ರಸದೃಷ್ಟಿಭೇದ : ನೋಡಿ ದೃಷ್ಟಿ ಭೇದ

ರಸಭೇದ : ಭರತನ ಮತದಂತೆ ಎಂಟು ರಸಗಳು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ.

ಶಾರ್ಙ್ಗಧರನ ಮತದಂತೆ ಒಂಬತ್ತು ರಸಗಳು – ಒಂಬತ್ತನೆಯದು ಶಾಂತ. (ನಾಟ್ಯಶಾ.೬-೧೬) (ಸಂಗೀರ. ೭-೧೩೬೯)

ನಾದ, ಶ್ರುತಿ, ಸ್ವರ, ಗ್ರಾಮ, ಮೂರ್ಛನೆ ತಾನಗಳಿಂದ ಅಲಂಕೃತವಾಗಿ ಕೇಳುವ ಜನಗಳ ಮನಸ್ಸನ್ನು ರಂಜಿಸುವಂತಹುದು ರಾಗ (ನರ್ತನಿ. ಪು. ೨೦೯)

ರಾಗಭೇದ : ಜನಕರಾಗ, ಜನ್ಯರಾಗ, ರಾಗಾಂಗ, ಉಪಾಂಗ, ಭಾಷಾಂಗ ರಾಗಗಳು. (ಸಂಶಾಚಂ. ಪು. ೩೪)

ರಾಗಾಂಗ : ರಾಗದ ಒಂದು ಪ್ರಭೇದ, ಜನಕರಾಗದ ಸ್ವರಗಳನ್ನೇ ತಮ್ಮ ಆರೋಹಣ, ಅವರೋಹಣಗಳನ್ನು ಹೊಂದಿದ್ದರೂ ಪ್ರಯೋಗವಾಗುವಲ್ಲಿ ಶ್ರುತಿಯ ಪ್ರಮಾಣದಲ್ಲಿ ಬದಲಾವಣೆಗಳನ್ನು ಹೊಂದಿರುವ ರಾಗಗಳು. (ಸಂಶಾಚಂ. ಪು. ೩೪)

ರಾವಣ ಹಸ್ತ (ವಾ) : ಒಂದು ತಂತೀ ವಾದ್ಯ. ಒಂದು ಬಗೆಯ ವೀಣೆ. ಪಂಡಿತಾ. ಪು. ೪೪೪.

ರಿಜ್ವಾಗತ ಸ್ಥಾನ (ಋಜ್ವಾಗತ ಸ್ಥಾನ) : ಸಮಪಾದ ಸ್ಥಾನ.

ರಿಗ್ಗವಣೆ ರೇಗುವಣೆ : ಗುಂಡಲೀ ನೃತ್ಯ ಪದ್ಧತಿಯಲ್ಲಿ ಬಳಸುವ ವಾದ್ಯ ಪ್ರಬಂಧಗಳಲ್ಲಿ ಒಂದು. (ಸಂಸಸಾ. ೬-೨೨೫-೨೬) (ಪಂಡಿತಾ – ಪು. ೪೪೬)

ರಿಪುವಣೆ ರಿಪ್ಪವಣೆ : ಒಂದು ವಾದ್ಯ ಪ್ರಬಂಧ. (ಸಂಸಸಾ. ೬-೨೨೧)

ರೂಪಕತಾಳ : ಸಪ್ತ ಸೂಳಾದಿ ತಾಳಗಳಲ್ಲಿ ಮೂರನೆಯ ತಾಳ. ಅಂಗ – ೧ ದೃತ, ೧ ಲಘು. (ಸಂಶಾಚಂ. ಪು. ೬೦)

ರೇಖಾ : ಮನೋಹರವಾದ ಕಾಯಸ್ಥಿತಿ. ವಿಕಟಾಂಗ ರಹಿತವಾದ, ಹೃದ್ಯವಾದ ಅಂಗಿಕಾಭಿನಯ. ತಲೆ, ಕಣ್ಣು, ಕೈಗಳು ಮತ್ತು ಇತರ ಅಂಗಗಳ ಸಮಕೂಟ. (ಸಂಸಸಾ. ೬-೨೦೩) ನರ್ತನಿ. ೪-೫೭೮.

ರೇಚಕ : ಎಗರುವುದು, ಕೈ ಕಾಲುಗಳನ್ನು ದೂರಕ್ಕೆ ಚಾಚುವುದು, ಪಕ್ಕಕ್ಕೆ ಚಲಿಸುವುದು. ಇವು ನಾಲ್ಕು ತರಹ, ಕರ, ಕಂಠ, ಕಟಿ ಹಾಗೂ ಪಾದ ರೇಚಕಗಳು. (ನಾಟ್ಯಶಾ. ೪-೨೫೦) (ನಾಟ್ಯಶಾ. ೪-೨೪೮ ಉ. ೨೪೯) (ಸಂಗೀರ. ೭-೮೯೯) (ಲಾಸ್ಯರಂ. ೪-೧೯)

ರೇಚಿತ : ಹುಬ್ಬಿನ ಏಳು ಭೇದಗಳಲ್ಲಿ ಒಂದು. ಹುಬ್ಬನ್ನು ಒಂದರ ನಂತರ ಒಂದಾಗಿ ಲಲಿತವಾಗಿ ಮೇಲಕ್ಕೆ ಎತ್ತುವುದು. (ನಾಟ್ಯಶಾ. ೮-೧೧೯) (ಸಂಗೀರ. ೭-೪೩೮) (ನೃತ್ಯಾಯ. ೪-೪೭೬)

ಲಘು : ನೃತ್ತ ಅಥವಾ ನರ್ತನದ ಒಂದು ಪ್ರಕಾರ. ಅಂಚಿತ ಕರಣಗಳು, ಅಲ್ಪವಾದ ಎಗರುವಿಕೆ ಪ್ರಧಾನವಾಗಿರುವ ನೃತ್ತ ಪ್ರಕಾರ. (ಸಂಗೀರ. ೭-೩೪) (ಮಾನಸ. ೪-೧೬-೯೬೩) (ನರ್ತನಿ. ೪-೮)

ಲಘು : ತಾಳದ ಷಡಂಗಗಳಲ್ಲಿ ಒಂದು, ದ್ರುತದ ಎರಡರಷ್ಟು ಕಾಲಪ್ರಮಾಣ ಉಳ್ಳದ್ದು. (ಸಂಶಾಚಂ. ಪು. ೫೪)

ಲಘು ಚರಣ ವಿನ್ಯಾಸ : ಹಗುರವಾದ ಪಾದಾಘಾತಗಳಿಂದ ಉಂಟಾಗುವ ಚಲನಾ ವಿಶೇಷ.

ಲಘು ಸಂಚಯ : ಮೂರು ವಾದ್ಯ (ಮೃದಂಗ) ಸಂಯೋಗಗಳಲ್ಲಿ ಒಂದು. ಅವನದ್ಧ ವಾದ್ಯ ಪ್ರಬಂಧಗಳಲ್ಲಿ ಲಘುವಿನ ಪ್ರವೃತ್ತಿ ದ್ರತಲಯ. (ನಾಟ್ಯಶಾ. ೩೪-೧೨೦)

ಲತಾಕರ ಲತಾಖ್ಯ : ನೃತ್ತಹಸ್ತಗಳಲ್ಲಿ ಒಂದು.

ಲಯ : ದಶವಿಧ ತಾಳ ಪ್ರಾಣಗಳಲ್ಲಿ ಒಂದು. ತಾಳದಲ್ಲಿ ಬರುವ ಸಶಬ್ದ, ನಿಶ್ಶಬ್ದ ಕ್ರಿಯೆಗಳ ಮಧ್ಯೆ ಸಾಗುವ ಕಾಲ ಪ್ರಮಾಣ. (ಸಂಗೀರ. ೫-೪೩)

ಲಯತ್ರಯಲಯಭೇದ : ಲಯದ ಮೂರು ಪ್ರಭೇದಗಳು, ವಿಲಂಬಿತ, ಮಧ್ಯ, ದ್ರುತ. (ಸಂಗೀರ.೫-೪೩, ೪೧)

ಲಯಸಮ : ಚತುರ್ ಮಾತ್ರಾಲಯದಲ್ಲಿ ನಡೆಯುವ ಕಾಲ ಪ್ರಮಾಣ. ವಾದನವು ಗಾಯನದ ದ್ರುತ, ಮಧ್ಯಮ, ವಿಲಂಬಿತ ಲಯಗಳಿಗೆ ಪೂರ್ತಿ ಅನುರೂಪವಾಗಿ ನಡೆಯುವ ಕ್ರಮ. (ನಾಟ್ಯಶಾ. (ಅನು) ಪು. ೪೭೫)

ಲವಣಿ : ದೇಶೀ ಲಾಸ್ಯಾಂಗ. ವಿಷಮವಾದ ಪ್ರಯೋಗ, ಅತಿಯಾದ ಬಾಗುವಿಕೆ. (ಸಂಸಸಾ. ೬-೨೦೭) (ಪಂಡಿತಾ ಪು. ೪೬೦)

ಲಳಿ ಲಲಿ : ದೇಶೀ ಲಾಸ್ಯಾಂಗ. ಲಾವಣ್ಯರಸವನ್ನು ಪೋಷಿಸುವಂತಹ ಸಂಗೀತದಿಂದ ಹರ್ಷೋತ್ಸಾಹಗಳನ್ನು ವ್ಯಕ್ತಪಡಿಸುವ ಲಾಸ್ಯಾಂಗ. (ಸಂಸಸಾ. ೬-೧೯೭)

ಲಾಗು : ಎಗರುವಿಕೆ, (ಸಂಗೀದ. ೬-೧೬೫)

ಲಾಲಂಗಿ : ಸ್ಥಾಯಾಗಳಲ್ಲಿ ಒಂದು. ಪಂಡಿತಾ. ಪು. ೪೫೭.

ಲಾಸ್ಯ : ನರ್ತನ ಭೇದಗಳಲ್ಲಿ ಒಂದು. ಅತ್ಯಂತ ಲಲಿತವಾದ, ಸೌಕುಮಾರ್ಯದಿಂದ ಕೂಡಿದ ಅಂಗವಿನ್ಯಾಸ. ಸ್ತ್ರೀಯರ ಶೃಂಗಾರಾಭಿನಯ. (ನಾಟ್ಯಶಾ. ೪-೩೧೮) (ಮಾನಸ. ೪-೧೬-೯೬೧) (ಲಾಸ್ಯರಂ. ೧-೬೬)

ಲಾಸ್ಯಾಂಗ : ಆಕರ್ಷಕವೂ, ಲಾಲಿತ್ಯಮಯವೂ ಆದ ಆಂಗಿಕ ಚಲನವಲನಗಳಿಂದ ಕೂಡಿದ ನೃತ್ಯ ವಿಶೇಷ.

ಎಲ್ಲಾ ಅಂಗಗಳ ವಿಲಾಸಮಯ ಸೌಂದರ್ಯವು ಲಾಸ್ಯಾಂಗ ಎಂದು. ನರ್ತನಿ, ಕಾರನ ಅಭಿಪ್ರಾಯ (೪.೫೮೦) ಲಾಸ್ಯಾಂಗಗಳ ಸಂಖ್ಯೆಯಲ್ಲಿ ಶಾಸ್ತ್ರಕಾರರಲ್ಲಿ ಮತಭೇದವಿದೆ. ಹತ್ತು (ನರ್ತನಿ) ನಲವತ್ತು ನಾಲ್ಕು (ನೃತ್ತರ) ಹದಿನೇಳು (ಸಂ.ಸಸಾ) ಮೂವತ್ತೇಳು (ನೃತ್ಯಾಯ).

ಲೀನ : ದ್ರುತದ ವೇಗದಿಂದ ಕಂಪಿಸುವ ಒಂದು ಗಮಕ ಭೇದ. (ನರ್ತನಿ. ಪು. ೧೩೩)

ಲೀಲಾನೃತ್ಯ : ಸ್ತ್ರೀಯರ ಸಹಜ ಸ್ವಭಾವಗಳಲ್ಲಿ ಮೊದಲನೆಯದು ಶೃಂಗಾರ ಪ್ರಧಾನವಾದ ಆಹಾರ್ಯ, ವಾಚಿಕ ಹಾಗೂ ಅಂಗಿಕಾಭಿನಯಗಳಿಂದ ಕೂಡಿದ ನೃತ್ಯ. (ದಶರೂ. ೨-೩೨) (ದಶರೂ. ೨-೩೭)

ಲೋಕಧರ್ಮಿ : ಜನರ ಸ್ವಭಾವ ನಡವಳಿಕೆಯನ್ನು ಯಾವುದೇ ರೂಪಾಂತರವಿಲ್ಲದೇ ಯಥಾವತ್ತಾಗಿ ಅಭಿನಯಿಸುವ ಕ್ರಮ. (ನಾಟ್ಯಶಾ. ೧೩-೬೬, ೬೭)

ವಕ್ಷಭೇದ : ಎದೆಯ ಚಲನಾ ಪ್ರಕಾರಗಳು. ಇವು ಐದು – ಆಭುಗ್ನ, ನಿರ್ಭುಗ್ನ, ಪ್ರಕಂಪಿತ, ಉದ್ವಾಹಿತ, ಸಮ (ನಾಟ್ಯಶಾ. ೯-೨೧೩) (ಸಂಗೀರ. ೭-೨೯೮) (ಮಾನಸ. ೪-೧೬-೧೦೦೫)

ವರ್ಣ : ರಾಗದ ಅವಯವಗಳಲ್ಲಿ ಒಂದು. ಹಾಡಬೇಕೆಂಬ ಮನೋಭಾವ.

ವಲಿತ : ತೊಡೆಗಳ ಚಲನಾ ವಿಧಾನಗಳಲ್ಲಿ ಒಂದು, ಬೆರಳಿನ ಒಂದು ಚಲನಾ ಪ್ರಕಾರ, ಕೊರಳಿನ ಚಲನೆಯ ಒಂದು ವಿಧ, ನೃತ್ತ ಹಸ್ತಗಳಲ್ಲಿ ಒಂದು, ನೂರೆಂಟು ಕರಣಗಳಲ್ಲಿ ಒಂದು. ಸ್ತ್ರೀ ಸ್ಥಾನಕಗಳಲ್ಲಿ ಒಂದು.

