ಕಾಮನ ಬಾಣದಂತೆ ಮೋಹಕ ರೂಪಿನ ನರ್ತಕಿಯ ನೃತ್ಯದ ತಾಂತ್ರಿಕತೆಯತ್ತ ಕವಿ ತಿರುಗುತ್ತಾನೆ. ನರ್ತಕಿ ಚಾರಿಗಳನ್ನು ಲೀಲಾಜಾಲವಾಗಿ ತೋರಿಸಿದ ಬಗ್ಗೆ ಕವಿ ಹೇಳುತ್ತಾನೆ :

ಚಿತ್ತಮನವಯವದಿಂ ಮೂ
ವತ್ತೆರಡುಂ ತೆಱದ ಚಾರಿ ಚಾರಿಸೆ ತಮ್ಮೊಳ್
ಪತ್ತಿಸಿದವು ದೃಷ್ಟಿಗಳಂ
ಪತ್ತುಂತೆಱನೆನಿಪ ಬಾಹುವಿಕ್ಷೇಪಂಗಳ್         (೩೪)

ಹದಿನಾರು ಆಕಾಶಕಿ, ಹಾಗೂ ಹದಿನಾರು ಭೌಮಿಚಾರಿಗಳನ್ನು ತನ್ನ ಅಂಗಾಂಗಗಳಿಂದ ನರ್ತಕಿ ಪ್ರಕಟಿಸಿದಳು. ಪಾದ, ಜಂಘೆ, ತೊಡೆ, ಕಟಿ ಹಾಗೂ ಇವುಗಳ ಚಲನೆಗೆ ತಕ್ಕ ಹಸ್ತಗಳ ಬಳಕೆಯನ್ನು ಮಾಡುತ್ತ ನರ್ತಕಿ ಒಟ್ಟಿನಲ್ಲಿ ಮೂವತ್ತೆರಡು ಚಾರಿಗಳನ್ನು (ನೋಡಿ ಅನುಬಂಧ ಅ. ಪರಿಭಾಷೆ) ತೋರಿಸಿದಳು. ಭಾಷಾ ಚಮತ್ಕಾರಕ್ಕಾಗಿ ಚಾರಿ ಚಾರಿಸೆ ಎಂದು ಕವಿ ಬಳಸುತ್ತಾನೆ. ನರ್ತಕಿಯು ಪ್ರದರ್ಶಿಸುವ ಚಾರಿಯನ್ನು ಇಸು ಪ್ರತ್ಯಯದೊಂದಿಗೆ ಚಾರಿಸೆ ಎಂದು ಬಳಸಸಿದ್ದಾನೆ. ವಿಶೇಷವಾದ ಈ ಚಾರಿಗಳನ್ನು ನರ್ತಕಿ ಪ್ರದರ್ಶಿಸುತ್ತಿದ್ದರೆ ಪ್ರೇಕ್ಷಕರ ದೃಷ್ಟಿ ಅವಳಲ್ಲೇ ನಾಟಿತ್ತು. ಚಾರಿಗಳ ಪ್ರಯೋಗದ ಜೊತೆಗೇ ಹತ್ತು ವಿಧವಾದ ಬಾಹುಗಳ ಚಲನೆಯನ್ನೂ ಹೇಳುತ್ತಾನೆ. ನಾಟ್ಯ ಶಾ.ದಲ್ಲಿ ಬಾಹುಗಳ ಚಲನೆಯ ಪ್ರಸ್ತಪವಿಲ್ಲ. ಮಾನಸದಲ್ಲಿ ೮ ವಿಧ ಬಾಹು ಚಲನೆಗಳನ್ನು ಹೇಳಿದೆ.

[1]

ಹಸ್ತಗಳು ನರ್ತನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಸಾಹಿತ್ಯದಲ್ಲಿ ಅಡಗಿದ ಅರ್ಥವನ್ನು ಹೊರಗೆಡಹಲು ನರ್ತಕಿ ಅಥವಾ ನರ್ತಕನಿಗೆ ಇವು ವಾಹಕಗಳಾಗಿ ಪರಿಣಮಿಸುತ್ತವೆ. ಒಬ್ಬ ಸಮರ್ಥ ನರ್ತಕಿ ಅಥವಾ ನರ್ತಕ ತನ್ನ ಮನದಾಳದ ಭಾವವನ್ನೂ, ಗೀತೆಯಲ್ಲಿ ಪ್ರವಹಿಸುತ್ತಿರುವ ಸಾಹಿತ್ಯದ ಅರ್ಥವನ್ನೂ, ಹೊರಗೆಡಹಲು ಉಚಿತವಾದ ಹಸ್ತಗಳನ್ನು ತನ್ನ ಅಭಿನಯದಲ್ಲಿ ಬಳಸಬೇಕಾಗುತ್ತದೆ. ಇಂತಹ ಬಳಕೆ ಆಕೆಯ ಪ್ರತಿಭೆಗೆ ಸವಾಲಿದ್ದಂತೆ, ಪ್ರತಿಭಾವಂತ ಕಲಾವಿದರು, ನಾಟ್ಯಾಚಾರ್ಯರು ಹಸ್ತಗಳ ಬಳಖೆಯಲ್ಲಿ ತಮ್ಮದೇ ಆದ ಒಂದು ಪರಂಪರೆಯನ್ನು ಬಳಸಿಕೊಂಡಿರುತ್ತಾರೆ.

ನರ್ತಕಿ ಎಳೆಯ ಚಿಗುರಿನಂತೆ ಇರುವ ಕೈಗಳಿಂದ ಸಂಯುತ, ಅಸಂಯುತ ಹಾಗೂ ನೃತ್ತ ಹಸ್ತಗಳನ್ನು (ನೋಡಿ ಅನುಬಂಧ ಅ. ಪರಿಭಾಷೆ) ಮಾಡುತ್ತಿದ್ದರೆ ಆ ಬೆರಳುಗಳು ಗಾಳಿಗೆ ಅಲುಗಾಡುವ ಚಿಗುರಿನಂತೆ ಕಂಡವು ಎಂದು ಕವಿ ನರ್ತಕಿಯ ಹಸ್ತಗಳ ಲಾಲಿತ್ಯವನ್ನು ಹೇಳುತ್ತಾನೆ.

ನಿಱೆದಳಿರೆಲರಲಪಿಂ ಪಲ
ತೆಱದಿಂ ಪೊಳಪಂತೆ ಸಂಯುತಾಸಂಯುತಮೆಂ
ಬಱುವತ್ತು ನಾಲ್ಕು ಹಸ್ತದ
ತೆಱನೊಳ್ ತೆಱನಱೆದು ಮೆಱೆದಳವಳಭಿನಯಮಂ |   (೩೫)

ಆಕೆ ಅರವತ್ತು ನಾಲ್ಕು ಶಾಸ್ತ್ರ ಸಮ್ಮತ ಹಸ್ತಗಳಿಂದ ಅಭಿನಯವನ್ನು ಮಾಡುತ್ತಿದ್ದಳು. ನರ್ತಕಿಯು ರೇಚಕಗಳನ್ನು ಮಾಡುತ್ತಿದ್ದರೆ ನೃತ್ಯ ವಿದ್ಯೆಯೇ ನರ್ತಕಿಯ ವೇಷ ತೊಟ್ಟು ಬಂದಂತೆ ಕಂಗೊಳಿಸುತ್ತಿತ್ತು ಎಂದಿದ್ದಾನೆ ಕವಿ. ಆಕೆಯ ರೇಚಕಗಳ ಪ್ರಯೋಗದಲ್ಲಿ, ಅವುಗಳ ಬಳಖೆಯಲ್ಲಿ ಕಂಡು ಬಂದ ಪ್ರೌಢಿಮೆಯನ್ನು ವ್ಯಾಖ್ಯಾನಿಸುತ್ತಾನೆ. ಚರಣ ನಿತಂಬ ಗ್ರೀವಾ ಕರಶಾಖಾಜನಿತ ರೇಚಕಂ ………….. (೮-೩೬) ಎಂದು ಹೇಳುತ್ತಾನೆ. ಮುಂದಿನ ಪದ್ಯದಲ್ಲಿ ಪಾದ, ಜಂಘೆ ಹಾಗೂ ತೊಡೆಯಿಂದ ಮಾಡುವ ವಿವಿಧ ಚಲನೆಗಳನ್ನು ನರ್ತಕಿ ಮಾಡಿದುದರ ಬಗ್ಗೆ ಹೇಳುತ್ತಾನೆ. ಒಂದೊಂದರಲ್ಲೂ ಐದು ವಿಧವಾದ ಚಲನೆಯನ್ನು ಆಕೆ ಮಾಡುತ್ತಿದ್ದರೆ ಅವು ಕಾಮನ ಹದಿನೈದು ಬಾಣಗಳಂತೆ ಕಂಡವಂತೆ.

