ಪ್ರವೇಶ

ಪದ್ಮರಾಜ ಪಂಡಿತರು (೧೮೬೧-೧೯೪೫) ತಮ್ಮ ಕಾಲದ ಅದ್ಭುತವ್ಯಕ್ತಿ. ಬಹುಮುಖಿ ಪ್ರತಿಭೆಯಿದ್ದವರು. ಹಲವು ಕ್ಷೇತ್ರಗಳಲ್ಲಿ ಪರಿಶ್ರಮ ಪಡೆದಿದ್ದರು. ಪ್ರಕಾಶಕ, ಪತ್ರಕರ್ತ, ಸಂಘಟಕ, ವಾಗ್ಮಿ, ಸಂಪಾದಕ, ಕಲಾವಿದ, ಛಾಯಾಚಿತ್ರಕಾರ, ಲೇಖಕ, ಜ್ಯೋತಿಷಿ, ಮತ್ತು ಪ್ರಗಲ್ಫ ಪಂಡಿತ. ಇವಿಷ್ಟಲ್ಲದೆ ಆಯುರ್ವೇದ ವೈದ್ಯರು ಬೇರೆ. ಫೋಟೋಗ್ರಫಿ ಅವರಿಗೆ ಕೇವಲ ಒಂದು ಹಾಬಿಯಷ್ಟೆ. ಇದನ್ನ ಶಾಸಲೆಗೆ ಹೋಗಿ ಕಲಿಯಲಿಲ್ಲ. ಫೋಟೋಗ್ರಫಿ ಕಲಿಯಲು ಸ್ವಾಧ್ಯಾಯ ಸಂಪನ್ನರಾಗಲು, ಲಂಡನ್ನಿನಿಂದ ಇಂಗ್ಲಿಷ್ ಪುಸ್ತಕ ತರಿಸಿದ್ದರು. ಅದನ್ನು ಓದಿಕೊಂಡು ನೆಗಟಿವ್ ಸಿದ್ಧಪಡಿಸುವುದು, ಅದನ್ನು ಮುದ್ರಣಕ್ಕೆ ಅಣಿಗೊಳಿಸುವ ಕ್ರಮ, ಮತ್ತು ಮುದ್ರಿಸಿ ಪ್ರತಿಗಳನ್ನು ಸಿದ್ಧಗೊಳಿಸುವುದು: ಈ ವಿಧಾನವನ್ನು ತಮಗೆ ತಾವೆ ಗುರುವಾಗಿ ಕಲಿತರು. ಈ ಸ್ವಯಮಾಚಾರ್ಯ ಆಗುವ ಸಾಮರ್ಥ್ಯದ ಇವರು ಹಲವು ಬಗೆಯ ಚಟುವಟಿಕೆಗಳನ್ನು ಹಮ್ಮಿದ್ದರು. ಆ ಕಾರ್ಯಬಾಹುಳ್ಯದಲ್ಲಿ ಆಯುರ್ವೇದ ಸಂಬಂಧ ಔಷಧಿಗಳನ್ನು ಮಾಡುವುದೂ ಸೇರಿತ್ತು. ಲೇಹ್ಯ, ಭಸ್ಮ, ಮಾತ್ರೆ(ಗುಳಿಗೆ), ಎಣ್ಣೆ(ತೈಲ) ಮುಂತಾದುವನ್ನು ತಯಾರಿಸುತ್ತಿದ್ದರು. ಇದು ಅವರಿಗೆ, ಪಿತ್ರಾರ್ಜಿತ ಆಸ್ತಿಯೆಂಬಂತೆ, ಮನೆತನದ ಹಿರಿಯರಿಂದ ಬಂದ ಕಲೆಯಾಗಿ ಕರಗತವಾಗಿತ್ತು. ಇವಿಷ್ಟು ಸಾಲದೆಂಬಂತೆ, ಪದ್ಮರಾಜರು ಸಾಬೂನು ಮತ್ತು ಹಲ್ಲುಪುಡಿ ಸಹ ತಯಾರಿಸುತ್ತಿದ್ದರು. ಪೆನ್ಸಿಲ್ ಮಾಡುವುದಕ್ಕೆಂದು ಅದರ ಸರಿಯಾದ ಅರಿವಿಗಾಗಿ ಅಮೆರಿಕದ ವಾಷಿಂಗ್‌ಟನ್ ಮತ್ತು ಜಪಾನಿನಿಂದ ಪುಸ್ತಕಗಳನ್ನು ತರಿಸಿದರು. ಹೀಗೆ ಅವರಿಗೆ ಅಗಾಧ ಹಸಿವಿತ್ತು, ಹೊಸ ದಿಗಂತ ಕಾಣುವ ಹಂಬಲವಿತ್ತು. ಪ್ರತಿಭಾಶಾಲಿಗೆ ಯಾವುದೂ ಅಸಾಧ್ಯವಲ್ಲವೆಂಬ ನಂಬಿಕೆ ಅವರದು.

ಚಾಮರಾಜನಗರ

ಚಾಮರಾಜನಗರ ಕರ್ನಾಟಕ ಏಕೀಕರಣೋತ್ತರ ಕಾಲಘಟ್ಟದಲ್ಲಿ ಜಿಲ್ಲಾಕೇಂದ್ರವಾಯಿತು. ಆದರೆ ಆ ನಗರಕ್ಕೆ ಹಳೆಯ ಇತಿಹಾಸವಿದೆ. ೧೯೪೭ರ ಸ್ವಾತಂತ್ರ‍್ಯಪೂರ್ವ ಕಾಲಮಾನದಲ್ಲಿ. ಅಂದಿನ ಹಳೆಯ ಮೈಸೂರು ರಾಜ್ಯದಲ್ಲಿ ಇದ್ದದ್ದು, ರಾಜಧಾನಿಯಾದ ಮೈಸೂರನ್ನೂ ಒಳಗೊಂಡು, ಒಟ್ಟು ಒಂಬತ್ತು ಜಿಲ್ಲೆಗಳು. ಮೈಸೂರು ಪ್ರಾಂತ್ಯವನ್ನು ಒಡೆಯರ್ ರಾಜಮನೆತನದವರು ಆಳುತ್ತಿದ್ದರು. ಆ ರಾಜರ ಹೆಸರಲ್ಲಿ ಒ(ವೊ)ಡೆಯರ್ ಎಂಬ ನುಡಿ ಕೂಡಿರುತ್ತದೆ-ಚಾಮರಾಜ ಒಡೆಯರು, ಕೃಷ್ಣರಾಜ ಒಡೆಯರು. ಮೈಸೂರು ರಾಜರಿಗೆ ಚಾಮಾರಜನಗರದೊಂದಿಗೆ ಸಿಹಿ ಸಂಬಂಧ. ಮೈಸೂರಿನ ಆಗ್ನೇಯದಿಕ್ಕಿಗೆ ಸುಮಾರು ಅರವತ್ತು ಕಿ.ಮೀ. ದೂರದಲ್ಲಿದ್ದ ಚಾಮರಾಜನಗರ ಮೊದಲಿನಿಂದಲೂ ಬಲ್ಲಿದರ ಬೀಡು. ಪಂಡಿತರೂ ವಿವಿಧಕಲಾ ಪಂಡಿತರೂ ಜ್ಯೋತಿಷ್ಯ ವಿಶಾರದರೂ ಆಯುರ್ವೇದ ಪಾರಗರೂ ಪ್ರಾಜ್ಞ ಪುರೋಹಿತರೂ ವಿದ್ವದ್ವರೇಣ್ಯರೂ ಅಲ್ಲಿದ್ದರು. ಅಲ್ಲಿನ ತತ್ವಜ್ಞಾನಿಗಳಿಗೆ ಮೈಸೂರು ಅರಮನೆಯ ಆಹ್ವಾನವಿತ್ತು. ಚಾಮರಾಜನಗರ ೧೫ ಆಗಸ್ಟ್ ೧೯೯೭ರಂದು ಒಂದು ಜಿಲ್ಲಾ ಕೇಂದ್ರವೆಂದು ಅಧಿಕೃತವಾಗಿ ಸರಕಾರ ಘೋಷಿಸುವ ತನಕ ಮೈಸೂರು ಜಿಲ್ಲೆಗೆ ಸೇರಿದ ತಾಲೂಕು ಕೇಂದ್ರವಾಗಿತ್ತು.

