ನಂದ್ಯಾವರ್ತ ಸ್ಥಾನಕದಲ್ಲಿ (ನೋಡಿ ಅನುಬಂಧ ಅ. ಪರಿಭಾಷೆ) ನಾಗಬಂಧ ಹಸ್ತವನ್ನು (ನೋಡಿ ನಕ್ಷೆ ೨ ಸಂಯುತ ಹಸ್ತ) ಹಿಡಿದು ನಿಲ್ಲುವುದು, ನಂತರ ಸೊಂಟವನ್ನು ಕುಲುಕಿಸಿ ರೇಚಿತ ಪತನ ಮುಂತಾದ ಚಲನೆಗಳನ್ನು ಅಂಗುಷ್ಠದಿಂದಲೂ ಪಾರ್ಷ್ಣಿಗಳಿಂದಲೂ ಚಲಿಸಿ ಮಾಡುವುದು. ಈ ವಿಧಾನವನ್ನು ಐಂದ್ರ (ನೋಡಿ ಅನುಬಂಧ ಅ. ಪರಿಭಾಷೆ) ಎಂದು ಕರೆಯುತ್ತಾರೆ.

ಇಂದ್ರನು ಮೇಲೆ ಹೇಳಿದ ಇಂದ್ರಕರಣಗಳಿಂದ ತನ್ನ ನಾಟ್ಯ ವಿಧಿಯನ್ನು ಪ್ರಯೋಗಿಸಿದ ಎಂದೂ ಹೇಳಬಹುದು.

ಇಂದ್ರನು ಜಿನ ಜನ್ಮಾಭಿಷೇಕದಲ್ಲಿ ಸಂತೋಷದಿಂದ ನರ್ತಿಸುವುದನ್ನು ಶಿಖಂಡಿ ತಾಂಡವ ಎಂಬುದಾಗಿ ಹೇಳಿ ಮಳೆಗಾಲದಲ್ಲಿ ನರ್ತಿಸುವ ನವಿಲಿಗೆ ಹೋಲಿಸುತ್ತಾನೆ. (ಆ. ೫.೭)

ಮುಂದಿನ ಪದ್ಯದಲ್ಲಿ ಇಂದ್ರನು ಶುದ್ಧ ನೃತ್ತವನ್ನು (ನೋಡಿ ಅನುಬಂಧ ಅ. ಪರಿಭಾಷೆ) ಆಡಿದುದರ ಪ್ರಸ್ತಾಪವಿದೆ.

ಕರಚರಣ ಸಮಾಯೋಗದ
ಕರಣಂ ನೂಱೆಂಟು ತದ್ಭವಂಗಳ್ ಮೂವ
ತ್ತೆರಡಂಗಹಾರವೆಸದುವು
ಸರೇಚಕಂಗಳ್ ಸು ಚಾರಿಗಳ್ ಸುರಪತಿಯಾ ()

ಹಸ್ತ ಹಾಗೂ ಪಾದಗಳ ಸಮಾಯೋಗದ ನೂರೆಂಟು ಕರಣಗಳನ್ನು (ನೋಡಿ ಅನುಬಂಧ ಇ)  ಅದರಿಂದ ಉಂಟಾಗುವ ಮೂವತ್ತೆರಡು ಅಂಗಹಾರಗಳನ್ನು ರೇಚಕ ಹಾಗೂ ಚಾರಿಗಳೊಡನೆ ಇಂದ್ರನು ಪ್ರದರ್ಶಿಸುತ್ತಾನೆ.

ಪಕ್ಕದಿಂದ ಪಕ್ಕಕ್ಕೆ ಹೋಗುವುದು, ತಿರುಗುವುದು, ಎತ್ತರಿಸುವುದು ಎಂಬ ಅರ್ಥಗಳನ್ನು ಹೊಂದಿದ ರೇಚಕ

[1] ಪಾದ, ಕಟಿ, ಕರ ಹಾಗೂ ಕಂಠ ರೇಚಕಗಳು ಎಂದು ನಾಲ್ಕು ವಿಧ.

() ಪಾದರೇಚಿತ ತತ್ತರಿಸುವ ಹೆಜ್ಜೆಗಳಿಂದ ನಡೆಯುವುದು. ಕಾಲುಗಳನ್ನು ಮೇಲಕ್ಕೆ ಝಾಡಿಸುವುದು ಇತ್ಯಾದಿ; () ಕಟಿರೇಚಿತ ಮೇಲ್ಮೈಯನ್ನು ತಿರುಗಿಸುವುದು, ಸೊಂಟವನ್ನೂ ತಿರುಗಿಸುವುದು ಇತ್ಯಾದಿ; () ಕರರೇಚಿತ ಕೈಯನ್ನು ಸುತ್ತಲೂ ತಿರುಗಿಸುವುದು, ಚೆಲ್ಲುವುದು, ದಂಡಗೆ ತಿರುಗಿಸುವುದು, ಮೆಲ್ಲನೆ ಮುಂದೆ ಮುಂದೆ ಸರಿಸುವುದು ಇತ್ಯಾದಿ; () ಕಂಠರೇಚಿತ ಕುತ್ತಿಗೆಯನ್ನು ಎತ್ತಿ ಹಿಡಿಯುವುದು, ಕೆಳಗೆ ಬಾಗಿಸುವುದು, ಪಕ್ಕಕ್ಕೆ ಬಾಗಿಸುವುದು, ಅತ್ತಿತ್ತ ಹೊಯ್ದಾಡುವುದು ಇತ್ಯಾದಿ. ಸೊಂಟ, ಪಾದ, ಜಂಘೆ, ತೊಡೆ ಇವುಗಳು ಒಂದೇ ರೇಖೆಯಲ್ಲಿದ್ದರೆ ಚಾರೀ ನಿಷ್ಪನ್ನವಾಗುವುದೆಂದು ಭರತನ ಮತ.[2]

ಮೇಲೆ ಉಕ್ತವಾಗಿರುವ ಪದ್ಯದ ಮೂಲಕ ರನ್ನ ಚಾರಿ, ರೇಚಿತಗಳಿಂದ ಕರಣ ಹಾಗೂ ಅಂಗಹಾರಗಳ ಪ್ರಯೋಗ ಸಾಧ್ಯವೆಂದು ಹೇಳಿದಂತಾಗಿದೆ. ಒಂಬತ್ತನೆಯ ಪದ್ಯದಲ್ಲಿ ಇಂದ್ರನು ರಂಗ ಮಧ್ಯದಲ್ಲಿ ಚತುರ್ವಿಧ ಅಭಿನಯವನ್ನು ಮಾಡಿದನೆಂದು ಹೇಳುತ್ತ ಅವುಗಳನ್ನು ಪರೀಷಹಗಳಿಗೆ ಹೋಲಿಸಿದ್ದಾನೆ. ಜೈನ ಧರ್ಮದಲ್ಲಿ ಬರುವ ಇಪ್ಪತ್ತೆರಡು ಪರೀಷಹಗಳು ಕಷ್ಟ ಸಹಿಷ್ಣುತೆಯ ಮಾರ್ಗಗಳಾಗಿವೆ. ಚತುರ್ವಿಧ ಅಭಿನಯಕ್ಕೂ ಪರೀಷಹಗಳಿಗೂ ಹೋಲಿಸುವ ಕವಿಯ ಆಶಯ ಅರ್ಥವಾಗುವುದಿಲ್ಲ.

ಮುಂದೆ ಗಾಯನದ ವಿಧಾನ, ದೋಷರಹಿತವಾದ ಗಾನ, ಚರ್ಮ ವಾದ್ಯಗಳ ಧ್ವನಿಗಳ ಬಗ್ಗೆ ಹೇಳುತ್ತಾನೆ. ಯತಿಗಳಾದ ಗೋಪುಚ್ಛ, ತತ್ತ್ವಾಘ, ದಕ್ಷಿಣಾವೃತ್ತ ಇತ್ಯಾದಿಗಳನ್ನು ಹೇಳುತ್ತಾನೆ. (ಅ. ೨ ರಲ್ಲಿ ಚರ್ಚಿಸಿದೆ.)

ಹದಿನಾಲ್ಕನೆಯ ಪದ್ಯ ಇಂದ್ರನ ಹಸ್ತ ಹಾಗೂ ಪಾದಗಳ ಚಲನೆಯನ್ನು ಕರಿತಾಗಿದೆ. ಅವುಗಳ ವಿನ್ಯಾಸಗಳು ಎಂಟು ಲೋಕಕ್ಕೆ ತಾಗಿತ್ತು ಎಂದು ರನ್ನ ಹೇಳುತ್ತಾನೆ. ಇಂದ್ರನು ತನ್ನ ಅಪೂರ್ವ ನಾಟ್ಯ ವಿಲಾಸವನ್ನು ಮೆರೆಯುತ್ತ ಭ್ರಮರಿ ನಾಟ್ಯವನ್ನು ಪ್ರದರ್ಶಿಸಿದಾಗ ಸಹಸ್ರಾಕ್ಷನಾದ ಅವನ ಸಾವಿರ ಕಣ್ಣುಗಳ ಕಪ್ಪುಕಾಂತಿ ಕನೈದಿಲೆಯ ಹೂ ಹಾರವನ್ನು ಸುತ್ತ ಬೀಸಿದ ಹಾಗೆ ಸಭೆಗೆ ಕಂಡಿತು ಎಂದು ಸೊಗಸಾಗಿ ವರ್ಣಿಸಿದ್ದಾನೆ.

