ಸ್ತ್ರೀಯರಿಂದಲೇ ವಿಶೇಷವಾಗಿ ಪ್ರಯೋಗಿಸುವ ಕೈಶಿಕಿ ವೃತ್ತಿಯನ್ನಷ್ಟೇ ಅಲ್ಲದೆ ಭಾರತಿ, ಸಾತ್ವತಿ, ಆರಭಟಿ ವೃತ್ತಿಗಳಲ್ಲೂ (ನೋಡಿ ಅನುಬಂಧ ಅ. ಪರಿಭಾಷೆ) ಕೂಡ ನೀಲಾಂಜನೆ ರಸವು ಸಂಚರಿಸುವಂತೆ ವಿಸ್ತರಿಸಿ ನರ್ತಿಸಿದಳು (೯-೨೬) ಎಂದು ಆಕೆಯ ನರ್ತನ ಚಾತುರ್ಯವನ್ನೂ ಕವಿ ಮೆಚ್ಚುತ್ತಾನೆ.

ನೀಲಾಂಜನೆ ತನ್ನ ನರ್ತನದಲ್ಲಿ ಚತುರ್ವಿಧಾಭಿನಯಳನ್ನು ಪ್ರದರ್ಶಿಸಿದುದನ್ನು ಕವಿ ಪಂಪ ಹೇಳುವ ರೀತಿ ಹೀಗಿದೆ :

ಅಂಗೋಪಾಂಗಗಳೊಸೆ
ವಾಂಗಿಕಮಂ, ಗಾನಪಾಠ್ಯದೊಳ್ವಾಚಿಕಮಂ
ತುಂಗಕುಚೆ ಮೆಱೆದಳಾ ದಿವಿ
ಜಾಂಗನೆಗಾಹಾರ್ಯಸಾತ್ವಿಕಂ ನಿಜಿಮೆ ವಲಂ            (೨೮)

ನೀಲಾಂಜನೆ, ನಾಟ್ಯಶಾಸ್ತ್ರದಲ್ಲಿನ ಮೂವತ್ತೆರಡು ಅಂಗಹಾರಗಳನ್ನು, ನೂರೆಂಟು ಕರಣಗಳನ್ನು (ನೋಡಿ ಅನುಬಂಧ ಅ. ಪರಿಭಾಷೇ) ಕರಗತ ಮಾಡಿಕೊಂಡು ಲೀಲಾಜಾಲವಾಗಿ ನರ್ತಿಸುತ್ತಿದ್ದಳು. ಆಕೆಯ ಪ್ರತಿಯೊಂದು ನೃತ್ಯಬಂಧದಲ್ಲೂ ಬೆಡಗಿನ ಮುಗುಳ್ನಗೆಯ ಅವಳ ಪ್ರವೇಶ ಹಾಗೂ ನಿರ್ಗಮನ ಸಭಿಕರ ಹೃದಯವನ್ನು ಪ್ರವೇಶಿಸಿ ನಿರ್ಗಮಿಸುವಂತ್ತಿತ್ತೆಂದು ಪಂಪ ವರ್ಣಿಸುತ್ತಾನೆ. (ಆ. ೯.೩೦)

ಮುಂದೆ ನೀಲಾಂಜನೆ ವಾದ್ಯಗಳ ನುಡಿಕಾರಕ್ಕೂ ವರ್ಣ ಸ್ವರಗಳಿಗೂ ಅನುಗುಣವಾಗಿ ನರ್ತಿಸಿದ ಪರಿಣಿತಿಯನ್ನು

ಪೆಸರಱೆಯದಮರತೂರ್ಯ
ಪ್ರಸರಂಗಳಜತಿಗೆ ತೊಡರದೆನಿಸೆಳಲದೆ |
ಣ್ಣಸರಂಗೋದಂತಿರೆ |
ಣ್ಣ ಸರಂಸೊಗಯಿಸಿದುದೇನವಳ್ ಪರಿಣತೆಯೋ (೩೧)

ಎಂದು ಕವಿ ಪ್ರಶಂಸಿಸುತ್ತಾನೆ. ನೀಲಾಂಜನೆ ಭರತನಾಟ್ಯ ನೃತ್ಯ ಪದ್ಧತಿಯಲ್ಲಿ ಈಗ ಪ್ರಸಿದ್ಧಿಯಾಗಿರುವ ಪದವರ್ಣವೆಂಬ ನೃತ್ಯವನ್ನು ಸಮೀಪವಾಗಿ ಹೋಲುವ ಒಂದು ನೃತ್ಯ ಬಂಧವನ್ನು ಬಹುಶಃ ನರ್ತಿಸಿರಬೇಕು ಎಂದು ತೋರುತ್ತದೆ.

ಪದವರ್ಣದಲ್ಲಿ ತ್ರಿಕಾಲಗಳಲ್ಲಿ ಬರುವ ಕ್ಲಿಷ್ಟಕರ ಜತಿಗಳಿಗೆ ವೈವಿಧ್ಯಮಯವಾದ ಹಾಗೂ ಆಕರ್ಷಕವಾದ ಅಡುವುಗಳನ್ನು ಜೋಡಿಸಿ ನರ್ತಿಸುವ ಕ್ರಮವಿದೆ.

[1] ಪದವರ್ಣದ ಪೂರ್ವಾರ್ಧದಲ್ಲಿ ಬರುವ ಶೃಂಗಾರ ಪ್ರಧಾನ ಸಾಹಿತ್ಯಕ್ಕೆ (೪ ಪಲ್ಲವಿಗಳಲ್ಲಿ) ಸಮರ್ಥವಾದ ಅಭಿನಯವಿರುತ್ತದೆ. ಪದ ವರ್ಣದ ಮಧ್ಯಭಾಗದಲ್ಲಿ ಬರುವ ಸ್ವರಗುಚ್ಛ ಅಥವಾ ಚಿಟ್ಟೆ ಸ್ವರ ಹಾಗೂ ಅದೇ ಸ್ವರಕ್ಕೆ ಸರಿಯಾಗಿ ಜೋಡಿಸಿದ ಸಾಹಿತ್ಯಕ್ಕೆ ಆಕರ್ಷಕವಾದ ಪಾದ ಹಾಗೂ ಹಸ್ತ ವಿನ್ಯಾಸಗಳಿರುತ್ತವೆ. ನಂತರ ಪುನಃ ದ್ರುತಗತಿಯಲ್ಲಿ ಮುಕ್ತಾಯ ಸ್ವರ ಹಾಗೂ ಜತಿಗಳಿರುತ್ತವೆ. ಉತ್ತರಾರ್ಧದಲ್ಲಿ ಮುಕ್ತಾಯ ಸ್ವರಗಳು ಸುಮಾರು ನಾಲ್ಕು ಚರಣಗಳ ಸ್ವರ ಹಾಗೂ ಸಾಹಿತ್ಯವಿರುತ್ತವೆ. ಇದಕ್ಕೆ ನೃತ್ತ ಹಾಗೂ ಅಭಿನಯವನ್ನು ಮಾಡುವುದು ಪದವರ್ಣದ ಒಂದು ಸ್ಥೂಲ ರೂಪ. ಇಂತಹ ಪದವರ್ಣಗಳು ನರ್ತಕಿಯ ಮೇಧಾಶಕ್ತಿ, ಅಭಿನಯ ಸಾಮರ್ಥ್ಯ, ಕಟ್ಟುನಿಟ್ಟಾದ ಅಭ್ಯಾಸ ಕ್ರಮ ಇವುಗಳ ಸಾಫಲ್ಯವನ್ನು ಪ್ರತಿನಿಧಿಸುತ್ತವೆ. ಪ್ರೌಢನರ್ತಕಿಯರು ನರ್ತಿಸಿದ ಪದವರ್ಣಗಳು ಹೆಚ್ಚಿನ ಶೋಭೆಯನ್ನು ಕೊಡುತ್ತವೆ; ಪ್ರೇಕ್ಷಕರಿಗೆ ಆನಂದವನ್ನು ಕೊಡುತ್ತವೆ.

ಹೆಸರೇ ತಿಳಿಯದ ಅಮರ ಲೋಕದ ವಾದ್ಯಗಳ ಜತಿಗೆ ಒಂದಿನಿತೂ ತಪ್ಪದೇ ಆಯಾಸಗೊಳ್ಳದೆ, ನೀಲಾಂಜನೆ ನರ್ತಿಸುತ್ತಾಳೆ. ಮೇಲೆ ವಿವರಿಸಿದ ಪದವರ್ಣದ ಲಕ್ಷಣದಂತೆಯೇ ನೀಲಾಂಜನೆ ಉತ್ತರಾರ್ದದಲ್ಲಿ ವರ್ಣಸ್ವರಗಳನ್ನೂ ಸೊಗಸಾಗಿ ನರ್ತಿಸುತ್ತಾಳೆ ಎಂದಿದೆ.

