ಅಂಕುರ : ಅಂಗಿಕಾಭಿನಯದ ಭೇದ : ಹಿಂದೆ ನಡೆದ ಕಥೆಯನ್ನು ವಿವರಿಸಿ ತೋರುವುದು. (ನಾಟ್ಯಶಾ. ೧೫) (ನೃತ್ತರ. ೩೩) (ಲಾಸ್ಯರಂ. ೭೧)

ಅಂಗ : ನೃತ್ಯದಲ್ಲಿ ಬಳಸುವ ಅಂಗಗಳು, ಇವು ಷಡಂಗಗಳು ಎಂದು ಪ್ರಸಿದ್ಧಿ ಪಡೆದಿವೆ. (ತಲೆ, ಕರ, ಎದೆ, ಪಕ್ಕೆ, ಸೊಂಟ ಹಾಗೂ ಪಾದ)

ಅಂಗ : ತಾಳಪ್ರಾಣ, ಅನುದ್ರುತ, ದ್ರುತ, ಲಘು, ಗುರು, ಪ್ಲುತ ಮತ್ತು ಕಾಕಪಾದ – ಸಂ.ಶಾ.ಚಂ. ಪು. ೫೪ (ನಾಟ್ಯಶಾ. ೧೨) (ಮಾನಸ. ೧೬೧೭೩ . ೧೭೪ ಪೂ.) (ನೃತ್ತರ )

ಅಂಗಭೇದ : ಶರೀರದ ಅಭಿನಯದ ಸೌಕರ್ಯಕ್ಕಾಗಿ ಅಂಗ, ಉಪಾಂಗ ಹಾಗೂ ಪ್ರತ್ಯಂಗವೆಂದು ಮಾಡಲಾದ ಭೇದ.

ಅಂಗಸಮ : ವಾದನಗಾಯನದ ಆರಂಭ, ಅಂತ್ಯ ಹಾಗೂ ಅಂತರ ಕಲೆಗಳಿಗೆ ಅನುಗುಣವಾಗಿರುವುದು. (ನಾಟ್ಯಶಾ. ೩೪೧೨೭)

ಅಂಗರಾಗ – (ಅಂಗರಚನೆ) : ನರ್ತಕ ಅಥವಾ ನರ್ತಕಿಯ ವೇಷ ಭೂಷಣಕ್ಕೆ ಸಂಬಂಧಸಿದ್ದು, ನೇಪಥ್ಯ ವಿಧಿಗಳಲ್ಲಿ ಒಂದು. (ನಾಟ್ಯಶಾ. ೨೩) (ನಾಟ್ಯಶಾ. ೨೩೭೨, ೭೩) (ನೃತ್ತರ.೪೪) ಅರ್ಧನೇ. ೧೩೦

ಅಂಗಹಾರ : ಕರಣಗಳ ಸಂಯೋಗ, ಇವು ಒಟ್ಟು ಮೂವತ್ತೆರಡು : ಸ್ಥಿರಹಸ್ತ, ಪರ್ಯಸ್ತಕ, ಸೂಚೀವಿದ್ಧ, ಅಪರಾಚಿತ, ವೈಶಾಖರೇಚಿತ, ಪಾರ್ಶ್ವಸ್ವಸ್ತಿಕ, ಭ್ರಮರ, ಆಕ್ಷಿಪ್ತ, ಪರಿಚ್ಛಿನ್ನ, ಮದವಿಲಸಿತ, ಆಲೀಢ, ಆಚ್ಛುರಿತ, ಪಾರ್ಶ್ವಚ್ಛೇದ, ಸರ್ಪಿತ, ಮತ್ತಾಕ್ರೀಡ, ವಿದ್ಯುದ್ಭ್ರಾಂತ, ವಿಷ್ಕಂಭಪಸೃತ, ಮತ್ತಸ್ಖಲಿತ, ಗತಿಮಂಡಲ, ಅಪನಿದ್ಧ, ವಿಷ್ಕಂಭ, ಉದ್ಘಟ್ಟತ, ಆಕ್ಷಿಪ್ತರೇಚಿತ, ರೇಚಿತ, ಅರ್ಧನಿಕುಟ್ಟ, ವೃಶ್ಚಿಕಾಪಸೃತ, ಅಲಾತ, ಪರಾವೃತ್ತ, ಪರಿವೃತ್ತರೇಚಿತ, ಉದ್ಘೃತ, ಸಂಭ್ರಾಂತ, ಸ್ವಸ್ತಿಕರೇಚಿತ (ನಾಟ್ಯಶಾ. ೧೮೧೯ ಪೂ.) (ಸಂಗೀರ. ೭೯೬) (ನೃತ್ತರ. ೨೫೧ . ೫೨)

ಅಂಚಿತ : ಪಾದಭೇದ : ಹಿಮ್ಮಡಿಯನ್ನು ನೆಲದ ಮೇಲೆ ಊರಿ ಪಾದವನ್ನು ಎತ್ತಿ ಬೆರಳನ್ನು ಚಾಚಿ ನಿಲ್ಲುವುದು. (ನಾಟ್ಯಶಾ. . . ೨೭೫) (ಸಂಗೀರ. ೩೧೭)

ಶಿರೋಭೇದ : ಬಾಗಿಸಿದ ಕಂಠವನ್ನು ಪಕ್ಕಕ್ಕೆ ತಿರುಗಿಸುವುದು. (ನಾಟ್ಯಶಾ. ., ನಾಟ್ಯಶಾ. .೩೧ ಪೂ.) (ಸಂಗೀರ..೬೫ ಪೂ.)

ಅಂಜಲಿ : ಎರಡು ಅಂಗೈಗಳನ್ನು ಸೇರಿಸಿ ಹಿಡಿಯುವ ಒಂದು ಹಸ್ತ ಮುದ್ರೆ (..೧೮೫)

ಅಂತಿರಿಅಂತಿರಿ : ೨೦ ವಾದ್ಯ ಪ್ರಬಂಧಗಳಲ್ಲಿ ಒಂದು. (ಸಂಸ.ಸಾ. ೧೫೭)

ಅಕ್ಷರ ಸಮ : ವಾ.-ವಾದನದ ಎಂಟು ಸಾಮ್ಯಗಳಲ್ಲಿ ಒಂದು: ವೃತ್ತದಲ್ಲಿನ ಗುರುಲಘು ಅಕ್ಷರಗಳಿಗೆ ಅನುಗುಣವಾಗಿ ವಾದನದಲ್ಲಿ ಗುರುಲಘುಗಳಿರುವುದು.

