ಮೂರು ವಿಧವಾದ ಆಂಗಿಕಾಭಿನಯವನ್ನೂ ಹೇಳಬಹುದು. ಶಾಖಾ, ಅಂಗ ಹಾಗೂ ಉಪಾಂಗಗಳಿಂದ ಕೂಡಿದ ಆಂಗಿಕಾಭಿನಯವು ಶಾರೀರ, ಮುಖಜ ಹಾಗೂ ಚೇಷ್ಟಾಕೃತ ಎಂದು ಮೂರು ವಿಧ

[1]; ಶಾರೀರವು ಮುಖವನ್ನು ಉಳಿದು ಮಾಡುವ ಅಭಿನಯ; ಮುಖಜ ಮುಖದಿಂದ ಮಾಡುವಂತಹ ಭಾವರಸಗಳ ಅಭಿನಯ; ಚೇಷ್ಟಾಕೃತವು ಆಂಗಿಕಾಭಿನಯದಿಂದ ಉಂಟಾಗುವಂತಹ ಚಲನವಲನಗಳು.

ಅವನದ್ಧ ವಾದ್ಯಗಳ ಹಿಮ್ಮೇಳಕ್ಕೆ ಸರಿಯಾಗಿ ನರ್ತಕಿಯರು ನರ್ತಿಸಿದುದನ್ನು ರನ್ನ ವಿವರವಾಗಿ ಹೇಳುತ್ತಾನೆ. (ನೋಡಿ ಅ.೨) ಮುಂದಿನ ವಚನದಲ್ಲಿ ನರ್ತಕಿಯರ ಅಂಗ ಪ್ರತ್ಯಂಗಗಳ ಚಲನೆಯನ್ನು ಹೇಳುತ್ತಾನೆ. ಮೊದಲಿಗೇ ಪ್ರತ್ಯಂಗವಾದ ನೇತ್ರ ಚಲನೆಯನ್ನು ಹೇಳುತ್ತಾನೆ. (ವಾದ್ಯಕ್ಕುಪಗತಮಾಗೆ ಮೂವತ್ತಾಱು ದೃಷ್ಟಿ ವಿಕಲ್ಪದೊಳಂ) (೫-೩೨)

ರನ್ನ ನಾಟ್ಯಶಾ.ವನ್ನೇ ಆಧಾರವಾಗಿಟ್ಟುಕೊಂಡು ಮೂವತ್ತಾರು ದೃಷ್ಟಿಭೇದಗಳನ್ನು ಹೇಳುತ್ತಾನೆ. ಇವುಗಳಲ್ಲಿ ಎಂಟು ವಿಧ ರಸದೃಷ್ಟಿ, ಎಂಟು ವಿಧ ಸ್ಥಾಯಿ ಭಾವದೃಷ್ಟಿ ಹಾಗೂ ಇಪ್ಪತ್ತು ವಿಧ ಸಂಚಾರಿ ದೃಷ್ಟಿಗಳನ್ನು ಒಟ್ಟಿಗೇ ಸೇರಿಸಿ ಹೇಳುತ್ತಾನೆ.[2] ಮುಂದೆ ಹದಿಮೂರು ಶಿರೋಭೇದ ಹಾಗೂ ಏಳು ಹುಬ್ಬಿನ ಭೇದಗಳನ್ನು ಹೇಳುತ್ತಾನೆ. (——ಪದಿಮೂರು ಶಿರೋ ವಿನ್ಯಾಸದೊಳಂ ಏಱು ಭ್ರೂರೇಚಿತದೊಳಂ)

ಅವು ಆಕಂಪಿತ, ಕಂಪಿತ, ಧುತ, ವಿಧುತ, ಪರಿವಾಹಿತ, ಆಧೂತ, ಅವಧೂತ, ಅಂಚಿತ, ನಿಹಂಚಿತ, ಪರಾವೃತ್ತ, ಉತ್ಷಿಪ್ತ, ಅಧೋಗತ ಹಾಗೂ ಲೋಲಿತ ಎಂದು ಹದಿಮೂರು ವಿಧಗಳಿವೆ.[3] ಈ ಹದಿಮೂರು ಶಿರಸ್ಸಿನ ಚಲನೆಯ ನಂತರ ಉತ್‌ಕ್ಷೇಪ, ಪಾತನ (ಪತಿತ), ಭ್ರುಕುಟೀ, ಚತುರ, ಕುಂಚಿತ, ರೇಚಿತ, ಸಹಜ ಎಂಬ ಏಳು ವಿಧವಾದ ಹುಬ್ಬಿನ ಚಲನೆಯನ್ನು ಇಂದ್ರ ಮಾಡುತ್ತಾನೆ.

ಮುಂದೆ ಉಪಾಂಗಗಳಾದ ಮೂಗು, ತುಟಿ, ಗದ್ದ ಹಾಗೂ ಕುತ್ತಿಗೆಯ ಚಲನೆಯ ಭೇದವನ್ನು ಹೇಳುತ್ತಾನೆ. ಮೂಱು ನಾಸಿಕಾಸ್ಪುರಿತದೊಳಂ, ಮೂಱು ಮಧರಸ್ಪಂದದೊಳಂ ಮೂಱು ಚುಬುಕ ವಿಕಾರದೊಳ ಮೊಂಬತ್ತು ಗ್ರೀವಾಭಂಗಿಯೊಳಂ ನಾಟ್ಯಶಾ. ಹಾಗೂ ಮಾನಸ. ಗಳಲ್ಲಿ ಮೂಗು, ತುಟಿ ಹಾಗೂ ಗದ್ದದ ಭೇದವು ಕ್ರಮವಾಗಿ ಆರು ಹಾಗೂ ಏಳು ತರಹ ಇದೆ.[4] ಆದರೆ ರನ್ನ ಮೂಗು ತುಟಿ ಹಾಗೂ ಗದ್ದಗಳ ಭೇದಗಳಲ್ಲಿ ಇಂದ್ರನು ಪ್ರತಿಯೊಂದರಲ್ಲೂ ಮೂರು ವಿಧಗಳಲ್ಲಿ ಮಾಡಿದನೆಂದು ಹೇಳುತ್ತಾನೆ. ಅಲ್ಲದೆ ಒಂಬತ್ತು ವಿಧವಾದ ಕುತ್ತಿಗೆಯ ಚಲನೆ[5]ಗಳನ್ನೂ (ಸಮ, ನತಾ, ಉನ್ನತಾ, ತ್ರ‍್ಯಸ್ರಾ, ರೇಚಿತಾ, ಕುಂಚಿತಾ, ಅಂಚಿತಾ, ವಲಿತಾ, ನಿವೃತ್ತಾ) ಮಾಡಿದನೆಂದು ಹೇಳುತ್ತಾನೆ.

ರನ್ನ ಉಪಾಂಗಾಭಿನಯದಿಂದ ಅಂಗಾಭಿನಯಕ್ಕೆ ಆರಂಭಿಸುತ್ತಾನೆ. ಆಱುವತ್ತು ನಾಲ್ಕು ಮಸ್ತಕ ಕ್ರಿಯೆಯೊಳಂ ಎಂದು ಪಠ್ಯವಿದೆ.[6] ಇದರ ಸರಿಯಾದ ಪಾಠ ಅಱುವತ್ತು ನಾಲ್ಕು ಹಸ್ತ ಕ್ರಿಯೆಯೊಳಂ ಎಂದು ಇರಬೇಕು. ನಾಟ್ಯಾಶಾ. ಮಾನಸ. ಹಾಗೂ ಸಂಗೀರ. ಮುಂತಾದ ಶಾಸ್ತ್ರ ಗ್ರಂಥಗಳು ಅಸಂಯುತ, ಸಂಯುತ ಹಾಗೂ ನೃತ್ತಹಸ್ತಗಳನ್ನು ಒಟ್ಟಾಗಿ ೬೪ ವಿಧವಾಗಿ ಹೇಳಿವೆ. (ನೋಡಿ ಅನುಬಂಧ ಅ. ಪರಿಭಾಷೆ)

ಹಸ್ತಾಭಿನಯದ ನಂತರ ಇಂದ್ರ ಆಯ್ದ ಪಾರ್ಶ್ವವಿಧಿಯೊಳಂ ಮೂಱುಮುದರ ಕರ್ಮದೊಳಮೈದು ಕಟೀ ವಿಧಾನದೊಳಮೈದು ಮೂಱು ವಿಲಸಿತ ದೊಳಮೈದು ಪದ ಸಂಚಾರದೊಳ್ ನೆಱೆದು (೩೨) ಆಂಗಿಕ ಅಭಿನಯವನ್ನು ಮಾಡಿದನೆಂದಿದೆ.

ನತ, ಸಮುನ್ನತ, ಪ್ರಸಾರಿತ, ವಿವರ್ತಿತ, ಅಪಸೃತ ಈ ಐದು ಪಕ್ಕೆಯ ಚಲನೆಗಳನ್ನೂ ಕ್ಷಾಮ, ಖಲ ಹಾಗೂ ಪೂರ್ಣವೆಂಬ ಹೊಟ್ಟೆಯ ಚಲನೆಯನ್ನೂ, ಭಿನ್ನ, ನಿವೃತ್ತ, ರೇಚಿತ, ಕಂಪಿತ, ಉದ್ಪಾಹಿತ ಎಂಬ ಐದು ಸೊಂಟದ[7] ಚಲನೆಗಳನ್ನು ಇಂದ್ರ ಮಾಡಿದನೆಂಬುದು ಕವಿಯ ಇಂಗಿತ.

