ಈ ತರಹದ ಕ್ರಿಯೆಯ ನಂತರ ನರ್ತಕಿ ಗೀತಕ್ಕೂ ವಾದ್ಯಕ್ಕೂ, ಅನುಗುಣವಾಗಿ ರಂಗಸ್ಥಳದಲ್ಲಿ ಚಲಿಸಿ ನಂತರ ತನ್ನ ನೃತ್ಯವನ್ನು ಆರಂಭಿಸುತ್ತಾಳೆ. ಹೀಗೆ ನೇತ್ರ ಚಲನೆಯನ್ನು ಆಕೆ ಮಾಡುತ್ತ ಕಣ್ಣಂಚಿನಲ್ಲಿ ಬೆಳಕನ್ನು ಚಲ್ಲುತ್ತ ಎಲ್ಲರನ್ನು ಮೋಹಿಸಿದಳು. ಮುಂಗಾರು ಮಳೆಯ ಮಿಂಚಿನಂತೆ ಬಂದ ನರ್ತಕಿ ಅಂಗೋಪಾಂಗ ಹಾಗೂ ಪ್ರತ್ಯಂಗಗಳಿಂದ ಅಭಿನಯಿಸುವ ಆಂಗಿಕಾಭಿನಯವನ್ನು ಇತರ ಅಭಿನಯಗಳಾದ ಆಹಾರ್ಯ, ಸಾತ್ವಿಕ ಹಾಗೂ ವಾಚಿಕಾಭಿನಯಗಳನ್ನೂ, ಸ್ಥಾಯೀ ಹಾಗೂ ಸಂಚಾರಿ ಭಾವಗಳಿಂದ ಕೂಡಿದ ಶೃಂಗಾರಾದಿ ರಸಗಳನ್ನು, ಅಂಗಹಾರ, ಕರಣ, ಸ್ಥಾನಕ, ಚಾರಿ ಮೊದಲಾದುವುಗಳನ್ನು (ಈ ಪರಿಭಾಷೆಗಳಿಗೆ ನೋಡಿ ಅನುಬಂಧ ಅ) ನರ್ತಿಸಿದಳೆಂದು, ಆಕೆಯ ಶಾಸ್ತ್ರೀಯ ನೃತ್ಯದ ಸೊಬಗನ್ನು ಅಚ್ಚುಕಟ್ಟುತನವನ್ನು ಕಂಡು ಸಭೆ ಹೊಗಳುತ್ತಿದ್ದ ಪರಿಯನ್ನು ಕವಿ ಹೀಗೆ ಹೇಳುತ್ತಾನೆ :

ಅದು ಲೇಸು ಲೇಸು ಮಾಮಾ
ಇದು ಪೊಸತಯ್ಯಾಯ್ಯ ಭಾಪು ನಚ್ಚಣಿಯೆಂದೊದ
ವಿದ ಭಾವಮನಾಸಭೆಮಾ
ಣದೆ ಬಣ್ಣಿಸೆ ಚದುರೆ ಬೀಱೆದಳ್ ಬಿನ್ನಾಣಮಂ ||           (ಪಂಪಾವ. ೮೭)

ಹೀಗೆ ಮಾರ್ಗ ನೃತ್ಯದಿಂದ ಸಭೆಯನ್ನು ಆನಂದಪಡಿಸಿದ ನರ್ತಕಿಯ ನಿರ್ಗಮನದ ನಂತರ ಮತ್ತೊಬ್ಬ ನರ್ತಕಿಯು ರಂಗವನ್ನು ಪ್ರವೇಶಿಸುತ್ತಾಳೆ. ಈಕೆಯ ನರ್ತನ ಮೊದಲಿನ ನರ್ತಕಿಯ ನೃತ್ಯಕ್ಕಿಂತ ಭಿನ್ನವೆಂದು ಕವಿಯ ವರ್ಣನೆಯಿಂದ ತಿಳಿದು ಬರುತ್ತದೆ. ಭೂಷಣವನ್ನು ಕವಿ ನೃತ್ಯಕ್ಕೆ ತಕ್ಕ ನೈಪಥ್ಯಮಂ ಧರಿಸಿ ಎಂದು ಗುರುತಿಸುತ್ತಾನೆ.

ಮತ್ತೋರ್ವ ನರ್ತಕಿ ನೃತ್ಯಕ್ಕೆ ತಕ್ಕ ನೃಪಥ್ಯಮಂ ಧರಿಸಿ ಲವಣಿ ಮುರುಹು ಗುಂಡಲ ಲಾಗಾನುಲಾಗು ಬೀಸುಗಾಲು ದೂಷಿ ವಿಷಮದೂಷಿ ಪೇರಣೆ ಡೊಕ್ಕರಮಂಡಿ ಮೊದಲಾದವಗಡದಡವುಗಳನಳವಡಿಸಿ (೮೮ .)

ತನ್ನ ನೃತ್ಯ ವೈಖರಿಯನ್ನು ತೋರಿದಳು. ಕವಿ ನರ್ತಕಿ ಪ್ರಯೋಗಿಸಿದ ಅಡವುಗಳ ಪಟ್ಟಿಯನ್ನು ಕೊಡುತ್ತಾನೆ. ಒಂದು ಸದೃಢವಾದ ಸೌಧಕ್ಕೆ ಹೇಗೆ ಇಟ್ಟಿಗೆಗಳು ಅತ್ಯವಶ್ಯವೋ ಹಾಗೆಯೇ ಒಂದು ಸುಂದರ ನೃತ್ಯಬಂಧವು ರೂಪಗೊಳ್ಳಲು ಅಡವುಗಳು ಅತ್ಯವಶ್ಯ. ವಿಶಿಷ್ಟವಾದ ಹಸ್ತ ಪಾದ, ನೇತ್ರ, ಕಟಿ, ಪಕ್ಕೆ ಹಾಗೂ ಹುಬ್ಬುಗಳ ಚಲನೆಯು ಸಣ್ಣ ಸಣ್ಣ ಹೆಜ್ಜೆಗಳ ಗುಂಪಿಗೆ ಅಡವು ಎನ್ನಬಹುದು. ಇಂದು ದಕ್ಷಿಣ ಭಾರತದಲ್ಲಿ ಪ್ರಚಾರದಲ್ಲಿರುವ ಪ್ರಸಿದ್ಧ ಶೈಲಿಗಳಾದ ಭರತನಾಟ್ಯ, ಕೂಚಿಪುಡಿ, ಮೋಹಿನಿ ಆಟ್ಟಂ ಕಥಕ್ಕಳಿ ನೃತ್ಯಶೈಲಿಗಳಲ್ಲಿ ಅಡುವುಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಇವನ್ನು ನೃತ್ಯ ಶಿಕ್ಷಣದ ಆರಂಭಪಾಠಗಳಾಗಿ ಬೋಧಿಸಲಾಗುತ್ತದೆ.

ಅಡವು ಪದದ ಮೂಲ ಆಡು ಅಥವಾ ಅಡೈವು ಪದವೆಂದು ಸಂಶೋಧಕರ

[1] ಮತ. ಆಡು ಪದಕ್ಕೆ ಎಲ್ಲ ದ್ರಾವಿಡ ಭಾಷೆಗಳಲ್ಲೂ ಆಟ, ಚಲನೆ, ನರ್ತನ ಎಂಬ ಅರ್ಥವಿದೆ. ಅಡೈವು ಪದಕ್ಕೆ ತಮಿಳಿನಲ್ಲಿ ಜೋಡಣೆ ಎಂಬ ಅರ್ಥವಿದೆ. ನೃತ್ಯದ ಸಂದರ್ಭದಲ್ಲಿ ಹೆಜ್ಜೆಗಳ ಜೋಡಣೆ ಎಂದಿಟ್ಟುಕೊಳ್ಳಬಹುದು. ಆದರೆ ಇಲ್ಲಿ ಒಂದು ಸಮರ್ಥನೆಯನ್ನು ಅಡುವು ಶಬ್ದ ಮೂಲದ ಬಗ್ಗೆ ಹೇಳಬೇಕಾಗುತ್ತದೆ. ಆಡು ಎಂಬ ಪದಕ್ಕೆ ನರ್ತಿಸು ಎಂಬ ಅರ್ಥವಿದ್ದರೂ ಅದನ್ನು ನೇರವಾಗಿ ಅಡವುನ ಸ್ವರೂಪವೆಂದು ಹೇಳಲಾಗುವುದಿಲ್ಲ. ಅಡವು ಶುದ್ಧ ನೃತ್ತದ ಅಂಗವಾಗಿದ್ದು ಅಂಗಶುದ್ಧ, ತಾಳಶುದ್ಧಗಳಿಂದ ಮೂರು ಕಾಲಗಳಲ್ಲಿ ಪ್ರಚಾರಿಸುವಂತಹ ಸಣ್ಣ ಸಣ್ಣ ಹೆಜ್ಜೆಗಳ ಗುಂಪು ಅದು. ಇಲ್ಲಿ ಭಾವಾಭಿನಯಕ್ಕೆ ಅವಕಾಶವಿರುವುದಿಲ್ಲವು. ಕಣ್ಣು, ಕುತ್ತಿಗೆ, ಸೊಂಟಗಳು ಹಸ್ತ ಚಲಿಸಿದತ್ತ ತಾವೂ ಚಲಿಸುತ್ತವೆ. ಆದರೆ ನರ್ತನದಲ್ಲಿ ಯಾವುದೋ ಒಂದು ಕಥಾ ಪ್ರಸಂಗವಿರುತ್ತದೆ. ಹಿನ್ನೆಲೆ ಗಾಯನದಲ್ಲಿ ಸಾಹಿತ್ಯವೂ ಇದ್ದು ವಿವಿಧ ರಸಗಳನ್ನೂ ಪ್ರತಿಪಾದಿಸಬೇಕಾಗುತ್ತದೆ. ಆದ್ದರಿಂದ ಆಡು ಪದವನ್ನು ಅಡವು ಶಬ್ದಕ್ಕೆ ಮೂಲವೆಂದು ಭಾವಿಸಬೇಕಾಗಿಲ್ಲ. ಅಡೆ ಎಂಬ ಪದಕ್ಕೆ ಹೊಡೆ, ಪ್ರಹಾರಮಾಡು, ಬೆರಳಿನಿಂದ ಹೊಡೆ ಎಂಬ ಅರ್ಥಗಳಿವೆ. ತಮಿಳು, ತೆಲುಗು (ಅಡಚು) ಭಾಷೆಗಳಲ್ಲೂ ಇದೇ ಅರ್ಥಗಳಿವೆ.[2]

