ನಾಟ್ಯಾಂಗ : ನೃತ್ಯ, ನಾಟ್ಯಗಳಲ್ಲಿ ಬಳಸುವ ಪಾಟಾಕ್ಷರ ಹಾಗೂ ಅಭಿನಯಾದಿಗಳು. ಇವು ಹನ್ನೆರಡು. ಪೀಠಿಕ, ಕಾಕ, ಕೂಟಮಾನ, ಕೈಯ್ಯಡು, ಉರುಪು, ಕಳಾಸಿಕಾ, ಪ್ರಚುರ, ಪಸರ, ಶಬ್ದ, ಮರಾಳಿಕ, ಕಡಕಟ್ಟು ಹಾಗೂ ಚಾಳಿಯ್ಯ.

ನಾಟ್ಯಾಂಗ ೧೦, ನಟ್ಟುವ, ನರ್ತಕ, ರಂಗಭೂಮಿ, ಆಹಾರ್ಯ, ಆತೋದ್ಯ, ಅಭಿನಯ, ಸಭಾನಾಯಕ, ಗಾಯಕ, ಗಾಯಕಿ ವೃಂದ, ಪ್ರೇಕ್ಷಕರು. (ಭಕಮಂ. ಪು. ೩೮೦)

ನಾಟ್ಯಧರ್ಮಿ : ಆಂಗಿಕಾಭಿನಯವನ್ನು ಅಭಿನಯಿಸುವ ನಿರ್ದಿಷ್ಟ ಕ್ರಮದಲ್ಲಿ ಒಂದು. ರಂಗಸ್ಥಳದಲ್ಲಿ ಬಾಹ್ಯವಸ್ತುವಿನ ಅನುಕರಣೆಯಿಂದ ಮಾಡುವಂತಹ ಅಭಿನಯ. (ನಾಟ್ಯಶಾ. ೧೩-೬೮,೬೯) (ನರ್ತನಿ. ೪, ೪೦, ೪೧, ೪೩)

ನಾಟ್ಯರಸ : ರಂಗದ ಮೇಲೆ ವಿಭಾವ, ಅನುಭಾವ ಹಾಗೂ ಸಂಚಾರಿಗಳಿಂದಲೂ, ಚತುರ್ವಿಧ, ಅಭಿನಯಗಳಿಂದಲೂ ಆಸ್ವಾದನೀಯವಾಗುವಂತಹ ರಸಗಳು. ಉದಾಹರಣೆಗೆ :೦ ವೀರ, ಹಾಸ್ಯ, ಅದ್ಭುತ ಇತ್ಯಾದಿ. (ನಾಟ್ಯಶಾ. ೬-೩೩, ೩೪) (ನರ್ತನಿ. ೧೬೩, ೧೬೪ ಪೂ.)

ನಾರಾಟ : ಸ್ಥಾಯದ ಒಂದು ವಿಧ.

ನಾಸಿಕಾ ಭೇದ ನಾಸಿಕಾ ಸ್ಫುರಿತ : ಮೂಗಿನ ಚಲನಾ ವಿಧಾನ.

ನಿಜ್ಜವಣೆ (ನಿಜಾಪನ > ನಿಜಾವನ > ನಿಜ್ಜವಣೆ) : ಒಂದು ಸ್ಥಾಯಿ, ದೇಶೀ ಲಾಸ್ಯಾಂಗ. ಸಭಾಸದರನ್ನು ಮೋಹಿತಗೊಳಿಸುವಂತೆ ಅಪ್ರಯತ್ನವಾಗಿ ಸುಂದರತೆಯಿಂದ ಕೂಡಿದ ಅಂಗಹಾರ, ರೇಖಾ, ಕೈಗಳು ಮತ್ತು ಕಣ್ಣುಗಳ ಚಲನೆ. (ನೃತ್ಯಾಯ. ೧೪-೧೫೩೫)

ನಿಬದ್ಧ : ಅಂಗಗಳಿಂದಲೂ ಧಾತುಗಳಿಂದಲೂ ರಚಿತವಾಗಿರುವುದು. ತಾಳದ ಚೌಕಟ್ಟಿಗೆ ಒಳಪಟ್ಟು ರಸಾನ್ವಿತವಾದ ಬಂಧ. (ನರ್ತನಿ. ೩-೩ ಪೂ.) (ಸಂಗೀದಾ. ೨, ಪು. ೧೬.)

ನಿಲುವು : ನೋಡಿ ಸ್ಥಾನಕ.

ನೂರೆಂಟು ತಾಳ : ಚಚ್ಚಪುಟ, ಚಾಚಪುಟ, ಷಟ್ವಿತಾಪುತ್ರಕ, ಸಂಪ್ಪೇಷ್ಟಕ, ಉದ್ಧಟಿತ, ಆದಿತಾಲ, ದರ್ಪಣತಾಲ, ಚಚ್ಚರೀ, ಸಿಂಹಲೀಲಾ, ಕಂದರ್ಪ, ಸಿಂಹವಿಕ್ರಮ, ಶ್ರೀರಂಗ, ರತಿಲೀಲ, ರಂಗತಾಲ, ಪರಿಕ್ರಮ, ಪ್ರತ್ಯಂಗ, ಗಜಲೀಲ, ತ್ರಿಭಿನ್ನ, ವೀರವಿಕ್ರಮ, ಹಂಸಲೀಲಾ, ವರ್ಣಭಿನ್ನ, ರಾಜಚೂಡಾಮಣಿ, ರಂಗದ್ಯೋತನ, ರಾಜತಾಳ, ಸಿಂಹವಿಕ್ರೀಡಿತ, ವನಮಾಲಿ, ಚತುರಶ್ರವರ್ಣ, ತ್ರ್ಯಸ್ರವರ್ಣ, ಮಿಶ್ರವರ್ಣ, ವರ್ಣತಾಳ, ಖಂಡವರ್ಣತಾಳ, ರಂಗಪ್ರದೀಪ, ಹಂಸನಾದ, ಸಿಂಹನಾದ, ಮಲ್ಲಿಕಾಮೋದ, ಶರಭಲೀಲಾ, ರಂಗಾಭರಣ, ತುರಂಗಲೀಲಾ, ಸಿಂಹನಂದನ, ಜಯಶ್ರೀ, ವಿಜಯಾನಂದ, ಪ್ರತಿತಾಳ, ದ್ವಿತೀಯಕ, ಮಕರಂದ, ಕೀರ್ತಿತಾಳ, ವಿಜಯತಾಳ, ಜಯಮಂಗಲತಾಳ, ರಾಜವಿದ್ಯಾಧರ, ಮಂಠತಾಳ, ಅನ್ಯಮಂಠ (ನೇತ್ರಮಠ್ಯ), ಪ್ರತಿಮಠ್ಯ, ಜಯತಾಳ, ಕುಡುಕ್ಕಾತಾಳ, ನಿಸ್ಸಾರುಕಾ, ನಿಸ್ಸಾನುಕಾ, ಕ್ರೀಡಾತಾಳ, ತ್ರಿಭಂಗೀ, ಕೋಕಿಲಪ್ರಿಯ, ಶ್ರೀಕೀರ್ತಿ ತಾಳ, ಬಿಂದುಮಾಲಿನ, ನಂದನ, ಶ್ರೀನಂದನ, ಉದ್ವೀಷಣ, ಮಂಠಿಕಾತಾಳ, ಆದಿಮಠ್ಯ, ವರ್ಣಮಠ್ಯ, ಡೇಂಕಿತಾಳ, ಅಭಿನಂದನ, ನವಕ್ರೀಡ, ಮಲ್ಲತಾಳ, ದೀಪಕ, ಆನಂಗತಾಳ, ವಿಷಮತಾಳ, ನಾಂದಿತಾಳ, ಮುಕುಂದತಾಳ, ಕರ್ಷುಕ, ಏಕತಾಳ, ಕಂಕಾಲತಾಳ, ಝೋಂಬಡ, ಪೆಣಾತಾಳ, ಅಭಂಗತಾಳ, ರಾಯರಂಗಾಲ, ಲಘುಶೇಖರ, ದ್ರುತಶೇಖರ, ಪ್ರತಾಪಶೇಖರ, ಜಗಝಂಪಾ, ಚತುರ್ಮುಖ, ಝಂಪೆತಾಳ, ಪ್ರತಿಮಠ್ಯ, ತೃತೀಯತಾಳ, ವಸಂತ, ಲಲಿತ, ರತಿ, ಕರಣ, ಷಟ್‌ತಾಳ, ವರ್ಧನ, ವರ್ಣತಾಳ, ರಾಜನಾರಾಯಣ, ಮನದ, ಪಾರ್ವತೀಲೋಚನ, ಗಾರುಗೀ, ಶ್ರೀನಂದನ, ಜಯತಾಳ, ಲೀಲಾತಾಳ, ವಿಲೋಕಿತ, ಲಲಿತಪ್ರಿಯ, ಜನಕ, ಲಕ್ಷ್ಮೀಶ, ಭದ್ರಬಾಣ (ಬದ್ಧಾಭರಣ)