ಚಾಮರಾಜನಗರಕ್ಕೆ ಮೊದಲಿಗೆ ಇದ್ದ ಇನ್ನೊಂದು ಹೆಸರು ಅರಿಕುಠಾರ, ‘ಹಗೆಗಳಿಗೆ ಕೊಡಲಿ’ ಎಂದು ಆ ಸಂಸ್ಕೃತ ಸ್ಥಳನಾಮದ ಕನ್ನಡ ಹುರುಳು. ಆದರೆ ಕಾಲಾಂತರದಲ್ಲಿ ಮೈಸೂರು ಪ್ರಾಂತವನ್ನು ಆಳಿದ ಚಾಮರಾಜ ಒಡೆಯರ ಹೆಸರನ್ನು ಆ ಊರಿಗೆ ೧೮೧೮ರಲ್ಲಿ ಇಡಲಾಯಿತು. ಈ ಹೊಸನಾಮಕರಣ ಆದಮೇಲೆ ಅರಿಕುಠಾರವೆಂಬುದು ಬದಲಾವಣೆಗೊಂಡು ಚಾಮರಾಜನಗರ ಎಂಬ ಹೆಸರು ಚಲಾವಣೆಯಲ್ಲಿ ಉಳಿಯಿತು. ಅದು ಏನೇ ಇರಲಿ ಈ ನಗರ ಮುಂಚಿನಿಂದಲೂ ಒಂದು ಜೈನಕೇಂದ್ರವೆನಿಸಿ ಹೆಸರುವಾಸಿಯಾಗಿತ್ತು. ಜೈನ ಆಚಾರ್ಯ ಪರಂಪರೆಯಲ್ಲಿ ಗಣ್ಯರಾದ ಪೂಜ್ಯಪಾದರು (೬-೭ನೆಯ ಶತಮಾನ) ಈ ಪ್ರದೇಶ ಪರಿಸರದಿಂದ ಬಂದವರು. ಉಮಾಸ್ವಾತಿ ಆಚಾರ್ಯ ಪ್ರಣೀತ ತತ್ವಾರ್ಥಸೂತ್ರಕ್ಕೆ ಪೂಜ್ಯಪಾದರು ಬರೆದಿರುವ ಸರ್ವಾರ್ಥಸಿದ್ಧಿ ಶ್ರೇಷ್ಠವ್ಯಾಖ್ಯಾನ ಗ್ರಂಥ. ಚಾಮರಾಜನಗರಕ್ಕೆ ಹತ್ತಿರವಿರುವ ಮಲೆಯೂರು(ಕನಕಗಿರಿ) ಗಂಗರ ಕಾಲದಿಂದಲೂ ಪ್ರಸಿದ್ಧ ಜೈನ ಕೇಂದ್ರ ಜಿಲ್ಲಾಕೇಂದ್ರಕ್ಕೆ ಇಪ್ಪತ್ತು ಕಿ.ಮೀ. ಅಂತರದ ಈ ಮಲೆಯೂರು ಮತ್ತು ಸುತ್ತ ಮುತ್ತಲಿನ ಹಳ್ಳಿ ಪಳ್ಳಿಗಳು ಜೈನ ಪಳೆಯುಳಿಕೆಯಿಂದ ಗತ ಇತಿಹಾಸವನ್ನು ಹೇಳುತ್ತವೆ. ಮಹಾನ್ ವಿದ್ವಾಂಸರೂ ಆಯುರ್ವೇದ ನಿಪುರಣರೂ ಆದ ಪೂಜ್ಯಪಾದರಲ್ಲದೆ ಹಲವು ವಿದ್ವಾಂಸರೂ ಶಾಸ್ತ್ರಕಾರರೂ ಕವಿಗಳೂ ಆಯುರ್ವೇದ ಪಂಡಿತರೂ ಜ್ಯೋತಿಷ್ಯಶಾಸ್ತ್ರ ವಿಶಾರದರೂ ಉತ್ತಮ ಕವಿಗಳೂ ಜೈನ ಪರಂಪರೆಯನ್ನು ಮುಂದುವರಿಸಿ ಪ್ರಭಾವ ಬೀರಿದರು. ಗಂಗರ ಕಾಲದಲ್ಲಿ ಕುಡಿಯಿಟ್ಟ ಜೈನ ಪ್ರಭಾವನೆ ಹೊಯ್ಸಳರು ಮತ್ತು ವಿಜಯನಗರ ಕಾಲದವರೆಗೂ ಪಲ್ಲವಿಸುತ್ತ ಮೈಸೂರು ಒಡೆಯರ ಆಳಿಕೆಯಲ್ಲಿ ಬೆಳಗಿತು.

ಇಲ್ಲಿ ಉಲ್ಲೇಕಿಸಲೇ ಬೇಕಾದ ಒಂದು ಸಂಗತಿಯಿದೆ. ಅದು ಹೊಯ್ಸಳರ ಯುಗದ ಮಾತು. ಹೊಯ್ಸಳವಂಶದ ರಾಜಾವಳಿಯಲ್ಲಿ ಬಿಟ್ಟಿದೇವ ವಿಷ್ಣವರ್ಧನನ ಆಡಳಿತಾವಧಿ (೧೧೦೮-೫೨) ಉತ್ತುಂಗ ಶೃಂಗ. ಆತನ ಸೇನಾನಿಗಳಲ್ಲಿ ಪುಣಿಸಮಯ್ಯನೂ ಒಬ್ಬ. ಈತನ ಮೊಮ್ಮಗನಾದ ಇಮ್ಮಡಿ ಪುಣಿಸಮಯ್ಯನು ಚಾಮರಾಜನಗರದಲ್ಲಿ ತ್ರಿಕೂಟ ಜಿನಾಲಯವನ್ನು ಶಕ ಸಂವತ್ಸರ ೧೦೩೯ರಲ್ಲಿ ಅಂದರೆ ಕ್ರಿ.ಶ. ೧೧೧೭ರಲ್ಲಿ ಕಟ್ಟಿಸಿದನು. ಕಟ್ಟಿಸಿದ ದಾನಿಯ ಹೆಸರನ್ನು ಹೊತ್ತು ಈ ಜಿನಮಂದಿರಕ್ಕೆ ಪುಣಿಸ ಜಿನಾಲಯವೆಂದು ಹೆಸರಾಯಿತು. ಈ ಬಸದಿಯ ಗರ್ಭಗೃಹದಲ್ಲಿ ವಿರಾಜಮಾನರಾದ ಮೂಲನಾಯಕಜಿನರು ವಿಜಯಪಾರ್ಶ್ವನಾಥರು. ಅದರಿಂದ ಈ ಬಸದಿಗೆ ರೂಢಿಯಲ್ಲಿ ವಿಜಯಪಾರ್ಶ್ವನಾಥ ಬಸದಿ ಎಂಬ ಹೆಸರು ಚಾಲ್ತಿಯಲ್ಲಿದೆ. ಈ ಬಸದಿಗೆ ಮೊದಲಿನಿಂದಲೂ ಪದ್ಮರಾಜಪಂಡಿತರ (=‘ಪಪಂ’) ವಂಶಸ್ಥರು ಪೂಜಾದಿಗಳನ್ನು ಮಾಡುವ ಪೌರೋಹಿತ್ಯ ಕಾರ್ಯವನ್ನು ನಿರ್ವಹಿಸಿದರು.

ಕರ್ನಾಟಕದಲ್ಲಿ ಪೌರೋಹಿತ್ಯ ಕಾರ್ಯವನ್ನು ಮಾಡುವ ಅರ್ಚಕರನ್ನು ಪಂಡಿತರು, ಉಪಾಧ್ಯೆ, ಇಂದ್ರರು, ಪುರೋಹಿತರು ಮುಂತಾದ ಹೆಸರುಗಳಿಂದ ಗುರುತಿಸುವರು. ಹಳೆಯ ಮೈಸೂರು ರಾಜ್ಯದಲ್ಲಿ ಜೈನ ಬ್ರಾಹ್ಮಣರು ಈ ಪೌರೋಹಿತ್ಯ ನಿರ್ವಹಿಸುತ್ತ ಬಂದಿದ್ದಾರೆ. ಚಾಮರಾಜನಗರ ಶತಮಾನಗಳ ಹಿಂದೆ ಸುಮಾರು ಏಳುನೂರು ಮನೆಗಳಲ್ಲು ಜೈನರಿದ್ದರು. ಒಂಬತ್ತು ಗೋತ್ರಗಳಿಗೆ ಸೇರಿದ ಜೈನ ಬ್ರಾಹ್ಮಣರ ದೊಡ್ಡ ತಂಡವೊಂದು ಚೋಳದೇಶ (ಅಂದರೆ ಇಂದಿನ ಕೇರಳ ರಾಜ್ಯ)ದಿಂದ, ಪಾಂಡ್ಯ (ತಮಿಳು) ರಾಜ್ಯದಿಂದ ಬಂದು ಚಾಮರಾಜನಗರ ಪರಿಸರದಲ್ಲಿ ನೆಲಸಿದರು. ವಾಸ್ತವವಾಗಿ ವಲಸೆಹೊರಟವರು ಹನ್ನೆರಡು ಗೋತ್ರಗಳಿಗೆ ಸೇರಿದ ಮಹಾಜನರಾದರೂ ಈ ಭಾಗದಲ್ಲಿ ಬಂದು ನಿಂತವರು ಒಂಬತ್ತು ಗೋತ್ರದವರು. ಇವರಲ್ಲಿ ಹೆಚ್ಚಿನವರು ನೆರೆಯ ನಾಡಾದ ಕೇರಳದ ದಿಂಪಂಗುಡಿ ಮುಂತಾದ ಎಡೆಯೂರುಗಳಿಂದ ಬಂದು ಬೀಡು ಬಿಟ್ಟವರು. ತಮಿಳುನಾಡು ಹಾಗೂ ಕೇರಳದಲ್ಲಿ ಜೈನರ ಪ್ರಾಬಲ್ಯ ಇಳಿಮುಖಗೊಂಡು ಜಿನಗೃಹಗಳೂ ಜೈನ ಜನಗೃಹಗಳೂ ಗ್ರಹಗತಿ ಸರಿಯಿಲ್ಲದೆ ಅನಾಥವಾಗಿ ಸೊರಗುತ್ತಿದ್ದುವು. ಅದರಿಂದ ಪೂಜೆ ಪುರಸ್ಕಾರ ಸಲ್ಲುತ್ತಿದ್ದ ಸುರಕ್ಷಿತ ಕರ್ನಾಟಕದೆಡೆಗೆ ಹೆಜ್ಜೆ ಹಾಕಿದ್ದು ಹೊಯ್ಸಳರು ಆಳುತ್ತಿದ್ದ ಹನ್ನೆರಡು ಹದಿಮೂರನೆಯ ಶತಮಾನದಲ್ಲಿ. ಜೈನ ಬ್ರಾಹ್ಮಣರು ಅಂದಿನಿಂದ ಇಲ್ಲಿಯೂ ಮರ್ಯಾದೆ ಗಳಿಸುತ್ತ ಬಾಳಿದರು. ರಾಜಮನ್ನಣೆ ಪಡೆದರು. ಮಂತ್ರಗಳಾಗಿ ಕರಣಿಕರಾಗಿ ಉಪಾಧ್ಯಾಯರಾಗಿ, ಲೇಖಕರಾಗಿ, ಜ್ಯೋತಿಷ್ಯ ವಿದ್ವಾಂಸರು ಮಾನ್ಯರಾದರು. ಮೈಸೂರು ಒಡೆಯರೂ ದಾನದತ್ತಿಗಳನ್ನಿತ್ತು ಪುರಸ್ಕರಿಸಿದರು.

