ಸಾಮಾಜಿಕ ಕಳಕಳಿ

‘ಪಪಂ’ರು ಹೇಳಿಕೇಳಿ ಪುರೋಹಿತ ಸಂಸಾರವಂದಿಗರು! ದೇವರ ಪೂಜೆ, ಸಂಧ್ಯಾವಂದನೆ, ಮಂತ್ರಪಠಣ-ಅವರ ವೃತ್ತಿವಿಧಾನ, ದೇವರು, ದೇವಸ್ಥಾನ, ಮಠ, ಮಠಾಧೀಶರು, ಧ್ಯಾನ, ಜಪತಪ-ಅವರ ಆಸಕ್ತಿ ಇರುವ ನಿಲ್ದಾಣಗಳು. ಆದರೆ ‘ಪಪಂ’ರು ಇದಕ್ಕೆ ಅಪವಾದ. ಅವರು ಪೂಜಾದಿಗಳನ್ನೂ ಪೌರೋಹಿತ್ಯವನ್ನು ಪಾಲಿಸಿದರೂ ಅಷ್ಟಕ್ಕೇ ವಿರಮಿಸಲಿಲ್ಲ. ಮಠಗಳ ಬೆನ್ನು ಹತ್ತಲಿಲ್ಲ. ಬದಲಾಗಿ ಅವರು ಸಾಮಾಜಿಕ ಸಂಗತಿಗಳಿಗೆ ಮುಗಿ ಬಿದ್ದರು, ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಹುಡುಕಿದರು. ಸಾಂಸ್ಕೃತಿಕ ಎಚ್ಚರವಿತ್ತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಸ್ತರದಲ್ಲಿ ಸಮಾಜೋಸಾಂಸ್ಕೃತಿಕ ಚಲನವಲನದ ವಾಹಿನಿಯಲ್ಲಿ ಕ್ರಿಯಾಶೀಲವಾಗಿ ಬೆರೆತರು.

೧. ೧೯೦೦ರಲ್ಲಿ ರಾಜಕುಮಾರಿ ಪ್ರತಾಪಕುಮಾರಿ ಬಾಯಿಯನ್ನು ರಾಜಕುಮಾರ ನಾಲ್ಮಡಿ ಕೃಷ್ಣರಾಜ ಒಡೆಯರ್ ಮದುವೆಯಾದರು. ಅರಮನೆಯಿಂದ ಮದುವೆಯ ಮಮತೆಯ ಕರೆಯೋಲೆ ಇವರಿಗೂ ಬಂದಿತ್ತು. ಕೂಡಲೆ ಇವರು ಸಂಸ್ಕೃತ ಪದ್ಯಮಾಲೆ ಆಶುಕವಿಯಾಗಿ ರಚಿಸಿ, ಕನ್ನಡದಲ್ಲಿ ತಾತ್ಪರ್ಯವಿತ್ತು, ರಾಜದಂಪತಿಗಳಿಗೆ ಶುಭ ಹಾರೈಸಿದರು.

೨. ೧೯೦೨ರಲ್ಲಿ ಲಂಡನ್ನಿನಲ್ಲಿ ನಾಲ್ಕನೆಯ ಎಡ್ವರ್ಡರ ಪಟ್ಟಾಭಿಷೇಕ ನಡೆಯಿತು. ಆ ವಿವಾಹದ ಲಗ್ನಪತ್ರಿಕೆ ‘ಪಪಂ’ರಿಗೂ ಬಂದಿತ್ತು. ತಕ್ಷಣವೆ ಸಂಸ್ಕೃತದಲ್ಲಿ ಮಂಗಳ ಆಶೀರ್ವಚನ ಶ್ಲೋಕಗಳನ್ನು ರಚಿಸಿ, ಅದಕ್ಕೆ ಇಂಗ್ಲೀಷಿನಲ್ಲಿ ಸಾರಾಂಶ ಬರೆದು ಕಳಿಸಿದರು:

ಶ್ರೀಮದ್ ರಾಜಾಧಿರಾಜ ಸಾರ್ವಭೌಮ ಸಪ್ತಮ
ಎಡ್ವರ್ಡ್ಚಕ್ರವರ್ತಿಗಳವರ ಕಿರೀಟೋತ್ಸವ, ೧೯೦೨.

ಸ್ವವಿವರವನ್ನು ಅತಿ ಸಂಗ್ರಹವಾಗಿ ಲಗತ್ತಿಸಿದರು: “In the country of Mysore, ruled by Krishnaraja odeyar Bahadur, lives the illustrious and revered scholar Rice Saheb (B.L. Rice). efficient in reading in. scriptions of Asohka. Bhardrabahu etc., I, Padmaraja Pandita of Jaina Brahamana caste, working in his (B.L. Rice’s) office. have narrated this coronation of Emperor edward 171. on Aungust 9th of 1902.”

ಮೇಲಿನ ಎರಡು ದೃಷ್ಟಾಂತಗಳು ಸ್ಪಷ್ಟಪಡಿಸುವುದಿಷ್ಟು- ‘ಪಪಂ’ರಿಗೆ ಮೈಸೂರು ಅರಮನೆಯ ಹಾಗೂ ದೆಹಲಿಯಲ್ಲಿದ್ದ ವೈಸರಾಯ್ ಕಚೇರಿಯೊಂದಿಗೆ ಸಂಪರ್ಕವಿತ್ತು. ೧೮೯೫ರಲ್ಲಿ ಮೈಸೂರು ದೊರೆ ಚಾಮರಾಜ ಒಡೆಯರು ಅಕಾಲ ಮರಣ ಹೊಂದಿದರು. ಅವರ ಮಗ ನಾಲ್ಮಡಿ ಕೃಷ್ಣರಾಜ ಒಡೆಯರು ಚಿಕ್ಕ ಮಗು. ಆಗ ಚಾಮರಾಜ ಒಡೆಯರ ಮಡದಿ ಮಹಾರಾಣಿ ಕೆಂಪರಾಜಮ್ಮಣ್ಣಿ ವಾಣಿವಿಲಾಸರು (೧೮೬೬-೧೯೩೪) ಆಡಳಿತ ನಿರ್ವಹಿಸಿದರಲ್ಲದೆ ಅನೇಕ ದೇವಾಲಯ ಜೀರ್ಣೋದ್ಧಾರ ಕಾರ್ಯಕೈಗೂಡಿಸಿದರು. ಮಹಾರಾಣಿಯವರು ‘ಪಪಂ’ರನ್ನು ಮೈಸೂರು ಅರಮನೆಯ ಒಬ್ಬ ಹಿತೈಷಿಯಾಗಿರುವುದನ್ನು ಅರಿತವರಲ್ಲದೆ ಒಬ್ಬ ಘನ ವಿದ್ವಾಂಸರೆಂದೂ ಬಲ್ಲವರಾಗಿದ್ದರು. ಮೈಸೂರಿನ ಕೋಟೆ ಶಾಂತೀಶ್ವರ ಜಿನಾಲಯದ ಜೀರ್ಣೋದ್ಧಾರಕ್ಕೆ ಮಹಾರಾಣಿಯವರ ಸಹಾಯ ಸಹಕಾರವನ್ನು ‘ಪಪಂ’ರು ಕೋರಿದಾಗ ಮಹಾರಾಣಿ ಕೆಂಪನಂ ಜಮ್ಮಣ್ಣಿಯವರು ಒಪ್ಪಿನೆರವು ನೀಡಿದರು.

‘ಪಪಂ’ರಿಗೆ ಕಲ್ಪನಾಶ್ರೀಯೊಂದಿಗೆ ಮುನ್ನೋಟವಿತ್ತು. ಪ್ರಾಚೀನ ಶಾಸ್ತ್ರಗ್ರಂಥಗಳ ಪುನರುಜ್ಜೀವನವನ್ನು ತಕ್ಷಣ ಕೈಗೊಳ್ಳಬೇಕಾದ ಅನಿವಾರ್ಯತೆ ಪ್ರಾಪ್ತವಾಗಿರುವುದನ್ನು ಮನಗಂಡರು. ಓಲೆಗರಿ ಕಾಲ ಮುಗಿದು ಕಾಗದದ ಕಾಲ ಆಗ ಬಂದಿತ್ತು. ಶಾಲೆಗಳು ಅನೇಕ ಊರುಗಳಲ್ಲಿ ಪ್ರಾರಂಭವಾಗಿದ್ದುವು. ಜನ ಓದು ಬರೆಹ ಬಲ್ಲವರಾಗ ತೊಡಗಿದ್ದರು. ಆಧುನಿಕತೆಯ ಗಾಳಿ ಬಿಸುತ್ತಿತ್ತು. ದೊಡ್ಡ ನಗರಗಳಲ್ಲಿ ಇಂಗ್ಲಿಷಿನ ಬಳಕೆ ಆರಂಭವಾಗಿ ಮುಂಬರುವ ದಿನಗಳಲ್ಲಿ ಅದು ಬಲವಾಗಿ ಹಬ್ಬ ದಾಂಗುಡಿಯಿಡುವ ಕಣ್‌ಸನ್ನೆಯಿತ್ತು. ಈ ಮಾರ್ಪಾಟುಗಳ ನೆರಳು ಜೈನ ಸಮಾಜದ ಮೇಲೂ ಬಿದ್ದಿತ್ತು. ಎಲ್ಲೆಡೆ ಸಂಭವಿಸುತ್ತಿದ್ದ ಸಾಮಾಜಿಕ, ಶೈಕ್ಷಣಿಕ ಪಲ್ಲಟಗಳ ಪ್ರಭಾವಗಳಿಗೆ ಜೈನ ಸಮಾಜ ತೆರೆದು ಕೊಳ್ಳ ಬೇಕಾಗಿತ್ತು. ಇದನ್ನು ಸರಿಯಾಗಿ ಅರಿತು ತಕ್ಕ ಅಗತ್ಯಗಳನ್ನು ಪೂರೈಸಲು ಸಜ್ಜಾದರು. ‘ಪಪಂ’ರು ಜೈನ ಸಮಾಜ ಆಧುನಿಕತೆಯ ಹೊಸ್ತಿಲಲ್ಲಿ ಇರುವಾಗ ಪಪರಂರೆಯ ಅರಿವಿನ ಕೊಂಡಿ ಕಳಚದಂತೆ ನೋಡಿಕೊಳ್ಳಲು ಮುಂದಾಳುವಾಗಿ ನಿಂತರು. ಜಿನವಾಣಿಯ ಸ್ರೋತ ಅಚ್ಯುತವಾಗಿ ಹೊಸಕಾಲದ ವಾಹಿನಿಗೆ ಸೇರಿಸುವ ಪ್ರಕ್ರಿಯೆಯನ್ನು ಚಾಲನೆಗೊಳಿಸಿದರು. ಜೈನ ವಾಙ್ಮಯ ಪ್ರಕಟನಯುಗದ ಬಾಗಿಲು ತೆರೆದರು. ಗ್ರಂಥಗಳನ್ನು ಓದುವ, ಕೊಳ್ಳುವ ಸದಭಿರುಚಿಯ ಶೈಕ್ಷಣಿಕ ಪರಿಸರವನ್ನು ನಿರ್ಮಿಸಿದರು.

