ಕವಿ ನರ್ತನ ಪ್ರಸಂಗವನ್ನು ಕೈಲಾಸದಲ್ಲಿ ಶಿವನ ಒಡ್ಡೋಲಗದಲ್ಲಿ ಆರಂಭಿಸಿ ಚಿಂದು, ಜಕ್ಕಡಿ, ತಿವುಡೆಗಳಂತಹ ದೇಶೀ ನರ್ತನ ಪದ್ಧತಿಗಳನ್ನು ಹೇಳಿರುವುದು ಆತನಿಗೆ ಹಿಂದಿನ ಕವಿಗಳ ಪ್ರಭಾವವಿರಬಹುದು. ಅಲ್ಲದೇ ಅಂದು ಪ್ರಚಲಿತವಿರುವ ಶಾಸ್ತ್ರಗ್ರಂಥಗಳ ತಿಳಿವಳಿಕೆಯೂ ಇರಬಹುದು.

ಮೊನೆಗಾಲ್ ಕಲಾಸ ಕೈಮುರೆ ತಿವುಡೆ ಮಡುಹುಮುಳ್ಳನಿತು ಭೇದಂಗಳಿಂ ನರ್ತಿಸುವ ನೃತ್ಯ ಬಲಾಜನ ಎಂಬುದು ವರ್ಣನಾಂಶ ಮಡುಹು ಎಂಬುದಕ್ಕಿಂತ ಮುಡುಪು ಎಂಬ ಪದ ಇಲ್ಲಿಯ ಸಂದರ್ಭಕ್ಕೆ ಒಪ್ಪುವುದು. ಮುಡುಪು ಅನಿಬಂಧ ಉರುಪು

[1] ಕ್ರಮಗಳಲ್ಲಿ ಒಂದು. ಮಾನವೀ.[2] ತುರಂಗಿಣೀ ಗತಿ[3] ಗಳನ್ನು ಕಾಲಕ್ಕೆ ಸರಿಯಾಗಿ ಮುಡುಪು ಚಾರಿಯಲ್ಲಿ ನರ್ತಿಸಬೇಕೆಂದು ಪುಂಡರೀಕ ವಿಠಲನು ಹೇಳುತ್ತಾನೆ. ನಾಟ್ಯಶಾಸ್ತ್ರಜ್ಞರು ಕಾಲು ಬೆರಳಿನ ಹಿಂಭಾಗವನ್ನು ಮುಡುಪು ಎಂದು ಕರೆದಿದ್ದಾರೆ. ಅದರಿಂದ ಮಾಡುವ ಚಲನೆಯನ್ನು ಮುಡುಪು ಚಾರಿ ಎಂದು ಕರೆಯುತ್ತಾರೆ ಎಂದು ಅಶೋಕಮಲ್ಲನು ಹೇಳುತ್ತಾನೆ.[4] ಕವಿಯು ಬಳಸಿರುವ ಮುಡುಹು ಪದವನ್ನು ಮೇಲೆ ವಿವರಿಸಿದ ದೃಷ್ಟಿಯಿಂದ ನೋಡಿದರೆ, ನರ್ತಕಿಯರು ವಿವಿಧ ಚಲನೆಗಳನ್ನು ಅವರ ಪಾದಾಂಗುಲಿಗಳ ಮೂಲಕ ಮಾಡಿದರು ಎಂದು ಹೇಳಬಹುದು. ಕವಿಯು ತಾನು ವಿವರಿಸುವ ನೃತ್ಯವು ಶುದ್ಧ ದೇಶೀ ಎಂದು ಮನದಟ್ಟು ಮಾಡಲು ದೇಶೀ ನೃತ್ಯದ ಪರಿಭಾಷೆಯನ್ನು ಪುನರಾವರ್ತಿಸಿರಬೇಕು.

ಕವಿಯು ಪುನಃ ನಾಲ್ಕನೇ ಕಾಂಡದ ಅಂಧಕಾಸುರ ಸಂಹಾರ ಸಂಧಿಯಲ್ಲಿ ಶಿವನ ಆನಂದ ನೃತ್ಯವನ್ನು ಸಂಪ್ರದಾಯ ಬದ್ಧವಾದ ಶೈಲಿಯಲ್ಲೇ ವಿವರಿಸುತ್ತಾನೆ. ಶಿವನ ನೃತ್ಯಕ್ಕೆ ಅಂಧಕಾಸುರನ ವಕ್ಷಸ್ಥಲವೇ ರಂಗಭೂಮಿಯಾಗಿ, ಆತ ಪುಷ್ಪಾಂಜಲಿಯಿಂದ ರಂಗವನ್ನು ಪ್ರವೇಶಿಸಿದರೆ, ಅಂಧಕಾಸುರನ ಹೃದಯದಲ್ಲಿ ಹೊಕ್ಕಂತೆ ಭಾಸವಾಯಿತೆಂದು ಹೇಳುತ್ತಾನೆ. ಶಿವನ ಈ ಅಪೂರ್ವವಾದ ಆನಂದ ನೃತ್ಯಕ್ಕೆ ನಂದಿಯು ಮದ್ದಳೆ, ಬ್ರಹ್ಮನು ತಾಳವನ್ನು, ವಿಷ್ಣುವು ಕೊಳಲನ್ನು, ಇಂದ್ರನು ಉಪಾಂಗವನ್ನು[5] ನಾರದರು ವೀಣೆಯನ್ನು, ತುಂಬುರು ಶ್ರುತಿಗೆ ಆಧಾರವಾದ ದಂಡಿಗೆ[6]ಯನ್ನು ನುಡಿಸುತ್ತ ಹಿನ್ನೆಲೆ ವಾದ್ಯ, ಗಾಯನವನ್ನು ಒದಗಿಸುತ್ತಾರೆ ಎಂದಿದೆ.

ಪುಷ್ಪಾಂಜಲಿಯ ನಂತರ ಷಡಂಗಗಳಿಂದ[7] ಶಿವನು ಮಾಡಿದ ಅಭಿನಯವನ್ನು ಕವಿ ಹೀಗೆ ಹೇಳುತ್ತಾನೆ :

ಇರದೆ ಪುಷ್ಪಾಂಜಳಿಯ ಸಮನಂತರದೊಳೆ ವಿ |
ಸ್ತರದಿಂದೆ ಧುತ ವಿಧುತ ಮಾಧಂತ ಮಂದೆನಿಪ
ಶಿರದ ಭೇದಂಗಳಿಂದಂ (ರಾ)ಕಾದ ಹಸ್ತಂಗಳ ವಿಡಾಯದಿಂದೆ | (ತಾ)
ಪರಿಕಿಸೆ ಸಮಾಭುಗ್ನ (ಮಾಭು)ಗ್ನ ಮುಖ್ಯ ಮಾ |
ದುರದ ಭೇದಂಗಳಿಂದಂವಿವರ್ತಿತ ಮುಖ್ಯ
ಬರಿಯ ಭೇದಂಗಳಿಂದಾಡಿದಂ ಶಂಕರಂ ಪೇಳಲೇನಚ್ಚರಿಯನು | (/೫೦/೫೦ .)

ಅಂಗಾಭಿನಯದಲ್ಲಿ ಮೊದಲು ಶಿರೋಭೇದ ಹೇಳಿದೆ.