ಪುನಃ ಕವಿ ಮೂರು ವಿಲಸಿತಗಳನ್ನು[8] ಹೇಳುತ್ತಾನೆ. ವಿಲಸಿತ ಎನ್ನುವುದು ನೃತ್ಯ, ಕ್ರೀಡೆ, ಅಭಿನಯಾತ್ಮಕ ಸಂಜ್ಞೆ ಎಂದು ಅರ್ಥ. ವಿಲಸಿತವು ಸ್ತ್ರೀಯರ ಲಾವಣ್ಯಭರಿತ ನೃತ್ಯಕ್ಕೆ ಹೆಚ್ಚಾಗಿ ಹೊಂದುವಂತಹ ವಿಧಾನ. ರನ್ನ ಇಂದ್ರನ ನೃತ್ಯದಲ್ಲಿ ಈ ರೀತಿಯಲ್ಲಿ ಹೇಳುವುದು ಇಲ್ಲಿ ಸಮಂಜಸವೆನಿಸುವುದಿಲ್ಲ. ಇಲ್ಲಿಂದ ಮುಂದೆ ಉದ್ಘಟ್ಟಿತವಾದ ಸಂಚಾರವನ್ನು ಕವಿ ಹೇಳುತ್ತಾನೆ. ರನ್ನನ ವಚನ ಭರತನ ಉಪಾಂಗಾಭಿನಯದ ಅಧ್ಯಾಯದ ಪ್ರತಿರೂಪದಂತಿದೆ.

ತಲೆಯಿಂದ ಪಾದದವರೆಗೆ ಪ್ರತಿಯೊಂದು ಅಂಗಗಳ ಚಲನೆಯೂ ಆಯಾ ಭಾವಕ್ಕೆ, ಸಂದರ್ಭಕ್ಕೆ ಸರಿಸಾಟಿಯಾದ ಚಲನೆಯನ್ನು ಹೊಂದಿದ್ದರೆ ಅದನ್ನು ಅಂಗಶುದ್ಧ ನೃತ್ಯವೆಂದು ಹೇಳುತ್ತಾರೆ. ಇಂತಹ ಅಂಗಶುದ್ಧ ನೃತ್ತದಿಂದ ನರ್ತಕನಿಗೂ, ಪ್ರೇಕ್ಷಕರಿಗೂ ಚಿತ್ತವು ವಿಕಾಸಹೊಂದಿ, ಮೋಕ್ಷದತ್ತ ಅದು ಕರೆದೊಯ್ಯುವುದು ಎಂದು ಶಾಸ್ತ್ರಕಾರರ ಮತ.

ಇಲ್ಲಿಯವರೆಗೆ ಮಾರ್ಗ ಶೈಲಿಯ ನೃತ್ಯವನ್ನು ವರ್ಣಿಸಿದ ರನ್ನ ಮುಂದಿನ ಪದ್ಯಗಳಲ್ಲಿ ದೇಶೀ ಶೈಲಿಯ ನೃತ್ಯಗಳನ್ನು ವರ್ಣಿಸಲು ಆರಂಭಿಸುತ್ತಾನೆ.

ಪೊಸತೆನಿಪ ಸುರಗೆವೆಕ್ಕಣ
ಮೆಸೆದಿರೆ ಕಡುವೊಸತು ಬಣ್ಣಸರಮೆಸೆದಿರೆನಿ
ಪ್ಪೊಸತೆನಿಪ ದೇಸೆ ಮಾಸರ
ಮೆಸೆದಿರೆ ಸಭೆ ಮೆಚ್ಚಿ ಪೊಚ್ಚ ಪೊಸತಾಯ್ತುರಸಂ (೩೩)

ಪಠ್ಯದಲ್ಲಿ ಕಡುವೊಸತು ಬಣ್ಣ ರಸ ಮೆಸೆದರಿರೆ ಎಂದಿದೆ. ಆದರೆ ಇದು ಬಣ್ಣ ಸರ ಎಂದಾದರೆ ಪದ್ಯದ ಅರ್ಥ ಸಂದರ್ಭಕ್ಕೆ ಸರಿಯಾಗಿ ಆಗುವುದು. ವರ್ಣಸ್ವರದ ರೂಪಾಂತರ ಬಣ್ಣಸರ. ತೇನ, ಪಾಟ, ಪದ, ಮುಕ್ತಾಯಗಳಿದ್ದು ವರ್ಣತಾಲದಲ್ಲಿ ಕೂಡಿರುವುದು ವರ್ಣಸ್ವರ.[9] ಇಂತಹ ಬಣ್ಣಸರವು ಹೊಸದಾಗಿ ನುಡಿಯುತ್ತಿರಲು, ಅದಕ್ಕೆ ತಾಳೆಯಾಗುವಂತೆ ನರ್ತಕಿಯರೂ ಹೊಸದಾದ ಸುರಗೆವೆಕ್ಕಣವೆಂಬ ದೇಸಿ ನಾಟ್ಯವನ್ನು ಆಡಿದರು. ಸುರಗೆವೆಕ್ಕಣವೆಂಬ ನೃತ್ಯವನ್ನು ಮೊತ್ತ ಮೊದಲ ಬಾರಿಗೆ ರನ್ನ ಬಳಸುತ್ತಾನೆ. ಚೂರಿಯನ್ನು ಹಿಡಿದು ನರ್ತಿಸುವ ದೃಶ್ಯ ಸುರಗೆವೆಕ್ಕಣ (ಸುರಗೆ+ಪೆಕ್ಕಣ=> ಪ್ರೇಕ್ಷಣ) ಅಲ್ಲಿಯ ಸಭೆ ಅದನ್ನು ಅನುಭವಿಸಿ, ಆನಂದಿಸಿತು ಎಂದೂ ಕವಿ ಹೇಳುತ್ತಾನೆ.

ಸಂಗೀರ. ಹಾಗೂ ಮಾನಸ.ಗಳು ಕೊಲ್ಲಟಿಗನೆಂಬ ನರ್ತಕನ ಮಾದರಿಯನ್ನು ಹೇಳುತ್ತವೆ. ಕೊಲ್ಲಟಿಗನು ಹಗ್ಗದ ಮೇಲೆ ನಡೆಯುವವನು, ಭ್ರಮರಿಗಳನ್ನು ಚೆನ್ನಾಗಿ ಬಲ್ಲವನು ಜಾಣಾಕ್ಷನೂ, ಭಾರವನ್ನು ಹೊತ್ತು ನರ್ತಿಸುವವನು, ಶಸ್ತ್ರಗಳನ್ನು ಬಳಸುವನು, ಚೂರಿಯನ್ನು ಹಿಡಿದು ನರ್ತಿಸುವಲ್ಲಿ ಕುಶಲನು.[10] ಕೈಗಳಲ್ಲಿ ಚೂರಿಯನ್ನು ಹಿಡಿದು ನರ್ತಿಸುವ ಈ ನೃತ್ಯ ಈಗ ಪ್ರಸಿದ್ಧವಾಗಿರುವ ಜನಪದ ನೃತ್ಯವಾದ ವೀರಗಾಸೆ ನೃತ್ಯವನ್ನು ನೆನಪಿಗೆ ತರುತ್ತದೆ. ಹೀಗೆ ಹೊಸರಾಗ, ಹೊಸ ದೇಸಿ ನೃತ್ಯವನ್ನು ಚೊಕ್ಕವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕವಿ ಚಿತ್ರಿಸಿದ್ದಾನೆ.

ಮುಂದೆ ಅಪ್ಸರೆಯರು ದೇವೇಂದ್ರನೊಡನೆ ವಿಚಿತ್ರ ಎಂಬ ನೃತ್ಯ ಪ್ರಕಾರವನ್ನು ನರ್ತಿಸಿದ ಬಗ್ಗೆ ಕವಿ ಹೇಳುತ್ತಾನೆ.

ವಿವಿಧ ಮಣಿ ಕಿಂಕಿಣೀಗಣ
ರವಮೆಸೆವಿನಮಮರರಾಜನೊಡನೊಡನೆ ಮಹೋ
ತ್ಸವದಿಂ ತಾಳಲಯಕ್ರಮ
ಕೆ ವಿಚಿತ್ರಂ ಮೆಟ್ಟಿಸುತ್ತುಮಮರಗಜೇಂದ್ರಂ    (೩೬)

ವಿಚಿತ್ರ (ನೋಡಿ ಅನುಬಂಧ ಅ. ಪರಿಭಾಷೆ) ಎಂಬ ನೃತ್ಯ ಪ್ರಕಾರವನ್ನು ತಾಳಲಯಗಳಿಗೆ ಅನುಗುಣವಾಗಿ ಅಪ್ಸರೆಯರು ನರ್ತಿಸುತ್ತಿದ್ದರೆ ಅವರು ಧರಿಸಿದ ಮಣಿ ಕಿಂಕಿಣಿಗಳ ಧ್ವನಿಯೂ ಅದೇ ತಾಳಲಯವನ್ನು ಝಣತ್ಕರಿಸುತ್ತಿತ್ತು.

