ಜನನ : ೨೦-೯-೧೯೫೬ ರಂದು ಯಗಚಿಯಲ್ಲಿ ಚಿಕ್ಕಮಗಳೂರು ಜಿಲ್ಲೆ.

ಮನೆತನ : ಸಂಗೀತ ಮತ್ತು ಗಮಕಾಸಕ್ತರ ಮನೆತನ. ತಂದೆ ಜಿ. ಎಸ್. ವೆಂಕಟೇಶಮೂರ್ತಿ ಸ್ವತಃ ಗಮಕಿಗಳು, ತಾಯಿ ಗೌರಮ್ಮ ಗಾಯಕಿ, ಸಂಗೀತ ಬಲ್ಲವರು.

ಗುರುಪರಂಪರೆ : ಗಮಕ ಶಿಕ್ಷಣ ತಂದೆಯವರಿಂದಲೇ ಆರಂಭ. ತಾಯಿಯವರಿಂದ ಸಂಗೀತ ಕಲಿಕೆ. ಕರ್ನಾಟಕ – ಹಿಂದುಸ್ತಾನಿ ಶೈಲಿಗಳೆರಡಲ್ಲೂ ಸಾಕಷ್ಟು ಪರಿಶ್ರಮ. ಮುಂದೆ ಹರಿಹರದಲ್ಲಿ ಗಮಕ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಲ್ಲಿ ಉನ್ನತ ಗಮಕ ಶಿಕ್ಷಣ. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ವಿಜ್ಞಾನ ಶಾಸ್ತ್ರ ಪದವೀಧರೆ.

ಕ್ಷೇತ್ರ ಸಾಧನೆ : ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುತ್ತಿರುವ ಎಲ್ಲ ಪ್ರಕಾರಗಳ ಪ್ರವೇಶ, ಪ್ರೌಢ, ಕಾಜಾಣ ಮತ್ತು ಪಾರೀಣ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ೧೯೮೩ ರಲ್ಲಿ  ಹರಿಹರೇಶ್ವರ ದೇವಾಲಯದಲ್ಲಿ ಕನಕದಾಸರ ರಾಮಧಾನ್ಯ ಚರಿತ್ರೆಯೊಂದಿಗೆ ಗಮಕ ಕಾರ್ಯಕ್ರಮದ ರಂಗಪ್ರವೇಶ. ವಾಚನದ ಜೊತೆಗೆ ವ್ಯಾಖ್ಯಾನ ಕಲೆಯಲ್ಲೂ ಪಾಂಡಿತ್ಯ ಗಳಿಸಿ ಅನೇಕ ಗಮಕಿಗಳ ವಾಚನಕ್ಕೆ ವ್ಯಾಖ್ಯಾನವನ್ನು  ಮಾಡಿರುತ್ತಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಪಂಪನ  ಚಂಪೂ ಕಾವ್ಯದಿಂದ ಹಿಡಿದು ಸುಜನಾರವರ ಯುಗ ಸಂಧ್ಯಾ ಕಾವ್ಯದವರೆಗಿನ ಎಲ್ಲಾ ಕಾವ್ಯಗಳ ವಾಚನ – ವ್ಯಾಖ್ಯಾನಗಳನ್ನು ನಡೆಸಿರುವ ಅಪೂರ್ವ ಸಾಧನೆಯ ಗಮಕ ವಿದುಷಿ.

ದಾವಣಗೆರೆ, ಮಂಗಳೂರುಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಗಮಕ ಕಲಾ ಪರಿಷತ್ತಿನ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಗಮಕ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಪ್ರಾತಕ್ಷಿಕೆ, ವಾಚನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ ನಿರೂಪಣಾ ಕಾರ್ಯವನ್ನು ನಿರ್ವಹಿಸುವ ಸಾಮರ್ಥವಿರುವುದರ ಜೊತೆಗೆ ಉತ್ತಮ ಸಂಘಟಕಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಗಮಕ ಕಲಾ ಪರಿಷತ್ತು ನಡೆಸಿದ ಸ್ವಾತಂತ್ರ್ಯೋತ್ಸವ ಸುವರ್ಣ ವರ್ಷದುದ್ದಕ್ಕೂ ಚಿತ್ರದುರ್ಗ, ದಾವಣಗೆರೆ, ಹರಿಹರ ಮುಂತಾದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನೇರ್ಪಡಿಸಿ ಗಮಕ ಪ್ರಚಾರ ಕೈಂಕರ್ಯವನ್ನು ಮಾಡಿರುತ್ತಾರೆ. ಗಮಕ ತರಗತಿಗಳನ್ನೂ ನಡೆಸುತ್ತಾ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಪರೀಕ್ಷಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಭದ್ರಾವತಿ ಆಕಾಶವಾಣಿ ಕೇಂದ್ರ, ದೂರದರ್ಶನದ ಕಾವ್ಯ ಸಂಪುಟ ವಾಹಿನಿಯಲ್ಲಿ ಇವರ ವಾಚನಗಳು ಪ್ರಸಾರವಾಗಿವೆ.

ಪ್ರಶಸ್ತಿ – ಪುರಸ್ಕಾರಗಳು : ಇವರನ್ನು ಅರಸಿ ಬಂದಿರುವ ಪ್ರಶಸ್ತಿ -ಪುರಸ್ಕಾರಗಳು ಅಪಾರ. ಹರಿಹರದ ರಾಜ್ಯೋತ್ಸವದ ಸಮಿತಿ ವತಿಯಿಂದ ಗೌರವ-ಸನ್ಮಾನ. ಚಿತ್ರದುರ್ಗ, ದಾವಣಗೆರೆಯ ವೀರಶೈವ ಬೃಹನ್ಮಠಗಳಿಂದ ಸನ್ಮಾನ ಗಾನ ಕೋಗಿಲೆ, ಗಮಕ ಶಾರದೆ, ಗಮಕ ಸರಸ್ವತಿ, ಮುಂತಾದ ಬಿರುದುಗಳಿಗೂ ಪಾತ್ರರಾಗಿರುವ ಪದ್ಮಜಾ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩-೦೪೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.