ಶಾಸ್ತ್ರದಲ್ಲಿ ಉಕ್ತವಾಗಿರುವ ಎರಡನೇ ಮಾದರಿಯ ವಿಚಿತ್ರ ನೃತ್ಯವು ಹೀಗಿಗೆ: ಕೈಗಳಲ್ಲಿ ಸಂದಂಶ ಹಸ್ತ

[1]ವನ್ನು ಮಾಡುತ್ತ ಕಣ್ಣುಗಳಲ್ಲಿ ಸಮ ಹಾಗೂ ಸಾಚೀ ದೃಷ್ಟಿ[2]ಯನ್ನೂ ಪ್ರದರ್ಶಿಸುತ್ತ ಪಾದಗಳನ್ನು ವಿಷಮ ಸಂಚರ[3]ದಿಂದ ಚಲಿಸುವುದೆ ವಿಚಿತ್ರ. ಸಂದಂಶ ಹಸ್ತವು ಐದು ಬೆರಳುಗಳನ್ನು ಪದೇ ಪದೇ ಹತ್ತಿರಕ್ಕೆ ತಂದು ಬಿಡಿಸುವ ಕ್ರಮ. ಬಲಗಾಲಿನಿಂದ ಎಡಗಾಲನ್ನು ಎಡಗಾಲಿನಿಂದ ಬಲಗಾಲನ್ನೂ ಕಟ್ಟುತ್ತಾ ಚಲಿಸುವ ಚಲನೆಯೇ ವಿಷಮ ಸಂಚರ ಪಾದಚಾರಿ.

ಎರಡನೇ ವಿಚಿತ್ರ ನೃತ್ಯದ ತಾಂತ್ರಿಕ ಅಂಶಗಳ ಆಧಾರದ ಮೇಲೆ ವಿಚಿತ್ರ ನೃತ್ಯವನ್ನು ಹೀಗೆ ಊಹಿಸಬಹುದು:

ಆರಂಭ ಸ್ಥಾನಕದಲ್ಲಿ ನಿಂತು ವಕ್ಷಸ್ಥಳದಿಂದ ಎರಡೂ ಕೈಗಳಲ್ಲಿ ಸಂದಂಶ ಹಸ್ತಗಳನ್ನೂ ಊರ್ಧ್ವಮುಖವಾಗಿಯೂ, ಪಾರ್ಶ್ವಗಳಲ್ಲೂ, ಅಧೋಮುಖವಾಗಿಯೂ, ವರ್ತಲಾಕಾರವಾಗಿಯೂ ಸುತ್ತಿಸಿ ಪುನಃ ವಕ್ಷಸ್ಥಳಕ್ಕೆ ತಂದು ನಿಲ್ಲಿಸುವುದು. ಆಗ ಪಾದಗಳೂ ವಿಷಮ ಸಂಚರವನ್ನು ಮಾಡುತ್ತ ರಂಗದಲ್ಲಿ ಚಲಿಸುವುದು. ಕಣ್ಣುಗಳು ಸಮ ಸ್ಥಾನ (=ಸ್ವಾಭಾವಿಕ ಸ್ಥಾನ) ದಿಂದ ಬಲಗಡೆಯ ಕಣ್ಣಂಚಿನವರೆಗೂ ಚಲಿಸುವುದು. ಕಣ್ಣುಗಳ, ಹಸ್ತಗಳ ಹಾಗೂ ದೈಹಿಕ ಚಲನೆಯ ದಿಕ್ಕಿಗೆ ಅನುಗುಣವಾಗಿ ಸೊಂಟದ ಚಲನೆಯೂ ಮೇಳವಾದರೆ ಆ ಭಂಗಿಗೆ ಅಥವಾ ಚಲನೆಗೆ ಸೌಷ್ಠದ ಹಾಗೂ ರೇಖೆಗಳು ಒದಗಿ ಆಕರ್ಷಕವಾಗಿ ಕಾಣುತ್ತದೆ.

ಮೇಲಿನ ವಿವರಣೆ ಆಂಧ್ರ ಪ್ರದೇಶದ ಪ್ರಖ್ಯಾತ ನೃತ್ಯ ಪದ್ಧತಿಯಾದ ಕೂಚಿಪುಡಿ ನೃತ್ಯಶೈಲಿಯಲ್ಲಿನ ನೃತ್ಯ ಬಂಧವಾದ ತರಂಗವನ್ನು ಹೋಲುತ್ತದೆ. ಈ ನೃತ್ಯ ಬಂಧದಲ್ಲಿ ನರ್ತಕನು ವಿಷಮ ಸಂಚರದಿಂದ ತಾಳ ಲಯಗಳಿಗೆ ಅನುಸಾರವಾಗಿ ನೆಗೆಯುತ್ತ ಸಾಗುತ್ತಾನೆ. ಅಲ್ಲದೆ ಒಂದು ದೊಡ್ಡ ತಟ್ಟೆಯ ಅಂಚಿನ ಮೇಲೆ ಸಹ ಈ ರೀತಿ ಅವನು ನರ್ತಿಸುತ್ತಾನೆ.

ಕವಿ ಹೇಳುವ ವಿಚಿತ್ರ ನೃತ್ಯವನ್ನು ವಿಸ್ಮಯಕಾರಿ ನೃತ್ಯವೆಂದು ಹೇಳಬಹುದು, ಅದರ ತಾಂತ್ರಿಕ ಅಂಶಗಳನ್ನು ಕ್ರೋಡೀಕರಿಸಿ, ಅವುಗಳಲ್ಲಿ ಮಗಧ ಸುಂದರಿ ಪಾರಂಗತಳಾಗಿದ್ದಳು ಎಂಬ ತೀರ್ಮಾನಕ್ಕೆ ಸಹ ಬರಬಹುದು.

ಮನ್ಮಥನಂತೆ ಅಲಂಕರಿಸಿಕೊಂಡು ಕಂತುವಿನಂತೆ ಕಂಗೊಳಿಸುತ್ತಿರುವ ಇಭ್ಯಕೇತುವನ್ನು ಕಾಂಚನ ಪೀಠದಲ್ಲಿ ಕುಳ್ಳಿರಿಸಿ ಕೇಳಿಕೆಯನ್ನು ಮಾಡುತ್ತಾರೆ.

ಅಂತು ಕಂತುವಿನಂತೆ ಬಂದ ಸೌಭಾಗ್ಯ ಸಕಿಂಚನನಂ ಕಾಂಚನ ಪೀಠದೊಳ್ಕುಳ್ಳಿರಿಸಿ ಕೇಳಿಕೆಯಂ ಮಾಡೆ || (೩-೯೮ ವ.)

ಸಂಸ್ಕೃತದ ಕೇಲಿ/ಕೇಳಿ ಎಂಬ ಪದಕ್ಕೆ ಆಟ ಕೇಲಿ ನಿವಾಸ, ಕುಣಿತ, ಭಜನೆ ಎಂಬ ಅರ್ಥಗಳು ಇವೆ.

ಇದೇ ಅಭಿಪ್ರಾಯವನ್ನು ಡಾ|| ಚಿದಾನಂದ ಮೂರ್ತಿಯವರೂ ತಳೆದಿದ್ದಾರೆ.[4] ಅಚ್ಚಗನ್ನಡದ ಕೇಳ್ ಎಂಬ ಧಾತುವಿಗೂ ಕೇಳಿಕೆಗೂ ಯಾವ ಸಂಬಂಧವೂ ಇಲ್ಲ. ಹರಿಹರನು ಇಂತಹ ನೃತ್ಯ ಹಾಗೂ ಗಾಯನಗಳ ವಿವರಣೆಯನ್ನು ವಿಫುಲವಾಗಿ ಬಳಸುತ್ತಾನೆ. ನರ್ತನವನ್ನು ಕಾಯಕವಾಗಿ ಹೊಂದಿದ ಕೇಳಿಕೆಯ ಮಹಾದೇವಿ[5] ಎಂಬ ಪದವನ್ನು ಅವನು ಬಳಸುತ್ತಾನೆ. ಕೇಳಿಕೆ, ಕೇಳಿಸು ಎಂಬ ಪದಗಳು ನರ್ತನ ಕ್ರಿಯೆಯನ್ನು ಸೂಚಿಸುತ್ತದೆ. ಅಲ್ಲದೇ ಆಡು ನುಡಿಯಲ್ಲಿ ಒಂದು ಕೇಳಿಕೆ ಮಾಡು ಎಂದು ಹೇಳುವ ಮಾತೂ ಇಂದಿಗೂ ಕೆಲವು ಗ್ರಾಂಗಳಲ್ಲಿ ಪ್ರಸಿದ್ಧವಾಗಿದೆ. ಒಟ್ಟಿನಲ್ಲಿ ಸಂಗೀತ, ನೃತ್ಯ ಸಮಾರಾಧನೆಯನ್ನೂ ಕೇಲಿಕೆ>ಕೇಳಿಕೆ ಎನ್ನಬಹುದು.

