ಕನ್ನಡ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು ಪೂರ್ವಯೋಜಿತ ಕಾರ್ಯಕ್ರಮದಂತೆಯೇ ನಿರೂಪಿತಗೊಂಡಿವೆ. ನರ್ತನ ಅಥವಾ ಕುಣಿತ ಕೆಲವೆಡೆ ಸಹಜ ಸ್ಪಂದನದಂತೆಯೇ ಒಡಮೂಡಿದೆ. ಉದಾಹರಣೆಗೆ, ಹರಿಹರನ ಕೆಲವು ರಗಳೆಗಳಲ್ಲಿ, ಹರಿದಾಸರ ಪದಗಳಲ್ಲಿ ಭಕ್ತರು ಭಾವ ಪರವಶರಾಗಿ ಕುಣಿಯುತ್ತಾರೆ. ಇಂತಹ ಸನ್ನಿವೇಶಗಳು ಗುರುವಿನ ಮಾರ್ಗದರ್ಶನ, ಶಾಸ್ತ್ರೀಯ ಕಲಿಕೆ, ಅಥವಾ ಸತತವಾದ ಅಭ್ಯಾಸದಿಂದ ಪ್ರಕಟಗೊಂಡಿವೆ ಎಂದು ಭಾಸವಾಗುವುದಿಲ್ಲ.

ಆದರೆ ಅನೇಕ ಕನ್ನಡ ಕಾವ್ಯಗಳಲ್ಲಿ ವರ್ಣಿತವಾದ ನೃತ್ಯ ಪ್ರಸಂಗಗಳಲ್ಲಿ ಒಂದು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದ ರೂಪವನ್ನೇ ಕಾಣಬಹುದಾಗಿದೆ. ಅಲ್ಲದೇ ಇವು ಕವಿಗಳ ಸ್ಪೋಪಜ್ಞತೆ ಹಾಗೂ ಕಲಾಭಿಜ್ಞತೆಯ ಪ್ರತೀಕವಾಗಿ ಶೋಭಿಸುತ್ತಿವೆ.

ತನ್ನ ಶಿಷ್ಯಂದಿರಿಗೆ ನಾಟ್ಯಶಾಸ್ತ್ರವನ್ನು ಬೋಧಿಸಿ ಅದರ ಮೊದಲ ಪ್ರಯೋಗವನ್ನು ಇಂದ್ರ ಧ್ವಜವೆಂಬ ಉತ್ಸವದಲ್ಲಿ ಭರತ ಪ್ರದರ್ಶಿಸಿದುದರ ವಿವರಣೆ ನಾಟ್ಯಶಾಸ್ತ್ರದ ಮೊದಲ ಅಧ್ಯಾಯದಲ್ಲಿ ವರ್ಣಿತವಾಗಿದೆ. ಪ್ರದರ್ಶನವು ಯಶಸ್ವಿಯಾದರೂ ಹಲವು ವಿಘ್ನಗಳಿಂದ ನಾಟ್ಯ ಪ್ರಯೋಗವು ಅನುಭವಿಸಿದ ಅವಘಡಗಳನ್ನು ತಿಳಿದು, ಅವರ ನಿವಾರಣೆಗೆ ಬ್ರಹ್ಮನು ಇತರ ದೇವತೆಗಳ ಸಹಾಯದೊಂದಿಗೆ ನಾಟ್ಯಗೃಹ ನಿರ್ಮಾಣ, ಪೂರ್ವರಂಗ ವಿಧಿ, ಜವನಿಕೆ, ಪುಷ್ಪಾಂಜಲಿಯಂತಹ ವಿಧಿಗಳನ್ನು ಸೃಜಿಸಿ ನಾಟ್ಯ ಪ್ರದರ್ಶನದ ಸರ್ವಾಂಗೀಣ ಯಶಸ್ಸಿಗೆ ಉಪಾಯಗಳನ್ನು ಒದಗಿಸುತ್ತಾನೆ.

[1]

ದೇವಾಲಯದಲ್ಲಿ ಶಿಲ್ಪಿ ತನ್ನ ಕಲಾಕೃತಿಗೆ ಹೆಚ್ಚಿನ ಮೆರಗನ್ನು ನೀಡಲು ನೃತ್ಯ ಶಿಲ್ಪಗಳನ್ನು ಕಡೆದು, ಅದರ ಸೌಂದರ್ಯವನ್ನು ವೈವಿಧ್ಯದ ಮೂಲಕ ಹೆಚ್ಚಿಸುವಂತೆ ನಮ್ಮ ಕವಿಗಳೂ ತಮ್ಮ ಕಾವ್ಯ ದೇಗುಲದಲ್ಲಿ ಸುಂದರವಾದ ನೃತ್ಯ ಪ್ರಸಂಗಗಳನ್ನು ತಮ್ಮ ಅನುಭವ ಹಾಗೂ ಕಲ್ಪನೆಗಳ ಬಲದಿಂದ ನಿರ್ಮಿಸಿ ಕನ್ನಡ ಕಾವ್ಯಸೌಧದ ಸರ್ವಾಂಗೀಣ ಸೌಂದರ್ಯದಲ್ಲಿ ನೃತ್ಯದ ಪಾತ್ರವನ್ನು ಎತ್ತಿ ಹಿಡಿದಿದ್ದಾರೆ. ಇವನ್ನು ಭರತೋಕ್ತವಾದ ವಿಧಿನಿಯಮಗಳನ್ನು ಅನುಸರಿಸಿ ರಚಿಸಿರುವುದು ಅವುಗಳ ಅಧ್ಯಯನದಿಂದ ತಿಳಿದು ಬರುತ್ತದೆ. ಕವಿಗಳು ವರ್ಣಿಸುವ ನೃತ್ಯ ಪ್ರಸಂಗಗಳ ಅಧ್ಯಯನವು ಸುಗಮವಾಗಲು, ಅವುಗಳಿಗೆ ಒಂದು ಸಮಯೋಜಿತ ಹಿನ್ನೆಲೆಯನ್ನು ದೊರಕಿಸುವುದು (Back Drop) ಈ ಅಧ್ಯಯನದ ಉದ್ದೇಶ.

ನೃತ್ಯ ಪ್ರದರ್ಶನವನ್ನು ಮಾಡಲು ಮೊದಲಾಗಿ ಸ್ಥಳದ ಆವಶ್ಯಕತೆ ಇರುತ್ತದೆ. ಆದ್ದರಿಂದ ಪರಿಕರಗಳಲ್ಲಿ ರಂಗಭೂಮಿ ಅಥವಾ ನೃತ್ಯ ಮಂಟಪವನ್ನು ಮೊದಲಿಗೆ ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ. ಎರಡನೆಯದಾಗಿ ನೃತ್ಯಕ್ಕೆ ಹಿನ್ನೆಲೆಯನ್ನು ಒದಗಿಸುವ ಆತೋದ್ಯ ಹಾಗೂ ಗಾಯನದ ಚರ್ಚೆಯನ್ನು ಮಾಡಲಾಗಿದೆ. ಮೂರನೆಯದಾಗಿ ಸಭೆಯ ಮುಂದೆ ನೃತ್ಯವನ್ನು ಪ್ರದರ್ಶಿಸುವ ನರ್ತಕ ಅಥವಾ ನರ್ತಕಿಯೆ ವೇಷಭೂಷಣಗಳೆಂಬ ಪರಿಕರಗಳನ್ನು ಚರ್ಚಿಸಲಾಗಿದೆ.

ರಂಗದ ಮೇಲೆ ಶಾಸ್ತ್ರೀಯವಾಗಿ ನರ್ತಿಸಲು ತಾಂತ್ರಿಕ ಮೌಲ್ಯವುಳ್ಳ ಬಂಧಗಳನ್ನು ಪ್ರದರ್ಶಿಸಲು ನರ್ತಕಿ ಅಥವಾ ನರ್ತಕನ ರಂಗಪ್ರವೇಶ, ಜವನಿಕೆ (ತೆರೆ) ಪುಷ್ಪಾಂಜಲಿ ಹಾಗೂ ಸ್ಥಾನಕ ಈ ನಾಲ್ಕು ಹಂತಗಳನ್ನೂ ದಾಟಬೇಕಾಗುತ್ತದೆ. ಇವುಗಳನ್ನು ಭೂಮಿಕೆಯಲ್ಲಿ ಚರ್ಚಿಸಲಾಗಿದೆ.