ಅಗ್ರತಲ ಸಂಚರ : ಒಂದು ಪಾದಭೇದ : ಅಂಗುಷ್ಟವನ್ನೂ ಮಿಕ್ಕ ಬೆರಳುಗಳನ್ನು ಪೂರ್ತಿಯಾಗಿ ಚಾಚಿ ಹಿಂಬಡವನ್ನು ಎತ್ತಿ ನಿಲ್ಲಿಸುವುದು. (ನಾಟ್ಯಶಾ. ೧೦೨೩ ಪೂ.) (ಮಾನಸ. ೧೬೧೨೯೪) (ಲಾಸ್ಯರಂ. ೧೦೫)

ಅಟ್ಟತಾಳ : ಸಪ್ತ ಸುಳಾದಿ ತಾಳಗಳಲ್ಲಿ ಒಂದು, ಅಂಗ, ೧೧೦೦

ಅಡ್ಡಪುರಿ : ಅರ್ಧಪುರಾಟಿಕಾ ಎಂಬ ದೇಶೀಚಾರಿ (ಸಂಗೀರ. ೧೦೦೪) (ನೃತ್ತ . ) (ಸಂ..ಸಾ. ೧೫೬೧೫೭. ೧೫೬ ಪೂ. ೧೫೭ಉ). (ಲಾಸ್ಯರಂ. ೮೫. ಅಲ್ಲದೇ ನೊಡಿ ನರ್ತನಿ. ೪೮೭, ೮೮)

ಅಡ್ಡಾವುಜ : ಮೃದಂಗದ ಪರ‍್ಯಾಯಪದ, ದೇಶೀಪಟಹ (ಸಂಗೀರ. ೮೨೪) (ವಿವೇಕ.)

ಅಧಃಪಾಣಿ : ಪತಾಕ ಹಸ್ತದ ಬುಡದಿಂದ ಮೃದಂಗವನ್ನು ಹೊಡೆದರೆ ಪೃಷ್ಠಪಾಣಿ ಅಥವಾ ಅಧಃಪಾಣಿಯಾಗುತ್ತದೆ. (ನರ್ತನಿ. ೧೨/೭೦)

ಅಧರಸ್ಪಂದ : ಅಧರಕಂಪನ : ತುಟಿಗಳ ಆರು ಭೇದಗಳಲ್ಲಿ ಒಂದು; ತುಟಿಗಳನ್ನು ನಡುಗಿಸುವುದು. (ನಾಟ್ಯಶಾ. ೧೪೧ ೧೪೨ ಪೂ.) (ಸಂಗೀರ. ೪೯೧) (ಮಾನಸ. ೧೬೧೦೯೬)

ಅರ್ಧಕರ್ತರಿ : ಹಸ್ತಪಾಟಭೇದಗಳಲ್ಲಿ ಒಂದು. (ಸಂಗೀರ. ೮೮೪) (ನರ್ತನಿ. ೭೪)

ಅರ್ಧಚಂದ್ರ : ಅಸಂಯುತ ಹಸ್ತಗಳಲ್ಲಿ ಒಂದು. (ನಾಟ್ಯಶಾ. ) (ಅಭಿದ. ೧೦೩) (ಮಾನಸ. ೧೧೪೪)

ಅರ್ಧಸಮಹಸ್ತ : ಇಪ್ಪತ್ತೊಂದು ಹಸ್ತಪಾಟಗಳಲ್ಲಿ ಒಂದು. (ಸಂಗೀರ. ೮೫೩೮೫೪ ಪೂ.)

ಅನುಭಾವ : ಭಾವ ಹಾಗೂ ವಿಭಾವದಿಂದ ಉಂಟಾಗುವ ದೇಹದ ಪ್ರತಿಕ್ರಿಯೆ. (ನಾಟ್ಯಶಾ. ) (ದಶರೂ. ) (ಸಂಗೀದ. ೫೮ ಅಲ್ಲದೆ ನೋಡಿ ಸಂಗೀರ. ೧೩೬೫)

ಅನಿಬದ್ಧ (ಸಂ) : ತಾಳದ ಚೌಕಟ್ಟಿಗೆ ಒಳಪಡದ ಗೇಯರೂಪ (ನರ್ತನಿ. )

ಅಪಕ್ರಾಂತ : ಮಾರ್ಗ ಆಕಾಶಚಾರಿಗಳಲ್ಲಿ ಒಂದು – ತೊಡೆಯನ್ನು ತಿರುಗಿಸಿ ಕುಂಚಿತ ಪಾದವನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಇಡುವುದು. (ನಾಟ್ಯಶಾ. ೧೧೧೬) (ಸಂಗೀರ. ೯೫೩) (ಲಾಸ್ಯರಂ. ೪೧)

ಅಭಿನಯ : ನೃತ್ಯದಲ್ಲಿ ಭಾವಗಳನ್ನು ಅಂಗೋಪಾಂಗಗಳ ಚಲನೆಗಳ ಮೂಲಕ ತೋರಿಸುವುದು. (ನಾಟ್ಯಶಾ. ೭೮) (ಅಭಿದ.೪೧) (ನೃತ್ತರ. ೨೫)

ಅಲಂಕಾರ : ನೇಪಥ್ಯದ ನಾಲ್ಕು ಪ್ರಕಾರಗಳಲ್ಲಿ ಒಂದು – (ಹೂಮಾಲೆ, ಆಭರಣ, ಬಟ್ಟೆ)

ಅಲಗ : ಬಿಡುಲಾಗಗಳಲ್ಲಿ ಒಂದು, ಒಂದು ರೀತಿಯ ಸ್ಥಾನಕ. ಮುಖವನ್ನು ಕೆಳಗೆ ಮಾಡಿ ನೆಗೆದು ಮುಂದುಗಡೆ ಇಳಿದು ಕುಕ್ಕುಟಾಸನವನ್ನು ಆಚರಿಸಿ ಅಲುಗಾಡದೇ ಇದ್ದರೆ ಅದು ಅಲಗ ಎನಿಸುತ್ತದೆ. ನರ್ತನಿ. ೭೮೩ ಅಲ್ಲದೆ ನೋಡಿ ನೃತ್ತರ. .೬೩೬೬.

ಅಲಸ : ಕಣ್ಣಿನ ಚಲನಾ ವಿಧಾನ

ಅವಹಿತ್ಥ – () ಸ್ತ್ರೀ ಸ್ಥಾನಕ, () ಸಂಯುತ ಹಸ್ತದ ಒಂದು ಭೇದ.

(ಅ) ಆಯತ* ಸ್ಥಾನಕ ಪಾರ್ಶ್ವವ್ಯತ್ಯಾಸದಿಂದ ಮಾಡುವುದು. (*ನೋಡಿ ಆಯತ) )ಸಂಗೀರ. ೧೦೭೪ ಪೂ.) (ಲಾಸ್ಯರಂ. ೨೭) (ನಾಟ್ಯಶಾ. ,) (ಅಭಿದ. ೧೮೪) (ನರ್ತನಿ. ೩೪೩) (ಅಭಿದ. ೨೧೧ಪೂ)

ಅಷ್ಟವಿಧಾಳೋಕನ : ಎಂಟು ತರಹದ ಸ್ಥಾಯಿ ದಷ್ಟಿ (ನೋಡಿ ದೃಷ್ಟಿಭೇದ)

ಆಂಗಿಕ : ಚತುರ್ವಿಧ ಅಭಿನಯಗಳಲ್ಲಿ ಒಂದು, ಅಂಗಾಗಳಿಂದ ಸೂಚಿಸುವಂತಹ ಅಭಿನಯ, ಷಡಂಗಗಳ ಮುಲಕ ಮಾಡುವ ಅಭಿನಯ. (ನಾಟ್ಯಶಾ. ೧೦) (ಅಭಿದ.೪೨) (ನೃತ್ತರ. ೧೯)

