ದಾಸ ದೀಕ್ಷೆಯನ್ನು ಪಡೆದು ಹರಿದಾಸರಾದ ಈ ದಾಸರುಗಳಿಗೆ ಗೀತ, ನರ್ತನಗಳೇ ಮೋಕ್ಷ ಸಾಧಕ ಎಂಬ ಒಂದು ದೃಢವಾದ ನಂಬುಗೆಯಿಂದಿದ್ದು. ಕನಕದಾಸರು ಅದನ್ನು ಹೀಗೆ ನೆನೆಯುತ್ತಾರೆ:

ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ಪಿಡಿದು
ಶ್ರೀಲೋಲನ ಗುಣ ಪೊಗಳಿ ನಟಿಸದಲೆ
ಕುಣಿದು ಹರಿಯ ಮುಂದೆ ಮಣಿದು ಸಜ್ಜನ ಪದಕೆ
ಅಣಿಮಾದ್ಯಷ್ಟ ಸಿದ್ಧಿ ಕೈಗೊಳ್ಳದವನಾಗಿ
ಹ್ಯಾಂಗೆ ನೀ ದಾಸನಾದಿ ಪ್ರಾಣಿ (ಜನಪ್ರಿಯ ಕನಕ ಸಂಪುಟ, ಪು. ೯೨)

ಕರ್ನಾಟಕದ ಹರಿದಾಸರು ಗೀತ, ನರ್ತನಗಳನ್ನು ತಮ್ಮ ಪದಗಳಿಗೆ ಭಿತ್ತಿಗಳನ್ನಾಗಿ ಮಾಡಿಕೊಂಡು ಶಾಂತ, ದಾಸ್ಯ, ಮಧುರ, ವಾತ್ಸಲ್ಯ ಹಾಹೂ ಸಖ್ಯಭಾವಗಳಲ್ಲಿ ವರ್ಣಮಯ ಚಿತ್ರಗಳನ್ನು ಬಿಡಿಸಿದ್ದಾರೆ.

 

()ಆಧುನಿಕಕಾವ್ಯಗಳು

ಇಪ್ಪತ್ತನೆಯ ಶತಮಾನದಲ್ಲಿ ರಚಿತವಾದ ಕನ್ನಡ ಮಹಾ ಕಾವ್ಯಗಳು ಹಾಗೂ ಕವನಗಳಲ್ಲಿ ರೂಪಿತವಾದ ಪರಿಭಾಷೆ, ಪ್ರಸಂಗಗಳನ್ನು ವಿವೇಚಿಸುವುದು ಈ ಭಾಗದ ಉದ್ದೇಶ.

() ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ನೃತ್ಯದ ತಂತ್ರ ಒಂದು ಪೂರ್ವಯೋಜಿತ ಪ್ರಸಂಗವಾಗಿ ನಿರೂಪಿತವಾಗುವುದಿಲ್ಲ. ಉಲ್ಲೇಖಗಳು ಪ್ರಾಸಂಗಿಕವಾಗಿ ಬರುತ್ತವೆ ಅಷ್ಟೆ.

ಚಲಿಸಿದನು ರಾಮನೊಯ್ಯಯ್ಯನೆಯ ನೃತ್ಯಶೀಲಂ
ಮುಂದೆ, ಹಿಂಬಾಲಿಸಿದನಿತರರುಂ ಮಂತ್ರಬಲದಿಂ
ಬದ್ಧರಾದಂತೆ…..  (ರಾಮಾದ. ಸಂ.೨೬೪, ೬೫ ಸಾಲುಗಳು)

ಇದು ಅಹಲ್ಯಾ ಶಾಪ ವಿಮೋಚನೆಯ ಸಂದರ್ಭ. ಬಂಡೆಯಾಗಿದ್ದ ಅಹಲ್ಯೆಯತ್ತ ಸಾಗುವ ರಾಮನ ಗತಿಯನ್ನು ಕವಿಯು ನೃತ್ಯಶೀಲವೆಂದು ವ್ಯಾಖ್ಯಾನಿಸುತ್ತಾರೆ.

ಕುವೆಂಪು ಅವರ ಮುಂದೆ ರಾಮನು ಲಾಸ್ಯವಾಡಿದನೆಂದು ವರ್ಣಿಸುತ್ತಾರೆ.

………….. ರಾಮನೇರ್ದನು ಬಂಡೆಯಂ
ಲಾಸ್ಯಮಂ ತೊಡಗಿ ಒಯ್ಯನೆ ಚರಣ ಚುಂಬನಕೆ
ಕಲ್ಲೆತಾಂ ಬೆಣ್ಣೆ ಯಾಯ್ತೆನೆ ಕಂಪಿಸಿತು ಬಂಡೆ (೨೭೮೮೦ನೇ ಸಾಲು)

() ಭಾರತ ಸಿಂಧುರಶ್ಮಿ ಮಹಾಕಾವ್ಯದಲ್ಲೂ ವಿ. ಕೃ. ಗೋಕಾಕರು ಅನೇಕ ಬಾರಿ ನೃತ್ಯ, ಲಾಸ್ಯ, ತಾಂಡವ ಪದಹತಿ ಮುಂತಾದ ಪರಿಭಾಷೆಗಳನ್ನು ಬಳಸಿದ್ದಾರೆ. ಇಲ್ಲಿಯೂ ನೃತ್ಯ ಸಂದರ್ಭದ ಹಿನ್ನೆಲೆ ರೂಪರೇಖೆಗಳು ಪ್ರಾಚೀನ ಹಾಗೂ ಮಧ್ಯಕಾಲೀನ ಕವಿಗಳು ಕಂಡ ದೃಷಿಯಲ್ಲಿ ರೂಪಿತವಾಗಿಲ್ಲ. ಪ್ರಕೃತಿಯ ವರ್ಣನೆಯಲ್ಲಿ, (ಸಂ. ೧, ಪು. ೧೫) ಶತರೂಪೆ – ಸ್ವಾಯಂಭು ಇವರ ವಿಹಾರ ವರ್ಣನೆಯಲ್ಲಿ ಹಾಗೂ ಅಂದಿನ ಸಮಾಜದ ಸ್ಥಿತಿಗತಿಗಳ ಚಿತ್ರಣದಲ್ಲಿ (ಸಂ. ೧, ಪು. ೩೫) ಗಾನ, ನೃತ್ಯಗಳು ಸ್ವಭಾವತಃ ಉಲ್ಲೇಖಗೊಂಡಿವೆ.