ಮಗಧ ಸುಂದರಿಯು ನೃತ್ಯ ಮಾಡುವ ವೇದಿಕೆಯನ್ನು ಚೂಪಾದ ಮೊನೆಗಳುಳ್ಳ ಸೂಜಿಯಿಂದ ನೆಟ್ಟುಸಿದ್ಧ ಪಡಿಸಿತ್ತು. ಆಕೆ ಆ ಮೊನೆಗಳು ತಾಗದಂತೆ ಪುಷ್ಪಾಂಜಲಿಯನ್ನು ಮಾಡಿದಳಂತೆ. ಸೌಂದರ್ಯವತಿಯೂ ತಾರುಣ್ಯವತಿಯೂ ಆದ ಮಗಧ ಸುಂದರಿ ವೇದಿಕೆಗೆ ಪ್ರವೇಶಿಸಿದರೆ ಆಕೆಯ ಪಾದ ಸ್ಪರ್ಶದಿಂದ ವೇದಿಕೆಯೇ ರೋಮಾಂಚನಗೊಂಡಂತೆ ಸೂಜಿಮೊನೆಗಳು ಮೂಡಿದ್ದುವಂತೆ. ಈಕೆ ಮಾಡಿದ ಪುಷ್ಟಾಂಜಲಿ ಒಂದೊಂದು ಚೂಪಾದ ಮೊನೆಗೂ ಸೇರಿಸಿ ಜೋಡಿಸಿ ಇಟ್ಟು ಒಂದಕ್ಕೊಂದು ಪೋಣಿಸಿದಂತೆ ಕಂಗೊಳಿಸಿದವು. ಹೀಗೆ ಪುಷ್ಪಾಂಜಲಿಯನ್ನು ಮಾಡಿದ ಮಗಧ ಸುಂದರಿಯು ಆ ಕುಸುಮಗಳ ನಡುವೆ ಭ್ರಮರಿಯಂತೆ ಕಂಡು ಬಂದಳಂತೆ. ಕವಿ ಹೀಗೆ ವರ್ಣಿಸುತ್ತಾನೆ.

ಬಾಡಿದಲಱಿಪೆ ನೆಱೆನಂ
ಜೂಡಿದ ಸೂಜಿಗಳನುಳಿಪಿ ತುಂಬಿಯೊಲವನೇ
ನಾಡಿದಳೊ ಸೂಜಿಗಳಕೂ
ರ್ಪೊಡೆದ ಮೊನೆಯಲರ ಮೇಲೆ ನಾನಾ ವಿಧದಿಂ (೧೦೦)

ನರ್ತಕಿಯ ಪಾದ ಕಮಲಗಳ ಸುಖಕ್ಕೆ ರೋಮಾಂಚನವಾದಂತೆ ನೆಟ್ಟಗೆ ನಿಂತ ಬಂಗಾರದ ಸೂಜಿಗಳ ಮೊನೆಗಳಿರುವಂತೆಯೇ ಪುಷ್ಪಾಂಜಲಿಯನ್ನು ಕೊಟ್ಟಳು. ಇವುಗಳ ಸುತ್ತ ಭ್ರಮರಿಗಳನ್ನೂ ಮಾಡುತ್ತ ನರ್ತಿಸುತ್ತಿರುವ ಮಗಧ ಸುಂದರಿ ದುಂಬಿಯಂತೆ ಕಂಡಳು.

ಮೇಲಿನ ಪದ್ಯದ ಮೂಲಕ ಕವಿ ಎರಡು ಉದ್ದೇಶಗಳನ್ನೂ ಸಾಧಿಸಿದ್ದಾನೆ. ನರ್ತನಕ್ಕೆ ವಸ್ತುವೂ ಆಗಬೇಕು; ಮುಂದೆ ಆಕೆ ಇಭ್ಯಕೇತುವನ್ನು ವರಿಸಲು ಮಧುಕರ ಪ್ರಣಯವೂ ಲಭಿಸಬೇಕು. ಮಗಧ ಸುಂದರಿಯ ಚಮತ್ಕಾರ ಪೂರಿತವಾದ ನೃತ್ಯವನ್ನು ಕವಿ ಮತ್ತೂ ವರ್ಣಿಸುತ್ತಾನೆ.

ಪರೆದ ತಿಳಕಮನೆಕಂಡೆಸೆ
ದಿರೆ ಕೊಟ್ಟುದಂಡ ಪಾದದುಗುರ್ಗನ್ನಡಿಯೊಳ್
ತರಳಾಕ್ಷಿ ತಿರ್ದಿದಳ್
ಚ್ಚರದಿಂ ಮತ್ತೊಂದು ಪಾದದುಂಗುಟದಿಂದಂ(೧೦೧)

ಮಗಧ ಸುಂದರಿ ತನ್ನ ಹಣೆಯ ತಿಲಕವನ್ನು ಸರಿಪಡಿಸಲೋ ಎಂಬಂತೆ ಒಂದು ಕಾಲನ್ನು ಎತ್ತಿ ಅದರ ಉಂಗುಟವನ್ನೇ ಕಡನ್ನಡಿಯನ್ನಾಗಿಸಿ ಇನ್ನೊಂದು ಕಾಲಿನ ಉಂಗುಟದಿಂದ ಕದಡಿದ ತಿಲಕವನ್ನು ಸರಿಪಡಿಸಿಕೊಳ್ಳುತ್ತಾಳೆ. ಇದು ಕವಿಯ ಆಶಯ ಕರಣಗಳಲ್ಲಿ ಲಲಾಟ ತಿಲಕ[6]ವೆಂಬ ಕರಣವುಂಟು. ಆ ಮಾದರಿಯಲ್ಲಿ ಕವಿ ಹೀಗೆ ಕಲ್ಪಿಸಿರಬಹುದು. ಲಲಾಟತಿಲಕಕರಣದಲ್ಲಿ ಒಂದು ಕಾಲನ್ನು ವೃಶ್ಚಿಕದಲ್ಲಿಟ್ಟು ಅದರ ಹೆಬ್ಬೆರಳಿನಿಂದ ಹಣೆಯನ್ನು ಮುಟ್ಟುವುದು ಇದೆ. (ಚಿತ್ರ ಪಕ್ಕದ ಪುಟದಲ್ಲಿ) ಈ ತರಹದ ಕರಣಗಳನ್ನು ಪ್ರದರ್ಶಿಸಬೇಕಾದರೆ ನರ್ತಕಿಗೆ ಅತ್ಯಂತ ಹಗುರ ಶರೀರ, ಸ್ಥಿತಿ ಸ್ಥಾಪಕತೆ, ಸೊಂಟದ ಸರಾಗ ಚಲನೆಗಳು ಅವಶ್ಯಕ. ಅಲ್ಲದೇ ಇಂತಹ ವಿಶೇಷಕರಣಗಳ ಸಮಯೋಚಿತ ಬಳಕೆಯನ್ನು ಆಕೆ ಚೆನ್ನಾಗಿ ಅರಿತಿರಬೇಕಾಗುತ್ತದೆ.

ಮಗಧ ಸುಂದರಿ ಸಮ ಹಾಗೂ ವಿಷಮವೆಂಬ ಎರಡೂ ತೆರನ ನೃತ್ಯಗಳನ್ನು ಅತ್ಯಂತ ಮನೋಹರವಾಗಿಯೂ, ಕೌತುಕಮಯವಾಗಿಯೂ ಪ್ರದರ್ಶಿಸಿದಳು ಎಂದು ಮುಂದಿನ ವಚನದಲ್ಲಿದೆ.

ಪಾದಗಳು ಸಮನಾಗಿದ್ದು ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ, ಕೈಗಳಲ್ಲಿ ಲತಾಕರ ಹಸ್ತವನ್ನು ಪ್ರದರ್ಶಿಸುವುದು ಸಮನೃತ್ಯ.[7] ಇದನ್ನು ನೃತ್ಯಾರಂಭ ಹಾಗೂ ಅತ್ಯಂತಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ವಿಷಮ ನೃತ್ತದಲ್ಲಿ ಹೆಚ್ಚಾಗಿ ಲಾಗ, ತಿರುಗುವಿಕೆ, ಹಗ್ಗದ ಮೇಲೆ ನಡೆಯುವುದು, ಸುತ್ತುವುದು ಇತ್ಯಾದಿ ಚಲನೆಗಳು ಬರುತ್ತವೆ. ಇವುಗಳನ್ನು ಈಗಲೂ ದೊಂಬರೂ ಮಾಡುತ್ತಾರೆ. ಸರ್ಕಸ್ಸ್‌ಗಳಲ್ಲೂ ಈ ತರಹದ ವಿಷಮ ಚಲನೆಗಳನ್ನು ಕಾಣಬಹುದು. ಸೋಮಶ್ವೇರನು ಮಾನಸೋಲ್ಲಾಸ[8]ದಲ್ಲಿ ಆರು ತರಹ ನರ್ತಕರಲ್ಲಿ ವಿಷಮ ಪ್ರಕಾರದ ನರ್ತನವನ್ನು ಹೇಳುತ್ತಾನೆ. (ಶಾಂತಿ ಪು. ನೃತ್ಯ ಪ್ರಸಂಗವನ್ನೂ ನೋಡಿ.)