ಗ್ರಂಥಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಅಲ್ಲದೆ ಪ್ರಾಕೃತ, ಸಂಸ್ಕೃತ ಭಾಷೆಗಳಲ್ಲಿದ್ದ ಪುಸ್ತಕಗಳನ್ನು ಓದಲು ಭಾಷಾಜ್ಞಾನದ ಅಗತ್ಯವಿತ್ತು. ಆ ಭಾಷೆಗಳ ಕೃತಿಗಳನ್ನು ಕನ್ನಡ ಅನುವಾದ ಸಹಿತ ಕೊಡುವ ಕೆಲಸವನ್ನೂ ‘ಪಪಂ’ರು ಮಾಡಿದರು. ಸಾಮಾನ್ಯ ಓದು ಬರೆಹ ಬಲ್ಲವರಿಗೂ ಮೂಲಗ್ರಂಥಗಳ ತಿಳಿವಳಿಕೆಗೆ ಸಹಾಯ ಮಾಡಿದರು. ಜೈನ ಭಂಡಾರಗಳಲ್ಲಿ, ಮಠ-ಮಂದಿರಗಳ ಶ್ರುತಭಂ ಡಾರಗಳಲ್ಲಿ, ಕೆಲವು ಗೃಹಸ್ಥರ ಮನೆಗಳಲ್ಲಿ ಪ್ರಾಚೀನ ಓಲೆಗರಿ ಹಸ್ತ ಪ್ರತಿಳಿದ್ದುವು. ಅವು ಎಲ್ಲರಿಗೂ ಎಟುಕುತ್ತಿರಲಿಲ್ಲ. ‘ಪಪಂ’ರು ಈ ದಿಶೆಯಲ್ಲಿ ಯಾವ ಬಗೆಯ ಉತ್ತಮ ಕಾರ್ಯಮಾಡಿದರು ಎಂಬುದನ್ನು ವಿವರವಾಗಿ ಮನಗಾಣಬೇಕು.

ಸಾಹಿತ್ಯಕ ಪತ್ರಿಕೆಗಳು

ಸಾಳ್ವಕವಿಯ (೧೪೮೫) ನೇಮಿನಾಥಪುರಾಣ(ಸಾಳ್ವಭಾರತ) ಪ್ರಸಿದ್ಧ ಕಾವ್ಯ. ಆತ ಬರೆದಿರುವ ರಸರತ್ನಾಕರ ಎಂಬ ಹೆಸರಿನ ಅಲಂಕಾರ ಶಾಸ್ತ್ರ ಗ್ರಂಥವನ್ನು ಮೊಟ್ಟ ಮೊದಲು ಮುದ್ರಣ ಮಾಡಿದವರು ‘ಪಪಂ’ರು. ೧೮೯೨ರಲ್ಲಿ ಅವರು ತಮ್ಮ ಬುಧಜನ ಮನೋರಂಜಿನಿ ಎಂಬ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ತಿಂಗಳ ಪತ್ರಿಕೆಯನ್ನು ೧೮೯೦ರಲ್ಲಿ ಪ್ರಾರಂಭಿಸಿದ್ದರು. ಕನ್ನಡದಲ್ಲಿಯೂ (೧೮೯೦) ಸಂಸ್ಕೃತದಲ್ಲಿಯೂ ಅವರು ಮಾಸಿಕ ಪತ್ರಿಕೆಯನ್ನು ಆರಂಭಿಸಿ ನೂತನ ಪ್ರಯೋಗ ಪುರುಷರೆನಿಸಿದರು. ಅವರು ಓದುಗರೊಂದಿಗೆ ಸಂವಾದ ನಡೆಸುತ್ತಿದ್ದುದು ತಮ್ಮ ಪತ್ರಿಕೆ ಮತ್ತು ಪುಸ್ತಕಗಳ ಮೂಲಕ.

ಸಟೀಕಾಸ್ಮೃತಿ ಸಂಗ್ರಹ (೧೮೮೮) ಪುಸ್ತಕ ಪ್ರಕಟಿಸಿದಾಗ ಅದರ ಪೀಠಿಕೆಯಲ್ಲಿ “ಓದುಗರಲ್ಲಿ ವಿನಂತಿ” ಹೀಗಿದೆ: ಸಂಸ್ಕೃತ ಗ್ರಂಥಗಳ ಪ್ರಕಟಣೆಗೆ ಮೀಸಲಾದ ಮಾಸಿಕ ಪತ್ರಿಕೆ ಜಿನಕಲ್ಪದ್ರುಮ. ಇದನ್ನು ಬಾಲ ಬಂಧು ವಿನ್ಯಾಸದ (ಟೈಪಿನಲ್ಲಿ) ಮೊಳೆಯಕ್ಷರದಲ್ಲಿ ಆಗಸ್ಟ್ ೧೮೯೧ರಿಂದ ಪ್ರಾರಂಭವಾಗುವ ಸಂಚಿಕೆಗಳನ್ನು ಮುದ್ರಿಸುತ್ತೇನೆ. ಈ ತಿಂಗಳ ಪತ್ರಿಕೆ ಸಂಚಿಕೆಗಳು ಜೈನ ಚಂಪೂ ಕಾವ್ಯ, ನಾಟಕ, ಅಲಂಕಾರ ಶಾಸ್ತ್ರ, ತರ್ಕ ಶಾಸ್ತ್ರ ಗ್ರಂಥಗಳನ್ನು ಒಳಗೊಂಡಿರುತ್ತವೆ. ಒಳ್ಳೆಯ ಬಾಳಿಕೆಯಿರುವ ಕಾಗದದಲ್ಲಿ ಅಚ್ಚಿಸುತ್ತೇವೆ. ೩೨ ಪುಟಗಳಿಗೂ ಹೆಚ್ಚುಪುಟಗಳು ಪ್ರತಿ ತಿಂಗಳ ಸಂಚಿಕೆಯಲ್ಲಿರುತ್ತವೆ. ಆಗಸ್ಟ್ ಸಂಚಿಕೆಯಿಂದ ವಾರ್ಷಿಕ ಚಂದಾದರ ಮೂರುರೂಪಾಯಿಯಿದ್ದು ಅಂಚೆ ಹಾಸಲು ವೆಚ್ಚ ಪ್ರತ್ಯೇಕ.” ಪ್ರಾಚೀನ ಗ್ರಂಥಗಳ ಪ್ರಕಟಣೆಗೆ ಮೊದಲ ಮಣೆ ಹಾಕಿದ್ದೇಕೆ ಎಂಬುದನ್ನು ಹೀಗೆ ಬಿನ್ನೈಸಿದ್ದಾರೆ. : “ಹಲವು ನೂರು ವರ್ಷಗಳ ಹಿಂದೆ ಬರೆಯಲಾದ ತಾಳೆಗರಿ ಗ್ರಂಥಗಳು ಈಗ ಮುಕ್ಕಾಗುತ್ತಿವೆ. ಅವುಗಳ ಬಾಳಿಕೆಗಿದ್ದ ಕಾಲಮಿತಿ ಮುಗಿದು ಮುರಿದು ಹೋಗುತ್ತಿವೆ. ಇನ್ನು ಅವನ್ನು ಮನೆಗಳಲ್ಲಿಟ್ಟು ಕಾಪಾಡುವುದೂ ಕಷ್ಟ. ಅಲ್ಲದೆ ಅಪರೂಪದ ಹಸ್ತ ಪ್ರತಿಗಳಿರುವವರು ಅವನ್ನು ಬೇರೆಯವರಿಗೆ ಕೊಡಲು ಒಪ್ಪರು, ಇಂತಹ ಅಡ್ಡಿಗಳಿರುವ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಹಿತ್ಯಪ್ರೇಮಿಗಳಿಂದ ಕೆಲವುಹಸ್ತಪ್ರತಿ ಸಂಗ್ರಹಿಸಿದ್ದೇನೆ” [ಜಿನ ಕಾವ್ಯ ಕಲ್ಪದ್ರುಮ, ೧೮೯೧].