ಊರುಭೇದಗಳು ಕಂಪನ, ವಲನ, ಸ್ತಂಭನ, ಉದ್ಪರ್ತನ ಮತ್ತು ನಿವರ್ತನ ಎಂದು ಐದು ವಿಧ.[2] ಜಂಘಾಭೇದವೂ ಆವರ್ತಿತ, ನತ, ಕ್ಷಿಪ್ತ, ಉದ್ಪಾಹಿತ, ಪರಿವೃತ್ತ[3] ಎಂದು ಐದು ವಿಧ. ಪಾದಭೇದಗಳೂ ಐದು ವಿಧ. (ನೋಡಿ ಅಜಿಪು. ನೃತ್ಯ ಪ್ರಸಂಗ) ಮೇಲಿನ ಪದ್ಯದಲ್ಲಿ ನರ್ತಕಿಯ ಶರೀರಾಭಿನಯವನ್ನು ಹೇಳುವ ಉದ್ದೇಶವನ್ನು ಕವಿ ಹೊಂದಿದ್ದರೂ ನಾಟ್ಯಶಾ. ನಲ್ಲಿ ಉಕ್ತವಾದಂತೆ ಎದೆ, ಸೊಂಟ, ಜಠರ, ಪಾರ್ಶ್ವ ಇವುಗಳ ಚಲನೆಯ ಭೇದವನ್ನು ಹೇಳಿಲ್ಲ.

ರಾಜ ನರ್ತಕಿಯು ಕರಣ, ಅಂಗಹಾರಗಳನ್ನು ಪ್ರಯೋಗಿಸಲು ಅಳವಡಿಸಿದ ತಾಳದ ಬಗ್ಗೆಯೂ ನಾಗಚಂದ್ರ ಮಾಹಿತಿಯನ್ನು ಕೊಡುತ್ತಾನೆ :

ಅತಿ ವಿಷಮವೆನಿಪ ತಾಳದ
ಗತಿಯೊಳ್ನೂಱೆಂಟು ತೆಱದ ಕರಣಂಗಳ ಸಂ
ಗತಿ ದೇಸೆವೆಡೆಯ ಪಡೆದಳ್
ಲತಾಂಗಿ ನೃಪಸಭೆಗೆ ವಿಪುಲ ಪುಲಕೋದ್ಗಮಮಂ || (೩೮)

ಗೀತ ಮತ್ತು ತಾಳ ಒಂದೇ ಸ್ಥಾನದಲ್ಲಿ ಆರಂಭವಾಗುವ ಸ್ಥಾನವನ್ನೂ ಗ್ರಹ ಎಂದಿದ್ದಾರೆ. ಇದರಲ್ಲಿ ಎರಡು ವಿಧ. ಸಮ, ವಿಷಮ, ಗೀತ ಮತ್ತು ತಾಳ ಒಂದೇ ಸ್ಥಾನದಲ್ಲಿ ಆರಂಭವಾಗುವುದು ಸಮ.

ತಾಳ ಅಥವಾ ಗೀತ ಮೊದಲೇ ಆರಂಭವಾಗುವುದು ವಿಷಮ.[4] ಇವು ಮತ್ತೆ ಆತೀತ ಹಾಗೂ ಅನಗತ ಎಂದು ಎರಡು ವಿಧ. ತಾಳವು ಆರಂಭವಾದ ನಂತರ ಗೀತವು ಆರಂಭವಾದರೆ ಅದು ಅತೀತ ತಾಳ ಗ್ರಹ.[5] ಗೀತವು ಆರಂಭವಾದ ನಂತರ. ತಾಳವು ಆರಂಭವಾಗುವುದು ಅನಾಗತ ಗ್ರಹ.[6] ಈ ತರಹದ ವಿಷಮ ತಾಳಗಳು ಅವುಗಳ ವಿಶೇಷ ನಡೆಯಿಂದ ಚೇತೋಹಾರಿಯೂ, ಕುತೂಹಲ ಭರಿತವೂ, ಕಲಾವಿದರ ಏಕಾಗ್ರತೆಗೂ, ಲಯ, ತಾಳಗಳ ಜ್ಞಾನ ಪ್ರತಿಭೆಗಳಿಗೂ ಸವಾಲಿದ್ದಂತೆ.

ರಾಜನರ್ತಕಿ ಮೇಲೆ ತಿಳಿಸಿದ ವಿಷಮ ತಾಳಗಳಲ್ಲಿ ನೂರೆಂಟು ಕರಣಗಳನ್ನೂ (ನೋಡಿ ನಕ್ಷೆ) ಅಳವಡಿಸಿ, ಸೊಬಗಿನಿಂದ ನರ್ತಿಸುತ್ತಿದ್ದರೆ ಸಭೆ ಪುಲಕಿತವಾಯಿತು. ಪಂಪನ ನಂತರ ನಾಗಚಂದ್ರ ನರ್ತಕಿಯ ತಾಳ ಜ್ಞಾನವನ್ನು ಎತ್ತಿ ಹಿಡಿದವನು.

(ಆ. ೮.೩೧ನೇ ಪದ್ಯರಾಂಭದಲ್ಲಿ) ಲತೆಯಂತೆ ಬಳುಕುತ್ತ ವಿಷಮ ತಾಳದಗತಿಗೆ ಸಂಗತವಾಗಿ  ನರ್ತಕಿ ದೇಸೆಯಿಂದ ನರ್ತಿಸಿದಳು. ಚಲುವಿಗೆ, ಸೊಬಗಿಗೆ ಕವಿ ಪರ್ಯಾಯವಾಗಿ ದೇಸೆ ಪದವನ್ನು ಇಲ್ಲಿಯೂ ಬಳಸುತ್ತಾನೆ. ಜನಸಂಮೋಹನ ಮಾಗೆ ದೇಸೆವಡದತ್ತಾ ನರ್ತಕೀ ನರ್ತನಂ

ಯಾವುದೇ ಕಲೆಯ ಮುಖ್ಯ ಉದ್ದೇಶ ಸೌಂದರ್ಯದ ಅರಿವು, ಕಲಾಭಿಜ್ಞತೆ. ಅವನ್ನು ನಾಗಚಂದ್ರನು ಮುಂದಿನ ಪದ್ಯದ ಮೂಲಕ ಕೊಡುತ್ತಾನೆ. ನರ್ತಕಿ ಶಾಸ್ತ್ರ ನಿಷ್ಠೆಯಿಂದ, ಶಾಸ್ತ್ರ ಸಮ್ಮತವಾದ ೩೨ ಅಂಗಹಾರಗಳನ್ನೂ ಭಾವ, ವಿಭಾವ ಹಾಗೂ ಅನುಭಾವಾದಿಗಳನ್ನು ಆಯಾ ಸ್ಥಾನದಲ್ಲಿ ಸಮರ್ಥವಾಗಿ ಪ್ರದರ್ಶಿಸುತ್ತಿರಲು, ಸಹೃದಯ ಪ್ರೇಕ್ಷಕರು ಚಿತ್ತವಿಕಾಸವನ್ನು ಹೊಂದಿದರು ಪ್ರೇಕ್ಷಕರಿಗೆ ಲೀಲಾವತಿಯಾದ ಎಂದರೆ ವಿಲಾಸಿನಿಯಾದ ಈ ನರ್ತಕಿಯ ನೃತ್ತ ಹಾಗೂ ಅಭಿನಯ ಭೇದಗಳು ಸ್ಪಷ್ಟವಾಗಿ ಸಂವಹನಗೊಳ್ಳುವಂತೆ ಇದ್ದುವಂತೆ.

ಇವು ಮೂವತ್ತೆರಡಂಗಹಾರಮಿವು ನಾನಾ ಭೇದಭಾವಾನುಭಾ
ವವಿಭವಕ್ರಮವೆಂದು ಕೀಱೆ ನುಡಿಯಲ್ಪರ್ಕುಂ ಯಥಾಸ್ಥಾನಸಂ
ಭವ ಮಪ್ಪಂತಿರಲಿಂತು ನರ್ತಿಸುವರಾರೆಂಬುನ್ನೆಗಂ ಲೋಚನೋ
ತ್ಸವಮಂ ಚಿತ್ತವಿಕಾಸಮಂ ಪಡೆದುದಾ ಲೀಲಾವತೀ ನರ್ತನಂ   (೩೯)

ರಾಜನರ್ತಕಿ ಕೌಶಲದಿಂದ ಕರಣ, ಅಂಗಹಾರಾದಿಗಳನ್ನು ಪ್ರೌಢವಾದ ಅಭಿನಯವನ್ನು ಪ್ರದರ್ಶಿಸುತ್ತಿದ್ದರೆ ಅದು ಮನ್ಮಥನ ಕಾಲಾಟದಂತೆ ಭಾಸವಾಯಿತು ಎಂದು ಮುಂದಿನ ಪದ್ಯದಲ್ಲಿ ಹೇಳುತ್ತಾನೆ. ತಾಳಮೇಳಗಳೊಡನೆ ಒಂದಾಗಿ ನರ್ತಿಸಿದ ನರ್ತಕಿಯ ಗೆಜ್ಜೆಯ ಝೇಂಕಾರದ ನಾದವನ್ನು ವರ್ಣಿಸಲು ಲಯಾನುಗಾಮಿಯಾದ ತರಳ ವೃತ್ತವನ್ನು ನಾಗಚಂದ್ರ ಆರಿಸಿರುವುದು ಶ್ಲಾಘ್ಯವಾಗಿದೆ.

