ಜೈನ ಲಾದ ಅನನ್ಯತೆ

ಮುದ್ರಣ ಮತ್ತು ಗ್ರಂಥ ಪ್ರಕಾಶನ ರಂಗದಲ್ಲಿ ತಮ್ಮ ಮೊಹರು ಮೂಡಿಸಿದ ಮೊದಲ ಮನ್ನಣೆಗೆ ‘ಪಪಂ’ ಹೇಗೆ ಪಾತ್ರರಾದರೆಂಬುದನ್ನು ಮುಂದಿನ ಪುಟಗಳಲ್ಲಿ ವಿವರಿಸಲಾಗುವುದು. ಆದರೆ ಅದಕ್ಕೂ ಮುನ್ನ ವರು ಹೊರತಂದ ಕೃತಿ ಶ್ರೇಣಿಯಲ್ಲಿ ಮುಡಿಯ ಮಾಣಿಕ್ಯವಾಗಿ ಬೆಳಗಿದ ಕೃತಿಯೊಂದರ ಆಯಾಮ ಅನನ್ಯತೆಯನ್ನು ಬಿತ್ತರಿಸುವುದರಲ್ಲಿ ಔಚಿತ್ಯವಿದೆ. ಅವರ ಕಾರ್ಯಕ್ಷೇತ್ರದ ಹರಹು ದೊಡ್ಡದು. ಅದು ಕೇವಲ ಪೂಜಾದಿಗಳಿಗೆ, ಪುಸ್ತಕ ಛಾಪಿಸುವುದಕ್ಕೆ, ಗ್ರಂಥ ಮಾರಾಟಕ್ಕೆ ಸೀಮಿತವಾಗಿರಲಿಲ್ಲ. ಇವೆಲ್ಲವನ್ನೂ ಒಳಗೊಂಡಿದ್ದು ಇದರ ಆಚೆಗೂ ಚಾಚಿದ ಪ್ರಗತಿಪರ ಆಲೋಚನೆ ಅವರಲ್ಲಿತ್ತು. ಸಾಮಾಜಿಕ ಚಿಂತಕರಾಗಿದ್ದುದರಿಂದ ಜೈನ ಸಮಾಜದ ಆಗು ಹೋಗುಗಳ ಚಲನವಲನವನ್ನು ಗಮನಿಸುತ್ತಿದ್ದರು. ಅದರ ವ್ಯಾಪ್ತಿಯನ್ನು, ಮಹತ್ವವನ್ನು ಮನಗಾಣಿಸುವ ಮೊದಲು ಹತ್ತೊಂಬತ್ತನೆಯ ಶತಮಾನದ ಜೈನ ಸಮಾಜದ ಪರಿಸ್ಥಿತಿ ಮತ್ತು ಎದುರಿಸುತ್ತಿದ್ದ ಬಹುಮುಖ್ಯ ಸವಾಲು ಸಂಕಷ್ಟವನ್ನು ಪರಿಚಯಿಸಬೇಕು.

‘ಪಪಂ’ರು ಹೆಚ್ಚಿನ ವ್ಯಾಸಂಗಾಕಾಂಕ್ಷಿಯಾಗಿ ಚಾಮರಾಜನಗರ ತೊರೆದು ಬಡಗಣ ನಾಡಿಗೆ ಹೊರಟರೆಂಬುದನ್ನು ಆಗಲೇ ಹೇಳಿದ್ದಾಗಿದೆ. ಆ ಓಡಾಟದ ನಡುವೆ ಅವರು ಜೈನ ಸಮಾಜದ ಅಲ್ಲಿನ, ಅಂದಿನ ಸ್ಥಿತಿಗತಿಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದರು. ಕೆಲವು ಕಾಲ ಮುಂಬಯಿ ಶಹರಿನಲ್ಲಿ ಉಳಿದಿದರು. ಅಲ್ಲಿನ ಜೈನ ಕುಟುಂಬಗಳು ಒಂದು ನಿರ್ದಿಷ್ಟ ಇಕ್ಕಟ್ಟಿಗೆ ಸಿಲುಕಿ ತಲ್ಲಣಿಸಿ ವಿಷಣ್ಣರಾಗಿದ್ದುದು ಅವರ ಕಣ್ಣಿಗೆ ಬಿತ್ತು. ಅದಿನ್ನೂ ಆಂಗ್ಲರು ಆಳುತ್ತಿದ್ದ ದಿನಗಳು ಕಾನೂನು ಕಟ್ಟಳೆಗಳೆಲ್ಲ ಅವರು ರೂಪಿಸಿದ್ದು ಚಲಾವಣೆಯಲ್ಲಿತ್ತು. ಭಾರತದ ನ್ಯಾಯಾಲಗಳಲ್ಲಿ ಜಾರಿಗೆ ಬರುವಂತೆ ಒಂದು ಆಂಗ್ಲೊಹಿಂದು ಲಾ ಸಿದ್ಧಪಡಿಸಿದ್ದರು. ಅದರ ಸಿದ್ಧತೆಗೆ ವೈದಿಕ ವಿದ್ವಾಂಸರ ಸಲಹೆ ಸೂಚನೆಗಳನ್ನು ಪಡೆದಿದ್ದರು. ಜೈನರ ಪ್ರಾತಿನಿಧ್ಯ ಅದರಲ್ಲಿ ಇರಲಿಲ್ಲ. ತತ್ಫಲವಾಗಿ ತಕರಾರುಗಳನ್ನು ಆಲಿಸಿ ತೀರ್ಪುಕೊಡುವಾಗ ಹಿಂದೂಕಾನೂನು ಸಂಹಿತೆಯೊಂದನ್ನೇ ಆಧರಿಸುತ್ತಿದ್ದರು. ೧೮೬೭ರಲ್ಲಿ ಕಲಕತ್ತಾ ಹೈಕೋರ್ಟು ಜೈನಧರ್ಮ ಸ್ವತಂತ್ರ ಧರ್ಮವೆಂದು ಪರಿಗಣಿಸಲು ನಿರಾಕರಿಸಿತು. ಈ ಬಗೆಯ ಕೊರತೆಗಳನ್ನು ಗಮನಿಸಿದ ‘ಪಪಂ’ರು ಜೈನ ಪರಂಪರೆಯಲ್ಲಿ ಅವರದೇ ಆದ ಕಾನೂನ ಮೊದಲಿನಿಂದಲೂ ಚಾಲ್ತಿಯಲ್ಲಿ ಇತ್ತೆಂಬುದನ್ನು ನ್ಯಾಯಾಂಗದ ಗಮನಕ್ಕೆ ತರಬೇಕೆಂದು ತೀರ್ಮಾನಿಸಿದರು. ಮತ್ತು ಅಂಥದೊಂದು ಸಮರ್ಥ ಗ್ರಂಥ ಪ್ರಕಟಣೆ ತಡವಾದಷ್ಟೂ ನ್ಯಾಯಾಲಯದ ತೀರ್ಪುಗಳಲ್ಲಿ ಜೈನರಿಗೆ ಸಿಗಬೇಕಾದ ನ್ಯಾಯಸಿಗದೆ ನ್ಯಾಯವಂಚನೆಯಿಂದ ಕೆಲವು ಕುಟುಂಬಗಳು ನರಳಬೇಕಾಗುತ್ತದೆಂಬುದನ್ನೂ ತಿಳಿದರು.

ಜೈನಕಾನೂನನ್ನು ಸ್ಥಾಪಿಸಬೇಕಾದ ಜರೂರು ಗೊತ್ತಾದ್ದರಿಂದ A treatise of Jina Law and Usages ಎಂಬ ಪುಸ್ತಕವನ್ನು ೧೮೮೬ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಿಸಿದರು. ಅದರಲ್ಲಿ ಇದ್ದುದು ಕೇವಲ ೩೮ ಪುಟಗಳಷ್ಟೇನೇ! ಪುಸ್ತಕದ ಗಾತ್ರ ಚಿಕ್ಕದು, ದಿಟ. ಆದರೆ ಅದು ವಹಿಸಿದ ಪಾತ್ರ, ಸಮಗ್ರ ಭಾರತದ ನ್ಯಾಯಾಲಯಗಳ ಪರಿಪ್ರೇಕ್ಷ್ಯದಲ್ಲಿ, ತುಂಬ ಮಹತ್ವದ್ದು. ಕಾನೂನು ಪುಸ್ತಕವೆಂಬುದು ಕಥೆ ಕಾದಂಬರಿಗಳಂತೆ ಕಲ್ಪನಾ ವಿಲಾಸ ಹರಿದಂತೆ, ಲಹರಿ ಬಂದಂತೆ ಬರೆಯಲಾಗದು. ಹೀಗಾಗಿ ನಿಯಮಗಳನ್ನು ಯಥಾವತ್ತಾಗಿ, ಮೂಲದಿಂದ ಆಯ್ದು ವಿಷಯಕ್ಕೆ ಅನುಗುಣವಾಗಿ ಸಂಯೋಜಿಸಿ ಈ ಜೈನಲಾ ಪುಸ್ತಕವನ್ನು ಸಜ್ಜುಗೊಳಿಸಿದರು. ಇಲ್ಲಿ ಒತ್ತಿ ಹೇಳಬೇಕಾದ ಮೆಚ್ಚುಗೆಯ ಮಾತೆಂದರೆ ಆ ಮಹತ್ವದ ಪುಸ್ತಕದ ಪರಿಕಲ್ಪನೆ. ಅದನ್ನು ಸಂಯೋಜಿಸಿ ತುರ್ತಾಗಿ ಪ್ರಕಟಿಸಿದಾಗ ಪದ್ಮರಾಜಪಂಡಿತರ ವಯಸ್ಸು ಇನ್ನೂ ೨೫ ವರ್ಷದಾಟಿರಲಿಲ್ಲ! ಕೇಶಿರಾಜ ವೈಯಾಕರಣಿ ಉದಾಹರಿಸಿರುವ ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ ಎಂಬ ಮಾತು ಸರಿ. ಆ ೧೯ನೆಯ ಶತಮಾನದಲ್ಲಿದ್ದ ಅಖಿಲ ಭಾರತ ಮಟ್ಟದ ಬ್ಯಾರಿಸ್ಟರರೂ ಅಡ್ವೊಕೇಟರೂ ಚಿಂತಿಸದಿದ್ದ ಮತ್ತು ಮಾಡಲಾಗದ ಮಹತ್ಕಾರ್ಯವನ್ನು ದೇವರ ಪೂಜೆ ಮಾಡುವ ಕುಡುಂಬದಿಂದ ಬಂದ ಪುರೋಹಿತ ತರುಣನೊಬ್ಬ, ಅದೂ ಕಾಲೇಜು ಶಿಕ್ಷಣ ಕೂಡ ಪಡೆದಿರದ ಚಿಗುರು ಮೀಸೆಯ ಪದ್ಮರಾಜ ಪಂಡಿತ ಮಾಡಿದನೆಂಬುದು ಅಸಾಧಾರಣ ಸಾಧನೆ. ಅದೊಂದು ಪುಟ್ಟ ಪುಸ್ತಕ ಪ್ರಕಟಿಸಿ ಒಮ್ಮೆಲೇ ಈ ಚಾಮರಾಜನಗರದ ಕುಡಿ ಸಮಗ್ರ ಭಾರತದ ಜೈನ ಸಮಾಜದ ಕಣ್ಮಣಿ ಆದರು. ಜೈನ ಕಾನೂನು ಚಿಂತನೆಗೆ ಈ ಕಿರು ಹೊತ್ತಗೆ ಆಕರವಾಯಿತು. ಮುಂದಿನ ಹೆಚ್ಚಿನ ಅಧ್ಯಯನಕ್ಕೆ ಬಾಗಿಲು ತೆರೆಯಿತು. ಕವಾಟೋದ್ಛಾಟನೆ ಮಾಡಿದ್ದು ‘ಪಪಂ’ರು. ಮತ್ತೊಂದು ವಿಶೇಷ ಈ ಪುಸ್ತಕದ ಸಂಯೋಜನೆಯಲ್ಲಿ ಹಾಸುಹೊಕ್ಕಾಗಿತ್ತು: ಅದೆಂದರೆ ಈ ಗ್ರಂಥ ಮೂರು ಭಾಷೆಗಳಲ್ಲಿತ್ತು-ಇಂಗ್ಲಿಷ್, ಕನ್ನಡ, ಮರಾಠಿ. ಮೂಲ ಜೈನಾಗಮ ಗ್ರಮಥಗಳಿಂದ ಜೈನ ಕಾನೂನನ್ನು ಸ್ಥಾಪಿಸಲು ಸೂತ್ರಗಳನ್ನು ಸಂಸ್ಕೃತ ಆಕರಗಳಿಂದ ಆರಿಸಲಾಗಿತ್ತು. ಈ ಸಂಗತಿ ಬಹುಪ್ರಾಂತಗಳಲ್ಲಿ ಪ್ರಚುರವಾಗ ಬೇಕೆಂಬ ಸದಾಶಯದಿಂದ ತ್ರಿಭಾಷಾ ಸೂತ್ರವನ್ನು ಅಂದು ೧೮೮೬ರಲ್ಲಿ ಅಳವಡಿಸಲಾಗಿತ್ತು.