ವಹಣಿ : ಗಮಕಭೇದಗಳಲ್ಲಿ ಒಂದು. ಆರೋಹಿ, ಅವರೋಹಿ ಹಾಗೂ ಸಂಚಾರಿಗಳಲ್ಲಿ ಸ್ವರಗಳನ್ನು ಕಂಪಿಸಿ ಹೇಳುವ ಕ್ರಮ. (ಸಂಸಸಾ. ೨-೪೩) (ಸದ್ರಾಗ. ೩-೧೬)

ವಳಿವಲಿ : ಒಂದು ವಿಧವಾದ ಗಮಕ ಭೇದ. (ಸಂಗೀರ. ೩-೯೨, ಉದ್ಧೃತಿ, ನರ್ತನಿ. ಪು. ೧೩೩) (ನರ್ತನಿ. ಪು. ೧೩೩)

ವಾಚಿಕ : ಚತುರ್ವಿಧ ಅಭಿನಯಗಳಳ್ಲಿ ಒಂದು. ಮಾತು, ಗೀತಗಳ ಮೂಲಕ ತೋರಿಸುವ ಅಭಿನಯ. ನಾಮ, ಆಖ್ಯಾತ, ನಿಪಾತ, ಉಪಸರ್ಗ, ಸಮಾಸ, ತದ್ಧಿತ, ಸಂಧಿ ಮತ್ತು ವಿಭಕ್ತಿಗಳಿಂದ ಕೂಡಿದ ಅಭಿನಯ. (ನಾಟ್ಯಶಾ. ೧೪-೪) (ಸಂಗೀರ. ೭-೨೨ ಪೂ.) (ಲಾಸ್ಯರಂ. ೧-೫೧)

ವಾದ್ಯಾನುಗತ : ವಾದ್ಯವನ್ನು ಅನುಸರಿಸಿ ನಡೆವ ನೃತ್ಯ ಅಥವಾ ಸಂಗೀತ.

ವಿಚಿತ್ರ : ಹೆಚ್ಚಾದ ತಿರುಗುವಿಕೆ, ವಿಚಿತ್ರವಾದ ಪಾದಘಾತಗಳು, ತಿರುಗುವ, ಕಂಪಿಸುವ ಚಲನೆಗಳನ್ನು ಹೊಂದಿರುವ ನೃತ್ತ.

ವಿತತ : ತಂತೀವಾದ್ಯ

ವಿಧುತ : ತಲೆಯ ಚಲನೆಯ ಒಂದು ವಿಧಾನ. (ತಲೆಯನ್ನು ಎರಡೂ ಬದಿಗಳಿಗೆ ರಭಸದಿಂದ ಅಲುಗಾಡಿಸುವುದು) ಬಾಯಿಯ ಚಲನೆಯ ಒಂದು ವಿಧಾನ. (ನಾಟ್ಯಶಾ. ೮-೨೪) (ಸಂಗೀರ. ೭-೫೩) (ಲಾಸ್ಯರಂ. ೧-೭೯) (ಸಂಗೀರ. ೭-೫೧೯ ಉ)

ವಿಭಾವ : ಭಾವವನ್ನು ಉದ್ದೀಪನಗೊಳಿಸುವ ಕಾರಣ ಹೇತು, ಭಾವವನ್ನು ಪೋಷಿಸುವಂಥದು. (ದಶರೂ. ೪.೨ ಪೂ.) (ನಾಟ್ಯಶಾ. ೭-೪)

ವಿಲಂಬಿತ : ಮೂರು ಲಯಗಳಲ್ಲಿ ಒಂದು. ನಿಧಾನಗತಿಯಲ್ಲಿ ಸಾಗುವ ಲಯ. (ಸಂಗೀರಾ. ೬-೪೪-೪೫ ಪೂ.)

ವಿವರ್ತಿತ : ಪಕ್ಕೆಯ ಭೇದ, ಕಣ್ಣಿನ ರೆಪ್ಪೆಗಳ ಚಲನಾವಿಧಾನ, ತುಟಿಗಳ ಚಲನೆಯ ಒಂದು ಪ್ರಕಾರ.

ವಿವರ್ತಿತ ಪಕ್ಕೆ :- ಸೊಂಟದ ಮೂಲಕ ಪಕ್ಕದಲ್ಲಿ ತಿರುಗುವುದು. (ನಾಟ್ಯಶಾ. ೯-೨೨೭) (ನಾಟ್ಯಶಾ. ೮-೧೧೨ ಪೂ.) (ನಾಟ್ಯಶಾ. ೮-೧೩೯)

ವಿಷಮ : ನರ್ತನ ಪ್ರಕಾರಗಳಲ್ಲಿ ಒಂದು. ತಾಳಗ್ರಹದ ಒಂದು ವಿಧ. ಒಂದು ತಾಳ ಗ್ರಹ. ಹೆಚ್ಚಾದ ಹಾರುವಿಕೆ, ಹಗ್ಗದ ಮೇಲೆ ನಡೆಯುವುದು, ಕೋಲಿನೊಡನೆ ಕುಣಿಯುವುದು ವಿಷಮ ನೃತ್ತ. (ಮಾನಸ. ೪-೧೬-೯೬೪)

ವಿಷಮ ಕರ್ತರಿ : ಅವನದ್ಧ ವಾದ್ಯಗಳ ಹಸ್ತ ಪಾಟಗಳಲ್ಲಿ ಒಂದು. ಒಂದಾದ ಮೇಲೆ ಒಂದು ಕೈಯಿಂದ ವಾದ್ಯವನ್ನು ಹೊಡೆಯುವುದು. (ಸಂಗೀರ. ೮-೮೬೪)

ವಿಷಮದೂಷಿ (ಸಿ) : ದೇಶೀ ನೃತ್ಯದ ಒಂದು ಉರುಪು ಕ್ರಮ.

ವಿಷಮ ನೃತ್ಯ : ನರ್ತನದ ಒಂದು ವಿಧಾನ.

ವಿಷಮ ಪ್ರಹಾರ : ಅವನದ್ಧ ವಾದ್ಯವನ್ನು ನುಡಿಸುವ ಒಂದು ವಿಧ. ಎರಡು ಹಸ್ತಗಳ ವಿಷಮ ಘಾತದಿಂದ ಉಂಟಾಗುವ ಪ್ರಹಾರ. (ಸಂಗೀರ. ೬-೮೧೨)

ವೀಥೀ : ದಶರೂಪಕಗಳಲ್ಲಿ ಒಂದು.

ವೃತ್ತಿ : ರಂಗ ಸಂಗ್ರಹಗಳಲ್ಲಿ ಒಂದು. ನಾಟಕಗಳಲ್ಲಿ ಅಭಿನಯಿಸುವ ವಿಷಯಗಳ ಸ್ವರೂಪ ವಿಶೇಷ. ಇವು ನಾಲ್ಕು ತರಹ – ಭಾರತಿ, ಆರಭಟಿ, ಸಾತ್ತ್ವತೀ, ಕೈಶಿಕೀ.