ಮದನ ಮೋಹನ ಮಂತ್ರನಾದಮೊಸೇತುಗಟ್ಟಿದ ಕಾಮಸಂ
ಮದಸುಧಾಬ್ದಿ ತರಂಗನಾದಮೊಲೋಕಮೆಲ್ಲಮನಿಕ್ಕಿಮೆ
ಟ್ಟಿದ ಮನೋಭವ ಸಿಂಹನಾದಮೊ ಪೇೞಿನೆಲ್ ರಸಗೀತದೊಳ್
ಪುದಿದು ವಾದ್ಯದೊಳೊಂದಿ ತೞ್ತುದು ಕಿಂಕಿಣೀ ಕಳಝಂಕೃತಂ    (೪೨)

ಇಲ್ಲಿ ಕವಿ ನರ್ತಕಿಯ ನರ್ತನದ ವೈಖರಿ ಹಾಗೂ ಗೆಜ್ಜೆಗಳ ನಾದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾನೆ. ರಸವತ್ತಾದ ಗೀತಕ್ಕೆ ತಕ್ಕ ಮಧುರವಾದ ವಾದ್ಯ ಸಂಗೀತವು ಲಭಿಸಿ, ನತ್ಕಿಯು ತನ್ನ ಕುಣಿಯುತ್ತಿರುವ ಪಾದಗಳಿಂದ ಹೊರಟ ಗೆಜ್ಜೆಯ ನಾದವನ್ನು ಗೀತ ಹಾಗೂ ವಾದ್ಯದ ಲಯದೊಡನೆ ಬೆರೆಸಿದಳು.

ಮುಂದಿನ ಪದ್ಯದಲ್ಲಿ ವರ್ಣನೆ ಬೆಳೆದಿದೆ.

ಅಳಿನೀಝಂಕಾರಸಾರಂ ಪಸರಿಸೆ ರಸಗೀತಂ | ಸುಧಾಂಬೋಧಿ ನಾದಾ
ಕಳಿತಂ ಕೈಗಣ್ಮೆ ಗೀತಾನುಗಲಯ ಲಲಿತಾತೋದ್ಯ ನಾದಂ | ತಟಿಚ್ಚಂ
ಚಳ ಲಾಸ್ಯಂ ಗೀತ ವಾದ್ಯಾನುಗವಭಿನಯಮಂ ಬೀಱೆ ಚೆಲ್ಪಾದುದದ್ಯ
ತ್ಪುಳಕ ವ್ಯಾಸಂಗ ಸಂಗೀತಕರಸಲಹರೀ ರಂಗವಾಸ್ಥಾನ ರಂಗಂ           (೪೪)

ದುಂಬಿಯ ಹಾಗೆ ಝೇಂಕರಿಸುವ ಗೀತಾನುಗ ಲಯದಿಂದ[7] ಲಲಿತವಾದ ಆತೋದ್ಯನಾದವು ನರ್ತಕಿಯ ಲಾಲಿತ್ಯಮಯವಾದ ಲಾಸ್ಯಕ್ಕೆ ಹೊಂದಿಕೆಯಾಗಿತ್ತು. ಗೀತವಾದ್ಯಾನುಗವು ಆಕೆಯ ಅಭಿನಯಕ್ಕೆ ಸರಿಸಾಟಿಯಾಗಿ ಚೆಲುವನ್ನು ಬೀರುತ್ತಿದ್ದರೆ ಆ ನೃತ್ಯ, ವಾದ್ಯ ಹಾಗೂ ಗೀತ ಈ ಮೂರೂ ಸೇರಿದ ಸಂಗೀತಕ ರಸ ಲಹರಿ ರಂಗ ಸ್ಥಾನವನ್ನು ತುಂಬಿ ತರಂಗಿತಗೊಳಿಸುತ್ತಿತ್ತು.

ಹೀಗೆ ಸಂಗೀತ ಹಾಗೂ ನೃತ್ಯದಿಂದ ರಾಜಸಭೆಯನ್ನು ಸಂತೋಷಗೊಳಿಸಿದ ಕಲಾವಿದರಿಗೆ ವೈಶ್ರವಣ ರಾಜನು ವಿಭೂಷಣ ಹಾಗೂ  ಕಾಂಚನದ ಧಾರೆಯನ್ನೇ ಹರಿಸಿ ಅವರಿಗೆ ಸನ್ಮಾನವನ್ನೂ, ದಾನವನ್ನೂ ದಯಪಾಲಿಸಿ ಸಭೆಯಿಂದ ನಿರ್ಗಮಿಸುತ್ತಾನೆ.

ಹನ್ನೆರಡನೆಯ ಆಶ್ವಾಸದಲ್ಲಿ ನಾಗಚಂದ್ರ ಜಿನನಾಗಲಿರುವ ಮಲ್ಲಿನಾಥನ ಜನನದಿಂದ ಉಲ್ಲಸಿತರಾದ ಜನ ಸಂತೋಷ ಹಾಗೂ ಸಂಭ್ರಮದಿಂದ ಕುಣಿದಾಡಿದುದನ್ನು ವಿವಿಧ ಲಯಂಗಳಿಂ ಕುಣಿವ ಗೊಂದಣವೆಕ್ಕಣ (೧೨-೩) ಎಂದು ಮುಂತಾಗಿ ವರ್ಣಿಸಿದ್ದಾನೆ.

ಮಲ್ಲಿನಾಥನ ಜನನದ ಸುದ್ದಿ ತಿಳಿದು ಜನ ಸಾಮೂಹಿಕವಾಗಿ, ವೈವಿಧ್ಯಮಯ ಲಯಗಳಲ್ಲಿ ಕುಣಿಯುತ್ತಿದ್ದರು. ಈ ಸಮೂಹ ನೃತ್ಯವನ್ನು ನಾಗಚಂದ್ರ ಗೊಂದಣ ವೆಕ್ಕಣ ಎಂದು ಕರೆದಿದ್ದಾನೆ. ಇದೊಂದು ಸಮೂಹ ನೃತ್ಯದ ದೃಶ್ಯ, ಮಂಗಳ ಗೀತೆಗಳೂ, ಮಂಗಳ ವಾದ್ಯಗಳೂ ಇವರೊಡನೆ ಮೇಳೈಸು ಶುಭ ಸಮಾರಂಭದ ಸಂತೋಷವನ್ನು ಹೀಗೆ ಅಂಗಿಕಾಭಿನಯದಿಂದಲೂ, ಆತೋದ್ಯ ಪ್ರಯೋಗಗಳಿಂದಲೂ ಪ್ರಕಟಿಸಿತೆಂಬುದು ಇಲ್ಲಿಯ ವರ್ಣನೆ.

