ಕನ್ನಡ ಕಾವ್ಯಗಳಲ್ಲಿ ಸಾಮಾನ್ಯವಾಗಿ ಮಂಗಳಕರ ಸನ್ನಿವೇಶಗಳಾದ ಪುತ್ರಜನನ, ದೇವ ಪೂಜಾ ವಿಧಾನ, ಸ್ವಯಂವರ, ವಿವಾಹ, ಮೆರವಣಿಗೆ, ರಾಜಾದಿಗಳ ಮನೋರಂಜನೆಯಂತಹ ಸಂದರ್ಭಗಳಲ್ಲಿ ನೃತ್ಯ ಪ್ರಸಂಗಗಳು ವರ್ಣಿತವಾಗಿವೆ. ಮಂಗಳಕರ ಸನ್ನಿವೇಶಗಳಲ್ಲಿ, ವಿವಾಹ, ಪುಂಸವನ, ಪುತ್ರಜನನ, ನಾಮಕರಣದಂತಹ ಸಂತೋಷ ಸಮಾರಂಭಗಳಲ್ಲಿ ನೃತ್ತವನ್ನು ಆಚರಿಸಬೇಕು ಎನ್ನುವುದು ಭರತನ ಆದೇಶವೂ

[1] ಆಗಿದೆ. ದೇವಾಲಯದ ಪೂಜಾವಿಧಾನಗಳಲ್ಲಿ ನರ್ತನ ಸೇವೆಯೂ ಒಂದಾಗಿರುತ್ತಿದ್ದ ಉಲ್ಲೇಖಗಳಿವೆ. ಗರ್ಭಗುಡಿಯ ರಂಗದ ಮೇಲೆ ವಿಗ್ರಹದ ಎದುರು ನಡೆಯುವ ಗೀತ ನೃತ್ಯ ಸೇವೆಗಳು ರಂಗಭೋಗಗಳು, ಕರ್ನಾಟಕದಲ್ಲಿ ಈ ಸಂಪ್ರದಾಯವು ಕ್ರಿ.ಶ. ೭೭೮-೯ ರಿಂದ ಕಂಡು ಬರುತ್ತದೆ[2] ನರ್ತನವು ಅರಸನ ರಸಿಕತೆ ಹಾಗೂ ಭೋಗ ಜೀವನದ ಕುರುಹಾಗಿಯೂ ಕಾವ್ಯಗಳಲ್ಲಿ ರೂಪಗೊಂಡಿದೆ. ರಾಜನ ದಶವಿಧ ಭೋಗಗಳಲ್ಲಿ ನಾಟ್ಯವೂ ಒಂದು.[3]

ಮೇಲೆ ತಿಳಿಸಿದ ಸನ್ನಿವೇಶಗಳಲ್ಲಿ ನರ್ತಕಿ ಅಥವಾ ನರ್ತಕರು ನೃತ್ಯದ ಪರಿಕರ ಹಾಗೂ ಭೂಮಿಕೆಗಳೊಡನೆ ನರ್ತಿಸಿದ ವರ್ಣನೆಗಳನ್ನು ಕನ್ನಡ ಕವಿಗಳು ವಿಶೇಷವಾಗಿ ಮಾಡಿರುತ್ತಾರೆ. ಅ. ೨ ರಲ್ಲಿ ಇದನ್ನು ಚರ್ಚಿಸಿದೆ. ಇಂತಹ ಪ್ರಸಂಗಗಳಲ್ಲಿ ಕವಿಗಳು ತಮ್ಮ ನಾಟ್ಯ ಶಾಸ್ತ್ರದ ತಿಳುವಳಿಕೆಯ ಆಧಾರದಿಂದ ನೃತ್ಯವನ್ನು ಪರಿಭಾವಿಸಿ ಅದನ್ನು ತಮ್ಮ ಕಾವ್ಯಗಳಲ್ಲಿ ಪ್ರತಿಬಿಂಬಿಸಿದ್ದಾರೆಯೋ? ನೃತ್ಯವನ್ನು ಕಣ್ಣಾರೆ ಕಂಡು ಆಸ್ವಾದಿಸಿ, ಅದರಿಂದ ಪ್ರಭಾವಿತರಾಗಿ ಅಂತಹ ನೃತ್ಯ ಶೈಲಿಗಳನ್ನು ತಮ್ಮ ಕಾವ್ಯಗಳಲ್ಲಿ ತಂದಿರುತ್ತಾರೆಯೋ? ಹೀಗೆ ವರ್ಣಿತವಾದ ನೃತ್ಯ ಪ್ರಸಂಗಗಳು ಎಷ್ಟರಮಟ್ಟಿಗೆ ಶಾಸ್ತ್ರದ ಚೌಕಟ್ಟಿಗೆ ಒಳಪಟ್ಟಿವೆ? ಎಷ್ಟರ ಮಟ್ಟಿಗೆ ಪ್ರಾಂತೀಯ ಸೊಗಡನ್ನು ಹೊಂದಿದೆ? ಇವುಗಳ ಸಮೀಕ್ಷೆಯೇ ಪ್ರಸ್ತುತ ಅಧ್ಯಾಯದ ವಿಷಯ.

ನೃತ್ಯ ಪ್ರಸಂಗಗಳ ಶಾಸ್ತ್ರೀಯ ಹಾಗೂ ತಾಂತ್ರಿಕ ಅಧ್ಯಯನದ ಅನುಕೂಲಕ್ಕಾಗಿ ಕನ್ನಡ ಕಾವ್ಯಗಳನ್ನು ಜೈನ ಕಾವ್ಯಗಳು, ವೀರಶೈವ ಕಾವ್ಯಗಳು, ವೈದಿಕ ಕಾವ್ಯಗಳು ಹಾಗೂ ಆಧುನಿಕ ಕಾವ್ಯಗಳು ಎಂದು ವಿಭಾಗಿಸಲಾಗಿದೆ.

()ಜೈನಕಾವ್ಯಗಳಲ್ಲಿನೃತ್ಯಪ್ರಸಂಗಗಳು

ಜೈನ ಧರ್ಮದ ಪ್ರಮುಖ ವಿಧಿಯಾದ ಪಂಚ ಕಲ್ಯಾಣಗಳ ವಿವರ ಜೈನ ಕಾವ್ಯಗಳ ಅವಿಭಾಜ್ಯ ಅಂಗ ರತ್ನತ್ರಯರಲ್ಲಿ ಒಬ್ಬನಾದ ಕವಿ ರನ್ನ ತನ್ನ ಕಾವ್ಯವನ್ನು ಪರಿಚಯಿಸುತ್ತ

ಸುರಲೋಕಾವತರೋತ್ಸವಂ ಪರಿಕೃತಂ ಜನ್ಮಾಭಿಷೇಕೋತ್ಸವಂ
ಪರಿನಿಷ್ಕ್ರಾಂತಿ ಮಹೋತ್ಸವಂ ಪ್ರವಿಮಲಂ ಕೈವಲ್ಯಬೋಧೋತ್ಸವಂ
ಪರಿನಿರ್ವಾಣಮಹೋತ್ಸವಂಜಿನ ಮಹಾಕಲ್ಯಾಣಮಯ್ದುಂ ಸವಿ
ಸ್ತರದಿಂದಿರ್ಪುವು ವರ್ಣಕಂಗಳಿವಱೆಂ ಭವ್ಯಾಂಗಮೇನೊಪ್ಪದೇ
(
ಅಜಿಪು. ೯೫)

ಎಂದು ಹೇಳಿದ್ದಾನೆ.

ಮೇಲೆ ಪ್ರಸ್ತಾಪಿಸಿರುವ ಪಂಚ ಕಲ್ಯಾಣಗಳಲ್ಲಿ ನೃತ್ಯದ ಪ್ರಸಂಗಗಳು ವರ್ಣಿತವಾದರೂ, ಅದರ ಹೆಚ್ಚಳ ಕಾಣುವುದು ಜನ್ಮಾಭಿಷೇಕ ಹಾಗೂ ಪರಿನಿರ್ವಾಣ ಕಲ್ಯಾಣಗಳಲ್ಲಿ ಮಾತ್ರ. ಕನ್ನಡ ಕವಿಗಳಿಗೆ ಜಿನಸೇನಾಚಾರ್ಯರ ಮಹಾ ಪುರಾಣವೇ ಆಧಾರವಾದರೂ ಕವಿಗಳು ನೃತ್ಯ ಪ್ರಸಂಗಗಳ ವರ್ಣನೆಗಳಲ್ಲಿ ಸ್ಪೋಪಜ್ಞತೆಯನ್ನೂ ಕಲಾಭಿಜ್ಞತೆಯನ್ನೂ ಧಾರಾಳವಾಗಿ ಪ್ರಕಾಶಪಡಿಸಿದ್ದಾರೆ. ಸಂಸ್ಕೃತ, ಪ್ರಾಕೃತ ಕಾವ್ಯಗಳಿಗೆ ಸರಿಸಮಾನವಾದ ಕಾವ್ಯಗಳನ್ನು ಜೈನ ಕವಿಗಳು ರಚಿಸಬೇಕಾದ ಅವಶ್ಯಕತೆ ಒಂದೆಡೆಯಾದರೆ, ನಾಡ ಜನತೆಗೆ ಕನ್ನಡದಲ್ಲಿ ಜಿನ ಧರ್ಮವನ್ನು ಪ್ರಚಾರ ಪಡಿಸುವ ಗುರುತರ ಹೊಣೆಗಾರಿಕೆಯೂ ಇನ್ನೊಂದೆಡೆ ಇವರ ಮೇಲೆ ಇತ್ತು[4] ಎಂಬ ಅಭಿಪ್ರಾಯವನ್ನು ಒಪ್ಪಬಹುದು.