ವೃತ್ತಿತ್ರಯ : ಗೀತದ ಗುಣ ಪ್ರಧಾನತ್ವಕ್ಕೆ ವೃತ್ತಿ ಎಂದು ಹೆಸರು. ಇದು ಚಿತ್ರಾ, ವೃತ್ತಿ, ದಕ್ಷಿಣಾ ಎಂದು ಮೂರು ಬಗೆ. (ಸಂಗೀರ. ೬-೧೬೫)

(೧) ಚಿತ್ರ :- ಗೀತದ ಗುಣ ಅಂಗವಾಗಿ ಹೊಂದಿ ವಾದ್ಯ ಪ್ರಧಾನ.

(೨) ವೃತ್ತಿ :- ಗೀತ, ವಾದ್ಯ ಎರಡೂ ಸಮವಾದ ಪ್ರಧಾನ್ಯವನ್ನು ಹೊಂದಿರುವುದು.

(೩) ದಕ್ಷಿಣಾ :- ಗೀತ ಪ್ರಧಾನವಾಗಿ ವಾದ್ಯ ಅಂಗವಾಗಿ ಹೊಂದಿರುವುದು. (ಸಂಗೀರ. ೬-೧೬೬)

ವೈಶಾಖ ಸ್ಥಾನ : ಪುರುಷ ಸ್ಥಾನಕಗಳಲ್ಲಿ ಒಂದು.

ವ್ಯಾಯೋಗ : ದಶರೂಪಕಗಳಲ್ಲಿ ಒಂದು.

ಶಠನಾಯಕ : ಶೃಂಗಾರ ನಾಯಕನ ಅವಸ್ಥೆಗಳಲ್ಲಿ ಒಂದು. ಜ್ಯೇಷ್ಠಾನಾಯಿಕೆಗೆ ರಹಸ್ಯವಾಗಿ ಅಪ್ರಿಯವನ್ನುಂಟು ಮಾಡುವವನು. (ದಶರೂ. ೨-೯)

ಶಾಂತ : ನವರಸಗಳಲ್ಲಿ ಕೊನೆಯದು. ಸುಖ, ದುಃಖ, ರಾಗ, ದ್ವೇಷ, ಇಚ್ಛೆ ಹಾಗೂ ಚಿಂತೆಗಳಿಲ್ಲದೇ ಶಮಪ್ರಧಾನವಾದ ರಸ. (ಉದ್ಧೃತಿ. ದಶರೂ. ಪು. ೨೩೬) (ರಸರತ್ನಾಕರ. ೨, ಸೂ. ೬೩)

ಶಾಖಾ : ಅಂಗಿಕಾಭಿನಯದ ಒಂದು ವಿಭಾಗ. ಹಸ್ತಗಳ ವಿವಿಧ ವಿನ್ಯಾಸಗಳ ಮೂಲಕ ಅಭಿವ್ಯಕ್ತಿಗೊಳಿಸುವ ಅಭಿನಯ. (ನಾಟ್ಯಶಾ. ೮-೧೪) (ಸಂಗೀರ. ೭-೩೭) (ನೃತ್ತರ. ೧-೩೩)

ಶಿರೋಭೇದ : ತಲೆಯ ಚಲನಾ ವೈವಿಧ್ಯ. ಹದಿಮೂರು ವಿಧ – ಅಕಂಪಿತ, ಕಂಪಿತ, ಧುತ, ವಿಧುತ, ಪರಿವಾಹಿತ, ಆಧೂತ, ಅವಧೂತ, ಅಂಚಿತ, ನಿಹಂಚಿತ, ಪರಾವೃತ್ತ, ಉತ್‌ಕ್ಷಿಪ್ತ, ಅಧೋಗತ, ಲೋಲಿತ. (ಲಾಸ್ಯರಂ. ೧-೭೬-೭೮) (ಅಭಿದ. ೫೧, ೫೨)

ಶಿರೋವಿನ್ಯಾಸ : ನೋಡಿ ಶಿರೋಭೇದ.

ಶುಕತುಂಡ : ಅಸಂಯುತ ಹಸ್ತಗಳಲ್ಲಿ ಒಂದು. ಬಾಣ ಪ್ರಯೋಗ, ತೀಕ್ಷ್ಣ ಭಾವಗಳನ್ನು ಪ್ರದರ್ಶಿಸಲು ವಿನಿಯೋಗ. (ನಾಟ್ಯಶಾ. ೯-೪೯) (ಅಭಿದ. ೧೨೯, ೩೦) (ಸಂಗೀರ.೭-೧೪೦ ಪೂ.) (ತತ್ತ್ವಾನಿ. ೪೪. ೪೫)

ಶುದ್ಧ : ತಮ್ಮದೇ ಸ್ವರಗಳಿಂದ ರಂಜಿಸುವ ರಾಗಗಳು. (ಸಾಸಂಭ. ಪು. ೧೩೮)

ಶುದ್ಧಸಾಳಗ > ಶುದ್ಧಸಾಲಗ : ಬೇರೆಯದರ (ಸ್ವರಗಳು) ಆಲಂಬನೆಯಿಲ್ಲದೆ ನಿರಪೇಕ್ಷಗಳಾಗಿರುವ ರಾಗಗಳು ಶುದ್ಧ, ಬೇರೆ ರಾಗಗಳ ಛಾಯೆಯಿಂದ ರಂಜಿಸುವ ರಾಗಗಳು. (ನರ್ತನಿ. ಪು. ೩೭೯)

ಶೃಂಗಾರ : ನವಸರಗಳಲ್ಲಿ ಮೊದಲನೆಯದು. ಉತ್ತಮವಾದುದನ್ನು ಸೇವಿಸುವ ಮೂಲಕ ಯುವಕ, ಯುವತಿಯರಲ್ಲಿ ಉಂಟಾಗುವ ಪ್ರಮೋದಾತ್ಮಕವಾದ ಮಧುರವಾದ ಅಂಗವಿನ್ಯಾಸ. ಎರಡು ವಿಧದ ಶೃಂಗಾರ. ಸಂಭೋಗ, ವಿಪ್ರಲಂಭ. (ದಶರೂ. ೪-೪೮) (ರಸರತ್ನಾಕರ. ೧-೧೪)  ಮಲ್ಲಿಪು. ೮-೪೩, ಅಜಿಪು. ೫-೩೦ವ, ಧರ್ಮಪು. ೯-೯ವ.

ಶ್ರುತಿ : ಅತಿ ಸೂಕ್ಷ್ಮ ಶ್ರವಣ ಶಕ್ತಿ ಪಡೆದ ಕಿವಿಗೆ ಗೋಚರವಾಗುವ ಅತ್ಯಲ್ಪವೂ ಸೂಕ್ಷ್ಮವೂ ಆದ ನಾದಕ್ಕೆ ಶ್ರುತಿ ಎಂದು ಹೆಸರು.