ಜಿನ ಜನ್ಮೋತ್ಸವದಿಂದ ಉಂಟಾದ ಸಂತೋಷವನ್ನು ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಸರ್ವರೂ ಹಾಡಿ ಕುಣಿದು ಸಂತಸ ಪಡುವ ಸಂಭ್ರಮದ ಚಿತ್ರವನ್ನು ಈ ಕೆಳಗಿನ ಪದ್ಯಗಳಲ್ಲಿ ಕವಿ ಕೊಡುತ್ತಾನೆ. (ಆ. ೧೨, ೯-೧೨)

ದೇಸೆ ವಿಳಾಸಮಂ ಪಡೆದು ಗೊಂದಳವೆಕ್ಕಣ ಮಾಗಳಾ ನೃಪಾ
ವಾಸ ದೊಳಾಡಿದತ್ತೆಸೆಯೆ ಪಾಣಿತಳಂ ಪಡೆವಂತೆ ಕುಂಕುಮ
ಸ್ಥಾಸಕಮಂ ಕುರುಳ್ಕೆದಱುವಂತೆ ತಮಾಳವನ ಪ್ರವಾಳಮಂ
ಕೇಸಡಿ ಪಾಸುವಂತೆ ತಳಿರಂ ನಗೆಗಣ್ಣುಗುಳ್ವಂತೆ ನೆಯ್ದಿಲಂ

ಉದಯಿ ಪುದುಂ ತ್ರಿಳೋಕತಿಳಕಂ ಗೃಹದೇವತೆಯರ್ ಪ್ರಸನ್ನ ವೇ
ಷದಿನೊಸೆದಾಡುವಂತೆ ಮಣಿಭಿತ್ತಿಗಳಂ ಮಣಿಕುಟ್ಟಿಮಂಗಳಂ
ಪುದಿದು ಮನಕ್ಕೆ ವಿಸ್ಮಯಮನಿತ್ತುವು ನೃತ್ಯ ರಸಾಮೃತ ಪ್ರವಾ
ಹದೊಳವಗಾಹಮಿರ್ದ ಗಣಿಕಾಪ್ರಭೆಯುಂ ಪ್ರತಿಬಿಂಬ ಲಕ್ಷ್ಮಿಗರ್

ದೆಸೆಬಿದ್ದಂ ಕುಣಿವಂಗನಾಜನದ ಕಾಂಚೀ ಘಂಟಿಕಾಘೋಷ ಮೊಂ
ದೆಸೆಯೊಳ್ ಮಂಗಳ ಗೀತಮೊಂದೆಸೆಯೊಳಾಶೀರ್ವಾದನಾದಂಗಳೊಂ
ದೆಸೆಯೊಳ್ ಮಂಗಳ ಪಾಠಕಸ್ತವನ ಮಾಂಗಲ್ಯಾನಕಧ್ವಾನ ಮೊಂ
ದೆಸೆಯೊಳ್ ಘೂರ್ಣಿಸೆ ಪೂರ್ಣವಾಯ್ತು ಜಿನ ಜನ್ಮೋತ್ಸಾಹಕೋಳಾಹಳಂ

ಗೊಂದಳ ವೆಕ್ಕಣದಂತಹ ಸಮೂಹ ನೃತ್ಯದ ದೃಶ್ಯದ ಚೆಲುವು ಆ ರಾಜಗೃಹದಲ್ಲಿ ವಿಲಾಸವನ್ನು ಪ್ರಕಟಿಸುತ್ತಿತ್ತು. ಕೆಂಪಾದ ಹಸ್ತಗಳುಳ್ಳ ನರ್ತಕಿಯು ತಮ್ಮ ನರ್ತನದಲ್ಲಿ ಅಂಗೈ ಚಲನೆಯನ್ನು ಮಾಡುತ್ತಿದ್ದರೆ ಅವುಗಳು ಕುಂಕುಮದ ಲೇಪನದಂತೆ ಕಾಣುತ್ತಿತ್ತು. ಕೆಂಪಾದ ಪಾದಗಳಿಂದ ಚಲಿಸುತ್ತ ನರ್ತಕಿಯರೂ, ನರ್ತಕರೂ, ನರ್ತಿಸುತ್ತಿದ್ದರು. ಅವರ ನೇತ್ರಗಳ ಚಲನೆಯು ಅರಳಿದ ನೈದಿಲೆಯಂತೆ ಎಲ್ಲೆಡೆಗೂ ಹರಡಿತ್ತು.

ಜಿನ ಜನನದಿಂದ ಸಂತಸಗೊಂಡ ಗೃಹದೇವತೆಯರು ಪ್ರಸನ್ನ ವೇಷದಿಂದ ಎಲ್ಲೆಲ್ಲೂ ಓಡಾಡುತ್ತಿದ್ದರು. ನೃತ್ಯರ ಸಾಮೃತದಲ್ಲಿ ಮುಳುಗಿರುವ ಗಣಿಕೆಯರ ಪ್ರತಿಬಿಂಬ ರಾಜಗೃಹದ ರತ್ನ ಖಚಿತವಾದ ಗೊಡೆ ಹಾಗೂ ನೆಲದ ಮೇಲೆ ಬೀಳುತ್ತಿತ್ತು. ದಿಕ್ಕು ದಿಕ್ಕುಗಳಲ್ಲಿ ನರ್ತಿಸುತ್ತಿರುವ ನರ್ತಕಿಯರ ಗೆಜ್ಜೆಗಳ ಧ್ವನಿಯಿಂದ ಆ ವಾತಾವರಣ ಮಂಗಳಕರವಾದ ನಿನಾದದಿಂದ ತುಂಬಿತ್ತು.

ಇಂದ್ರನ ಜನ್ಮಾಭಿಷೇಕದಲ್ಲಿ ಪುನಃ ಇಂದ್ರನು ಸುರಲೋಕದ ಗಾಯಕ, ನರ್ತಕರೊಡನೆ ನರ್ತಿಸುವ ಪ್ರಸಂಗವಿದೆ. ಪುಷ್ಪಾಂಜಲಿಯನ್ನು ಮಾಡಿದ ನಂತರ ಇಂದ್ರನು ವೈಶಾಖ ಸ್ಥಾನದಲ್ಲಿ (ನೋಡಿ ಅ. ೨ ಉ) ಅಭಿನಯ ರಂಗದಲ್ಲಿ ನಿಲ್ಲುತ್ತಾನೆ.

ಎಸೆದಿರೆ ವೈಶಾಖ ಸ್ಥಾ
ಸೌಷ್ಠವಂ ಪಾಣಿಪಲ್ಲವ ದ್ವಿತಯಂ ರಂ
ಜಿಸೆ ಕಟಿತಟದೊಳ್ ಸುರಪತಿ
ರಸಭಾವಾಭಿನಯಮೊಪ್ಪೆ ರಂಗಂಬೊಕ್ಕಂ     (೧೩೨೪)

ಎರಡೂ ಕೈಗಳನ್ನು ಸೊಂಟದ ಮೇಲೆ ಇಟ್ಟು ನೃತ್ಯವನ್ನು ಆರಂಭಿಸುವ ಇಂದ್ರನ ವೈಶಾಖ ಸ್ಥಾನ[8]ದ ಸ್ಪಷ್ಟ ಚಿತ್ರಣ ಇಲ್ಲಿದೆ.

ಹೀಗೆ ರಂಗವನ್ನು ಹೊಕ್ಕ ಇಂದ್ರನು ತನ್ನಿಂದ ತಾನೇ ಹೊಮ್ಮುವ ಭಾವ, ವಿಭಾವ ಹಾಗೂ ಅನುಭಾವಗಳು ದೊರಕಿ ಇಂದ್ರನು ಒಂದು ವಿಚಿತ್ರ ಶೋಭೆಯಿಂದ ಆವೃತ್ತನಾಗಿದ್ದನು. ಅಸಾಧಾರಣ ಸಂಗತಿಯೊಂದು ನಡೆದುದಕ್ಕಾಗಿ, ಅಂದರೆ ಜಿನ ಜನನಕ್ಕಾಗಿ ಅತ್ಯಂತ ಸಂತಸವನ್ನು ಹೊಂದಿದ ಇಂದ್ರನು ಸಾಮಾನ್ಯವಾಗಿರದೆ ರೂಪ ಪರಾವರ್ತನೆಯನ್ನು ಮಾಡಿಕೊಳ್ಳುತ್ತಾನೆ. ಆಗ ಆತ ವ್ಯೋಮದಷ್ಟು ಬೆಳೆದು ಭವ್ಯವಾದ ಆಕಾರವನ್ನು ಹೊಂದುತ್ತಾನೆ. ಪರ್ವತದಷ್ಟು ವ್ಯಾಪಕನೂ ಆಗಿ ಬಾಹುಗಳ ಗುಂಪೇ ಕಾಣಿಸಿಕೊಳ್ಳುತ್ತದೆ. ಹಾಗೆ ರೂಪ ಪರಿವರ್ತನೆಯನ್ನು ಹೊಂದಿದ ಇಂದ್ರನು ತನ್ನ ಕೈಗಳಲ್ಲಿ ೬೪ ಹಸ್ತಗಳನ್ನು, ಅದಕ್ಕೆ ತಕ್ಕಹಾಗೆ ರಸಭಾವವನ್ನು ತನ್ನ ಕಣ್ಣುಗಳಿಂದ ತೋರುತ್ತಿದ್ದ :

ತುಱುಗಿದ ತೋಳ್ಗಳೊಳಂಕ
ಣ್ದುಱುಗಲೊಳಂ ನೆಱೆದು ಮೆಱೆದು ರಸಭಾವಮನಂ
ದಱುವತ್ತು ನಾಲ್ಕ ಹಸ್ತದ
ತೆಱನುಮನೊರ್ಮೊದಲೆ ತೋಱೆದಂ ದಿವಿಜೇಂದ್ರಂ ||  (೧೩೨೬)

ಸಾಮಾನ್ಯ ರೂಪಿನ ಮಾನವರಿಗೆ ೬೪ ಹಸ್ತಗಳನ್ನು ಒಮ್ಮೆಲೇ ಪ್ರಯೋಗಿಸುವುದು ಊಹಾತೀತ. ಆದರೆ ಇಲ್ಲಿಯೂ ಇಂದ್ರನು ವೈಕುರ್ವಣ ಪದ್ಧತಿಯಿಂದ ದೀರ್ಘ ದೇಹಿಯೂ ಉದ್ದಂಡ ಬಾಹುವೂ, ಅಮಿತ ತೇಜನೂ ಆಗಿ ತನ್ನ ಸಹಸ್ರ ಬಾಹುಗಳ ಮೇಲೆ ಅಪ್ಸರೆಯರು ಸಂತೋಷದಿಂದ ನರ್ತಿಸುವಂತೆ ಮಾಡುತ್ತಾನೆ.