ಕನ್ನಡದ ಆದಿಕವಿ ಎನಿಸಿದ ಪಂಪನ ಕಾಲದ ಹೊತ್ತಿಗಾಗಲೇ ಕನ್ನಡ ನಾಡಿನಲ್ಲಿ ನೃತ್ಯವು ಒಂದು ಶಿಷ್ಟಕಲೆಯಾಗಿ, ನಾಡಿನ ಸಂಸ್ಕೃತಿಯ ದ್ಯೋತಕವಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದ ಪುರಾವೆಗಳಿವೆ. ಕ್ರಿ. ಶ. ೪೫೦ ರಿಂದ ೮೫೦ರ ವರೆಗಿನ ಶಾಸನಗಳು ಇವನ್ನು ಒದಗಿಸುತ್ತವೆ.[5] ಇವುಗಳಿಂದ ನೃತ್ಯವು ಪಂಪನ ಹೊತ್ತಿಗಾಗಲೇ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯನ್ನು ಹೊಂದಿರಬಹುದೆಂದು ಅನುಮಾನಿಸಲು ಅವಕಾಶವಿದೆ.

ಕವಿರಾಜಮಾರ್ಗವನ್ನು ಕನ್ನಡದ ಮೊತ್ತ ಮೊದಲ ಲಭ್ಯವಿರುವ ಕೃತಿಯೆಂದು ಪರಿಗಣಿಸಿದೆ. ಆದರೆ ಪೂರ್ಣ ಪ್ರಮಾಣದ ಕಾವ್ಯವಾಗಿ ಮೊತ್ತ ಮೊದಲ ಲಭ್ಯ ಕೃತಿಯೆಂಬ ಗೌರವವು ಪಂಪನ ಆದಿಪುರಾಣಕ್ಕೆ ಲಭಿಸಿದೆ. ಸಂಸ್ಕೃತ ಸಾಹಿತ್ಯದ ಪ್ರಭಾವ, ಶಾಸ್ತ್ರಗ್ರಂಥಗಳ ಆಳವಾದ ಅಧ್ಯಯನ ಜೈನಧರ್ಮದಲ್ಲಿನ ಮತಶ್ರದ್ಧೆ ಪಂಪನ ಆದಿಪುರಾಣ ವಿಕ್ರಮಾರ್ಜುನವಿಜಯಗಳ ರಚನೆಗೆ ಮುಖ್ಯ ಪ್ರೇರಕ ಶಕ್ತಿಯಾಗಿತ್ತು.[6]

ಚಕ್ರವರ್ತಿಯಾದಿಯಾಗಿ ಸಕಲ ಮನುಜರನ್ನೂ ಪುಲಕಿತಗೊಳಿಸಿ ಆನಂದವನ್ನುಂಟು ಮಾಡುವ ಶುಭ ಘಟನೆ ಪುತ್ರ ಜನ್ಮೋತ್ಸವ. ಅನೇಕ ಭವಾವಳಿಗಳನ್ನು ದಾಟಿ ಕೊನೆಯ ಭವದಲ್ಲಿ ತೀರ್ಥಂಕರಪದವಿಯನ್ನು ಏರಲಿರುವ ಜಿನಶಿಶುವಿನ ಜನನ ಅದರ ಮಾತಾಪಿತೃಗಳಿಗಷ್ಟೇ ಅಲ್ಲದೆ, ಸಮಸ್ತ ಪುರಜನರು ಹರ್ಷೋಲ್ಲಾಸದಿಂದ ಹಾಡಿ ಕುಣಿದು ಸಂಭ್ರಮಿಸುವ ಪರ್ವವಾಗಿರುತ್ತದೆ.

ಈ ಸಂತೋಷವನ್ನು ಮತ್ತೂ ಅಧಿಕಗೊಳಿಸಲು ಇಂದ್ರನು ಅಮರಲೋಕದ ಅಪ್ಸರೆಯರೊಡನೆ ದೇವತರ್ಯಾದಿಗಳ ಹಿನ್ನೆಲೆಯೊಂದಿಗೆ ಹಾಡಿ, ಕುಣಿದು ಪುರಜನರ ಸಂತೋಷದಲ್ಲಿ ಪಾಲ್ಗೊಳ್ಳುತ್ತಾನೆ. ಇದು ಎಲ್ಲ ಜೈನ ಕಾವ್ಯಗಳಲ್ಲೂ ನಿರೂಪಿತವಾಗುವ ಜನ್ಮಾಭಿಷೇಕ ಕಲ್ಯಾಣದ ಸಾಮಾನ್ಯ ದೃಶ್ಯ; ಆದರೆ ಕಲಾತ್ಮಕ ದೃಶ್ಯ.

ಸಮೀಕ್ಷೆಗಾಗಿ ಇಲ್ಲಿ ಆದಿಕವಿ ಪಂಪನಿಂದ (ಶ. ೯೪೧) ಆರಂಭಿಸಿ ದೇವರಸ (ಶ. ೧೬೨೦) ನವರೆಗಿನ ಎಲ್ಲಾ ಪ್ರಮುಖ ಜೈನ ಕವಿಗಳ ಕಾವ್ಯಗಳನ್ನು ಅಧ್ಯಯನಕ್ಕೆ ಆರಿಸಿಕೊಳ್ಳಲಾಗಿದೆ.

() ಆದಿಪುರಾಣ : (೯೪೧)

ವೃಷಭದೇವನ ಜನನ ಪ್ರಸಂಗದಲ್ಲಿ, ಇಂದ್ರನು ಸಂತೋಷಗೊಂಡು ದೇವತೂರ್ಯಾದಿಗಳೊಂದಿಗೆ ನರ್ತಿಸಲು ಆರಂಭಿಸುವುದನ್ನು ಕವಿಪಂಪ ತಾಂಡವಮನ್ ಆಡಲುದ್ಯೋಗಂಗೆಯ್ದು (ಆದಿಪು. ೭-೧೧೬) ಎಂದು ಹೇಳಿದ್ದಾನೆ. ಇಲ್ಲಿ ಕವಿ ಬಳಸಿರುವ ತಾಂಡವ (ನೋಡಿ ಅನುಬಂಧ ಅ. ಪರಿಭಾಷೇ) ಒಂದು ನೃತ್ತಪ್ರಕಾರ; ಕುಣಿ, ನರ್ತಿಸು, ಎಂಬುದಕ್ಕೆ ಆಡು ಪದದ ಬಳಕೆಯಾಗಿರುವುದು ಗಮನಾರ್ಹವಾಗಿದೆ.

ರಂಗಪ್ರವೇಶದ ನಂತರ ಇಂದ್ರ ವೈಶಾಖ ಸ್ಥಾನಕದಲ್ಲಿದ್ದು (ನೋಡಿ ಅಧ್ಯಾಯ ೨) ಪುಷ್ಪಾಂಜಲಿಯನ್ನು ಸೂಸಿ ಮಾಡುವ ಕಣ್ಣುಗಳ ಚಲನೆಯನ್ನು ಪಂಪ ಹೀಗೆ ವರ್ಣಿಸುತ್ತಾನೆ :

ಸೂಸಿದ ಪುಷ್ಪಾಂಜಲಿಯನೆ
ಬಾಸಣಿಸಿದ ಮದನದಳಿಕುಳಂಗಳ ಚೆಲ್ವಂ
ಮಾಸಿಸಿದುವು ವಾಸವನ ವಿ
ಳಾಸಂ ಬೆರಸಡರೆ ತೊಡರೆ ಬಳಸುವ ಕಣ್ಗಳ್ (೧೧೮)

