ರತ್ನಾಕರವರ್ಣಿಯು ಪ್ರಾಯೋಗಿಕ ಶಾಸ್ತ್ರೀಯ ನೃತ್ಯ ಸಂದರ್ಭಗಳಲ್ಲಿ ಈಗಲೂ ಬಳಕೆಯಲ್ಲಿರುವ ಅರಮಂಡಿಸ್ಥಾನವನ್ನು ವಿವರಿಸುತ್ತಾನೆ.

ನಡುವಿನೊಳಿಟ್ಟ ಹಸ್ತಗಳು ಪಸರಿಸಿದ
ತೊಡೆಸಾರ್ದ ಮಡಗಳಿಂದಾಗ |
ಮಿಡುಕದೆ ನಿಲುವಿನ ರೇಖೆದೋರಿದರು ಮು |
ಪ್ಪೊಡವಿಯಂದವ ತೋರುವಂತೆ ||  (ಭರಚ, ಪೂ. ನಾ. ಸಂ. – ೫೭)

ಸಮಕಾಲೀನ ಭರತನಾಟ್ಯ ಪದ್ಧತಿಯಲ್ಲಿ ಇದನ್ನು ಅರಮಂಡಿಸ್ಥಾನವೆಂದು ಗುರುತಿಸಲಾಗಿದೆ. ಶಾಸ್ತ್ರಗಳಲ್ಲಿ ದಿನ್ನು ಆಯತ ಮಂಡಲ

[1] ಎಂದು ಸೂಚಿಸಿದ್ದಾರೆ. ಪಾದಗಳೆರಡರ ನಡುವೆ ಹನ್ನೆರಡು ಅಂಗುಲ ಅಂತರವಿರುವಂತೆ ಚತುರಸ್ರ ಭಂಗಿಯಲ್ಲಿ ನಿಂತು ಮಂಡಿಗಳನ್ನು ಸ್ವಲ್ಪ ಬಗ್ಗಿಸುವುದೇ ಆಯತ ಮಂಡಲ.

ಜೈನ ಕವಿಗಳು ಸ್ಥಾನಕದ ಬಗ್ಗೆ ಶಾಸ್ತ್ರೀಯ ನಿಯಮವನ್ನೇ ತಳೆದಿರುವುದು ಮೇಲಿನ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ. ಭರತಮುನಿಯು ಸ್ಥಾನಕವನ್ನು ಸೂತ್ರಧಾರನ ವಿಧಿಯಾಗಿ ಹೇಳಿದರೂ, ಕವಿಗಳು ಇಂದ್ರನನ್ನೇ ಸೂತ್ರಧಾರನಾಗಿಯೂ, ನರ್ತಕನಾಗಿಯೂ ನೃತ್ಯದ ಭೂಮಿಕೆಯೊಂದಿಗೆ ನರ್ತಿಸುವಂತೆ ರೂಪಿಸಿದ್ದಾರೆ. ಶಾಸ್ತ್ರದಲ್ಲಿ ಸೂಚಿಸಿರುವ ವೈಷ್ಣವ ಸ್ಥಾನಕವನ್ನು[2] ಬಿಟ್ಟು ವೈಶಾಖ ಸ್ಥಾನವನ್ನೇ ಇಂದ್ರನಿಗೆ ನಿಗದಿಗೊಳಿಸಿರುವುದು ಜೈನ ಕವಿಗಳ ಮತಶ್ರದ್ಧೆಯನ್ನು ವ್ಯಕ್ತಪಡಿಸುತ್ತದೆ.

ರಾಜಾಸ್ಥಾನಗಳಲ್ಲಿ ನಡೆಯುವ ನರ್ತಕಿಯರ ನೃತ್ಯ ಪ್ರಸಂಗಗಳಲ್ಲಿ ಈ ಕ್ರಮವನ್ನು ಕವಿಗಳು ಅನುಸರಿಸಿಲ್ಲ. ನರ್ತಕಿಯು ತ್ರಿಭಂಗಿಯಲ್ಲಿ ನಿಂತಳೆಂದೋ ಮೋಹಕವಾದ ನಿಲವಿನಲ್ಲಿದ್ದಳೆಂದೋ ವರ್ಣಿಸುತ್ತಾರೆ (ಉದಾ – ನಾಗಚಂದ್ರನಲ್ಲಿ ರಾಜನರ್ತಕಿಯ ನೃತ್ಯ ಪ್ರಸಂಗ; ಲೀಲಾವತಿಯ ರಂಭೆಯ ನೃತ್ಯ ಪ್ರಸಂಗ) ಪಂಚ ಕಲ್ಯಾಣಗಳಲ್ಲಿ ಒಂದಾದ ಗರ್ಭಶೋಧನ ಕಲ್ಯಾಣದಲ್ಲೂ ನರ್ತಕಿಯರ ಸ್ಥಾನಕದ ಪ್ರಸ್ತಾಪವಿಲ್ಲ. ರನ್ನ, ನೇಮಿಚಂದ್ರ, ಬಂಧುವರ್ಮ, ಬಾಹುಬಲಿ, ಬಾಹುಬಲಿ ಪಂಡಿತರು ಸ್ಥಾನಕವನ್ನು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ.

ಶಾಸ್ತ್ರೋಕ್ತವಾದ ವೈಷ್ಣವ ಸ್ಥಾನಕವು ವೈಶಾಖ ಸ್ಥಾನಕಕ್ಕೆ ರೂಪಾಂತರಗೊಂಡು ಲೋಕಾಕಾರ ಆಕೃತಿಗೆ ಸಮೀಕರಣವಾಗಿ ಮುಂದುವರಿದು ಸಮಪಾದ ಸ್ಥಾನವಾಗಿ ಕೊನೆಗೆ ಸಮಕಾಲೀನ ಅರಮಂಡಿ[3] ಸ್ಥಾನದವರೆಗೆ ವಿಕಾಸಗೊಂಡಿರುವ ಬಗೆಯನ್ನು ಸ್ಥಾನಕದ ವಿಶ್ಲೇಷಣೆ ನಮಗೆ ತಿಳಿಸುತ್ತದೆ.

ವೀರಶೈವ ಕವಿಗಳು ಸ್ಥಾನಕಕ್ಕೆ ಹೆಚ್ಚಿನ ಮಹತ್ವನ್ನು ಕೊಟ್ಟಿಲ್ಲ. ವೀರಶೈವ ಕವಿಗಳು ಉಲ್ಲೇಖಿಸುವ ಸ್ಥಾನಕಗಳಲ್ಲಿ ಅಂತಹ ವಿಶೇಷತೆ ಕಂಡು ಬರುವುದಿಲ್ಲ. ಪದ್ಮಣಾಂಕ ಹಾಗೂ ಚಂದ್ರಶೇಖರ ಕವಿಗಳು ಇದನ್ನು ತೀರ ಔಪಚಾರಿಕವಾಗಿ ಉಲ್ಲೇಖಿಸಿ ಮುಂದಿನ ವರ್ಣನೆಗಳಿಗೆ ಗಮನವೀಯುತ್ತಾರೆ. ಪದ್ಮಣಾಂಕ ಇದನ್ನು ಸ್ಥಾಪನೆ[4] ಎಂದು ಸೂಚಿಸುತ್ತಾನೆ. (ಪದ್ಮಪು. ೩-೬೫).

ಚಾಮರಸನು ಮಾಯೆಯ ಸ್ಥಾನಕವನ್ನು ಗಮನವಿಟ್ಟು ವಿವರಿಸುತ್ತಾನೆ. ಆತನ ವಿವರಣೆಯು ಅರಮಂಡಿ ಸ್ಥಾನವನ್ನೇ ಪ್ರಕಟಪಡಿಸುತ್ತದೆ.[5]

ವೈದಿಕ ಕಾವ್ಯಗಳಲ್ಲೂ ಇದೇ ಸ್ಥಿತಿ ಸ್ಥಾನಕಕ್ಕೆ ಲಭಿಸಿದೆ. ಜೈನ, ವೀರಶೈವ ಕಾವ್ಯಗಳಲ್ಲಿರುವಂತೆ ಇಲ್ಲಿನ ಕವಿಗಳು ಸ್ಥಾನಕವನ್ನು ನೃತ್ಯದ ಭೂಮಿಕೆಗಳಲ್ಲಿ ಒಂದರಂತೆ ಕಂಡು ಚಿತ್ರಿಸಲ್ಲ. ಕೆಲವು ಕವಿಗಳು ಮಾತ್ರ ಸ್ಥಾನಕವನ್ನು ಹೆಸರಿಸುತ್ತಾರೆ.

ಕುಮಾರವ್ಯಾಸನು ಇಂದ್ರನು ಆಸ್ಥಾನದಲ್ಲಿ ನರ್ತಿಸುವ ಊರ್ವಶಿ ಅರ್ಜುನನ ಮುಂದೆ ನರ್ತಿಸುವಾಗ ಸ್ಥಾನಕದ ಪ್ರಸ್ತಾಪವನ್ನು ಮಾಡುತ್ತಾನೆ.

ಏನನೆಂಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯ ವಾದ್ಯ ಸು
ಗಾನ ನರ್ತನ ವಿಮಳತೂರ್ಯತ್ರಯದ ಮೇಳವದ
ಆನಿತಂಬಿನಿಯರ ಸುರೇಖಾ
ಸ್ಥಾನಕದ ನಿರುಗೆಯ ಸುಢಾಳದ
ನೂನ ಸಮ್ಮೋಹನದ ತೂಕದ ಭಾವ ಭಂಗಿಗಳ           (ಕಭಾಕ. ಅರಣ್ಯ ೯೨)

ಒಂದು ಲಾಸ್ಯಾಂಗದಿಂದ ಮತ್ತೊಂದು ಲಾಸ್ಯಾಂಗವನ್ನು ಪ್ರದರ್ಶಿಸುವಾಗ ಮಧ್ಯಂತರದಲ್ಲಿ ನರ್ತಕಿಯು ವಹಿಸುವ ಶರೀರದ ಒಂದು ಸನ್ನಿವೇಶವೆಂದು ಕುಮಾರವ್ಯಾಸನು ಸ್ಥಾನಕವನ್ನು ಬಳಸಿದಂತಿದೆ.

ಗೋವಿಂದ ವೈದ್ಯನು ನರ್ತಕಿಯರು ಸ್ಥಾನಕ ಭೇದವನ್ನೇ ತೋರಿದರೆಂದು ಹೇಳುತ್ತಾನೆ.

ವಿಲಸಿತ ಕರಭೇದ ದೃಷ್ಟಿ ಭೇದವು ನೆರೆ
ಯೊಲವು ದೋರುವ ಶಿರಭೇದ
ಸುಲಲಿತ ಸ್ಥಾನಕಭೇದ ಚಾರಿಯ ಭೇದ
ದಲಿ ಭಾವಗಳ ತೋರಿದರು. (ಕಂನವಿ. ೬೨)

ಅಂದು ಪ್ರಚಾರದಲ್ಲಿದ್ದು, ಅರಮನೆಯಲ್ಲಿ ನಡೆಯುವ ಶಾಸ್ತ್ರೀಯ ನೃತ್ಯ ಕಾರ್ಯಕ್ರಮದ ಸ್ವರೂಪವನ್ನು ಅಚ್ಚುಕಟ್ಟಾಗಿ ನಿರೂಪಿಸುವ ಗೋವಿಂದ ವೈದ್ಯನು ಸ್ಥಾನಕ ಭೇದಗಳನ್ನು ವಿವರಿಸುವಾಗ ಅಗತ್ಯವಿರುವ ಮಾಹಿತಿಯನ್ನು ಒದಗಿಸುವಲ್ಲಿ ವಿಫಲನಾಗಿದ್ದಾನೆ ಎನಿಸುವುದು. ಶೃಂಗಾರಮಯವಾಗಿ ನರ್ತಿಸುವ ನರ್ತಕಿಯರು ಪುರುಷಸ್ಥಾನಕ, ಸ್ತ್ರೀಸ್ಥಾನಕ ಹಾಗೂ ದೇಶೀಸ್ಥಾನಕಗಳನ್ನೆಲ್ಲ ಪ್ರಯೋಗಿಸಿದರೆಂದು ಕವಿ ಸೂಚಿಸುತ್ತಿದ್ದಾನೆ ಎನ್ನಿಸುವುದು.

ಒಟ್ಟಿನಲ್ಲಿ ಸ್ಥಾನಕವನ್ನು ಜೈನ ಕವಿಗಳು ನೃತ್ಯದ ಭೂಮಿಕೆಯಲ್ಲಿ ಎರಡನೆಯ ಹಂತವಾಗಿ ಶಾಸ್ತ್ರ ಸಮ್ಮತವಾಗಿ ನಿರೂಪಿಸುತ್ತಾರೆ. ವೀರಶೈವ ಕವಿಗಳು ಕೆಲಮಟ್ಟಿಗೆ ಅದಕ್ಕೆ ಪ್ರಾಶಸ್ತ್ಯವನ್ನಿತ್ತು ವಿವರಿಸುತ್ತಾರೆ. ವೈದಿಕ ಕವಿಗಳಲ್ಲಿ ಅದರ ಪ್ರಸ್ತಾಪ ಗೌಣ.

. ಭೂಮಿಕೆ ಪುಷ್ಪಾಂಜಲಿ

ಕನ್ನಡ ಕಾವ್ಯಗಳಲ್ಲಿ ಭೂಮಿಕೆಯ ಕೊನೆಯ ಹಂತವಾಗಿ ಪುಷ್ಪಾಂಜಲಿ ನೃತ್ಯ ಸನ್ನಿವೇಶಗಳಲ್ಲಿ ರೂಪಗೊಂಡಿದೆ. ಪುಷ್ಪಾಂಜಲಿಯ ಪ್ರಸ್ತಾಪವಿಲ್ಲದೆ ನೃತ್ಯ ಪ್ರದರ್ಶನವು ಮುಂದುವರೆಯುವುದಿಲ್ಲ. ಕವಿಗಳು ಕೆಲವೊಮ್ಮೆ ಪೂರ್ವರಂಗದ ವಿಧಿಯ ಕೊನೆಯ ಅಂಗವಾಗಿ, ಹಲವೊಮ್ಮೆ ಸ್ಥಾನಕದ ಮೊದಲಲ್ಲಿ ಪುಷ್ಪಾಂಜಲಿಯನ್ನು ನಿರೂಪಿಸಿದ್ದಾರೆ. ಬೊಗಸೆಯಲ್ಲಿರುವ ಹೂಗಳನ್ನು ರಂಗಪೀಠದಲ್ಲಿ ಚೆಲ್ಲುವ ಕ್ರಿಯೆಯು ಪುಷ್ಪಾಂಜಲಿ ಎನಿಸುತ್ತದೆ.[6] ಬೊಗಸೆ ತುಂಬಿರುವ ಹೂವುಗಳು ಪುಷ್ಪಾಂಜಲಿ[7] ಎಂದು ನಿಘಂಟಿನ ಅರ್ಥ.

ಪೂರ್ವರಂಗ ವಿಧಿಯಲ್ಲಿ ವಾದ್ಯಮೇಳವು ಮಧ್ಯಲಯದಲ್ಲಿ ನಡೆಯುತ್ತಿದ್ದಾಗ ಸೂತ್ರಧಾರ ಪುಷ್ಪಾಂಜಲಿಗಾಗಿ ಬೊಗಸೆಗಳಲ್ಲಿ ಹೂವುಗಳನ್ನು ಹಿಡಿದು ರಂಗವನ್ನು ಪ್ರವೇಶಿಸಿ ವೈಷ್ಣವ ಸ್ಥಾನಕದಲ್ಲಿ ನಿಲ್ಲಬೇಕೆಂದು ಸೂಚಿಸುತ್ತಾನೆ. ಸೂತ್ರಧಾರ ಶುಭ್ರವಾದ ಬಿಳಿಯ ವಸ್ತ್ರಗಳನ್ನು ಧರಿಸಿರಬೇಕು. ಈತನ ಅಕ್ಕಪಕ್ಕದಲ್ಲಿ ನಿಂತಿರುವ ಕಮಂಡಲ ಹಾಗೂ ಜರ್ಜರಧಾರಿಗಳು ಶುಭ್ರವಾದ ವಸ್ತ್ರಗಳನ್ನು ಧರಿಸಿ ನಿಂತಿರಬೇಕು. ಸೂತ್ರಧಾರನು ಸೂಚಿಚಾರಿಯನ್ನು[8] ಮಾಡುತ್ತಾ ಬ್ರಹ್ಮವರ್ತುಳದಲ್ಲಿ, ಅಂದರೆ ರಂಗಪೀಠದಲ್ಲಿ ಪುಷ್ಪಾಂಜಲಿಯನ್ನು ಮಾಡಬೇಕು. ಇದು ಭರತೋಕ್ತ ಪುಷ್ಪಾಂಜಲಿ ವಿಧಿ.

ನಂದಿಕೇಶ್ವರನು ಪುಷ್ಪಾಂಜಲಿಯನ್ನು ಪ್ರತ್ಯೇಕವಾದ ಅಧ್ಯಾಯದಲ್ಲಿ ವಿಸ್ತಾರವಾಗಿ ಹೇಳುತ್ತಾನೆ. ಪುಷ್ಪಾಂಜಲಿಯನ್ನು ಸಪ್ತಲಾಸ್ಯದ ಮೊದಲಲ್ಲಿ ಆರಂಭಿಸಬೇಕೆಂದೂ, ಅದರಲ್ಲಿ ದೈವಿಕ ಹಾಗೂ ಮಾನುಷ ಎರಡು ವಿಧಗಳ ಪುಷ್ಪಾಂಜಲಿ ಕ್ರಿಯೆಗಳುಂಟೆಂದೂ ಸೂಚಿಸುತ್ತಾನೆ. ಆರು ಪುರುಷಸ್ಥಾನಕ[9] ಏಳು ಸ್ತ್ರೀಸ್ಥಾನಕ[10] ಹಾಗೂ ಹದಿನೆಂಟು ಇತರ ಸ್ಥಾನಕಗಳು ಪುಷ್ಪಾಂಜಲಿ ಕ್ರಿಯೆಯಲ್ಲಿ ಬಳಸಬಹುದಾದುದೆಂದು ನಿರ್ದೇಶಿಸುತ್ತಾನೆ. ಮುಂದೆ ಆಯಾ ದಿಗ್ದೇವತೆಗಳಿಗೆ ಅರ್ಪಿಸಬೇಕಾದ ಹೂವುಗಳು ನರ್ತಕಿ ಪ್ರಯೋಗಿಸಬೇಕಾದ ಕರಣಗಳು ತಾಳ, ಪಾಟಾಕ್ಷರಗಳು ಈ ಎಲ್ಲ ಕ್ರಿಯೆಗಳು ಕಥನಗೊಂಡಿವೆ.