ಮುಂದೆ ಇಂದ್ರನೊಬ್ಬನಲ್ಲೇ ತಾಂಡವ ಹಾಗೂ ಲಾಸ್ಯ ಈ ಎರಡೂ ಭೇದದ ಶುದ್ಧ ನೃತ್ತವನ್ನು ಏಕ ಕಾಲದಲ್ಲಿ ಇಂದ್ರನಲ್ಲೇ ಕಾಣುವಂತಾದ ದೃಶ್ಯವನ್ನು ಸೊಗಸಾದ ಉಪಮೆಗಳಿಂದ ವರ್ಣಿಸುತ್ತಾನೆ.

ಲತೆಗಳ್ದಾಂಗುಡಿವಿಟ್ಟು ತಳ್ತಡರ್ದ ರಕ್ತಾಶೋಕಂ ವಿದ್ಯುದಾ
ವೃತ ಸಂಧ್ಯಾಂಬುದಮಂ ಮಣಿದ್ಯುತಿಲತಾ ಸಂಛನ್ನ ಮಾಣಿಕ್ಯ
ರ್ವತಮಂ ಪೋಲ್ತನನಂತ ದೇವಗಣಿಕಾ ಸಂತಾನ ಮುದ್ಬಾಹುಸಂ
ತತಿಯೊಳ್ ಲಾಸ್ಯಮನಪ್ಪುಕೆಯ್ಯ ಪುರುಹೊತಂ ತಾಂಡವ ಕ್ರೀಡೆಯೊಳ್
(
೧೩೩೧)

ಇದೇ ಅಭಿಪ್ರಾಯ ಪಂಪನು ಆದಿಪು. (೭-೧೨೭) ನಲ್ಲಿ, ಮಹೇಂದ್ರನ ಆನಂದ ನೃತ್ಯದಲ್ಲಿ ಹೇಳುತ್ತಾನೆ. ಪೌರುಷ ರೂಪವೂ, ಉದ್ಧತವೂ ಆದ ಹೆಜ್ಜೆಗಳಿಂದಲೂ, ಆಂಗಿಕಾಭಿನಯದಿಂದಲೂ ತಾಂಡವ ನೃತ್ತವನ್ನೂ, ಇಂದ್ರನು ಆತನ ತೋಳುಗಳ ಮೇಲೆ ಸುಕುಮಾರವಾದ, ಶೃಂಗಾರ ಪ್ರದಾನವಾದ ಲಾಸ್ಯವನ್ನು ಅಪ್ಸರೆಯರೂ ಪ್ರದರ್ಶಿಸುತ್ತಿದ್ದರೆಂಬ ನಾಗಚಂದ್ರನ ಹೋಲಿಕೆ ಶಿವನ ಅರ್ಧನಾರೀಶ್ವರ ರೂಪವನ್ನು ನೆನಪಿಗೆ ತರುತ್ತದೆ. ವಜ್ರಲೇಪದಂತೆ ಇಂದ್ರನ ಬಾಹುಗಳಲ್ಲಿ ಭದ್ರವಾಗಿ ನೆಲೆಯೂರಿದ ಅಪ್ಸರೆಯರು ಇಂದ್ರನಿಗೆ ಸರಿಸಮಾನ ವೇಗದಲ್ಲಿ ತಾವೂ ನರ್ತಿಸುತ್ತಿದ್ದರು. ಪಂಪನಂತೆ ನಾಗಚಂದ್ರನೂ ಇಂದ್ರನ ತೋಳಿನಲ್ಲಿ ಚಕ್ರಾಕಾರವಾಗಿ ಸುತ್ತುತ್ತಾ ನರ್ತಿಸುತ್ತಿದ್ದ ಅಪ್ಸರೆಯರ ಹಾಗೂ ಇಂದ್ರನ ನೃತ್ಯದ ಚಿತ್ರವನ್ನು ಜತ್ತಲಟ್ಟದ ಮಣೆ ಅಥವಾ ಯಕ್ಷಾಂದೋಲಕ್ಕೆ ಹೋಲಿಸುತ್ತಾನೆ. ಮಧ್ಯದ ದಂಡ ಇಂದ್ರನೇ ಆಗಿ ಆತನ ಭುಜ ಶಾಖೆಗಳೇ ಸುತ್ತುವ ರಾಟೆಗಳಾಗಿ ಆ ರಾಟೆಗಳ ಮೇಲೆ ಅಪ್ಸರೆಯರು ನರ್ತಿಸುತ್ತಿರುವ ದೃಶ್ಯವನ್ನು ನಾಗಚಂದ್ರ

ಅಮರೇಂದ್ರಂ ಕುಡೆದಂಡ
ಭ್ರಮರಿಯನುದ್ದಂಡ ಬಾಹುದಂಡಂಗಳೊಳಿ
ರ್ದ ಮರಿಯರೇಂ ಯಕ್ಷಾಂದೋ
ಳಮನಾಡುವ ಮಾಱ್ಕೆಯಿಂ ಮನಂಗೊಳಿಸಿದರೋ      (೧೩೩೩)

ಎಂದು ಸುಂದರವಾಗಿ ವರ್ಣಿಸಿದ್ದಾನೆ. ಈ ದೃಶ್ಯ ಮಕ್ಕಳ ಕ್ರೀಡೆಗಳಲ್ಲಿ ಪ್ರಚಲಿತವಿರುದ ದೈತ್ಯ ಚಕ್ರ ಅಥವಾ ರಂಕಲ ರಾಟೆಯನ್ನು ನೆನಪಿಗೆ ತರುತ್ತವೆ.

ನಾಗಚಂದ್ರ ನೃತ್ಯ ಪ್ರಸಂಗದ ಪರಿಸಮಾಪ್ತಿಯನ್ನು ನರ್ತನದ ಫಲಶ್ರುತಿಯೊಂದಿಗೆ ಮುಕ್ತಾಯಗೊಳಿಸುತ್ತಾನೆ.

() ಕರ್ಣಪಾರ್ಯನ ನೇಮಿನಾಥ ಪುರಾಣದಲ್ಲಿ (ಸು. ೧೧೬೦) ನೃತ್ಯ ಪ್ರಸಂಗ ಒಂದು ವಿಶೇಷ ಸಂದರ್ಭದಲ್ಲಿ ಕಾಣಿಸಿಕೊಂಡಿದೆ.

ಜಿತಶತ್ರು ಮಹಾರಾಜನ ಮಕ್ಕಳಾದ ವಿಜಯ ಹಾಗೂ ಜಯಸೇನೆಯರ ಸ್ವಯಂವರವನ್ನು ರಾಜನು ಏರ್ಪಪಡಿಸಿರುತ್ತಾನೆ. ವಿಜಯ ವೀಣಾವಾದನ ಪಟು. ಜಯಸೇನೆ ಅಸಾಧಾರಣ ನೃತ್ಯ ವಿದ್ಯಾ ಪಾರಂಗತೆ. ಇವರಿಬ್ಬರನ್ನೂ ಅವರವರ ವಿದ್ಯಾಬಲದಿಂದ ಸೋಲಿಸಿದಾತನಿಗೆ ಕೊಟ್ಟು ವಿವಾಹ ಮಾಡುವುದಾಗಿ ರಾಜನು ಘೋಷಿಸಿರುತ್ತಾನೆ.

ಜಯಸೇನೆಯ ನೃತ್ಯ ವಿಧಾನದ ಪೂರ್ಣ ವಿವರ ಇಲ್ಲಿಲ್ಲ. ಆಕೆ ವಿವಿಧ ನರ್ತನ ವಿಶಾರದೆಯೆಂದೂ ಅದಕ್ಕೆ ಸಾಟಿಯಾಗಿ ವಸುದೇವನು ಸಹ ಚಿತ್ರ ತರವಾಗಿ ನರ್ತಿಸಿದನೆಂದೂ ಕವಿ ಹೇಳಿ ಮುಂದುವರಿಯುತ್ತಾನೆ.