ಶಿಷ್ಟನರ್ತನದ ಪ್ರಾಥಮಿಕ ಅಭ್ಯಾಸ ಕ್ರಮವಾದ ಅಡವುಗಳಲ್ಲಿ ಪಾದಗಳಿಂದ ವೈವಿಧ್ಯಮಯವಾದ ಪ್ರಹಾರಗಳನ್ನು ನೆಲದ ಮೇಲೆ ಮಾಡಲಾಗುತ್ತದೆ. ಅವು, ಪಾದಗಳ ಬೆರಳಿನಿಂದ ನೆಲವನ್ನು ಪ್ರಹಾರಮಾಡುವ, ಸಂಪೂರ್ಣವಾಗಿ ಪಾದಗಳನ್ನು ನೆಲದ ಮೇಲೆ ತಟ್ಟುವ, ಹಿಮ್ಮಡಿಯನ್ನು ನೆಲದ ಮೇಲೆ ಕುಟ್ಟುವ, ಮಂಡಿಯನ್ನು ನೆಲದ ಮೇಲೆ ಕುಟ್ಟುವ, ಹೀಗೆ ಹಲವಾರು ಮಾದರಿಯ ಅಡವುಗಳು ನೃತ್ಯಶಿಕ್ಷಣ ಪದ್ಧತಿಯಲ್ಲಿ ರೂಢಿಯಲ್ಲಿದೆ. ನೆಲದ ಮೇಲೆ ಪಾದಗಳನ್ನು ತಟ್ಟುವ ರೀತಿಯನ್ನು ಅವಲಂಬಿಸಿ ನಾಟ್ಯಾಚಾರ್ಯರು ಇವುಗಳಿಗೆ ಬೇರೆ, ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. (ಕೆಲವು ಮಾದರಿಗಳಿಗೆ ರೇಖಾ ಚಿತ್ರ ನೋಡಿ) ಇವುಗಳನ್ನು ತಕಾರ, ದಿ ಕಾರದ ಪಾಟಕ್ಷರಗಳಿಗೆ ಜೋಡಿಸಿರುತ್ತಾರೆ.

ಪ್ರಾಚೀನ ಶಾಸ್ತ್ರಗ್ರಂಥಗಳಲ್ಲಿ ಅಡವು ಸ್ವರೂಪದ ಉಲ್ಲೇಖ ಎಲ್ಲಿಯೂ ಕಂಡುಬಂದಿಲ್ಲ. ಆದರೂ ಅಡವುಗಳ ಪಾದಚಲನೆಗಳಿಂದ ಇವುಗಳ ಬೇರು ಶಾಸ್ತ್ರಕಾರರು ಉಲ್ಲೇಖಿಸುವ ಪಾದಭೇದ, ಸ್ಥಾನಕ ಹಾಗೂ ಚಾರಿಗಳಲ್ಲಿಯೇ ಕಾಣುತ್ತದೆ. ಅಡವುಗಳ ಮೊದಲ ಉಲ್ಲೇಖಗಳು ಮಹಾಭಾರತ ಚೂಡಾಮಣಿ, ಭರತ ಸಂಗ್ರಹಂ ಹಾಗೂ ಸಂಗೀತ ಸಾರಾಮೃತ ಗ್ರಂಥಗಳಲ್ಲಿವೆ.[3] ಮೊದಲೆರಡು ಗ್ರಂಥಗಳು ತಮಿಳಿನಲ್ಲಿದ್ದು, ತುಳುಜನ (೧೭೬೩-೧೭೮೭) ಸಂಗೀತ ಸಾರಾಮೃತ ಸಂಸ್ಕೃತದಲ್ಲಿದೆ. ಈತ ಶ್ರಮವಿಧಿ ಎಂಬ ವಿಭಾಗದಲ್ಲಿ ಹದಿನಾರು ತರಹದ ಅಡವುಗಳ ಲಕ್ಷಣ. ಅದರ ಹೆಸರು ಹಾಗೂ ಅದಕ್ಕೆ ಬಳಸಲಾಗುವ ಪಾಟಾಕ್ಷರಗಳನ್ನು ಹೇಳಿದ್ದಾನೆ. ಇವುಗಳನ್ನು ವಿಳಂಬಾದಿ ಕಾಲಗಳಲ್ಲಿ ಪುನರಾವರ್ತಿಸಿ ಪ್ರಯೋಗಿಸಬೇಕು ಎಂದೂ ಹೇಳುತ್ತಾನೆ.[4] ಮಹಾಭಾರತ ಚೂಡಾಮಣಿ ಗ್ರಂಥದಲ್ಲಿ ಅಡವುಗಳನ್ನು ಉತ್ತಮ, ಮಧ್ಯಮ ಹಾಗೂ ಅಧಮವೆಂದು ಮೂರು ವಿಭಾಗಗಳಲ್ಲಿ ಮಾಡಿರುವನೆಂದು ತಿಳಿದು ಬರುತ್ತದೆ.

ಉತ್ತಮ ಅಡವಿನಲ್ಲಿ ಹಿಂದೆ ವಿವರಿಸಿದ ತಟ್ಟಡವು ಇತ್ಯಾದಿ. ಮಧ್ಯಮ ಅಡವಿನಲ್ಲಿ ದೇಶಿ ಅಡವು, ಸರುಕ್ಕಾ, ಶಿಮಿರ್, ಕುಟ್ಟಡವು ಇತ್ಯಾದಿ. ಅಧಮ ಅಡವಿನಲ್ಲಿ ಹೀಗೆಯೇ ಅಸಂಖ್ಯಾತ ಅಡವುಗಳು : ದೊಂಬ, ಗೇರುಡಿ, ಮಂಡಿ, ಸರ್ಕಸ್ ಮಾದರಿಯ ಅಡವುಗಳು.[5]

ನಾಚ್ ಅಥವಾ ಸಾದಿರ್ ಎಂದು ಕರೆಸಿಕೊಂಡು, ನಂತರ ಭರತನಾಟ್ಯ ಎಂದು ನಾಮಾಂತರಗೊಂಡ ನೃತ್ಯ ಸಂಪ್ರದಾಯದ ಕಟ್ಟುನಿಟ್ಟಾದ ಅಭ್ಯಾಸ ಕ್ರಮಗಳನ್ನು ಅನೇಕ ಪ್ರಯೋಗ ಪರಿಣಿತರೂ, ನಾಟ್ಯ ಗುರುಗಳೂ ಸೇರಿ ಅಡವುಗಳ ಅಭ್ಯಾಸದಿಂದ ಆರಂಭಿಸಿ ಅದರ ಶಾಸ್ತ್ರೀಯತೆಯನ್ನು ಅಧಿಕಗೊಳಿಸಿದರು.[6]

ಚಂದ್ರಶೇಖರ ಕವಿ ಹೇಳುವ ಅಡವುಗಳ ಹೆಸರಿನಿಂದಲೇ ಅವುಗಳ ಸ್ವರೂಪವು ಸ್ಪಷ್ಟವಾಗುವುದು. ಈ ಅಡವುಗಳು ಸಂಗೀಸಾ. ನ ಅಡವುಗಳ ಪಟ್ಟಿಯಲ್ಲಾಗಲಿ, ಭರತನಾಟ್ಯ ಕ್ರಿಟಿಕಲ್ ಸ್ಟಡಿಯಲ್ಲಿ ಹೇಳುವ ಅಡವುಗಳ ಪಟ್ಟಿಯಲ್ಲಾಗಲಿ[7] ಕಂಡುಬರುವುದಿಲ್ಲ. ಕನ್ನಡದ ಕವಿಗಳು ಅಡವು ಪದವನ್ನು ತುಂಬ ಹಿಂದಿನಿಂದಲೇ ಬಳಸುತ್ತ ಬಂದಿದ್ದಾರೆ. ಉದಾಹರಣೆಗೆ ಬಾಹುಬಲಿ (ನಾಗಚ. ೨೨-೯೫) ಚಂದ್ರಶೇಖರ (೮೮ ವ). ಈ ತರಹದ ಅಡವುಗಳನ್ನು ಕವಿಗಳು ಉಲ್ಲೇಖಿಸಬೇಕಾದರೆ ಅದರ ಮೂಲ ಇರುವುದೂ ಖಚಿತ. ಪುಂಡರೀಕವಿಠಲನ ನರ್ತನಿ.ಯಲ್ಲೂ ಚತರುದಾಮೋದರನ ಸಂಗೀದ.ದಲ್ಲೂ ವೇದನ ಸಂಗೀಮನಲ್ಲೂ ಇವನ್ನು ಕಾಣಬಹುದು.

ಚಂದ್ರಶೇಖರನು ಈ ಅಡವುಗಳನ್ನು ಅವಗಡದ ಅಡವುಗಳು ಎಂದೂ ಹೇಳುತ್ತಾನೆ ಎಂದರೆ ನರ್ತಕಿಯು ಪ್ರದರ್ಶಿಸಿದ ಅಡವುಗಳು ಸಾಹಸಮಯವು ಕಷ್ಟಸಾಧ್ಯವೂ ಆಗಿದ್ದುವೆಂದು ಕವಿಯ ಅಭಿಪ್ರಾಯ. ಇಂತಹ ಅಡವುಗಳ ಪ್ರಯೋಗಕ್ಕೆ ವಿಶೇಷವಾದ ವೇಷ ಭೂಷಣವೂ ಅಗತ್ಯ. ಕವಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನೃತ್ಯಕ್ಕೆ ತಕ್ಕ ನೇಪಥ್ಯಮಂ ಧರಿಸಿ ಎಂದು ಹೇಳಿರಬೇಕು.

