ಪ್ರಾಚೀನ ಗ್ರಂಥ: ಪುನರುತ್ಥಾನ

ಕನ್ನಡ ಮುದ್ರಣ-ಪ್ರಕಾಶನದ ಜತೆಗೆ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧವಾಗಿಸಿದರು. ಮೂಲ ಸಂಸ್ಕೃತ ಪಾಠವನ್ನೂ ಕನ್ನಡ ವ್ಯಾಖ್ಯಾನವನ್ನೂ ಒಟ್ಟೊಟ್ಟಿಗೆ ಒದಗಿಸಿದ್ದು ಓದುಗರಿಗೆ ಮಾಡಿದ ಉಪಕಾರ. ಕನ್ನಡ ವಾಙ್ಮಯದ ಗಡಿಗಳನ್ನು ಹಿಗ್ಗಿಸಿದರು. ಕಣಿ ಪ್ರಶ್ನಶಿಲ್ಪ, ಜಿನೇಂದ್ರಮಾಲಾ, ಜೈಮುನಿಸೂತ್ರ, ಜ್ಯೋತಿಶ್ಚಿಂತಾಮಣಿ, ಜ್ಯೋತಿಶ್ಯತತ್ವ, ಷಡ್ಯಾಷಧ ಚಿಂತಾಮಣಿ-ಮುಂತಾದ ಹಸ್ತಸಾಮುದ್ರಿಕ ಶಾಸ್ತ್ರ-ಜ್ಯೋತಿಷ್ಯ ಕುರಿತ ಗ್ರಂಥಗಳನ್ನು ಸಂಪಾದಿಸಿದರು. ಆತ್ಮಬೋಧ, ಭಕ್ತಾಮರ ಸ್ತೋತ್ರ, ದೃಷ್ಟಾಷ್ಟಕ, ಷತ್ರಚೂಡಾಮಣಿ, ಸಮಯ ಭೂಷಣ, ಸಾಮಾಯಿಕ, ತತ್ವಾರ್ಥಸೂತ್ರ-ಮೊದಲಾದ ಗ್ರಂಥಗಳಿಗೆ ಟೀಕೆಯನ್ನೂ ಬರೆದು ಹೊರ ತಂದರು. ಅಬ್ದಕಲ್ಪ, ಚಿಕಿತ್ಸಾವಸ್ತು ಗುಣ ಸಂಗ್ರಹ, ಗೋಲಕ್ಷಣ, ನವನೀತಾರಿಷ್ಟ-ಎಂಬ ಆಯುರ್ವೇದ ವಿಜ್ಞಾನ ಪುಸ್ತಕಗಳನ್ನು ಪುನರುಜ್ಜಿವಿಸಿದರು. ಧನಂಜಯ ನಿಘಂಟನ್ನು ಛಾಪಿಸಿದರು. ಪುನರ್ ಮುದ್ರಣದ ಮೂಲಕ ಪ್ರಾಚೀನ ಲೋಕಾಕಾ ರಕಥನ-ಮುಂತಾದ ಜೈನ ಧಾರ್ಮಿಕ ಚಿತ್ರಗಳನ್ನು ಮುರಿಸಿ ವಿತರಿಸಿದರು, ಸಾಮಾಜಿಕ ಜಾಗೃತಿ ಮೂಡಿಸಿದರು. ಅವರು ಛಾಪಿಸಿದ ನೂರಾರು ಪುಸ್ತಕಗಳನ್ನು ಒಂದೊಂದಾಗಿ ನೋಡಿದರೆ ಅವುಗಳಲ್ಲಿರುವ ವಿಷಯ ವೈವಿಧ್ಯ ಆಯ್ಕೆಯ ವಿಚಕ್ಷಣೆ, ಕೊಟ್ಟಿರುವ ಪ್ರಾತಿನಿಧ್ಯ ನಿಚ್ಚಳವಾಗುತ್ತದೆ. ಜೈನ ಇತಿಹಾಸ, ಆಗಮಪರಂಪರಗೆ ಇತ್ತಿರುವಗಮನ, ಸಂಶೋಧನೆಗೆ ಆಕರಗ್ರಂಥಗಳ ಸಂಚಯನ-ಇದು ಕಂಡುಬರುತ್ತದೆ.

ತಾವು ಸಂಪಾದಿಸಿ ಪ್ರಕಟಿಸಿರುವ ಹಳೆಯಕಾಲದ ಗ್ರಂಥಗಳಿಗೆ ಕಿರಿದಾಗಿಯೊ ಇಲ್ಲವೇ ಹಿರಿದಾಗಿಯೊ ಪೀಠಿಕೆ ಬರೆಯುವ ಹೆಚ್ಚುಗಾರಿಕೆ ತೋರಿದರು: ದೊಡ್ಡಸ ಮಂತಭದ್ರಸ್ತೋತ್ರ ಗ್ರಂಥಕ್ಕೆ (೧೯೨೩) ಬರೆದಿರುವವ ಪೀಠಿಕೆಯನ್ನು ಮಾದರಿಗಾಗಿ ಉದಾಹರಿಸಿದೆ; “ಈ ಗ್ರಂಥಕರ್ತ್ರಗಳು ಸಮಂತಭದ್ರೆಂಬುವರು. ಇವರು ಶಾಲಿವಾಹನಶಕೆಯ ೧ನೆಯ ಶತಮಾನದಲಲಿ ಇದ್ದಂತೆಗೊತ್ತಾಗುತ್ತೆ. ಇವರನ್ನ ಕನ್ನಡ ಪುರಾತನ ಕವಿಗಳು ಸ್ತೋತ್ರ ಮಾಡಿಧಾರೆ. ಶಾಸನಗಳಲ್ಲಿ ಇವರ ಸ್ತೋತ್ರಗಳು ಬಂದಿರುತ್ತವೆ. ಇವರಿಂದ ಮಾಡಲ್ಪಟ್ಟಿರುವ ಗ್ರಂಥಗಳಲ್ಲಿ ದೇವಾಗಮ ಸ್ತೋತ್ರ ಅಥವಾ ಆಪ್ತಮೀಮಾಂಸ ಎಂಬ ಗ್ರಂಥಕ್ಕೆ ಅಕಲಂಕ ಸ್ವಾಮಿಗಳು ಅಷ್ಟಶತಿ ಎಂಬುವ ವ್ಯಾಖ್ಯಾನವನ್ನೂ, ವಿದ್ವಾನಂದರು ಅಷ್ಟಸಹಸ್ರೀಯ ಎಂಬುವ ವ್ಯಾಖ್ಯಾನವನ್ನೂ ಬರೆದಿರುತ್ತಾರೆ.”