ವಾಸವನ ಪೂರ್ವನಾಟ್ಯ ವಿ
ಳಾಸದೆ ತಾಂ ಭ್ರಮರಿ ಗುಡುವುದುಂ ನೇತ್ರಸಹ
ಸ್ರಾಸಿತ ರುಚಿ ಕರ್ನೆಯ್ದಿಲ
ಬಾಸಿಗಮಂ ಬೀಸಿದಂತುಟಾದುದು ಸಭೆಯೊಳ್ ||       (ಅಜಿಪು. .೧೫)

ಇಂದ್ರನ ತೋಳುಗಳ ಮೇಲೆ ಅಪ್ಸರೆಯರು ವಿಲಾಸದಿಂದ ಮಾಡಿದ ಲಾಸ್ಯವನ್ನು, ಇಂದ್ರನು ಮಾಡಿದ ತಾಂಡವವನ್ನು ಮುಂದೆ ವರ್ಣಿಸಿದೆ.

ಪೊಳೆವಲರ್ಗಣ್ಣ ಬೆಳ್ಪುಗಳ ಪುರ್ವಿನ ಜರ್ವಿನ ಚೆಲ್ಪುಗಳ ಮನಂ
ಗೊಳೆ ಸುರಕಾಂತೆಯರ್ ದಿವಿಜರಾಜನ ತೋಳ್ಗಳ ಮೇಲೆ ನಿಂದು ಗೊಂ
ದಳದೆ ವಿಚಿತ್ರ ನರ್ತನ ವಿಳಾಸಮನಾಡೆ ಮರುದ್ವಿಲಾಸಿನೀ
ವಿಳಸಿತ ಲಾಸ್ಯಮುಂ ಮಘ ತಾಂಡವ ಮೇಂ ರಮಣೀಯಮಾದುದೋ
(
ಅಜಿಪು. .೧೭)

ಇಲ್ಲಿಯೂ ಗೊಂದಳವು ಸಮೂಹ ಎಂಬ ಪದದ ಅರ್ಥವ್ಯಾಪ್ತಿಗೇ ಬರುವುದು. ತೋಳುಗಳಲ್ಲಿ ನಿಂತು ಅಪ್ಸರೆಯರು ವಿಚಿತ್ರ (ಹಿಂಚೆ ಚರ್ಚಿಸಿದೆ) ನೃತ್ಯವನ್ನು ಮಾಡುತ್ತಾರೆ ಎಂಬುದು ಗಮನಾರ್ಹ.

ಮುಂದೆ ಇಂದ್ರನು ಇಂದ್ರಜಾಲಿಗತನದಿಂದ ತನ್ನ ರೂಪವನ್ನು ಧರೆಯಲ್ಲಿ ಒಮ್ಮೆ, ಆಕಾಶ ಮಾರ್ಗದಲ್ಲಿ ಒಮ್ಮೆ ತೋರಿ, ತನಗೆ ಉಂಟಾದ ಸಂತೋಷವನ್ನು ಮತ್ತು ಹೆಚ್ಚಾಗಿ ತೋರಲೋ ಎಂಬಂತೆ ಸಹಸ್ರನೇತ್ರನೂ ಸಾವಿರ ಕರನೂ, ಸಾವಿರ ಪಾದನೂ ಆಗಿ ನರ್ತಿಸಿದನೆಂದು ಕವಿ ವರ್ಣಿಸುತ್ತಾನೆ. ಇಂದ್ರನ ಹರಡಿದ ತೋಳುಗಳಲ್ಲಿ, ಎದೆಯಲ್ಲಿ, ಕರದಲ್ಲಿ, ಮಣಿಕಟ್ಟಿನಲ್ಲಿ, ಬೆರಳಿನಲ್ಲಿ, ಉಗುರಿನಲ್ಲಿ ಅಪ್ಸರೆಯರು ವಿಲಾಸದಿಂದ ನರ್ತಿಸುತ್ತಾರೆ ಎಂಬುದು ಭವ್ಯವಾದ ಕಲ್ಪನೆ.

ಪಂಪ ಮತ್ತು ಪೊನ್ನರಲ್ಲಿ ನರ್ತಕಿಯರು ಇಂದ್ರನ ತೋಳು ಹಾಗೂ ಕರ, ನಖ ಪ್ರಾಂತದಲ್ಲಿ ನರ್ತಿಸಿದರು ಎಂಬ ಉಲ್ಲೇಖವಿದ್ದರೆ, ರನ್ನ ಆ ಕಲ್ಪನೆಯನ್ನು ಇನ್ನು ವಿಸ್ತರಿಸಿದ್ದಾನೆ, ಹೀಗೆ :

ಕುಲಿಶಿಯ ತೋಳ್ಗಳ ಮುರ
ಸ್ಥಲದೊಳ್ ಕರತಲ ದೊಳೆಸೆವ ಮಣಿಬಂಧದೊಳಂ
ಗುಲಿಯೊಳ್ ನಖದೂಳ್ ನರ್ತನ
ವಿಲಾಸಮಂ ಮೆಱೆದರಿಂದ್ರ ಸೌಂದರಿಯರ್ಕಳ್ ||        (೨೦)

ರನ್ನ ಮುಂದಿನ ಪದ್ಯದಲ್ಲಿ ಒಂದು ಚಮತ್ಕಾರವನ್ನು ಹೇಳುತ್ತಾನೆ. ಇಂದ್ರನ ಬಾಹುವನ್ನೇ ದಂಡವನ್ನಾಗಿಸಿ ಅಪ್ಸರೆಯರು ಆ ದಂಡದ ಮೇಲೆ ಚಿತ್ರನರ್ತನವನ್ನು ಮಾಡಿದರು ಎಂಬುದೇ ಇದು. ಚಿತ್ರವು ಆಶ್ಚರ್ಯ, ಅದ್ಭುತ ಎಂಬ ಅರ್ಥಗಳನ್ನೂ ಕೊಡುತ್ತದೆ. (ಸಂಸ್ಕೃತ-ಕನ್ನಡ ನಿಘಂಟು) ಇಂದ್ರನ ಬಾಹುವನ್ನೇ ದಂಡವನ್ನಾಗಿಸಿ ಅಪ್ಸರೆಯರು ಆಶ್ಚರ್ಯಕರವಾದ ರೀತಿಯಲ್ಲಿ ಕರಣ, ಅಂಗಹಾರ, ರೇಚಕಗಳನ್ನು ಪ್ರಯೋಗಿಸಿ ಅದ್ಭುತವಾಗಿ ನರ್ತಿಸಿದ ನೃತ್ಯವನ್ನು ಕವಿ ಚಿತ್ರ ನರ್ತನ ಎಂದಿರಬಹುದು. (ಭರತನು ಚಿತ್ರ ಪೂರ್ವರಂಗ ವಿಧಿಯಲ್ಲೂ ಈ ತಂತ್ರವನ್ನು ನಿರ್ದೇಶಿಸುತ್ತಾನೆ. ಅ.೫)

ಜನಮೆಲ್ಲಂ ನುಡಿವುದು ದಂ
ನೃತ್ಯ ಮುಂಬೆಂದು ಕಾಣಲಾಯ್ತಂದುದು
ಕ್ರನ ಬಾಹುದಂಡದೊಳ್ ಚಿ
ತ್ರ ನರ್ತನಂ ನೆಗೞಿ ನೆಗೞ್ವ ಸುರಕಾಂತೆಯರಿಂ         (೨೧)

ಗಳಗೂಸಾಡು ಎಂಬುದು ಕವಿಗಳು ಬಳಸುವ ಆಡು ಮಾತು. ಗಳೆಯ ಮೇಲೆ ಕೂಸು ಎಂದರೆ ಚಿಕ್ಕ ಹುಡುಗಿ ನರ್ತಿಸುವುದು ಬಹು ಕಷ್ಟದ ಕೆಲಸ. ಇಂದ್ರನೇ ಗಳೆಯಾಗಿ ಅಪ್ಸರೆಯರು ಆ ಗೆಳೆಯ ಮೇಲೆ ನರ್ತಿಸಿದರೆಂದೂ ಇಂತಹ ನೃತ್ಯವೂ ಇರಬಹುದೇ ಎಂದು ಜನಗಳು ಅನುಮಾನಿಸುತ್ತಿದ್ದರೆಂದೂ ಇಂದ್ರನ ಆನಂದ ನೃತ್ಯ ಅದನ್ನು ಸಾಕ್ಷಾತ್ಕರಿಸಿತು ಎಂದು ಕವಿಯ ಮತ. ಗಳೆಯ ಮೇಲೆ ಕಿಶೋರ ವಯಸ್ಸಿನ ಬಾಲಿಕೆ ಆಡುವುದು ಇಂದಿಗೂ ದೊಂಬರ ಆಟದಲ್ಲಿ ಕಾಣುವ ದೃಶ್ಯ. ವೀಕ್ಷಕರಲ್ಲಿ ಕುತೂಹಲವನ್ನೂ ನೃತ್ಯದಲ್ಲಿ ಚಮತ್ಕಾರವನ್ನೂ ತರಲು ಈ ತರಹದ ಪ್ರಯೋಗಗಳನ್ನು ಮಾಡುತ್ತಾರೆ.