ಜಿನನಾಗಲಿರುವ ಅಜಿತನಾಥನ ಜನ್ಮಾಭಿಷೇಕದಲ್ಲಿ ಪಾಲ್ಗೊಂಡಿರುವ ಸಭಾ ಜನಗಳಿಗೆ ಅಪ್ಸರೆಯರೂ ಗಂಧರ್ವರೂ ರಸಸ್ಯಂದಿಯಾಗಿ ಬೆಡಗು, ಬಿಂಕ, ಬಾಗುಗಳಿಂದ ಹಾಗೂ ಸಪ್ರಮಾಣ ಪ್ರಯೋಗದಿಂದ ಸರ್ವರೂ ಒಂದೇ ಕೊರಳಿನಲ್ಲಿ ಹಾಡಿ, ನರ್ತಿಸಿ, ಜನಗಳ ಮನವನ್ನು ತಣಿಸಿದರೆಂದು ಮುಂದಿನ ಪದ್ಯದಲ್ಲಿ ಹೇಳುವ ರನ್ನ ಸಂಗೀತ ಹಾಗೂ ನೃತ್ಯದ ಹಿರಿಮೆಯನ್ನು ಕೊಂಡಾಡಿದ್ದಾನೆ. (೫-೪೦)

ಪವಣ್ ಪದದ ಬಳಕೆಯ ಬಗ್ಗೆ ಕಿಂಚಿತ್ ವಿವೇಚನೆ. ಪವಣ್ ಅಥವಾ ಪ್ರಮಾಣವರಿತ ಪ್ರಯೋಗ ಸದಾಕಾಲ ಯಶಸ್ಸನ್ನು ತರುತ್ತದೆ. ನೃತ್ತದಲ್ಲಿ ಅಂಗಾಂಗಗಳ ಅರ್ಥಾತ್‌ಪಾದ, ಕಟಿ, ಶಿರ, ಹಸ್ತ ಹಾಗೂ ಕಣ್ಣುಗಳು ಪ್ರಮಾಣ ಬದ್ಧವಾದ ಚಲನೆಯನ್ನು ಹೊಂದಿದ್ದರೆ ಅಂಥ ನೃತ್ತವು ನೋಡಲು ಆಕರ್ಷಕವೂ, ಶುಭಪ್ರದವೂ ಆಗಿ ಅಂಗಶುದ್ಧಿಯ[11] ಮಹತ್ತನ್ನು ಹೇಳುತ್ತದೆ. ಪ್ರಮಾಣ ಬದ್ಧವಾದ ಗಾಯನವೂ ಶ್ರುತಿಸುಖಕರ, ಲಯಾನುಸಾರಿ ಆಗಿದ್ದರೆ ಶ್ರವಣಾನಂದವನ್ನು ಕೊಡುತ್ತದೆ.

ಮುಂದಿನ ಪದ್ಯದಲ್ಲಿ ಅಮರ ನರ್ತಕಿಯರ ತಾಳ, ಲಯ ಜ್ಞಾನವನ್ನು ರನ್ನ ವೈಭವೀಕರಿಸುತ್ತಾನೆ.

ತಡದಡವಾರದೆ ಗತಿಯೊಳ್
ತೊಡರದೆ ರಂಜಿಸಿದರ ಮಲಂಜಿಕೆಯರ್ ಜಾ
ಣ್ಗಿಡದಾಡಿ ಮೊದಲ ತಾಣದೊ
ಳೆಡೆಯೊತ್ತಿನೊಳೆಸೆವ ಕಡೆಯ ತಾಳದ ಯತಿಯೊಳ್   ||           (೪೧)

ಅಪ್ಸರೆಯರು ಅತಿ ಚಾತುರ್ಯದಿಂದ ಗತಿಯನ್ನು ಅನುಸರಿಸುತ್ತ ಎಲ್ಲಿಯೂ ತಡೆಯದೆ ತಾಳಲಯಗಳಿಗೆ ಅನುಸಾರವಾಗಿ ನರ್ತಿಸಿದರು. ಗತಿಯು (ನೋಡಿ ಅನುಬಂಧ ಅ. ಪರಿಭಾಷೆ) ಸಂಗೀತ (ನೃತ್ಯ)ದಲ್ಲಿ ಬರುವ ಕಾಲಮಾನ ೩, ೪, ೫, ೭, ೯ ಈ ಅಕ್ಷರಗಳಿಗೆ ಅನುಸರಿಸಿ ಕ್ರಮವಾಗಿ ತ್ರಿಶ್ರ, ಚತುರಶ್ರ, ಖಂಡ, ಮಿಶ್ರ ಹಾಗೂ ಸಂಕೀರ್ಣವೆಂಬ ೫ ಗತಿಗಳು ಎಲ್ಲ ತಾಳಗಳಿಗೂ ಒದಗುತ್ತವೆ. ಒಂದು ನಿರ್ದಿಷ್ಟವಾದ ತಾಳವು ಉದಾಹರಣೆಗೆ ಚತುರಶ್ರ ಜಾತಿ ತ್ರಿಪುಟತಾಳ. ಇದರ ಅಕ್ಷರಕಾರವು ೮ ಅಕ್ಷರ. ಈ ತಾಳಕ್ಕೆ ತ್ರಿಶ್ರಗತಿಯು ಲಭಿಸಿದರೆ ಎಂಟೂ ಅಕ್ಷರಗಳಿಗೆ ಮೂರು ಮಾತ್ರಾಕಾಲ ಒದಗಿ ಒಟ್ಟು ೨೪ ಮಾತ್ರೆಗಳ ಅಕ್ಷರಕಾಲವಾಗುತ್ತದೆ. ಇದಕ್ಕೆ ವಿಲಂಬಿತ (೨೪ ಅಕ್ಷರ) ಮಧ್ಯಮದಲ್ಲಿ ೪೮ ಅಕ್ಷರಕಾಲ, ದ್ರುತದಲ್ಲಿ ೯೬ ಅಕ್ಷರಕಾಲಗಳು ಒಂದು ಆವರ್ತಕ್ಕೆ ಲಭಿಸುತ್ತದೆ. ಇದೇ ರೀತಿ ಉಳಿದ ಗತಿಗಳೂ ಒಂದು ತಾಳಕ್ಕೆ ಒದಗುತ್ತದೆ.

17_6_PP_KUHಅಪ್ಸರೆಯರು ಗತಿಯಷ್ಟೇ ಅಲ್ಲದೆ ಯತಿ (ನೋಡಿ ಅ. ೨.ಆ) ಗಳಿಗೂ ಸ್ವಲ್ಪ ಕೂಡ ತೊಡರದೆ ನರ್ತಿಸಿದರು. ಹೀಗೆ ನರ್ತಿಸುವ ಅಪ್ಸರೆಯರ ಕಾಲ್ಗೆಜ್ಜೆಯ ರವಳಿ ಹಂಸಗಳ ಕಲರವಕ್ಕೂ ಮಿಗಿಲಾಗಿತ್ತು ಎಂದು ರನ್ನ ಸೊಗಸಾದ ಉಪಮೆಯನ್ನು ಕೊಟ್ಟು ಬಣ್ಣಿಸಿದ್ದಾನೆ.

ರಂಜಿಸುವ ಹಂಸರವ ಮುಂ |
ರಂಜಿಸದಿನ್ನಿದಿಱ ಕೆಲದೊಳೆಂಬಿನೆಗಮಂದೇಂ |           (೪೨ ಪೂ.)

ಚೆಲುವೆಯರಾದ ಅಪ್ಸರೆಯರು ಇಂದ್ರನ ಜೊತೆ ಸಾಮೂಹಿಕವಾಗಿ ಲೀಲಾ ನೃತ್ಯವನ್ನು ಕುಣಿದರು ಎಂದು ಮುಂದಿನ ಪದ್ಯದಲ್ಲಿ ಹೇಳುತ್ತಾನೆ. ಲೀಲಾ ನೃತ್ಯ (ನೋಡಿ ಅನುಬಂಧ ಅ. ಪರಿಭಾಷೆ) ಎಂದು ಹೇಳಿದ ಕವಿಯ ಇಂಗಿತವನ್ನು ಎರಡು ವಿಧವಾಗಿ ತೆಗೆದುಕೊಳ್ಳಬಹುದು. ಲೀಲಾ ಸ್ತ್ರೀಯರ ಸ್ವಾಭಾವಿಕ ಲಾವಣ್ಯಗಳಲ್ಲಿ ಒಂದು; ಲೀಲಾ ಒಂದು ದೇಶೀಕರಣವೂ ಹೌದು. ಹೀಗೆ ಲೀಲೆಯಿಂದ ಗುಂಪಾಗಿ ನರ್ತಿಸುವುದನ್ನು ರನ್ನ ಗೊಂದಳದಲ್ಲಿ ಕುಣಿದರು ಎಂದು ಹೇಳುತ್ತಾನೆ.

ಯೌವನವತಿಯರಾದ ಅಪ್ಸರೆಯರ ನರ್ತನವನ್ನು ಕವಿ ರತಿ ಮನ್ಮಥರ ಹೂವಿನ ಬಾಣಗಳ ಎಸೆದಾಟಕ್ಕೆ ಹೋಲಿಸುತ್ತಾನೆ. (೫-೪೪) ಹೀಗೆ ಜಿನಪತಿಯ ಮುಂದೆ ಇಂದ್ರನು ತಾಂಡವ ಹಾಗೂ ಲಾಸ್ಯ ಈ ಎರಡೂ ಭೇದಗಳನ್ನೂ, ಮಾರ್ಗ ಹಾಗೂ ದೇಸಿ ಎರಡು ಪ್ರಕಾರದ ನೃತ್ಯಗಳನ್ನು ಆಡಿ ಇತರ ಅಮರ ನರ್ತಕಿಯರಿಂದ ಆಡಿಸಿ ರಂಜಿಸುತ್ತಿದ್ದನೆಂದಿದೆ.

