರುವುದರಿಂದಲೂ ಕವಿಗಳು ಆಹಾರ್ಯವನ್ನು ಹೆಚ್ಚಾಗಿ ವರ್ಣಿಸದೇ ಇರಲು ಕಾರಣವಿರಬಹುದು. ಬಾಹುಬಲಿ, ರತ್ನಾಕರ ವರ್ಣಿಯರು ಸ್ವಲ್ಪ ಮಟ್ಟಿಗೆ ಅಲಂಕರಣ ಕುರಿತಾದ ಹೆಚ್ಚಿನ ವಿವರಣೆಯನ್ನು ಕೊಡುತ್ತಾರೆ. ಕವಿಗಳ ಈ ಕುರಿತ ವರ್ಣನೆ ಶಾಸ್ತ್ರ ಸಮ್ಮತವಾಗಿದ್ದರೂ ದೇಶೀ ವೇಷಭೂಷಣದ ಮಾಹಿತಿ ಇದರಿಂದ ದೊರಕುವುದಿಲ್ಲ. ಅಲ್ಲದೆ ಯಾವ ಕವಿಯೂ ನರ್ತಕಿಯ ಅಂಗರಚನೆ (ಪ್ರಸಾಧನ, ಮುಖ, ಕೈ ಹಾಗೂ ಕಾಲುಗಳ ಬಣ್ಣ) ಗೆ ಅಷ್ಟು ಗಮನವನ್ನೂ ಕೊಟ್ಟಿಲ್ಲ.

ವೀರಶೈವ ಕವಿಗಳಲ್ಲಿಯೂ ವೇಷಭೂಷಣವು ನೃತ್ಯದ ಪರಿಕರದಂತೆ ಉಲ್ಲೇಖಗೊಂಡಿದ್ದರೂ ಹೆಚ್ಚಿನ ಮಹತ್ವವನ್ನು ಪಡೆದಿಲ್ಲ. ಭೃಂಗೀಶ್ವರ ರಗಳೆಯಲ್ಲಿ ಹರಿಹರನು ಶಿವನ ಒಡ್ಡೋಲಗದಲ್ಲಿ  ನರ್ತಿಸುವ ಭೃಂಗಿಯ ವೇಷಭೂಷಣವನ್ನು ಕುರಿತು ಹೀಗೆ ವರ್ಣಿಸಿದ್ದಾನೆ.

ಭಾಳಂ ತೀವಿದ ಭಸಿತದ ತಿಳಕಂ
ತಾಳಕ್ಕೊಲೆದಾಡುವ ಕೈಚಳಕಂ
ಫಣಿಕುಂಡಲ ಮುತ್ತಿನ ಹಾರಂಗಳ್
ಮಣಿಖಚಿತದ ರತ್ನದ ಮುದ್ರಿಕೆಗಳ್

ಕೆಯ್ಯೂರಂ ಹೊಸ ವಜ್ರದ ಕಂಕಣ
ಒಯ್ಯಾರಂ ಮಿಗೆ ಗೆಜ್ಜೆಯ ಚಲ್ಲಣ
ವೆಸೆಯಲ್ ಸರ್ವಾಂಗದ ಹೊಸ ಭಸಿತಂ
ಮಸಗಲ್ ಕಾಲ್ತೊಡರು ಝಣ ಝಣಿತಂ         (ಭೃಂಗೀರ. ಪು.೩೩೩೪)

ಭರತನು ಆಭರಣಗಳ ಉಪಯೋಗವನ್ನು ಹೇಳುತ್ತ ರಸ, ಭಾವ, ಅವಸ್ಥೆ ಮುಂತಾದುವನ್ನು ಲಕ್ಷ್ಯದಲ್ಲಿಟ್ಟುಕೊಂಡು ಅವನ್ನು ಸುಸಂಗತವಾಗಿ ಉಪಯೋಗ ಮಾಡಬೇಕೆಂದು ನಿರ್ದೇಶಿಸುತ್ತಾನೆ.[2] ಅಂತೆಯೇ ಭೃಂಗಿಯು ತನ್ನ ಮೈಯನ್ನು ಭಸ್ಮದಿಂದ ಅಲಂಕರಿಸಿಕೊಂಡು, ಅದನ್ನೇ ತಿಲಕವನ್ನಾಗಿಯೂ ಬಳಸಿದ್ದನೆಂದು ಕವಿ ಸ್ಪಷ್ಟಪಡಿಸುತ್ತಾನೆ. ಹಣೆಗೆ ಭಸ್ಮ ತಿಲಕವು ಇಲ್ಲಿ ಲಾಂಛನದಂತೆ ಶೋಭೆಯನ್ನು ಕೊಡುತ್ತದೆ. ಭೃಂಗಿಯ ಕವಿಯ ಆಭರಣವು ನಾಗರ ಹಾವಿನ ಆಕಾರದಲ್ಲಿದ್ದು, ಕುತ್ತಿಗೆಗೆ ಮುತ್ತಿನ ಹಾರಗಳನ್ನು ಆತ ಧರಿಸಿದ್ದ. ಕೈಗಳಿಗೆ ವಜ್ರದ ಕಂಕಣ. ಬೆರಳುಗಳಿಗೆ ರತ್ನಖಚಿತ ಉಂಗುರಗಳನ್ನು ಹಾಕಿದ್ದ. ತೋಳಿಗೆ ತೋಳಬಂದಿ ಮತ್ತು ಕಾಲಿಗೆ ಗೆಜ್ಜೆಗಳನ್ನು ಕಟ್ಟಿ ಭೃಂಗಿಯು ಅಲಂಕೃತನಾಗಿದ್ದ, ಆತ ಕಿರುಗೆಜ್ಜೆ ಕೂಡಿಸಿದ್ದ ಚಲ್ಲಣವನ್ನು ಧರಿಸಿದ್ದನೆಂದೂ ಹರಿಹರ ಭೃಂಗೀಶ್ವರನ ವೇಷಭೂಷಣವನ್ನು ವಿವರಿಸುತ್ತಾನೆ.

ಷಡಕ್ಷರ ದೇವನೂ ಎರಡು ಬಾರಿ ವೇಷಭೂಷಣವನ್ನು ನೃತ್ಯದ ಪರಿಕರದಂತೆ ವರ್ಣಿಸಿದ್ದಾನೆ. ರಾಜಶೇಖರನ ಒಡ್ಡೋಲಗದಲ್ಲಿನ ನೃತ್ಯ ವೈಭವವನ್ನು ವಿವರಿಸುವಾಗ ಅಲ್ಲಿ ನರ್ತಿಸುವ ನರ್ತಕಿಯರ ಜಡೆಯನ್ನು ವಿಶೇಷವಾಗಿ ಅವನು ಗುರುತಿಸುತ್ತಾನೆ. ಮುತ್ತಿನ ಹಾರಗಳು ವಕ್ಷ ಪ್ರದೇಶದಲ್ಲಿ ಶೋಭಿಸಿದ ಪರಿಯನ್ನೂ ಹೇಳುತ್ತಾನೆ.