ಅಂಗಿಕಾಭಿನಯ : ಅಭಿನಯದ ನಾಲ್ಕು ಪ್ರಕಾರಗಳಲ್ಲಿ ಒಂದು, ಶಾರೀರ, ಮುಖಜ ಹಾಗೂ ಚೇಷ್ಟಾರೃತ – ಮೂರು ತರಹದ ಆಂಗಿಕ ಅಭಿನಯಗಳು; ಇದರಲ್ಲಿ ಶಾಖಾ, ಅಂಗ, ಉಪಾಂಗಗಳನ್ನು ಬೇರೆ ಬೇರೆಯಾಗಿ ಗುರುತಿಸಬಹುದು. (ನಾಟ್ಯಶಾ. ೧೨) (ಅಭಿದ. ೪೪) (ಲಾಸ್ಯರಂ. ೬೯)

ಆಂದೋಲಿತ : ಬಾಹುಭೇದ ; ಉಸಿರಿನ ಭೇದ; ತುಯ್ದಾಡುವುದು, ತೂಗುವುದು, ಉಯ್ಯಾಲೆಯಾಡುವುದು. (ನರ್ತನಿ. ೨೯೭) (ನೃತ್ಯಾಯ. ೩೫೫) (ಲಾಸ್ಯರಂ. ೧೨೨)

ಆಕಾಶಮಂಡಲ : ಚಾರಿಗಳ ಸಂಯೋಗದಿಂದ ಹುಟ್ಟುವುವು – ಅತಿಕ್ರಾಂತ, ವಿಚಿತ್ರ, ಲಲಿತಸಂಚರ, ಸೂಚೀವಿದ್ಧ, ದಂಡಪಾದ, ವಿಹೃತ, ಅಲಾತ, ವಾಮವಿದ್ಧ, ಲಲಿತ ಮತ್ತು ಕ್ರಾಂತ – ಹತ್ತು ಆಕಾಶಮಂಡಲಗಳು. (ನಾಟ್ಯಶಾ. ೧೧೧೧, )

ಆಕ್ಷಿಪ್ತಾ : ಮಾರ್ಗ ಆಕಾಶ ಚಾರಿಗಳಲ್ಲಿ ಒಂದು, ಕರಣಗಳಲ್ಲಿ ಒಂದು, ಅಂಗಹಾರಗಳಲ್ಲಿ ಒಂದು, ಕುಂಚಿತಪಾದವನ್ನು ಎತ್ತಿ ಅದನ್ನು ಅಂಚಿತದಲ್ಲಿ ಜಂಘಾಗಳು ಸ್ವಸ್ತಿಕವಾಗುವಂತೆ ಇಡುವುದು. (ನಾಟ್ಯಶಾ. ೧೦೩೭) (ನರ್ತನಿ, ೫೦೮) (ಲಾಸ್ಯರಂ. ೫೫) (ನಾಟ್ಯಶಾ. ೧೧೬) (ನಾಟ್ಯಶಾ. ೧೫೧೧೭, ೧೮)

ಆತೋದ್ಯ (ಅವನದ್ಧ ವಾದ್ಯ) : ಸಂಗೀತವಾದ್ಯ : ಅ+ತುದ್ (ಹೊಡೆ, ನುಡಿಸು) ಎಂಬ ಧಾತುವಿನಿಂದ ಈ ಶಬ್ದವು ನಿಷ್ಪನ್ನವಾಗಿದೆ.

ಆದಿತಾಳ : ಚತುರಶ್ರ ಜಾತಿ ತ್ರಿಪುಟತಾಳ – ಇದರ ಒಂದಾವರ್ತಕ್ಕೆ ಎಂಟು ಅಕ್ಷರಕಾಲ. ಇದರ ಅಂಗ ೧ ಲಘು ೨ ದ್ರುತ. (ಸಾಸಂಭ. ೧೬೦)

ಆನದ್ಧ ಅವನದ್ಧ : ಮದ್ದಳೆ ಮುಂತಾದ ಚರ್ಮವಾದ್ಯ (ವಿವೇಕ. ೨೨೬)

ಆಯತ : ಮಂಡಲ, ಭೇದ, ಸ್ತ್ರೀ ಸ್ಥಾನಕ, ತುಟಿಭೇದ (ಅಭಿದ. ೨೬೩೨೬೪)

ಆರಭಟೀ ವೃತ್ತಿ : ನಾಲ್ಕು ವೃತ್ತಿಗಳಲ್ಲಿ ಒಂದು (ನಾಟ್ಯಶಾ. ೨೨೫೫೬೨) (ಸಂಗೀರ. ೧೧೩೭)

ಆಲಪ (ಆಲಪ್ತಿ) : ರಾಗದ ಆಲಾಪನೆ. (ಸಂಸಸಾ. ೩೭) (ನರ್ತನಿ. ೧೩೧)

ಆಲಾಪಚಾರಿ (ಆಲಾಪಚಾರಿಕಾ) : ಸಾಹಿತ್ಯವಿಲ್ಲದೇ ರಾಗದ ಆಲಾಪನೆಗೆ ನರ್ತನ (ಸಾ ಸಂ.. ೧೮೭), (... – ೨೨೫)

ಆವರ್ತಿತ : ಜಂಘಾಭೇದ (ಕಣಕಾಲಿನ ಚಲನೆ) : ಎಡಗಾಲು ಬಲಗಡೆಯೂ ಬಲಗಾಲು ಎಡಗಡೆಯೂ ಬರುವಂತೆ ಮಾಡಿ ಜಂಘೆಗಳನ್ನು ಸೇರಿಸಿ ನಡೆಯುವುದು. (ನಾಟ್ಯಶಾ. ೨೫೮) (ಲಾಸ್ಯರಂ. ೧೪೩) (ಸಂಗೀರ. ೩೬೫)

ಆವುಜ (ವಾ): ಮೃದಂಗವನ್ನು ಹೋಲುವ ಚರ್ಮವಾದ್ಯಗಳು (ಸಂಗೀರ. ೮೨೪) (ವಿವೇಕ.೧೯೧)

ಆಹಾರ್ಯ : ಚತುರ್ವಿಧಾಭಿನಯಗಳಲ್ಲಿ ಒಂದು; ವೇಷಭೂಷಣಗಳನ್ನು ಅನುಕರಣ (ನಾಟ್ಯಶಾ. ೨೧) (ಸಂಗೀರ.೨೧) (ಅಭಿದ. ೪೩)

ಆಹತ : ಗಮಕ ಅಥವಾ ಕಂಪನ ಭೇದಗಳಲ್ಲಿ ಒಂದು. ಕಂಪನದಲ್ಲಿ ಮುಂದಿನ ಸ್ವರವನ್ನು ತಲುಪಿ ತಾನು ಹಿಂತಿರುಗಿದರೆ ಅದನ್ನು ಅಹತ ಎಂದು ಹೇಳುತ್ತಾರೆ.