ಷಡ್ಜ : ಸಪ್ತಸ್ವರಗಳಲ್ಲಿ ಮೊದಲನೆಯ ಸ್ವರ ಸ, (ಪ್ರಕೃತಿ ಸರ) (ಸಂಶಾಚಂ. ಪು. ೧೫)

ಷಡ್ಜ, ಮಧ್ಯಮ ಗ್ರಾಮ : ಸಸ್ವರದಿಂದ ಹಾಗೂ ಮಸ್ವರದಿಂದ ಆರೋಹಣ ಕ್ರಮದಲ್ಲಿ ಸಪ್ತಸ್ವರಗಳ ಮೂರ್ಛನೆಗಳು ನಿರ್ಮಿಸಲ್ಪಟ್ಟರೆ ಅದು ಷಡ್ಜ, ಮಧ್ಯಮ ಗ್ರಾಮರಾಗ (ಸಂಶಾಚಂ. ಪು. ೧೯)

ಸಂಕೀರ್ಣ : ತಾಳದ ಐದು ಜಾತಿಗಳಲ್ಲಿ ಒಂದು. ಒಂಬತ್ತು ಅಕ್ಷರ ಮಾತ್ರಾ ಬೆಲೆ.

ಸಂಕೀರ್ಣ : ರಾಗಭೇದ. (ಸಾಸಂಭ. ಪು. ೧೩೮)

ಸಂಗೀತಕ : ಗೀತ, ವಾದ್ಯ ಹಾಗೂ ನೃತ್ಯ ಈ ಮೂರರ ಮೇಳ. (ಸಂಗೀದಾ. ೨ ಪು. ೧೬)

ಸಂಚರ, ಸಂಚರಣೆ : ಒಂದು ರಾಗದ ಆರೋಹಣ, ಅವರೋಹಣ ಕ್ರಮದಲ್ಲಿ ಲೀಲಾಜಾಲವಾಗಿ ಸಂಚರಿಸುವುದು.

ಸಂಚಯ ತ್ರಯ : ಅವನದ್ಧ ವಾದ್ಯಗಳಲ್ಲಿನ ಮೂರು ಸಂಯೋಗಗಳು – ಗುರು ಸಂಚಯ, ಲಘು ಸಂಚಯ, ಗುರು ಲಘು ಸಂಚಯ. (ನಾಟ್ಯಶಾ. ೩೪-೪೧ ಪೂ.)

ಸಂಚಾರಿ : ಸ್ವರಗಳ ಆರೋಹ, ಅವರೋಹಗಳ ಮಿಶ್ರಣವೂ ಸಂಚಾರಿ ಎನಿಸುತ್ತದೆ. (ಸಂಶಾಚಂ. ಪು. ೨೨)

ಸಂಚಾರಿ : ಆಯಾ ಭಾವ, ರಸಗಳಿಗೆ ಪೋಷಕವಾಗಿ ಹುಟ್ಟುವ ಹಾಗೂ ಅಲ್ಲೇ ಲಯವಾಗುವ ಭಾವಗಳು. ಇವು ಒಟ್ಟು ಮೂವತ್ತು ಮೂರು. ಭರತನು ಇದನ್ನು ವ್ಯಭಿಚಾರಿ ಭಾವಗಳೆಂದು ಕರೆದಿದ್ದಾನೆ. (ನಾಟ್ಯಶಾ. ೭.೨೭ ರ ಗದ್ಯ) (ರಸರತ್ನಾಕರ. ೧-೫) (ನಾಟ್ಯಶಾ. ೬-೧೯-೨೨)

ಸಂಚಾರಿ ದೃಷ್ಟಿಭೇದ : ಇಪ್ಪತ್ತು ತರಹ. (ನಾಟ್ಯಶಾ. ೮-೪೦-೪೨)

ಸಂಪ್ರದಾಯ : ನರ್ತಕಿ ಅಥವಾ ನರ್ತಕ ಹಾಗೂ ಅವನಿಗೆ ಹಿನ್ನೆಲೆ ಗಾಯನ ಹಾಗೂ ಪಕ್ಕವಾದ್ಯವನ್ನು ಒದಗಿಸುವ ವೃಂದ. ಸಂಪ್ರದಾಯದಲ್ಲಿ ಕಲಾವಿದರ ಸಂಖ್ಯೆ. ಮುಖರಿ – ಸಂಪ್ರದಾಯದ ನಾಯಕ -೧, ಪ್ರಮುಖರಿ -೨ , ಆವುಜಧಾರರು-೨, ಅಡ್ಡಾವುಜಧಾರರು- ೨, ಕರಟ (ಒಂದು ವಾದ್ಯ)ಧಾರರು-೨, ಆವುಜಧಾರರು-೩೨, ಲೋಹದ ತಾಳಧಾರರು -೮, ಕಹಳೇ ವಾದಕರು-೨, ಕೊಳಲು ವಾದಕರು-೨, ಮುಖ್ಯ ಗಾಯಕರು-೨, ಸಹಗಾಯಕರು-೮, ಮುಖ್ಯಗಾಯಿಕೆಯರು-೨, ಸಹಗಾಯಿಕೆಯರು-೮, ನರ್ತಕ ಅಥವಾ ನರ್ತಕಿ-೧, ಒಟ್ಟು ೭೪ ಜನರ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಕುಟಿಲವೆಂದೂ, ಇದರ ಅರ್ಧದಷ್ಟು ಸಂಪ್ರದಾಯಕ್ಕೆ ಮಧ್ಯಮವೆಂದೂ, ಅದಕ್ಕಿಂತ ಕಡಿಮೆ ಇರುವ ಸಂಪ್ರದಾಯಕ್ಕೆ ಕನಿಷ್ಠ ಎಂದೂ ಕರೆದಿದ್ದಾರೆ.

ಸಂಯುತ ಹಸ್ತ : ಎರಡೂ ಹಸ್ತಗಳ ಸಂಯೋಗದಿಂದ ಮಾಡುವ ಕರವಿನ್ಯಾಸ.

ಸಪ್ತತಾಳ : ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಪ್ರಸಿದ್ಧವಾಗಿರುವ ಸೂಳಾದಿ ಸಪ್ತತಾಳಗಳು ಅಥವಾ ಅಲಂಕಾರ ತಾಳಗಳು. ಅವು ಧ್ರುವತಾಳ, ಮಠ್ಯತಾಳ, ತ್ರಿಪುಟತಾಳ, ರೂಪಕತಾಳ, ಝಂಪೆ ಹಾಗೂ ಏಕತಾಳ.

ಸಪ್ತಸ್ವರ : ಷಡ್ಜ, ಗಾಂಧಾರ, ಮಧ್ಯಮ, ಪಂಚಮ, ಧೈವತೆ, ನಿಷಾದ (ಸರಿಗಮಪದನಿ) ಸಮ

(೧) ಭ್ರೂಭೇದಗಳಲ್ಲಿ ಒಂದು. (೨) ಕಪೋಲ ಭೇದಗಳಲ್ಲಿ ಒಂದು. (೩) ಪಾದಭೇದಗಳಲ್ಲಿ ಒಂದು. (೪) ಶಿರೋಭೇದಗಳಲ್ಲಿ ಒಂದು. (೫) ದೃಷ್ಟಿ ಭೇದಗಳಲ್ಲಿ ಒಂದು.