ರನ್ನ ಪುನಃ ಜಿನನ ಕೇವಲ ಜ್ಞಾನ ಸಮಾರಂಭದಲ್ಲಿ ನಾಟಕಶಾಲೆ, ಅಲ್ಲಿ ನರ್ತಿಸುವ ನರ್ತಕಿಯರ ಪ್ರಸ್ತಾಪವನ್ನು ತಂದಿದ್ದಾನೆ. ಎಲ್ಲ ಜೈನ ಕಾವ್ಯಗಳಲ್ಲೂ ಬರುವಂತೆ ನಗರ ವರ್ಣನೆ ಹಾಗೂ ನಾಟಕ ಶಾಲೆಯ ಅತಿಯಾದ ವೈಭವೋಪೇತವಾದ ವರ್ಣನೆ ಇವನ್ನು ಮಾಡುತ್ತಾನೆ. (ಅಜಿಪು. ೭ ಅ. ಪು. ೧೨೮-೩೧) ಜಿನ ಜನ್ಮಾಭಿಷೇಕ, ಜಿನಚರಿತೆಗಳನ್ನು ಗೀತ ಹಾಗೂ ನರ್ತನದಿಂದ ಮಾಡಿದರು ಎಂದು ಕವಿ ಹೇಳುತ್ತಾನೆ.

) ಎರಡನೆಯ ನಾಗವರ್ಮನ ವರ್ಧಮಾನ ಪುರಾಣದಲ್ಲಿ (. ೧೦೪೨):

ಇಂದ್ರನು ರಂಗ ಪ್ರವೇಶದ ನಂತರ ಪುಷ್ಪಾಂಜಲಿಯನ್ನು ಮಾಡಿ ವೈಶಾಖ ಸ್ಥಾನದಲ್ಲಿ (ಅ.೨. ಉ ಚರ್ಚಿಸಿದೆ) ನಿಂತು ತನ್ನ ನೃತ್ತವನ್ನು ಆರಂಭಿಸುತ್ತಾನೆ.

————ರಸವಾದಿಯಂತೆ () ನರ್ತನಂಗೆಯ್ದು ವೈಯಾಕರಣನಂತೆ
ವೃತ್ತಿಯನಱುದು ಜೋಯಿಸಿಗನಂತೆ ಕರಣಾಂತರ ಪ್ರವೀಣನಾಗಿ
(
೧೨೪೮ .)

ರಸ ಸಿದ್ಧಾಂತವನ್ನೇ ಪ್ರೇಕ್ಷಕರಿಗೆ ಮನದಟ್ಟು ಮಾಡುವಂತೆ ಇಂದ್ರ ರಸಭರಿತವಾಗಿ ನರ್ತಿಸಿದ ಎಂಬ ಒಂದು ಅರ್ಥವನ್ನು ಮೇಲಿನ ವಚನಕ್ಕೆ ಮಾಡಬಹುದು. ರಸವಾದಿಯೆಂದರೆ ಚಿನ್ನ, ಬೆಳ್ಳಿ ಮುಂತಾದುವನ್ನು ಕೀಳು ಲೋಹ (ಉದಾ. ಕಬ್ಬಿಣ)ದಿಂದ ತಯಾರು ಮಾಡುವಾತ ಎಂಬ ಅರ್ಥ ಬಂದು ಮುಂದೆ ವರ್ತನಂ ಗೆಯ್ದು ಎಂಬಲ್ಲಿ ಸಂದರ್ಭಕ್ಕೆ ತಕ್ಕ ಸಮಾಧಾನ ಈ ಪಾಠದಿಂದ ದೊರೆಯುವುದಿಲ್ಲ. ಆದ್ದರಿಂದ ರಸವಾದಿಯಂತೆ ನರ್ತನಂಗೆಯ್ದು ಎಂಬ ಪಾಠ ಸಮರ್ಪಕವಾಗುವುದು.

ಮುಂದೆ ವೈಯಾಕರಣನಂತೆ ವೃತ್ತಿಯ ನಱೆದು ಎಂದು ಹೇಳುತ್ತಾನೆ. ವ್ಯಾಕರಣದ ಪರಿಭಾಷೆಯಲ್ಲಿ ವೃತ್ತಿಯು ವಾಚ್ಯ, ಶಬ್ದ ಮತ್ತು ವ್ಯಂಗ್ಯಾರ್ಥಗಳನ್ನು ಕೊಡುವ ಶಬ್ದ ಸಾಮಥ್ಯ ಎನಿಸಿಕೊಳ್ಳುತ್ತದೆ. ಅಲ್ಲದೇ ಸೂತ್ರ ರೂಪದಲ್ಲಿನ ಸಿದ್ಧಾಂತಗಳಿಗೆ ಭಾಷ್ಯವನ್ನು ಬರೆಯುವುದನ್ನು ವೃತ್ತಿ[12] ಎನ್ನುತ್ತಾರೆ. ಇವುಗಳನ್ನು ಚೆನ್ನಾಗಿ ಅರಿತಾಗ ಭಾಷೆಯ ಬಿಗಿ, ಕಾವ್ಯ ರಚನಾ ಸಾಮರ್ಥ್ಯ ಒದಗುವುದು. ಅಂತೆಯೆ ನಾಟ್ಯದಲ್ಲಿರುವ ನಾಲ್ಕು ವೃತ್ತಿಗಳಾದ (ನೋಡಿ ಅಜಿಪು. ನೃತ್ಯ ಪ್ರಸಂಗ) ಆರಭಟಿ, ಭಾರತಿ, ಸಾತ್ಪಿತಿ ಹಾಗೂ ಕೈಶಿಕಿ ವೃತ್ತಿಯನ್ನು ಅರಿತಾಗ ಅಂತಹ ನೃತ್ಯ ಅಥವಾ ನಾಟ್ಯವು ರಸಪೂರ್ಣವಾಗಿರುತ್ತದೆ. ಇಂದ್ರನು ವೃತ್ತಿಗಳನ್ನು ಅರಿತು ನರ್ತಿಸಿದ ಎಂದು ಕವಿಯ ಅಭಿಪ್ರಾಯ. ಇಂದ್ರನು ತನ್ನ ನೃತ್ಯದಲ್ಲಿ ಹಸ್ತಗಳನ್ನು ಹಿಡಿಯುವಾಗ ವಿವಿಧ ರೀತಿಯ ಹಸ್ತಕರಣಗಳನ್ನು ಮಾಡುತ್ತಿದ್ದರೆ ಆತ ಜೋಯಿಸಿಗನಂತೆ ಕಂಡನೆಂದು ಕವಿ ಹೇಳುತ್ತಾನೆ.

ಹಸ್ತಗಳನ್ನು ಹಿಡಿಯುವಾಗ ತೋರುಬೆರಳಿನಿಂದ ಅಂಗುಷ್ಠದವರೆಗೆ ಬೆರಳುಗಳನ್ನು ಮಡಚುವ, ಹೊರಕ್ಕೆ ಚಾಚುವ ಕ್ರಿಯೆಯನ್ನು ಶಾಸ್ತ್ರಜ್ಞರು ಪ್ರಾಸಾರಿತ ಹಸ್ತಕರಣ ಎಂದಿದ್ದಾರೆ. ಇವು ನಾಲ್ಕು ವಿಧ.[13]

() ಆವೇಷ್ಟಿತ ಅಂಗುಷ್ಟ ಮೊದಲಾದ (ಹೆಬ್ಬೆರಳು) ಬೆರಳುಗಳು ಅಂಗೈ ಒಳಕ್ಕೆ ಮಣಿಯುವುದು ; () ಉದ್ದೇಷ್ಟಿತ ಬೆರಳುಗಳು ಪಕ್ಕಕ್ಕೆ ಎದ್ದು ನಿಲ್ಲುವುದು; () ವ್ಯಾವರ್ತಿತ ಬೆರಳುಗಳು ಕೆಳಬದಿಗೆ ಸುತ್ತುವುದು ; () ಪರಿವರ್ತಿತ ಬೆರಳುಗಳು ಮೇಲ್ಪದಿಗೆ ಸುತ್ತುವುದು.

ಹೀಗೆ ಇಂದ್ರನು ತನ್ನ ಆನಂದ ನೃತ್ಯದಲ್ಲಿ ಹಸ್ತಗಳನ್ನು ಹಿಡಿಯಲು ಬೆರಳುಗಳನ್ನು ಮೇಲೆ ಹೇಳಿದ ರೀತಿಗಳಲ್ಲಿ ಚಲಿಸುತ್ತಿರಲು, ತಿಥಿ, ವಾರ, ನಕ್ಷತ್ರ, ಕರಣಗಳನ್ನು ಒಬ್ಬ ಪ್ರೌಢ ಜೋಯಿಸಿಗನು ಎಣಿಸಲು ತನ್ನ ಬೆರಳುಗಳನ್ನು ಚಲಿಸುವ ರೀತಿಯಲ್ಲೇ ಇತ್ತು ಎಂದು ಕವಿ ಹೇಳುತ್ತಾನೆ. ಈ ವರ್ಣನೆಯಲ್ಲಿ ಕವಿ ವಿರೋದಾಭಾಸಾಲಂಕಾರವನ್ನು ಬಳಸಿದ್ದಾನೆ.