ತಮ್ಮ ಎಲ್ಲ ಪುಸ್ತಕಗಳನ್ನ ಕರ್ನಾಟಕದಲ್ಲಿ ಮುಂದೆ ಮುದ್ರಿಸುತ್ತ ಬಂದ ‘ಪಪಂ’ರು ಈ ಪ್ರಥಮ ಪುಸ್ತಕವನ್ನು ಮುಂಬಯಿಯಲ್ಲಿ ಛಾಪಿಸಿದರು. ಕನ್ನಡಿಗರು ಮುಂಬಯಿಯಲ್ಲಿ ಮೊದಲಿನಿಂದಲೂ ಮುಖ್ಯರು. ಬ್ರಿಟಿಷರು ಆಳುತ್ತಿದ್ದಾಗ ಕೂಡ ಅಲ್ಲಿ ಕನ್ನಡಕ್ಕೇ ಹೆಚ್ಚಿನ ಮನ್ನಣೆ. ಹೀಗಾಗಿ ಕನ್ನಡ ಮುದ್ರಣಾಲಯವೂ ಅಲ್ಲಿತ್ತು. ಭಾರತ ಸರ್ಕಾರದ ಗ್ರಂಥಸ್ವಾಮ್ಯ ಅಕ್ಟ್ xxv (೧೮೬೭) ರ ಪ್ರಕಾರ ಪುಸ್ತಕದ ಹಕ್ಕನ್ನು ಕಾಯ್ದಿರಿಸಿ ೧೮೮೬ರಲ್ಲಿ ಜೈನ ಲಾ ಮತ್ತು ಪ್ರಯೋಗಗಳು (Jaina Law and Usages) ಪುಸ್ತಕ ಅಚ್ಚಾಯಿತು. ಆಗ ಇದರ ಬೆಲೆ ಎಂಟು ಆಣೆ, ಅಂದರೆ ಇಂದಿನ ನಾಣ್ಯ ಚಲಾವಣೆ ಲೆಕ್ಕದ ಪ್ರಕಾರ ಅಯ್ವತ್ತು ಪೈಸೆ. ಕನ್ನಡ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಲು ತೊಡಗಿದ ಮೇಲೆ ಸಾಮಾನ್ಯವಾಗಿ ಪ್ರತಿಗ್ರಂಥದ ಐನೂರು ಪ್ರತಿಗಳನ್ನು ಮಾತ್ರ ಮುದ್ರಿಸುವ ಪರಿಪಾಟಿ ಇಟ್ಟುಕೊಂಡಿದ್ದರು. ಪ್ರತಿಯೊಂದು ಪುಸ್ತಕ ಪ್ರಕಟವಾದಗಲೂ ಆ ಶೀರ್ಷಿಕೆಯಿರುವ ಪುಸ್ತಕದ ಎಷ್ಟು ಪ್ರತಿಗಳನ್ನು ಮುದ್ರಿಸಲಾಯಿತೆಂಬುದನ್ನು ಪುಸ್ತಕದ ಮುಖಪುಟದ ಮೇಲೆ ನಮೂದಿಸುತ್ತಿದ್ದರು. ಅದರಂತೆ ಆಯ್ನೂರು ಪ್ರತಿಗಳನ್ನು ಮುದ್ರಿಸುವ ಕ್ರಮವಿತ್ತೆಂದು ತಿಳಿದು ಬರುತ್ತದೆ. ಆದರೆ ಜೈನ ಲಾ ಪುಸ್ತಕದ ಒಂದು ಸಾವಿರ ಪ್ರತಿಗಳನ್ನು ಪ್ರಿಂಟ್ ಮಾಡಿರುವುದನ್ನು ಸೂಚಿಸಿದ್ದಾರೆ. ಈ ಹೆಚ್ಚಳಕ್ಕೆ ಇದ್ದ ಮುಖ್ಯ ಕಾರಣ ಇದರ ಪ್ರಸರಣಕ್ಕೆ ಹೆಚ್ಚು ಅವಕಾಶ ಇದ್ದಿತೆಂಬುದು. ತತ್ವಾರ್ಥಸೂತ್ರ ಕರ್ಣಾಟ ವ್ಯಾಖ್ಯಾನಂ ಎಂಬ ಪುಸ್ತಕದ ೭೫೦ ಪ್ರತಿಗಳನ್ನು ಮುದ್ರಿಸಿದ್ದಾರೆ.

ಜೈನ ಲಾ-ಪುಸ್ತಕಕ್ಕೆ ಇಂಗ್ಲಿಷಿನಲ್ಲಿಯೂ ಮರಾಠಿಯಲ್ಲಿಯೂ ವಿಜ್ಞಾಪನೆಯ ರೂಪದಲ್ಲಿ ಕೆಲವು ಮಾತುಗಳನ್ನು ಬರೆದಿದ್ದಾರೆ. ಅದರ ಸಾರಾಂಶವಿಷ್ಟು: “ಈ ಪುಸ್ತಕದ ದಾಯಭಾಗ ಮುಂತಾದ ಕಡೆ ಇನ್ನೂ ಕೆಲವು ಸೇರ್ಪಡೆ ಆಗಬೇಕಾದಿದ್ದೆ. ಅದನ್ನು ಅತಿ ಬೇಗನೆ ಮುದ್ರಿಸಲಾಗುವುದು. ಮೂಲ ಜೈನ ಶಾಸ್ತ್ರಗ್ರಂಥಗಳಿಂದ ಈ ಜೈನ ಲಾವನ್ನು ಸಂಗ್ರಹಿಸಲಾಗಿದೆ. ಈ ಸಂಗ್ರಹ ಕಾರ್ಯದಲ್ಲಿ ಮೈಸೂರು ಜಿಲ್ಲೆಯ ಚಾಮಾರಜಾನಗರವಾಸಿ ಬ್ರಹ್ಮಸೂರಿ ಪಂಡಿತರು(ಪದ್ಮರಾಜ ಪಂಡಿತರ ತಂದೆ) ಸಹಕಾರ ನೀಡಿದ್ದಾರೆ. ಇವುಗಳನ್ನು ಬೆಳಗಾವಿ ನ್ಯಾಯಾಲಯದ ಧರಣೀಂದ್ರ ಜಿನ್ನಪ್ಪ ವಕೀಲರು (ಇಂಗ್ಲಿಷಿಗೆ) ಅನುವಾದಿಸಿ ಕೊಟ್ಟಿದ್ದಾರೆ. ಈ ಪುಸ್ತಕವನ್ನು ಪ್ರಕಟಿಸಲು ಕೆಳಕಂಡ ಹೆಸರಿನವರು ಹಣಸಹಾಯ ಮಾಡಿದ್ದಾರೆ:-

೧. ಸ್ವಸ್ತಿಶ್ರೀ ದೇವೇಂದ್ರ ಕೀರ್ತಿಭಟ್ಟಾರಕ ಪಟ್ಟಾಚಾರ್ಯ
ಸ್ವಾಮಿಗಳವರು, ಹೊಂಬುಜ ಮಠ

೨. ಶಾಂತಿಸಾಗರ ಸ್ವಾಮಿಗಳು, ಷಹಾಪುರ

೩. ಮೂಡಬಿದ್ರಿ ಚೌಟರ ಅರಮನೆಯ ಕುಂಜಮ ಶೆಟ್ರು

೪. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆಡಳಿತ ಮಂಡಳಿ ಸದಸ್ಯರೂ ಆದ ಕುಂದ ಹೆಗ್ಗಡೆಯವರು-ಕುತ್ಯಾಲ ಅರಮನೆ ಲಕ್ಷ್ಮಪ್ಪರಸು.

