ಜಾತಿ, ಧರ್ಮ, ಭಾಷೆ, ವೃತ್ತಿ ಮತ್ತಿತರ ಕಾರಣಗಳಿಂದ ಭಾರತ ದೇಶ ಜಗತ್ತಿನಲ್ಲೇ ವಿಭಿನ್ನವಾದುದು, ವಿಶಿಷ್ಟವಾದುದು ಮತ್ತು ಸಂಕೀರ್ಣವಾದದ್ದು ಇಲ್ಲಿ ಹಲವಾರು ಧರ್ಮಗಳು, ಸಾವಿರಾರು ಜಾತಿ ಉಪಜಾತಿಗಳು, ನೂರಾರು ಭಾಷೆ ಉಪಬಾಷೆಗಳು ಒಟ್ಟೊಟ್ಟಿಗೆ ಜೀವಂತವಾಗಿವೆ. ಇದರಿಂದ ಭಾರತದಲ್ಲಿ ಬಹುಭಾಷಿಕ, ಬಹು ಸಾಂಸ್ಕೃತಿಕ, ಬಹುಧರ್ಮಿಯ ಪರಿಸರ ಉಂಟಾಗಿ ಇಲ್ಲಿನ ಸಮಾಜ ಸರಳವೂ, ಸಂಕೀರ್ಣವೂ ಆಗಿದೆ. ಆದ್ದರಿಂದಲೇ ಭಾರತದ ಸಮಾಜ ಜಗತ್ತಿನ ಭಾಷಾ ತಜ್ಞರಿಗೆ, ಸಮಾಜ ವಿಜ್ಞಾನಿಗಳಿಗೆ ಪ್ರಯೋಗಾಲಯದಂತಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ, ಜಾಗತೀಕರಣದ ಪ್ರಭಾವ ಭಾರತೀಯ ಸಮಾಜದಲ್ಲಿ ಮಹತ್ತರವಾದ ಪಲ್ಲಟ ಮಾಡಿವೆ. ಇದರಿಂದ ಬದುಕಿನ ರೀತಿ, ಆಲೋಚನಾ ವಿಧಾನ ಬದಲಾಗುತ್ತಿದೆ. ಬಹುಭಾಷಿಕ, ಬಹು ಸಂಸ್ಕೃತಿಗಳು ನಾಶವಾಗಿ ಏಕರೂಪಿಯಾಗಿ ಮಾರ್ಪಡುತ್ತಿವೆ. ಅನೇಕ ಸಮುದಾಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿವೆ. ದೇಸಿ ಭಾಷೆಗಳು ಅಳಿವಿನ ಅಂಚಿಗೆ ನೂಕಲ್ಪಡುತ್ತಿವೆ. ಕನ್ನಡ ಕೂಡ ಹಾಗೆ ಅಳಿವಿನ ಅಂಚಿಗೆ ಹೋಗುತ್ತಿರುವ ಭಾಷೆಗಳಲ್ಲಿ ಪ್ರಮುಖವಾದ ಒಂದು ಭಾಷೆ ಎಂದು ಅಧ್ಯಯನಗಳು ಹೇಳುತ್ತಿವೆ. ನಿಜ ಸ್ಥಿತಿ ಏನೇ ಇದ್ದರೂ ಇಂಥ ಅಭಿಪ್ರಾಯಗಳು ಮುಂಚೂಣಿಗೆ ಬಂದಿವೆ. ಕನ್ನಡ ಅಳಿವಿನ ಭಾಷೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಅನೇಕ ಮಹತ್ತರ ಬದಲಾವಣೆಗಳು ಆಗುತ್ತಿರುವುದಂತೂ ನಿಜ. ಪ್ರೊ. ಕೆ.ವಿ. ನಾರಾಯಣ ಅವರು ಒಂದೆಡೆ ಹೇಳುವ ಹಾಗೆ ಕನ್ನಡ ಭಾಷೆ ಕಳೆದ ನಾನೂರು ವರ್ಷಗಳಲ್ಲಿ ಆದ ಬದಲಾವಣೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕಳೆದ ಎರಡು ದಶಕಗಳಲ್ಲಿ ಆಗಿದೆ. ಇದು ಸತ್ಯ ಕೂಡ. ಈ ಬದಲಾವಣೆಗಳಿಂದ ಬದುಕಿನ ಜೀವನ ಕ್ರಮವೇ ಬದಲಾಗಿ ಹೋಗಿರುವುದರಿಂದ ಇಲ್ಲಿನ ಸಮಾಜದ ಮುಖ್ಯ ಅಂಗವಾಗಿದ್ದ ಕೃಷಿ ಮತ್ತು ಕೃಷಿಗೆ ಪೂರಕವಾದ ಅನೇಕ ವೃತ್ತಿಗಳು ಸ್ಥಿತ್ಯಂತರಗೊಂಡಿವೆ. ಕೃಷಿ ಮತ್ತು ಕೃಷಿಗೆ ಪೂರಕವಾದ ಅನೇಕ ವೃತ್ತಿಯ ಜನರು ತಮ್ಮ ವೃತ್ತಿಯಿಂದ ದೂರ ಸರಿದು ಹೊಸ ಬಗೆಯ ವೃತ್ತಿಗಳಿಗೆ ವರ್ಗಾಂತರಗೊಳ್ಳುತ್ತಿದ್ದಾರೆ. ಇದರಿಂದ ಈ ಎಲ್ಲ ವೃತ್ತಿಗಳು ಬಹುತೇಕ ಕಣ್ಮರೆಯಾಗುತ್ತಿರುವುದರಿಂದ ಮುಂದಿನ ಹೊಸ ಪೀಳಿಗೆಗಳಿಗೆ ಈ ವೃತ್ತಿಗಳ ಬಗೆಗಿನ ತಿಳಿವು ವಿಸ್ಮೃತಿಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೊಸ ಪೀಳಿಗೆ ಇಂಥ ಅನೇಕ ವೃತ್ತಿಗಳ ಬಗೆಗೆ ಕೇಳಿ ತಿಳಿಯಬಹುದೇ ಹೊರತು ಅವುಗಳನ್ನು ಕಾಣಲು ಸಾಧ್ಯವಿಲ್ಲ. ಮುಂದಿನ ಜನಾಂಗದ ಮಕ್ಕಳಿಗೆ ಬಹುಶಃ ಭಾರತೀಯ ಸಮಾಜದಲ್ಲಿನ ಅನೇಕ ವೃತ್ತಿಗಳ ಅರಿವೇ ಬರಲಾರದು. ಇದರಿಂದ ದೇಸಿ ಜ್ಞಾನ ಪರಂಪರೆಯಿಂದ ಕೂಡಿದ ಅನೇಕ ವೃತ್ತಿಗಳು, ಆ ವೃತ್ತಿಗೆ ಸಂಬಂಧಿಸಿದ ಆಚರಣೆಗಳು, ನಂಬಿಕೆಗಳು, ತಿಳುವಳಿಕೆ ಮತ್ತು ಅದರ ಪದಕೋಶದ ನಾಶ ಅಂತೂ ಖಂಡಿತ ಆಗುತ್ತೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೀವನದ ಭಾಗವೇ ಆಗಿದ್ದ ಈ ವೃತ್ತಿಗಳು ಪೂರ್ಣ ಪ್ರಮಾಣದಲ್ಲಿ ನಾಶವಾಗುವ ಮುನ್ನ ಅವುಗಳಲ್ಲಿ ಅಡಗಿರುವ ಈ ನೆಲದ ಜ್ಞಾನ ಪರಂಪರೆಯ ತಿಳುವಳಿಕೆಯನ್ನು ಕಿಂಚಿತ್ತಾದರೂ ಹಿಡಿದಿಡುವ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗ ಅನೇಕ ವೃತ್ತಿಪರ ಕೋಶಗಳ ಯೋಜನೆ ಕೈಗೆತ್ತಿಕೊಂಡು ನಿರ್ವಹಿಸಿದೆ. ಈ ನಾಡಿನಲ್ಲಿ ಇದ್ದ ವೃತ್ತಿಗಳ ಮತ್ತು ಅವುಗಳಲ್ಲಿ ಅಡಗಿರುವ ದೇಶಿ ಜ್ಞಾನದ ತಿಳುವಳಿಕೆ ಮುಂದಿನ ಜನಾಂಗಕ್ಕೆ ತಿಳಿಯಪಡಿಸಲು ಕಿಂಚಿತ್ತಾದರೂ ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ವೃತ್ತಿಪದ ಕೋಶಗಳನ್ನು ಹೊರತರಲಾಗಿದೆ. ಉದಾಹರಣೆಗೆ ಭಾರತದಲ್ಲಿ ಬೆಳೆಯುತ್ತಿದ್ದ ಭತ್ತದ ತಳಿಗಳು ಕನಿಷ್ಠ ಎರಡು ಸಾವಿರದಷ್ಟು ಇತ್ತೆಂದು ದಾಖಲಾಗಿದೆ. ಆದರೆ ಇಂದು ಅವೆಲ್ಲ ಮಾಯವಾಗಿ ಕೆಲವೇ ಕೆಲವು ತಳಿಗಳು ಮಾತ್ರ ಉಳಿದಿರುವುದನ್ನು ನೋಡಬಹುದಾಗಿದೆ. ಅತ್ಯಂತ ವೈವಿದ್ಯಮಯವಾಗಿದ್ದ ಈ ತಳಿಗಳು ಪ್ರದೇಶದಿಂದ ಪ್ರದೇಶಕ್ಕೆ ಹವಾಮಾನಕ್ಕನುಗುಣವಾಗಿ, ಪ್ರದೇಶದ ಮಣ್ಣು ನೀರಿನ ಅನುಗುಣಕ್ಕನುಸಾರವಾಗಿ ರೂಪಗೊಂಡಿದ್ದವು. ಹೀಗೆ ಒಂದೊಂದು ಪ್ರದೇಶದ ಭೂಮಿಗನುಗುಣವಾಗಿ ಸೃಷ್ಟಿ ಮಾಡಿದ ತಳಿಗಳು ಇಂದು ಕಾಣೆಯಾಗಿ ಒಂದೇ ಬಗೆಯ ತಳಿಗಳು ಉಳಿದುಕೊಂಡಿವೆ. ಇಲ್ಲಿನ ಜನರ ಭಾಷೆ, ಸಂಸ್ಕೃತಿಗಳು ಕೂಡ ಪ್ರದೇಶ, ಸಮಾಜ, ನಿಸರ್ಗಕ್ಕನುಸಾರಾವಾಗಿ ಬಹುಮಾದರಿಯಲ್ಲಿದ್ದವು. ಅವುಗಳೆಲ್ಲವೂ ಇಂದು ನಾಶವಾಗಿ ಒಂದೇ ಬಗೆಯ ಸಮಾಜ ರೂಪುಗೊಳ್ಳುತ್ತಿದೆ.