ಧುತ ಶಿರವು ತಲೆಯನ್ನು ಮೆಲ್ಲನೆ ಎಡಕ್ಕೂ, ಬಲಕ್ಕೂ ಅಡ್ಡಲಾಗಿ ತಿರುಗಿಸುವುದು.[8]

ವಿಧುತ – (ಭಯದಿಂದ) ತಲೆಯನ್ನು ಬೇಗ ಎಡಕ್ಕೂ ಬಲಕ್ಕೂ ಅಡ್ಡಲಾಗಿ ಚಲಿಸುವುದು.[9]

ಆಧೂತ ತಲೆಯನ್ನು ಒಂದಾವರ್ತಿ ಓರೆಯಾಗಿ ಮೇಲಕ್ಕೆತ್ತುವುದು[10] ಉಳಿದ ಹತ್ತು ಶಿರೋಭೇದಗಳನ್ನು ಕವಿ ಹೆಸರಿಸಿಲ್ಲ. (ನೋಡಿ ಅನುಬಂಧ ಅ. ಪರಿಭಾಷೆ) ನಂತರ ಹಸ್ತಗಳ ಬಗ್ಗೆ ಹೇಳುವಾಗ ಅಸಂಯುತ ಹಸ್ತವಾದ ಪತಾಕವನ್ನು ಮಾತ್ರ ಹೆಸರಿಸುತ್ತಾನೆ. (ನೋಡಿ ಅನುಬಂಧ ಅ. ಪರಿಭಾಷೆ) ಮೂರನೆಯದಾಗಿ ಎದೆಯ ಭೇದಗಳಾದ ಸಮ, ಆಭುಗ್ನ ಹಾಗೂ ನಿರ್ಭುಗ್ನಗಳನ್ನು ಹೇಳುತ್ತಾನೆ. ಇದರ ಉಳಿದ ಭೇದಗಳೆಂದರೆ ಕಂಪಿತ ಹಾಗೂ ಉದ್ಪಾಹಿತ[11] ಸಮ – ಸ್ವಾಭಾವಿಕವಾಗಿ ಇರುವ ಎದೆ ; ಆಭುಗ್ನ – ಎದೆಯನ್ನು ಸ್ವಲ್ಪ ಬಗ್ಗಿಸುವುದು; ನಿರ್ಭುಗ್ನ – ಬೆನ್ನಿನಲ್ಲಿ ಹಳ್ಳಿ ಬೀಳಿಸಿ ಎದೆಯನ್ನು ಉಬ್ಬಿಸುವುದು[12] ಪಕ್ಕೆಯ ಭೇದಗಳಲ್ಲಿ ಒಂದಾದ ವಿವರ್ತಿತ ಪೃಷ್ಠ ಮತ್ತು ಪಕ್ಕೆಗಳೆರಡನ್ನು ತಿರುಗಿಸುವ ಪಕ್ಕೆಯ ಚಲನೆ[13] ಮುಂದಿನ ಪದ್ಯದಲ್ಲಿ ಕಟಿ ಹಾಗೂ ಪಾದಭೇದಗಳನ್ನು ಹೇಳುತ್ತಾನೆ :

ನಟಣೆಯಿಂ ಕಂಪಿತೋದ್ಪಾಹಿತ (ಚ್ಚಿಹ್ನಾ) ದಿ (ಛಿನ್ನಾ)
ಕಟಿಯ ಭೇದಂಗಳೈದು ಸವಿಸ್ತರಮಾಗಿ
ನಿಟಿಲಾಂಬಕಂ ತೋರಿಸಮವಂಚಿತಾದಿ ಪದಭೇದಂಗಳಂಕಾಣಿಸೆ
ಪಟುತರ ಪ್ರತ್ಯಂಗ ಭಾವಮಂಕೈಗೈದು
ಚಟುಲಮಾರ್ಗಿದಕೊರಳೋಝೆಗಳನನುಗೊಳಿಸಿ
ನಟಿಸಿದಂಶಂಭುನೋಟಕರ ದಿಟ್ಟಿಗಳೊಡನೆ ನಟಿಸಲ್ ವಿಲಾಸದಿಂದೆ (೫೦/೫೦/೫೧)

ಐದು ವಿಧವಾದ ಶಾಸ್ತ್ರೋಕ್ತ ಕಟಿ ಭೇದಗಳಲ್ಲಿ ಕಂಪಿತ, ಉದ್ಪಾಹಿತ ಹಾಗೂ ಛಿನ್ನ ಭೇದಗಳನ್ನು ಹೇಳಿದೆ.[14]

ಕಂಪಿತ ಕುಬ್ಜರು ನಡೆಯುವಂತೆ ನಡೆಯುವ ಕಟಿಯ ಚಲನೆ.[15]

ಉದ್ಪಾಹಿತ   ಮೆಲ್ಲನೆ ಎರಡೂ ಪಕ್ಕೆಗಳನ್ನು ಚಲಿಸುವುದು.[16]

ಛಿನ್ನ ಮುಖವನ್ನು ಅಡ್ಡ ಮಾಡಿ ಪಕ್ಕೆಯನ್ನು ಚೆನ್ನಾಗಿ ತಿರುಗಿಸುವುದು.[17]

ಐದು ಪಾದಭೇದಗಳಲ್ಲಿ ಸಮ, ಅಂಚಿತ ಹಾಗೂ ಕುಂಚಿತ ಪಾದ ಭೇದಗಳನ್ನು ಹೇಳಿದೆ.

ಸಮ ಸ್ವಾಭಾವಿಕವಾಗಿ ನೆಲದ ಮೇಲೆ ಅಡಿಯನ್ನಿಡುವುದು.

ಅಂಚಿತ ಹಿಮ್ಮಡಿಯನ್ನು ನೆಲದ ಮೇಲೂರಿ ಬೆರಳುಗಳನ್ನು ನೀಡಿ ಮುಂಗಾಲನ್ನು ಮೇಲಕ್ಕೆತ್ತುವುದು.

ಕುಂಚಿತ ಬೆರಳುಗಳನ್ನು ಮಡಿಸಿ ನೆಲದ ಮೇಲೂರಿ ಪಾದದ ಮಧ್ಯಭಾಗವನ್ನು ವಕ್ರಮಾಡಿ ಹಿಮ್ಮಡಿಯನ್ನೆತ್ತುವುದು.[18]

ಪಾದಭೇದಗಳ ನಂತರ ಪ್ರತ್ಸಂಗಗಳ ಅಭಿನಯದಲ್ಲಿ ಕುತ್ತಿಗೆಯ ಚಲನೆಯನ್ನು (ಅಜಿಪು. ನೃತ್ಯ ಪ್ರಸಂಗದಲ್ಲಿ ಚರ್ಚಿಸಿದೆ) ಅಭಿನಯಿಸಿ ತೋರಿಸಿದನೆಂದು ಕವಿ ಗುರುತಿಸುತ್ತಾನೆ. ಮುಂದೆ ಪ್ರತ್ಯಂಗ ಭೇದಗಳನ್ನು ವಿರೂಪಾಕ್ಷ ಕವಿ ಹೇಳುತ್ತಾನೆ :

ಇರದೂರ್ಧ್ವ ಮುಂತಾದ ಭುಜದ ಭೇದಂಗಳಂ
ಪರಿವಿಡಿಯೊಳರುಪಿ ಖಲ್ಪ ಕ್ಷಾಮ ಮೆಂಬುದರ
ಉರುಭೇದಮಂ ತೋರಿವಲಿತ ಕಂಪಿತ ಮುಖ್ಯಮಾದೂರು ಭೇದಂಗಳ
ಹರುಷದಿಂ ವಿಸ್ತರಂಗೆಯ್ದು ಮಾವರ್ತಿತಂ
ಪರಿಕಿಸಲ್ಕುನ್ನತೋಕ್ಷಿಪ್ತಾದಿ ಜಂಘೆಗಳ (ಪರಿಕಿಸಲ್ಕನತೊಕ್ಷಿಪ್ತಾದಿ)
ಪರಮ ಭೇದಂಗಳಂ ತೋರಿದಂ ಭುವನಜನಕೀಶಂ ಚಮತ್ಕೃತಿಯೊಳು ||
(ಶಾಂ./ಸಂ.೫೦ / . /೫೨)

ಹದಿನಾರು ಬಾಹು ಭೇದಗಳಲ್ಲಿ ಮೊದಲನೆಯ ಭೇದವಾದ ಊರ್ಧ್ವ ಭುಜವನ್ನು ಹೇಳುತ್ತಾನೆ. ತಲೆಗಿಂತ ಮೇಲಕ್ಕೆ ತೋಳನ್ನು ಎತ್ತುವುದನ್ನು ಊರ್ಧ್ವಭುಜ ಎನ್ನುತ್ತಾರೆ.[19] ಉದರ ಭೇದಗಳಲ್ಲಿ ಖಲ್ಪ ಹಾಗೂ ಕ್ಷಾಮ ಎಂಬ ಎರಡು ಭೇದಗಳು.

ಖಲ್ಪ – ಬಾಗಿದ ಜಠರ, ಕ್ಷಾಮ ಹೊಟ್ಟೆಯು ಬಡಕಲಾದದ್ದು, ಒಳಸೇರಿದ್ದು[20]ಕವಿ ಊರು (ತೊಡೆ) ಭೇದಗಳಾದ ಕಂಪನ, ವಲನವನ್ನು ಪ್ರಸ್ತಾಪಿಸುತ್ತಾನೆ. ಊರು ಭೇದಗಳು ಒಟ್ಟು ೫ (ಕಂಪನ, ವಲನ, ಸ್ತಂಭನ, ಉದ್ಪರ್ತನ, ನಿವರ್ತನ)[21]

ಕಂಪನ ಊರು ಭೇದ ಹಿಮ್ಮಡಿಯನ್ನು ಪದೇ ಪದೇ ಮೇಲಕ್ಕೆ ಎತ್ತಿ ಕೆಳಗಿಡುವುದು.[22]

ವಲನ ಊರು ಭೇದ – ಮೊಳಕಾಲನ್ನು ಒಳಗೆ ಮಣಿಸುವುದು.[23] ಅಂಗಾಭಿನಯದಲ್ಲಿ ಕೊನೆಯದಾಗಿ ಜಂಘಾಭೇದ[24]ಗಳಾದ ನತ, ಕ್ಷಿಪ್ತಗಳನ್ನು ಕವಿ ಹೇಳುತ್ತಾನೆ.

ಉಳಿದ ಭೇದಗಳು ಆವರ್ತಿತ, ಉದ್ಪಾಹಿತ ಹಾಗೂ ಪರಿವೃತ್ತ ನತ[25] – ಮೊಣಕಾಲುಗಳನ್ನು (ಕೂಡುವ ತರಹ) ಮಣಿಸುವುದು. ಕ್ಷಿಪ್ತ[26] – ಜಂಘೆಯನ್ನು ಎತ್ತಿ ಜಾಡಿಸಿ ಇಡುವುದು.

ಶಿವನು ತನ್ನ ನೃತ್ಯದಲ್ಲಿ ಶೃಂಗಾರ ರಸ ಚತುರ್ವಿಧ ಅಭಿನಯಗಳನ್ನು ಪದಚಲನೆಗಳನ್ನು, ಕೋಪು, ಕಳಾಸ ಹಾಗೂ ತಿರುಪುಗಳನ್ನು (ನೋಡಿ ಅನುಬಂಧ ಅ.ಪರಿಭಾಷೆ) ಪ್ರದರ್ಶಿಸಿದನೆಂದು ಉಲ್ಲೇಖಿಸುತ್ತಾನೆ. ತಿರುಗುವಿಕೆ, ನಾನಾ ತೆರನಾದ ಭಂಗಿಗಳು, ಶಿರವೇ ಮೊದಲಾದ ಅಭಿನಯಗಳಿಂದ ಶಿವನ ನೃತ್ಯ ಬೆಡಗಿನಿಂದ ಕೂಡಿತ್ತು ಎಂದು ಹೇಳುವ ಉದ್ದೇಶ ಕವಿಯದು.

ವಿರೂಪಾಕ್ಷ ಪಂಡಿತನು ಶಿವನ ಆನಂದ ತಾಂಡವವನ್ನು ವರ್ಣಿಸಲು ಮಾರ್ಗೀ ಪದ್ಧತಿಯನ್ನು ಅನುಸರಿಸುತ್ತಾನೆ. ನಾಲ್ಕು ಷಟ್ಪದಿಗಳಲ್ಲಿ ಅಂಗ, ಪ್ರತ್ಯಂಗಗಳ ಭೇದಗಳಲ್ಲಿ ಕೆಲವನ್ನು ಹೆಸರಿಸಿ ಹೇಳುತ್ತಾನೆ. ಹೀಗೆ ಪರಿಭಾಷೆಯನ್ನು ಬಳಸಿದ್ದರೂ ಕವಿ ಶಿವನ ತಾಂಡವದ ವೈಭವವನ್ನು ಕಟ್ಟುವಲ್ಲಿ ಸಮರ್ಥನಾಗಿಲ್ಲ. ಕವಿಯು ತನಗಿರುವ ಮಾರ್ಗೀ ಹಾಗೂ ದೇಶೀ ನೃತ್ಯ ಸಂಪ್ರದಾಯಗಳ ತಿಳಿವಳಿಕೆಯನ್ನು ಹೇಳುವಲ್ಲಿ ಉತ್ಸುಕನಾಗಿದ್ದಾನೆ ಎನಿಸುತ್ತದೆ.

(೧೩) ಇಮ್ಮಡಿ ಗುರುಸಿದ್ಧನ (೧೫೯೦) ಹಾಲಾಸ್ಯ ಪುರಾಣ : ಶಿವನು ಅಪಸ್ಮಾರನನ್ನು ತುಳಿದು ನಾಟ್ಯವಾಡಿದ ಆನಂದ ತಾಂಡವದ ವರ್ಣನೆಯನ್ನು ಕವಿ ಪತಂಜಲಿ ದೃಷ್ಟಲೀಲೆ ಎಂಬ ಭಾಗದಲ್ಲಿ ಪ್ರಸ್ತಾಪಿಸುತ್ತಾನೆ. ಶಿವನ ನೃತ್ಯಕ್ಕೂ, ಅದಕ್ಕಾಗಿ ಹಿನ್ನೆಲೆ ವಾದ್ಯಗಳಲ್ಲಿ ನುಡಿಸುವ ಮದ್ದಳೆಗಳ ನುಡಿಕಾರಕ್ಕೂ ಪಾಟಾಕ್ಷರಗಳನ್ನು ಹೇಳುತ್ತಾನೆ. ಮದ್ದಳೆಯನ್ನು ವಿಷ್ಣುವೂ ತಾಳವನ್ನು ಬ್ರಹ್ಮದೇವನೂ ಪಾರ್ವತಿ ಸಹ ಗಾಯನವನ್ನೂ ಸರಸ್ವತಿಯು ವೀಣೆಯನ್ನೂ ಶಿವನ ನೃತ್ಯಕ್ಕೆ ಹಿನ್ನೆಲೆಯಾಗಿ ಒದಗಿಸುತ್ತಾರೆ.

ನಂದಿ ವಿಷ್ಣುಗಳೆಯ್ದೆ ಧಿಂಧಿಮಿ ಧಿಂಕಿಟಿಂದೆನೆಯಾಗಳಾ
ನಂದ ದಿಂ ಬಹುಭಾರಿ ಮರ್ದಳೆಗಳ್ ವಿರಾಜಿಸೆ ಬಾಜಿಸಲ್
ಚಂದದಿಂ ವಿಧಿ ತಾಳಮಂ ಕರದಿಂದೆ ತೊಂಗೆನೆ ತತ್ತ ತೈ
ಯೆಂದು ತೈಯೆನೆ ತೊಂಗ ತೊಂಗೆನೆ ಶಂಭು ನಾಟ್ಯಮ ನಾಡಿದಂ || (ಹಾಲಾಪು /೧೭)

ರಾಜನಾದ ರಾಜಶೇಖರನ ಬೇಡಿಕೆಯನ್ನು ಮನ್ನಿಸಿ ಸುಂದರೇಶನು ತನ್ನ ತಾಂಡವವನ್ನು ತೋರುತ್ತಾನೆ. ನರ್ತನ ವಿದ್ಯೆಯನೊಂದು ನರ್ತಿಸಿ ಶಿವ ಸಾಮ್ಯಮಕ್ಕು (೮.೪) ಎಂದು ನರ್ತನ ವಿದ್ಯೆಯ ಹಿರಿಮೆಯನ್ನು ರಾಜಶೇಖರನು ಅರಿತು ತಾಂಡವವನ್ನು ಕಲಿಯಲು ಸಾಕ್ಷಾತ್ ಶಿವನನ್ನೇ ಬೇಡುತ್ತಾನೆ. ಶಿವನ ಈ ತಾಂಡವಕ್ಕೆ ಬ್ರಹ್ಮ, ವಿಷ್ಣು ಆದಿ ದೇವತೆಗಳೂ, ಅಪ್ಸರೆಯರೂ ವಾದ್ಯ ವೃಂದವನ್ನು ಒದಗಿಸುತ್ತಾರೆ. ಬಹು ವಿಧವಾದ ಮಂಡಲಗಳನ್ನು ಮಾಡುತ್ತ ತಾಂಡವದ ಸ್ವರೂಪವನ್ನು ತೋರಿದ ಶಿವನ ಸ್ಥಾನಕವನ್ನು (ನೋಡಿ ಅನುಬಂಧ ಅ. ಪರಿಭಾಷೆ) ಕವಿ ಹೀಗೆ ಹೇಳುತ್ತಾನೆ :