ನೆಲೆ : ಸ್ಥಾನಕ. ನೃತ್ಯಾರಂಭ, ಅಂತ್ಯದ ಸ್ಥಾನ. ನೋಡಿ ಸ್ಥಾನಕ.

ನೇಮ : ವಾದ್ಯ ಪ್ರಬಂಧ, ಮಾರ್ದಂಗಿಕನ ಸ್ಥಾನದಲ್ಲಿ ಒಂದು. ಮೂರು ಖಂಡಿಕೆಗಳ ಮಿಶ್ರಪಾದಗಳು. ಮೂರನೆಯ ಖಂಡಿಕೆ ಉಳಿದೆರಡಕ್ಕಿಂತ ಉದ್ದ. ಇದನ್ನು ಖಂಡಿಕೆಯ ಮೊದಲಲ್ಲಿ ಒಮ್ಮೆ ಅಥವಾ ಎರಡು ಬಾರಿ ಉಚ್ಚರಿಸಿದರೆ ನೇಮ ಎಂಬ ಪ್ರಬಂಧ – ತಾಳವು ಅವರವರ ಇಷ್ಟದಂತೆ (ನರ್ತನಿ. ೨-೯೧, ೯೨)

ನೇಪಥ್ಯ, ನೇಪಥ್ಯಗೃಹ : ನಟ ಹಾಗೂ ಇತರ ಪಾತ್ರಗಳ ವೇಷಭೂಷಣಕ್ಕೆ ಸಂಬಂಧಿಸಿದ್ದು, ಪುಸ್ತ, ಅಲಂಕಾರ, ಅಂಗರಚನ ಮತ್ತು ಸಂಜೀವ ಇದರ ನಾಲ್ಕು ಪ್ರಕಾರ. (ನಾಟ್ಯಶಾ. ೨೧-೧ ಉ. ೫) (ನರ್ತನಿ. ೪-೧೪-೧೫ ಪೂ.)

ನೇರು : ಒಂದು ವಿಧದ ಗತಿ ಸಂಚಾರ. ೧೨ ಉಡುಪುಗಳಲ್ಲಿ ಮೊದಲನೆಯದು. (ನರ್ತನಿ. ೪-೭೨೦)

ನೃತ್ತ : ಯಾವುದೇ ಪ್ರತ್ಯೇಕವಾದ ಭಾವ ರಸಾಭಿನಯಗಳಿಲ್ಲದೇ ತಾಳ, ಲಯ ಬದ್ಧವಾದ ಆಂಗಿಕ ಚಲನೆ, ನೃತ್ತವನ್ನು ಶಾರ್ಙ್ಗಧರ ಬ್ರಹ್ಮ ಕೃತ ಎಂದರೆ ನಂದಿಕೇಶ್ವರ ಶಿವಕೃತ ಎಂದಿದ್ದಾನೆ. (ಅಭಿದ.೧೧) (ಅಭಿದ.೧೫) (ಅಭಿದ. ೧೨ ಪೂ) (ನೃತ್ತರ. ೧.೫೧) (ಲಾಸ್ಯರಂ. ೧.೬೩ ಪೂ)

ನೃತ್ಯ : ನಟ್ ಅಥವಾ ನೃತ್ ಧಾತುವಿನಿಂದ ಉಂಟಾದ ಪದ. ರಸಾಭಾವ ಪೂರ್ಣವಾದ ಅಭಿನಯ. ನೃತ್ತದಲ್ಲಿನ ಅಂಗಾಂಗಗಳ ವಿನ್ಯಾಸ, ನಾಟ್ಯದಲ್ಲಿನ ಅಭಿನಯಗಳ ಸಮ್ಮಿಲನ, ವಿರಹ, ಮೊರೆ, ಸಂತೋಷ, ದುಃಖ ಮೊದಲಾದ ಭಾವಗಳಿರುವ ಹಾಡುಗಳಿಗೆ ಉಚಿತವಾದ ಮುಖಾಭಿನಯ, ಹಸ್ತಾಭಿನಯ. ನೃತ್ಯವು ಸುಕುಮಾರವಾದ ಲಾಸ್ಯ ಪ್ರಯೋಗ ಹಾಗೂ ಉದ್ಧತವಾದ ತಾಂಡವವೆಂದು ಎರಡು ವಿಧ. (ಅಭಿದ. ೧೧)

ವಿಲಾಸವಾದ ಅಂಗ ವಿಕ್ಷೇಪಗಳಿಂದ ದೇಶೀ ತಾಳರಸಾಶ್ರಯವಾಗಿರುವುದು. ಸ್ತ್ರೀಯರ ನೃತ್ಯವನ್ನು ಲಾಸ್ಯ, ಪುರುಷ, ನೃತ್ಯವು ತಾಂಡವ. (ಸಂಗೀದಾ. ಪು.೬೬) (ನರ್ತನಿ. ೪-೫) (ಸಾಸಂಭ. ಪು. ೨೦೪)

ನೃತ್ಯಹಸ್ತಭೇದ : ಅಭಿನದಯಲ್ಲಿ ಬಳಸುವ ಅಸಂಯುತ ಹಾಗೂ ಸಂಯುತ ಹಸ್ತಗಳು.

ಪಂಚಮ (ಸಂ) : ಸಪ್ತಸ್ವರಗಳಲ್ಲಿ ಐದನೆಯದು.

ಪಂಚಮಹಾವಾದ್ಯ (ವಾ): ಕಹಳೆ, ಪಟಹ, ಶಂಖ, ಭೇರಿ, ಜಯಘಂಟೆ. (ವಿವೇಕ.- ೪ನೇ ಪರಿಚ್ಛೇದ. ಪು. ೧೯೦)

ಪಂಚವಿಧ ಪದತಳ ಸಂಚಾರ : ಪಾದ ಚಲನೆಯ ವಿವಿಧ ಕ್ರಮ – ೫ ವಿಧ – ಉದ್‌ಘಟ್ಟಿತ, ಸಮ, ಅಗ್ರತಲಸಂಚರ, ಅಂಚಿತ, ಕುಂಚಿತ.

ಪಕ್ಷ ಭೇದ : ಪಕ್ಕೆಯ ಭೇದ ೫ – ನತ, ಸಮುನ್ನತ,  ಪ್ರಸಾರಿತ, ವಿವರ್ತಿತ, ಅಪಸೃತ.

ಪಕ್ಕವಾದಕ : ನೃತ್ಯ ಹಾಗೂ ಗಾನದಲ್ಲಿ ವಾದ್ಯಗಳನ್ನು ನುಡಿಸುವವ, ಅತೋದ್ಯಕಾರ.

