ನವಮನ್ವಂತರದ ಹರಿಕಾರ:

ಇಂಗ್ಲಿಷ್ ಭಾಷೆಯಲ್ಲಿ ಇತ್ತೀಚೆಗೆ ನಾನು ಬರೆದ Padmaraja Pandita: (1861-1945) Doyen of Vision ಎಂಬ ಪುಸ್ತಕವನ್ನು ಡಾ || ಎಂ. ಬೈರೇಗೌಡರು ‘ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ ವತಿಯಿಂದ ಪ್ರಕಟಿಸಿದರು (ಜುಲೈ-೨೦೦೯). ಈ ಪುಸ್ತಕವನ್ನು ಓದಿದ ಹಲವು ವಿದೇಶಿ ವಿದ್ವಾಂಸರು, ವಿಶೇಷವಾಗಿ ಪ್ರೊ. ವಿಲ್ಲೆಮ್‌ ಬೋಲಿ (ಜರ್ಮನಿ)

ಡಾ. ಪಾಲ್ ದಂಡಾಸ್ (ಇಂಗ್ಲೆಂಡ್), ಪ್ರೊ. ಪಿಯೊತ್ರ್ ಬಲ್ಸರೊವಿಜ್, (ವಾರ್ಸ ಪೋಲೇಂಡ್) ಪದ್ಮರಾಜ ಪಂಡಿತರ ಕೊಡುಗೆಯನ್ನು ಮೆಚ್ಚಿದರು.

ಪದ್ಮರಾಜ ಪಂಡಿತರ ಸಾಧನೆ, ಸಾಹಸ ಅಗಾಧವಾದದ್ದು. ಅವರ ಪಾಂಡಿತ್ಯ ಮತ್ತು ಪರಿಶ್ರಮ ಅಪರಿಮಿತ. ಅದು ಒಂದೆರಡು ಕ್ಷೇತ್ರಗಳಿಗೆ ಮೀಸಲಲ್ಲ. ಹಲವು ಹದಿನಾರು ವಲಯ ನೆಲೆಗಳಲ್ಲಿ ದುಡಿದವರು. ೧೯೫೫ರಿಂದ ೫೯ ರವರೆಗೆ ನಾನು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್, ಎಂ. ಎ ತರಗತಿಯಲ್ಲಿ ಓದುತ್ತಿದ್ದ ದಿನಗಳಲ್ಲಿ ಅವರ ಬರೆಹಗಳತ್ತ ಒಲವು ಮೂಡಿತ್ತು. ಅದು ಮತ್ತೆ ಉದ್ದೀಪನಗೊಂಡು ಉತ್ತೇಜಿತವಾಗಿ ಖಚಿತ ರೂಪ ಪಡೆದದ್ದು ೨೦೦೬ರಲ್ಲಿ, ಲಂಡನ್ ವಿಶ್ವವಿದ್ಯಾಲಯದಲ್ಲಿ ಏರ್ಪಟ್ಟ ಅಂತರ ರಾಷ್ಟ್ರೀಯ ಕಮ್ಮಟದಲ್ಲಿ ಪಾಲುಗೊಂಡಾಗ. ಪ್ರೊ. ಪೀಟರ್ ಪ್ಲೂಗಲ್‌ರು ರಚಿಸಿದ ಲೇಖನವೊಂದರಲ್ಲಿ ಪ್ರಾಸಂಗಿಕವಾಗಿ ಪದ್ಮರಾಜ ಪಂಡಿತರು “ಜೈನ ಲಾ” ಕುರಿತ ಬರೆದಿರುವ ಪುಸ್ತಕವನ್ನು ಎರಡು ಮೂರು