“ಈ ದೇವಾಗಮ ಸ್ತೋತ್ರ ಗ್ರಂಥವು ಗಂಧಹಸ್ತಿ ಮಹಾಭಾಷ್ಯದಿಂದ ತೆಗೆದು ಬರೆದದ್ದೆಂದು ಕೆಲವರು ಹೇಳುತ್ತಾರೆ. ಆದರೆ ವ್ಯಾಖ್ಯಾನ ಕರ್ತೃಗಳು ಯಾರು ಈ ವಿಷಯವನ್ನು ಹೇಳಿಲ್ಲ. ಇದುವರಿಗೂ ಚರಿತ್ರೆ ಬರೆದಿರುವ ಕನ್ನಡ ಸಂಸ್ಕೃತ ಕವಿಗಳು ಸಹ ದೇವಾಗಮ ಸ್ತೋತ್ರವೆಂಬುದು ಸ್ವತಂತ್ರ ಗ್ರಂಥವೆಂದೇ ಉದಹರಿಸಿರುತ್ತಾರೆ. ನಮ್ಮ ತಿಳಿವಳಿಕೆಗೆ ಬಂದಿರುವ ಮಟ್ಟಿಗೆ ಇದು ಸ್ವತಂತ್ರವಾದ ಗ್ರಂಥವೆಂದೇ ಗೊತ್ತಾಗಿದೆ. ಮತ್ತು ಈ ಸ್ತೋತ್ರದ ಅಂತ್ಯದಲ್ಲಿರುವುದು,

ಗದ್ಯ: ಇತಿಫಣಿಮಂಡಲಾಕಾರ ಸೋರಗಪುರಸ್ಯಾಧಿಪ
ಸೊನೋಃ ಶ್ರೀ ಸಮಂತಭದ್ರದೇವಸ್ಯಮುನೇಃ ಕೃತಾವಾಪ್ತ
ಮೀಮಾಂಸಾಯಾಂ ದಸಮಃ ಪರಿಚ್ಚೇದಃ

ಈ ಗದ್ಯದಿಂದ ಇದು ಸ್ವತಂತ್ರ ಗ್ರಂಥವೆಂಬುವುದು ಸ್ಪಷ್ಟವಾಗಿದೆ. ಸಮಂತಭದ್ರರೆಂಬುದು ಗಂಧಹಸ್ತಿ ಮಹಾಭಾಷ್ಯವೆಂಬ ಹೆಸರಿನಿಂದ ತತ್ವಾರ್ಥ ಸೂತ್ರಕ್ಕೆ ವ್ಯಾಖ್ಯಾನ ಬರೆದಿದ್ದರೆಂದುಗೊತ್ತಿದೆ. ಚಾಮುಂಡರಾಯಪುರಾಣದಲ್ಲಿ.

ಕು || ಅಭಿಮತಮಾಗಿರೆ ತತ್ವಾ | ರ್ಥಭಾಷ್ಯಮಂ ತರ್ಕಶಸ್ತ್ರಮಂ ಬರೆದು ವಚೋ || ವಿಭವದಿನೊಳೆಗೆಸೆದ ಸಮಂ | ತಭದ್ರದೇವರ ಸಮಾನರೆಂಬರುಮೊಳರೇ ||

ಗಂಧಹಸ್ತಿ ಮಹಾಭಾಷ್ಯದಿಂದ ಈ ಸ್ತೋತ್ರವು ಬರೆದದ್ದೆಂಬುವದರಿಂದ ನಮಗೆ ಯಾವ ಅನಭಿಮತಚು ಇಲ್ಲ. ಆದರೆ ಅಧುಭಿಕಕವಿಗಳ್ಯಾರಾದರೂ ವಂದು ವಿಷಯವನ್ನು ಉದಹರಿಸಿದ ರೆಂಬುದನ್ನ ನಂಬುವುದರಲ್ಲಿ ಪುರಾತನ ಗ್ರಂಥಕರ್ತೃಗಳ ವಚನವು ಅಗತ್ಯವಾದದ್ದು. ನಮ್ಮ ಇಂಡ್ಯಾ ದೇಶವನ್ನು ಪಾಳ್ಯಗಾರರು ಸಣ್ಣ ಸಣ್ಣ ರಾಜರು ಆಳುವಕಾಲಗಳಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಮಾಚಾರಗಳು ಆಚಾರಗಳು ಗೊತ್ತಿಲ್ಲದೆ ಅನೇಕ ಗ್ರಂಥಕರ್ತೃಗಳು ತಮ್ಮ ತಿಳುವಳಿಕೆಗೆ ತಕ್ಕಂತೆ ಬರೆದಿರಬಹುದು. ಕೆಲವರು ಪೂರ್ವಗ್ರಂಥಾಧಾರದಿಂದಲೂ, ಕೆಲವರು ಯಾವದೋ ಒಂದು ಕರ್ಣ ಜನಿತವಾದ ಸಮಾಚಾರದಿಂದಲೂ ಗ್ರಂಥವನ್ನು ರಚಿಸಿ ಇಟ್ಟಿದ್ದರೂ ಇಟ್ಟಿರಬಹುದು. ಯಾತಕ್ಕೋಸ್ಕರ ಹೀಗೆ ಹೇಳಬೇಕಾಗಿದೆ ಎಂದರೆ ವ್ಯಾಖ್ಯಾನ ಕರ್ತೃಗಳಾದ ಅಕಲಂಕಸ್ವಾಮಿಗಳನ್ನು ಸಿದ್ಧಾಂತಕ್ಕೆ ವ್ಯಾಖ್ಯಾನ ಬರೆದ ಜಿನಸೇನಾಚಾರ್ಯರು ಸ್ತೋತ್ರ ಮಾಡಿಧಾರೆ. ಅವರು ಕ್ರಿಸ್ತಶಕೆ ೮ನೆ ಶತಮಾನದಲ್ಲಿದ್ದಂತೆ ಗೊತ್ತಾಗುತ್ತದೆ. ಅವರಿಗೆ ಪೂರ್ವದವರಾದ ಅಕಲಂಕಸ್ವಾಮಿಗಳು ಗಂಧಹಸ್ತಿ ಮಹಾಭಾಷ್ಯದಿಂದ ತೆಗೆದದ್ದೆಂದು ಹೇಳಿಲ್ಲವಾಗಿ ನಮಗೆ ಸಂದೇಹವಾಗಿಧೆ.ಆದ್ದರಿಂದ ಈಗಲೂ ಸರಿಯಾದಕಾರಣಗಳು ಇರುವದನ್ನು ತಿಳಿದ ಮಹನೀಯರು ನಮಗೆ ದಯವಿಟ್ಟು ಸಪ್ರಮಾಣವಾಗಿ ತಿಳಿಸಬೇಕಾಗಿ ಕೋರಲ್ಪಟ್ಟಿದೆ.

ಆಧುನಿಕ ಕವಿಗಳು ಪೂರ್ವಶಾಸ್ತ್ರಕ್ಕೆ ವಿರುದ್ಧವಾದ ವಿಷಯವನ್ನು ಹೇಳಿದರೆ ನಂಬಬೇಕಾದದ್ದಿಲ್ಲವೆಂಬುದು ಮಹಾಪುರಾಣದಿಂದ ಗೊತ್ತಾಗುತ್ತೆ.

ಮಹಾಪುರಾಣದ ೨ನೇ ಪರ್ವದ ೧೫೩ನೇ ಶ್ಲೋಕದ ಅಪರಾರ್ಧ,

ಜಿನಸೇನಾಗ್ರಗಾಃ ಪೂಜ್ಯಾ | ಕವೀನಾಂ ಪರಮೇರ್ಶವರಾಃ ||

ಕವಿಗಳಲ್ಲಿ ಜಿನಸೇನಾಚಾರ್ಯ್ಯರೇ ಕೊನೆಯಾದ ಕವಿಗಳು, ಪೂಜ್ಯರಾದಂಥಾವರು.

ಕಾಲದೋಷದಿಂದ ಜಿನಶಾಸ್ತ್ರವು ನಾನಾ ಪ್ರಕಾರವಾಗಿ ಪರಿಣಮಿಸಿ ಆಯಾಯ ಕಾಲದಲ್ಲಿದ್ದ ವಿದ್ಯಾವಂತರು ತಮ್ಮ ತಿಳುವಳಿಕೆಯಂತೆ ಶಾಸ್ತ್ರ ವಿಚಾರವನ್ನೇ ವ್ಯತ್ಯಾಸ ಪಡಿಸುವುದಾಗಿ ಇಂದ್ರಣಂದಿಗಳು ಹೇಳಿರುತ್ತಾರೆ.