…..ಮುಕುಲ ಮಾಲೆಯಂತೆ ಕುಚತಟದೊಳ್ ಕಂಠಮಾಲೆ ಲೀಲೆವಡೆಯ ಅಳಿವೆಡೆಯಂ ಸಡಿಲ್ಚಿ ನಿಲಿಸಿದ ತಾನು ಚಾಪಲತೆಯಂತೆ ತನುಲತೆ ನಿಡುಜಡೆಯಿಂ ಕಡುಬೆಡಂಗುವಡೆಯೆ ಬಿಸಿನಿ ಬಿಸಿಲನುಟ್ಟುಳೆಂಬಂತೆ ಬಿಗಿದುಟ್ಟ ಮಿಸುನಿ ಪಟ್ಟೆ ಮಿಸುಗುತ್ತಿರೆ     (ರಾಜವಿ..೧೯ .)

ದುಂಬಿಯಂತೆ ಕಪ್ಪಾದ, ಸಡಿಲವಾದ, ಉದ್ದವಾದ ಜಡೆ ನರ್ತಕಿಯರ ಲಾವಣ್ಯಕ್ಕೆ ಮೆರಗನ್ನು ದ್ವಿಗುಣಗೊಳಿಸುವಂತಹ ಅಂಶ. ಆಕೆ ಬಂಗಾರ ಬಣ್ಣದ ರೇಷ್ಮೆ ವಸ್ತ್ರವನ್ನು ಬಿಗಿಯಾಗಿ ಉಟ್ಟಿದ್ದಳೆಂದೂ ಕವಿ ಹೇಳಿರುವುದು ನರ್ತಕಿಯು ನರ್ತಿಸಲು ಯೋಗ್ಯವಾದ ಉಡುಪಿನ ಸೂಚನೆ ಎಂದಾಗುತ್ತದೆ.

ರಾಜಶೇಖರನ ಸಭಾ ವರ್ಣನೆಯಲ್ಲಿ ಪುನಃ ನರ್ತಕಿಯ ವೇಷಭೂಷಣವನ್ನು ಉಲ್ಲೇಖಿಸುತ್ತಾನೆ. ಇದು ಸಂಪೂರ್ಣವಾಗಿ ಶಾಸ್ತ್ರ ಸಮ್ಮತವಾದ ವೇಷಭೂಷಣ.

ತೊಳೆಪೆಳಮುತ್ತು ತೆತ್ತಿಸಿದ ಬಲ್ಮೊಲೆಗಟ್ಟು ನಿತಂಬ ಬಿಂಬಮಂ
ಜುಳಮಣಿಕಾಂಚಿ ಪೊನ್ನ ಪೊಸಕಾಸೆ ಸುವರ್ಣದ ಗುಜ್ಜುಗೆಜ್ಜೆ
ಜ್ಜಳಿಸುವ ರನ್ನವಚ್ಚಮಳಿತಾಗ್ರದ ಕತ್ತುರಿ ಬೊಟ್ಟುಕಾಂತಿ ಮಂ
ದಳಿಸುವ ವಜ್ರದೋಲೆ ತನಗೊಪ್ಪಿರೆ ಬಂದಳದೊಂದು ಲೀಲೆಯಿಂ || (ರಾಜವಿ. ೧೨೬೨)

ವಿರೂಪಾಕ್ಷ ಪಂಡಿತನು ಶಿವನ ತಾಂಡವ ನೃತ್ಯದ ಸಂದರ್ಭದಲ್ಲಿ ಅವನ ವೇಷಭೂಷಣವನ್ನು ವಿವರಿಸುತ್ತಾನೆ.

ಕುಂಜರ ವ್ಯಾಘ್ರ ಚರ್ಮಂಗಳಂ ದೇಸಿಯಂ |
ಮುಂಜೆರಗು ಮಿಗಲುಟ್ಟು ಪೊಳೆವ ಮರಿವಾವಿನಿಂ |
ಕೆಂಜಡೆಗಳಂ ಬಿಗಿದು ವರವಿಭೂತಿಯನೆಸೆವ ಸರ್ವಾಂಗದೊಳ್ ಧೂಳಿಸಿ
(
ಚನ್ನಪು. ೧೦೪೭ ಪೂ)

ಶಿವನಿಗೆ ಆನೆ ಹಾಗೂ ಹುಲಿಯ ಚರ್ಮಗಳು ಉಡಿಗೆಯಾದರೆ ಮರಿಹಾವುಗಳು ಆಭರಣಗಳಾದವು ಆತನು ವಿಭೂತಿಯನ್ನೇ ತನ್ನ ಸರ್ವಾಂಗದಲ್ಲೂ ಲೇಪಿಸಿಕೊಂಡ. ಈ ವರ್ಣನೆಯು ಶಿವನ ಸಹಜ ರೂಪವನ್ನೇ ಪ್ರತಿಬಿಂಬಿಸುತ್ತದೆ.

ಕವಿ ಚಂದ್ರಶೇಖರನು ಮೂರು ಜನ ನರ್ತಕಿಯರು ವೈವಿಧ್ಯಮಯ ನೇಪಥ್ಯವನ್ನು ರಚಿಸಿಕೊಂಡು ನರ್ತಿಸುವುದನ್ನು ನಿರೂಪಿಸುತ್ತಾನೆ.

ದೇಸಿದೂಸರಮಾಗದೆ ಸಮಕಟ್ಟಿನ ರನ್ನದೊಡವಿನ ಮುತ್ತಿನ ಮಿಱುಗುವ ಪೊನ್ನುಡೆ ನೂಲಿನ ಕಿಱುಗೆಜ್ಜೆಯ ಕೊರಳ ಮಣಿ ಮೇಖಲೆಯ ರತಿಯನಣಕಿಸುವ ರೂಪಿನ….. ಮೊಲೆಗಟ್ಟಿನ ಪೊಂಬಟ್ಟೆಯ ಚಲ್ಲಣದ ನಿಱೆವಿಡಿದ ಅರ್ಧೋರುಕದ (ಪಂಪಾವ. ೮೫ .)

ವಿರೂಪಾಕ್ಷನ ಒಡ್ಡೋಲಗದಲ್ಲಿ ನರ್ತಿಸುವ ಮೊದಲ ನರ್ತಕಿ ಮಾರ್ಗ ನೃತ್ಯವನ್ನು ಮಾಡುವಾಕೆ.[3] ಆಕೆ ತನ್ನ ಚೆಲುವನ್ನು ಶಾಸ್ತ್ರ ಸಮ್ಮತವಾದ ರೀತಿಯಲ್ಲಿ ಅಲಂಕರಿಸಿಕೊಂಡಿದ್ದಳು. ಕವಿಯು ಅರ್ಧೋರುಕದ ಸ್ಪಷ್ಟವಾದ ಚಿತ್ರವನ್ನು ಇಲ್ಲಿ ಕೊಡುತ್ತಾನೆ. ಸೊಂಟದಿಂದ ಮೊಳಕಾಲಿನವರೆಗೆ ಚಲ್ಲಣವನ್ನು ಧರಿಸಿ ಮೇಲೆ ನಿರಿಗೆಗಳಿಂದ ಜೋಡಿಸಿ ಓರಣವಾಗಿಸಿದ ಅರ್ಧೋರುಕದ ಚಿತ್ರವನ್ನು[4] ಹೀಗೆ ಮಂಡಿಸುವಲ್ಲಿ ಈತನೇ ಮೊದಲಿಗ. ನೂಲಿನ ಕಿಱುಗೆಜ್ಜೆಯನ್ನು ನರ್ತಕಿಯು ಧರಿಸಿದ್ದಳೆಂಬ ಕವಿಯ ಸೂಚನೆ ಪ್ರಶಂಸನೀಯ.