ಜಿನಕಾವ್ಯ ಕಲ್ಪದ್ರುಮ ಪತ್ರಿಕೆಯಲ್ಲದೆ ಕಾವ್ಯಾಂಬುಧಿ ಹೆಸರಿನ ಮತ್ತೊಂದು ಮಾಸಿಕವನ್ನು ಪ್ರಾರಂಭಿಸಿದರು. ಇದೂ ಸಹ ಸಂಸ್ಕೃತ ಕಾವ್ಯಗಳ ಧಾರವಾಹಿ ಪ್ರಕಟಣೆಗೆ ಮೀಸಲಾದ ತಿಂಗಳ ಪತ್ರಿಕೆ. ಈ ಮಾಸಿಕದ ೧೮೯೩ ಸಂಚಿಕೆಗಳೊಂದರಲ್ಲಿತಮ್ಮ ತಂದೆಯ ಹೆಸರಿನವರೇ ಆದ ಇನ್ನೊಬ್ಬ ಪ್ರಾಚೀನ ಬ್ರಹ್ಮಸೂರಿ ಪಂಡಿತರು ಬರೆದ ಜ್ಯೋತಿಃ ಪ್ರಭಾ ಕಲ್ಯಾಣ (೧೩೯೦) ಎಂಬ ಸಂಸ್ಕೃತ ನಾಟಕವನ್ನು ಪ್ರಕಟಿಸಿದರು. ಆ ಬ್ರಹ್ಮಸೂರಿ ಪಂಡಿತರು ವಿದ್ವದ್ ಸಂಸಾರವಾದ ಹಸ್ತಿಮಲ್ಲ ನಾಟ್ಯಾಚಾರ್ಯರ ವಂಶಾವಳಿಗೆ ಸೇರಿದವರು. ಅಮಿತತೇಜ ಮತ್ತು ಜ್ಯೋತಿಃ ಪ್ರಭಾ ಎಂಬುವರ ಕಥೆ ಶಾಂತಿನಾಥ ತೀರ್ಥಂಕರರ ಕಾಲದವಸ್ತು ಮತ್ತು ಜಿನರ ಹಿಂದಿನ ಭವಾವಳಿಗೆ ಸಂಬಂಧಿಸಿದ್ದು.

ಅಂದಿನ ಹಳೆಯ ಮೈಸೂರು ಸಂಸ್ಥಾನದ ಸರ್ಕಾರ ಈ ವಿದ್ವದ್ ಪತ್ರಿಕೆಗಳ ಮೌಲಿಕತೆ-ಉಪಯುಕ್ತತೆಯನ್ನುಅರಿತು ಪ್ರೋತ್ಸಾಹಿಸಿತು. ಎಪ್ರಿಲ್ ೧೮೯೪ರ ಗೆಜೆಟ್ಟಿನಲ್ಲಿ ಈ ಪತ್ರಿಕೆ ಚಂದಾಹಣವನ್ನು ಮುಂಗಡವಾಗಿ ಕಳಿಸಲು ಸರ್ಕಾರ ಒಪ್ಪಿಗೆ ನೀಡಿರುವುದನ್ನು ವರದಿಮಾಡಿದೆ. ತಲಾಮೂರು ರೂಪಾಯಿ ಪ್ರಕಾರ ೩೩ ಸಂಪುಟಗಳಿಗೆ ಚಂದಾ ಕಟ್ಟಲು ಆದೇಶಿಸಿದೆ. ಬೆಂಗಳೂರಿನ ಶ್ರೀ ಭಾರತೀ ಭವನ ಪ್ರೆಸ್ಸಿನಲ್ಲಿ ಅಚ್ಚಾಗುವ ಕಾವ್ಯಾಂಬುಧಿ ಪತ್ರಿಕೆಯ ೩೩ ಪತ್ರಿಕೆಗಳ ವಾರ್ಷಿಕ ಚಂದಾ ಒಟ್ಟು ೯೯ ರೂಪಾಯಿ!

ಜೈನಧರ್ಮ ಸಂಬಂಧದ ಪುಸ್ತಕಗಳ ಪ್ರಕಟಣೆಗೆಂದೇ ಒಂದುಪ್ರಕಾಶನ, ಜಿನಮತ ಪ್ರಕಾಶಿತಎಂಬುದನ್ನು ಪ್ರಾರಂಭಿಸಿದರು. ಈ ಅನನ್ಯ ಪ್ರಕಾಶನದ ಮೂಲಕ ಧಾರ್ಮಿಕ, ಲೌಕಿಕ ಗ್ರಂಥಗಳು ವರಸೆಯಾಗಿ ಅಚ್ಚಾಗಿ ಹೊರಬಂದುವು. ಕರಡು ತಿದ್ದಿ. ಕ್ಯಾಲಿಕೊ, ಅರ್ಧಕ್ಯಾಲಿಕೊ ಬೈಂಡಿಂಗ್, ಸೆಕ್ಷನ್ ಸ್ಟಿಚಿಂಗ್,-ಮುಂತಾದ ಮುದ್ರಣ ವಿಚಾರಗಳಲ್ಲಿ ವೈಯಕ್ತಿಕ ನಿಗಾವಹಿಸಿದರು.

ಜಿನಮತ ಪ್ರಕಾಶಿಕಾ ಗ್ರಮಥಮಾಲೆಯಲ್ಲಿ ಒಟ್ಟು ಕೆಳಕಂಡ ನಾಲ್ಕು ಮಾಸಿಕ ಪತ್ರಿಕೆಗಳಿದ್ದವು-

೧೮೯೦-೯೪ ಬುಧಜನ ಮನೋರಜನೀ, ಕನ್ನಡ
೧೮೮೫ ಸುಬೋಧ ಸಂಜೀವಿನೀ, ಮಾಸಿಕ ವಾರ್ತಾ ಪತ್ರಿಕೆ,
ಜನವರಿ ೧೮೮೯ರಿಂದ ಮತ್ತೆ ಮುಂದುವರಿಸಿದರು.
೧೮೯೧ ಜಿನಕಾವ್ಯಕಲ್ಪದ್ರುಮ, ಸಂಸ್ಕೃತ ಮಾಸಿಕ
೧೮೯೩-೯೪ ಕಾವ್ಯಾಂಬುಧಿ, ಸಂಸ್ಕೃತಿ ಮಾಸಿಕ

ಈ ಪತ್ರಿಕೆಗಳು ಬಲ್ಲಿದರ ಅಕ್ಕರೆ ಗಳಿಸಿದದುವು. ಕ್ಯಾಟಲೊಗಸ್ ಕ್ಯಾಟಲೊಗೊರುಮ್ ಎಂಬ ಹಸ್ತಪ್ರತಿಸೂಚಿ ಮಹಾಗ್ರಂಥದಲ್ಲಿ ಪ್ರೊ.ವಿ. ರಾಘವನ್ ಕಾವ್ಯಾಂಬುಧಿ ಸಂಸ್ಕೃತ ಮಾಸಪತ್ರಿಕೆಯನ್ನು ಪ್ರಸ್ತಾಪಿಸಿದ್ದಾರೆ. ಅವರು ‘ಹದಿನಾಲ್ಕು-ಹದಿನೈದನೆಯ ಶತಮಾನದ ಅಜಿತ ಸೇನ ಮುನಿಯ ಅಲಂಕಾರ ಚಿಂತಾಮಣಿ ಗ್ರಂಥವು ಕಾವ್ಯಾಂಬುಧಿ ಪತ್ರಿಕೆಯಲ್ಲಿ ಅಚ್ಚಾಗಿದೆ’ ಎಂದು ದಾಖಲಿಸಿದ್ದಾರೆ. ‘ಹಿಸ್ಟರಿ ಆಫ್ ಅಲಂಕಾರ’ ಪುಸ್ತಕ ಅಭ್ಯಾಸ ಸೂಚಿಯಲ್ಲಿ ಪಿ. ವಿ. ಕಾಣೆಯವರು ಕೂಡ ಇದೇ ಗ್ರಂಥವನ್ನೂ ಪತ್ರಿಕೆಯನ್ನೂ ಹೆಸರಿಸಿದ್ದಾರೆ. ಪ್ರೊ. ಡಿ.ಎಲ್.ನರಸಿಂಹಾಚಾರ್ ಅವರಿಗೆ ಅರ್ಪಿಸಿದ ಉಪಾಯನ ಎಂಬ ಸಂಭಾವನ ಗ್ರಂಥದಲ್ಲಿ (೧೯೬೭) ಡಾ. ಕೆ. ಕೃಷ್ಣಮೂರ್ತಿಯವರು ಬರೆದಿರುವ ಲೇಖನದಲ್ಲಿ (‘ಅಜಿತಸೇನ: ಅಲಂಕಾರ ಚಿಂತಾಮಣಿ’) ಕಾವ್ಯಾಂಬುಧಿ ಪತ್ರಿಕೆಯನ್ನು ಉಲ್ಲೇಖಿಸಿದ್ದಾರೆ (ಪು.೪೮-೪೯). ಹೀಗೆ ‘ಪಪಂ’ರ ಪ್ರಯತ್ನ ಹಿರಿಯ ವಿದ್ವಾಂಸರ ಗಮನ ಸೆಳೆದಿತ್ತು. ಅವರ ಸಾಹಸಗಳು ಉಪಾದೇಯವಾಗಿದ್ದುವು. ಬುಧಜನ ಮನೋರಂಜನಿ-ಎಂಬುದು ಕನ್ನಡ ಗ್ರಂಥಗಳನ್ನು ಧಾರವಾಹಿಯಾಗಿ ಅಚ್ಚಿಸುತ್ತಿದ್ದ ಕನ್ನಡ ಮಾಸಿಕ. ಅಭಿಜಾತ ಕವಿ ಜನ್ನನ(೧೨೩೫) ಯಶೋಧರಚರಿತೆ ಮೊಟ್ಟಮೊದಲು ಮುದ್ರಣ ರೂಪದಲ್ಲಿ ಹೊರಬಂದದ್ದು ಈ ಬುಧಜನ ಮನೋರಂಜನಿ ಪತ್ರಿಕೆಯಲ್ಲಿ (ಸಂಪುಟ ೮:ಪು. ೨೧-೨೪), ನಾಲ್ಕು ಪತ್ರಿಕೆಗಳಲ್ಲದೆ ಐದನೆಯ ಇನ್ನೊಂದು ಪತ್ರಿಕೆಯಾಗಿ ಸುಬೋಧ ಸಂಜೀವಿನೀಯನ್ನು ಪ್ರತಿ ತಿಂಗಳು ಪೌರ್ಣಮಿಯಂದು ಪ್ರಕಟಿಸಲು ತೀರ್ಮಾನಿಸಿ ಅದಕ್ಕೆ ವರ್ಷಕ್ಕೆ ಒಂದು ರೂಪಾಯಿ ಚಂದಾ ಎಂದೂ ನಿಗದಿ ಪಡಿಸಿದರು. ಆದರೆ ಆ ಪತ್ರಿಕೆ ಅಲ್ಪಾಯಿಷಿ ಆಯಿತು! ಅದರ ಒಂದು ಸಂಚಿಕೆಯಲ್ಲಿ ‘ನಮ್ಮ ಚಂದಾದಾರರಲ್ಲಿ ಒಂದು ನೂರು ಪ್ರತಿಗಳನ್ನು ಕೊಳ್ಳಲು ಯಾರಾದರೂ ಸಿದ್ಧವಿದ್ದರೆ ಅವರು ಬಯಸುವ ಪುಸ್ತಕವನ್ನು ಮುದ್ರಿಸಿ ಕೊಡುತ್ತೇವೆ’ ಎಂದೂ ನಿವೇದಿಸಿದ್ದಾರೆ. ಈ ಬಗೆಯ ನಿವೇದನೆಗಳು ಅವರು ಎಷ್ಟೆಷ್ಟು ಬಗೆಯಲ್ಲಿ ಆಲೋಚಿಸುತ್ತಿದ್ದರೆಂಬುದಕ್ಕೆ ಸಾಕ್ಷಿ.