18_6_PP_KUH

ಸಮ ಹಾಗೂ ವಿಷಮ ಎಂಬ ಎರಡು ತೆರನ ನರ್ತನವನ್ನೂ ಮಾಡುತ್ತಿರುವ ಮಗಧ ಸುಂದರಿಯ ನೃತ್ಯವನ್ನು ನೃತ್ಯದ ಪರಿಭಾಷೆಗಳಾದ ಕರಣ, ಅಂಗಹಾರ ಹಸ್ತ, ದೃಷ್ಟಿ, ಚಾಲಿ, ಚಾಳೆಯ, ಮಂಡಲ ಮುಂತಾದವನ್ನು ಬಳಸಿ ಕಾವ್ಯಮಯವಾಗಿ ವರ್ಣಿಸಿದ್ದಾನೆ.

ಅಂತು ಸಮ ವಿಷಮ ಮೆಂಬೆರಡುಂತೆಱದ ನೃತ್ಯ ಮತ್ಯಂತ ಮನೋಹರ ಮುಂ ಕೌತುಕ ಕರಮುಮಾಗೆ ಮಗಧ ಸುಂದರಿ ಪಿರಿದು ಬೇಗ ಮಾಡುತ್ತ ಮಿಮಯ್ಮಱೆದು ನೋಡುತ್ತ ಮಿರ್ದು ನಯನ ಹಂಸಂಗಳ್ಗೆ ಪಯೋವರ್ಷೆವಯದ ಪಯಂಗಳುಮಂ ಬೆಳಂಗಿರ್ಪ ಪೊಳೆಯಕ್ಕೆ ಚಾಳಯಮಾದ ಚಾಳೆಯಂಗಳುಮಂ ಚತುಃಷಷ್ಟಿ ಕರ್ಮಂಗಳಾಲಂಬ ಹಸ್ತಮಾದ ಹಸ್ತಗಳುಮುಂ ಭಾವ ರಸಾಕೃಷ್ಠಿಗಳಾದ ದೃಷ್ಟಿಗಳುಮಂ ಸರಸ್ವತಿಗಳಂಕರಣಂಗಳಾದ ಕರಣಗಳುಮಂ ಶೃಂಗಾರ ಶ್ರೀಗೆ ಹಾರಮಾದಂಗಹಾರಂಗಳುಮಂ ನರ್ತನಕ್ಕೆ ಚಾರುತ್ಪಂಬಡೆದ ಚಾರಿಗಳುಮಂ ನೃತ್ಯ ವಿದ್ಯಾದೇವತೆಗೆ ಮಂಡನಮಾದ ಮಂಡಲಂಗಳುಮಂ ಸುಲೇಖೆಗೆ ನೆಲೆಯಾದ ನಿಲುವುಗಳಮನವರ ವರ ಬಲದೆಡೆಗಳೊಳೆ ಪೊಸಯಿಸಿ ಪೆಸರಿಟ್ಟು ತಾಳದೊಳ್ತೊಗಿದಂತೆ ವಾದ್ಯದೊಳಳೆದಂತೆ ನಿಯತಮಾದ ನೃತ್ಯಂ ನೃತ್ಯಶಾಸ್ತ್ರಮನಭಿನಯಿಸು ವಂತಾದುದೀ ಕಪೋತಕರ ವಿಕೀರ್ಣ ಕನಕ ಸೂಚೀ ಸಂಚಯ ಸ್ಥಾಪನೆ ಕೌತುಕ ಕ್ರಿಯಾ ಕೌಶಲ ಮುಮೀ ಪುಷ್ಪಾಂಜಲೀ ಕ್ಷೇಪಣ ನೈಪುಣ್ಯಮುಮೀ ವಿಷಮ ವಿದ್ಯಾಸಾಧನ ಮುಂ ಸರಸ್ವತಿಗಂ ಸಾರದೆಂದು ಕುಮಾರಂ ಮೆಚ್ಚಿ ಮೆಚ್ಚಿಂಗೆ ಮೆಚ್ಚು ಗುಡುವಂತೆ ಮಹೀನಾಥನಾ ಕುಮಾರಿಯುಮಂ ಕುಡೆ ಮಹಾ ವಿಭೂತಿಯಿಂ ಮದುವೆನಿಂದು (೧೦೧ .)

ಮಗಧ ಸುಂದರಿಯು ತನ್ನ ನೃತ್ಯದಲ್ಲಿ ಪ್ರಯೋಗಿಸಿದ ಹಸ್ತಗಳನ್ನೂ, ರಸದೃಷ್ಟಿಗಳನ್ನೂ, ಕರಣಗಳನ್ನೂ, ಅಂಗಹಾರಗಳನ್ನೂ, ಚಾರಿಗಳನ್ನೂ, ನಾಟ್ಯದಿ ದೇವತೆಯಾದ ಸರಸ್ವತಿಗೆ ಅಲಂಕರಣ ಸಾಧನಗಳೆಂದು ಶ್ಲೇಷೆಯಿಂದ ಹೇಳುತ್ತಾನೆ. ಮೇಲಿನ ನೃತ್ಯ ಪರಿಭಾಷೆಯನ್ನು ಅಜಿಪು ನೃತ್ಯ ಪ್ರಸಂಗದಲ್ಲಿ ವರ್ಣಿಸಲಾಗಿದೆ.

ನೇಮಿಚಂದ್ರ ತನ್ನ ಹಿಂದಿನ ಕವಿಗಳಿಗಿಂತ ನೃತ್ಯ ಪ್ರಸಂಗವನ್ನು ಹೆಚ್ಚು ಕಲಾವಂತಿಕೆಯಿಂದ ನೋಡಿದ್ದಾನೆ. ತನ್ನ ವರ್ಣನೆಯಲ್ಲಿ ಶಾಸ್ತ್ರಾಂಶಗಳನ್ನೂ ಆತ ತಂದರೂ ರಸಾಭಿಜ್ಞತೆಗೆ ಕೊರತೆ ಮಾಡಿಲ್ಲ.

() ಲೀಲಾವತೀ ಪ್ರಬಂಧದಲ್ಲಿ ನೇಮಿಚಂದ್ರನು ಮಹೇಂದರ ಜಾಲದ ವರ್ಣನ ಭಾಗದಲ್ಲಿ ನೃತ್ಯ ಪ್ರಸಂಗವನ್ನು ಅತ್ಯಂತ ವಿವರವಾಗಿ ಕೊಡುತ್ತಾನೆ.

ಇಲ್ಲಿ ನರ್ತಿಸುವ ನರ್ತಕಿಯ ಹೆಸರು ರಂಭೆ, ಆಕೆ ಜವನಿಕೆಯನ್ನು ಸರಿಸಿ ಪುಷ್ಪಾಂಜಲಿಯನ್ನು ಮಾಡಿ (ನೋಡಿ ೨.ಊ) ಕಣ್ಣುಗಳಲ್ಲಿ ರಸ, ಭಾವಗಳನ್ನೂ ತುಂಬಿ ರಂಗವನ್ನು ನರ್ತಿಸುತ್ತ ಪ್ರವೇಶಿಸುತ್ತಾಳೆ. ಕೈಶಿಕೀ ವೃತ್ತಿಯನ್ನೇ ಅವಲಂಬಿಸಿ ವಿಲಾಸದಿಂದ ಕೂಡಿದ ಆಕೆಯ ಶೃಂಗಾರಪೂರ್ಣ ಆಂಗಿಕ, ಭಂಗಿಗಳು ಲಾಸ್ಯವನ್ನೇ ಪ್ರಕಟಿಸುತ್ತಿತ್ತು.