. ನೃತ್ಯದ ಪರಿಕರ : ರಂಗಭೂಮಿ

ನಾಟಕ ನೃತ್ಯ ಹಾಗೂ ಸಂಗೀತದಂತಹ ಕಲೆಗಳನ್ನು ಪ್ರದರ್ಶಿಸುವ ತಾಣ ಎಂದರೆ ಸಾರ್ವಜನಿಕರ ಮನೋಲ್ಲಾಸದ ಸ್ಥಾನವೆಂದೂ ರಂಗಭೂಮಿಯನ್ನು ನಿಘಂಟುಕಾರರು ಅರ್ಥೈಸುತ್ತಾರೆ.[2] ಭರತನೂ ರಂಗಭೂಮಿಯ ರಚನೆ, ಲಕ್ಷಣ, ನಿರ್ಮಾಣಗಳ ಕುರಿತಾಗಿ ನಾಟ್ಯಶಾಸ್ತ್ರದ ಎರಡನೆಯ ಅಧ್ಯಾಯದಲ್ಲಿ ದೀರ್ಘವಾಗಿ ಚರ್ಚಿಸಿದ್ದಾನೆ. ರಂಗಭೂಮಿಗೆ ಪರ್ಯಾಯವಾಗಿ ಭರತನು ನಾಟ್ಯಮಂಟಪ, ನಾಟ್ಯವೇಶ್ಮ, ಪ್ರೇಕ್ಷಾಗೃಹ, ರಂಗ ಎಂಬ ಪದಗಳನ್ನು ಬಳಸುತ್ತಾನೆ.[3] ಆತ ವಿಕೃಷ್ಟ, ಚತುರಸ್ರ ಹಾಗೂ ತ್ರ್ಯಸ್ರ ಎಂದು ಮೂರು ಪ್ರಕಾರಗಳ ನಾಟ್ಯಮಂಟಪ (ಪ್ರೇಕ್ಷಾಗೃಹ)ಗಳನ್ನು ಕ್ರಮವಾಗಿ ೧೦೮, ೬೪ ಹಾಗೂ ೩೨ ಹಸ್ತಗಳ ಪ್ರಮಾಣಗಳಲ್ಲಿ ಗೊತ್ತು ಮಾಡುತ್ತಾನೆ.[4] ಇವುಗಳಲ್ಲಿ ಪ್ರತಿಯೊಂದರಲ್ಲೂ ಜ್ಯೇಷ್ಠ, ಮಧ್ಯಮ ಹಾಗೂ ಅವರ ಈ ಬಗೆಗಳು ಸೇರಿ ಒಟ್ಟು ೯ ಬಗೆಗಳ ನಾಟ್ಯ ಗೃಹಗಳನ್ನು ವಿಸ್ತಾರವಾಗಿ ಹೇಳುತ್ತಾನೆ.

ಭರತಮುನಿಯು ಚರ್ಚಿಸಿರುವ ರಂಗಭೂಮಿ, ಅದರ ಅಳತೆ ಹಾಗೂ ಅಲ್ಲಿ ಬಳಸಿರುವ ಪಾರಿಭಾಷಿಕ ಶಬ್ದಗಳ ಪರವಾಗಿ ಅನೇಕ ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.[5] ಅದರಲ್ಲಿ ಮಂಕಡ್ ಅವರ ಅಭಿಪ್ರಾಯವನ್ನು ಪ್ರಸ್ತುತ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಮಂಕಡ್ ಅವರು ರಂಗಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ೩೨ ಹಸ್ತದ ಪ್ರಮಾಣವುಳ್ಳ ನಾಟ್ಯಗೃಹವನ್ನೂ ಅವರು ಸೂಕ್ತವಾದ ನಾಟ್ಯಮಂಟಪವೆಂದೂ ಪರಿಗಣಿಸುತ್ತಾರೆ. ರಂಗಭೂಮಿಯ ಮೂರು ಭಾಗಗಳಾದ ಪ್ರೇಕ್ಷಾಗೃಹ, ರಂಗಸ್ಥಲ, ಹಾಗೂ ನೇಪಥ್ಯ ಗೃಹಗಳನ್ನು ರೇಖಾ ಚಿತ್ರದ ಮೂಲಕ ಹೀಗೆ ವಿವರಿಸುತ್ತಾರೆ.

1_6_PP_KUH

ರಂಗಪೀಠ ಸೂತ್ರಧಾರ, ನಟ, ನರ್ತಕ ಹಾಗೂ ನರ್ತಕಿಯರ ಅಭಿನಯದ ಕ್ಷೇತ್ರ.

ನೇಪಥ್ಯ ಗೃಹ ಪಾತ್ರಗಳು ವಸ್ತ್ರಾಲಂಕಾರ, ವರ್ಣಾಲಂಕಾರವನ್ನು ಮಾಡಿಕೊಳ್ಳುವ ಸ್ಥಳ.

ರಂಗಶೀರ್ಷ ಆತೋದ್ಯ (ವಾದ್ಯಗಾರರು) ಹಾಗೂ ಗಾಯಕ ಗಾಯಕಿಯರ ಸ್ಥಳ ನಿವೇಶ ಹಾಗೂ ಜವನಿಕೆ ಸರಿಯುವ ಮುನ್ನ ನಡೆಯಬೇಕಾದ ಕ್ರಿಯೆಗಳ ಸ್ಥಳ.

ಮತ್ತವಾರಣೀ ರಂಗಪೀಠದ ಇಕ್ಕೆಲಗಳಲ್ಲಿನ ಜಗುಲಿ ಎಂದು ಸ್ಥೂಲವಾದ ಅರ್ಥ.[6]

ನೇಪಥ್ಯ ೩೨x ೧೬ ಹಸ್ತಗಳ ಪ್ರಮಾಣದಲ್ಲಿ ರಚಿಸಲಾದ ನೇಪಥ್ಯ ಗೃಹದಲ್ಲಿ ಪಾತ್ರಧಾರಿಗಳ ವಸ್ತ್ರಾಲಂಕಾರ, ವರ್ಣಾಲಂಕಾರದ ಸ್ಥಳ.

ಈ ಮೇಲಿನ ಮೂರು ಭಾಗಗಳೂ (ಅ, ಆ, ಇ) ಸೇರಿ ರಂಗಭೂಮಿ (Stage) ಎನಿಸುತ್ತದೆ ಎಂದು ಮಂಕಡ್ ಅವರ ಅಭಿಪ್ರಾಯ.[7]

ಕರ್ನಾಟಕದಲ್ಲಿ ಮೊತ್ತಮೊದಲ ನಾಟಕ ಶಾಲೆಯ ಸ್ಥಾಪನೆಯನ್ನು ಕುರಿತು ಧಾರವಾಡ ಜಿಲ್ಲೆಯ ೧೦೪೫ನೇ ಶತಮಾನದ ಶಾಸನವು ಹೇಳುತ್ತದೆ.[8]

ಕನ್ನಡ ಕಾವ್ಯಗಳಲ್ಲಿ ಹತ್ತನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಕವಿಗಳು ನಾಟ್ಯ ಮಂಟಪಗಳ ವರ್ಣನೆಯನ್ನು ಹಲವು ವಿಧವಾಗಿ ಮಾಡಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಕಂಡ ರಂಗಭೂಮಿಯ ವರ್ಣನೆಗಳನ್ನು ಕವಿಗಳು ನೃತ್ಯ ಪ್ರಸಂಗಗಳ ಪರಿಕರದಂತೆ ಬಳಸಿದ ಪರಿಯನ್ನು ವಿಶ್ಲೇಷಿಸಲಾಗಿದೆ.

ಸಾಮಾನ್ಯವಾಗಿ ನಾಟಕಶಾಲೆಗಳು ರಾಜಧಾನಿಯ ಅಂದವನ್ನು ಹೆಚ್ಚಿಸುವ ಸಾಧಕಗಳಂತೆ ಕನ್ನಡ ಕಾವ್ಯಗಳಲ್ಲಿ ವರ್ಣಿತವಾಗಿವೆ. ಜೈನಕಾವ್ಯಗಳಲ್ಲಿ ಪಂಚಕಲ್ಯಾಣಗಳಲ್ಲಿ ಒಂದಾದ ಸಮವಸರಣ ಕಲ್ಯಾಣದಲ್ಲಿ ಸಮವಸರಣ ಮಂಟಪದಲ್ಲಿ ವೈಭವೋಪೇತವಾದ ಮೂವತ್ತೆರಡು ನಾಟಕ ಶಾಲೆಗಳಲ್ಲಿ ಕವಿಗಳು ವರ್ಣಿಸುತ್ತಾರೆ. ನಗರದ ಮಹಾಬೀದಿಯ ಇಕ್ಕೆಲಗಳಲ್ಲೂ ಮೂವತ್ತೆರಡು ನಾಟಕ ಶಾಲೆಗಳು. ಅವುಗಳು ಬಿಳಿಯ ಬಣ್ಣದ್ದಾಗಿದ್ದು ಪ್ರತಿಯೊಂದು ನಾಟಕ ಶಾಲೆಗಳ ಎದುರಿನಲ್ಲಿ ಎರಡು ಧೂಪಘಟಗಳಿಂದ ಸುವಾಸನೆಯ ಗಂಧವು ಹರಡಿದುದನ್ನೂ ರತ್ನಖಚಿತವಾದ ಆಸನಗಳು ಸೋಪಾನದ ಮಾದರಿಯಲ್ಲಿ ಸಜ್ಜಾಗಿರುವುದನ್ನೂ, ಕನಕಮಯವಾದ ವೇದಿಕೆಗಳು ಆ ನಾಟ್ಯಗೃಹದಲ್ಲಿ ಅಲಂಕೃತವಾದುದನ್ನು ಕವಿಗಳು ವರ್ಣಿಸುತ್ತಾರೆ.[9] ಭರತನು ನಾಟ್ಯಶಾಸ್ತ್ರದ ಎರಡನೆಯ ಅಧ್ಯಾಯದಲ್ಲಿ ನಾಟ್ಯಗೃಹದ ಅಲಂಕರಣ, ಪ್ರೇಕ್ಷಾಗೃಹದಲ್ಲಿ ಆಸನಗಳ ವ್ಯವಸ್ಥೆ ವೇದಿಕೆಯ ಅಲಂಕಾರ ಕುರಿತು ವಿವರವಾಗಿ ಚರ್ಚಿಸುತ್ತಾನೆ.