ಮೇನಕೆಯ ಚಿತ್ತಾಕರ್ಷಕ ನೃತ್ಯವನ್ನು ಕವಿಗಳು ಸುಂದರವಾಗಿಸಿದ್ದಾರೆ.

ಗಂಧರ್ವಲೋಕದೊಳಗವಳ ನೂಪುರ ನೃತ್ಯ
ಮೋಹಿಸದವರಿಲ್ಲ ಅವಳ ಮಂದಾರಸ್ಮಿತ
ಅವಳ ಸ್ರೋತೋಲ್ಲಾಸಗಳಿಗೆ ಕುದುರಿತು ದೇಹ
ಚದುರಿದವು ರೋಮಗಳು ಮುಳುಗಿಸುವ ಧ್ಯಾನವನು
ಅವಳ ಪದಹತಿಗೆ ಕಂಪಿಸಿತು ತಾಪಸ ಹೃದಯ
ಅವಳ ನೃತ್ಯಕ್ಕೆ ಭೃತ್ಯನಾದಂತೆ ವಿಶ್ರರಥ (ಭಾಸಿರಂ ಸಂಪುಟ , ಪು. ೩೫)

ಹೀಗೆಯೇ ಅರ್ಧನಾರೀಶ್ವರನ ನೃತ್ಯವನ್ನು ವಿಶ್ವವ್ಯಾಪಕ ವ್ಯಾಪಾರದಂತೆಯೂ ನಿಲ್ಲಿಸಿದ್ದಾರೆ.

ನಟರಾಜನ ಸುಂದರ ಕಲ್ಪನೆ ನಿಮಗೆ ಹೊಳೆದಿಲ್ಲ
ವಿಶ್ವದ ವ್ಯುತ್ವಿತ್ತಿ ಸ್ಥಿತಿ ಸಂಹಾರ ಕರ್ತನವ
ಆಡವಲ್ಲನ ಕುಣಿತ ಹುಟ್ಟು, ಕುಣಿತವೆಲಯವು
ಅನಂತಶಯನ ನೊಲು ತಂದ್ರ ಸ್ಥಿತಿಯಲ್ಲಿಲ್ಲ
ಸರ್ವದಾ ಚಲನಪೂರ್ಣವು ಚಂದ್ರ ಸೂರ್ಯರೋಲು
ನೃತ್ಯೇಶ್ವರನಾತ ಅವನೊಂದು ಅಂಗಾಹಾರ
ಒಂದು ಮಂಡಲ ಸಾಕು ಭೂಮಂಡಲವ ಕೊಳಲು
ಅವಳುವವು ವಿಶ್ವಪದ್ಮಗಳೊಂದು ಲಾಸ್ಯವಿರೆ
ಅಡಗುವವು ಅವನೊಂದು ಪ್ರಕಾಂಡ ತಾಂಡವಕೆ
ಅರ್ಧಶಕ್ತಿಯಲಾಸ್ಯ ಪುರುಷನ ತಾಂಡವವರ್ಧ
ಅರ್ಧನಾರೀ ನಟೇಶ್ವರ ಉಭಯ ಲಿಂಗಿಯಿಹ (ಭಾಸಿಂರ. ಸಂಪುಟ , ಪು. ೪೮೦)

ಶಿವನಲ್ಲಿಯೇ ಉಗಮವಾಗುವ ನೃತ್ತ ಪ್ರಕಾರಗಳಾದ ತಾಂಡವ ಹಾಗೂ ಲಾಸ್ಯಗಳ ಸಂಭ್ರಮದ ಪ್ರತಿರೂಪವನ್ನು ಕವಿಗಳು ಇಲ್ಲಿ ನಿರೂಪಿಸುತ್ತಾರೆ.

() ಶ್ರೀಹರಿ ಚರಿತೆ ಕಾವ್ಯದಲ್ಲಿಯೂ ಕವಿ ಪು. ತಿ. ನರಸಿಂಹಾಚಾರ್ ಅವರು ನೃತ್ಯ, ಕುಣಿತ, ನಾಟ್ಯ, ಲಾಸ್ಯ, ತಾಂಡವ ಇತ್ಯಾದಿಯಾದ ನೃತ್ಯ ಪರಿಭಾಷೆಗಳನ್ನು ಧಾರಾಳವಾಗಿ ಬಳಸಿದ್ದಾರೆ. ಈ ಪದಗಳ ಬಳಕೆಯೂ ಕೇವಲ ಪ್ರಾಸಂಗಿಕವಾಗಿಯೇ ಬಂದಿದೆ. ಇದು ನರ್ತನ ಕೃಷ್ಣನನ್ನು ದರ್ಶಿಸಲು ಸಂಯೋಜಿತಗೊಂಡಂತೆ ಕಾಣುತ್ತವೆ. ಶ್ರೀಕೃಷ್ಣ ಜನನದಲ್ಲಿ ಗೋವಿಂದನ ಪಟ್ಟಾಭಿಷೇಕ ಸಂದರ್ಭದಲ್ಲಿ ಗಂಧರ್ವ, ಅಪ್ಸರೆಯರು ನೃತ್ಯಗೀತಾದಿಗಳನ್ನು ನಡೆಸಿದರೆಂದಿದೆ.