ಮುಂದಿನ ಪದ್ಯದಲ್ಲಿ ಉಳಿದ ಕವಿಗಳು ಹೇಳಿದಂತೆ ಚತುರ್ವಿಧ ಅಭಿನಯವನ್ನು ಇಂದ್ರನ ನೃತ್ಯದಲ್ಲಿ ಹೇಳದೆ ಆಂಗಿಕ, ಆಹಾರ್ಯ ಹಾಗೂ ಸಾತ್ವಿಕ ಅಭಿನಯಗಳನ್ನು ಮಾತ್ರ ಹೇಳುತ್ತಾನೆ :

ಸಂಗತಮಾಗಿರೆ ರೇಚಕ
ದಾಂಗಿಕದಾಹಾರ್ಯದೆಸೆವ ಸಾತ್ವಿಕ () ವಿಭಾ
ವಂಗಳಭಿನಯಿಸಿದಂ ನೃ
ತ್ಯಂಗಳೊಳವಟ್ಟು ನೆಗಱೆ ದಶಶತನಯನಂ   (೧೨೫೦)

ಇಂದ್ರನು ನೃತ್ಯವನ್ನು ಮಾಡುತ್ತಿರಲು ಅವನು ಪ್ರದರ್ಶಿಸುವ ರೇಚಕ ಅಭಿನಯಿಸುವ ಆಂಗಿಕ, ಆಹಾರ್ಯ ಹಾಗೂ ಸಾತ್ವಿಕಾದಿಭಾವಗಳು (ನೋಡಿ ಅನುಬಂಧ ಅ. ಪರಿಭಾಷೆ) ವಿಭಾವಗಳ ಸಹಿತ ಅಭಿವ್ಯಕ್ತಿಗೊಂಡು ನೃತ್ಯದಲ್ಲಿ ಸಂಗತವಾಗಿ ಅಳವಟ್ಟು ಶೋಭಿಸುತ್ತಿತ್ತು ಎಂದು ಮೇಲಿನ ಪದ್ಯದ ಭಾವಾರ್ಥ. ಈ ವಿವರದಿಂದ ಕವಿಗೆ ನೃತ್ಯ ಹಾಗೂ ನಾಟಕದ ಪರಿಚಯ ಸಾಕಷ್ಟು ಇದ್ದಿರಬಹುದೆಂದು ಹೇಳಲು ಅಡ್ಡಿಯಿಲ್ಲ. ಏಕೆಂದರೆ ನೃತ್ಯವನ್ನು ಮಾಡುವಾಗ ವಾಚಿಕಾಭಿನಯದ ಅಗತ್ಯ ಇರುವುದಿಲ್ಲ. ವಾಚಿಕಾಭಿನಯವು ಸಂಭಾಷಣೆಯ ಮೂಲಕ ನಾಟ್ಯದಲ್ಲಿ ಕಡ್ಡಾಯವಾಗಿರಬೇಕಾದುದು. ಗೀತ ಅಥವಾ ಸಾಹಿತ್ಯದ ಮೂಲಕವೂ ವಾಚಿಕಾಭಿನಯ ನೃತ್ಯ ಹಾಗೂ ನಾಟ್ಯದಲ್ಲಿ ಇರುವುದು. ಪ್ರಸ್ತುತ ಸಂದರ್ಭದಲ್ಲಿ ಹಿನ್ನೆಲೆ ಗಾಯನವನ್ನು ವಾದನವನ್ನೂ, ಸುರಲೋಕದ ಗಾಯಕರೂ, ವಾದಕರೂ ನಿರ್ವಹಿಸುವುದರಿಂದ ಸಾಹಿತ್ಯದ ಅರ್ಥವನ್ನು ತಿಳಿದು ಇಂದ್ರನು ಆಂಗಿಕ, ಆಹಾರ್ಯ ಹಾಗೂ ಸಾತ್ವಿಕಾದಿಗಳನ್ನು ಪ್ರದರ್ಶಿಸಿದರೆ ಸಾಕು. ಆದ್ದರಿಂದ ಇಂದ್ರನು ಆಂಗಿಕ, ಆಹಾರ್ಯ ಹಾಗೂ ಸಾತ್ವಿಕಾದಿಗಳನ್ನು ಮಾಡುತ್ತಾನೆ. ಸಾತ್ವಿಕಾದಿ ಭಾವಗಳು ಉದ್ಭೋದಗೊಳ್ಳಲು ಬಲವಾದ ಕಾರಣ ಅಥವಾ ವಿಭಾವವಿರಲೇಬೇಕು. ನೃತ್ಯದಲ್ಲಿ ಹಸ್ತಾಭಿನಯ ಹಾಗೂ ಸಾತ್ವಿಕಾದಿ ಭಾವಗಳಿಂದ ವಿಭಾಗಳನ್ನು ವ್ಯಕ್ತಪಡಿಸಬಹುದು.

ಮುಂದಿನ ಪದ್ಯದಲ್ಲಿ ಇಂದ್ರನು ಕರಣ, ರೇಚಕ, ಚಾರಿ ಹಾಗೂ ಅಂಗಹಾರಗಳಿಂದ ಕೂಡಿದ ಶುದ್ಧ ನೃತ್ತವನ್ನು ಮಾಡಿದ ಬಗ್ಗೆ ಕವಿ ಹೇಳುತ್ತಾನೆ :

ಕರಣದ ರೇಚಕ ಕ್ರಿಯೆಯ ಚೆಲ್ಲಿಯ ಚಾರಿಗಳಂಗಹಾರದಾ
ವರಿಸಿದ ಭಂಗಿಗಳ್ ಮನದೆಗೊಂಡಿರೆ ತಾಳಲಯ ಕ್ರಮಂಗಳಂ
ತರಿಸದೆ ಕೊಡೆ ತೋಳ್ದುಱುಗಲೋಳಿಯೊಳಚ್ಚರಿಯಾಗೆ ನಚ್ಚಿನ
ಚ್ಚರಸೆಯರೆಕ್ಕೆಯಿಂದೊಡನೆ ನರ್ತಿಸಿದಂ ಸುರಾಧಿಪಂ (೧೨೫೨)

ಪಂಪನ ನಂತರ ಚೆಲ್ಲಿ ಪದವನ್ನು ಬಳಸಿರುವಾತ ಈತನೇ ಇಂದ್ರನು ತನ್ನ ತೋಳಿನ ಗುಂಪುಗಳಲ್ಲಿ ನರ್ತಿಸುತ್ತಿರುವ ಅಪ್ಸರೆಯರೊಡನೆ ಅಚ್ಚರಿಯಾಗುವಂತೆ ತಾಳಲಯ ಕ್ರಮವನ್ನು ಕರಣ, ಚಾರಿ, ಅಂಗಹಾರ, ರೇಚಕ ಹಾಗೂ ಚೆಲ್ಲಿಗಳನ್ನೂ (ನೋಡಿ ಅನುಬಂಧ ಅ. ಪರಿಭಾಷೆ) ಪ್ರದರ್ಶಿಸಿದನು. ಅಪ್ಸರೆಯರ ನರ್ತನ ಹಾಗೂ ಇಂದ್ರನ ನರ್ತನ ಎರಡರಲ್ಲೂ ತಾಳಲಯ ಕ್ರಮದಲ್ಲಿ ಅಂತರವಿಲ್ಲದಂತಹ ಶುದ್ಧವಾದ ನೃತ್ತವದು.

ಇಂದ್ರನ ಪೌರುಷ ಪ್ರಧಾನವೂ, ಉದ್ಧತವೂ ಆದ ತಾಂಡವ ನೃತ್ತದ ಪ್ರಭಾವದಿಂದ ಪ್ರಕೃತಿಯಲ್ಲಾದ ಪರಿಣಾಮವನ್ನು ಕವಿ ಹೀಗೆ ಉತ್ಪ್ರೇಕ್ಷಿಸುತ್ತಾನೆ. ಪಾದಗಳನ್ನು ಚಾಚುವುದರಿಂದ ಮೇರು ಪರ್ವತವೇ ಅಲುಗಾಡಲು, ಅವನ ಬಾಹುಗಳ ತಿರುಗುವಿಕೆಯಿಂದ ದಿಶಾಮಂಡಲವೇ ತಿರ‍್ರನೆ ತಿರುಗಲು, ಉಜ್ವಲವಾದ ನೇತ್ರ ಚಲನೆಯಿಂದ ಆಕಾಶದಲ್ಲಿ ಪ್ರಜ್ವಲಿಸುತ್ತಿರಲು, ರಸೋನ್ಮಗ್ನರಾದಂತಹ ದಿಕ್ಪಾಲಕರು ಬೆರಗಾಗುವಂತೆ ದೇವರಾಜ ಕುಣಿದಾಡಿದ.

ಮುಂದಿನ ಪದ್ಯದಲ್ಲಿ ಯಥಾಪ್ರಕಾರ ಸಾಂಪ್ರದಾಯಿಕವಾಗಿ ಇಂದ್ರನು ಭಾವ, ವಿಭಾವ ಹಾಗೂ ಅನುಭವಗಳಿಂದ ನಿಷ್ಪನ್ನವಾಗುವ ರಸಾನುಭವವನ್ನು ಅಭಿನಯಿಸಿದನೆಂದು ಕವಿ ಹೇಳುತ್ತಾನೆ.