ಈ ಸ್ತೋತ್ರದ ೨ನೇ ಭಾಗದ ಪೀಠಿಕೆಯಲ್ಲಿ ಈ ಸಮಂಥಭದ್ರಯತಿಗಳು ಮಾಡಿರುವ ಗ್ರಂಥಗಳ ಹೆಸರು ಮತ್ತು ಅವರ ಕಥೆ ಸಹ ಬರೆಯಲ್ಪಡುತ್ತೆ. ಈ ಸ್ತೋತ್ರಕ್ಕೆ ಕನ್ನಡದಲ್ಲಿ ಅರ್ಥಬರೆದಿರುವುದರಿಂದ ಕನ್ನಡವೆಂಬ ಪದದ ನಿರುಕ್ತಿಯು ಹೇಳಲ್ಪಡುತ್ತೆ.

ಈ ಕನ್ನಡ ಭಾಷೆಯನ್ನು ಕೆಲವರು ದ್ರಾವಿಡಭಾಷಾವರ್ಗಕ್ಕೆ ಸೇರಿದ್ದೆಂದು ಹೇಳುತ್ತಾರೆ. ಜೈನಮತದಲ್ಲಿ ಆ ರೀತಿಹೇಳಿಲ್ಲ. ಪರಮಾಗಮ ವರ್ಗಕ್ಕೆ ಸಂಬಂಧಪಟ್ಟ ಗೋಮಟಸಾರಕ್ಕೆ ಶಾಲೀವಾಹನಶಕೆ ೧೨೮೧ರಲ್ಲಿ ಕೇಶವರ್ಣಿ ಎಂಬುವನು ಕನ್ನಡಭಾಷೆಯಲ್ಲಿ ವ್ಯಾಖ್ಯಾಣ ಬರೆದಿಧಾನೆ. ಆತನು ಕನ್ನಡವೆಂಬ ಪದದ ವ್ಯುತ್ಪತ್ತಿಯನ್ನು ಪೂರ್ವದಗ್ರಂಥಗಳಿಂದ ಕಂಡುಹಿಡಿದು ಬರೆದಿಧೇನೆಂದು ಹೇಳಿರುವುದು ಹ್ಯಾಗೆಂದರೆ:-

(ಭೇದವೊಂದಿರ್ಪುದರಿಂ ಕರ್ಣಾಟಂ) ಕನ್ನಡವೆಂದರೆ ಭೇದದಿಂದ ಪಡೆಯುವದೆಂದು ಅಭಿಪ್ರಾಐ ಪಟ್ಟಿಧಾನೆ. ಕರ್ಣಾಟವೆಂಬುದು ಕರ್ಣ ಭೇದನ ಎಂಬ ಧಾತುವಿನಿಂದ ಹುಟ್ಟಿರಬೇಕು ಭೇದನವೆಂದರೆ ಭೇದವೆಂದು ಅರ್ಥವು. ಕರ್ಣಯೋರಟತೀತಿ ಕರ್ಣಾಟಃ ಎಂದು ಕೆಲವರು ಹೇಳುತ್ತಾರೆ. ಮತ್ತು- ಕರ್ಣಾಟ ಎಂಬ ಪದದ ತದ್ಭವವು (ಬಿ. ಪದ್ಮರಾಜಪಂಡಿತ) ಕನ್ನಡವೆಂದಾಗುತ್ತೆ.

ಉಚ್ಚೈರ್ನಾಗರ ಶಾಖೆಯ ವಾಚಕ ಉಮಾಸ್ವಾತಿ (೩೫೦-೪೦೦) ವಿರಚಿತ ಹೆಸರಾಂತ ತತ್ವಾರ್ಥಸೂತ್ರಕ್ಕೆ ಕರ್ಣಾಟಕ ಲಘುವೃತ್ತಿಯನ್ನು ಮೊತ್ತ ಮೊದಲು ಬರೆದವರು ದಿವಾಕರಣಂದಿ ಭಟ್ಟಾರಕರು (೧೦೨೦-೮೫). ಅನಂತರ ಕೆಲವು ಟೀಕಾಗ್ರಂಥಗಳು ಬಂದಿವೆ. ಹೊಸಗನ್ನಡದಲ್ಲಿ ಇದನ್ನು ತಂದ ಮೊದಲಿಗರು ‘ಪಪಂ’ರು. ಅವರು ಬರೆದ ತತ್ವಾರ್ಥಸೂತ್ರ ಕರ್ಣಾಟಕ ವ್ಯಾಖ್ಯಾನವು ಸ್ವಕೀಯ ಶ್ರೀ ಭಾರತೀ ಭವನ ಮುದಾಕ್ಷರ ಶಾಲೆಯಲ್ಲಿ ಮುದ್ರಣಗೊಂಡು ೧೯೧೪ರಲ್ಲಿ ಪ್ರಕಟವಾಯಿತು. ಆ ಆವೃತ್ತಿಗೆ ಬರೆದ ಪ್ರಸ್ತಾವನೆ ಉಪಾದೇಯವಾಗಿದೆ:

ತತ್ವಾರ್ಥಸೂತ್ರ, ಮೋಕ್ಷಶಾಸ್ತ್ರ, ಜೈನವೇದಸೂತ್ರವೆಂಬ ಪ್ರಖ್ಯಾತಿಯನುಳ್ಳ ಈ ಸೂತ್ರವು ಉಮಾಸ್ವಾಮಿ ಮುನಿಗಳಿಂದ ಬರೆಯಲ್ಪಟ್ಟಿದೆ. ಈ ಗ್ರಂಥಕ್ಕೆ ಶ್ಲೋಕವಾರ್ತಿಕ, ರಾಜವಾರ್ತಿಕ, ಸರ್ವಾರ್ಥಸಿದ್ಧಿ, ಸುಬೋಧೆ, ಮೊದಲಾದ ಸಂಸ್ಕೃತ ವ್ಯಾಖ್ಯಾನಗಳಿವೆ. ಕನ್ನಡದಲ್ಲಿ ತತ್ವರತ್ನ ಪ್ರದೀಪಿಕೆ, ಕನ್ನಡ ಸುಬೋಧೆ, ಮೊದಲಾದ ವ್ಯಾಖ್ಯಾನಗಳು ಇವೆ. ಕನ್ನಡ ಶಬ್ದಾನುಶಾಸನಕಾರರು ತುಂಬುಲಾಚಾರ್ಯರಿಂದ ೯೬೦೦೦ ಗ್ರಂಥಪ್ರಮಾಣವುಳ್ಳ ಚೂಡಾಮಣಿ ಎಂಬ ಗ್ರಂಥದಲ್ಲಿ ಸ್ವಲ್ಪ ಭಾಗವು ನಮಗೆದೊರೆಯಲಿಲ್ಲಾ. ಈಗಿನ ಕನ್ನಡ ದೇಶದ ಜನರಿಗೆ ಸುಲಭಶೈಲಿಯಿಂದ ತಿಳಿಯುವದಕ್ಕಾಗಿ ಈ ತಾತ್ಪರ್ಯ ಸಹ ಬರೆಯಲ್ಪಟ್ಟು “ತತ್ವಾರ್ಥಸೂತ್ರ ಕರ್ಣಾಟಕ ವ್ಯಾಖ್ಯಾನ” ವೆಂಬ ಹೆಸರು ಇಡಲ್ಪಟ್ಟಿರುತ್ತದೆ ಮತ್ತು ಅಚ್ಚು ಹಾಕಲ್ಪಟ್ಟಿರುತ್ತದೆ. ಇದು ಪ್ರಥಮಾಭ್ಯಾಸಿಗಳಿಗೆ ಅನುಕೂಲಿಸಬೇಕೆಂದು ಸಂಗ್ರಹವಾಗಿ ಅರ್ಥವು ಬರೆಯಲ್ಪಟ್ಟಿದೆ. ಇಷ್ಟರಲ್ಲೆ ಯಾವದಾದರು ಒಂದು ಸಂಸ್ಕೃತ ವ್ಯಾಖ್ಯಾನದೊಡನೆ ತತ್ವರತ್ನ ಪ್ರದೀಪಿಕೆಯನ್ನಾಗಲಿ ಕನ್ನಡ ಸುಬೋಧೆಯನ್ನಾಗಲಿ ಅಚ್ಚು ಹಾಕಬೇಕೆಂದು ಯೋಚನೆಯಿಧೆ. ಈಗ ಪ್ರಿಂಟು ಮಾಡಿರುವ ಗ್ರಂಥದಲ್ಲಿ ಪ್ರಮಾದಾದಿಗಳಿಂದ ಸ್ಖಾಲಿತ್ಯಾದಿ ವ್ಯತ್ಯಾಸಗಳಿದ್ದರೆ ಬುದ್ಧಿಶಾಲಿಗಳುತಿದ್ದಿ ತಿಳಿಸಿದರೆ ಕೃತಜ್ಞತೆಯೊಡನೆ ಸ್ವೀಕರಿಸಿ ಎರಡನೇ ಆವರ್ತಿ ಪ್ರಿಂಟಿನಲ್ಲಿ ಪರಿಷ್ಕರಿಸಲ್ಪಡುತ್ತದೆ. ಈ ತತ್ವಾರ್ಥ ಸೂತ್ರದಲ್ಲಿ ಕರಣಾನುಯೋಗ ಚರಣಾನುಯೋಗ ದ್ರವ್ಯಾನುಯೋಗ ವಿಷಯಗಳು ಹೇಳಲ್ಪಟ್ಟಿವೆ. ಆದ್ದರಿಂದ ಪ್ರತಿ ಒಬ್ಬ ಗ್ರಹಸ್ಥನು ಯತಿಗಳು ಸಹ ಪ್ರತಿದಿನದಲ್ಲಿಯೂ ಪಾರಾಯಣ ಮಾಡಬೇಕಾದದ್ದು ಅಗತ್ಯವಾಗಿದೆ. ಸಮ್ಯಗ್ದರ್ಶನೋತ್ಪತ್ತಿಗೆ ಕಾರಣವಾದ ದೇವ ಗುರು ಶಾಸ್ತ್ರಗಳಲ್ಲಿ ಇದು ಸೇರಿರುವದ್ದರಿಂದ ದೇವರು, ಗುರುಗಳಿಗೆ ಯಾವವಿಧಮರ್ಯ್ಯಾದೆಯನ್ನು ತೋರಿಸಬೇಕೋ ಆಮೇರೆ ಈ ತತ್ವಾರ್ಥಸೂತ್ರದ ಪುಸ್ತಕಕ್ಕು ಮರ್ಯಾದಿಯನ್ನು ತೋರಿಸಬೇಕು. ಅಂದರೆ ದೇಹ ಅಶುಚಿಯಾಗಿರುವಾಗಲೂ, ಸೂತಕಾದಿಗಳಲ್ಲಿರುವಾಗಲೂ, ಈ ಸೂತ್ರವನ್ನು ಅಧ್ಯಯನಮಾಡಬಾರದು. ಈ ಪುಸ್ತಕವನ್ನು ಸಹ ಅಶುಚಿಸೂತಕವ ಗೈರೆಯಿಂದಿರುವ ಜನರಕೈಯ್ಯಲ್ಲಿ ಕೊಡಬಾರದು ಅಶುಚಿಪ್ರದೇಶದಲ್ಲಿ ಇಡಬಾರದು ಸ್ನಾನಾನಂತರ ಈ ಸೂತ್ರದ ಹತ್ತು ಅಧ್ಯಾಯಗಳನ್ನು ಸಂಪೂರ್ಣವಾಗಿ ಭಕ್ತಿ ಪುರಸ್ಸರ ಪಾರಾಯಣ ಮಾಡುವರಿಗೆ ಒಂದು ಉಪವಾಸದ ಫಲುಂಟಾಗುತ್ತದೆ. ಆದ್ದರಿಂದ ಪೂಜ್ಯವಾಗಿಯೂ, ಇಹಪರಜನ್ಮಗಳಲ್ಲಿ ಸ್ವರ್ಗಮೋಕ್ಷಾದಿ ಸುಖಕ್ಕೆ ಕಾರಣವಾಗಿಯೂ ಇರುವ ಈ ಪುಸ್ತಕವನ್ನು ಅಚ್ಚಾದ ಪುಸ್ತಕವಾಗಿದೆ ಎಲ್ಲಾ ಎಂದು ಉದಾಶೀನತೆಯಿಂದ ಶಿಕ್ಕಿದಡೆಬೀಸಾಕುವದು, ಮತ್ತು ಈ ಗ್ರಂಥದಲ್ಲಿ ನಂಬಿಕೆಯಿಲ್ಲದವರ ಕೈಯ್ಯಲ್ಲಿಕೋಡುವದುಸಹಬಿಟ್ಟು ಶುಚಿರ್ಭೂತವಾಗಿರುವಸ್ಥಳದಲ್ಲಿ ಗೌರವದಿಂದ ಇಡಬೇಕೆಂಬುವದೇ ನನ್ನ ಪ್ರಾರ್ಥನೆಯು.”

ಈ ರೀತಿಯಾಗಿ ೧೯ನೆಯ ಶತಮಾನದಲ್ಲಿ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಪೀಠಿಕೆ, ಪ್ರಸ್ತಾವನೆ ಬರೆಯುವುದು ಅಪರೂಪದ ಅನುಭವ. ಇದು ‘ಪಪಂ’ರಿಗಿದ್ದ ವ್ಯಾಪಕತೆ ಮತ್ತು ಪ್ರಸ್ತುತತೆಯ ಸೂಕ್ಷ್ಮಗ್ರಾಹಿ ಬುದ್ಧಿ ಮತ್ತೆಯ ಫಲ. ತಾವು ಹೊರತರುತ್ತಿದ್ದ ಹೊತ್ತಗೆಗಳಲ್ಲಿ ತಪ್ಪುಗಳಿರಬಾರದೆಂಬ ಕಳಕಳಿಯಿಂದ ಓದುಗರಲ್ಲಿ ಬಿನ್ನಹ ಮಾಡಿರುವ ಮಾತುಗಳಿವು- “ಈ ಪಂಚಸಂಧಿಗೆ ಅರ್ಥ ಮೊದಲಾದದ್ದು ಬರೆದಿರುವ ಮೇರೆ ಈ ಲಘುಸಿದ್ಧಾಂಥ ಕೌಮುದಿಯ ಎಲ್ಲಾ ಭಾಗಗಳಿಗೂ ಈಗ ಬರೆದಿರುವ ವಿಷಯಗಳಲ್ಲದೆ ಇನ್ನೂ ಕೆಲವು ವಿಶೇಷ ವಿಷಯಗಳು ಬರೆಯಲ್ಪುಟ್ಟು ಅಚ್ಚು ಹಾಕಲ್ಪಡುತ್ತವೆ. ಅತ್ಯಾತುರದಿಂದ ಪ್ರಿಂಟಾದ ಈ ಪುಸ್ತಕದಲ್ಲಿ ನ್ಯೂನತೆಗಳು ಸ್ಖಾಲಿತ್ಯಗಳು ಕಂಡುಬಂದರೆ ಆ ವಿಷಯವನ್ನು ತಿಳಿಸಿದರೆ ಕೃತಜ್ಞತೆಯೊಡನೆ ಸ್ವೀಕರಿಸುವದಲ್ಲದೆ ಅವರ ಸಮೀಚೀನವಾದ ಅಭಿಪ್ರಾಯವು ೨ನೇ ಪ್ರಿಂಟಿನಲ್ಲಿ ಸಾರ್ಥಕ ಮಾಡಲ್ಪಡುತ್ತದೆ” (೧೯೧೦: ಲಘು ಸಿದ್ಧಾಂತ ಕೌಮುದೀ ಪಂಚ ಸಂಧಿಯು).