ಆಂಗಿಕಮಾಸುರಕೈಶಿಕೆ
ಸಂಗಳಿಸಿದ ಭಂಗಿ ಭಾವ ಮೊಪ್ಪಿಸಿದೊಪ್ಪಂ
ಶೃಂಗಾರಮಿತ್ತ ನಯಮ
ರಾಂಗನೆಗಮರ್ದುದು ವಿಳಾಸ ಲಾಸ್ಯೋದಯದೊಳ್(೧೦೮)

ಸ್ತ್ರೀಯರ ಸ್ವಾಭಾವಿಕ ಹಾವ ವಾದ ವಿಲಾಸವನ್ನು (ಹಿಂದೆ ಚರ್ಚಿಸಿದೆ) ರಂಭೆ ತನ್ನ ಲಾಸ್ಯದಲ್ಲಿ ತೋರುತ್ತಾಳೆ. ಮುಂದೆ ಆಕೆ ಅಂಗ, ಉಪಾಂಗ ಹಾಗೂ ಪ್ರತ್ಯಾಂಗಗಳ ಅಭಿನಯವನ್ನು ಆರಂಭಿಸುತ್ತಾಳೆ. ಅಂಗಾಭಿನಯದಲ್ಲಿ ಮೊದಲಿಗೆ ಶಿರೋಭೇದವನ್ನು ಮಾಡಿದುದನ್ನು ಕವಿ ಒಂದು ಸುಂದರ ಉಪಮೆಯೊಂದಿಗೆ ಹೇಳುತ್ತಾನೆ: ನೀರಿನಲ್ಲಿ ಅರಳಿದ ತಾವರೆ ಗಾಳಿ ಬಂದ ಕಡೆ ವಾಲುವಂತೆ, ರಸಭಾವವನ್ನು ಸೂಸುತ್ತಿರುವ ಮುಖವು ಅಂಚಿತ[9] ಹಾಗೂ ಆಲೋಲಿತ ಶಿರ[10]ದೊಡನೆ ಬಾಗುತ್ತ ನೋಟಕರ ಮನವನ್ನು ಒಲಿಸುತ್ತಿತ್ತು.

ಎಲರಲೆಪದಿನೊಲೆದಾಡುವ
ಜಲರುಹಮನೆ ಭಾವರಸ ಮನೋದ ವಿಸಿತಾಸ್ಯಂ
ಕೆಲಕೆ ನಸುಬಾಗುವಂಚಿತ
ವಲೆಗುಂ ಮನ ಮೊಲೆವ ಲೋಳಿತಂ ನಚ್ಚಣಿಯಾ(೧೧೦)

ಕವಿ ಇಲ್ಲಿ ನರ್ತಕಿ ಎಂದು ಬಳಸದೆ ನಚ್ಚಣಿ ಎಂದು ತದ್ಬವವನ್ನು ಬಳಸಿರುವುದೂ ಪ್ರಶಂಸಾರ್ಹ. ರಂಭೆಯ ಚತುರ್ವಿಧ ಅಭಿನಯಗಳನ್ನು (ನೋಡಿ ಅನುಬಂಧ ಅ. ಪರಿಭಾಷೆ) ಮನೋರಾಜನ ಅಂಗಗಳಿಗೆ ಕವಿ ಹೋಲಿಸುತ್ತಾನೆ. ಆಕೆಯ ದೃಷ್ಟಿಭೇದವನ್ನೂ ಬೆಳದಿಂಗಳಿನಲ್ಲಿ ಹೊಳೆವ ನೈದಿಲೆಗೆ ಹೋಲಿಸುತ್ತಾನೆ. (ಪ.೧೧೧, ೧೧೨, ೧೧೩)

ಶೃಂಗಾರ ರಸವನ್ನೂ, ಲಾಸ್ಯವನ್ನೂ ಪ್ರದರ್ಶಿಸಲು ಹುಬ್ಬುಗಳ ಚಲನಾವೈವಿಧ್ಯವು ಅತ್ಯಂತ ಅವಶ್ಯ. ಆಕೆ ಏಳು ತರಹದ ಹುಬ್ಬಿನ ಭೇದಗಳನ್ನು ಮಾಡುತ್ತಿದ್ದರೆ, ಅದು ನೀರಿನ ಅಲೆಗಳ ತಾಳಕ್ಕೆ ತಕ್ಕಂತೆ ಅಲುಗಾಡುವುದು ಜಲಸಸ್ಯದಂತೆ ಎನ್ನುವುದು ಚೆಲುವಾದ ಮಾತು. ಮುಂದಿನ ಪದ್ಯಗಳಲ್ಲಿ ನರ್ತಕಿಯು ಮಾಡಿದ ಗಲ್ಲ ಹಾಗೂ ನಾಸಿಕಾ ಭೇದಗಳನ್ನೂ ಹೇಳುತ್ತಾನೆ. (ಹಿಂದೆ ಚರ್ಚಿಸಿದೆ.)

ಮುಂದಿನ ಪದ್ಯದಲ್ಲಿ ಕವಿ ರಂಭೆಯು ಬಳಸುವ ಹಸ್ತದ ಬಗ್ಗೆ ಹೇಳುತ್ತಾನೆ:

ನಸು ನಳಿದು ನಿಮಿರೆ ತೋಳ್ಗಳ್
ಲಸಿತ ತ್ರಿಪತಾಕದಿಂ ಲತಾಕರ ಮೆಸೆಯಲ್
ಪೊಸದಳಿರಂ ಪೊತ್ತೆಳಲತೆ
ಮಿಸುಗುವ ಕುಡಿಯೆರಡನೆ ೞಲೆ ಬಿಟ್ಟವೊಲೆಸೆದಳ್(೧೧೮)

ಲತಾಕರ ಹಸ್ತವು ಒಂದು ನೃತ್ತಹಸ್ತ. ಇದನ್ನು ಲತಾಖ್ಯ ಎಂದೂ ಕರೆಯುತ್ತಾರೆ. ನೃತ್ತ ಹಸ್ತವು ಕೇವಲ ನೃತ್ತಾಭಿನಯಗಳಲ್ಲಿ ಬಳಸುವಂಹುದು. ಆದರೂ ಇವುಗಳನ್ನೂ ಅಭಿನಯದಲ್ಲೂ ವಿನಿಯೋಗಿಸಲಾಗುತ್ತದೆ. ಎರಡು ಅಸಂಯುತ ಹಸ್ತಗಳ ವಿವಿಧ ರೀತಿಯ ಜೋಡಣೆಯೇ ನೃತ್ತಹಸ್ತ.[11] ಇವು ಮೂವತ್ತು ಎಂದು ಭರತನ ಮತ.

ತೋಳುಗಳನ್ನು ಚಾಚಿ ಲತೆಯಂತೆ ಕೈಗಳನ್ನು ಇಳಿಬಿಟ್ಟು ತ್ರಿಪಾತಕ ಹಸ್ತ ಹಿಡಿಯುವುದನ್ನು ಲತಾಕರ ಹಸ್ತ ಎನ್ನುತ್ತಾರೆ. (ವೈಷ್ಣವ ಸ್ಥಾನಕದಲ್ಲಿ ಲತಾಕರ ಹಸ್ತವನ್ನು ಪಕ್ಕದ ಪುಟದಲ್ಲಿ ತೋರಿಸಲಾಗಿದೆ) ತ್ರಿಪತಾಕಾಹಸ್ತವು ಐದೂ ಬೆರಳುಗಳನ್ನು ಸಮವಾಗಿ ಚಾಚಿ, ಉಂಗುರ ಬೆರಳನ್ನು ಮಡಿಸಿದಾಗ ಉಂಟಾಗುವುದು.[12]

ರಂಭೆಯು ನರ್ತಿಸುತ್ತ ಕೈಗಳಲ್ಲಿ ಲತಾಕರವನ್ನು ಪ್ರದರ್ಶಿಸುತ್ತಿದ್ದರೆ, ಅವು ಕುಡಿಬಿಟ್ಟ ಲತೆಯಂತೆ ಕಂಗೊಳಿಸುತ್ತಿತ್ತು ಎಂಬ ಕವಿಯ ಕಲ್ಪನೆ ಮನೋಜ್ಞವಾಗಿದೆ. ನೀಡಿದ ಕೈಗಳನ್ನು ಲತೆಗೂ ತ್ರಿಪತಾಕವನ್ನು ತೋರುವ ಬೆರಳುಗಳನ್ನು ಚಿಗುರಿಗೂ ಕವಿ ಹೋಲಿಸುತ್ತಾನೆ. ಅಸಂಯುತ ಹಸ್ತವಾದ ಅರ್ಧಪಾತಕ[13] ಚಿಗುರನ್ನು ಅಭಿನಯಿಸಲು ವಿನಿಯೋಗಿಸುವ ಹಸ್ತ.[14] ಆದರೂ ಕವಿಯ ಕಲ್ಪನೆಯನ್ನೂ ಒಪ್ಪಬಹುದಾಗಿದೆ.