ಪಂಪನಲ್ಲಿ ಜತ್ತವಟ್ಟದ ಮಣೆಯ ಉಪಮೆಯನ್ನು ಇಂದ್ರನ ಸಹಸ್ರ ಬಾಹುಗಳಲ್ಲಿ ನರ್ತಿಸುವವರಿಗೆ ಹೋಲಿಸಿದರೆ ರನ್ನ ಇದೇ ದೃಶ್ಯವನ್ನು ದಂಡ ನೃತ್ಯಕ್ಕೆ ಎಂದರೆ ಗಳೆಯ ಮೇಲಿನ ಕೂಸಾಟಕ್ಕೆ ಹೋಲಿಸುತ್ತಾನೆ.

ಜಿನ ಶಿಶುವಿನ ಜನ್ಮಾಭಿಷೇಕ ಕಲ್ಯಾಣವನ್ನು ಮುಂದುವರಿಸುತ್ತ, ಇಂದ್ರನು ಜಿನ ಜನನಿ ಹಾಗೂ ಜಿತಶತ್ರು ಮಹಾರಾಜನ ಸಮ್ಮುಖದಲ್ಲಿ, ಅರಮನೆಯ ಮುಂದೆ, ಲಕ್ಷ್ಮೀಮಂಟಪದಲ್ಲಿ ಜಿನಶಿಶುವನ್ನು ಸ್ಥಾಪಿಸಿ, ದೇವತೂರ್ಯಾದಿಗಳೊಂದಿಗೆ ಆನಂದ ನೃತ್ಯವನ್ನು ಪುನಃ ಆರಂಭಿಸುತ್ತಾನೆ.

ಸುರಲೋಕದ ಪುಷ್ಪಗಳಿಂದ ಪುಷ್ಪಾಂಜಲಿಯನ್ನು (ಅ.೨ರಲ್ಲಿ ಚರ್ಚಿಸಿದೆ) ರಂಗಮಧ್ಯದಲ್ಲಿ ಮಾಡಿದ ಇಂದ್ರನು ಅಮೋಘವಾದ ನಾಟ್ಯವಿಧಿಯನ್ನು ಆರಂಭಿಸುತ್ತಾನೆ. ಕವಿ ರನ್ನ ಇಂದ್ರನ ಆನಂದ ನೃತ್ಯವನ್ನು ವರ್ಣಿಸುತ್ತ ನಾಟ್ಯಶಾಸ್ತ್ರದ ತಂತ್ರವನ್ನು ವಿಸ್ತೃತಗೊಳಿಸಿದರೂ ಮಾರ್ಗನೃತ್ಯಕ್ಕೆ ಆವಶ್ಯಕವಾದ ಜವನಿಕೆ  ಹಾಗೂ ಸ್ಥಾನಕವನ್ನು (ಅ. ೨ ರಲ್ಲಿ ಚರ್ಚಿಸಿದೆ) ಪ್ರಸ್ತಾಪ ಮಾಡುವುದಿಲ್ಲ. ಪಂಪ ಹಾಗೂ ಪೊನ್ನರು  ಈ ಮಾಹಿತಿಯನ್ನು ಕೊಟ್ಟಿದ್ದಾರೆ.

ಇಂದ್ರನ ನೃತ್ಯ ಹೀಗೆ ಆರಂಭವಾಗುತ್ತದೆ :

ಆಗಳ್ ನಾಟ್ಯವಿಧಿಯಂ ನಿರ್ವರ್ತಿಸಿ ಶೃಂಗಾರಾದಿಗಳಪ್ಪೊಂಬತ್ತು
ರಸಂಗಳಮನೆಂಟುಂ ಸಾತ್ವಿಕ ಭಾವಂಗಳುಮಂ, ಮೂವತ್ತು ಮೂಱು
ಸಂಚಾರಿಕೆಗಳು ಮಂ (೩೦ )

ಭಾವ, ವಿಭಾವ, ಅನುಭಾವ ಹಾಗೂ ವ್ಯಭಿಚಾರಿ ಭಾವಗಳು ತಮ್ಮತನವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳದೆ ರಸದಲ್ಲಿ ಲೀನವಾದಾಗಲೇ ರಸೋತ್ಪತ್ತಿ ಎಂಬುದು ಮೀಮಾಂಸಕರ ಮತ. ಹೀಗಿರುವಾಗ ಇಂದ್ರನು ಸ್ಥಾಯಿಭಾವಗಳನ್ನು, ರಸಗಳನ್ನು, ಸಂಚಾರಿಭಾವಗಳನ್ನು ಒಟ್ಟಿಗೆ ಪ್ರದರ್ಶಿಸಿದ ಎಂಬ ವರ್ಣನೆ ಇಲ್ಲಿ ಸಂಗತವೆನಿಸುವುದಿಲ್ಲ. ನವರಸಗಳಲ್ಲಿ ಬೀಭತ್ಸ, ಕರುಣ, ರೌದ್ರ, ಭಯಾನಕ, ಹಾಸ್ಯ ರಸಗಳೂ ಅವುಗಳಿಗೆ ಹೊಂದಿಕೆಯಾಗಿ ಬರುವ ಅಪಸ್ಮಾರ, ಆವೇಗ, ಶಂಕೆ, ಚಂಚಲತೆ, ಮೂರ್ಛೆ, ಚಾಪಲ್ಯತೆ ನಿರ್ವೇದ, ಚಿಂತೆ ಮುಂತಾದ ವ್ಯಭಿಚಾರಿ ಭಾವಗಳೂ ಜನ್ಮೋತ್ಸವದ ಆನಂದ ನೃತ್ಯಕ್ಕೆ ಸಮರಸವಾಗಿ ಸೇರಿಕೊಳ್ಳುವುದಿಲ್ಲ.

ಮುಂದೆ ಚತುರ್ವಿಧ ಅಭಿನಯಗಳಾದ ಸಾತ್ವಿಕ, ಆಂಗಿಕ, ವಾಚಿಕ ಹಾಗೂ ಆಹಾರ್ಯಾದಿ ಅಭಿನಯಗಳ ಪ್ರಸ್ತಾಪವಿದೆ. ಎಂಟು ಸಾತ್ಪಿಕಭಾವಂಗಳುಮನಾಂಗಿಕ ಸಾತ್ವಿಕ ವಾಚಿಕಾಹರ್ಯಕೆಮೆಂಬ ನಾಲ್ಕಭಿನಯ ಮುಮಂ (೫-೩೦ವ) ನಾಟ್ಯಧರ್ಮಿ ಹಾಗೂ ಲೋಕಧರ್ಮಿ ಎಂಬ ಎರಡು ಧರ್ಮಿಗಳನ್ನು ಮುಂದೆ ಹೇಳಿದೆ. ಇಂದ್ರನು ತನ್ನ ಆನಂದ ನೃತ್ಯಕ್ಕೆ ಹೊಂದುವ ಆಹಾರ್ಯ ಎಂದರೆ ವೇಷಭೂಷಣಗಳೊಂದಿಗೆ ವಾಚಿಕಾಭಿನಯವನ್ನು ಮಾಡಿದ; ಜೀವನ ಸ್ತೋತ್ರ ಆತನನ್ನು ಕುರಿತು ಪ್ರಶಂಸಾ ಪದ್ಯಗಳೇ ಇಲ್ಲಿ ವಾಚಿಕಾಭಿನಯವಾಗಬಹುದು. ಇಂದ್ರನ ಆಂಗಿಕಾಭಿನಯವಂತೂ ಆತ ತನ್ನ ನೃತ್ತ ಹಾಗೂ ನೃತ್ಯದಲ್ಲಿ ಬಳಸಲು ಹಸ್ತ, ಪಾದ, ಶಿರ, ಕಟಿ ಇತ್ಯಾದಿಯಾದ ಅಂಗಗಳ ಚಲನೆಯೇ ಆಗಿದೆ. ಜಿನನ ಜನನದಿಂದ ಉಂಟಾದ ಆನಂದವನ್ನು ಇಂದ್ರ ತನ್ನ ಸತ್ವಗುಣಗಳಾದ ರೋಮಾಂಚ ಹರ್ಷ, ಅಶ್ರು, ವೈಸ್ವರ, ವೈವರ್ಣ್ಯ ಮುಂತಾದವುಗಳಲ್ಲಿ ತೋರುತ್ತಾನೆ. ಇದರ ನಂತರ ಸಹಜವಾದ ಅಭಿನಯವನ್ನು, ಅಂಗಾಂಗಗಳನ್ನೂ, ಯಾವ ರೀತಿಯಲ್ಲೂ ವಿಕೃತಗೊಳಿಸದೇ ಸ್ತ್ರೀ ಪುರುಷರನ್ನು ಒಳಗೊಂಡು ಪ್ರಯೋಗಿಸುವ ಲೋಕಧರ್ಮಿ[3]ಯನ್ನು ಮಾಡುತ್ತಾನೆ. ಅತಿಕ್ರಿಯಾ ಲಲಿತವಾದ ಅಂಗಹಾರಗಳು, ಲೋಕದಲ್ಲಿ ಪ್ರಸಿದ್ಧವಾದುದನ್ನು ಮೆಚ್ಚಿ ಅದರ ಪ್ರತಿರೂಪವನ್ನು ನಾಟಕವನ್ನಾಗಿ ಪ್ರದರ್ಶಿಸುವುದು, ಶೈಲ, ರಥ, ಆಯುಧ, ವಿಮಾನಾದಿಗಳ ಪ್ರತಿರೂಪವನ್ನು ರಂಗದ ಮೇಲೆ ತರುವುದು ಮುಂತಾದ ನಾಟ್ಯಧರ್ಮಿ[4]ಯ ಅಭಿನಯವನ್ನೂ ಮಾಡುತ್ತಾನೆ. ಇಂದ್ರನ ಆನಂದ ನೃತ್ಯ ಮುಂದೆ ನಾಟ್ಯಧರ್ಮಿಯನ್ನೇ ಹೆಚ್ಚಾಗಿ ಆಶ್ರಯಿಸುತ್ತದೆ.