ನೂರೆಂಟು ಕರಣಗಳನ್ನು ಮೂವತ್ತೆರಡು ಅಂಗಹಾರಗಳನ್ನು, ನವರಸಗಳನ್ನು, ನಾಲ್ಕುವೃತ್ತಿ, ಎರಡು ಧರ್ಮಿ ಹಾಗೂ ಚತುರ್ವಿಧ ಅಭಿನಯಗಳನ್ನು ಮಾಡುತ್ತಿದ್ದ ಇಂದ್ರನನ್ನು ಕವಿ ನಾಟ್ಯಾಗಮ ವಿವರಣೆಯಂ ತೋಱೆದಂ ತನ್ನಮಯ್ಯೊಳ್ ಎಂದು ವರ್ಣಿಸಿರುವುದು ಸಹಜವೇ. ಇಂದ್ರನೇ ನಾಟ್ಯ, ನಾಟ್ಯವೇ ಇಂದ್ರ ಎಂಬ ಚಿತ್ರವನ್ನು ಕವಿ ಕೊಡುತ್ತಾನೆ. ಪಂಪನು ಆದಿಪು.ದಲ್ಲಿ (೭-೧೧೬) ಮಹೇಂದ್ರನ ನಾಟ್ಯ ಪ್ರಸಂಗದಲ್ಲಿ ನಾಟ್ಯಾವೇದಾವತಾರಮೆ ರಂಗಂ ಬೊಕ್ಕು ಎಂದು ಹೇಳುವುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ವಚನದಲ್ಲಿ ದ್ರುತ, ಲಲಿತರಸಗಳಿಗೆ ಆಶ್ರಯವಾಗಿರುವಂತಹ ಕೈಶಿಕಿ, ಆರಭಟಿ, ತಾಂಡವ ಹಾಗೂ ಲಾಸ್ಯ ಪ್ರಭೇದಗಳುಳ್ಳ ಐಂದ್ರವೆಂಬ ನಾಟಕವನ್ನು ಇಂದ್ರನು ಮಾಡಿದನೆಂದು ಕವಿ ಹೇಳುತ್ತಾನೆ. ಐಂದ್ರವೆಂಬುದು ಒಂದು ಸ್ಥಾನಕವೆಂದು ಶಾಸ್ತ್ರಗಳು ಗುರುತಿಸಿದೆ. ಆದರೆ ಕವಿ ಹೇಳುವಂತೆ ಅದು ಒಂದು ವಿಧದ ನೃತ್ಯವೇ.

|| ಅಂತು ದ್ರುತಲಲಿತ ರಸ ಸಮಾಶ್ರಯಂಗಳಾಗಿ ತೋಱುವಾರಭಟ ಕೈಶಿಕೀ, ವೃತ್ತಿಗಳೊಳ್ ತಾಂಡವ ಲಾಸ್ಯ ಪ್ರಭೇದ ದಿನ ಮೈಂದ್ರಮೆಂಬ ನಾಟಕಮನಾಡಿ ತದವಸಾನದೊಳ್ ಗಾಳಿಗಿದಿರೊಡ್ಡಿದ ಭ್ರಮರಕದಂತಾಗೆ ತೀವ್ರವೇಗದಿಂ ಬವರಿಗೊಟ್ಟು(೧೨೫೫)

ಎಂದು ಮುಂತಾಗಿ ಮೂಲದ ಮಾತು. ಇಂದ್ರನು ತಾಂಡವ ಲಾಸ್ಯಗಳನ್ನು ನಾಲ್ಕು ವೃತ್ತಿಗಳನ್ನು, ರಸಗಳನ್ನು ಅಭಿನಯಿಸುವುದನ್ನು, ಇಂದ್ರನು ಸಂತೋಷದಿಂದ ನರ್ತಿಸಿದುದನ್ನು ಐಂದ್ರ ಎಂದು ಕರೆಯಬಹುದು.

ದ್ರುತಲಲಿತ ರಸವೆಂದು ಕವಿ ಬಳಸಿರುವುದರಿಂದ ಔಚಿತ್ಯವನ್ನು ಸ್ವಲ್ಪ ವಿಸ್ತರಿಸಬಹುದು. ದ್ರುತ ಎಂದರೆ ವೇಗವಾದ ಚಲನೆ, ಓಟ ಎಂಬ ಅರ್ಥವಿದೆ. ಕವಿ ದ್ರುತ ಶಬ್ದವನ್ನು ಆ ಅರ್ಥದಲ್ಲಿ ಬಳಸಿರಲಾರ. ದ್ರುತ ಲಲಿತ ರಸ ಎಂದು ಅದನ್ನು ಪದಗರ್ಭ ಮಾಡದೇ ಓದುವುದು ಸೂಕ್ತ. ದ್ರುತ ಎಂದರೆ ಹಾಸ್ಯ ನಟ ಎಂದೂ ಒಂದು ಅರ್ಥವಿದೆ. ಶೃಂಗಾರ, ಹಾಸ್ಯ, ಅದ್ಭುತಗಳು ಲಲಿತರಸಗಳೆಂದು ಪ್ರಖ್ಯಾತಿಯನ್ನು ಪಡೆದಿವೆ. ಈ ನಿಟ್ಟಿನಲ್ಲಿ ಆಲೋಚಿಸಿದರೆ ದ್ರುತ ಲಲಿತ ರಸದ ಪದ ಪ್ರಯೋಗ ಅತ್ಯಂತ ಸೂಕ್ತ. ಈ ಪದ್ಯದ ಮೂಲಕ ಐಂದ್ರವೆಂಬ ನಾಟಕ ವಿಧಿಯಲ್ಲಿ ಶೃಂಗಾರ, ಹಾಸ್ಯ, ಅದ್ಭುತ ರಸಗಳೂ, ಕೈಶಿಕಿ, ಆರಭಟಿ ವೃತ್ತಿಗಳೂ ತಾಂಡವ, ಲಾಸ್ಯಗಳೂ ಚತುರ್ವಿಧ ಅಭಿನಯಗಳೂ ಇರಬೇಕೆಂಬುದು ಮನವರಿಕೆಯಾಗುತ್ತದೆ.

ಅತಿಯಾದ ವೇಗದಿಂದ ಭ್ರಮರಿಗಳನ್ನು (ನೋಡಿ ಅನುಬಂಧ ಅ. ಪರಿಭಾಷೆ) ಇಂದ್ರ ಮಾಡುತ್ತಿದ್ದರೆ, ಅದು ಗಾಳಿಗೆ ಒಡ್ಡಿದ ನೀರಿನ ಸುಳಿಯಂತೆಯೇ, ಮೊರೆಯುವ ಬುಗುರಿಯಂತೆಯೇ ಇತ್ತು. ಹೀಗೆ ಚಕ್ರಾಕಾರವಾಗಿ ಸುತ್ತುತ್ತಾ ವೇದಿಕೆಯಿಂದ ನಿರ್ಗಮಿಸುವುದು. ಹೆಚ್ಚು ಕಡಿಮೆ ಎಲ್ಲ ನೃತ್ಯ ಶೈಲಿಗಳಲ್ಲೂ ಕಾಣಬಹುದು. ಅದರಲ್ಲಿ ವಿಶೇಷವಾಗಿ ಕಥಕ್ ನೃತ್ಯ ಪದ್ಧತಿಯಲ್ಲಿ ತೀವ್ರ ವೇಗದ ಚಕ್ರಾಕರವಾಗಿ ಸುತ್ತುವುದು ಒಂದು ಪರಿಪಾಠ. ಇಲ್ಲಿಯೂ ಅದೇ ರೀತಿಯ ಚಲನೆಯ ಉದ್ಧೇಶಿತವಿರಬಹುದು. ಎರಡನೆಯ ನಾಗವರ್ಮನೂ ಪಂಪ, ಪೊನ್ನ ಹಾಗೂ ರನ್ನರಂತೆಯೇ ಇಂದ್ರನ ನೃತ್ಯ ಪ್ರಸಂಗವನ್ನು ಚಿತ್ರಿಸಿದ್ದಾನೆ. ನಾಗವರ್ಮನ ವಿಶಿಷ್ಟತೆಯೆಂದರೆ, ಈತ ಇಂದ್ರನ ನೃತ್ಯದ ಮುಕ್ತಾಯವನ್ನೂ ಚಿತ್ರಿಸಿದ್ದಾನೆ. ಇಂದ್ರನು ತನ್ನ ನೃತ್ಯವನ್ನು ಬವರಿಗಳಿಂದ (ಹಿಂದೆ ಚರ್ಚಿಸಿದೆ.) ಮುಕ್ತಾಯಗೊಳಿಸುತ್ತಾನೆ. (ಪ. ೫೪ ವ. ೧೨ ಆ) ಕವಿಯ ಈ ಕಲ್ಪನೆ ಅಂದಿನ ನೃತ್ಯ ಶೈಲಿ ಹಾಗೂ ನೃತ್ಯ ವೈಖರಿಯತ್ತ ಮಾಹಿತಿಯನ್ನು ಒದಗಿಸುತ್ತದೆ.

() ನಾಗಚಂದ್ರನ ಮಲ್ಲಿನಾಥ ಪುರಾಣ (. ೧೧೦೦)

ರಾಜ ವೈಶ್ರವಣ ಸಂಗೀತ ನೃತ್ಯವನ್ನು ಅವಲೋಕಿಸುವ ಸಂದರ್ಭ ಮಲ್ಲಿನಾಥ ಪುರಾಣದಲ್ಲಿದೆ. ನಾಟ್ಯ ಮಂಟಪದ ವರ್ಣನೆಯಿಂದ ಆರಂಭಿಸಿ ಸಭೆ, ಸಭಾಪತಿ, ನತ್ಕಿಯ ವೇಷಭೂಷಣ, ಚತುರ್ವಿಧ ವಾದ್ಯಗಳ ವಾದನದ ತಾಂತ್ರಿಕತೆ, ಜವನಿಕೆ, ರಂಗಪ್ರವೇಶ ಹಾಗೂ ಪುಷ್ಪಾಂಜಲಿ (ನೋಡಿ ಅ ೩)ಯ ನಂತರ ನರ್ತಕಿಯ ನೃತ್ಯದ ವೈಖರಿ, ನೃತ್ಯ ಬಂಧಗಳ ತಾಂತ್ರಿಕ ವಿವರಣೆಯನ್ನು ಕವಿ ಇಲ್ಲಿ ಕೊಡುತ್ತಾನೆ.