ವಾಕ್ಯಗಳಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರೊ. ಪೀಟರ್ ಪ್ಲೂಗಲ್‌ರಿಗೆ ನಾನು ಇನ್ನಷ್ಟು ಮಾಹಿತಿ ಹೇಳಿದ್ದಕ್ಕೆ ‘ಪದ್ಮರಾಜ ಪಂಡಿತರನ್ನು ಕುರಿತು ಸವಿವರವಾಗಿ ಬರೆಯಿರಿ’ ಎಂದು ಹುರಿದುಂಬಿಸಿದರು ಆ ಮಾತು ನನಗೆ ಪ್ರೇರಣೆಯಾಯಿತು. ಬಹಳಷ್ಟು ಸಮಯ ವಿನಿಯೋಗಿಸಿ ದೊರೆಯುವ ಮಾಹಿತಿಯನ್ನು ಕಲೆಹಾಕಿದೆ. ವಯೊವೃದ್ಧ ಹಿರಿಯರನ್ನು ಸಂದರ್ಶಿಸಿದೆ. ‘ಪಪಂ’ ರ ಬಗ್ಗೆ ಬಹಳ ಜನಕ್ಕೆ ತಿಳಿದಿಲ್ಲ. ಅವರ ನೆಂಟರಿಷ್ಟರಾದ ಅನೇಕ ಜನರನ್ನು ಸಂಪರ್ಕಿಸಿದೆ, ಆದರೂ ನನಗೆ ತಿಳಿದಿದುದಕ್ಕಿಂತ ಹೆಚ್ಚಿನ ವಿವರಗಳು ಸಿಗಲಿಲ್ಲ. ಬರೆಹ ರೂಪದಲ್ಲಿಯೂ ಪಂಡಿತ ಪ. ನಾಗರಾಜಯ್ಯನವರು ೨೦೦೨ ರಲ್ಲಿ ಬರೆದಿರುವ ಚಾಮರಾಜನಗರದ ಪದ್ಮರಾಜ ಪಂಡಿತರು ಎಂಬ ತುಂಬ ಉಪಯುಕ್ತ ಪುಟ್ಟ ಪುಸ್ತಕ ಬಿಟ್ಟರೆ ಎರಡು ಮೂರು ಲೇಖನಗಳಷ್ಟೆ ಪ್ರಕಟವಾಗಿರುವುದು. ನಾನು ಶ್ರಮಪಟ್ಟು ಸಂಚಯಿಸಿದ ಮಾಹಿತಿಯಷ್ಟನ್ನು ಪ್ರಕಟವಾಗಿರುವ ಇಂಗ್ಲಿಷ್‌ ಪುಸ್ತಕದಲ್ಲಿ ದಾಖಲಿಸಿದ್ದೇನೆ.

‘ಪಪಂ’ರ ಮಹತ್ವದ ಸಾಧನೆಗಳಲ್ಲಿ ಗ್ರಂಥಪ್ರಕಟಣೆ ಶೃಂಗಪ್ರಾಯ. ಕೇವಲ ಓಲೆಗರಿ ರೂಪದಲ್ಲಿ ಉಳಿದು ಉಸಿರಾಡುತ್ತಿದ್ದ ಅನೇಕಾನೇಕ ಜೈನಕಾವ್ಯ-ಶಾಸ್ತ್ರ-ಟೀಕಾಗ್ರಂಥಗಳನ್ನು ಮೊಟ್ಟಮೊದಲನೆಯ ಸಲ ಮುದ್ರಿಸಿ ಕನ್ನಡಿಗರಿಗೆ ಸಿಗುವಂತೆ ಮಾಡಿದರು. ಹತ್ತೊಂಬತ್ತನೆಯ ಶತಮಾನದಲ್ಲಿ ಕನ್ನಡ ನಾಡು ಮುದ್ರಣಾಲಯವನ್ನು ಕಂಡಿತು, ಓಲೆಗರಿಯುಗ ಮುಗಿದು ಮುದ್ರಣಯುಗ ಆರಂಭವಾಯಿತು. ಇನ್ನೂ ಜನ ಈ ಸ್ಥಿತ್ಯಂತರಕ್ಕೆ ಹೊಂದಿಕೊಳ್ಳಲು ಪೂರ್ತಿ ಸಜ್ಜಾಗಿರಲಿಲ್ಲ. ಅಂಜಿಕೆ, ಹಿಂಜರಿಕೆ, ಗುಮಾನಿ ಚಡಪಡಿಕೆ. ಮಾರುಕಟ್ಟೆಯಲ್ಲಿ ಸಂಚಲಿಸಿತ್ತು. ಇಡೀ ಹಳೆಯ ಮೈಸೂರಿನ ಒಂಬತ್ತು ಜಿಲ್ಲೆಗಳಲ್ಲಿ ಬೆಂಗಳೂರು ಮತ್ತು ಮೈಸೂರು ಈ ಎರಡು ಕಡೆ ಮಾತ್ರ ಒಟ್ಟು ಏಳೆಂಟು ಮುದ್ರಣಾಲಯಗಳು ಹುಟ್ಟಿಕೊಂಡವು. ಅಂತಹ ಪ್ರತಿಕೂಲ ಇಲ್ಲವೇ ಪ್ರಯೋಗಗಳ ಕಾಲಘಟ್ಟದಲ್ಲಿ ಸಾಹಸದಿಂದ ಮುನ್ನುಗ್ಗಿ ಸ್ವಂತ ಭಾರತೀ ಮುದ್ರಣಾಲಯ ತೆರೆದ ವಿಜಗೀಷು ಧೀರ ‘ಪಪಂ’ರು. ಅವರ ಬದುಕು ಬರೆಹ ವೈವಿಧ್ಯಮಯ. ಅದು ಇನ್ನೂ ಇತರ ಪೂರಕ ಜ್ಞಾನಶಿಸ್ತುಗಳ ಕ್ಷೇತ್ರಗಳಿಗೆ ದಾಂಗುಡಿಯಿಟ್ಟು ಹಬ್ಬುತ್ತ ಪಲ್ಲವಿಸಿದ ರೀತಿ ಬೆರಗು ಮೂಡಿಸುತ್ತದೆ.

ಮುಖ್ಯವಾಗಿ ಪದ್ಮರಾಜ ಪಂಡಿತರ ಮಹಾಸಾಧನೆಯಾದ ಗ್ರಂಥಪ್ರಕಟಣೆಯನ್ನು ಪ್ರಸ್ತಾಪಿಸುವುದು ಅವಶ್ಯ. ಅವರು ಓಲೆಗರಿ ಮತ್ತು ಶಾಸನಗಳನ್ನು, ಅವು ಎಷ್ಟೇ ಪ್ರಾಚೀನಲಿಪಿ ಬದ್ಧವಾಗಿರಲಿ, ಲೀಲಾಜಾಲವಾಗಿ ಓದುತ್ತಿದ್ದರು. ಎಷ್ಟೋ ಹೊಚ್ಚ ಹೊಸ ಕಲ್ಲುಬರೆಹಗಳನ್ನು ಓದಿ (ಹಳೆಯ) ಮೈಸೂರು ಪುರಾತತ್ವ ಇಲಾಖೆಗೆ ಒದದಿಗಿಸಿರು ಎಂವುದನ್ನು ಆ ಇಲಾಖೆಯ ಪ್ರಕಟಣೆಗಳು ತಿಳಿಸಿವೆ. ಅದಲ್ಲದೆ ‘ಪಪಂ’ರು ಓಲೆಗರಿಯಿಂದ ಪ್ರತಿಮಾಡಿ, ಶುದ್ಧವಾಗಿ ಪರಿಷ್ಕರಿಸಿ ಅನೇಕಾನೇಕ ಹಳೆಗನ್ನಡ ಗ್ರಂಥಗಳನ್ನೂ ಸಂಸ್ಕೃತ ಗ್ರಂಥಗಳನ್ನೂ ಹೊರತಂದರು. ಹೀಗೆ ಸಂಪಾ ದಿಸಿದ ಪುಸ್ತಕಗಳೆಲ್ಲವೂ ಮೊತ್ತಮೊದಲನೆಯ ಬಾರಿಗೆ ಓಲೆಗರಿಯಿಂದ ಮುದ್ರಣಕ್ಕೆ ರವಾನೆಯಾಗಿ ಹೊಸಕಾಲದ ಓದುಗರಿಗೆ ಒಪ್ಪಿಸಿದ ಉಡುಗೊರೆಗಳು! ಅದುವರೆಗೆ ಅವು ಪ್ರಕಟವಾಗಿರಲಿಲ್ಲ. ಅವರು ಅಂದು ಮುಂದಾಗದಿದ್ದರೆ ಮುಂದಾನೊಂದು ಕಾಲದಲ್ಲಿ ಯಾರಾದರೂ ಕೈಗೆತ್ತಿಕೊಳ್ಳುತ್ತಿದ್ದರು, ದಿಟ. ಆದರೆ ಅದಕ್ಕಾಗಿ ಬಹಳಷ್ಟುಕಾಲ ಕಾಯಬೇಕಾಗುತ್ತಿತ್ತು. ಜತೆಗೆ ಇಲ್ಲಿಯೇ ಹೇಳಬೇಕಾದ ಮತ್ತೊಂದು ಮಾತಿದೆ. ಅದು ‘ಪ ಪಂ’ತರು ವಹಿಸಿದ ಮೂರು ಮುನ್ನೆಚ್ಚರಿಕೆಗಳು: ಒಂದು, ಅವರೇ ಸಂಪಾದಕರಾಗಿ ಮುದ್ರಿಸಿದ್ದು; ಎರಡು, ಅನ್ಯ ಮುದ್ರಣಾಲಯಗಳನ್ನು ಅವಲಂಬಿಸಿ, ಆಶ್ರಯಿಸಿ ಪರಾವಲಂಬಿಸಿದೆ ತಾವೇ ತಮ್ಮದೇ ಮುದ್ರಣಾಲಯ ಪ್ರಾರಂಭಿಸಿ ಸ್ವಾವಲಂಬಿಯಾದದ್ದು; ಮೂರು, ಅನ್ಯಾನ್ಯ ಪ್ರಕಾಶಕರನ್ನು ಮೊರೆಹೋಗುವ, ದುಂಬಾಲು ಬೀಳುವಗೋಜಿಗೆ ಹೋಗದೇ ತಾವೇ ತಮ್ಮದೇ ಒಂದು ಸ್ವತಂತ್ರ ಪ್ರಕಾಶನವನ್ನು ಪ್ರಾರಂಭಿಸಿದ್ದು. ಹತ್ತೊಂಬತ್ತನೆಯ ಶತಮಾನದಲ್ಲಿರುವಾಗಲೇ ಇ‌ಪ್ಪತ್ತನೆಯ ಶತಮಾನದ ಸಾಮಾಜಿಕ ಅಗತ್ಯಗಳನ್ನು ತಮ್ಮ ಮುನ್ನೋಟದಿಂದ ಮನಗಂಡು, ಪೂರೈಸಿದ ಭವಿಷ್ಯದರ್ಶಿತ್ವ ಶ್ಲಾಘನೀಯ. ಇವೆಲ್ಲದರ ಜತೆಗೆ ಅವರು ಪತ್ರಕೋದ್ಯಮಕ್ಕೂ ತಮ್ಮನ್ನು ತೆರೆದುಕೊಂಡರು. ಮೂರು ಬೇರೆ ಬೇರೆ ಸಾಹಿತ್ಯಕ ಪತ್ರಿಕೆಗಳನ್ನು ಪ್ರಾರಂಭಿಸಿ ಅವುಗಳ ಮೂಲಕ ಪ್ರಾಚೀನ ವಾಙ್ಮಯವನ್ನು ಓದುಗರೆ ಮನೆಬಾಗಿಲಿಗೆ ಮುಟ್ಟಿಸಿದರು. ಅವರ ಹಲವು ಮೊದಲುಗಳ ಸಾಲಿಗೆ ಸೇರ್ಪಡೆಯಾಗುವ ಮತ್ತೊಂದು ಆದ್ಯವಕ್ತವ್ಯವೆಂದರೆ, ಧಾರಾವಾಹಿಯ ಪರಿಕಲ್ಪನೆ. ತಮ್ಮ ಪತ್ರಿಕೆಗಳಲ್ಲಿ ದೊಡ್ಡ ಕಾವ್ಯಗಳನ್ನು ಪ್ರಕಟಿಸಲು ತೊಡಗಿ ಸ್ವಲ್ಪಸ್ವಲ್ಪವಾಗಿ ಕಾವ್ಯ(ಕೃತಿ) ಭಾಗ ಮುದ್ರಿಸುತ್ತಿದ್ದರು. ಹೀಗೆ ಕಂತುಗಳಲ್ಲಿ ಕೃತಿಯನ್ನು ಹೊರತರುವ ಮಾದರಿ ಆ ಕಾಲಕ್ಕೆ ಹೊಸದು.