ಎರಡು ಧರ್ಮಿಗಳಷ್ಟೇ ಅಲ್ಲದೇ ಭಾರತಿಯುಂ ಸಾತ್ಪತಿಯುಂ ಕೈಶಿಕಿಯುಮಾರಭಟಿಯುಮೆಂಬ ನಾಲ್ಕುಂ ವೃತ್ತಿಯುಮಂ ಅವಂತಿಯುಂ ದಾಕ್ಷಿಣಾತ್ಯೆಯುಂ ಪಾಂಚಾಲಿಯುಂ ಮಾದ್ರಮಾಗಧಿಯು ಮೆಂಬ ನಾಲ್ಕು ಪ್ರವೃತಿಯುಮಂ (.೩೦ .) ಇಂದ್ರನು ಭಾರತಿ, ಸಾತ್ಪತಿ, ಆರಭಟಿ ಹಾಗೂ ಕೈಶಿಕೀ ವೃತ್ತಿಗಳನ್ನು ಮಾಡಿದ.

ಮಧುಕೈಟಭಾದಿ ಅಸುರರು ಶೇಷಶಾಯಿಯಾದ ನಾರಾಯಣನೊಡನೆ ಸಮರವನ್ನು ಹೂಡಿದಾಗ ಈ ನಾಲ್ಕು ವೃತ್ತಿಗಳು ಹುಟ್ಟಿದವು ಎಂದು ಭರತ ಹೇಳುತ್ತಾನೆ.[5]

ಮಾತು ಪ್ರಧಾನವಾಗಿದ್ದು ಪುರುಷರಿಂದಲೇ ಪ್ರಯೋಗವಾಗುವಂತಹ ವೃತ್ತಿ ಭಾರತೀ ಇದರಲ್ಲಿ ನಾಲ್ಕು ವಿಧ.

() ಪುರೋಚನ ಪೂರ್ವರಂಗದಲ್ಲಿ ಜಯವನ್ನೂ ಮಂಗಲವನ್ನೂ ಪ್ರಾರ್ಥಿಸುವುದು; () ಆಮುಖ ನಟಿ, ವಿದೂಷಕ, ಪಾರಿಪಾರ್ಶ್ವಕ ಇವರಲ್ಲಿ ಯಾರಾದರೊಬ್ಬರೊಡನೆ ಚಿತ್ರ ವಿಚಿತ್ರವಾಗಿ ಕಾರ್ಯಕ್ಕೆ ಸಂಬಂಧಿಸಿದಂತೆ ಸೂತ್ರಧಾರನೊಡನೆ ಮಾತನಾಡುವುದು. () ವೀಥೀ ಒಂದೇ ಅಂಕವಿದ್ದು, ಉತ್ತಮ, ಮಧ್ಯಮ ಅಥವಾ ಅಧಮ ಯಾವುದೇ ವರ್ಗದ ಒಂದು ಅಥವಾ ಎರಡು ಪಾತ್ರವಿದ್ದು, ಎಲ್ಲ ರಸಗಳಿಗೂ ಅವಕಾಶವಿರುವ ವಿಧಾನ. () ಪ್ರಹಸನ ಶುದ್ಧ ಮತ್ತು ಸಂಕೀರ್ಣ ಎಂಬ ಎರಡು ಪ್ರಕಾರ; ಬೌದ್ಧಭಿಕ್ಷು, ತಾಪಸರು, ಜೈನಯತಿಗಳು, ನಪುಂಸಕ, ಚೇಟಿ, ಗಣಿಕೆ ಇವರುಗಳಿಂದ ಕೂಡಿದ್ದು, ಪರಿಹಾಸದ ಸಂಭಾಷಣೆಯಿಂದ ಕೂಡಿರುತ್ತದೆ.

ಸತ್ವಗುಣವನ್ನು ಪ್ರಕಟಿಸುವ ಅತ್ಯಂತ ಹರ್ಷ ಸೂಚಕವಾದ ವೃತ್ತಿ ಸಾತ್ಪತೀ. ಇದರಲ್ಲಿ ವಾಚಿಕ, ಆಂಗಿಕ ಅಭಿನಯಗಳು ಹೆಚ್ಚಾಗಿರುತ್ತವೆ. ವೀರ, ಅದ್ಭುತ ರೌದ್ರರಸಗಳು, ಕರುಣ ಶೃಂಗಾರ ರಸಗಳೂ ಕಡಿಮೆ ಪ್ರಮಾಣದಲ್ಲಿರುವುದು. ಇದರಲ್ಲಿ ನಾಲ್ಕು ವಿಧ.

() ಉತ್ಥಾಪಕ ಒಬ್ಬರಿಗೊಬ್ಬರಿಗೆ ಆಹ್ವಾನವನ್ನು ಕೊಡುವುದು ; () ಪರಿವರ್ತಕ ಒಂದು ಕೆಲಸಕ್ಕೆ ಸಿದ್ಧವಾಗಿ ಮತ್ತೊಂದಕ್ಕೆ ತೆಗೆದುಕೊಳ್ಳುವುದು; () ಸಂಲಾಪಕ ಆಹ್ವಾನದಿಂದ ಇಲ್ಲವ ಬೇರೆ ಬೇರೆ ಮಾತುಗಳಿಂದ ತಿರಸ್ಕರಿಸುವುದು. () ಸಂಘಾತಕ ಯುಕ್ತಿಯಿಂದಾಗಲೀ, ದೈವವಶಾತ್ ಆಗಲಿ ತಪಸ್ಸಿನಿಂದಲೇ ಆಗಲೀ ಶತ್ರುವನ್ನು ಎದುರಿಸುವುದು ತಪ್ಪುವುದು.

ಸ್ತ್ರೀಯರಿಂದಲೇ ವಿಶೇಷವಾಗಿ ಪ್ರಯೋಜಿಸುವಂತಹದೂ, ಹೆಚ್ಚಾಗಿ ನೃತ್ತ ಗೀತಗಳಿಂದಲೇ ಕೂಡಿರುವುದೂ ಆದುದು. ಕೈಶಿಕೀ ಈ ವೃತ್ತಿಯು ಕಾಮೋಪಭೋಗಕ್ಕೆ ಸಂಬಂಧಿಸಿದ ನಡತೆಗಳನ್ನು ಹೊಂದಿರುತ್ತದೆ. ಇದರಲ್ಲೂ ನಾಲ್ಕು ವಿಧ.

() ನರ್ಮ ನವಿರಾದ ಹಾಸ್ಯ ಹಾಗೂ ಶೃಂಗಾರಕ್ಕೆ ಸಂಬಂಧಿತವಾದ ಅಂಗಚೇಷ್ಟೆ ; () ನರ್ಮಸ್ಪುರ್ಜ ಮೊದಲ ಸಮಾಗಮದಲ್ಲೇ  ಒಂದೆಡೆ ವೇಷ ಹಾಗೂ ಮಾತುಗಳಿಂದ ಪರಸ್ಪರ ರತಿ ಹೆಚ್ಚುವಿಕೆ ; () ನರ್ಮಸ್ಪೋಟ ಬೇರೆ ಬೇರೆ ಭಾವಗಳು ತಕ್ಕ ಮಟ್ಟಿಗೆ ಪೋಷಕವಾಗಿ ಶೃಂಗಾರ ರಸವು ಪೂರ್ತಿಯಾಗದಿರುವುದು ; () ನರ್ಮಗರ್ಭ ಜ್ಞಾನ, ರೂಪ, ಸಡಗರ, ಧನ ಮೊದಲಾದವುಗಳಿದ್ದಾಗಲೂ ಕಾರ್ಯವಶಾತ್ ಪ್ರಚ್ಛನ್ನವಾಗಿ ವ್ಯವಹರಿಸದಿರುವುದು.

ಹೆಚ್ಚಾಗಿ ಆರಭಟ ಗುಣಗಳಿದ್ದು, ಡಂಭ ಮತ್ತು ಅಸಭ್ಯ ಮಾತುಗಳ ಇರುವ ವೃತ್ತಿ – ಆರಭಟಿ. ಬೀಳುವುದು, ಜಿಗಿಯುವುದು, ಮಾಯೆ, ಜಾದುಗಾರಿಕೆ ಆರಭಟಿಯ ಗುಣಗಳು.