ಈಹಾಮೃಗ ದಶರೂಪಕಗಳಲ್ಲಿ ಒಂದು : ದಿವ್ಯ ಪುರುಷ ಹಾಗೂ ಸ್ತ್ರೀಪಾತ್ರಗಳು, ೪ ಅಂಕ ಇದರ ಲಕ್ಷಣ (ನಾಟ್ಯಶಾ. ೧೪೧೩೦೧೩೨)

ಉಪಾಂಗಒಂದು ಸುಷಿರವಾದ್ಯ. ಕೊಳಲಿನ ಒಂದು ಭೇದ: ದೇಹದ ಪ್ರಮುಖವಾದ ಅಂಗದ ಒಳಭೇದ. ಅಂಗಿಕಾಭಿನಯದಲ್ಲಿ ಉಪಾಂಗಗಳ ಅಭಿನಯ ಪ್ರತ್ಯೇಕವಾಗಿದೆ. ಉಪಾಂಗಗಳು ಆರು, ಕಣ್ಣು, ಹುಬ್ಬು, ಮೂಗು, ತುಟಿ, ಗಲ್ಲ ಮತ್ತು ಗದ್ದ ರಾಗದ ಒಂದು ಭೇದ. (ಜನ್ಯರಾಗದ ಭೇದ) ಜನಕರಾಗಗಳಲ್ಲಿ ಬರುವ ಸ್ವರಗಳನ್ನೇ (ವರ್ಜ್ಯಸ್ವರಗಳನ್ನು ಬಿಟ್ಟು) ತಮ್ಮ ಆರೋಹಣ, ಅವರೋಹಣಗಳಲ್ಲಿ ಹೊಂದುವ ಜನ್ಯರಾಗಗಳು, ಉದಾ. ಹಂಸಧ್ವನಿ, ಮೋಹನ ಇತ್ಯಾದಿ. (ಸಂಶಾ.. ೩೨) (ಲಾಸ್ಯರಂ. ಪು.೨೩)

ಉತ್ಕ್ಷಿಪ್ತ: (ಉತ್ಕ್ಷೇಪ): (ಅ)ಶಿರೋಭೇದ; (ಆ)ಭ್ರೂಭೇದ; (ಇ)ಜಂಘಾಭೇದ (ನಾಟ್ಯಶಾ. ೩೫) (ಅಭಿದ.೬೫) (ಲಾಸ್ಯರಂ. ೮೪) (ಲಾಸ್ಯರಂ.೪೫) (ಸಂಗೀರ.೪೩೭) (ಲಾಸ್ಯರಂ. ೧೪೬) (ಮಾನಸ. ೧೦೩೪೧೦೩೫)

ಉತ್ಕ್ಷೇಪ: ದೇಶೀಯ ಆಕಾಶ ಚಾರಿ ; ಸ್ವಲ್ಪವಾಗಿ ಬಾಗಿರುವ (ಕುಂಚಿತ) ಪಾದವನ್ನು ಮುಂಭಾಗ ಮತ್ತು ಹಿಂಭಾಗಗಳಲ್ಲಿ ಮೊಳಕಾಲವರೆಗೆ ಎಸೆಯುವುದು. (ಲಾಸ್ಯರಂ. ೧೦೦) (ಸಂಗೀರ. ೧೦೨೨) (ನೃತ್ಯಾಯ. ೧೦೧೦೭೮)

ಉದರ ಭೇದ (ಉದರ ಕರ್ಮ)

ಪ್ರತ್ಯಂಗಾಭಿನಯದಲ್ಲಿ ಒಂದು; ಮೂರು ವಿಧ-ಕ್ಷಾಮ, ಖಲ್ವ, ಪೂರ್ಣ [ನಾಲ್ಕನೆಯದು -ರಿಕ್ತಪೂರ್ಣ (ಮತಾಂತರ)] (ನಾಟ್ಯಶಾ. ೨೪೦) (ಸಂಗೀರ.೩೫೭) (ಲಾಸ್ಯರಂ. ೧೩೩)

ಉದ್ಧತಾಭಿನಯ : ಪೌರುಷ ಪ್ರಧಾನವಾದ ಅಭಿನಯ-ರಭಸವಾದ ಪಾದಗತಿ (ಭರತ ಕೋಶ ಶಾರದಾತನಯ)

ಉದ್ವಾಹಿತ :
ಶಿರೋಭೇದ : ವಕ್ಷಭೇದ ; ಕಟಿಭೇದಗಳಲ್ಲಿ ಒಂದು
ಶಿರೋಭೇದ :- ಮೇಲಕ್ಕೆತ್ತಿದ ಶಿರ.
ವಕ್ಷಭೇದ :- ದೀರ್ಘಶ್ವಾಸ ತೆಗೆದುಕೊಳ್ಳುವಂತೆ ಎದೆಯು ಎತ್ತರಕ್ಕೆ ಏರುವುದು.
ಕಟಿಭೇದ :- ನಿಧಾನವಾಗಿ ಸೊಂಟ, ತೊಡೆ ಮತ್ತು ಪಾರ್ಶ್ವಗಳನ್ನು ಮೇಲೆತ್ತಿ ಇಳಿಸುವುದು. (ನಾಟ್ಯಶಾ. ೨೪೭)
(
ಲಾಸ್ಯರಂ. ೮೨) (ಲಾಸ್ಯರಂ. ೮೮) (ಲಾಸ್ಯರಂ. ೯೬) (ಅಭಿದ.೫೪)

ಉನ್ನತೆ
ಗ್ರೀವಾಭೇದಗಳಲ್ಲಿ ಒಂದು ಬಗೆ; ಮುಖವನ್ನು ಮೇಲೆತ್ತುವಾಗ ಉಂಟಾಗುವ ಕತ್ತಿನ ಚಲನೆ. ಅಲ್ಲದೆ ಮೊಳಕಾಲು ನಾಲಗೆ ಹಾಗೂ ಪಕ್ಕೆಯ ಭೇದ. (ನಾಟ್ಯಶಾ. ೧೭೨) (ಸಂಗೀರ. ೩೩೭) (ಲಾಸ್ಯರಂ. ೧೧೮) (ಲಾಸ್ಯರಂ.೧೫೫) (ಲಾಸ್ಯರಂ.೯೬) (ಲಾಸ್ಯರಂ. ೯೩)

ಉಪವಾದಕ : ಮುಖ್ಯ ವಾದಕವನ್ನು ಅನುಸರಿಸಿ ನುಡಿಸುವಾತ.

ಉಪರಿಪಾಣಿ (ಊರ್ಧ್ವಪಾಣಿ) : ಪತಾಕ (ಹಸ್ತ)ದ ಮಧ್ಯದಿಂದ ವಿಲಂಬವಾಗಿ ಹೊಡೆಯುವುದು. (ನರ್ತನಿ. ೭೦) (ಸಂಗೀರ. ೮೬೦)

ಉಪ್ಪರಜತಿ : ಶಬ್ದ ಪ್ರಬಂಧಗಳಲ್ಲಿ ಒಂದು. (ನರ್ತನಿ. ಪು. ೩೫೦)

ಉಭಯಕಾರ : ವಾಗ್ಗೇಯಕಾರ ಹಾಗೂ ಗಾಯಕನು ಆಗಿರುವವನು.

ಉರಚಲ್ಲಿ : ಎದೆಯ ಚಲನೆ

ಉರುಪು : ನಿಯತವಾದ ತಾಲ-ಲಯಗಳಲ್ಲಿ ಅಳವಟ್ಟ ಸ್ಥಾನಕ- ಚಾರೀ – ಹಸ್ತ, ಈ ಮೂರು ಸೇರಿರುವುದು; ನಾಟ್ಯದ್ವಾದಶಾಂಗಗಳಲ್ಲಿ ಒಂದು.