ಕಂಚು, ತಾಮ್ರ ಅಥವಾ ಬೆಳ್ಳಿಯಿಂದ ತಯಾರಾದ ಗೆಜ್ಜೆಗಳು ಇಂಪಾದ ಸ್ವರವನ್ನು ಉಂಟುಮಾಡುವಂತಾಗಿದ್ದು, ಅವುಗಳನ್ನು ನಕ್ಷತ್ರಾಧಿ ದೇವತೆಗಳಂತೆ ಪರಿಗಣಿಸಿ ಕರಿಯ ನೂಲಿನ ದಾರದಲ್ಲಿ ಪ್ರತಿ ಗೆಜ್ಜೆಗೂ ಗಂಟುಗಳನ್ನು ಹಾಕಿ ಕಟ್ಟಬೇಕೆಂದು ನಂದಿಕೆಶ್ವರನು ಕಿಂಕಿಣಿ ಲಕ್ಷಣದಲ್ಲಿ ಹೇಳುತ್ತಾರೆ.[5] ಈ ಒಂದು ವಿಧಿಯ ತಿಳುವಳಿಕೆಯಿಂದಲೇ ಕವಿ ಗೆಜ್ಜೆಗಳ ವರ್ಣನೆಯನ್ನು ಮಾಡಿರುವನೇನೋ ಎನಿಸುತ್ತದೆ.

ಎರಡನೆಯ ನರ್ತಕಿಯ ವೇಷಭೂಷಣವು ಆಕೆ ಪ್ರಯೋಗಿಸುವ ಕ್ಲಿಷ್ಟಕರ ಅಡವು[6]ಗಳಿಗೆ ಸಮರ್ಪಕವಾಗಿತ್ತೆಂದು ಹೇಳುತ್ತಾನೆ. ಮೂರನೆಯ ನರ್ತಕಿಯು ದೇಶೀ ನೃತ್ಯಗಳನ್ನು ಮಾಡುವಾಕೆ ಅದಕ್ಕಾಗಿ ಆಕೆ ದೇಶೀ ವೇಷಗಳನ್ನು ತೊಟ್ಟಿದ್ದಳೆಂದೂ ಕವಿ ಹೇಳುತ್ತಾನೆ. ಆಕೆ ನರ್ತಿಸುತ್ತ ತನ್ನ ಕೊನೆ ಬೆರಳಿನಿಂದ ಅರ್ಧೋರುಕದ ಚಲ್ಲಣವನ್ನು ಎತ್ತಿ ಹಿಡಿದು ಕಡೆಗಣ್ಣ ನೋಟದಿಂದ ಕಿರುನಗೆಯನ್ನು ಬೀರುತ್ತ ನರ್ತಿಸುತ್ತ ಪ್ರವೇಶಿಸಿದಳೆಂದು ವಿವರಿಸುತ್ತಾನೆ. ಹೀಗೆ ಚಂದ್ರಶೇಖರನು ಮಾರ್ಗ, ದೇಶಿ ಪದ್ಧತಿಯ ವೇಷಭೂಷಣಗಳೆರಡನ್ನೂ ನಮಗೆ ಪರಿಚಯಿಸುತ್ತಾನೆ.

ಮಲ್ಲಕವಿಯು ಕಾವ್ಯಸಾರದಲ್ಲಿ ರಂಭೆಯು ನರ್ತನಕ್ಕಾಗಿ ಶೃಂಗರಿಸಿಕೊಂಡ ಬಗೆಯನ್ನು ಹೀಗೆ ನಿರೂಪಿಸುತ್ತಾನೆ :

ಉಗುರ್ಗಳಮಿಂಚು ಬಣ್ಣ ದೊಡೆಗುಪ್ಪಸ ಮೊಪ್ಪವ ಮಿಂಚು ರಾ(ಕಾ) ಸೆಯಾ
ಸೊಗಸುವ ಮಿಂಚು ಕಾಂಚಿಗಳ ಮಿಂಚುಱೆ ಪೆರ್ಮೊಲೆಗಟ್ಟು ಮಿಂಚು ಬಾ
ಹುಗಳಲೆದೇೞ್ಪ ಮಿಂಚು ಕಂಠ ಸರದ್ವಯದಚ್ಚ ಮಿಂಚು
ಣ್ಮೊಗಗಳ ಮಿಂಚು ರಂಭೆ ಗಿರಿಮಿಂಚಿನ ಪುತ್ಥಳಿಯಂತಿರೊಪ್ಪಿದಳ್ || (ಕಾವ್ಯಸಾ. ೧೫೮)

ನರ್ತಕಿಯ ಅಂಗುಷ್ಠದಿಂದ ಕೊರಳಿನವರೆಗಿನ ಆಕೆಯ ಆಭರಣದ ಹೊಳಹುಗಳ ಜೊತೆಗೆ ಆಕೆಯ ಅಂಗಚ್ಛವಿಯನ್ನೂ ಕವಿ ಸಮೀಕರಿಸುತ್ತಾನೆ.

ಮುಂದಿನ ಪದ್ಯದಲ್ಲಿ ಊರ್ವಶಿಯ ವೇಷಭೂಷಣದ ವರ್ಣನೆ ಇದೆ.

ತಿಳಿವೆಳದಿಂಗಳೊಳ್ದಿರುಳ ಬಣ್ಣದ ಕಾಸೆಯ ಬೆಳ್ಪು ತೋರಮು
ತ್ತಳವಡೆ ಚಂದದಿಂ ಬಿಗಿದ ಪೆರ್ಮೊಲೆಗಟ್ಟಿನ ಬೆಳ್ಪು ಮೌಕ್ತಿಕಂ
ಗಳತೊಡವೆಳ್ಪು ಮೂಗುತಿಯ ಮುತ್ತಿನಢಾಳದ ಬೆಳ್ಪುಮೆಯ್ಯೊಳಂ
ಪೊಳಪಿಡಲಿರ್ಧಳೂರ್ವಶಿ ಕರಂ ಸಲೆ ದಂತದ ಬೊಂಬೆಯೆಂಬಿನಂ || (ಕಾವ್ಯಸಾ. ೧೫೯)

ದಂತದ ಬಣ್ಣದ ಊರ್ವಶಿಯು ಬಿಳಿಯ ಬಣ್ಣದ ಕಚ್ಚೆಯನ್ನುಟ್ಟು ಸ್ವಚ್ಛವಾದ, ಪ್ರಕಾಶಿಸುವ ಮುತ್ತಿನ ಆಭರಣಗಳನ್ನು ತೊಟ್ಟಿದ್ದಳೆಂದು ಕವಿ ಹೇಳುತ್ತಾನೆ. ಈ ವರ್ಣನೆಯೂ ಶಾಸ್ತ್ರ ಸಮ್ಮತವಾಗಿದೆ.

ವೀರಶೈವ ಕವಿಗಳೂ ಜೈನ ಕವಿಗಳಂತೆ ಶಾಶ್ತ್ರ ಸಮ್ಮತವಾದ ವೇಷಭೂಷಣವನ್ನೇ ವರ್ಣಿಸುತ್ತಾರೆ. ಆದರೂ ಕೆಲವೆಡೆ ಪ್ರಸಾಧನದ (ಮುಖ, ಮೈಗಳ ಬಣ್ಣ) ಬಗ್ಗೆ ಕಿಂಚಿತ್ ಸೂಚನೆಯನ್ನು ಕೊಡುತ್ತಾರೆ.