ಹೀಗಾಗಿ ಈ ಪುಸ್ತಕ ಒಂದರ್ಥದಲ್ಲಿ ತಂದೆ-ಮಗ ಸೇರಿ ಸಿದ್ಧ ಪಡಿಸಿದ ಗ್ರಂಥ. ಪ್ರಾಚೀನ ಕಾಲದಿಂದಲೂ ಜೈನಸಮಾಜ ತನ್ನದೇ ಆದ ಕಾನೂನು ಕಟ್ಟಳೆ ಪಡೆದಿರುವುದನ್ನು ದೃಷ್ಟಾಂತಗಳೊಂದಿಗೆ ಇದರಲ್ಲಿ ತೋರಿಸಿದೆ. ಈ ಕಾನೂನು ಪರಂಪರೆ ತೀರ್ಥಂಕರ ಪ್ರಣೀತವಾಗಿ ಪೂಜ್ಯಪಾದ, ಗುಣಭದ್ರ ಹಸ್ತಿಮಲ್ಲಷೇಣಾಚಾರ್ಯ, ಆಶಾಧರ, ಭಟ್ಟಾಕಲಂಕ, ನೇಮಿ ಚಂದ್ರಾಚಾರ್ಯ ಮತ್ತು ಬ್ರಹ್ಮಸೂರಿ (‘ಪಪಂ’ರ ತಂದೆ) ಇವರುಗಳು ರಚಿಸಿರುವ ಕೃತಿಗಳಲ್ಲಿ ದಾಖಲಾಗಿರುವುದನ್ನು ಉದಾಹರಿಸಿದೆ. ಬ್ರಾಹ್ಮಣ, ಗಾಂಧರ್ವ, ಸ್ವಯಂವರ ರಾಕ್ಷಸ, ಅಸುರ, ಪೈಶಾಚ ಎಲ್ಲ ಆರು ಬಗೆಯ ಮದುವೆಯ ಮಾಹಿತಿ, ಪುತ್ರನನ್ನು ದತ್ತು ತೆಗೆದುಕೊಳ್ಳುವುದು, ಸ್ವೀಕೃತನ ಹಕ್ಕು ಕರ್ತವ್ಯಗಳು ರಕ್ಷಕತ್ವ, ವಿನಿಯೋಗ ದಾಯಭಾಗ, ದಾಯಬಾಧ್ಯತೆ ಸ್ತ್ರೀಧನ, ಜೀವನಾಂಶ, ಕ್ರಯವಿಕ್ರಯ-ಮೊದಲಾದ ಕಾನೂನುಕಕ್ಷೆಗೆ ಸೇರಿದ ವಿಷಯಗಳಿವೆ.

ಈ ಜೈನ ಲಾ ಪುಸ್ತಕದ ಕಡೆಯಲ್ಲಿ ‘ಪಪಂ’ರು ಇದೇ ಕಾನೂನು ವಿಷಯ ಸಂಬಂಧಿಸಿದಂತೆ ಸ್ಮೃತಿ ಸಂಗ್ರಹ ಎಂಬ ಮತ್ತೊಂದು ಗ್ರಂಥವನ್ನು ಪ್ರಕಟಿಸಲಿರುವುದನ್ನೂ ಅದರಲ್ಲಿ ಹನ್ನೊಂದು ಅಧ್ಯಾಯ-ಪ್ರಕರಣಗಳಲ್ಲಿ ಏನೇನು ವಿಷಯಗಳು ಒಳಗೊಂಡಿವೆ. ಎಂಬುದನ್ನೂ ಓದುಗರಿಗೆ ತಿಳಿಸಿದ್ದಾರೆ: “ಪ್ರತಿ ಅಧ್ಯಾಯಗಳ ಅರ್ಥವೂ ಅವುಗಳ ಮುಖ್ಯ ತಾತ್ಪರ್ಯವೂ ಉದಾಹರಣೆಯೂ ಇಂಡ್ಯಾದಲ್ಲಿ ಇರತಕ್ಕ ಜೈನ ಮತಸ್ಥರ ಭೇದ, ಅವರುಗಳ ಸಾಂಪ್ರಾಯ, ಅವರು ಆಚರಿಸುವ ಗ್ರಂಥ, ಆ ಗ್ರಂಥಕರ್ತೃಗಳ ಶಕೆ ಸಹ ಇಂಗ್ಲೀಷ ತರ್ಜುಮೆಯಿಂದ ಪ್ರಕಟಿಸಲ್ಪಡುತ್ತೆ. ಈ ವಿಷಯದಲ್ಲಿ ಗವರ್ನಮೆಂಟಿನವರು ಸಹಾಯ ಮಾಡುವುದಾದರೆ ಶೀಘ್ರದಲ್ಲೇ ನೆರವೇರುವುದಕ್ಕೇನು ಹರ್ಕತ್ತಿಲ್ಲ” (ಜೈನ ಲಾ: ಪು. ೩೮ರಲ್ಲಿ ಕಡೆಯ ಪ್ಯಾರಾ). ಈ ಸ್ಮೃತಿ ಸಂಗ್ರಹ ಪುಸ್ತಕದ ಇನ್ನೊಂದು ಹೆಸರು ತ್ರೈವರ್ಣಿಕ ಸಂಗ್ರಹ. ಜೈನ ಲಾ ಪುಸ್ತಕ ಅಚ್ಚಾದ (೧೮೮೬) ಎರಡು ವರ್ಷಕ್ಕೆ ಸ್ಮೃತಿ ಸಂಗ್ರಹ ಗ್ರಂಥವನ್ನು ೧೮೮೮ರಲ್ಲಿ ಹೊರತಂದರು.

ವಿವಾಹ ವಿಚಾರಕ್ಕೆ ಬರೋಣ. ಮದುವೆಯ ಸಂಬಂಧದ ಕಾನೂನು ಸೂಕ್ಷ್ಮಗಳಲು ಪೆಡಸಾಗಿದ್ದುವು: “ಸ್ವಜಾತಿ ಸ್ತ್ರೀಯನ್ನೇ ವಿವಾಹ ಮಾಡಿಕೊಳ್ಳಬೇಕು. ಸ್ವಜಾತಿ ಕನ್ನಿಕೆಯು ಅಗ್ನಿ ಸಾಕ್ಷಿಯಾಗಿ ತಂದೆಯಿಂದ ವರನಿಗೆ ಕೊಡಲ್ಪಟ್ಟರೆ ಅದಕ್ಕೆ ವಿವಾಹವೆಂದು ಹೆಸರು” (ಪು.೮)-ಎಂಬ ವಿವರಣೆಯಿದೆ. ಮನುಸ್ಮೃತಿ (ಸುಮಾರು ಕ್ರಿ: ಶ ಒಂದನೆಯ ಶತಮಾನ) ‘ಹಿಂದೂ ಲಾ’ಗೆ ಒಂದು ಬೇರು ಎಂದು ತಿಳಿಯಲಾಗಿದೆ ಅದರ ಆ ಮನುಸ್ಮೃತಿಗೆ ಕೂಡ ಕೆಲವು ಭಾಗಗಳಲ್ಲಿ ಜೈನಧರ್ಮದ ಪ್ರಭಾವ ಆಗಿದೆಯೆಂದು ಜೆ. ಡೆರೆಟ್ ಮತ್ತು ಎಂ. ಡಂಕನರು ಬರೆದಿದ್ದಾರೆ. (J. Derret, & M. Duncan: Scrupulousness and a Hindu Jain Contract, Journal of the Royal Asiatic Society of Great Britain and Ireland, 1980: 144-67). ಈ ಸಂಗತಿಯಿಂದ ಸ್ಪಷ್ಟವಾಗಿ ಸಾಭೀತು ಆಗುವುದೆಂದರೆ ಅಷ್ಟು ಹಿಂದೆಯೇ ಜೈನ ಕಾನೂನಿನ ಅರಿವು ಜೈನೇತರರಲ್ಲೂ ಹರಡಿತ್ತು ಎಂಬುದು.

“ಮದುವೆಗೆ ಸಲ್ಲದ ವಾವೆಗಳು-ಭಿನ್ನ ಗೋತ್ರವಾದಾಗ್ಯೂ ತಾಯಿ, ತಂಗಿ, ಮಗಳು, ಅಕ್ಕ, ಅಕ್ಕನ ಮಕ್ಕಳು, ಈ ವಾವೆಗಳನ್ನು ಬಿಟ್ಟು ವಿವಾಹ ಮಾಡಿಕೊಳ್ಳಬೇಕು” (ಪು.೧೭).

ಜೈನ ಆಗಮಗಳಲ್ಲಿ ಹೇಳಲಾಗಿರುವ ನಿಯಮಗಳನ್ನು ‘ಸರ್ವಮಾನ್ಯ ಕಾನೂನುಕಟ್ಟಳೆ’ ಗಳೆಂದು ಪರಿಗಣಿತವಾಗಿರಲಿಲ್ಲವೆಂಬುದು ಕಾನೂನು ಪ್ರಾಧ್ಯಾಪಕರೊಬ್ಬರ ಅಭಿಪ್ರಾಯ (ವರ್ನರ್ ಮೆನಸ್ಕಿ ೨೦೦೬). ಈ ಹಿನ್ನೆಲೆಯಲ್ಲಿ ‘ಪಪಂ’ರ ಕಾನೂನು ಕೈಪಿಡಿ ಮತ್ತಷ್ಟು ಮಹತ್ವ ಮತ್ತು ವ್ಯಾಪ್ತಿ ಪಡೆದಂತಾಗಿದೆ. ಜೈನ ಲಾ ಪುಸ್ತಕವೂ ಕಾನೂನು ಕ್ಷೇತ್ರದ ತಜ್ಞರ ಗಮನ ಸೆಳಯಿತಲ್ಲದೆ ಈ ವಿಷಯವಾಗಿ ಅನಂತರದ ಬರೆಹಕ್ಕೆ ಆಕರವಾಯಿತು.