ಭಾರತದ ಬೆನ್ನೆಲುಬು ಎಂದು ಹೇಳುವ ಕೃಷಿ ಇಂದು ಹಿನ್ನೆಲೆಗೆ ಹೋಗಿದೆ. ಜೀವನಕ್ಕೆ ಅಗತ್ಯವಾದ ದವಸ ಧಾನ್ಯಗಳು ಹಿನ್ನೆಲೆಗೆ ಸರಿದು ವಾಣಿಜ್ಯ ಬೆಳೆಗಳು ಮುನ್ನೆಲೆಗೆ ಬಂದಿವೆ. ಮುಂದಿನ ಕೆಲವೇ ವರ್ಷಗಳಲ್ಲಿ ಜೀವನಾವಶ್ಯಕ ಆಹಾರ ಧಾನ್ಯಗಳು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಕಾಲ ದೂರ ಉಳಿದಿಲ್ಲ. ಜಾಗತೀಕರಣದ ಹಿನ್ನೆಲೆಯಲ್ಲಿರುವ ಆರ್ಥಿಕ, ರಾಜಕೀಯ ನೀತಿ ಏನೇ ಇರಲಿ ಅದರಿಂದ ಭಾರತದ ಕೃಷಿ ಮತ್ತು ಕೃಷಿ ಪೂರಕವಾದ ವೃತ್ತಿಗಳ ಜಾಗದಲ್ಲಿ ಯಂತ್ರಗಳು, ಕಾರ್ಖಾನೆಗಳು, ಬಂಡವಾಳಶಾಹಿಗಳು ಬಂದು ಕೃಷಿಗೆ ಪೂರಕವಾದ ಅನೇಕ ವೃತ್ತಿಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ಇದರಿಂದ ಕಾಲಾಂತರದಿಂದ ಬೆಳೆದು ಬಂದ ಅನೇಕ ಜ್ಞಾನಗಳು ಅಳಿವಿನ ಅಂಚಿನಲ್ಲಿವೆ. ಮುಂದಿನ ಒಂದೆರಡು ದಶಕಗಳಲ್ಲಿ ಅವು ಕೂಡ ಹೇಳ ಹೆಸರಿಲ್ಲದಂತೆ ಮರೆಯಾಗುವ ಸಾಧ್ಯತೆ ಇದೆ. ಹೀಗೆ ಏಕರೂಪಿ ಸಮಾಜ ನಿರ್ಮಾಣ ಆಗುತ್ತಿರುವುದರಿಂದ ಬಹುಸಂಸ್ಕೃತಿ, ಬಹುಭಾಷೆಗಳು, ದೇಸಿ ಜ್ಞಾನಗಳು ಕಣ್ಮರೆಯಾಗುತ್ತಿವೆ. ಹೀಗೆ ಕಣ್ಮರೆಯಾಗುತ್ತಿರುವ ಸಮಾಜ, ಸಮುದಾಯಗಳ, ಜ್ಞಾನ ಪರಂಪರೆ ಹಿಡಿದಿಡುವ ಹಿನ್ನೆಲೆಯಲ್ಲಿ ಕೋಶಗಳು ಮಹತ್ತರ ಪಾತ್ರ ವಹಿಸುತ್ತವೆ ಎನ್ನುವ ಕಾರಣದಿಂದಲೂ ವೃತ್ತಿಪದಕೋಶಗಳನ್ನು ಹೊರ ತರಲಾಯಿತು.