ಮುದ್ರಣಾಲಯಗಳು

ಹತ್ತೊಂಬತ್ತನೆಯ ಶತಮಾನದಲ್ಲಿ, ಹಳೆಯ ಮೈಸೂರು ರಾಜ್ಯದಲ್ಲಿ ಇದ್ದ ಮುದ್ರಣಾಲಯಗಳು:

೧. ಬುದ್ದಂಗುಡಿ ನಾರಾಯಣಯ್ಯರ್ ಸತ್ಸಂಪ್ರದಾಯ ಕಳಾನಿಧಿ ಮುದ್ರಾಕ್ಷರ ಶಾಲೆ, ಬೆಂಗಳೂರು(ಕಳಾನಿಧಿ ಪ್ರೆಸ್)
೨. (ಕಾಮಣ್ಣ)ವಾಗೀಶ್ವರೀ ಮುದ್ರಾಕ್ಷರ ಶಾಲೆ, ಬೆಂಗಳೂರು
೩. ವಿಚಾರ ದರ್ಪಣ ಮುದ್ರಾಕ್ಷರ ಶಾಲೆ, ಬೆಂಗಳೂರು ೧೮೬೩
೪. ಹರಿರಾಂ ಮಿಸ್ಸರ್ ಟಾನ್ ಮುದ್ರಾಕ್ಷರ ಶಾಲೆ, ಮೈಸೂರು
೫. ವಾಣಿವಿಲಾಸ ಪ್ರೆಸ್, ಮೈಸೂರು
೬. ಕನ್ನಕಾಪರಮೇಶ್ವರಿ ಪ್ರೆಸ್, ಮೈಸೂರು
೭. ಸನಾತನ ಧರ್ಮಪ್ರಚಾರ ಮುದ್ರಾಲಯ, ಮಂಡ್ಯ

ತಮ್ಮ ಸ್ವಕೀಯ ಭಾರತೀ ಭವನ ಪ್ರಿಂಟಿಂಗ್ ಪ್ರೆಸ್ಸನ್ನು ಪ್ರಾರಂಭಿಸುವ ಪೂರ್ವದಲ್ಲಿ ಅವರು ಮೇಲ್ಕಂಡ ಮುದ್ರಾಣಾಲಯಗಳಲ್ಲಿ (ಕಡೆಯದನ್ನು ಬಿಟ್ಟು) ಪ್ರಿಂಟು ಮಾಡಿಸುತ್ತಿದ್ದರು. ತರುವಾಯ ೧೮೬೯ರಲ್ಲಿ ತಮ್ಮ ಸ್ವಂತದ್ದಾದ ಭಾರತೀ ಭವನ ಮುದ್ರಾಕ್ಷರ ಶಾಲೆಯನ್ನು ಬೆಂಗಳೂರಿನ ಸುಲ್ತಾನ ಪೇಟೆಯಲ್ಲಿ ತೆರೆದರು ಮತ್ತು ಇದನ್ನು ಮಲ್ಲೇಶ್ವರಂ ಬಡಾವಣೆಗೆ ಸ್ಥಳಾಂತರಿಸಿದರು, ಅಲ್ಲಿ ಸ್ವಂತ ಮನೆ ಕಟ್ಟಿಸಿದ್ದರು. ಇಡೀ ದಕ್ಷಿಣ ಭಾರತದಲ್ಲಿ ಖಾಸಗಿ ಪ್ರೆಸ್‌ ಪ್ರಾರಂಭಿಸಿದ ಮೊದಲ ಜೈನ ಉದ್ಯಮಿಗಳಲ್ಲಿ ಒಬ್ಬರೆನಿಸಿದರು. ೧೮೯೪ರಿಂದ ಪ್ರೆಸ್ಸಿನ ಹೆಸರನ್ನು ಭಾರತೀ ಭವನ ಪ್ರೆಸ್ ಎಂದು ಮಾರ್ಪಡಿಸಿದರು. ಹೀಗೆ ತಮ್ಮದೇ ಆದ ಒಂದು ಮುದ್ರಣಾಲಯವೂ ಇದ್ದುದರಿಂದ ಬೇಗ ಬೇಗ ಪುಸ್ತಕಗಳನ್ನು ಹೊರತರಲು ಅನುಕೂಲವಾಯಿತು. ನೂರಾರು ಪುಸ್ತಕಗಳನ್ನು ಪ್ರಕಟಿಸಿ ಅಂದಿನ ಮೈಸೂರು ಸಂಸ್ಥಾನದಲ್ಲಿಯೇ ಪ್ರಮುಖ ಪ್ರಕಾಶಕರೆಂದು ದೊಡ್ಡ ಹೆಸರು ಪಡೆದರು.

ಸ್ವಾರಸ್ಯವೆಂದರೆ ಇದೇ ಇಂದ್ರವರ್ಗಕ್ಕೆ (=ಜೈನ ಬ್ರಾಹ್ಮಣ) ಸೇರಿದ ತೋವಿನಕೆರೆ ರಾಯಂಣವಾಗ್ಮಿ ಎಂಬ ಇನ್ನೊಬ್ಬ ಸಮಕಾಲೀನ ಪ್ರತಿಭಾಶಾಲಿಯೂ ಬೆಂಗಳೂರಲ್ಲಿ ನೆಲಸಿದ್ದರು. ಭಾಷಣಕ್ಕೆ ನಿಂತರೆ ಅಸ್ಖಲಿತ ವಾಗ್ಝರಿ ಹರಿಸುತ್ತಿದ್ದ ಕಾರಣ ಅವರಿಗೆ ಸಮಾಜ ‘ವಾಗ್ಮಿ’ ಎಂಬ ಬಿರುದಿತ್ತು ಗೌರವಿಸಿತ್ತು. ರಾಯಂಣವಾಗ್ಮಿಯೂ ಪ್ರಕಾಶರಾಗಿದ್ದರು. ಬ್ರಹ್ಮಾಣಾಂಕ (ಚಂದ್ರಸಾಗರವರ್ಣಿ) ಕವಿ ವಿರಚಿತ ಜಿನಮುನಿ ಕಾವ್ಯವನ್ನು ೧೮೮೬ರಲ್ಲೂ, ಜಿನಭಾರತ ಎಂಬ ಕಾವ್ಯವನ್ನು ೧೮೮೭ರಲ್ಲೂ ಪ್ರಕಾಶಿಸಿದ್ದರು. ಇವಲ್ಲದೆ ದೇವೋತ್ತಮ ಕವಿಯ ನಾನಾರ್ಥ ರತ್ನಾಕರ ಕೃತಿಯನ್ನು ೧೮೮೩ರಲ್ಲೂ, ಶಬ್ದರತ್ನಾಕರವನ್ನು ೧೮೮೩ರಲ್ಲೂ ಧನಂಜಯ ನಿಘಂಟುವನ್ನು ೧೮೮೯ರಲ್ಲೂ, ವೃತ್ತವಿಲಾಸ ಕವಿಯ ಧರ್ಮಪರೀಕ್ಷೆ ಕಾವ್ಯಕ್ಕೆ ವ್ಯಾಖ್ಯಾನಗ್ರಂಥವನ್ನು ೧೮೯೦ರಲ್ಲೂ ಅಷ್ಟಾಂಗನಿ ಘಂಟನ್ನು ೧೪೮೯೮ರಲ್ಲೂ ಪ್ರಕಟಿಸಿದ್ದರು. ಮತ್ತೂ ಕುತೂಹಲದ ವಿಷಯವೆಂದರೆ ‘ಪಪಂ’ರು ಪ್ರಾರಂಭದಲ್ಲಿ ಮುದ್ರಿಸುತ್ತಿದ್ದ ಬೆಂಗಳೂರಿನ ವಾಗೀಶ್ವರಿ ಮುದ್ರಾಕ್ಷರಶಾಲೆ ಮತ್ತು ವಿಚಾರ ದರ್ಪಣ ಮುದ್ರಾಕ್ಷರ ಶಾಲೆಯಲ್ಲಿಯೇ ತೋವಿನಕೆರೆ ರಾಯಂಣವಾಗ್ಮಿಯೂ ತಮ್ಮ ಪ್ರಕಾಶನದ ಪುಸ್ತಕಗಳನ್ನು ಮುದ್ರಿಸುತ್ತಿದ್ದರು! [ಹಂಪನಾ, ಶಿವಣ್ಣ(ಸಂಪಾದಕರು): ಚಂದ್ರಸಾಗರ ವರ್ಣಿಯ ಕೃತಿಗಳು: ೧೯೮೧].