ವಿಧವೆಯರ ಹಕ್ಕು ಬಾಧ್ಯತೆ, ಮಗನನ್ನು ದತ್ತು ತೆಗೆದು ಕೊಳ್ಳುವುದು-ಇವು ನ್ಯಾಯಾಲಯದಲ್ಲಿ ಮುಖ್ಯ ಚರ್ಚೆಗೆ ಬಂದ ಸಂಗತಿಗಳಾಗಿದ್ದುವು. ಈ ಜೈನ ಲಾ ಪುಸ್ತಕದಲ್ಲಿ ಇದರ ಸಂಬಂಧ ಮಾಹಿತಿ ಅಡಕವಾಗಿದೆ. ಜೈನ ಪರಂಪರೆಯಲ್ಲಿ ಲಾಗಾಯ್ತಿನಿಂದಲೂ ದತ್ತು ಸ್ವೀಕರಿಸಲು ಪರವಾನಿಗಿಯಿದೆ. “ಪುತ್ರ ಸ್ವೀಕಾರ. ತನ್ನ ಸ್ವಸಂತತಿ ಇದ್ದವನು ಪುತ್ರ ಸ್ವೀಕಾರ ಮಾಡುವುದಕ್ಕಾಗುವುದಿಲ್ಲ. ತನ್ನ ಸ್ವಸಂತತಿ ನಾಶವಾಗುತ್ತಾ ಇದ್ದ ಪಕ್ಷದಲ್ಲಿ ಸ್ವತಂತತಿ ಅಭಿವೃದ್ಧಿಗಾಗಿ ಪುತ್ರಸ್ವೀಕಾರ ಮಾಡಿಕೊಳ್ಳಬೇಕು ಉಪನಯನ ಕಾಲದಲ್ಲಿ ಗೋತ್ರ ಸೂತ್ರ ಶಾಖ ಪ್ರವರ ಹೇಳಿಕೊಂಡು ಪ್ರತಿದಿನವೂ ಸಂಧ್ಯಾವಂದನೆ ಮಾಡತಕ್ಕ ಕ್ರಮವಿರುವ ಕಾರಣ ಉಪನಯನಾನಂತರ ಸ್ವೀಕಾರ ಸಲ್ಲುವುದಿಲ್ಲ. ನಡೆದ ಸ್ವೀಕಾರವು ರದ್ದು ಆಗುವುದೂ ಇಲ್ಲ. ಸ್ವಗೋತ್ರದಲ್ಲಾಗಲಿ. ಸ್ವಜಾತಿಯಲ್ಲಾಗಲಿ ಸ್ವೀಕರಿಸಬೇಕು” (ಪು. ೧೯-೨೦). ತರುವಾಯ ಇಲ್ಲಿಂದ ಮುಂದೆ ಸ್ವೀಕೃತನ ಹಕ್ಕು ಕರ್ತವ್ಯಗಳನ್ನು ನಿರೂಪಿಸಿದೆಯಲ್ಲದೆ ಕುಟುಂಬದಲ್ಲಿರುವವರನ್ನು ರಕ್ಷಿಸಬೇಕಾದ ಕರ್ತವ್ಯಪಾಲನೆಯನ್ನೂ ಹೇಳಿದೆ. ಇಲ್ಲಿನ ಪ್ರತಿಯೊಂದೂ ಪ್ರಾಮುಖ್ಯ ಪಡೆಯಬೇಕಾದ ಪ್ರಮೇಯ ಅಂದಿನ ನ್ಯಾಯಾಲಯಗಳಲ್ಲಿ ಉಂಟಾಗಿತ್ತು. ಎಲ್ಲ ಮತಧರ್ಮಗಳಲ್ಲಿ ಸಂಭವಿಸಿದಂತೆ ಜೈನ ಸಮಾಜದಲ್ಲೂ ದತ್ತು ಸ್ವೀಕಾರ ಆಸ್ತಿಪಾಸ್ತಿ ಪಾಲಾಗುವುದು, ವಿಲೇವಾರಿ, ದಾಯಿತ್ವ-ಈ ಬಗ್ಗೆ ತಕರಾರುಗಳು ಕೋರ್ಟಿನಕಟಕಟೆ ಹತ್ತಿದ್ದುವು. ‘ಪಪಂ’ರ ಪುಸ್ತಕದಲ್ಲಿ ಈ ಸಂಬಂಧ ನಿಚ್ಛಳ ವಿವರಣೆ, ಕಾನೂನು ಉಲ್ಲೇಖಗೊಂಡಿದೆ:

“ಪಿತರಾರ್ಜಿತ ಸ್ವತ್ತಿನ ವಿನಿಯೋಗ-ಸಂತತಿ ಇದ್ದವನು ಪಿತರಾರ್ಜಿತ ಸ್ವತ್ತನ್ನು ವಿಕ್ರಯಿಸಕೂಡದು. ಕುಟುಂಬ ಸಂರಕ್ಷಣೇ ವಿಷಯದಲ್ಲಿ ಸ್ವಯಾರ್ಜಿ ಸ್ವತ್ತಿನಂತೆ ಪಿತರಾರ್ಜಿತ ಸ್ವತ್ತನ್ನು ವಿಕ್ರಯಿಸಬೇಕು.

ಸ್ತ್ರೀಧನ ವಿನಿಯೋಗ – ಗಂಡ, ತಂದೆ ಮುಂತಾದವರಿಂದ ಕೊಡಲ್ಪಟ್ಟ ದ್ರವ್ಯವು ಸ್ತ್ರೀಧನ. ಈ ಸ್ತ್ರೀಧನವನ್ನು ವಿಕ್ರಯಿಸಕೂಡದು. ತನಗೆ ತಿನ್ನುವದಕ್ಕೆ ಇಲ್ಲದೆ ಇರುವ ಕಾಲದಲ್ಲಿ ವಿಕ್ರಯಿಸಬಹುದು.

“ಪುತ್ರ ಮುಂತಾದ ವಿನಿಯೋಗ-ತನಗೆ ಬರುವ ಆಪತ್ತು ಮೊ‌ದಲಾದ ವಿಷಯಗಳಲ್ಲು ಪುತ್ರ, ಸ್ತ್ರೀ ಇವರುಗಳನ್ನು ವಿಶ್ರಯಿಸಕೂಡದು ಮತ್ತು ತನ್ನ ವಂಶದವರಿಗೆ ಏನೂ ಇಲ್ಲದಂತೆ ಸರ್ವಸ್ವತ್ತನ್ನು ವಿಕ್ರಯಿಸಕೂಡು” (ಪು. ೨೨-೨೪).

‘ಪಪಂ’ರು ಕರ್ನಾಟಕದಲ್ಲಿದ್ದು ಪುಸ್ತಕ ಪ್ರಕಟಣೆ ಮತ್ತು ಗ್ರಂಥಸಂಪಾದನೆಯ ಕಾರ್ಯ ಆರಂಭಿಸಿದ್ದು ೧೮೮೭ರಿಂದ, ಉದಯಾದಿತ್ಯಾಲಂಕಾರ ಎಂಬ ಪುಸ್ತಕದಿಂದ -ಇದನ್ನು ಆಗಲೇ ತಿಳಿಸಿದೆ. ಇಲ್ಲಿ ಮತ್ತೆ ಅದನ್ನು ಪರಸ್ತಾಪಿಸುತ್ತಿರುವುದು ಏಕೆಂದರೆ, ಅದಕ್ಕೂ ಮೊದಲೇ ೧೮೮೬ರಲ್ಲಿಯೇ ಜೈನ ಲಾ ಪುಸ್ತಕ ಪ್ರಕಟಿಸಿದರೆಂಬುದನ್ನು ಸೂಚಿಸಲು. ಅಖಿಲ ಭಾರತ ಮಟ್ಟದಲ್ಲಿ ಜೈನ ಸಾಮಾಜಿಕ ರಂಗದಲ್ಲಿ, ಸಂಘಟನೆಯ ಚಟಿವಟಿಕೆ ಚಾಲೂ ಆಗಿದ್ದು ‘ಪಪಂ’ರ ಪುಸ್ತಕ ಪ್ರಕಟನೆ ಆದ ನಂತರ ಕಾಲದಲ್ಲಿ ೧೯೧೦ರಲ್ಲಿ. ದಿಗಂಬರ ರಾಷ್ಟ್ರೀಯ ಮಹಾಸಭಾದ ಸಮಾವೇಶ ೧೯೧೦ರಲ್ಲಿ ನಡೆದಾಗ ‘ಜೈನಲಾ ಕಮಿಟಿ’ ಯೊಂದನ್ನು ರಚಿಸಿದರು. ಅದರ ಪ್ರಧಾನ ಉದ್ದೇಶ-ಜೈನ ಸಮಾಜಕ್ಕೆ ಒಂದು ಸಮಾನ ಕಾನೂನು ಸಂಹಿತೆ ರೂಪಿಸುವುದು ಮತ್ತು ಹಕ್ಕುಬಾಧ್ಯತೆ, ಅನುಕೂಲಗಳನ್ನು ರಾಜಕೀಯರಂಗದ/ಸರಕಾರದ ಮೂಲಕ ಪಡೆಯುವುದು. ಭದ್ರಬಾಹು ಸಂಹಿತಾವನ್ನು ಬ್ಯಾರಿಸ್ಟರ್ ಜಗಮಂದರಲಾಲ ಜೈನರು (೧೮೮೧-೧೯೨೭) ಭಾಷಾಂತರಿಸಿದ್ದು ಪ್ರಕಟವಾಯಿತು (೧೯೧೬). ಮಾಂಟೇಗ್ ಡಿಕ್ಲರೇಷನ್ ಪ್ರಕಟವಾದ ಮೇಲೆ (೧೯೧೭) ಜೈನ ರಾಜಕೀಯ ಪರಿಷತ್ ಸ್ಥಾಪಿತವಾಯಿತು. ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ನಡೆಯಿತು.

ಚಂಪತ್ ರಾಯ್ ಜೈನರೂ (೧೮೬೭-೧೯೪೨) ಜೈನ ಲಾ ಸಾಮಗ್ರಿ ಸಂಚಯ (೧೯೨೬) ನಿರತರಾದರು. ಇವೆಲ್ಲದರ ಅನುಸಂಧಾನದಿಂದ ಐತಿಹಾಸಿಕ ಮಹತ್ವದ ತೀರ್ಪು ಗಟಿಪ್ಪ V ಈರಮ್ಮ (೧೯೨೭ AIR Madras 228) ಹೊರಬಿದ್ದಿತು. ಈ ಚಾರಿತ್ರಿಕ ತೀರ್ಪಿನಲ್ಲಿ ‘ಜೈನರು ಹಿಂದೂಗಳಿಂದ ಸಿಡಿದವರಲ್ಲ, ಜೈನರು ಸ್ವತಂತ್ರ ಧರ್ಮಾನುಯಾಯಿಗಳು. ಅವರೊಂದು ಪ್ರತ್ಯೇಕ ಗುಂಪು’ ಎಂದು ಘೋಷಿತವಾಯಿತು.