ಪ್ರಬುದ್ಧವಾದ ವರ್ಣಸ್ವರ ನೃತ್ಯವನ್ನು ಅನಾಯಾಸವಾಗಿ ನಿರ್ವಹಿಸಿದ ನೀಲಾಂಜನೆಯ ಲಯಜ್ಞಾನವನ್ನು ಪಂಪ ಹೀಗೆ ಉತ್ಪ್ರೇಕ್ಷಿಸುತ್ತಾನೆ :

ಕುಡುಪುಂ ಕಯ್ಯುಂಜತಿಯೊಳ್ |
ತಡತಡವರೆ, ವಾದಕಂಗೆ ಪುರ್ವಿಂ ಜತಿಯಂ |
ತೊಡರದೆ ನಡೆಯಿಸಿ ಪುರ್ವಿದೆ |
ಕುಡುಪೆನೆ ನರ್ತಕಿಯೆ ಸಭೆಗೆ ವಾದರೆಯಾದಳ್ | (೩೧)

ಲಯ ಶುದ್ಧವೂ, ತಾಳ ಶುದ್ಧವೂ ಆದ ನೃತ್ಯದಲ್ಲಿ ಸಂಪೂರ್ಣವಾಗಿ ದೇಹದ ಅಂಗೋಪಾಂಗಗಳು ಚಲಿಸುವುದು ಅತ್ಯಂತ ಅವಶ್ಯಕ. ಉಪಾಂಗಗಳಲ್ಲಿ (ನೋಡಿ ಅನುಬಂಧ ಅ. ಪರಿಭಾಷೆ) ಒಂದಾದ ಹುಬ್ಬಿನ ಚಲನೆಯ ಮೂಲಕ ನೀಲಾಂಜನೆ ತನ್ನ ಲಯ ಜ್ಞಾನವನ್ನು ಸಭೆಗೆ ತೋರಿಸುತ್ತಾಳೆ ಎನಿಸುತ್ತಿತ್ತು. ಯಾವುದೇ ನೃತ್ಯ ಶೈಲಿಯಲ್ಲಿ ಇತರ ಉಪಾಂಗಗಳಾದ ಕಣ್ಣುಗುಡ್ಡೆ, ಕಣ್ಣೆವೆಗಳ ಚಲನೆಯೆ ಜೊತೆಯಲ್ಲಿ ಹುಬ್ಬಿನ ಚಲನೆಯೂ ಅನಿವಾರ್ಯ. ಈ ಚಲನೆಯಿಂದ ನರ್ತಕಿಗೆ ತನ್ನ ಅಂಗಾಂಗಗಳನ್ನು ತಾಳಬದ್ಧವಾಗಿ ಚಲಿಸುವ ಸಾಮರ್ಥ್ಯ ಬರುತ್ತದೆ, ನರ್ತಕಿಯ ಭಾವೋನ್ಮತೆ ಹಾಗೂ ತಲ್ಲೀನತೆಗಳು ಪ್ರೇಕ್ಷಕರಿಗೆ ಸಹ ಉಂಟಾಗುತ್ತದೆ. ಸಾಮಾನ್ಯವಾಗಿ ಅವನದ್ಧ ವಾದ್ಯಗಳನ್ನು ಕುಡುಪಿನಿಂದಲೂ ಕೈಗಳಿಂದಲೂ ನುಡಿಸುವುದು ವಾಡಿಕೆ. ವಾದಕರು ಕುಡುಪು ಅಥವಾ ಕೈಗಳಿಂದ ಜತಿಗಳನ್ನು ನುಡಿಸಲು ತಡವರಿಸಿದರೆ ನೀಲಾಂಜನೆ ತನ್ನ ಹುಬ್ಬುಗಳನ್ನೇ ವಾದ್ಯವನ್ನು ನುಡಿಸುವ ಕುಡುಪನ್ನಾಗಿಸಿ, ಸಭೆಗೆ ತಾನೇ ವಾದಕ ಎನ್ನುವಂತೆ ಭ್ರೂಭೇದವನ್ನು ಮಾಡುತ್ತಿದ್ದಳು. ಲತೆಯಂತಿರುವ ಆಕೆಯ ಭ್ರೂಲಾಸ್ಯ, ವಾದ್ಯಗಳ ವಾದನ ಸಮಕಟ್ಟಾಗಿ ಮೇಳೈಸಿ ಅದೊರಡನೆ ತಾಳದ ವಿವಿಧ ಗತಿ, ಜಾತಿಗಳು ಸುಂದರವಾಗಿ ಮನೋಹರವಾಗಿ ಕಂಗೊಳಿಸಿದುವು.

ಮೇಲಿನ ನೃತ್ಯ ಬಂಧದ ಲಕ್ಷಣ ಹಾಗೂ ಕೆಲವು ವರ್ಣನೆಯ ಬಗೆಗಳು ಈಚಿನ ದಿನಗಳಲ್ಲಿ ನೃತ್ಯ ಕಾರ್ಯಕ್ರಮದ ಕೊನೆಯ ಬಂಧವಾದ ತಿಲ್ಲಾನವನ್ನು ಹೋಲುತ್ತದೆ. ತಿಲ್ಲಾಣದಲ್ಲಿ ಆಕರ್ಷಕವಾದ ಭಂಗಿಗಳು ಇರುತ್ತವೆ. ಚೇತೋಹಾರಿಯಾದ ಚಾರಿ, ಕರಣ ಮುಂತಾದ ಚಲನೆಗಳಿಂದ ರಂಗವನ್ನು ವ್ಯಾಪಿಸುತ್ತ ಅಡಿಯಿಂದ ಮುಡಿಯವರೆಗೆ ತಾಳ-ಲಯ ಬದ್ಧ, ಗತಿ ಪ್ರಧಾನ ಜತಿಗಳು ದ್ರುತಗತಿಯಲ್ಲಿ ಆಕರ್ಷಕವಾದ ಹಸ್ತ ವಿನ್ಯಾಸಗಳ ಚಲನೆಗಳೂ ಇರುತ್ತವೆ. ಇದೊಂದು ನೃತ್ತ ಪ್ರಧಾನವಾದ ಬಂಧ ಇದೇ ಅಭಿಪ್ರಾಯವನ್ನು ಪಂಪ ಕೆಳಗಿನ ಪದ್ಯದ ಮೂಲಕ ವ್ಯಕ್ತಪಡಿಸುತ್ತಾನೆ :

ಕರಣದ ಚಾರಿಯ ಚಲ್ಲಿಯ |
ಪರಿಕ್ರಮ ಕ್ರಮದ ಭಂಗಿಗಳ್ ನೆಗಱ್ದೆಡೆಯೊಳ್
ಸುರವಂದಿಗಳಂ ಹೋ ಹೋ |
ಯಿರೆಯೆನಿಸಿದುದಾಟಮಿಂತು ನೀಲಾಂಜನೆ |        (೩೯)

ಅಂಗಶುದ್ಧವೂ, ತಾಳಶುದ್ಧವೂ ಆದ ನೀಲಾಂಜನೆಯ ಆಟಸಭಿಕರಿಗೆ ಅತ್ಯಂತ ಆನಂದವನ್ನು ನೀಡಿ ಅವುರ ಹೋ! ಭಾಪು, ಭಳಿರೆ ಎಂದು ಹೊಗಳಿದರಂತೆ. ನೀಲಾಂಜನೆಯ ನೃತ್ಯವನ್ನು ಪಂಪ ಆಟ ಎಂದು ಅಚ್ಚ ಕನ್ನಡದ ಪದದಿಂದ ಹೇಳುತ್ತಾನೆ.

ನೀಲಾಂಜನೆಯ ನೃತ್ಯ ಪ್ರಸಂಗವನ್ನು ಪಂಪ ಕೇವಲ ಔಪಚಾರಿಕವಾಗಿ ಆಗಲಿ, ಕಾವ್ಯ ಲಕ್ಷಣದ ದೃಷ್ಟಿಯಿಂದಾಗಲಿ ರಚಿಸಿದಂತೆ ಕಂಡು ಬರುವುದಿಲ್ಲ. ಒಬ್ಬ ಅನುಭವಿ ನಾಟ್ಯಾಚಾರ್ಯನ ಕಲಾಕೌಶಲ ರಸಿಕತೆ ಹಾಗೂ ನಾಟ್ಯ ಶಾಸ್ತ್ರಜ್ಞನ ಆಳವಾದ ಅಧ್ಯಯನದ ಫಲ ಇಲ್ಲಿ ಕಾಣುತ್ತದೆ.