ಸರ್ವಾಲಂಕಾರ ಭೂಷಿತೆಯಾದ ನರ್ತಕಿ ಅವನದ್ಧ ವಾದ್ಯ ಪ್ರವೀಣನು ನುಡಿಸುವ ಲಯಕ್ಕೆ ಸರಿಯಾಗಿ ರಂಗವನ್ನು ಪ್ರವೇಶಿಸುತ್ತಾಳೆ. ಅವನದ್ಧ ವಾದ್ಯಕಾರನ ಪಾಂಡಿತ್ಯವನ್ನು ನಾಗಚಂದ್ರ ಹೊಗಳುತ್ತಾನೆ. ಆತನ ಕೈ ಮನವಾಗಿ, ನಾಲಗೆ ಕುಡುಪಾಗಿ ಒದಗಿದಂತೆ

ಆಗಳವನದ್ಧ ವಾದ್ಯ ವಿದ್ಯಾ ವಿದಗ್ಧನಪ್ವ ವಾದಕಂ ಕೆಯ್ಯ ಮನಮಾಗೆ ಕುಡುಪೆ ನಾಲಗೆಯಾಗೆ ತಾಳುನುಗಮಂ ತಱಗೆಲೆಯ ಮೇಲೆ ನುಣ್ಮೞಲಂ ಬಿಡದೆ ಸುರಿವಂತೆ ಗೀತಾನುಗಮಾಗೆ ಬಿಡದೆ ಬಾಜಿಪಾಗಳ್ (೩೦ .)

ಮೃದಂಗ ವಾದಕನ (ಕವಿ ಅವನದ್ಧ ವಾದ್ಯವೆಂದಷ್ಟೇ ಹೇಳಿದರೂ ಸಂಗೀತ ಹಾಗೂ ನೃತ್ಯದಲ್ಲಿ ಮೃದಂಗ ಸಾಮಾನ್ಯವಾಗಿ ಪಕ್ಕವಾದ್ಯ) ಮನಸ್ಸು ಹಾಗೂ ಮೃದಂಗವನ್ನು ಬಾಜಿಸುವ ಕೈಗಳು ಒಂದೇ ವೇಗದಲ್ಲಿ ಏಕ ಕಾಲದಲ್ಲಿ ಸ್ಪಂದನಗೊಳ್ಳುತ್ತಿತ್ತು. ಆತ ಶಬ್ದ ಪ್ರಬಂಧ ಅಥವಾ ಜತಿಗಳನ್ನು ಬಾಯಿಯಲ್ಲಿ ಹೇಳುತ್ತ ನುಡಿಸುತ್ತಿದ್ದ ಎಂದು ಸ್ಪಷ್ಟವಾಗುವುದು. ಮೃದಂಗ ವಾದಕನ ವಾದನ ಚಾತುರ್ಯವನ್ನು ನಾಗಚಂದ್ರ ಉತ್ತಮವಾದ ಹೋಲಿಕೆಯೊಡನೆ ವಿವರಿಸುತ್ತಾನೆ. ಗೀತಾನುಗವಾದ (ನೋಡಿ ಅ. ೨.ಆ) ಆತನ ವಾದನ ತರಗೆಲೆಯ ಮೇಲೆ ಬಿಡದೆ ಸುರಿವ ನುಣ್ಣಗಿರುವ ಮರಳಿನಂತೆ ಒಂದೇ ಸಮನಾದ ಲಯವನ್ನು ಹಿಡಿದು ಅವಿರತವಾಗಿ ತರಂಗಿತವಾಗುತ್ತಿತ್ತು. ಗೀತ ವಾದ್ಯಗಳು ಹೀಗೆ ಅವಿರತವಾಗಿ ನಡೆಯುತ್ತಿರುವಾಗ ಜವನಿಕೆಯ ಮರೆಯಿಂದ ರಂಗಕ್ಕೆ ಅವತರಿಸಿದ ನರ್ತಕಿ ಪುಷ್ಪಾಂಜಲಿಯನ್ನು ಮಾಡಿ, ಮುಂದಿನ ನೃತ್ಯ ಬಂಧಗಳನ್ನು ಮಾಡಿದುದನ್ನು ಕವಿ ಹೀಗೆ ವರ್ಣಿಸುತ್ತಾನೆ.

ಮನದಿಂ ಭಾವಮುದೀರ್ಣಮಾಗೆ ಮುಖದಿಂ ಕೈಗೆಣ್ಮೆಹಾವಂ ವಿಲೋ
ಚನದಿಂ ಪೊಣ್ಮೆ ವಿಲಾಸಮೊತ್ತರಿಸೆ ಪುರ್ಬಿಂ ವಿಭ್ರಮಂ ಕಿಂಕಿಣೀ
ನಿನದಂ ಗೀತದ ಮೆಯ್ಗೆ ಬಾಜಿಪ ಲಯವ್ಯಕ್ತಾಕ್ಷರ ವ್ಯಕ್ತಿಯಿಂ
ಜನ ಸಂಮೋಹನಮಾಗೆ ದೇಸೆವೆಡೆದತ್ತಾ ನರ್ತಕೀ ನರ್ತನಂ    (೩೧)

ಗೀತದಲ್ಲಿ ಅಡಗಿದ ಲಯ, ಸಾಹಿತ್ಯದ ಅರ್ಥ, ರಾಗದ ಭಾವಗಳಿಗೆ ನರ್ತಕಿಯ ಮನದಲ್ಲಿ ಭಾವದ ಬೀಜವು ಅಂಕುರಿಸಿ ಅದು ಆಕೆಯ ಮುಖದಿಂದ ಹೊರಸೂಸಿ, ಶೃಂಗಾರ ಭಾವಗಳಾದ ಹಾವ,[14] ವಿಲಾಸಗಳನ್ನು[15] ಕಣ್ಣುಗಳೂ, ಹುಬ್ಬಿನ ನಾನಾ ವಿಧವಾದ ಚಲನೆಗಳೂ, ಅಂಗಾಂಗಗಳ ಹಾಗೂ ಪಾದಗಳ ಚಲನೆ ಭೇದಗಳೂ, ಜನವನ್ನು ಸಂಮೋಹನಗೊಳಿಸಿತು.  ಜನಾಕರ್ಷಕವಾದ ಈಕೆಯ ನೃತ್ಯ ಸೊಬಗಿನಿಂದ ಕೂಡಿತ್ತು ಎಂದು ಕವಿ ಹೇಳುತ್ತಾನೆ. ಶಾಸ್ತ್ರೀಯ ಅತವಾ ಮಾರ್ಗ ನೃತ್ಯದ ಸೌಂದರ್ಯವನ್ನು ಕವಿ ಈ (೩೧) ಪದ್ಯದ ಮೂಲಕ ನಮಗೆ ಸ್ಪಷ್ಟಪಡಿಸುತ್ತಾನೆ. ನರ್ತಕಿಯು ಗೀತದಲ್ಲಿ ಅಡಗಿರುವ ಭಾವನೆಗಳನ್ನು, ಹೊರಗೆಡಹಲು ಅಭಿನಯ, ಹಸ್ತಗಳ ಬಳಕೆ, ಕಣ್ಣಿನ ವಿವಿಧ ಬಗೆಯ ನೋಟ, ಹಾವ, ಭಾವಗಳು, ಹುಬ್ಬುಗಳ ಚಲನೆ, ಲಯಬದ್ಧವಾದ ಪಾದಗಳ ಚಲನೆಗಳು ಎಲ್ಲವೂ ಅವಶ್ಯ. ಇವೆಲ್ಲವೂ ಸಂಗತಗೊಂಡಿರುವಂತಹ ನೃತ್ಯವು ನಯನ ಮನೋಹರವೂ ಜನ ಸಂಮೋಹನವೂ ಆಗಿ ಅಭಿವ್ಯಕ್ತಿಗೊಳ್ಳುವುದರಲ್ಲಿ ಸಂದೇಹವಿಲ್ಲ.[1] ತ್ರಿವಿಧಸ್ತ್ವಾಂಗಿಕೋ ಜ್ಞೇಯಃ ಶಾರೀರೋ ಮುಖಜಸ್ತಥಾ
ತಥಾ ಜೇಷ್ಟಾಕೃತಶ್ಚೈವ ಶಾಖಾಂಗೋಂಪಾಂಗ ಸಂಯುತಃ |
ನಾಟ್ಯಶಾ. (ಸಂ. ರಾಮಕೃಷ್ಣ ಕವಿ /೧೨)

[2] ಕಾಂತಾ ಭಯಾನಕಾ ಹಾಸ್ಯಾ ಕರುಣಾ ಚಾದ್ಭುತಾ ತಥಾ
ರೌದ್ರಿ ವೀರಾ ಚ ಬೀಭತ್ಸಾ ವಿಜ್ಞೇಯಾ ರಸದೃಷ್ಟಿಯ ||
ಸ್ನಿಗ್ದಾ ಹೃಷ್ಟಾ ಚ ದೀನಾ ಚ ಕ್ರದ್ಧಾ ದೃಪ್ತಾ ಭಯಾನ್ವಿತಾ |
ಜಗುಪ್ಸಿತಾ ವಿಸ್ಮಿತಾ ಚ ಸ್ಥಾಯೀ ಭಾವೇಷು ದೃಷ್ಟಿಯಃ ||
ಶೂನ್ಯಾಚ ಮಲಿನಾ ಚೈವ ಶ್ರಾಂತಾ ಲಜ್ವಾನ್ವಿತಾ ತಥಾ |
ಗ್ಲಾನಾ ಚ ಶಂಕಿತಾ ಚೈವ ವಿಷಣ್ಣಾ ಮುಕುಲಾ ತಥಾ |
ಕುಂಚಿತಾ ಚಾಭಿತಪ್ತಾ ಚ ಜಿಹ್ಮಾ ಸಲಲಿತಾ ತಥಾ |
ವಿತರ್ಕಿತಾರ್ಧ ಮುಕುಲಾ ವಿಭ್ರಾಂತಾ ವಿಪ್ಲುತಾ ತಥಾ |
ಆಕೇಕರಾ ವಿಕೋಶಾ ಚ ತ್ರಸ್ತಾ ಚ ಮದಿರಾ ತಥಾ |
ಷಟ್‌ತ್ರಿಶದ್ ದರಷ್ಟಯೋ ಹ್ಯೋತಾ ತಾಸು ನಾಟ್ಯಂ ಪ್ರತಿಷ್ಠಿತಮ್ ||
ನಾಟ್ಯಶಾ (ಸಂ. ಕೇದಾರನಾಥ) /೪೦೪೪.