ಈಗ ನರ್ತಕಿ ತನ್ನ ನೃತ್ಯದಲ್ಲಿ ಅಳವಡಿಸಿದ ಅಡವುಗಳ ಪರಿಶೀಲನೆ. ಕವಿ ಹೇಳಿರುವ ಅಡವುಗಳು ಧುವಾಡಗಳಿಗೂ,[8] ಅನಿಬಂಧ ಉರುಪು ನೃತ್ಯ ಪದ್ಧತಿಗೂ ಸೇರುತ್ತವೆ. (ಉರುಪುಗಳನ್ನು ನಾಗಚ : ನೃತ್ಯ ಸಂದರ್ಭದಲ್ಲಿ ವಿವರಿಸಿದೆ.)

. ಲವಣಿ ಹನ್ನೆರಡು ಉಡುಪು ಕ್ರಮಗಳಲ್ಲಿ ಒಂದು ಇದು. ವೇದ ಸಂಗೀತ ಮಕರಂದದಲ್ಲಿ ಲವಣಿಯ ಲಕ್ಷಣವನ್ನು ಸ್ಪಷ್ಟವಾಗಿ ಹೇಳುತ್ತಾನೆ.[9] ಮಂಡಲ ಸ್ಥಾನದಲ್ಲಿ ನಿಂತು ಬಲಗೈಯಲ್ಲಿ ಪತಾಕ, ಎಡಗೈಯಲ್ಲಿ ಅರ್ಧಚಂದ್ರ ಹಸ್ತಗಳನ್ನು ಹಿಡಿದು ಒಂದಾದ ನಂತರ ಒಂದು ಹಸ್ತವನ್ನು ಅರ್ಧಚಂದ್ರ ಮಾಡಿ, ಮೇಲುಭಾಗಕ್ಕೆ ಸುತ್ತಿಸುತ್ತ, ಭ್ರಮರಿಯಲ್ಲಿ ಸುತ್ತುತ್ತ, ಪತಾಕ ಹಸ್ತವನ್ನು ಕಟಿಪ್ರದೇಶದಲ್ಲಿಟ್ಟು, ಒಲಮುಖವಾಗಿಯೂ, ಎಡಮುಖವಾಗಿಯೂ ರೂಪಕತಾಳದಲ್ಲಿ ಎಗರುವಿಕೆಯಿಂದ ಸುತ್ತುವುದು.

. ಲಾಗು > ಲಾಗ ಮೇಲಕ್ಕೆ ಎಗರುವ ಕ್ರಿಯೆಯನ್ನು ಸೂಚಿಸುವುದು ಲಾಗ ಎಂದು ಸಂಗೀದ., ವೇಸಂಮ. ಹಾಗೂ ನರ್ತನಿ.ಕಾರರು ಹೇಳುತ್ತಾರೆ.[10] ಇಂತಹ ಎಗರುವಿಕೆಯನ್ನು ಹನ್ನೆರಡು ತರಹ ವಿವರಿಸಿ ಅವಕ್ಕೆ ಬಿಡುಲಾಗಗಳೆಂದು ಹೆಸರಿಸುತ್ತಾರೆ. ಒಂದೊಂದಕ್ಕೂ ಬೇರೆ ಬೇರೆ ಹೆಸರುಂಟು. ಅವುಗಳಲ್ಲಿ ಪ್ರತ್ಯೇಕವಾದ ಹಸ್ತ ಹಾಗೂ ಪಾದದ ಲಕ್ಷಣಗಳಿವೆ. ಚತುರ ದಾಮೋದರನು ಕನ್ನಡ ಭಾಷೆಯಲ್ಲಿ ಎಗರುವುದನ್ನು ಲಾಗ ಎನ್ನುತ್ತಾರೆ ಎಂದೂ ಹೇಳುತ್ತಾನೆ.[11]

27_6_PP_KUH

. ಮುರುಹು > ಮುರು > ಮೂರು –  ಇದು ಅನಿಬಂಧ  ಉರುಪು ಕ್ರಮದಲ್ಲಿ ಹೇಳಲಾಗುವ ಒಂದು ವಿಧ.[12] ಎಡಗೈ ಶಿಖರ ಹಸ್ತವನ್ನು ಹೃದಯದಲ್ಲೂ ಬಲಗೈ ಪತಾಕವನ್ನು ಭ್ರಮರಿಯನ್ನು ಮಾಡುತ್ತ ಪ್ರಸಾರಿಸಿ ಒಂದು ಕಾಲಿನಲ್ಲಿ ನಿಂತು ಎಡಗೈ ಶಿಖರವನ್ನು ಭುಜ ಪ್ರದೇಶದಲ್ಲಿಟ್ಟು ಬಲಗೈ ತ್ರಿಪತಾಕವನ್ನು ಹಿಡಿದು ಕೆಳಗೆ, ಮುಂದೆ, ಹಿಂದೆ, ಹಾಗೂ ಪಕ್ಕಗಳಲ್ಲಿ ಓರೆಯಾಗಿ ಬಗ್ಗಿ ಹಿಡಿದರೆ ಅದು ಮೂರು ಲಕ್ಷಣವಾಗುವುದು.[13] ನರ್ತನಿ. ದ ವಿವರಣೆಯ ಇದೇ ಲಕ್ಷಣವನ್ನು ಹೋಲುತ್ತದೆ.[14]

. ಗುಂಡಲ ಇದೂ ಕೂಡ ಅನಿಬಂಧ ಉರುಪು ಕ್ರಮಗಳಲ್ಲಿ ಒಂದು ತಾಲವನ್ನು ಅನುಸರಿಸಿ ಮೊಳಕಾಲಿನಿಂದ ವೇಗವಾಗಿ ಬಾಹ್ಯ ಭ್ರಮರಿಗಳನ್ನು ಮಾಡಿದರೆ ಅದು ಗುಂಡಾಲ / ಗುಂಡಲ ಉರುಪು[15] ಬಾಹ್ಯಭ್ರಮರಿ ಮೈಯ ಹೊರಭಾಗದಿಂದ ಮಾಡುವಂತಹುದು.

. ಲಾಗಾನುಲಾಗು ಈ ತರಹದ ಉರುಪನ್ನು ಶಾಸ್ತ್ರದಲ್ಲಿ ಹೇಳಿಲ್ಲವಾದರೂ ಈ ಮೊದಲು ವಿವರಿಸಿದ ಲಾಗು (ಲಾಗ)ವನ್ನು ಅನುಸರಿಸಿ ಪುನರಾವರ್ತಿಸುವ ಕ್ರಮವೆಂದು ಊಹಿಸಬಹುದು.

. ಬೀಸು (ಬೀಸುಗಾಲು) – ಎರಡೂ ಪಾದಗಳನ್ನು ಅಂತರಿಕ್ಷದಲ್ಲಿ ಇಳಿಸಿದರೆ ಅದನ್ನು ಮುನಿಯು ಬೀಸು ಎನ್ನುತ್ತಾನೆ. ನರ್ತನಿ. ಇದರ ಲಕ್ಷಣವನ್ನು ಹೇಳುತ್ತದೆ.[16] ಮೇಲಕ್ಕೆ ನೆಗೆದು ಕಾಲುಗಳನ್ನು ಹರಡುವುದರಿಂದಲೂ, ಮುಂಗಾಲುಗಳಿಂದ ಕುಣಿದು ಒಂದು ಕಾಲನ್ನು ನೆಲದಿಂದ ಮೇಲಕ್ಕೆ ಬೀಸುವದರಿಂದಲೂ ಬೀಸುಗಾಲು ಸಾಧ್ಯವಾಗುವುದು.[17]

. ದೂಷಿ ವೇದನು ಸಂಗೀತ ಮಕರಂದದಲ್ಲಿ ದೂಸಿ (ಷಿ) ಯನ್ನು ಧುವಾಡ ನೃತ್ತದಲ್ಲಿ ಮೂರನೆಯದಾಗಿ ಹೇಳುತ್ತಾನೆ. ಸಂತತ ಸ್ಥನದಲ್ಲಿ[18] ನಿಂತು, ಶಿಖರ ಹಸ್ತಗಳನ್ನು (ನೋಡಿ ನಕ್ಷೆ -೧ ಅಸಂಯುತಹಸ್ತ) ಹೃದಯದ ಸಮೀಪ ಹಿಡಿದು ನಂತರ ಬಲಗೈ ಪತಾಕವಾಗಿ ಹರಡಿ, ಹೃದಯದ ಸಮೀಪ ಎಡಗೈಯಲ್ಲಿ ಶಿಖರವನ್ನು ಹಿಡಿದು, ಬಲಗಾಲಿನ ಪಾದತಲವನ್ನು ಅರ್ಧತಲ ಹೃದಯದಿಂದ ಮುಂದೆ ಇಟ್ಟು (ವಕ್ಷಸ್ಥಳದ ಅಂತರದಿಂದ ಅರ್ಧತಲ) ಕುಂಚಿತ ಸ್ಥಾನದಲ್ಲಿ[19] ನಿಂತು, ಪಾದ ಹಾಗೂ ಹಸ್ತಗಳನ್ನು ಹರಡಿಸುತ್ತ, ಅಡ್ಡವಾಗಿ ಎಗರಿ ಮತ್ತೆ ಸಂಹತ ಸ್ಥಾನಕ್ಕೆ ಬರುವುದು.

. ವಿಷಮದೂಷಿ ಈ ಹೆಸರಿನ ದುವಾಡ ಅಥವಾ ಉರುಪು ಶಾಸ್ತ್ರದಲ್ಲಿ ಕಂಡು ಬರುವುದಿಲ್ಲ. ದೂಷಿಯನ್ನೇ ವಿಷಮತಾಳದಲ್ಲಿ (ನೋಡಿ ಅನುಬಂಧ ಅ. ಪರಿಭಾಷೆ) ಮಾಡುವುದು ಎಂದು ಊಹಿಸಬಹುದು.