ಶ್ರವಣ ಬೆಳಗೊಳದ ದೊಡ್ಡಬೆಟ್ಟದ ಮೇಲೆ ಅಖಂಡ ಶಿಲೆಯಲ್ಲಿ ೫೮ ಅಡಿ ೮ ಅಂಗುಲ ಎತ್ತರದ ಬಾಹುಬಲಿ ಗೋಮಟೇಶ್ವರನ ಸುಂದರ ಪ್ರತಿಮೆ ಮಾಡಿಸಿದ ಕಲಿ-ಕವಿ ಚಾಮುಂಡ ರಾಯನಿಗೆ ಇಬ್ಬರು ಗುರುಗಳು ಅಜಿತಸೇನಾರ್ಯರು ಮತ್ತು ನೇಮಿಚಂದ್ರಾಚಾರ್ಯರು. ದಿಗಂಬರ ಪರಂಪರೆಯ ಆಮ್ನಾಯದಲ್ಲಿ ಪ್ರಮುಖ ಆಗಮ ಗ್ರಂಥ ಷಟ್ಖಂಡಾಗಮ. ಇದು ಶೌರಸೇನೀ ಪ್ರಾಕೃತ ಭಾಷೆಯಲ್ಲಿದೆ. ಇದಕ್ಕೆ ಪಂಚಸ್ತೂಪಾನ್ವಯದ ವೀರಸೇನ ಮತ್ತು ಜಿನಸೇನ ಆಚಾರ್ಯರು ಧವಲಾ, ಜಯಧವಲಾ ಟೀಕೆಯನ್ನು ಬರೆದಿದ್ದಾರೆ. ತಮ್ಮ ಶಿಷ್ಯ ಚಾಮುಂಡರಾಯನಿಗಾಗಿ ಷಟ್ಖಂಡಾಗಮದ ಸಾರವನ್ನು ಗೊಮ್ಮಟಸಾರ ಎಂಬ ಹೆಸರಿಂದ ಪ್ರಾಕೃತದಲ್ಲಿ ನೇಮಿಚಂದ್ರ ಸಿದ್ಧಾಂಥ ಚಕ್ರವರ್ತಿ ಆಚಾರ್ಯರು ೯೮೧ರಲ್ಲಿ ಬರೆದರು. ಈ ಗೊಮ್ಮಟಸಾರವನ್ನು ಕನ್ನಡವ್ಯಾಖ್ಯಾನ ದೊಂದಿಗೆ ಮುದ್ರಿಸಲು ‘ಪಪಂ’ರು ಮುಂದಾದರು. ಅವರು ಓದುಗರ ಸಹಾಯ ಕೋರಿ ಬರೆದ ಮಾತುಗಳು ಮನನೀಯ:

ಶ್ರೀ ಮನ್ನೇಮಿಚಂದ್ರ ಸ್ವಾಮಿಗಳಿಂದ ಮಾಡಲ್ಪಟ್ಟಿರುವ “ಗೋಮಟಸಾರ” ವೆಂಬ ಗ್ರಂಥವು ಮಾಗಧಭಾಷೆಯಲ್ಲಿ (ಗಾಧೆಗಳಲ್ಲಿ) ಇರುತ್ತದೆ. ಈ ಗ್ರಂಥವು ಆಗಮಶಾಸ್ತ್ರಭ್ಯಾಸಿಗಳಿಗೆ ಅಮೌಲ್ಯವಾದದ್ದೆಂಬುವದು ಸರ್ವರಿಗೂ ತಿಳಿದದ್ದಾಗಿಯೇಯಿಧೆ. ಇಂಥಾ ಆಗಮ ಶಾಸ್ತ್ರಾಭ್ಯಾಸಿಗಳಿಗೆ ಅಮೌಲ್ಯವಾದದ್ದೆಂಬುವದು ಸರ್ವರಿಗೂ ತಿಳಿದದ್ದಾಗಿಯೇಯಿಧೆ. ಇಂಥಾ ಆಗಮ ಶಾಸ್ತ್ರವನ್ನು ಸರ್ವಜನರ ತಿಳುವಳಿಕೆಗೆ ತರುವದರಿಂದ ಉಂಟಾಗುವ ಪುಣ್ಯವುಯಿಷ್ಟೆಂದು ಹೇಳಲು ಶಕ್ತಿಸಾಲದು. ಆದ್ದರಿಂದ ಈ ಗ್ರಂಥವನ್ನು ಪ್ರಶಿದ್ದಿಮಾಡುವ ವಿಷಯದಲ್ಲಿ ಎಲ್ಲರೂ ಯತ್ನಿಸಬೇಕಾಗಿ ಕೋರುತ್ತೇನೆ.

ಈ ಗೋಮಟಸಾರದಲ್ಲಿ ಜಿವಕಾಂಡವನ್ನು ಕನ್ನಡ ಅರ್ಥದೊಡನೆ ಪ್ರಿಂಟು ಮಾಡಬೇಕೆಂಬ ಇರಾದೆಯಿದೆ. ಈಗ ಆರಂಭಿಸಿರುವ ನೋಂಪೀಕಥೆ, ಮಹಾಪುರಾಣದ ೨ನೇ ಭಾಗ ಪೂರ‍್ತಿ ಮಾಡಲ್ಲದೆ ಇದನ್ನ ಆರಂಭಿಸಲು ದ್ರವ್ಯ ಸಹಾಯಸಾಲದ್ದಾಗಿರುತ್ತದೆ. ಆದ್ದರಿಂದ ಧನಿಕರಾದ ಸಮ್ಯಗ್ಧೃಷ್ಟಿಗಳು ದ್ರವ್ಯಸಹಾಯಮಾಡಿದರೂ ಸರಿಯೆ. ಅಥವಾ ಅವರೇ ಸ್ವಯಂ ಪ್ರಿಂಟು ಮಾಡುಸಿದರೂ ಸರಿಯೆ, ಪ್ರಿಂಟು ಮಾಡುವ ಖರ್ಚಿನಲ್ಲಿ ಒಂದು ಭಾಗ ಅವರು ಕೊಡುವದಾದರೆ ಬಾಕಿ ೧ ಭಾಗದ ಮೊಬಲಗು ನಾವು ಬೇಕಾದರು ಹಾಕುತ್ತೇವೆ. ಅಂಥ ಸಂದರ್ಭದಲ್ಲಿ ಪುಸ್ತಕಗಳನ್ನು ಇಬ್ಬರಹೆಸರಿನಿಂದಲೂ ಪ್ರಕಟಿಸಿ ಪುಸ್ತಕಗಳನ್ನು ಬೇಕಾದರು ಹಂಚಿಕೊಳ್ಳಬಹುದು.

ಯಾವಜೈನಮತ ಗ್ರಂಥಗಳನ್ನು ಸ್ವಯಂಪ್ರಿಂಟು ಮಾಡಿಸಬೇಕೆಂಬ ಇರಾದೆಯುಳ್ಳ ಸಮ್ಯಗ್ಧೃಷ್ಟಿ ಗಳು ನಮ್ಮಲ್ಲಿಗೆ ಕಳುಹಿಸಿಕೊಟ್ಟರೆತಪ್ಪುತಿದ್ದಿ ಸರಿಯಾದ ಛಾರ್ಜಿನಿಂದ ಪ್ರಿಂಟುಮಾಡುಕೊಡಲ್ಪಡುತ್ತದೆ.