ಪದ್ಮರಾಜ ಪಂಡಿತರು ಒಂದು ಸಂಪ್ರದಾಯ ಮಡಿವಂತ ಕುಟುಂಬದ ಕುಡಿ. ಆದರೆ ಅದು ಸ್ಥಗಿತ ಜಡ ಕುಟುಂಬ ಆಗಿರಲಿಲ್ಲ. ಅದು ಅರಿವನ ಅರವಂಟಿಗೆ ಆಗಿತ್ತು. ಅಕ್ಕರಿಗರ ಆಡುಂಬೊಲ ಆಗಿತ್ತು. ಬಲ್ಲಿದರಿಗೆ ಇರಲಿಲ್ಲ ಅಲ್ಲಿ ಬೆರಗು. ತಾಯಿ ನುಡಿ ಕನ್ನಡ ಕಲಿತ ಮಾತುಗಳು ಹಲವು. ಪಾಗದವೂ ಸಕ್ಕದವೂ ಹದವಾಗಿ ಪುದುವಾಳಿತ್ತು. ತಲೆಮೊರೆಯಿಂದ ತಲೆಮೊರೆಗೆ ಹರಿಯುತ್ತ ಇಳಿದು ಬಂದಿತ್ತು. ಮಂತ್ರಪಠಣ, ಪೌರೋಹಿತ್ಯ, ಆಯುರ್ವೇದ ಭೈಷಜ್ಯಜ್ಞಾನ, ಲಿಪಿಶಾಸ್ತ್ರಜ್ಞಾನ, ಇಂತಹ ಜ್ಞಾನಯೋಗದಲ್ಲಿ ವರ್ಧಿಷ್ಣು ಚಾಮರಾಜನಗರ ಪುರಪೌರ ಬ್ರಹ್ಮಸೂರಿ ಪಂಡಿತರು. ಸ್ವಾರಸ್ಯವೆಂದರೆ, ಸುಮಾರು ಒಂದು ನೂರಕ್ಕು ಹೆಚ್ಚು ಹೊತ್ತಗೆಗಳನ್ನು ಮೂಲ ತಾಡೆಯೋಲೆ ಹಸ್ತಪ್ರತಿಗಳಿಂದ ಪ್ರತಿಮಾಡಿ ಪ್ರಕಟಿಸಿದರು ‘ಪಪಂ’ರು ಪಂಪರನ್ನ ಪೊನ್ನ ಮೊದಲಾದವರ ಮಹತ್ವದ ಕಾವ್ಯಗಳನ್ನು ಸಂಪಾದಿಸಲಿಲ್ಲ. ಪ್ರಾಯಃ ಅವರ ಸಮಕಾಲೀನ ಬಲ್ಲಿದರಾದ ಎಂ.ಎ. ರಾಮಾನುಜಯ್ಯಂಗಾರ್, ಎಸ್. ಜಿ. ನರಸಿಂಹಾಚಾರ್, ಎ. ವೆಂಕಟರಾವ್, ಎಚ್. ಶೇಷಯ್ಯಂಗಾರ್, ಮತ್ತು ಅವರ ಮಹಾಪೋಷಕರೂ ವಿದ್ವದ್ ವರೇಣ್ಯರೂ ಆದ ಬೆಂಜಮಿನ್ ಲೂಯಿರೈಸರು ಜೈನಕಾವ್ಯಗಳನ್ನು ಸಂಪಾದಿಸಿ ಹೊರತರುತ್ತಿರುವುದನ್ನು ಅರಿತು ಅವನ್ನೇ ಮತ್ತೆ ಮರು ಮುದ್ರಿಸಬಾರದೆಂದು ತೆಪ್ಪಗಾದರೆಂದು ತೋರುತ್ತದೆ. ಉದಾಹರಣೆಗೆ ಮೈಸೂರಿನ ಕರ್ಣಾಟಕ ಕಾವ್ಯಮಂಜರಿ ಪ್ರಕಾಶನವತಿಯಿಂದ ೧೮೯೮ರಲ್ಲಿ ನೇಮಿಚಂದ್ರಕವಿಯ ಲೀಲಾವತಿ ಚಂಪೂಕಾವ್ಯ ಮುದ್ರಣವಾಗಿತ್ತು. ಪೊನ್ನನ ಶಾಂತಿಪುರಾಣಕಾವ್ಯವನ್ನು ಎ. ವೆಂಕಟರಾವ್ ಮತ್ತು ಎಚ್. ಶೇಷ ಅಯ್ಯಂಗಾರ್ ಸಂಪಾದಿಸಿದ್ದು ಮದರಾಸು ವಿಶ್ವವಿದ್ಯಾಲಯ ವತಿಯಿಂದ ೧೯೨೯ರಲ್ಲಿ ಅಚ್ಚಾಗಿತ್ತು. ಹೀಗೆಯೇ ಆದಿಪುರಾಣ. ಸಾಹಸಭೀಮವಿಜಯ ಮೊದಲಾದ ಜೈನಕಾವ್ಯಗಳು ಪ್ರಕಟವಾಗಿದ್ದುವು.

ಈ ಬಗೆಯಲ್ಲಿ ಆ ಕಾಲಕ್ಕೆ ‘ಅದ್ಭುತ’ ಎಂದೆನಿಸುವ ಸಾಹಸದಿಂದಲೂ ಸಾಮರ್ಥ್ಯ ದಿಂದಲೂ ಭವಿಷ್ಯದರ್ಶಿತ್ವದಿಂದಲೂ ಕಾರ್ಯಪಟುತ್ವ ತೋರಿದ ಪದ್ಮರಾಜಪಂಡಿತರು ಸಂಪಾದಿಸಿ ಪ್ರಕಟಿಸಿದ ಅಲಭ್ಯ-ಅಪೂರ್ವ ಗ್ರಂಥಗಳಲ್ಲಿ ಕೆಲವನ್ನು ಈ ಮೊದಲನೆಯ ಸಂಪುಟದಲ್ಲಿ ಕೊಟ್ಟಿದ್ದೇನೆ. ಪ್ರತ್ಯೇಕ ವಿಸ್ತಾರವಾದ ಪ್ರಸ್ತಾವನೆ ಬರೆದಿದ್ದೇನೆ. ಮುಂದಿನ ಮೂರು ಸಂಪುಟಗಳಲ್ಲಿ ಸಾಧ್ಯವಾದಷ್ಟೂ ಗ್ರಂಥಗಳನ್ನು ಒದಗಿಸಲಾಗುವುದು.