ವೈದಿಕ ಕಾವ್ಯಗಳಲ್ಲೂ ವೇಷಭೂಷಣದ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲ. ಮಣಿದೊಡವೆಗಳನಾಂತು ನಾಟ್ಯವಿದ ವೇಷವನು ಧರಿಸಿ, ಈ ರೀತಿಯ ನುಡಿಗಳಲ್ಲಿ ಕವಿಗಳು ವೇಷಭೂಷಣವನ್ನು ಸೂಚ್ಯವಾಗಿ ಹೇಳುತ್ತಾರೆ.

ಗೋವಿಂದ ವೈದ್ಯನು ಒಂದು ಪದ್ಯದಲ್ಲಿ ನರ್ತಕಿಯರ ವೇಷಭೂಷಣವನ್ನು ಹೇಳುತ್ತಾನೆ.

ತೊಳಗುವ ನವರತ್ನ ಗಾಸೆಯ ಸರ್ವಾಂಗ
ಕಳವಟ್ಟ ಮಣಿ ಭೂಷಣದ
ಥಳ ಥಳಿಸುವ ಮುದ್ದು ಮೊಗದ ನರ್ತಕಿಯರು
ಘಳಿಲನೆ ನಡೆತಂದರಾಗ (ಕಂನವಿ. ೫೬)

ತಿರುಮಲಾರ್ಯನು ರಾಜನ ಆಪ್ತ ಸಂಗಾತಿಗಳು ಆತನಿಗಾಗಿ ನರ್ತಿಸುವಾಗ ತೊಟ್ಟ ಹೊನ್ನದೊಡವೆಗಳ ಕಾಂತಿ, ಅಂದುಗೆಗಳ ಘಲಿರುಗಳನ್ನು ಹೇಳುತ್ತಾನೆ. (ಚಿಕಸ.೪)

ವೇಷಭೂಷಣದ ಬಗ್ಗೆ ಒಟ್ಟಾಗಿ ಹೇಳುವುದಾದರೆ, ಎಲ್ಲ ಕವಿಗಳೂ ಶಾಸ್ತ್ರ ಸಮ್ಮತವಾದ ವರ್ಣನೆಯನ್ನೇ ತಂದು ಅದರಲ್ಲಿ ಏಕತಾನತೆಯನ್ನು ತಂದಿದ್ದಾರೆ. ಕವಿಗಳು ನರ್ತಕಿಯ ಕೇಶಾಲಂಕಾರ, ಮೇಲುಡುಗೆಯ ಬಗ್ಗೆ ಹೆಚ್ಚಾದ ಗಮನವನ್ನು ಕೊಟ್ಟಂತೆ ಕಾಣುವುದಿಲ್ಲ. ಚಲ್ಲಣ, ಕಾಸೆ, ಕುಪ್ಪಸವನ್ನು ಮಾತ್ರ ವರ್ಣಿಸುತ್ತಾರೆ. ವಕ್ಷಸ್ಥಳದ ಮೇಲೆ ದುಕೂಲವನ್ನು ಹೊದೆಯುವ ಪದ್ಧತಿಯು ವಿಜಯನಗರದ ಕಾಲದಿಂದಲೇ ಬಳಕೆಯಲ್ಲಿ ಬಂದ ಪುರಾವೆಗಳು ದೊರೆತಿವೆ.[7] ಆ ಕಾಲದಲ್ಲೇ ಮೈ ಅಳತಗೆ ಸರಿಯಾಗಿ ಹೊಲೆದ ಕಚ್ಚೆಗಳು ರೂಢಿಯಲ್ಲಿದ್ದವೆಂದು ಅಂದಿನ ಶಿಲ್ಪಗಳು ಪ್ರಮಾಣಿಸುತ್ತವೆ. ದುಕೂಲಗಳೂ ತೆಳುವಾಗಿ ಆಕರ್ಷಕ ಬಣ್ಣಗಳ ಪಾರದರ್ಶಕ ಗುಣದ ವಸ್ತ್ರಗಳದಾಗಿರುತ್ತಿತ್ತು ಎಂದೂ ಅಭಿಪ್ರಾಯವಿದೆ. (ನೋಡಿ ರೇಖಾಚಿತ್ರ ವೇಷಭೂಷಣ)

ವೇಷಭೂಷಣದ ಕ್ರಾಂತಿ ಈ ಆಧುನಿಕ ಯುಗದಲ್ಲಿ ಎಷ್ಟೇ ಮುಂದುವರೆದಿದ್ದರೂ, ಶಾಸ್ತ್ರೀಯ ಭರತನಾಟ್ಯ, ಒಡಿಸ್ಸಿ, ಕೂಚಿಪುಡಿಯಂತಹ ನೃತ್ಯಶೈಲಿಗಳಲ್ಲಿ ಕೆಲವು ಅನುಕೂಲಕರವಾದ ಸಣ್ಣ ಸಣ್ಣ ಮಾರ್ಪಾಟುಗಳೊಂದಿಗೆ ಕಾವ್ಯಗಳು ಹಾಗೂ ಶಿಲ್ಪಗಳು ವ್ಯಕ್ತಪಡಿಸುವ ವೇಷಭೂಷಣಗಳನ್ನೇ ನರ್ತಕ, ನರ್ತಕಿಯರು ಇಂದಿಗೂ ಧರಿಸುವ ಪರಿಪಾಠವನ್ನು ಹೊಂದಿದ್ದಾರೆ.

. ಭೂಮಿಕೆ ಜವನಿಕೆ

ನೃತ್ಯದ ಪರಿಕರಗಳೊಡನೆ ಸಜ್ಜಾದ ನರ್ತಕಿ ಅಥವಾ ನರ್ತಕನಿಗೆ ರಂಗದ ಮೇಲೆ ನರ್ತಿಸಲು ಜವನಿಕೆ, ಸ್ಥಾನಕ ಹಾಗೂ ಪುಷ್ಪಾಂಜಲಿಗಳು ಭೂಮಿಕೆಯನ್ನು ಒದಗಿಸುತ್ತವೆ. ಭೂಮಿಕೆಯ ಮೊದಲನೆಯ ಹಂತವಾಗಿ ಜವನಿಕೆಯನ್ನು ಮುಂದೆ ವಿಶ್ಲೇಷಿಸಲಾಗಿದೆ.

ನಿಘಂಟುಕಾರರು ಜವನಿಕೆಗೆ ತೆರೆ, ಪರದೆ, ಕಾಂಡಪಟ ಎಂದು ಅರ್ಥೈಸುತ್ತಾರೆ. ಅಪಟೀಪ್ರತಿ ಸೀರಾ ಕಾಂಡಪಟೆ ತಿರಸ್ಕರಣಿಕಾಖೈ ಜವನಿಕೆಯಕ್ಕುಂ ಎಂದು ವಸ್ತುಕೋಶ[8]ದ ವಿವರಣೆ. ಜವನಿಕೆಯು ಯವನಿಕೆ ಎಂದೂ ಶಾಸ್ತ್ರ ಹಾಗೂ ಕಾವ್ಯಗಳಲ್ಲಿ ಬಳಕೆಗೊಂಡಿದೆ.