ಪಟ್ಟ : ತಾಲವಾದ್ಯ.

ಪಟಾವುಜ : ಮೃದಂಗವನ್ನು ಹೋಲುವ ಅವನದ್ಧ ವಾದ್ಯ. ದೇಶೀ ಪಟಹ – ಲೋಕ ಭಾಷೆಯಲ್ಲಿ ಮೃದಂಗಕ್ಕೆ ಪರ್ಯಾಯ ಪದ. (ಸಂಗೀಸಾ. ೧೪-೯೨)

ಪಣಹ > ಪಟಹ > ಪಣವ(ವಾ) : ಅವನದ್ಧ ವಾದ್ಯದಲ್ಲಿ ಒಂದು ವಿಧ. ನೃತ್ಯ, ನಾಟ್ಯಗಳಲ್ಲಿ ಬಳಸುವ ಚರ್ಮವಾದ್ಯ.

ಪತಾಕ : ಒಂದೇ ಕೈಯಿಂದ ಮಾಡುವ ಹಸ್ತಮುದ್ರೆ. ಅಸಂಯುತ ಹಸ್ತದಲ್ಲಿ ಮೊದಲನೆ ಹಸ್ತ (ನೋಡಿ ನಕ್ಷೆ, ಅಸಂಯುತ ಹಸ್ತ)

ಪತಿತ (ಪಾತನ): ಹುಬ್ಬಿನ ಒಂದು ಭೇದ, ಹುಬ್ಬುಗಳನ್ನು ಸ್ವಸ್ಥಾನದಿಂದ ಕೆಳಗೆ ಇಳಿಸುವುದು. (ನಾಟ್ಯಶಾ. ೮-೧೧೭) (ನರ್ತನಿ. ೪-೨೮೭) (ಲಾಸ್ಯರಂ. ೩-೪೪)

ಪನ್ನೊಂದು ನಾಟ್ಯಾಂಗ : ಹನ್ನೊಂದು ರಂಗ ಸಂಗ್ರಹ. ರಸ, ಭಾವ, ಅಭಿನಯ, ಧರ್ಮೀ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸ್ವರ, ಆತೋದ್ಯ, ಗಾನ ಮತ್ತು ರಂಗ.  (ನಾಟ್ಯಶಾ. ೬, ೯-೧೦)

ಪಯಪಾಡು : ನೃತ್ಯ, ನೃತ್ತಗಳಲ್ಲಿ ಪಾದಗಳ ಚಲನೆ.

ಪರಿಕ್ರಮ : ನರ್ತಿಸುವ ಪದಗತಿಗಳಿಂದ ರಂಗವನ್ನು ಆಕ್ರಮಿಸುವುದು.

ಪರಿವಾದಕ : ತಂತೀ ವಾದ್ಯಗಳನ್ನು ನುಡಿಸುವ ಕ್ರಮ ಪರಿವಾದಿನಿ. ಈ ಕ್ರಮವನ್ನು ಬಲ್ಲಾತ ಪರಿವಾದಕ. (ಸಂಗೀರ. ೬-೯೮) (ಸಂಸಸಾ. ೫-೨೩)

ಪರಿವಿಡಿ : ವ್ಯವಸ್ಥಿತ ಕ್ರಮಾಂಕದಲ್ಲಿ ನಡೆಯುವ ಕ್ರಿಯೆ.

ಪರಿವಿಡಿಯ ಹಸ್ತ : ಅಸಂಯುತ, ಸಂಯುತ ಹಾಗೂ ನೃತ್ತ ಹಸ್ತಗಳು ಕ್ರಮವಾಗಿ ಪ್ರಯೋಗಗೊಳ್ಳುವ ಪರಿ. (ನರ್ತನಿ. ಪು. ೫೮೪-೮೫)

ಪಹರಣ : ಪ್ರಹರಣವೆಂಬ ವಾದ್ಯ ಪ್ರಬಂಧ. ಧ್ರುವಾ, ಆಭೋಗಗಳಲ್ಲಿ ಉದ್ಧತವಾದ ಕೂಟಬದ್ಧಗಳಿಂದ ಪುನಃ ಪುನಃ ಪ್ರಕಟವಾಗುವ ಶಬ್ದಗಳು. ನೃತ್ತದಲ್ಲಿ ವಿಶೇಷವಾಗಿ ಬಳಸುವಂತಹ ವಾದ್ಯ ಪ್ರಬಂಧ. (ಸಂಗೀರ. ೬-೯೮೪-೮೫)
ಮತಭೇದ : ಹನ್ನೆರಡು ಅಥವಾ ಹದಿನಾರು ಮಾತ್ರೆಯ ವಾದ್ಯ ಪ್ರಬಂಧ. ಎರಡೂ ಕೈಗಳಲ್ಲಿ ನುಡಿಸುವ ಬಂಧ, ೨೦ ವಾದ್ಯ ಪ್ರಬಂಧಗಳಲ್ಲಿ ಒಂದು. (ಸಂಸಸಾ. ೫-೧೫೬)

ಪಾಠಾಕ್ಷರ > ಪಾಟಾಕ್ಷರ : ವಾದ್ಯಾದಿಗಳಲ್ಲಿ ನುಡಿಸಬೇಕಾದ ಅಕ್ಷರಗಳು
ಉದಾಹರಣೆಗೆ  : ದೀಂಗು ತೋಂಗು ತರಿಕಿಟ, ತರಿಕಿಟ,
ತರಿಕು ಕುಕು ಝೇಂ ಝೇಂ ಢೋಧಿನ್ನಂ
ತಕ್ಕನಾಂಗು ಕುಕ್ಕ ತತ ಥೋ ಹಂಥೋ- (ನರ್ತನಿ. ಪು. ೨೭೦)

ಪಾಠ್ಯ : ಸಂಗೀತದಲ್ಲಿ ಬಳಸುವ ಸ್ವರಾಕ್ಷರಗಳು. ಸ್ವರ ಹಾಗೂ ಸಾಹಿತ್ಯಗಳು ಪರಸ್ಪರ ಅನುಸರಿಸಿ ಬರುವ ಅಕ್ಷರಗಳು.

ಪಾಣಿತ್ರಯ : ಮೃದಂಗ ವಾದನದ ಕ್ರಮ. ಸಮ ಅವರ, ಉಪರ ಪಾಣಿಗಳು.

ಪಾಣಿಸಮ : ವಾದ್ಯವು ಗೀತವನ್ನು ಅನುಸರಿಸುವುದು. (ಭರಕೋ. ಪು. ೩೬೩)

ಪಾತ್ರ : ರಂಗದ ಮೇಲೆ ಅಭಿನಯಿಸುವ ನಟ, ನಟಿಯರು. (ಭಕಮ. ಪು. ೨೨೮)

ಪಾದಚಾರಿ : ಪಾದಗಳ ಚಲನೆ (ನಾಟ್ಯಶಾ. ೧೦-೪೮ ಪೂ.)

ಪಾದನ್ಯಾಸ : ಹೆಜ್ಜೆಗಳನ್ನು ಇಡುವ ಕ್ರಮ.