ಹೀಗೆ ಮರೆಯಾಗುತ್ತಿರುವ ದೇಸಿ ಪರಂಪರೆಯ ವೃತ್ತಿಗಳು ಮತ್ತು ಆ ವೃತ್ತಿಗಳಿಗೆ ಸಂಬಂಧಿಸಿದ ಪದಕೋಶವೂ ದಾಖಲಿಸಬೇಕಾದ ಅವಶ್ಯಕತೆ ಇದೆ. ಭಾರತೀಯರಿಗೆ ಇಂದು ಆಧುನಿಕ ಶಿಕ್ಷಣ ಎಷ್ಟು ಅವಶ್ಯ ಮತ್ತು ಅನಿವಾರ್ಯ ಎಂದು ಭಾವಿಸಲಾಗಿದೆಯೋ ಹಿಂದೆ ವೃತ್ತಿಗಳು ಮತ್ತು ಆ ವೃತ್ತಿಗಳಿಂದ ಪಡೆಯುವ ಶಿಕ್ಷಣ ಜೀವನಾಧಾರವಾಗಿತ್ತು. ಈಗ ಅದರ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ ಅದೇ ಪಾರಂಪರಿಕ ವೃತ್ತಿಗಳಲ್ಲಿ ಮುಂದುವರೆಯುವುದು ಅವಮಾನದ ಸಂಕೇತವೂ ಆಗಿದೆ. ಆದ್ದರಿಂದ ಪಾರಂಪರಿಕೆ ವೃತ್ತಿಗಳು ಮತ್ತು ಆ ವೃತ್ತಿಯನ್ನು ನಿರ್ವಹಿಸುತ್ತಿದ್ದ ಜನರೂ ಈ ವೃತ್ತಿಗಳಿಗೆ ಬೆನ್ನು ಮಾಡಿದ್ದಾರೆ. ಇದರಿಂದ ಭಾರತೀಯರದೇ ಎನ್ನಬಹುದಾದ ಅವರ ಬದುಕಿನ ಭಾಗವೇ ಆಗಿದ್ದ ಅನೇಕ ಜ್ಞಾನ ಪರಂಪರೆಗಳ ನಾಶವೂ ಆಗಿದೆ. ಆಗುತ್ತಲೂ ಇದೆ. ಭಾರತೀಯರಿಗೆ ಇಂದು ನೀಡುತ್ತಿರುವ ಮೆಕಾಲೆ ಮಾದರಿಯ ಶಿಕ್ಷಣ ಆರಂಭವಾಗುವ ಮುನ್ನ ಅನೇಕ ಸಮುದಾಯಗಳಲ್ಲಿ ತಮ್ಮ ವೃತ್ತಿಯನ್ನು ಬದುಕಿನ ಭಾಗವಾಗಿಯೇ ಸ್ವೀಕರಿಸುತ್ತಿದ್ದರು. ಆಧುನಿಕ ಶಿಕ್ಷಣ ಆಯಾ ವೃತ್ತಿಯ ಆ ಜ್ಞಾನಗಳ ಬಗ್ಗೆ ಕೀಳರಿಮೆ ಉಂಟು ಮಾಡಿಸಿ ಏಕರೂಪಿಯ ಜ್ಞಾನದ ಕಡೆ ವರ್ಗಾಯಿಸಲಾಗಿದೆ. ಇದರಿಂದ ಬಹುತೇಕ ಸಮುದಾಯಗಳು ಕೀಳರಿಮೆ ಅನುಭವಿಸುತ್ತಿವೆ. ಉಳಿದ ಅನೇಕ ಸಮುದಾಯಗಳು ತಮ್ಮ ಜ್ಞಾನಪರಂಪರೆ ಕಳೆದುಕೊಂಡು ಎಡಬಿಡಂಗಿಗಳಾಗಿ ಬದುಕಬೇಕಾಗಿದೆ. ಈ ಬಗೆಯ ತಾತ್ವಿಕ ಆಲೋಚನೆಗಳ ಹಿನ್ನಲೆಯಲ್ಲಿ ವೃತ್ತಿಗಳ ಪದಕೋಶವನ್ನಾದರೂ ದಾಖಲಿಸುವುದು ತನ್ನ ಆದ್ಯ ಕರ್ತವ್ಯ ಎಂದು ಪರಿಗಣಿಸಿ ಅಂಥ ಕೆಲಸದಲ್ಲಿ ಕನ್ನಡ ವಿಶ್ವವಿದ್ಯಾಲಯ ಮೊದಲಿಗೆ ತೊಡಗಿಸಿಕೊಂಡಿರುವುದು ಅತ್ಯಂತ ಸಂತೋಷದ ವಿಷಯವೇ ಆಗಿದೆ.

೧೯೯೨ ರಲ್ಲಿ ನಾವು ಕನ್ನಡ ವಿಶ್ವವಿದ್ಯಾಲಯಕ್ಕೆ ಯೋಜನಾ ಸಹಾಯಕರಾಗಿ ಬಂದಾಗ ಕನ್ನಡ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಭಾಗಗಳು ಆರಂಭವಾಗಿರಲಿಲ್ಲ. ವಿಭಾಗಗಳು ಆರಂಭವಾಗುವ ಮುನ್ನವೇ ವಿಶ್ವವಿದ್ಯಾಲಯದಲ್ಲಿ ಕೆಲವು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಅಂಥ ಯೋಜನೆಗಳಲ್ಲಿ ಕೃಷಿಪದ ಕೋಶ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಮಗೆ ವೃತ್ತಿಪದ ಕೋಶಗಳು ಏಕೆ ಮಾಡಬೇಕು ಎನ್ನುವ ತಾತ್ವಿಕ ಪ್ರಶ್ನೆಗಳೊಂದಿಗೆ ಸಾಮಾಜಿಕವಾಗಿ ಮತ್ತು ಭಾಷಿಕವಾಗಿ ಅವುಗಳಿಗಿರುವ ಮಹತ್ವವನ್ನು ಅರಿಯುವಂತಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಮತ್ತು ಜಾಗತೀಕರಣದ ಪ್ರಬಾವದಿಂದ ನಾಶವಾಗುತ್ತಿರುವ ಸ್ಥಳೀಯ ವೃತ್ತಿಗಳಲ್ಲಿರುವ ಜ್ಞಾನಪರಂಪರೆಯ ಅರಿವು ಮುಂದಿನ ಜನಾಂಗಕ್ಕೆ ಕಿಂಚಿತ್ತಾದರೂ ಉಳಿಯಲಿ ಎನ್ನುವ ಹಿನ್ನೆಲೆಯಲ್ಲಿ ದಾಖಲೀಕರಣ ಆಯಿತು. ಪ್ರೊ. ಕೆ.ವಿ. ನಾರಾಯಣ ಅವರ ನಿರ್ದೇಶನದಡಿಯಲ್ಲಿ ಕೈಗೆತ್ತಿಕೊಂಡ ಯೋಜನೆಯಲ್ಲಿ ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಯೋಜನ ಸಹಾಯಕರಾಗಿ ನೇಮಕಗೊಂಡ ನಾವು ಕೃಷಿಪದ ಕೋಶ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿ ಬಂತು. ಕ್ಷೇತ್ರಕಾರ್ಯದ ಬಗ್ಗೆ ಆಗಲೀ, ಯೋಜನೆಯ ಖಚಿತ ರೂಪುರೇಷೆಗಳನ್ನು ಅರಿಯದ ನಾವು ಅನಿವಾರ್ಯವಾಗಿ ಈ ಯೋಜನೆ ನಿಮಿತ್ತ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ತಾಲೂಕಿನ ಎರಡು ಹಳ್ಳಿಗಳನ್ನು ಆರಿಸಿಕೊಂಡು ಕೃಷಿಗೆ ಸಂಬಂಧಿಸಿದ ಪದಕೋಶವನ್ನು ಆಯಾ ಪ್ರದೇಶದ ವಿದ್ವಾಂಸರ ಮೂಲಕ, ಪ್ರಶ್ನಾವಳಿ ಮೂಲಕ ಸಂಗ್ರಹಿಸಲಾಯಿತು. ಹೀಗೆ ಸಂಗ್ರಹಿಸಿದ ಪದಕೋಶ ಸೂಕ್ತವಾಗಿದೆಯೇ ಎಂದು ಕ್ರಾಸ್ ಚೆಕ್ ಮಾಡಿಕೊಳ್ಳಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ನಾವು ಕರ್ನಾಟಕದಾದ್ಯಂತ ಓಡಾಡಬೇಕಾಗಿ ಬಂತು. ಭಾಷಾಧ್ಯಯನದ ವಿದ್ಯಾರ್ಥಿಗಳಾದ ನಮಗೆ ಸಂಗ್ರಹಿಸಿದ ಪದಕೋಶದಲ್ಲಿನ ಪ್ರಾದೇಶಿಕ ಮತ್ತು ಸಾಮಾಜಿಕ ಭಿನ್ನಾಂಶಗಳು ಮತ್ತಷ್ಟು ಕುತೂಹಲ ಹುಟ್ಟಿಸಿದವು.