ಕನ್ನಡ ಕಾವ್ಯದಲ್ಲಿ ಸುಸಜ್ಜಿತವಾದ ರಂಗಭೂಮಿಯ ಪ್ರಸ್ತಾಪವನ್ನು ಕವಿಗಳು ಮಾಡಿದ್ದಾರೆ. ಮತ್ತೆ ಕೆಲವೆಡೆ ಪಾಂಡುಕ ಶಿಲೆಯೇ ರಂಗಭೂಮಿಯಾಗಿ ಬಗೆದು ಇಂದ್ರನ ಆನಂದ ನೃತ್ಯವು ಅಲ್ಲಿಯೇ ನಡೆದ ವರ್ಣನೆಯನ್ನು ಮಾಡಿದ್ದಾರೆ.[10] ಎಲ್ಲ ಜೈನ ಕವಿಗಳೂ ನೇಪಥ್ಯದಲ್ಲಿ ಸರ್ವಾಲಂಕಾರದಿಂದ ಅಲಂಕೃತನಾದ ಇಂದ್ರನನ್ನು ನಾಟ್ಯವೇದಾವತಾರಮನೆ ಪೋಲ್ತು ರಂಗವನ್ನು ಹೋಗುವನೆಂದು ವರ್ಣಿಸುತ್ತಾರೆ.[11] ಆದರೆ ಇಂದ್ರನ ಅಥವಾ ನರ್ತಕಿಯ ಪಾದ, ಹಸ್ತ, ಚಲನೆಗಳು ರಂಗಪ್ರವೇಶದಲ್ಲಿ ಯಾವ ಮಾದರಿ ಇತ್ತು ಎಂಬುದರ ಮಾಹಿತಿಗಳನ್ನು ಈ ಕವಿಗಳು ಕೊಡುವುದಿಲ್ಲ ಆದರೆ ರತ್ನಾಕರ ವರ್ಣಿ, ನಾಗಚಂದ್ರ ನಂತರ ಕವಿಗಳು ನರ್ತಕಿಯ ರಂಗಪ್ರವೇಶದ ಗತಿಗಳನ್ನು ತಿಳಿಸುತ್ತಾರೆ. (ಅದರ ಪರಿಶೀಲನೆಯನ್ನು ಮುಂದೆ ಮಾಡಲಾಗಿದೆ.)

ಸಭೆ ಕೂಡ ಇಲ್ಲಿ ಸುರ, ಅಸುರ, ರಾಜ ಹಾಗೂ ಮಾನವರಿಂದ ಕೂಡಿದ ಸಭೆಯಾಗಿರುತ್ತದೆ. ಜಿನನಾಗಲಿರುವ ದೈವೀ ಪುರುಷನೇ ಸಭಾಪತಿಯಾಗಿರುತ್ತಾನೆ. ಸಾಮಾನ್ಯವಾಗಿ ರಾಜ ಸಭೆಗಳಲ್ಲಾದರೆ ಆ ರಾಜ್ಯದ ದೊರೆಯೇ ಸಭಾಪತಿ.

ನಾಗಚಂದ್ರನು ಮಲ್ಲಿಪು ದಲ್ಲಿ ರಾಜನಾದ ವೈಶ್ರವಣನು ಸಂಗೀತ ನೃತ್ಯಾವಲೋಕನಕ್ಕೆಂದು ನಾಟಕ ಶಾಲೆಗೆ ರಾಜ ಪರಿವಾರದೊಡನೆ ಆಗಮಿಸುವ ಸಂದರ್ಭದಲ್ಲಿ ರಂಗಭೂಮಿಯನ್ನು ವರ್ಣಿಸುತ್ತಾನೆ. ರಾಜ ಪೋಷಿತ ನಾಟ್ಯಗೃಹದ ವೈಭವವನ್ನು ಮಾಡುತ್ತ ಕವಿ ವೈಶ್ರವಣನ ನಾಟಕ ಶಾಲೆಯನ್ನು ಇಂದ್ರನ ದೇವಭವನಕ್ಕೆ ಹೋಲಿಸುತ್ತಾನೆ. ಅದು ಹೀಗೆ:

ಗುಣದೊದವಿಂ ಪರಾಕ್ರಮದಳುರ್ಕೆಯಿನುನ್ನತಿಯಿಂ ವಿಲಾಸದಿಂ
ದೆಣೆ ತನಗೆಂದು ಸಖ್ಯಮನಪೇಕ್ಷಿಸಿ ತನ್ನ ವಿಮಾನಮಂ ನೃಪಾ
ಗ್ರಣಿಗೆ ಸುರೇಂದ್ರನೊಲಗಿಸಿದಂತೆಸೆದತ್ತು ವಿಚಿತ್ರ ಪುತ್ರಿಕಾ
ಮಣಿಮಯ ಮತ್ತವಾರಣ ವಿತಾನ ವಿರಾಜಿತ ನಾಟ್ಯ ಮಂಡಪಂ (ಮಲ್ಲಿಪು. .)

ಸುಂದರವಾದ ಪುತ್ತಳಿಗಳಿಂದ ಅಲಂಕೃತವಾದ, ಮಣಿಗಳಿಂದ ಶೋಭಿಸುವ, ಮತ್ತವಾರಣಗಳಿಂದ ಕೂಡಿದ ನಾಟ್ಯ ಮಂಟಪದ ವರ್ಣನೆ ಇದು. ರಂಗಪೀಠದ ಇಕ್ಕೆಲಗಳಲ್ಲಿ, ವೇದಿಕೆಯ ಒಂದು ಅಂಗವನ್ನು ಭರತನು ಮತ್ತವಾರಣೀ ಎಂದು ಹೆಸರಿಸುತ್ತಾನೆ.[12]

ಮತ್ತವಾರಣಿಯ ಸ್ವರೂಪ ಹಾಗೂ ಲಕ್ಷಣಗಳ ಬಗ್ಗೆ ವಿದ್ವಾಂಸರುಗಳು ಅನೇಕ ವಾದಗಳನ್ನು ಮುಂದಿಟ್ಟಿದ್ದಾರೆ[13] ಎಲ್ಲ ವಾದಗಳೂ ಇಲ್ಲಿ ಅಪ್ರಸ್ತುತ. ಮತ್ತವಾರಣವು ರಂಗಪೀಟದ ಸೊಬಗನ್ನು ಹೆಚ್ಚಿಸುವ ನಟ, ನಟಿಯರ ತಂಗುದಾಣ, ಸಭಾಸದನಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ವೇದಿಕೆಗೆ ಪ್ರವೇಶಿಸುವ ತಾಣ[14] ಎಂದು ಹೇಳುವ ಅಭಿಪ್ರಾಯವನ್ನು ಸ್ವೀಕರಿಸಬಹುದು. ಒಂದು ಕಟ್ಟಡದ ಎದುರಿಗೆ ನಿರ್ಮಿಸಿದ ಕಟಕಟೆ ಎಂಬ ಅರ್ಥವೂ ಸಮಂಜಸವೇ.[15]

ನಾಗಚಂದ್ರನು ರಂಗಪೀಠ. ರಂಗಶೀರ್ಷಗಳನ್ನು ವರ್ಣಿಸದೇ ಮತ್ತವಾರಣಿಯನ್ನು ಉಲ್ಲೇಖ ಮಾಡಿರುವುದು ಗಮನಾರ್ಹವಾದ ಸಂಗತಿ. ಮಣಿಮಯ ಪುತ್ತಳಿಗಳ ಸಾಲುಗಳಿಂದ ಅಲಂಕೃತವಾದ ಈ ಮತ್ತವಾರಣವು ನಾಟ್ಯ ಮಂಟಪದಲ್ಲಿ ಬಹು ಆಕರ್ಷಕವಾಗಿ ಕಂಡಿರಬೇಕು. ಮುಂದಿನ ಪದ್ಯಗಳಲ್ಲಿ ನಾಗಚಂದ್ರನು ಸಭಾಪತಿಯ ಪೀಠ, ಸಭೆಯ ಲಕ್ಷಣ, ಸಭಾಸದರ ಲಕ್ಷಣಗಳನ್ನು ಶಾಸ್ತ್ರಸಮ್ಮತವಾಗಿ ವರ್ಣಿಸುತ್ತಾನೆ.[16]

ನಾಗಚಂದ್ರನು ರಂಗಭೂಮಿಯ ಪ್ರಸ್ತಾವವನ್ನು ಪುನಃ ಇಂದ್ರನ ಆನಂದ ನೃತ್ಯದ ಪ್ರಸಂಗದಲ್ಲಿ ಚಿತ್ರಿಸುತ್ತಾನೆ. ಇಂದ್ರನು ಪೂರ್ವರಂಗ, ನಾಂದಿಪೂಜೆ, ಪುಷ್ಪಾಂಜಲಿಗಳಂತಹ ವಿಧಿಗಳನ್ನು ಪೂರೈಸಿ ರಂಗವನ್ನು ಪ್ರವೇಶಿಸುತ್ತಾನೆ.