. ಪೇರಣೆ ಇದು ಶಾಸ್ತ್ರಗಳು ಹೇಳುವ ಒಂದು ವಿಶೇಷ ನೃತ್ಯಪ್ರಕಾರವೇ ಆಗಿದೆ. (ನೋಡಿ ಅ.೪) ಕವಿಯು ಅವಗಡದ ಅಡುವುಗಳನ್ನು ಅಳವಡಿಸಿ ಎಂದು ಹೇಳಿರುವುದರಿಂದ ಪೇರಣೆ ಈ ಸಂದರ್ಭದಲ್ಲಿ ಸಮರ್ಪಕವಾಗಲಾರದು. ಆದರೆ ಪೇರಣಿಯಲ್ಲಿ ಬರುವ ವೈವಿಧ್ಯಮಯ ಪಾದಚಲನೆಗಳನ್ನು ಹೊಂದಿದ ಘರ್ಘರ ಭೇದವು ಇಲ್ಲಿ ಸಂಭಾವ್ಯ. (ಪಾಠಾಂತರದಲ್ಲಿ ಕರಣಂ ಎಂದಿದೆ. ಆ ಪಾಠವು ಸಮರ್ಪಕವಾಗದು. ಕರಣವು ಮಾರ್ಗ ಪದ್ಧತಿಯಲ್ಲಿದ್ದು ನೂರೆಂಟು ಕರಣಗಳಲ್ಲಿ ಮೇಲೆ ಹೇಳಿದ ಕರಣಗಳು ಸೇರುವುದಿಲ್ಲ.)

೧೦. ಡೊಕ್ಕರ ಮಡಿ ಮಂಡಿ ಈ ಹೆಸರಿನ ಉಡುಪು ಕ್ರಮವು ಶಾಸ್ತ್ರಗಳಲ್ಲಿ ಕಂಡು ಬರುವುದಿಲ್ಲ. ಆದರೂ ಇದರ ಹೆಸರಿನಿಂದ ಲಕ್ಷಣವನ್ನು ತಿಳಿಯಬಹುದಾಗಿದೆ. ಮಂಡಿಯನ್ನು ಬಗ್ಗಿಸಿ,ದರಿಂದ ಬಲವಾದ ಹೊಡೆತಗಳನ್ನು ನೆಲದ ಮೇಲೆ ಮಾಡುವುದು ಎಂದರ್ಥವಿರಬಹುದು.[20] ನೃತ್ಯಪ್ರಯೋಗ ಕ್ಷೇತ್ರದಲ್ಲಿ ಇಂದಿಗೂ ಮಂಡಿ ಅಡವು ಎಂದು ಪ್ರಸಿದ್ಧವಿದೆ. (ನೋಡಿ ಚಿತ್ರ ಅಡವುಗಳು). ಇಂತಹ ಅಶಕ್ಯ ಅಡವುಗಳಲ್ಲಿ ಕೆಲವನ್ನು ನರ್ತಕಿ ತನ್ನ ನೃತ್ಯದಲ್ಲಿ ಆಯ್ದು ಅಳವಡಿಸಿಕೊಂಡಿದ್ದಳೆಂದು ಕವಿ ಹೇಳುತ್ತಾನೆ.

ಇಲ್ಲಿಂದ ಮುಂದೆ ನರ್ತಕಿಯು ತಾಂಡವವನ್ನು ಆಡಲು ಬಳಸಿದ ಅಡವುಗಳ ಬಗ್ಗೆಯೂ ಹೇಳುತ್ತಾನೆ:

ಮಲಕು ಕತರ ಸುಳುಹು ಮೊಲಕಾಲು ಸುಳುಹು ಮೊದಲಾದೊದವುಗಳಂ (ಮೊದಲಾದಡವುಗಳಂ) ಕೂಡಿ ತುಳಿಲ ಹೊಳಹು ದೋಱೆ ತಾಂಡವಮಂ ಬಿತ್ತರಿಸಿ ತರಹರ ನಿಸ್ಸರಣೆ ಒತ್ತುಮಾನ ಬೆಟ್ಟುಮಾನ ತಿರುಪುಮಾನ ಕೇಕು ಅಳಕು ಓಸರ ಮೊದಲಾದ ಅಂದವುಳ್ಳಡವುಗಳಂ——— (೮೮ .)

ಕವಿ ಮಲಗು, ಕತರ, ಸುಳುಹು, ಮೊಳಕಾಲು ಸುಳುಹುಗಳನ್ನು ತಾಂಡವದಲ್ಲಿ ಬಳಸುವ ಅಡವುಗಳೆಂದು ಹೇಳುತ್ತಾನೆ. ಈಗ ಇವುಗಳ ಪರಿಶೀಲನೆ ಮಾಡಬಹುದು.

. ಮಲಗು ವೇದ ಹಾಗೂ ಪುಂಡರೀಕ ವಿಠಲ ಇಬ್ಬರೂ ಮಲಕವನ್ನು ಹೇಳಿದರೂ ಅವರಿಬ್ಬರಲ್ಲಿಯೂ ಮತಭೇದವಿದೆ. ವೇದನು ಮಲಕವನ್ನು ಹೀಗೆ ಹೇಳಿದ್ದಾನೆ. ಮಂಡಲಸ್ಥಾನದಲ್ಲಿ ನಿಂತು ಹೃದಯದಲ್ಲಿ ಶಿಖರ ಹಸ್ತಗಳನ್ನು ಹಿಡಿದು, ಕೆಳಗೂ ತಲೆಯ ಮೇಲೂ ಸೌಷ್ಠವದಿಂದ ಕಂಪಿಸುತ್ತ ನರ್ತಿಸುತ್ತ ವಿಮುಖವಾಗಿ ನಿಲ್ಲುವ[21] ಕ್ರಿಯೆ. ಪುಂಡರೀಕ ವಿಠಲನು ಮಲಕದ ಪಾದಭೇದ ಅಥವಾ ನರ್ತನ ಕ್ರಿಯೆಯನ್ನು ಹೇಳಿಲ್ಲ ಆತ ಅಲಪದ್ಮಹಸ್ತ (ನೋಡಿ ನಕ್ಷೆ ೧ ಅಸಂಯುತ ಹಸ್ತ)ವನ್ನು ವೈವಿಧ್ಯಮಯವಾದ ಬಾಹುಭೇದಗಳಿಂದ ಶಿರ, ಕಟಿ ಪ್ರದೇಶ ಹಾಗೂ ಪಾರ್ಶ್ವಗಳಲ್ಲಿ ಸುತ್ತಿಸುವುದು ಎಂದು ಹೇಳಿದ್ದಾನೆ.[22] ಅಲಪದ್ಮ ಹಸ್ತದ ವರ್ತನಕ್ಕೆ ಸರಿಯಾಗಿ ಪಾದಭೇದಗಳನ್ನು ಮಾಡಬಹುದು. ಚಂದ್ರಶೇಖರನು ಉಲ್ಲೇಖಿಸುವ ಮಲಕ (ಕು)ವನ್ನು ವೇದನು ಹೇಳುವಂತೆ ಪ್ರಯೋಗಿಸುವುದು ಸಮರ್ಪಕ.

. ಕತರ ಇದನ್ನು ವೇದನು ದೇಶಿ ನೃತ್ತವೆಂದು ಹೇಳಿ ಅದರ ವಿವರಣೆ ಕೊಡುತ್ತಾನೆ. ಕರ್ತರೀ ಶಬ್ದವೇ ಕತರವೆಂದು ಭರತಕೋಶಕಾರನ ಅಭಿಪ್ರಾಯ.[23] ಅಲ್ಲದೆ ಇದು ದೇಶಿ ನೃತವೆಂದೂ ಹೇಳಿದೆ. ಆದಿತಾಲದಲ್ಲಿ ನಾಲ್ಕು ದಿಕ್ಕುಗಳಿಗೆ ಉಡುಪಾಂಗ ಮಾಡುತ್ತ ತಿರಿಪ ಭ್ರಮರಿ (ನೋಡಿ ಅನುಬಂಧ ಅ. ಪರಿಭಾಷೆ)ಯಲ್ಲಿ ಅಂತ್ಯವಾಗುವುದು ಕರ್ತರಿ ಉಡುಪು. ಮೊದಲಿಗೆ ಮಂಡಲ ಸ್ಥಾನ (ನೋಡಿ ಅನುಬಂಧ ಅ.ಪರಿಭಾಷೆ)ದಲ್ಲಿ ನಿಂತು ಬಲಗೈ ಪತಾಕವನ್ನು ಪ್ರಸಾರಿಸುತ್ತ ಎಡಗೈ ಶಿಖರ (ನೋಡಿ ಅನುಬಂಧ ಇ. ನಕ್ಷೆ ೧ ಅಸಂಯುತ ಹಸ್ತ) ಹಿಡಿದು ಎಡಗಾಲಿನಿಂದ ಗರುಡಸ್ಥಾನ[24]ವನ್ನು ಮಾಡಿ ಪುನಃ ಮೊದಲಿನ ಸ್ಥಿತಿಗೆ ಬರುವುದು. ಶರೀರವನ್ನು ಹಿಂದಕ್ಕೆ ಬಾಗಿಸಿ, ಬಲಗೈ ಪ್ರಸಾರಿಸಿ ಪುನಃ ಗರುಡ ಸ್ಥಾನಕ್ಕೆ ಬಂದು ಎಡಗೈ ಪತಾಕವನ್ನು ಪ್ರಸಾರಿಸಿ, ಎರಡು ಶಿಖರ ಹಸ್ತಗಳನ್ನು ಸ್ವಸ್ತಿಕವಾಗಿ[25] ಹೃದಯದ ಮುಂದೆ ಹಿಡಿದು, (ಪಾದಗಳೂ ಸ್ವಸ್ತಿಕದಲ್ಲಿದ್ದರೆ ಮುಂದಿನ ವಿವರಣೆಗೆ ಸಮರ್ಪಕವಾಗುವುದು) ಹಸ್ತಗಳನ್ನು ಪಲ್ಲಟದಿಂದ ಪ್ರಸಾರಿಸುವುದು. ಹೀಗೆಯೇ ಬಾಗುತ್ತ ಸ್ವಸ್ತಿಕವನ್ನು ಪಲ್ಲಟಗೊಳಿಸುವುದು.