ಇಲ್ಲಿ ಇಂದ್ರನ ಕಣ್ಣಾಲಿಗಳ ಚಲನೆಗೆ ಸೊಗಸಾದ ಪ್ರತಿಮೆಯನ್ನು ಕವಿ ಪಂಪ ಕೊಡುತ್ತಾನೆ. ಸಾಮಾನ್ಯವಾಗಿ ಮಾರ್ಗ ಪದ್ಧತಿಯ ನೃತ್ಯ ಬಂಧಗಳಲ್ಲಿ ಒಂದು ಸ್ಥಾನಕದಲ್ಲಿ ನಿಂತು ಕಣ್ಣಾಲಿಗಳನ್ನು ತಾಳಕ್ಕೆ ತಕ್ಕಂತೆ ಮೂರು ಕಾಲಗಳಲ್ಲಿ ಚಲಿಸುವ ನಿಯಮವಿದೆ. ಅದರಂತೆ, ದ್ರುತ ಕಾಲದಲ್ಲಿ ಚಲಿಸುತ್ತಿರುವ ಇಂದ್ರನ ಕಣ್ಣಿನ ಚಲನೆಯ ಮುಂದೆ ಪುಷ್ಪಗಳನ್ನು ಮುತ್ತಿದ ಮುದಿಸಿದ ದುಂಬಿಗಳ ಚೆಲುವು ಮಾಸಿಸಿದವು ಎನ್ನುವ ಪಂಪನು ಮುಂದುವರಿದು,

ರಸಭಾವಾಲಸ ನಯನ
ಪ್ರಸರಂಗಳ ಪೊಳೆವ ಪೊಳೆಪುಗಳ್ ಬೆಳ್ಪಳಂ ನೀ
ಳ್ದೆಸೆದವು ರಂಗದೊಳೆತ್ತಂ
ಪೊಸಯಿಸುತುಂ ಯವನಿಕಾ ವಿಳಾಸಮನಾಗಳ್        (೧೧೯)

ಎಂದು ವರ್ಣಿಸುತ್ತಾನೆ.

ರಸಭಾವವನ್ನು ಸೂಚಿಸುವ ಇಂದ್ರನ ಕಣ್ಣುಗಳಿಂದ ಹೊರಟ ಹೊಳಪು ರಂಗದಲ್ಲಿ ಎಲ್ಲೆಲ್ಲೂ ಹರಡಿ ತೆರೆಯ ಬೆಳಕನ್ನು ಹೆಚ್ಚು ಮಾಡಿತು ಎಂದು ಕವಿಯ ಅಭಿಪ್ರಾಯ.

ಯಾವುದೇ ಶಾಸ್ತ್ರೀಯ ನೃತ್ಯದಲ್ಲಿ ಕಣ್ಣಿನ ಚಲನೆಗೆ ಅತಿ ಮಹತ್ವವಾದ ಸ್ಥಾನವಿದೆ. ದೃಷ್ಟಿಯನ್ನನುಸರಿಸಿ ಮಾನಸ್ಸೂ ಮನಸ್ಸಿನಂತೆ ಭಾವವೂ ಆ ಭಾವಕ್ಕನುಗುಣವಾದ ರಸವೂ ಇರುವುದೆಂದು ನಂದಿಕೇಶ್ವರನ ಮತ.[7]

ಮುಂದೆ, ಇಂದ್ರನು ರಂಗವನ್ನು ವ್ಯಾಪಿಸಿ ನರ್ತಿಸುವ ಚಿತ್ರವನ್ನು ಪಂಪ ಹೀಗೆ ವರ್ಣಿಸುತ್ತಾನೆ :

ಪದವಿನ್ಯಾಸದ ತುಱುಗಲ್
ಪೊದಳೆ, ಲಯಂಬೆರಸು ರಂಗಮಂ ಬಳಸಿದನಾ
ತ್ರಿದಶಾಧಿನಾಥನಳೆವವೊ
ಲುದನ್ವದಾವೇಷ್ಟಿತಾಖಿಳಾವನಿತಳಮಂ        (೧೨೦)

ರಂಗವನ್ನು ಪ್ರವೇಶ ಮಾಡುತ್ತಲೇ ನರ್ತಕನು ರಂಗವನ್ನು ಆಕ್ರಮಿಸುವುದು ಅತ್ಯಂತ ಅವಶ್ಯಕವಾದ ಒಂದು ಚಲನೆ. ಇದಕ್ಕಾಗಿ ಪಾದಗಳಲ್ಲಿ ನರ್ತನಯೋಗ್ಯ ಹೆಜ್ಜೆಗಳನ್ನಿಡುತ್ತಾ ಆತ ಚಲಿಸುತ್ತಾನೆ. ಈ ಹೆಜ್ಜೆಗೆ ರಂಗಾಕ್ರಮಣವೆಂದೂ ಕರೆಯುತ್ತಾರೆ. ಇದರ ರಚನೆ ನೃತ್ಯಶೈಲಿಗಳಲ್ಲಿ ಸಾಮಾನ್ಯವಾಗಿ ಬಳಸುವ ವಿಧಾನ ಹೀಗೆ ಇರುತ್ತದೆ :

ಮೊದಲು ಎರಡೂ ಕಾಲಿನಿಂದ ನೆಗೆದು ನಂತರ ಒಂದು ಕಾಲನ್ನು ತಟ್ಟುತ್ತಾ, ಇನ್ನೊಂದು ಕಾಲನ್ನು ಅದರ ಹಿಂದುಗಡೆ ತಟ್ಟುತ್ತಾ, ರಂಗವನ್ನು ಪ್ರದಕ್ಷಿಣಾಕಾರದಲ್ಲಿ ಮೊದಲು ಸುತ್ತಿ ನಂತರ [ಚಿತ್ರ ೧೧] ಈ  ಗುರುತಿನಾಕಾರದಲ್ಲಿ ಸುತ್ತುವುದು.[8]

ನಿರಂತರ ಚಲನೆಯ ಸಂದೇಶವನ್ನು ಕೊಡುವ ರಂಗಾಕ್ರಮಣ ಪದಗತಿಯು ಪ್ರೇಕ್ಷಕರ ಮನವನ್ನು ಸೆಳೆಯುವುದು. ಇದಲ್ಲದೆ, ನರ್ತಕನ ಲಯಜ್ಞಾನ, ರಂಗಪರಿಜ್ಞಾನ, ರಂಗವ್ಯಾಪ್ತಿ ತಿಳುವಳಿಕೆ ಇದರಿಂದ ಪ್ರಕಟವಾಗುತ್ತದೆ.

ಇಂದ್ರನ ರಂಗಾಕ್ರಮಣವನ್ನು ಪಂಪ, ಅಖಿಳ ಅವನೀತಳವನ್ನೇ ಅಳೆಯುವ ರೀತಿಯಲ್ಲಿ ತನ್ನ ಹೆಜ್ಜೆಗಳ ಗುಂಪಿನಿಂದ ರಂಗವನ್ನು ಬಳಸಿದನೆನ್ನುವ ಉಪಮೆಯೊಡನೆ ವರ್ಣಿಸುತ್ತಾನೆ. ಇದರಲ್ಲಿ ಕವಿಯ ಕಾಲ್ಪನಿಕತೆ ಹಾಗೂ ಭವ್ಯತೆ ಎದ್ದು ಕಾಣುತ್ತವೆ.

ಇಂದ್ರನು ನೃತ್ಯವನ್ನು ಮುಂದುವರಿಸಿ ನರ್ತಕನ ನರ್ತನ ಕೌಶಲ್ಯಕ್ಕೆ ಸವಾಲೆನಿಸುವ ಕರಣ, ಅಂಗಹಾರ ರೇಚಕಗಳನ್ನ ಒಂದಕ್ಕೊಂದು ಮಿಗಿಲೆನಿಸುವಂತೆ ಪ್ರದರ್ಶಿಸಿದನು. ಸಮಸ್ತ ಸುರವೃಂದದ ಅಧೀಶನಾದ ಇಂದ್ರನಿಂದ ನಾಟ್ಯರಸವು ಹೊಳೆಯಾಗಿ ಹರಿದಿತ್ತು ಎಂದು ಪಂಪ ಹೀಗೆ ಪ್ರಶಂಸಿಸುತ್ತಾನೆ :

ಕರಣಂ ರೇಚಕ ಮಂಗಹಾರ ಮಿನಿತೆಂದೋದುತ್ತುಮಿರ್ಪೋದದಂ
ತಿರಲೀ ನಾಟ್ಯರಸಂ ಸಮಸ್ತ ಪುರವೃಂದಾಧೀಶ ನಿಂದೇಂ ಪೊನಲ್
ವರದಿತ್ತೆಂಬಿನಮಾಡುವಲ್ಲಿ ಮಕುಟ ವ್ಯಾಲಗ್ನರತ್ನ ಪ್ರಭಾ
ಪರಿವೇಷಂ ಲಲಿತೇಂದ್ರ ಚಾಪರುಚಿಂ ಮಾಡಿತ್ತು ದಿಕ್ಚಕ್ರದೊಳ್   (೧೨೧)