ಆರಭಟಿಯ ಇದರಲ್ಲಿ ನಾಲ್ಕು ಭೇದ

() ಸಂಕ್ಷಿಪ್ತಕ ಚಿತ್ರ ವಿಚಿತ್ರ ವೇಷಗಳು, ಲೋಹ, ಮಣ್ಣು ಮರದಿಂದ ಮಾಡಿದ ವಸ್ತುಗಳು ಇದ್ದು ವಿಷಯವು ಸಂಕ್ಷಿಪ್ತವಾಗಿರುವುದು ; () ಅವಪಾತ ಭಯ, ಹರ್ಷಗಳಿದ್ದು ಅವಸರದ ಓಡಾಟ, ಮಾತುಗಳಿಂದ ತ್ವರಿತ ಪ್ರವೇಶ, ನಿರ್ಗಮನಗಳಿರುವುದು ; () ವಸ್ತೂತ್ಥಾಪನ ಎಲ್ಲ ರಸಗಳೂ ಸೇರಿ ಗಡಿಬಡಿಯಿಂದ ಕಾರ್ಯವನ್ನು ತೋರುವುದು ; () ಸಂಘೇಟ ಸಂರಂಭ, ಯುದ್ಧ, ಹೊಡೆದಾಟಗಳಿರುವುದು.

ಮೇಲೆ ವಿವರಿಸಿದ ವೃತ್ತಿಗಳು ನಾಟಕಕ್ಕೆ ಸಂಬಂಧಿಸಿದ ವೃತ್ತಿಗಳು.

ಅಜಿತನಾಥನ ಜನನದ ಸಂದರ್ಭದಲ್ಲಿ ಆನಂದದಿಂದ ನರ್ತಿಸುತ್ತಿರುವ ಇಂದ್ರನ ನೃತ್ಯದಲ್ಲಿ ಮೇಲಿನ ನಾಲ್ಕು ವೃತ್ತಿಗಳೂ ಪ್ರಯೋಗವಾಗುವುದು ಸಮಂಜಸವೆನಿಸುವುದಿಲ್ಲ. ಮೇಲೆ ವಿವರಿಸಿದ ವೃತ್ತಿಗಳಲ್ಲಿ ಭಾರತೀ ವೃತ್ತಿಯ ಕೆಲ ಅಂಶಗಳು ಮಾತ್ರ ಇಂದ್ರನ ಆನಂದ ನೃತ್ಯಕ್ಕೆ ಪ್ರಸ್ತುತವಾಗುತ್ತದೆ. ಆದ್ದರಿಂದ ರನ್ನ ಇಂದ್ರನ ನೃತ್ಯದಲ್ಲಿ ನಾಲ್ಕು ವೃತ್ತಿಗಳು ಪ್ರಯೋಗವಾಗಿದ್ದವು ಎನ್ನುವ ಮಾತು ಕೇವಲ ಕವಿಯ ಅತಿಶಯ ಕಲ್ಪನೆ ಎಂದು ತೋರುವುದು. ತನ್ನ ಶಾಸ್ತ್ರಪರಿಜ್ಞಾನದ ಪ್ರಕಾಶನಕ್ಕೆ ಸನ್ನಿವೇಶಗಳನ್ನು ಅವನು ಬಳಸಿರಬಹುದು.

ಇಂದ್ರನ ನೃತ್ಯದಲ್ಲಿ ನಾಲ್ಕು ಪ್ರವೃತ್ತಿಗಳನ್ನು ರನ್ನ ಆರೋಪಿಸುತ್ತಾನೆ. ಪ್ರವೃತ್ತಿಯು[6] ಪ್ರಾಂತೀಯ ಜನರ ವೇಷಭೂಷಣ, ನಡತೆ ಹಾಗೂ ಆಚಾರಗಳನ್ನು ಪ್ರತಿನಿಧಿಸುವಂತಹುದು. ವೃತ್ತಿಯ ಅಭಿರುಚಿಯ ಆಧಾರದ ಮೇಲೆ ಪ್ರವೃತ್ತಿಗಳನ್ನು ವಿಭಾಗಿಸಲಾಗಿದೆ.

. ದಾಕ್ಷಿಣಾತೈ[7]ಕೈಶಿಕೀ ವೃತ್ತಿಯನ್ನು ಒಳಗೊಂಡು ಕೋಸಲ, ದ್ರವಿಡ, ಆಂಧ್ರ, ವಿಂಧ್ಯ, ಕಲಿಂಗ ಪ್ರಾಂತ್ಯಗಳ ಆಚಾರ, ವೇಷಭೂಷಣಗಳನ್ನು ಹೊಂದಿರುತ್ತದೆ.

. ಆವಂತಿ[8] ಸಾತ್ಪತೀ ಹಾಗೂ ಕೈಶಿಕೀ ವೃತ್ತಿಯನ್ನು ಒಳಗೊಂಡು, ಸೌರಾಷ್ಟ್ರ ಆವಂತಿಕ, ತ್ರಿಪುರಾ ಹಾಗೂ ಮಾಲವ ಪ್ರಾಂತ್ಯಗಳ ನಡತೆ, ಆಚಾರಗಳನ್ನು ಹೊಂದಿಕೊಂಡಿರುತ್ತದೆ.

. ಔಡ್ರ ಮಾಗಧಿ[9] ಭಾರತೀ ಹಾಗೂ ಕೈಶಿಕೀ ವೃತ್ತಿಯನ್ನು ಒಳಗೊಂಡು, ಅಂಗ, ವಂಗ, ನೇಪಾಲಕ ಪ್ರಾಂತ್ಯಗಳ ಆಚಾರ, ನಡತೆಗಳನ್ನು ಹೊಂದಿಕೊಂಡಿರುತ್ತದೆ.

. ಪಾಂಚಾಲೀ ಶೌರಸೇನ[10] ಸಾತ್ಪತೀ ಹಾಗೂ ಆರಭಟೀ ವೃತ್ತಿಯನ್ನು ಒಳಗೊಂಡಿದ್ದು ಹಸ್ತಿನಾವತಿ ಹಾಗೂ ಗಂಗಾನದಿಯ ನಡುವೆ ಹಿಮಾಲಯದ ಅಡಿಯಲ್ಲಿನ ಆಚಾರ, ನಡತೆ ಹಾಗೂ ವೇಷಭೂಷಣಗಳನ್ನು ಹೊಂದಿಕೊಂಡಿರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ವೃತ್ತಿಗಳ ಬಳಕೆಯು ಹೇಗೆ ಅಸಮಂಜಸವೆನಿಸುವುದೋ ಹಾಗೆಯೇ ಪ್ರವೃತ್ತಿಗಳ ವಿಷಯದಲ್ಲಿ ಸಹ ಅನಗತ್ಯವೆನಿಸುವುದು. ಇಂದ್ರನ ನಾಟ್ಯ ಮೇಲೆ ಹೇಳಿದ ಲಕ್ಷಣದಂತೆ ಔಡ್ರ ಮಾಗಧಿ ಪ್ರವೃತ್ತಿಯನ್ನು ಅವಲಂಬಿಸಿದೆ ಎಂದು ಹೇಳಬಹುದು.

ರಸ, ಭಾವ, ಅಭಿನಯ, ವೃತ್ತಿ, ಇತ್ಯಾದಿ ನಾಟ್ಯಾಂಗಗಳ ತರುವಾಯ ಇಂದ್ರನ ನೃತ್ಯದ ದೈವೀಸಿದ್ಧಿ, ಮಾನುಷ ಸಿದ್ಧಿಗಳನ್ನು ಕವಿ ಹೇಳುತ್ತಾನೆ. ಸಿದ್ಧಿಯೆಂದರೆ ಯಶಸ್ಸು. ಇಂದ್ರನ ಆನಂದ ನೃತ್ಯ ಪ್ರಯೋಗದಿಂದ ಸಿದ್ಧಿಯು ಲಭಿಸಿತು ಎನ್ನುವ ಉದ್ದೇಶ ಕವಿಗಿರಬಹುದು. ಸಿದ್ಧಿಯು ಎರಡು ವಿಧ ಸಶಬ್ದ ಹಾಗೂ ನಿಶ್ಯಬ್ದವಾಗಿ ಮೆಚ್ಚುಗೆಯನ್ನು ಸೂಚಿಸುವಂತಹದು. ಸಶಬ್ದವು ಮಾನುಷೀ ಸಿದ್ಧಿಯಾದರೆ ನಿಶ್ಯಬ್ಧವು ದೈವೀ ಸಿದ್ಧಿ ಎನಿಸುವುದು.