ಶಾಸ್ತ್ರದಾನವನ್ನು ಮಾಡುವ ಉದ್ದಿಶ್ಯವಾಗಿ ಯಾರಾದರು ಹೆಚ್ಚು ಪುಸ್ತಕವನ್ನು ಅಪೇಕ್ಷಿಸುವದಾದರೆ ಅಂಥಾವರು ತೆಗೆದುಕ್ಕೊಳ್ಳುವ ಪ್ರತಿಗಳ ಸಂಖ್ಯೆಯನ್ನು ಅನುಸರಿಸಿ ಕ್ರಯದಲ್ಲಿ ಸ್ವಲ್ಪ ಬಿಟ್ಟು ಕೊಟಲ್ಪಡುತ್ತದೆ. ಇಷ್ಟವುಳ್ಳವರು ಈ ಕೆಳಗಿನ ವಿಳಾಸಕ್ಕೆ ಬರೆದರೆ ಕಳುಹಿಸಿಕ್ಕೊಡಲ್ಪಟುತ್ತದೆ.

ಇದೇ ನೇಮಿಚಂದ್ರಾಚಾರ್ಯರು ಬರೆದಿರುವ ದ್ರವ್ಯಾನಯೋಗ ಗ್ರಂಥವನ್ನೂ ಹೊರತಂದರು.

‘ಪಪಂ’ರು ಪಂಪ, ಪೊನ್ನ, ರನ್ನ ಕವಿಗಳ ಕಾವ್ಯಗಳ ಮುದ್ರಣಕ್ಕೆ ಮನಸು ಮಾಡಲಿಲ್ಲ. ಬೇರೆ ಸಮಕಾಲೀನರು ಅವನ್ನು ಪ್ರಕಟಿಸಿದ್ದರಿಂದ. ಆದರೆ ಇತರ ಕೆಲವು ಕಾವ್ಯಗಳನ್ನೂ ಪ್ರಕಟಿಸಿದ್ದಾರೆ, ಜನ್ನ ಕವಿಯ ಯಶೋಧರ ಚರಿತೆ, ನಾಗರಾಜ ಕವಿಯ (೧೩೩೨) ಪುಣ್ಯಾಸ್ತವ ಚಂಪೂ, ನೋಂಪಿ ಕಥೆಗಳು- ಇವು ಮೊಟ್ಟ ಮೊದಲನೆಯ ಬಾರಿ ಅಚ್ಚಾಗಿ ಹೊರಬಂದದ್ದು ‘ಪಪಂ’ ಸಂಪಾದಕತ್ವದಲ್ಲಿ. ಸುಮಾರು ಎಂಬತ್ತಕ್ಕೋ ಹೆಚ್ಚು ನೋಂಪಿಯ ಕಥೆಗಳನ್ನು ಓಲೆಗರಿಗಳಿಂದ ಪ್ರತಿಮಾಡಿ ಹೊರತಂದ ಹಿರಿಮೆ ಇವರಿಗೆ ಸಲ್ಲುತ್ತದೆ (ಹಂಪನಾ: ನೋಂಪಿಯ ಕಥೆಗಳು: ೧೯೨೧): ಅವರು ತೋರಿದ ಶ್ರದ್ಧೆ, ವಹಿಸಿದ ಶ್ರಮ, ಸಲ್ಲಿಸಿದ ಸೇವೆ ಸ್ಮರಣೀಯ, ೧೮೯೩, ೧೯೧೫, ೧೯೨೬, ೧೯೨೯, ೧೯೩೦ – ಹೀಗೆ ಬೇರೆ ಬೇರೆ ಇಸವಿಗಳಲ್ಲಿ ಒಟ್ಟು ಆಯ್ದು ಸಂಕಲನ ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಸ್ಥಳನಾಮಗಳ ಅಧ್ಯಯನ ಜನಪ್ರಿಯ ಸಂಶೋಧನೆಯಾದದ್ದು ಇಪ್ಪತ್ತನೆಯ ಶತಮಾನದಲ್ಲಿ ೧೯೫೦ರಿಂದ ಈಚೆಗೆ, ‘ಪಪಂ’ರು ೧೯ನೆಯ ಶತಮಾನದಲ್ಲೇ ಈ ಬಗೆಯ ಚಿಂತನೆಗೆ ಗುದ್ದಲಿ ಪೂಜೆ ಮಾಡಿದ್ದರು. ಮೈಸೂರು ಹೆಸರಿನ ವ್ಯುತ್ಪತ್ತಿ ಎಂಬ ಪುಸ್ತಕವನ್ನು ೧೯೦೦ರಲ್ಲಿ ಮುದ್ರಿಸಿದ್ದಾರೆ, ಜನಪದ ಸಾಹಿತ್ಯ ಸಂಗ್ರಹ, ಪ್ರಕಟಣೆ ಮಹತ್ವ ಪಡೆದದ್ದು ೧೯೬೦ರಿಂದ. ‘ಪಪಂ’ರು ೧೮೯೫ರಲ್ಲಿಯೇ ಕನ್ನಡ ಗಾದೆಗಳ ಮೊದಲನೆಯ ಪುಸ್ತಕ ತಂದು ಈ ದಿಶೆಯಲ್ಲಿ ಕೂಡ ಜಾನಪದದ ಮುಂಗೋಳಿಯಾದರು.

ಮಾನತುಂಗ ಆಚಾರ್ಯರ (೬೦೦) ಭಕ್ತಾಮರ ಸ್ತೋತ್ರ (ಆದಿನಾಥ ಸ್ತೋತ್ರ)ವನ್ನು ವ್ಯಾಖ್ಯಾನ ಸಹಿತ ಮುದ್ರಿಸಿದರು. ಅದೇ ಅವಧಿಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಪಂಡಿತ ನಾಥೂರಾಂ ಪ್ರೇಮಿಯವರು (೧೮೮೧-೧೯೬೦) ಹಿಂದಿ ತಾತ್ಪರ್ಯದೊಂದಿಗೆ ಭಕ್ತಾಮರ ಸ್ತೋತ್ರ ಪ್ರಕಟಿಸಿದ್ದರಲ್ಲದೆ ಅದು ಮುಂಬಯಿಯ ಜೈನ ಗ್ರಂಥ ರತ್ನಾಕರ ಕಾರ್ಯಾಲಯದಿಂದ ೧೯೦೬ರಲ್ಲಿ ಅಚ್ಚಾಯಿತು. ಪಂಚವಿಂಶತಿ ಎಂಬುದು ಪದ್ಮನಂದಿಕವಿಯ (೧೨ನೆಯ ಶತಮಾನ: ಸು. ೧೧೫೦) ಸಂಸ್ಕೃತ ಕೃತಿ, ಇದರಲ್ಲಿನ ನಾಲ್ಕನೆಯ ಪ್ರಕರಣ ಏಕತ್ವಸಪ್ತತಿಃ ಇದಕ್ಕೆ ಕನ್ನಡದಲ್ಲಿ ನಾಲ್ಕು ವ್ಯಾಖ್ಯಾನಗಳಿವೆ. ಅವುಗಳಲ್ಲಿ ಒಂದನ್ನು ಐವತ್ತು ಪದ್ಯಗಳಿರುವುದನ್ನು, ಸಂಪಾದಿಸಿ ‘ಪಪಂ’ರು ೧೮೯೩ರಲ್ಲಿ ಪ್ರಕಟಿಸಿದರು. ಇವರ ಆವೃತ್ತಿಯನ್ನು ಆಧರಿಸಿ ಪ್ರೊ. ಆ. ನೇ. ಉಪಾಧ್ಯೆ (೧೯೦೬-೧೯೭೫) ಪರಿಷ್ಕೃತ ಪಾಠವನ್ನು ೧೯೬೩ರಲ್ಲಿ, ಎಪ್ಪತ್ತು ವರ್ಷಗಳ ತರುವಾಯ ಪ್ರಕಟಿಸಿದರು.