ಆಗಳಾ ಜಯಸೇನೆ ರಂಗಂ ಬೊಕ್ಕನಂಗ ಶಾಸ್ತ್ರಾದಿ ದೇವತೆಯು ಮುಖವಸ್ತ್ರಂಗಳಿದುವೆನಿಸಿ ಜವನಿಕೆಗಳೆದು ವಿವಿಧ ನರ್ತನ ವಿಧಾನಾದಾನೆಯಾಗಿ ನರ್ತಿಸೆ ಸಭಾಸದಸರ್ ಪೊಗೞಿ ತತ್ಸಮಯದೊಳ್ ಭಾರಿಕಂಕುಮಾರನ ವದನಾರವಿಂದ ಮನಾದರಂಬೆತ್ತು ನೋಡೆ ವಸುದೇವನನಂಗನಂತೆಸೆದು ರಂಗಸಂಗತನಾಗಿ ನಾಟ್ಯಾಗಮಕ್ಕೆ ಮಿಕ್ಕ ಸೂತ್ರಧಾರನೆನಿಸಿ (೧೫೦ .)

ಸಭಾಸದರು ಜಯಸೇನೆಯ ಅಪೂರ್ವ ನೃತ್ಯವನ್ನು ಕಂಡು ಸಂತೋಷದಿಂದ ಹೊಗಳುತ್ತಿರಲು, ವಸುದೇವ ತಾನೂ ರಂಗಸ್ಥಳವನ್ನೂ ಪ್ರವೇಶಿಸುತ್ತಾನೆ. ಆಕೆಯ ನೃತ್ಯವನ್ನು ತಾನೇ ನಡೆಸುವ ಸೂತ್ರಧಾರನಾಗುತ್ತಾನೆ. ಆಂಧ್ರ ಪ್ರದೇಶದಲ್ಲಿ ಪ್ರಚಲಿತವಿರುವ ನೃತ್ಯ ಸಂಪ್ರದಾಯವಾದ ಕೂಚಿಪುಡಿ ನೃತ್ಯ ಶೈಲಿಯಲ್ಲಿ ಸೂತ್ರಧಾರನು ತಾನು ಮೊದಲು ನರ್ತಿಸಿ, ಬರಲಿರುವ ನೃತ್ಯಬಂಧಕ್ಕೆ ಪೀಠಿಕೆಯನ್ನು ಹಾಕಿ. ಸಭಿಕರಿಗೆ ಹೃದಯ ಸಂವಾದವನ್ನು ತನ್ನ ಕಲಾ ಸೃಷ್ಟಿಯ ಮೂಲಕ ಮಾಡಿಕೊಡುತ್ತಾನೆ. ಒಮ್ಮೊಮ್ಮೆ ನೇರವಾಗಿ ನರ್ತಕಿಯೊಡನೆ ಸಂಭಾಷಣೆಯನ್ನು ಮಾಡುತ್ತಾನೆ. ಸಾಮಾನ್ಯವಾಗಿ ಸೂತ್ರಧಾರನು ಗೀತ, ವಾದ್ಯ ಹಾಗೂ ನೃತ್ಯಗಳಲ್ಲಿ ಪ್ರಾವೀಣ್ಯವನ್ನು ಪಡೆದಿರಬೇಕಾಗುತ್ತದೆ.

ಆದರೆ ವಸುದೇವನ ಚಮತ್ಕಾರ ನೃತ್ಯದ ವಿವರಗಳು ಇಲ್ಲಿ ಸಿಗುವುದಿಲ್ಲ.

ನಾಟ್ಯಾಗಮವನ್ನೇ ತಿಳಿದ ವಸುದೇವನ ನೃತ್ಯ ಅತ್ಯಂತ ಶಾಸ್ತ್ರಬದ್ಧವಾಗಿದ್ದಿರಬಹದು ಎಂದು ಹೇಳಬಹುದು. ಮುಂದೆ ಚಾರುದತ್ತನ ಪ್ರಸಂಗವುಂಟು. ಇಲ್ಲಿ ಚಾರುದತ್ತನು ರುದ್ರದತ್ತನೊಡನೆ ತನ್ನಮನದ ಬೇಸರವನ್ನು ನೀಗಿಸಿಕೊಳ್ಳಲು ದೇವಾಲಯಕ್ಕೆ ಹೋಗುತ್ತಾನೆ. ಅಲ್ಲಿ ವಿವಿಧ ನರ್ತನ ವಿದಗ್ಧೆಯರಿಂದ ನರ್ತನ, ಅಮೃತ ಧಾರೆಯ ಸಮಾನವಾದ ಗಾಯನ ಹಾಗೂ ಚೇತೋಹಾರಿಯಾದ ವಾದ್ಯಗಳ ಧ್ವನಿ ಇವುಗಳಿಂದ ಆತನ ಮನ ತಿಳೀಯಾಗುತ್ತದೆ. ದೇವಾಲಯಗಳು ಪ್ರಾಚೀನ ಕಾಲದ ಸಮಾಜದಲ್ಲಿ ನೃತ್ಯ ಹಾಗೂ ಗೀತಗಳು ಸಂಭ್ರಮದಿಂದ ನಡೆಯುವ ಕೇಂದ್ರಗಳಾಗಿದ್ದುವು ಎಂದು ತಿಳಿದು ಬರುತ್ತದೆ. ಅದಕ್ಕೆ ಮುಂದಿನ ವಿವರಣೆಯೂ ಸಾಕ್ಷಿಯಾಗಿದೆ.

ಆಗಳ್ ರುದ್ರದತ್ತ ನತಿಹರ್ಷಚಿತ್ತನಾಗಿ ಚಾರುದತ್ತ ನನಂತೊಡಗೊಂಡು ಬಂದಾ ದೇವತಾ ಗೃಹದ ನೃತ್ಯ ಮಂಟಪ ಮನೆಯ್ದಿ ಪುಗುವುದುಂ ಅಲ್ಲಿ ಮನಸಿನಜನಮಸೆದಲರ್ಗಣೆ ಯೆನಿಸಿಯುಂ ಕುಡು ಮಿಂಚಿನ ಸಂಭಾರಣೆಯೆನಿಸಿಯುಮೆಸೆದು ವಿವಿಧ ನರ್ತನ ಪ್ರವರ್ತನದೊಳತಿ ಚದುರೆಯೆನಿಸಿ ನರ್ತಿಸುವ ನರ್ತಕಿಯುಂ, ಎಸೆದು ಪಸರಿಸುವ ಸುಧಾಸಾರಮೆನಿಸುವಿಂಪಿನ ಸೊಂಪುವೆತ್ತಸೆವ ಗೇಯಮುಂ ಅದಂ ಸೋಯಲೀಯದಮೃತವಾರ್ಧಿನಿನದಮನನು ಕರಿಸುವನೇಕ ವಾದ್ಯ ಲಯಂಗಳುಂ ಮನಂಗೊಳೆ ಚಾರುದತ್ತನಿರ್ಪುದುಮಲ್ಲಿ. (ಕರ್ಣನೆ. ೪೫ )

ಎಂಟನೇ ಆಶ್ವಾಸದಲ್ಲಿ ನೇಮಿನಾಥನ ಜನ್ಮಾಭಿಷೇಕ ಪ್ರಸಂಗದಲ್ಲಿ ಇಂದ್ರಾದಿಗಳ ನೃತ್ಯದ ವರ್ಣನೆ ಪುನಃ ಬರುತ್ತದೆ.

ದೇವಾಲೋಕದ ಪಟಹ ವಾದನ ದಿಕ್ಕು ದಿಕ್ಕುಗಳಲ್ಲೂ ವ್ಯಾಪಿಸಿ, ಜಯ ಜಯಕಾರವು ಲೋಕವನ್ನೇ ತುಂಬಿರಲು ಸುಂದರಿಯರಾದ ಸುರಸ್ತ್ರೀಯರ ನರ್ತನವು ಬೆಡಗಿನ ದೃಶ್ಯವನ್ನು ನೀಡುತ್ತಿತ್ತು (ಆ.೮/೧೨೧)

ಮೂವತ್ತೆರಡು ಮುಖಗಳುಳ್ಳ ಒಂದು ಮಹಾಗಜದ ಕಲ್ಪನೆ ಜೈನ ಧರ್ಮದ ಒಂದು ಅವಿಭಾಜ್ಯ ಅಂಶ. ಎಲ್ಲ ಜಿನೇಂದ್ರರ ಪುರಾಣಗಳಲ್ಲೂ ಈ ಮಹಾಗಜದ ಕಲ್ಪನೆ ಬಿಡದೇ ಬರುತ್ತದೆ.