[3] ಆಕಂಪಿತ ಕಂಪಿತಂ ಚ ಧುತಂ ವಿಧುತಮೇವ ಚ |
ಪರಿವಾಹಿತ ಮಾಧುತಮವಧುತಂ ತಥಾಂಚಿತಮ್ |
ನಿಹಂಚಿತಮ್ ಪರಾವೃತ್ತ ಮುತ್ಷಿಪ್ತಂ ಚಾಪ್ಯಧೋಗತಮ್ |
ಲೋಲಿತಂ ಚೈವ ವಿಜ್ಞೇಯಂ ತ್ರಯೋದಶ ವಿಧಂ ಶಿರಃ |
ನಾಟ್ಯ ಶಾ. /೧೯, ೧೮ (ಸಂ. ಮಾ. ರಾಮಕೃಷ್ಣ ಕವಿ)

[4] ಮೂಗು ನತಾ ಮುಂದಾ ವಿಕೃಷ್ಟಾ ಚ ಸೋಚ್ಛ್ವಾಸಾ ಚ ವಿಕೂಣಿತಾ
ಸ್ವಾಭಾವಿಕಾ ಚೇತಿ ಬುಧೈಃ ಷಡ್ವಿಧಾ ನಾಸಿಕಾ ಸ್ಮೃತಾ |

ಅದೇ. /೧೩೦.
ಮಾನಸದಲ್ಲೂ ಇವೇ ಭೇದಗಳಿವೆ.

ತುಟಿ  ವಿತರ್ವನಂ ಕಂಪನಂ ಚ ವಿಸರ್ಗೋ ವಿನಿಗೂಹನಮ್ |
ಸಂದಷ್ಟಕಂ ಸಮುದ್ಗಂಚ ಷ್ಟ್ ಕರ್ಮಣ್ಯಧರಸ್ಯ ತು | ಅದೇ /೧೪೧.

ಚುಬುಕ (ಗದ್ದಕಟ್ಟಣಂ ಖಂಡನಂ ಭಿನ್ನಂ ಚುಕ್ಕಿತಂ ಲೇಹಿತಂ ಸಮಮ್
ದಷ್ಟಂ ಚ ದಂತಕ್ರಿಯಾಯಾ ಚಿಬುಕಂ ತ್ವಿಹ ಲಕ್ಷ್ಯ ತೇ |
ಅದೇ . /೧೪೭.

[5] ಸಮಾನತೋನ್ನತಾ ತ್ರಸ್ರಾ ರೇಚಿತಾ ಕುಂಚಿತಾಂಚಿತಾ |
ವಲಿತಾ ಚ ನಿವೃತ್ತಾ ಚ ಗ್ರೀವಾ ನವವಿಧಾರ್ಥತಃ |                           ಅದೇ ಅ. ೮/೧೭೧

[6] ರನ್ನ ಮಹಾಕವಿ ವಿರಚಿತ ಅಜಿತ ತೀರ್ಥಂಕರ ಪುರಾಣ ತಿಲಕಂ. ಪು. ೭೮
ಸಂ. -ಎಚ್. ದೇವೀರಪ್ಪ, ದೇ. ಜವರೇಗೌಡ.
ಪ್ರ. ಜೈನ ಸಾಃಇತ್ಯ ಪ್ರಚಾರ ಸಂಘ ಮತ್ತು ಜೈ ಓರಿಯೆಂಟಲ್ ಇನ್‌ಸ್ಟಿಟ್ಯೂಟ್, ಮೈಸೂರು (೧೯೫೯).

[7] ಛಿನ್ನಾಚೈವ ನಿವೃತ್ತಾ ಚ ರೇಚಿತಾ ಕಂಪಿತಾ ತಥಾ |
ಉದ್ವಾಹಿತಾ ಚೈವ ಕಟೀ ನಾಟ್ಯೇ ನೃತ್ತೇ ಚ ಪಂಚಧಾ ||  (ನಾಟ್ಯಶಾ. /೨೪೬)

[8] ಸಂಸ್ಕೃತ – ಇಂಗ್ಲೀಷ್ ನಿಘಂಟು – ಮೊನಿಯರ್ ವಿಲಿಯಮ್ಸ್ p. 985.

[9] ನರ್ತನಿ (ಸಂ. ರಾ. ಸತ್ಯನಾರಾಯಣ) ೩-೧೧೦.

[10] ಭಾರಸ್ಯ ಭೂಯಸೋ ಓಢಾ ಪ್ರೌಢೋ ಭ್ರಮರಿಕಾದಿಷು |
ರಜ್ಜು ಸಂಚಾರ ಚತುರಶ್ಚುರಿಕಾ ನರ್ತನೇ ಕೃತಾ |
ಶಸ್ತ್ರ ಸಂಪಾತ ಪಟುಃ ಕೊಲ್ಹಾಟಿಕೋಮತಃ ||
ಸಂಗೀರ. .೧೩೪೭ ಸಂ. ಸುಬ್ರಹ್ಮಣ್ಯ ಶಾಸ್ತ್ರಿ, ಇದೇ ಅಭಿಪ್ರಾಯ. ಮಾನಸ. ವಿ. , , ೧೬೧೬೨.

[11] ಅಡವುಗಳಲ್ಲಿ ಹಸ್ತ, ಪಾದ, ಕುತ್ತಿಗೆ, ಕಣ್ಣು, ಸೊಂಟ ಇವುಗಳ ಪ್ರಮಾಣ ಬದ್ಧವಾದ ಚಲನೆ.

[12] ನೋಡಿ. ಕಸಾಪ / ಭಾಗ ೮ ಪು. ೭೯೯೯.

[13] ಹಸ್ತಕರಣ ಆವೇಷ್ಟಿತ ಮುದ್ವೇಷ್ಟಂ.
ವ್ಯಾವರ್ತಿತದೊಳ್ಪುವೆತ್ತ ಪರಿವರ್ತಿತಮೆಂ
ಬೀವಿಧದಿಂ ನಾಲ್ಕುಂ ಭೇ
ದಾವರಣದೆ ಹಸ್ತಕರಣ ಮತಿ ರಂಜಿಸುಗುಂ.
ಸಂ. ಹೆಚ್. ಆರ್. ರಂಗಸ್ವಾಮಿ ಅಯ್ಯಂಗಾರ್, ಕೃಷ್ಣ ಜೋಯಿಸ್.
ಲಾಸ್ಯರಂ.ಪ್ರ. ಹಾಗೂ ನಾಟ್ಯಶಾ. . ೧೯೮೨೦೬.

[14] ಹಾವ – ಸ್ತ್ರೀಯರ ಮೂರು ವಿಧ ಸತ್ವಜವಾದ ಅಲಂಕಾರಗಳಲ್ಲಿ ಒಂದು. ಉತ್ಕಟವಾದ ಶೃಂಗಾರವು ಕಣ್ಣು ಹುಬ್ಬುಗಳ ವಿಕಾರವನ್ನು ಉಂಟು ಮಾಡುತ್ತದೆಯಾಗಿ ‘ಹಾವ’ವಾಗುತ್ತದೆ.
ಹೇವಾಕಸಸ್ತು ಶೃಂಗಾರೋ ಹಾವೋಕ್ಷಿ ಭ್ರೂ ವಿಕಾರಕೃತ್ |
(ಧನಂಜನಯ ದಶರೂ.) ಅನು. ಕೆ. ವಿ. ಸುಬ್ಬಣ್ಣ. /೫೧.

[15] ವಿಲಾಸ-ಸ್ತ್ರೀಯರ ೧೦ ಸ್ವಭಾವಗಳಲ್ಲಿ ಒಂದು. ಅಂಗಕ್ರಿಯೆ ಮುಂತಾದವುಗಳಲ್ಲಿ ಒಡನೆಯೆ ಉಂಟಾಗುವ ಹೆಚ್ಚಳ.
ತಾತ್ಕಾಲಿಕೋ ವಿಶೇಷತ್ತು ವಿಲಾಸೋಂಗ ಕ್ರಿಯಾದಿಷು ||
ದಶರೂ. /೬೧ ಅನು. ಕೆ. ವಿ. ಸುಬ್ಬಣ್ಣ.