ರಂಗದ ಮೇಲೆ ನರ್ತಿಸುತ್ತಿದ್ದ ಇಂದ್ರನ ನೃತ್ಯದಿಂದ ಪ್ರೇಕ್ಷಕರು ರೋಮಾಂಚನಗೊಂಡು ಹರ್ಷೋದ್ಗಾರವನ್ನು ಮಾಡಿ, ಕರತಾಡನವನ್ನು ಮಾಡುತ್ತ ಓಹೋ ! ಆಹಾ ! ಎಂಬ ಉದ್ಗಾರವನ್ನು ಹೊರಡಿಸುತ್ತಿದ್ದರೆ ಅದು ಮಾನುಷೀ ಸಿದ್ಧಿಯ ಲಕ್ಷಣ, ನೃತ್ಯವನ್ನು ವೀಕ್ಷಸಿ ಪ್ರೇಕ್ಷಕರು ಭಾವಯುತ ಸತ್ವದಿಂದ ಕೂಡಿರುವುದು ದೈವೀಸಿದ್ಧಿಯ ಲಕ್ಷಣ.[11]

ಇಂದ್ರನ ಅಪೂರ್ವವಾದ ನೃತ್ಯ ಈ ಎರಡೂ ಸಿದ್ಧಿಗಳನ್ನು ಉಂಟು ಮಾಡಿತ್ತು ಎಂದರೆ ಅದು ಒಪ್ಪುವ ಮಾತಾಗಿದೆ.

ರನ್ನ ಇಲ್ಲಿಂದ ಮುಂದೆ ಇಂದ್ರನ ನೃತ್ಯಕ್ಕೆ ಹಿನ್ನೆಲೆಯಾಗಿ ಬಳಸಿದ ಸಂಗೀತದ ಬಗ್ಗೆ ಹೇಳುತ್ತಾನೆ.

ಸಪ್ತಸ್ವರಗಳಾದ[12] ಸರಿಗಮ ಪಧನಿಗಳು ಆರೋಹ ಹಾಗೂ ಅವರೋಹ ಕ್ರಮದಲ್ಲಿ ಸಂಚರಿಸಿದರೆ ಅದು ರಾಗವಾಗುತ್ತದೆ. ಇವುಗಳನ್ನು ಸಂಪೂರ್ಣ ರಾಗಗಳೆಂದು ಕರೆಯುತ್ತಾರೆ. ಉದಾ : ಕಲ್ಯಾಣಿ, ಶಂಕರಾಭರಣ, ಖರಹರಪ್ರಿಯ, ಇತ್ಯಾದಿ : ಇಂದ್ರನ ನೃತ್ಯಕ್ಕೆ ಸಂಗೀತವನ್ನು ಒದಗಿಸಿದ ರಾಗಗಳು ಸಂಪೂರ್ಣ ರಾಗಗಳಾಗಿದ್ದವು ಎಂದು ಕವಿಯ ಅಭಿಪ್ರಾಯವಿರಬಹುದು. ರಂಗ ಸಂಗ್ರಹವನ್ನು ತಾನು ಹೇಳಿದುದಾಗಿ ಕವಿ ಹೇಳುತ್ತಾನೆ. ರಸ, ಭಾವ, ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸ್ವರ, ಆತೋದ್ಯ, ಗಾನ ರಂಗ[13] ಇವು ಭರತನು ಹೇಳುವ ಹನ್ನೊಂದು ರಂಗಸಂಗ್ರಹ. ಆದರೆ ಮುಂದಿನ ಮೂರು ಕ್ರಿಯೆಗಳಾದ ಆತೋದ್ಯ, ಗಾನ ಹಾಗೂ ರಂಗವನ್ನು ರನ್ನ ಇಲ್ಲಿ ಹೇಳದೇ ದಶರೂಪಕಗಳತ್ತ ಹೊರಳುತ್ತಾನೆ. ಇಂದ್ರನು ನಾಟಕ, ಪ್ರಕರಣ ಇತ್ಯಾದಿಯಾದ ಹತ್ತು ವಿಧ ರೂಪಕಗಳನ್ನು ಪಾತ್ರ ಸಂಕ್ರಮಣದಲ್ಲಿ ಎಲ್ಲವನ್ನು ನಿರ್ವಹಿಸಿ ಭರತಸಾರ ಸರ್ವಸ್ವವನ್ನೇ ಜಿನೇಂದ್ರನಿಗೆ ಪ್ರತ್ಯಕ್ಷವಾಗಿ ಮಾಡಿ ತೋರಿಸಿದ ಎಂದು ಕವಿ ಹೀಗೆ ಹೇಳುತ್ತಾನೆ :

ನಾಟಕಮುಂ ಪ್ರಕರಣಮುಂ ಚಾರಣಮುಂ ಬಾಣಮುಂ ಸಮವಕಾರಮುಂ ಡಿಮಮುಂ ಈಹಾ ಮೃಗಮುಂ ವ್ಯಾಯೋಗಮುಂ ಪ್ರಸಹನ ಮುಂವೀಥಿಯು ಮೆಂಬ ದಶರೂಪಕ ಲಕ್ಷಣ ಮುಮಂ ಪಾತ್ರ ಸಂಕ್ರಮಣದೊಳ್ ನೆಱೆಯ ತೋಱೆ ಭರತದ ಸಾರಸರ್ವಸ್ವ ಮುಮಂ ನಾಟ್ಯಧರ್ಮದೊಳ್ ಸೌಧರ್ಮಕಲ್ಪೇಶ್ವರಂ ಪ್ರತ್ಯಕ್ಷಂ ಮಾಡಿದಾಗಳ್ (೩೦ವ.)

ರಂಗದ ಮೇಲೆ ಉಚಿತವಾದ ವೇಷ ಭೂಷಣಗಳೊಡನೆ ಅಭಿನಯಿಸುವವನು ಅಥವಾ ಅಭಿನಯಿಸುವವಳು ಪಾತ್ರ ಎಂದು ಹೇಳಬಹುದು. ಪ್ರಸ್ತುತ ಸಂದರ್ಭದಲ್ಲಿ ಇಂದ್ರನೇ ಪಾತ್ರ. ನಾಟ್ಯ ಮುಂದುವರಿಯುತ್ತಿದ್ದಂತೆ, ಇಂದ್ರನೇ ಹತ್ತು ವಿಧದ ರೂಪಕಗಳನ್ನು ಅಭಿನಯಿಸುತ್ತಿದ್ದ ಎಂದು ಕವಿಯ ಅಭಿಪ್ರಾಯ.

ಮೇಲಿನ ದೀರ್ಘವಾದ ವಚನವನ್ನು ವಿಶ್ಲೇಷಿಸಿದಾಗ ರನ್ನ ಶಾಸ್ತ್ರ ಸಂಮಿತೆಗಾಗಿ ಉತ್ಸುಕತೆಯನ್ನು ತೋರಿದ್ದಾನೆ ಎನಿಸುವುದು. ಒಂದು ನೃತ್ಯ ಕಾರ್ಯಕ್ರಮದ ಆರಂಭ ಹಾಗೂ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ರನ್ನನ ವಿವರಣೆ ತೃಪ್ತಿಕರವಾಗಿ ನಿಲ್ಲುವುದಿಲ್ಲ. ಏಕೆಂದರೆ ಇಲ್ಲಿ ಬರುವ ನೃತ್ಯದ ತಂತ್ರ, ಅದನ್ನು ಆಚರಿಸುವ ವಿಧಾನಗಳು, ನೃತ್ಯ ಕಾರ್ಯಕ್ರಮದ ಸ್ವರೂಪವನ್ನು ರೂಪಿಸುವಂತೆ ಕಾಣುವುದಿಲ್ಲ. ಸಾಮಾನ್ಯವಾಗಿ ನೃತ್ತ ಬಂಧಗಳನ್ನು ಮೊದಲು ನರ್ತಿಸಿ, ಸಾತ್ವಿಕಾದಿ ಅಭಿನಯ ಶೃಂಗಾರ ಪ್ರಧಾನವಾದ ಲಾಸ್ಯ ಬಂಧಗಳನ್ನು ಮಾಡುವುದು ವಾಡಿಕೆ. ಇಂದ್ರನ ನೃತ್ಯ ಪುಷ್ಪಾಂಜಲಿಯೊಂದಿಗೇ ಆರಂಭವಾದರೂ ಮುಂದಿನ ಬೆಳವಣಿಗೆ ಸಕ್ರಮವಾಗಿ ನಡೆದಂತೆ ತೋರುವುದಿಲ್ಲ.

ನಾಟ್ಯಾಂಶಗಳಾದ ಶೃಂಗಾರಾದಿ ಒಂಬತ್ತು ರಸಗಳನ್ನು ಚತುರ್ವಿಧ ಅಭಿನಯಗಳನ್ನು, ಎರಡು ಧರ್ಮಿಗಳನ್ನು, ನಾಲ್ಕು ವೃತ್ತಿ ಹಾಗೂ ಪ್ರವೃತ್ತಿಗಳನ್ನೂ ದಶವಿಧ ರೂಪಕಗಳನ್ನೂ ಒಬ್ಬನೇ ಒಂದೇ ವೇದಿಕೆಯಲ್ಲಿ, ಒಂದೇ ಉದ್ದೇಶವನ್ನಿಟ್ಟುಕೊಂಡು ಆಚರಿಸುವುದು ಸಮಂಜಸವೆನಿಸುವುದಿಲ್ಲ. ಒಂದು ನಿರ್ದಿಷ್ಟ ರಸವನ್ನು ಆರಂಭದಿಂದ ಪೋಷಿಸಿ, ಬೆಳೆಸಿಕೊಂಡು, ಅದರ ಆಸ್ವಾದನೆಯ ಆನಂದವನ್ನು ನೀಡುವುದು ಯಾವುದೇ ನಾಟ್ಯ ಅಥವಾ ನೃತ್ಯದ ಉದ್ದೇಶ. ದೇವ ಸಿದ್ಧಿ ಹಾಗೂ ಮಾನುಷ ಸಿದ್ಧಿಯನ್ನು ಇಂದ್ರನೇ ನಿರ್ವರ್ತಿಸುವುದು ಸಾಧ್ಯವೆನಿಸುವುದಿಲ್ಲ. ಸಿದ್ಧಿಗಳು ಉಂಟಾಗುವುದು ಭರತನ ಮತದಂತೆ ಪ್ರೇಕ್ಷಕರಿಗೆ.