ಉರೋಭೇದ : ಎದೆಯ ಚಲನೆಯಲ್ಲಿನ ಐದು ಭೇದಗಳು – ಆಭುಗ್ನ, ನಿರ್ಭುಗ್ನ, ಪ್ರಕಂಪಿತ, ಉದ್ವಾಹಿತ ಮತ್ತು ಸಮ. (ನಾಟ್ಯಶಾ. ೨೨೩) (ಸಂಗೀರ. ೨೯೮)

ಉಲ್ಲಾಸ ದೇಶೀ ಲಾಸ್ಯಾಂಗಗಳಲ್ಲಿ ಒಂದು : ವಾದನಕ್ಕೆ ತಕ್ಕ ಭಾವಪೂರ್ಣವು ಉಲ್ಲಾಸಮಯವೂ ಆದ ಅಂಗಾದಿಗಳ ಅಭಿನಯ (ನೃತ್ತರ. ೧೩೪)

ಋಜುಭಾವ : ರಿಜ್ವಾಗತ ಸ್ಥಾನಕ : ನಾಟ್ಯಾರಂಭದ ಸ್ಥಾನ ; ಶಿರ, ಕಟಿ, ಪಾದಗಳ ಸಮರೇಖೆಯಲ್ಲಿರುವುದು. (ನಾಟ್ಯಶಾ. ೩೮)

ಎಡಗಟ್ಟು : ಶಬ್ದ ಪ್ರಬಂಧಗಳಲ್ಲಿ ಒಂದು.

ಎಡಚಾರಿ : ಎಡಭಾಗದ ಪದ, ಜಂಘ, ತೊಡೆ, ಸೊಂಟದ ಚಲನೆ.

ಎಡುಪು (ಸಂ) : ಅನಾಗತ ಗ್ರಹ

ಏಕತಾಳ : ಸಪ್ತತಾಳಗಳಲ್ಲಿ ಕೊನೆಯ ತಾಳ.

ಏಕಪಾದ ಸ್ಥಾನ ; ದೇಶೀಸ್ಥಾನಕ; ಒಂದು ಪಾದವನ್ನು ಸಮಸ್ಥಾನದಲ್ಲಿ ನಿಲ್ಲಿಸಿ ಇನ್ನೊಂದು ಪಾದವನ್ನು ಸಮಪಾದದ ಮೊಣಕಾಲಿನ ಮೇಲೆ ಮುಂಭಾಗದಲ್ಲಿ ನಿಲ್ಲಿಸುವುದು. (ಅಭಿದ. ೨೭೮) (ಸಂಗೀರ. ೧೦೮೯)

ಏಳಾ (ಏಲಾ) : ಪ್ರಬಂಧದ ಒಂದು ಅಂಶ ; (ಏಲಾ -ಕರಣ – ಢೇಂಕೀ, ವರ್ತನೀ, ಝೊಂಬಡ, ಲಂಭ, ರಾಸ, ಏಕತಾಲೀ – ಈ ಎಂಟರಿಂದ ಶುಧ ಸೂಡ (ಪ್ರಬಂಧ) ಎಂದು ಸ್ಮೃತವಾಗಿದೆ.

ಐಂದ್ರ : ಒಂದು ಸ್ಥಾನಕ : (ಕೈಗಳಲ್ಲಿ ತ್ರಿಪತಾಕ ಹಸ್ತವನ್ನು ಹಿಡಿದು ಪಾದಗಳನ್ನು ನೆಲದಿಂದ ಎತ್ತದೆ ಚಲಿಸುವ ಸ್ಥಾನ) ಒಂದು ಕರಣ (ಭರತಾ. ೩೪೫) (ಹರಿಪಾಲಉದ್ದೃತಿ ಭರತೋ.೧೫)

ಒಡ್ಡಾಸರ(ವಾ): ಒಂದು ವಾದ್ಯ ಪ್ರಬಂಧ. (ಸಂಗೀರ. ೬-೯೧೦)

ಒತ್ತುಮಾನ : ದೇಶೀ ನರ್ತನದ ವಿವಿಧ ಪಾದಚಾರಿಗಳು.

ಒತ್ತೆರಟ > ಒಂದೆರಡ > ಒಂದೆರಟ (ತಾ): ೧೨ ಅಕ್ಷರದ ಪ್ರಬಂಧ ; ರೂಪಕ ತಾಳಕ್ಕೆ ಸಮ.

ಓಯಾರ : ಒಂದು ಸ್ಥಾಯಿ ; ಲಾಸ್ಯಾಂಗದಲ್ಲಿ ಒಂದು (ಓರೆಯಾಗಿ ಕೆಳಗಡೆಗೆ ತಲೆಯನ್ನು ಅಲ್ಲಾಡಿಸುವುದು) (ನರ್ತನಿ. ೫೮೦) (ಸಂಸಸಾ. ೪೨) (ನರ್ತನಿ. ೫೮೮) (ನೃತ್ತರ.. ೧೪೯)

ಕಂಗಳ ಭೇದ : ದೃಷ್ಟಿಭೇದ ೩೬ – (ಸ್ಥಾಯಿ ೮), ಭಾವದೃಷ್ಟಿ ೮, ರಸದೃಷ್ಟಿ ೮, ವ್ಯಭಿಚಾರ ದೃಷ್ಟಿ ೨೦. (ಲಾಸ್ಯರಂ. ) (ಅಭಿದ. ೬೮)

ಕಂದರ್ಪ : ೧೦೮ ಮಾರ್ಗತಾಳಗಳಲ್ಲಿ ಒಂದು (೬ ಮಾತ್ರೆಗಳ ತಾಳ) (ಸಂಗೀರ, ೨೩೯, ೨೪೦) (ಶಿತರ. .೧೦) (ಸಾಸಂಭ. ೧೬೧)

ಕಂದಾವುಜ < ಸ್ಕಂಧಾವಜ (ವಾ) : ಹೆಗಲಿನಿಂದ ಇಳಿಬಿಟ್ಟು ನಿಂತು ನುಡಿಸುವ ಅವನದ್ಧ ವಾದ್ಯ. (ಅಭಸಾ. ೩೮೫)

ಕಂಪನ : ಗಮಕದಲ್ಲಿ ಒಂದು ವಿಧ- ಧ್ರುತದ ಅರ್ಥ ಪ್ರಮಾಣದಲ್ಲಿ ಪ್ರಯುಕ್ತ.