ಆಯಾ ಅಂಗಗಳು ಸಮವಾಗಿರುವಿಕೆ.

ಸಮನೃತ್ಯ : ಸಾಮಾನ್ಯವಾಗಿ ರಂಗವನ್ನು ಪ್ರವೇಶಿಸಿ ನೃತ್ಯಾರಂಭವನ್ನು ಮಾಡುವ ನರ್ತನ ವಿಧಾನ. ಪಾದಗಳು ಸಮನಾಗಿದ್ದು, ಕೈಗಳಲ್ಲಿ ಲತಾಕರ ಹಸ್ತವನ್ನು ಹಿಡಿದು ತಾಳಕ್ಕೆ ಸಮನಾಗಿ ಹೆಜ್ಜೆ ಹಾಕುತ್ತಾ ನರ್ತಿಸುವುದು. (ಭರಕೋ. ಪು. ೭೦೩)

ಸಮಪಾಣಿ : ಅವನದ್ಧ ವಾದ್ಯಗಳ ಹಸ್ತಪಾಟಗಳಲ್ಲಿ ಒಂದು ವಿಧ. ಎರಡೂ ಹಸ್ತಗಳ ಅಂಗುಷ್ಠದಿಂದ ಅವನದ್ಧ ವಾದ್ಯವನ್ನು ಹೊಡೆಯುತ್ತ ಕರಪುಟಗಳಿಂದ ಅದುಮುವ ಕ್ರಮ. (ಸಂಗೀರ. ೬-೮೩೫)

ಸಮಪಾದ : ಪುರುಷ ಸ್ಥಾನಕಗಳಲ್ಲಿ ಒಂದು.. ಎರಡೂ ಪಾದಗಳನ್ನು ಒಂದು ಗೇಣು ಅಂತರದಲ್ಲಿರಿಸಿ ಸೌಷ್ಠವದಿಂದ ನಿಲ್ಲುವ ಸ್ಥಾನ. ಇದಕ್ಕೆ ಬ್ರಹ್ಮನು ಅಧಿದೇವತೆ. (ನಾಟ್ಯಶಾ. ೧೦-೫೭) (ವೇಸಂಮ. ಹಸ್ತಪ್ರತಿ. ೩೫) (ಲಾಸ್ಯರಂ. ೭-೧೮) (ಲಾಸ್ಯರಂ. ೭-೬೦ ಪೂ.) (ಅಭಿದ. ೨೭೭)

ಸಮಪಾದಚಾರಿ : ಮಾರ್ಗಭೌಮಾಚಾರಿಗಳಲ್ಲಿ ಮೊದಲನೆಯದು. ಪಾದಗಳನ್ನು ಒಂದಕ್ಕೊಂದು ಹತ್ತಿರವಾಗಿ, ನಖಗಳು ಕಾಣುವಂತೆ ಜೋಡಿಸಿ ನಿಂತು ಅದೇ ಸ್ಥಾನದಲ್ಲಿ ಸರಿದರೆ ಸಮಪಾದಚಾರಿ. (ನಾಟ್ಯಶಾ. ೧೦, ೧೪) (ಸಂಗೀರ. ೭-೯೨೫-೨೬) (ಲಾಸ್ಯರಂ. ೬-೧೮)

ಸಮಪ್ರಹಾರ : ಅವನದ್ಧ ವಾದ್ಯ ವಾದನದ ಒಂದು ಪ್ರಕಾರ. ಎರಡೂ ಕೈಗಳಿಂದ (ಹಸ್ತ) ಘಾತವನ್ನು ಮಾಡುವುದು. (ಸಂಗೀರ. ೬-೯೧೪ ಉ.) (ಮೇಮ. ಉದ್ದೃತಿ. ಭರಕೋ. ಪು. ೭೦೪)

ಸಮವಕಾರ : ದಶರೂಪಕಗಳಲ್ಲಿ ಒಂದು.

ಸಮಹಸ್ತ : ಒಂದು ವಾದ್ಯ ಪ್ರಬಂಧ. ಗೀತನೃತ್ತಾನುಗವಾಗಿ ತಕಾರವನ್ನು ಉಚಿತವಾದ ಪ್ರಮಾಣ ಕಾಲದಲ್ಲಿ ಮೂರು ಬಾರಿ ನುಡಿಸುವುದು.

ಸಾತ್ವಿಕ : ಚತುರ್ವಿಧಾಭಿನಯಗಳಲ್ಲಿ ಒಂದು. ಮನಸ್ಸಿನಲ್ಲಿ ಹುಟ್ಟುವ ಸತ್ತ್ವದ ಬೆಂಬಲದಿಂದ ಪ್ರಕಾರ ಪಡಿಸುವ ಭಾವಗಳು. ಇವು ಒಟ್ಟು ಎಂಟು. (ನಾಟ್ಯಶಾ. ೭-೯೩ ರ ಗದ್ಯ) (ಸಂಗೀರ. ೭-೨೩) (ನರ್ತನಿ. ೪-೨೬)

ಸಾತ್ತ್ವಿಕ ಭಾವ ಭೇದ : ಎಂಟು ವಿಧ- ಸ್ತಂಭ, ಸ್ಪೇದ, ರೋಮಾಂಚ, ವೈಸ್ಪರ, ವೇಪಥು, ವೈವರ್ಣ್ಯೆ, ಅಶ್ರು, ಪ್ರಲಯ. (ನಾಟ್ಯಶಾ. ೭-೯೪)

ಸಾಮ್ರಾಣಿ ಭೇದ : ಮಾರ್ಗ ತಾಳಗಳಲ್ಲಿ ಒಂದು. ಷಟ್ಟಿತಾಪುತ್ರಕ ತಾಳದ ಮತ್ತೊಂದು ಹೆಸರು.

ಸಾಳಗಸಾಲಗ : ಬೇರೆ ರಾಗಗಳ ಛಾಯೆಯಿಂದ ರಂಜಿಸುವ ರಾಗಗಳು. (ರಾಗಮಾಲಾ. ೧೨೬)

ಸಿಂಹನಾದ : ನೂರೆಂಟು ತಾಳಗಳಲ್ಲಿ ಒಂದು.

ಸಿದ್ಧಿ : ನೃತ್ಯ ಅಥವಾ ನಾಟ್ಯ, ಪ್ರಯೋಗದ ಯಶಸ್ಸು, ಎರಡು ವಿಧ. ದೈವೀ, ಮಾನುಷೀ. (ನಾಟ್ಯಶಾ. ೨೭-೧, ೨ ಪೂ.)

ಸುರಗೆ ವೆಕ್ಕಣ : ಒಂದು ದೇಶೀ ನೃತ್ಯ.

ಸುರೇಖಾ : ದೇಶೀ ಲಾಸ್ಯಾಂಗ. ಆಂಗಿಕಾಭಿನಯವು ಹೃದ್ಯವಾಗಿದ್ದು ವಿಕಟಾಂಗ ವಿಲ್ಲದಂತಹ ಅಂಗ. (ಸಂಸಸಾ. ೬-೨೦೩)

ಸುಳುಹು : ತೀವ್ರವಾಗಿ ಸುತ್ತುವ ಕ್ರಮ.