ನೀಲಾಂಜನೆಯ ನೃತ್ಯ ಪ್ರಸಂಗವು ಸಂಪೂರ್ಣವಾಗಿ ಪಂಪನ ಪ್ರತಿಭಾನಿರ್ಮಿತ ಪ್ರಸಂಗ. ಅಂದು ನಾಟ್ಯಶಾಶ್ತ್ರದ ನಿಯಮಗಳು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರೂಢಿಗತವಾಗಿ, ಒಂದು ಮಾಗಿ ನೃತ್ಯ ಶೈಲಿಯ ಸಂಪೂರ್ಣ ಸ್ವರೂಪವನ್ನು ಅನುಸರಿಸುತ್ತಿದ್ದ ಅಂಶವನ್ನು ಕವಿ ಪಂಪನು ನೀಲಾಂಜನೆಯ ನೃತ್ಯದ ಮೂಲಕ ಕನ್ನಡ ನಾಡಿಗೆ ನೀಡಿದ್ದಾನೆ.

ಇಂತಹ ಅಪೂರ್ವವಾದ ನತ್ನದಿಂದ ಸಹೃದಯರ ಅಂತಃಕರಣ ಮೋಹಿತವಾಗುವುದು ಖಂಡಿತವೆಂದು ಅರಿತ ಪಂಪ ನೀಲಾಂಜನೆಯ ನೃತ್ಯ ಪ್ರಸಂಗದಂತಹ ರಸ ಪ್ರಸಂಗವನ್ನು ವೃಸಭದೇವನ ಪರಿನಿಷ್ಕ್ರಮಣ ಕಲ್ಯಾಣದಲ್ಲಿ ತಂದು ಕವಿಗಳಿಗೂ, ಕಲಾವಿದರಿಗೂ ರಸದೌತಣವನ್ನು ಮಾಡಿಸಿದ್ದಾನೆ.

() ಪಂಪ ಭಾರತದಲ್ಲಿ ನೃತ್ಯ ಪ್ರಸಂಗ

ಇಂದ್ರಕೀಲ ಪರ್ವತದಲ್ಲಿ ಅರ್ಜುನನು ಶಿವನನ್ನು ಮೆಚ್ಚಿಸಲು ಉಗ್ರ ತಪವನ್ನು ಆಚರಿಸುತ್ತಿರುವಾಗ ಆತನ ತಪವನ್ನು ಭಂಗ ಮಾಡಲು ದೇವಲೋಕದ ಅಪ್ಸರೆಯರು ಆತನೆದುರು ಹಾಡಿ ನರ್ತಿಸುತ್ತಾರೆ. ಹಾಗೆ ನರ್ತಿಸುವ ನರ್ತಕಿಯರಲ್ಲಿ ಅತ್ಯಂತ ಸೊಬಗಿನ ಖನಿಯಾದ ಊರ್ವಸಿ ದೇಸಿ ನೃತ್ಯವನ್ನು ಆಡಿದಳು. (ಊರ್ವಸಿ ದೇಸಿಗೆ ದೇಸಿಯಾಡಿದಲ್ ವಿ.ವಿ. ೭೧೮೭) ಎಂದು ಪಂಪ ಹೇಳುತ್ತಾನೆ.

ದೇಸಿ ನೃತ್ಯದ ಸೊಬಗಿಗೆ ಊರ್ವಶಿಯಂತಹ ನರ್ತಕಿಯ ನೃತ್ಯ ಮತ್ತು ಸೌಂದರ್ಯ ಸೊಬಗನ್ನು ಉಂಟು ಮಾಡಿತ್ತು ಎಂಬ ಅರ್ಥವನ್ನು ಇಲ್ಲಿ ಊಹಿಸಬಹುದು.

ಅರ್ಜುನನ ಮುಂದೆ ತಿಲೋತ್ತಮೆಯ ಆಕರ್ಷಕವಾದ ನೃತ್ಯವನ್ನು ಪಂಪ ವರ್ಣಿಸುತ್ತಾನೆ. ಒಂದಿನಿತೂ ಮಾರ್ಗ ಪದ್ಧತಿಯನ್ನು ಬೆರಸೆ ದೇಶಿ ಪದ್ಧತಿಯಲ್ಲೇ (ನೋಡಿ ಅನುಬಂಧ ಅ. ಪರಿಭಾಷೆ) ನರ್ತಿಸಿದ ತಿಲೋತ್ತಮೆ ಸಭಿಕರ ಹೃದಯವನ್ನೇ ಮೆಟ್ಟುವಷ್ಟು ಪರಿಣಾಮಕಾರಿಯಾಗಿ ನರ್ತಿಸುತ್ತಾಳೆ. ಈಕೆಯ ದೇಸಿ ನೃತ್ಯಕ್ಕೆ, ಮೇನಕ ದೇಸಿ ಶೈಲಿಯಲ್ಲೇ ಹಾಡಿದಳೆಂದೂ ಕವಿ ಹೇಳುತ್ತಾನೆ. (ಪಂಪಭಾ ೭-೮೮-೯೦)

ಹಿತವಾದ ಬದಲಾವಣೆ ಹಾಗೂ ರೂಪಾಂತರಗಳನ್ನು ಹೊಂದಿರುವಂತಹದೂ, ಮಾರ್ಗ ಪದ್ಧತಿಯು ತಾಯಿ ಬೇರಿನಿಂದ -ಶಾಖೆಯಂತೆ ಹಬ್ಬಿರುವುದೂ ಆದ ದೇಶಿ ಪದ್ಧತಿಯು ಆಕರ್ಷಕವೂ, ಚೇತೋಹಾರಿಯಾಗಿಯೂ ಇರುವುದರಲ್ಲಿ ಸಂದೇಹವಿಲ್ಲ.

ತಿಲೋತ್ತಮೆಯ ಆಂಗಿಕಾಭಿನಯದ ವೈಭವವನ್ನು ಪಂಪ ಹೀಗೆ ಹೇಳುತ್ತಾನೆ :

ಆಡದ ಮಯ್ಗಳಿಲ್ಲ ನಿಡುಮೆಯ್ಗಳು ಮಾಡಿದುವಂತೆ ಮೆಟ್ಟುವಳ್ |
ನೋಡಿದರೆಲ್ಲಂ ಪಿಡಿದು ಮೆಟ್ಟಿದಳಿಟ್ಟಳಮೊಯ್ದು ದೇಸಿಕೆ |
ಯ್ಗೂಡಿದುದಿಲ್ಲ ಮಾರ್ಗಮೆನೆ ವಿಸ್ಮಯ ಮಾಗಿರೆ ತನ್ನ ಮುಂದೆ ಬಂ
ದಾಡಿದಳಾ ತಿಳೋತ್ತಮೆಯ ನೊಲ್ದನುಮಿಲ್ಲ ನರೇಂದ್ರ ತಾಪಸಂ ||
(
ಪಂಪಭಾ. ೯೧)

ತಿಲೋತ್ತಮೆ ಅಂಗ, ಉಪಾಂಗ, ಪ್ರತ್ಯಂಗ (ನೊಡಿ ಅನುಬಂಧ ಅ. ಪರಿಭಾಷೆ) ಗಳೆಲ್ಲವನ್ನು ಬಳಸಿ ನೃತ್ಯವನ್ನು ಮಾಡುವ ಪರಿ, ಇದು ಆಕೆಯ ಪಾದ ವಿನ್ಯಾಸಗಳೂ ಇವುಗಳಿಂದ ಪ್ರೇಕ್ಷಕರು ವಿಸ್ಮಿತರಾಗಿ ನೋಡುತ್ತಿದ್ದರಂತೆ. ಆಕೆಯ ದೇಸಿ (ಶಿ) ನೃತ್ಯದ ಸೊಗಸನ್ನು ಬಣ್ಣಿಸಲು ಯಾರಿಗೂ ಸಾಧ್ಯವಾಗದಂತೆ ನರ್ತಕಿ ತಿಲೋತ್ತಮೆ ಅರ್ಜುನನ ಮುಂದೆ ನರ್ತಿಸಿದಳು ಎಂದು ಇಲ್ಲಿಯ ಭಾವ.

() ಶಾಂತಿ ಪುರಾಣ (. ೯೫೦):

ಶಾಂತಿ ಪುರಾಣದಲ್ಲಿ ಪೊನ್ನನೂ ಹಲವು ಬಾರಿ ನೃತ್ಯ ಪ್ರಸಂಗಗಳನ್ನು ಚಿತ್ರಿಸುತ್ತಾನೆ. ಅವುಗಳಲ್ಲಿ ವಿಶಿಷ್ಟವಾದುದನ್ನು ಈ ಮುಂದೆ ವಿಶ್ಲೇಷಿಸಲಾಗಿದೆ.