ಒಂದೇ ಪದದ ಬಳಕೆ ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಬಳಕೆಯಾಗುವ ಮಾದರಿ ಮತ್ತೂ ಕುತೂಹಲಕಾರಿಯಾಗಿತ್ತು. ಇದರಿಂದ ಉತ್ತೇಜಿತರಾದ ನಾವು ಒಂದೇ ಪದದ ರೂಪ ಕರ್ನಾಟಕದಾದ್ಯಂತ ಬಳಕೆಯಾದ ಪರ‍್ಯಾಯ ರೂಪಗಳನ್ನು ಗುರುತಿಸುವಂತಾಯಿತು. ಇಂಥ ಪರ‍್ಯಾಯ ಮತ್ತು ಧ್ವನಿ ವ್ಯತ್ಯಾಸ ರೂಪಗಳ ಪ್ರಾದೇಶಿಕ ವಿನ್ಯಾಸವೇ ಈ ಪುಸ್ತಕ ರಚನೆಗೆ ಕಾರಣವಾಯಿತು.

ಪದವಿನ್ಯಾಸದ ಉದ್ದೇಶ

ಕರ್ನಾಟಕ ರಾಜ್ಯ ಬಹುಭಾಷಿಕ ಪರಿಸರ ಹೊಂದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಭಾಷೆಯ ಬಳಕೆ ಇದೆ. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಈ ಕಾರಣದಿಂದಲೇ ಮೈಸೂರು ಪ್ರಾಂತ್ಯ ಹಲವೆಡೆ ಹಂಚಿ ಹೋಗಿದ್ದ ಕನ್ನಡದ ಪ್ರಾಂತ್ಯಗಳೆಲ್ಲ ಸೇರಿಸಿಕೊಂಡು ಒಂದಾಯಿತು. ಕನ್ನಡ ಭಾಷಾ ಬಳಕೆಯ ಆಧಾರದ ಮೇಲೆ ೧೯೭೩ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪುನರ್ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಭಾಷೆಯನ್ನು ಬಹುತೇಕ ಜನರು ತಮ್ಮ ಬಳಕೆಯ ಎಲ್ಲ ವಲಯಗಳಲ್ಲಿ ಬಳಸುತ್ತಿದ್ದಾರೆ. ಪ್ರತ್ಯೇಕ ರಾಜ್ಯ ವಿಂಗಡಣೆ ಆದ ಮೇಲೆ ಆಡಳಿತ, ಶಿಕ್ಷಣ ಮತ್ತಿತರ ವಲಯಗಳಲ್ಲೂ ಕನ್ನಡ ಭಾಷೆಯನ್ನೇ ಬಳಸಬೇಕೆಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ಮಾಡಿದೆ. ಈಗಲೂ ಮಾಡುತ್ತಿದೆ. ಇದೇನೆ ಇರಲಿ ಕರ್ನಾಟಕದಾದ್ಯಂತ ಕನ್ನಡ ಭಾಷೆ ಸಹಜವಾಗಿ ಬಳಕೆಯಾಗುತ್ತಿದೆ. ಪ್ರಶ್ನೆ ಇಲ್ಲದ ಕನ್ನಡ ಭಾಷೆ ರಾಜ್ಯದ ಉತ್ತರದ ಬೀದರ್ ಜಿಲ್ಲೆಯಿಂದ ಹಿಡಿದು ದಕ್ಷಿಣದ ಚಾಮರಾಜ ನಗರ ಜಿಲ್ಲೆಯವರೆಗೆ, ಪೂರ್ವದ ರಾಯಚೂರು ಬಳ್ಳಾರಿ ಜಿಲ್ಲೆಗಳಿಂದ ಹಿಡಿದು ಪಶ್ಚಿಮದ ಉಡುಪಿ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯವರೆಗೆ, ಕನ್ನಡ ಭಾಷೆಯನ್ನೇ ಜನರು ಬಳಸುತ್ತಿದ್ದರೂ ಉತ್ತರ ಬೀದರ ಜಿಲ್ಲೆಯವನ ಕನ್ನಡ, ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯವರಿಗೆ ಸರಿಯಾಗಿ ಅರ್ಥವಾಗುವುದಿಲ್ಲ ಹಾಗಾದರೆ ಇವರೆಲ್ಲ ಬೇರೆ ಬೇರೆ ಭಾಷೆಯನ್ನು ಬಳಸುತ್ತಿದ್ದಾರೆಯೇ? ಎಂದರೆ ಇಲ್ಲ. ಕನ್ನಡ ಭಾಷೆಯನ್ನೇ ಬಳಸುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಬಳಸುತ್ತಿದ್ದರೂ ಪರಸ್ಪರರಿಗೆ ಅರ್ಥವಾಗದಿರುವುದಕ್ಕೆ ಕಾರಣ ಇವರು ಬಳಸುವ ಕನ್ನಡಗಳಲ್ಲೇ ವ್ಯತ್ಯಾಸಗಳಿವೆ ಅಂತಾಯಿತು. ಅದು ಪರಸ್ಪರರಿಗೆ ಅರ್ಥವಾಗದಷ್ಟು ಪ್ರಮಾಣದಲ್ಲಿ ಹಾಗಾಗಿ ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಭಾಷೆಯನ್ನೇ ಬಳಸುತ್ತಿದ್ದರೂ ಒಂದು ಕನ್ನಡ ಭಾಷೆ ಬಳಸುತ್ತಿಲ್ಲ. ಹಲವಾರು ಕನ್ನಡಗಳನ್ನು ಬಳಸುತ್ತಿದ್ದಾರೆ. ಈ ವ್ಯತ್ಯಾಸವನ್ನು ಭಾಷಾ ತಜ್ಞರು ಕನ್ನಡದ ಉಪ ಭಾಷೆಗಳು ಅಥವಾ ಕನ್ನಡದ ಪ್ರಭೇದಗಳು ಎಂದು ಕರೆದಿದ್ದಾರೆ. ಕರ್ನಾಟಕದಲ್ಲಿ ಹಲವಾರು ಪ್ರಭೇದಗಳಿವೆ. ಈ ಪ್ರಭೇದಗಳು ಪ್ರಾದೇಶಿಕವಾಗಿ ಮಾತ್ರ ಕಾಣುತ್ತವೆಯೇ? ಎಂದರೆ ಇಲ್ಲ. ಅವು ಸಾಮಾಜಿಕವಾಗಿಯೂ ಕಾಣುತ್ತವೆ. ಒಂದೇ ಪ್ರದೇಶದಲ್ಲಿ ಬಳಕೆ ಮಾಡುವ ಸಮುದಾಯಗಳ ಮಧ್ಯ ಕೂಡ ಈ ವ್ಯತ್ಯಾಸಗಳನ್ನು ನೋಡಲು ಸಾಧ್ಯವಿದೆ. ಒಂದೇ ಪ್ರದೇಶದಲ್ಲಿ ಬಳಸುವ ಸಾಮಾಜಿಕ ವರ್ಗದಲ್ಲಿ ಕಾಣುವ ಕನ್ನಡದ ಈ ವ್ಯತ್ಯಾಸವನ್ನು ಸಾಮಾಜಿಕ ಪ್ರಭೇದಗಳು ಎಂದು ಭಾಷಾ ತಜ್ಞರು ಕರೆದಿದ್ದಾರೆ.