ನೈಪಥ್ಯಂ ಪೊಸದೇಸೆವೆತ್ತೆಸೆಯ ತನ್ನೊಳ್ಪೂರ್ವರಂಗ ಪ್ರಸಂ
ಗೋಪೇತಂಗಳೆನಿಪ್ಪ ಮಂಗಳ ಪದಾಖ್ಯಾನಂಗಳಂ ಮಾಡಿ ನಾಂ
ದೀ ಪೂಜಾವಿಧಿ ಪೂರ್ವಕಂ ದಿವಿಜರಾಜಂ ಸೂಸಿದ ಕಲ್ಪವ
ಲ್ಲೀ ಪುಷ್ಪಾಂಜಲಿಯಂ ಸಭಾಸದರ್ಗೆತೋಱಲ್ ತಾಂಡವ ಪ್ರೌಢಿಯಂ ||
(ಮಲ್ಲಿಪು. ೧೩-೨೩)

ನಾಟ್ಯ (ನಾಟಕ)ದ ಮೊದಲು ರಂಗಸ್ಥಲದಲ್ಲಿ ನಡೆಯುವ ಚಟುವಟಿಕೆಯನ್ನು ಪೂರ್ವರಂಗ[17] ಎಂದು ಭರತನು ಹೆಸರಿಸಿ ಅದರ ಅಂಗಗಳನ್ನೂ ತನ್ನ ಗ್ರಂಥ ನಾಟ್ಯಶಾ.ದ ಐದನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ವಿವರಿಸುತ್ತಾನೆ. ಪ್ರತ್ಯಾಹಾರದಿಂದ ಪ್ರರೋಚನಾದವರೆಗೆ ಪೂರ್ವರಂಗ ವಿಧಿ[18]ಯ ಅಂಗಗಳ ಕಾರ್ಯ ಚಟುವಟಿಕೆ ಉದ್ದೇಶಗಳು ಹೀಗಿವೆ.

ಪ್ರತ್ಯಾಹಾರ ವಾದ್ಯಗಳನ್ನು ಅವುಗಳ ಸ್ಥಾನದಲ್ಲಿ ಇಡುವುದು, ಕುತಪ[19]

ಅವತರಣ

ಗಾಯಕ, ಗಾಯಕಿಯ ಸ್ಥಳ ನಿರ್ದೇಶ, ವಾದ್ಯಗಳೊಡನೆ ಶ್ರುತಿ ಹೊಂದಿಸುವಿಕೆ
ಆರಂಭ ಗಾಯಕ ಅಥವಾ ವಾದ್ಯಮೇಳದಿಂದ ಆಲಾಪ ನುಡಿಸುವುದು.
ಆಶ್ರವಣ ವಾದ್ಯಮೇಳದಿಂದ ಪ್ರೇಕ್ಷಕರನ್ನು ರಂಜಿಸುವುದು.
ವಕ್ತ್ರಪಾಣಿ ವಾದ್ಯಗಳ ಮೇಲೆ ಬೆರಳುಗಳನ್ನು ಆಡಿಸುವುದು
ಪರಿಘಟ್ಟನಾ ತಂತಿ ವಾದ್ಯಗಳ ತಂತಿಗಳ ಬಿಗಿ ಸಡಿಲಿಸಿ ನಾಟ್ಯಕ್ಕೆ ಅನುಗುಣವಾಗಿಸುವುದು.
ಸಂಘೋಟನ ವೀಣೆಯೊಡನೆ ಅವನದ್ಧ ವಾದ್ಯಗಳನ್ನು ಶ್ರುತಿಗೊಡಿಸುವುದು.
ಮಾರ್ಗಾಸಾರಿತ ತಂತಿಯೊಡನೆ ಪುಷ್ಕರ ವಾದ್ಯಗಳ ಶ್ರುತಿಗೊಡಿಸುವುದು.
ಆಸಾರಿತ ತಾಲಗಳನ್ನು ಸುತ್ತಲೂ ಅವುಗಳ ಶಬ್ದ ಕೇಳಿಸುವಂತೆ ಬಾರಿಸುವುದು.
ಬಹಿರ್ಗೀತ ದೇವತಾಸ್ತುತಿ.
ಉತ್ಥಾಪನ ನಾಂದೀ ಪಾಠಕರು ಪ್ರಯೋಗವನ್ನು ಆರಂಭಿಸುವುದು.
ಪರಿವರ್ತನ ಎಲ್ಲ ದಿಕ್ಕುಗಳತ್ತ ತಿರುಗಿ ಲೋಕಪಾಲರಿಗೆ ನಮಸ್ಕಾರವನ್ನು ಮಾಡುವುದು.
ನಾಂದಿ ದೇವ, ದ್ವಿಜ, ನೃಪತಿ ಮೊದಲಾದವರಿಂದ ಆಶೀರ್ವಾದವನ್ನು ಬಯಸುವುದು.
ಶುಷ್ಕಾವಕೃಷ್ಟಾ ಅಕ್ಷರಗಳನ್ನು ಉಚ್ಚರಿಸದೇ ದ್ರುವಗೀತಿಯನ್ನು ನುಡಿಯುವುದು.
ಚಾರಿ ಶಂಕರ ಪಾರ್ವತಿಯರ ಶೃಂಗಾರ ಚರಿತೆಗೆ ಸಂಬಂಧಿಸಿದ್ದು.
ಮಹಾಚಾರಿ ರುದ್ರನು ದೈತ್ಯರ ಸಂಹಾರ ಮಾಡುವ ಚರಿತೆಗೆ ಸಂಬಂಧಿಸಿದ್ದು.
ತ್ರಿಗತ ವಿದೂಷಕ, ಸೂತ್ರಧಾರ ಮತ್ತು ಪಾರಿಪಾರ್ಶ್ವಕರ ಸಂಭಾಷಣೆಯನ್ನು ನಡೆಸುವುದು.
ಪ್ರರೋಚನ ಸಮಂಜಸ ಕಾರಣಗಳೊಡನೆ ಕತೆಯ ಸಂದರ್ಭವನ್ನು ಹೇಳಿ ಪ್ರೇಕ್ಷಕರನ್ನು ಸಿದ್ಧಿಗಾಗಿ ಕೇಳಿಕೊಳ್ಳುವುದು. ಇವೆಲ್ಲವೂ ರಂಗಪೀಠದಲ್ಲಿ ಜವನಿಕೆ[20]ಯ ಹಿಂದೆ ನಡೆಯಬೇಕೆಂದೂ ಭರತನು ನಿರ್ದೇಶಿಸುತ್ತಾನೆ. ಪೂರ್ವರಂಗದ ನಂತರ ಸೂತ್ರಧಾರನು ಪುಷ್ಪಾಂಜಲಿ[21]ಯನ್ನು ಮಾಡಿ, ನಂತರ ವೈಷ್ಣವ[22] ಸ್ಥಾನಕದಲ್ಲಿ ಸೂತ್ರಧಾರನ ತರಹವೇ ಇರುವ ನಟ ರಂಗಮಧ್ಯದಲ್ಲಿ ನಿಂತು ನೃತ್ತವನ್ನು ಆರಂಭಿಸಬೇಕೆಂದು ಅವನ ಸೂಚನೆಯಿದೆ.

ಸಾಮಾನ್ಯವಾಗಿ ಜೈನ ಕಾವ್ಯಗಳಲ್ಲಿ ಇಂದ್ರನೇ ಸೂತ್ರಧಾರನ ಕಾರ್ಯವನ್ನು ಮಾಡುವಂತೆ ಕವಿಗಳು ವರ್ಣಿಸಿದ್ದಾರೆ. ಆನಂದ ನೃತ್ಯಕ್ಕಾಗಿ ನೂತನ ರೀತಿಯಲ್ಲಿ ಸೊಬಗಿನಿಂದ ಅಲಂಕರಿಸಿಕೊಂಡ ಇಂದ್ರನ ರಂಗ ಪ್ರವೇಶವನ್ನು ಕವಿಗಳು ಸಾಮಾನ್ಯವಾಗಿ

ಎಸೆದಿರೆ ವೈಶಾಖ ಸ್ಥಾ
ಸೌಷ್ಠವಂ ಪಾಣಿ ಪಲ್ಲವ ದ್ವಿತಯಂ ರಂ
ಜಿಸೆ ಕಟಿತಟದೊಳ್ ಸುರಪತಿ
ರಸಭಾವಾಭಿನಯಮೊಪ್ವೆ ರಂಗಂ ಬೊಕ್ಕಂ (ಮಲ್ಲಿಪು.೧೩೨೪)

ಎಂದು ಸ್ಪಷ್ಟಪಡಿಸುತ್ತಾರೆ.