ಮುಂದಿನ ಪದ್ಯದಲ್ಲಿ ಕವಿಯು ನರ್ತಕಿಯು ಬಳಸಿದ ಕರಿಹಸ್ತದ ಬಗ್ಗೆ ಹೇಳುತ್ತಾನೆ:

ಹಸ್ತಗಳ ಬಳಕೆಯಲ್ಲಿ ನೇಮಿಚಂದ್ರ ವಿಶೇಷವಾದ ಆಸಕ್ತಿಯನ್ನು ತೋರಿದ್ದಾನೆ. ಉಳಿದ ಕವಿಗಳು ಕೇವಲ ಹಸ್ತಾಭಿನಯ ಅರುವತ್ತು ನಾಲ್ಕು ಹಸ್ತಂಗಳ್ ನೃತ್ತಹಸ್ತ, ಸಂಯುತಾಸಂಯುತ ಎಂದು ಉಲ್ಲೇಖಿಸಿದ್ದರೆ ನೇಮಿಚಂದ್ರ ಹಾಗೆ ಮಾಡದೇ, ಪ್ರತ್ಯೇಕವಾಗಿ ನೃತ್ತಹಸ್ತದ ಬಳಕೆಯನ್ನು ಹೆಸರಿಸಿ ಕಾವ್ಯಾಂಶದೊಂದಿಗೆ ಸಮೀಕರಿಸಿ ವಿವರಿಸಿದ್ದಾನೆ. ಇದು ಆತನಿಗೆ ಇದ್ದ ನಾಟ್ಯಾಂಶಗಳ ಪರಿಜ್ಞಾನವನ್ನು ತೋರುವಂತಾಗಿದೆ.

ತೊಳಗುವ ನಗೆಮೊಗಮಿದು ನಿ
ರ್ಮಳವಲ್ಲದು ಬರ್ದಿರೆ ಮ್ಮು ಮಂ ಪೋಲ್ತೊಡೆನು
ತ್ತಳೆಯಳ ಕನ್ನವುರದ ನವ
ನಳಿನಮನಲೆವಂತೆ ಕರಿಕರಂ ಕರಮೆಸಗುಂ(೧೯೯)

ತರುಣಿಯಾದ ನರ್ತಕಿಯ ಕರ್ಣಾಭರಣದ ಹೊಳಪನ್ನು ಆಕೆ ಹಿಡಿದ ಕರಿ ಹಸ್ತವು ಸ್ಪಧಿಸುವಂತಿತ್ತು ಎಂದು ಈ ಪದ್ಯದ ಸಾರಾಂಶ.

ಒಂದು ಕೈಯನ್ನು ಕಟಕಾ ಮುಖ ಹಸ್ತ[15]ದಲ್ಲಿ ಕಿವಿಯ ಹತ್ತಿರ ಹಿಡಿದು ಮತ್ತೊಂದು ಕೈಯನ್ನು ಎರಡೂ ಪಾರ್ಶ್ವಗಳಲ್ಲಿ ಲತಾ ಹಸ್ತದಂತೆ ನಿಲ್ಲಿಸುವುದು ಕರಿಹಸ್ತ(ನೀಡಿ ಪಕ್ಕದ ಪುಟ) ಕರಿಕರ ಹಸ್ತದ ಮೂಲಕ ಕವಿ ನರ್ತಕಿಯ ಮುಖ ಕಮಲ, ಕರ ಕಮಲ ಹಾಗೂ ನೃತ್ಯಹಸ್ತಗಳನ್ನು ಜಾಣ್ಮೆಯಿಂದ ವರ್ಣಿಸಿದ್ದಾನೆ. ನಾಟ್ಯ, ನೃತ್ತ ಹಾಗೂ ನೃತ್ಯ ಈ ಮೂರಕ್ಕೂ ಅಭಿನಯದ ವಾಹಕಗಳು, ಹಸ್ತಗಳು, ಪ್ರೇಕ್ಷಕರಿಗೂ, ನಾಟಕ ಕರ್ತರಿಗೂ ಸಂವಹನ ಕಾರ್ಯವನ್ನು ನಡೆಸುವ ಈ ಹಸ್ತಗಳ ಬಗ್ಗೆ ಭರತ ಅತ್ಯಂತ ಪ್ರಾಮುಖ್ಯವಿತ್ತು ನಾಟ್ಯಶಾಸ್ತ್ರದಲ್ಲಿ ವಿವರಿಸಿದ್ದಾನೆ.

ಕೈಯ(ಹಸ್ತದ) ಅಭಿನಯವಿಲ್ಲದೇ ನಾಟ್ಯಾರ್ಥದ ಅಭಿನಯವಿಲ್ಲ. ಅವುಗಳ ವೈಶಿಷ್ಟ್ಯವನ್ನು ನೋಡಿ ಆದಷ್ಟು ಮಟ್ಟಿಗೆ ಹೇಳಿದ್ದೇನೆ. ಇದಲ್ಲದೆ ಅರ್ಥಕ್ಕೆ ಅನುಗುಣವಾಗಿ ವ್ಯವಹಾರದಲ್ಲಿ ಜನರು ಹಸ್ತಗಳನ್ನು ಬಳಸುತ್ತಾರೆ. ರಸಭಾವಗಳನ್ನು ನೋಡಿ, ಅವಕ್ಕೆ ಅನುಗುಣವಾದ ತನಗೆ ಇಷ್ಟವಾದಂತೆ ಹಸ್ತಾಭಿನಯವನ್ನು ಪ್ರಯೋಗಿಸಬೇಕು. ದೇಶ, ಕಾಲ, ಅರ್ಥ ಹಾಗೂ ಪ್ರಯೋಗ ಇವೆಲ್ಲವನ್ನೂ ನೋಡಿ ಸ್ತ್ರೀಯರೂ, ಪುರುಷರೂ ಹಸ್ತಾಭಿನಯವನ್ನು ಮಾಡಬೇಕು. ಹಸ್ತಾಭಿನಯವನ್ನು ಮಾಡುವಾಗ ಲೋಕೋಪಚಾರವನ್ನು (ಕರಣ, ಪಾದದ ಭಂಗಿ) ಕರ್ಮವನ್ನೂ, ಪ್ರಚಾರಯುಕ್ತಿಯನ್ನೂ, ಬಳಸಿದ ಹಸ್ತಯುಕ್ತವಾಗಿದೆಯೇ ಎಂಬುದನ್ನು, ಸ್ಥಾನವನ್ನೂ, ಕ್ರಿಯೆಯನ್ನೂ ತಜ್ಞರು ಅರಿತು ಮಾಡಬೇಕು. ಹಸ್ತಪ್ರಚಾರ ಭಾವವನ್ನು ಸಮಂಜಸವಾದ ಕಣ್ಣು, ಹುಬ್ಬು ಹಾಗೂ ಮುಖ ಲಕ್ಷಣಗಳಿಂದ ಸೂಚಿಸಬೇಕು. ನೃತ್ತ ಹಸ್ತಗಳನ್ನೂ ವಿಶೇಷವಾಗಿ ಕರಣಗಳಲ್ಲಿ ಪ್ರಯೋಗಿಸಬೇಕು. ನಾಟ್ಯದಲ್ಲಿಯೇ ಆಗಲೀ ನೃತ್ಯದಲ್ಲಿಯೇ ಆಗಲೀ ಮುಖ್ಯವಾಗಿ ಹಸ್ತಗಳ ಸಂಕೇತವನ್ನು ತಿಳಿದಿರಬೇಕು[16] ಹೇಳಿಕೆಯ ಸಮರ್ಥನೆಯಾಗಿದೆ ನೇಮಿಚಂದ್ರನ ನಿರೂಪಣೆ. ಮುಂದಿನ ಪದ್ಯದಲ್ಲಿ ಕವಿಯು ನರ್ತಕಿ ತನ್ನ ನೃತ್ಯದಲ್ಲಿ ಬಳಸಿದ ವಕ್ಷಭೇದಗಳನ್ನೂ ಹೇಳುತ್ತಾನೆ.

ಗರ್ಭೇಶ್ವರಿಯ ಕುಚಂಗಳ್
ನಿರ್ಭರದಿಂದುರಮನೆಯ್ದೆ ಪರ್ಬಿರೆ ಸಮಸಂ
ದರ್ಭಾಹಿತ ಕಂಪಿತ ವರ
ನಿರ್ಭುಗ್ನಾಭುಗ್ನ ವಕ್ಷಮೇಂ ವೃಧೆಯಾಯ್ತೋ(೧೨೦)

ನಾಟ್ಯಶಾ.ದ ಪ್ರಕಾರ ವಕ್ಷಭೇದವು[17] ಸಮ, ಉದ್ದಾಹಿತ, ಕಂಪಿತ, ಆಭುಗ್ನ, ನಿರ್ಭುಗ್ನ, ಸಂದಭಾಹಿತ ಪ್ರಾಸಸ್ಥಾನದಲ್ಲಿದೆ. ಆದರೆ ಸಂ|| ದುದ್ವಾಹಿತ ಕಂಪಿತವರ ಎಂದಾದರೆ ವಕ್ಷಭೇದಗಳು ಐದು ವಿಧವಾಗಿ ಅರ್ಥಸಂಭಾವ್ಯವಾಗುತ್ತದೆ.