ಪಾರ್ಶ್ವವಿಧಿ : ಪಕ್ಕೆಗಳ ಚಲನೆ ೫ ತರಹ – ನತ, ಸಮುನ್ನತ, ಪ್ರಸಾರಿತ, ವಿವರ್ತಿತ, ಅಪಸೃತ. (ನಾಟ್ಯಶಾ. ೯-೨೨೪) (ಸಂಗೀರ. ೭-೩೦೪) (ಲಾಸ್ಯರಂ. ೨-೯೦)

ಪುರ್ವಿನಭೇದ : ಹುಬ್ಬುಗಳ ಚಲನಾ ವಿಧಾನ, ಇವು ೭ ಸಹಜ, ಪತಿತ, ರೇಚಿತ, ಕುಂಚಿತ, ಭ್ರುಕುಟಿ, ಉತ್ಕ್ಷಿಪ್ತ, ಚತುರ. (ನಾಟ್ಯಶಾ. ೮-೧೧೬) (ಸಂಗೀರ. ೭-೪೩೫) (ಲಾಸ್ಯರ. ೩-೪೩)

ಪುಷ್ಪಪುಟ : ಸಂಯುತ ಹಸ್ತ. ಎರಡು ಸರ್ಪಶಿರಹಸ್ತಗಳನ್ನು ಅಂಗೈ ಕಾಣುವಂತೆ ಒಂದರ ಪಕ್ಕ ಒಂದು ಸೇರಿಸಿ ಹಿಡಿಯುವುದು. ಪುಷ್ಪಾಂಜಲಿ, ದೇವತರ್ಪಣ ಇದರ ವಿನಿಯೋಗ. (ನಾಟ್ಯಶಾ. ೯-೧೪೩) (ಅಭಿದ. ೧೯೧ ಪೂ.) (ಸಂಗೀರ. ೭.೧೯೮ ಪೂ.)

ಪುಷ್ಪಾಂಜಲಿ : ಬೊಗಸೆಗಳಲ್ಲಿ ಹೂವುಗಳನ್ನು ಹಿಡಿದುಕೊಂಡು ಸೂತ್ರಧಾರನು ಅಥವಾ ಪಾತ್ರವು ರಂಗ ಪ್ರವೇಶಮಾಡಿ ಆ ಹೂವುಗಳನ್ನು ರಂಗಶೀರ್ಷದಲ್ಲಿ ಬಿಡುವುದು.

ಪೂರ್ಣ : ಕಪೋಲಭೇದ (ತುಂಬಿದ ಗಲ್ಲಗಳು) ೬ ಭೇದಗಳಲ್ಲಿ ಒಂದು ಹೊಟ್ಟೆಯ ಭೇದ (ಉಬ್ಬಿದ ಹೊಟ್ಟೆ) ೩ ಭೇದಗಳಲ್ಲಿ ಒಂದು. ಕಪೊಲ (ನಾಟ್ಯಶಾ. ೯-೨೩೩ ಪೂ.) (ಲಾಸ್ಯರಂ. ೩-೭೦) (ಲಾಸ್ಯರಂ. ೨-೧೩೫)

ಪೂರ್ವರಂಗ : ನೃತ್ಯ ಅಥವಾ ನಾಟ್ಯಕ್ಕೆ ಮೊದಲು ರಂಗಸ್ಥಲದಲ್ಲಿ ನಡೆಯುವ ಚಟುವಟಿಕೆ ಹಾಗೂ ಪೂಜಾವಿಧಾನಗಳು. (ನಾಟ್ಯಶಾ. ೫, ೭)

ಪೆಲ್ಲಣಿ : ಕೊಳಲಿನ ಪೂತ್ಕಾರದ ಒಂದು ವಿಧಾನ. ಪೂತ್ಕಾರಂ ಪೂಣ್ಮಲು ಆಳಾಪ, ಕಾಳಾಪ, ಹಲ್ಲಣೆ, ವ್ಯಾಪ್ತಿ ಮುಂತಾದ ಇಪ್ಪತ್ತನಾಲ್ಕು ತೆರದಲ್ಲಿ ಸರಿಗಮಪಧನಿ ಎಂಬ ಸಪ್ತ ಸ್ವರಾಕ್ಷರಗಳನಾರೋಹಿ, ಅವರೋಹಿ (ವಿವೇಕ. ೪ ಪು. ೧೯೧)

ಪೇರಣೆ : ಒಂದು ದೇಶಿ ನೃತ್ತಬಂಧ. ತಾಲಲಯಾಶ್ರಿತವಾದ ನೃತ್ತದ ನಾಲ್ಕು ಭೇದಗಳಲ್ಲಿ ಒಂದು. (ಸಂಗೀಸಾ.x-v)
ಶರೀರವನ್ನು ಭಸ್ಮದಿಂದ ಲೇಪಿಸಿ, ಕೇಶಮುಂಡನವನ್ನೂ ಮಾಡಿಕೊಂಡು, ಶಿಖೆಯನ್ನು ಬಿಟ್ಟು, ಕಾಲಿಗೆ ಹೊಳೆಯುವ ಗೆಜ್ಜೆಗಳ ಜಾಲವನ್ನು ಕಟ್ಟಿಕೊಂಡು ಆಕರ್ಷಕವಾದ ರೀತಿಯಲ್ಲಿ ನರ್ತಿಸುವ ನೃತ್ತ ಬಂಧ.

ಪೈಸಾರ : ಒಂದು ವಾದ್ಯ ಪ್ರಬಂಧ. ಕನ್ನಡ ಕಾವ್ಯಗಳಲ್ಲಿ ಪಸರ ಎಂದು ಪ್ರಯೋಗಮಾಡಿರಬಹುದು. ವಾದ್ಯ ಖಂಡಗಳನ್ನು ಪ್ರತ್ಯೇಕವಾಗಿ ನುಡಿಸಿದರೆ ಅದು ಪೈಸಾರ. (ಸಂಗೀರ. ೬-೧೦೧೭)

ಪ್ರಕರಣ : ದಶರೂಪಕಗಳಲ್ಲಿ ಒಂದು. ಜಗತ್ತಿನಲ್ಲಿ ಸಾಮಾನ್ಯವಾಗಿ ನಡೆಯುವ ಕಥೆಯನ್ನು ಆಶ್ರಯಿಸಿದ್ದು, ಧೀರ ಪ್ರಶಾಂತ ನಾಯಕ. (ದಶರೂ. ೩, ೩೯-೪೦)

ಪ್ರಗಲ್ಭೆ : ಮೂವರು ನಾಯಿಕೆಯರಲ್ಲಿ ಒಬ್ಬಳು. ಪ್ರೌಢೆ. (ದಶರೂ. ೨-೧೮) (ಉದ್ಧೃತಿ. ಭರಕೋ. ೩೮೩)

ಪ್ರಚಳಿತ : ಚಲನೆಯಲ್ಲಿರುವ (ಚಲನೆ)

ಪ್ರತ್ಯಂಗ : ಕುತ್ತಿಗೆ, ತೋಳುಗಳು, ಬೆನ್ನು, ಹೊಟ್ಟೆ, ತೊಡೆಗಳು, ಕಣಕಾಲುಗಳು ಅಲ್ಲದೇ ಮಣಿಕಟ್ಟು, ಮೊಳೆಕಾಲು ಹಾಗೂ ಆಭರಣಗಳು. (ಸಂಗೀರ. ೭-೪೧) (ಲಾಸ್ಯರಂ. ೨-೧೩೩)

ಪ್ರತ್ಯಂಗ ವಿನ್ಯಾಸ : ಪ್ರತ್ಯಂಗಗಳ ಚಲನಾಭೇದ.

ಪ್ರಬಂಧ : ತಾಲಸಹಿತವಾಗಿ ಧಾತು, ಅಂಗಗಳಿಂದ ರಚಿತವಾದ ರಚನೆಗಳಲ್ಲಿ ಮೊದಲನೆಯದು.

ಪ್ರಸ್ತಾರ : ತಾಳದ ದಶಪ್ರಾಣಗಳಲ್ಲ ಒಂದು. ತಾಳಾಂಗವನ್ನು ವಿಸ್ತರಿಸುವುದು. ಉದಾ:- ಚತುರಶ್ರ ಲಘುವನ್ನು ಎರಡು ದ್ರುತವನ್ನಾಗಿ ಹರಡುವುದು. (ಸಂಶಾಚಂ. ಪು. ೫೮)

ಪ್ರವೃತ್ತಿ : ಜನರ ನಡೆ, ನುಡಿ, ವೇಷ, ಆಚಾರಗಳನ್ನನುಸರಿಸಿ ಮಾಡಿದ ವಿಭೇದ. ಇವು ೪. ಆವಂತೀ, ದಾಕ್ಷಿಣಾತ್ಯ, ಪಾಂಚಾಲೀ, ಔಡ್ರಮಾಗಧಿ. (ನಾಟ್ಯಶಾ. ೧೩, ೩೨, ೩೨ ವ.)