ಭರತನು ಪೂರ್ವರಂಗ ವಿಧಿಯಲ್ಲಿ ಜವನಿಕೆಯ ಪ್ರಸ್ತಾಪವನ್ನು ಮಾಡುತ್ತಾನಾದರೂ ಆದರ ಸ್ವರೂಪವನ್ನು ನಿಖರವಾಗಿ ಹೇಳುವುದಿಲ್ಲ. ಆತ ಪೂರ್ವರಂಗದ ವಿಧಿಗಳಾದ[9] ಪ್ರತ್ಯಾಹಾರ, ಅವತರಣ, ಆರಂಭ, ಆಶ್ರವಣ, ವಕ್ತ್ರಪಾಣಿ, ಪರಿಘಟ್ಟನಾ, ಸಂಘೋಟನಾ, ಮಾರ್ಗಾಸಾರಿತಾ, ಅಸಾರಿತಾ, ಬಹಿರ್ಗೀತ ಇವು ಜವನಿಕೆಯ ಹಿಂದೆ ನಡೆದು, ಜವನಿಕೆ ತೆರೆದ ನಂತರ ನೃತ್ತ, ನೃತ್ಯ ಹಾಗೂ ಪಾಠ್ಯ ಸಹಿತವಾದ ಗೀತವನ್ನು ಅಭಿನಯಿಸಬೇಕು ಎಂದು ಆದೇಶಿಸುತ್ತಾನೆ.[10]

ಜಾಯಸೇನಾಪತಿಯು ಯವನಿಕಾವನ್ನು ಪ್ರಸ್ತಾಪಿಸುತ್ತಾನೆ.[11] ನೃತ್ಯಕ್ಕೆ ತಕ್ಕ ವೇಷಭೂಷಣವನ್ನು ಧರಿಸಿ ಆಕೆಯ ಭಂಗಿಯನ್ನು ಪ್ರಕಾಶ ಪಡಿಸುವಂತಹ ಜವನಿಕೆಯ ಮುಂದೆ ನಿಲ್ಲಬೇಕೆಂದು ಸೂಚಿಸುತ್ತಾನೆ. ಯವನಿಕೆಯು ನಾನಾ ವಿಧವೂ ನಾನಾಕಾರವೂ ಆಗಿ ನಾನಾ ವರ್ಣಗಳಿಂದ ಶೋಭಿತವಾಗಿ ಜಗತ್ತನ್ನು ರಂಜಿಸುವುದೆಂದು ಸಾಸಂಭ.ನಲ್ಲಿ ಉಲ್ಲೇಖವಿದೆ.[12]

ಭರತನು ಸೂಚಿಸುವ ಜವನಿಕೆಯನ್ನು ಕುರಿತು ವಿದ್ವಾಂಸರು ಹಲವು ರೀತಿಯ ವಾದಗಳನ್ನು ಮಂಡಿಸಿದ್ದಾರೆ. ವಿದೇಶಿ ವಸ್ತ್ರವನ್ನು ಪರದೆಯಂತೆ ಬಳಸುವ ಅಭ್ಯಾಸದಿಂದ ಜವನಿಕೆ ಅಥವಾ ಯವನಿಕೆ ಉಗಮವಾಯ್ತೆಂದು ಮಂಕಡ್ ಅವರ ಅಭಿಪ್ರಾಯವಾದರೆ,[13] ಎಸ್.ಕೆ.ಡೇ. ಅವರು ಸಂಸ್ಕೃತದ ಗ್ರಂಥಗಳಲ್ಲಿ ಯವನಿಕವು ಯಮನಿಕ ಎಂದು ಬಳಕೆಗೊಂಡುದಾಗಿ ಪ್ರಮಾಣೀಕರಿಸುತ್ತಾರೆ. ಯಮ್ ಧಾತುವಿನ ಮೂಲದ ಯವನಿಕವೆಂದರೆ ಮುಚ್ಚುವ ಪರದೆ ಎಂದು ಅವರು ಅರ್ಥೈಸುತ್ತಾರೆ.[14]

ಇವರೆಲ್ಲರ ಅಭಿಪ್ರಾಯವ ಜವನಿಕೆ ಎಂದರೆ ಪರದೆ ಎಂದೇ ಆದರೂ ರಂಗಭೂಮಿಯಲ್ಲಿ ಅದರ ಸ್ಥಾನ, ಲಕ್ಷಣದ ಬಗ್ಗೆ ಇಲ್ಲಿ ಮಾಹಿತಿ ದೊರೆಯುವುದಿಲ್ಲ. ಅಭಿನವಗುಪ್ತನು ಈ ದಿಸೆಯಲ್ಲಿ ತನ್ನ ಮತವನ್ನು ವಿವರಿಸುತ್ತಾನೆ. ರಂಗಪೀಠ ಹಾಗೂ ರಂಗಶೀರ್ಷದ ಮಧ್ಯ ಜವನಿಕೆ ಅಥವಾ ಯವನಿಕೆಯು ಸ್ಥಾಪಿತವಾಗಿರುತ್ತಿತ್ತು ಎಂದು ಹೇಳುತ್ತಾನೆ.[15] ಘೋಷ್ ಅವರು ಇದು ನೇಪಥ್ಯ ಹಾಗೂ ರಂಗಶೀರ್ಷವನ್ನು ಪ್ರತ್ಯೇಕಗೊಳಿಸುವ ಪರದೆಯಾಗಿತ್ತು ಎಂದು ಹೇಳುತ್ತಾರೆ.[16] ಕೀಥ್ ಅವರು ಈ ವಾದವನ್ನು ಒಪ್ಪುತ್ತ, ಪಾತ್ರಗಳು ಜವನಿಕೆಯ ಹಿಂದೆ ನಿಂತಿದ್ದು ಅವರ ರಂಗಪ್ರವೇಶ ಸಂದರ್ಭದಲ್ಲಿ ಅದನ್ನು ರಭಸವಾಗಿ ಸರಿಸಲಾಗುತ್ತಿತ್ತು ಎಂದು ಹೇಳುತ್ತಾರೆ.[17]

9_6_PP_KUHಕನ್ನಡ ಕಾವ್ಯಗಳಲ್ಲಿ ಜವನಿಕೆಯನ್ನು ಕವಿಗಳು ಬಳಸಿದ್ದಾರೆ. ಆದರೆ ಇಲ್ಲಿಯೂ ಜವನಿಕೆಯ ಸ್ಥಾನ, ಸ್ವರೂಪಗಳ ಪರಿಸ್ಪಷ್ಟವಿಲ್ಲ. ಕೆಲವು ಕವಿಗಳು ಜವನಿಕೆಯ ಹಿಂಭಾಗದಲ್ಲೇ ಪೂರ್ವರಂಗವಿಧಿ, ಪುಷ್ಪಾಂಜಲಿಯನ್ನೂ ಪೂರೈಸಿ ನಂತರ ಜವನಿಕೆ ಸರಿದುದಾಗಿ ಹೇಳಿದರೆ, ಇನ್ನು ಕೆಲವರು ಜವನಿಕೆ ಸರಿದ ನಂತರ ಪುಷ್ಪಾಂಜಲಿ ವಿಕ್ಷೇಪವನ್ನು ಹೇಳುತ್ತಾರೆ. (ಚಿತ್ರ ಪಕ್ಕದ ಪುಟದಲ್ಲಿ)

ಆದಿಪುರಾಣದಲ್ಲಿ ಇಂದ್ರನ ಕಣ್ಣುಗಳ ಕಾಂತಿಯು ಜವನಿಕೆಯ ಸೌಂದರ್ಯವನ್ನು ಮತ್ತೂ ಹೆಚ್ಚಿಸಿತು ಎಂದು ಹೇಳುವಲ್ಲಿ ಜವನಿಕೆಯ ಪ್ರಸ್ತಾಪವಿದೆ. ಜಿನನಾಗಲಿರುವ ವೃಷಭದೇವನ ಜನ್ಮಾಭಿಷೆಕ ಕಲ್ಯಾಣದಲ್ಲಿ ಆನಂದ ನರ್ತನವನ್ನು ಮಾಡಿದ ಇಂದ್ರನ ನೃತ್ಯವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಇಂದ್ರನನ್ನು ನರ್ತಕನಾಗಿ ಜವನಿಕೆಯ ಮುಂದೆ ಚಿತ್ರಿಸುತ್ತಾನೆ.