ಇಲ್ಲಿ ಪಂಪ ಪ್ರಯೋಗಿಸಿರುವ ನಾಟ್ಯರಸ ಪದ ವಿಚಾರಯೋಗ್ಯವಾಗಿದೆ. ಪ್ರಚಲಿತದಲ್ಲಿರುವುದು ಶೃಂಗಾರಾದಿ ನವರಸಗಳು. ನಾಟ್ಯದಿಂದ ಉಂಟಾಗುವ ರಸವನ್ನು ಆಸ್ವಾದಿಸುವುದೇ ರಸಾಸ್ವಾದ. ರಸಾಸ್ವಾದದಿಂದಲೇ ಆನಂದ. ರಸಾಸ್ವಾದ ಬ್ರಹ್ಮಾನಂದಸದೃಶ ಎಂಬುದು ಅಭಿನವಗುಪ್ತನ ಮತ್ತು ಬಹುಶಃ ಪಂಪ ಈ ತೆರನಾದ ಆನಂದ ದೊರಕಿತೆಂದು ತಿಳಿಸಲು ನಾಟ್ಯರಸ ಪದ ಬಳಸಿರಬಹುದು. ಭರತಮುನಿಯು ನಾಟ್ಯಶಾಸ್ತ್ರದಲ್ಲಿ ವಿಭಾವ, ಅನುಭಾವ ಸಂಚಾರಿ ಭಾವಗಳನ್ನು ಪೂರಕವನ್ನಾಗಿ ಒಳಗೊಂಡ ಸ್ಥಾಯಿಭಾವಗಳನ್ನು ಆಸ್ವಾಧಿಸುವುದರಿಂದ ಉಂಟಾಗುವ ಹರ್ಷವೇ ನಾಟ್ಯರಸ[9]ವೆಂದು ಅಭಿಪ್ರಾಯ ಪಡುತ್ತಾನೆ.

12_6_PP_KUH

ಪ್ರೇಮವನ್ನೇ ತನ್ನ ವಶದಲ್ಲಿಟ್ಟುಕೊಂಡು, ಸಹಸ್ರಭುಜಶಾಖೆಗಳನ್ನು ಹರಡುತ್ತ ಇಂದ್ರ ತಾಂಡವವನ್ನು ಆಚರಿಸುತ್ತಿದ್ದರೆ, ದೇವಗಣಿಕೆಯರು ಚಲಿಸುವ ಕಾಮನ ಬಳ್ಳಿಯಂತೆ ಆ ಭುಜಶಾಖೆಗಳಲ್ಲಿ ಹಬ್ಬಿ ನರ್ತಿಸುತ್ತಿದ್ದುದನ್ನು ವರ್ಣಿಸುತ್ತಾನೆ ಪಂಪ.

ರಸಭಾವಾಭಿನಯಂಗಳಂ ಭುಜಲತಾ ಭ್ರೂಚಾಪ ನೇತ್ರೋತ್ಪಲ
ಪ್ರಸರಂಗಳ್ ಪ್ರಸರಂಗೆಯುತ್ತಿರೆ ಲಸನ್ನೇತ್ರಂಗಳಂ ಕೂಡೆ ಬಂ
ಚಿಸುತುಂ ಮೆಟ್ಟುವ ಮೆಟ್ಟು ಮೆಟ್ಟೆ ಜನತಾನೇತ್ರಂಗಳಂ ನಾಡೆ ಚೆ
ಲ್ವೆಸೆದತ್ತಿಂದ್ರನ ನೀಳ್ದ ತೋಳ್ದುಱುಗಲೊಳ್ ದೇವಾಂಗನಾ ನರ್ತನಂ       (೧೨೪)

ಇಲ್ಲಿ ಪಂಪ ಬಳಿಸಿರುವ ಮೆಟ್ಟು, ನೃತ್ಯದಲ್ಲಿನ ಅಡವುಗಳ ಒಂದು ವಿಧ. ದೇವಾಂಗನೆಯರ ಮೆಟ್ಟು ಜನರ ಕಣ್ಣುಗಳನ್ನು ಮೆಟ್ಟಿತು ಎಂದು ಪಂಪ ಹೇಳಿರುವಲ್ಲಿ, ಮೆಟ್ಟು[10]ವಿನ ಆಕರ್ಷಕ ಗುಣದ ಪರಿಚಯವಾಗುತ್ತದೆ.

ಇಂದ್ರನ ಭವ್ಯತೆಯನ್ನು ಹೆಚ್ಚಿಸುವುದಕ್ಕೆ, ಇಂದ್ರನ ತೋಳುಗಳ ಗುಂಪಿನಲ್ಲಿ ಆತನ ವಿಶಾಲವಾದ ಭುಜದ ಮೇಲೆ ಹಾಗೂ ಉಗುರಿನ ಮೇಲೆ ದೇವತಾಸ್ತ್ರೀಯರು ನರ್ತಿಸಿ, ಇಂದ್ರನ ಆನಂದ ನೃತ್ಯಕ್ಕೆ ಹೆಚ್ಚಿನ ಶೋಭೆಯನ್ನು ಕೊಡುತ್ತಾರೆ ಎಂದು ವರ್ಣಿಸಿ ಪಂಪ ಉಜ್ವಲ ಕಲ್ಪನೆಯ ಶಿಖರವನ್ನು ಮುಟ್ಟಿದ್ದಾನೆ. ವಿಶಾಲವಾದ ಸಹಸ್ರ ಭುಜಗಳ ಕಲ್ಪನೆಯ ಮೂಲ ಪೂರ್ವ[11] ಪುರಾಣದಲ್ಲೂ ಇದೆ.

ಈ ಚಿತ್ರ ಜೈನಮತದ ಒಂದು ಬೆರಗಿನ ಚಿತ್ರ (Fantacy).

ಇದೇ ರೀತಿಯಲ್ಲಿ ದೇವತಾಸ್ತ್ರೀಯರ ನರ್ತನವನ್ನು ಪಂಪ ಹೀಗೆ ವರ್ಣಿಸುತ್ತಾನೆ :

ಅನಂದಂ ಬೆರಸಾಗಳಚ್ಚರಸೆಯರ್ ದೇವೇಂದ್ರ ನೈರಾವತಾ
ಳಾನಸ್ತಂಭಸಮಂಗಳಪ್ಪ ಭುಜಸಂದೋಹಂಗಳೊಳ್ ವೀರಕಾಂ
ತಾನೀಕಕ್ಕೆಣೆಯಾಗಿ ಕೂಡಿ ಕುಣಿದರ್ ಮತ್ತಂ ಕೆಲರ್ ನೋಡಿ ಸೂ
ಚೀನಾಟ್ಯಂಗಳನಾಡಿದರ್ ಕರನಖಪ್ರಾತಂಗಳೊಳ್ಶಕ್ರನಾ
(
ಆದಿಪು. ೧೨೫)          (ನೋಡಿ .)

ಇಂದ್ರನ ಕರನಖ ಪ್ರಾಂತಗಳಲ್ಲಿ ಆಡಿದ ಸೂಚೀನಾಟ್ಯ (ಒಂದು ನೋಡಿ ಅ. ೪) ವಿಶೇಷವಾದ ನೃತ್ಯ. ಆನಂದವನ್ನು ತಮ್ಮ ವಿನ್ಯಾಸಗಳಲ್ಲಿ ತೋರುತ್ತ ಅಪ್ಸರೆಯರು ಇಂದ್ರನ ಬಲಿಷ್ಠವಾದ ಭುಜಸಮೂಹ, ಹಸ್ತ ಹಾಗೂ ಉಗುರುಗಳ ಮೇಲೆ ವಿಶೇಷವಾದ ಸೂಚೀನಾಟ್ಯವನ್ನು ಆಡಿದರು ಎಂದು ಕವಿ ವರ್ಣಿಸುವ ಮೂಲಕ ಅಪ್ಸರೆಯರ ಹಾಗೂ ಇಂದ್ರನ ನರ್ತನದ ಭವ್ಯತೆಯನ್ನು ಎತ್ತಿ ಹಿಡಿಯುತ್ತಾನೆ.