ಪ್ರೇರಣೆ : ನೋಡಿ ಪೇರಣೆ

ಪ್ಲುತ : ತಾಳದ ಆರು ಅಂಗಗಳಲ್ಲಿ ಒಂದು. ಲಘುವಿನ ಮೂರರಷ್ಟು ಅಕ್ಷರಕಾಲವನ್ನು ಹೊಂದಿದೆ. (ಸಂಶಾಚಂ. ಪು. ೨೮.)

ಫುಲ್ಲ : ಕಪೋಲ ಭೇದಗಳಲ್ಲಿ ಒಂದು. ಕೆನ್ನೆಗಳನ್ನು ಸಂತೋಷದಿಂದ ಅರಳಿಸುವುದು. (ನಾಟ್ಯಶಾ. ೮-೧೩೪ ಪೂ.) (ಲಾಸ್ಯರಂ. ೩-೭೧ ಪೂ.)

ಬಯಕಾರ : ಪಕ್ಕೆಯ ಭೇದ (ಪಾರ್ಶ್ವಭೇದ). ನೋಡಿ ಪಾರ್ಶ್ವಭೇದ

ಬವರಿ > ಭ್ರಮರಿ : ವೃತ್ತಾಕಾರವಾಗಿ ತಿರುಗುವ ಚಲನೆ. ಒಂದು ಕಾಲನ್ನು ತೊಡೆಯ ಮೇಲೆ ಇರುವಂತೆ ಸುತ್ತಿ, ಒಂದು ಪಾದದ ಹಿಮ್ಮಡಿಯಿಂದ ಸಂಪೂರ್ಣವಾಗಿ ಶರೀರವನ್ನು ತಿರುಗಿಸುವುದು. (ಆಕಾಶಚಾರಿಗಳಲ್ಲಿ ಒಂದು) (ಸಂಗೀರ. ೭-೯೬೭)

ಬಾಹುಪರಿ ಭ್ರಮ : ತೋಳಿನ ಚಲನಾ ಭೇದ. ಇವು ಹತ್ತು ಊರ್ಧ್ವಸ್ಥ, ಅಧೋಮುಖ, ತಿರ್ಯಕ್, ಅಪವಿದ್ಧ, ಪ್ರಸಾರಿತ, ಮಂಡಲಗತಿ, ಸ್ವಸ್ತಿಕ, ಉದ್ದೇಷ್ವಿತ, ಪೃಷ್ಠಾನುಸಾರೀ ಅಲ್ಲದೇ ಆವಿದ್ಧ, ಕುಂಚಿತ, ನಮ್ರ, ಸರಲ, ಅಂದೋಲಿತ, ಉತ್ಪಾರಿತ ಈ ಆರು ಭೇದವನ್ನೂ ಕೆಲವರು ಸೇರಿಸುತ್ತಾರೆ. (ಸಂಗೀರ. ೭-೩೩೮-೪೦)

ಬಿಡುತೆ : ವಾದ್ಯ ಪ್ರಬಂಧಗಳನ್ನು ನುಡಿಸುವಾಗ ನಿರ್ದಿಷ್ಟ ಆವರ್ತಗಳ ನಂತರದ ವಿರಾಮ. ಈ ಕಿಂಚಿತ್ ವಿರಾಮದ ನಂತರ ಪುನಃ ವಾದ್ಯ ಪ್ರಬಂಧ ಮುಂದುವರೆಯುವುದು. ಇದೇ ರೀತಿ ನೃತ್ತ ಬಂಧಗಳಿಗೂ ಅನ್ವಯಿಸಲಾಗುವುದು.

ಬೀಸುಗಾಲು : ದೇಶಿ ಅಡುವುಗಳಲ್ಲಿ ಒಂದು, ಬಿಡುಲಾಗಗಳಲ್ಲಿ ಒಂದು.

ಬೈಸಿಕೆ (ಸಂ) : ಒಂದು ಸ್ಥಾಯಿಭೇದ. (ಸಂಸಸಾ ೨-೧೨೩ ಪೂ.)

ಬೊಂಬಾಳ (ಸಂ) : ಶಾರೀರ ಭೇದ.

ಬೊಂಬುಳಿ (ವಾ): ಒಂದು ಅವನದ್ಧ ವಾದ್ಯ. ಬೊಮ್ಮಡಿ, ಪಣವದ ಒಂದು ಭೇದ, ಸಣ್ಣ ಮದ್ದಳೆ.

ಬೊಟ್ಟು : ಮೃದಂಗದಲ್ಲಿ ನುಡಿಸುವ ಹಸ್ತಪಾಟಗಳು : (ನರ್ತನಿ. ಪು. ೩೫೦, ಅ. ಟಿ. ೧೦೩)

ಬೊಟ್ಟಾಳ > ಬೊಟ್ಟಲಗ : ಪಾಣ್ಯಂತರ ಎಂಬ ಹಸ್ತಪಾಟದ ವಿಪರ್ಯಾಸವಿರಬಹುದು.

ಬೊಲ್ದಾವಣಿ > ಬೊಲ್ದಾವಣಿ (ವಾ) : ಪಟಹದ ಹನ್ನೆರಡು ಹಸ್ತಪಾಟಗಳಲ್ಲಿ ಮೊದಲನೆಯದು. (ಸಂಗೀರ. ೬-೯೦೫-೬)
ಆದಿ, ಮಧ್ಯ, ಅವಸಾನಗಳಲ್ಲಿ ದೇಂಕಾರ ಬಾಹುಳ್ಯವಿದ್ದು, ಮೊದಲು ಹಾಗೂ ದ್ವಿತೀಯ ಖಂಡದಲ್ಲೂ ಪುನರಾವರ್ತಿಗೊಳ್ಳುವುದು ಬೊಲ್ಲಾವಣಿ. (ಸಂಸಸಾ. ೫-೧೬)
ಉದಾಹರಣೆ:- ದೇಂ ದೇಂ ಗಿತ ಕತ ಕತಟಕ್ಕ
ಥಂ ಧಟಿಕತಟಿ + + ತಕ ದೇಂದೇಂ ಗಿದೇಂಗಿ

ಭಂಗಿ : ಶರೀರದ ಒಂದು ವಿಶಿಷ್ಟ ನಿಲುವು. ಇದು ೪ ತರಹ, ಸಮಭಂಗ, ತ್ರಿಭಂಗ, ಅತಿಭಂಗ, ಅಭಂಗ.

ಭಯಕಾರ : ನಟನೆ ಹಾಗೂ ನಾಟಕ ರಚನಾ ಸಾಮರ್ಥ್ಯವಿರುವಾತ.

ಭಯಾನಕ : ನವರಸಗಳಲ್ಲಿ ಒಂದು, ಭಯ ಸ್ಥಾಯಿಭಾವ, ವಿಭಾವ – ಕೆಟ್ಟಧ್ವನಿ, ಭೂತದರ್ಶನ, ಏಕಾಂತ, ಸೆರೆ ಇತ್ಯಾದಿ ಅನುಭಾವ – ನಡುಕ, ಹೆದರಿಕೆ, ಶಂಕೆ, ಉದ್ವೇಗ ಇತ್ಯಾದಿ.

ಭರತ : ನಾಟ್ಯಕಲೆಯನ್ನು ಬಲ್ಲಾತ. (ಭರತಮುನಿ) (ಭಾವ, ರಾಗ ಮತ್ತು ತಾಳ)

ಭಾರತಿಕ : ಅಭಿನಯ ಕಲೆಯನ್ನು ಬಲ್ಲಾತ.