ತಾಂಡವ ಸಮಯೋಚಿತ ಬಹು
ಮಂಡನ ನಿಚಯ ಮನೆ ತಾಳ್ದು ದಕ್ಷಿಣ ಪದಮಂ
ಪಡೆಂಡೆಯಮದಲುಗೆ ಮೇಲಕೆ
ಕೊಂಡೊಯ್ಪುತೆ ಕುಣಿಯ ತೊಡಗಿರಲ್ಕನಿತಱೊಳಂ (.೨೪)

ತಾಂಡವ (ನೋಡಿ ಅನುಬಂಧ ಅ.ಪರಿಭಾಷೆ) ವನ್ನು ಪಾದಗತಿಗಳಲ್ಲಿ ತೋರುತ್ತ ಶಂಕರನು ಬಲಗಾಲನ್ನು ಉದ್ದಂಡ ಪಾದವನ್ನಾಗಿಸಿದ ಚಿತ್ರ ಇದೆ. ಶಿವನ ಕಾಲನ್ನು ಊರ್ಧ್ವಮುಖವಾಗಿ ಎತ್ತಿದಾಗ ಆತನ ಕಾಲಿನ ಅಂದುಗೆ ಮೇಲಕ್ಕೆ ಚಲಿಸಿದುದನ್ನು (ಕಾಲಿನ ಭಾಗದಲ್ಲಿ) ಕವಿ ನಿರೂಪಿಸುವ ಪರಿ ಇದು ಶಿವನ ಪಾದಗತಿಗಳು ನುಡಿಸುವ ಪಾಟಾಕ್ಷರಗಳನ್ನು ಕವಿ ಹೀಗೆ ಹೇಳುತ್ತಾನೆ :

ಧಿಕ್ಕು ತಕ್ಕು ಧಿಮಿ ಧಿಂ ಧಿಮಿಕಿ ತೋಂ
ಧಿಕ್ಕಟಂಕು ಝಣ ತಕ್ಕಿಟ ಧಿಕಟಾ
ಣಕ್ಕು ತೇಯ ತರಿತಿಂದಣ ತಕಿಟಂ
ತಕ್ಕ ತೋಂಗ ಮೆನುತಾಡಿದನಭವಂ ||         (ಹಾಲಾಪು. .೨೬)

ಮುಂದೆ ತಾಳದ ಪಾಟಾಕ್ಷರಗಳಿಗೆ ಶಿವನ ನೃತ್ತದ ಚಿತ್ರವಿದು.

ಝಣ ಕಿಟ ತೇಯ ತೇಯ ತಕತೋಂಗಿಣ ತೋಂಗಿಣ ತೈತ ತೈತಧಿ
ಕ್ಕಣ ಣಕು ಝೇಕು ಝೇಕು ತರಿತೋದ್ಧಿಮಿ ತದ್ದಿಮಿ ತತ್ತ ಧಿತ್ತಸಂ
ಘಣ (ಗು) ಘಣ ಝೇಂತೃ ಝೇಂತೃ ಧಣ ದಂಧಣ ತೋದಿಘ ತಕ್ಕುದಿಕ್ಕು ಸಂ
ದಣಿಯರ ಮಾದ ತಾಳಗತಿಯಂ ಪಿಡಿದಾಡಿದನಿಂದು ಶೇಖರಂ || (.೨೭)

ಚಂಪಕ ಮಾಲೆಯಲ್ಲಿ ಜೋಡಿಸಿದ ಈ ಪಾಟಾಕ್ಷರಗಳು ಲಯಬದ್ಧವೂ ತಾಳಬದ್ಧವೂ ಆಗಿ ನೃತ್ಯ ಪರಿಭಾಷೆಯ ‘ಜತಿ’ಯ ಲಕ್ಷಣವನ್ನು ಸಂಪೂರ್ಣವಾಗಿ ಹೊಂದಿ, ನೃತ್ಯಾನುಗವಾಗಿದೆ. ಕವಿಯ ಈ ರೀತಿಯ ಜತಿಗಳ ಜೋಡಣೆ ಮೆಚ್ಚಲರ್ಹ ಸಂಗತಿಯಾಗಿದೆ. ಈತ ತಾಂಡವದ ಉಳಿದ ಮಾಹಿತಿಗಳನ್ನು ವಿವರಿಸುವುದಿಲ್ಲ. ಶಿವನು ತಾಂಡವವನ್ನು ಎಡಗಾಲನ್ನು ಎತ್ತಿ ಲೋಕ ಕಲ್ಯಾಣಕ್ಕಾಗಿ ಮಾಡಿದ ಪ್ರಸಂಗ ಜನ ಜನಿತವಾಗಿದ್ದು, ಅದು ಆನಂದ ಅಥವಾ ನಾದಾಂತ ತಾಂಡವವೆಂದು ಪ್ರಸಿದ್ಧಿ ಪಡೆದಿದ್ದರೂ ಇಲ್ಲಿ ಶಿವನು ತನ್ನ ಬಲಗಾಲನ್ನು ಮೇಲಕ್ಕೆ ಎತ್ತಿದ ಪರಿಯನ್ನು ಕವಿ ರಾಜಶೇಖರನ ಮೇಲಿನ ಅನುಕಂಪ, ಪ್ರೀತಿಯಿಂದಲೇ ಎತ್ತಿದ್ದಾನೆ ಎಂದು ಕಾಣುವುದು ಕವಿಯ ಉದ್ದೇಶ.

(೧೪) ಷಡಕ್ಷರ ದೇವನ (೧೬೫೫) ರಾಜಶೇಖರ ವಿಳಾಸ : ನರ್ತನ ಹಾಗೂ ಸಂಗೀತದ ಈ ಪ್ರಸ್ತಾಪವನ್ನು ಷಡಕ್ಷರ ದೇವನು ಹಲವು ಬಾರಿ ಮಾಡಿದ್ದಾನೆ. ಅವುಗಳಲ್ಲಿ ರಾಜಶೇಖರನ ಒಡ್ಡೋಲಗದ ವರ್ಣನೆಯಲ್ಲಿ ರಾಜನರ್ತಕಿಯ ನೃತ್ಯದ ಸ್ವರೂಪವನ್ನು ದೀರ್ಘವಾದ ವಚನದಲ್ಲಿ ವಿವರಿಸುತ್ತಾನೆ.

ಪೂರ್ವರಂಗವಿಧಿಯ (ನೋಡಿ ಅಧ್ಯಾಯ ೨) ನಂತರ ಮದ್ದಳೆ, ಕೊಳಲು ಮುಂತಾದ ಆವುಜದ ವಾದನದ ವಾದ್ಯ. ಜೊತೆಗೆ ತಾಳ, ಲಯಬದ್ಧವಾಗಿ ಹಾಡುವ ಗಾಯಕ ಗಾನ, ನೃತ್ಯಕ್ಕೆ ತಕ್ಕ ನೇಪಥ್ಯದಿಂದ ಅಲಂಕರಿಸಿಕೊಂಡು ಸೂತ್ರಧಾರನ ಅಪ್ಪಣೆಗಾಗಿ ಜವನಿಕೆಯ (ನೋಡಿ ಅಧ್ಯಾಯ ೨) ಹಿಂದೆ ಕಾದು ನಿಂತಿರುವ ನರ್ತಕಿಯಿಂದ ನರ್ತನವು ಆರಂಭವಾಗುತ್ತದೆ.

ಮತ್ತಂ ಮೊಳಗುವ ಮದ್ದಳೆಯ ಮೋಹಿಪಾವುಜದಿಂಚರಂಗರೆವ ಬಂಚದ ಪಾಂಗರಿದು ಪಾಡುವ ಸಂಗೀತ ಸೂಳರಿದೊತ್ತುವ ತಾಳದ ಮಧುರ ತರ ನಿನದಂ ಬೆರೆದು ಮೇಳಂಗೊಂಡ ವೇಳೆಯೊಳ್ ಸಮಯ ಸಮುಚಿತ ನೈಪಥ್ಯಂಗೆಯ್ದು ಝಗ ಝಗಿಪ ಜವನಿಕೆಯ ಮರೆಯೊಳ್ ಕಂದರ್ಪ ವಿವಾಹದೊಳಂದಂಬಡೆದ ಪೊಂದೆರೆಯ ಮರೆಗೊಂಡು ನಿಂದ ರತಿಯಂ ಪೋಲ್ದು ನಿಂದಿರ್ಪುದುಂ ನಾಂದಿಯನೋದಿ ಸೂತ್ರಧಾರಕಂ ಭೋಂಕನ ತೆರೆದೆಗೆಯ ಶೃಂಗಾರ ರಸ ವಂಗಂ ಬಡೆದಂತೆ ಕಂಗೊಳಿಸಿ…… (ರಾಜವಿ. /೧೯ .)