ರಂಗ ಮಧ್ಯದಲ್ಲಿ ವೈಶಾಖ[23] ಸ್ಥಾನವನ್ನು ಹಿಡಿದು ನಿಲ್ಲಬೇಕೆಂಬ ಉದ್ದೇಶವನ್ನು ಹೊಂದಿದ್ದ ಇಂದ್ರನು ಎರಡೂ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ಸೌಷ್ಠವದಿಂದ ನಡೆಯುತ್ತ ರಂಗವನ್ನು ಪ್ರವೇಶಿಸಿದ ಸ್ಪಷ್ಟವಾದ ಚಿತ್ರ ಮೇಲಿನ ಪದ್ಯದಲ್ಲಿ ಕಾಣುತ್ತದೆ.

ನಾಟ್ಯಶಾಸ್ತ್ರದಲ್ಲಿ ವಿವರಿಸಿರುವ ಪೂರ್ವರಂಗ ವಿಧಿಯನ್ನು ಸಮಕಾಲೀನ ನೃತ್ಯ ಕಾರ್ಯಕ್ರಮಗಳಲ್ಲೂ (ಕೆಲವೊಂದು ಅಂಗಗಳನ್ನು ಹೊರತು ಪಡಿಸಿ) ಕೆಲವು ಮಾರ್ಪಾಟುಗಳೊಂದಿಗೆ ಇಂದಿಗೂ ಅನುಸರಿಸುತ್ತಾರೆ.

ರಂಗಪೀಠದ ಬಲಭಾಗದಲ್ಲಿ ಕ್ರಮವಾಗಿ ಮೃದಂಗವಾದ ನಟುವಾಂಗವನ್ನು ನುಡಿಸುವ ನಾಟ್ಯಾಚಾರ್ಯ, ಗಾಯಕ, ಗಾಯಕಿ, ಇವರ ಹಿಂದುಗಡೆ ಪಿಟೀಲು ವಾದಕ ವೀಣೆ ಮತ್ತು ಕೊಳಲು ವಾದಕರು ಉಪಸ್ಥಿತರಿರುತ್ತಾರೆ. ರಂಗಶೀರ್ಷದಲ್ಲಿ ಮುಂದುಗಡೆ ನಾಟ್ಯಾಧಿದೇವತೆಯಾದ ನಟರಾಜ ಮೂರ್ತಿಯನ್ನು ಪ್ರತಿಷ್ಠಾಪಿಸಿರುತ್ತಾರೆ. (ಇದು ಇತ್ತೀಚೆಗೆ ಸುಮಾರು ೬೦ ವರುಷಗಳಿಂದ ಕಾಣುವ ಮಾರ್ಪಾಟು) ಗಾಯಕ, ಗಾಯಕಿ ಹಾಗೂ ವಾದ್ಯಗಳ ಶ್ರುತಿ ಮೇಳೈಸುವಿಕೆ, ದೇವತಾಸ್ತುತಿ, ಪ್ರೇಕ್ಷಕರನ್ನು ರಂಜಿಸಲು, ನಾದ, ಲಯಗಳ ವಾತಾವರಣವನ್ನು ಕಲ್ಪಿಸಲು ವಾದ್ಯಗಳ ನುಡಿಸಾಣಿಕೆಯೂ ನಡೆಯುತ್ತದೆ. ಇತ್ತೀಚೆಗೆ ಈ ಕಾರ್ಯವನ್ನು ಧ್ವನಿ ಮುದ್ರಿತ ಸುರಳಿಗಳು ಮಾಡುತ್ತವೆ.

ಮೇಲಿನ ಎಲ್ಲ ಚಟುವಟಿಕೆಗಳ ನಂತರ ತೆರೆ ಸರಿಯುತ್ತದೆ. ಈ ತೆರೆ ಭರತನ ಜವನಿಕೆಯನ್ನು ಎಷ್ಟರ ಮಟ್ಟಿಗೆ ಹೋಲುತ್ತದೆ ತಿಳಿಯುವಂತಿಲ್ಲ. ಕಾರಣ ಭರತನ ಜವನಿಕೆಯ ಕಲ್ಪನೆ ಈಗ ನೋಡುವ ನಾಟ್ಯಗೃಹದ ತೆರೆಗಿಂತ ಭಿನ್ನವೆನಿಸುವುದು. (ಇದರ ಬಗ್ಗೆ ಜವನಿಕೆ ಭಾಗದಲ್ಲಿ ಚರ್ಚಿಸಲಾಗಿದೆ.) ತೆರೆಯು ಸರಿಯುತ್ತಿದ್ದಂತೆಯೇ ಸರ್ವಾಲಂಕಾರ ಭೂಷಿತಳೂ ಉತ್ತಮ ಅಂಗಸೌಷ್ಠವದಿಂದ ಕೂಡಿದವಳೂ, ನೃತ್ತ[24], ನೃತ್ಯ[25] ಹಾಗೂ ಅಭಿನಯಗಳಲ್ಲಿ ಪರಿಣಿತಳಾದ ನರ್ತಕಿಯು ಬೊಗಸೆಗಳಲ್ಲಿ ಪುಷ್ಪಗಳನ್ನು ಹಿಡಿದು ಮದ್ದಳೆ, ನಟುವಾಂಗ[26], ಸೊಲ್ಲುಕಟ್ಟು[27], ಕೊಳಲು ಹಾಗೂ ಗಾಯನದ ನಾದ, ಲಯಗಳಿಗೆ ಅನುಸಾರವಾಗಿ ನರ್ತಿಸುತ್ತ ರಂಗವನ್ನು ಪ್ರವೇಶಿಸುತ್ತಾಳೆ. ತನ್ನ ಅಂಗಾಭಿನಯ, ನೇತ್ರಾಭಿನಯಗಳ ಮೂಲಕ ಸೂಚ್ಯವಾಗಿ ರಂಗಾಧಿದೇವತೆಗಳಿಗೂ, ಅಷ್ಟದಿಕ್ಪಾಲಕರಿಗೂ, ರಂಗಮಧ್ಯದ ಬ್ರಹ್ಮ ಮಂಡಲಕ್ಕೂ ಅಭಿವಂದಿಸಿ ತನ್ನ ಎಡಭಾಗದಲ್ಲಿ ಸ್ಥಾಪಿಸಲಾದ ನಾಟ್ಯಾಧಿದೇವತೆಗೆ ಪುಷ್ಪಾರ್ಪಣೆ ಗೆಯ್ದು, ಗುರುವಿಗೂ (ನಾಟ್ಯಾಚಾರ್ಯ) ಆತೋದ್ಯಕ್ಕೂ ಸಭೆಗೂ ನಮಿಸಿ ತನ್ನ ಮುಂದಿನ ನೃತ್ತ, ನೃತ್ಯ ಬಂಧಗಳನ್ನು ಮುಂದುವರಿಸುತ್ತಾಳೆ. ಈ ತರಹದ ವಿಧಿ ಈಗ ಪೂರ್ವರಂಗ ವಿಧಿ ಎನ್ನಿಸಿದೆ.

ನೇಮಿನಾಥ ಪುರಾಣದಲ್ಲಿ ಮಗಧ ಸುಂದರಿಯ ಸ್ವಯಂವರ ಸಂದರ್ಭದಲ್ಲಿ ನೃತ್ಯ ಸ್ಪರ್ಧೆಯನ್ನು ಆಸ್ಥಾನದ ನಾಟಕ ಶಾಲೆಯಲ್ಲಿ ಏರ್ಪಡಿಸಿದುದನ್ನು ವರ್ಣಿಸುತ್ತ ಕವಿ ನೇಮಿಚಂದ್ರನು ಅದನ್ನು ಅಣಿಮಯ ನೃತ್ಯ ಮಂಟಪ ಎಂದು ವರ್ಣಿಸುತ್ತಾನಲ್ಲದೆ, ಅಲ್ಲಿ ಗಾಯಿಕಾಜನ, ಕೊಳಲು ವಾದಕರು, ನಟ್ಟುವಾಂಗದವರು, ನರ್ತಕರು, ವಾಗ್ಗೇಯಕಾರರು, (ಮಾತು (ಸಾಹಿತ್ಯ) ಮತ್ತು ಗೀತ ರಚನೆ ಎರಡರಲ್ಲೂ ಪ್ರಾವೀಣ್ಯವನ್ನು ಪಡೆದಿರುವವರು) ತಾಳಧಾರಿಗಳು, ಸ್ಥಳದಲ್ಲೇ ನೃತ್ಯವನ್ನು ಸಂಯೋಜಿಸುವ ರಚನಕಾರರೂ ಇತರ ವಾದ್ಯಗಳ ವಾದನಕಾರರು ಉಪಸ್ಥಿತರಿದ್ದರೆನ್ನುತ್ತಾನೆ.