ಪಾಡಿದುದು ಗಂಧರ್ವಗಣ ಮಂಗಳ ಗೀತವಂ, ನರ್ತಿಸಿತಮರ
ಯುವತೀಸಮೂಹಂ ಶುಭಾಗಮಕಲ್ಪವಂ ಖುಷಿಸಿದ್ಧ ಮುನಿಸಂಘ
ನೆರೆದುದು ನಲ್ನುಡಿಗಳಂ ಭಾವಿಸುತ ಮುಂದಪ್ಪ ಕಲ್ಯಾಣಗಳ
ಜಗದುದ್ಧಾರನಾವಿರ್ಭವಿಸಲಾ ಸೆರೆಮನೆಯ ಪರ್ಯಂಕದೊಳು
(ಶ್ರೀಹರಿ () ಸದವತಾರ ಸಾಲು೫೩೫೬)

ಮುಂದೆ ಗೋವಿಂದನ ಪಟ್ಟಾಭಿಷೇಕ ಪ್ರಸಂಗದಲ್ಲಿ

ಹೊಂಗಳಸದಭಿಷೇಕದಾಗುಮಂ, ಪ್ರಸಾಧನ
ವಿಧಾನಂ, ಸುರರ ಕುಸುಮಾರ್ಪಣಂ, ಗಂಧರ್ವಗಾನಂ
ಕುಣಿತದ ಸೊಬಗು, ಎಲ್ಲದಕು ಮಿಗಿಲಾಗಿ ಹಾಡಿನ ಲಯಕೆ
ಮೈ ಬಳುಕೆ, ಬಳೆಗಳುದನಿಸೆ, ನೇವುರ ಕೆದರಲಿಂಚರವ
ತನುಕಾಂತಿಯನು ನೆವರಿಸಿ ಕಂಗಳ ಢಾಳ ಬಲ್ಲೈಸಿ ……..
(೨೨೧೪೪೧೪೮ನೇ ಸಾಲು)

ಈ ಸಾಲುಗಳಲ್ಲಿ ನೃತ್ಯದ ಪರಿಕರಗಳಾದ ವೇಷಭೂಷಣ, ಹಿನ್ನೆಲೆ ಗಾಯನ, ಪುಷ್ಪಾಂಜಲಿಗಳನ್ನು ಕವಿಗಳು ಸೂಚಿಸುತ್ತಾರೆ. ಲಯಕ್ಕೆ ತಕ್ಕ ಗಾನ, ನೃತ್ಯಗಳ ಸೊಗಸನ್ನು ಅಪ್ಸರೆಯರು ಧರಿಸಿದ ಬಳೆ, ನೇವುರಗಳ ಲಯಬದ್ಧವಾದ ಚಲನೆಯಿಂದ ಗುರುತಿಸುತ್ತಾರೆ.

ಹಿಂದಿನ ಕವಿಗಳಂತೆ ನರ್ತಕಿ ನೇಪಥ್ಯವಿಧಿಯಿಂದ ಆರಂಭಿಸಿ ರಂಗದ ಮೇಲೆ ನರ್ತಿಸಲು ಅನುಸರಿಸಬೇಕಾದ ವಿಧಿಗಳ ದೀರ್ಘ ವರ್ಣನೆಯನ್ನಾಗಲಿ, ಆ ಪ್ರಸಂಗದ ತಾಂತ್ರಿಕ ವಿವರಣೆಗಳನ್ನಾಗಿಲಿ ಈ ಆಧುನಿಕ ಕವಿಗಳು ಪ್ರಸ್ತಾಪಿಸುವುದಿಲ್ಲ.

 

() ಕವನಗಳು

ಕುವೆಂಪು, ದ. ರಾ. ಬೇಂದ್ರೆ, ಡಿ.ವಿ.ಜಿ. ಮಾಸ್ತಿ, ಪು.ತಿ.ನ ಮುಂತಾದವರ ಕವನಗಳಲ್ಲಿ ಅನೇಕ ವೇಳೆ ನೃತ್ಯ, ನರ್ತನ, ಪಾತ್ರ, ಕುಣಿತ, ಲಾಸ್ಯ, ತಾಂಡವ, ಹಸ್ತ ಪ್ರಚಾರ ಇತ್ಯಾದಿಯಾದ ನೃತ್ಯ ಪರಿಭಾಷೆಗಳು ಪ್ರಸ್ತಾಪಗೊಂಡಿವೆ. ಆದರೆ ಇವುಗಳ ಒಂದು ಪೂರ್ಣ ಪ್ರಮಾನದ ನೃತ್ಯ ಬಂಧಗಳ ಚೌಕಟ್ಟನ್ನಾಗಲಿ, ತಾಂತ್ರಿಕ ವಿವರಗಳನ್ನಾಗಲಿ ಹೊಂದಿರುವುದಿಲ್ಲ. ಕವಿಗಳ ಭಾವನಾ ಪ್ರಪಂಚದಲ್ಲಿ ಅವರ ಕಲ್ಪನಾ ಲಹರಿಯಲ್ಲಿ ರಿಂಗಣಗೊಂಡು ಕಲಾತ್ಮಕ ಪದ ಗುಚ್ಛಗಳಾಗಿ ಪ್ರಕಟವಾದಂತೆ ಗೋಚರಿಸುತ್ತವೆ. ಉದಾಹರಣೆಗಾಗಿ ಕೆಲವು ಕವನಗಳನ್ನು ಆಯ್ದು ಪರಿಶೀಲಿಸಲಾಗಿದೆ.

ದ. ರಾ. ಬೇಂದ್ರೆಯವರ ಈ ಕೆಳಗಿನ ಪದ್ಯದಲ್ಲಿ ಲಯಾನ್ವಿತ ನೃತ್ಯದ ಚಿತ್ರವಿದೆ.