ನರ್ತಕಿ ಶೃಂಗಾರ ರಸವನ್ನು ತನ್ನ ಅಂಗಾಂಗಗಳಲ್ಲಿ ಚಿಮ್ಮಿಸುತ್ತ ರಂಗದಲ್ಲಿ ಮಂದವಾದ ಗಾಳಿಗೆ ಬಳ್ಳಿಯಂತೆ ಚಲಿಸಿ ಪುಷ್ಪಾಂಜಲಿ (ನೋಡಿ ಅ.೨)ಯನ್ನು ಪುಷ್ಪಪುಟ ಹಸ್ತಗಳಿಂದ ವಿಕ್ಷೇಪಿಸುತ್ತಾಳೆ.

ಕಾವನ ಕರತಳದಿನವಂ ಕವರ್ತೆಗೊಂಡು ಚೆಲ್ಲುವಂತೆ ಪುಷ್ಪಪುಟ  ಹಸ್ತದಿಂ ಪುಷ್ಪಾಂಜಲಿಯಂ ಕೆದರ್ದು ಮೊದಲೊಳ್ ಮೋಹಿಸಿ ಸಭಾಸದರಂಗರಂಗದೊಳ್ ಅಪಾಂಗ ಪ್ರಭೆರಂಜಿಸುತ್ತಿರೆ ಮಂದಾನಿ ಲನಾಂದೋಳಿಪಕನಕಲತೆಯಂತೆ ಆಂದೋಳನ ಶೋಭೆ ದೋರಿ…… (/೧೯ .)

ಕವಿಯ ಗಮನಿಕೆ ಪ್ರಶಂಸಾರ್ಹವಾದುದು. ಸಂಯುತ ಹಸ್ತಗಳಲ್ಲಿ ಒಂದಾದ ಪುಷ್ಪ ಪುಟ ಹಸ್ತದ (ನೋಡಿ ಅನುಬಂಧ ಇ. ನಕ್ಷೆಗಳು ಸಂಯುತ ಹಸ್ತ) ವಿನಿಯೋಗಗಳಲ್ಲಿ ಮಂತ್ರ ಪುಷ್ಪ ಸಮರ್ಪಣೆಯೂ ಒಂದು.[27] ಷಡಕ್ಷರ ದೇವ ರಾಜ ನರ್ತಕಿಯ ನೃತ್ಯವನ್ನು ಶುದ್ಧ ದೇಶೀಯ ಕ್ರಮವೆಂದು ಹೇಳುತ್ತಾನಲ್ಲದೆ ಶುದ್ಧ ದೇಶೀಯ ನೃತ್ಯದ ಪರಿಭಾಷೆಯನ್ನು ಉಲ್ಲೇಖಿಸುತ್ತಾನೆ. ಅವು ಆಕೆಯ ನೃತ್ಯದಲ್ಲಿ ಅಳವಟ್ಟಿರುವುದನ್ನು ಹೀಗೆ ನಿರೂಪಿಸುತ್ತಾನೆ :

ಮುಖದೊಳ್ ಗಾನಮಂ ಕೆಯ್ಯೊಳಭಿನಯಮಂ ದೃಷ್ಟಿಯೊಳ್ರಸಮಂ ಪದತಳದೊಳ್ ತಾಳಮಂ ಬೀಸರೆಂಬೊಗಲೀಯದೆ ಸೆರೆವಿಡಿದು ರೂಪು, ನೇರು, ಲಾಗು, ಲವಣಿಯಡಪು ತಿರುಪು ಕೈಮುರೆ ಕಳಾಸ ಕೂಟ ಮಾನಂಗಳಂ ಸಂಗಳಿಸಿ ರಸಭಾವಂ ದಪ್ಪದೆ ಗಾಡಿಗಮಕಂಗುಂದದೆ ಬೆಡಂಗು ಬಿನ್ನಾಣಂ ಬೇರ್ಪಡದೆ ಓಜೆ ಒಯ್ಯಾರ ಮೋಸರಿಸದೆ ಶುದ್ಧ ದೇಶೀಯ ಕ್ರಮದಿಂ ಚತುರ್ವಿಧ ನರ್ತನಂ ಚತುರ ಜನ ಮೆಚ್ಚುವಂತೆ ತೋರ್ಪ ನರ್ತಿಕಿಯ ರಿಂ (ರಾಜವಿ. /೧೯ .)

ಆರಂಭದಲ್ಲಿ ಪುಷ್ಪಾಂಜಲಿಯನ್ನು ಒಬ್ಬಳೇ ನರ್ತಕಿ ಕೋಮಲವಾದ ಅಂಗಚೇಷ್ಟೆಗಳೊಂದಿಗೆ ನಿರ್ವಹಿಸಿದಳೆಂದು ಹೇಳಿದ ಕವಿ, ಪ್ರಸಂಗದ ಅಂತ್ಯದಲ್ಲಿ ಹಲವಾರು ನರ್ತಕಿಯರ ಸಾಮೂಹಿಕ ನರ್ತನದಲ್ಲಿ ನೇರು, ಲಾಗು, ಲವಣಿ, ತಿರುಪು, ಕೈಮುರೆ, ಕಳಾಸಗಳನ್ನು ನರ್ತಿಸಿದರೆಂದು ಹೇಳುತ್ತಾನೆ. ಇವುಗಳು ಶುದ್ಧ ದೇಶೀ ಪದ್ಧತಿಯಲ್ಲಿನ ಉರುಪು ಕ್ರಮದ ವೈವಿಧ್ಯಮಯ ಅಂಗಿಕಾಭಿನಯಗಳು. (ಉರುಪು ಕ್ರಮದ ವಿವರಣೆಯನ್ನು ಇದೇ ಅಧ್ಯಾಯದಲ್ಲಿ ವಿವರಿಸಿದೆ) ಕೂಟಮಾನಗಳಲ್ಲಿ ನೇರು, ಲಾಗು, ಲವಣಿ ಇತ್ಯಾದಿಗಳನ್ನು ಸಂಗಳಿಸಿದ ನೃತ್ಯವೆಂದು ಕವಿಯ ವರ್ಣನೆಯಿಂದ ತವರ್ಗ, ದವರ್ಗಗಳ ಸೊಲ್ಲುಗಳಿಂದಾದ ಶಬ್ದ ಪ್ರಬಂಧಕ್ಕೆ ನರ್ತಕಿಯರು ನರ್ತಿಸಿದ ಸ್ವರೂಪವೂ ಗೋಚರವಾಗುತ್ತದೆ. ತಕಿಟ, ಗಿಡದಗ ಇವುಗಳ ಕೊಡುವಿಕೆ ಕೂಟವೆನಿಸಿ, ಇದರ ಯಥೋಚಿತ ಉದ್ದವು ಮಾನವೆನಿಸಿದೆ.[28] ತಕಿಟ, ಗಿಡದಗ ಅಕ್ಷರಗಳಿಂದಲೇ ಜತಿಯ ಪಾಟಾಕ್ಷರಗಳು ಲಭಿಸಿ ಸೊಲ್ಲು ಕಟ್ಟುವನ್ನು ಕಟ್ಟಿ ನರ್ತಿಸಿರಬಹುದು. ಕೂಟಮಾನದ ಒಂದು ಉದಾಹರಣೆ :

ತಕಿಟ ಗಿಡದಗ, ತದಕಿಟ ಗಿಡ, ಗಿಡಗ
ತದೇಂತದೇಂತಕಿಟದೋಂಗ ತಕ್ಕಿಟ
ತೋಂದ, ಡೀಂಗು ತಕ್ಕಿಟ ತೋಂದಾ ಕಿಟ

ಸಂಪ್ರದಾಯ ಬದ್ಧವಾದ ನಾಟ್ಯಾದ್ಪಾದಶಾಂಗಗಳಲ್ಲಿ ಕೂಟಮಾನವೂ ಒಂದು ಎಂದು ವಿದ್ವಾಂಸರ ಅಭಿಪ್ರಾಯ.[29] ಗಾನ, ಅಭಿನಯ, ರಸದೃಷ್ಟಿ ಹಾಗೂ ಪದತಲದ ಸುಸಂಬದ್ಧವಾದ ಚತುರ್ವಿಧ ನರ್ತನ ಕ್ರಿಯೆಯನ್ನು ನರ್ತಕಿ ಶುದ್ಧ ದೇಶೀ ನೃತ್ಯದಲ್ಲಿ ಆಚರಿಸಿ ಅಲ್ಲಿಯ ಪಂಡಿತ ಜನರನ್ನು ರಂಜಿಸುತ್ತಾಳೆ. ಹೀಗೆ ಷಡಕ್ಷರ ದೇವನು ಹಿಂದಿನ ಕವಿಗಳಿಂದ ಪ್ರಭಾವಿತನಾಗಿ, ನೃತ್ಯದ ಪರಿಭಾಷೆಯನ್ನು, ತನ್ನ ಕಾವ್ಯದಲ್ಲಿ ಅಲಂಕಾರ ಪೂರ್ಣವಾಗಿ ಬಳಸಿದ್ದಾನೆ.