ಮುಂದಿನ ಪದ್ಯದಲ್ಲಿ ನರ್ತಕಿಯ ನಿತಂಬ ಚಲನಾ ಭೇದಗಳನ್ನು ಕವಿ ಸೂಚಿಸುತ್ತಾನೆ.

ವೃತ್ತಸ್ತನದೊಡನೊಡನ
ತ್ತಿತ್ತ ಸುವರೆಯಾಗೆ ನೃಸುರ ನೇತ್ರಾಳಿ ಪರಾ
ವೃತ್ತಾ ರೋಚಿತ ಕಂಪನಿ
ವೃತ್ತೋನ್ನತ ಘನನಿತಂಬಮಸೆದುದು ನಟಿ ಯಾ (ಲೀಲಾವ. ೧೨೧)

ನರ್ತಕಿಕಯು ಪರಾವೃತ್ತ, ರೋಚಿತ, ಕಂಪ, ನಿವೃತ್ತ, ಉನ್ನತ ಹಾಗೂ ಘನ ಈ ಆರು ನಿತಂಬ ಭೇದಗಳನ್ನು ತನ್ನ ನೃತ್ಯದಲ್ಲಿ ಪ್ರದರ್ಶಿದಳೆಂದು ಕವಿಯ ಅಭಿಪ್ರಾಯ. ಶಾಸ್ತ್ರಗ್ರಂಥಗಳಾದ ನಾಟ್ಯಶಾ. ನೃತ್ಯಾಯ. ಲಾಸ್ಯರಂಗಗಳಲ್ಲಿ ನಿತಂಬ ಭೇದದ ಪ್ರಸ್ತಾಫವಿರುದಿಲ್ಲ. ಶಾರ್ಙ್ಗಾದೇವ ನಿತಂಬ ವರ್ತನ[18]ವೆಂದು ಉಲ್ಲೇಖಿಸಿದರೂ ಅದು ಕವಿ ತಿಳಿಸಿರುವ ಭೇದಕ್ಕಿಂತ ಭಿನ್ನ. ಮುಂದೆ, ರಂಭೆಯು ತನ್ನ ನೃತ್ಯದಲ್ಲಿ ಬಳಸುವ ಪಾದಚಲನೆಗಳನ್ನು ಕವಿಯು ಆಕೆಯ ಶರೀರ ಸೌಂದರ್ಯದ ಲಾವಣ್ಯದೊಡನೆ ಸಮೀಕರಿಸಿ ಚಮತ್ಕಾರವಾಗಿ ಹೇಳುತ್ತಾನೆ.

ಸತಿ ಜಘನದ ಭರದಿಂದೇ
ಕತಲದೊಳಿರಲಱಿಯದಗ್ರತಸಂಚಾರಾಂ
ಚಿತ ಕುಂಚಿತ ಸೂಚ್ಯುದ್ಫ
ಟ್ಟಿತಮಂಪಡೆದಂತೆ ಪಾದಪಲ್ಲವಮೆಸೆಗುಂ|| (ಲೀಲಾವ. ೧೨೧)

ನರ್ತಕಿ ತನ್ನ ಜಘನದ ಭಾರವನ್ನು ತಾಳಲಾರದೆ ಒಂದು ಕಡೆಗೆ ಓಲಿ ಪಾದಗಳಲ್ಲಿ ಒಂದನ್ನು ಸ್ವಲ್ಪ ದೂರ ಇಟ್ಟು ಸಡಿಲಿಸಿ ನಿಂತು ಅಗ್ರತಲಸಂಚರ ಪಾದ[19] ಭೇದವನ್ನು ಮಾಡುತ್ತಾಳೆ. ಉಳಿದ ಭೇದಗಳಾದ ಅಂಚಿತ, ಕುಂಚಿತ, ಸೂಚಿ ಹಾಗೂ ಉದ್ಘಟಿತ ಭೇದಗಳನ್ನು ಆಕೆಯು ತೋರುತ್ತಾಳೆ ಎಂದು ಹೇಳುತ್ತಾನೆ. ಭರತ ಐದು ಪಾದಭೇದಗಳನ್ನೇ ಹೇಳಿದರೂ ಆತ ಸೂಚಿ ಎಂಬ ಪಾದ ಭೇದವನ್ನು ಹೇಳುವುದಿಲ್ಲ.[20] ಅದರ ಬದಲು ಸಮ ಪಾದವನು[21] ಸೂಚಿಸುತ್ತಾನೆ. ಸಂಗೀರದಲ್ಲಿ ಶಾರ್ಙ್ಗದೇವನು ಸೂಚಿ ಪಾದ ಭೇದವನ್ನು ಸೇರಿಸಿ ಆರು ಭೇದಗಳನ್ನು ಸೂಚಿಸುತ್ತಾನೆ[22] (ಎಡಗಾಲನ್ನು ಸಮಸ್ಥಾನದಲ್ಲಿಟ್ಟು ಬಲಗಾಲಿನ ಹಿಮ್ಮಡಿಯನ್ನು ಎತ್ತಿ ಅಂಗುಷ್ಠದಿಂದ ನೆಲವನ್ನು ಮುಟ್ಟುವ ಕ್ರಿಯೆ ಸೂಚಿಪಾದ[23]) ರಂಭೆಯ ಅಗ್ರತಲ ಸಂಚರ ಪಾದಭೇದದ ಭಂಗಿಗೆ ನೋಡಿ ರೇಖಾಚಿತ್ರ. ಪು.೧೬೧. ಚಿತ್ರ೬ ಮುಂದಿನ ಪದ್ಯದಲ್ಲಿ ನರ್ತಕಿಯ ಸ್ಥಾನಕಗಳನ್ನು ಕುರಿತು ಹೇಳಲಾಗಿದೆ. ಶಾಸ್ತ್ರಗಳ ಮತದಂತೆ ಸ್ತ್ರೀ ಸ್ಥಾನಕಗಳು ಏಳು.[24]

ನೃತ್ತ ಅಥವಾ ನೃತ್ಯದಲ್ಲಿ ಸ್ತ್ರೀಯರ ಆರಂಭ ಸ್ಥಾನಕಗಳು ಎಂದರೆ ಆಯತ, ಅವಹಿತ್ಥ, ಅಶ್ಪಕ್ರಾಂತ, ಗತಾಗತ, ವಲಿತ, ಮೊಟ್ಟಿತ ಹಾಗೂ ವಿನಿವರ್ತಿತ. ಇವುಗಳಲ್ಲಿ ರಂಭೆ ಅವಹಿತ್ಥ ಸ್ಥಾನಕದಲ್ಲಿ ಸುರಸಭೆಯನ್ನು ಗೆದ್ದಳು ಎಂದು ಕವಿ ಹೇಳುತ್ತಾನೆ.

ಅವಹಿತ್ಥ ಸ್ಥಾನಕವು ಆಯತದಂತೆಯೇ ಇದ್ದು ಪಾದಗಳು ಅದಲು ಬದಲಾಗಿರುತ್ತವೆ. ಆಯತ ಸ್ಥಾನದಲ್ಲಿ ಬಲಗಾಲವನ್ನು ಸ್ವಾಭಾವಿಕವಾಗಿ ಇರಿಸಿ, ಎಡಗಾಲನ್ನು ಒಂದು ತಲ ದೂರದಲ್ಲಿ ಓರೆಯಾಗಿ ನಿಲ್ಲಿಸಿರುತ್ತದೆ. ಎದೆಯನ್ನು ನೆಟ್ಟಗೆ ಮಾಡಿ ಬಲಗೈಯನ್ನು ಸೊಂಟದ ಮೇಲೂ ಎಡಗೈಯನ್ನು ಲತಾಹಸ್ತವನ್ನಾಗಿಯೂ ಇರಿಸಲಾಗುತ್ತದೆ. ಮುಖ ಪ್ರಸನ್ನವಾಗಿರುತ್ತದೆ. ಇದನ್ನು ರಂಗ ಪ್ರವೇಶದ ನಂತರ, ಪುಷ್ಪಾಂಜಲಿ ಅರ್ಪಿಸುವಾಗ, ಪ್ರೀತಿ ಹಾಗೂ ಕೋಪಗಳ ಅಭಿನಯಕ್ಕೆ ಬಳಸುವಂತಹದು. ಅವಹಿತ್ಥಸ್ಥಾನವೂ ಆಯತದಂತೆಯೇ ಇದ್ದು, ಕಾಲು ಹಾಗೂ ಕೈಗಳು ಅದಲು ಬದಲಾಗಿರುತ್ತವೆ. ಇದರ ಅಧಿದೇವತೆ ದುರ್ಗೆ. ಪ್ರೀತಿ, ಆಶ್ಚರ್ಯ, ಪ್ರಿಯಾಗಮನ ಹಾಗೂ ಕ್ರೀಡೆಗಳಲ್ಲಿ ಈ ಸ್ಥಾನವನ್ನು ಅಲಂಕರಿಸಬೇಕು. (ಆಯತ, ಅವಹಿತ್ಥ ರೇಖಾ ಚಿತ್ರ ಪು. ೧೬೧. ಚಿತ್ರ ೪)

ನೇಮಿಚಂದ್ರನು ನರ್ತಕಿಯು ರಂಗವನ್ನು ಪ್ರವೇಶಿಸಿ ಆಯತ, ಅವಹಿತ್ಥ ಸ್ಥಾನಕಗಳನ್ನು ಹಿಡಿದು ನಿಂತು ಮುಂದೆ ವಿವಿಧ ಚಾರಿಗಳನ್ನು ಪ್ರದರ್ಶಿಸುತ್ತ ನರ್ತಿಸಿದಳೆಂದು ಕವಿ ನಿರೂಪಿಸುತ್ತಾನೆ.