. ಸುಳುಹು ಶಾಸ್ತ್ರಗಳಲ್ಲಿ ಈ ಪದ ದೊರಕದಿದ್ದರೂ ಕವಿ ಮುಂದಿನ ಸಾಲುಗಳಲ್ಲಿ ಹೇಳುವ ಸುಂಟರಗಾಳಿಯಂತೆ ಸುಳುಹಿನೊಳದವಿಸಿ ಎಂಬ ಮಾತಿನ ಆಧಾರದ ಮೇಲೆ ಸುಳುಹು, ತೀವ್ರಗತಿಯಲ್ಲಿ ತಿರುಗುವ ಕ್ರಿಯೆಯೆಂದು ಹೇಳಬಹುದು.

. ಮೊಳಕಾಲು ಸುಳುಹು ಮೊಳಕಾಲುಗಳನ್ನು ನೆಲದ ಮೇಲೆ ಊರಿ ತೀವ್ರವಾಗಿ ಬುಗುರಿಯಂತೆ ತಿರುಗುವ ಕ್ರಮವಿರಬಹುದು. ಇಂತಹ ಕ್ರಿಯೆಯನ್ನು ಯಕ್ಷಗಾನ ನೃತ್ ಪದ್ಧತಿಯಲ್ಲಿ ಇಂದಿಗೂ ಕಾಣಬಹುದು.[26]

ಮೇಲೆ ವಿವರಿಸಿದ ಮಲಕ, ಕತರ, ಸುಳುಹು ಹಾಗೂ ಮೊಳಕಾಲು ಸುಳುಹುಗಳಂತಹ ಅಡವುಗಳಿಂದ ಪಾದಘಾತವನ್ನು ಪ್ರಕಾಶ ಪಡಿಸುತ್ತ ನರ್ತಕಿ ತಾಂಡವವನ್ನು ವಿಸ್ತಾರವಾಗಿ ಮಾಡಿದಳು ಎಂದು ಕವಿ ಹೇಳುತ್ತಾನೆ.

ಮುಂದೆ ನರ್ತಕಿ ತರಹರ, ನಿಸ್ಸರಣೆ, ಒತ್ತುಮಾನ, ಬೆಟ್ಟಮಾನ, ತಿರುಪುಮಾನ, ಕೇಕು, ಅಳಕು, ಓಸರ ಮುಂತಾದ ಅಂದ ಉಳ್ಳ ಅಡವುಗಳನ್ನು ಆಯ್ದು ನರ್ತಿಸಿದ ಪ್ರಸ್ತಾಪವನ್ನು ಚಂದ್ರಶೇಖರ ಕವಿ ಮಾಡುತ್ತಾನೆ.

. ತರಹರ ಒಂದು ದೇಶೀ ಲಾಸ್ಯಾಂಗ. ನರ್ತಕಿಯ ಕಣ್ಣುಗಳು, ಅಂಗಾಂಗಗಳು, ಸ್ತನಗಳು ತ್ವರಿತವಾಗಿ ಕಂಪನಗೊಳ್ಳುವ ಕ್ರಿಯೆ. (ನೋಡಿ ಅನುಬಂಧ ಅ. ಪರಿಭಾಷೆ)

. ನಿಸ್ಸರಣೆ ಶಾಸ್ತ್ರಗಳು ಹೇಳುವ ನಿಜ್ಜವಣೆಯೇ[27]೪ ನಿಸ್ಸರಣೆ. ನಿಜ್ಜವಣೆಯನ್ನು ಅಶೋಕಮಲ್ಲ ನಿಜಾಪನ್ ಎಂದಿದ್ದಾನೆ. ರೇಖಾ ಸಹಿತವಾಗಿ ಆಕರ್ಷಕವಾದ, ನೇತ್ರ ಹಾಗೂ ಹಸ್ತ ಚಾಲನೆಗಳಿಂದಲೂ ಸಭಾಸದರನ್ನು ತನ್ನ ನರ್ತನದಿಂದ ಮೋಹಿತಗೊಳಿಸುವ ದೇಶೀ ಲಾಸ್ಯಾಂಗವೇ ನಿಜ್ಜವಣೆ.

. ಒತ್ತುಮಾನ ಈ ದೇಶೀ ಲಾಸ್ಯಾಂಗವನ್ನು ಶಾಸ್ತ್ರಗಳಲ್ಲಿ ಹೇಳಿಲ್ಲ. ಪದದ ಅರ್ಥವಾದ ನೂಕು, ಅದುಮು, ಆಕ್ರಮಿಸು ಇದರ ಆಧಾರದ ಮೇಲೆ ಪಾದಗಳಿಂದ ನೆಲವನ್ನು ಒತ್ತಿರಂಗವನ್ನು ಆಕ್ರಮಿಸುವಂತಹ ಚಲನಾ ವಿಶೇಷವಿರಬಹುದು.

. ಬೆಟ್ಟುಮಾನ ಪದದ ಅರ್ಥದ ಆಧಾರದ ಮೇಲೆ ಹೇಳಬಹುದಾದರೆ ಕಾಲಿನ ಹಿಮ್ಮಡಿಯಿಂದ ನೆಲವನ್ನು ನಾಟಿಸುವ ಅಥವಾ ಘಟ್ಟಿಸುವ ಕ್ರಿಯೆಯಿರಬಹುದು. ಇದು ಇಂದಿಗೂ ನಾಟ್ಟಡವು ಎಂದು ಪ್ರಸಿದ್ಧಿ ಹೊಂದಿದೆ. (ನೋಡಿ ಚಿತ್ರ ಅಡವುಗಳು)

. ತಿರುಪುಮಾನ ಬುಗುರಿಯಂತೆ ದೇಹವನ್ನು ತಿರುಗಿಸುತ್ತ ರಂಗಸ್ಥಳದಲ್ಲಿ ಚಕ್ರಾಕಾರವಾಗಿ ಸುತ್ತುವುದು.

. ಕೇಕು ಇದರ ಲಕ್ಷಣ ಸ್ವರೂಪ ಸ್ಪಷ್ಟವಿಲ್ಲ. ಶಾಸ್ತ್ರಗಳಲ್ಲಿ ಈ ಪದವಿಲ್ಲ. ಕೋಪು[28] ಇರಬಹುದೇನೋ?

. ಅಳಕು ಇದರ ಲಕ್ಷಣ ಸ್ವರೂಪಗಳೂ ಸ್ಪಷ್ಟವಾಗುತ್ತಿಲ್ಲ. ಶಾಸ್ತ್ರಗಳು ಹೇಳುವ ಅಲಗ[29] ಇರಬಹುದೇನೋ?

. ಓಸರ ಓಯಾರವು ಪಾಠಾಂತರಗೊಂಡು ಓಸರವಾಗಿರಬಹುದೇ? ಓಯಾರವು ಒಂದು ದೇಶೀ ಲಾಸ್ಯಾಂಗ. ಅಂಗಹಾರಗಳ ಸಮೇತ ತಲೆಯನ್ನು ಓರೆಯಾಗಿ ಅಲುಗಾಡಿಸುವುದು ಓಯಾರ[30] ಎನಿಸಿದೆ.

ಪಾದಗಳ ಮೆಟ್ಟಿನಿಂದ ವಿಸ್ತರಿಸಲಾದ ತಾಂಡವದ ನಂತರ ನರ್ತಕಿ ಮುಖಚಾಲಿ, ನೇರು ಹಾಗೂ ಉರುಪುಗಳನ್ನು ಗೀತ ಪ್ರಬಂಧ ಹಾಗೂ ಶಬ್ದ ಪ್ರಬಂಧಗಳಲ್ಲಿ ಮಾಡುವಳೆಂದಿದೆ.

ಮುಖಚಾಲಿ ಅನಿಬಂಧಕ ನೃತ್ಯಗಳ ಪರಿವಿಡಿಯಲ್ಲಿ ಮೊದಲನೆಯದು. ಮುಖವೆಂದರೆ ಪೂರ್ವರಂಗ. ಅದನ್ನು ಹಿಂಬಾಲಿಸಿ ಮಾಡುವ ಗತಿಯು ಮುಖಚಾಲಿ ನೃತ್ತವೆಂದು ಪ್ರಾಚೀನ ಪಂಡಿತರು ಹೇಳಿದ್ದಾರೆ.[31] ನಾಂದಿ ಮತ್ತು ಪುಷ್ಪಾಂಜಲಿಯ ನಂತರ ಮಾಡುವ ಪರಿಚಯಾತ್ಮಕ ರೂಪದ ನೃತ್ತವೇ ಮುಖಚಾಲಿ ಎಂದು ದಾಮೋದರನು ಹೇಳುತ್ತಾನೆ.

ಎರಡನೆಯದಾಗಿ ನೇರು ಎಂದು ಹೇಳುತ್ತಾನೆ. ನೇರು ಲಕ್ಷಣವನ್ನು ಭಕ್ತಮಂ. ಹಾಗೂ ಸಾಸಂಭ.ಗಳು  ಉಲ್ಲೇಖಿಸುತ್ತವೆ. ಇದನ್ನು ಸಮನೃತ್ತವೆಂದು ಗುರುತಿಸಿ, ಸಮನೃತ್ತದಾರಂಭದಲ್ಲಿ ಅರುವತ್ತು ನಾಲ್ಕು ಹಸ್ತಗಳು, ಅಷ್ಟಮಂಡಲಗಳು, ಅಷ್ಟದಿಕ್ಕುಗಳಿಗೂ ಆದಿತಾಳ (ರಾಸತಾಲ) ಲಯದಲ್ಲಿ ವಲಿತ ಮುಂತಾದ ಕರಣಗಳನ್ನು ಬಾಹ್ಯಭ್ರಮರಿಗಳನ್ನು ಬಳಸಿ ಮಾಡುವಂತಹ ಸಮನೃತ್ತ[32] ಎಂದು ಶಾಸ್ತ್ರಕಾರರು ಹೇಳುತ್ತಾರೆ. ಆದರೆ ಸಂಗೀದ, ಹಾಗೂ ನರ್ತನಿ.ಗಳಂತೆ ಅದರ ವಿಸ್ತೃತರೂಪವನ್ನು ಕೊಡದೇ ಸಂಗ್ರಾಹ್ಯವಾಗಿ ಹೇಳುತ್ತಾರೆ.