ಇಷ್ಟು ಸತತವಾಗಿ ಪ್ರಯತ್ನಗಳು ನಡೆದು ನ್ಯಾಯಾಲಯದ ತೀರ್ಪೊಂದು ಜೈನರು ಸ್ವತಂತ್ರ ಧರ್ಮಾನುಯಾಯಿಗಳೆಂದು ಸಾರಿದ್ದರೂ ಅದರ ಸಿಂಧುತ್ವ, ಸತ್ಯ ಸರ್ವತ್ರ ಮನ್ನಣೆಗೆ ಒಳಗಾಗಲಿಲ್ಲ. ಡಾ. ಹರಿ ಸಿಂಗ್ ಗೌರ್ (೧೮೬೯-೧೯೪೯) ಎಂಬ ಪ್ರಸಿದ್ಧ ಕಾನೂನು ತಜ್ಞರು ಹಿಂದು ಕೋಡ್ (೧೯೧೯) ಪುಸ್ತಕದ ಪರಿಷ್ಕೃತ ಮೂರನೆಯ ಮುದ್ರಣ ೧೯೨೯ರಲ್ಲಿ ಹೊರಬಂದಾಗ ಕೂಡ ‘ಜೈನರು ಹಿಂದೂ ಕಾನೂನಿನ ಕಕ್ಷೆಯಲ್ಲಿ ಬರುತ್ತಾರೆ’ ಎಂದು ಅದೇ ಹಳೆಯ ಹೇಳಿಕೆಯನ್ನು ಉಳಿಸಿದ್ದರು. ಬ್ಯಾರಿಸ್ಟರ್ ಜಗಮಂದರಲಾಲ್ ಜೈನರುಇದನ್ನು ತೀಕ್ಷಣವಾಗಿ ವಿರೋಧಿಸಿದರು- “ಹಿಂದೂಲಾ ಜೈನರಿಗೂ ಅನ್ವಯಿಸುತ್ತದೆಂಬುದು ಸರಿಯಲ್ಲ. ಅದು ಕಾನೂನಿಗೆ ವಿರುದ್ಧವಾದಹೇಳಿಕೆ. ಮತ್ತು ಮತ್ತು ಧರ್ಮಗಳ ನಡುವಣ ವ್ಯತ್ಯಾಸ ಗಮನಿಸದೇ ಡಾ || ಗೌರ್ ಎಡವಿದ್ದಾರೆ” – ಎಂದು ವಾದಿಸಿ ಬರೆದರಲ್ಲದೆ ತಮ್ಮ ವಾದದ ಸಮರ್ಥನೆಗೆ ಬ್ರಿಟಿಷ್ ಲೇಖಕರ ಹಾಗೂ ನ್ಯಾಯಲಯ ತೀರ್ಪುಗಳನ್ನು ಉದಾಹರಿಸಿದ್ದರು.

ಅಂದಿನ, ೧೯-೨೦ನೆಯ ಶತಮಾನದ, ನ್ಯಾಯಾಂಗ ಪರಿಸರ ಜೈನ ಸಮಾಜವನ್ನು ವಿಚಿತ್ರ ಇಕ್ಕಟ್ಟಿಗೆ ಸಿಗಿಸಿತ್ತು, ಮುಜಗರ ತಂದಿತ್ತು. ವಸಾಹತುಷಾಹಿಯ ನ್ಯಾಯಾಲಗಳೂ ಪ್ರಿವಿಕೌನ್ಸಿಲ್‌ಇವೆಲ್ಲ ಹಿಂದೂಲಾ ಒಂದನ್ನೇ ಪರಿಗಣಿಸಿ ಜೈನರನ್ನು ‘ಹಿಂದೂ ಅನಂಗೀಕಾರಿಗಳು’ ಎಂದು ಷರಾಬರೆದರು “ಹಿಂದೂಲಾದಲ್ಲಿ ದತ್ತು ಪದ್ಧತಿಗೆ ಹೇಳಿರುವ ನಿಯಮವೇ ಜೈನರಿಗೂ ಅನ್ವಯಿಸಲಾಗಿದೆ. ಜೈನರಿಗೆ ಹಿಂದೂಲಾ ಅನ್ವಯ ಆಗುತ್ತದೆ.” ೧೮೬೭ರಲ್ಲಿ ಕಲಕತ್ತಾ ಹೈ ಕೋರ್ಟು ‘ಜೈನಧರ್ಮ ತಾನು ಸ್ವತಂತ್ರ ಧರ್ಮವೆಂದು ಸ್ಥಾಪಿಸಲು ಬೇಕಾದ ಸಮರ್ಥ ಆಧಾರಗಳನ್ನು ಒದಗಿಸಲು ವಿಫಲವಾಗಿದೆ’ ಎಂದು ತೀರ್ಪು ನೀಡಿತು. ‘ಜೈನಲಾ’ ಎಂಬ ಶಬ್ದ ೧೮೮೧ರಿಂದ ಚಲಾವಣೆಗೆ ಬಂದಿತು. ಅದನ್ನು ಬಳಸಿ ಬೇಗ ಚಲಾವಣೆಯಲ್ಲಿ ಜನಪ್ರಿಯಗೊಳಿಸಿದ್ದು ‘ಪಪಂ’ರು.

ಕಲಕತ್ತಾ ಹೈ ಕೋರ್ಟು ‘ಜೈನಧರ್ಮ ಸ್ವತಂತ್ರ ಧರ್ಮವೆಂದು ಸಾರಲು ಬೇಕಾದ ಆಧಾರಗಳನ್ನು ತೋರಿಸಲು ವಿಫಲವಾಗಿದೆ’-ಎಂದು ಹೇಳಿದ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಜೈನರ ಜಾಗೃತಿಗೆ ಪ್ರಯತ್ನಗಳಾದುವು. ಕಾನೂನು ಸಾಮಗ್ರಿ ಸಂಚಯಕ್ಕೆ ಬುನಾದಿ ಆಯಿತು. ಮೂಲ ಆಕರಗಳ ಅನ್ವೇಷಣೆಗೆ ತೊಡಗಿದರು. ಪ್ರಾಚೀನ ಆಗಮ ಶಾಸ್ತ್ರಗ್ರಂಥಗಳು ಹೇರಳವಾಗಿದ್ದುವು. ಅವನ್ನು ಅನ್ಯರು ನಾಶಪಡಿಸದಿರಲೆಂದು ನೆಲಮಾಳಿಗೆಯ ಶ್ರುತಭಂಡಾರಗಳಲ್ಲಿ ಕಾಪಾಡಿದ್ದರೇ ಹೊರತು ಬಲ್ಲಿದರಿಗೂ ಸಹ ಓದಲು ಅವು ಸಿಗದಂತಾಗಿತ್ತು. ಇಂತಹ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಯೋಗಾಯೋಗದಿಂದ ಜ್ಞಾನಭಂಡಾರಗಳ ಬಾಗಿಲು ತೆರೆಸುವ ಕೆಲಸಕ್ಕೆ ಜರ್ಮನಿಯ ಇಬ್ಬರು ವಿದ್ವಾಂಸರ ಯೋಗದಾ ಒದಗಿ ಬಂದಿತು. ಜಾರ್ಜ್‌‌ಬೂಲರ್ (೧೮೩೭-೯೮) ಮತ್ತು ಹರ್ಮನ್ ಯಾಕೋಬಿ (೧೮೫೦-೧೯೩೭)-ಇವರಿಬ್ಬರ ಭಗೀರಥ ಪ್ರಯತ್ನದಿಂದ ಜೈನಾಗಮಗಂಗೆಯ ಅವತರಣಕ್ಕೆ ನಾಂದಿ ಆಯಿತು. ಸೇಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್(ಪೂರ್ವದೇಶದ ಪವಿತ್ರ ಗ್ರಂಥಗಳು) ಪ್ರಕಟನ ಮಾಲೆಯನ್ನು ಮ್ಯಾಕ್ಸ್ ಮುಲರರು ಪ್ರಾರಂಭಿಸಿದ್ದರು. ಆ ಮಾಲೆಯಲ್ಲಿ ಹರ್ಮನ್ ಯಾಕೋಬಿ (Herman jacobi) ಸಿದ್ಧಪಡಿಸಿದ ಜೈನ ಸೂತ್ರಗಳು ಮತ್ತು ಕಲ್ಪಸೂತ್ರ ಗ್ರಂಥಗಳು ೧೮೮೪ರಲ್ಲಿ ಅಚ್ಚಾದುವು. ಇದರ ಪ್ರಭಾವದಿಂದ ಜೈನ ಧರ್ಮ ಒಂದು ಸ್ವತಂತ್ರವಾಗಿ ರೂಪಗೊಂಡ ಧರ್ಮವೆಂದೂ, ಬೌದ್ಧಧರ್ಮಕ್ಕಿಂತಲೂ ಪ್ರಾಚೀನವಾದುದೆಂದು ಸ್ಥಾಪಿತವಾಯಿತು. ಈ ಪ್ರಕಟಣೆಗಳು ಹೊಸ ವೈಚಾರಿಕ ಅಲೆ ಎಬ್ಬಿಸಿದುವು. ಮುಂಬಯಿಯಲ್ಲಿ (೧೮೮೨ರಲ್ಲೆ ಸ್ಥಾಪಿತವಾಗಿದ್ದ) ಭಾರತ ಜೈನ ಮಹಾಮಂಡಲ ಹರ್ಷಪುಳಕಿತವಾಯಿತು, ೧೮೬೭ರ ಕಲಕತ್ತಾ ಹೈ ಕೋರ್ಟಿನ ತೀರ್ಪನ್ನು ಪಲ್ಲಟಗೊಳಿಸಲು ಪ್ರಬಲ ಪೋಷಕ ಸಾಮಗ್ರಿ ದೊರಕಿತೆಂದು!