ತೀವಿ ಮೊಗರಸ ದೊಳೊದವಿದ
ಭಾವರಸಂ ಬಸಿಗುಮೆಂಬ ವೊಲ್ ಸಂಹತಮಂ
ಸಾವಗಿಸಿದ ಮೈಯೊಳ್ ಶೋ
ಭಾವತಿ ಸಮಪಾದ ಚಾರಿಯಂ ಕೈಕೊಂಡಳ್ (ಲೀಲಾವ. ೪-೧೨೧)

ಭಾವರಸಗಳು ಆಕೆಯ ಮುಖದಲ್ಲಿ ಭಟ್ಟಿ ಇಳಿಯುವಂತೆ ಇದ್ದುವಂತೆ. ಆಖೆ ಸಮಪಾದಚಾರಿಯನ್ನು ಮಾಡುತ್ತಾಳೆ.

ಸಂಹತವು ಒಂದು ದೇಶೀ ಸ್ಥಾನಕ ಪಾದಗಳ ಹೆಬ್ಬೆರಗಳುಗಳನ್ನೂ ಸೇರಿಸಿ ಸ್ವಾಭಾವಿಕವಾಗಿ ನಿಲ್ಲುವುದು ಸಂಹತ ಸ್ಥಾನ.೧೦೮ಮೇಲಿನ ಪದ್ಯದಲ್ಲಿ ಸಂಮತಮಂ ಎಂದಿದ್ದರೆ ಪಾಠಶುದ್ಧಿ ಇರುತ್ತದೆ. ಏಕೆಂದರೆ ನರ್ತಕಿ ಮುಂದೆ ಮಾಡುವ ಸಮಪಾದಚಾರಿಯೂ ಸಂಹತ ಸ್ಥಾನಕ್ಕೇ ಸದೃಶವಾಗಿದೆ. ಆದ್ದರಿಂದ ಭಾವರಸಗಳು ಆಕೆ ಸೂಸುವ ಮುಖಾಭಿನಯಕ್ಕೆ ಸಮ್ಮತವಾಗಿತ್ತು ಎಂದರೆ ಒಪ್ಪುವ ಮಾತಾಗಿದೆ.

ಚಾರಿಯನ್ನು ಭರತ ಅತ್ಯಂತ ಪ್ರಾಮುಖ್ಯವಾಗಿ ವರ್ಣಿಸುತ್ತಾನೆ. ಪಾದ, ಜಂಘಾ, ತೊಡೆ ಮತ್ತು ಸೊಂಟ ಇವು ಒಂದೇ ರೇಖೆಯಲ್ಲಿ ಇರುವುದರಿಂದ ಚಾರಿ ನಿಷ್ಪನ್ನವಾಗುವುದು. (ಸಂಸ್ಕೃತದ ಚರ್ ಎಂಬ ಧಾತುವಿನಿಂದ ಚಾರಿ ನಿಷ್ಪತ್ತಿಯಾಗಿದೆ. ಚರ್ ಎಂದರೆ ನಡೆ, ಮುಂದೆ ಹೋಗು ಇತ್ಯಾದಿ. ಚರ್ ಧಾತುವಿಗೆ ನಿ ಪ್ರತ್ಯಯ  ಲಭಿಸಿ ಚಾರಿ ಎಂದಾದರೆ) ಒಂದು ನಿಯಮಕ್ಕೆ ಅನುಗುಣವಾಗಿ, ಒಂದನ್ನೊಂದು ಆಶ್ರಯಿಸಿದ್ದರಿಂದ ಮತ್ತು ಶರೀರಕ್ಕೆ ಸಂಬಂಧಿಸಿದ್ದರಿಂದ ಚಾರಿ ಒಂದು ವ್ಯಾಯಾಮ ಎನಿಸುವುದು. ಒಂದು ಪಾದದ ಪ್ರಚಾರಕ್ರಮ ಚಾರಿ, ಎರಡು ಪಾದದ ಪ್ರಚಾರಕ್ರಮ ಕರಣ (ಈ ಕರಣವೂ[25] ನೃತ್ತಕರಣಗಳು ಬೇರೆ ಬೇರೆ) ಚಾರಿಯಿಂದಲೇ ನೃತ್ತದ ಆರಂಭ. ಚಾರಿಯಿಂದಲೇ ಮುಂದಿನ ಚಲನವಲನ ಚಾರಿಯ ಹೊರತಾಗಿ ನಾಟ್ಯದಲ್ಲಿ ಯಾವ ಅಂಗವೂ ಕ್ರಿಯಾತ್ಮಕವಾಗಿ ಇರುವುದಿಲ್ಲ. ಇಂತಹ ಚಾರಿಗಳು ಎರಡು ವಿಧ: ಭೌಮ, ಆಕಾಶಕೀ ಒಂದೊಂದರಲ್ಲೂ ಹದಿನಾರಂತೆ ಒಟ್ಟು೩೨ ಚಾರಿಗಳು.[26]

19_6_PP_KUH[1] ನೋಡಿ ನಕ್ಷೆ (ಅಸಂಯುತ ಹಸ್ತಗಳು)

[2] ಸಾಚೀದೃಷ್ಟಿ – ಸ್ವಸ್ಥಾನೇ ತಿರ್ಯಗಾಕಾರಮಪಾಂಗವಲನಂ ಕ್ರಮಾತ್
ಸಾಚೀ ದೃಷ್ಟಿರಿತಿ ಜ್ಞೇಯಾ ನಾಟ್ಯಶಾಸ್ತ್ರ ವಿಶಾರಧೈಃ ||
ಅಭಿದ ೭೦ (ಸಂ. ಶ್ರೀಧರಮೂರ್ತಿ)
ವೇಷ್ಟಯಿತ್ವಾ ದಕ್ಷಿಣೇನ ವಾಮಂ ವಾವೇನ ದಕ್ಷಿಣಮ್ ಅದೇ ೧೫೯

[3] ಕ್ರಮೇಣ ಪಾದಂ ವಿನ್ಯಸ್ಯ ಭವೇತ್ ವಿಷಮ ಸಂಚರಃ || ಅದೇ ೩೦೮.

[4] ಸಂಶೋಧನಾ ತರಂಗ ಸಂಪುಣ – ೨.
ಕೇಳಿಕೆ ಪದದ ಅರ್ಥನಿಷ್ಪತ್ತಿ – ಪು.೨೬-೨೯.

[5] ಬಸರ – ೧೯-೧೯.

[6] ನೋಡಿ ಅನುಬಂಧ ಇ. ನಕ್ಷೆ ೩ (ಕರಣಗಳು).

[7] ಸಮ -ಪದೌಸಮನಖಶ್ಲಿಪ್ಠೌಸ್ಯಾತಾಂ ಯತ್ರ ಲತಾಕರೌ |
ಸ್ವಭಾವಾವಸ್ಥಿತಂ ಕಾರ್ಯಂ ತಸ್ಯತ್ಸ ಮಾನಖಾಭಿಧಂ |
ನೃತ್ತ ಪ್ರವೇಶನಾರಂಭೇ ವಿನಿಯೋಗಸ್ಯಸಮ್ಮತಃ ||

[8] ಭ್ರಮಣೋತ್ಕೇಪ ವಿಕ್ಷೇಪಕಂಪಾ ಭರಕೋ.ಪು.೭೦೩
ದ್ಯೋರ್ ವಿಷಮಂ ಭವೇತ್ |
ಮಾನಸ ೧೬ ೯೩೫ (ಸಂ. ಶ್ರೀಗೊಂಡೇಕರ್)

[9] ಅಂಚಿರ ಶಿರ – ಒಂದು ಕಡೆ ವಾಲಿದ ಶಿರ.

[10] ಆಲೋಲಿತ – ಚಕ್ರಾಕಾರವಾಗಿ ಸುತ್ತುವ ಶಿರ.