ಈಗ ನೇರು ಅಥವಾ ನೇರಿಯ ಪರಿಶೀಲನೆ ನೇರು ಅಥವಾ ನೇರಿಯು ಹನ್ನೆರಡು ಉಡುಪು (ಉರುಪು)ಗಳಲ್ಲಿ ಮೊದಲನೆಯದು. ಇದನ್ನು ಶುದ್ಧನೇರಿ ಎಂದಿದೆ. ನೇರಿ (ನೇರು) ಯಲಕ್ಷಣ ಹೀಗಿದೆ – ಕರಗಳಲ್ಲಿ ನಾನಾ ಮುದ್ರೆಗಳನ್ನು ಮಾಡುತ್ತಾ ರೇಖೆ, ಸೌಷ್ಠವ (ಪ್ರಮಾಣ) ಗಳಿಂದ ದಿಕ್ಕುಗಳಿಗೆ ಅಭಿಮುಖವಾಗಿ ಚಕ್ರಾಕಾರವಾಗಿ ನರ್ತಿಸುವುದು ಶುದ್ಧನೇರಿ.[33] ಪುಂಡರೀಕ ವಿಠಲನು ಶುದ್ಧನೇರಿಯ ಲಕ್ಷಣವನ್ನು ವಿಸ್ತೃತವಾಗಿ ಹೇಳುತ್ತಾನೆ.[34] ಚತುರಸ್ರ ಸ್ಥಾನಕದಲ್ಲಿ[35] ನಿಂತು ವಿಲಂಬಿತಲಯ ರಾಸತಾಲದಲ್ಲಿ[36] ನರ್ತಿಸುವಂತದು. ಕೈಗಳಲ್ಲಿ ಪತಾಕ ಹಸ್ತವನ್ನು ಹಿಡಿದು ರಥ ಚಕ್ರಚಾರಿ[37] (ದೇಶೀಭೌಮಚಾರಿ)ಯನ್ನು ಒಂದು ಪಾದದಲ್ಲಿ ಮಾಡುವುದು. ಮತ್ತೊಂದರಲ್ಲಿ ಯಥೋಚಿತವಾದ ಚಾರಿಯನ್ನು ರೇಖಾ, ಸೌಷ್ಠವಗಳಿಂದ (ನೋಡಿ ಅನುಬಂಧ ಅ.ಪರಿಭಾಷೆ) ಎಡಬಲಗಳಲ್ಲಿ ಗತಿ ಸಂಚಾರದೊಡನೆ ಮಾಡುವುದು. ಇದು ಶುದ್ಧನೇರಿಯ ಲಕ್ಷಣ. ವೇದನೂ ಸಂಗೀತ ಮಕರಂದದಲ್ಲಿ ಹೆಚ್ಚು ಕಡಿಮೆ ಇದೇ ಲಕ್ಷಣವನ್ನು ಹೇಳುತ್ತಾನೆ. ಕರ ಹಾಗೂ ಪಾದಗಳಲ್ಲಿ ಸ್ವಸ್ತಿಕ ಸ್ಥಾನವನ್ನು (ಹಿಂದೆ ವಿವರಿಸಿದೆ) ಮಾಡಬೇಕೆಂದು ಹೇಳುತ್ತಾನೆ. ಪತಾಕವಷ್ಟೇ ಅಲ್ಲದೆ ಶಿಖರ, ಚತುರ (ನೋಡಿ ನಕ್ಷೆ ೧ ಅಸಂಯುತ ಹಸ್ತಗಳು) ಹಸ್ತಗಳನ್ನು ಹೇಳುತ್ತಾನೆ.[38]

ಕವಿಯು ಮುಖಚಾಳಯ ನೇರು ಉರುಪುಗಳಂ ಕೊಳುತ್ತ ಎಂದು ಹೇಳುವುದರಿಂದ ಮುಖಚಾಳಯ (ಮುಖಚಾಲಿ) ನಂತರ ನೇರಿ ಉರುಪು ಭೇದಗಳಾದ ನೇರಿ ಶುದ್ಧ, ನಡ, ಕರಣ, ಭಾವ, ಸಾಲಂಗ ಹಾಗೂ ಸಂಕೀರ್ಣ ನೇರಿಗಳನ್ನು ಆಕೆ ನರ್ತಿಸಿರಬಹುದು ; ಅವುಗಳ ಸ್ವರೂಪ ಪರಿಶೀಲನೆ.

() ನೇರಿ ಹಿಂದೆ ವಿವರಿಸಿದಂತೆ
() ಕರಣನೇರಿ[39] ನೇರಿಯನ್ನೂ ಕರಣಗಳಿಂದ ಕೂಡಿ ಮಾಡುವುದು.
() ನಡನೇರಿ[40] –  ಕರಣ ನೇರಿಯನ್ನು ತೀವ್ರಗತಿಯಲ್ಲಿ ಮಾಡುವುದು
() ಭಾವನೇರಿ[41] –  ರಸಭಾವಾದಿಗಳಿಂದ ಪುಷ್ಠವಾಗಿರುವುದು.
() ಶುದ್ಧನೇರಿ[42] ಪತಾಕಾದಿ ಹಸ್ತಗಳಿಂದ ಮಾಡುವಂತಹುದು.
() ಸಾಲಂಗನೇರಿ[43] ನೇರಿಯ ಪ್ರಚಾರದಲ್ಲಿ ಸಂಯುತ ಹಸ್ತಗಳ ಮಿಶ್ರಣದ ಬಳಕೆ ಇರುವುದು.
() ಸಂಕೀರ್ಣ ನೇರಿ[44] ಅಸಂಯುತ, ಸಂಯುತ ಹಾಗೂ ನೃತ್ತ ಹಸ್ತಗಳ ಮಿಶ್ರಣದಿಂದ ಮಾಡುವಂತಹ ನೇರಿ. ನರ್ತಕಿಯು ಮುಖಚಾಲಿಯ ನಂತರ ಕರಣಗಳನ್ನು, ವಿಲಂಬ ಮತ್ತು ದ್ರುತ ಕಾಲಗಳ ನೃತ್ತಬಂಧವನ್ನು, ರಸಭಾವಾದಿಗಳನ್ನು ಸೂಸುವ ನೃತ್ಯಗಳನ್ನು, ವಿಪುಲವಾದ ಹಸ್ತಗಳ ಬಳಕೆಯಿರುವ ನೃತ್ತ ಬಂಧಗಳನ್ನೂ ಪ್ರದರ್ಶಿಸಿದಳು ಎಂದು ಮೇಲಿನ ವಿವರಣೆಯಿಂದ ತಿಳಿದು ಬರುತ್ತದೆ.

ಇದರ ನಂತರ ಶಬ್ದಪ್ರಬಂಧ ಹಾಗೂ ಗೀತ ಪ್ರಬಂಧಗಳನ್ನೂ ನರ್ತಕಿಯು ನರ್ತಿಸಿದ ವೈಖರಿಯ ವೈಭವವನ್ನು ಕವಿ ಹೀಗೆ ಹೇಳುತ್ತಾನೆ :

ಗೀತದ ಬಂಧಮಂ ಮೈಯೊಳಳವಡಿನೆ ಕೋಪಿನ ಸೇರುವೆಯಂ ಕಾಣಿಸಿ ರೇಖೆಯಿಂದ ರೂಪದೋಱೆಸಿ ಚೌಕದಿಂದ ಚಂದಂ ಬಡಿಸಿ ಮುಖರಾಗದಿಂದ ರಂಜಿಸಿ ದಿಟ್ಟಿಯಿಂದೆ ಊಹಿಸಿ ಜಕ್ಕವಕ್ಕಿಯ ನಿಲುಕಡೆಯಂತೆ ದರುಗೊಳಿಸಿ ಪುತ್ತಳಿಯಂತೆ ಪಿಡಿಯ ಬಲ್ವ ನೆಪ್ಪಂಬಡಿಸಿ ಮೀಂಬುಲಿಗನಂತೆ ಲಾಗಿನಪವನಮಂ ಬಲಿದು ಎಳವಾವಿನದೊಳಹಿನಂತೆ ಮೈಲವಣಿಯ ತೋಱೆ ತಿಗುರಿಯಂತೆ ತಿರುಪದದರುವಂ ನಿಲಿಸಿ ಸುಂಟರಗಾಳಿಯಂತೆ ಸುಳುಹಿನೊದವಿಗೆ ಲಾಸ್ಯದ ರಹಸ್ಯ ಮನಱಪಿ       (೮೮ .)