ಇದಲ್ಲದೆ ಇನ್ನೂ ಸ್ವಾರಸ್ಯದ ವಿಷಯವಿದೆ. ತೋವಿನಕೆರೆ ರಾಯಂಣ ವಾಗ್ಮಿಯೂ ‘ಪಪಂ’ರೂ ಗೆಳೆಯರಾಗಿದ್ದರು. ರಾಯಂಣವಾಗ್ಮಿಯೂ ಹಳೆಗನ್ನಡ ಸಾಹಿತ್ಯದ ಅಧ್ಯಯನ ನಡಸಿದ್ದರು. ೧೮೮೪ರಲ್ಲಿ ದ್ವಾದಶಾನುಪ್ರೇಕ್ಷೆ ಯೆಂಬ ಗ್ರಂಥವನ್ನು ವಿಚಾರದರ್ಪಣ ಮುದ್ರಾಕ್ಷರ ಶಾಲೆಯಲ್ಲಿ ಮುದ್ರಿಸಿಕೊಟ್ಟ ವಿವರ ಲಭ್ಯವಿದೆಃ

“ದ್ವಾದಶಾನುಪ್ರೇಕ್ಷೆಯೆಂಬ ಗ್ರಂಥವು, ಸ್ವಾಮಿ ದಿವ್ಯಧ್ವನಿಯಿಂದ ಲೋಕೋಪಕಾರಾರ್ಥಮಾಗಿ ಅಪ್ಪಣೆಕೊಡಿಸಿದಂಥಾದನ್ನು ಗಣಧರರು ಭವ್ಯ ಜನಗಳಿಗೆ ಉಪದೇಶ ಮಾಡಿದ ಸಂಗತಿ ಸಂಸ್ಕೃತ ಪ್ರಾಕೃತದಲ್ಲಿ ಇದ್ದಂಥಾದ್ದನ್ನು ಪೂರ್ವದಲ್ಲಿ ಮಹಾಕವಿಗಳಿಂದ ಕನ್ನಡದಲ್ಲಿ ವಿರಚಿತಮಾದ ಈ ಪ್ರೇಕ್ಷೆಯು ಮಹಾ ತತ್ವವಿಚಾರ ಶೋಭಿತಮಾಗಿಯೂ ಸ್ವರ್ಗಾದಿಭೋಗಗಳು, ಚಕ್ರವರ್ತಿ ಐಶ್ವರ್ಯಗಳು ಮೋಕ್ಷಮಾರ್ಗೋಪದೇಶ ಸಹಾ ಉಪದೇಶಿಸುವಂಥಾದ್ದಾಗಿಯೂ, ಪರಮಾತ್ಮ ಜ್ಞಾನಾಭಿವೃದ್ಧಿಯಂ ವೈರಾಗ್ಯೋಪದೇಶ ಮೊದಲಾದ ಧರ್ಮಾಧರ್ಮ ಯೋಗಾದಿಗಳಂ ಸಮಸ್ತಜನಗಳಿಗೂ ತಿಳಿಸುವ ಈ ಅಭೇದ ಸಿದ್ಧಾಂಥವಂ ಬೆಂಗಳೂರಲ್ಲಿರುವ ಶ್ರೀಮದರ್ಹ ತ್ಪರಮೇಶ್ವರ ಚರಣಾರಾಧಕ ತೋವಿನಕೆರೆ ರಾಯಂಣವಾಗ್ಮಿಯಿಂ ಪರಿಷ್ಕರಿಸಲಪಟ್ಟು ಬೆಂಗಳೂರಲ್ಲಿ ಇರುವ ಅರ್ಹನ್ಮಥಸ್ಥರಾದ ಪಾತ್ರೆ ಅಂಗಡಿ ಬ್ರಹ್ಮಯ್ಯನವರಿಗೂ ಡಿಟೊರಾಯಂಣವಾಗ್ಮಿ ಇವರುಗಳಿಗಾಗಿಯೂ ಮೊದಲನೇ ಛಾಪೆ ೧೦೦೦ ಪ್ರತಿಗಳು ಮುದ್ರಿಸಲ್ಪಟ್ಟಿತು” (೧೮೮೯). ಇದು ಅವರ ಮೊದಲನೆಯ ಪ್ರಯತ್ನವಾಗಿದ್ದು ಮುಂದಿನ ಪ್ರಕಟಣೆಗಳಿಗೆ ನಾಂದಿಯೂ ಆಯಿತು.

ಹೆಸರಲ್ಲಿ ಸಮಾನತೆಯಿದ್ದರೂ ರಾಯಂಣವಾಗ್ಮಿಯೇ ಬೇರೆ, ರಾಯಂಣಕವಿಯೇ ಬೇರೆ. ರಾಯಂಣ ಕವಿಗೆ(ನಾಲ್ಕನೆಯ) ಪುಂಗರಸ ಎಂಬ ಅಡ್ಡ ಹೆಸರಿತ್ತು. ಆತನು ನಾಗಕುಮಾರ ಷಟ್ಪದಿ ಕಾವ್ಯವನ್ನು ೧೭೮೯ರಲ್ಲಿ ರಚಿಸಿದ ಬೊಮ್ಮಣ ಕವಿಯ ಮಗ [ಹಂಪನಾ (ಸರಿ): ೧೯೭೭]. ತಂದೆಯಂತೆ ಮಗನಾದ ರಾಯಂಣ ಕವಿಯೂ ಮನ್ಮಥಮಣಿ ದರ್ಪಣ ಮತ್ತು ಪದ್ಮಾವತೀಯಕ್ಷಗಾನ ರಚಿಸಿದ್ದಾನೆ. ತೋನಿನಕೆರೆ ರಾಯಂಣವಾಗ್ಮಿ ವಿದ್ವಾಂಸ ಮತ್ತು ಪ್ರಕಾಸನ ಆಗಿದ್ದರು.

ಸಮಕಾಲೀನ ಉದ್ದಾಮ ಪ್ರತಿಷ್ಠರೊಂದಿಗೆ

ಬಿ.ಎಲ್. ರೈಸರು ಅಂದಿನ ವರಿಷ್ಠವರೇಣ್ಯರು. ಅವರು ಪಂಪನನ್ನು ಲೋಕಕ್ಕೆ ಪರಿಚಯಿಸಿದ ಆದ್ಯರು. ಎಪಿಗ್ರಾಫಿಯ ಕರ್ಣಾಟಿಕ ಬೃಹತ್ ಸಂಪುಟಗಳ ಸಂಪಾದಕರು, ರೂವಾರಿ. ‘ಪಪಂ’ರನ್ನು ಪುರಾತತ್ವ ಇಲಾಖೆಗೆ ಸೇರಿಸಿದವರಲ್ಲದೆ ಪ್ರೀತಿಯಿಂದ ಪ್ರೋತ್ಸಾಹಿಸಿದರು, ಇಬ್ಬರ ನಡುವೆ ಮಧುರ ಬಾಂಧವ್ಯ: ತಾವು ಸಂಪಾದಿಸಿದ ಮೂರನೆಯ ಮಂಗರಸಕವಿಯ ಸಮ್ಯಕ್ತ್ವ ಕೌಮುದಿ ಎಂಬ ಷಟ್ಪದಿ ಕಾವ್ಯವನ್ನು ರೈಸರಿಗೆ ಅರ್ಪಿಸಿರುವುದನ್ನು ಹೇಳಿದ್ದಾಗಿದೆ. ಅವರು ‘ಪಪಂ’ರನ್ನು ಜೈನ ಶಾಸ್ತ್ರ-ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿರುವ ಪ್ರಕಾಂಡ ಪಂಡಿತರೆಂದೂ ಶಾಸನಶಾಸ್ತ್ರ ತಜ್ಞರೆಂದೂ ಅರಿತು ಪುರಸ್ಕರಿಸಿದ್ದರು. ಅದರಿಂದ ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟಿನ ಸಂಚಿಕೆಗಳಲ್ಲಿ ಆಗಾಗ ‘ಪಪಂ’ ರ ಕೊಡುಗೆಯ ವಿವರಗಳನ್ನು ನಮೂದಿಸಿದ್ದಾರೆ, ವಿಸೆಷ ಬಡ್ತಿ ನೀಡಿದ್ದಾರೆ. ನಿವೃತ್ತಿಯ ನಂತರವೂ ನೆರವಿತ್ತಿದ್ದಾರೆ. ಮೈಸೂರು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರಿಗೆ ಖಾಸಗಿ ಪತ್ರ ಬರೆದು ‘ಪಪಂ’ರಿಗೆ ಉಚಿತ ನಿವೇಶನವಿತ್ತು ಮನೆಕಟ್ಟಲು ಸಹಾಯ ಮಾಡಲು ವಿನಂತಿಸಿದ್ದರು. ಅದರಂತೆ ಆಳುವ ಅರಸರು ಚಾಮರಾಜ ನಗರದಲ್ಲಿ ಉಚಿತ ನಿವೇಶನ ನೀಡಿ ಅಲ್ಲೊಂದು ಮನೆಕಟ್ಟಲು ನೆರವಾದರು. ಬಿ.ಎಲ್. ರೈಸರು ಈ ರೀತಿ ಅರಿವಿನೊಡೆಯನೊಬ್ಬನಿಗೆ ಸಹಾಯ ಮಾಡಬೇಕೆಂದು ಕೋರಿ ಮಹಾರಾಜರಿಗೆ ಖಾಸಗಿ ಪತ್ರ ಬರೆದದ್ದು ‘ಪಪಂ’ರೊಬ್ಬರಿಗಷ್ಟೆ ಎಂಬುದು ಮರೆಯಲಾಗದ ಘಟನೆ.