ಭಾರತಿಕರಣ : ಪ್ರಸಿದ್ಧವಾದ ೧೦೮ ಕರಣಗಳ ಅಭಿನಯ ಕ್ರಮ.

ಭಾರತೀ ವೃತ್ತಿ : ೪ ವೃತ್ತಿಗಳಲ್ಲಿ ಒಂದು.

ಭಾವ : ಮಾನವರಲ್ಲಿ ಸದಾ ನೆಲೆಯಿರತಕ್ಕವು. ಇದಕ್ಕೆ ತಕ್ಕ ವಿಭಾವ ದೊರಕಿ ಅವು ರಸವಾಗಿ ಉದ್ಭೋದಗೊಳ್ಳುತ್ತದೆ. ಕವಿಯ ಅಂತರ್ಗತ ಅನಿಸಿಕೆಯನ್ನು ಮಾತು, ವೇಷಭೂಷಣಗಳ ಮೂಲಕ ಸಾತ್ತ್ವಿಕಾಭಿನಯದ ಮೂಲಕ ತೋರಿಸುವುದು. ಭಾವ ರಸಗಳ ಅನುಕರಣವನ್ನು ಅಭಿನಯದಿಂದ ಮಾಡುವುದು ಭಾವ. (ನಾಟ್ಯಶಾ. ೭-೧-೩)

ಭಾವದೃಷ್ಟಿ ಭೇದ : ಸ್ಥಾಯೀ ಭಾವ ನೋಟಗಳು ೮, ಸ್ನಿಗ್ಧಾ, ಹೃಷ್ಟಾ, ದೀನಾ, ಕ್ರುದ್ಧಾ, ದೃಪ್ತಾ, ಭಯಾನ್ವಿತಾ, ಜುಗುಪ್ಸಿತಾ, ವಿಸ್ಮಿತಾ. (ನಾಟ್ಯಶಾ. ೮-೩೯)

ಭಾವರಸಭೇದ : ಸ್ಥಾಯಿ ಭಾವಗಳನ್ನನುಸರಿಸಿ ಉದ್ಭೋದಗೊಳ್ಳುವ ರಸ ಭೇದಗಳು ೮. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ. (ನಾಟ್ಯಶಾ. ೬-೧೬)

ಭುಜದ ಭೇದ : ತೋಳಿನ ಚಲನಾಭೇದ. ನೋಡಿ ಬಾಹು ಪರಿಭ್ರಮ.

ಭೂಮಿಚಾರಿ : ನೆಲದ ಮೇಲೆ ಚಲಿಸುವ ಗತಿಗಳು ೧೬. ಸಮಪಾದ, ಸ್ಥಿತಾವರ್ತ, ಶಕಟಾಸ್ಯ, ಅಧ್ಯರ್ಧಿಕ, ಚಾಷಗತಿ, ವಿಚ್ಯವ, ಏಕಕಾಕ್ರೀಡಿತ, ಬದ್ಧ, ಊರುದ್ ವೃತ್ತ, ಅಡ್ಡಿತ, ಉತ್‌ಸ್ಸಂದಿತ, ಜನಿತ, ಸ್ಸಂದಿತ, ಅಪಸ್ಸಂದಿತ, ಸಮೋತ್ಪಾರಿತಮತ್ತಲ್ಲಿ, ಮತ್ತಲ್ಲಿ. (ನಾಟ್ಯಶಾ. ೧೦-೮-೧೦)

ಭೌಮ ಮಂಡಲ : ಭೂ ಸಂಸರ್ಗದಿಂದ ಪ್ರಯೋಗಿಸುವ ಚಾರಿಗಳ ಸಮುದಾಯ. ಇವು ೧೦ ವಿಧ. ಭ್ರಮರ, ಆಸ್ಕಂದಿತ, ಆವರ್ತ, ಶಕಟಾಸ್ಯ, ಅಡ್ಡಿತ, ಸಮೋಸರಿತ ಮತ್ತಲ್ಲಿ, ಅಧ್ಯರ್ಧಿಕೆ, ಏಲಕಾಕ್ರೀಡಿತ, ಪಿಷ್ಟಕುಟ್ಟ, ಚಾಷಗತಿ. (ಲಾಸ್ಯರಂ. ೮-೨-೩ ಪೂ.)

ಭ್ರಮರಿ : ವೃತ್ತಾಕಾರವಾದ ವಿಶಿಷ್ಟ ಚಲನೆಗಳು. (ಅಭಿದ. ೨೯೦) (ಸಂಗೀರ. ೭-೭೬೦, ೭೬೧ ಪೂ.) (ಸಂಸಾಸಾ ೬-೧೯೦) (ಸಂಗೀಸಾ.) (ನೃತ್ತರ. ೬-೧೦೦-೧೦೬)

ಭ್ರುಕುಟಿ : ಹುಬ್ಬಿನ ಭೇದಗಳಲ್ಲಿ ಒಂದು. ಎರಡೂ ಹುಬ್ಬುಗಳನ್ನು ವೇಗವಾಗಿ ಮೇಲಕ್ಕೆ ಎತ್ತುವುದು. (ನಾಟ್ಯಶಾ. ೮-೧೧೮ ಪೂ.) (ಲಾಸ್ಯರಂ. ೩-೪೬ ಉ.) (ಸಂಗೀರ. ೭-೪೪೦)

ಭ್ರೂರೇಚಿತ : ಹುಬ್ಬಿನ ಭೇದಗಳಲ್ಲಿ ಒಂದು. ಒಂದೇ ಹುಬ್ಬನ್ನು ಲಲಿತವಾಗಿ ಮೇಲಕ್ಕೆ ಎತ್ತುವುದು ರೇಚಿತ, ಹುಬ್ಬಗಳ ಚಲನೆ. (ನಾಟ್ಯಶಾ. ೮-೧೧೯) (ಲಾಸ್ಯರಂ. ೩-೪೫) (ಸಂಗೀರ. ೭-೪೩೮)

ಮಂಡಲ : ಚಾರಿಗಳ ಸಮುದಾಯ. ಇವು ೨ ವಿಧ. (೧) ಭೌಮ ಮಂಡಲ (೧೦ ವಿಧ) (೨) ಆಕಾಶ ಮಂಡಲ (೧೦ ವಿಧ) (ನಾಟ್ಯಶಾ. ೧೧-೧ ಉ.) (ಸಂಗೀರ. ೭-೧೧೫೨ ಪೂ.)

ಮಂದ್ರ : ಮೂರು ಸ್ಥಾಯಿಗಳಲ್ಲಿ ಒಂದು. ಆಧಾರ ಷಡ್ಜದಿಂದ ಅವರೋಹಣ ಕ್ರಮದಲ್ಲಿ ಬಂದು ಇನ್ನೂ ತಗ್ಗಿನ ಷಡ್ಜವನ್ನು ಸೇರುವ ಸಪ್ತ ಸ್ವರ ಸಮುದಾಯ. (ಸಂಶಾಚಂ. ಪು. ೧೮)

ಮಠ್ಯತಾಳ : ಅಲಂಕಾರ ತಾಳಗಳೆಂದು ಪ್ರಸಿದ್ಧವಾಗಿರುವ ಸಪ್ತತಾಳಗಳಲ್ಲಿ ಎರಡನೆಯ ತಾಳ. ಎರಡು ಲಘು, ಒಂದು ದೃತ ಇದರ ಅಂಗ.

ಮದ್ದಳೆ : ಒಂದು ಅವನದ್ಧ ವಾದ್ಯ. ಬಲಗಡೆಗೆ ಕರಣೆ, ಎಡಗಡೆ ಬೋನ.