ರಸಭಾವಲಸ ನಯನ
ಪ್ರಸರಂಗಳ ಪೊಳೆವ ಪೊಳಪುಗಳ್ ಬೆಳ್ಪಳಂ ನೀ
ಳ್ದೆಸೆದುವು ರಂಗದೊಳೆತ್ತಂ
ಪೊಸಯಿಸುತುಂ ಯವನಿಕಾ ವಿಳಾಸಮನಾಗಳ್ (ಆದಿಪು. ೧೧೯)

ಇಂದ್ರನ ಕಣ್ಣಿನ ಬೆಳಕು, ಅದರ ಹೊಳಪುಗಳು ಜವನಿಕೆಯ ಸೌಂದರ್ಯವನ್ನು ಹೊಸದಾಗಿ ಮಾಡಿಸಿತು ಎಂದಷ್ಟೇ ಪಂಪನು ಹೇಳುವುದರಿಂದ ಜವನಿಕೆಯ ಸ್ಥಾನದ ಬಗ್ಗೆ ಇಲ್ಲಿ ಮಾಹಿತಿ ದೊರೆಯುವುದಿಲ್ಲ. ಅಲ್ಲದೆ ಜವನಿಕೆಯು ರಂಗದಲ್ಲಿ ಮೊದಲೇ ಸ್ಥಾಪಿತವಾಗಿದ್ದುದರ ಅದನ್ನು ಸರಿಸಿ ಇಂದ್ರನು ಹೊರಬಂದುದರ ಕ್ರಿಯೆಯ ಬಗ್ಗೆ ಇಲ್ಲಿ ಸೂಚನೆ ಇಲ್ಲ. ಕವಿ ಸ್ಥಾನಕ ಹಾಗೂ ಪುಷ್ಪಾಂಜಲಿಗಳನ್ನು ಜವನಿಕೆಯ ಪ್ರಸ್ತಾಪಕ್ಕೆ ಮೊದಲೇ ಉಲ್ಲೇಖಿಸುತ್ತಾನೆ.

ನೀಲಾಂಜನೆಯ ನೃತ್ಯ ಪ್ರಸಂಗದಲ್ಲಿ ಜವನಿಕೆಯ ಲಕ್ಷಣವನ್ನು ಪಂಪನು ಪರಿಸ್ಫುಟಗೊಳಿಸುತ್ತಾನೆ.

ನಿಲ್ತುವು ರಸಂಗಳಲ್ಲಿ
ಡಲ್ತೆನೆ ಭಂಗಿಯೊಳನಂಗ ಜಂಗಮ ಲತೆವೊಲ್
ನಿಲ್ತು, ಜವನಿಕೆಯ ಮಱಿಯೊಳ್
ಪೋಲ್ತಳವಳ್ ಮುಗಿಲ ಮಱೆಯ ವಿದ್ಯುಲ್ಲತೆಯಂ (ಆದಿಪು. ೨೦)

ಆದಿದೇವನ ಮುಂದೆ ತನ್ನ ಅಸಾಧಾರಣ ನೃತ್ಯ ಪ್ರತಿಭೆಯನ್ನು ತೋರಲು ನೇಪಥ್ಯದಲ್ಲಿ ಸಜ್ಜಾಗಿ ಜವನಿಕೆ ಸರಿಯುವುದನ್ನು ಕಾಯುತ್ತ ನಿಂತ ನೀಲಾಂಜನೆಯ ಮೋಹಕ ರೂಪವನ್ನು ಕವಿ ಮೋಡಗಳ ಮರೆಯ ಬಳ್ಳಿ ಮಿಂಚಿಗೆ ಹೋಲಿಸುತ್ತಾನೆ. ಆಕೆ ಜವನಿಕೆಯ ಮರೆಯಲ್ಲಿ ಒಂದು ಆಕರ್ಷಕ ಭಂಗಿಯಲ್ಲಿ ನಿಂತಿದ್ದಳೆಂದೂ ಮೇಲಿನ ಪದ್ಯದಿಂದ ತಿಳಿದು ಬರುತ್ತದೆ. ಅಷ್ಟೇ ಅಲ್ಲದೇ ಜವನಿಕೆಯು ಸರಿದ ಕೂಡಲೇ ನೀಲಾಂಜನೆ ನರ್ತಿಸಲು ಆರಂಭಿಸುವುದನ್ನು ಸಹ ಈ ಕೆಳಗಿನ ಪದ್ಯ ತಿಳಿಯ ಪಡಿಸುತ್ತದೆ.

ಓಸರಿಸಿದ ಜವನಿಕೆಯೊಡ
ನೋಸರಿಸಿದನಿಸಲೆ ಕಂತು …. (ಆದಿಪು. ೨೧ ಪೂ.)

ಪಂಪನ ಈ ವರ್ಣನೆಯಿಂದ ಜವನಿಕೆಯು ಒಂದು ಪಾರದರ್ಶಕ ಗುಣದ ಬಟ್ಟೆಯಾಗಿದ್ದು, ಅದನ್ನು ಸರಿಸಲು ಬರುವಂತಹ ವ್ಯವಸ್ಥೆಯಿರುವುದು ಸ್ಫುಟವಾಗುತ್ತದೆ.

ಸೂಕ್ಷ್ಮವಾದ ರತ್ನಮಯ ಕಸೂತಿ ಕೆಲಸದಿಂದ ಅಲಂಕೃತಗೊಂಡ ಜವನಿಕೆಯ ಮರೆಗೆ ನೇಪಥ್ಯ ಗೃಹದಲ್ಲಿ ತನ್ನನ್ನು ನರ್ತನಕ್ಕಾಗಿ ಸಿದ್ಧಪಡಿಸಿಕೊಂಡ ನರ್ತಕಿಯು ಬಂದು ನಿಂತಳೆಂದು ನಾಗಚಂದ್ರನೂ ಜವನಿಕೆಯ ಸ್ಥಾನವನ್ನು ಸ್ಪಷ್ಟಪಡಿಸುತ್ತಾನೆ. ಇದು ಸೊಗಸಾದ ಕಲ್ಪನೆ.