ಕುಣಿಯೋಣಂತ ಕೂಡಿಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದನsಆಡೊಣಂತ | ಯಾರಿಗೂ
ಹೇಳೂಣು ಬ್ಯಾಡ    (ನಾದಲೀಲೆ ಕವನ ಸಂಕಲನ)

ಯುಗಳ ನೃತ್ಯದ ಸೊಗಸಿನ ಚಿತ್ರವಿದು. ಮಾರ್ಗ ನೃತ್ಯದ ಪರಿಭಾಷೆಗಳಾದ ಉತ್ಪ್ಲವನ, ಹಾಗೂ ವಿವಿಧ ಭಂಗಿಗಳನ್ನು ಜಿಗಿದು ಮಣಿದು ಎಂದು ಕವಿಗಳು ಬಳಸುತ್ತಾರೆ. ಆನಂದಾಧಿಕ್ಯದಲ್ಲಿ ಸ್ವಯಂ ಪ್ರೇರಿತರಾಗಿ ಕುಣಿದು, ಭಾವಾಭಿನಯ ಸಹಿತವಾಗಿ ಆಡುವ ಸುಂದರ ಸನ್ನಿವೇಶದ ಕಲ್ನೆಯನ್ನು ಮೇಲಿನ ಕವನದ ಸಾಲುಗಳು ಕೊಡುತ್ತವೆ.

ಬೇಂದ್ರೆಯವರ ಮತ್ತೊಂದು ಪ್ರಸಿದ್ಧವಾದ ಕವನ ಕುಣಿಯೋಣ ಬಾರ ಕುಣಿಯೋಣು ಬಾ ಎಂಬಲ್ಲಿ ಮಾನವನ ಸಹಜ ಸ್ಪಂದನವಾದ ಕುಣಿತದ ಹಲವು ಮುಖಗಳು ಲಯಬದ್ಧವಾದ ಪದಗಳ ಮೂಲಕ ಉತ್ಸಾಹ ಚಿಮ್ಮುವ ನುಡಿಗಳಲ್ಲಿ ಹೀಗೆ ರೂಪಿತವಾಗಿದೆ :

ಆಕಾಗಿ ಯಾಕಾಗಿ ಕುಣಿಯೋದು ಬೇಕಾಗಿ
ಇಲ್ದ ಬಣ್ಣದ ಸೋಗಿ ಕುಣಿಯೋಣು ಬಾ
ಹಿಗ್ಗು ಹಾಕಿತು ಕೇಕೆ ಇರಲಾರೆನೇಕಾಕಿ
ಬಾ ಬಾರೆ ನನ್ನಾಕೆ ಕುಣಿಯೋಣು ಬಾ ||
ಕುಣಿಯೋಣು ಬಾರ ಕುಣಿಯೋಣು ಬಾರಾ…..

ಶಿಷ್ಟ ನೃತ್ಯ ಸಂಪ್ರದಾಯದ ವಿಧಿಗಳನ್ನು ಪರೋಕ್ಷವಾಗಿ ಕವಿಯು ಹೇಳುತ್ತಾರೆ. ವಾದ್ಯ, ತಾಳಬದ್ಧವಾಗಿ ಅಭ್ಯಾಸ ಬಲದಿಂದ ಒಂದು ಪಾದಗಳಲ್ಲಿ ಹೆಜ್ಜೆಗಳನ್ನು ಇಡುವ ಕ್ರಮ, ನಿರ್ದಿಷ್ಟವಾದ ರಾಗಗಳನ್ನು ನೃತ್ಯ ಬಂಧಗಳಲ್ಲಿ ಅಳವಡಿಸುವ ಕ್ರಮ ಇವೆಲ್ಲ ಇಲ್ಲದೇ ಸ್ವಯಂ ಪ್ರೇರಿತ ನೃತ್ಯವೂ ಆಕರ್ಷಕವಾಗಿರುತ್ತದೆಂದು ಕವಿಯ ಮತ. ಶರೀರದ ಬಾಗುವಿಕೆ, ಕೈಗಳ ಚಲನವಲನನಗಳು ಥಕ, ಥಕ, ಥೈ ಎಂಬ ಪಟಾಕ್ಷರಗಳು ಇಲ್ಲಿಯೂ ಸುಂದರವಾಗಿ ಒಡಮೂಡುವುದನ್ನು ಬೇಮದ್ರಯವರು ನಿದರ್ಶನಗಳೊಂದಿಗೆ ರೂಪಿಸುತ್ತಾರೆ.

ಕುವೆಂಪು ಅವರು ಪ್ರಕೃತಿ ದೇವಿಯನ್ನೇ ನರ್ತಕಿಯೆಂದು ಕಾಣುತ್ತಾರೆ. ಅದರ ಕೆಲವು ಸಾಲುಗಳು

ಹೇ ವಿಶ್ವದೇ ಹಿನಿ !
ನರ್ತಿಪ ತವ ಚರಣ ನ್ಯಾಸ
ಜವನ ಮರಣ ಕಾಲ ದೇಶ !
ನೃತ್ಯದೊಳವುಲಯ ವಿಶೇಷ
ಹೇ ತ್ರಿಭುವನ ಮೋಹಿನಿ ! (ಕಲಾಸುಂದರಿ ನವಿಲು ಸಂಕಲನ)

ವಿಶ್ವತೋಮುಖಳೂ, ವಿಶ್ವದೇಹಿಯೂ ಆದ ಪ್ರಕೃತಿ ಮಾತೆಯಲ್ಲಿ ನಡೆಯುವ ಒಂದೊಂದು ಚಟುವಟಿಕೆಯೂ ಆಕೆಯ ನೃತ್ಯವೆಂದು ಕವಿ ಕಲ್ಪಿಸುತ್ತಾರೆ. ಜನನ ಮರಣಗಳೆ ಪ್ರಕೃತಿಯ ನೃತ್ಯದ ಲಯವೆಂದು ಧ್ವನಿ ಪೂರ್ಣವಾಗಿ ನಿರೂಪಿಸಿದ್ದಾರೆ.