……….ವಿವಿಧ ವಾದ್ಯವಾದನ ವಾಚಾಳಮುಂ ಗಾಯಿಜಾ ಜನ ಸಂಛನ್ನಮುಂ ವಾಂಶಿಕ ಸಂಕುಳ ಸಂಕೀರ್ಣಮುಂ ಶೈಲೂಷ ಸಮೂಹ ಸಮ್ಮರ್ದಮುಂ ಭಾರತಿಕವೃಂದಭರಿತಮುಂ ವಾಗ್ಗೇಯಕಾರವಿಳಸಿತಮುಂ ಪ್ರಗೀತ ಪ್ರಕೀರ್ಣಮುಂ ತಾಳಧರಾಧಿಷ್ಠಿತಮುಮಪ್ಪಮಣಿಮಯ ನೃತ್ಯಮಂಟಪಕ್ಕೆ ಇಭ್ಯಕೇತು ಕುಮಾರ ನಂ ಬರಿಸಿ (ಅರ್ಧನೇ. ೯೭ವ)

ಎಂದಿರುವುದನ್ನು ಗಮನಿಸಬಹುದು. ಬಾಹುಬಲಿಯೂ, ನಾಗಕುಮಾರ ಚರಿತದ ಮಧುರೆಯರಸನ ಮಗಳ ಸ್ವಯಂವರಕ್ಕಾಗಿ ಅಲಂಕರಿಸಿದ ನಾಟ್ಯಶಾಲೆಯ ವರ್ಣನೆಯನ್ನೂ ಮಾಡುತ್ತಾನೆ. ಬಣ್ಣ ಬಣ್ಣದ ಬಟ್ಟೆಯ ಬಾವುಟಗಳು, ಮುತ್ತಿನ ತೋರಣ, ಮುತ್ತಿನ ಕುಚ್ಚು, ಚಾಮರ, ಹೂಮಾಲೆಗಳಿಂದ ಸುಸಚ್ಚಿತವಾದ ನಾಟಕ ಶಾಲೆಯಷ್ಟೇ ಅಲ್ಲದೇ ಸಭಾಪತಿ, ಸಭಾಸದರು, ಆತೋದ್ಯದ ಸ್ಥಳ ಜವನಿಕೆಯ ಸ್ವರೂಪ ಎಲ್ಲವನ್ನೂ ವಿಶದೀಕರಿಸುತ್ತಾನೆ. ಅದರ ಕೆಲವು ಭಾಗ

….. ನಾಟ್ಯ | ಶಾಲೆಯ ಶೃಂಗರಿಸಿದರು
ಪಾರಿಯ ಪಟ್ಟೆಯ ಮೇಲುಕಟ್ಟಿನೊಳು ಶೃಂ| | ಗಾರಿಸಲಾಣಿ ಮುತ್ತುಗಳ
ತಾರಾಳಿ ತಳಿತಾಗಸವೆನಲೆಸೆದುದು | ಭಾರಿಯ ನಾಟಕ ಶಾಲೆ
ಮೇಲು ಕಟ್ಟಿನ ಝಲ್ಲಿ ಪಟ್ಟೆ ಪೂಮಾಲೆಯ | ಸಾಲ ಶೋಭೆಯನೋಳ್ಪ ನೃಪನ
ಲೋಲ ಲೋಚನೆಗಳು ತಾವಾಗ ನೈದಿಲ | ಮಾಲೆಗಳೆನಲೊಪ್ಪಿದುವು ||
(ನಾಗಕು. ೨೨೫೬ ರಿಂದ ೫೮)

ಮುತ್ತಿನ ಗದ್ದುಗೆಯಲ್ಲಿ ಫಣಿನಂದನ | ಸುತ್ತಣ ದೇಶಾಧಿಪತು
ಇತ್ತರದಲಿ ಸಾಲ್ಗೊಂಡು ವಿಷ್ಟರದಿ ಚೆಲ್ಪೆತ್ತುಕುಳ್ಳಿರಲು ಕುಳಿತನು
ತಾಳ ಮದ್ದಳೆ ತಿತ್ತಿ ಮುಖವೀಣೆ ಮುಂತಾದ ಮೇಳದವರು ಬಂದು ನಿಲಲು
ನೀಲಕುಂತಳೆಯರು ತೆರೆವಿಡಿದರು ಹಿಂದೆ | ಢಾಳಿಪ ಚಮರದೇಳ್ಗೆಯಲಿ ||
(ನಾಗಚ. ೨೨೫೯,೬೦)

ಭರತೇಶ ವೈಭವದಲ್ಲಿ ರತ್ನಾಕರವರ್ಣಿಯು ನಾಟ್ಯಗೃಹದ ಅಲಂಕಾರವನ್ನು ಹೆಚ್ಚಾಗಿ ವರ್ಣಿಸಿದ್ದಾನೆ. ಸಭೆ, ಸಭಾಪತಿ, ಸಭಾಸದರ ಬಗ್ಗೆ ಅಧಿಕವಾಗಿ ಹೇಳಿ ವೇದಿಕೆಯ ಬಗ್ಗೆ ಮೌನವಾಗಿದ್ದಾನೆ. ಭರತ ಚಕ್ರವರ್ತಿಯ ನಾಟಕ ಶಾಲೆಯನ್ನು ಸುರರ ವಿಮಾನಕ್ಕೆ ಹೋಲಿಸಿ ಅಲ್ಲಿನ ರತ್ನಗರ್ಭಿತ ಭಿತ್ತಿ, ನೆಲ, ಅಪ್ಸರೆ ಚಿತ್ರಗಳಿಂದ ಸಿಂಗಾರವಾದ ಗೋಡೆಗಳ, ವಿಧ ವಿಧ ಪುತ್ತಳಿಗಳಿಂದ ಅಲಂಕೃತವಾದ ಕಂಭಗಳ ವರ್ಣನೆಯನ್ನು ಮಾಡುತ್ತಾನೆ.

ಮುತ್ತು ಮಾಣಿಕವನೀಮನೆಯೊಳೇತಕೆತಂದು | ಬಿತ್ತಿದರೆಂಬವೊಲಿಹುದು
ಚಕಚಕಿಸುವ ರನ್ನಗನ್ನಡಿಯಲ್ಲಲ್ಲಿ | ಮಕರಿಸೆ ಸಾಲುಸಾಲಾಗಿ ||
ಕಂಭಗಳಲ್ಲಿ ಲೋವೆಗಳಲ್ಲಿ ಲಲನಾ | ಸ್ತಂಭಿತ ಮಣಿ ಪ್ರತಿಮೆಯೊಳು
ರಂಭಮೇನಕಿಯರು ನಿಂದರೊಯೆನೆ ಚಿತ್ತ | ಜೃಂಭಣಿಗಳ ಮಾಡುತಿಹುವು ||
(
ಪೂ.ನಾ.ಸಂ.೧೭,೨೦)

ಸುರರ ಖೇಚರರ ಪೆಣ್ಗಂಡು ರೂಪಲ್ಲಲ್ಲಿ | ಬರೆದಿರ್ದುವಿವು ಬೊಂಬೆಯಲ್ಲ
ಸುರರು ಖೇಚರರು ನಾಟ್ಯವ ನೋಡಿ | ಸುಖ ತಟ್ಟಿ ಪರವಶರಾದರೆಂಬಂತೆ ||
(
ಪೂ.ನಾ.ಸಂ.೨೩)

ಹೀಗೆ ವರ್ಣನೆಯನ್ನು ಮುಂದುವರೆಸುತ್ತಾನೆ.
ಸಭಾಸದರ ಬಗ್ಗೆ ಹೇಳುತ್ತ ರತ್ನಾಕರವರ್ಣಿಯು

ರಾಜಕುಮರರು ರಸಿಕರು ಬುಧ ಜನ | ರಾಜರು ಕವಿ ಗಮಕಿಗಳು
ತೇಜಿಷ್ಟರೈತಂದು ಭರತರಾಜನ ಕಂಡು | ತೇಜದೊಳೊಲ್ದುಕುಳಿತರು || (ಪೂ.ನಾ.ಸಂ. ೨೮)
ಗಣಿಕೆಯ ರೆಕ್ಕಡಿಗರು ನಾಟ್ಯಶಾಸ್ತ್ರ | ಕ್ಷಣಿಕರು ಭಾವರಂಜಕರು
ಗುಣಿಗಳು ಮಂತ್ರಿಗಳರಸನ ಕಂಡು ತಿಂ | ತಿಣಿಯಾಗಿ ಕುಳಿತರೋಜೆಯೊಳು ||
(
ಪೂ.ನಾ.ಸಂ. ೨೯)