ನರ್ತಕಿಯು ತನ್ನ ಶರೀರಾದ್ಯಂತ ತಾಳವನ್ನೂ ಅನುಭಾವಿಸುತ್ತ, ತಾಳಬದ್ಧವಾದ ನರ್ತನದಲ್ಲಿ ೬೪ ಹಸ್ತ ಹಾಗೂ ದೃಷ್ಟಿಗಳನ್ನು ಚೆನ್ನಾಗಿ ಸೇರಿಸಿ, ಶಾಸ್ತ್ರಸಮ್ಮತವಾದ ರಚನೆಗಳನ್ನು ರೇಖಾ ಸಹಿತವಾಗಿ ಮಾಡಿ ವಿಳಂಬಕಾಲದ ನರ್ತನದಿಂದ ಚಂದವನ್ನು ದ್ವಿಗುಣಗೊಳಿಸಿ, ಮುಖರಸಗಳನ್ನು ತೋರುತ್ತ, ಚಕ್ರವಾಕ ಪಕ್ಷಿಯು ನೆಲದಲ್ಲಿ ಕುಳಿತಂತೆ ದರು ವನ್ನು[45] ಮುಕ್ತಾಯಗೊಳಿಸುತ್ತ, ಮೀನಿನಂತೆ ಚಂಚಲವಾದ ಲಾಗವನ್ನು ಪ್ರದರ್ಶಿಸಿ ಕುಂಬಾರನ ಚಕ್ರದಂತೆ ಸರಾಗವಾಗಿ ತಿರುಪುಗಳನ್ನು ಸುತ್ತುತ್ತಾ ಪಾದಗಳನ್ನು ಸುಳಿಯಂತೆ ಸುತ್ತುತ್ತಾ ಲಾಸ್ಯವೆಂದರೆ ಹೀಗೆ ಎಂದು ಅದರ ರಹಸ್ಯವನ್ನು ಎಲ್ಲರಿಗೂ ಪ್ರಕಾಶ ಪಡಿಸುವಂತೆ ಆಕೆ ನರ್ತಿಸುತ್ತಿದ್ದಲು. ಇಂತಹ ಅದ್ಭುತ ಲಾಸ್ಯ ನರ್ತನದ ನಂತರ ಪೆಕ್ಕಣ ಪೇರಣ, ಕುಂಡದಂಡ ರಾಸಕಂಗಳಿಂ ಕಂಗೊಳಿಸುತ್ತಿರ್ದಳಂತು ಮಲ್ಲದೆಯುಂ (೮೮ ವ.)[1] Bharata’s Art Then and Now – Dr. Padma Subramanya, p. 77.

[2] ಕ.ಸಾ.ಪ. ನಿಘಂಟು – ಸಂ. ೧, ಪು. ೧೪೮.

[3] Bharata’s Art Then and Now – Dr. Padma Subramanya, p. 79.

[4] ಪಾದಾಭ್ಯಾಂ ಕುಟ್ಟನಂ ಭೂಮೌ ತಟ್ಟಡವಾಹ್ಯಯಮ್ ||
ಭವೇತ್ತತ್ ಸಮಕುಟ್ಟನಮ್ ||
ವಿಲಂಬಾದಿ ಪ್ರೆಭೇದೇನತೆದೇವಾವರ್ತತೇಪುನಃ |
ಉದಾಹರಣಮ್ – ಥೈಯೊ ಥೈ ಇತಿ. ಸಂಗೀಸಾ-xxxvi ಸಂ.ವಿ. ರಾಘವನ್

[5] Bharata’s Art Then and Now  p.80.

[6] ಅದೇ ಪು. ೭೭.

[7] Bharatanatya, A Critical Study, A Satyanarayana, pp. 138-39.

[8] ಧುವಾಡಯಾವುದರ ಮೊದಲು, ಕೊನೆಗಳಲ್ಲಿ ಭ್ರಮರಿಯಿದ್ದು ಸುಲೂ, ಮೂರು, ಲಾಗಗಳು, ಭುಜಂಗ ತ್ರಾಸಿತಕರಣದಲ್ಲಿ ಬಿಡುತೆಗಳು ಇರುತ್ತವೋ ಅದು ಧುವಾಡ ನೃತ್ತ.
ನರ್ತನಿ. ೭೫೭

[9] ಲವಣಿ – ವೇಸಂಮ – ಹಸ್ತಪ್ರತಿ (A.141) ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿ.ವಿ. ಹಾಗೂ ನೋಡಿ ಅನುಬಂಧ ಅ. ಪರಿಭಾಷೆ

[10] ಬಿಡುಲಾಗಗಳು – ನರ್ತನಿ ಶ್ಲೋಕ ೭೭೩-೭೭೯, ಸಂಗೀದ-೬/೧೬೫-೧೭೫, ವೇಸಂಮ – ಹಸ್ತಪ್ರತಿ ಪೂರ್ವೋಕ್ತ.

[11] ಲಾಗಲಾಗ ಶಬ್ದೇನ ಕರ್ಣಾಟ ಭಾಷಯಾ ಯತ್ರಚೋತ್ಪ್ಲುತಿಃ ಹಾಗೂ (ಅನುಬಂಧ ಅ. ಪರಿಭಾಷೆ.) ಸಂಗೀದ. ೬/೧೬೫.

[12] ಮುರುಹು (ಮುರು) ನರ್ತನಿ ೪/೮೬೯-೮೭೦.

[13] ಮೂರು ವೇಸಂಮ – ಹಸ್ತಪ್ರತಿ. A.141 (ಪೂರ್ವೋಕ್ತ).

[14] ನರ್ತನಿ ೪/೮೭೯ ಹಾಗೂ ನೋಡಿ ಅನುಬಂಧ ಅ. ಪರಿಭಾಷೆ

[15] ಗುಂಡಲ – ನರ್ತನಿ. -೪/೮೮೨ ಹಾಗೂ ನೋಡಿ ಅನುಬಂಧ ಅ. ಪರಿಭಾಷೆ.

[16] ಬೀಸು (ಗಾಲು) – ನರ್ತನಿ – ೪/೭೮೬ ಅಲ್ಲದೆ ಬೀಸು (Bisu) – Is the swinging of a leg from behind while the other foot rests firmly on the ground. Studies in Indian Dance, R. Satyanarayana, p. 34.

[17] ಅದೇ ಲಕ್ಷಣವನ್ನು ಚತುರ ದಾಮೋದರನು ವೀಸಮ್ ಎಂದು ಹೇಳುತ್ತಾನೆ.
ಭೂಮಾವೇಕಂ ಸಮಾಸ್ಥಾಯ ದ್ವಿತೀಯಂ ಪೂರ್ವವದ್ಯದಾ
ಪಾತಯೇಚ್ಚರಣಂ ಚಾರುತರಂ ವೀಸಂ ಚತುರೋsಬೃವೀತ್ |         ಸಂಗೀದ. ೧೭೪

[18] ಸಂಹತ ಸ್ಥಾನಕ ಪಾದಗಳು, ಅಂಗುಷ್ಠಗಳು ಮತ್ತು ಹರಡುಗಳು ಅನ್ಯೋನ್ಯವಾಗಿ ಕೂಡಿಕೊಂಡಿದ್ದರೆ ಸಂಹತ ಸ್ಥಾನ – ನರ್ತನಿ /೪೦೮

ವೇದನು ಇದರ ಜೊತೆಗೆ ಕೈಗಳಲ್ಲಿ ಶಿಖರ ಹಸ್ತ, ಸಮಶಿರ, ಸಮದೃಷ್ಟಿ ಹಾಗೂ ಸುಲೂವನ್ನು ಹೇಳುತ್ತಾನೆ. – ವೇಸಂಮ. ಹಸ್ತಪ್ರತಿ. ಪುಟ ೧, A.141

[19] ಕುಂಚಿತ ಸ್ಥಾನ ಕಾಲಿನ ಬೆರಳುಗಳನ್ನು ಮಡಿಸಿ ನೆಲದ ಮೇಲೂರಿ ಪಾದದ ಮಧ್ಯಭಾಗವನ್ನು ವಕ್ರಮಾಡಿ ಹಿಮ್ಮಡಿಯನ್ನೆತ್ತುವುದು. ಲಾಸ್ಯರಂ. ೨/ಪು. ೨೫೮.

[20] ಮಡಿ – ಬಣ್ಣಿಸು – (ಕಸಾಪನಿ ೬/೬೮೬೪) ಡೊಕ್ಕರ = ಬಲವಾದ ಪೆಟ್ಟು ಹೊಡೆತ. ಕಸಾಪನಿ /೩೧೯೩

[21] ಮಲಕ ವೇಸಂಮ ಹಸ್ತಪ್ರತಿ ಹಾಗೂ ನೋಡಿ ಅನುಬಂಧ ಅ. ಪರಿಭಾಷೆ.

[22] ಮಲಕ ನರ್ತನಿ – ೪/೮೮೩ ಹಾಗೂ ನೋಡಿ (ಅನುಬಂಧ ಅ. ಪರಿಭಾಷೆ.)

[23] ಕರ್ತರಿ (ಕತರ) – ಭರಕೋ. ೧೦೩ (ಸಂ. ರಾಮಕೃಷ್ಣಕವಿ.)

[24] ಗರುಡಸ್ಥಾನ – ದೇಶೀಯ ಸ್ಥಾನಕ.
ಎಡಗಾಲನ್ನು ಕುಂಚಿತ ಮಾಡಿ ಮುಂದಿರಿಸಿ ಬಲ ಮೊಳಕಾಲನ್ನು ಹಿಂದುಗಡೆ ನೆಲದ ಮೇಲಿಡುವುದು. ಲಾಸ್ಯರಂ – ಪು. ೩೩೧.

[25] ಸ್ವಸ್ತಿಕ – ದೇಶೀಯ ಸ್ಥಾನಕ ಸಂಹತ ಸ್ಥಾನದಲ್ಲಿ ನಿಂತು (ಪಾದ, ಅಂಗುಲಿ, ಹರಡುಗಳ ಅನ್ಯೋನ್ಯ ಸಂಬಂಧ) ಕಾಲುಗಳನ್ನು ಕುಂಚಿತ (ಬಗ್ಗಿಸಿ) ಬಲಗಾಲಿನ ಮುಂದೆ ಎಡಗಾಲನ್ನು ತಂದು ಎರಡರ ಕಿರುಬೆರಳುಗಳು ಸೇರಿಸಿ ಸ್ವಸ್ತಿಕದಂತೆ ನಿಂತುಕೊಳ್ಳುವುದು.