ಜವನಿಕೆ ಭೂಷಣಂಗಳ ಲತಾಂಗದಪಾಂಗದ ಕಾಂತಿ ಸುತ್ತಿದಂ
ತೆವೊಲಿರೆ ಲೋಚನೋತ್ಸವಮನೀವ ನಿಜಾಕೃತಿಯಿಂದೆ ಪೋಲ್ತಳಾ
ಯುವತಿ ವಿಚಿತ್ರ ರತ್ನ ರುಚಿಯಿಂ ಪೊರೆದಿಂಗಡಲಿಂದಮುಣ್ಮಿ ಪೊ
ಣ್ಮುವ ನಿಱೆಗೊಂಡ ನೀಳ್ದ ತೆರೆಯಿಂ ಬಳಸಿರ್ದಮೃತಾಂಶುಲೇಖೆಯಂ || (ಮಲ್ಲಿಪು. ೨೪)

ಪಂಪನು ಜವನಿಕೆಯನ್ನು ಮುಗಿಲಿಗೆ ಹೋಲಿಸಿದರೆ, ನಾಗಚಂದ್ರನು ಅಲೆ ಅಲೆಗಳಿಂದ ಕೂಡಿದ ಸಮುದ್ರಕ್ಕೆ ಜವನಿಕೆಯನ್ನು ಹೋಲಿಸುತ್ತಾನೆ. ಇಂತಹ ಜವನಿಕೆಯ ಹಿಂದೆ ನರ್ತಕಿಯು ಭೂಷಣದ ಕಾಂತಿಯಿಂದ ಚಂದ್ರನ ಕಾಂತಿಯಂತೆ ಕಂಗೊಳಿಸುತ್ತ ನೋಟಕರಿಗೆ ಆನಂದವನ್ನು ತರುತ್ತಿದ್ದಳು. ನಾಗಚಂದ್ರ ಹೇಳುವ ಜವನಿಕೆಯು ಪಾರದರ್ಶಕ ಗುಣವುಳ್ಳದ್ದು. ಹೆಚ್ಚಿನ ನಿರುಗೆಯನ್ನು ಅದಕ್ಕೆ ಜೋಡಿಸಿ ಮಧ್ಯೆ, ಮಧ್ಯೆ ರತ್ನ ಖಚಿತವಾದ ಕಸೂತಿಯಿಂದ ಅದನ್ನು ಅಲಂಕರಿಸಿತ್ತು ಎಂದು ತಿಳಿಯುತ್ತದೆ. (ನೋಡಿ ರೇಖಾಚಿತ್ರ ಜವನಿಕೆ.)

ಇಂತಹ ಜವನಿಕೆ ಸರಿಯಲು ನರ್ತಕಿ ಕಣ್ಣಿಗೆ ಕಂಡಳೆಂದೂ ಕವಿ ವಿವರಿಸುತ್ತಾನೆ.

ನವರತ್ನ ಖಚಿತಮೆನಿಸಿದ
ಜವನಿಕೆಯಂ ಕಳೆಯ ರಂಗದೊಳ್ಕಣ್ಗೆಸೆದಳ್
ಧವಳವಿಲೋಚನೆ ಚಿತ್ತೋ
ದ್ಭವನೊಱೆಯಿಂದುರ್ಚಿ ಮಿಗಿಸುವಸಿಲತಿಕೆವೋಲ್       (ಮಲ್ಲಿಪು. ೨೫)

ನಾಗಚಂದ್ರನು ಸಹ ಜವನಿಕೆ ಒಂದು ಆವರಣದಂತಿರುವ ಪರದೆ ಎಂದೇ ಹೇಳುತ್ತಾನೆ. ಈ ಪರದೆಯು ಸರಿದಾಗಲೇ ನರ್ತಕಿಯ ಮನಮೋಹಕ ರೂಪ ಪ್ರೇಕ್ಷಕರಿಗೆ ಕಾಣಲು ಸಾಧ್ಯ. ನಾಗಚಂದ್ರ ಇಂದ್ರನ ಆನಂದ ನೃತ್ಯದ ಸಂದರ್ಭದಲ್ಲಿ ಜವನಿಕೆಯ ಪ್ರಸ್ತಾಪವನ್ನೇ ಮಾಡುವುದಿಲ್ಲ. ಜವನಿಕೆಯ ನೃತ್ಯ ಪ್ರಸಂಗಗಳ ಒಂದು ಅನಿವಾರ್ಯ ಅಂಗವೇ ಎಂಬಂತೆ ಕರ್ಣಪಾರ್ಯನು ಸ್ವಯಂವರ ಮಂಟಪದಲ್ಲಿ ನೃತ್ಯ ಸ್ಪರ್ಧೆಗೆ ತಯಾರಾಗಿ ನಿಂತ ಜಯಸೇನೆ ರಂಗವನ್ನು ಪ್ರವೇಶಿಸಿ ಜವನಿಕೆಯ ಮರೆಯಲ್ಲಿ ನಿಂತು ಅದು ಕಳೆಯುತ್ತದಂತೆ ಆಕೆ ವಿವಿಧ ವಿಧಾನದ ನರ್ತನಗಳನ್ನು ಮಾಡಿದಳೆಂದು ಹೇಳುತ್ತಾನೆ.

ಆಗಳಾ ಜಯಸೇನೆ ರಂಗಂಬೊಕ್ಕುನಂಗ ಶಾಸ್ತ್ರಾಧಿ ದೇವತೆಯ ಮುಖವಸ್ತ್ರಂಗಳಿದುವೆನಿಸಿ ಜವನಿಕೆಗಳೆದು ವಿವಿಧ ನರ್ತನ ವಿದಾನ ದಾನೆಯಾಗಿ ನರ್ತಿಸೆ —- (ಕರ್ಣನೇ೧೮೦ .)

ನೇಮಿಚಂದ್ರನು ಜವನಿಕೆಯನ್ನು ಮರೆಯಾಗುತ್ತಿರುವ ಸಂಜೆಗೆ ಹೋಲಿಸಿದ್ದಾನೆ.

ಕಿಸುಸಂಜೆ ತೊಲಗೆ ತೊಳಗುವ
ಶಶಿಲೇಖೆ ಮಯೂಖನಿಕರಮಂ ಕೆದಱುವವೋಲ್
ಕುಸುಮಾಂಜಳಿಯಂ ತೆಳ್ಪಿನ
ಪೊಸಜವನಿಕೆತೊಲಗೆ ಪೊಳೆದದೇಂ ಕೆದಱಿದಳೋ     (ಲೀಲಾವ. ೧೦೬)

ನಾಗಚಂದ್ರನು ವರ್ಣಿಸುವ ಜವನಿಕೆ ಕ್ಷೀರಸಮುದ್ರದಂತೆ ಶುಭ್ರವೂ ಬೆಳ್ಳಗಿರುವುದೂ ಆದರೆ ನೇಮಿಚಂದ್ರನು ಜವನಿಕೆಯನ್ನು ಇಳಿಯುವ ಸಂಜೆಯ ಬಣ್ಣದ್ದಾಗಿ ಹೇಳುತ್ತಾನೆ.

ಜನ್ನನ ಜವನಿಕೆಯ ಕಲ್ಲಪನೆಯನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತಾನೆ.