ಮಧ್ಯ : ಮೂರು ಸ್ಥಾಯಿಗಳಲ್ಲಿ ಒಂದು. ಆಧಾರ ಷಡ್ಜದಿಂದ ಆರೋಹಣ ಕ್ರಮದಲ್ಲಿ ಬಂದು ಮೇಲಿನ ಷಡ್ಜವನ್ನು ಸೇರುವ ಸಪ್ತಸ್ವರ ಸಮುದಾಯ. (ಸಂಶಾಚಂ. ಪು. ೧೮)

ಮಧ್ಯಲಯ : (i) ತಾಳದ ಮೂರು ಲಯಗಳಲ್ಲಿ ಒಂದು. (ಸಂಗೀರ. ೬-೪೪-೪೫ ಪೂ.) (ii) ಶೀಘ್ರವೂ ಅಲ್ಲದ, ನಿಧಾನವೂ ಅಲ್ಲದ ಲಯ. (ಸಂಶಾಚಂ. ಪು.೫೭)

ಮನೋಭ್ರಮಣ : ಸುತ್ತುವ ಚಲನೆ.

ಮಲಕ : ದೇಶೀ ಅಡವು. (ವೇಸಂಮ. ಹಸ್ತಪ್ರತಿ)

ಮಲಪ : ನರ್ತನದಲ್ಲಿ ಬಳಸುವ ವಾದ್ಯ ಪ್ರಬಂಧ. (ವೇಮ. ಉದ್ಧೃತಿ, ಭರಕೋ. ಪು. ೪೭೫) (ಸಂಗೀರ. ೬-೯೯೨-೯೩)

ಮವುರಿ : ಒಂದು ಗಾಳಿವಾದ್ಯ.

ಮಾತಂಗಿ : ಒಂದು ಲೋಕ ನೃತ್ಯ.

ಮಾನುಷೀ ಸಿದ್ಧಿ : ನಾಟಕ ಪ್ರಯೋಗದಿಂದ ಉಂಟಾಗುವ ಸಿದ್ಧಿಗಳ ಎರಡು ಪ್ರಕಾರಗಳಲ್ಲಿ ಒಂದು. ಮುಗುಳ್ನಗೆ, ಅರ್ಧಹಾಸ, ಅತಿಹಾಸ, ಸಾಧು, ಅಹೋ, ಕಷ್ಟಂ, ಚಪ್ಪಾಳೆ, ರೋಮಾಂಚ, ಆಸನದಲ್ಲಿ ಕುಣಿಯುವುದು ಇಲ್ಲವೇ ಎದ್ದು ನಿಲ್ಲುವುದು. ಪಾರಿತೋಷಕವಾಗಿ ರಂಗದ ಮೇಲೆ ಉಂಗುರ, ಬಟ್ಟು ಇತ್ಯಾದಿಗಳನ್ನು ಎಸೆಯುವುದು. ಇವು ಮಾನುಷೀ ಸಿದ್ಧಿಯ೧೦ ಅಂಗಗಳು. (ನಾಟ್ಯಶಾ. ೨೭-೧-೫) (ನಾಟ್ಯಶಾ. ೨೭.೨ ಪೂ.)

ಮಾರ್ಗ : ಪ್ರಾಚೀನವೂ ಪರಂಪರೆಯನ್ನೂ ಹೊಂದಿರುವ ನೃತ್ಯ, ಸಂಗೀತ, ಮೊದಲಾದ ಲಲಿತ ಕಲೆಗಳು. ಬ್ರಹ್ಮನಿದನ್ನು ನಾಲ್ಕೂ ವೇದಗಳಿಂದ ವಿಷಯಗಳನ್ನು ಸಂಗ್ರಹಿಸಿ ಭರತ ಶಾಸ್ತ್ರ (ನಾಟ್ಯಶಾಸ್ತ್ರ) ವನ್ನು ಸೃಷ್ಟಿಸಿ ಕೊಟ್ಟಿರುವುದರಿಂದ ಇದಕ್ಕೆ ಮಾರ್ಗ ಎಂದು ಹೆಸರು ಬಂದಿದೆ. ಮಹದೇವನ ಮುಂದೆ ಭರತನಿಂದ ಪ್ರಯೋಗಿಸಲ್ಪಟ್ಟ ಈ ಮಾರ್ಗ ನೃತ್ಯ, ಸಂಗೀತಗಳು ಮೋಕ್ಷವನ್ನು ಕೊಡುವಂತಹುದು ಎಂದೂ ಪ್ರತೀತಿ ಇದೆ.

ಮಾರ್ಗ ನೃತ್ತ, ನೃತ್ಯದ ಪರಂಪರೆ, ಪೌರುಷ ಪ್ರಧಾನವೂ ಉದ್ಧತ ಪಾದಘಾತಗಳ ತಾಂಡವ ನೃತ್ತವನ್ನು ಶಿವನು ತಂಡುವಿಗೆ ಬೋಧಿಸುತ್ತಾನೆ. ಸುಕುಮಾರವೂ ಕೈಶಿಕಿ ವೃತ್ತಿಯಿಂದ ಕೂಡಿದ ಲಾಸ್ಯ ನೃತ್ಯವನ್ನು ಪಾರ್ವತಿಯು ಬಾಣಾಸುರನ ಮಗಳು ಉಷೆಗೆ ಬೋಧಿಸುತ್ತಾಳೆ. ಆಕೆ ದ್ವಾರಕೆಯ ಗೋಪಾಂಗನೆಯರಿಗೂ ಅವರು ಸೌರಾಷ್ಟ್ರದ ಸ್ತ್ರೀಯರಿಗೂ ಈ ವಿದ್ಯೆಯನ್ನು ಕಲಿಸಿ ಮಾರ್ಗ ನೃತ್ಯದ ಸ್ತ್ರೀ ಪರಂಪರೆಯ ಬೆಳವಣಿಗೆಗೆ ಕಾರಣರಾಗುತ್ತಾರೆ.

ಬ್ರಹ್ಮನಿಂದ ಬೋಧಿಸಲ್ಪಟ್ಟು ಭರತಮುನಿ ತನ್ನ ನೂರು ಮಂದಿ ಮಕ್ಕಳಿಗೆ ಈ ವಿದ್ಯೆಯನ್ನು ಅಭ್ಯಾಸ ಮಾಡಿಸಿ, ಬ್ರಹ್ಮ, ವಿಷ್ಣು, ಹೇಶ್ವರ ಹಾಗೂ ಇತರ ದೇವತೆಗಳ ಎದುರಿಗೆ ಮೊತ್ತ ಮೊದಲು ಪ್ರಯೋಗಿಸಿ, ಸ್ವರ್ಗಲೋಕದಲ್ಲಿ ಮಾರ್ಗ ನೃತ್ಯ ಪ್ರಸರಣವನ್ನು ಆತ (ಭರತ) ಮಾಡುತ್ತಾನೆ.  ಭರತನ ಮಕ್ಕಳಾದ ಕೋಹಲ, ದತ್ತಿಲರು ನಹುಷನ ಮುಖಾಂತರ ಭೂಲೋಕದಲ್ಲಿ ಆತನ ಅರಮನೆಯ ಜನರಿಗೆ ಈ ವಿದ್ಯೆಯನ್ನು ಬೋಧಿಸುತ್ತಾರೆ. ಹೀಗೆ  ಇದೂ ಭರತ ವಿವರಿಸುವ ನಾಟ್ಯಶಾಸ್ತ್ರ, ಪ್ರಯೋಗಗಳ ಪರಂಪರೆ. (ಸಂಗೀರ. ೧-೧-೨೩) (ನರ್ತನಿ. ೧-೧೦೫) (ಶಿತರ. ೬-೩-೯-೧೪)

ಮಿಶ್ರ : ಶಾರೀರ ಭೇದಗಳಲ್ಲಿ ಒಂದು. ತಾಳದ ಐದು ಜಾತಿಗಳಲ್ಲಿ ಒಂದು. (೭ ಅಕ್ಷರಕಾಲ ಪ್ರಮಾಣ ಉಳ್ಳದ್ದು) ರಾಗದ ಒಂದು ಪ್ರಭೇದ. (ರಾಗಮಾಲಾ. ೯೬) (ಸಾಸಂಭ.ಪು. ೧೩೮)

ಮುಖಚಾಳಿ > ಮುಖಚಾಲಿ : ಪೂರ್ವರಂಗದ ನಂತರ ಮಾಡುವ ನೃತ್ತ. (ನಾಂದಿ, ರಂಗಪೂಜೆ, ಪುಷ್ಪಾಂಜಲಿಯ ನಂತರ ಮಾಡುವ ಅಭಿನಯ ರಹಿತವಾದ ನೃತ್ತ) (ನರ್ತನಿ. ೪-೬೬೨) (ಸಂಗೀದ. ೬-೨೪ ಪೂ.)