ಪುಂಡರೀಕ ವಿಠಲನೂ ಪೂರ್ವರಂಗದ ನಂತರ ಮಾಡುವ ಮುಖಚಾಲಿ[11]ಯಲ್ಲಿ ರಂಗ ಮಧ್ಯದಲ್ಲಿ ಪುಷ್ಪಾಂಜಲಿ ಮಾಡಬೇಕೆಂದೂ, ರಂಗ ಮಧ್ಯದಲ್ಲಿ ಬ್ರಹ್ಮನೇ ನೆಲಸಿರುವುದರಿಂದ  ಅಲ್ಲಿ ಹೂಗಳನ್ನು ಕೈಗಳಿಂದ ಬಿಟ್ಟರೆ ಇಷ್ಟಾರ್ಥವು ನೆರವೇರುವುದೆಂದೂ ಸೂಚಿಸುತ್ತನೆ.[12]

ವೆಂಟಕ ಸುಂದರಾ ಸಾನಿಯು ಪುಷ್ಪಾಂಜಲಿಯನ್ನು ರಂಗ ಮಧ್ಯದಲ್ಲಿ ನೃತ್ತ, ಗೀತ ಹಾಗೂ ವಾದ್ಯಗಳೊಡನೆ ಯಥಾಕ್ರಮವಾಗಿ ಸಮರ್ಪಿಸಬೇಕೆಂದು ಹೇಳುತ್ತಾಳೆ. ಪುಷ್ಪಾಂಜಲಿಯಿಂದ ನಾಟ್ಯದೋಷವು ನಿವಾರಣೆಯಾಗುವುದೆಂದೂ, ಜಪಾಕುಸುಮ, ಪುನ್ನಾಗ, ಕೇತಕಿ, ಚಂಪಕ, ದ್ರೋಣ ಹಾಗೂ ವಕುಳ ಪುಷ್ಪಗಳು ಪುಷ್ಪಾಂಜಲಿಗೆ ಯೋಗ್ಯವಾದ ಪುಷ್ಪಗಳೆಂದೂ ವಿವರಿಸುತ್ತಾಳೆ.[13]

ಎಲ್ಲ ಶಾಸ್ತ್ರಗಳಲ್ಲೂ ಪುಷ್ಪಾಂಜಲಿಯನ್ನು ನೃತ್ತ ಅಥವಾ ನಾಟ್ಯಾರಂಭಕ್ಕೆ ಮೊದಲೇ ಬಳಸುವ ವಿಧಿಯೆಂದು ಗುರುತಿಸಲಾಗಿದೆ. ಇದರ ಉದ್ದೇಶ ರಂಗಾಧಿ ದೇವತೆಗಳ ಪೂಜೆ, ಗುರುವಂದನೆ ಹಾಗೂ ಸಭಾ ವಂದನೆಗಳು. ಕನ್ನಡ ಕಾವ್ಯಗಳಲ್ಲೂ ಪುಷ್ಪಾಂಜಲಿಯು ಶಾಸ್ತ್ರಾಂಶ ಹಾಗೂ ಕಾವ್ಯಾಂಶಗಳ ಸುಂದರ ಸಮನ್ವಯದೊಡನೆ ವರ್ಣಿತವಾಗಿದೆ. ವಿಶೇಷವಾಗಿ ರೂಪಿತವಾದ ‘ಪುಷ್ಪಾಂಜಲಿ’ಗಳನ್ನು ಈಗ ವಿವೇಚಿಸಲಾಗಿದೆ.

ರಂಗವನ್ನು ಪ್ರವೇಶಿಸಿದ ಇಂದ್ರನು ವೈಶಾಖ ಸ್ಥಾನಕದಲ್ಲಿ ನಿಂತು ನಂತರ ಪುಷ್ಪಾಂಜಲಿಯನ್ನು ವಿಕ್ಷೇಪ ಮಾಡಿದನೆಂದು ಪಂಪನು ನಿರೂಪಿಸುತ್ತಾರೆ.

ಸೂಸಿದ ಪುಷ್ಪಾಂಜಲಿಯನೆ
ಬಾಸಣಿಸಿದ ಮದವದಳಿಕುಳಂಗಳ ಚಲ್ಪಂ
ಮಾಸಿಸಿದವು ವಾಸವನ ವಿ
ಳಾಸಂ ಬೆರಸಡರೆ ತೊಡರೆ ಬಳಸುವ ಕಣ್ಗಳ್ ||           (ಆದಿಪು. ೧೧೮)

ಇಂದ್ರನ ಚಲನಶೀಲ ನೇತ್ರಗಳೇ ಮದಿಸಿದ ದುಂಬಿಗಳಂತೆ ಕಂಡು ಅವು ಪುಷ್ಪಗಳನ್ನು ಮುತ್ತಿದವು ಎನ್ನುವಲ್ಲಿ ಪಂಪನು ಹೂವಿನ ಹಾಗೂ ಇಂದ್ರನ ನೇತ್ರ ಚಲನೆಯ ಸೌಂದರ್ಯಗಳೆರಡನ್ನೂ ಒಮ್ಮೆಲೆ ದೃಶ್ಯಮಾನವಾಗಿಸಿದ್ದಾನೆ.

ಬೆಡಗಿನ ಅಮರ ನರ್ತಕಿ ನೀಲಾಂಜನೆಯು ಎಸೆವ ಪುಷ್ಪಾಂಜಲಿಯನ್ನು ಪಂಪನು ಹೀಗೆ ವರ್ಣಿಸಿದ್ದಾನೆ.

ಓಸರಿಸಿದ ಜವನಿಕೆಯೊಡ
ನೋಸರಿಸಿದನಿಸಲೆ ಕಂತು ಪುಷ್ಪಾಂಜಲಿಯಂ
ಸೂಸಿದ ಪದದೊಳೆ ಸಭೆಗಂ
ಸೂಸಿದರೊಡನೊಡನೆ ನನೆಯ ಮೊನೆಯಂಬುಗಳಂ   (ಆದಿಪು. ೨೧)

ಜವನಿಕೆಯನ್ನು ಪಕ್ಕಕ್ಕೆ ಸರಿಸಿದ ಕೂಡಲೇ ನೀಲಾಂಜನೆಯು ಪುಷ್ಪಗಳನ್ನು ಸೂಸಿದಳೆಂದು ಕವಿಯ ನಿರೂಪಣೆ. ಮನ್ಮಥನ ಹೂವಿನ ಬಾಣಗಳಿಗೆ ನರ್ತಕಿಯ ಪುಷ್ಪಾಂಜಲಿಯನ್ನು ಕವಿ ಸಮನ್ವಯಗೊಳಿಸುತ್ತಾನೆ. ಜವನಿಕೆಯ ಮರೆಯಿಂದ ಹೊರ ಬಂದ ನರ್ತಕಿ ಹೂವುಗಳನ್ನು ಸೂಸುತ್ತಿದ್ದರೆ ಸಭಾಸದರ ಹೃದಯ ಸೂರೆಗೊಂಡಿತೆಂದು ಕವಿಯ ಆಶಯ.

ಹೀಗೆ ಕವಿ ಪಂಪನು ಇಂದ್ರ ಹಾಗೂ ನೀಲಾಂಜನೆಯರು ಸೂಸಿದ ಪುಷ್ಪಾಂಜಲಿಯೊಡನೆ ಅವರ ಅಂಗಾಂಗಗಳ ಚೆಲುವನ್ನು ಮಿಳಿತಗೊಳಿಸಿ ಸಂದರ್ಭವನ್ನು ಮೋಹಕಗೊಳಿಸಿದ್ದಾನೆ.

ಪೊನ್ನನು ಶಾಂತಿನಾಥನ ಜನನದಿಂದ ಉಂಟಾದ ಆನಂದವನ್ನು ಮಾರ್ಗ ನೃತ್ಯದ ಮೂಲಕ ವ್ಯಕ್ತಪಡಿಸುತ್ತಾನೆ.

……..ಸನ್ಮಾರ್ಗನಾಟಕಾರಂಭ ಪ್ರಸ್ತುತ ಪವಿತ್ರ ಸೂತ್ರಧಾರನೆ ಮುಂದೆನಿಂದು ಪುಷ್ಪಾಂಜಲಿಯಂ ಕೆದಱೆ (ಶಾಂತಿಪು. ೧೦೬೦ .)