ಪುನಃ ಇದೇ ಕವಿ ಹನ್ನೆರಡನೆಯ ಆಶ್ವಾಸದಲ್ಲಿ ಅಭಿನವ ರಂಭೆ ಎಂಬ ನರ್ತಕಿಯ ನೃತ್ಯವನ್ನು ವಿಶದೀಕರಿಸುತ್ತಾನೆ. ಆಕೆಯ ನೃತ್ಯದ ಸ್ವರೂಪದ ಜೊತೆಗೇ ಆಕೆಯ ಅಂಗಾಂಗಗಳ ವರ್ಣನೆಯನ್ನು ಸಮೀಕರಿಸಿದ್ದಾನೆ. ನೃತ್ಯಕ್ಕೆ ತಕ್ಕ ವೇಷಭೂಷಣಾದಿಗಳಿಂದ ಅಲಂಕರಿಸಿಕೊಂಡ ನರ್ತಕಿ ಜವನಿಕೆ ಸರಿಯಲು ಪುಷ್ಪಾಂಜಲಿಯನ್ನು ಮಾಡುತ್ತಾಳೆ. (ಪೂರ್ವರಂಗವಿಧಿ, ನರ್ತಕಿಯ ವೇಷಭೂಷಣ, ಜವನಿಕೆ ಹಾಗೂ ಪುಷ್ಪಾಂಜಲಿ-ನೋಡಿ ಅಧ್ಯಾಯ ೨) ಇದರ ನಂತರ ಗೆಜ್ಜೆಗಳ ಝಣತ್ಕಾರರವದೊಡನೆ ಮೃದುವಾದ ಪಾದಗತಿಗಳ ಲಾಸ್ಯ ನೃತ್ಯವನ್ನು ಸಭೆಗೆ ತೋರುತ್ತಾಳೆ. ನರ್ತಕಿಯು ಚತುರ್ವಿಧ ಅಭಿನಯವನ್ನು ಮಾಡುವುದನ್ನು

ವಿತತಾಂಗಿಕ ಮಾ ಹಾರ್ಯಕ
ಮತಿಶಯ ಸಾತ್ವಿಕ ಮುಮಮರ್ದವಾಚಿಕಮೆನಿಪೀ
ಚತುರಭಿನಯಮಂ ಚತುರ
ಸ್ಥಿತಿಯಂ ನೆಱೆ ತೋಱೆ ಬೀಱೆದಳ್ ನರ್ತನಮಂ. (ರಾಜವಿ. ೧೨/೭೩)

ಎಂದು ಒಂದು ಕಂದ ಪದ್ಯದಲ್ಲೇ ಚತುರತೆಯಿಂದ ಅಡಕಗೊಳಿಸುತ್ತಾನೆ.

ನರ್ತಕಿಯ ದೃಷ್ಟಿ ಭೇದಗಳನ್ನೂ ಶಾಸ್ತ್ರದ ಪದಗಳನ್ನೇ ಅನುಸರಿಸಿ, ಕನ್ನಡೀಕರಿಸಿ ಹೇಳಿದಂತೆ ತೋರುತ್ತದೆ :

ಮುಗುಳ್ವಲರ್ವನಗುವ ಚಲ್ಲ
ನುಗುವ ಮರಲ್ದೊಗೆವ ಬಳಸುವಲಂಪಂ
ತೆಗೆವ ಪೊಳೆವಗಿವ ಮಿಗಿಲೆಂ
ದೊಗೆವ ಲಸ ದ್ದೃಷ್ಠಿ ಮೆಱೆದುದಾ ನರ್ತಕಿಯಾ (೧೨/೭೫)

ನರ್ತಕಿಯು ಹೊಳೆವ ಕಣ್ಣುಗಳ ನೋಟಗಳಲ್ಲಿ ಸ್ನಿಗ್ಧ, ಆಲೋಲಿತ, ನಿಮೀಲಿತ ಅಲ್ಲದೆ ಸಂಚಾರಿಭಾವಗಳನ್ನು ಪ್ರದರ್ಶಿಸುವ ದೃಷ್ಟಿಯನ್ನು ತೋರಿದಳು. ಇದೇ ತಂತ್ರವನ್ನು ಭ್ರೂಭೇದಗಳಲ್ಲೂ ಅನುಸರಿಸುತ್ತಾನೆ. ನರ್ತಕಿಯ ಹಸ್ತಾಭಿನಯವನ್ನು ಒಂದು ಸುಂದರ ಹೋಲಿಕೆಯೊಡನೆ ಚಿತ್ರಿಸುತ್ತಾನೆ. ಆಕೆಯ ಎಳಸಾದ ಬೆರಳುಗಳಿಂದ ವೈವಿಧ್ಯಮಯವಾದ ಹಸ್ತಗಳ ಚಲನೆಯನ್ನು ಮನ್ಮಥನು ಅಸಂಖ್ಯಾತವಾಗಲಿ ಎಂದು ಬಿಟ್ಟ ಕೆಂಪಾದ ಚಿಗುರಿನ ಬಾಣಗಳಿಗೆ ಹೋಲಿಸಿದ್ದಾನೆ. ಪಾದಗತಿ ಹಾಗೂ ಮನೋಧರ್ಮದ ವೇಗಕ್ಕೆ ತಕ್ಕ ತ್ವರಿತವಾದ ಹಸ್ತಗಳ ಬಳಕೆ ಕೆಂಪಾದ ಚಿಗುರಿನಂತೆ ಕಾಣುವುದು ದಿಟ. ವಿಶೇಷವಾಗಿ ಅಲಪದ್ಮ, ತ್ರಿಪತಾಕ, ಕಟಕಾಮುಖ ಮುಂತಾದ ಹಸ್ತಗಳು (ನೋಡಿ ನಕ್ಷೆ ೧ ಅಸಂಯುತ ಹಸ್ತಗಳು) ಈ ತರಹದ ಭ್ರಮೆಯನ್ನು ಹುಟ್ಟಿಸುವುದು :

ಸ್ಮರನರುಣತರುಣ ಪಲ್ಲವ
ಶರಮನಸಂಖ್ಯಾತಮಕ್ಕೆನುತ್ತಿಸೆ ಪಾಯ್ದು
ಪ್ಪರಿಸಿ ಬಹುಮುಖದೆ ಪರಿದೂ
ತ್ತರಿಸುವ ಪರಿಯೆನಿಸಿತವಳ ಕರತಳ ಚಳನಂ (೧೨/೮೧)

ನೃತ್ತ ಹಸ್ತಗಳನ್ನು ನರ್ತಕಿ ಬಳಸಿದಳೆಂದು ಹೇಳುವ ಉದ್ದೇಶದಿಂದ ಕವಿ ಕರಿಹಸ್ತವೆಂಬ ನೃತ್ತ ಹಸ್ತವನ್ನು ಉಲ್ಲೇಖಿಸಿ ಚಮತ್ಕೃತಿಯಿಂದ ಅದನ್ನು ಹೀಗೆ ಬಳಸುತ್ತಾನೆ :

ಎನಗೆ ಪಗೆಯಾದ ಚಂದ್ರನ
ನನಿಶಂ ಕೆಳೆಗೊಂಡುದೆಂದು ಕರ್ಣೋತ್ಪಲಮಂ
ಮುನಿದಲೆವನರುಹಮನಂ
ದನುಕರಿಸಿದುದರರೆ ಕರಿಕರಂ ನೃರ್ತಕಿಯಾ (೧೨/೮೨)