ರಂಗವನ್ನು ಪ್ರವೇಶಿಸಿದ ನರ್ತಕಿ ಪುಷ್ಪಾಂಜಲಿಯನ್ನು ಮಾಡಿದಳು. ಆಕೆ ಹರಡಿದ ಪುಷ್ಪಗಳು ವೇದಿಕೆಯ ಮೇಲೆ ವ್ಯಾಪಿಸಿರಲು ರಂಗಭೂಮಿಯ ಹೂಗಳನ್ನು ಹೊತ್ತಂತೆ ಭಾಸವಾಗುತ್ತಿತ್ತು. ನರ್ತಕಿಗೆ ಹಿನ್ನೆಲೆ ಗಾಯನವನ್ನೂ, ವಾದ್ಯ ಸಹಕಾರವನ್ನೂ ನೀಡಲು ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಂಧರ್ವರು ಅರಳಿದ ಹೂವುಗಳ ಮಧ್ಯೆ ಚೆಲುವಾಗಿ ಕಂಗೊಳಿಸುತ್ತಿದ್ದರು.

ಕೆದರಿದ ಪುಷ್ಪಾವಳಿರಂ
ಗದೊಳೆ ನಯಂ ಒಡೆಯೆರಂಗ ಭೂಮಿಕೆ ಪೂ ತೊ
ಪ್ಪಿದ ಪುದೆನಿಸಿದುದು ಸಮಹ
ಸ್ತದ ಗಾಂಧರ್ವರಿನಪೂರ್ವ ಸಂಗೀತಕದೊಳ್            ||           (೩೨)

ಮರ ಗಿಡ ಹಾಗೂ ಬಳ್ಳಿಗಳೂ ಹೂಗೊಂಚಲುಗಳಿಂದ ತುಂಬಿ ತೊನೆಯುತ್ತಿದ್ದಂತೆ ವೇದಿಕೆಯೇ ಹೂ ಬಿಟ್ಟು ಸೂಸುತ್ತಿದ್ದಂತೆ ಕಾಣುವುದೆನ್ನುವ ಪೊನ್ನನ ಕಲ್ಪನೆ ರಮ್ಯವಾಗಿದೆ. ವೇದಿಕೆಯು ಶೋಭಾಯಮಾನವಾಗಿರಲು ಸಮಹಸ್ತದ ಗಂಧರ್ವರೂ ಕಾರಣರಾದರೆಂದಿದೆ. ಸಮಹಸ್ತ ೨೦ ವಾದ್ಯ ಪ್ರಬಂಧಗಳಲ್ಲಿ ಒಂದು. ವಾದ್ಯಗಳು ಗೀತ ನೃತ್ತಾನುಗವಾಗಿ ತಕಾರವನ್ನು ಉಚಿತವಾದ ಪ್ರಮಾಣ ಕಾಲ, ಮೂರು ಆವರ್ತನಗಳಲ್ಲಿ ನುಡಿಸುವುದು ಸಮಹಸ್ತ.[2]

ನರ್ತಕಿಯ ನೃತ್ಯದೊಡನೆ ಹಿನ್ನೆಲೆ ವಾದ್ಯ ವಾದನವೂ ಆರಂಭವಾಯಿತು ಎನ್ನುವುದು ಪೊನ್ನನ ಅಭಿಪ್ರಾಯ.

ಪುಷ್ಪಾಂಜಲಿಯ ನಂತರ ಅಪ್ಸರೆಯರು ಸುಕುಮಾರವಾದ ಲಾಸ್ಯವನ್ನು ಕೈಶಿಕೀ ವೃತ್ತಿಯಲ್ಲಿ ರಸಭಾವಾಭಿನಯಗಳಿಂದ ನರ್ತಿಸುತ್ತಿದ್ದರು. ಇಂದ್ರನು ಅವೆಲ್ಲವುಗಳನ್ನು ಶ್ರೀ ದೇವನಿಗೆ ತಿಳಿಸಿ ಹೇಳುತ್ತಿದ್ದ. ತಾನೂ ಕರಣ, ಅಂಗಹಾರ, ಚಾರಿಗಳ (ನೋಡಿ ಅನುಬಂಧ ಅ. ಪರಿಭಾಷೆ) ಚಲನೆಯನ್ನು ಹೊಸದಾಗಿ ಪ್ರದಶಿಸಿ ದೇವಸಭೆಗೆ ಸಂತೋಷ ಪಡಿಸುತ್ತಿದ್ದ. ಏಕಲ ನೃತ್ಯದಿಂದ ಆರಂಭವಾದ ನೃತ್ಯ ಪ್ರಸಂಗ ಅಪ್ಸರೆಯರ ಸಮೂಹ ನೃತ್ಯದಿಂದ ಮುಂದುವರೆಯುತ್ತದೆ. ಅಪ್ಸರೆಯರು ಗೆಜ್ಜೆಗಳನ್ನು ಕಟ್ಟಿ ನರ್ತಿಸುತ್ತಿದ್ದರೆ ಅದರ ಮಂಜುಳ ನಾದವು ಎಲ್ಲೆಡೆಗೂ ವ್ಯಾಪಿಸಿತ್ತು. ನರ್ತಿಸುತ್ತಿದ್ದ ಅಪ್ಸರೆಯರು ಭರತ ಶಾಸ್ತ್ರದ ಹಲವು ಮುಖಗಳಂತೆ ಕಂಗೊಳಿಸುತ್ತ, ವಿಷಮ ಹಾಗೂ ಸಮ ಎಂಬ ಎರಡೂ ತೆರನಾದ ನೃತ್ಯವನ್ನು ಮಾಡುತ್ತಿದ್ದರು. ಪೊನ್ನ ಅಪ್ಸರೆಯರ ಗೆಜ್ಜೆಗಳ ಮಂಜುಳ ನಿನಾದವನ್ನು ಒಂದು ಕಂದ ಪದ್ಯದಲ್ಲಿ ಅಷ್ಟೇ ಮಧುರವಾಗಿ ಧ್ವನಿಸಿದ್ದಾನೆ.

ಮಂಜೀರಕ ಮಂಜುಳ ಮೃದು
ಸಿಂಜ ಪರಿಸ್ಪುರಿತ ಮಸೆಯೆ ಭರತದ ಪಲ ವುಂ
ಪಂಜಿಕೆಗಳಂತದೇಂ ಸುರ
ಲಂಜಿಕೆಯರ್ವಿಷಮಂಸಮಂ ಮಾಡಿದರೋ             ||           (೩೩)

ಅಪ್ಸರೆಯರು ವಿಷಮವನ್ನು ಹಾಗೂ ಸಮನೃತ್ಯಗಳನ್ನು ಮಾಡಿದರೆಂದು ಕವಿ ಹೇಳುತ್ತಾನೆ. ಅದು ಭರತನಾಟ್ಯ ಶಾಸ್ತ್ರದ ವ್ಯಾಖ್ಯೆಯಂತೆ ಇತ್ತು ಎಂದು ಸಹ ಹೇಳಿದ್ದಾನೆ. ಗೀತವೂ ತಾಳವೂ ಏಕ ಕಾಲದಲ್ಲಿ ಆರಂಭವಾದರೆ ಅದು ಸಮಗ್ರಹ ಎಂದೂ, ಹಾಗಲ್ಲದಿರುವುದು ವಿಷಮಗ್ರಹ ಎಂದು ತಿಳಿದಿದೆ. ಗ್ರಹ ಎನ್ನುವುದು ಕೃತಿ ಮತ್ತು ತಾಳಗಳ ನಡುವಣ ಸಂಬಂಧ.[3] ಗೀತ ವಾದ್ಯಗಳು ಸಮವಾದ ಕಾಲಪ್ರಮಾಣದಲ್ಲಿ ನೃತ್ತಾನುಗವಾದಾಗ ಅದನ್ನು ಸಮ[4] ಎಂದು ಕರೆಯಬಹುದು ಎಂಬುದು ಶಾರ್ಙ್ಗದೇವನ ಮತ. ಇದೇ ಅಭಿಪ್ರಾಯವನ್ನು ಸೋಮೇಶ್ವರನೂ ಕೊಡುತ್ತಾನೆ.[5] ಸಮ ನೃತ್ತದಲ್ಲಿ ಅರವತ್ತನಾಲ್ಕು ಹಸ್ತ ಭೇದಗಳು, ಅಷ್ಟ ಮಂಡಲಗಳು, ಅಷ್ಟವಿಧ ದೃಷ್ಟಿ ಭೇದಗಳೂ, ಹಾಗೂ ಲಲಿತವಾದ ಕರಣಗಳು, ಭ್ರಮರಿಗಳು (ನೋಡಿ ಅನುಬಂಧ ಅ. ಪರಿಭಾಷೆ) ಇದ್ದು ಆದಿತಾಳದಲ್ಲಿ ನರ್ತಿಸುವುದನ್ನು ಸಮನೃತ್ತ ಎನ್ನುತ್ತಾರೆ ಎಂದು ವಿದ್ವಾಂಸರ ಅಭಿಮತ.[6]

ಪೊನ್ನನು ವರ್ಣಿಸುವ ಅಪ್ಸರೆಯರ ಸಮ ನೃತ್ತವನ್ನು ಶಾಸ್ತ್ರಗಳು ವಿವರಿಸುವ ಸಮನೃತ್ತದೊಡನೆ ಸಮೀಕರಿಸಬಹುದು.