ಇಂದ್ರನು ತನ್ನ ಬಾಹುಗಳನ್ನು ಚಕ್ರಾಕಾರವಾಗಿ ಸುತ್ತುತ್ತಿದ್ದರೂ ದೇವಾಂಗನೆಯರು ಬೆದರದೆ ಅವನ ಹರಡಿದ ತೋಳುಗಳಲ್ಲಿ ಆಕಾಶದವರೆಗೆ ನೆಗೆದು, ಪಾದಗಳನ್ನು ಗಟ್ಟಿಯಾಗಿ ನಿಲ್ಲಿಸಿ, ಆತನೊಡನೆ ನರ್ತಿಸುತ್ತಿದ್ದರು. ನರ್ತಕಿಯರ ಈ ಚಿತ್ರ ಜತ್ತವಟ್ಟದ ಮಣಿಯಂತೆ ಕಂಗೊಳಿಸುತ್ತಿತ್ತು. ಇದು ನೆಟ್ಟಗಣೆಯ ಮೇಲೆ ತಿರುಗುವ ಒಂದು ಆಟವೆಂದು ವಿದ್ವಾಂಸರ ಮತ.[12]

ಇಂದ್ರನು ನೃತ್ಯದಲ್ಲಿ ತಾಂಡವ ಹಾಗೂ ಲಾಸ್ಯ ಎರಡನ್ನೂ ಏಕಕಾಲದಲ್ಲಿ ಪ್ರದರ್ಶಿಸಿದನೆಂದು ಪಂಪ ಹೀಗೆ ಹೇಳುತ್ತಾನೆ:

13_6_PP_KUH

ಯುವಸಂಘಾತ ಮದೊಂದು ತೊಳ್ದುಱುಗಲೊಳ್ ಮತ್ತೊಂದು ತೋಳೋಳಿಯೊಳ್

ಯುವತೀ ವ್ರಾತಮನೇಕ ಭೇದ ರಸಭಾವಂಗಳ್ ಪೊದಱ್ದುಣ್ಮೆ ಪೊ
ಣ್ಮುವಿನಂ ನರ್ತಿಸೆ, ಸೂತ್ರಧಾರ ವಿಧಿಯಂ ಸುತ್ರಾಮನಂದಿಂತು ತಾಂ
ಡವ ಲಾಸ್ಯಂಗಳ್ ಚೆಲ್ವನೊರ್ಮೆಯೆ ತದೀಯಾ ಸ್ಥಾನದೊಳ್ ತೋಱೆದಂ
(
ಆದಿಪು. ೧೨೭)

ಉದ್ಧತ ಪ್ರಕಾರದ ತಾಂಡವವನ್ನೂ, ಸುಕುಮಾರ ಪ್ರಯೋಗವಾದ ಲಾಸ್ಯವನ್ನು ಏಕಕಾಲದಲ್ಲಿ ಇಂದ್ರ ನರ್ತಿಸಿದುದು ವೈಶಿಷ್ಟ್ಯವಾಗಿದೆ. ಇದಕ್ಕೆ ಪೂರಕವಾಗಿ ಇಂದ್ರನು ಒಂದು ಭಾಗದ ತೋಳುಗಳಲ್ಲಿ ನರ್ತಕರು ಇನ್ನೊಂದು ಭಾಗದ ತೋಳುಗಳಲ್ಲಿ ನರ್ತಕಿಯರೂ ರಸಭಾವಭೇದಗಳನ್ನು ಹೊರ ಸೂಸುತ್ತ ನರ್ತಿಸುತ್ತಿರುತ್ತಾರೆ.

ದೇವನರ್ತಕಿಯರ ವರ್ಣನೆ ಮಾಡುವಾಗ ಕವಿ ಪಂಪ ದಿವಿಜಸುಂದರಿಯರ್‌ಗೊಂದಳ ಮಾಡುವಲ್ಲಿ ಎಂದಿದ್ದು, ಇಲ್ಲಿ ಗೊಂದಳ ಸಮೂಹನೃತ್ಯವನ್ನು ಅರ್ಥೈಸುತ್ತದೆ.

ಇಂದ್ರನ ನರ್ತನವನ್ನು ವರ್ಣಿಸುವಾಗ ಪಂಪ ಒಂದು ನೃತ್ಯಕಾರ್ಯಕ್ರಮದ ಪರಿಕರಗಳನ್ನು ಹೀಗೆ ದೃಶ್ಯಮಾನವನ್ನಾಗಿಸುತ್ತಾನೆ :

ಧರೆ ರಂಗಂ, ಗಗನಂ ಮನೋಹರಂನಾಟ್ಯಾಲಯಂ, ನರ್ತಕಂ
ಸುರರಾಜಂ, ಸಭೆ ದೇವಮರ್ತ್ಯಸಭೆ, ಸಂದಾರಾಧ್ಯನೀಶಂ ಜಗದ್
ಗುರು, ತನ್ನೃತ್ಯಫಲಂ ತ್ರಿವರ್ಗವಿಭವಂ ತಾನೆಂದೊಡೇ ಮಾತೊ! ಸಾ
ಸಿರಮುಂ ನಾಲಗೆಯುಳ್ಳ ವಾಸುಗಿಯು ಮಿನ್ನೇನೆಂದದಂ ಬಣ್ಣಿಪಂ           (೧೨೮)

ಇದರಲ್ಲಿ ಸುಂದರವಾದ, ಚೇತೋಹಾರಿಯಾದ ಕಲ್ಪನೆಯ ಚಿತ್ರಣವಿದೆ. ಭೂಮಂಡಲವೇ ಇಂದ್ರನು ನರ್ತಿಸುವ ರಂಗಭೂಮಿ; ಗಗನವೇ ನಾಟ್ಯಾಲಯ; ದೇವೇಂದ್ರನ ನೃತ್ಯವನ್ನು ವೀಕ್ಷಿಸುವ ಪ್ರೇಕ್ಷಕರಾದರೋ ದೇವಜನ ಹಾಗೂ ನಾಭಿರಾಜಾದಿ ಮರ್ತ್ಯರು; ಸಹಸ್ರಾಕ್ಷನ ಅಪೂರ್ವವಾದ ಈ ನೃತ್ಯಕ್ಕೆ ಆರಾಧ್ಯದೈವ ಜಗದ್ಗುರುವಾದ ವೃಷಭದೇವ; ನರ್ತಿಸುವ ನೃತ್ಯಪಟುವೂ ಸುರಲೋಕದ ಒಡೆಯ ದೇವೇಂದ್ರ; ಇನ್ನು ನೃತ್ಯದ ಫಲ ಪುರುಷಾರ್ಥಪ್ರಾಪ್ತಿ. ಇಂತಹ ಅಪೂರ್ವ ದೃಶ್ಯವನ್ನು ಸಾವಿರ ನಾಲಗೆಯುಳ್ಳ ವಾಸುಕಿಗೂ ವರ್ಣಿಸಲು ಅಸಾಧ್ಯವೆಂದು ಕವಿ ತಿಳಿಸುತ್ತಾ ಪ್ರೇಕ್ಷಕರನ್ನು ನರ್ತನಾನಂದ ಲೋಕಕ್ಕೆ ಕರೆದೊಯ್ಯುತ್ತಾನೆ. ಇದೇ ಭಾವದ ಶ್ಲೋಕ ಮೂಲದಲ್ಲೂ ಇದೆ.[13]

ನರ್ತನಾಧಿ ದೇವನಾದ ನಟರಾಜನ ಆನಂದ ನೃತ್ಯದ ಸೊಗಸನ್ನು ಇಲ್ಲಿ ಕಾಣಬಹುದು. ನಂದಿಕೇಶ್ವರ ತನ್ನ ಗ್ರಂಥ ಅಭಿನಯ ದರ್ಪಣದ ಆರಂಭದಲ್ಲಿ ನೃತ್ಯಾಭಿಮಾನಿ ದೇವತೆಯಾದ ನಟರಾಜನನ್ನು ಹೀಗೆ ಸ್ತುತಿಸುತ್ತಾನೆ.[14]

ತ್ರಿಭುವನವೇ ಶಿವನ ಆಂಗಿಕಾಭಿನಯವಾಗಿ, ಅರ್ಥಾತ್ ತ್ರೈಲೋಕಗಳಲ್ಲಿ ನಡೆಯುವ ವ್ಯಾಪಾರಗಳಾದ ಹಗಲು ರಾತ್ರಿ, ಋತುಗಳು ಗಾಳಿ ಮಳೆ, ಮೋಡ ಸಿಡಿಲು, ಸಮುದ್ರದ ಉಬ್ಬರವಿಳಿತ, ನದಿಗಳ ಕಲರವ, ಜೀವಿಗಳ ಜನನ ಮರಣ ಇತ್ಯಾದಿ ಇವುಗಳೆಲ್ಲಾ ಶಿವನ ಆಂಗಿಕಾಭಿನಯದ ಮೂರ್ತರೂಪವೇ ಆಗಿ, ದಿವ್ಯ ನರ್ತನಕ್ಕೆ ಬೇಕಾದ ವಾಚಿಕವು ವೇದ, ಉಪನಿಷತ್, ಪುರಾಣ, ಶಾಸ್ತ್ರ, ವ್ಯಾಕರಣ ಸೂತ್ರ ಭಾಷ್ಯ ಇತ್ಯಾದಿ ಸರ್ವ ವಾಙ್ಮಯವೇ ಆಗಿ, ನಟರಾಜನಾದ ಶಿವನ ನೃತ್ಯಕ್ಕೆ ಚಂದ್ರ ತಾರಾದಿಗಳೇ ಆಹಾರ್ಯಗಳಾದುವು. ಹೀಗೆ ಜಗದ್ವ್ಯಾಪಕನಾಗಿ ಸಾತ್ವಿಕ ಮನದಂತರಾಳದ ಭಾವಗಳನ್ನು ಹೊಂದಿ ಸಾತ್ವಿಕದ ಮೂರ್ತಸ್ವರೂಪವೇ ಆದ ಶಿವನಿಗೆ ನಾನು ನಮಸ್ಕರಿಸುತ್ತೇನೆ.