ಪಂಪ, ಪೊನ್ನರ ನೃತ್ಯ ಪ್ರಸಂಗಗಳು ಈ ರೀತಿಯಾದ ಅನಿಸಿಕೆಯನ್ನು ಉಂಟು ಮಾಡುವುದಿಲ್ಲ (ಹಿಂದೆ ಚರ್ಚಿಸಿದೆ) ಇಂದ್ರನ ನೃತ್ಯದ ಭವ್ಯತೆಯನ್ನು ಸಹೃದಯರಿಗೆ ಅರಿವು ಮಾಡಿಕೊಡುವುದು ಕವಿ ರನ್ನನ ಉದ್ದೇಶವಾಗಿರಬಹುದು. ಈ ದಿಸೆಯಲ್ಲಿ ಕವಿ ತನ್ನ ವರ್ಣನೆಯ ಮೂಲಕ ಕೃತ ಕೃತ್ಯನಾಗಿದ್ದಾನೆ. ಆದರೆ ಇಲ್ಲಿಯ ಇಂದ್ರನ ನೃತ್ಯ ಪ್ರಸಂಗ ಪ್ರಾಯೋಗಿಕ ಸಾಧ್ಯತೆಗಳಲ್ಲಿ ಸೋಲುತ್ತದೆ.

ಒಟ್ಟಿನಲ್ಲಿ ಈ ಪ್ರಸಂಗದ ಬಗ್ಗೆ ಹೀಗೆ ತರ್ಕಿಸಬಹುದು. ಭರತನ ನಾಟ್ಯಶಾಸ್ತ್ರದ ಆರನೇ ಅದ್ಯಾಯದಲ್ಲಿ ಭರತ ತನ್ನ ಶಿಷ್ಯಂದಿರಿಗೆ ಅಭಿನಯಾದಿಗಳ ವಿಷಯವನ್ನು ಸಂಗ್ರಹ ರೂಪವಾಗಿ ಹೇಳುವ ಉಲ್ಲೇಖ (ಇದೇ ಅಧ್ಯಾಯದಲ್ಲಿ ಚರ್ಚಿಸಿದೆ). ಇದರ ಪ್ರತಿರೂಪವನ್ನು ರನ್ನ ಕಾವ್ಯದಲ್ಲಿ ಅಳವಡಿಸಿದ್ದಾನೆ.

ದೇಸಿಕಾರ್ತಿಯರ ನರ್ತನವನ್ನು ಮುಂದಿನ ಪದ್ಯದಲ್ಲಿ ಕವಿ ಹೀಗೆ ಹೇಳುತ್ತಾನೆ :

ಸ್ವರತತಿ ವಾದ್ಯದೊಳ್ ನೆಗೞೆ ಸನ್ನಿನಿವಂತತಿಘೇರಿಘೇರಿಮಾ
ಯ್ಗರಿಗಮಮಂ ಮಧೂರುಗ್ರಮಕ್ರೆಂಕಟ ಕ್ರೆಂಪಮ ಪತ್ರತ್ರರುಃ
ಸರಿಪಮ ತಂಬಿತಂತತಿ ವಿಕುದ್ರಕಕುದ್ರಕಮಂಬ ಭೇದದೊಳ್
ಪರಿಣತಿ ರಂಜಿಸುತ್ತಮಿರೆ ನರ್ತಿಸಿದರ್ ಪೊಸದೇಸೆ ಕಾರ್ತಿಯರ್ |          (೩೧)

ದೇಸಿ ಎಂಬ ಪದಕ್ಕೆ ದೇಸಿ ಶೈಲಿಯ ನೃತ್ಯ ಹಾಗೂ ಚೆಲುವು, ಸೊಗಸು ಎಂಬ ಅರ್ಥಗಳು ಇವೆ. ದೇಸಿಯನ್ನು ಆಡುವವರು ದೇಸಿ ಕಾರ್ತಿಯರಾಗುತ್ತಾರೆ. ನರ್ತನದಲ್ಲಿ ಪರಿಣಿತರಾದ ಸ್ತ್ರೀಯರು ತತ[14] ವಾದ್ಯಗಳಲ್ಲಿ ಸ್ವರಗಳ ಗುಚ್ಛಗಳು ಮಧುರವಾಗಿ ಧ್ವನಿಗೈಯುತ್ತಿರಲು, ಅದಕ್ಕೆ ತಕ್ಕ ಹಾಗೆ ದೇಸಿಯನ್ನು ಆಡಿದರು ಎಂದು ಒಂದು ರೀತಿ ಅರ್ಥೈಸಬಹುದು. ಚಲುವಿನಿಂದ ಕೂಡಿದ ನೃತ್ಯ ಪರಿಣಿತರಾದ ಸ್ತ್ರೀ ಸಮೂಹವೂ ಮಧುರವಾದ ತತವಾದ್ಯಗಳ ಸ್ವರಗುಚ್ಛಗಳಿಗೆ ಅನುಗುಣವಾಗಿ ಸೊಬಗಿನಿಂದ ನರ್ತಿಸಿದರು ಎಂದೂ ಹೇಳಬಹುದು. ಸ್ವರಕ್ಕೆ ಸರಿಯಾಗಿ ನರ್ತಿಸುವ ನೃತ್ತವನ್ನು ಸ್ವರಮಂಠನ[15] ನೃತ್ತವೆಂದು ಶಾಸ್ತ್ರಗಳು ಹೇಳಿವೆ.

ಚತುರ ದಾಮೋದರನು ಷಡ್ಜಾದಿಸ್ವರಗಳ ಅಭಿನಯವನ್ನು ತಲಪುಷ್ಪಪುಟ ಕರಣದಿಂದ ಉಚಿತವಾದ ತತ್ತಕಾರಗಳಿಂದ ನಿಸ್ಸಾರು ತಾಳದಿಂದ, ತೇನಕ ಹಾಗೂ ಧ್ರುವಗಳಿಂದ, ಯತಿ ಗೀತಗಳಿಂದ, ಶಬ್ದ ಖಂಡಗಳಿಂದ, ಹಾವಭಾವಗಳಿಂದ, ಲಾಸ್ಯ ಲೀಲೆಯಿಂದ ಮಾಡುವ ನೃತ್ಯವನ್ನು ಸ್ವರಮಂಠನ ನೃತ್ಯವೆಂದಿದ್ದಾನೆ. ಇದೇ ಅಭಿಪ್ರಾಯವನ್ನು ಪುಂಡರೀಕ ವಿಠಲನೂ ಹೇಳಿದ್ದಾನೆ.[16]

ಈ ಸ್ವರ ಮಂಠನ ನೃತ್ಯ ಸುಮಾರು ಅರುವತ್ತು ವರ್ಷಗಳಿಂದ ರೂಢಿಯಾಗಿರುವ ಭರತನಾಟ್ಯ ಕಾರ್ಯಕ್ರಮದಲ್ಲಿ ಎರಡನೆಯ ನೃತ್ಯ ಬಂಧವಾದ ಜತಿಸ್ವರವನ್ನು, ಹಾಗೆಯೇ ಒಡಿಸ್ಸಿ, ನೃತ್ಯ ಶೈಲಿಯ ಪಲ್ಲವಿ ನೃತ್ತಬಂಧವನ್ನು ಅತ್ಯಂತ ಸಮೀಪವಾಗಿ ಹೋಲುತ್ತದೆ. ಲಯ ಪ್ರಧಾನವಾದ ಜತಿಸ್ವರವು ಒಂದು ಶುದ್ಧ ನೃತ್ತಬಂಧ. ಇದರಲ್ಲಿ ಜತಿಯು ಮಧ್ಯಮ ಕಾಲದಲ್ಲಿದ್ದು ಪಾದ ಮತ್ತು ಹಸ್ತಗಳ ವಿನ್ಯಾಸಗಳು ಸ್ವರಗಳ ನುಡಿಕಾರಕ್ಕೆ ಸಮನಾಗಿ ಇರುತ್ತವೆ. ಕ್ಲಿಷ್ಟಕರವಾದ ಕರಣ ಹಾಗೂ ಅಂಗಹಾರಗಳಿಂದ ಕೂಡಿದ ಜತಿಸ್ವರವು ನರ್ತಿಸಲು, ವೀಕ್ಷಿಸಲು ಆನಂದವನ್ನು ಕೊಡುತ್ತದೆ. ಜತಿಸ್ವರದಲ್ಲಿ ಕಣ್ಣು, ಹುಬ್ಬು ಹಾಗೂ ನೃತ್ತ ಹಸ್ತಗಳಿಗೆ ಪ್ರಾಮುಖ್ಯವಿದೆ.