ಡಿ.ವಿ.ಜಿ. ಯವರ ಅಂತಃಪುರ ಗೀತೆಗಳು : ಸೌಂದರ್ಯೋಪಾಸನೆಯನ್ನು ಮೂಲ ಉದ್ದೇಶವನ್ನಾಗಿ ಹೊಂದಿದ ಅಂತಃಪುರ ಗೀತೆಗಳಲ್ಲಿ ನಾದ, ನೃತ್ಯಗಳು ಅಲೆ, ಅಲೆಯಾಗಿ ಹೊರ ಹೊಮ್ಮಿವೆ. ಶೃಂಗಾರ, ಲಾವಣ್ಯ, ಮಾಧುರ್ಯಗಳನ್ನು ಪ್ರಧಾನಗುಣಗಳಾಗಿ ಹೊಂದಿದ ಬೇಲೂರಿನ ಶಿಲ್ಪಗಳ ಭಾವಸೌಂದರ್ಯವನ್ನು ಈ ಗೀತೆಗಳು ಪ್ರತಿಫಲಿಸಿದಂತಿವೆ.

ಮುರಜವನ್ನು (ನೋಡಿ ಚಿತ್ರ ಅ. ೨ ವಾದ್ಯಗಳು) ನುಡಿಸುತ್ತ ನರ್ತಿಸುತ್ತಿರುವ ಭಂಗಿಯ ಮದನಿಕೆಯನ್ನು ಕಂಡು ಕವಿಗಳು:

ಏನೀ ನೃತ್ತಾಮೋದ ಏನೀ ಮುರಜಾನಾದ
ಏನೀ ಜೀವೋನ್ಮಾದ ವೇನೀ ವಿನೋದ
ಏನೀ ಮಹಾನಂದವೇ ಭಮಿನಿ || (ಮುರುಜಾ ಮೋದೆ) (ಗೀತೆ೧೧)

ಎಂದು ಆ ಮದನಿಕೆಯನ್ನು ಪ್ರಶ್ನಿಸುತ್ತಾರೆ. ನೃತ್ತವನ್ನು ಮಾಡುತ್ತ ಉನ್ಮಾದಗೊಂಡಂತೆ ಕವಿ ಈ ಮದನಿಕೆಯನ್ನು ಚಿತ್ರಿಸುತ್ತಾರೆ. ಶುದ್ಧವಾದ ಪಾದ ಘಾತ, ಅದಕ್ಕೆ ಅಲಂಕಾರಿಕವಾಗಿ ಬಳಸುವ ಹಸ್ತ, ಚಾರಿ, ಕರಣ, ಅಂಗಹಾರಗಳೊಡಗೂಡಿ ನರ್ತಿಸಿದರೆ ಅಂತಹ ನೃತ್ತದಲ್ಲಿ ಲಭಿಸುವ ಆನಂದ ಅಪಾರ. ಭರತನೂ ನಾಟ್ಯಶಾ.ದಲ್ಲಿ ಶುದ್ಧ ನೃತ್ತವು ಶುಭ ಪ್ರದವೂ, ಮಂಗಳದಾಯಕವೂ ಆಗಿ ಸಂತೋಷ ತರುವಂತಹ ಚಟುವಟಿಕೆ ಎಂದು ಹೇಳಿರುತ್ತಾನೆ. ಮದನಿಕೆಯು ಮುರುಜನವನ್ನು ನುಡಿಸುತ್ತ ನರ್ತಿಸುವ ಪರಿಯನ್ನು ಕವಿಗಳು ಹೀಗೆ ವರ್ಣಿಸುತ್ತಾರೆ.

ಡಕ್ಕೆಯ ಶಿರಕೆತ್ತ ತಾಲಗೋಲಿಂತಟ್ಟಿ
ತಕ್ಕಿಟ ಧಿಮಿಕಿಟ ತಕಝಣು ರೆನಿಸಿ |
ಕುಕ್ಕುತೆ ಚರಣವಕುಲುಕುತೆಕಾಯವ |
ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ || (ಮುರುಜಾ ಮೋದೆ) (ಗೀತೆ ೧೧)

ಮತ್ತೊಂದು ಮದನಿಕೆಯ ಭಂಗಿಯನ್ನು ಕಂಡು ಕವಿಗಳು

ನೃತ್ಯ ನೈಪುಣೀ ನಿತ್ಯರಾಗಿಣಿ
ಚಿತ್ತ ಜಾಗಮಾರ್ಥ ವ್ಯಕ್ತಹಾಸಿನಿ (ನಾಟ್ಯನಿಪುಣೆ ಗೀತೆ. ೨೨)

ಎಂದು ಮದನಿಕೆಯ ಭಾವಪೂರ್ಣ ನೃತ್ಯವನ್ನು ಆಕೆಯ ಶೃಂಗಾರ ಭಾವವನ್ನು ಕಂಡು ಆನಂದಿತರಾಗಿ ಉದ್ಫೋಷಿಸುತ್ತಾರೆ.

ಮತ್ತೊಂದು ಗೀತೆಯಲ್ಲಿ ತ್ರಿಭಂಗಿಯಲ್ಲಿ ನಿಂತ ಮದನಿಕೆಯನ್ನು ಆಕೆ ತ್ರಿಭಂಗಿಯಿಂದ ಆರಂಭಿಸಿ, ಪುನಃ ತ್ರಿಭಂಗಿಗೇ ಹಿಂತಿರುಗುವವರೆಗೆ ಪ್ರಕಟಿಸಿದ ಮೋಹಕ ನೃತ್ತದ ರಭಸ, ಸಂಭ್ರಮಗಳನ್ನೂ ಸ್ಪುಟವಾಗಿಸಿದ್ದಾರೆ. ಆ ಗೀತಿಯು ಇಂತಿದೆ.

