ಕರ್ನಾಟಕ ಶಾಸ್ತ್ರೀಯ ಸಂಗೀತದ ಲಕ್ಷ್ಯ-ಲಕ್ಷಣಗಳೆರಡನ್ನೂ ಅಧ್ಯಯನ ಮಾಡಿ ವೇದಿಕೆ ಕಲಾವಿದರಾಗಿಯೂ, ಉಪನ್ಯಾಸಕಿಯಾಗಿಯೂ ಕೀರ್ತಿಗಳಿಸಿರುವ ಪದ್ಮಾ ಅವರು ಜನಿಸಿದ್ದು ೨೪-೭-೧೯೩೨ ರಂದು ಮೈಸೂರಿನಲ್ಲಿ ತಾಯಿ ಜಯಲಕ್ಷ್ಮಿಯವರೇ ಇವರ ಮೊದಲ ಸಂಗೀತದ ಗುರು. ನಂತರ ಮೈಸೂರು ವಾಸುದೇವಾಚಾರ್ಯರು, ಟಿ. ಚೌಡಯ್ಯ, ಶೆಲ್ವಪುಳ್ಳೆ ಅಯ್ಯಂಗಾರ್, ತಿಟ್ಟೆಕೃಷ್ಣಯ್ಯಂಗಾರ್, ರಾಳ್ಲಪಲ್ಲಿ ಅನಂತಕೃಷ್ಣಶರ್ಮ ಇವರುಗಳಲ್ಲಿ ಗಾಯನವನ್ನೂ ಹೆಚ್‌.ಎಸ್‌.ಕೃಷ್ಣಮೂರ್ತಿ, ಆರ್.ಎಸ್‌. ಕೇಶವಮೂರ್ತಿಯವರಲ್ಲಿ ವೀಣಾ ವಾದನವನ್ನೂ ಅಭ್ಯಾಸ ಮಾಡಿ ಡಿ.ಕೆ. ಪಟ್ಟಮ್ಮಾಳ್‌, ಆರ್. ಕೆ. ಶ್ರೀಕಂಠನ್‌, ಎಂ.ಎ. ನರಸಿಂಹಾಚಾರ್ ಅಂತಹವರ ಮಾರ್ಗದರ್ಶನ ಹೊಂದಿ ಉತ್ತಮ ಗಾಯಕಿ -ವೀಣಾ ವಾದಕಿಯಾದರು.

ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಸಂಗೀತ, ಸಂಗೀತ ಶಿಕ್ಷಣ ಹಾಗೂ ಸಂಗೀತ ಶಾಸ್ತ್ರಗಳಲ್ಲಿ ಪ್ರತ್ಯೇಕವಾಗಿ ಡಾಕ್ಟರೇಟ್‌ ಪದವಿಗಳನ್ನು ದೇಶ ಹಾಗೂ ವಿದೇಶಗಳಲ್ಲಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿಯೂ, ವಿಭಾಗದ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದು ಹಲವಾರು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿಯೂ, ಆಹ್ವಾನಿತ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಹಲವಾರು ವಿಶ್ವವಿದ್ಯಾಲಯಗಳ ಶಿಕ್ಷಣ ಮಂಡಲಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಅನೇಕ ಪ್ರಾತ್ಯಕ್ಷಿಕ ಸೋದಾಹರಣ ಭಾಷಣಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅಮೆರಿಕಾ, ಇಂಗ್ಲೆಂಡ್‌, ಹಾಲೆಂಡ್‌, ಜರ್ಮನಿ ಮುಂತಾದ ಹೊರ ದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ ತಮ್ಮ ವಿದ್ವತ್ಪ್ರತಿಭೆಗಳನ್ನು  ಮೆರೆದಿದ್ದಾರೆ. ‘ನರವಿಜ್ಞಾನ ಮತ್ತು ಮಾನಸಿಕ ರೋಗಗಳ ಸಂಸ್ಥೆ’ಯಲ್ಲಿ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ಸಂಗೀತದ ವಿವಿಧ ಮುಖಗಳನ್ನು ಕುರಿತು ಇವರು ಬರೆದಿರುವ ಲೇಖನಗಳು ಅಸಂಖ್ಯ. ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ ಎಂಬ ಎರಡು ಸಂಪುಟಗಳ ಇವರ ಪುಸ್ತಕ ಬಹಳ ಉಪಯುಕ್ತವಾದುದು. ವಾಗ್ಗೇಯಕಾರರನ್ನು ಕುರಿತಾದ ಇವರ ಪುಸ್ತಕವೂ ಜನಪ್ರಿಯತೆಗಳಿಸಿದೆ.

ಜರ್ಮನಿಯ ವೈದ್ಯಕೀಯ ಸಂಸ್ಥೆಯು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ ‘ಸಂಗೀತ ಮತ್ತು ಔಷಧಿ’ ಎಂಬ ವಿಶ್ವ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಹಿರಿಮೆ ಪದ್ಮಾ ಅವರದು. ಹಲವಾರು ಸಂಘ-ಸಂಸ್ಥೆ-ಸಭೆಗಳಿಂದ ಸನ್ಮಾನಿತರಾಗಿರುವ ಶ್ರೀಮತಿಯವರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಗೌರವನ್ನು ಪಡೆದಿದ್ದಾರೆ.