ಮೂವತ್ತೆರಡೂ ವದನಗಳಲ್ಲೂ ಒಂದೊಂದು ಸರೋವರ. ಆ ಸರೋವರ ಒಂದೊಂದರಲ್ಲೂ ಅರಳಿದ ಕಮಲಗಳು; ಈ ಅರಳಿದ ಕಮಲಗಳ ಮೇಲೆ ಮೂವತ್ತೆರಡು ಜನ ಅಪ್ಸರೆಯರು ಚಮತ್ಕಾರದಿಂದ ನರ್ತಿಸುತ್ತಿರುತ್ತಾರೆ. ಹೀಗೆ ಮುಂದುವರೆಯುತ್ತದೆ ನರ್ತನದ ವೈಖರಿ:

ಸಿರಿ ನಮಗೆ ದೊರೆಯಳಲ್ಲೀ|
ಸರಸಿಜವಸ್ವೃಶ್ಯವಾಕೆ ಗಾಸ್ಪದವೆಂಬಂ||
ತಿರೆ ಮೆಟ್ಟದೆ ಮುಟ್ಟದೆ ವಿ|
ಸ್ತರದಿಂದ ನರ್ತಿಸಿದರಂದು ಸುರವರಸತಿಯರ್||(ಕರ್ಣನೇ. ೧೨೫)

ಲಕ್ಷ್ಮೀ ನಮಗೆ ಸಮಾನಳಲ್ಲ ಆಖೆಯ ನಿವಾಸವಾದ ತಾವರೆ ನಮಗೆ ಸ್ಪರ್ಶಿಸತಕ್ಕುದಲ್ಲ ಎಂದು ನರ್ತಕಿಯರು ನರ್ತಿಸಿದರಂತೆ. ಈ ಪದ್ಯದಲ್ಲಿ ಅಪ್ಸರೆಯರ ಶರೀರ ಲಘುತ್ವವನ್ನೂ ಅವರು ನರ್ತಿಸುವಾಗ ಬಳಸುವ ಹಗುರವಾದ ಉತ್ಪ್ಲುತೀಕರಣಗಳ[9] ಧ್ವನಿಯನ್ನೂ ಗುರುತಿಸುತ್ತೇವೆ. ಅಪ್ಸರೆಯರು ಕಮಲದ ದಳವನ್ನು ಸೋಕದೆ ಮೆಟ್ಟದೆ ಮುಟ್ಟದೇ ಮಾಡಿದ ಆ ನೃತ್ಯದಲ್ಲಿ ನವಿರಾದ ಪ್ಲವನ, ಭ್ರಮರಿಗಳು ಇರಬಹುದೆಂದು ನಾವು ಊಹಿಸಬಹುದು.

ಮುಂದೆ ಇಂದ್ರನು ಭಕ್ತಿಯಿಂದ ಜಗತ್ರಯ ಭಾನುವಿಗೆ ಪುಷ್ಪಾಂಜಲಿಯನ್ನೂ ಸೂಸಿ, ವೈಶಾಖ ಸ್ಥಾನದಲ್ಲಿ ನಿಂತು (ಆ.೨. ಉರಲ್ಲಿ ಚರ್ಚಿಸಿದೆ) ತಾಂಡವವನ್ನು ಆಡಲು ಆರಂಭಿಸುತ್ತಾನೆ. ಇದರ ನಂತರ ಅರಭಟೀ ವೃತ್ತಿಯನ್ನು ಕೈಕೊಳ್ಳುತ್ತಾನೆ. (ನೋಡಿ ಅನುಬಂಧ ಅ. ಪರಿಭಾಷೆ). ಇತರ ಕಾವ್ಯಗಳಲ್ಲಿ ಇಂದ್ರನು ಸಹಸ್ರ ಬಾಃಉ ಉಳ್ಳವನಾದರೆ, ಕರ್ಣಪಾರ್ಯ ಇಂದ್ರನ ತೋಳುಗಳ ಸಂಖ್ಯೆಯನ್ನುಹೇಳದೆ, ವಿಶಾಲವಾದ ಆತನ ಬಾಹುಗಳ ಮೇಲೆ ಎಂಟೆಂಟು ಜನ ಸುರ ನರ್ತಕಿಯರು ನರ್ತಿಸಿದರು ಎಂದು ಮಾತ್ರ ಹೇಳುತ್ತಾನೆ.

ಎಸೆವ ಸುತಾಂಡವ ವಿಧಿಯುಮ |
ನಸಮಾನ ಮೆನಿಪ್ಪಲಾಸ್ಯ ಲೀಲೆಯು ಮಂ ನಿ
ರ್ಮಿಸಿ ತೋರಿದ ನೊರ್ಮೊದಲೆನೆ
ಪೊಸಯಿಸಿದಂ ನಾಟ್ಯವಿದ್ಯಯಂ ಪುರಹೂತಂ ||(ಕರ್ಣನೇ. ೧೬೪)

ಏಕ ಕಾಲದಲ್ಲಿ ತಾಂಡವ ಲಾಸ್ಯಗಳನ್ನು ಇಂದ್ರ ಪ್ರದರ್ಶಿಸಿದನಂತೆ. ನಾಟ್ಯ ವಿದ್ಯೆಯನ್ನು ಹೊಸತು ಮಾಡಿದನಂತೆ. ಇಂದ್ರ ಇಲ್ಲಿ ಒಬ್ಬ ಧೀರೋದಾತ್ತ, ಆದರೆ ಅತಿ ಮಾನುಷತೆ, ಐಂದ್ರ ಜಾಲಿಗತನ, ಚಕ್ರಾಂದೋಲಗಳ ಕಲ್ಪನೆ ಇಲ್ಲಿ ಇಲ್ಲ.

() ನೇಮಿಚಂದ್ರನ ನೇಮಿನಾಥ ಪುರಾಣ-(ಅರ್ಧನೇಮಿ) (.೧೧೯೦)

ಜಿತಶತ್ರು ಮಹಾರಾಜನ ಪುತ್ರಿಯರ ಸ್ವಯಂವರ ಸಂದರ್ಭದಲ್ಲಿ ಕಿರಿಯ ಪುತ್ರಿಯಾದ ಮಗಧ ಸುಂದರಿ ಇಭ್ಯಕೇತುವನ್ನು ವರಿಸಲು ನರ್ತಿಸುತ್ತಾಳೆ. ಆಕೆಯನ್ನು (ವಿಚಿತ್ರ ನೃತ್ಯವಿದ್ಯಾ ವಿಶಾರದೆ) ಎಂದು ಕವಿ ಗುರುತಿಸುತ್ತಾನೆ. (ಆ.೩/೯೭ವ)

ವಿಚಿತ್ರ ಎಂಬ ಪದಕ್ಕೆ ನಾನಾ ಬಗೆಯ, ಸುಂದರವಾದ ಎಂದು ಅರ್ಥಗಳು ಮಗಧ ಸುಂದರಿಯು ಕೇವಲ ಒಂದೇ ಬಗೆಯ ನೃತ್ಯವನ್ನಲ್ಲದೇ ನಾನಾ ಬಗೆಯ ನೃತ್ಯಗಳನ್ನೂ ಕರಗತ ಮಾಡಿಕೊಂಡಿದ್ದಳು ಎಂದು ಅರ್ಥೈಸಬಹುದು. ಭರತಕೋಶದಲ್ಲಿ ವಿಚಿತ್ರವನ್ನು ಒಂದು ನೃತ್ತಬಂಧ ಎಂದು ಗುರುತಿಸಿದೆ.[10] ಅಂತಹ ವಿಶಿಷ್ಟ ನೃತ್ತ ಬಂಧವನ್ನು ಪ್ರದರ್ಶಿಸಲು ಎಂದು ಸಹ ಹೇಳಬಹುದು.