ಅವರನ್ನು ಅಂದಿನ ಉನ್ನತೋನ್ನತರು ಮೊದಲಮಣೆಯಿತ್ತು ಮನ್ನಿಸಿದರು. ಪ್ರೊ. ಅಣ್ಣಾ ಬಾಬಾಜಿ ಲಠ್ಠೆ ಅಂದಿನ ನಿಡಿಯರಲ್ಲೊಬ್ಬರು, ರಾವ್ ಬಹಾದೂರ್ ಅಣ್ಣಾಹೇಬ್ ಲಠ್ಠೆ (೧೮೭೮-೧೯೫೦) ಎಂದು ಮಾನ್ಯರು. ಕೊಲ್ಹಾಪುರ ಸಂಸ್ಥನದ ದಿವಾನರು. ತರುವಾಯ ಬಾಂಬೆ ಪ್ರಾಂತದ ಹಣಕಾಸು ಸಚಿವರಾದರು. ಅವರು ಹಿಂದುಳಿದ ವರ್ಗಗಳ ಮೇಲ್ಮೆಗಾಗಿ ದುಡಿದವರು. ಮುಂಬಯಿ ಲಾ ಕೌನ್ಸಿಲ್‌ ಸದಸ್ಯರಾಗಿ, ೧೯೨೩ರಲ್ಲಿ ನಡೆದ ಚುನಾವಣೆಯಲ್ಲಿ, ಆಯ್ಕೆಯಾದವರು. ಲಠ್ಠೆಯವರು ಸುಧಾರಣಾವಾದಿ, ಪತ್ರಕರ್ತರು, ರಾಜಕಾರಣಿ, ಶಿಕ್ಷಣ ತಜ್ಞರು ಮತ್ತು ಲೇಖಕರು. ‘ಪ್ರಗತಿ’ ಎಂಬ ಮರಾಠಿ ಪತ್ರಿಕೆಯ ಸ್ಥಾಪಕ-ಸಂಪಾದಕರು, ಜೈನಧರ್ಮ ಕುರಿತ ಗ್ರಂಥಕರ್ತರು. ತಮ್ಮ ಕಾಲದ ಧೀರ ನೇರ ವ್ಯಕ್ತಿತ್ವದ ಹಿರಿಯರು. ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಸಭೆಗೆ ಆಹ್ವಾನಿತರಾಗಿ ಭಾಗವಹಿಸಿದವರು. ಅವರ ಮಗಳು ಪ್ರಭಾವತಿ ಮೈಸೂರಿನ ಮಹಾನುಭಾವನಿಸಿದ ಎಂ.ಎಲ್. ವರ್ಧಮಾನಯ್ಯನವರ ಹಿರಿಯ ಮಗ ಸನತ್ಕುಮಾರಯ್ಯನವರ ಮಡದಿ. ಸಾಹುಕಾರ್ ವರ್ಧಮಾನಯ್ಯನವರು (೧೮೮೯-೧೯೨೬) ಹಳೆಯ ಮೈಸೂರು ಸಂಸ್ಥಾನದಲ್ಲಿ, ಕೈಗಾರಿಕಾರಂಗದ ಧುರೀಣರು, ಜೈನ ಸಮಾಜದ ಮುಖಂಡರು, ವಿದ್ಯಾರ್ಥಿನಿಲಯ ಸ್ಥಾಪಕರು (ನಾಡೋಜ ಡಾ || ಕಮಲಾ ಹಂಪನಾ: ಎಂ. ಎಲ್. ವರ್ಧಮಾನಯ್ಯನವರು: ೨೦೦೦). ಪರೋಪಕಾರಿ ಎಂ.ಎಲ್. ವರ್ಧಮಾನಯ್ಯನವರೂ ರಾವ್ ಬಹಾದೂರ್ ಅಣ್ಣಾ ಸಾಹೇಬ ಲಠ್ಠೆಯವರೂ ‘ಪಪಂ’ರನ್ನು ಜೈನಧರ್ಮದ ವಿಶ್ವಕೋಶವೆಂದು ಕರೆದು ಗೌರವಿಸುತ್ತಿದ್ದರು.

ಆದಿ ಪ್ರವರ್ತರು

ಪುಸ್ತಕ ಮುದ್ರಣ, ಪ್ರಕಾಶನ, ಸಂಪಾದನದ ಜತೆಗೆ ಕಪ್ಪು ಬಳುಪಿನ, ಬಣ್ಣದ ಚಿತ್ರಗಳನ್ನೂ ಮುದ್ರಿಸಿ ಮಾರುತ್ತಿದ್ದರು. ಜ್ವಾಲಾಮಾಲಿನೀದೇವಿ, ಪದ್ಮಾವತೀ ದೇವಿ, ತೀರ್ಥಂಕರರು, ಬ್ರಹ್ಮದೇವ, ಸಮವಸರಣ, ಊರ್ಜಯಂತಗಿರಿ ಸಿದ್ಧ ಕ್ಷೇತ್ರ-ಮುಂತಾದ ಚಿತ್ರಗಳ ಮಾರಾಟ ಮಾಡಿದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಎಲ್ಲ ಜಿನ ಗ್ರಹಗಳಲ್ಲೂ ಇವರು ಪ್ರಕಟಿಸಿದ ಚಿತ್ರಗಳು ಗೋಡೆಗಳ ಮೇಲೆ ರಾರಾಜಿಸಿದುವು.

ಬೆಂಗಳೂರಲ್ಲಿ ಮೂವತ್ತು ವರ್ಷ ವಾಸಿಸಿದರು. ಅವರಿಗೆ ಮೈಸೂರಿನ ಆಕರ್ಷಣೆ ಪ್ರಬಲವಾಗಿತ್ತು. ತಾವು ಹುಟ್ಟಿದ ಜೈನ ಬ್ರಹ್ಮಣರಿಗೆ ಮುಂದೆ ಬರಲು ಸಹಾಯ ಮಾಡಿದರು. ಓದಲು ಅನುಕೂಲವಾಗಲೆಂದು ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯವನ್ನು ಮೈಸೂರಿನ ಚಾಮರಾಜ ಪುರಂ ಬಡಾವಣೆಯಲ್ಲಿ ಪ್ರಾರಂಭಿಸಿದರು. ೦೯-೦೯-೧೯೦೬ರಂದು ಅದರ ನೋಂದಣಿ ಆಯಿತು. ಮತ್ತು ಅದು ಇಂದಿಗೂ ನಡೆಯುತ್ತಿದೆ. ಅಲ್ಲಿಗೇ ಅವರಿಗೆ ತೃಪ್ತಿ ಆಗಲಿಲ್ಲ. ಜೈನ ಬ್ರಾಹ್ಮಣ ಸಮಾಜ ಹೆಚ್ಚು ವಿದ್ಯಾವಂತರಿಂದ ತುಂಬಿ ತುಳುಕಬೇಕೆಂಬ ಹೆಬ್ಬಯಕೆ. ಜಿನಮತಗ್ರಂಥ ರತ್ನಾಕರ ಎಂಬ ಹೆಸರಿನ ಗ್ರಂಥಾಲಯವನ್ನು ೨೬-೦೫-೧೯೨೬ರಂದು ಪ್ರಾರಂಭಿಸಿದರು. ಆ ನೂತನ ಗ್ರಂಥಾಲಯ ವಿನೂತನವಾಗಿರಬೇಕೆಂದು ತಾವು ಸಂಗ್ರಹಿಸಿದ ೯೪ ಓಲೆಗರಿ ಗ್ರಂಥಗಳನ್ನು ನೀಡಿದರು.