ಈಗ ಮತ್ತೆ ಹಿಂದೆ ಪ್ರಸ್ತಾಪಿಸಿದ ಒಂದು ವಿಷಯಕ್ಕೆ ಮರಳೋಣ ‘ಪಪಂ’ರು ೧೮೮೬ರಲ್ಲಿಜೈನ ಲಾ ಪುಸ್ತಕವನ್ನು ಹೊರತರುವುದಕ್ಕೆ ಮೊದಲು ಹತ್ತೊಂಬತ್ತನೆಯ ಶತಮಾನದಲ್ಲಿ ಅಲ್ಲಿಯ ತನಕ, ನ್ಯಾಯಾಲಯದ ಕಟೆಕಟೆ ಹತ್ತಿದ್ದ ಜೈನರ ವಿವಾದಗಳು ಸಾಕಷ್ಟಿದ್ದುವೆಂದು ಹೇಳಿದ್ದಾಗಿದೆ. ಈಗಿಲ್ಲಿ ಅವುಗಳಲ್ಲಿ ಕೆಲವನ್ನು ತುಂಬ ಮಹತ್ವದ್ದೆಂದು ಅಂದಿನ ದಿನಮಾನದಲ್ಲಿ ತಿಳಿದಿದ್ದುವನ್ನು, ಹೆಸರಿಸುತ್ತೇನೆ. ಪ್ರಾ. ಪೀಟರ್ ಪ್ಲೊಗೆಲರು (೨೦೦೭:೫) ಇವನ್ನು ಉಲ್ಲೇಖಿಸಿರುವರು:

೧. ಮಹಾರಾಜ ಗೋವಿಂದನಾಥ ರೈ V ಗುಲಾಬ್ ಚಂದ್- (೧೮೩೩ ಶದ್ರ-ದೀವಾನ್-ಇ-ಅದಾಲತ್) ಕಲಕತ್ತ Sel. Rep.276. ಈ ತೀರ್ಪಿನ ಪ್ರಕಾರ ‘ಜೈನ ಶಾಸ್ತ್ರಗಳ ಪ್ರಕಾರ, ಮಗನಿಲ್ಲದ ವಿಧವೆ ಮಗನೊಬ್ಬನನ್ನು ದತ್ತು ಪಡೆಯಬಹುದು (ಮಗನಿಲ್ಲದ ಆಕೆಯ ಪತಿ ಹೇಗೆ ದತ್ತು ಮಗನನ್ನು ಪಡೆಯಬಹುದಿತೊಹಾಗೆ).

೨. ಭಗವಾನ್ ದಾಸ್ ತೇಜಮಲ್ V ರಾಜಮಲ್ ಭಗವಾನ್ ದಾಸ್ ತೇಜಮಲ್ V ರಾಜಮಲ್ (೧೯೭೩ ನಂ. ಬಾಂಬೆ ಹೈಕೋರ್ಟ್‌ ೨೪೧). ವಿಧವೆಗೆ ದತ್ತು ತೆಗೆದುಕೊಳ್ಳುವ ಹಕ್ಕಿಗೆ ಸಂಬಂಧಿಸಿದದು. ಇದು ಅಗರವಾಲ್ ಮಾರವಾಡಿ ಜೈನ ಕುಟುಂಬದಲ್ಲಿ ಉತ್ತರಾಧಿಕಾರಿ ಸಂಬಂಧ ಉಂಟಾದ ತಕರಾರು. ಬಾಂಬೆ ಹೈಕೋರ್ಟಿನ ಮುಂದೆ ಈ ಕೇಸು ಬಂದಿತ್ತು. ನ್ಯಾಯಾಧೀಶರಾದ C.J. Westroppರು ತಳೆದ ನಿಲುವಿಷ್ಟು-ಜೈನರು ಹಿಂದೂಲಾ ಪರಿಧಿಯೊಳಗೆ ಬರುತ್ತಾರೆ. ತಾವು ಪ್ರತ್ಯೇಕ ಆಚರಣೆಗೆ ಸೇರಿದವರೆಂಬುದುನ್ನು ಸ್ಥಾಪಿಸುವತನಕ. ಈ ತೀರ್ಪಿನವಿರುದ್ಧ ಅರ್ಜಿದಾರರು ಭಾರತದ ಪ್ರೀವಿಕೌನ್ಸಿಲ್ ಮುಂದೆ ಹೋದರು. ಆದರೆ ಅಲ್ಲಿ ಐತೀರ್ಪು ಕೊಡುವಾಗ- ’ಹಿಂದೂ ಮತ್ತು ಜೈನಲಾ ಕಸ್ಟಮ್ ನಡುವೆ ಅಂತರ ಇರುವುದು ದಿಟವೆನಿಸಿದರೂ ಜೈನರು, ತಮ್ಮ ಪ್ರತ್ಯೇಕ ಆಚಾರಪದ್ಧತಿಗಳು ಇರುವುದನ್ನು ತೋರಿಸುವ ಆಧಾರಗಳನ್ನು ಒದಗಿಸುವವರೆಗೆ ಹಿಂದೂ ಲಾದ ವ್ಯಾಪ್ತಿಗೆ ಒಳಪಡುತ್ತಾರೆ’ ಎಂಬ ಐತೀರ್ಪು ನೀಡಿತು.

ವಾಸ್ತವಾಂಶವೆಂದರೆ ಅಂದಿನ ನ್ಯಾಯಾಂಗಕ್ಕೆ ‘ಹಿಂದೂಲಾ’ವನ್ನು ರೂಪಿಸಿದ ಜೈನಲಾ ಮಾಹಿತಿ ನೀಡುವಂಥ ಯಾವ ಗ್ರಂಥವೂ ಲಭ್ಯವಿರಲಿಲ್ಲ. ಅದರಿಂದಾಗಿ ತೀರ್ಪುಗಳಲ್ಲಿ ಏರುಪೇರು ಆದುದನ್ನು ಕಂಡು ಜೈನಲಾತಜ್ಞರು ಕಣ್ಣು ತೆರೆದರು. ಅಚ್ಚರಿಯೆಂದರೆ ‘ಜೈನಲಾ’ದ ಪುಸ್ತಕವೊಂದರ ತುರ್ತು ಗುರುತಿಸಿದ ಮೊತ್ತಮೊದಲಿಗರಾದ ‘ಪಪಂ’ರು ಯಾವ ಕಾನೂನು ಕಾಲೇಜಿಗೆ ಹೋಗಿ ಕಲಿತವರಲ್ಲ, ಅಷ್ಟೇಕೆ ಕಾಲೇಜು ಮೆಟ್ಟಿಲು ಹತ್ತಿದವರೂ ಅಲ್ಲ. ಹೀಗಿದ್ದೂ ಸಂದರ್ಭದ ಗಂಭೀರತೆಯನ್ನು ವೇಗಾತಿವೇಗವಾಗಿ ಮನ ಗಂಡರು. ತಂದೆಯ ಓದಿನ ಹರಹು, ಮಗನ ಸಮಕಾಲೀನ ಜರೂರಿನ ತುಡಿತ, ಮುಖ್ಯವಾಗಿ ಮುಂಬಯಿ-ಮಹಾರಾಷ್ಟ್ರ ಕಡೆಯ ಸಮಾಜದ ಹಂಬಲ-ಈ ಮೂರರ ಮುಪ್ಪರಿಯ ಪರಿಣಾಮವಾಗಿ ‘ಜೈನಲಾ’ ಗ್ರಂಥಾವತರಣವಾಯಿತು. ಅಂದಿನ ಹಿರಿಯ ವಕೀಲರಾದ ಜಗಮಂದರಲಾಲ ಜೈನರೂ ಬ್ಯಾರಿಸ್ಟರ್ ಚಂಪತರಾಯ ಜೈನರೂ ‘ಜೈನರು ಹಿಂದೂ ಕಾಯ್ದೆಯಡಿ ಬರುತ್ತಾರೆ’ ಎಂಬ ತೀರ್ಪನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು. ಅತ್ತ ಉತ್ತರ ಭಾರತದಲ್ಲಿ ಇಷ್ಟೆಲ್ಲಾ ಪ್ರಯತ್ನಗಳು ಕಾನೂನು, ಕೋರ್ಟು ವ್ಯವಹಾರವಲಯದಲ್ಲಿ ನಡೆಯುತ್ತಿದ್ದರೂ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಷ್ಟೆ ಆ ವಿಚಾರದಲ್ಲಿ ಎಚ್ಚರ ಮೂಡಿದ್ದು ‘ಪಪಂ’ರಿಂದಾಗಿ.

ಗ್ರಂಥ ಪ್ರಕಟಣೆಯ ಮುಂದುವರಿಕೆ

ಪದ್ಮರಾಜ ಪಂಡಿತರು ೧೮೯೦ರಲ್ಲಿ ಮೈಸೂರು ಪುರಾತತ್ವ ಇಲಾಖೆಯಲ್ಲಿ ನೇಮಕರಾಗುವ ವೇಳೆಗೆ ಮೂರುನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದರು. ಅವರು ೧೯೧೭ರಲ್ಲಿ ನೌಕರಿಯಿಂದ ನಿವೃತ್ತರಾದರು, ಬೆಂಗಳೂರನ್ನು ಬಿಟು ಮತ್ತೆ ತೌರೂರು ಚಾಮರಾಜನಗರಕ್ಕೆ ಮರಳಿದರು. ಅಲ್ಲದೆ ತಾವೇ ಬೆಂಗಳೂರಲ್ಲಿ ಪ್ರಾರಂಭಿಸಿದ್ದ ಸ್ವಂತ ಮುದ್ರಣಾಲಯವನ್ನು ೧೯೧೭ರಲ್ಲಿ ಚಾಮರಾಜನಗರಕ್ಕೆ ಸ್ಥಳಾಂತರಿಸಿದರು (ಪ್ರೆಸ್ಸಿನ ಮತ್ತು ಪ್ರಕಾಶನಾದಿ ವಿವರಗಳನ್ನು ಮುಂದೆ ನೀಡಲಾಗುವುದು). ಈ ಭಾರತೀ ಭವ ಪ್ರಿಂಟಿಂಗ್ ಪ್ರೆಸ್ ಇಂದಿಗೂ ‘ಪಪಂ’ರ ಮೊಮ್ಮಗ ವಸುಪಾಲ ಪಂಡಿತರು (ಅಂದರ ಇಮ್ಮಡಿ ಬ್ರಹ್ಮಸೂರಿ ಪಂಡಿತರ ಮಗ) ಮುಂದುವರಿಸಿದ್ದಾರೆ, ಸೂಕ್ತ ಆಧುನಿಕ ಸೌಲಭ್ಯಗಳೊಂದಿಗೆ.