ಇಲ್ಲಿ ಸೂತ್ರಧಾರನೇ ಮುಂದೆ ಬಂದು ಪುಷ್ಪಾಂಜಲಿಯನ್ನು ಸೂಸಿದನೆಂದು ಕವಿ ಸೂಚಿಸುತ್ತಾನೆ. (ಭರತನೂ ಪುಷ್ಪಾಂಜಲಿಯನ್ನು ಸೂತ್ರಧಾರನೇ ನಿರ್ವಹಿಸಬೇಕೆಂದು ಆದೇಶಿಸುತ್ತಾನೆ.[14] ಹೀಗೆ ಅರ್ಪಿಸಿದ ಪುಷ್ಪಾಂಜಲಿಯು ರಂಗದಲ್ಲಿ ಕಂಗೊಳಿಸಿದ ರೀತಿಯನ್ನು ಕವಿ ಹೀಗೆ ವರ್ಣಿಸುತ್ತಾನೆ.

ಲಲಿತ ಕುಸುಮತತಿಯಾ
ಬಾಲಕನ ಪದಪದ್ಮ ಮೂಲಮಂ ಬಳಸಿದುವೊ
ಡ್ಡೋಲಗಕೆ ಪುಷ್ಪರಾಜನ
ನೋಲಗಿಸಲ್ ಬಂದ ಪುಷ್ಪ ನಿಚಯದ ತೆರದಿಂ ||         (ಶಾಂತಿಪು. ೧೦೬೧)

ಸೂತ್ರಧಾರನು ಬಂದ ಸೂಸಿದ ಪುಷ್ಪಗಳು ಜಿನ ಶಿಶುವಿನ ಪಾದಗಳನ್ನು ಬಳಸಿ, ಅವನ್ನು ಓಲೈಸುತ್ತಿರುವಂತೆ ಕಂಡಿತೆಂದು ಕವಿ ಪುಷ್ಪಾಂಜಲಿಗೆ ದೈವಿಕ ಭಾವವನ್ನು ಸಂಯೋಜಿಸುತ್ತಾನೆ. ಪುಷ್ಪಾಂಜಲಿಯ ನಂತರ ಇಂದ್ರನು ನಮಸ್ಕರಿಸಿ ಆನಂದ ನೃತ್ಯವನ್ನು ಆರಂಭಿಸುತ್ತಾನೆ. ಪೊನ್ನನು ಪುಷ್ಪಾಂಜಲಿ ವಿಧಿಯನ್ನು ಸಂಪೂರ್ಣವಾಗಿ ನಾಟ್ಯಶಾ. ದಂತೆಯೇ ನಿರೂಪಿಸಿದ್ದಾನೆ.

ಕವಿ ರನ್ನನು ದೇವಲೋಕದ ಪುಷ್ಪಗಳನ್ನು ಬಳಸಿ ಪುಷ್ಪಾಂಜಲಿಯನ್ನು ಇಂದ್ರನು ಮಾಡಿದನೆಂದು ಉಲ್ಲೇಖಿಸುತ್ತಾನೆ.

ಅಮರೇಂದ್ರಂ ಸಂತಾನಕ
ನಮೇರು ಮಂದಾರ ಪಾರಿಜಾತಾದಿ ಸುರ
ದ್ರುಮ
ಪುಷ್ಪ ಪ್ರಕರದ ರಂ
ಮಧ್ಯದೊಳ್ ಮಾಡಿ ಮುಂದೆ ಪುಷ್ಪಾಂಜಳಿಯಂ (ಅಜಿಪು. ೩೦)

10_6_PP_KUH

ಭರತಾ. ಸಾಸಂಭ.ಗಳು ಪುಷ್ಪ ವಿದಿಯಲ್ಲಿ ನಿರ್ದಿಷ್ಟ ಪುಷ್ಪಗಳನ್ನು ಪುಷ್ಪಾಂಜಲಿಗಾಗಿ ಬಳಸಬೇಕೆಂದು ವಿಧಿಸಿವೆ.[15] ರನ್ನನು ಸುರಲೋಕದ ಪುಷ್ಪಗಳಾದ ಸುರಗಿ, ಮಂದಾರ, ಪಾರಿಜಾತಗಳನ್ನು ಇಂದ್ರನು ರಂಗಮಧ್ಯದಲ್ಲಿ ಸೂಸಿದನೆಂದು ಹೇಳಿದ್ದಾನೆ.

ನಾಗಚಂದ್ರನು ರಾಜವೈಶ್ರವಣನ ಆಸ್ಥಾನ ನರ್ತಕಿಯು ಎಸಗಿದ ಪುಷ್ಪಾಂಜಲಿಯನ್ನು ಸುಂದರವಾದ ಉಪಮೆಗಳಿಂದ ನಿರೂಪಿಸುತ್ತಾನೆ.

ಪಸಲೆಯ ಮೇಲೆ ತಟಿಲ್ಲತೆ
ಪಸರಿಸಿದಪುದಾಲಿವರಲನೆಂಬಿನಮಾಗಳ್
ಪಸುರ್ವರಲ ಜಗಲಿಯೊಳ್ಪಸ
ರಿಸಿದಳ್ ಪೊಂಬಣ್ಣದ ಬಲೆ ಕುಸುಮಾಂಜಲಿಯಂ |
ಮದನಾನುರಾಗಮಂ ಬೀ
ಱೆದವಳೂ ಸಭೆಗೆನೆ ಸುವರ್ಣಪುಷ್ಪಾಂಜಲಿಯಂ
ಕೆದಱೆದಳಾವಧು ಮದನನೆ
ಕೆದಱೆದ ವೊಲ್ತನ್ನ ಪೊನ್ನ ಪೊದೆಯಂಬುಗಳಂ             (ಮಲ್ಲಿಪು. ೨೯, ೩೦)

ಹಸಿರು ಬಣ್ಣದ ಉಡಿಗೆ ತೊಡಿಗೆಗಳಿಂದ[16] ಅಲಂಕೃತಳಾಗಿ ಬೊಗಸೆಗಳಲ್ಲಿ ಕುಸುಮಗಳನ್ನು ಹಿಡಿದು ಕಣ್ಣುಗಳ ಚಲನೆಯಿಂದೊಡಗೂಡಿ ಪುಷ್ಪಗಳನ್ನು ರಂಗದ ಮೇಲೆ ನರ್ತಕಿಯು ಹರಡುತ್ತಿದ್ದರೆ, ಹಸುರಾದ ಹುಲ್ಲುಗಾವಲಿನಲ್ಲಿನ ಬಳಕುವ ಬಳ್ಳಿಯು ಹೂವುಗಳನ್ನು ಹೊತ್ತು ಅಲುಗಾಡುತ್ತಿರುವಂತೆ ಭಾಸವಾಯಿತು ಎಂದು ಹೋಲಿಸಿ ಮುಂದೆ ಆಕೆಯು ಸೂಸುವ ಹೂವುಗಳನ್ನು ಮದನನ ಹೊನ್ನ ಬಾಣಗಳಿಗೆ ಹೋಲಿಸಿ ಇಡಿಯ ದೃಶ್ಯವನ್ನು ರಮ್ಯವಾಗಿಸುತ್ತಾನೆ.

ನಾಗಚಂದ್ರನು ನೃತ್ಯದ ಪರಿಕರದೊಡನೆ ಸಜ್ಜಾದ ನರ್ತಕಿಗೆ ಜವನಿಕೆ ಸ್ಥಾನಕದ ನಂತರ ಪುಷ್ಪಾಂಜಲಿಯನ್ನು ಒದಗಿಸಿ ಆಕೆಯ ಮುಂದಿನ ನೃತ್ಯಗಳಿಗೆ ಭೂಮಿಕೆಯನ್ನು ಕಲ್ಪಿಸುತ್ತಾನೆ.

ಆದರೆ ಇದೇ ಕವಿ ಮಲ್ಲಿನಾಥನ ಜನನದ ಸಂದರ್ಭದ ಇಂದ್ರನ ಆನಂದ ನೃತ್ಯದಲ್ಲಿ ಇಂದ್ರನು ಪುಷ್ಪಾಂಜಲಿಯನ್ನು ಮಾಡಿದ ನಂತರ ವೈಶಾಖ ಸ್ಥಾನಕವನ್ನು ಅಲಂಕರಿಸಿದನೆಂದು ವರ್ಣಿಸುತ್ತಾನೆ.

ನೈಪಥ್ಯಂ ಪೊಸ ದೇಸೆವೆತ್ತೆಸೆಯೆ ತನ್ನೊಳ್ವೂರ್ವರಂಗ ಪ್ರಸಂ
ಗೋಪೇತಂಗಳೆನಿಪ್ಪ ಮಂಗಳ ಪದಾಖ್ಯಾನಂಗಳಂ ಮಾಡಿ ನಾಂ
ದೀ ಪೂಜಾವಿಧಿ ಪೂರ್ವಕಂ ದಿವಿಜರಾಜಂ ಸೂಸಿದಂ ಕಲ್ಪವ
ಲ್ಲೀ ಪುಷ್ಪಾಂಜಲಿಯಂ ಸಭಾಸದರ್ಗೆತೋಱರ್ ತಾಂಡವ ಪ್ರೌಢಿಯಂ      (ಮಲ್ಲಿಪು. ೧೩೨೩)

ಇಂದ್ರನು ಪೂರ್ವರಂಗ ವಿಧಿ ಹಾಗೂ ನಾಂದಿ ಪೂಜೆಯ ನಂತರ ದೇವಲೋಕದ ಪುಷ್ಪಗಳಿಂದ ಪುಷ್ಪಾಂಜಲಿಯನ್ನು ಮಾಡಿ ಮುಂದೆ ಪ್ರೇಕ್ಷಕರಿಗೆ ತನ್ನ ಪ್ರೌಢನೃತ್ತವನ್ನು ತೋರಿದನೆಂದು ಕವಿ ವಿಶದೀಕರಿಸುತ್ತಾನೆ.