ಸ್ಪಸ್ತಿಕ ಶಿಖರ ಎರಡು ಶಿಖರ ಹಸ್ತಗಳನ್ನು ಮಣಿಕಟ್ಟಿನಲ್ಲಿ ಸೇರಿಸಿ ಹಿಡಿಯುವುದು (ಎರಡು ಹೆಬ್ಬೆರಳು ಸೇರುವಂತೆ)

ಸ್ವಸ್ತಿಕ ಪಾದಭೇದ – ಎಡಗಾಲಿನ ಮುಂದೆ ಬಲಗಾಲು, ಎಡಗೈಯ ಮುಂದೆ ಬಲಗೈಗಳನ್ನು ಅಡ್ಡಲಾಗಿರಿಸಿಕೊಂಡು ನಿಲ್ಲುವುದಕ್ಕೆ ಸ್ವಸ್ತಿಕ ಮಂಡಲ. (ಅಭಿದ – ೨೭೨)

[26] ಯಕ್ಷಗಾನ – ಶಿವರಾಮಕಾರಂತ – ಪು. ೧೨೮, ೧೨೯ ಬಯಲಾಟ

[27] ಪಾತ್ರೇ ಯತ್ರಾ ಪ್ರತ್ನೇನ ಸೌಷ್ಠವಂ ರೇಖಯಾನ್ವಿತ ಮ್ |
ನೃತ್ತತಿ ಪ್ರೇಷ್ಯತೇ ದೃಷ್ಟಿಃ ಕರೇ ಸುಗತಿಸುಂದರೀ
ಸಭ್ಯಾತಿ ಮೋಹನೀಭಾವ ಸಂಪನ್ನಾ ತನ್ನಿಜಾಪನಮ್ || ನೃತ್ಯಾಯ. ೧೪/೧೫೩೫
ಸಂ. ವಾಚಸ್ಪತಿ ಗೌರೋಲಾ

ಅಭಿಪ್ರಾಯ ಭೇದ ದೇವಣ ಭಟ್ಟನಲ್ಲಿ
ನಿಜ್ಜವಣೆ – ದೇಶೀ ಲಾಸ್ಯಾಂಗ
ನಂದ್ಯಾವರ್ತಾಭಿದೇ ಸ್ಥಾನೇ ಜಾನುನಿ ಪಾರ್ಶ್ವಯೋನೃತೇ |
ಸ್ಥಿತಿ ನೇಜವಣಾಸೈವ ವಿಜ್ಞೇಯಾ ನೃತ್ತಕರ್ಮಾಣಿ
ದೇವಣ್ಣ ಭಟ್ಟಉದೃತಿ ಭರಕೋ ಪು.೩೩೧  

ಪಾದಗಳನ್ನು ಆರು ಅಂಗುಲ ಅಂತರದಲ್ಲಿ ಅಡ್ಡ ಮಾಡಿ ಇಟ್ಟು ಮಂಡಿಗಳ ಪಕ್ಕಕ್ಕೆ ನರ್ತಿಸುವ ಸ್ಥಿತಿಯನ್ನು ನಿಜವಣ ಎಂದು ಕರೆಯುತ್ತಾರೆ. (ಪಂಡಿತಾ/ಪು. ೪೬೦)

[28] ಛತ್ತೀಸ ದೃಷ್ಟಿ ಚೌಷಷ್ಠಿ ಹಸ್ತಂಗಳ ಬಿತ್ತರಿಸುವುದು ಕೋಪುಮೆನಿಕ್ಕು
– ಮಂಗರಾಜ ನಿಘಂಟು – ಪು. ೮೨ ಹಾಗೂ ನೋಡಿ – ಅನುಬಂಧ ಅ ಪರಿಭಾಷೆ.

[29] ಮುಖವನ್ನು ಕೆಳಗೆ ಮಾಡಿ ನೆಗೆದು ಮುಂದಕ್ಕೆ ತಿಳಿದು ಕುಕ್ಕುಟಾಸನದಲ್ಲಿ ಅಲುಗಾಡದೇ ನಿಲ್ಲುವುದು ನರ್ತನಿ ೭೮೪

[30] ನರ್ತನಿ. ೪-೫೮೦.

[31] ಮುಖಂತು ಪೂರ್ವರಂಗ; ಸ್ಯಾಚ್ಚಾಲಿಸ್ತದನುಗಾಗತಿಃ |
ಮುಖಚಾಲಿರಿತಿ ಪ್ರೋಕ್ತಾ ನೃತ್ತಜ್ಞೈ : ಪೂರ್ವಸೂರಿಭಿಃ ನರ್ತನಿ. ೬೬೨

[32] ಸಮನೃತ್ತೂನ್ತದಾರಂಭೇ ಚತುಷಷ್ಠಿ ಕರಾನ್ವಿತಮ್ |
ಅಷ್ಟಮಂಡಲ ಸಮ್ಯುಕ್ತಮಷ್ಟದಿಕ್ಷಪಿ ಚಾಷ್ಟಕಮ್ |
ಆದಿತಾಳಲಯಾಭಿಜ್ಞಾ ನರ್ತನಂ ಸಮನತ…..ನಮ್ |
ವಲಿತಾಖ್ಯ ಕರೆಣಾಪಿ ಬಹಿರ್ಭ್ರಮಣಬನ್ಥನಮ್ |
ಸಮನೃತ್ತಮಿದಮ್ಮುಖ್ಯಂ ಭರತಾಚಾರ್ಯ ಸಮ್ಮತಮ್ ||
ಸಾಸಂಭ. ಪು. ೨೦೧

[33] ರೇಖಾ ಮುದ್ರಾಪ್ರಮಾಣಢ್ಯ ನಾನಾಕರವಿಭೂಷಿತಂ |
ದಿಕ್ ಚಕ್ರಾಭಮುಖಂ ನೃತ್ತಂ ನೇರಿರತ್ಯಭಿಧೀಯತೇ ||    ಸಂಗೀದ. ೧೪೭

[34] ಚತುರಸ್ರೇ ಸ್ಥಿತಿರ್ಯತ್ರ ರಾಸತಾಲಶ್ಚಿರೋಲಯಃ
ರಥ ಚಕ್ರೈಕ ಪಾದೇನ ಪರೇಣ ಚ ಯಥೋಚಿತಮ್
ಗತಿಃ ಪತಾಕ ಹಸ್ತಶ್ಚ ಪ್ರತ್ಯಾಂಶಂ ತಲ ಸಂಚಿತಃ |
ನೀವಿವದ್ ಗತಿ ಸಂಚಾರಃ ಕ್ರಮಾತ್ ಸವ್ಯಾಪಸವ್ಯಯೋಃ |
ರೇಖಾ ಸೌಷ್ಠವ ಸಂಪನ್ನಃ ಸ ಶುದ್ಧೋ ನೇರಿ ರುಚ್ಯತೇ |
ನರ್ತನಿ. ೭೧೮, ೧೯, ೨೦

[35] ಪಾದಗಳಿಗೆ ಒಂದೂವರೆ ಗೇಣು ಅಂತರವಿರುವಂತೆ ನಂದ್ಯಾವರ್ತಕ ಸ್ಥಾನದಲ್ಲಿ ನಿಲ್ಲುವುದು. (ನಂದ್ಯಾವರ್ತ – ಪಾದಗಳಿಗೆ ಆರು – ಅಂಗುಲ ಅಡ್ಡ ಮಾಡಿ ನಿಲ್ಲುವುದು)

[36] ಆದಿತಾಳವನ್ನು ರಾಸತಾಲ ಎನ್ನುತ್ತಾರೆ.
ರಾಸಕೇನೈವ ತಾಳೇನಲಯತ್ರಿತಯ ಸಂಯುತ್ಮ
ಲಘ್ವಾದಿ ತಾಳೋ ಲೋಕೋ ಸೌ ರಾಸ ಇತ್ಯಭಿಧೀಯತೆ | ಸಂಗೀರ. ೪೯

[37] ಚರುರಸ್ರ ಸ್ಥಿತೌ ಪಾದೆ ಪರಿಶ್ಲಿಷ್ಟೌ ಪ್ರಸರ್ಪತಃ
ಪೃಷ್ಕತೋ ವಾ ಯದಾ ಪ್ರೋಕ್ತಾ ರಥ ಚಕ್ರಾ ತದಾ ಬುಧೈಃ || ನೃತ್ತರ. ೮೮

[38] ವೇಸಂಮ. ಹಸ್ತಪ್ರತಿ A. 141 ವಿದ್ಯಾಹಸ್ತು ಸಂಶೋಧನಾಲಯ, ಮೈಸೂರು ವಿ.ವಿ.

[39] ಕರಣನೇರಿ – ಅಯಂ ಕರಣಸಂಯುಕ್ತೋ ಮತಃ ಕರಣ ನೇರುಕಃ ಇತಿಃ ಕರಣ ನೇರಿಃ |

[40] ನಡನೇರಿ – ಸೇವ ಧ್ರುತಮಾನೇನ ನಡನೇರಿ ರಿತಿ ಸ್ಮೃತಃ | ಇತಿ ನಡನೇರಿ

[41] ಭಾವನೇರಿ – ರಸಭಾವಾದಿಪುಷ್ಠಯಾ ಸ್ಯಾದ್ಭಾವನೇರಿಸ್ಮ ಏವತು | ಇತಿ ಭಾವನೇರಿ

[42] ಶುದ್ಧನೇರಿ – ಶುದ್ಧರೇವ ಪತಾಕಾಧ್ಯೌ ಶುದ್ಧನೇರಿರಿಹೋಚ್ಯತೇ | ಇತಿ ಶುದ್ಧನೇರಿ

[43] ಸಾಲಂಗನೇರಿ – ಮಿಳಿತೈಸಂಯುತ ಹಸ್ತೈಃ ಸಾಲಂಗಭೇದ ಮಾದಿ ಶೇತ್ | ಇತಿ ಸಾಲಂಗ ನೇರಿ

[44] ಅಸಂಯುತೈಸಂಯುತೈಶ್ಚ ನೃತ್ತ ಹಸ್ತಸ್ತಥೈವ ಚ |
ಸಂಕೀರ್ಣನೇರಿತಾಂ ಪ್ರಾಹುಃ ನೃತ್ಯೇ ನೃತ್ಯ ವಿಶಾರದಾಃ | ಇತಿ ಸಂಕೀರ್ನನೇರಿಃ | ಸಂಗೀದ. ೧೪೭೧೫೦ ಸಂ. (ಕೆ. ವಾಸುದೇವ ಶಾಸ್ತ್ರೀ)

[45] ದರು ನಾಟಕೀಯ ವಸ್ತುವನ್ನುಳ್ಳ ಹಾಡು.
Studies in Indian Dance, R.Satyanarayana p. 37