ವಿಷಮ ನೃತ್ತವು ನೃತ್ತ ಭೇದಗಳಲ್ಲಿ ಮೊದಲನೆಯದೆಂದೂ ಇದರಲ್ಲಿ ಹೆಚ್ಚಾಗಿ ತಿರುಗುವಿಕೆ ಮತ್ತು ಹಗ್ಗಗಳನ್ನು ಹಿಡಿದು ವರ್ತುಲಾಕಾರವಾಗಿ ನರ್ತಿಸುವ ಕ್ರಿಯೆಯನ್ನು ಶಾರ್ಙ್ಗದೇವನು ಹೇಳುತ್ತಾನೆ.[7] ಸೋಮೇಶ್ವರನೂ ವಿಚಿತ್ರ ಪದಗತಿಗಳೂ, ಭ್ರಮರಿಗಳೂ ವಿಷಮ ನೃತ್ಯದ ಲಕ್ಷಣವೆಂದು ಹೇಳುತ್ತಾನೆ. (ಹಿಂದೆ ಚರ್ಚಿಸಿದೆ – ಶಾಂತಿಪು.) ಹಗ್ಗವನ್ನು ಹಿಡಿದು ಸುತ್ತುಗಳನ್ನು ಪ್ರದರ್ಶಿಸುವುದು ವಿಷಮ ನೃತ್ತ ಎಂದು ಕುಂಭನು ಸಂಗೀತ ರಾಜದಲ್ಲಿ ಹೇಳುತ್ತಾನೆ.[8] ನರ್ತಕಿಯರು ವರ್ತುಲಾಕಾರವಾಗಿ ಸುತ್ತುತ್ತಾ ಮೇಲಿನಿಂದ ಇಳಿಬಿದ್ದ ಹಗ್ಗಗಳನ್ನು ಹಿಡಿದು ತಾಳಕ್ಕೆ ಸರಿಯಾಗಿ ನರ್ತಿಸುವ ಚಿತ್ರ (ಜನಪದದ ಜಡೆಕೋಲಾಟದ ಮಾದರಿ) ವನ್ನೂ ಪೊನ್ನನ ವಿಷಮ ನೃತ್ತಕ್ಕೆ ಸಮೀಕರಿಸಬಹುದು.[9]

ಮುಂದಿನ ಪದ್ಯದಲ್ಲಿ ಅಪ್ಸರೆಯರ ಸುಕುಮಾರತೆಯನ್ನೂ, ಲಘುತ್ವವನ್ನೂ ಕವಿ ವರ್ಣಿಸುತ್ತಾನೆ. ಅವರು ವಿರಚಿಸಿದ ಚಮತ್ಕಾರ ಪೂರಿತವಾದ ಸೂಚೀ ನಾಟ್ಯ ಅಪ್ಸರೆಯರ ಚತುರತೆಗೆ ಸಾಕ್ಷಿ.

ನಿಲೆ ಸೂಚಿಯಲರೆಸಱ್ಕೊರ
ಗಲೀಯದಭಿನಯದ ಕರಣದ ಭ್ರಮರಿಯ ನಿ
ಶ್ಚಲತೆಯ ಲಘುತೆಯಿ ಮಾರ್ದವ
ವಿಲಾಸ ನರ್ತನದಿನಮರಿಯರ್ ನರ್ತಿಸಿದರ್ ||           (೩೪)

ನರ್ತಿಸುವ ಅಪ್ಸರೆಯರ ಶರೀರ ಲಘುತ್ವ. ಅವರ ಸುಕುಮಾರವಾದ ಪಾದಚಲನೆಗಳತ್ತ ಕವಿ ಪೊನ್ನ ಸೂಚಿಸುತ್ತಾನೆ. ಪುಷ್ಪಾಂಜಲಿಯಲ್ಲಿ ಹರಡಿದ ಹೂವುಗಳು ಒಂದಿಷ್ಟೂ ಕೊರಗದಂತೆ ಅಪ್ಸರೆಯರು ಸೂಜಿಯ ಮೊನೆಯಲ್ಲಿ ನೆಟ್ಟ ಕುಸುಮಗಳ ಮೇಲೆ ಕರಣ, ಭ್ರಮರಿಗಳನ್ನು ಲಘುತ್ವದಿಂದಲೂ, ಮಾರ್ದವದಿಂದಲೂ ದೃಢವಾಗಿ ಪ್ರಯೋಗಿಸಿದ ಅಪ್ಸರೆಯರ ಸೌಕುಮಾರ್ಯವನ್ನು ಕವಿ ಪ್ರಶಂಸಿಸುತ್ತಾನೆ. ಪೊನ್ನ ಅಪ್ಸರೆಯರ ಸೂಚೀನೃತ್ಯವನ್ನು ಈ ಪದ್ಯದ ಮೂಲಕ ವಿವರಿಸಿದ್ದಾನೆ.

ಸೂಚೀ ನೃತ್ಯವನ್ನು ಆಡಲು ಶರೀರ ಲಘುತ್ವವು ಅವಶ್ಯಕ. ಸೂಜಿಯ ಮೊನೆಯ ಮೇಲೆ ಹರಡಿದ ಹೂವುಗಳನ್ನು ಪಾದದಿಂದ ಸೋಂಕದೇ ಕೋಮಲವಾದ ಉತ್ವ್ಲವನದಿಂದ ಕರಣಗಳಿಂದ ಹಾರುತ್ತ ನರ್ತಿಸುವ ಅಪ್ಸರೆಯರ ಪ್ರತಿಭೆ ಅದ್ಭುತವಾದುದು. ಅಂಚಿತದಂತಹ ಅಲ್ಪಕರಣಗಳನ್ನು ಪ್ರಯೋಗಿಸುತ್ತ ನರ್ತಿಸುವುದು ನೃತ್ತದ ಮತ್ತೊಂದು ಪ್ರಕಾರವಾದ ಲಘು ಎಂದು ಶಾಸ್ತ್ರಕಾರರ[10] ಮತ. ಲಘು ನೃತ್ತವು ಕೌತುಕವೂ ಉಲ್ಲಾಸ ಜನಕವೂ ಆಗಿರುವುದೆಂದು ಸೋಮೇಶ್ವರನು[11] ವಿವರಿಸುತ್ತಾನೆ. ಅಂಚಿತ ಕರಣವು ಭರತ ಮುನಿ ಪ್ರೋಕ್ತ ೧೦೮ ಕರಣಗಳಲ್ಲಿ ಒಂದು[12] ಇಂತು ಚತುರತೆಯಿಂದ ನರ್ತಿಸುವ ಅಪ್ಸರೆಯರ ನೃತ್ಯವನ್ನು ಮೆಚ್ಚಿ ಇಂದ್ರನು ಅವರಿಗೆ ಕಾಣಿಕೆಗಳನ್ನು ಕೊಟ್ಟು ಕಳಹುತ್ತಾನೆ.

16_6_PP_KUH

ಶಾಸ್ತ್ರಗ್ರಂಥಗಳು ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸುವ ಸಭಾಪತಿಯ ಗುಣಗಳ ಬಗ್ಗೆ ಉಲ್ಲೇಖಿಸುತ್ತ, ಆತ ಉದಾರಿಯೂ, ಗೌರವಾನ್ವಿತವೂ, ಗೀತ ವಾದ್ಯ ನೃತ್ಯಗಳಂತಹ ತ್ರಿಕಲೆಗಳಲ್ಲಿ ಪರಿಣಿತನೂ, ಅದರ ಪ್ರಶಂಸೆಯನ್ನೂ, ಆಸ್ವಾದವನ್ನೂ ಮಾಡುವಂತಹವನೂ, ಅನೇಕ ಬಗೆಯ ಕಾಣಿಕೆಗಳನ್ನು ಕಲಾವಿದರಿಗೆ ಪಾರಿತೋಷಕವಾಗಿ ಕೊಡುವವನೂ ಆಗಿರಬೇಕೆಂದು ವರ್ಣಿಸುತ್ತವೆ.[13] ಪೊನ್ನ ಕವಿ ವರ್ಣಿಸಿರುವ ನೃತ್ಯ ಪ್ರಸಂಗದಲ್ಲಿ ಇಂದ್ರನೇ ಸಭಾಪತಿ. ಆದ್ದರಿಂದ ಆತ ನರ್ತಕಿಯರಿಗೆ ಮೆಚ್ಚುಕೆಗಳನ್ನು ಕೊಟ್ಟನೆಂದು ವರ್ಣಿಸುವುದು ಸಮಂಜಸವಾಗಿದೆ.