ದೇವರಸನು ಮದನ ಚಕ್ರೇಶ್ವರ ಚರಿತೆ (೧೬೨೦) ಎಂಬ ಕಾವ್ಯದಲ್ಲಿ ನಗರ ವರ್ಣನೆಯಲ್ಲಿ ಅತ್ಯಂತ ವೈಭವೋಪೇತ ನಾಟಕ ಶಾಲೆಯನ್ನು ಅದರಲ್ಲಿ ಮಾರ್ಗಸಂಗೀತ ಪ್ರವೀಣರೂ, ಮಾರ್ಗ, ದೇಶಿ ಹಾಗೂ ಸಪ್ತತಾಳಗಳಲ್ಲಿನ ಬಂಧಗಳನ್ನು ಬಲ್ಲವರೂ, ಶುದ್ಧಮಾರ್ಗ ಹಾಗೂ ದೇಶಿರಾಗಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿದವರೂ, ಹಲವು ವಾದ್ಯಗಳ ವಾದನ ಪಟುಗಳೂ ಉಪಸ್ಥಿತರಿರುವ ನಾಟಕ ಶಾಲೆಯನ್ನೂ ದೀರ್ಘವಾಗಿ ವರ್ಣಿಸುತ್ತಾನೆ.[28]

ಜೈನ ಕಾವ್ಯಗಳ ನಾಟ್ಯಮಂಟಪಗಳ ಒಟ್ಟು ನೋಟವನ್ನು ಹೀಗೆ ಹೇಳಬಹುದು. ರಾಜಾಸ್ಥಾನದ ನಾಟ್ಯಮಂಡಪಗಳನ್ನು ಕವಿಗಳು ದೀರ್ಘವಾಗಿ, ಭರತನು ವಿವರಿಸುವಂತೆ, ಅಲ್ಪ ಸ್ವಲ್ಪ ಬದಲಾವಣೆಗಳೊಡನೆ ಕಾವ್ಯಾಂಸಗಳನ್ನು ಬಳಸಿ ವರ್ಣಿಸುತ್ತಾರೆ. ಎಲ್ಲ ಜೈನ ಕಾವ್ಯಗಳಲ್ಲಿ ಪರಿನಿಷ್ಕ್ರಮಣ ಕಲ್ಯಾಣದಲ್ಲಿ ವರ್ಣಿತವಾಗುವ ನಾಟಕ ಶಾಲೆಗಳು ಏಕತಾನತೆಯನ್ನೂ ಔಪಚಾರಿಕತೆಯನ್ನೂ ಬಿಂಬಿಸುತ್ತವೆ ಎಂದು ಸಾಮಾನ್ಯವಾಗಿ ಭಾಸವಾಗುತ್ತದೆ.

ವೀರಶೈವ ಕಾವ್ಯಗಳಲ್ಲಿ ಭಕ್ತರ ಮನೋರಂಗವೇ ನರ್ತನ ವೇದಿಕೆಯಂತೆ ಇದ್ದು ಇಲ್ಲಿ ಪ್ರತ್ಯೇಕವಾದ ನಾಟಕಶಾಲೆಯ ಕಲ್ಪನೆ ಕಡಿಮೆ. ಅಲ್ಲದೇ ದೇವಾಲಯಗಳಲ್ಲೇ ನೃತ್ಯ ಪ್ರಸಂಗಗಳು ರೂಪಿತಗೊಳ್ಳುವುದರಿಂದ ಶಿವಾಲಯದ ಶಿವನ ಮುಂದುಗಡೆ ನರ್ತಿಸುವ ನೆಲವು ರಂಗಭೂಮಿಯಾಗಿ ಪರಿಣಮಿಸುತ್ತದೆ. ಉದಾಹರಣೆಗೆ ಪ್ರಭುಲಿಂಗಲೀಲೆಯಲ್ಲಿ ಮಾಯೆ ಮಧುರನಾಥನ ದೇವಾಲಯದಲ್ಲಿ ಪೂಜಾ ವಿಧಿಗಳಲ್ಲಿ ಒಂದಾಗಿ ನೃತ್ಯ ಸೇವೆಯನ್ನು ಸಲ್ಲಿಸುತ್ತಾಳೆ.[29]

ಚಂದ್ರಶೇಖರ ಕವಿಯ ಪಂಪಾಸ್ಥಾನವರ್ಣನದಲ್ಲೂ ಹಂಪೆಯ ವಿರೂಪಾಕ್ಷನ ಒಡ್ಡೋಲಗದಲ್ಲಿ ಪೂಜಾ ಕೈಂಕರ್ಯನಾಗಿ ನೃತ್ಯಸೇವೆ ನಡೆಯುತ್ತದೆ. ಆಗಲೂ ಕವಿ ಉಳಿದ ವಿವರಗಳನ್ನು ದೀರ್ಘವಾಗಿ ಕೊಡುವಂತೆ ರಂಗಭೂಮಿಯ ವಿವರವನ್ನು ದೀರ್ಘವಾಗಿ ಕೊಡುವುದಿಲ್ಲ.

ಮಿಂಚಿನ ಕುಡಿಯಂತೆ ನೀಲದ ನೆಲಗಟ್ಟಿನ ರಂಗದೊಳ್ ಸುಳಿವುತ್ತೆ[30] ಎಂದು ಮಾತ್ರ ಹೇಳುತ್ತಾನೆ.

ಷಡಕ್ಷರ ದೇವನೂ ರಾಜಶೇಖರನ ವೈಭವಪೂರಿತ ಒಡ್ಡೋಲಗದ ವರ್ಣನೆಯನ್ನೂ ಸುದೀರ್ಘವಾಗಿ ಮಾಡುತ್ತಾನಾದರೂ[31] ನಾಟಕ ಶಾಲೆ, ರಂಗಭೂಮಿಯ ವರ್ಣನೆಯನ್ನು ಮಾಡಿರುವಂತೆ ಕಾಣುವುದಿಲ್ಲ.

ಕೆಳದಿ ನೃಪ ವಿಜಯದಲ್ಲಿ ಲಿಂಗಣ್ಣ ಕವಿಯು ವೆಂಕಟಪ್ಪ ನಾಯಕನು ಕಟ್ಟಿಸಿದ ನಾಟಕ ಶಾಲೆಯ ಪ್ರಸ್ತಾಪವನ್ನು ಮಾಡುತ್ತಾನೆ.[32]

ಮಗುಳ್ದಿಕ್ಕೇರಿಯರಮನೆಯೊಳ್ ವಿಚಿತ್ರ ತರ ರಚನಾ ಕೌಶಲ್ಯದಿಂ ನಾಟಕ ಶಾಲೆಯಂ ನಿರ್ಮಾಣಂಗೈಸಿ ಎಂಬುದು ಮೂಲಕ ಮಾತು.

ಆದರೆ ಇದಕ್ಕಿಂತ ಹೆಚ್ಚು ವಿವರವಿಲ್ಲ. ವೈದಿಕ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು ಸಾಮಾನ್ಯವಾಗಿ ದೇವರ ಉತ್ಸವ, ರಾಜನ ಮೆರವಣಿಗೆ, ಒಡ್ಡೋಲಗ ಇವುಗಳ ಭಾಗವಾಗಿ ನಿರೂಪಿತವಾಗಿವೆ. ಇದರಿಂದ ನಾಟಕ ಶಾಲೆ, ರಂಗಭೂಮಿಗಳ ಬಗ್ಗೆ ಪ್ರತ್ಯೇಕವಾಗಿ ವಿಸ್ತೃತರೂಪದ ವರ್ಣನೆ ಈ ಕಾವ್ಯಗಳಲ್ಲಿ ದೊರಕುವುದು ಅತ್ಯಂತ ವಿರಳ.

ಗೋವಿಂದ ವೈದ್ಯನು ಕಂಠೀರವ ನರಸರಾಜ ವಿಜಯದಲ್ಲಿ ಅರಮನೆಯಲ್ಲಿ ರಾರಾಜಿಸುತ್ತಿರುವ ಮಂಟಪಗಳಲ್ಲಿ ನಾಟ್ಯ ಮಂಟಪವನ್ನೂ ಹೀಗೆ ಹೆಸರಿಸುತ್ತಾನೆ.

ವಾಹನ ಮಂಟಪವುತ್ಸವ ಮಂಟಪ
ಮೋಹನ ನಾಟ್ಯ ಮಂಟಪವು
ಊಹಿಸೆ ಕಡು ಚೆಲ್ವು ಚಿತ್ರ ಮಂಟಪ
ನ್ನಾಹದೆ ಮೆರೆದುವೇ ವೇಳ್ಪೆ[33]

ಗೀತ, ವಾದ್ಯ ಹಾಗೂ ನೃತ್ಯ ಪಾರಂಗತರಿಂದ ನಡೆಯುವ ಪ್ರದರ್ಶನವನ್ನು ವೀಕ್ಷಿಸಲು ರಾಜನಾದ ಕಂಠೀರವ ನರಸರಾಜನು ಈ ನಾಟಕಶಾಲೆಗೆ ಬರುತ್ತಿದ್ದನಂತೆ.