ನಿವೃತ್ತಿ ಜೀವನ

ಚಾಮರಾಜನಗರದಲ್ಲಿ ನೆಲಸಿದ ಮೇಲೆ ‘ಪಪಂ’ರ ಜೀವನ ಬೆಂಗಳೂರಲ್ಲಿ ನೌಕರಿಯಲ್ಲಿ ಇದ್ದ ದಿನಗಳಿಗಿಂತ ಚಟುವಟಿಕೆಯಿಂದ ಕೂಡಿತು. ಪುರುಸೊತ್ತು ಸಿಗದಷ್ಟು ಕೆಲಸ ಹೆಚ್ಚಾಯಿತು. ವಿಜಯ ಪಾರ್ಶ್ವನಾಥ ಬಸದಿಯ ಪೌರೋಹಿತ್ಯವನ್ನು ಮುಂದುವರಿಸಿದರು. ಅವರುಅರ್ಚಕರಾದ ಮೇಲೆ, ಅವರುಮಾಡುವ ಪೂಜಾ ವಿಧಾನದ ಸೊಗಸುಕಂಡು. ನಿತ್ಯದ ಪೂಜೆ ಅಭಿಷೇಕಗಳಿಗೂ ವಾರ್ಷಿಕ ಪೂಜೆಗೂ ಹಬ್ಬಗಳ ಪೂಜೆಗೂ ವೈಭವ ತಂದರು. ಅವರ ದಿನಚರಿ ಬೆಳಗಿನ ಜಾಮ ಆಯ್ದು ಗಂಟೆಗೆ ಎದ್ದು ಬಸದಿಯಲ್ಲಿ ಪೂಜೆಗೂ ಮತ್ತೆ ಸಂಜೆಗೂ ಬಸದಿಯಲ್ಲಿ ಹಾಜರಿರುತ್ತಿದ್ದರು. ತರುವಾಯ ಬೆಳಗ್ಗೆ ಹತ್ತು ಗಂಟೆಯಿಂದ ಸಾಯಂಕಾಲ ಆಯ್ದು ಗಂಟೆಯವರೆಗೆ ಗ್ರಂಥ ಸಂಪಾದನ ಕಾರ್ಯ, ಮುದ್ರಣ ಮತ್ತು ಪ್ರಕಾಶನ, ಪತ್ರ ವ್ಯವಹಾರಕ್ಕೆ ವಿನಿಯೋಗ. ಇದರ ಜತೆಗೇನೆ ಅವರು ಮನೆತನದಲ್ಲಿ ಬಂದಿದ್ದ ಆಯುರ್ವೇದ ವೈದ್ಯವನ್ನೂ ಬಿಡಲಿಲ್ಲ. ರೋಗಿಗಳಿಗೆ ಔಷಧೋಪಚಾರವಲ್ಲದೆ ಕೆಲವು ಔಷಧಗಳನ್ನು ಅವರೇ ತಯಾರಿಸುತ್ತಿದ್ದರು. ಇದರ ಮಾರಾಟವೂ ಚೆನ್ನಾಗಿತ್ತು. ಸಮೀಪದ ಹಳ್ಳಿಪಳ್ಳಿಗಳಿಂದ ಬಂದ ಬಡ ರೋಗಿಗಳಿಗೆ ಉಚತ ಔಷಧೋಪಚಾರವೂ ಇತ್ತೆಂಬುದು ಒಂದು ಹೆಚ್ಚಳ. ದೂರದ ಊರುಗಳಿಗೆ ಪುಸ್ತಕಗಳನ್ನು ಕಳಿಸಲು, ಅಂಚೆ ಅಥವಾ ರೈಲು ಮೂಲಕ, ಪುಸ್ತಕಗಳನ್ನೂ ಔಷಧಗಳನ್ನೂ ಹಾಳಾಗದಂತೆ ಅಣಿಗೊಳಿಸುವ ಕೆಲಸವೂ ಇವರ ಉಸ್ತುವಾರಿಯಲ್ಲಿ ನಡೆಯುತ್ತಿತ್ತು.

ವಂಶಪಾರಂಪರ್ಯವಾದ ಪೌರೋಹಿತ್ಯದೊಂದಿಗೆ ಬೇರೆ ಊರುಗಳಲ್ಲಿ ನಡೆಯುವ ಮದುವೆ, ಮುಂಜಿ, ಆರಾಧನೆ, ವ್ರತೋಪದೇಶಗಳಿಗೆ ಕರೆಯನ್ನು ಗೌರವಿಸಿ ಹೋಗುತ್ತಿದ್ದರು. ಮೈಸೂರು ಜಿಲ್ಲೆಯ ಚಾಮಲಾಪುರದಲ್ಲಿ ನಡೆದ ಚಂದ್ರಪ್ರಭ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಸಮಸ್ತ ಧಾರ್ಮಿಕ ಹೊಣೆಯನ್ನು ‘ಪಪಂ’ರು ಹೊತ್ತಿದ್ದರು. ಆ ಶುಭಾವಸರದಲ್ಲಿ ೫೩ ಜನ ಶ್ರಾವಕರು ನಾನಾ ವ್ರತಗಳನ್ನು ಸ್ವೀಕರಿಸಿದ್ದು ಇವರ ಪ್ರಭಾವದಿಂದ.

ಬರೆವಣಿಗೆಗೆ ತಮ್ಮನ್ನು ತೊಡಗಿಸಿಕೊಳ್ಳುವುದು ‘ಪಪಂ’ರಿಗೆ ಸಂತೋಷಕರವಾಗಿತ್ತು. ಪ್ರಾಕೃತ, ಸಂಸ್ಕೃತ, ಹಳೆಗನ್ನಡ ಭಾಷಾ ಪ್ರಾವೀಣ್ಯ. ಶಾಸ್ತ್ರ ಪರಿಣತಿ ತಂದೆಯಿಂದ ಬಂದ ಬಳುವಳಿ.

ಜೈನ ಲಾ (೧೮೮೬), ಉದಯಾದಿತ್ಯಾಲಂಕಾರ (೧೮೮೭), ಸಟೀಕಾಸ್ಮೃತಿಸಂಗ್ರಹ (೧೮೮೮). ಸಂಸ್ಕೃತ ಜಿನೇಂದ್ರ ಮಾಲಾ (೧೮೮೯) ಇವು ಆರಂಭದ ಗ್ರಂಥಗಳು. ಇಲ್ಲಿಂದ ಜಿನುಗತೊಡಗಿದ ಜಿನವಾಣಿ ಧಾರಾಪ್ರವಾಹವನ್ನು ‘ಪಪಂ’ರು ತಮ್ಮ ಆಯುರ್ಮಾನದುದ್ದಕ್ಕೂ ಜೀವಂತವಾಗಿಟ್ಟರು. ಇಡೀ ದಕ್ಷಣ ಭಾರತದಲ್ಲಿ ಜೈನ ಗ್ರಂಥಗಳ ಸಂಪಾದನ, ಮುದ್ರಣ, ಪ್ರಕಾಶನ ಕ್ಷೇತ್ರದಲ್ಲಿ ಭೀಷ್ಮಪಿತಾಮಹನಂತೆ ಬೆಳಗಿಸಿದ ಭವ್ಯ ಜೀವಿ: “He was at the epicentre of editing and re-editin Jaina Granthas. He was well equipped for casting. re-casting, and re-recasting the legendlore of Jaina heritage. Padmaraja Pandita was at the vanguard of Jaina renaissance movement in Karnataka. Having preserved and practiced all that was relevant and meaningful in orthodoxy, he had no objection to change with times and move forward. Thus he was a happy blend of the modern and traditional” [Hampana: 2009:23]

 

ಶಾಸನತಜ್ಞ

‘ಪಪಂ’ರು ಶಾಸನಗಳ ಪ್ರಾಮುಖ್ಯವನ್ನು ಗುರುತಿಸಿ ತೋರಿಸಿದ ಪ್ರಪ್ರಥಮ ಜೈನವಿದ್ವಾಂಸರು. ಶಾಸನಗಳನ್ನು, ಅದು ಎಷ್ಟೇ ಪ್ರಾಚೀನವಿದ್ದರೂ ಅವಲೀಲೆಯಿಂದ ಓದುವ ನಿಪುಣತೆ ಪಡೆದಿದ್ದರು. ಓಲೆಗರಿ ಹಸ್ತಪ್ರತಿಗಳನ್ನು ಓದಿ ಓದಿ ಕರಗತವಾಗಿದ್ದ ಲಿಪಿಜ್ಞಾನದಿಂದ ಅವರು ತಮಗೆ ತಾವೇ ಗುರುವಾಗಿ ಶಾಸನವನ್ನು ಲೀಲಾಜಾಲವಾಗಿ ಓದುವ ಪ್ರಾವೀಣ್ಯಗಳಿಸಿದರು. ಮೈಸೂರು ಪುರಾತತ್ವ ಇಲಾಖೆಯಲ್ಲಿ ೧೮೯೦ರಿಂದ ೧೯೧೭ರವರೆಗೆ ೨೭ವರ್ಷ ಸೇವೆಯಲ್ಲಿದ್ದರು. ಈ ಅವಧಿಯಲ್ಲಿ ಅವರು ಹಲವಾರು ಹೊಚ್ಚಹೊಸ ಕಲ್ಲುಬರೆಹ (ಶಾಸನ)ಗಳನ್ನು ಕಂಡು ಹಿಡಿದರು. ಆ ಎಲ್ಲ ಹೊಸಶಾಸನಗಳ ಪಾಠವನ್ನು ಪ್ರತಿಮಾಡಿ ಇಲಾಖೆ ಕಾರ್ಯಾಲಯಕ್ಕೆ ಮುಟ್ಟಿಸಿದರೆಂಬುದನ್ನು ಇಲಾಖೆಯ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಪುರಾತತ್ವ ವಿಭಾಗಕ್ಕೆ ‘ಪಪಂ’ರಿಂದಾಗಿ ಅನೇಕ ಅಪರೂಪದ ತಾಡಪತ್ರಿ ಹಸ್ತಪ್ರತಿಗಳು ದೊರೆತುವು. ಇವುಗಳಲ್ಲಿ ಬಹುಪಾಲು ಕನ್ನಡ ಗ್ರಂಥಗಳಾದರೂ ಕೆಲವು ಸಂಸ್ಕೃತ ಕೃತಿಗಳ ಹಸ್ತ ಪ್ರತಿಯನ್ನೂ ಸಂಪಾದಿಸಿ ಕೊಟ್ಟರು. ಅವರ ಈ ಶ್ರದ್ಧೆ, ಶ್ರಮ, ಪ್ರೇಮ ವ್ಯರ್ಥವಾಗಿರಲಿಲ್ಲ. ಇಲಾಖೆಯ ವಾರ್ಷಿಕವರದಿಗಳ ವಿವರಣೆಯಲ್ಲೂ ದಾಖಲಿಸಿದ್ದಾರೆ. (Annual Reports of the Mysore Archaeological Reports= MAR): “Padmaraj Pandit has helped in securitn rare manuscripts of Gunabhadra Acharya’s Sanskrit Uttarapurana. Ponna’s Shantipurana in Kannada, the Yogamrta etc.” (MAR: 1905)