‘ಪಪಂ’ರು ಪರಮ ಜಿನಭಕ್ತರು. ಹಾಗೆಯೇ ಪರಸಮಯವನ್ನು ಸ್ವಸಮಯವೆಂದು ಮನ್ನಿಸಿದವರು. ಅವರ ಒಡನಾಡಿಗಳು ಎಲ್ಲ ಮತಧರ್ಮದವರು. ಈ ಸಂಬಂಧ ಒಂದು ವಿಶಿಷ್ಟ ಪ್ರಸಂಗವನ್ನು ನೆನಯಬೇಕು. ಸರ್ ಮಿರ್ಜಾ ಇಸ್ಮಾಯಿಲರು (೧೮೮೩-೧೯೫೯) ಮೈಸೂರು ಸಂಸ್ಥಾನದ ದಿವಾನರಾಗಿ (೧೯೩೬-೪೧) ಅತ್ಯಮೂಲ್ಯ ಸೇವೆ ಸಲ್ಲಿಸಿ ಸರ್ವಾಂಗೀಣ ಪ್ರಗತಿಗೆ ಕಾರಣ ಪುರುಷರು. ಅವರೊಮ್ಮೆ ಚಾಮರಾಜನಗರಕ್ಕೆ ಬಂದರು. ಅವರ ಆಗಮನ ಪೂರ್ವ ನಿಯೋಜಿತ. ಅದರಿಂದ ಇಡೀ ನಗರವನ್ನು ತಳಿರುತೋರಣಾದಿಗಳಿಂದ ಅಲಂಕರಿಸಿದರು. ಪೌರಸನ್ಮಾನ ನೀಡಿ ಪುರಸ್ಕರಿಸಿದರು. ಆ ವೇಳೆಗೆ ಚಾಮರಾಜನಗರಕ್ಕೆ ಮರಳಿ ನೆಲಸಿದ್ದ ‘ಪಪಂ’ರು ತಾವು ಶ್ರೀ ವಿಜಯ ಪಾರ್ಶ್ವನಾಥ ಬಸದಿಯನ್ನು ಸುಣ್ಣ ಬಣ್ಣ ಕಾರಣೆಗಳಿಂದ ನವೀಕರಿಸಿದರು. ಮಂತ್ರಿ ಮಹೋದಯರನ್ನು ಸಂಪರ್ಕಿಸುವ, ಬರಮಾಡಿಕೊಳ್ಳುವ ಕ್ರಮ, ಸಮಯಾಚಾರ ಶಿಸ್ತು ಬಲ್ಲ ‘ಪಪಂ’ರು ಮುಂಚಿತವಾಗಿಯೇ ಮೈಸೂರಿಗೆ ಹೋಗಿ ಬಿನ್ನೈಸಿ ಬಂದರು.

ದಿವಾನ್ ಮಿರ್ಜಾ ಇಸ್ಮಾಯಿಲರು ಜೈನರ ಬಸದಿಗೆ ಬರುವ ವಿಚಾರ ಪ್ರಚಾರವಾಯಿತು. ಒಡನೆಯೇ ಮಡಿವಾದಿಗಳ ಗುಸುಗುಸು, ಊರಿನವರ ಪಿಸುಪಿಸುಗುಲ್ಲು ಶುರುವಾಯಿತು. ‘ದಿವಾನರು ಮುಸ್ಲಿಮರು, ಅಲ್ಲದೆ ಅವರು ಪಾದರಕ್ಷೆ ಸಹಿತ ಒಳಗೆ ಬರುತ್ತಾರೆ. ಅದರಿಂದ ದೇವಾಲಯಕ್‌ಎಕ ಅವರ ಪ್ರವೇಶವನ್ನು ನಿಷೇಧಿಸಬೇಕು’ ಎಂದು ಸಂಪ್ರದಾಯವಾದಿಗಳು ಪ್ರತಿಭಟನೆಗೆ ಸಜ್ಜಾದರು. ‘ಪಪಂ’ರು ಎಲ್ಲರನ್ನೂ ಸಭೆ ಸೇರಿಸಿದರು. ಮಿರ್ಜಾಸಾಹೇಬರ ಬಗ್ಗೆ ಸದಭಿಪ್ರಾಯವನ್ನು ಮೂಡಿಸಿದರು. ವಿರೋಧ ತಣ್ಣಾಗಾಯಿತು. ಮಿರ್ಜಾರವರು ಕಾರ್ಯಸೂಚಿಯಂತೆ ವಿಜಯ ಪಾರ್ಶ್ವನಾಥ ಬಸದಿಗೆ ಬಂದರು. ಗುಡಿಯ ಹೊರಗಡೆಯೇ ಪಾದರಕ್ಷೆ ಬಿಟ್ಟು ಒಳಗೆ ಬಂದರು. ನವರಂಗದಲ್ಲಿ ನಿಂತರು.ಪೂಜೆ ನಡೆಯಿತು, ಪ್ರಸಾದ ಸ್ವೀಕರಿಸಿ ಕೈ ಮುಗಿದು ತೆರಳಿದರು. ಎಲರೂ ಕೊಂಡಾಡಿದರು. ಮನಸ್ಸು ತಿಳಿಯಾಯಿತು.

ಮುದ್ರಣಪ್ರಕಾಶನ ಪ್ರಧಾನರು

ಹತ್ತೊಂಬತ್ತನೆಯ ಶತಮಾನದಲ್ಲಿ ಪುಸ್ತಕ ಪ್ರಕಾಶನ, ಮುದ್ರಣ, ಮತ್ತು ಸಂಪಾದನ ಕಾರ್ಯ ವಿಧಾನ ರೂಪಗೊಳುತ್ತಿದ್ದ ಸಂಕ್ರಮಣಾವಸ್ಥೆಯ ಕಾಲಮಾನ. ಕೆಲವರು ಮುದ್ರಣಾಲಯ ಪ್ರಾರಂಭಿಸಿದ್ದರು, ಕೆಲವರು ಪ್ರಕಾಶಕರಾಗಿದ್ದರು, ಕೆಲವರು ಗ್ರಂಥ ಸಂಪಾದಕರಾಗಿದ್ದರು. ಯಾವುದೂ ಹೆಚ್ಚು ಜನಪ್ರಿಯವಾಗಿರಲಿಲ್ಲ. ಇಂತಹ ವಿರಳದಲ್ಲಿ ‘ಪಪಂ’ರೂ ಒಬ್ಬರೆಂಬುದಷ್ಟೇ ಅಲ್ಲ, ಅವರು ಏಕಕಾಲಕ್ಕೆ ಮುದ್ರಕರೂ ಪ್ರಕಾಶಕರೂ ಸಂಪಾದಕರೂ ಆಗಿದ್ದರು. ವಿರಳರಲ್ಲಿ ವಿರಳಾತಿ ವಿರಳರಾಗಿ ಏಕಮೇವಾದ್ವಿತೀಯರೆನಿಸಿ ಕೀರ್ತಿವಂಥರಾದರು. ಅದಲ್ಲದೆ, ಒಂದು ನೂರು ಗ್ರಂಥಗಳಿಗೂ ಮೀರಿ ಅವರು ಸಂಪಾದಕರಾಗಿ ಮುದ್ರಿಸಿದರು, ಪ್ರಕಾಶಕರಾಗಿ ಜನಮನಕ್ಕೆ ಮುಟ್ಟುಸಿದರು. ಶಾಸ್ತ್ರ-ಸಾಹಿತ್ಯವಾಹಿನಿ ಹರಿಸಿದ ಭಗೀರಥರಾದರು. ಈ ಮಟ್ಟದ, ಈ ವ್ಯಾಪ್ತಿಯ, ಈ ಪ್ರಾಪ್ತಿಯ ಬಹುಮುಖಿ ವ್ಯಕ್ತಿತ್ವದ ಧೀರ ಪ್ರವರ್ತಕ ಇನ್ನೊಬ್ಬರಿರಲಿಲ್ಲ. ಜೈನ ಸಮಾಜದಲ್ಲಂತೂ ಇವರು ಸಮೇರು. ಉತ್ತರ ಕರ್ನಾಟಕದಲ್ಲಿ ಇಬ್ಬರು ಮೂವರು, ಹಳೆಯ ಮೈಸೂರು ಕಡೆ ರಾಯಣ್ಣವಾಗ್ಮಿ-ಇವರ ಪ್ರಯತ್ನಗಳು ಈ ವ್ಯಾಪ್ತಿಯಲ್ಲ. ಗಾತ್ರ ಪಾತ್ರದಲ್ಲೂ ವೈವಿಧ್ಯವಿಸ್ತಾರದಲ್ಲೂ ವಿದ್ವತ್ ವಿಲಾಸದಲ್ಲೂ ‘ಪಪಂ’ರು ಸಮಕಾಲೀನರ ನಡುವೆ ಒಡೆದು ನಿಲ್ಲುತ್ತಿದ್ದರು.

ಸಮಕಾಲಿನ ಸಾಹಿತ್ಯವಲಯದಲ್ಲಿ ಮಿಡಿಯುತ್ತಿದ್ದ ತುಡಿತಕ್ಕೆ ಸ್ಪಂದಿಸಿದ ಪ್ರಯತ್ನಗಳ ಅರಿವು, ನಿಕಟತೆ ‘ಪಪಂ’ರಿಗೆ ಇತ್ತು. ಅಲಂಕಾರ, ಛಂದಸ್ಸು ವ್ಯಾಕರಣ, ಕಾವ್ಯ-ಹೀಗೆ ನಾನಾ ವಿಷಯಗಳ ಪುಸ್ತಕಗಳನ್ನು ಛಾಪಿಸಿ ಜನರಿಗೆ ತಲಪಿಸುವ ಇರಾದೆಯಿಂದ ಕೆಲವು ವ್ಯಕ್ತಿಗಳೂ ಸಂಸ್ಥೆಗಳೂ ಪ್ರವೃತ್ತರಾಗಿದ್ದುದುಂಟು. ತತ್ಫಲವಾಗಿ ಅಂದು ನಾಗವರ್ಮನ ಛಂದೋಂಬುಧಿ (೧೮೬೨, ೧೮೬೫ ಎರಡು ಮುದ್ರಣ), ಕಾವ್ಯಾವಲೋಕನ (೧೮೮೨), ಶಬ್ದಸ್ಮೃತಿ (೧೮೩೬), ಕೇಶಿರಾಜನ ಮಾರ್ಗ (೧೮೯೮)-ಇವು ಬಲ್ಲಿದರಾದ ಓದುಗರ ಮಡಿಲಿಗೆ ಸೇರಿದ್ದುವು. ಕರ್ಣಾಟಕ ಕಾವ್ಯಮಂಜರಿ ಮಾಲೆಯು ಎಂ.ಎ ರಾಮಾನುಜ ಅಯ್ಯಂಗಾರ್ (೧೮೬೨-೧೯೩೭), ಎಸ್.ಜಿ. ನರಸಿಂಹಾಚಾರ್ (೧೮೬೯-೧೯೦೭) ವಿದ್ವಾಂಸರ ಮೇಲಾಳಿಕೆಯಲ್ಲಿ ಹಳೆಗನ್ನಡ ಕಾವ್ಯಗಳನ್ನು ಹೊರತರುವ ಒಳ್ಳೆಯ ಮಾದರಿಯನ್ನು ತೋರಿತ್ತು. ಈ ಪ್ರಾಜ್ಞರೂ ಇವರ ಪ್ರಯತ್ನಗಳೂ ‘ಪಪಂ’ರಿಗೆ ಪರಿಚಯವಿತ್ತು.