ರನ್ನನು ದೇಸಿಕಾರ್ತಿಯ ತತ ವಾದ್ಯದ ಸ್ವರಗಳಿಗೆ ನರ್ತಿಸುತ್ತಾರೆಂದು ಹೇಳುತ್ತಾನೆ (೫-೩೧). ಅವರ ನೃತ್ಯವನ್ನು ಇಂದಿನ ಜತಿಸ್ವರಕ್ಕೆ ಹೋಲಿಸಬಹುದು. ಹುಬ್ಬುಗಳ ಚಲನೆಯನ್ನು[17] ಇಂದ್ರನು ಮಾಡಿದನೆಂದೂ ಕವಿ ಹೇಳುತ್ತಾನೆ. ಇದರ ನಂತರ ರನ್ನನು ಮೂಱುಂಗುಣಾನಿಯೊಳಂ ಎಂದು ಹೇಳುತ್ತಾನೆ.

ಗುಣಾನಿಯೆಂದರೆ ನಾಟ್ಯಶಾಲೆ ಎಂಬ ಅರ್ಥವಿದೆ.[18] ಗುಣಾನಿಕಾ ಎಂದರೆ ನೃತ್ತ ಅಥವಾ ನೃತ್ಯ ಎಂಬ ಅರ್ಥವೂಇದೆ.[19] ನಾಟ್ಯಾಶಾಲೆಯೆಂಬ ಅರ್ಥವನ್ನು ಆಂಗಿಕಾಭಿನಯವನ್ನು ವಿವರಿಸುವ ಸಂದರ್ಭದಲ್ಲಿ ತೆಗೆದುಕೊಳ್ಳಲು ಸಾಧುವಲ್ಲ. ಆದರೆ ನೃತ್ತ ಅಥವಾ ನೃತ್ಯ ಎಂಬ ಅರ್ಥವು ರನ್ನನು ವಿವರಿಸುವ ಸಂದರ್ಭಕ್ಕೆ ಸಂಭಾವ್ಯವಾಗುತ್ತದೆ. ನೃತ್ತ, ನೃತ್ಯ ಹಾಗೂ ನಾಟ್ಯ ಎಂದೂ ಅರ್ಥೈಸಬಹುದು.[1] ನಾಟ್ಯಶಾ – ೪/೨೪೭-೫೩ (ಸಂ.ಮಾ.ರಾಮಕೃಷ್ಣ ಕವಿ)

[2] ನಾಟ್ಯಶಾ – ೧೧/೧-೮.

[3] ನಾಟ್ಯಶಾ – ಅಧ್ಯಾಯ ೧೪. ೬೧ ರಿಂದ ೭೭ ಶ್ಲೋಕಗಳು ಸಂ. ರಾಮಕೃಷ್ಣ ಕವಿ.

[4] ಅದೇ.

[5] ನಾಟ್ಯಾಶಾ ಅಧ್ಯಾಯ ೨೦-೧ ರಿಂದ ೨೧ ಶ್ಲೋಕಗಳು ಸಂ. ಪಂ. ಕೇದಾರನಾಥ (ನಿರ್ಣಯಸಾಗರ ಪ್ರ).

[6] ಚತುರ್ವಿಧಾ ಪ್ರವೃತ್ತಿಶ್ಚ ಪ್ರೋಕ್ತಾ ನಾಟ್ಯಪ್ರಯೋಕ್ತೃಭಿಃ
ಆವಂತೀ ದಕ್ಷಿಣಾತ್ಯ ಚ ಪಾಂಚಾಲೀ ಚೋಡ್ರಮಾಗಧೀ ||
ನಾಟ್ಯಶಾ (ಸಂ.ಮಾ. ರಾಮಕೃಷ್ಣ ಕವಿ) ೧೩/೩೫.

[7] ನಾಟ್ಯಶಾ (ಸಂ. ಮಾ. ರಾಮಕೃಷ್ಣ ಕವಿ) ೧೩/೩೬-೫೧.

[8] ನಾಟ್ಯಶಾ (ಸಂ. ಮಾ. ರಾಮಕೃಷ್ಣ ಕವಿ) ೧೩/೩೬-೫೧.

[9] ನಾಟ್ಯಶಾ (ಸಂ. ಮಾ. ರಾಮಕೃಷ್ಣ ಕವಿ) ೧೩/೩೬-೫೧.

[10] ನಾಟ್ಯಶಾ (ಸಂ. ಮಾ. ರಾಮಕೃಷ್ಣ ಕವಿ) ೧೩/೩೬-೫೧.

[11] ನಾಟ್ಯಶಾ (ಅನುವಾದ) (ಶ್ರೀರಂಗ) – ಅ. ೨೭ (೧ ರಿಂದ ೫ನೇ ಶ್ಲೋಕ) ಪು. ೩೩೨.

[12] ನಿರ್ದಿಷ್ಟ ಶ್ರುತಿ ಸಂಖ್ಯೆಗಳನ್ನು ಪಡೆಎದ ಸ್ವರಗಳು ಕ್ರಮವಾಗಿ ಷಡ್ಜ, ರಿಷಭ, ಗಾಂಧಾರ, ಮಧ್ಯಮ, ಪಂಚಮ ಧೈವತ, ನಿಷಾಧ ಇವುಗಳ ಸಪ್ತಸ್ವರಗಳು – ಸಂ. ಶಾ. ಚಂ. ಎಲ್.ರಾಜಾರಾವ್ ಪು.೧೫.

[13] ರಸಭಾವಾಹ್ಯಭೀನಯಾಃ ಧರ್ಮಿವೃತ್ತಿ ಪ್ರವೃತ್ತಯಃ |
ಸಿದ್ಧಿಃ ಸ್ವರಾಸ್ತಥಾತೋದ್ಯಂ ಗಾನಂ ರಂಗಶ್ಚ ಸಂಗ್ರಹಃ |
ನಾಟ್ಯಶಾ (ಸಂ.ಮಾ. ರಾಮಕೃಷ್ಣ ಕವಿ) . ೧೦.

[14] ತಂತೀ ವಾದ್ಯ – ವೀಣೆ, ಇತ್ಯಾದಿ.

[15] ಷಡ್ಜಾದೀ ನಾಮನ್ಯತಮಃ ಸೋಭೀನೇಯೋತ್ರ ಹಸ್ತಕೈಃ
ವ್ಯಸ್ತೈಸ್ಸಮಸ್ತೈಃ ಕರಣೈಃ ತಲಪುಷ್ಪ ಪುಟಾದಿಭಿಃ ||
ತತೋಚಿತೈಃ ಪ್ರತಿದಿಶಂ ತತ್ತಕ್ಕಾರಾನು ಸಾರತಃ |
ನಿಸ್ಸಾರುಕೇನ ತಾಳೇನ ಸ ಪತಾಕಂ ಪ್ರ ನೃತ್ಯಚ |
ತೇನಕೈಶ್ಚಾಲಕೋಪೇತೈಃ ಪ್ರನೃತ್ಯಧ್ರುವಕೇಣ ಚ|
ವಿಲಂಬೇನ ತತೋ ನೃತ್ಯೇತ್ ಶಬ್ದಖಂಡೇನ ತತ್ಪರಮ್ |
ಯತಿಗೀತೇ ನೈ ಕತಾಳ್ಯಾಯತ್ಯಾವನೃತ್ಯತಿ |
ಹಾವಭಾವಾದಿ ಸುಭಗಂ ಲಾಸ್ಯ ಲೀಲಾ ಮನೋಹರಮ್ |
ಸ್ವರ ಮಂಠಕ ನೃತ್ಯಂ ತದುಕ್ತಂ ನೃತ್ಯ ವಿಶಾರದೈಃ || (ಸಂಗೀದ. /೨೧೩೧೭) ನರ್ತನಿ. ೪/೮೦೦-೧೫. ಉತ್ಕ್ಪೇಪಃ ಪಾತನಶ್ಚೈವ ಭ್ರಕುಟೀ ಚತುರಂ ಭ್ರುವೋಃ |
ಕುಂಚಿತಂ ರೇಚಿತಂ ಚೈವ ಸಹಜಂ ಚೇತಿ ಸಪ್ತಧಾ ||
ನಾಟ್ಯಶಾ. (ಸಂ.ರಾಮಕೃಷ್ಣ ಕವಿ) ೧೧೯.

[16] ನರ್ತನಿ. ೪/೮೦೦-೧೫.

[17] ಉತ್ಕ್ಪೇಪಃ ಪಾತನಶ್ಚೈವ ಭ್ರಕುಟೀ ಚತುರಂ ಭ್ರುವೋಃ |
ಕುಂಚಿತಂ ರೇಚಿತಂ ಚೈವ ಸಹಜಂ ಚೇತಿ ಸಪ್ತಧಾ ||
ನಾಟ್ಯಶಾ. (ಸಂ.ರಾಮಕೃಷ್ಣ ಕವಿ) ೧೧೯.

[18] ಕಸಾಪ. ಸಂಕ್ಷಿಪ್ತ ಕನ್ನಡ ನಿಘಂಟು.

[19] ಸಂಸ್ಕೃತ, ಇಂಗ್ಲಿಷ್ ನಿಘಂಟು – ಪು. ೩೫೮ (ಮೋನಿಯರ್ ವಿಲಿಯಂ).