ನೇಮಿಚಂದ್ರನು ಮದನ ಸುಂದರಿಯ ಪುಷ್ಪಾಂಜಲಿ ನೃತ್ಯದಲ್ಲಿ ಚಮತ್ಕಾರವನ್ನು ಹೀಗೆ ತಂದಿದ್ದಾನೆ.

ವನಿತಾ ಪಾದ ಪಯೋಜ ಸಂಗ ಸುಖದಿಂದಂಗಕ್ಕೆ ರೋಮಾಂಚಮಾ
ಯ್ತೆನೆ ನಟ್ಟಂತಿರೆ ಸೂಸೆಸೂಜಿಗಳನಾ ಪೊಂಜಾಜಿಯೊಂದೊಂದು ಚೂ
ರ್ಮೆನೆಗೊಂಡಂದಲರಾಯ್ದು ಕೋದತೆಱ ದಿಂದಿರ್ಪಂತು ಪುಲ್ಲಾಂಬುಜಾ
ನನೆ ಪುಷ್ಪಾಂಜಲಿ ಗೊಟ್ಟಳಂಗಜ ಸುಧಾ ಸಾರಂ ಪೊದಱ್ದಂದದಿಂ
(
ಅರ್ಧನೇ. ೯೯)

ತನ್ನ ಅಸಾಧಾರಣ ನರ್ತನ ಪ್ರತಿಭೆಯಿಂದ ಇಭ್ಯಕೇತುವನ್ನು ಗೆಲ್ಲಲು ಹೊರಟ ಮದನ ಸುಂದರಿ ಅನೆಕ ಚಮತ್ಕಾರ ನೃತ್ಯಗಳನ್ನು ಮಾಡುತ್ತಾಳೆ.[17] ಚೂಪಾದ ಮೊನೆಯುಳ್ಳ ಸೂಜಿಗಳನ್ನು ರಂಗದಲ್ಲಿ ನೆಟ್ಟು ಆಕೆ ಅದನ್ನು ತಾಗಿಸಿ ಕೊಳ್ಳದಂತೆ ಕುಶಲತೆಯಿಂದ ನರ್ತಿಸುತ್ತ ಪುಷ್ಪಂಜಲಿ ಮಾಡಿದ ವರ್ಣನೆಯನ್ನು ಕವಿ ಸೊಗಸಾಗಿ ಮಾಡುತ್ತಾನೆ. (ನೋಡಿ ರೇಖಾಚಿತ್ರ, ಪುಷ್ಪಾಂಜಲಿ).

ಮದನ ಸುಂದರಿಯು ಸೂಸಿದ ಹೂವುಗಳು ರಂಗದ ಮೇಲೆ ನೆಟ್ಟ ಸೂಜಿಗಳ ಮೇಲೆ ವ್ಯಾಪಿಸಲು ರಂಗಸ್ಥಳವೇ ಹೂವುಗಳನ್ನು ಹೊತ್ತು ನಿಂತಂತೆ ಭಾಸವಾಯ್ತೆಂದು ಕವಿ ಪುಷ್ಪಾಂಜಲಿಯ ನೆಪದಲ್ಲಿ ಒಂದು ಸುಂದರ ಪ್ರತಿಮೆಯನ್ನು ಕಡೆದು ನಿಲ್ಲಿಸಿದ್ದಾನೆ.

ಪಾರ್ಶ್ವಪಂಡಿತನು ಅರಸನ ಒಡ್ಡೋಲಗದಲ್ಲಿ ನಡೆಯುವ ನರ್ತಕಿಯ ನೃತ್ಯದಾರಂಭದ ಪುಷ್ಪಾಂಜಲಿಯನ್ನು ಇನ್ನೊಂದು ರೀತಿ ವಿಶೇಷವಾಗಿಸುತ್ತಾನೆ.

ವನಲತೆ ಪಲ್ಲವ ಪುಟದಿಂ
ಮನಸಿ ಶಯಂರ್ಘ್ಯಮೀವವೋಲ್ ಧವಳವಿಳೋ |
ಚನರುಚಿ ನಿಭ ಪುಷ್ಪಾಂಜಳಿ
ಯನಿತ್ತು ನರ್ತಕಿ ವಿಚಿತ್ರ ಮೆನೆ ನರ್ತಿಸಿದಳ್ | (ಪಾರ್ಶ್ವಪು. ೧೨೨೫)

ನರ್ತಕಿಯೇ ಬಳ್ಳಿಯಂತಾಗಿ ಆಕೆ ತನ್ನ ಕರಪಲ್ಲವದಿಂದ ಕೊಡುವ ಪುಷ್ಪಾಂಜಲಿ ಮನ್ಮಥನಿಗೆ ಅರ್ಘ್ಯವನ್ನು ಅರ್ಪಿಸುವ ರೀತಿ ಕಂಡಿತೆಂದು ನರ್ತಕಿಯ ಮೋಹಕರೂಪವನ್ನು ಪುಷ್ಪಾಂಜಲಿಯೊಡನೆ ವರ್ಣಿಸುತ್ತಾನೆ.

ಕಮಲಭವನು ಜವನಿಕೆಯ ಮರೆಯಲ್ಲೇ ಇಂದ್ರನು ಪುಷ್ಪಾಂಜಲಿಯನ್ನು ಮಾಡಿದುದಾಗಿ ಸೂಚಿಸುತ್ತಾನೆ. ದೇವಲೋಕದ ಗೀತ, ವಾದ್ಯ ಜನರೊಡನೆ ಇಂದ್ರನು ಪೂರ್ವರಂಗ, ನಾಂದಿ ಇವುಗಳ ತರುವಾಯ ಜಿನ ಪದದಲ್ಲಿ ಪುಷ್ಪಾಂಜಲಿಯನ್ನು ಅರ್ಪಿಸಿದನೆಂದು ಉಲ್ಲೇಖಿಸುತ್ತಾನೆ.

…………..ದಕ್ಷಿಣೋತ್ತರಾಶಾಧೀಶರ್ಯವನಿಕಾ ಪಟಮನೆತ್ತಿ ಪಿಡಿದು ದಿವಿಜೇಂದ್ರಂ ದುರಿತಾಪಹರ ನಿಮಿತ್ತಮೆನೆ ಭಾರತಿಕಾಚಾರಮನಪ್ಪು ಕೆಯ್ದು ನಾಂದೀ ವಿಧಿಯೋಳ್ಬಂದು ನಿಂದಿರ್ದು ಜಿನಪತಿಗೆ ವಿನತನಾಗಿ ಪುಷ್ಪಾಂಜಳಿಯಂ ಸೂಸಿದ ಪದದೊಳ್           (ಶಾಂತೀಶ್ವ. ೧೪, ೧೬೦ .)

ಜಿನಪತಿಯ ಅಡಿದಾವರೆಗಳಲ್ಲಿ ಇಂದ್ರನು ಸೂಸಿದ ಪುಷ್ಪಗಳು ಕಂಡ ದೃಶ್ಯವನ್ನೂ ಹೀಗೆ ವರ್ಣಿಸುತ್ತಾನೆ.

ಸುರಪತಿ ಪಾಣಿಪಯೋಧರ
ಪರಿಚ್ಯುತ ಸ್ವಚ್ಛ ಮಾಕ್ತಿಕೋತ್ಕರ ಮೆಂಬಂ |
ತಿರೆ ಕರಮಸೆದುದು ಸೂಸಿದ
ಸುರುಚಿರ ಪುಷ್ಪಾಂಜಳಿ ಪ್ರಸೂನ ವಿತಾನಂ |  (ಶಾಂತೀಶ್ಪ. ೧೪೧೬೧)

ಇಂದ್ರನು ಜಿನ ಶಿಶುವಿನ ಪಾದಗಳಲ್ಲಿ ಪುಷ್ಪಾಂಜಲಿ ವಿಕ್ಷೇಪವನ್ನು ಮಾಡಿದರೆ ಮೋಡದಿಂದ ಸುರಿವ ಶುದ್ಧವಾದ ಮುತ್ತುಗಳಂತೆ ಆ ಹೂವುಗಳು ಕಂಗೊಳಿಸಿತೆಂದು ಕವಿಯ ಹೇಳಿಕೆ. ಇಂದ್ರನು ಪುಷ್ಪಾಂಜಲಿಯಲ್ಲಿ ಶುಭ್ರವಾದ, ಶ್ವೇತ ವರ್ಣದ ಹೂವುಗಳನ್ನು ಸೂಸಿದನೆಂದು ಕವಿಯು ಪರೋಕ್ಷವಾಗಿ ಸೂಚಿಸುತ್ತಾನೆ. ಅಷ್ಟೇ ಅಲ್ಲದೆ

ಪರಮನ ಪದನಖತಾ
ರಾ ಪತಿಸಮಿತಿಯನೆ ಸಾರ್ದಸದಮಳತರ ತಾ |
ರಾ ಪರಿಕರ ಮೆನಲೆಸದ
ತ್ತಾ ಪುಷ್ಪಾಂಜಳಿಯ ರಂಜಿಪಲರ್ಗಳ ಬಳಗಂ |           (ಶಾಂತೀಶ್ವ. ೧೪೧೬೨)

ಜಿನ ಶಿಶುವಿನ ಪಾದಕಮಲಗಳಲ್ಲಿದ್ದ ಒಂದೊಂದು ಹೂವೂ ಆತನ ಪರಿವಾರದಂತೆ ಕಂಗೊಳಿಸುತ್ತಿದ್ದವು ಎಂದು ಪುಷ್ಪಾಂಜಲಿಯಲ್ಲಿ ಇಂದ್ರನು ಸೂಸಿದ ಪುಷ್ಪಗಳ ಸಂಖ್ಯಾಬಾಹುಳ್ಯವನ್ನು ಗುರುತಿಸುತ್ತಾನೆ.