ನಂದಿಕೇಶ್ವರನೂ ಭರತಾರ್ಣವದಲ್ಲಿ ವಿಚಿತ್ರವನ್ನೂ ಒಂದು ಅಂಗಹಾರವನ್ನಾಗಿ ಗುರ್ತಿಸಿ. ಸೂಚೀಮುಖ ಹಸ್ತವನ್ನು ಹಿಡಿದು ಪಾದಗಳಲ್ಲಿ ತಲಕುಟ್ಟನವನ್ನೂ ಕಣ್ಣುಗಳಲ್ಲಿ ಪ್ರಲೋಕಿತ ದೃಷ್ಟಿಯನ್ನೂ ಮಾಡಿದರೆ ಒಂದನೇ ವಿಧದ ವಿಚಿತ್ರ ನೃತ್ತವೂ ಎಂದೂ ಸಂದಂಶ ಹಸ್ತವನ್ನು ಮಾಡುತ್ತ ಪಾದಗಳಲ್ಲಿ ವಿಷಮ ಸಂಚರ ಚಾರಿಯನ್ನೂ ಕಣ್ಣುಗಳಲ್ಲಿ ಸಮ ಸಾಚೀ ದೃಷ್ಟಿಗಳನ್ನು ಮಾಡಿದರೆ ಎರಡನೆಯ ವಿಧದ ವಿಚಿತ್ರ ನೃತ್ತವೂ ಆಗುತ್ತದೆ ಎಂದೂ ಹೇಳುತ್ತಾನೆ.[11]

ಮಗಧ ಸುಂದರಿಯ ನರ್ತನ ಸಾಮರ್ಥ್ಯಕ್ಕೆ ಭರತಾರ್ಣವದಲ್ಲಿನ ವಿವರಣೆಯನ್ನು ಸಮೀಕರಿಸಬಹುದು. ಪಾದಗಳಲ್ಲಿ ತಲಕುಟ್ಟನ ಅಥವಾ ಉದ್ಘಟಿತ ಪಾದಭೇದವನ್ನೂ ಮಾಡುತ್ತ (= ಕಾಲುಬೆರಳ ತುದಿಯ ಮೇಲೆ ನಿಂತು ಹಿಮ್ಮಡಿಯನ್ನು ನೆಲಕ್ಕೆ ಅಪ್ಪಳಿಸುವುದು[12]), ಉದ್ಘಟಿತ ಪಾದವನ್ನು ಮಾಡುತ್ತ ಕಣ್ಣುಗಳಲ್ಲಿ ಪ್ರಲೋಕಿತ ದೃಷ್ಟಿ[13](=ಕಣ್ಣುಗುಡ್ಡೆಗಳನ್ನು ಸ್ವಸ್ಥಾನದಿಂದ ಬಲಕ್ಕೂ ಎಡಕ್ಕೂ ಚಲಿಸುವುದು.) ಬೀರುತ್ತ ಕೈಗಳಲ್ಲಿ ಸೂಚೀಮುಖ ಹಸ್ತವನ್ನು[14] ಪ್ರದರ್ಶಿಸುತ್ತಿದ್ದರೆ, ಅದು ವಿಚಿತ್ರ ನೃತ್ತದ ಒಂದು ಪ್ರಕಾರವಾಗುತ್ತದೆ. ಮೇಲಿನ ವರ್ಣನೆಯ ಆಧಾರದ ಮೇಲೆ ವಿಚಿತ್ರ ನೃತ್ಯವನ್ನು ರೇಖಾಚಿತ್ರದ ಮೂಲಕ (ಪಕ್ಕದ ಪುಟ ನೋಡಿ) ಚಿತ್ರಿಸಬಹುದಾಗಿದೆ. ಪಾದದ ಚಲನೆಗೆ ತಕ್ಕಂತೆ ಸೊಂಟ, ಪಕ್ಕೆ ಹಾಗೂ ತೊಡೆಗಳ ಬಾಗುವಿಕೆ ಇರುತ್ತದೆ. ಈಗ ಕೇರಳ ಪ್ರಾಂತ್ಯದ ಪ್ರಸಿದ್ಧ ನೃತ್ಯ ಶೈಲಿಯಾದ ಮೋಹಿನಿ ಆಟ್ಟಂ ನೃತ್ಯ ಪದ್ಧತಿಯ ಆರಂಭ ಸ್ಥಾನಕ ಹಾಗೂ ಅಂಗಹಾರಗಳನ್ನು ಇದು ಬಹು ಸಮೀಪವಾಗಿ ಹೋಲುತ್ತದೆ.[1] ಬಾಹು – ಸರಲಃ ಪ್ರೋನ್ನತೋತ್ಯಶ್ಚಃ ಕುಂಚಿತೋ ಲಲಿತಸ್ತಥಾ |
ಲೋಲಿತೋ ವಲಿತೋ ಬಾಹುಃ ಪರಾವೃತ್ತಸ್ತಥಾಷ್ಟಮಃ ||
ನೃತ್ಯ ವಿನೋದ, ಮಾನಸ. ೧೧೩೧ ಸಂ. ಶ್ರೀ ಗೊಂಡೇಕರ್

[2] ಕಂಪನಂ ವಲನಂ ಚೈವ ಸ್ತಂಭನೋದ್ವರ್ತನೇ ತಥಾ |
ನಿವರ್ತನಂ ಚ ಪಂಚೈತಾ ನ್ಯೂರುಕರ್ಮಾಣಿ ಕಾರಯೇತ್ ||
ನಾಟ್ಯಶಾ. /೨೫೨ ಸಂ. ರಾಮಕೃಷ್ಣ ಕವಿ.

[3] ಜಂಘಾಭೇದ – ಆವರ್ತಿತಂ ನತಂ ಕ್ಷಿಪ್ತಂ ಉದ್ವಾಹಿತ ಮಪಿಚ |
ಪರಿವೃತ್ತಂ ತಥಾ ಚೈವ ಜಂಘಾಕರ್ಮಾಣಿ ಪಂಚಧಾ ||
(ಅದೇ. /೨೫೯)

[4] ಸಂ. ಶಾ. ಸಂ. (ಎಲ್ ರಾಜಾರಾವ್), ಪು. ೩೫.

[5] ತಾಲಾಂತರಂ ಗೀತಾದಯೋ ಯತ್ರಯೋಜ್ಯಂತೇ ಸತಾಲೋತೀತ ಗ್ರಹಃ
ಭರಕೋ. ೧೮೮.

[6] ಅನಾಗತಃ ಪ್ರಾತಪ್ರವೃತ್ತಾ ಗ್ರಹಸ್ಯೋ ಪರಿ ಪಾಣಿಕಃ || ಅದೇ.

[7] ಗೀತದೊಡನೆ ನುಡಿಸುವ ವಾದ್ಯ.
ಗೀತೇನ ಸಂಗತಂ ಯತ್ತು ತದ್ಗೀತಾನುಗ ಮುಚ್ಯತೇ.
ಮಾನಸ. ವಿ. .- ಸಂ. ಶ್ರೀಗೊಂಡೇಕರ್.

[8] ನೋಡಿ ಸ್ಥಾನಕ (ಅ. ೨)

[9] ನೋಡಿ ಅನುಬಂಧ ಅ. ಪರಿಭಾಷೆ ಹಾಗೂ ನಕ್ಷೆ (ಕರಣ)

[10] ವಿಚಿತ್ರ ನರತ್ತಬಂಧಃ
ಯತ್ರ ಚತ್ಪಾರಿ ಚತ್ಪಾರಿ ಪಂಕ್ತಿ ದ್ವಿತಯ ರೂಪಕಮ್
ನಿವೇಶಿತಾನಿ ಪಾತ್ರಾಣಿ ದ್ವೇ ದ್ವೇ ತತ್ಪಾರ್ಶರ್ವಯೋರ್ದ್ದಯೋಃ
ನೇಮ ಉದೃತಿ ಭರತೋ ಪು. ೬೦೬.

[11] ಸೂಚಿವಕ್ತ್ರಾಭಿಢಾ ಹಸ್ತೌ ಪದೋಸ್ತುತಲ ಕುಟ್ಟನಮ್ |
ಪ್ರಲೋಕಿ ದೃಶಾ ಭೋಯಾದ್ವಿ ಚಿತ್ರಃ ಪ್ರಥಮೋ ಭವೇತ್
ಹಸ್ತೌ ಸಂದಂಶ ಮಾಸೌ ಪಾದೌ ವಿಷಯ ಸಂಚರಾ
ದೃಷ್ಟಿಭ್ಯಾಂ ಸಮಸಾಚಿಭ್ಯಾಂ ವಿಚಿತ್ರಸ್ಸ ದ್ವಿತೀಯಕೆ ||

[12] ಸ್ಥಿತ್ಪಾ ಪಾದತಲಾಗ್ರೇಣ ಪಾರ್ಷ್ಣೀರ್ಭೂಮೌನಿಪಾತ್ಯತೇ
ಭರತಾ. –/೫೬೨೬೩ ಸಂ. ಕೆ. ವಾಸುದೇವಶಾಸ್ತ್ರಿ.
ಯಸ್ಯ ಪಾದಸ್ಯ ಕರಣೇ ಭವೇತ್ ಉದ್ಘಟಿತಸ್ತು ಸಃ ||
(ನಾಟ್ಯಾಶಾ) ೧೦/೪೩ ಸಂ. ರಾಮಕೃಷ್ಣ ಕವಿ.

[13] ಪ್ರಲೋಕಿತಂ ಪರಿಜ್ಞೇಯಂ ಚಲನಂ ಪಾರ್ಶ್ಚಭಾಗಯೋಃ              ಅಭಿದ ೭೨.

[14] ನೋಡಿ ನಕ್ಷೆ (ಅಸಂಯುತ ಹಸ್ತಗಳು)