ಪಿಡಿದ ಜವನಿಕೆಯ ಮಱೆಯೊಳ್
ಕುಡುಮಿಂಚಿನ ಬಳ್ಳಿಮುಗಿಲ ತೆಳ್ಪೊರೆಯೊಳ್
ಣ್ಗೆಡಱುವೊಲಡರೆ ತೋರ್ದುವು
ತೊಡವಿನ ಬಿಡುವುಂ ಬಿಡೌಜನಂಗಚ್ಛವಿಯುಂ (ಅನಂಪು. ೯೪)

ಜವನಿಕೆಯು ಒಂದು ತೆಳುವಾದ, ಶುಭ್ರವಾದ ಬಟ್ಟೆಯ ಪರದೆ ಎಂದೂ ಅದನ್ನು ಪಾತ್ರಗಳ ಮುಂದೆ ಹಿಡಿಯಲಾಗುತ್ತಿತ್ತು ಎಂದೂ ಈ ಪದ್ಯದಿಂದ ತಿಳಿದು ಬರುತ್ತದೆ. ಜವನಿಕೆಯನ್ನು ಇಬ್ಬರು ಹಿಡಿದು ಪಾತ್ರವನ್ನು ಅದರ ಹಿಂದುಗಡೆ ಪ್ರೇಕ್ಷಕರಿಂದ ಮರೆಮಾಡಿಸಿ, ಪಾತ್ರ ಹಾಗೂ ಜವನಿಕೆ ಹಿಡಿಯುವುದು ಒಟ್ಟಿಗೇ ನರ್ತಿಸುತ್ತ ರಂಗ ಪ್ರವೇಶವನ್ನು ಮಾಡುವ ಪರಿಪಾಠ ಶಾಸ್ತ್ರೀಯ ನೃತ್ಯ ಶೈಲಿಯಾದ ಕೂಚಿಪುಡಿ ನೃತ್ಯ ಶೈಲಿಯಲ್ಲಿ ಇಂದಿಗೂ ಬಳಕೆಯಲ್ಲಿದೆ. ಯಕ್ಷಗಾನ ಪ್ರಸಂಗಗಳಲ್ಲೂ ಜವನಿಕೆಯ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. (ನೋಡಿ ರೇಖಾ ಚಿತ್ರ ಜವನಿಕೆ.)

ಬಂಧುವರ್ಮನು ಜವನಿಕೆಯನ್ನು ಪಾತ್ರವೂ ಮರೆಯಾಗುವಂತೆ ಹಿಡಿದು ಅದನ್ನು ತೆಗೆಯುವ ಸಮಯವನ್ನೂ ಸೂಚಿಸುತ್ತಾನೆ.

———-ಅತೋದ್ಯ ವಾದ್ಯಕಾಱಮೋಸರಿಸಿರ್ದು ಸಮಹಸ್ತ ಮಂ
ಪಿಡಿದು ಪಾತ್ರಮಂ ಬರವೇಳೆ ಜವನಿಕೆಯಂ ತೆಗೆಯಲ್ (ಹರಿವಂ. ೩೨ವ.)

ಸಮಹಸ್ತವು ಒಂದು ವಾದ್ಯ ಪ್ರಬಂಧ. ಅವನದ್ಧ ವಾದ್ಯಗಳು ಈ ಪ್ರಬಂಧವನ್ನು ನುಡಿಸುತ್ತಿರುವಾಗ ಜವನಿಕೆಯನ್ನು ಸರಿಸಿ ಪಾತ್ರವು ರಂಗದಲ್ಲಿ ಪ್ರಕಾಶಗೊಳ್ಳುವ ಕ್ರಿಯೆಯನ್ನು ಬಂಧುವರ್ಮನು ಸ್ಪಷ್ಟವಾಗಿ ನಿರೂಪಿಸುತ್ತಾನೆ.

ಕಮಲಭವನು ಜವನಿಕೆಯನ್ನು ಕಾಂಡಪಟ ಎಂದು ಕರೆದಿದ್ದಾನೆ. ಆಗಳ್ದರ್ಶನಾವರಣೀಯ ಮೋಸರಿಸುವಂತೆ ಕಾಂಡಪಟ ಮೋಸರಿಸೆ (ಶಾಂತೀಶ್ವ. – ೧೪-೧೬೨ವ.) ಈತನೂ ಜವನಿಕೆಯನ್ನು ಒಂದು ತೆರೆಯಂತೆಯೇ ಕಂಡಿದ್ದಾನೆ.[1] ನೋಡಿ ನೃತ್ಯಪರಿಕರ ವೇಷಭೂಷಣ.

[2] ಸಂ. ಕೇದಾರನಾಥ (ಪ್ರ. ನಿರ್ಣಯ ಸಾಗರ) ನಾಟ್ಯಶಾ. ಅ. ೨೧, ೪೨-೪೩.

[3] ನೋಡಿ ಅಧ್ಯಾಯ ೩ (ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು).

[4] ನೋಡಿ ರೇಖಾಚಿತ್ರ ಪು. ೫೩, ೫೬.

[5] ಕಿಂಕಿಣ್ಯಾ ಕಾಂಸ್ಯರಚಿತಾಃ ತಾಮ್ರೇಣ ರಜತೇನ ವಾ.
ಸುಸ್ಪರಾಶ್ಚ ಸುರೂಪಾಶ್ಚ ಸೂಕ್ಷ್ಮಾ ನಕ್ಷತ್ರ ದೇವತಾಃ.
ಬಂಧಯೇನ್ನೀಲ ಸೂತ್ರೇಣ ಗ್ರಂಥಿಭಿಶ್ಚ ಸಮನ್ವಿತಾಃ
ಅಭಿದ. ೩೦-೩೧ ಉ.ಸಂ.ಮ. ಶ್ರೀಧರ ಮೂರ್ತಿ

[6] ನೋಡಿ ಅಧ್ಯಾಯ ೩ (ಪಂಪಾವ. ಹಾಗೂ ನಾಗಚ. ನೃತ್ಯ ಪ್ರಸಂಗಗಳು.)

[7] Social Life in Medieval Karnataka, Jyotsnakamat p. 35

[8] ಉದ್ದೃತಿ.- ಕಸಾಪ ನಿಘಂಟು, ಸಂ. ೩, ಪು. ೩೦೧೨.

[9] ನೋಡಿ ಅದೇ ಅಧ್ಯಾಯ ಪು. ೧೨, ೧೩.

[10] ನಿಘಟ್ಯ ವೈ ಯವನಿಕಾಂ ನೃತ್ತಪಾಠ್ಯಕ್ಕತಾನಿ ಚ |
ಗೀತಾನಾಂ ಮದ್ರಕಾದಿನಾಂ ಯೋಜ್ಯಮೇಕಂ ತು ಗೀತಕಮ್ |
ವರ್ಧಮಾನಮಥಾಪೀಹ ತಾಂಡವಂ ಯತ್ರಯುಜ್ಯತೇ||
ಸಂ.ಮಾ. ರಾಮಕೃಷ್ಣಕವಿ (ನಾಟ್ಯಶಾ. .೧೨ . ೧೩)

[11] ಪುರೋಯವನಿಕಾಶ್ಚಿತ್ರಾ ಸೂಚೀ ವಿಜ್ಞಾನ ಭಂಗಿಭಿಃ || ನೃತ್ತರ. ೮-೭೨ ಸಂ. ವಿ. ರಾಘವನ್.

[12] ಧಾರ‍್ಯಾ ಯವನಿಕಾರಮ್ಯಾ ನಾನಾವರ್ಣ ವಿಭೂಷಿತಾ |
ಭಾವೈ ರ್ಬಹು ವಿಧಾಕಾರೈ ರಂಜಯಂತೀ ಜಗತ್ರಯಮ್ ||
ಸಾಸಂಭ. ಪು. ೧೯೨ ಲೇ. – ವೆಂಕಟಸುಂದರಾಸಾನಿ

[13] Hindu Theatre, IHQ Vol. VIII, 1932.

[14] ಅದೇ.

[15] Anup Rande, Ancient Indian Theatre as Reflected in Natyasastra, Jodhapur, pp. 14-19.

[16] ಅದೇ.

[17] ಅದೇ.