ಮೇಲಿನ ಕಾವ್ಯಗಳ ವಿವೇಚನೆಯಿಂದ ಜೈನ ಕವಿಗಳು ಪುಷ್ಪಾಂಜಲಿಯನ್ನು ಶಾಸ್ತ್ರಸಮ್ಮತವಾಗಿಯೂ ಕಲಾತ್ಮಕ ದೃಷ್ಟಿಯಿಂದಲೂ ನೋಡಿ ಸನ್ನಿವೇಶಗಳನ್ನು ರಚಿಸುವಲ್ಲಿ ಸ್ಪೋಪಜ್ಞತೆಯನ್ನು ತೋರಿದ್ದಾರೆ. ಕೆಲವು ಕವಿಗಳು ಪುಷ್ಪಾಂಜಲಿಯ ನಂತರದ ಸ್ಥಾನಕದ ಪ್ರಸ್ತಾಪವನ್ನು ಮಾಡುತ್ತಾರೆ. ಉದಾಹರಣೆಗೆ ಗುಣವರ್ಮ ಹಾಗೂ ಕಮಲಭವ ಮತ್ತಿತರರು. ನಾಗಚಂದ್ರ ನೇಮಿಚಂದ್ರನು ರಚಿಸುವ ಪುಷ್ಪಾಂಜಲಿಯು ಕೌತುಕಮಯವೂ ರೋಚಕವೂ ಆಗಿದೆ. ದೇವತಾರಾಧನೆಯನ್ನೇ ಮುಖ್ಯ ಉದ್ದೇಶವನ್ನಾಗಿ ಹೊಂದಿರುವ ಪುಷ್ಪಾಂಜಲಿ ವಿಧಿ ಅಂತೆಯೇ ಜೈನ ಕಾವ್ಯಗಳಲ್ಲಿ ವರ್ಣಿತವಾಗಿದೆ. ರಾಜನರ್ತಕಿಯರ ನೃತ್ಯ ಸಂದರ್ಭ, ಸ್ವಯಂವರ ಸಂದರ್ಭಗಳಲ್ಲಿ ಪುಷ್ಪಾಂಜಲಿಯ ವರ್ಣನೆ ಶೃಂಗಾರ ರಸ ಪ್ರಚೋದಕವಾಗಿದೆ. ಜೈನಧರ್ಮದಲ್ಲಿ ಅನಿವಾರ್ಯ ಅಂಗಗಳಾದ ಗರ್ಭಶೋಧನ ಕಲ್ಯಾಣ. ಪರಿನಿಷ್ಕ್ರಮಣ ಕಲ್ಯಾಣಗಳಲ್ಲಿ ಈ ರೀತಿ ನೃತ್ಯಕ್ಕೆ ಭೂಮಿಕೆಯನ್ನು ಕಲ್ಪಿಸುವುದಿಲ್ಲ. ಜಿನ ಜನ್ಮಾಭಿಷೇಕ ಕಲ್ಯಾಣದಲ್ಲಿ ಕಡ್ಡಾಯವಾಗಿ ನಿರೂಪಿತವಾಗುವ ಪುಷ್ಪಾಂಜಲಿ ಒಂದು ವ್ಯವಸ್ಥಿತ ನೃತ್ಯ ಕಾರ್ಯಕ್ರಮದ ಭೂಮಿಕೆಯಂತೆ ಯಶಸ್ವಿಯಾಗಿ ವಿವರಣೆಗೊಂಡಿದೆ.

ವೀರಶೈವ ಕಾವ್ಯಗಳಲ್ಲಿ ಪುಷ್ಪಾಂಜಲಿಯ ಪ್ರಸ್ತಾಪವಿಲ್ಲವೆಂದೇ ಹೇಳಬಹುದು. ವಿರೂಪಾಕ್ಷ ಪಂಡಿತ ಹಾಗೂ ಷಡಕ್ಷರ ದೇವ ಪುಷ್ಪಾಂಜಲಿಯನ್ನು ಉಲ್ಲೇಖಿಸುತ್ತಾರೆ. ವಿರೂಪಾಕ್ಷ ಪಂಡಿತನಲ್ಲಿ ಪುಷ್ಪಾಂಜಲಿಯು ನೃತ್ಯದ ಭೂಮಿಕೆಯಂತೆ ನಿರೂಪಿತವಾಗಿಲ್ಲ.

ಭೋರಿಡಲ್ ಶರಧಿ ನಿರ್ಘೋಷದಿಂ ದುರಿತ ಸಂ |
ಹಾರನಂಧಾಸುರನ ವಕ್ಷದೊಳ್ ಪುಷ್ಪಾಂಜಲಿಯನೆಸಗಿದಂ ಮುದದೊಳು (ಚನ್ನಪು. ೫೦೪೯)

ಷಡಕ್ಷರ ದೇವನು ರಾಜಶೇಖರನ ಒಡ್ಡೋಲಗದ ವರ್ಣನೆಯಲ್ಲಿ ನರ್ತಿಸುವ ನರ್ತಕಿಯ ಪುಷ್ಪಾಂಜಲಿ ವಿಧಿಯನ್ನು ಕವಿ ಹೀಗೆ ವರ್ಣಿಸುತ್ತಾನೆ.

ಕಾವನ ಕರತಳದಿನವಂ ಕವರ್ತೆಗೊಂಡು ಚೆಲ್ಲುವಂತೆ ಪುಷ್ಪಪುಟ ಹಸ್ತದಿಂದ ಪುಷ್ಪಾಂಜಲಿಯಂ ಕೆದರ್ದು (ರಾಜವಿ. ೧೯ .)

ಪುಷ್ಪಪುಟ ಹಸ್ತವು[18] ಒಂದು ಸಂಯುತ ಹಸ್ತ; ಎರಡು ಸರ್ಪಶಿರ ಹಸ್ತಗಳನ್ನು ಅಂಗೈ ಕಾಣುವಂತೆ ಒಂದರ ಪಕ್ಕ ಒಂದು ಜೋಡಿಸಿದ ಹಸ್ತ. ಇದರ ವಿನಿಯೋಗವೂ ದೇವರ ಅರ್ಘ್ಯ ಪ್ರದಾನ. ನರ್ತಕಿ ಪುಷ್ಪಪುಟ ಹಸ್ತದಿಂದ ಪುಷ್ಪಾಂಜಲಿಯನ್ನು ಮಾಡುತ್ತಿದ್ದರೆ ಕಾಮನೇ ಬಾಣಗಳನ್ನು ಬಿಟ್ಟಂತೆ ಕಂಡಿತೆಂದು ಕವಿ ಹೋಲಿಸುತ್ತಾನೆ. ಷಡಕ್ಷರ ದೇವ ರಾಜನರ್ತಕಿಯ ಪುಷ್ಪಾಂಜಲಿಯನ್ನು ಮಿಂಚಿನ ಆಣೆ ಕಲ್ಲುಗಳಿಗೆ ಹೋಲಿಸುತ್ತ ಆಸ್ಥಾನದಲ್ಲಿ ನಡೆಯುವ ನೃತ್ಯ ಪ್ರಸಂಗದಲ್ಲಿ ವರ್ಣಿಸುತ್ತಾನೆ.

ತೆರೆತೊಲಗೆ ಮೈವೆಳಗುಮಾ
ರ್ದೆರೆಯಂ ಸರಿದಂತೆ ಪೊಳೆಯ ಕೆದರ್ದಳ್ಪೊಳದೊ
ಪ್ಪಿರೆ ಮಿಂಚಿ ಮಿಂಚುಕರಕೋ
ತ್ಕರ ಮಂ ಕೆದರ್ದಂತೆ ಕಾಂತೆ ಕುಸುಮಾಂಜಲಿಯಂ |              (ರಾಜವಿ. ೧೨೬೪)

ತೆರೆ ಸರಿದ ಮೇಲೆ ಪುಷ್ಪಾಂಜಲಿಯಾದ ಕ್ರಿಯೆಯನ್ನು ಷಡಕ್ಷರ ದೇವ ಸೂಚಿಸುತ್ತಾನೆ. ತೆರೆಯಿಂದ ಹೊರ ಬಂದ ನರ್ತಕಿಯನ್ನು ಮಿಂಚಿಗೂ, ಆಕೆ ಸೂಸುವ ಪುಷ್ಪಗಳನ್ನು ಮಿಂಚಿನ ಆಣೆಕಲ್ಲಿಗೂ ಕವಿ ಹೋಲಿಸುತ್ತಾನೆ.