ಸೂಚೀ : ಹಸ್ತ, ಪಾದ, (ಮಾರ್ಗ, ದೇಶೀ), ಚಾರಿ ನೃತ್ತಕರಣ.

(i) ಅಸಂಯುತ ಹಸ್ತಗಳಲ್ಲಿ ಒಂದು. (ನೋಡಿ ನಕ್ಷೆ – ಅಸಂಯುತ ಹಸ್ತಗಳು) (ಅಭಿದ. ೧೪೨)

(ii) ಪಾದಭೇದ :- ಎಡಗಾಲನ್ನು ಸ್ವಾಭಾವಿಕವಾಗಿರಿಸಿ ಬಲಗಾಲಿನ ಹೆಬ್ಬೆರಳಿನ ತುದಿಯಿಂದ ನೆಲವನ್ನು ಮುಟ್ಟುವುದು. (ಸಂಗೀರ. ೭-೩೧೯)

(iii) ಮಾರ್ಗ ಆಕಾಶಚಾರಿ :- ಕುಂಚಿತ ಪಾದಗಳಲ್ಲಿ ಒಂದು ಕಾಲನ್ನು ಎತ್ತಿ ಮೊಣಕಾಲಿನಿಂದ ಮೇಲಕ್ಕೆ ಚಲಿಸಿ, ಮುಂದೆ ತುದಿಗಾಲಿನಿಂದ ನೆಲವನ್ನು ತಟ್ಟುವುದು. (ಸಂಗೀರ. ೭-೯೬೦-೬೧)

(iv) ದೇಶೀ ಆಕಾಶಚಾರಿ :- ಒಂದು ಕಾಲನ್ನು ನೆಲದ ಮೇಲಿರಿಸಿ ಮತ್ತೊಂದು ಕಾಲನ್ನು ಮೊದಲಿನ ಕಾಲಿನ ತೊಡೆಗೆ ತಾಗಿಸಿ ಮುಂದೆ ಚಾಚುವುದು.

(v) ನೃತ್ತಕರಣ (ಚಿತ್ರ ನೋಡಿ ನಕ್ಷೆ – ಕರಣಗಳು)

ಸೂಚೀನಾಟ್ಯ : ನಾಟ್ಯವನ್ನು ಆರಂಭಿಸುವಾತ. ಪುಷ್ಪಾಂಜಲಿ, ಜರ್ಜರ ಪೂಜೆ, ನಾಂದಿ ಶ್ಲೋಕ ಮುಂತಾದ ಪೂರ್ವರಂಗ ವಿಧಿಯನ್ನು ನಿರ್ವಹಿಸಿ ನಾಟ್ಯಕ್ಕೆ ಶುಭಕೋರಿ ಅಂದಿನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ, ನಾಟಕವನ್ನು ನಡೆಸುವಾತ. (ವೇಮ ಉದ್ಧೃತಿ. ಭರಕೋ. ೯೭೦)

ಸೂಳಾದಿಸೂಳಾದಿ ತಾಳ : ಸಪ್ತತಾಳಗಳಿಗೆ ಅಳವಟ್ಟ ಗೀತ ಪ್ರಬಂಧ. ಸೂಳಾದಿ ತಾಳ ಅಥವಾ ಸಪ್ತತಾಳ – ಧ್ರುವ, ಮಂಠ, ರೂಪಕ, ಝಂಪೆ, ತ್ರಿಪುಟ, ಅಡ್ಡ (ಅಟ್ಟ), ಏಕತಾಳ.

ಸೌಷ್ಠವ : ಸೊಂಟವನ್ನು ಮೊಳಕಾಲಿಗೂ, ಹೆಗಲನ್ನು ಮೊಳಕೈಗೂ ಸಮಮಾಡಿ ತಲೆಯನ್ನು ಸಮನಾಗಿ ನಿಲ್ಲಿಸಿ ಎದೆಯನ್ನು ಮುಂದಕ್ಕೆ ಚಾಚಿ ನಿಲ್ಲುವುದು. (ಕುಂಭ, ಉದ್ಧೃತಿ. ಭರಕೋ. ೭೪೪) (ಸಾಸಂಭ. ಪು. ೨೩೮) (ಸಂಸಸಾ. ೬-೧೯೫) (ಲಾಸ್ಯರಂ. ೭-೧೭)

ಸ್ಥಾನ : ಸ್ವರ ಆರಂಭವಾಗುವ ಸ್ಥಾನ.

ಸ್ತುತಿ : ಪಾಟಾಕ್ಷರ ಸಮೇತವಾದ ದೇವತೆಗಳು ಅಥವಾ ರಾಜರ ಸ್ತುತಿ ಶಬ್ದ. (ನರ್ತನಿ. ಪು. ೩೯೯)

ಸ್ಥಾನಕ : ನಿಶ್ಚಲ ಶರೀರ ಸನ್ನಿವೇಶ, ನಾಟ್ಯ ಅಥವಾ ನೃತ್ಯದಲ್ಲಿ ನಟ, ನಟಿಯರು ತಳೆಯುವ ಆರಂಭ ಹಾಗೂ ಅಂತ್ಯದ ಸ್ಥಾನ. (ಸಂಗೀರ. ೭-೧೦೨೭)

ಸ್ಥಾನಕ ಭೇದ : ಪುರುಷ ಆರು, ಸ್ತ್ರೀ ಏಳು, ದೇಶೀಯ ಸ್ಥಾನಕಗಳು ಇಪ್ಪತ್ತ, ಮೂರು, ಒಂಬತ್ತು ಉಪವಿಷ್ಟ, ಆರು ಸುಪ್ತ ಸ್ಥಾನಕಗಳು. ಒಟ್ಟು ಐವತ್ತೊಂದು ಸ್ಥಾನಕಗಳು.

ನಾಟ್ಯಶಾ. ದಲ್ಲಿ ಕೇವಲ ಆರು ಪುರುಷ ಸ್ಥಾನಕಗಳು. ೧) ವೈಷ್ಣವ, ೨) ಸಮಪಾದ, ೩) ವೈಶಾಖ, ೪) ಮಂಡಲ, ೫) ಆಲೀಢ, ೬) ಪ್ರತ್ಯಾಲೀಢ. (ನಾಟ್ಯಶಾ. ೧೦.೫೦) (ಸಂಗೀರ. ೭-೧೦೩೦-೩೧)

ಸ್ಥಾಪನ : ದೇಶೀ ಲಾಸ್ಯಾಂಗ. ಕರಣಗಳ ಅಭಿನಯದ ಕೊನೆಯಲ್ಲಿ ಸಮ ಹಾಗೂ ವಿಷಮ ಕರಣಗಳಿದ್ದರೂ ಪೂರ್ವಸ್ಥಿತಿ ಅಂದರೆ ರೂಪ ಸೌಷ್ಠವ ಸ್ಥಿತಿಗೆ ಬರುವುದು. (ಸಂಸಸಾ. ೬-೨೦೬)

ಸ್ಥಾಯಿ : ಶಾರೀರ ಸ್ಥಾನ ಮೂರು – ಮಂದ್ರ, ಮಧ್ಯ, ತಾರ. (ಸಾಸಂಭ. ಪು. ೧೩೬)

ಸ್ಥಾಯೀ ಭಾವ : ಚಿತ್ತವೃತ್ತಿಯಲ್ಲಿ ಸದಾಕಾಲ ನಎಲೆಯಾಗಿದ್ದು, ಅವುಗಳಿಗೆ ತಕ್ಕ ವಿಭಾವವು ದೊರಕಿದಾಗ ಉದ್ಬೋಧವಾಗುವ ಭಾವಗಳು. (ದಶರೂ. ೪-೪ ಪೂ.)