ಕಂಪಿತ : ದಶವಿಧ ಗಮಕಗಳಲ್ಲಿ ಒಂದು – ತನ್ನ ಸ್ಥಾನದಲ್ಲೇ ಒಂದು ಸ್ವರ ಕಂಪಿಸುವುದು. (ಸಂಶಾಚಂ೨೮) (ರಾಗಮಾಲಾ ೮೪೮೫) (ನಾಟ್ಯಶಾ. ೩೦) (ಅಭಿದ ೬೨)

ಕಂಪಿತ : ಕಪೋಲಭೇದ – ೬ ಭೇದದಲ್ಲಿ ಒಂದು. ನಡಗುವುದು, ತುಟಿ, ಕಟಿ, ಊರು, ಜಂಘಾ ಶಿರೋ ಭೇದಗಳಲ್ಲಿ ಒಂದು. (ನಾಟ್ಯಶಾ. ೧೩೭) (ನಾಟ್ಯಶಾ. ೧೪೨) (ನಾಟ್ಯಶಾ. ೨೪೭) (ಸಂಗೀರ. ೩೬೦) (ಸಂಗೀರ. ೩೭೦) (ಸಂಗೀರ. ೪೯೩) (ಸಂಗೀರ. ೪೬೪) (ಲಾಸ್ಯರಂ. ೮೧) (ಲಾಸ್ಯರಂ. /೯೬) (ಲಾಸ್ಯರಂ. ೧೩೯) (ಲಾಸ್ಯರಂ. ೧೪೮) (ಲಾಸ್ಯರಂ. /೮೨)

ಕಟ್ಟಣಿ > ಕಟ್ಟರ > ಕಟ್ಟಳೆ : ಬಂಧ ಎನ್ನುವುದಕ್ಕೆ ಪರ‍್ಯಾಯ (ನರ್ತನಿ. ೮೪೬೫೬) (ನರ್ತನಿ. ೮೪೬೮೫೬) (ಸಂಗೀದ. ೨೫೭೨೫೯)

ಕಟಿಚಲ್ಲಿ : ಪಾದಗಳ ಬಡಿತಕ್ಕೆ ಸರಿಯಾಗಿ ಎದೆಯನ್ನು, ಸೊಂಟವನ್ನು ಅತ್ತಿತ್ತ ಚಲಿಸುವುದು

ಕಟಿಭೇದ : ಸೊಂಟದ ವಿವಿಧ ಚಲನೆ – ಛಿನ್ನ, ನಿವೃತ್ತ, ರೇಚಿತ, ಪ್ರಕಂಪಿತ, ಉದ್ವಾಹಿತ (ನಾಟ್ಯಶಾ ೨೪೪) (ನರ್ತನಿ. ೩೮೫೮೬) (ಸಂಗೀರ. ೩೦೮)

ಕಡೆಗಟ್ಟು ಕಡಕಟು : ನಾಟ್ಯ ದ್ವಾದಶಾಂಗಗಳಲ್ಲಿ ಒಂದು. (ಭಕಮಂ ಪು.ಸಂ. ೩೮೨)

ಕತರ : ಉಡುಪಾಂಗಗಳಲ್ಲಿ ಒಂದು ದೇಶೀ ನೃತ್ತ,

ಕತ್ತರ (ವಾ): ಮೃದಂಗವಾದನದ ಹಸ್ತಪಾಠ

ಕರಡೆ : ಚರ್ಮವಾದ್ಯದಲ್ಲಿ ಒಂದು.

ಕರಣ : ಹಸ್ತ ಹಾಗೂ ಪಾದಗಳ ಸುಂದರ ಕರಣ ಸಮಾಯೋಗ. ಇವು ೧೦೮ ತರಹ. (ನಾಟ್ಯಶಾ. ೩೦) (ಸಂಗೀರ. ೫೫೪, ೫೫೫) (ಲಾಸ್ಯರಂ. ೨೩)

ಕರತಾಳ : ೧) ಕೈಗಳಲ್ಲಿ ಲೋಹದ ತಾಳಗಳನ್ನು ಹಿಡಿದು ತಾಳಕ್ಕೆ ಸರಿಯಾಗಿ ಹೊಡೆಯುವುದು.

ಕರದಭಿನಯ ಹಸ್ತಾಭಿನಯ : ಸಾಹಿತ್ಯದಲ್ಲಿಡಗಿರುವ ಭಾವವನ್ನು ಹಸ್ತಮುದ್ರೆಗಳಿಂದ ತೋರುವ ವಿಧಾನ ಇವು ೩ ತರಹ :
೧) ಅಸಂಯುತ ಅಂದರೆ ಒಂದೇ ಕರದಿಂದ ಮಾಡುವಂತಹುದು.
೨) ಸಂಯುತ ಎರಡೂ ಕರಗಳಿಂದ ಮಾಡುವಂತಹ ಹಸ್ತಗಳು
೩) ನೃತ್ತ ಹಸ್ತ – ಸಂಯುತ ಹಸ್ತದ ವಿಶೇಷ ಸಂಯೋಗದಿಂದ ಹಿಡಿಯುವ ಹಸ್ತಮುದ್ರೆ.
ಇವು ಒಟ್ಟು ೬೪ ಹಸ್ತಗಳು: ಅಸಂಯುತ-೨೪, ಸಂಯುತ-೧೩, ನೃತ್ತಹಸ್ತ೨೭,

ಕರಭೇದ : ಹಸ್ತ ವೈವಿಧ್ಯ (ವಿವರಣೆ ನೋಡಿ ಕರದಭಿನಯ)

ಕರ್ತರಿ : ತತವಾದ್ಯದ ಹಸ್ತಪಾಟ, ಅವನದ್ಧ ವಾದ್ಯದ ಹತ್ತು ಸಂಚಗಳಲ್ಲಿ ಒಂದು. ಎಡಗೈ ಹಸ್ತದ ಬೆರಳುಗಳಿಂದ ವಾದ್ಯವನ್ನು ನುಡಿಸುವ ಕ್ರಮ. (ಸಂಗೀರ.-೮೬೩) (ನರ್ತನಿ. ೭೨) (ಸಂಸಸಾ ೭೨) (ನರ್ತನಿ ೭೫೪) (ಸಂಗೀದ. ೭೫೯, ೫೬೦)

ಕರ್ತರಿ ಉಡುಪು : ೧೨ ಉಡುಪುಗಳಲ್ಲಿ ಒಂದು. ವಿವರಣೆಗೆ ನೋಡಿ ಅಧ್ಯಾಯ ೩

ಕರ್ತರೀ ಮುಖ : ಅಸಂಯುತ ಹಸ್ತದ ಒಂದು ಭೇದ. ತ್ರಿ ಪತಾಕ ಹಸ್ತದ ತರ್ಜನೀ ಹಾಗೂ ಮಧ್ಯಮ ಬೆರಳನ್ನು ಕತ್ತರಿಯ ಬಾಯಿಯಂತೆ ಅಗಲಿಸಿ ಹಿಡಿಯುವುದು. (ನೋಡಿ ಅನುಬಂಧ . ಅಸಂಯುತ ಹಸ್ತಗಳು. ಸಂ.) (ನಾಟ್ಯಶಾ. ) (ಅಭಿದ. ೧೦೩) (ಮಾನಸ. ೧೬೧೧೪೪)

ಕರಿಕರಂ ಕರಿಹಸ್ತ : ೨೭ ನೃತ್ತ ಹಸ್ತಗಳಲ್ಲಿ ಒಂದು. ಒಂದು ಕೈಯನ್ನು ಎರಡೂ ಪಾರ್ಶ್ವಗಳಲ್ಲಿ ಇಳಿ ಬಿಡುತ್ತ ಮತ್ತೊಂದು ಕೈಯಲ್ಲಿ ಕಟಕಾಮುಖ ಹಸ್ತವನ್ನು ಕಿವಿಯ ಹತ್ತಿ ಇಡುವುದು. (ನಾಟ್ಯಶಾ. ೧೩) (ಮಾನಸ. .೧೬.ವಿಂ. .೫೭) (ಲಾಸ್ಯರಂ. ೬೦)

ಕಲ್ಪಲತಾ ನೃತ್ಯ : ಒಂದು ಮಾದರಿಯ ಸಮೂಹ ನೃತ್ಯ.