ಜೈನ ಬ್ರಾಹ್ಮಣರು ತುಂಬ ಕಡಮೆ ಇದ್ದಾರೆ. ಎರಡು ಸಾವಿರಕ್ಕೂ ಕಡಮೆ ಇರುವ ಇವರು ಬಸದಿಗಳ ಪೂಜಾ ಸೇವಾದುರಂಧರರು. ವಿದ್ಯಾವಂತರು, ಶಾಸ್ತ್ರ ಸಂಗೀತ ಜ್ಯೋತಿಷ ಬಲ್ಲವರು. ಶ್ರಾವಕರಿಗೂ (ಗೃಹಸ್ಥರಿಗೂ) ಜೈನ ಬ್ರಾಹ್ಮಣರಿಗೂ ಮಧುರ ಬಾಂಧವ್ಯವಿದ್ದರೂಕೊಟ್ಟು ತರುವ ಮದುವೆ ಇವರ ನಡುವೆ ನಡೆಯುತ್ತಿರಲಿಲ್ಲ. ಆದರೆ ಆರ್ಧಶತಮಾನದಿಂದ ಈಚೆಗೆ ವಿವಾಹಕ್ಕೆ ಅವಕಾಶ ಕಲ್ಪಿತವಾಗಿದೆ.

ಇಂತಹ ಒಂದು ಜೈನ ಬ್ರಾಹ್ಮಣ ಕುಟುಂಬ ಚಾಮರಾಜನಗರದಲ್ಲಿ ವರ್ಧಿಷ್ಣುವಾಗಿತ್ತು. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಈ ಪ್ರತಿಷ್ಠಿತ ಕುಟುಂಬದ ಯಜಮಾನರಾಗಿದ್ದವರು ಬ್ರಹ್ಮಸೂರಿ ಪಂಡಿತರು. ಪಂಡಿತಶಬ್ದದ ನಿಷ್ಪತ್ತಿ, ಮೂಲ ಅರ್ಥ, ಅರ್ಥವಿಸ್ತಾರ ಕುರಿತು ನಾಲ್ಕುಮಾತು: ಶಬ್ದಕೋಶಕಾರರು ಧೀರಃ, ಪಂಡಿತಃ, ಕೋವಿಧಃ, ಮತಿಮಾನ್ ಮುಂತಾದ ಶಬ್ದಗಳೊಂದಿಗೆ ಪಂಡಿತ ಶಬ್ದವನ್ನೂ ಸಮೀಕರಿಸಿದ್ದಾರೆ. ಇದನ್ನು ಸಂಸ್ಕೃತ ಶಬ್ದವೆಂದೇ ಪರಿಗಣಿಸಿ, ‘ವಿದ್ವಾಂಸ, ಬಲ್ಲಿದ’ ಎಂಬರ್ಥ ನೀಡಿದ್ದಾರೆ. ಆದರೆ ದ್ರಾವಿಡ ಭಾಷಾತಜ್ಞರು ‘ಪಂಡಿತ’ ಶಬ್ದ ಸಂಸ್ಕೃತವಲ್ಲ ಎಂದು ನಿರೂಪಿಸಿದ್ದಾರೆ. ಇವರ ಪ್ರಕಾರ ‘ಮಾಗು, ಪಕ್ವವಾಗು, ಹಣ್ಣಾಗು’ ಎಂಬರ್ಥದ ‘ಪಣ್’ ಎಂಬಧಾತು-ಡ್ ಪ್ರತ್ಯಯದೊಂದಿಗೆ ಪಣ್ಡು,-ತ ಪ್ರತ್ಯಯಸೇರಿ ಪಂಡಿತ ಎಂಬ ರೂಪ ಪಡೆದಿರುವುದನ್ನು ವಿವರಿಸಿದ್ದಾರೆ. ಪಂಡಿತ ಎಂದರೆ ‘ತಿಳಿದವನು, ತಿಳಿವಳಿಕೆಯಿಂದ ಮಾಗಿದವನು, ಜ್ಞಾನಿ’ ಎಂದರ್ಥ. ಪಂಡಿತ ಎಂಬುದು ಮೂಲತಃ ದ್ರಾವಿಡ ಶಬ್ದವಾಗಿದ್ದು ಅದನ್ನು ಸಂಸ್ಕೃತ ಭಾಷೆಯೂ ಎರವಲಾಗಿ ಪಡೆದಿದೆ.

ಪಂಡಿತ ಶಬ್ದ ನಿಷ್ಪತ್ತಿಯ ಬೆಳಕಿನಲ್ಲಿ ಜೈನ ಬ್ರಾಹ್ಮಣ ಮನೆತನಗಳ ಗಂಡಸರ ಹೆಸರಿನೊಂದಿಗೆ ಪಂಡಿತ ಶಬ್ದದ ಸೇರ್ಪಡೆ ಅರ್ಥಪೂರ್ಣವಾಗಿರುವುದನ್ನು ಮನಗಾಣಬಹುದು. ಇದಕ್ಕೆ ಪೂರಕವಾಗಿ ಗಂಡಸರ ಹೆಸರಿನೊಂದಿಗೆ(ಪಂಡಿತ ಅಥವಾ) ಶರ್ಮ ಎಂದು ಸೇರುವುದನ್ನೂ ಗಮನಿಸ ಬೇಕು. ಜತೆಗೆ ‘ಪಂಡಿತ’ ಶಬ್ದವನ್ನು ಆಯುರ್ವೇದ ವೈದ್ಯರಿಗೂ ಬಳಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಬ್ರಹ್ಮಸೂರಿ ಪಂಡಿತರು ಮಹತ್ವದವರಾಗಿ ಚಾಮರಾಜನಗರದಲ್ಲಿ ಗೌರವಾರ್ಹರಾಗಿದ್ದರು. ಅವರು ಕನ್ನಡ, ಪ್ರಾಕೃತ, ಸಂಸ್ಕೃತ ಭಾಷೆಗಳಲ್ಲಿ ಪಂಡಿತರು. ಜೈನ ಮೂಲ ಮತ್ತು ಪ್ರಾಚೀನ ಗ್ರಂಥಗಳು ಅವರಿಗೆ ಕರತಲಾಮಲಕ. ಆಯುರ್ವೇದ ಪಂಡಿತರೂ ಆಗಿದ್ದರು. ಪೂಜ್ಯಪಾದ ಉಗ್ರಸೇನ ಮೊದಲಾದವರು ಬರೆದ ಆಯುರ್ವೇದ ಗ್ರಂಥಗಳು ಅವರಿಗೆ ವಾಚೋವಿಧೇಯ. ತಾತಮುತ್ತಾತರಂತೆ ಆಯುರ್ವೇದ ಔಷಧಗಳನ್ನು ತಯಾರಿಸಿ ಜನರ ಸೇವೆಯಲ್ಲಿ ನಿರತರು. ಜತಗೆ ಬ್ರಹ್ಮಸೂರಿ ಪಂಡಿತರು ‘ಇರು ಮರುಳೆ ಶುಷ್ಕ ಪಂಡಿತ’ ಎಂಬಂತೆ ಕೇವಲ ಶಾಸ್ತ್ರ ಜಡರಲ್ಲ. ಅವರಿಗಿತ್ತು ಸೃಜನ ಸಾಮರ್ಥ್ಯ. ಬ್ರಹ್ಮಸೂರಿ ಪಂಡಿತರಿಗೆ ಮೂವರು ಗಂಡು ಮಕ್ಕಳಿದ್ದರು

. ಬ್ರಹ್ಮದೇವ ಪಂಡಿತ:

ಇವರು ಕೂಡ ತಮ್ಮ ತಂದೆ ತಾತಂದಿರಂತೆ ನಾಟಿವೈದ್ಯರು. ಮನೆತನದಲ್ಲಿ ವಂಶಪಾರಂಪರ್ಯವಾಗಿ ಬೆಳಿದು ಬಂದಿದ್ದ ಹಸ್ತಸಾಮುದ್ರಿಕಾಶಾಸ್ತ್ರ, ಜ್ಯೋತಿಷ್ಯಗಳಲ್ಲಿ ನಿಪುಣರಾಗಿದ್ದರು. ಸಂಸ್ಕೃತ ಭಾಷೆಯಲ್ಲಿ ನೈಪುಣ್ಯವಿದ್ದವರು. ಮಾಧ್ಯಮಿಕ ಶಾಲೆಯ ಮೇಷ್ಟರೂ ಆಗಿದ್ದರು.

. ಪದ್ಮರಾಜ ಪಂಡಿತ:

ಇಈ ಪುಸ್ತಕದ ಕಥಾನಾಯಕ. ಇವರ ಜೇವನ ಪಾಠಗಳ ಪ್ರಸ್ತಾಪ ಮುಂದೆ ಬಂದಿದೆ.

. ಜ್ಞಾನೇಶ್ವರ ಪಂಡಿತ:

ಆಗಮಶಾಸ್ತ್ರನಿಪುಣರು, ಜ್ಯೋತಿಷ್ಯಶಾಸ್ತ್ರ ಪಾರಂಗತರು. ಪ್ರತಿವರ್ಷ ಜೈನ ಪಂಚಾಂಗವನ್ನು ಪ್ರಕಟಿಸುತ್ತಿದ್ದರು.