ಶಾಂತಿನಾಥನ ಜನ್ಮಾಭಿಷೇಕ ಸಂದರ್ಭದಲ್ಲಿ ಕವಿಯು ಪುನಃ ಇಂದ್ರನ ಆನಂದ ನೃತ್ಯವನ್ನು ವರ್ಣಿಸುತ್ತಾನೆ. ಪಾಂಡುಕ ಶಿಲೆಯೇ ಇಂದ್ರನಿಗೆ ಇಲ್ಲಿ ರಂಗಭೂಮಿಯಾಗಿ ಪರಿಣಮಿಸುತ್ತದೆ.

ಇಂದ್ರನು ತನ್ನ ನೃತ್ಯಕ್ಕೆ ದೇವಲೋಕದ ವಾದಕರನ್ನೇ ವಾದ್ಯ ವಾದಕರನ್ನಾಗಿ, ಗಂಧರ್ವರನ್ನೇ ಗೀತ ಗಾಯಕರನ್ನಾಗಿ ಕರೆತರುತ್ತಾನೆ. ಅಲ್ಲದೆ ತಾಳವನ್ನು ನಿರೂಪಿಸಲು, ಜತಿ (ನೋಡಿ ಅನುಬಂಧ ಅ. ಪರಿಭಾಷೆ) ಜೋಕೆಗಳನ್ನು ಉದ್ಘೋಷಿಸಲು ದೇವತೆಗಳನ್ನೇ ನಟ್ಟುವ[14]ರನ್ನಾಗಿ ನಿಯೋಜಿಸುತ್ತಾನೆ. ಮಾರ್ಗ ನಾಟ್ಯದ ಸೂತ್ರಧಾರನಾಗಿ ಇಂದ್ರನು ಮುಂದೆ ಬಂದು ಪುಷ್ಪಾಂಜಲಿಯನ್ನು ಮಾಡುತ್ತಾನೆ. ನಂತರ ಜಿನಶಿಶುವಿನ ಜನನದಿಂದ ಉಂಟಾದ ಆನಂದವನ್ನು ಸುರ, ನರರಿಗೆ ವ್ಯಕ್ತ ಪಡಿಸಲು ವೈಶಾಖ (ನೋಡಿ ಅ. ೨) ಸ್ಥಾನಕದಿಂದ ಆರಂಭಿಸಿ ಉದ್ಧತ ರೂಪವಾದ ತಾಂಡವವನ್ನು ಆರಭಟೀ ವೃತ್ತಿಯಿಂದ ಮಾಡಲು ಉಪಕ್ರಮಿಸುತ್ತಾನೆ. ದೇವಸ್ತುತಿಯೇ ತಾಂಡವದ ವಸ್ತು. ಕವಿ ಹೀಗೆ ನರ್ತಿಸುತ್ತಿದ್ದ ಇಂದ್ರನನ್ನು ನಾಟ್ಯ ನಿಬಂಧನೆಯೇ ಸುರೇಶ್ವರ ರೂಪದಿಂದ ಆಡುವಂತೆ (ಶಾಂತಿಪು. ೧೦.೬೧ವ.) ಕಂಡಿತು ಎನ್ನುತ್ತಾನೆ. ನಾಟ್ಯಶಾಸ್ತ್ರದ ರೂಪವೇ ಇಂದ್ರನಲ್ಲಿ ಮೈವೆತ್ತಿದಂತೆ ನರ್ತಿಸುತ್ತಿರಲು ಅಂತಹ ನರ್ತನದಿಂದ ನಾಟ್ಯರಸ (ಹಿಂದೆ ಚರ್ಚಿಸಿದೆ) ಸಮುದ್ರದಂತೆ ಉಕ್ಕಿ ಹರಿಯುತ್ತಿತ್ತು ಇಂದ್ರನ ತೋಳುಗಳಲ್ಲಿ ಗುಂಪಾಗಿ ನರ್ತಿಸುತ್ತಿದ್ದ ಅಪ್ಸರೆಯರನ್ನು ನಾಟ್ಯರಸದಲ್ಲಿ ಬೆಳೆದ ಬಳ್ಳಿಗಳೆಂದು ಪೊನ್ನ ಸೊಗಸಾಗಿ ಹೋಲಿಸುತ್ತಾನೆ.

ರಸದೊಳ್ ಬಳೆದ ಲತಾ
ಕಾರ ಮನನುಕರಿಸೆ ದಿವಿಜರಾಜನ ಭುಜವಿ
ಸ್ತಾರ ದೊಳಾಡಿದರಮರಿಯ
ರೋರೊಂದರೊಳೆಣ್ಬರೊಂದಿ ಗೊಂದಳದಿಂದಂ ||        (೧೦೬೩)

ಎಂಟೆಂಟು ಜನ ಅಪ್ಸರೆಯರು ಇಂದ್ರನ ಪ್ರತಿಯೊಂದು ತೋಳುಗಳ ಮೇಲೂ ಸಮೂಹ ನೃತ್ಯವನ್ನು ಮಾಡಿದರು. ಇಲ್ಲಿಯೂ ಗೊಂದಳ ಎನ್ನುವುದು ಸಮೂಹವೆಂದೇ ವ್ಯಕ್ತವಾಗುವುದು.

ತನ್ನ ತೋಳುಗಳಲ್ಲಿ ನರ್ತಿಸುತ್ತಿರುವ ನರ್ತಕಿಯರನ್ನು ಹೊತ್ತು ನರ್ತಿಸುತ್ತಿರುವ ಇಂದ್ರನ ಆನಂದ ನೃತ್ಯದಲ್ಲಿ ಲಾಸ್ಯ, ತಾಂಡವವೆರಡೂ ಬೆರೆತು ಅದೊಂದು ಅಪೂರ್ವ ನೃತ್ಯದಂತೆ ಕಂಡಿತು.

ಜಂಭಾರಿ ವಿಕೃತ ಮಾಡುವ
ರಂಭಾ ನಟಿಯಂತೆ ಲಾಸ್ಯದೊಳ್ ತಾಂಡವ ಮು
ಜೃಂಭಿಸೆಗಣಿಕೆಯ ರೊಡನಾ
ರಂಭಿಸಿದರ ಪೂರ್ವ ನರ್ತನಾರಂಭಣಮಂ ||  (೧೦೬೪)

ಇಂದ್ರನಲ್ಲೇ ತಾಂಡವ ಹಾಗೂ ಲಾಸ್ಯಗಳ ಸಂಯೋಗದ ಕಲ್ಪನೆ ರೋಚಕವಾಗಿದೆ.

ಕ್ಲಿಷ್ಟಕರವಾದ ಕರಣ, ಅಂಗಹಾರ ಚಾರಿಗಳನ್ನೊಳಗೊಂಡ, ಉದ್ಧತವಾದ ಪಾದಗತಿಗಳಿರುವ ತಾಂಡವದಲ್ಲಿ ಶುದ್ಧ ನೃತ್ತವಿದ್ದು ಪುರುಷರಿಂದ ಪ್ರಯೋಗಿಸಬೇಕು ಎಂದು ಸಾಮಾನ್ಯವಾಗಿ ಎಲ್ಲ ಶಾಸ್ತ್ರ ಗ್ರಂಥಗಳ ಅಭಿಪ್ರಾಯ.

ಲಸ್ ಧಾತುವಿನಿಂದ ನಿಷ್ಪನ್ನವಾದ ಲಾಸ್ಯವು ಸುಕುಮಾರವಾದ ಪ್ರಯೋಗದಿಂದಲೂ ಲಲಿತವಾದ ಅಂಗಹಾರಗಳಿಂದಲೂ, ಅಂಗಾಂಗಗಳ ಚಲನೆಯಲ್ಲಿ ಶೃಂಗಾರವನ್ನು ಪ್ರಧಾನವಾಗಿ ಪ್ರಕಾಶಿಸುವುದರಿಂದಲೂ ಸ್ತ್ರೀಯರಿಂದಲೇ ಪ್ರಯೋಗಿಸತಕ್ಕದ್ದು ಎಂದು ಶಾಸ್ತ್ರಕಾರರ ಮತ (ನೋಡಿ ಅನುಬಂಧ ಅ. ಪರಿಭಾಷೆ) ಇಂದ್ರನ ವಿಸ್ತಾರವಾದ ಭುಜಗಳಲ್ಲಿ ನರ್ತಿಸುತ್ತಿದ್ದ ಅಪ್ಸರೆಯ ಲಾಸ್ಯ, ಇಂದ್ರನ ತಾಂಡವ ಇವೆರಡೂ ಸೇರಿ ಇಂದ್ರನ ನೃತ್ಯ ಅಪೂರ್ವವಾಗಿತ್ತು ಎಂದು ಕವಿಯ ಅಭಿಪ್ರಾಯ.