ದೇವಲೋಕದ ಪರಮಾರ್ಥದೈವ ಸೌಧರ್ಮೇಂದ್ರ. ಅವನನ್ನು ಶಿವನಿಗೆ ಸಮೀಕರಿಸಿದರೆ ಅದು ನಟರಾಜನ ಸ್ತುತಿಗೆ ಸರಿಯಾಗುತ್ತದೆ. ಶಿವನ ತಾಂಡವಗಳಿಗೆ ವಿಶಾಲವಾದ ರಂಗದ ಅವಶ್ಯಕತೆ ಇದೆಯಷ್ಟೆ! ಅದೇ ರೀತಿಯಾಗಿ ಇಂದ್ರನ ತಾಂಡವಗಳ ವ್ಯಾಪಕತ್ವವನ್ನೂ ಭವ್ಯತೆಯನ್ನೂ, ದಿವ್ಯ, ಅನುಭವವನ್ನೂ ಮೂಡಿಸಲು ಕವಿ ಪಂಪ ಧರೆರಂಗಂ……. ಪದ್ಯವನ್ನು ರಚಿಸಿರಬೇಕು ಎನಿಸುತ್ತದೆ.

ವೃಷಭದೇವನ ಪರಿನಿಷ್ಕ್ರಮಣ ಕಲ್ಯಾಣದಲ್ಲಿ ಅಮರ ನರ್ತಕಿಯಾದ ನಿಲಾಂಜನೆಯ ನೃತ್ಯ ಪ್ರಸಂಗವನ್ನು ಪಂಪನು ಅದ್ವಿತೀಯವಾಗಿ ಚಿತ್ರಿಸಿದ್ದಾನೆ. ಪಂಪನ ಈ ಕಲ್ಪನೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅಜರಾಮರವೆನಿಸಿದೆ.

ಮೂಲದಲ್ಲಿ[15] ನೀಲಾಂಜನೆಯೆಂಬ ಸುರನರ್ತಕಿ ನಾಟ್ಯವಾಡುತ್ತಾ ಆಡುತ್ತಾ ಆಯಸ್ಸು ಮುಗಿಯಲು ಮಿಂಚಿನಂತೆ ಅದೃಶ್ಯಳಾದಳು ಎಂಬ ಇಷ್ಟೇ ಮಾತಿನ ಆಧಾರದ ಮೇಲೆ ಹಿತಮಿತ ಮೃದು ವಚನಕಾರನಾದ ಪಂಪ ತನ್ನ ನಿಯಮವನ್ನು ಮುರಿದರೂ, ಕನ್ನಡಿಗರಿಗೆ ಒಂದು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದ ಸುಂದರವಾದ ಚಿತ್ರವನ್ನು ಸಂಪೂರ್ಣವಾಗಿ ದೃಶ್ಯಮಾನವಾಗಿಸಿ ಸುಮಾರು ೩೦ ಕಂದ ಪದ್ಯಗಳಲ್ಲಿ, ಆಕರ್ಷಕ ಪ್ರಸಂಗವನ್ನು ಸೆರೆ ಹಿಡಿದಿದ್ದಾನೆ.

ಆದಿ ತೀರ್ಥಂಕರನಾದ ವೃಷಭ ದೇವನಿಗೆ ಪರಿನಿಷ್ಕ್ರಮಣ ಕಲ್ಯಾಣವು ಅತಿ ಸಮೀಪವೆಂದು ಅವಧಿಜ್ಞಾನದಿಂದ ಅರಿತ ಇಂದ್ರನು ಆದಿದೇವನಿಗೆ ವೈರಾಗ್ಯವನ್ನು ಪ್ರಾಪ್ತವಾಗಿಸಬೇಕೆಂಬ ಉದ್ದೇಶದಿಂದ ಭೋಗಜೀವನದ ವಿಲಾಸವನ್ನು ಸೃಷ್ಟಿಸುತ್ತಾನೆ. ಆರಂಭದಲ್ಲಿ ಇಂದ್ರ ತನ್ನ ಸುರವೃಂದದ ಮೂಲಕ ಸಂಗೀತ ಸುಧೆಯನ್ನು ಆದಿದೇವನಿಗೆ ಉಣಬಡಿಸುತ್ತಾನೆ. ಮುಂದೆ, ಇಂದ್ರನು ತನ್ನ ಆಸ್ಥಾನದ ಸುರಗಣಿಕಾ ತಿಲಕೆಯಾದ ಸುರಸುಂದರಿ ನೀಲಾಂಜನೆಯ ನೃತ್ಯವನ್ನು ಏರ್ಪಡಿಸುತ್ತಾನೆ. ಲಾವಣ್ಯವತಿಯೂ, ಮನೋಹರ ರೂಪವತಿಯೂ ಸುರ ನೃತ್ಯಂಗನೆಯೂ ಆದ ನೀಲಾಂಜನೆ ನಿತ್ಯವೂ ತನ್ನ ಅಮೋಘ ನರ್ತನದಿಂದ ಇಂದ್ರನನ್ನು ಮೆಚ್ಚಿಸಿ ಮೆಚ್ಚುಗಳನ್ನು ಪಡೆದ ಭಾಗ್ಯವಂತೆಯಾಗಿದ್ದಳಂತೆ.

ಕರ್ಬಿನ ಬಿಲ್ಲಿಂ ಮಸೆದ ಮದನನಲರ್ಗಣೆ ಬರ್ದುಕಿತ್ತೆನಿಸುತ್ತ (೧೯) ಯೌವನವತಿ ಬೆಡಗಿನ ನೀಲಾಂಜನೆ ರಂಗವೇದಿಕೆಯನ್ನು ಹೊಕ್ಕಳು.

ಇಂತಹ ಸುರನರ್ತಕಿ ವೇದಿಕೆಯನ್ನಷ್ಟೇ ಅಲ್ಲದೆ ಸಭಾಸದರ ಮನೋರಂಗವನ್ನೂ ಪ್ರವೇಶಿಸಿದಳು. ಜನವಿಕೆಯ (ಅ.೨ ರಲ್ಲಿ ಚರ್ಚಿಸಿದೆ) ಮರೆಯಲ್ಲಿ ನಿಂತಿರುವ ನೀಲಾಂಜನೆ ಮುಗಿಲ ಮಿಂಚಿನ ಬಳ್ಳಿಯಂತೆ ಕಂಗೊಳಿಸುತ್ತಿದ್ದಳು. ಆಕೆಯು ನಿಂತ ಭಂಗಿಯಲ್ಲಿ ರಸವು ಮಡುವಾಗಿ ನಿಂತಂತೆ ಭಾಸವಾಗುತ್ತಿತ್ತು.

ಭಂಗಿ[16] ಎನ್ನುವುದು ಶರೀರದ ಒಂದು ನಿಲುವು. ಇದು ನಾಲ್ಕು ವಿಧವಾಗಿದೆ : ಸಮಭಂಗ, – ಸಹಜವಾಗಿ ಹಾಗೂ ನೇರವಾಗಿ ನಿಲ್ಲುವುದು; ಅಭಂಗ – ಒಂದು ಕಾಲನ್ನು ಇನ್ನೊಂದು ಕಾಲಿನಿಂದ ಒಂದು ಗೇಣು ಮುಂದಕ್ಕೆ ಇಟ್ಟು ಶರೀರವನ್ನು ಸ್ವಲ್ಪ ಬಾಗಿಸಿ ಮೈ ಭಾರವನ್ನು ಒಂದು ಕಾಲಿನ ಮೇಲಿಡುವುದು; ಅತಿಭಂಗ – ಮೈಯನ್ನು ತೀರ ಬಾಗಿಸಿ ಒಂದು ಕಾಲನ್ನು ಮುಂದೆ ಇನ್ನೊಂದು ಕಾಲನ್ನು ಎತ್ತಿ ಹಿಂದಕ್ಕೆ ಚಾಚಿ ಕಾಲ್ಬೆರಳುಗಳ ಮೇಲಿಡುವುದು; ತ್ರಿಭಂಗ – ಇದು ಲಾಸ್ಯದ ಸಹಜ ಲಕ್ಷಣ. ದೇಹವನ್ನು ಮೂರು ಕಡೆಗಳಲ್ಲಿ ಬಾಗಿಸುವುದು (ಅಂದರೆ ತಲೆ, ದೇಹ, ಕೈಕಾಲುಗಳು).