ಅಪ್ಪನ ಊರಿನ ನೆನಪು

ಪದ್ಮರಾಜ ಪಂಡಿತರಿಗೆ ತಮ್ಮ ಊರು ಚಾಮರಾಜನಗರವೆಂದೂ ತಮ್ಮ ತಂದೆ ಜೈನ ಬ್ರಾಹ್ಮಣ (=ದ್ವಿಜೋತ್ತಮ) ಬ್ರಹ್ಮಸೂರಿ ಪಂಡಿತರೆಂದೂ ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿತ್ತು. ಆಕಾರಣಕ್ಕಾಗಿ ಅವರು ತಮ್ಮ ಪ್ರತಿಯೊಂದು ಸಂಪಾದಿತ ಇಲ್ಲವೇ ಸ್ವರಚಿತ ಪುಸ್ತಕದಲ್ಲಿಯೂ ಈ ಎರಡು ಸಂಗತಿಗಳನ್ನು ತಪ್ಪದೆ ನಮೂದಿಸುತ್ತಿದ್ದರು. ಸರಳ ಸುಂದರ ಸಂಸ್ಕೃತ ವಾಕ್ಯಗಳಲ್ಲಿ, (ಪದ್ಯ) ದೆಲ್ಲಿ ಇದನ್ನು ನಿವೇದಿಸುತ್ತಿದ್ದರು.

ಎರಡು ಉದಾಹರಣೆಯನ್ನು ನೋಡೋಣ:

. ಮಹಾಪುರಾಣ (ಭಾಗ-೧) ಇದರಲ್ಲಿ ಗದ್ಯವಾಕ್ಯಗಳಲ್ಲಿ ಜನ್ಮಸ್ಥಳ ಮತ್ತು ಜನ್ಮದಾತರ ಸ್ಮರಣೆಯಿದೆ(೧೯೧೩):

ಶ್ರೀಮದ್ ವಸುಧಾವಧೂವದನ ವನಜ ದೇಶೀಯ
ಕರ್ಣಾಟದೇಶ ಕರ್ಣಿಕಾಕಲ್ಪ ಚಾಮರಾಜನಿಕೇತನಾರ್ಹತ
ದ್ವಿಜೋತ್ತಮ ಬ್ರಹ್ಮಸೂರಿ ಪಂಡಿತಾತ್ಮಜ ಪದ್ಮರಾಜ ಪಂಡಿತ.
=
ಕರ್ಣಾಟಕವು ಭೂಮಿಯೆಂಬ ಹೆಣ್ಣಿನ ಮೊಗದಾವರೆಯ
ಹಾಗೆ ಹೊಳೆಯುತ್ತಿದೆ. ಅದರಲ್ಲಿ ಚಾಮರಾಜನಗರವು
ಹೆಣ್ಣಿನ ಕಿವಿಯಲ್ಲಿರುವ ಹೂವಿನಂತಿದೆ. ಊರಲ್ಲಿ
ಬ್ರಹ್ಮಸೂರಿ ಪಂಡಿತರೆಂಬ ಒಳ್ಳೆಯ ಬ್ರಾಹ್ಮಣ ಮಗನಾದ
ಪದ್ಮರಾಜ ಪಂಡಿತನಿದ್ದಾನೆ.

. ತತ್ವಾರ್ಥ ಸೂತ್ರ ಕರ್ಣಾಟ ವ್ಯಾಖ್ಯಾನ (೧೯೧೪)ದಲ್ಲಿ, ಪದ್ಯರೂಪದಲ್ಲಿ, ಇದೇ ಸಂಗತಿಯನ್ನು ಅರಿಕೆ ಮಾಡಲಾಗಿದೆ:

ಆನಂದವರ್ಷೇಷ್ಟಮಿ ಚಂದ್ರವಾರೇ
ನಂದೀಶ್ವರೇ ಕಾರ್ತಿಕ ಶುಕ್ಲಪಕ್ಷೇ
ತತ್ವಾರ್ಥಸೂತ್ರಸ್ಯ ಲಿಲೇಖ ಟೀಕಾಂ
ಕರ್ಣಾಟಿಕಾಮಾರ್ಹತ ಪದ್ಮರಾಜಃ |
ಕಾಶ್ಯಪಾನ್ವಯ ವಿಪ್ರೇಣ
ಬ್ರಹ್ಮಸೂರಿ ತನೂಭವಾ
ವೀರಾಬ್ದೇಸಚಮಾರೇಚ
ಶಾಸ್ತ್ರಮೇತತ್ಸು ಮುದ್ರಿತಾಮ್ |

ಉಮಾಸ್ವಾತಿ(ಮಿ) (೩೫೦-೪೦೦) ವಿರಚಿತ ಗ್ರಂಥರಾಜ ತತ್ವಾರ್ಥಸೂತ್ರಕ್ಕೆ ಕನ್ನಡ ಟೀಕೆಯನ್ನು ವರ್ತಮಾನಯುಗದಲ್ಲಿ ಮೊದಲಿಗೆ ಬರೆದವರು ‘ಪಪಂ’ರು. ಇವರು ಇದನ್ನು ನಂದೀಶ್ವರ ಕಾರ್ತಿಕ ಶುಕ್ಲಪಕ್ಷದಲ್ಲಿ ಬರೆದು ಪೂರೈಸಿದರೆಂಬುದನ್ನು ಸಹ ವಿಶೇಷವಾಗಿ ಗಮನಿಸಬೇಕು. ಏಕೆಂದರೆ ಜೈನಪರಂಪರೆಯಲ್ಲಿ ಇದು ಬಹಳ ಮಹತ್ವದ್ದು. ನಂದೀಶ್ವರ ಕಾರ್ತಿಕಕ್ಕೆ ಅದೆಷ್ಟು ಹಿರಿಮೆಯನ್ನು ಕೊಡಲಾಗಿದೆಯೆಂದರೆ ಆದಿಕವಿ ಪಂಪನೂ ಮಹಾಕವಿ ರನ್ನನೂ ತಮ್ಮ ಧಾರ್ಮಿಕ ಕಾವ್ಯಗಳನ್ನು ಇದೇ ತಿಥಿಯಲ್ಲಿ ರಚಿಸಿ ಮುಗಿಸಿದ್ದನ್ನು ಸ್ಪಷ್ಟವಾಗಿ ಸಾರಿದ್ದಾರೆ:

. ಪಂಪ, ಆದಿಪುರಾಣಂ, ೧೬೪೦, ೪೧

ಶಕವರ್ಷಮೆಂಟುನೂರ
ಕೈಕಡೆಯೊಳರುವತ್ತು ಮೂರು ಸಂದಂದು ಜಗತ್
ಪ್ರಕಟ ಪ್ಲವ ಸಂವತ್ಸರ
ಕಾರ್ತಿಕಂ ಮುದಮನೀಯೆ ನಂದೀಶ್ವರದೊಳ್ |

ಸಿತಪಕ್ಷದ ಪೌರ್ಣಮಿದಿನ
ಪತಿವಾರಂ ಶುಭದಮೂಲ ನಕ್ಷತ್ರದೊಳ
ನ್ವಿತಮಾಗೆ ನೆಗಳ್ದುದಿಂದೀ
ಕೃತಿಜಗದೊಳ್ ಪುದಿದು ಸಾಗರಾಂತ ಕ್ಷಿತಿಯಂ ||

. ರನ್ನ, ಅಜಿತತೀರ್ಥಕರ ಪುರಾಣ ತಿಲಕಂ, ೧೨೫೬

ಶಕವರ್ಷಂ ಪಂಚದಶಾ
ಧಿಕ ನವಶತಮಾಗೆ ವಿಜಯ ಸಂವತ್ಸರ ಕಾ
ರ್ತಿಕ ನಂದೀಶ್ವರ ದಿನದೊಳ್
ಪ್ರಕಟಿಸಿದುದು ರತ್ನನಿಂದಮಜಿತ ಪುರಾಣಂ |

ಪದ್ಮರಾಜ ಪಂಡಿತರ ಜನನ-ಮರಣ ತೇದಿಗಳು ಖಚಿತವಾಗಿ ತಿಳಿದಿವೆ. ಅವರು ಹುಟ್ಟಿದ್ದು ದುರ್ಮುಖ ಸಂವತ್ಸರದ ಆಶ್ವಯುಜ ಶುದ್ಧ ಷಷ್ಠಿ, ಅಂದರೆ ೧೮೬೧ನೆಯ ಇಸವಿಯಲ್ಲಿ. ಅವರಿಗೂ ಅವರ ಅಣ್ಣ-ತಮ್ಮಂದಿರಿಗೂ ಎಳೆಯಂದಿನ ದಿನಗಳಲ್ಲಿ ಮನೆಯೇ ಪಾಠ ಶಾಲೆ, ಹೆತ್ತ ತಂದೆಯೇ ಅ ಆ ಇ ಈ ಸಿದ್ಧಂ ನಮಃ ಎಂದು ಕಲಿಸಿದ ಮೊದಲ ಗುರು. ಘನ ಪಂಡಿತರಾದ ಬ್ರಹ್ಮಸೂರಿ ಪಂಡಿತರು ತಮ್ಮ ಮೂವರು ಮಕ್ಕಳಿಗೆ ಓದುವುದು, ಬರೆಯುವುದು (ವರ್ಣಮಾಲೆ) ಲೆಕ್ಕಮಾಡುವುದು,ಕಾಗುಣಿತ ಹೇಳಿಕೊಟ್ಟರು. ಕನ್ನಡದೊಂದಿಗೆ ಪ್ರಾಕೃತ-ಸಂ ಸ್ಕೃತ ಭಾಷಾ ಸಾಹಿತ್ಯ ಬೋಧಿಸದರು. ಭಾಷಾಜ್ಞಾನ, ಸಾಹಿತ್ಯ ಪರಿಚಯಕ್ಕೆ ತಂದೆ ವಿರಮಿಸಲಿಲ್ಲ. ಅದರೊಂದಿಗೇನೆ ವ್ಯಾಕರಣ, ಅಲಂಕಾರ, ಆಗಮ, ಆಯುರ್ವೇದ, ಜ್ಯೋತಿಷ ಕಲಿಸಿದರು, ಜಿನಾಲಯದಲ್ಲಿ ಪೂಜೆ ಪ್ರವಚನಕ್ಕೆ ಬೇಕಾಗುವ ಸಾಂಪ್ರದಾಯಿಕ ಪೂಜಾವಿಧಿಯನ್ನೂ ಮಂತ್ರಗಳನ್ನೂ ತಿಳಿಸಿ, ಜನ್ಮಕೊಟ್ಟ ತಂದೆಯೇ ವಿದ್ಯೆಕೊಟ್ಟ ಉಪಾಧ್ಯಾಯರೂ ಆದದ್ದು ಅಪರೂಪ. ಈ ಎಲ್ಲವನ್ನೂ ಕಲಿತು ಕಂಠಸ್ಥ, ಹೃದಯಸ್ಥವಾಗಿ ಪದ್ಮರಾಜ ಪಂಡಿತರು ಮರುಹುಟ್ಟು ಪಡೆದು ‘ದ್ವಿಜ’ರೇ ಆದರು.