ಕಹಿಪ್ರಸಂಗ

ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ‘ಪಪಂ’ರ ಆಸಕ್ತಿಗಳು ಹಲವು. ವೈಯಕ್ತಿಕ ಸುಖಾಪೇಕ್ಷೆಯ ಆಶೆಗಳತ್ತ ಇರಲಿಲ್ಲ ಒಲವು. ಅವರು ಧನಲೋಭಿಯಲ್ಲ. ಬಂದಷ್ಟರಿಂದ ನೆಮ್ಮದಿ ಕಂಡರು. ಪುರಾತನ ಪರಂಪರೆಯ ಜ್ಞಾನಭಂಡಾರ ಲುಪ್ತವಾಗದಂತೆ ಕಾಪಾಡುವ ಹೆಬ್ಬಯಕೆಯಿತ್ತು. ಜಿನವಾಣಿಯನ್ನು ಜನವಾಣಿಯಾಗಿಸುವ ದೀಕ್ಷೆಯಿತ್ತು. ಪ್ರಕಟಣೆಯಲ್ಲೂ ಆದಾಯ ಬರಲಿಲ್ಲ. ನಿರಾಶೆಗೊಳ್ಳಲಿಲ್ಲ. ಪುಸ್ತಕ ಪ್ರಕಟಣೆಗೆ ಹೂಡಿದ ಬಂಡವಾಳ ಹಿಂತಿರುಗಿ ಬರಲಿಲ್ಲ. ನಷ್ಟದಿಂದ ಪ್ರಕಾಶನವನ್ನು ನಿಲ್ಲಿಸಿ ಬಾಗಿಲು ಮುಚ್ಚಬೇಕಾದ ಬಿಕ್ಕಟ್ಟು ಒಮ್ಮೆ ಎದುರಾಯಿತು. ಆಗಲೂ ಎದೆಗುಂದಲಿಲ್ಲ. ಮಲ್ಲೇಶ್ವರದಲ್ಲಿದ್ದ ಮನೆಯನ್ನು ಇನ್ನೂರು ರೂಪಾಯಿಗೆ ಒತ್ತೆಯಿಟ್ಟರು. ಹಣ ತಂದರು. ಪ್ರಕಾಶನವನ್ನು ಮುಂದುವರಿಸಿದರು.

ಬದುಕು ಹೂಹಾಸಿಗೆಯಲ್ಲ. ಮುಳ್ಳುಗಳೂ ಇರುತ್ತವೆ. ‘ಪಪಂ’ರಿಗೆ ಮುಳ್ಳು ಚುಚ್ಚಿತು. ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಈರ್ಷ್ಯಾಸೂಯೆಗೆ ಸಿಕ್ಕಿದರು. ಕಷ್ಟದ ದಿನಗಳಲ್ಲಿಯೂ ಈಜಿ ದಡ ಮುಟ್ಟಿದರು. ಭಾರತ ವರ್ಷೀಯ ದಿಗಂಬ ಜೈನ ತೀರ್ಥ ಸಂಘ (ಮುಂಬಯಿ) ಹರ್ಮಂಜಿ ದಿನೇಶರ ಮೂಲಕ ಇವರಿಗೆ ಹೈಕೋರ್ಟಿನ ನೋಟೀಸನನ್ನು ಜಾರಿ ಮಾಡಿದರು:- “ನೀವು ಜೈನ ಧರ್ಮದ ದೇವಾನುದೇವತೆಗಳ ಚಿತ್ರಗಳನ್ನೂ ತೀರ್ಥಕ್ಷೇತ್ರಗಳ ಫೋಟೋಗಳನ್ನೂ ಜೈನ ಗ್ರಂಥಗಳನ್ನೂ ಪ್ರಕಟಿಸುತ್ತಿದ್ದೀ ಇದು ತಪ್ಪು. ನಿಮಗೆ ಆ ಅಧಿಕಾರ/ ಸ್ವಾಮ್ಯ ಇಲ್ಲ. ಅಂತಹ ಸ್ವಾಮ್ಯ ಇರುವುದು ಭಾರತ ವರ್ಷೀಯ ದಿಗಂಬರ ಜೈನ ತೀರ್ಥ ಸಂಘಕ್ಕೆ ಮಾತ್ರ. ನೀವು ಏನೇನನ್ನು ಇದುವರೆಗೆ ಪ್ರಕಟಿಸಿದ್ದೀರೋ ಅದಷ್ಟನ್ನೂ ನಮಗೆ ತಂದೊಪ್ಪಿಸಬೇಕು. ಇಲ್ಲವಾದರೆ ನಾವು ನಿಮ್ಮ ಮೇಲೆ ಕಾಯ್ದೆಶೀರು ಕ್ರಮಜರುಗಿಸಬೇಕಾಗುತ್ತದೆ.”

‘ಪಪಂ’ರು ಈ ನೋಟೀಸಿಗೆ ನೊಂದರೂ ಅಧೀರರಾಗಲಿಲ್ಲ. ಮೈಸೂರು ಹೈಕೋರ್ಟಿನ ವಕೀಲ ಬಿ. ರಾಮಣ್ಣಣವರ ಮೂಲಕ ಸೂಕ್ತ ಉತ್ತರ ಕಳಿಸಿದರು- “ಧಾರ್ಮಿಕ ಸಚ್ಚಾರಿತ್ರ‍್ಯಕ್ಕೆ ಹೆಸರಾದ ಜೈನ ಬ್ರಾಹ್ಮಣ ಮನೆತನಕ್ಕೆ ನಾನು ಸೇರಿದವನು. ಅದರಿಂದ ನನಗೆ ಇವನ್ನು ಮುದ್ರಿಸಲು, ಪ್ರಕಾಶನಗೊಳಿಸಲು ಎಲ್ಲ ಅರ್ಹತೆ, ಹಕ್ಕು ಇದೆ.” ತಮಗಿರುವ ಕಾನೂನು ತಿಳಿವಳಿಕೆಯ ಬಲದಿಂದ ಈ ಕೇಸಿನಲ್ಲಿ ಅವರು ವಿಜಯಿ ಆದರು. ಮುದ್ರಣವನ್ನು ಮುಂದುವರಿಸಿದರು.

ತೊಂದರೆ ಅಲ್ಲಿಗೆ ತಪ್ಪಲಿಲ್ಲ. ಮೇಲಿನ ಕಿರುಕುಳ ಹೊರಗಿನ ರಾಜ್ಯದ್ದು, ಈಗ ಮತ್ತೊಂದು ತಗಾದೆ ಒಳಗಿನಿಂದ ಬಂದಿತು. ಇದು ಕೋರ್ಟಿನಿಂದ ಬಂದದ್ದು ಅಲ್ಲ. ಇದ್ದಕ್ಕಿದ್ದ ಹಾಗೆ ಒಂದು ದಿನ ದಾನಿಯೊಬ್ಬರಿಂದ ಪತ್ರ ಬಂದಿತು. ಕೇರಳ ರಾಜ್ಯದ ಕಲ್ಪತ್ತದ (ವೈನಾಡು ಜಿಲ್ಲೆ) ಸಿರಿವಂಥ ಕಾಫಿ ಎಸ್ಟೇಟು ಒಡೆಯರಾದ ಕೃಷ್ಣಗೌಡರು ಇವರಿಗೆ ಮಹಾಪುರಾಣವನ್ನು ಸಂಸ್ಕೃತ ಮೂಲಪಾಠದೊಂದಿಗೆ ಕನ್ನಡ ಅನುವಾದ ಸಹಿತ ಹೊರತರಲು ಅಯ್ದು ಸಾವಿರ ರೂಪಾಯಿ ದಾನ ನೀಡಿದ್ದರು. ಅದರಂತೆ ‘ಪಪಂ’ರು ಮಹಾಪುರಾಣದ ಕಾಲು ಭಾಗ ಪ್ರಕಟಿಸಿದ್ದರು. ಆದರೆ ಯಾರೊ ಚಾಡಿಕೊರರು ದಾನಿಗಳ ಕಿವಿಚುಚ್ಚಿದರು. ಹಿಂದುಮುಂದು ನೋಡದೆ ದಾನಿಗಳು ಕಾಗದ ಬರೆದು ತಾವು ಕೊಟ್ಟ ಹಣವನ್ನು ಹಿಂತಿರುಗಿಸ ಬೇಕೆಂದರು! ‘ಪಪಂ’ರ ಜಂಘಾಬಲ ಕುಸಿದಂತೆ ಆಯಿತು. ಇದು ತಮಗೆ ಬಗೆದ ದ್ರೋಹವೆಂದು ಎಣಿಸಿದರು. ಅದುವರೆಗೆ ಎಲ್ಲಿಯವರೆಗೆ ಕೆಲಸ ಆಗಿತ್ತೊ ಅಲ್ಲಿಗೆ, ಎಷ್ಟು ಅಚ್ಚಾಗಿತ್ತೊ ಅಷ್ಟಕ್ಕೆ ಮಹಾಪುರಾಣ ಪ್ರಕಟಣೆಯನ್ನು ನಿಲ್ಲಿಸಿದರು. ಮುಂದೆ ಅದೇ ದಾನಿಗಳು ಹಣಸಹಾಯ ಮಾಡಿ ಆಸ್ಥಾನ ವಿದ್ವಾನರಾದ ಎರ್ತೂರು ಶಾಂತಿರಾಜ ಶಾಸ್ತ್ರಗಳ ಮೂಲಕ (೧೮೮೮-೧೯೫೨) ಆ ಮಹಾಪುರಾಣದ ಪೂರ್ವಪುರಾಣವನ್ನು ೧೯೨೦ರಲ್ಲೂ ಉತ್ತರ ಪುರಾಣವನ್ನು ೧೯೩೩ರಲ್ಲೂ ಹೊರತಂದರು.