ಪಂಪ, ನೀಲಾಂಜನೆಯ ನೃತ್ಯದಲ್ಲಿನ ಶಾಸ್ತ್ರೀಯತೆ ಮತ್ತು ಶುದ್ಧನೃತ್ತ ಭಾಗವನ್ನು ವಿವರವಾಗಿ ನಿರೂಪಿಸುತ್ತಾನೆ. ಶುದ್ಧನೃತ್ತದಲ್ಲಿ ಪಾದಗಳ ಚಲನೆಯು ಮೂರು ಕಾಲಗಳಲ್ಲಿ ವಿವಿಧ ಗತಿಗಳಲ್ಲಿ ಇರುತ್ತದೆ. ಹಸ್ತಗಳು ಪಾದಗಳ ಚಲನೆಗೆ ಅನುಗುಣವಾಗಿ ಆಲಂಕಾರಿಕವಾಗಿ ಬಳಸಲ್ಪಡುತ್ತದೆ. ಇಲ್ಲಿ ಯಾವುದೇ ಪ್ರತ್ಯೇಕವಾದ ಭಾವಗಳ ಅಭಿವ್ಯಕ್ತಿಗೆ ಅವಕಾಶವಿಲ್ಲ. ದೈವದತ್ತವಾದ ಶರೀರ ಸೌಂದರ್ಯವನ್ನು ನೂರ್ಮಡಿಗೊಳಿಸುವುದೇ ಈ ನೃತ್ತ ಬಂಧದ ಉದ್ದೇಶ ಎಂದು ಲಾಕ್ಷಣಿಕರ ಮತ.

ಪಂಪ, ನೀಲಾಂಜನೆಯ ತಾಳಲಯ ಜ್ಞಾನದ ಬಗ್ಗೆ ಹೇಳುತ್ತಾ,

ತಾಳದ ಲಯಮಂ ನಿಱಿ
ನೀಳಾಳಕ ಹಾರದ ಪೊದೞ್ದ ಮುತ್ತೆಂಬಿವು ಮುಂ
ಮೇಳಿಸಿ ಕಯ್ಕೊಂಡವು ಲುಳಿ
ತಾಳಕಿ ಕಯ್ಕೊಂಡಳೆಂಬುದೊಂದಚ್ಚರಿಯೆ (೨೪)

ಆಕೆ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಿದ್ದರೆ ಉಟ್ಟ ವಸ್ತ್ರದ ನಿರಿಗೆಗಳು, ಕಪ್ಪು ಮುಂಗುರುಳು ಧರಿಸಿದ ಮುತ್ತು ಮಣಿಗಳ ಮಾಲೆಗಳು, ಸಹ ಅದೇ ಲಯದಲ್ಲಿ ಓಲಾಡುತ್ತಿದ್ದುವಂತೆ. ಎಂತಹ ಅಪೂರ್ವ ದೃಶ್ಯ! ತಾಳ ಶುದ್ಧನರ್ತನದ ಮಾದರಿಯನ್ನು ಕವಿ ಪಂಪ ಈ ಪದ್ಯದ ಮೂಲಕ ತೋರಿಸಿದ್ದಾನೆ.

ಗೀತ, ವಾದ್ಯ ಹಾಗೂ ನೃತ್ಯಗಳಲ್ಲಿ ತಾಳ ಬದ್ಧತೆಗೆ ಅತ್ಯಂತ ಪ್ರಮುಖ ಸ್ಥಾನವನ್ನು ಸೋಮೇಶ್ವರ ಕೊಡುತ್ತಾನೆ.[17]

ಸುರನರ್ತಕಿ ನೀಲಾಂಜನೆ ನಾಟ್ಯಶಾಸ್ತ್ರವನ್ನೇ ಹೊಸದಾಗಿಸಿ ನರ್ತಿಸುತ್ತಿದ್ದ ರೀತಿಯನ್ನು ಕವಿ ಹೀಗೆ ವರ್ಣಿಸುತ್ತಾನೆ.

ರಸಭಾವಾಭಿನಯಂಗಳ್
ಪೊಸವೆ, ಪುಗಿಲ್ಪೊಸವೆ, ಚಲ್ಲಿಗಳ್ ಪೊಸವೆ, ನಯಂ
ಪೊಸವೆ, ಕರಣಂಗಳುಂ ನಿ
ಪ್ಪೊಸವೆನೆ ಪೊಸಯಿಸಿದಳಾಕೆ ನಾಟ್ಯಾಗಮಮಂ        (೨೫)

ವಿಭಾವಾನುಭಾವವ್ಸಭಿಚಾರಿಸಂಯೋಗಾದ್ರಸ ನಿಷ್ಪತ್ತಿ[18] ಎಂಬುದು ಭರತ ಮುನಿಯ ಪ್ರಸಿದ್ಧವಾದ ರಸ ಸೂತ್ರ. ಭಾವ, ವಿಭಾವ, ಅನುಭಾವ ಹಾಗೂ ಸಂಚಾರಿ ಭಾವಗಳು (ನೋಡಿ ಅನುಬಂಧ ಅ. ಪರಿಭಾಷೆ) ಒಂದಕ್ಕೊಂದು ಮೇಳೈಸಿದಾಗ ರಸೋತ್ಪತ್ತಿ ಉಂಟಾಗುವುದು. ಈ ರಸೋತ್ಪತ್ತಿಯೇ ಸಹೃದಯ ಪ್ರೇಕ್ಷಕರಲ್ಲೂ ಸಮಾನವಾಗಿ ಸ್ಪಂದನಗೊಂಡು ರಸಾಸ್ವಾದನ್ನುಂಟುಮಾಡುತ್ತದೆಯೆಂದು ಮೀಮಾಂಸಕರ ಮತ. ಇಂತಹ ಅನುಭವವನ್ನು  ನಿಲಾಂಜನೆ ಸಭಾಸದರಿಗೆ ಉಂಟು ಮಾಡಿದಳು. ಅಲ್ಲದೇ ಆಕೆ ಅಭಿನಯಗಳಿಂದ ಕೂಡಿದ ನೃತ್ಯಬಂಧಗಳಷ್ಟೇ ಅಲ್ಲದೇ ಶುದ್ಧ ನೃತ್ತ ಬಂಧಗಳನ್ನೂ ಆಡಿ ತೋರಿಸಿದಳು. ನೀಲಾಂಜನೆ ತನ್ನ ನೃತ್ಯ ಹಾಗೂ ನೃತ್ತ (ನೋಡಿ ಅನುಬಂಧ ಅ. ಪರಿಭಾಷೆ) ಬಂಧಗಳನ್ನು ಮಾಡುವಾಗ ರಂಗವನ್ನು ಪ್ರವೇಶಿಸುವ ಪರಿಯೂ ಹೊಸದಾಗಿದ್ದು ಅವುಗಳಲ್ಲಿ ಬರುವ ಚಲನೆಯೂ ಹೊಸದಾಗಿದ್ದು, ಕರಣಗಳನ್ನೂ (ನೋಡಿ ಅನುಬಂಧ ಅ. ಪರಿಭಾಷೆ) ಪ್ರದರ್ಶಿಸುವ ರೀತಿಯೂ ಹೊಸದಾಗಿ ಹೊಸ, ಸೊಬಗಿನಿಂದ ಕೂಡಿದ ಅನೇಕ ನೃತ್ಯಬಂಧಗಳನ್ನು ಆಕೆ ನರ್ತಿಸಿದಳಂತೆ.