ಕವುತ ಕೌತ : ನಿರ್ದಿಷ್ಟವಾದ ತಾಳದಲ್ಲಿ ವಾದ್ಯಗಳ ಪಾಟಾಕ್ಷರಗಳು, ದೇವತಾ ಸ್ತುತಿಯೂ ಸೇರಿದಂತಹ ಒಂದು ಬಂಧ. (ನಂದಿ. ಉದ್ಧೃತ ಭರಕೋ. ಪು. ೧೫೪) ಸಾಸಂಭ. – ಪು.೨೦೦

ಕವುಸಾಳ > ಕೌಸಾಳ > ಕಂಸಾಳ : ಘನವಾದ್ಯ. ತಾಳದ ಒಂದು ವಿಧ (ಕಂಚಿನ ತಾಳ)

ಕಳಾಸ > ಕಲಾಸ : ದೇಶೀನೃತ್ತಾಂಗ – ಗೀತ, ನೃತ್ಯಗಳಲ್ಲಿ ಮುಕ್ತಾಯವನ್ನು ಸೂಚಿಸುವ ಅಂಗ. (ದೇವಣ. ಉದ್ಧೃತಿ, ಭರಕೋ ಪು.೧೨೨) (ವೇಸಂಮ. ಹಸ್ತಪ್ರತಿ) ಭರತಾ ೧೩೭೫೦, ೭೫೧

ಕಳೆ : ತಾಳದ ಸಶಬ್ದ ಹಾಗೂ ನಿಶ್ಶಬ್ದ ಕ್ರಿಯೆಯ ಅಕ್ಷರ ಕಾಲ – ಇವು ಒಂದರಿಂದ ನಾಲ್ಕು ಅಕ್ಷರ ಕಾಲದವರೆಗೆ ಇದೆ. ಏಕ ಕಳೆ, ದ್ವಿಕಳೆ, ಚತುಷ್ಕಳೆ ತಾಳದ ದಶ ಪ್ರಾಣಗಳಲ್ಲಿ ಒಂದು. [ಕಾಲ, ಮಾರ್ಗ, ಕ್ರಿಯೆ, ಅಂಗ, ಗ್ರಹ, ಜಾತಿ, ಕಳೆ, ಲಯ, ಯತಿ ಹಾಗೂ ಪ್ರಸ್ತಾರ] ಸಂ,ಶಾ,ಚ. (ಪು. ೫೨, ೫೭) ಸಂಗೀರ. ೫-೪

ಕಹಳೆಗಾಳಿ ವಾದ್ಯ : ಕಳಹೆ > ಕಹಲಾ – ಗಾಳಿವಾದ್ಯ, ದತ್ತೂರ ಪುಷ್ಪಾಕಾರದ ಬಾಯಿ ಇದ್ದು ತಾಮ್ರದ ಕೊಳವೆಯಿಂದ ಮಾಡಿರುವಂತಹುದು ಮೂರು ಹಸ್ತ ಉದ್ದವಿರುವ ವಾದ್ಯ ವೀರೋತ್ಸಾಹಗಳಲ್ಲಿ ನುಡಿಸುತ್ತಾರೆ. ಚಿತ್ರ ನೋಡಿ ಸುಷಿರವಾದ್ಯಗಳು. (ಸಂಗೀರ. ೬-೭೧೪, ೧೫)

ಕಾಂಡಪಟ ತೆರೆ > ಜವನಿಕೆ : ವಿವರ ನೋಡಿ, ಅಧ್ಯಾಯ-೨, ಭೂಮಿಕೆ.

ಕಾಕು : ಧ್ವನಿ ಬದಲಾವಣೆ. ರಾಗದ ಸೌಂದರ್ಯವನ್ನು, ಸ್ವರೂಪವನ್ನು, ವೈಶಿಷ್ಟ್ಯವನ್ನು ಎತ್ತಿ ತೋರಿಸುವಂತೆ ಹಾಡುವ ಗಾಯನ ಲಕ್ಷಣ ನಾಟ್ಯಶಾ. ೧೯೪೨ ಸಂ..ಸಾ. ೯೬೯೮.

ಕಿನ್ನರಿ : ಒಂದು ತಂತೀ ವಾದ್ಯ – ವೀಣೆ – ನೋಡಿ ಚಿತ್ರ. ತತವಾದ್ಯಗಳು. (ನಾಟ್ಯಶಾ. ೨೫೭) (ಭರಕೋ) (ನಸಂಮ. , )

ಕುಂಚಿತ : ಕರಣ – ಕಾಲನ್ನು ಬಾಗಿಸಿ ಮೊಳಕಾಲನ್ನೂರಿ ಬಲಗೈಯನ್ನು ಮಣಿಸಿ ಎಡಪಕ್ಕಕ್ಕೆ ಇದಿರಾಗುವುದು; ಪಾದಭೇದ; ಗಲ್ಲದ ಭೇದ; ಭ್ರೂಭೇದ. (ನಾಟ್ಯಶಾ. ೧೧೩) (ಭರಕೋ. ೧೩೮) (ಲಾಸ್ಯರಂ. ೧೧೫) (ಲಾಸ್ಯರಂ. ೧೦೪ ಪೂ.) (ಲಾಸ್ಯರಂ. ೭೦ ಪೂ.) (ಲಾಸ್ಯರಂ. ೪೬ ಪೂ.) (ನಾಟ್ಯಶಾ. ೧೦೨೬೨) (ನಾಟ್ಯಶಾ. ೧೩೫ ಪೂ.) (ನಾಟ್ಯಶಾ. ೧೧೮ .)

ಕುಡುಪಾವುಜ : ಅವನದ್ಧ ವಾದ್ಯ. ಸಣ್ಣ ಕೋಲುಗಳಿಂದ ನುಡಿಸುವ ವಾದ್ಯಗಳು. ಉದಾ. ಡೋಲು ನಗಾರಿ ಇತ್ಯಾದಿ (ಸಂಗೀರ. ೯೧೫)

ಕುಡೆ : ಕೆಲವು ಅವನದ್ಧ ವಾದ್ಯಗಳನ್ನು ನುಡಿಸಲು ಬಳಸುವ ದಂಡಗಳು. (ಭರಕೋ. ಪು. ೧೪೧)

ಕುತಪೀಜನ > ಕುತಪ : ವಾದ್ಯಮೇಳ (ನಾಟ್ಯ ಭೂಮಿಯಲ್ಲಿ ಗಾಯಕವಾದಕರ ಸ್ಥಳ ನಿವೇಶ), (ನಾಟ್ಯಶಾ. ೧೭)

ಕುಂಡ ಕುಂಡಲಿ : ದೇಶೀ ಲಾಸ್ಯಗಳಲ್ಲಿ ಒಂದು. (ಭರತಾ. ೧೪೮೭೧, ೭೨, ೭೩)

ಕೂಟಮಾನ : ವರ್ಣಾಕ್ಷರಗಳ ಕೂಡುವಿಕೆಯ ಯಥೋಚಿತವಾದ ಉದ್ದವು. (ನರ್ತನಿ. ೮೫) (ಭಕಮ. ಪು. ೩೮೦)

ಕೇಳಿಕೆ ಕೇಲಿಕೆ : ನೃತ್ಯ, ಅಭಿನಯಗಳಿಂದ ಕೂಡಿದ ಪ್ರದರ್ಶನ.