ಕೃಷಿಯಲ್ಲಿ ಬಳಕೆಯಾಗುವ ಒಂದು ಪದದ ರೂಪಕ್ಕೆ ಪ್ರಾದೇಶಿಕವಾಗಿ ಸಿಗುವ ಪರ‍್ಯಾಯ ರೂಪಗಳನ್ನು ಮತ್ತು ಧ್ವನಿ ವ್ಯತ್ಯಾಸಗಳನ್ನು ಒಂದು ನಕ್ಷೆಯ ಮೂಲಕ ತೋರಿಸುವುದು ಈ ಪದವಿನ್ಯಾಸದ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದಾದ್ಯಂತ ಬಳಸುವ ಕನ್ನಡದಲ್ಲಿ ಒಂದು ರೂಪಕ್ಕೆ ಮುಖ್ಯವಾದ ಕೆಲವು ಪರ‍್ಯಾಯ ರೂಪಗಳು ದೊರೆಯಬಹುದು. ಮತ್ತು ಪರ‍್ಯಾಯ ರೂಪಗಳಲ್ಲೂ ಕೆಲವು ಧ್ವನಿವ್ಯತ್ಯಾಸಗಳು ಕಾಣಬಹುದು. ಕನ್ನಡದಲ್ಲಿ ಒಂದು ವಸ್ತುವಿಗೆ ಕರೆಯುವ ಹೆಸರು ಇರಬಹುದು ಅಥವಾ ಒಂದು ನಾಮಪದ ಅಥವಾ ಯಾವುದೇ ಒಂದು ರೂಪ ಕರ್ನಾಟಕದಾದ್ಯಂತ ಒಂದೇ ರೂಪ ಹೊಂದಿರುವುದಿಲ್ಲ. ಕಾರಣ ಭೌಗೋಲಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಒಂದೇ ರೂಪಕ್ಕೆ ಅನೇಕ ಪರ‍್ಯಾಯ ರೂಪಗಳು ಮತ್ತು ಧ್ವನಿವ್ಯತ್ಯಾಸಗಳು ಕಾಣಬಹುದು. ಇವುಗಳನ್ನು ಒಂದು ನಕ್ಷೆಯ ಮೂಲಕ ತೋರಿಸಿದರೆ ವಿಶಿಷ್ಟವಾದ ವಿನ್ಯಾಸ ದೊರಕುತ್ತದೆ. ಇದು ಕುತೂಹಲ ಮೂಡಿಸುತ್ತದೆ. ಮೊದಲನೆಯ ಕುತೂಹಲ ಒಂದು ಪದ ಕರ್ನಾಟಕದಾದ್ಯಂತ ಎಷ್ಟೊಂದು ಭಿನ್ನ ರೂಪದಲ್ಲಿ ಬಳಕೆಯಾಗುತ್ತಿದೆ. ಎಲ್ಲೆಲ್ಲಿ ಈ ಭಿನ್ನರೂಪಗಳು ಕಾಣುತ್ತಿವೆ. ಏಕೆಂದರೆ ಒಂದು ರೂಪ ಕರ್ನಾಟಕದಾದ್ಯಂತ ಎಲ್ಲೆಲ್ಲೋ ಹರಿದು ಹಂಚಿಹೋಗಿಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬಳಕೆಯಾಗುತ್ತಿದೆ. ಪ್ರತಿಯೊಂದು ರೂಪಕ್ಕೂ ತನ್ನದೇ ಆದ ಬಳಕೆಯ ಪ್ರದೇಶ ಇದೆ. ಉದಾಹರಣೆಗೆ ಭತ್ತ ಪದದ ರೂಪ ಕರ್ನಾಟಕದಾದ್ಯಂತ ಮುಖ್ಯವಾದ ಮೂರು ರೂಪಗಳು ದೊರೆಯುತ್ತವೆ. ಒಂದು ರೂಪ ಬೀದರ್, ಗುಲಬರ್ಗಾದಲ್ಲಿ ಕಂಡರೆ, ಮತ್ತೊಂದು ರೂಪ ಮಧ್ಯ ಕರ್ನಾಟಕವನ್ನು ಆವರಿಸಿಕಂಡಿದೆ. ಮೂರನೇ ರೂಪ ದಕ್ಷಿಣ ಕರ್ನಾಟಕದ ಮೂರು ನಾಲ್ಕು ಜಿಲ್ಲೆಯಲ್ಲಿ ಮಾತ್ರ ದೊರೆಯುತ್ತದೆ. ಹೀಗೆ ಒಂದು ಪದದ ಬಳಕೆಯ ಭೌಗೋಲಿಕ ವಿನ್ಯಾಸ ಗುರುತಿಸುತ್ತ ಹೋದರೆ ಖಚಿತವಾದ ಗಡಿರೇಖೆಗಳು ಕಂಡುಬರುತ್ತದೆ. ಇದನ್ನು ನಕ್ಷೆಯ ಮೂಲಕ ತೋರಿಸಿ ಆಸಕ್ತರಿಗೆ ಕುತೂಹಲ ಮೂಡಿಸುವುದು ಕೂಡ ಇಲ್ಲಿನ ಮುಖ್ಯ ಉದ್ದೇಶಗಳಲ್ಲೊಂದು ಆಗಿದೆ.