ಪಯಣಿಗ

ಚಿಕ್ಕ ಹುಡಗನಾಗಿರುವಾಗಲೇ ‘ಪಪಂ’ರಿಗೆ ಅಗಾಧ ಹಸಿವು. ಚೂಟಿಯಾಗಿದ್ದ. ಜಿಗುಟಾದ ನೆನಪಿತ್ತು. ತಂದೆ ಒಳ್ಳೆಯ, ಗಟ್ಟಿಯಾದ ತಳಪಾಯ ಹಾಕಿದ್ದರು. ಚಾಮರಾಜನಗರದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಾಲೆ ಓದು ಮುಗಿಯಿತು. ಜ್ಞಾನದಾಹ ಅವರನ್ನು ನೂಕತೊಡಗಿತ್ತು, ಊರಿನ ಓದು ಸಾಕಾಗಲಿಲ್ಲ. ಹೆಚ್ಚು ಓದುವ, ಲೋಕ ಸುತ್ತುವ ಉತ್ಕಟೇಚ್ಛೆ. ಎಲ್ಲೋ ದೂರದ ಕರೆ ಕೈಬೀಸಿ ಕರೆಯಿತು, ಕಟ್ಟಿದರು ಪುಟ್ಟಗಂಟು ಮೂಟೆ. ಬಿಟ್ಟರು, ಹೊರಟೇ ಬಿಟ್ಟರು ಊರು ಬಿಟ್ಟು. ಆಗ ಆತ ಹದಿನೆಂಟರ ಪಡ್ಡೆ ಹುಡುಗ. ಮೀಸೆ ಮೂಡತೊಡಗಿದ್ದ ಚಾಮರಾಜನಗರದ ಹೈದ. ೧೮೭೯ರಲ್ಲಿ ಓದುವ ತಹತಹದಿಂದ ಸರಸ್ವತಿಯ ಹೆಜ್ಜೆಗಳನ್ನು ಅರಸುತ್ತ ಅಂದಿನ ಅನೇಕಾನೇಕ ವಿದ್ಯಾಕೇಂದ್ರಗಳಲ್ಲಿದ್ದರು ಕಾರಂಜ, ಕಾಸಿಗಳವರೆಗೆ ಎಡತಾಕಿದರು. ಹಲವಾರು ತೀರ್ಥಕ್ಷೇತ್ರಗಳನ್ನು ಕಂಡರು, ಎಂದೂ ಕಾಣದ, ಕೇಳದ ಊರು ಕೇರಿಗಳನ್ನು ಸುತ್ತಿದರು. ಹೊಸನಾಡುಗಳಲ್ಲಿ ಸಂಚರಿಸಿದರು. ಹೊಸಭಾಷೆಗಳ ಪರಿಚಯ ಪಡೆದರು, ದೇಶ ಸುತ್ತಿದರು, ಕೋಶ ತಿರುವಿದರು. ಅನುಭವ ಕೋಶ ತುಂಬಿದ ಕಣಜವಾಯಿತು. ಮನೆಯಲ್ಲಿ, ಶಾಲೆಯಲ್ಲಿ, ಊರಿನಲ್ಲಿ ಕಲಿಯಲಾಗದ್ದನ್ನು ದೇಶಪರ್ಯಟನದಿಂದ ಸಂಚಯಿಸಿದರು. ಬಹುಭಾಷೆಗಳಲ್ಲಿ ಪ್ರವೇಶ, ಬಹುಜನರಲ್ಲಿ ಹೊಕ್ಕುಬಳಕೆಯಿಂದ ಮುಂದಿನ ಬಾಳಿಗೆ ಬುತ್ತಿ ಸಿಕ್ಕಿತು. ಅನೇಕ ಕೆರೆಬಾವಿಗಳ ನೀರು ಅವರಿಗೆ ಹುರುಪು ಬಾಳಿಗೆ ಬುತ್ತಿ ಸಿಕ್ಕಿತು. ಅನೇಕ ಕೆರೆಬಾವಿಗಳ ನೀರು ಅವರಿಗೆ ಹುರುಪು ತಂದಿತು. ಹುಡುಗನಾಗಿ ಹೋದವನು ಪ್ರೌಢನಾಗಿ, ಬಲ್ಲಿದನಾಗಿ ಹಿಂತಿರುಗಿದರು. ಯಾವುದೇ ಜನರೊಂದಿಗೆ ವ್ಯವಹರಿಸುವ, ಎಂತಹುದೇ ಸವಾಲನ್ನು ಎದುರಿಸುವ ಎದೆಗಾರಿಕೆ ಬಂದಿತ್ತು, ಆತ್ಮವಿಶ್ವಾಸ ಮೂಡಿತ್ತು. ಅನೇಕ ಶಾಸ್ತ್ರಗಳ ಅಭ್ಯಾಸಕ್ಕೆ ಲೋಕಜ್ಞಾನದ ಮೆರಗು ಬೆರೆತು ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿತ್ತು. ಪದ್ಮರಾಜರು ವಾಚ್ಯಾರ್ಥದಲ್ಲಿಯೂ ಪಂಡಿತರಾಗಿದ್ದರು. ಜತೆಗೆ ಸುಧಾರಣೆಯ ಆಧುನಿಕ ತಿಳಿವಳಿಕೆ ಬೆರೆತ ‘ಪರಿಷ್ಕೃತ ಪಂಡಿತ’ ರಾಗಿ ಪುರಸ್ಕೃತರಾಗಿದ್ದರು.

ಮತ್ತೆ ಮೈಸೂರು ರಾಜ್ಯಕ್ಕೆ ಮರಳಿದ ಮೇಲೆ ಅವರಿಗೆ ಅವಕಾಶಗಳ ಬಾಗಿಲು ತೆರೆದಿದ್ದುವು. ೧೮೮೫ರಲ್ಲಿ ಮಲೆಯೂರಿನ ಶಾಲೆಗೆ ಮಾಸ್ತರರಾಗಿ ನೇಮಕವಾಯಿತು. ಹೇಳಿಕೇಳಿ ಮಲೆಯೂರು ಮೊದಲಿಂದಲೂಜೈನರ ಬೀಡು. ತವರುಮನೆಯಲ್ಲಿ ಕೆಲಸಕ್ಕೆ ಸೇರಿದಂತಾಯಿತು. ಪರಿಸರ ಅನುಕೂಲಕರವಾಗಿತ್ತು. ಆದರೆ ‘ಪಪಂ’ರಿಗೆ ಆಸಕ್ತಿ ಇದ್ದುದು ಓಲೆಗರಿ ಕಟ್ಟುಗಳನ್ನು ಕಳಚಿ ಓದುವುದರಲ್ಲಿ. ಅಲ್ಲದೆ ಹೆಗಾದರೂ ಮಾಡಿ ಬೇಗ ಬೇಗ ಸಾಧ್ಯವಾಗುವಷ್ಟು ಅಪ್ರಕಟಿತ ಗ್ರಂಥಗಳನ್ನು ಪ್ರಕಟಿಸಿ ಜನರಿಗೆ ತಲಪಿಸುವ ತವಕ. ತಾಳೆಗತರಿ ಗ್ರಂಥಗಳು ಹಾಳಾಗುತ್ತಿರುವುದನ್ನು ನೋಡುತ್ತಿದ್ದರು. ಆದರಿಂದ ಆದಷ್ಟೂ ಶೀಘ್ರಾತಿಶೀಘ್ರ ಅವನ್ನು ಒಂದೊಂದಾಗಿ ಪ್ರತಿಯೆತ್ತಿ ಮುಂದಿನ ತಲೆ ಮಾರಿಗೆ ಉಳಿಸಿಕೊಡುವ ಕಳಕಳಿ. ವಿಳಂಬದಿಂದ ಅಪಾಯವೆಂಬುದನ್ನು ಊಹಿಸಿದ್ದರು. ತಮ್ಮ ಭಾರತ ಸಂಚಾರ ಕಾಲದಲ್ಲಿ ಹೊಸಕಾಲದ ಜನಮನ ಏನನ್ನು ಬಯಸುತ್ತದೆ, ಯಾವ ಕಡೆಗೆ ಹೆಜ್ಜೆಯಾಕುತ್ತಿದೆ ಎಂಬುದನ್ನು ತಿಳಿದಿದ್ದರು.