ಕೈಮುರು : ನೃತ್ಯ ಪ್ರಬಂಧಕ್ಕೆ ಜೋಡಿಸಲಾದ ವಾದ್ಯ ಪ್ರಬಂಧ. (ನರ್ತನಿ. ೮೮೮೯) (ವೇಸಂಮ)

ಕೈವಾಡ : ಗೀತ ಪ್ರಬಂಧ – ಅರ್ಥವಿರುವ ಅಥವಾ ಇಲ್ಲದ ಪಾಟಗಳಿದ್ದು ವೀರ ಹಾಗೂ ರೌದ್ರರಸಗಳಿರುವ ಉದ್ಗ್ರಾಹ ಧ್ರುವಗಳಿದ್ದು ಉದ್ಗ್ರಾಹದಲ್ಲಿ ಅಂತ್ಯವಾದರೆ ಅದು ಕೈವಾಡ. (ಭರಕೋ. ೧೪೯) (ಭರಕೋ. ೧೪೯)

ಕೈವಾರ : ಪೇರಣೆ ನರ್ತನದ ಒಂದು ಅಂಗ; ಸ್ತುತಿ ಪಾಟವಿರುವ ಒಂದು ನೃತ್ಯ ವಿಶೇಷ. (ಸಂಸಸಾ. ೨೧೬) (ನೃತ್ತರ.೪೫) (ಭರಕೋ. ೧೪೯)

ಕೈಶಿಕಿ : ನಾಲ್ಕು ಬಗೆಯ ವೃತ್ತಿಗಳಲ್ಲಿ ಒಂದು (ಸ್ತ್ರೀ ಪಾತ್ರಗಳಿಂದ ಪ್ರಯೋಗಿಸಲ್ಪಡುವುವು)

ಕೊಂಬು : ಗಾಳಿವಾದ್ಯ

ಕೊರವಂಜಿ ಕಟ್ಟಣೆ : ದೇಶೀ ನೃತ್ಯ ಬಂಧ. (ವೇಸಂಮ)

ಕೊರಳೋಜೆ : ಕುತ್ತಿಗೆಯ ಚಲನಾವಿಧಾನ – ಸಮ, ನತ, ಉನ್ನತ, ತ್ರ್ಯಸ್ರ, ರೇಚಿತ, ಅಂಚಿತ, ಕುಂಚಿತ, ವಲಿತ, ನಿವೃತ್ತ ನಾಟ್ಯಾಶಾ. (೧೬೭) ಲಾಸ್ಯರಂ. (೧೧೪) ಸಂಗೀರ. (೩೩೧) (ಅಭಿದ. ೮೧)

ಕೋಪು : ತಲೆ ಮೊದಲಾದ ಅಂಗಗಳಿಂದ ಮಾಡುವ ಅಭಿನಯ (ಭರಕೋ. ೧೫೨) (ಮಂಗರಾಜ ನಿಘಂಟು೮೨)

ಕೋಲಚಾರಿ : ದೇಶೀ ನೃತ್ಯ – ಚಿಂದು ನೃತ್ಯಗಳಲ್ಲಿ ಒಂದು ಪಿಲ್ಲ ಮೂರು, ಕೈಮೂರೂಗಳು ರಮ್ಯವಾದ ಕಲಸಗಳಿಂದ ಅತಿಸುಂದರವನ್ನಾಗಿಸಿರುವ (ನೃತ್ಯ), ಶಸ್ತ್ರಗಳನ್ನು ಕೂಡಿದ ಕಥೆಯ ಆವೃತ್ತಿ – ಇವುಗಳಿದ್ದರೆ (ಅದು) ಕೋಲಚಾರಿ (ಚಿಂದಂ) (ನರ್ತನಿ. ೮೨೭) (ವೇಸಂಮ. ಹಸ್ತಪ್ರತಿ. ಪು. ೨೬) (ಸಂಗೀದ. ೨೩೫೩೬, ಹಾಗೂ ೨೩೭೪೦)

ಕೋಲಾಟ : ಪ್ರಸಿದ್ಧವಾದ ಜನಪದ ನೃತ್ಯ; ೬೩ ಕಟ್ಟರಗಳಲ್ಲಿ ಒಂದು. (ನರ್ತನಿ. . ಟಿ. ಪು.೬೬೮) (ವೇಸಂಮ. ಹಸ್ತಪ್ರತಿ ಪು.೨೬)

ಕೌತ : ಒಂದು ನಿರ್ದಿಷ್ಟವಾದ ತಾಳದಲ್ಲಿ ಜೋಡಿಸಿದ ಸ್ತುತಿಪಾಟ; ೪೩ ವಾದ್ಯ ಪ್ರಬಂಧಗಳಲ್ಲಿ ಒಂದು. ನೋಡಿ ಕವುತ.

ಕ್ರಾಂತಾ : ೨೦ ಮಂಡಲಗಳಲ್ಲಿ ಒಂದು. (ಹತ್ತು ಆಕಾಶ ಮಂಡಲಗಳಲ್ಲಿ ಒಂದು) (ನಾಟ್ಯಶಾ. ೧೧೪೦೪೨) (ನೃತ್ತರ. ೩೩೩೪) (ಲಾಸ್ಯರಂ. ೩೮, ೩೯)

ಕ್ರಿಯಾಂಗ : ವಿಶೇಷ ಸಂಚಾರದಿಂದ ಶ್ರೋತೃಗಳಲ್ಲಿ ಉತ್ಸಾಹ ತುಂಬುವ ರಾಗಗಳು (ಭರಕೋ, ೧೫೩ ತುಲಜ ಉದ್ದೃತಿ)

ಖಂಡ : ತಾಲದ ಐದು ಜಾತಿಗಳಲ್ಲಿ ಒಂದು. ಐದು ಮಾತ್ರೆ ಬೆಲೆ. ಸಂ.ಶಾ.. ಪು.ಸಂ. ೫೬ (ಸಂಗೀರ. ೨೫೪)

ಖಂಡ ಜತಿ > ಖಂಡಯತಿ : ವಾದ್ಯ ಪ್ರಬಂಧ. (ಸಂಗೀರ. ೧೦೦೨) (ಸಂ..ಸಾ. ೧೬೮)

ಖಚರ : ಸ್ಥಾಯಿಗಳಲ್ಲಿ ಒಂದು. (ಸಂಸಸಾ. ೫೯) (ಭರಕೋ. ಪು.೧೫೯)

ಖಾವುಳ : ಶಾರೀರ ಭೇದ, ಕಫಮೂಲವಾದ ಶರೀರ (ನರ್ತನಿ. ರಾಗಮಾಲಾ ೯೬)

ಖುತ್ತ : ದೇಶೀ ಭೌಮಾಚಾರಿ ; ಪಾದಾಗ್ರದಿಂದ ನೆಲವನ್ನು ತಟ್ಟುವುದು. (ನೃತ್ತರ. )