[11] ಸಂಕರೋಪಿ ಭವೇತೇಷಾಂ ಪ್ರಯೋಗಾರ್ಥವಶಾತ್ ಪುನಃ |
ಪ್ರಧಾನ್ನೇನ ಪುನಃ ಸಂಜ್ಞಾ ನಾಟ್ಯೇ ನೃತ್ತೇ ಕರೇಷಃ
ವಿಯುತಾಃ ಸಂಯುತಾಶ್ಚೃವ ನೃತ್ತ ಹಸ್ತಾಃ ಪ್ರಕೀರ್ತಿತಾ |
ನಾಟ್ಯಶಾ. . ೧೯೯೨೦೦ ಸಂ. ರಾಮಕೃಷ್ಣ ಕವಿ.

[12] ನೋಡಿ ನಕ್ಷೆ (ಅಸಂಯುತ ಹಸ್ತ).

[13] ನೋಡಿ ನಕ್ಷೆ (ಅಸಂಯುತ ಹಸ್ತ).

[14] ಪಲ್ಲವೇ ಫಲಕೇ ತೀರೇಷ್ಯುಭಯೋರಿತಿ ವಾಚಕೇ
………………………………………………………………
ಯುಜ್ಜಾತೇ ರ್ಧಪತಾಕೋ ಯಂ ತತ್ಕರ್ಮ ಪ್ರಯೋಗತಃ
ಅಭಿದ ೧೧೩೧೧೮ ಸಂ. ಶ್ರೀಧರಮೂರ್ತಿ.

[15] ನೋಡಿ ನಕ್ಷೆ – ೧ (ಅಸಂಯುತ ಹಸ್ತ).

[16] ನಾಟ್ಯಶಾ. ಅನು (ಶ್ರೀರಂಗ) ೯/೧೨೩ ರಿಂದ ೧೨೬ನೇ ಪು.
ನಾಟ್ಯಶಾ – ಅ. ೯/೧೫೩ ರಿಂದ ೧೫೬ ನೇ ಶ್ಲೋಕ        (ಸಂ. ರಾಮಕೃಷ್ಣ ಕವಿ)
ಹಾಗೂ ಅದೇ ಅಧ್ಯಾಯ ೬೨, ೬೩ನೇ ಶ್ಲೋಕಗಳು

[17] ಆ ಭುಗ್ನಮಥ ನಿರ್ಭುಗ್ನಂ ತಥಾ ಚೈವ ಪ್ರಕಂಪಿತಮ್
ಉದ್ಪಾಹಿತಂ ಸಮಂ ಚೈವ ಉರಃ ಪಂಚವಿಧಂ ಸ್ಮೃತಮ್
ನಾಟ್ಯಶಾ. /೨೨೪ (ಸಂ.ರಾಮಕೃಷ್ಣಕವಿ)

[18] ಸಂಗೀರ. (ಸಂ. ಸುಬ್ರಹ್ಮಣ್ಯಶಾಸ್ತ್ರೀ) ಪು. ೬೭೭ (ನಿತಂಬ ವರ್ತನಾ).

[19] ಉತ್ಕ್ಷಿಪ್ತಾತು ಭವೇತ್ ಪಾರ್ಷ್ಣಿಃ ಪ್ರಸೃತೋಂಗುಷ್ಠಕಸ್ತಥಾ|
ಅಂಗುಲ್ಯಾಶ್ಚಾಂಚಿತಾಃ ಸವಾಃಪಾದೋಗ್ರತಲಸಂಚರಃ |
ನಾಟ್ಯಶಾ. (ಸಂ.ರಾಮಕೃಷ್ಣಕವಿ). ೨೭೪.

[20] ಉದ್ಘಟಿತಃ ಸಮಶ್ಚೈವ ತಥಾಗ್ರತಲ ಸಂಚರಃ
ಅಂಚಿತಃ ಕುಂಚಿತಶ್ಚೈವ ಪಾದಃ ಪಂಚವಿಧಃ ಸ್ಮೃತಃ ||      ಅದೇ. ೨೬೬

[21] ನೋಡಿ ರೇಖಾಚಿತ್ರ (ಪು. ೧೬೧).

[22] ಸಮೋಂಚಿತಃ ಕುಂಚಿತಶ್ಚಸೂಚ್ಯಗ್ರತಲ ಸಂಚರಃ |
ಉದ್ಘಟ್ಟಿತ ಶ್ಚೇತಿ ಮನೇಃ ಷಡ್ಪಿಧಶ್ಚರಣೋಮತಃ |
ಸಂಗೀರ (ಸಂ.ಸುಬ್ರಹ್ಮಣ್ಯಶಾಸ್ತ್ರೀ) ೩೧೪

[23] ಉತ್ಕ್ಷಿಪ್ತಾತು ಭವೇತ್ ಪಾರ್ಷ್ಣೀರ್ಂಗುಷ್ಠಾಗ್ರೇಣ ಸಂಸ್ಥಿತಃ |
ವಾಮಶ್ಚೈವ ಸ್ವಭಾವಸ್ಯಃ ಸೂಚಿಪಾದಃ ಪ್ರಕೀರ್ತಿತಃ ||
(ನೋಡಿ ರೇಖಾ ಚಿತ್ರ ಪು. ೧೬೧). ನಾಟ್ಯಶಾ. (ಸಂ. ರಾಮಕೃಷ್ಣ ಕವಿ) ೨೯೭.

[24] ಸಸಿವದನೆಯಾಯತಂ ಭಾ
ವಿಸುವವಹಿತ್ಥಾಖ್ಯಮೊಪ್ಪುವಶ್ವಕ್ರಾಂತ ||
ಗತಾಗತಂ ವಲಿತಂ ಮೊ
ಟ್ಟಿತ ವಿನಿವರ್ತಿತಮಿವೇಳು ಸ್ತ್ರೀತಾಣಂಗಳೊಳ್
ಅತಿಶಯದಿಂದಂ ಭರತದೊ
ಳತಿ ವಿಸ್ತಾರವಾಗಿ ತೋರ್ಪುದಂಬುಜವದನೆ ||
ಲಾಸ್ಯರಂ. (ಸಂ. ಹೆಚ್.ಆರ್. ರಂಗಸ್ವಾಮಿ ಅಯ್ಯಂಗಾರ್) ಪ್ರ.,

[25] ತನುಸಹಜದೆ ತಾನಿರ್ದುಂ
ವನಿತೆಕೇಳ್ ಪೆರ್ವೆರಲ್ಗಳರಡುಂ (ಪರಡುಂ)
ಘನತರದಿನೊಂದೆ ಸಂಹತ
ಮನಿಕುಂ ಪುಷ್ಪಾಂಜಲೀವಿಸರ್ಜನದಡೆಯೋಳ್
ಲಾಸ್ಯರಂ. ೩೫ (ಸಂ.ಹೆಚ್.ಆರ್. ರಂಗಸ್ವಾಮಿ ಅಯ್ಯಂಗಾರ್)

[26] ಏವಂ ಪಾದಸ್ಯ ಜಂಘಾಯಾ ಉರೋಃ ಕಟ್ಯಸ್ತಥೈವ ಚ
ಸಮಾನ ಕರಣೇ ಚೇಷ್ಟಾ ಚಾರೀತಿ ಪರಿಕೀರ್ತಿತಾ |
ವಿಧಾನೋಪಗತಾಶ್ಚಾರ್ಯೌ ವ್ಯಾಯಚ್ಛಂತೇ ಪರಸ್ಪರೌ |
ಯಸ್ಮಾದಂಗ ಸಮಾಯುಕ್ತ ಸ್ತಮಾದ್ ವ್ಯಾಯಾಮ ಉಚ್ಯತೆ
ಏಕಪಾದಪ್ರಚಾರೋಯಃ ಸಾ ಚಾರೀತ್ಯಭಿಸಂಜ್ಞಿತಾ |
ದ್ವಿಪಾದ ಕ್ರಮಣಂ ಯತ್ತು ಕರಣಂ ನಾಮ ತದ್ಭವೇತ್
ಚಾರೀಭಿಃ ಪ್ರಸ್ರತಂ ನೃತ್ತಂಚಾರಿ ಭಿಶ್ಚೇಷ್ಟಿತಂ ತಥಾ |
ಯದೇತತ್ ಪ್ರಸ್ತುತಂ ನಾಟ್ಯಂ ತಚ್ಛಾರಿಷ್ಯೇವ ಸಂಸ್ಥಿತಮ್ |
ನಹಿ ಚಾರ್ಯಾವಿನಾ ಕಿಂಚಿನಾಟ್ಯಾಂಗ ಸಂಪ್ರವರ್ತತೆ ||
ನಾಟ್ಯಶಾ. . ೧೦/, ರಿಂದ (ಸಂ. ರಾಮಕೃಷ್ಣಕವಿ)