ನೃತ್ತ ಭೇದಗಳಾದ ತಾಂಡವ ಹಾಗೂ ಲಾಸ್ಯ ಎರಡರ ಲಕ್ಷಣಗಳೂ ಇಂದ್ರನ ನೃತ್ತ ಪ್ರಯೋಗದಲ್ಲಿ ಮಿಳಿತವಾಗಿತ್ತು ಎಂಬ ಕವಿಯ ಕಲ್ಪನೆ ಪ್ರಶಂಸಾರ್ಹವಾಗಿದೆ.

ಇಂದ್ರನು ದ್ರುತಗತಿಯಲ್ಲಿ ಅಪ್ಸರೆಯರೊಡನೆ ನರ್ತಿಸುತ್ತ ಆನಂದ ನೃತ್ಯದ ಅಂತ್ಯದಲ್ಲಿ ಭ್ರಮರಿಗಳನ್ನು ಮಾಡಿದ. ಇಂದ್ರ ಅಪ್ಸರೆಯರೊಡನೆ ಸುತ್ತುತ್ತ ನರ್ತಿಸುತ್ತಿದ್ದರೆ ಹೆಣ್ದುಂಬಿಗಳ ಸುತ್ತ ಉತ್ತೇಜಿತವಾಗಿ ಸುತ್ತುವ ಗಂಡು ದುಂಬಿಯಂತೆ ಇಂದ್ರ ಅವರುಗಳ ಮಧ್ಯ ಕಾಣುತ್ತಿದ್ದನೆಂದು ಕವಿ ವರ್ಣಿಸುತ್ತಾನೆ.

ಲೋಲಭ್ರಮರಂ ಭ್ರಮರೀ
ಮಾಲೆ ತೆಱಂದಿರಿಯೆ ತಾಂತೆಱೆಂದಿರಿವವೂಲು
ನ್ಮೀಲಿತಮನ ಮರೀಸಮ
ಲೀಲಂ ಹರಿ ಬವರಿಗೊಟ್ಟ ನಾಳ್ದು ಬೆಡಂಗಿಂ    (೧೦೬೫)

ಇಂದ್ರನು ಅಪ್ಸರೆಯರೊಡನೆ ಮಾಡುವ ಭ್ರಮರೀ ನಾಟ್ಯವು ದ್ರುತಗತಿಯಲ್ಲಿದ್ದು, ಸಂಗೀತದ ಹಿನ್ನೆಲೆಗೆ ಅನುಗುಣವಾಗಿ ಚೇತೋಹಾರಿಯಾದ ಅಂಗವಿನ್ಯಾಸಗಳಿಂದಲೂ, ವೈವಿಧ್ಯಮಯ ಭ್ರಮರಿಗಳಿಂದಲೂ ಕೂಡಿರುತ್ತದೆ. ಅಲಗ ಭ್ರಮರಿ, ಏಕಪಾದ ಭ್ರಮರಿ, ಅಂಗ ಭ್ರಮರಿ, ಚಕ್ರ ಭ್ರಮರಿ, ಜಾನು ಭ್ರಮರಿ, ಆಕಾಶ ಭ್ರಮರಿ ಮುಂತಾದ ಅನೇಕ ಭ್ರಮರಿಗಳನ್ನು ಅಭಿದ., ನೃತ್ತರ ಇತ್ಯಾದಿ ಗ್ರಂಥಗಳು ಲಕ್ಷಣ ಸಹಿತವಾಗಿ ವಿವರಿಸುತ್ತಾನೆ.[15] ಪೊನ್ನ ಹೇಳುವ ಇಂದ್ರನ ಈ ಬವರಿ ನರ್ತನವು ಕೆಲವು ಜಾನಪದ ನೃತ್ಯಗಳ ಚಲನೆಯನ್ನು, ಉತ್ತರ ಭಾರತದಲ್ಲಿ ಪ್ರಚಲಿತವಿರುವ ಕಥಕ್ ನೃತ್ಯ ಪದ್ಧತಿಯನ್ನು ನೆನಪಿಗೆ ತರುತ್ತದೆ.

ಅಸಗನ ಶಾಂತಿ ಪುರಾಣವನ್ನೇ ಆಕರವಾಗಿರಿಸಿಕೊಂಡರೂ ಪೊನ್ನ ನೃತ್ಯ ಪ್ರಸಂಗಗಳ ವರ್ಣನೆ. ದೃಶ್ಯಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಅಸಗನು ಜಿನ ಜನ್ಮಾಭಿಷೇಕ ಪ್ರಸಂಗದಲ್ಲಿ || ಸುರೇಂದ್ರಾಃ ಸ್ಪಪದಂ ಜಗ್ಮುಃ ಪುನೃತ್ಯ ಪ್ರಮಾದಾಚ್ಚರಮ್ || ಎಂದಷ್ಟೇ ಹೇಳಿ ಮುಂದುವರಿಯುತ್ತಾನೆ. ಆದರೆ ಪೊನ್ನ ಹಾಗೆ ಮಾಡದೇ ನೃತ್ಯ ಪ್ರಸಂಗವನ್ನು ವಿವರವಾಗಿ ವರ್ಣಿಸುತ್ತಾನೆ.

ಪಂಪ ನಂತೆಯೇ ಪೊನ್ನನೂ ಆಶ್ವಾಸ ೭ ಹಾಗೂ ೧೦ ರಲ್ಲಿ ಶುದ್ಧವಾದ ನೃತ್ಯವನ್ನು ವರ್ಣಿಸುತ್ತಾನೆ. ವಿಷಮ, ಲಘು, ಮುಂತಾದ ನೃತ್ತ ಬಂಧಗಳನ್ನು ಹೇಳುತ್ತಾನಲ್ಲದೇ ಅವುಗಳ ಲಕ್ಷಣವನ್ನು ಹೇಳುತ್ತಾನೆ. ಸೂಚೀ ನೃತ್ಯದ ಸ್ವರೂಪ, ಲಕ್ಷಣಗಳನ್ನು, ಅದರ ಪ್ರಯೋಗಗಳನ್ನು ಹೇಳೂವಲ್ಲಿ ಪೊನ್ನನು ಮೊದಲಿಗ.

() ಅಜಿತ ತೀರ್ಥಂಕರ ಪುರಾಣ ತಿಲಕಂ (. ೯೯೩):

ನೃತ್ಯ, ಸಂಗೀತ, ವಾಸ್ತು ಮತ್ತು ಶಿಲ್ಪ ಕಲೆಗಳನ್ನು ಹಿರಿದಾಗಿ ಪೋಷಿಸಿ, ಬಾದಾಮಿ ಚಾಲುಕ್ಯರು ಹಾಕಿದ ಮೇಲ್ಪಂಕ್ತಿಯನ್ನೇ ಅನುಸರಿಸಿದ ಕಲ್ಯಾಣ ಚಾಲುಕ್ಯರ ದೊರೆ ಎರಡನೆ ತೈಲಪ ಚಕ್ರವರ್ತಿಯ ಆಶ್ರಯದಲ್ಲಿದ್ದ ರನ್ನ ಸ್ಪತಃ ಒಬ್ಬ ಉದ್ದಾಮ ಪಂಡಿತ. ತನಗಿದ್ದ ಸಂಸ್ಕೃತ ಭಾಷೆಯ ಪಾಂಡಿತ್ಯ ಹಾಗೂ ನಾಟ್ಯ ಶಾಸ್ತ್ರದ ಜ್ಞಾನವನ್ನು ತನ್ನ ಕೃತಿ ಅಜಿಪು.ದಲ್ಲಿ ಆಕೃತಿಗೊಳಿಸಿದ್ದಾನೆ. ಕೇವಲ ಮಾರ್ಗವನ್ನಷ್ಟೇ ಅಲ್ಲದೆ ದೇಶೀ ನೃತ್ಯ ಸಂಪ್ರದಾಯ. ಅದರಲ್ಲಿ ಬಳಸುವ ವಾದ್ಯಗಳು, ಪರಿಭಾಷೆ ಇವುಗಳನ್ನೂ ಕವಿ ತಪ್ಪದೆ ಉಲ್ಲೇಖಿಸುತ್ತಾನೆ.

ಅಜಿತನಾಥನ ನಾಮಕರಣ ಸಂದರ್ಭದಲ್ಲಿ ಇಂದ್ರನೇ ಆದಿಯಾಗಿ ಅಮರ ಸಮೂಹವು ಜಿನ ಶಿಶುವಿನ ಜನನದಿಂದ ತಮಗುಂಟಾದ ಆನಂದವನ್ನು ನೃತ್ಯದ ಮೂಲಕ ಅಭಿವ್ಯಕ್ತಿಗೊಳಿಸುತ್ತಾರೆ. ಈ ಪ್ರಸಂಗವನ್ನು ಕವಿ ರನ್ನ ಶಾಸ್ತ್ರೀಯ ನೃತ್ಯದ ಪರಿಭಾಷೆಯೊಂದಿಗೆ ವಿಶದೀಕರಿಸುತ್ತಾನೆ.