ನೃತ್ತದ ರಭಸವಿದೇನೆ ಎಲೆ |
ಮತ್ತೇರಿ ಮೆಯ್ಯ ನೀ ಮರೆತಿಹೆಯೇನೆ ||
ಚಿತ್ತ ಜನಾವೇಶವೇನೇನೆ ನಿನ್ನ
ಪುತ್ತಳಿ ಯೊಡಲೇನು ಬಳಲದೆ ಬಾಲೆ ||
ತದ್ಧಿಮಿ ತಕಧಿಮಿ ಥೈಯಾ ತಾ |
ತಜ್ಝಣು ತೋಂ ಝಣು ಝಣುರೆನುತಾ ||
ವಿದ್ಯಾಧರಾನಂದ ಭರಿತಾ ಇದು
ಮುದ್ದುಮೋಹನೆ ನಿನ್ನ ಬೆಡಗಿನ ಕುಣಿತಾ ||  (ನೃತ್ತೋನ್ಮತ್ತೆ ಗೀತ. ೪೭)

ಹೀಗೆ ಡಿ.ವಿ.ಜಿ.ಯವರು ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಅಪೂರ್ವ ಸೌಂದರ್ಯಮೂರ್ತಿಗಳಾಗಿ ಕಂಗೊಳಿಸುತ್ತಿರುವ ಮದನಿಕೆಯರು ಶಿಲ್ಪಗಳ ಭಂಗಿಗಳಲ್ಲಿನ ಲಾವಣ್ಯವನ್ನೂ, ನರ್ತನ ಶೀಲಗುಣವನ್ನು ಹಲವಾರು ಗೇಯರೂಪದ ರಚನೆಗಳಲ್ಲಿ ಕಲಾತ್ಮಕವಾಗಿ ಹಿಡಿದಿಟ್ಟಿದ್ದಾರೆ.

ಪು. ತಿ. ನರಸಿಂಹಚಾರ್ಯರ ರಚನೆಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸಮರ್ಪಕ, ಗೀತ-ನಾಟಕಗಳೆಂದೇ ರಚಿತವಾದ ಅಹಲ್ಯೆ, ಹರಿಣಾಭಿಸರಣ, ಗೋಕುಲ ನಿರ್ಗಮನದಂತಹ ರಚನೆಗಳು ನೃತ್ಯ ನಾಟಕಕ್ಕೆ ಅತ್ಯಂತ ಸಮರ್ಪಕವಾಗುವ ರಚನೆಗಳು. ಈ ರಚನೆಗಳಲ್ಲಿ ನೃತ್ಯದ ಪರಿಭಾಷೆಗಳು ಕಂಡು ಬರದಿದ್ದರೂ, ಅವುಗಳಲ್ಲಿಯ ಲಯ, ಸಾಹಿತ್ಯಗಳು ನೃತ್ಯ ಪ್ರಧಾನವಾಗಿಯೇ ಇವೆ. ಇಲ್ಲಿಯ ಗೀತಗಳೂ ನರ್ತನಾಂಗವಾಗಿಯೇ ಬರುತ್ತವೆ.

ಉದಾಹರಣೆಗೆ :

. ಎದೆಗೆ ಬರುತಿದೆ ಜಗದಮುದ
ಕುಣಿದಲ್ಲದೆ ನಾತಾಳೆನಿದ
ಹಾಡಿಯಾಡಿ ಕುಣಿದಾಡಿಯಲ್ಲದೆ
ತಾಳಬಲ್ಲನೇ ಇಂಥಮುದ (ಗೋಕುಲ ನಿರ್ಗಮನ ಪು. ೨೮)

. ಅಕ್ಕೋ ಶ್ಯಾಮ ಅವಳೆ ರಾಧೆ ನಲಿಯುತಿಹರು ಕಾಣಿರೇ |
ನಾವೇ ರಾಧೆ ಅವನೇ ಶ್ಯಾಮ ಬೇರೆ ಬಗೆಯ ಮಾಣಿರೇ | (ಅದೇ)

. ತುತ್ತುರಿಗಳ ಟಿರಿಟ್ಟರಿರಿ ಶಂಖಗಳ ಭೋಂಭೋಂ
ಮದ್ದಳೆಗಳ ಧೋಂ ಧೋಂ ಜಾಗಟೆಗಳ ಢಣಣೋಂ
ತಕ್ಕತ್ತ ಕೃತ್ತಕಿಟತ ಕೃದ್ಧಿಗಿಟತ ಕೃದ್ಧಿಗಿತೋಂ
ತಳಾಂಗು ತಳಾಂಗು ತಕಿಟತ್ತಳಾಂಗು ತದ್ಧಿಳಿತೋಂ (ಅದೇ ಪು. ೩೧)

ಮಾಸ್ತಿಯವರೂ ತಮ್ಮ ಕೆಲವು ಕವನಗಳಲ್ಲಿ ನರ್ತನ ಪ್ರಸಂಗವನ್ನು ವರ್ಣಿಸಿದ್ದಾರೆ. ಉಳಿದ ಕವಿತೆಗಳಂತೆ ಮಾಸ್ತಿಯವರೂ ಸಾಮಾನ್ಯ ರೀತಿಯಲ್ಲೇ ನೃತ್ಯ ಪ್ರಸಂಗವನ್ನು ಕಂಡಿದ್ದಾರೆ.

ಒಂದು ಕಾಲಿನ ಉಂಗುಟದ ತುದಿಯಲ್ಲಿ ನಿಂತಿರು ತಾಂಡವ ಮೂರ್ತಿಯಾದ ನಟರಾಜನ ಭಂಗಿಯನ್ನು ಹಲವು ರೀತಿ ವರ್ಣಿಸಿ, ಅವನ ತಾಂಡವ ನೃತ್ಯಕ್ಕೆ ವಿಸ್ಮಯವನ್ನು ಹೀಗೆ ಪ್ರಕಟಿಸುತ್ತಾರೆ.

ಉಂಗುಟದಂ ಚಿನ ತುದಿಯೊಳುನಿಂದಿಹ
ಅಂಗೋಪಾಂಗದ ವೈಖರಿಯಂದದ
ಭಂಗಿಯ ಚಿತ್ರವಿಚಿತ್ರವಾಗಿಹುದು
ನಟರಾಜಾ ! ನಟರಾಜ (ತಾವರೆ ಸಂಕಲನ)

ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ ಹಾಗೂ ಅನುಗ್ರಹ ಈ ಪಂಚ ಕ್ರಿಯೆಗಳನ್ನು ಸೂಚಿಸುವ ನಟರಾಜನ ತಾಂಡವದ ರಭಸವನ್ನು ಕವಿ ಹೃದಯದ ಮೂಲಕ ಮಾಸ್ತಿ ದರ್ಶಿಸಿದ್ದಾರೆ.