ವೀರಶೈವ ಕವಿಗಳಲ್ಲಿ ಎಲ್ಲಕ್ಕಿಂತ ಮೊದಲು ಭಕ್ತ ಹೃದಯ ಹಾಡಿ ಕುಣಿಯುತ್ತದೆ. ಭಕ್ತರ ಶುದ್ಧಾಂತಃಕರಣಕ್ಕೆ ಮೆಚ್ಚಿ ಅವರ ಮುಂದೆ ತನ್ನ ನೃತ್ಯವನ್ನು ತಾಂಡವ ಹರನು ತೋರುತ್ತಾನೆ. ಚಂದ್ರಶೇಖರ ಹಾಗೂ ಚಾಮರಸರು ದೇವಾಲಯದಲ್ಲಿ ಪೂಜಾವಿಧಾನಗಳಲ್ಲಿ ಒಂದಾಗಿ ನರ್ತನ ಸೇವೆ ನಡೆದುದನ್ನು ಅನೇಕ ಶಾಸ್ತ್ರಾಧಾರ ಮಾಹಿತಿಗಳೊಡನೆ ವಿವರಿಸುತ್ತಾನೆ. ಆದರೆ ಪುಷ್ಪಾಂಜಲಿ ಕ್ರಿಯೆಯನ್ನು ಸೂಚಿಸುವುದಿಲ್ಲ.

ಹರಿಹರಾದಿಗಳ ಕಾವ್ಯಗಳಲ್ಲಿ ನರ್ತಿಸುವ ವ್ಯಕ್ತಿಯು ತಾಂಡವ ನೃತ್ತದ ಮೂಲ ಪುರುಷನಾದ ಪರಶಿವನು. ಚತುರ್ವಿಧ ಅಭಿನಯಗಳ ಸಾಕಾರ ಮೂರ್ತಿಯಾದ ನಟರಾಜನಿಗೆ ಕವಿಗಳು ವಿಶ್ವಚೇತನ ಸ್ವರೂಪದ ನೃತ್ಯವನ್ನು ಆರೋಪಿಸಿ ಕಂಡು ತಣಿದಿದ್ದಾರೆ. ಈ ಕಾವ್ಯಗಳಲ್ಲಿ ಶಿವನಲ್ಲದೇ ನರ್ತಿಸುವವರೆಂದರೆ ಆತನ ಪರಮಭಕ್ತರು. ಭಕ್ತಿಯ ಭರದಲ್ಲಿ ಶಿವ ಸಾಕ್ಷಾತ್ಕಾರದ ಆನಂದಾನುಭವದ ಬಾಹ್ಯ ಚಟುವಟಿಕೆಯಂತೆ ಭಕ್ತರು ತನ್ಮಯರಾಗಿ ತಮ್ಮ ದೈವದೆದುರು ಕುಣಿಯುತ್ತಾರೆ. ಇಲ್ಲಿ ಶಾಸ್ತ್ರವು ಹಿಮ್ಮೆಟ್ಟಿ ಭಕ್ತ ಹೃದಯವೇ ಮುನ್ನುಗ್ಗಿ ಕಾರ್ಯೋನ್ಮುಖವಾಗುತ್ತದೆ. ಇದರಿಂದ ವೀರಶೈವ ಕಾವ್ಯಗಳಲ್ಲಿ ಜೈನ ಕಾವ್ಯಗಳಂತೆ ನೃತ್ಯದ ಪರಿಕರ ಹಾಗೂ ಭೂಮಿಕೆಗಳ ಪ್ರತಿಯೊಂದು ವಿವರವೂ ವರ್ಣಿತವಾಗದೆ ಇರಬಹುದು.

ವೈದಿಕ ಕಾವ್ಯಗಳಲ್ಲೂ ನೃತ್ಯದ ಭೂಮಿಕೆಯಂತೆ ಪುಷ್ಪಾಂಜಲಿಯು ವರ್ಣಿತವಾಗಿಲ್ಲವೆಂದೇ ಹೇಳಬಹುದು. ಗೋವಿಂದ ವೈದ್ಯನಲ್ಲಿ ಮಾತ್ರ ಪುಷ್ಪಾಂಜಲಿ ಕ್ರಿಯೆಯನ್ನು ಶಾಸ್ತ್ರ ಸಮ್ಮತ ದೃಷ್ಟಿಯಲ್ಲಿ ರೂಪುಗೊಂಡಿರುವುದನ್ನು ನೋಡಬಹುದು.

ಸುರುಚಿರ ಸೂತ್ರಧಾರಕ ತತ್ತಕಾರವ
ವಿರಚಿಸಿ ಜವನಿಕೆದೆಗೆಯ
ಭರತ ಶಾಸ್ತ್ರಾಗಮ ವಿಡಿದು ಸುಪ್ರೌಢೆಯ
ರುರುಪುಷ್ಪಗಳೆ ಸೂಸಿದರು (ಕಂಸವಿ. ೬೦)

ತತ್ತಕಾರವು ಆದಿ ಶಬ್ದಗಳೆಂದೂ ಇವುಗಳನ್ನು ನೃತ್ಯದಲ್ಲಿ ಧ್ರುವತಾಳದೊಡನೆ ಜೋಡಿಸಬೇಕೆಂದೂ ಶಾಸ್ತ್ರಕಾರನ ಮತ.[19] ಇಂತಹ ತತ್ಕಾರ ಶಬ್ದಗಳೊಡನೆ ಪ್ರೌಢರಾದ ನರ್ತಕಿಯರು ತಮ್ಮ ಬೊಗಸೆಗಳಿಂದ ಪುಷ್ಪಗಳನ್ನು ಸೂಸಿದರೆಂದು ಕವಿ ನಿರೂಪಿಸುತ್ತಾನೆ.

ವೀರಶೈವ ಕಾವ್ಯಗಳಂತೆ ವೈದಿಕ ಕಾವ್ಯಗಳಲ್ಲೂ ನೃತ್ಯದ ಪರಿಕರ, ಭೂಮಿಕೆಗಳು ದೊರೆಯುವುದು ಅತಿ ವಿರಳ. ಕವಿ ರುದ್ರಭಟ್ಟನ ಅಭಿಪ್ರಾಯದಂತೆ ಗಗನವೇ ನಾಟ್ಯ ನಿಕೇತನವಾಗಿ ಹೊಂದಿ, ದೇವತೆಗಳೇ ಪ್ರೇಕ್ಷಕ ಸಮೂಹವಾಗಿ ಶ್ರೀ ಕೃಷ್ಣನೇ ನಾಟ್ಯಾಚಾರ್ಯನಾಗುವ ವೈದಿಕ ಕವಿಗಳಲ್ಲಿ ಶಾಸ್ತ್ರಸಮ್ಮತವಾದ ನೃತ್ಯ ಪರಿಕರ – ಭೂಮಿಕೆಗಳ ನಿರೂಪಣೆಗೆ ಅವಕಾಶ ಕಡಿಮೆ. ಗೋಪ – ಗೋಪಿಕೆಯರೊಡನೆ ರಾಸನೃತ್ಯವನ್ನು ರಚಿಸುವ ತ್ರಿಲೋಕಾಧಿಪತಿ ಶ್ರೀಕೃಷ್ಣನು ಇಲ್ಲಿ ಪ್ರೇರಕ ಶಕ್ತಿ, ಹರಿ ಭಕ್ತಿ ಪಾರಮ್ಯವನ್ನು ತಮ್ಮ ಹೃದಯದಲ್ಲಿ ಸದಾಕಾಲ ಪ್ರಜ್ವಲಿಸುತ್ತ, ಕಾಲಿನಲ್ಲಿ ಗೆಜ್ಜೆಕಟ್ಟಿ, ಕೈಗಳಲ್ಲಿ ಚಿಟಕಿ, ತಂಬೂರಿಗಳನ್ನು ಹಿಡಿದು ಭಕ್ತಿಯ ಭರದಲ್ಲಿ ಹಾಡುತ್ತ ಕುಣಿಯುವ ಹರಿದಾಸರಿಗೆ ನೃತ್ಯದ ಪರಿಕರವಾಗಲೀ ಭೂಮಿಕೆಗಳಾಗಲಿ ಅಗತ್ಯವಿಲ್ಲ.