ಕನ್ನಡ ಕಾವ್ಯಗಳಲ್ಲಿ ರಂಗಭೂಮಿಯ ವರ್ಣನೆಗಳಲ್ಲಿ ಜೈನ ಕವಿಗಳು ಹೆಚ್ಚು ಸಮರ್ಥರು. ಇವರು ಭರತನ ರಂಗಭೂಮಿಯ ಪ್ರತಿಕೃತಿಗಳನ್ನು ತರುವಲ್ಲಿ ಯಶಸ್ವಿಯಾಗುತ್ತಾರೆ. ವೀರಶೈವ ಹಾಗೂ ವೈದಿಕ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ನಿರೂಪಿತವಾದ ರಂಗಭೂಮಿ ಅಥವಾ ನಾಟ್ಯ ಮಂಟಪಗಳನ್ನು ದರ್ಶಿಸಿದಾಗ ಮಾರ್ಗ ರಂಗಭೂಮಿಯಿಂದ ರಾಜಪೋಷಿತ, ಹಾಗೂ ಸಾಮಾನ್ಯ ರಂಗಭೂಮಿಯು ನಡೆದು ಬಂದ ರೀತಿ ಅದರ ಹೆಜ್ಜೆ ಗುರುತುಗಳು ಸ್ಪಷ್ಟವಾಗುತ್ತದೆ.[1] ನಾಟ್ಯಶಾ. – ಸಂ. ಮಾ. ರಾಮಕೃಷ್ಣ ಕವಿ. (ಅ. ೧.೫೦-೧೦೫).

[2] ಕಿಟೆಲ್ ಕೋಶ, ಕಸಾಪ ನಿಘಂಟು.

[3] ನಾಟ್ಯಶಾ. ಸಂ. ಮಾ. ರಾಮಕೃಷ್ಣ ಕವಿ. ಅ. ೨೧, ೬,೧೫,೨೩.

[4] ತ್ರಿವಿಧಃ ಸನ್ನಿವೇಶಶ್ಚ ಶಾಸ್ತ್ರತಃ ಪರಿಕಲ್ಪಿತಃ ||
ವಿಕೃಷ್ಟಶ್ಚತುರಸ್ರಶ್ಚ ತ್ರ‍್ಯಸ್ರಶ್ಚೈದತು ಮಂಡಪಃ ||
ತೇಷಾಂ ತ್ರೀಣಿ ಪ್ರಮಾಣಾನಿ ಜ್ಯೇಷ್ಟಂ ಮಧ್ಯಂ ತಥಾವರಮ್ ||
ಪ್ರಮಾಣಮೇಷಾಂ ನಿರ್ದಿಷ್ಟಂ ಹಸ್ತದಂಡ ಸಮಾಶ್ರಯಮ್ ||
ಶತಂ ಚೌಷ್ಠೌ ಚತುಃ ಷಷ್ಠಿರ್ ಹಸ್ತಾ ದ್ಪಾತ್ರಿಶಂದೇವ ವಾ ||
(ನಾಟ್ಯಶಾ. ಸಂ. ಮಾ. ರಾಮಕೃಷ್ಣ ಕವಿ. .)

[5] (i) D. Subba Rao, “A Critical Survey of the Ancient Indian Theatre in Accordance with the 2nd Chapter of the Barata’s Natyasastra”. Natyasastra, Vol. I.G.O.S, Baroda, p. 424.
(ii) V. Raghavan, Hindu Theatre, IHQ, Vol, IX, pp. 991, 94.
(iii) G.H. Tarlekar, The Theatre, The Troupe and The Spectator, Studies in Natyasastr, p. 19.
(iv) M.M.Ghosh, Hindu Theatre, IHQ, Vol. IX pp. 981-83.
(v) Anand kumar Swamy, IHQ, Vol, IX, pp. 973-77.
(vi) R. Mankad, Hindu Theatre, IHQ, Vol. VIII, 1932, pp. 480-499, 973-77.

[6] (ಅನು) ನಾಟ್ಯಶಾ. ಶ್ರೀರಂಗ. ಪು.ಸಂ. ೧೭.

[7] IHQ Vol. VIII, Hindu Theatre, pp. 480, 499.

[8] “ಶ್ರೀಮನ್ಮಹಾಸಾಮನ್ತಂ ಮಾರ್ತಾಡಯ್ಯಂ ತಮ್ಮ ಮುತ್ತಯಂ.
ಮಾಡಿಸಿದ ಬಸದಿಯಂ ಪಡಿಕಲಿಸಿ ನಾಟಕ ಶಾಲೆಯಂ.
ಮಾಡಿಸಿ ತನ್ನ ಕೀತಿ ಶಿಳಾ ಸ್ತಂಭನಂ ಚಂದ್ರಾರ್ಕತಾರಂಬರಂ ನಿಲಿಸಿದಂ”.
BKI. Vol. I, Part, 1,p.78 ಉದ್ಧೃತಿ. Karnataka Theatre, H.K. Ranganath, K.U.D. pp. 8,9.

[9] ಆದಿಪು.-೧೦, ೨೯-೩೩ ವ, ಅಜಿಪುಉ.೭, ೧೩೧ ಶಾಂತೀಶ್ವ. ೧೬, ೫೩-೫೬, ಪಾರ್ಶ್ವಪು.
೧೬, ೬೦-೬೪, ಚಂದ್ರಪು. ೧೫, ೪೮ ಇತ್ಯಾದಿ.

[10] ಶಾಂತಿಪು. ೧೦, ೬೦ ವ.

[11] ಆದಿಪು. ೭, ೧೧೬ ವ, ಮಲ್ಲಿಪು. ೧೩, ೨೪, ರಿವಂ. ೨-೩೨ ವ., ಆವರ್ಧ. ೧೨-೨೮ ಇತ್ಯಾದಿ.

[12] ನೋಡಿ ರೇಖಾಚಿತ್ರ ರಂಗಭೂಮಿ. ಪು. ೯, ೧೦.

[13] ಸುಬ್ಬರಾವ್, ನಾಟ್ಯಶಾ. (ಜಿ.ಓ.ಎಸ್), ೨ನೇ ಅಧ್ಯಾಯದ ವಿಮರ್ಶೆ, ಎಮ್.ಎಮ್. ಘೋಷ್ (IHQ, ಪೂರ್ವೋಕ್ತ) ಮಂಕಡ್.

[14] ಶ್ರೀರಂಗ, ನಾಟ್ಯಶಾಸ್ತ್ರದ ನಾಟ್ಯ ಮಂಟಪ.

[15] ‘A fence or edge in front of building’ ಕಿಟಲ್ ಕನ್ನಡ ಇಂಗ್ಲೀಷ್ ಶಬ್ದಕೋಶ.

[16] ಮಲ್ಲಿಪು. ೮-೮ ರಿಂದ ೧೩.

[17] ಯಸ್ಮಾದ್ರಂಗ ಪ್ರಯೋಗೋಯಂ ಪೂರ್ವಮೇವ ಪ್ರಯುಜ್ಯತೇ
ತಸ್ಮಾದಯಂ ಪೂರ್ವರಂಗೋವಿಜ್ಞೇಯೋ ದ್ವಿಜ ಸತ್ತಮಾಃ ||
ನಾಟ್ಯಶಾ. ಸಂ. ರಾಮಕೃಷ್ಣ ಕವಿ. . .

[18] ಅದೇ ಅ. ೫.೧೭ ರಿಂದ ೩೦.

[19] ಇದರ ವಿವರಣೆ ವಾದ್ಯಗಳ ಚರ್ಚೆಯಲ್ಲಿ ಪ್ರಸ್ತಾಪಿಸಿದೆ.

[20] ಮುಂದೆ ವಿವರಿಸಲಾಗಿದೆ.

[21] ಮುಂದೆ ವಿವರಿಸಲಾಗಿದೆ.

[22] ಮುಂದೆ ವಿವರಿಸಲಾಗಿದೆ.

[23] ನೋಡಿ ಅನುಬಂಧ ಅ. ಪರಿಭಾಷೆ ಹಾಗೂ ಸ್ಥಾನಕದ ಚರ್ಚೆ ಇದೇ ಅಧ್ಯಾಯ ಪು ೬೮.

[24] ನೋಡಿ ಅನುಬಂಧ ಆ ಪರಿಭಾಷೆ.

[25] ನೋಡಿ ಅನುಬಂಧ ಆ ಪರಿಭಾಷೆ.

[26] ನೋಡಿ ಅನುಬಂಧ ಆ ಪರಿಭಾಷೆ.

[27] ನೋಡಿ ಅನುಬಂಧ ಆ ಪರಿಭಾಷೆ.

[28] ಮಚಚ. ಸಂ. ಬಿ.ಎಸ್.ಸಣ್ಣಯ್ಯ ಆ. ೯-೧೦೭-೧೨೪.

[29] ವಿವರಣೆ ನೋಡಿ ಅ. ೩.

[30] ಪಂಪಾವ. ೮೬ ವ.

[31] ರಾಜವಿ, ೧೫-೧೯

[32] ಕೆಳದಿ. ೫-೧೯ ವ.

[33] ಕಂನವಿ. ಸಂ|| ಆರ್.ಶ್ಯಾಮಾಶಾಸ್ತ್ರಿ, ಆ ೭-೮೭.