ಹಿಂದಿನ ಕವಿಗಳಂತೆ ಒಬ್ಬ ನರ್ತಕಿ ಅಥವಾ ನರ್ತಕನ ನೃತ್ಯ ಪ್ರಸಂಗವನ್ನು ನೇಪಥ್ಯ ವಿಧಿಯಿಂದ ಆರಂಭಿಸಿ ಅಂತ್ಯದವರೆಗೆ ಎಂಬಂತೆ ನವೋದಯ ಕವಿಗಳು ವರ್ಣಿಸುವುದಿಲ್ಲ. ನೃತ್ಯ ಪ್ರಸಂಗಗಳ ಸವಿಸ್ತಾರ ವರ್ಣನೆ ಅವರ ಕವನಗಳ ಉದ್ದೇಶವಲ್ಲ. ನೃತ್ಯ, ಸಂಗೀತದಂತಹ ಕಲೆಗಳಲ್ಲಿ ಅವರಿಗೆ ಅಭಿರುಚಿಯಿದೆಯೆಂದು ತಿಳಿಯುವ ಮಟ್ಟಿಗೆ ಈ ವರ್ಣನೆಗಳು ಬಂದಿವೆ.

 

() ನೃತ್ಯಬಂಧಗಳಸಂಗೀತರಚನೆಗಳು

ಪ್ರಾಚೀನ ಕವಿಗಳಿಂದ ಆಧುನಿಕ ಕವಿಗಳವರೆಗೆ ವಿಶ್ಲೇಷಿಸಿದ ನೃತ್ಯ ಪ್ರಸಂಗಗಳಲ್ಲಿ ನರ್ತಕಿಯ ವೇಷಭಾಷಣ ಆಕೆ ನರ್ತಿಸಿದ ಪರಿ, ಆಕೆಯ ಅಂಗಾಂಗಗಳ ಚಲನಾ ವಿಶೇಷಗಳನ್ನು ಕುರಿತು ಸಾಕಷ್ಟು ಮಾಹಿತಿಗಳು ಲಭ್ಯ. ಆದರೆ ಕವಿಗಳು ಎಲ್ಲಿಯೂ ನರ್ತಕಿಯ ನರ್ತಿಸಿದ ನೃತ್ಯಬಂಧಗಳ ಬಗ್ಗೆ ವಿವರಣೆಯನ್ನು ಕೊಡುವುದಿಲ್ಲ. ಅಗ್ಗಳೇವ, ರತ್ನಾಕರವರ್ಣಿಯಂತ ಕವಿಗಳು ಅಪ್ಸರೆಯರು ನರ್ತಿಸಿದ ನೃತ್ಯದಲ್ಲಿನ ಸಾಹಿತ್ಯದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸುತ್ತಾರೆ. ಆದರೆ ನೃತ್ಯಬಂಧಗಳ ವಿವರಗಳಿಲ್ಲ.

ಹಾಡುಗಾರಿಕೆ (ಸಂಗೀತ)ಯಲ್ಲಿ ವರ್ಣ ಕೀರ್ತನೆ, ಪದ, ಅಷ್ಟಪದಿ, ಜಾವಳಿ, ತಿಲ್ಲಾನಗಳು ಒಂದು ಕಛೇರಿಯ ಅತ್ಯಂತ ಅವಶ್ಯಕ್ ಘಟಕಗಳಂತೆ ಇಂದಿಗೂ ಪ್ರಚಲಿತವಾಗಿವೆ. ಅಂತೆಯೇ ಈಗ್ಗೆ ಸುಮಾರು ನೂರು ವರ್ಷಗಳಿಂದಲೂ ಭರತನಾಟ್ಯ ಕಾಯಕ್ರಮದಲ್ಲಿ ಗಣೇಶಸ್ತುತಿ, ಅಲರಿಪು, ಜತಿಸ್ವರ, ಶಬ್ದಂ, ಪದವರ್ಣ, ಪದಷ್ಟಪದಿ, ಜಾವಳಿ, ತಿಲ್ಲಾನ (ಈಗ ದೇವರನಾವೂ ಸೇರಿದೆ) ಮುಂತಾದ ನೃತ್ಯಬಂಧಗಳನ್ನು ಸೇರಿಸಲಾಯಿತು. ಈ ಬಂಧಗಳು ಸಾಮಾನ್ಯವಾಗಿ ತಮಿಳು, ತೆಲುಗು, ಸಂಸ್ಕೃತ ಭಾಷೆಯಲ್ಲೇ ರಚಿತವಾಗಿರುತ್ತವೆ.

ನೃತ್ತ, ನೃತ್ಯ ಹಾಗೂ ಸಾಹಿತ್ಯ ಪ್ರಧಾನವಾಗಿರುವ ಪದವರ್ಣಗಳಲ್ಲಿ ಶೃಂಗಾರ ಪ್ರಧಾನ ಸಾಹಿತ್ಯವಿದ್ದು, ನರ್ತಕಿಯ ತಾಳ ಜ್ಞಾನ, ಅಭಿನಯ ಅಂಗಶುದ್ಧಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಪದವರ್ಣಗಳನ್ನು ಮೊತ್ತಮೊದಲಿಗೆ ಆಸ್ಥಾನ ವಿದ್ವಾನ್ ಚನ್ನಕೇಶವಯ್ಯನವರು ಕನ್ನಡದಲ್ಲಿ ರಚಿಸಿದ್ದಾರೆ. ವರ್ಣಗಳಷ್ಟೆ ಅಲ್ಲದೆ ಶೃಂಗಾರ ರಸ ಪ್ರಧಾನವಾದ ಪದ, ಜಾಗಳಿ, ತಿಲ್ಲಾನಗಳನ್ನು ಇವರು ರಚಿಸಿದ್ದಾರೆ.