ಮುಖರಿ : ಮುಖ್ಯಗಾಯಕ ಅಥವಾ ವಾದಕ. (ಇತರ ಗಾಯಕ, ವಾದಕರಿಗೆ ನಾಯಕ) (ನರ್ತನಿ. ೨-೭ ಪೂ.) (ನೃತ್ತರ, ಅ.೭, ೧೭೨-೭೪, ೭೮)

ಮುಖವೀಣೆ (ವಾ) : ನಾಗಸ್ವರಕ್ಕಿಂತಲೂ ಚಿಕ್ಕದಾದ ಗಾಳಿವಾದ್ಯ.

ಮುರುಹು > ಮುರೂ : ಅನುಬಂಧ ಉರುಪುಕ್ರಮಗಳಲ್ಲಿ ಒಂದು.

ಮೂರ್ಛನ : ಪ್ರಾಚೀನ ಕಾಲದಲ್ಲಿ ರಾಗದ ಹೆಸರು. ಏಳೂ ಸ್ವರಗಳ ಆರೋಹಣ ಮತ್ತು ಅದೇ ಕ್ರಮದಲ್ಲಿ ಅವರೋಹಣ ಕ್ರಮ.

ಮೂವತ್ತಾರು ನೋಟ : ನೋಡಿ ದೃಷ್ಟಿ ಭೇದ.

ಮೂವತ್ತೆರಡಂಗಹಾರ : ನೋಡಿ ಅಂಗಹಾರ.

ಮೂವೆರಟ : ಮೂವತ್ತು ಮತ್ತು ಎರಡಕ್ಷರ = ಮೂವತ್ತೆರಡಕ್ಷರ ತಾಳ.

ಮೃದಂಗ : ನೋಡಿ ಮದ್ದಳೆ.

ಮೇಳ : ಹಿನ್ನೆಲೆ ಸಂಗೀತ, ವಾದ್ಯ ಹಾಗೂ ನರ್ತಕ, ನರ್ತಕಿಯರ ಗುಂಪು. ನೃತ್ಯ ಮೇಳದಲ್ಲಿ (ಮೈಸೂರು ಸಂಸ್ಥಾನದಲ್ಲಿ) ಎರಡು ವಿಧ.
(i) ರಾಜನ ಆಸ್ಥಾನದಲ್ಲಿ ನರ್ತಿಸುವವರು – ಭೋಗ ಮೇಳ.
(ii) ಕಛೇರಿಗಳಲ್ಲಿ ನರ್ತಿಸುವವರು – ತಾಫೆ ಮೇಳ.
ಪ್ರಾಚೀನರು ಸಂಪೂರ್ಣರಾಗ ಅಥವಾ ಜನಕರಾಗಗಳನ್ನು ಮೇಳ ರಾಗಗಳೆಂದು ಕರೆಯುವ ವಾಡಿಕೆಯಿತ್ತು. (ಸಂಶಾಚಂ. ಪು. ೩೧)

ಮೊನೆಗಾಲ್ : ಸೂಚಿಪಾದದಿಂದ ಮಾಡುವ ವಿಶೆಷವಾದ ಅಡವಿನ ವಿಧ.

ಮೌರಿ > ಮವುರಿ : ಒಂದು ಗಾಳಿ ವಾದ್ಯ – ನೋಡಿ. ಚಿತ್ರ – ಸುಷಿರ ವಾದ್ಯಗಳು.

ಯಂತಿರಿ > ಅಂತಿರಿ : ೨೦ ವಾದ್ಯ ಪ್ರಬಂಧಗಳಲ್ಲಿ ಒಂದು. (ಸಂಸಸಾ. ೫-೧೫೭)

ಯಡಪು : ತ್ರಿಸ್ಥಾನಗಳಲ್ಲಿ ಸ್ವರವು ದೀರ್ಘವಾಗಿ ಸಂಚರಿಸುವ ಕ್ರಮ. (ಸಾಸಂಭ. ಪು. ೧೩೬)

ಯತಿ : ನೃತ್ಯ ಪ್ರಬಂಧ ಹಾಗೂ ಗೀತ ಪ್ರಬಂಧದ ಒಂದು ಅಂಗ. ನಿರ್ದಿಷ್ಟವಾದ ಅಕ್ಷರಗಳಲ್ಲಿ ಜೋಡಿಸಿದ ಪ್ರಬಂಧಗಳು ಇವು ಒಟ್ಟು ೬. (ಸಮ, ಶ್ರೋತಾವಹ, ಮೃದಂಗ, ಗೋಪುಚ್ಛ, ಡಮರು, ವಿಷಮ)

ಯತಿ ಸಮ : ಆರು ಪ್ರಕಾರದ ಯತಿಗಳಲ್ಲಿ ಮೊದಲನೆಯದು. ನಿರ್ದಿಷ್ಟವಾದ ಕಾಲ ಹಾಗೂ ಅಂಗಗಳನ್ನು ಹೊಂದಿರುವುದು.

ಯವನಿಕಾ ಯವನಿಕಾಪಟ : ನೋಡಿ ಜವನಿಕ.

ರಂಗರಂಗಭೂಮಿ : ನಾಟಕ ಅಥವಾ ನೃತ್ಯವನ್ನು ಪ್ರದರ್ಶಿಸುವ ಸ್ಥಳ.

ರಂಗ ಸಂಗೀತ : ರಂಗದ ಮೇಲೆ ನಡೆಯುವ ನೃತ್ಯ, ನಾಟಕಗಳಿಗೆ ಬಳಸುವ ಸಂಗೀತ.

ರಂಗ ಸಂಗ್ರಹ : ನೃತ್ಯ ಅಥವಾ ನಾಟ್ಯಕ್ಕೆ ಸಂಬಂಧಪಟ್ಟ ಅಂಶಗಳು. ಇವು ಹನ್ನೊಂದು – ರಸ, ಭಾವ, ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸವರ, ಆತೋದ್ಯ, ಗಾನ, ರಂಗ. (ನಾಟ್ಯಶಾ. ೬-೧೦)

ರಸ : ಮನಸ್ಸಿನಲ್ಲಿ ಸದಾನೆಲೆಯಾಗಿರ ತಕ್ಕ ಚಿತ್ತವೃತ್ತಿ (ಭಾವ)ಗಳಿಗೆ ತಕ್ಕ ವಿಭಾವ(ಕಾರಣ)ಗಳು ಲಭಿಸಿ, ಅನುಭಾವ ಹಾಗೂ ವ್ಯಭಿಚಾರಿ ಭಾವಗಳ ಸಂಯೋಗದಿಂದ ಆನಂದಾತ್ಮಕವಾಗಿ ರಸನಿಷ್ಪನ್ನವಾಗುವಂತಹದು. ಇವು ನವರಸಗಳೆಂದು ಪ್ರಸಿದ್ಧಿ. ಶೃಂಗಾರ, ಹಾಸ್ಯ, ಕರುಣೆ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಹಾಗೂ ಶಾಂತ. (ನಾಟ್ಯಶಾ. ೬-೩೪)