ಅಪರೂಪದ ತಾಡೆಯೋಲೆ ಹಸ್ತಪ್ರತಿಗಳನ್ನೂ, ಶಿಲಾಶಾಸನಗಳನ್ನೂ ತಾಮ್ರಪಟಗಳನ್ನೂ ತಾವು ದುಡಿಯುತ್ತಿದ್ದ ಇಲಾಖೆಗೆ ಹುಡುಕಿ ಕೊಟ್ಟು ಋಣ ಮುಕ್ತರಾದರು. ಅಂದಿನ ಪುರಾತತ್ವ ಇಲಾಖೆಯ ನಿರ್ದೇಶಕರಾದ ಬೆಂಜಮಿನ್ ಲೂಯೀ ರೈಸರಿಗೆ (೧೮೩೭-೧೯೨೭) ‘ಪಪಂ’ರ ಕಾರ್ಯಕ್ಷಮತೆ, ನಿಷ್ಠೆ, ಪ್ರಾಮಾಣಿಕ ದುಡಿಮೆಯನ್ನು ಕಂಡು ಪ್ರೀತಿ, ಅಭಿಮಾನ. ಅವರು ಇಪ್ಪತ್ತು ವರ್ಷ ಡೈರೆಕ್ಟರ್ ಆಗಿದ್ದರು, ೧೯೦೬ರಲ್ಲಿ ನಿವೃತ್ತರಾದರು. ತರುವಾಯ ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ರಾ. ನರಸಿಂಹಾಚಾರ್ಯರು ನಿರ್ದೇಶಕರಾದರು. ಆ ಅವಧಿಯಲ್ಲಿಯೂ ‘ಪಪಂ’ರು ಇಲಾಖೆಯಲ್ಲಿ ಕೆಲಸಮಾಡಿ ಅವರಿಂದಲೂ ಸೈ ಎನಿಸಿಕೊಂಡರು. ಸಿಂಹನಗದ್ದೆ ಬಸ್ತಿ ಮಠದಲ್ಲಿ (ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ) ಸಂರಕ್ಷಿತವಾಗಿದ್ದ ಎರಡು ಅಮೂಲ್ಯ ತಾಮ್ರ ಶಾಸನಗಳನ್ನು ‘ಪಪಂ’ರು ೧೯೨೧ರಲ್ಲಿ ಪತ್ತೆ ಮಾಡಿದರು. ಅವುಗಳಲ್ಲಿ ಒಂದು ಕ್ರಿ.ಶ. ೬೬೯ರಲ್ಲಿ ಆಳಿದ ಗಂಗವಂಶದ ರಾಜನಾದ ಸೈಗೊಟ್ಟ ಶಿವಮಾರನನ ಶಾಸನ. ಇನ್ನೊಂದು ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಸೇರಿದ ಕಂಬದೇವ ಸ್ತಂಭರಾಜನ ಎಂಟನೆಯ ಶತಮಾನದ ಶಾಸನ; ಕಂಬದೇವನು ಹೆಸರಾಂತ ಮಹಾರಾಜನಾದ ಧ್ರುವನ (೭೮೦-೯೩) ಮಗ. ‘ಪಪಂ’ರು ತಮ್ಮ ಹಲವು ಪ್ರವಾಸಗಳಿಂದ ಅಮೂಲ್ಯ ಮಾಹಿತಿಯಿರುವ ಶಾಸನಗಳನ್ನು ದೊರಕಿಸಿದರು. ಕೆಲವು ಉದಾಹರಣೆಗಳು:

೧. ೧೯೧೬ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಂಶೋಧನ ಸಂಚಾರ ಕೈಗೊಂಡರು. ಆಗ ಎಕ್ಸಂಬ ಊರಿನ ಪ್ರಾಚೀನ ನೇಮಿನಾಥ ಬಸದಿಯಲ್ಲಿದ್ದ ಕರ್ಹಾಡ ಶಿಲಾಹಾರರಿಗೆ ಸಂಬಂಧಿಸಿದ ಎರಡು ಕಲ್ಬರೆಹಗಳನ್ನು ಪತ್ತೆ ಮಾಡಿದರು.

೨. ಅದೇ ೧೯೧೬ರಲ್ಲಿ ಸೋದೆ (ಸೋಂದಾ-ಉತ್ತರ ಕರ್ನಾಟಕ, ಸಿರಸಿ ತಾಲೂಕು) ಜೈನ ಮಠದಲ್ಲಿದ್ದ ಗೆರಸೊಪ್ಪ ನಾಯಕ ಮನೆತನಕ್ಕೆ ೧೫೨೨ರ ತಾಮ್ರಶಾಸನ ಹುಡುಕಿ ತೆಗೆದರು.

೩. ಪ್ರಾಚೀನ ಜೈನ ಕೇಂದ್ರವಾದ ಮತ್ತು ಈಗ ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದ ಚಂದ್ರನಾಥ ಬಸದಿಯ ಎರಡು ಶಿಲಾಶಾಸನಗಳನ್ನು ಹುಡುಕಿದರು. ಪಂಚಪರಮೇಷ್ಠಿ ಬಿಂಬದ ಮೇಲಿನ ಶಾಸನದ ಒಕ್ಕಣೆ ಸಾರಾಂಶವಿದು: ಈ ಜಿನ ಬಿಂಬವನ್ನು ಸೇನಬೋವ ಮನೆತನದ ಆಚಣ್ಣನ ಮಗ ದೇವಣ್ಣನು ಮಾಡಿಸಿದ್ದು. ರಾಜಧಾನಿ ಯರಂಬರಗೆಯ (ಈಗಿನ ಕೊಪ್ಪಳ ಜಿಲ್ಲೆಗೆ ಸೇರಿದ ಯೆಲಬುರ್ಗಿ) ದೇವಣ್ಣನು ಇಂಗಳೇಶ್ವರ ಒಳಗೆ ಸೇರಿದ ಮಾಧಾವಭಟ್ಟಾರಕರ ಶಿಷ್ಯ. ಈ ಶಾಸನದಲ್ಲಿ ಸಿದ್ಧಚಕ್ರ, ಶ್ರುತ ಪಂಚಮಿಯನ್ನು ನಮೂದಿಸಿದೆ.

೪. ಶಾಸನದ ಆಧಾರಬಲದಿಂದ ಮೈಸೂರಿನ ಚಾಮುಂಡಿ ಬೆಟ್ಟವು ಮೊದಲಿಗೆ ಜೈನರ ಮಾರ್ಬಲತೀರ್ಥ ಆಗಿತ್ತೆಂಬುದರತ್ತ ವಿದ್ವಾಂಸರ ಗಮನ ಸೆಳೆದರು.

೫. ರಾಯಚೂರು ಪರಿಸರವನ್ನು ಪರಿಶೀಲಿಸಿ ಅಲ್ಲಿನ ದೊಡ್ಡ ಬಂಡೆಯ ಮೇಲಿದ್ದ ಶಾಸನವನ್ನು ಗುರುತಿಸಿದ ಆದ್ಯರಿವರು. ಈ ಶಾಸನದಲ್ಲಿ ೧೨೦೦ರಲ್ಲಿ ಶ್ರುತಕೀರ್ತಿಮುನಿಯು ಕುಂದಕುಂದ ಆಚಾರ್ಯರ ಚರಣಗಳನ್ನು ಪೂಜಿಸಿದ್ದನ್ನೂ ಎರಡು ಕಂದಪದ್ಯಗಳಿರುವದನ್ನೂ ತೋರಿಸಿದ್ದಾರೆ.

೧೯೨೧ರಲ್ಲಿ ಒಂದೇ ಸಮನೆ ಒಟ್ಟು ಒಂದು ನೂರು ತಾಳೆಗರಿ ಗ್ರಂಥಗಳನ್ನು ಪರಾಮರ್ಶಿಸಿದರು. ಮೈಸೂರಿನ ಕಟವಾಡಿಪುರ ಬಡಾವಣೆಯಲ್ಲಿ ಮಲೆಯೂರಿನಿಂದ ಬಂದು ನೆಲಸಿದ ಜೈನಗೃಹಸ್ಥರಾದ ಲಕ್ಷ್ಮೀಪತಿ ಪಂಡಿತರ ಮನೆಯಲ್ಲಿ ಸಂಗ್ರಹವಾದ ತಾಡೆಯೋಲೆ ಹಸ್ತಪ್ರತಿಗಳಿದ್ದುವು. ತೆಲುಗು ಭಾಷೆಯ ರಾಮಾಯಣದ ಒಂದು ಹಸ್ತಪ್ರತಿ ಹೊರತು ಉಳಿದು ವೆಲ್ಲ ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ರಚಿತವಾದ ಗ್ರಂಥಗಳು. ಇವುಗಳನ್ನೆಲ್ಲ ವಿಂಗಡಿಸಿ ಓದಿ ಪಟ್ಟಿಯನ್ನು ಸಿದ್ಧಪಡಿಸಿ ಪುರಾತತ್ವ ಇಲಾಖೆಗೆ ಒಪ್ಪಿಸಿದರು [ಮೈಸೂರು ಆರ್ಕಿಯಾಲಾಜಿಕಲ್ ರಿಪೋರ್ಟ್‌, ೧೯೨೧].

ಪುರಾತತ್ವ ಇಲಾಖೆ ‘ಪಪಂ’ರ ಸೇವಾನಿಷ್ಠೆಯನ್ನು ಮತ್ತು ಸಂಗ್ರಹಿಸಿದ ಮಾಹಿತಿಯ ಮಹತ್ವವನ್ನು ಗಮನಿಸಿ ಪ್ರಶಂಸೆ ಮಾಡಿದೆ. ಅಷ್ಟೇ ಅಲ್ಲದೆ ಅವರ ದಕ್ಷತೆ, ಪಾಂಡಿತ್ಯ, ಶ್ರದ್ಧೆ-ಇವನ್ನು ಮನಗಂಡು ೧೯೧೬ರ ಜನವರಿಯಿಂದ ಆಯ್ದುರೂಪಾಯಿಯ ಒಂದು ಸಂಬಂದ ಬಡ್ತಿ (ಇನ್‌ಕ್ರಿಮೆಂಟ್) ನೀಡಿತಲ್ಲದೆ ಇದನ್ನು ಅವರ ಪಿಂಚಣಿಗೂ ಪರಿಗಣಿಸಬೇಕೆಂದು ಸರ್ಕಾರದ ಆದೇಶವಾಯಿತು. ಅವರು ೧೪-೦೯-೧೯೧೬ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು. ಆದರೆ ವಿಶೇಷ ಅರ್ಹತೆಗಳನ್ನು ಪರಿಭಾವಿಸಿ ಅವರ ಸೇವೆಯನ್ನು೧೦-೦೭-೧೯೧೭ರವರೆಗೆ ವಿಸ್ತರಿಸಿತು.