ಇವರ ನಂತರ ಶ್ರೀಮತಿ ಗೀತಾ ಸೀತಾರಾಂ ಅವರು ಕನ್ನಡದಲ್ಲಿ ನೃತ್ಯಬಂಧಗಳನ್ನು ರಚಿಸಿ ನೂಪುರ

[1] ಎಂಬ ಸಂಕಲನ ಹೊರತಂದಿದ್ದಾರೆ. ಈ ಸಂಕಲನದ ನೃತ್ಯ ಬಂಧಗಳು ನರ್ತನ ಯೋಗ್ಯವಾಗಿದ್ದು, ಪ್ರಾಯೋಗಿಕ ನೃತ್ಯಕ್ಷೇತ್ರದಲ್ಲಿ ಸ್ವಾಗತಾರ್ಹವಾಗಿದೆ.

ಶೃಂಗಾರ ರಸ ಪ್ರಧಾನವಾಗಿ ಲಘು ಸಾಹಿತ್ಯದಿಂದ ಕೂಡಿ, ಮನೋರಮಜನೆಯೇ ಮೂಲ ಉದ್ದೇಶವನ್ನಾಗಿ ಹೊಂದಿದ್ದ ಜಾವಳಿಯೆಂಬ ವಿಶೇಷ ಪ್ರಕಾರ ತೆಲುಗಿನಲ್ಲಿ ಅತ್ಯಂತ ವಿಶೇಷ ಪ್ರಚಾರದಲ್ಲಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಅನೇಕ ನೃತ್ಯ ಕಲಾವಿದರೂ, ಸಾಹಿತಿಗಳೂ ಕನ್ನಡದಲ್ಲಿ ಜಾವಳಿಗಳ ರಚನೆ ಮಾಡಿದರು. ಇಂತಹ ಜಾವಳಿಗಳನ್ನು ಶ್ರೀ ಕೆ. ವಿ. ಆಚಾರ್ ಸಂಗ್ರಹಿಸಿದ್ದಾರೆ.[2]

ಕನ್ನಡ ಕಾವ್ಯಗಳಲ್ಲಿನ ನೃತ್ಯ ಪ್ರಸಂಗಗಳ ಸಿಂಹಾವಲೋಕನವನ್ನು ಮಾಡಿದರೆ ಜೈನ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳ ಸಂದರ್ಭಗಳು ಒಂದೇ ಆಗಿರುತ್ತದೆ. ಆದರೂ ಕವಿಗಳು ವರ್ಣಸುವ ನೃತ್ಯದ ಶೈಲಿ, ರೀತಿ ಹಾಗೂ ಪರಿಭಾಷೆಗಳಲ್ಲಿ ಸ್ಪೋಪಜ್ಞತೆ ಪ್ರಾಂತೀಯತೆಗಳು ಕಾಣುತ್ತದೆ. ಈ ಕವಿಗಳು ಪಂಪನನ್ನು ಅನುಸರಿಸಿ ಮಾರ್ಗನೃತ್ಯವನ್ನೇ ವರ್ಣಿಸಿದರೂ ನೃತ್ಯ, ಗೀತ, ವಾದ್ಯಗಳಲ್ಲಿ ದೇಶಿ ಪರಿಭಾಷೆಯನ್ನು ಬಳಸಿ, ಮಾರ್ಗ ದೇಶೀ ಎರಡೂ ಶೈಲಿಯ ನೃತ್ಯಗಳನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.

ವೀರಶೈವ ಕಾವ್ಯಗಳು ದೇಶೀ ನೃತ್ಯಗಳ ಪ್ರಾಬಲ್ಯ ಕಂಡುಬರುತ್ತದೆ. ಕವಿ ಚಂದ್ರಶೇಖರನನ್ನು ಹೊರತು ಪಡಿಸಿ, ಈ ಕವಿಗಳು ನೃತ್ಯ ಪರಸಂಗವನ್ನು ಅತ್ಯಂತ ದೀರ್ಘವಾಗಿ, ಸೂಕ್ಷ್ಮಾತಿ ಸೂಕ್ಷ್ಮ ವಿವರಣೆಗಳೊಂದಿಗೆ ನಿರೂಪಿಸುವುದಿಲ್ಲ.

ವೈದಿಕ ಕವಿಗಳು ವರ್ಣಿಸುವ ನೃತ್ಯ ಪ್ರಸಂಗಗಳಲ್ಲಿ ಅದರ ಪರಿಭಾಷೆ ಇತ್ಯಾದಿಗಳ ಖಚಿತವಾದ ಮಾಹಿತಿ ಸಿಗುವುದಿಲ್ಲ. ಕನಕದಾಸರು, ಗೋವಿಂದ ವೈದ್ಯರಂತಹ ಕವಿಗಳ ಅಂದು ಪ್ರಚಲಿತವಿದ್ದ ಪ್ರಾಂತೀಯ ನೃತ್ಯಶೈಲಿಯ ಬಗ್ಗೆ ಸಾಕಷ್ಟು ತಿಳಿವಳಿಕೆಯನ್ನು ನೀಡುತ್ತಾರೆ.

ಆಧುನಿಕ ಕವಿಗಳು ಅವರ ಕಾವ್ಯ ಸಂವಿಧಾನ, ತಂತ್ರಗಳಿಗೆ ಅನುಕೂಲಕರವಾಗಿ, ಕಥೆಯ ಓಟ ಕೆಡದಂತೆ ನೃತ್ಯ ಪ್ರಸಂಗಗಳನ್ನು, ಪರಿಭಾಷೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಬಳಸಿರುವುದು ಕಂಡುಬರುತ್ತದೆ.[1] ನೂಪುರ, ಗೀತಾ ಸೀತಾರಾಂ : ಸ್ವಾತಿ ಪ್ರಕಾಶನ ಶ್ರೀಧಾಮ, ಯಾದವಗಿರಿ, ಮೈಸೂರು (೧೯೯೩).

[2] ಕನ್ನಡದ ಜಾವಳಿಗಳು, ಸಂ.ಕೆ.ವಿ. ಆಚಾರ್, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ (೧೯೭೭).