ಒಂದುಕೈ ನೋಡಿಯೇ ಬಿಡೋಣವೆಂದು ಗ್ರಂಥಸಂಪಾದನೆ ಕೆಲಸಕ್ಕೆ ತೊಡಗಿದರು. ೨೬ನೆಯ ವಯಸ್ಸಿನಲ್ಲಿ (೧೮೮೬)ರಲ್ಲಿ ಜೈನ ಲಾ ಮತ್ತು ಉದಯಾದಿತ್ಯಾಲಂಕಾರವನ್ನು ಸಂಪಾದಿಸಿ ಪ್ರಕಟಿಸಿದರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ. ಸಂಸ್ಕೃತ ಛಂದಸ್ಸಿನಲ್ಲಿರುವ ಜೈನ ಸಿದ್ಧಾಂತ ಮತ್ತು ಧಾರ್ಮಿಕ ವಿಧಾನ ಕುರಿತ ಸಟೀಕಾ ಸ್ಮೃತಿ ಸಂಗ್ರಹವನ್ನು ಮರು ವರ್ಷ ಕನ್ನಡ ಟೀಕಾ ಸಹಿತ ೧೮೮೮ರಲ್ಲಿ ಅಚ್ಚುಹಾಕಿದರು. ಅದರ ಮುಂದಿನ ವರ್ಷ ೧೮೮೯ರಲ್ಲಿ ಸಂಸ್ಕೃತ ಜಿನೇಂದ್ರ ಮಾಲಾವನ್ನು ಹೊರತಂದರು. ಒಬ್ಬ ಸಾಮಾನ್ಯ ಹಳ್ಳಿ ಶಾಲೆಯಲ್ಲಿ ಓಜಯ್ಯರಾಗಿದ್ದವರಿಂದ ಸಂಸ್ಕೃತ ವಿದ್ವತ್ತು ಮತ್ತು ಗ್ರಂಥಸಂಪಾದನೆ ಜ್ಞಾನ ಬಯಸುವ ಈ ಬಗೆಯ ಪುಸ್ತಕ ಪ್ರಕಟಣೆ ಬಲ್ಲಿದರ ಹುಬ್ಬೇರಿಸಿತು [ಎಲ್.ಡಿ. ಬಾರ್ನೆಟ್ : ೧೯೧೦ : ೧೧೯].

‘ಪಪಂ’ರಿಗೆ ಹಂಬಲವೊಂದು ಎದೆಯ ತುಂಬ ತುಂಬಿ ತುಳುಕುತ್ತಿತ್ತು. ಅವರ ಅಂತರಂಗದ ಬಯಕೆಯೆಂದರೆ ತಮ್ಮ ಆಸಕ್ತಿ, ಅಭಿರುಚಿ ಮತ್ತು ಶಕ್ತಿಯನ್ನು ಬಯಲಿಗೆಳೆಯುವ ಇಲಾಖೆಯನ್ನು ಸೇರಬೇಕೆಂಬುದು. ಆ ವೇಳೆಗೆ ಹೊಸದಾಗಿ ಮೈಸೂರು ರಾಜ್ಯ ೦೧-೦೧-೧೮೮೫ರಿಂದ ಆರಂಭಿಸಿದ್ದ ಪುರಾತತ್ವ ಇಲಾಖೆಯತ್ತ ಇಂದ್ರಿಯಗಳು ಹಾತೊರೆದುವು. ಬೆಂಜಮಿನ್ ಲೂಯಿ ರೈಸರು ಕನ್ನಡಕ್ಕೆ ಮಾಡಿದ ಉಪಕಾರ ದೊಡ್ಡದು, ಮರೆಯಲಾಗದ್ದು, ತೀರಿಸಲಾಗದ್ದು. ಕವಿರಾಜಮಾರ್ಗವನ್ನೂ (೧೮೯೮) ಪಂಪಭಾರತವನ್ನೂ (೧೮೯೮) ಮೊಟ್ಟಮೊದಲು ಮುದ್ರಿಸಿದ ಮಹಾನುಭಾವರವರು. ಮೈಸೂರು ರಾಜ್ಯದಲ್ಲಿ ಹೊಸದಾಗಿ ತೆರೆದ ಆರ್ಕಿಯಾಲಜಿ ಇಲಾಖೆಗೆ ಅವರನ್ನು ಮೊದಲನೆಯ ಡೈರೆಕ್ಟರನ್ನಾಗಿ ನೇಮಿಸಿದ್ದು ಯಥಾಯೋಗ್ಯ ಆಯ್ಕೆ. ‘ಪಪಂ’ರಿಗೆ, ಹರಸಾಹಸವಾದರೂ ಸರಿಯೆ, ಬಿ.ಎಲ್. ರೈಸರ ಮಡಿಲು ಸೇರುವ ಬಸರಿ ಬಯಕೆ! ಆರ್ಕಿಯಾಲಜಿ ಇಲಾಖೆಯೂ ಲೀಲಾಜಾಲವಾಗಿ ತಾಪತ್ರಗ್ರಂಥಗಳ ಹಸ್ತ ಪ್ರತಿಗಳನ್ನೂ ಕಲ್ಲಿನ ಶಾಸನಗಳನ್ನೂ ಓದಬಲ್ಲ ಲಿಪಿನಿಪುಣ ಕನ್ನಡ ಪಂಡಿತರೊಬ್ಬರ ಹುಡುಕಾಟದಲ್ಲಿತ್ತು. ಇದನ್ನು ಅರಿತ ‘ಪಪಂ’ರು ಕೂಡಲೆ ತರಾತುರಿಯಲ್ಲಿ ಕಾರ್ಯ ಪ್ರವೃತ್ತರಾದರು. ಹನ್ನೆರಡು ಸಂಧಿಗಳಲ್ಲಿ ಮಂಗರಸಕವಿ (೧೫೦೮) ವಿರಚಿತ ೭೮೭ ವಾರ್ಧಿಕ ಷಟ್ಪದಿ ಕನ್ನಡಕಾವ್ಯವನ್ನು ಸಂಪಾದಿಸಿ ೧೬-೦೩-೧೮೮೯ರಲ್ಲಿ ಹೊರತಂದರು. ಅಲ್ಲದೆ ಅದರಲ್ಲಿ ‘ಇದನ್ನು ಹಜರತ್ ಡೈರೆಕ್ಟರ್ ಬಿ.ಎಲ್. ರೈಸ್‌ಸಾಹೇಬರ ಕೃಪಾಕಟಾಕ್ಷಕ್ಕಾಗಿ’ ಎಂದೂ ನಮೂದಿಸಿದರು (ಕನ್ನಡ ಹಸ್ತ ಪ್ರತಿಗಳ ವರ್ಣನಾತ್ಮಕ ಸೂಚಿ, ಸಂಪುಟ-೪, ಮೈಸೂರು ವಿಶ್ವವಿದ್ಯಾಲಯ, ೧೯೬೩ : ೨೬೪).

ನನಸಾಯಿತು ಕನಸು

ಕಡೆಗೂ ‘ಪಪಂ’ರ ಕನಸು ನನಸಾಯಿತು, ಪುರಾತತ್ವ ಇಲಾಖೆಯ ವರಿಷ್ಠರಾದ ಬಿ.ಎಲ್. ರೈಸರು ‘ಪಪಂ’ರ ಪಾಂಡಿತ್ಯ ಸಾಮರ್ಥ್ಯವನ್ನು ಗುರುತಿಸಿದರು. ಕೂಡಲೆ ಅವರನ್ನು ಕರೆಸಿದರು, ತಮ್ಮ ಕಾರ್ಯಾಲಯದಲ್ಲಿನ ಕನ್ನಡ ವಿಭಾಗದ ಗುಮಾಸ್ತೆಯನ್ನಾಗಿ ನೇಮಿಸಿದರು. ಇದು ತಮಗಿರುವ ವಿವಧ ಅನುಭವದತ್ತ ಪರಿಣತಿಯನ್ನು ಕಾರ್ಯರೂಪಕ್ಕಿಳಿಸಲು ಸದವಕಾಶವೆಂದು ತಿಳಿದ ‘ಪಪಂ’ರು ಹೆಚ್ಚಿನ ಮುತುವರ್ಜಿಯಿಂದ ತಮ್ಮನ್ನು ತೊಡಿಸಿಕೊಂಡರು. ಇದನ್ನು ಸಕಾಲದಲ್ಲಿ ಸರಿಯಾಗಿ ಗುರುತಿಸಿದ ಪುರಾತತ್ವ ಇಲಾಖೆಯ ಪ್ರಧಾನರಾದ ಬಿ.ಎಲ್. ರೈಸರು ‘ಪಂಪ’ರಿಗೆ ಕನ್ನಡ ತಾಳೆಯೋಲೆ ಹಸ್ತ ಪ್ರತಿಗಳನ್ನು ಸಂಗ್ರಹಿಸುವ, ಸಂಪಾದಿಸುವ, ಪರಿಶೀಲಿಸುವ ಕೆಲಸದೊಂದಿಗೆ ಶಿಲಾ ಶಾಸನ ಮತ್ತು ತಾಮ್ರ ಶಾಸನಗಳನ್ನು ಪತ್ತೆ ಮಾಡುವ ಹಾಗೂ ಓದಿ ದಾಖಲಿಸುವ ಹೊಣೆಗಾರಿಕೆಯನ್ನೂ ವಹಿಸಿದರು. ಈ ಜವಾಬ್ದಾರಿಯನ್ನು ನಿರ್ವಹಿಸಬಲ್ಲವರಾಗಿದ್ದರೆಂಬುದು ಮೇಲಧಿಕಾರಿಗಳ ಗಮನಕ್ಕೆ ಬಂದಿತ್ತೆಂಬುದಕ್ಕೆ ಇದೊಂದು ನಿದರ್ಶನ.