ಇಕ್ಷ್ವಾಕು ವಂಶ ಕುಲ ಚೂಡಾಮಣಿಯಾದ ಅಜಿತನಾಥನನ್ನು ಹೊಗಳಿ ಇಂದ್ರನು ಸಂತೋಷದಿಂದ ನರ್ತಿಸುತ್ತಾನೆ. ಆತ ಮಾಡುವ ನಾಟ್ಯ ವಿಧಿಯನ್ನು ಕವಿ ಐಂದ್ರ ಎಂದು ಹೆಸರಿಸುತ್ತಾನೆ.

ಕುಳದೀಪಕನಂ ತ್ರಿಜ
ತ್ತಿಳಕನಿಕ್ಷ್ವಾಕು ವಂಶ ಚೂಡಾಮಣಿಯಂ
ಕುಳಿಶಧರಂ ಪೊಗಱ್ದು ಮನಂ
ಗೂಳೆ ಮಾಡಿದನೈಂದ್ರ ಮೆಂಬ ನಾಟಕ ವಿಧಿಯಂ (. )

ಐಂದ್ರ ಸಾಮಾನ್ಯಾರ್ಥದಲ್ಲಿ ಇಂದ್ರನಿಗೆ ಸಂಬಂಧಿಸಿದ್ದು ಎಂದು ಹೇಳಬಹುದು. ಐಂದ್ರವು ಒಂದು ಕರಣವೆಂಬುದಾಗಿ ಹರಿಪಾಲ[16] ಹೇಳುತ್ತಾನೆ.[1] ತತ್, ಢೀಂಗು, ತ್ದನ, ಡಿಂಡಿಂ ತಜ್ಞಂ. ದೃಕ್ ದೃಕ್, ತ ರಿಕು
ಕುಕು, ಝೇಂಕು, ತದ್ದಿಮಿ – ಇಂಥ ಶಬ್ದಗಳ ಉಚ್ಚಾರಣೆಯನ್ನು ಜತಿ ಅಥವಾ ಪಾಟಾಕ್ಷರ
ಎಂದು ಕರೆಯುವ ವಾಡಿಕೆ ಉಂಟು. ಇವು ೫ ತಾಳಗಳಲ್ಲೂ ೫ ಜಾತಿಗಳಲ್ಲೂ ಇರುತ್ತವೆ.
ಭನಾಧಿ ಪು. ೧೫೬೧೫೯

[2] ವಾದ್ಯ ಪ್ರಬಂಧ ತಕಾರಃ ಪ್ರಚುರಂದೋರ್‌ಭ್ಯಾಯಥೌಚಿತೇನ ಮಾನತಃ |
ವಾದ್ಯತೇಯತ್ ತ್ರಿರಾವೃತ್ಯ ಸಮಹಸ್ತಃ ಸ್ಮೃತೋ ಬುಧೈಃ. (ಸಂಸಾಸಾ/೧೪೭)

[3] ಸಂ.ಶಾ.ಚಂ. ಪು. ೫೫.

[4] ಗೀತ ನೃತ್ತ ಸಮೋಮಾನೆ ಪ್ರಬಂಧಃ ಪ್ರೋಚ್ಯತೇಸಮಃ | ಸಂಗೀರ. ೫-೧೦೦೬.

[5] ಗೀತ ನೃತ್ತ ಸಮಂ ಕ್ಲುಪ್ತಂ ಸಮಂ ತತ್ಕಿಲ ಕಥ್ಯತೆ – ಮಾನಸ – (೪-೧೬-೪೩೫).

[6] ಸಮ ನೃತ್ತಂ ತಧಾರಂ ಭೇದತು ಷಷ್ಠಿಕರಾನ್ವಿತಂ |
ಅಷ್ಟಮಂಡಲ ಸಂಯುಕ್ತಂ ಅಷ್ಟಕ್ಷ್ಟಪಿ ಚಾಷ್ಟಕಂ |
ಆದಿತಾಳ ಲಯಾಭಿಜ್ಞಾನರ್ತನಂ ಸಮ ನರ್ತನಂ |
ಲಲಿತಾಖ್ಯ ಕರೇಣಾಪಿ ಬಹಿ ಭ್ರಮಣ ಬಂಧನಂ |
ಸಮನೃತ್ತ ಮಿದಂ ಮುಖ್ಯಂ ಭರತಾ ಚಾರ್ಯ ಸಮ್ಮತಂ |  ( ಮಂಪು. ೩೮೩)

[7] ವಿಷಮಂ ವಿಕಟಂ ಲಘಿತ್ಯನ್ನೇ ಭೇದತ್ರಯಂ ವಿದುಃ |
ನೃತ್ತಸ್ಯ ತತ್ರ ವಿಷಯಮಂ ಸ್ಯಾದ್ರಜ್ಜುಭ್ರಮಣಾದಿಕಮ್ | (ಸಂಗೀರ..೩೩)

[8] ತದ್ವಿಷಮಂ ಮತಂಯದಭ್ಯಾಸ ವಶಾದ್ರಜ್ಜು ಭ್ರಮಣಾದಿ ಪ್ರದರ್ಶಯತೆ | ಉದ್ದೃತಿ -ಭರಕೋ.

[9] ನೋಡಿ ರೇಖಾ ಚಿತ್ರ ಪು. ೧೨೩ ಜಡೆ ಕೋಲಾಟ ಅಲಲ್ದ ನರ್ತನಿ ಅ.ಟಿ.ಪು. ೫೨೬.

[10] ಉಪೇತಂ ಕರಣೇರ್ಯುಕ್ತೈ ರಂಚಿತಾಧೈರ್ಲಘು ಸ್ಮೃತಮ್ |
(ಸಂಗೀರ ೨೪ ಸಂ. ಸುಬ್ರಹ್ಮಣ್ಯಶಾಸ್ತ್ರೀ)

[11] ಸ್ವಸ್ತಿಕೈಃ ಕರಣೈಯುಕ್ತಮಂಚಿತಾಧೈರಲಂಕೃತಮ್
ಕೌತುಕೋಲ್ಲಾಸ ಜನನಂ ಲಘು ನೃತ್ಯಂ ತದಿಷ್ಟತೇ ||
(ಮಾನಸ. ೧೬೯೬೩ ಸಂ. ಶ್ರೀ ಗೋಂಡೇಕರ್)

[12] ನೋಡಿ – ನಕ್ಷೆ-೩- ಕರಣಗಳು – ಸಂ. ೨೩.

[13] ಶರಂಘಾರೀ ಭೂರಿದೋ ಮಾನ್ಯೋಮಾನ್ಯ ಪಾತ್ರ ವಿವೇಚಕಃ |
ತೂರ್ಯತ್ರಯ ವಿಶೇಷಜ್ಞಃ ಪಾರಿತೋಷಕದಾನವಿತ್ ||
(ಸಂಗೀರ. .೧೩೪೫೧೩೪೭ಸಂ. ಸುಬ್ರಹ್ಮಣ್ಯಶಾಸ್ತ್ರೀ)

[14] ನೃತ್ಯವನ್ನು ತನ್ನ ತಾಳದ ಹೊಡೆತಗಳಿಂದ ನಿರ್ವಹಿಸುವ ತಾಳಧಾರಿ. ಈತ ಸ್ತುತಿ ಶಬ್ದಗಳನ್ನು, ತತ್ತಕಾರಗಳನ್ನು ರಚಿಸುವುದರಲ್ಲಿ ಸಮರ್ಥನಿರಬೇಕು.
(ನರ್ತನಿ. .ಟಿ. . ಪು. ೨೭೦, ಸಂ. ರಾ. ಸತ್ಯನಾರಾಯಣ)

[15] ಅಭಿದ (ಸಂ. ಶ್ರೀಧರ ಮೂರ್ತಿ)   ಭ್ರಮರೀ-ಶ್ಲೋಕ ೨೮೬ ರಿಂದ ೨೯೬.
ನೃತ್ತರ – ಅ. ೫/೮೪ ರಿಂದ ೧೦೬ನೇ ಶ್ಲೋಕ (ಸಂ. ವಿ. ರಾಘವನ್).

[16] ಭರಕೋ – ಪು ೬೫.
ಐಂದ್ರ – ನಂದ್ಯಾವರ್ತಾಂಗಯಂ ಸ್ಥಾನಂ ಬಧಾಂಗ ಯೌಕಶಾ |
ರೇಚಿತಾ ವಾಕಟೀ ದೇಶೇ ಅಸಕೃತ್ವಾತಯೇ ತತಃ
ಅಂಗಲೀ ಪಾರ್ಷ್ಣೀ ಸಂಚಾರೀತ್ವನ್ಯಯಃ ಕೃನ ಸಂಯುತಃ
ಯತ್ರೌಸ್ಯಕಲಂದೃಶ್ಯಂ ಕಾಮತ ಮೈಂದ್ರಂತು ತಾದಿದುಃ |               (ಭರಕೋ ೯೫)