ಪದವಿನ್ಯಾಸ ಸ್ವರೂಪ

ಕನ್ನಡ ಭಾಷೆಯಲ್ಲಿ ಬಳಕೆಯಾದ ಒಂದು ಪದದ ರೂಪ ಕನ್ನಡ ನಾಡಿನಾದ್ಯಂತ ಹೇಗಾಗಿದೆ ಎನ್ನುವುದನ್ನು ಎರಡು ಹಂತದಲ್ಲಿ ವಿವರಿಸಲಾಗಿದೆ. ಕನ್ನಡದ ಒಂದು ಪದ ನಾಡಿನಾದ್ಯಂತ ಬಳಕೆಯ ವಲಯದಲ್ಲಿ ಪಡೆದ ಧ್ವನಿವ್ಯತ್ಯಾಸಗಳನ್ನು ಗುರುತಿಸಿ ಅವುಗಳನ್ನು ದಾಖಲಿಸಲಾಗಿದೆ. ಕೇವಲ ಧ್ವನಿವ್ಯತ್ಯಾಸ ಇರುವ ಪದಗಳ ಗುಂಪನ್ನು ಪ್ರತ್ಯೇಕ ಮಾಡಿ ಒಂದು ಘಟಕ ಎಂದು ಪರಿಗಣಿಸಿ ಅವುಗಳಿಗೆ ಒಂದು ಬಣ್ಣವನ್ನು ನೀಡಲಾಗಿದೆ. ಒಂದು ಪದಕ್ಕೆ ಸಿಕ್ಕ ಪರ‍್ಯಾಯ ರೂಪಗಳಿಗೆ ಮಾತ್ರ ಪ್ರತ್ಯೇಕ ಬಣ್ಣವನ್ನು ಹಾಕಲಾಗಿದೆ. ಹೀಗೆ ಪ್ರತ್ಯೇಕ ಬಣ್ಣಗಳನ್ನು ನೀಡಿರುವುದು ಎಂದು ಪದಕ್ಕೆ ಪರ‍್ಯಾಯವಾಗಿ ಕಂಡು ಬಂದ ಬೇರೆ ರೂಪಕ್ಕೆ ಮಾತ್ರ. ನಕ್ಷೆಯಲ್ಲಿ ಪ್ರತ್ಯೇಕ ಬಣ್ಣದಲ್ಲಿ ಕಂಡು ಬರುವ ರೂಪಗಳೆಲ್ಲ ಒಂದು ಪದಕ್ಕೆ ಸಿಕ್ಕ ಪರ‍್ಯಾಯ ರೂಪಗಳ ಬಳಕೆಯ ಪ್ರದೇಶವೆಂದು ತಿಳಯಬೇಕು.

ಒಂದು ಪದದ ಬಳಕೆಯಲ್ಲಿ ಕಂಡು ಬಂದ ಧ್ವನಿವ್ಯತ್ಯಾಸಗಳನ್ನು ಕೆಲವು ನಕ್ಷೆಯಲ್ಲಿ ಮತ್ತು ಬರವಣಿಗೆಯಲ್ಲಿ ವಿವರವಾಗಿ ತೋರಿಸಲಾಗಿದೆ. ಉದಾಹರಣೆಗೆ ನೇಗಿಲು ಪದದ ಭಿನ್ನ ರೂಪಗಳು ನೇಲ್ ಮತ್ತು ರಂಟೆ. ನೇಗಿಲು ಪದದ ಧ್ವನಿವ್ಯತ್ಯಾಸದ ರೂಪಗಳು ಸುಮಾರು ಹನ್ನೊಂದು ರೂಪಗಳು ದೊರೆತಿವೆ. ನೇಗ್ಲು, ನೇಗ್ಲ, ನೇಗ್ಲಿ, ನೇಕ್ಲಿ, ನೇಗಿಲ್, ನೇಗಲ್, ನೇಗಿಲ, ನೇಗಲು, ನೇಗಿಲಿ, ನೇಗಿಲು, ನೇಗಲ್ಲು ಈ ಎಲ್ಲ ಹನ್ನೊಂದು ರೂಪಗಳನ್ನು ಒಂದು ಘಟಕವೆಂದು ತಿಳಿದು ಇವುಗಳಿಗೆಲ್ಲ ಒಂದು ಬಣ್ಣ ನೀಡಲಾಗಿದೆ. ಹಾಗಾಗಿ ನಕ್ಷೆಯಲ್ಲಿ ಮುಖ್ಯವಾಗಿ ನೇಗಿಲು, ನೇಲ್, ಮತ್ತು ರಂಟೆಯ ರೂಪಗಳನ್ನು ನೀಡಲಾಗಿದೆ ಧ್ವನಿ ವ್ಯತ್ಯಾಸಗಳನ್ನು ಪದವಿನ್ಯಾದ ವಿವರಣೆ ಹಂತದಲ್ಲೇ ನೀಡಲಾಗಿದೆ. ಕೆಲವು ನಕ್ಷೆಗಳನ್ನು ಧ್ವನಿ ವ್ಯತ್ಯಾಸದ ರೂಪಗಳನ್ನೂ ನೀಡಲಾಗಿದೆ.

ಧ್ವನಿವ್ಯತ್ಯಾಸಗಳನ್ನೇ ಇಟ್ಟುಕೊಂಡು ಕೂಡ ನಿರ್ದಿಷ್ಟ ನಕ್ಷೆಯನ್ನು ರೂಪಿಸಲು ಸಾಧ್ಯವಿದೆ. ಒಂದು ಪದಕ್ಕೆ ಪರ‍್ಯಾಯ ರೂಪಗಳು ದೊರೆಯುವಂತೆ ಸಿಗುವ ಧ್ವನಿವ್ಯತ್ಯಾಸಗಳು ಕೂಡ ನಿರ್ದಿಷ್ಟ ಪ್ರದೇಶದಲ್ಲಿ ಬಳಕೆಯಾಗಿವೆ. ಉದಾಹರಣೆಗೆ ಕಳವಿ ರೂಪ ಬೀದರ್ ಮತ್ತು ಗುಲಬರ್ಗಾದಲ್ಲಿ ಮುಖ್ಯವಾಗಿ ಸಿಗುತ್ತದೆ. ಈ ಎರಡೂ ಜಿಲ್ಲೆಯಾದ್ಯಂತ ಕಂಡು ಬರುವ ಕಳವಿ ರೂಪದಲ್ಲಿ ಕಂಡು ಬರುವ ಕಳವಿ, ಕಳವೆ, ಕವಳಿ, ಕವಳೆ, ಕಳೆವೆ, ಕಳಮೆ ರೂಪಗಳು ಕೂಡ ನಿರ್ದಿಷ್ಟ ಪ್ರದೇಶದಲ್ಲಿ ಕಂಡು ಬರುತ್ತವೆ. ಪರ‍್ಯಾಯ ಮತ್ತು ಧ್ವನಿವ್ಯತ್ಯಾಸಗಳನ್ನು ಕ್ಷೇತ್ರಕಾರ್ಯದಲ್ಲಿ ಮಾತ್ರ ದೊರೆತ ರೂಪವನ್ನಷ್ಟೇ ನೀಡದೆ ಅದರ ಜೊತೆಗೆ ಗ್ರಂಥಗಳಲ್ಲಿ ದಾಖಲಾದ ರೂಪವನ್ನು ಕೂಡ ಕೃಷಿಪದ ಕೋಶದಲ್ಲಿ ದಾಖಲಿಸಿರುವುದರಿಂದ ಅವುಗಳನ್ನು ಹಾಗೆಯೇ ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿ ಗ್ರಂಥಗಳಲ್ಲಿ ದಾಖಲಾದ ರೂಪಗಳಿಗೆ ಪ್ರದೇಶದ ದಾಖಲೆ ದೊರೆಯದೇ ಹೋಗಬಹುದು. ಧ್ವನಿವ್ಯತ್ಯಾಸಗಳು ಸಿಗುವ ಪ್ರತ್ಯೇಕ ತಾಲೂಕುಗಳನ್ನು ಕೂಡ ದಾಖಲಿಸಲು ಸಾಧ್ಯವಿದೆ. ಅದು ಮುಂದಿನ ಅಧ್ಯಯನ ಹಂತದಲ್ಲಿ ಮಾಡಲು ಅವಕಾಶ ಇರುವುದರಿಂದ ಅದನ್ನು ಇಲ್ಲಿ ಮುಖ್ಯ ಪರಿಗಣನೆಗೆ ತೆಗೆದುಕೊಂಡಿಲ್ಲ. ಆದರೂ ಕೆಲವು ರೂಪಗಳಿಗೆ ಧ್ವನಿವ್ಯತ್ಯಾಸ ಮತ್ತು ಪರ‍್ಯಾಯ ರೂಪಗಳೆರಡನ್ನೂ ನಕ್ಷೆಯಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