14_6_PP_KUH

15_6_PP_KUH

ಮೇಲಿನ ಪದ್ಯದಲ್ಲಿ ಬಳಕೆಯಾಗಿರುವ ಚಲ್ಲಿ ಶಬ್ದವು ಲಾಕ್ಷಣಿಕ ಸೂತ್ರ ಇಲ್ಲದೇ ಪರಂಪರೆಯಿಂದ ಬಂದ ಶಬ್ದಗಳ ಗುಂಪಿಗೆ ಸೇರುತ್ತದೆ. ಇಂತಹ ಶಬ್ದಗಳು ರೂಢ ಶಬ್ದಗಳು ಎಂದು ಪ್ರಸಿದ್ಧಿ ಪಡೆದು ತಮ್ಮ ಸ್ಥಾನವನ್ನು ಶಬ್ದ ಪ್ರಪಂಚದಲ್ಲಿ ಸ್ಥಾಪಿಸಿಕೊಂಡಿರುತ್ತವೆ. ಚಲ್ಲಿಯ ಧಾತುರೂಪ ಚಲ ಚಲ ಎಂದರೆ ಚಲನೆ. ಈ ಅರ್ಥವನ್ನು ಕೊಡುವ ಚಲ್ಲಿ ಶಬ್ದವನ್ನು ವೇಮ ಭೂಪಾಲ ಪ್ರಯೋಗಿಸಿದ್ದಾನೆ.[19][1] ಪ್ರಾಯೇಣ ಸರ್ವಲೋಕಸ್ಯ ನೃತ್ತಮಿಷ್ಛಂ ಸ್ವಭಾವತಃ |
ಮಂಲ್ಯಾಮಿತಿ ಕೃತ್ಪಾಚ ನೃತ್ತಮೇತತ್ ಪ್ರಕೀರ್ತಿತಮ್ |
ವಿವಾಹ ಪ್ರಸವಾವಾಹ ಪ್ರಮೋದಾಭ್ಯುದಯಾದಿಷು |
ವಿನೋದ ಕಾರಣಂ ಚೇತಿ ನೃತ್ತಮೇ ತತ್ ಪ್ರವಾತತಮ್ ||
ನಾಟ್ಯಶಾ. (ಸಂ. ಮಾ. ರಾಮಕೃಷ್ಣ ಕವಿ) ೪-೨೭೧-೭೨

[2] ಎಂ. ಚಿದಾನಂದ ಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು. ೧೮೧-೮೨.

[3] ಭಾಜನ, ಭೋಜನ, ಶಯ್ಯಾ, ಚಮೂ, ವಾಹನ, ಆಸನ, ನಿಧಿ, ರನ್, ಪುರ, ನಾಟ್ಯ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಶ್ರೀವತ್ಸ, ಪು.೧.

[4] K.T.A. p. ೨೪೭.

[5] ಎಂ. ಚಿದಾನಂದ ಮೂರ್ತಿ, ಪೂರ್ವೋಕ್ತ, ಪು.೧.

[6] ಪಂಪಭಾ. (ಪ್ರ. ಕಸಾಪ. ೧೯೭೭) ಸಂ.ಎನ್. ಅನಂತರಂಗಾಚಾರ್ ಆ. ೧೪-೫೯-೬೦.

[7] ಯತೋ ಹಸ್ತಸ್ತೋ ದೃಷ್ಟಿರ್ಯತೋ ದೃಷ್ಟಿಸ್ತತೋಮನಃ
ಯತೋ ಮನಸ್ತತೋ ಭಾವೊಯತೋ ಭಾವಸ್ತತೋರಸಃ ||
ಅಭಿದ. ೪೦, ಸಂ. . ಶ್ರೀದರಮೂರ್ತಿ

[8] ನೋಡಿ ರೇಖಾಚಿತ್ರ ರಂಗಾಕ್ರಮಣ ಪು. ೧೦೯.

[9] ಯಥಾ ಬಹುದ್ರವ್ಯ ಯುತೇರ್ವ್ಯಂಜನೈರ್ಬಹುಭೀರ್ಯುತಮ್ |
ಆಸ್ವಾದಯಂತಿ ಭುಂಜನಾ ಭುಕ್ತಂ ಭುಕ್ತವಿದೋ ಜನಾಃ |
ಭಾವಾಭಿನಯ ಬುದ್ಧಾನ್ ಸ್ಥಾಯೀ ಭಾವಾಂಸ್ತಥಾ ಬುಧಾಃ |
ಆಸ್ವಾದಯಂತಿ ಮನಸಾ ತಸ್ಮಾನ್ನಾಟ್ಯರಸಾಃ ಸ್ಮೃತಾಃ |
ನಾಟ್ಯಶಾ. , ೩೫೩೬ ಸಂ. ಮಾ. ರಾಮಕೃಷ್ಣ ಕವಿ.

[10] ರೇಖಾಚಿತ್ರ – ಪು. ೧೧೧.

[11] ವಿಕ್ಷಿಪ್ತಾ ಬಾಹುವಿಕ್ಷೇಪೈಸ್ತಾರಕಾಃ ಪರಿತೋಭ್ರಮನ್
ಭ್ರಮನಾವಿದ್ಧ ವಿಚ್ಛಿನ್ನ ಹಾರ ಮುಕ್ತಾಫಲಶ್ರಿಯಃ
ನೃತ್ಯತೋಸ್ಯ ಭುಜೋಲ್ಲಾಸ್ಯಃ ಪಯೋದಾಃ ಪರಿಘಟ್ಟತಾಃ
ಪಯೋಲವ ಚ್ಯುತೋ ರೇಜುಃ ಶುಚೇವ ಕ್ಷರದಶ್ರವಃ ||
(ಪೂ.ಪು.೧೪೧೨೬, ೧೨೭)

[12] ಆದಿಪುರಾಣ. ಸಂ.ಪ್ರೊ. ಕೆ.ಜಿ. ಕುಂದಣಗಾರ, ಪು. ೨೪೨.

[13] ವಿಕೃಷ್ಟಃ ಕುತಪನ್ಯೋಸೋ ಮಹೀ ಸಕಲಭೂಧರಾ
ರಂಗಸ್ತ್ರಿ ಭುವನಾ ಭೋಗಃ ಸಹಸ್ರಾಕ್ಷೋ ಮಹಾನಟಃ
ಪ್ರೇಕ್ಷಕಾ ನಾಭಿರಾಜಾಧ್ಯಾ : ಸಮಾರಾಧ್ಯೋ ಜಗದ್ಗುರುಃ
ಫಲಂ ತ್ರಿವರ್ಗಸಂಭೂತಿಃ ಪರಮಾನಂದ ಏವ ಚ ||
(ಪೂ. ಪು ೧೪೧೦೦, ೧೦೧)

[14] ಆಂಗಿಕಂ ಭುವನಂ ಯಸ್ಯ  ವಾಚಿಕಂ ಸರ್ವವಾಙ್ಮಯಂ|
ಆಹಾರ‍್ಯಂ ಚಂದ್ರ ತಾರಾದಿ ತಂದ ವಂದೇ ಸಾತ್ವಿಕಂ ಶಿವಂ ||
(ಸಂ. . ಶ್ರೀಧರಮೂರ್ತಿ, ಅಭಿದ)

[15] ತತೋನೀಲಾಂಜನಾನಾಮ ಲಲಿತಾ ಸುರನರ್ತಕೀ |
ರಸಭಾವಲಯೋಪೇತಂ ನಟಂತಿ ಸಪರಿಕ್ರಂ ||
ಕ್ಷಣಾದ ದೃಶ್ಯತಾಂ ಪ್ರಾಪ ಕಿಲಾಯುರ್ದೀಪಸಂಕ್ಷಯೇ
ಪ್ರಭಾತರಲಿತಾಂ ಮೂರ್ತಿಂ ದಧಾವಾ ತಡಿದುಜ್ವಲಾಂ
………………………………………..
ಸೌದಾಮಿನಿಳತೇವಾಸೌ…………..
ಸ್ವರೂಪಾಂತರಂ ತ ದಾ.       (ಪೂ. ಪು ೧೭, , ,)

[16] ನೃತ್ಯಕಲೆ (ಯು.ಎಸ್.ಕೃಷ್ಣರಾವ್ ಚಂದ್ರಭಾಗಾದೇವಿ), ಪುಟ ೧೭೩. ನೋಡಿ ಛಾಯಾಚಿತ್ರ ಭಂಗಿಗಳು.

[17] ನ ತಾಲೇನ ವಿನಾ ಗೀತಂ ನ ವಾದ್ಯಂ ತಾಲವರ್ಜಿತಂ |
ನ ನೃತ್ಯಂ ತಾಲಹೀನಂ ಸ್ಯಾದತಸ್ತಾಲೋ ತ್ರsಕಾರಣಂ |
ಗೀತಂ ವಾದ್ಯ ತಥಾ ನೃತ್ಯಂ ತಿತಯಂ ಯೇನ ಲಭ್ಯತೇ ||
ಬರೋಡಾ (ಮಾನಸ ೧೬೮೩೨೮೩೮) ಸಂ. ಜಿ.ಕೆ. ಶ್ರೀ ಗೋಂಡೇಕರ್.

[18] ನಾಟ್ಯಶಾ. ೬-೨೪. ಸಂ. ರಾಮಕೃಷ್ಣ ಕವಿ.

[19] ಸ್ಕಂಧಸ್ಯ ಮಣಿಬಂಧಸ್ಯ ಕೋಣಸ್ಯಾಪಿ ಪ್ರಚಾಲನಾತ್
ಸೋಲ್ಲಾಸಂ ತ್ರಿವಿಧಾ ಚಲ್ಲಿಃ ಕಥಿತಾ ವಾದ್ಯ ಕೋವಿದೈಃ
ವೇಮ. ಉದ್ಧೃತಿ. ಭರಕೋ. ೨೦೫.