ಮಹಾಪುರಾಣ

ಆಚಾರ್ಯ ಜಿನಸೇನರು (೭೭೦-೮೭೦) ಮತ್ತು ಗುಣಭದ್ರರು (೮೨೦-೮೯೮) ಗುರು-ಶಿಷ್ಯರು. ಇವರು ರಚಿಸಿರುವ ಸಂಸ್ಕೃತ ಮಹಾಪುರಾಣ ಜೈನ ಪುರಾಣಗಳ ತಲಕಾವೇರಿ. ಭಾರತೀಯ ಪುರಾಣ ಪರಂಪರೆಯಲ್ಲಿ ಇದಕ್ಕೆ ವಿಶಿಷ್ಟಸ್ಥಾನ. ವಾಲ್ಮೀಕಿಯ ರಾಮಾಯಣ ವ್ಯಾಸರ ಭಾರತ, ಗುಣಾಢ್ಯನ ಬೃಹತ್ಕಥಾ, ಜಿನಸೇನ-ಗುಣಭದ್ರರ ಮಹಾಪುರಾಣ ಬೃಹತ್ ಹಾಗೂ ಮಹತ್ ಕಾವ್ಯಗಳ. ಚಾಮುಂಡರಾಯನು ೯೭೯ರಲ್ಲಿ ಇದರ ಕನ್ನಡ ಅನುವಾದವನ್ನು ಸಂಗ್ರಹರೂಪದಲ್ಲಿ ಮಾಡಿದ್ದಾನೆ. ಹೊಸಗನ್ನಡದಲ್ಲಿ ಈ ಮಹಾಕಾವ್ಯವನ್ನು ಕನ್ನಡಿಸಲು ಮೊಟ್ಟ ಮೊದಲನೆಯ ಅರಿವಿನೋಜರು ‘ಪಪಂ’ರು. ಅವರು ಇಪ್ಪತ್ತು ಸಾವಿರ ಶ್ಲೋಕ ಪ್ರಮಾಣದ ಇಡೀ ಕಾವ್ಯವನ್ನು ಕನ್ನಡಕ್ಕೆ ತರಲು ಹೊರಟರು: ಕನ್ನಡ ತಾತ್ಪರ್ಯದೊಂದಿಗೆ ಮಹಾಪುರಾಣವನ್ನು ೧೮೯೬ರಿಂದ ಪ್ರತಿ ತಿಂಗಳೂ ಪ್ರಕಟಿಸಲಾಗುವುಗಲ್ಲದೆ ಅದರ ಮುನ್ನೂರಕ್ಕೂ ಕಡಮೆಯಿಲ್ಲದೆ ಹೆಚ್ಚು ಪ್ರತಿ ಮುದ್ರಿಸುವುದಾಗಿಯೂ ನಿವೇದಿಸಿದರು. ಮಹಾಪುರಾಣವು ಬೃಹದ್ ಗಾತ್ರದ ಗ್ರಂಥವಾದುದರಿಂದ ಬಿಡಿ ಭಾಗಗಳಲ್ಲಿ ಮುದ್ರಿಸುತ್ತಾ ಹೋಗುವುದರಿಂದ ಹೆಚ್ಚು ಸಮಯದ ತನಕ ಮುಂದುವರಿಯುತ್ತದೆ. ಆದಾಗ್ಯೂ ಪ್ರತಿ ತಿಂಗಳೂ ಮಹಾಪುರಾಣದ ಪಾಠ ಓದಲು ಸಿಗುತ್ತದೆ, ತೀರ್ಥಂಕರರ ಚರಿತೆ ಇರುತ್ತದೆ. ಶ್ರದ್ಧಾವಂತ ಶ್ರಾವಕರು ವಾರ್ಷಿಕ ಚಂದಾ ಮೂರು ರೂಪಾಯಿಗಳನ್ನೂ ಒಂದು ರೂಪಾಯಿ ವಾರ್ಷಿಕ ಚಂದಾದೊಂದಿಗೆ ಕಳಿಸಬಹುದೆಂದು ಅರಿಕೆ ಮಾಡಿದರು. ಅಲ್ಲದೆ ಹಣವನ್ನು ಮೊದಲೇ ಕಳಸಲೇಬೇಕೆಂಬ ಒತ್ತಾಯವಿರದೆ ಚಂದಾದಾರರಾಗಿ ಹೆಸರು ನಮೂದಿಸಿ ‘ವಿಳಾಸ ಕೊಟ್ಟು’ ಆಮೇಲೆ ಹಣ ಕಳಿಸಬಹುದೆಂದೂ ತಿಳಿಸಿದ್ದಾರೆ. ಮಹಾಪುರಾಣದ ಪಾರ್ಶ್ವನಾಥ ಪುರಾಣಭಾಗಗವನ್ನು ಕನ್ನಡ ತಾತ್ಪರ್ಯದೊಂದಿಗೆ ಪ್ರಕಟಿಸಿದರು: “ಮಹಾಪುರಾಣ (೨೦೦೦೦) ಗ್ರಂಥಗಳಿಗೂ ಈ ಪಾರ್ಶ್ವನಾಥ ಪುರಾಣದಂತೆ ಮೂಲಗ್ರಂಥದ ಕೂಡ ಕನ್ನಡ ತಾತ್ಪರ್ಯವು ಬರೆಯಲ್ಪಡುತ್ತೆ ಎಂಬ ಸಂಗತಿಯನ್ನ ಸರ್ವರು ತಿಳಿಯುವದ ಕ್ಕೋಸ್ಕರಲೂಮತ್ತು ಕಾಗದದ ಮಾದ್ರೀ ತಿಳಿಸಿ ಅವುಗಳಿಗೆ ಬೀಳುವ ಕ್ರಯವನ್ನು ಸಹ ತಿಳಿಸುವದಕ್ಕೋಸ್ಕರಲೂ ಈ ಪುರಾಣವು ಪ್ರಿಂಟು ಮಾಡಲ್ಪಟ್ಟಿದೆ. ಇಷ್ಟವುಳ್ಳವರು ವಿಜಯದಶಮೀವಳಗಾಗಿ ಹಣದೊಡನೆ ಬರೆದುಕೊಳ್ಳಬೇಕು. ಮುಂದೆ ಯೋಚಿಸುವದ್ದರಿಂದಯೇನೂ ಪ್ರಯೋಜನವಿಲ್ಲವು. ಆದ್ದರಿಂದ ಯೆಷ್ಟು ತೊಂದರೆಯಿದ್ದರೂ ಈ ಮಹಾಅತಿಶಯವಾದ ಪುರಾಣದ ಪುಸ್ತಕವನ್ನು ಪ್ರತಿದಿವಸದಲ್ಲೂ ದರ್ಶನ ಮಾಡುವದರಿಂದಲೇ ಸಮಸ್ತವಾದ ಕಷ್ಟಗಳೂ ನಾಶಹೊಂದುತ್ತೆ” (೧೮೯೩ರ ಅರಿಕೆ).

ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಬರೆದಿರುವ ಆದಿಪುರಾಣ (ಪೂರ್ವಪುರಾಣ)ದ ಸುಮಾರು ಅರ್ಧಭಾಗದಷ್ಟನ್ನು ೧೮೯೬ ಮತ್ತು ೧೮೯೭ರಲ್ಲಿ ಅಮೂಲ್ಯವೂ ಮಹತ್ವದ್ದೂ ಆದ ಮಹಾಪುರಾಣವನ್ನು ಸಂಪಾದಿಸುವ ಹಾಗೂ ಕನ್ನಡಕ್ಕಿಳಿಸುವ ದ್ವಿಮುಖಿ ಕಾರ್ಯವಿದು. ‘ಪಪಂ’ರು ಪ್ರತಿ ಪದದ ಅರ್ಥ ಸಹಿತ ಮಹಾಪುರಾಣದೀಪಿಕೆಯನ್ನು ರಚಿಸಲು ತೊಡಗಿದ್ದೂ ಒಂದು ಸಾಹಸ. ಮೂಲ ಕಾವ್ಯದ ಪೌರಾಣಿಕ. ಧಾರ್ಮಿಕ, ಭಾಷಿಕ, ಶಬ್ದಾರ್ಥಕ ಸೂಕ್ಷ್ಮಗಳನ್ನು ಮನನ ಮಾಡಿದರು. ಸಂಸ್ಕೃತ ಮಹಾಪುರಾಣವನ್ನು ಕನ್ನಡಕ್ಕೆ ಅಳವಡಿಸಿಕೊಡುವ ಯೋಜನೆಯನ್ನು ಕೈಗೆತ್ತಿಕೊಂಡಾಗ ಅವರು ಪ್ರಾರಂಭಮಾಡಿದ್ದು ೨೩ನೆಯ ವರಾದ ಪಾರ್ಶ್ವನಾಥ ತೀರ್ಥಂಕರರ ಚರಿತೆಯಿಂದ, ೧೮೯೩ರಲ್ಲಿ. ಇದು ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಇಡೀ ಮಹಾಪುರಾಣದಲ್ಲಿ ಪಾರ್ಶ್ವನಾಥರ ಚರಿತೆಯ ಭಾಗ ಜನಪ್ರಿಯವಾಗಿದೆ. ಜರ್ಮನಿದೇಶದ ವಿಲೆಮ್ ಬೋಲಿಯೆಂಬ ವಿದ್ವಾಂಸರು ಇದನ್ನು ಇಂಗ್ಲಿಷ್ ಭಾಷೆಗೆ ಮೂಲ ಪಠ್ಯ ಸಹಿತ ಪರಿಚಯಿಸಿದ್ದಾರೆ. (Prof. Willem Bollee: Parsvacaritam-The Life of Parsva: Hindi Granth Karyalay, Mumbai: 2008)