ಈ ಕಾರ್ಯದಲ್ಲಿ ನನಗೆ ಬಹುವಾಗಿ ನೆರವು ನೀಡಿದ ಮೊತ್ತಮೊದಲಿಗರು ಉಜಿರೆ ಎಸ್. ಡಿ. ಎಂ. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರೂ ಹಿರಿಯವಿದ್ವಾಂಸರೂ ಆದ ಡಾ || ಎಸ್.ಡಿ. ಶೆಟ್ಟಿಯವರು. ಧರ್ಮಸ್ಥಳದ ಗ್ರಂಥ ಭಂಡಾರದಲ್ಲಿ ಸಂಗ್ರಹವಾಗಿದ್ದ ಪದ್ಮರಾಜ ಪಂಡಿತರ ಕೆಲವು ಗ್ರಂಥಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಲು ಪದ್ಮಭೂಷಣ ರಾಜರ್ಷಿ ಡಾ || ಡಿ. ವೀರೇಂದ್ರ ಹೆಗ್ಗಡೆಯವರನ್ನು ವಿನಂತಿಸಿದೆ. ಅವರು ಈ ಹೊಣೆಯನ್ನು ಪ್ರೊ. ಎಸ್.ಡಿ. ಶೆಟ್ಟಿಯವರಿಗೆ ವಹಿಸಿದರು. ಇವರು ನಗುನಗುತ್ತಾ ನನ್ನ ನೆರವಿಗೆ ನಿಂತರು. ಇವರನ್ನು ಅಲ್ಲಿಗೇ ಬಿಡಲಿಲ್ಲ. ಈ ಸಂಪಾದನಕಾರ್ಯ ಕೈಗೆತ್ತಿಕೊಂಡಾಗ ಕರಡನ್ನು ತಿದ್ದುವುದಕ್ಕೂ ಸಹಕರಿಸಿದರು. ಪ್ರೊ. ಎಸ್.ಡಿ. ಶೆಟ್ಟಿಯವರ ಸಕಾಲಿಕ ಸಸ್ನೇಹಮಯ ಸಹಾಯವನ್ನು ಅಂತಃಕರಣತುಂಬಿ ನೆನೆಯುತ್ತೇನೆ.

ಬೆಂಗಳೂರಲ್ಲಿ ಹಳೆಗನ್ನಡ, ಶಾಸ್ತ್ರ ಸಾಹಿತ್ಯ, ಶಾಸನ ಸಾಹಿತ್ಯವನ್ನು ಗಂಭೀರ ಅಧ್ಯಯನ ವಿಷಯವಾಗಿ ಅಪ್ಪಿಕೊಂಡಿರುವ ತರುಣ ಚಿ. ಕಾರ್ತಿಕ್. ಆತನಿಗೆ ವಿದ್ವತ್ ಕಾರ್ಯನಿರತರಿಗೆ, ಅದರಲ್ಲಿಯೂ ಹಿರಿಯರಿಗೆ ನೆರವು ನೀಡುವುದರಲ್ಲಿ ಎಲ್ಲಿಲ್ಲದ ಹುರುಪು. ಈ ಕಾರ್ಯದಲ್ಲಿ ಚಿ. ಕಾರ್ತಿಕ್‌ನ ಸಹಯೋಗವಿರುವುದನ್ನು ಸ್ಮರಿಸುತ್ತೇನೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವಾದಂದಿನಿಂದ ನನಗೆ ಅಕ್ಕರೆ ತೋರುತ್ತಿದೆ, ಒತ್ತಾಯ ಪೂರ್ವಕ ನನ್ನ ಕೆಲವು ಗ್ರಂಥಗಳನ್ನು ಪ್ರಕಟಿಸಿ ಉಪಕರಿಸಿದೆ. ನನಗೂ ಸೌಭಾಗ್ಯವತಿ ಡಾ || ಕಮಲಾ ಹಂಪನಾ ಅವರಿಗೂ ‘ನಾಡೋಜ, ಗೌರವ ಡಾಕ್ಟರೇಟ್ ಪ್ರಶಸ್ತಿ, ಇತ್ತು ಗೌರವಿಸಿದೆ. ಇದೀಗೆ ಈ ಪುಸ್ತಕವನ್ನು ಹೊರತರುವಲ್ಲಿ ಕುಲಪತಿ ಪ್ರೊ. ಎ. ಮುರಿಗೆಪ್ಪ ಮತ್ತು ಪ್ರಸಾರಾಂಗ ನಿರ್ದೇಶಕರಾದ ಪ್ರೊ. ಮೋಹನ ಕುಂಟಾರರು ಕಾರಣರು. ಅವರನ್ನು ಮತ್ತು ರಮೇಶ್ ಎನ್. ಜಿ. ರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ನಾಡೋಜ. ಪ್ರೊ. ಹಂಪನಾ