ಸ್ಥಾಯಿ ಭಾವ ಭೇದ : ಎಂಟು ತರಹ – ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸಾ, ವಿಸ್ಮಯ. (ನಾಟ್ಯಶಾ. ೬-೧೮)

ಸ್ಥಿತಾಚಳಿತ ಸ್ಥಿತಾವರ್ತ : ಮಾರ್ಗಭೌಮಚಾರಿ. ಸಮಪಾದದಲ್ಲಿ ನಿಂತು ಒಂದು ಪಾದವನ್ನು ನೆಲದ ನೇರಕ್ಕೇ ಸರಿಸುತ್ತ ಎರಡೂ ಮೊಳಕಾಲ್ಗಳನ್ನು ಸ್ವಸ್ತಿಕವನ್ನಾಗಿಸಿ ಆಮೇಲೆ ಇನ್ನೊಂದು ಪಾದದಿಂದ ನಿಂತಲ್ಲಿಯೆ ತಿರುಗುವ ಕ್ರಿಯೆ. (ನಾಟ್ಯಶಾ. ೧೦-೧೫)

ಸ್ಫುರಿತ : ಹದಿನೈದು ಗಮಕಗಳಲ್ಲಿ ಒಂದು. ಜಂಟಿ ಸ್ವರಗಳಲ್ಲಿ ಎರಡನೆಯ ಸ್ವರ ಒತ್ತಲ್ಪಟ್ಟು ನುಡಿಯುವುದು. (ಸಂಶಾಚಂ. ಪು. ೨೬)

ಸ್ವರ : ಸ್ವಕೀಯ ರಂಜನ ಗುಣಹೊಂದಿ, ಶ್ರೋತೃಗಳಿಗೆ ಆನಂದವನ್ನುಂಟು ಮಾಡುವ ನಾದ. (ಸಂಶಾಚಂ. ಪು. ೧೫)

ಹಂಸ ಮಂಡಲಿ : ವಿಶೇಷವಾದ ಒಂದು ಸಾಮೂಹಿಕ ನೃತ್ಯ.

ಹದಿಮೂರು ಶಿರೋಭೇದ : ತಲೆಯ ಚಲನೆಯ ಹದಿಮೂರು ವಿಧಾನ.

ಹನುಭೇದ : ಕಪೋಲದ ಕೆಳಭಾಗದ ಚಲನೆಯ ಭೇದ. ಎಂಟು ವಿಧ – ವ್ಯಾಧೀರ್ಘಾ, ಶಿಥಿಲಾ, ವಕ್ರಾ, ಸಂಹತಾ, ಚಲಸಂಹತಾ, ಪ್ರಚಲಾ, ಪ್ರಸ್ಫುರಾ, ಲೋಲ. (ಮಾನಸ. ೪-೧೬-೧೧೦೬) (ಸೋಮೇಶ್ವರ. ಉದ್ಧೃತಿ. ಭರಕೋ.)

ಹರಿಣಪ್ಲುತ : ದೇಶೀ ಆಕಾಶಚಾರಿ. ಕಾಲುಗಳನ್ನು ಸ್ವಲ್ಪ ಬಗ್ಗಿಸಿ, ಮುಂದಕ್ಕೆ ನೆಗೆದು ನಿಂತುಕೊಳ್ಳುವುದು. (ಸಂಗೀರ. ೭-೧೦೧೩) (ನೃತ್ಯಾಯ.೪-೧೦೬೪) (ಲಾಸ್ಯರಂ. ೬-೯೨ ಪೂ.)

ಹಲಗೆ : ಒಂದು ಚರ್ಮವಾದ್ಯ.

ಹಸ್ತ : ನೃತ್ಯ, ನಾಟ್ಯಗಳಲ್ಲಿ ಸಾಹಿತ್ಯದಲ್ಲಿ ಅಡಗಿರುವ ಭಾವವನ್ನು ಮುದ್ರೆಗಳ ಮೂಲಕ ಸೂಚಿಸುವುದು. ನೃತ್ತದಲ್ಲಿ ಅಲಂಕಾರಿಕವಾಗಿ ಬಳಸುವಂಥದು.

ಹಸ್ತಚಾರಿ : ಹಸ್ತಗಳ ಚಲನೆ

ಹಸ್ತಭೇದ  ಹಸ್ಥಾಭಿನಯ : ನೋಡಿ ಕರೆದ ಭೇದ.

ಹಸ್ತಕ್ಷೇತ್ರ : ನೃತ್ಯ ಅಥವಾ ನೃತ್ತದಲ್ಲಿ ಹಸ್ತಗಳು ಆಕ್ರಮಿಸುವ ಸ್ಥಳ ಪ್ರದೇಶ. ಇವು ಹದಿಮೂರು ವಿಧ-ಪಕ್ಕೆಗಳು, ಮುಂದೆ, ಹಿಂದೆ, ಮೇಲೆ, ಕೆಳಗೆ, ತಲೆ, ಹಣೆ, ಕಿವಿ, ಭುಜ, ಎದೆ, ಹೊಕ್ಕಳು, ಸೊಂಟ, ತೊಡೆ. (ಲಾಸ್ಯರಂ. ೪-೧೪-೧೫)

ಹಾವ : ಸ್ತ್ರೀಯರ ಸತ್ತ್ವಜ ಅಲಂಕಾರಗಳಲ್ಲಿ ಒಂದು. ಶರೀರ ಅಯತ್ನಗಳಲ್ಲಿ ಒಂದು. ಶೃಂಗಾರ ಪ್ರಧಾನ, ಕಣ್ಣು, ಹುಬ್ಬುಗಳ ವಿಶೇಷ ಚಲನೆ. (ದಶರೂ. ೨-೫೧)

ಹಾಸ್ಯ : ನವರಸಗಳಲ್ಲಿ ಒಂದು. ಹಾಸ ಸ್ಥಾಯಿ ಭಾವ, ವಿಕೃತ ವೇಷ, ವಿಕಾರಾಂಗ ವಿಭಾವ, ಪಕ್ಕೆ ಹಿಡಿದು ನಗುವುದು. ಮೂಗಿನ ಹೊರಳೆಗಳನ್ನು ಅರಳಿಸುವುದು ಇತ್ಯಾದಿ ಅನುಭಾವ. (ನಾಟ್ಯಶಾ. ೬-೫೦) (ದಶರೂ. ೪-೭೫)