ಅಧ್ಯಯನದ ವ್ಯಾಪ್ತಿ

ಯಾವುದೇ ಅಧ್ಯಯನ ಪರಿಪೂರ್ಣ ಅಲ್ಲ. ಅದಕ್ಕೆ ಅದರದೇ ಆದ ಮಿತಿಗಳು ಇರುತ್ತವೆ. ಹಾಗಾಗಿ ಈ ಅಧ್ಯಯನಕ್ಕೂ ಅದರದೇ ಆದ ಮಿತಿಗಳು ಇವೆ. ಇಲ್ಲಿ ದಾಖಲಾದ ಪದವಿನ್ಯಾಸದ ಪದಗಳ ವಿವರಣೆ ಕನ್ನಡ ವಿಶ್ವವಿದ್ಯಾಲಯದ ಕೃಷಿಪದ ಕೋಶ ಯೋಜನೆ ಕೈಗೊಂಡಾಗ ಸಂಗ್ರಹಿಸಿದ ದಾಖಲೆಯಾಗಿದೆ. ಹೀಗೆ ಸಂಗ್ರಹಿಸುವಾಗ ಆಗ ಸಂಗ್ರಹಿಸಿದ ಮಾಹಿತಿದಾರರು ನೀಡಿದ ಮಾಹಿತಿಯನ್ನೇ ಅಧಿಕೃತ ಎಂದು ನಂಬಲಾಗಿದೆ. ಮಾಹಿತಿದಾರರು ನೀಡಿದ ಮಾಹಿತಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಒಂದು ಪದದ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿರುವುದರಿಂದ ಆ ಜಿಲ್ಲೆಗಳಲ್ಲಿ ಆ ಮಾಹಿತಿ ಇಲ್ಲವೆಂದೇ ದಾಖಲಿಸಲಾಗಿದೆ. ಇಡೀ ಪದಕೋಶ ಕೃಷಿಪದ ಕೋಶ ಯೋಜನೆಯ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಅವಲಂಬಿಸಿರುವುದರಿಂದ ಇಲ್ಲಿ ದಾಖಲಾದ ಎಲ್ಲ ಪದಗಳು ಕೃಷಿಗೆ ಸಂಬಂಧಿಸಿದ ಪದಗಳಾಗಿವೆ. ಹಾಗಾಗಿ ಇದು ಒಂದು ಮಿತಿ ಎಂದು ಎನಿಸಬಹುದು ಕುತೂಹಲ ಮೂಡಿಸಿದ ಕೃಷಿ ಸಂಬಂಧಿ ಕೆಲವು ಪದಗಳನ್ನು ಮಾತ್ರ ಪದವಿನ್ಯಾಸದಲ್ಲಿ ಬಳಸಿಕೊಳ್ಳಲಾಗಿದೆ.

ಒಂದು ಪದದ ರೂಪ ಪ್ರಾದೇಶಿಕವಾಗಿ ಕಂಡುಬರುವ ಭಿನ್ನತೆಗಳನ್ನೂ ಮಾತ್ರ ನಕ್ಷೆಯಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ. ಸಾಮಾಜಿಕ ಭಿನ್ನತೆಗಳನ್ನು ಪ್ರತ್ಯೇಕವಾಗಿ ಚರ್ಚಿಸಬೇಕಾಗಿರುವುದರಿಂದ ಇಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ ಜೊತೆಗೆ ಪದವಿನ್ಯಾಸದಲ್ಲಿ ಭಾಷಾ ಬಳಕೆಯ ವೈವಿಧ್ಯತೆಯ ಬಗ್ಗೆ ಕುತೂಹಲ ಮೂಡಿಸುವ ಉದ್ದೇಶದಿಂದ ಭಾಷಿಕ ವಿಶ್ಲೇಷಣೆಗೆ ಗಂಭೀರವಾಗಿ ತೊಡಗಿಸಿಲ್ಲ. ಒಂದು ಪದದ ಧ್ವನಿ ವ್ಯತ್ಯಾಸಗಳು, ಪರ‍್ಯಾಯ ರೂಪಗಳು ಮತ್ತು ಅವುಗಳು ಬಳಕೆಯಾದ ಜಿಲ್ಲೆ ಮತ್ತು ತಾಲೂಕಿನ ವಿವರ ನೀಡಿರುವುದು, ಇದಕ್ಕೆ ತಕ್ಕಂತೆ ನಕ್ಷೆ ಬಳಸಿರುವುದೇ ಓದುಗರಿಗ ವಿವರಣೆ ನೀಡುವುದರಿಂದ ಪ್ರತ್ಯೇಕ ದೀರ್ಘ ಚರ್ಚೆ ಮಾಡಿಲ್ಲ.

ಪದವಿನ್ಯಾಸಕ್ಕೆ ಆಯ್ಕೆ ಮಾಡಿಕೊಂಡ ಪದಗಳನ್ನು ಪ್ರತ್ಯೇಕ ಘಟಕಗಳಂತೆ ಚರ್ಚೆ ಮಾಡಿರುವುದರಿಂದ ಪ್ರತ್ಯೇಕ ದೀರ್ಘ ಚರ್ಚೆ ಮಾಡಿಲ್ಲ.

ಪದವಿನ್ಯಾಸದಲ್ಲಿ ಈಗಿರುವ ಹೊಸ ಜಿಲ್ಲೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಚಿಕ್ಕಬಳ್ಳಾಪುರ, ರಾಮನಗರ, ಯಾದಗಿರಿ ಜಿಲ್ಲೆಗಳ ದಾಖಲೆ ಮೊದಲಿನ ಜಿಲ್ಲೆಗಳಲ್ಲೆ ಅಡಕವಾಗಿವೆ. ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆ ಕೂಡ ಪ್ರತ್ಯೇಕ ಮಾಡಿ ನೋಡಿಲ್ಲ. ಇಂದಿನ ಸಂದರ್ಭದಲ್ಲಿ ಇದು ಕೂಡ ಒಂದು ಮಿತಿ ಆಗಿದೆ. ಪದವಿನ್ಯಾಸಕ್ಕೆ ಬಳಸಿದ ಕರ್ನಾಟಕದ ನಕ್ಷೆ ಕೂಡ ಕೃಷಿಪದ ಕೋಶ ಯೋಜನೆಯ ಸಂದರ್ಭದಲ್ಲಿ ಸಿಕ್ಕ ನಕ್ಷೆಯನ್ನೇ ಬಳಸಿಕೊಂಡಿದ್ದೇನೆ.