ಪುರಾತನ ಹಸ್ತಪ್ರತಿಗಳನ್ನೂ ಶಾಸನಗಳನ್ನೂ ಹುಡುಕುವ ಕೆಲಸವನ್ನು ವಹಿಸಿಕೊಂಡ ಮೇಲೆ ‘ಪಪಂ’ರು ನಾಡಿನ ನಾನಾ ಮೂಲೆ ಮೊಡಕುಗಳಿಗೆ ನಿರಂತರ ಸಂಚಾರ ಮಾಡಬೇಕಾಯಿತು. ಅವರು ಆಪೇಕ್ಷೆಪಟ್ಟಾಗ, ಇಚ್ಛಿಸಿದ ಸ್ಥಳಗಳಿಗೆ ಹೋಗಿ ಬರಲು ಇಲಾಖೆ ಪರವಾನಿಗೆ ನೀಡಿತ್ತು. ಈ ಬಗೆಯ ಪ್ರಯಾಣವೆಚ್ಚವನ್ನು ಸರಕಾರ ವಹಿಸಿಕೊಂಡಿತ್ತಲ್ಲದೆ ಸಂದರ್ಭ ಬಂದಾಗ ಮೈಸೂರು ರಾಜ್ಯದ ಹೊರಗೆ ಹೋಗಿಬರಲೂ ಅನುಮತಿ ನೀಡಿತ್ತು. ತಿರುಗಾಟ ‘ಪಪಂ’ರಿಗೆ ಹೊಸದಲ್ಲ. ಆಸೇತು ಹಿಮಾಚಲ ಉದ್ದಗಲ ಅಡ್ಡಾಡಿದ್ದರು. ಹಿಂದಣ ಪರ್ಯಟನದ ಅನುಭವದ ಬುತ್ತಿ ಬೆನ್ನಿಗಿತ್ತು. ಇದೀಗ ಮತ್ತೆ ಪಯಣ. ಆದರೆ ಇದರ ಉದ್ದೇಶ ಇನ್ನೂ ಒಮ್ಮೆಯೂ ಬೆಳಕು ಕಾಣದ ಹೊಚ್ಚಹೊಸ ತಾಡಪತ್ರಗಳ ತಡಕಾಟ, ಕಲ್ಲಿನ ಮೇಲಿನ ಬರೆಹಗಳ ಹುಡುಕಾಟ. ಈ ಕಾರಣಕ್ಕಾಗಿ ಅವರು ಬಹುದೂರದ ಬಿಹಾರು ರಾಜ್ಯದ ಆರಾ ಎಂಬ ಊರಿಗೆ ಹೋದರು. ೧೯೦೩ರಲ್ಲಿ ಆರಾದಲ್ಲಿ ಸ್ಥಾಪಿತವಾದ ‘ಶ್ರೀ ಜೈನ ಸಿದ್ಧಾಂತ ಭವನ’ ದಲ್ಲಿ ಹಲವು ಅಮೂಲ್ಯ ಕನ್ನಡ ಹಸ್ತಪ್ರತಿಗಳಿದ್ದುವು. ಹಸ್ತಪ್ರತಿ ಸಂಗ್ರಹಣೆಗೆ ಆದ್ಯತೆಯಿದ್ದ ಈ ಸಂಸ್ಥೆ ವ್ಯಾಪಕವಾಗಿ ಬೆಳೆದು ‘ಶ್ರೀ ದೇವಕುಮಾರ ಜೈನ್ ಆದ್ಯತೆಯಿದ್ದ ಈ ಸಂಸ್ಥೆ ವ್ಯಾಪಕವಾಗಿ ಬೆಳೆದು ‘ಶ್ರೀ ದೇವಕುಮಾರ ಜೈನ್ ಓರಿಯಂಟಲ್ ರಿಸರ್ಚ್‌ ಇನ್ಸ್‌ಟಿಟ್ಯೂಟ್’ ಎಂಬ ಹೆಸರಿಂದ ಪ್ರಖ್ಯಾತವಾಯಿತು. ಪಂಪನ ವಿಕ್ರಮಾರ್ಜುನ ವಿಜಯ ಮಹಾಕಾವ್ಯದ ಗ್ರಂಥಸಂಪಾದನೆ ಕಾರ್ಯದಲ್ಲಿ ಆರಾದಿಂದ ಪಂಡಿತ ಕೆ. ಭುಜಬಲಿಶಾಸ್ತ್ರಿಗಳವರ ನೆರವಿನಿಂದ ತರಿಸಿಕೊಂಡ ಓಲೆಗರಿ ಹಸ್ತಪ್ರತಿಯಿಂದ ಸಾಧ್ಯವಾದ ಮಹದೋಪಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆವೃತ್ತಿಯ ಪೀಠಿಕೆಯಲ್ಲಿ ನಿವೇದಿಸಿದೆ. ‘ಪಪಂ’ರು ಆರಾದ ಶ್ರುತಭಂಡಾರದಲ್ಲಿ ಸಂಗ್ರಹವಾಗಿರುವ ಕನ್ನಡ ಹಸ್ತಪ್ರತಿಗಳ ಮಾಹಿತಿಯನ್ನು ಮೈಸೂರು ಪುರಾತತ್ವ ಇಲಾಖೆಗೆ ವರದಿಯಿತ್ತರು.

‘ಪಪಂ’ರು ಊರಿಂದೂರಿಗೆ ಒಂದೇ ಸಮನೆ ಹೋಗಿಬರಬೇಖಾಗಿತ್ತು. ಅವರು ಸಂಪ್ರದಾಯವಾದಿ ಮನೆತನದಿಂದ ಬಂದವರು. ಆದರೆ ಲೋಕ ಸಂಚಾರಕ್ಕೆ ಹೊಂದಿಕೊಂಡವರು. ಬೇರೆ ಬಗೆಯ ತೊಂದರೆ ಅವರು ಕೈಗೊಂಡ ಸಂಚಾರದ ದಿನಗಳು ಇಂದಿನಂತೆ ಇರಲಿಲ್ಲ. ಪ್ರಯಾಣ ಸೌಕರ್ಯ ಏನೇನೂ ಇರದಿದ್ದ ಅಡ್ಡಿ ಆತಂಕಗಳಿಂದ ಕೂಡಿದ್ದ ಕಷ್ಟದ ಕಾಲವದು: ಹೊತ್ತಿಗೆ ಸರಿಯಾಗಿ ವಾಹನ ಸಿಗುವುದು ಹಾಗಿರಲಿ, ಫಲಾಹಾರ ಊಟ ಹಣ್ಣು ಸಹ ದೊರೆಯುವುದು ದುರ್ಲಭವಾಗಿತ್ತು. ಆದರೆ ಇವು ಯಾವುವೂ ‘ಪಪಂ’ರ ಕಾರ್ಯಕ್ಷಮತೆಗೆ, ಕರ್ತವ್ಯನಿಷ್ಠಗೆ ಅಡಚಣೆಯಾಗಲಿಲ್ಲ. ಸಂಯಮ ಹಾಗೂ ಸಮಯಕ್ಲುಪ್ತ ಆಹಾರಶಿಸ್ತನ್ನು ರೂಢಿಸಿ ಕೊಂಡಿದ್ದರು. ದಕ್ಷಿಣದ ಭಾಷೆಗಳೂ ಉತ್ತರ ಭಾರತದ ಭಾಷೆಗಳೂ ಅವರಿಗೆ ತೊಡಕಾಗಲಿಲ್ಲ. ತಮ್ಮ ಪ್ರಯಾಣದ ವಿವರ, ಸಂಗ್ರಹಿಸಿದ ಮಾಹಿತಿ, ಸಂಶೋಧನೆಯ ಫಲಿತಾಂಶ-ಇವನ್ನು ದಿನಚರಿಯಲ್ಲಿ ಗುರುತಿಸಿ ಇಲಾಖೆಗೆ ಕನ್ನಡದಲ್ಲಿ ಅಲ್ಲದೆ ಇಂಗ್ಲಿಷಿನಲ್ಲಿ ಟಿಪ್ಪಣಿ ಅಣಿಗೊಳಿಸುತ್ತಿದ್ದರು. ಅವರಿಗಿದ್ದ ವಿದ್ವತ್ತು, ವಿನಯ, ಕಾರ್ಯ ಕ್ಷಮತೆಯಿಂದಾಗಿ ಇಡೀ ಇಲಾಖೆ ತುಂಬ ಗೌರವ ಕೊಡುತ್ತಿತ್ತು. ಅವರ ಬಹುಭಾಷೆ ಗಳ ಜ್ಞಾನ, ಅದರಲ್ಲಿಯೂ (ಕನ್ನಡ) ಇಂಗ್ಲಿಷ್, ಉರ್ದು, ತಮಿಳು, ತುಳು, ತೆಲುಗು, ಮರಾಠಿ, ಹಿಂದಿ ಭಾಷೆಗಳ ವ್ಯವಹಾರ ಕೌಶಲ್ಯವನ್ನು ಸಹೋದ್ಯೋಗಿಗಳೂ ಮೇಲಧಿಕಾರಿಗಳೂ ಅರಿತಿದ್ದರು, ಮಿಗಿಲಾಗಿ ಪ್ರಾಕೃತ, ಸಂಸ್ಕೃತ ಭಾಷೆಗಳಲ್ಲಿದ್ದ ಪರಿಣತಿಗೆ ಮೆಚ್ಚಿ ತಲೆದೂಗಿದ್ದರು. ಅದರಲ್ಲಿಯೂ ‘ದೇವಾಲಯದಲ್ಲಿ ಪೂಜೆ ಮಾಡುವ ಮನೆಯಿಂದ ಬಂದ ಈತ ಪರಂಗಿಯವರ ಭಾಷೆಯಲ್ಲಿ ಸಲೀಸಾಗಿ ಮಾತನಾಡುತ್ತಾನಲ್ಲಾ’ ಎಂದು ಜತೆಯವರಿಗೆ ಸೋಜಿಗ, ಸಂತೋಷ.