ಕರಿಹಸ್ತದಲ್ಲಿ (ನೋಡಿ ಹಸ್ತ ಲೀಲಾವ. ನೃತ್ಯ ಪ್ರಸಂಗ) ಬಳಸುವ ತ್ರಿಪತಾಕ ಹಾಗೂ ಡೋಲಾ ಹಸ್ತಗಳ ಸ್ಥಾನವನ್ನು ವಿವರಿಸುವ ನೆಪದಲ್ಲಿ ಕವಿ ವಕ್ರೋಕ್ತಿಯನ್ನು ತರುತ್ತಾನೆ. ದ್ರುತಗತಿಯಲ್ಲಿ ಭ್ರಮರಿಗಳನ್ನು ಸುತ್ತುತ್ತಾ ತಿರುಗುವ ನರ್ತಕಿಯನ್ನು ಸಮುದ್ರ ಮಂಥನದಲ್ಲಿ ಗಿರಗಿರನೆ ತಿರುಗಿದ ಮಂದರ ಪರ್ವತಕ್ಕೆ ಹೋಲಿಸುತ್ತಾನೆ. ಚುರುಕಾಗಿ ಚಕ್ರಾಕಾರವಾಗಿ ಸುತ್ತುತ್ತ ನರ್ತಿಸುತ್ತಿರುವ ನರ್ತಕಿಯ ನೃತ್ಯವನ್ನು ಕವಿ ವಿಚಿತ್ರ ನೃತ್ಯವೆಂದು ಕರೆಯುತ್ತಾನೆ :

ಒಸೆದಷ್ಟ ರಸಮನಿದುನವ
ರಸಮೆನಿಸಿ ಪೊದಳ್ದಪತ್ತುಮಂಡಳ ಮಂರಂ
ಜಿಸೆಪಂಚಮೆನಿಸಿ ಲಾಸ್ಯಮ
ನೆಸಗಿದಳಾನಟಿ ವಿಚಿತ್ರಮೆನೆ ತತ್ಸಭೆಯೊಳ್ (೧೨೧೮೭)

ಹೀಗೆ ಅತ್ಯಂತ ವೇಗವಾಗಿ ತಿರುಗುವುದು ಹಾರುವುದು ಮುಂತಾದ ಚಟುವಟಿಕೆಯ ಕ್ರಿಯೆಯುಳ್ಳ ನೃತ್ತವನ್ನು ಶಾರ್ಙ್ಗಧರನು ವಿಷಮ ನೃತ್ಯವೆಂದು ಹೇಳುತ್ತಾನೆ. (ನೋಡಿ ಅನುಬಂಧ ಅ. ಪರಿಭಾಷೆ) ಹತ್ತು ಮಂಡಲಗಳು. ಪಂಚಾಂಗಾಭಿನಯದ ಲಾಸ್ಯಗಳಿಂದ ಅಷ್ಟರಸವಲ್ಲದೆ ನೃತ್ಯದಲ್ಲಿ ನವರಸಗಳನ್ನು ತಂದಳು ಎಂದು ಕವಿ ಅಭಿನವ ರಂಭೆಯ ರಸ ಭಾವಯುಕ್ತವಾದ ನೃತ್ಯವನ್ನು ಸೊಗಸಾಗಿ ವರ್ಣಿಸುತ್ತಾನೆ.[1] ಮುಡುಪು – ನರ್ತನಿ. ೪-೬೬೪.

[2] ಮಾನವೀ ಗತಿ – ಮಂಡಲಾಕಾರವಾಗಿ ಸುತ್ತುತ್ತಾ ಬಾರಿ ಬಾರಿಗೂ ಮುಂದೆ ಹೋಗುತ್ತ ಎಡಗೈಯನ್ನು ಸೊಂಟದ ಮೇಲಿಟ್ಟುಕೊಂಡು ಬಲಗೈಯಲ್ಲಿ ಕಟಕಾ ಮುಖವನ್ನು ಪ್ರದರ್ಶಿಸುವುದು ಮಾನವೀ ಗತಿ. (ಅಭಿದ. ೩೧೬)

ಕಟಾಕಾ ಮುಖ ನೋಡಿ ನಕ್ಷೆ – ೧ ಅಸಂಯುತ ಹಸ್ತ.

[3] ತುರಂಗಿಣೀ ಗತಿ – ಬಲಗಾಲನ್ನು ಮೇಲಕ್ಕೆತ್ತಿ ಹಾರುತ್ತ ಎಡಗೈಯಲ್ಲಿ ಶಿಖರ ಹಸ್ತವನ್ನು ಬಲಗೈಯಲ್ಲಿ ಪತಾಕ ಹಸ್ತವನ್ನು ತೋರುವುದು ತುರಂಗಿಣಿಗತಿ (ಅಭಿದ.೩೧೧) ಶಿಖರ, ಪತಾಕ ಹಸ್ತಗಳು – ನೋಡಿ ಅನುಬಂಧ ಇ. ಅ) ಹಸ್ತಗಳು.

[4] ಮುಡುಪ ಚಾರಿ – ಅಂಗುಲೀ ಪೃಷ್ಠ ಭಾಗಂ ಹಿ ನೃತ್ತಜ್ಞಾ ಮುಡುಪಂ ಜಗುಃ |
ಚಾರ್ಯತೇ ತೇನ ಮುಡುಪು ಚಾರೀತ್ಯಾನ್ಪರ್ಥಸಂಜ್ಞೆಕಾ | ನೃತ್ಯಾಯ. -೧೦/೧೦೮೦.

[5] ನೋಡಿ. ರೇಖಾಚಿತ್ರ (ಪು. ೨೯).

[6] ನೋಡಿ. ರೇಖಾಚಿತ್ರ (ಪು. ೨೯).

[7] ಷಡಂಗ – ಶಿರ, ಹಸ್ತ, ಉರ, ಪಕ್ಕೆ, ಕಟಿ, ಚರಣ

[8] ಧುತ ಶಿರ – ಪಲ್ಲಟದಿಂದೆಡಬಲಕೆ ಮೆಲ್ಲನೆ ತಿರುಪಲ್ಕೆ ಶಿರಮನದು ಧುತಮೆನಿಕುಂ ||
ಲಾಸ್ಯರಂ ೧/೭೯ (ನಾಟ್ಯಶಾ. ೮/೨೨)

[9] ತಲ್ಲಣದಿಂದಾಧುತ ಮುಂ
ನಿಲ್ಲದೆ ತಿರುಪಲ್ಕೆ ವಿಧುತ ಶಿರ ಮೆಂದೆನಿಕುಂ
ಶಿರಮೊರ್ಮಯಡನುಮಾಗು
ತ್ತಿರಧೂರ್ಧ್ವಕ್ಕೆಯ್ದಲಂತದಾಧೂತಾಖ್ಯಂ || ಲಾಸ್ಯರಂ. ೭೯೮೦

[10] ತಲ್ಲಣದಿಂದಾಧುತ ಮುಂ
ನಿಲ್ಲದೆ ತಿರುಪಲ್ಕೆ ವಿಧುತ ಶಿರ ಮೆಂದೆನಿಕುಂ
ಶಿರಮೊರ್ಮಯಡನುಮಾಗು
ತ್ತಿರಧೂರ್ಧ್ವಕ್ಕೆಯ್ದಲಂತದಾಧೂತಾಖ್ಯಂ || ಲಾಸ್ಯರಂ. ೭೯೮೦

[11] ಎದೆ ಭೇದ- ಸಮ ಮಾಭುಗ್ನಂ ನಿರ್ಭು
ಗ್ನಮು ಮತಿ ವಿಲಸತ್ ಕಂಪ ಮುದ್ಪಾಹಿತಂ
ಕ್ರಮದಿಂ ವಕ್ಷೋಭೇದಂ
ಸಮನಿ ಸುಗುಂ ನೃತ್ಯದಲ್ಲಿ ಸರಸಿಜಗಂಧೀ || ಅದೇ /೮೮

[12] ಎದೆಯ ಮೂರು ಭೇದ. (ಸಮ, ಅಭುಗ್ನ, ನಿರ್ಭುಗ್ನ)
ಎದೆಯೊಳಗಳ್ಳನಿತುಂ ಕುಂ
ದೊದವದೆ ಚತುರಸ್ರಮಾಗೆ ಸಮವಕ್ಷಂಗಳ್
ಪುದಿದು ಶಿಥಿಲತ್ಪಮೆನಿಸಿದ
ಹೃದಯಕ್ಕಾಭುಗ್ನಮೆಂಬಪೆಸೆರೆಸೆ ದಿರ್ಕುಂ ||
ಬೆನ್ನು ಗುಳಿಯಾಗಲೆರ್ದೆಕೇ
ಳುನ್ನತಿಯಿಂದಿರ್ದೊಡಂತ ದೇ ನಿರ್ಭುಗ್ನಂ | ಅದೇ /೮೬, ೮೭