ರಂಗಭೂಮಿಯಿಂದ ಪುಷ್ಪಾಂಜಲಿಯವರೆಗೆ ನಡೆದ ಈ ವರೆಗಿನ ವಿವೇಚನೆಯಿಂದ ಒಂದು ಪೂರ್ವಯೋಜಿತ ನೃತ್ಯ ಕಾರ್ಯಕ್ರಮಕ್ಕೆ ಅವಶ್ಯವಾದ ಪರಿಕರ ಹಾಗೂ ಭೂಮಿಕೆಗಳು ಮೂರು ಹಂತಗಳಲ್ಲಿ ರೂಪುಗೊಂಡಿರುವುದನ್ನು ನಾವು ಕಾಣಬಹುದು. ಮೊದಲ ಹಂತದಲ್ಲಿ ಶಾಸ್ತ್ರಸಮ್ಮತವಾದ ಪರಿಕರ ಹಾಗೂ ಭೂಮಿಕೆಗಳಿಂದ ನಡೆಯುವ ನೃತ್ಯ ಪ್ರದರ್ಶನ. ಎರಡನೆಯ ಹಂತದಲ್ಲಿ ಮಾರ್ಗ ಹಾಗೂ ದೇಶೀ ಪ್ರಭಾವಗಳಿಂದ ಪ್ರೇರಿತವಾದ ಪರಿಕರ – ಭೂಮಿಕೆಯೊಡನೆ ನಡೆಯುವ ನೃತ್ಯ ಪ್ರದರ್ಶನ. ಮೂರನೆಯ ಹಂತದಲ್ಲಿ ಪ್ರಾಂತೀಯ ಸೊಗಡನ್ನು ಪರಿಕರ-ಭೂಮಿಕೆಗಳಲ್ಲಿ ಅಳವಡಿಸಿದಾಗ ಮಾನವನ ಸಹಜ ಸ್ಪಂದನದ ಪರಿಣಾಮವಾಗಿ ಸ್ವಯಂಪ್ರೇರಿತವಾದ ನೃತ್ಯಗಳ ದರ್ಶನ.

ಹೀಗೆ ನೃತ್ಯದ ಪರಿಕರ ಮತ್ತು ಭೂಮಿಕೆಯ ವಿವೇಚನೆಯು ಅತ್ಯಂತ ರೋಚಕವಾದ ಅಧ್ಯಯನವಾಗಿದೆ. ಇದು ಮುಂದೆ ನರ್ತಕ ಹಾಗೂ ನರ್ತಕಿಯರು ಪ್ರಯೋಗಿಸುವ ವೈವಿಧ್ಯಮಯ ನೃತ್ಯಗಳ ತಂತ್ರ ಹಾಗೂ ಅಲ್ಲಿನ ಚತುರ್ವಿಧಾಭಿನಯಗಳನ್ನು ಪರಿಶೀಲಿಸಲು ನಾಂದಿಯಂತಿದೆ.[1] ವಿತಸ್ತ್ಯಾಂತರಿತೌ ಪಾದೌ ಕೃತ್ಪಾತು ಚತುರಸ್ರಕೌ
ತಿರ್ಯಕ್ ಕುಂಚಿತ ಜಾನುಭ್ಯಾಂ ಸ್ಥಿತಿರಾಯತ ಮಂಡಲಂ ||
ಅಭಿದ. ೨೬೬ ಸಂ.ಮಂ. ಶ್ರೀಧರಮೂರ್ತಿ

[2] ಎರಡೂ ಪಾದಗಳ ನಡುವೆ ೨ ೧/೨ ತಾಲಗಳ ಅಂತರವಿದ್ದು, ಒಂದು ಪಾದವನ್ನು ಸಮನಾಗಿ, ಇನ್ನೊಂದನ್ನು ಪಕ್ಕಕ್ಕೆ ತ್ರ‍್ಯಶ್ರವಾಗಿ ಇಡುವುದು.

[3] ವಿವರಣೆಗೆ ನೋಡಿ ಅಧ್ಯಾಯ ೩.

[4] ಅಧ್ಯಾಯ ೩ ರಲ್ಲಿ ಚರ್ಚಿಸಿದೆ.

[5] ಅದೇ.

[6] ಪುಷ್ಪಾಂಜಲಿಂ ಸಮಾದಾಯ ರಕ್ಷಾಮಂಗಲ ಸತ್ಕೃತಾಃ |
ಶುದ್ಧವಸ್ತ್ರಾಃ ಸುಮನಸಸ್ತಥಾ ಚಾದ್ಭುತ ದೃಷ್ಟಯಃ ||
ಸ್ಥಾನಂತು ವೈಷ್ಣವಂ ಕೃತ್ವಾ ಸೌಷ್ಠವಾಂಗಪುರಸ್ಕೃತಮ್ |
ಸೂಚೀವಾಮಪದಂ ದದ್ಯಾದ್ವಿಕ್ಷೇಪಂ ದಕ್ಷಿಣೇನಚ ||
ಪುಷ್ಪಾಂಜಲ್ಯಪವರ್ಗಶ್ಚ ಕಾರ್ಯೋಬ್ರಹ್ಮೋಥಮಂಡಲೇ ||
ರಂಗಪೀಠಸ್ಯ ಮಧ್ಯೇತು ಸ್ವಯಂ ಬ್ರಹ್ಮಾ ಪ್ರತಿಷ್ಠಿತಃ ||
ನಾಟ್ಯಶಾ. (ಸಂ. ಕೇದಾರನಾಥ) . ೬೮, ೬೯, ಪೂ. ೭೩ . ೭೪

[7] ಕಸಾಪ ನಿಘಂಟು – ಸಂ. ೬.

[8] ಕುಂಚಿತ ಪಾದವನ್ನು ಎತ್ತಿ ಮೊಳಕಾಲನ್ನು ಮೇಲೆ ಚಾಚಿ ಪಾದವನ್ನು ಹೆಬ್ಬೆರಳಿನ ಮೂಲಕ ನೆಲದ ಮೇಲೆ ಇಡುವುದು. ನಾಟ್ಯಶಾ. (ಅನು) ಶ್ರೀರಂಗ ಪು. ೧೪೦ (ಕುಂಚಿತಪಾದ ಮುಂಗಾಲನ್ನು ನೆಲದ ಮೇಲೂರಿ ಪಾದದ ಮಧ್ಯಭಾಗವನ್ನು ವಕ್ರಮಾಡಿ ಹಿಮ್ಮಡಿಯನ್ನು ಮೇಲಕ್ಕೆ ಎತ್ತುವುದು.)

[9] ಭೂಮಿಕೆ – ಸ್ಥಾನಕ ಪು. ೬೮, ೬೯.

[10] ಭೂಮಿಕೆ – ಸ್ಥಾನಕ ಪು. ೬೮, ೬೯.

[11] ಪೂರ್ವರಂಗದ ನಂತರ ಮಾಡುವ ನೃತ್ತಚಲನೆ.
ಮುಖಂತು ಪೂರ್ವರಂಗ ಸ್ಯಾಚ್ಚಾಲಿಸ್ತದನುಗಾಗತಿಃ |
ಮುಖಚಾಲಿರಿತಿ ಪ್ರೋಕ್ತಾ ನೃತ್ತಜ್ಞೈಃ ಪೂರ್ವಸೂರಿಭಿಃ ||
ನರ್ತನಿ. ೬೬೨ಸಂ. ರಾ. ಸತ್ಯನಾರಾಯಣ

[12] ಚಂದ್ರ ತ್ರಿನೇತ್ರವಾರಾಷ್ಟವೇದಾಂಗ ಶರದಿಕ್ಷು ಚ |
ಸ್ವಸವ್ಯಕ್ರಮತೋನೃತ್ತ್ಪಾ ಮಧ್ಯೇ ಪುಷ್ಪಾಂಜಲಿಂ ಕ್ಷಿಪೇತ್|
ರಂಗಪೀಠಸ್ಯ ಮಧ್ಯೇತು ಬ್ರಹ್ಮಾ ಸ್ವಯಮ ದಿಷ್ಠತಃ |
ಇಷ್ಟಾರ್ಥಂ ಕ್ರಿಯತೇ ಪುಷ್ಪಮೋಕ್ಷಣಂ ರಂಗ ಮಧ್ಯತಿಃ ||
(ಅದೇ. ೪-೬೬೩, ೬೬೫)

[13] ಸಾಸಂಭ – ಪು. ೧೯೬-೯೯ ಸಂ. ವೆಂಕಟಸುಂದರಾಸಾನಿ

[14] ನೋಡಿ ಭೂಮಿಕೆ – ಪುಷ್ಪಾಂಜಲಿ, ಪು. ೭೩.

[15] ನೋಡಿ ಅದೇ.

[16] ನೃತ್ಯದ ಪರಿಕರ / ವೇಷಭೂಷಣದಲ್ಲಿ ಚರ್ಚಿಸಿದೆ.

[17] ಅ.೩, ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳಲ್ಲಿ ಚರ್ಚಿಸಿದೆ.

[18] ನೋಡಿ ನಕ್ಷೆ – ಸಂಯುತ ಹಸ್ತ. (ಅನುಬಂಧ ಆ).

[19] ಶಬ್ದಾನಾ ಮಾದಿ ಭೂ ತತ್ವಾದಾದಿ ಶಬ್ದೋಭಿಧೀಯತೇ|
ಧ್ರುವತಾಳೇನ ಸಂಯೋಜ್ಯ ತಂ ನೃತ್ಯಂ ಪರಿಕಲ್ಪಯೇತ್ ||
ಆದಿಶಬ್ದಾಯಥಾ ತಾ, ಥೈ ತೋಂ ನಂ.
ಭರತಾ. . ೧೫೯೯೧ ಸಂ.ಕೆ. ವಾಸುದೇವ ಶಾಸ್ತ್ರಿ