‘ಪಪಂ’ರು ಓಲೆಗರಿ ಗ್ರಂಥಗಳಿಂದ ಒಡಗೂಡಿದ ಹೊಸ ಶ್ರುತಭಂಡಾರವನ್ನು ಆರಂಭಿಸಿರುವ ವಿಚಾರ ತಿಳಿದು ಅಂದಿನ ದೊಡ್ಡ ವಿದ್ವಾಂಸರು ಹರ್ಷಿಸಿದರು. ಅದನ್ನು ಖುದ್ದಾಗಿ ಕಾಣಲು ಅನೇಕರು ಬಂದರು. ಅಂದಿನ ಶ್ರವಣ ಬೆಳಗೊಳ ಮಠಾಧೀಶರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ೧೨-೦೭-೧೯೨೮ರಂದು ಬಂದರು. ಆರ್ಕಿಯಾಲಜಿ ಡೈರೆಕ್ಟರ್‌ರಾದ ಆರ್. ಶಾಮಾ ಶಾಸ್ತ್ರಿಗಳು ಭೇಟಿ ಕೊಟ್ಟರು ೨೮-೧೦-೧೯೨೮ರಂದು. ಮೇಲು ಕೋಟೆ ಯತಿರಾಜ ಮಠದ ಪೂಜ್ಯಸ್ವಾಮಿಗಳು ೨೩-೦೨-೧೯೩೦ರಂದು ಸಂದರ್ಶಿಸಿದರು. ಪುರಾತತ್ವ ಇಲಾಖೆಯ ಡೈರೆಕ್ಟರ್ ರಾ, ನರಸಿಂಹಾಚಾರ್ಯರು ೦೬-೦೩-೧೯೩೦ರಂದು ಬಂದು ಹೋದರು. ಇದು ಈ ಲೈಬ್ರರಿಯ ವೈಶಿಷ್ಟ್ಯವನ್ನು ಹೇಳುತ್ತದೆ.

‘ಪಪಂ’ರು ಕನ್ನಡ ಮತ್ತು ಸಂಸ್ಕೃತದಲ್ಲಿ ಬಿಡಿಪದ್ಯಗಳನ್ನು ಬರೆದಿದ್ದಾರೆ. ಅವರು ಹೆಚ್ಚಾಗಿ ಸಂಸ್ಕೃತ (ಮತ್ತು ಗೊಮ್ಮಟಸಾರವೆಂಬ ಪ್ರಾಕೃತ) ಗ್ರಂಥಗಳಿಗೆ ಟೀಕೆಗಳನ್ನು ಬರೆದಿರುವುದುಂಟು. ಅಲ್ಲದೆ ಕಾರ್ಕಳದ ಚರಿತ್ರೆ, ಪ್ರಸ್ತಾವನೆ, ಮತ್ತು ಪೀಠಿಕೆಗಳಲ್ಲಿ ಅವರ ಗದ್ಯ ಶೈಲಿಯ ಲಕ್ಷಣಗಳು ಒಡಮೂಡಿವೆ. ಹತ್ತೊಂಬತ್ತನೆಯ ಶತಮಾನದ ಕನ್ನಡ ಗದ್ಯದ ಸ್ವರೂಪವನ್ನು ಇವರಲ್ಲಿ ಕಾಣುತ್ತೇವೆ. ಕರ್ಮಣಿ ಪ್ರಯೋಗ, ಉಕಾರಂತ ರೂಪಗಳು, ಕೆಲವು ಇಂಗ್ಲೀಷ್ ಶಬ್ದಗಳೂ, ಅರಬ್ಬಿ-ಪಾರಸಿ ಶಬ್ದಗಳೂ ಬಳಕೆಯಾಗಿವೆ. ಪುಸ್ತಕಗಳ ಬೆಲೆ ರೂಪಾಯಿ-ಆಣೆ-ಕಾಸು ಲೆಕ್ಕದಲ್ಲಿರುವುದು ಅಂದಿಗೆ ಸಹಜವಾಗಿದೆ.

ಅವರು ೮೬ ವರ್ಷದ ತುಂಬು ಬಾಳನ್ನು ಪೂರೈಸಿ ಸೋಮವಾರ ೨೬-೦೨-೧೯೪೫ರಂದು ಚಾಮರಾಜನಗರದ ತಮ್ಮ ಮನೆಯಲ್ಲಿ ಸಂಧ್ಯಾವಂದನೆ ಮುಗಿಸಿ. ಕುಳಿತ ಹಾಗೆಯೇ ಪ್ರಾಣ ಬಿಟ್ಟರು. ರೋಗರುಜಿನಗಳಿಂದ ನರಳಲಿಲ್ಲ. ಆನಾಯಾಸ ಮರಣ. ದೈನ್ಯವಿರದ ಜೀವನ ನಡೆಸಿದ ಧೀಮಂತನಿಗೆ ಸಕಲ ಗೌರವದೊಂದಿಗೆ ೨೭-೦೨-೧೯೪೫ರಂದು ಬೆಳಗ್ಗೆ ಅಂತುಯ ಸಂಸ್ಕಾರ ನೆರೆವೇರಿಸಿದರು. ಚಾಮರಾಜನಗರದಲ್ಲಿ ಹುಟ್ಟಿ, ಭಾರತದ ಉದ್ದಗಲ ಸಂಚರಿಸಿ, ಪುಸ್ತಕ ಮುದ್ರಿಸಿ, ಸಂಪಾದಿಸಿ, ಪ್ರಕಟಿಸಿ ದೊಡ್ಡ ಹೆಸರು ಮಾಡಿದರು. ನೌಕರಿಯಲ್ಲಿದ್ದಾಗ ಜತೆಗಾರರ ಹಾಗೂ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು. ಹಲವು ಭಾಷೆಗಳಲ್ಲಿ ನಿಷ್ಣಾತರಿದ್ದರು. ಜೈನ ಸಮಾಜಕ್ಕೂ ಕರ್ನಾಟಕಕ್ಕೂ ಕೀರ್ತಿತರುವ ಉತ್ಕೃಷ್ಟ ಕೆಲಸ ಮಾಡಿದರು. ಮರೆಯಲಾಗದ ಮರೆಯಬಾರದ ಮಹಾನುಭಾವರೆನಿಸಿದರು.

Born in a strictly orthodox family, he was deeply soaked in Digambaras religious environment which determined his orientation and shaped his future aptitudes. Interestingly, he also moulded as progressive. PP was religious but radical in thinking. ancient still modern, conservative and more liberal an extraordinary blend of oppsites. In brief, he was far ahead of his times. He has carved a niche in the hall of fame as one of the foremost savants of the late 19th and early 20th century scholars from Jaina community in Deccan.

Those who had contacts with him, while recollecting the vignettes of his colourful long life, happily speak of Padmaraja`s peace-radiating and yet commanding personality. What made him very different from his contemporaries was his wisdom. foresight, fervour for research and committment of prepare the ground for subsequent generations. He gave courage to build leadership, to fight for servival in the face of adversity. Setting aside his contribution to awarenessof his comunity was extraordinary and significant. He can rightly be described as the pioneer of Jaina Church of early 20th century. It should be said to his credit that the community did nit produce another Pandit of his stature!

Devoid of any University education. as a self-made scholar of eminence. Padmaraja Pandit rose to greater heights. With his extensive learning, Proficienvy in different disciplines, and various achievements, he was head and shoulder with his contemporary scholar stalwarts. For that matter that was the time wehn Jaina scholars were on the fringes and PP was an extraordinary exception.

ನಾಡೋಜ ಪ್ರೊ. ಹಂಪನಾ
ಬೆಂಗಳೂರು
೦೧-೦೧-೨೦೧೦