[13] ವಿವರ್ತಿತ ಪಕ್ಕೆ
ಪೊಱವಾ (ಱು) ತಿರುಗಲ್ಕೊಡನೇ
ನೆಱೆ ತಿರುಗಿದ ಬರಿ (ವಿ) ವರ್ತಿತಾಖ್ಯಮನಾಳ್ಗುಂ ಅದೇ /೯೧

[14] ಸಲೆಕಂಪಿತ ಮುದ್ಪಾಹಿತ
ಮೊಲೆವಾ ಛಿನ್ನಂ ವಿವೃತ್ತಮುಂ ರೇಚಿತ ಮುಂ
ನೆಲೆಗೊಂಡಿವಯ್ದು ಭೇದಂ
ಲಲಿತಾಂಗೀ ಕಟಿಗೆ ಲಕ್ಷಣಂ ಸಮನಿಸು ಗುಂ || ಅದೇ ೯೫

[15] ಇರದತಿ ಪೋಪ ಮರಳ್ದಾ
ಬರಿಯಂ ಧರಿಸಿರ್ದ ಕಟಿಯದೇ ಕಂಪಿತ ಮುಂ || ಅದೇ ೯೬

[16] ಸರಿಸದೆ ಮೆಲ್ಲನೆಯಲುಗುವ
ಬರಿಗಳನಾಂತಿರ್ದ ಕಟಿಯದುದ್ವಾಹಿತ ಮಂ
ಮೊಗಮಡ್ಡಮಾಗಿ ನಚ್ಚಣಿ
ಮಿಗೆ ತಿರುಗಿದ ಬರಿಯನುಳ್ಳ ಕಟಿಯದು ಛಿನ್ನಂ || ಲಾಸ್ಯರಂ /೯೬, ೯೭

[17] ಸರಿಸದೆ ಮೆಲ್ಲನೆಯಲುಗುವ
ಬರಿಗಳನಾಂತಿರ್ದ ಕಟಿಯದುದ್ವಾಹಿತ ಮಂ
ಮೊಗಮಡ್ಡಮಾಗಿ ನಚ್ಚಣಿ
ಮಿಗೆ ತಿರುಗಿದ ಬರಿಯನುಳ್ಳ ಕಟಿಯದು ಛಿನ್ನಂ || ಲಾಸ್ಯರಂ /೯೬, ೯೭

[18] ಧರೆಯೊಳ್ ಸಾಜದಿನೊಂದಿದ (ಸಮ, ಅಂಚಿತ, ಕುಂಚಿತ, ಪಾದ)
ಚರಣಂಗಳ್ ಸಮಮನಿಪ್ಪಪೆಸರಂ ಪಡೆಗುಂ
ಬೆರಲ್ಗಳ್ ಪಸರಿಸೆಮಂತೆ
ತ್ತಿರೆ ಕೇಳ್ ಮಡಮಿಳೆಯನೊಂದಲಂಚಿತಚರಣಂ ||
ಬೆರಲ್ಗಳ ಮಡಿದೂಱೆದು ಮುಂ
ತಿರೆ ಮಡವೇಳಲ್ಕೆ ಪಾದ ಮದುಕುಂಚಿತಮಂ |
ಲಾಸ್ಯರಂ /೧೦೩, ೧೦೪/ ಅಲ್ಲದೇ ನಾಟ್ಯಶಾ ೧೦/೨೫೩, ೨೫೮, ೨೬೧

[19] ಊರ್ಧ್ವಭುಜ (ತೋಳು) – ಲಾಸ್ಯರಂ. ೨/ಪು. ೨೬೦.

[20] ಖಲ್ಪ – ಪಿರಿದುಂ ಪಸಿದವನೊಳ್ ಮಿಗೆ|
ಕರರೋಗಿಯೊಳೆಯ್ದೆ ನೋಡಿ ಕೃಶಮಾದವನೊಳ್ ||
ಲಾಸ್ಯರಂ. /೧೩೪

ಕ್ಷಾಮ ಕರಬಾಗಲ್ಯಾಗುಳಿಸ
ಲ್ಕುರುಹಾಸಕ್ಕಳ್ಕೆಯಲ್ಲ ಕ್ಷಾಮಂ ಜಠರಂ || ಅದೇ

[21] (ಅ) ಕಂಪನಂ ವಲನಂ ಚೈವ ಸ್ತಂಭನೋದ್ದರ್ತನೇ ತಥಾ |
(ನಿ) ವಿವರ್ತನಂ ಚ ಪಂಚೈತಾ ನ್ಯೂರು ಕರ್ಮಾಣಿ ಕಾರಯೇತ್ ||
(ಲಾಸ್ಯರಂನಲ್ಲಿ ಕಂಪಿತ, ವಲಿತ, ಸ್ತಬದ್ಧ, ಉದ್ಪರ್ತಿತ, ನಿವರ್ತಿತ -೨/೧೩೮) ನಾಟ್ಯಶಾ.
/೨೩೯ (ಸಂ.ರಾಮಕೃಷ್ಣ ಕವಿ)

[22] ನಮನೋನ್ನಮನಾತ್ಪಾರ್ಷ್ಲೀರ್ಮುಹುಃ ಸ್ವಾದೂರುಕಂಪನಮ್ |
ಗಚ್ಚೇದಭ್ಯಂತ ರಾಜ್ಜಾನು ಯತ್ರ ತದ್ದಲನಂ ಸ್ಮೃತಮ್ | ಅದೇ ೨೪೦

[23] ನಮನೋನ್ನಮನಾತ್ಪಾರ್ಷ್ಲೀರ್ಮುಹುಃ ಸ್ವಾದೂರುಕಂಪನಮ್ |
ಗಚ್ಚೇದಭ್ಯಂತ ರಾಜ್ಜಾನು ಯತ್ರ ತದ್ದಲನಂ ಸ್ಮೃತಮ್ | ಅದೇ ೨೪೦

[24] ಆವರ್ತಿತಂ ನತಂ ಕ್ಷಿಪ್ತ ಮುದ್ಪಾಹಿತ ಮಥಾ ಪಿ.ವಾ
ಪರಿವೃತ್ತಂ ತಥಾ ಚೈವ ಜಂಘಾಕರ್ಮಾಣಿ ಪಂಚಧಾ ||
ನಾಟ್ಯಶಾ./೨೪೬. (ಲಾಸ್ಯರಂ.ನಲ್ಲಿ ೧೦ ವಿಧ ಜಂಘೆ)

[25] ನತ, ಕ್ಷಿಪ್ತ ಜಂಘಗಳು.
ನತಂ ಸ್ಯಾಜ್ಜಾನು ನಮನಾತ್ ಕ್ಷಿಪ್ತಂ ವಿಕ್ಷೇಪಣಾಹ್ವಹಿಃ
ನಾಟ್ಯಶಾ. /೨೪೯ರ ಮೊದಲ ಸಾಲು

[26] ನತ, ಕ್ಷಿಪ್ತ ಜಂಘಗಳು.
ನತಂ ಸ್ಯಾಜ್ಜಾನು ನಮನಾತ್ ಕ್ಷಿಪ್ತಂ ವಿಕ್ಷೇಪಣಾಹ್ವಹಿಃ
ನಾಟ್ಯಶಾ. /೨೪೯ರ ಮೊದಲ ಸಾಲು

[27] ನೀರಾಜನ ವಿಧೌಬಾಲಫಲಾದಿಗ್ರಹಣೇತಥಾ |
ಸಂಧ್ಯಾಯಾಮರ್ಘ್ಯದಾನೇಚ ಮಂತ್ರಪುಷ್ಪೇ ನಿಯೋಜಯೇತ್ ||
ಅಭಿದ.೧೯೧/೧೯೭೪ (ಸಂ. ಶ್ರೀಧರಮೂರ್ತಿ)

[28] ನರ್ತನಿ.- ಪು. ೮೫

[29] Kauta and the Koota maana, are but two pieces in the conventional and the procedurial of repertoire of twelve compositions called Natyadvadhasanga.
Bharata Natya a Critical Study, R. Satyanarayana (Mysore) p.195