ಬೆಂಗಳೂರಿನ ಬದುಕು

ಪುರಾತತ್ವ ಇಲಾಖೆಯಲ್ಲಿ ನೇಮಕವಾದಂದಿನಿಂದ ‘ಪಪಂ’ರು ಬೆಂಗಳೂರಲ್ಲಿಯೇ ವಾಸಮಾಡ ಬೇಕಾಯಿತು ಮೊದಲಿಗೆ ಸುಲ್ತಾನ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು (ಇಂದಿನ ಮೆಜೆಸ್ಟಿಕ್ ಪೇಟೆಗೆ ಅಂಟಿಕೊಂಡಂತೆ ಇದ್ದ ಅಂದಿನ ಸುಲ್ತಾನ ಪೇಟೆಯ ಹಳೆಯ ಮನೆಗಳೆಲ್ಲ ಇಂದು ಗುರುತುಸಿಗದಂತೆ ಬದಲಾಗಿವೆ). ಅನಂತರ ಅವರಿಗೆ ಆಲೋಚನೆಯಾಯಿತು-ಬಾಡಿಗೆ ಕೊಡುವ ಬದಲು ಸ್ವಂತ ಮನೆ ಕಟ್ಟುಬಾರದೇಕೆ? ಅದರಿಂದ ಅವರು ಸುಲ್ತಾನ ಪೇಟೆಯಿಂದ ಮಲ್ಲೇಶ್ವರಂ ಬಡಾವಣೆಗೆ ಬಂದರು. ಅಲ್ಲೊಂದು ಖಾಲಿ ನಿವೇಶನವನ್ನುಕೊಂಡರು. ಜತೆಗೆ ೧೮೯೨ರಲ್ಲಿ ತಮ್ಮದೇ ಆದ ಒಂದು ಮುದ್ರಣಾಲಯವನ್ನೂ ಪ್ರಾರಂಭಿಸಿದರು (ಈ ಪ್ರಿಂಟಿಂಗ್ ಪ್ರೆಸ್, ಪ್ರಕಾಶನೋದ್ಯಮ ವಿಚಾರಗಳನ್ನು ಮತ್ತೆ ವಿವರಿಸಲಾಗುವುದು). ಮನೆಕಟ್ಟಲು ಹಣ ಬೇಕಾಯಿತು. ಹಣ ಸಹಾಯಕ್ಕಾಗಿ ಇಲಾಖೆಯ ಮೂಲಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು. ಅವರ ಅರ್ಜಿ ಮಂಜೂರಾಗಿ ೧೯೦೦ನೆಯ ಇಸವಿಯಲ್ಲಿ ಒಂದು ವರ್ಷದ ಸಂಬಳವನ್ನು ಮುಂಗಡ ಸಾಲವಾಗಿ ದೊರೆಯಿತು. ಅವರ ಒಂದು ವರ್ಷದ ಸಂಬಳದ ಮೊತ್ತವೆಂದರೆ ಅದು ರೂ. ೪೨೦/- ಮಾತ್ರ ಆದರೆ ಆ ಹಣದಲ್ಲಿ ಅವರು ಮಲ್ಲೇಶ್ವರದಲ್ಲಿ ಒಂದು ಮನೆ ಕಟ್ಟಿಸಿದರು. ಸರ್ಕಾರದಿಂದ ಮನೆಕಟ್ಟಲು ದೊರೆತ ಸಾಲವನ್ನು ಕಂತುಗಳ ಮೂಲಕ ಅವರು ಪೂರ್ತಿ ತೀರಿಸಿದರು. ಮತ್ತೆ ತಮ್ಮ ಮನೆಯನ್ನು ವಿಸ್ತರಿಸಲು ಬಯಸಿ ಸಾಲಕ್ಕಾಗಿ ಸರ್ಕಾರಕ್ಕೆ ೧೯೦೫ರಲ್ಲಿ ಇನ್ನೊಂದು ಅರ್ಜಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ವ್ಯವಸ್ಥೆ-ನಿಯಮ ಇಲ್ಲವೆಂದು ಸರ್ಕಾರ ಅವರಿಗೆ ಎರಡನೆಯ ಕಂತಿನ ಸಾಲ ಮಂಜೂರು ಆಗಲಿಲ್ಲ.

ಈ ದಿನಗಳ ನಡುವೆ ‘ಪಪಂ’ರ ಸಂಸಾರವೂ ಬೆಳೆದಿತ್ತು. ಅವರ (ಮೊದಲನೆಯ) ಹೆಂಡತಿ ಶ್ರೀಮತಮ್ಮ ಅಕಾಲ ಮರಣಕ್ಕೆ ತುತ್ತಾದರು. ಆಕೆಗೆ ಮಕ್ಕಳಾಗಿರಲಿಲ್ಲ. ಕುಟುಂಬ ಜೀವನಕ್ಕಾಗಿ ಸುಲೋಚನಮ್ಮ ಎಂಬುವರನ್ನು (ಎರಡನೆಯ) ಮದುವೆಯಾದರು. ಈ ದಾಂಪತ್ಯಸುಖದಿಂದ ಅಯ್ದಜನ ಗಂಡುಮಕ್ಕಳೂ ಒಬ್ಬಳು ಮಗಳೂ-ಒಟ್ಟು ಆರು ಜನ ಮಕ್ಕಳಾದರು.

ತಮ್ಮ ಧರ್ಮವತ್ಸಲತೆ, ಗುರು ಹಿರಿಯರಲ್ಲಿ ಗೌರವ, ದೇವಶಾಸ್ತ್ರಗಳಲ್ಲಿ ಭಕ್ತಿ-ಈ ಮುಂತಾದ ಗುಣಗಳಿಂದ ‘ಪಪಂ’ರು ವಿನಯಗುಣ ಸುಶೋಭಿತರು. ಎಲ್ಲ ಮಠ-ಭಟ್ಟಾರಕರಲ್ಲಿ ಸಮಾನ ಪೂಜ್ಯಭಾವನೆ. ಸಹಜವಾಗಿಯೇ ಕೊಲಲಾಪುರಮಠ, ನರಸಿಂಹರಾಜಪುರ (ಸಿಂಗನಗದ್ದೆ)ಮಠ, ಶ್ರವಣಬೆಳಗೊಳ ಮಠ ಮತ್ತು ಹೊಂಬುಜ ಮಠಗಳ ಪಟ್ಟಾಚಾರ್ಯರ ಆಶೀರ್ವಾದ ಕೃಪೆಗೆ ಪಾತ್ರರು. ಉತ್ತರಭಾರತ ಪ್ರವಾಸ ಕಾಲದಲ್ಲಿ ತಪ್ಪದೆ ಚಾರಿತ್ರಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರನ್ನು ಕಂಡು ಕೈಮುಗಿದು ಬರುತ್ತಿದ್ದರು.

ಕೆಲವೊಮ್ಮೆ ಒಂದೇ ಊರು ಇಲ್ಲವೇ ಪರಿಸರದಲ್ಲಿ ಸಮಾನ ಹೆಸರಿನ ಇಬ್ಬರು ಮೂವರು ಇರುವುದುಂಟು. ಹೆಸರು ಸಹ ಪದ್ಮರಾಜ ಪಂಡಿತ ಎಂದೇ ಇತ್ತು. ಇದನ್ನು ಅರಿತು ‘ಪಪಂ’ರು ತಮ್ಮ ಪ್ರತ್ಯೇಕತೆಯನ್ನು ತೋರಿಸುವ ಸಲುವಾಗಿ ಬೇರೆದಾರಿ ಹುಡುಕಿದರು. ಆ ಇನ್ನೊಬ್ಬ ‘ಪಪಂ’ರೂ ಕೂಡ ಲೇಖಕರು. ‘ವಿಜಯಕುಮಾರನ ಕಥೆ’ ಎಂಬ ಹೆಸರಿನ ಯಕ್ಷಗಾನ ನಾಟಕವನ್ನು ಬರೆದಿದ್ದರು. ಅವರು ತಮ್ಮನ್ನು ‘ಮೈಸೂರು ಪದ್ಮರಾಜ ಪಂಡಿತ’ ಎಂದು ಕರೆದುಕೊಂಡು ಪುಸ್ತಕದ ಮೇಲೂ ಅದೇ ಹೆಸರನ್ನು ನಮೂದಿಸಿದ್ದರು. ಅವರಿಗೆ ಕೂಡ ಹಸ್ತಪ್ರತಿಗಳನ್ನು ಪ್ರತಿಮಾಡಿದ ಎರಡು ಹಸ್ತ ಪ್ರತಿಗಳು, ಹಸ್ತಪ್ರತಿ ಸಂಖ್ಯೆ ಕೆ. ೧೬೪೨/೨ ಮತ್ತು ಕೆ.ಎ.೪೦೩, ಇಂದಿಗೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಭಂಡಾರದಲ್ಲಿ ಉಳಿದು ಬಂದಿವೆ. ಅವರಿಂದ ತಾವು ಪ್ರತ್ಯೇಕರೆಂದು ಗುರುತಿಸಲ್ಪಡಲು ‘ಪಪಂ’ರು ತಮ್ಮ ಹೆಸರಿನ ಜತೆಗೆ ಇತರ ಸಂಕೇತ ಹಾಗೂ ಸಂಕ್ಷಿಪ್ತಾಕ್ಷರಗಳನ್ನು ಬಳಸಿದರು. ತಮ್ಮ ಸಹಿ ಮಾಡುವಾಗ ಮೈ. ಆ. ಡಿ. ರೈ (=ಮೈಸೂರು ಆರ್ಕಿಯಲಾಜಿಕಲ್ ಡಿಪಾರ್ಟಮೆಂಟ್ ರೈಟರ್) ಅಥವಾ ಬಿ.ಪ. ಪಂಡಿತ(=ಬಿ. ಪದ್ಮರಾಜ ಪಂಡಿತ) ಎಂದೊ ಬರೆಯುತ್ತಿದ್ದರು. ಅವರು ಸಂಪಾದಿಸಿದ ಪರಮಾಗಮಸಾರ-ಮುಂತಾದ ಪುಸ್ತಕಗಳಲ್ಲಿಇದನ್ನು ಗಮನಿಸಬಹುದು. ಚತುರ್ವಿಂಶತಿ ತೀರ್ಥಂಕರ ಪುರಾಣ ಎಂಬ ಪುಸ್ತಕದಲ್ಲಿ ಬೆಂಗಳೂರಲ್ಲಿರುವ ಮೈಸೂರು ಆರ್ಕಿಯಲಾಜಿಕಲ್ ಸರ್ವೇ ಇಲಾಖಾ ಕನ್ನಡ ರೈಟರ್ ಪದ್ಮರಾಜ ಪಂಡಿತ-ಎಂದು ದಾಖಲಿಸಿದ್ದಾರೆ.