ಕೃತಜ್ಞತೆಗಳು

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಹಾಗೂ ಜಾಗತೀಕರಣದಿಂದ ಆದ ಸಾಮಾಜಿಕ ಪಲ್ಲಟಗಳು ಈ ನೆಲದ ಅನೇಕ ವೃತ್ತಿಗಳು ಕಣ್ಮರೆಯಾಗುವಂತೆ ಮಾಡಿವೆ. ಇಂಥ ಸಂದರ್ಭದಲ್ಲಿ ಅವುಗಳ ಪದಕೋಶವಾದರೂ ಸಂಗ್ರಹಿಸಿಡುವುದು ಅವಶ್ಯಕ ಎಂದು ಭಾವಿಸಿ ಕೃಷಿಪದ ಕೋಶ ಹಮ್ಮಿಕೊಳ್ಳಲಾಯಿತು. ಈ ಯೋಜನೆ ಪೂರ್ಣಗೊಳಿಸಲಾಯಿತು. ಈ ಯೋಜನೆಯನ್ನೇ ಮೂಲ ಆಕರವಾಗಿ ಬಳಸಿಕೊಂಡು ಅಧ್ಯಯನ ಮಾಡಲು ಅವಕಾಶ ಇರುವುದರಿಂದ ಕನ್ನಡ ಭಾಷಾಧ್ಯಯನ ವಿಭಾಗವು ಅಂಥ ಕೆಲಸಕ್ಕೆ ಕೈ ಹಾಕಿತು. ಕೃಷಿಯಲ್ಲಿ ದೊರೆತ ಅನೇಕ ಪದಗಳನ್ನು ತೆಗೆದುಕೊಂಡು ಅವು ಕರ್ನಾಟಕದಾದ್ಯಂತ ಬಳಕೆಯಾದ ವಿಧಾನವನ್ನು ನೋಡುವುದು ಅದಕ್ಕೆ ಕರ್ನಾಟಕದ ನಕ್ಷೆಯಲ್ಲಿ ಗಡಿರೇಖೆಗಳನ್ನು ಗುರುತಿಸುವುದರ ಮೂಲಕ ಮತ್ತೊಂದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತು. ಈ ಕುತೂಹಲವೇ ಮುಂದೆ ನಮ್ಮ ಕನ್ನಡ ಪತ್ರಿಕೆಯಲ್ಲಿ ಪದವಿನ್ಯಾಸ ಅಂಕಣ ಬರಹಕ್ಕೆ ಕಾರಣವಾಯಿತು. ಈ ಅಂಕಣ ಬರಹ ಬರೆಯಲು ಸೂಚಿಸಿದವರು ಮೇಷ್ಟ್ರು ಕೆ.ವಿ.ಎನ್. ಅವರು. ಈ ಅಂಕಣ ಬರಹಗಳೇ ಇಂದು ಪುಸ್ತಕ ರೂಪವಾಗಿ ಪ್ರಕಟವಾಗುತ್ತಿದೆ. ಹಾಗಾಗಿ ಇದರ ಮೂಲ ಪ್ರೇರಣಕರ್ತರಾದ ಕೆ.ವಿ.ಎನ್. ಮೇಷ್ಟ್ರಿಗೆ ಕೃತಜ್ಞತೆ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸುತ್ತೇನೆ.

ಈ ಅಂಕಣ ಬರಹಗಳನ್ನು ಬಳಸಿಕೊಂಡು ಯೋಜನೆಯಾಗಿ ಸಿದ್ಧಪಡಿಸಿ ಪುಸ್ತಕವಾಗಿ ರೂಪಿಸಿಕೊಡಲು ಸೂಚಿಸಿದವರು ಮಾನ್ಯ ಕುಲಪತಿ ಅವರು. ಅದಕ್ಕೆ ಪೂರಕವಾಗಿ ಸಹಕರಿಸಿದವರು ಮಾನ್ಯ ಕುಲಸಚಿವರು. ಹಾಗಾಗಿ ಈ ಪುಸ್ತಕ ಹೊರಬರಲು ಕಾರಣರಾದ ಮಾನ್ಯ ಕುಲಪತಿಗಳಾದ ಪ್ರಾ. ಎ. ಮುರಿಗೆಪ್ಪ ಅವರಿಗೆ ಮತ್ತು ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳು.

ಪದವಿನ್ಯಾಸ ಕೃತಿ ರೂಪಿಸುವ ಮುನ್ನ ನಮ್ಮ ಕನ್ನಡ ಪತ್ರಿಕೆಯಲ್ಲಿ ಅಂಕಣವಾಗಿ ಸಿದ್ಧಗೊಳ್ಳುವಾಗಿನಿಂದ ಹಿಡಿದು ಈಗ ಪ್ರಕಟಣೆಗೆ ಸಲ್ಲಿಸುವವರೆಗೆ ಚರ್ಚಿಸಿ, ಪುಸ್ತಕ ಬೇಗ ಬರಲೆಂದು ಎಲ್ಲ ರೀತಿಯಲ್ಲೂ ಸಹಕರಿಸಿದ ವಿಭಾಗದ ಸ್ನೇಹಿತರಾದ ಪ್ರೊ. ಪಾಂಡುರಂಗ ಬಾಬು, ಡಾ. ಚ ಮಹೇದವಯ್ಯ, ಡಾ. ಸಾಂಬಮೂರ್ತಿ ಅವರಿಗೂ ಕೂಡ ಕೃತಜ್ಞತೆಗಳು.

ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರು ಮತ್ತು ಆತ್ಮೀಯರೂ ಆದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಚಂದವಾಗಿ ವಿನ್ಯಾಸ ಗೊಳಿಸಲು ಸಹಕರಿಸಿದ ಸ್ನೇಹಿತರೂ ಮತ್ತು ಪ್ರಸಾರಾಂಗದ ಸಹಾಯಕ ನಿರ್ದೇಶಕರೂ ಆದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಅಂದವಾಗಿ ಮುಖಪುಟವನ್ನು ಮಾಡಿಕೊಟ್ಟ ಸ್ನೇಹಿತರಾದ ಶ್ರೀ ಕಲ್ಲಪ್ಪ ಮಕಾಳಿಗೆ ಪುಸ್ತಕ ಬರಲೆಂದು ಸದಾ ಒತ್ತಾಯಿಸುತ್ತಿದ್ದ ಗೆಳಯರಾದ ಪ್ರೇಮಕುಮಾರ್, ಶಿವಾನಂದ ವಿರಕ್ತಮಠ ಅವರಿಗೆ, ಇನ್ನೂ ಹೆಸರಿಸಲಾಗದ ಅನೇಕ ಗೆಳೆಯರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು.

ಹಾಗೆಯೇ ಈ ಪುಸ್ತಕದಲ್ಲಿ ಇರುವ ಲೇಖನಗಳೆಲ್ಲ ಸರಿಯಾದ ಸಮಯಕ್ಕೆ ಅಚ್ಚುಕಟ್ಟಾಗಿ ಡಿಟಿಪಿ ಮಾಡಿ ಕೊಟ್ಟ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಮತ್ತು ಈ ಪುಸ್ತಕವನ್ನು ಓದುತ್ತಿರುವ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ.

ಅಶೋಕಕುಮಾರ ರಂಜೇರ