.

 

 

 

 

 

 

ನಾಡಿನ ನೃತ್ಯ ರಂಗದಲ್ಲಿ ತಮ್ಮ ಪ್ರದರ್ಶನಗಳಿಗಿರುವಷ್ಟೇ ಶಿಕ್ಷಕಿಯಾಗಿಯೂ ಬೇಡಿಕೆ ಇರುವ ಭರತನಾಟ್ಯ ಕಲಾವಿದರಲ್ಲಿ ಪದ್ಮಿನಿ ರವಿಯವರು ಪ್ರಥಮ ಸ್ಥಾನ. ತಮ್ಮ ಒಂಬತ್ತನೆಯ ವಯಸ್ಸಿನಲ್ಲಿಯೇ ಮದರಾಸಿನ ಸರಸಾಲಯ ನೃತ್ಯ ಶಾಲೆಯನ್ನು ಸೇರಿ, ೧೧ರ ಹೊತ್ತಿಗೆ ರಂಗ ಪ್ರವೇಶವನ್ನು ಯಶಸ್ವಿಯಾಗಿ ನಿರ್ವಹಿಸಿ, ವ್ಯಾಸಂಗದಲ್ಲಿ ಡಿಗ್ರಿ ಪಡೆಯುವ ಮೊದಲೇ ಉತ್ತಮ ನೃತ್ಯ ಕಲಾವಿದೆ ಎಂಬ ಕೀರ್ತಿಗಿಳಿಸಿಕೊಂಡಿದ್ದ ಈಕೆ ತಮ್ಮ ವಿವಾಹದ ನಂತರ ಬೆಂಗಳೂರಿನಲ್ಲಿ ನೆಲೆಸಿ ತಮ್ಮದೇ ಆದ ’ಪ್ರಧಾನ್ ಡಾನ್ಸ್‌ಸೆಂಟರ್’ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರುಗಳಲ್ಲಿ ಹಲವರು ವೃತ್ತಿಪರರಾಗಿಯೂ ಯಶಸ್ವಿಯಾಗಿದ್ದಾರೆ. ಅವರ ಈ ಶಿಷ್ಯರ ಸಂಖ್ಯೆ ಬೆಳೆದು ಹೊರ ನಾಡುಗಳಿಗೂ ಹಬ್ಬಿವೆ. ಆ ಕಾರಣದಿಂದ ಪದ್ಮಿನಿ ನಿಗದಿತ ಅವಧಿಯಲ್ಲಿ ಆದೇಶಗಳಲ್ಲಿ ಸಂಚರಿಸಿ ಆ ಶಿಷ್ಯರ ನೃತ್ಯಾಭಿವೃದ್ಧಿಗೆ ಶ್ರಮಿಸಿದ್ದಾರೆ.

ಈ ಶಿಕ್ಷಣ ತರಗತಿಗಳ ಸಡಗರದಲ್ಲಿ ಪದ್ಮಿನಿ ತಮ್ಮ ನೃತ್ಯಾಭ್ಯಾಸವನ್ನು ಪ್ರದರ್ಶನಗಳಲ್ಲಿನ ಶ್ರೇಷ್ಠತೆಯನ್ನು ಕಡೆಗಣಿಸಿಲ್ಲ ಎಂಬುದು ಗಮನಾರ್ಹ. ಅಷ್ಟೇ ಅಲ್ಲದೇ ತಮಗೆ ಪಳಗಿರುವ ರಚನೆಗಳನ್ನು ಮೇಲಿಂದ ಮೇಲೆ ಪರಿಷ್ಕಾರಗೊಳಿಸುತ್ತಾ, ಉತ್ಕೃಷ್ಠತೆಯನ್ನು ಸಾಧಿಸುವತ್ತ ನಿರತರಾಗಿದ್ದಾರೆ. ಇವರ ಪ್ರದರ್ಶನಗಳು ನಾಡಿನ ಎಲ್ಲಾ ಪ್ರಮುಖ ಕೇಂದ್ರಗಳಲ್ಲದೆ, ಅಮೇರಿಕಾ ಮತ್ತು ಯೂರೋಪಿನ ಹಲವೆಡೆಗಳಲ್ಲಿಯೂ ಜರುಗಿವೆ, ಪ್ರಶಂಸೆಗಳನ್ನು ಸೂರೆಗೊಂಡಿವೆ. ಇವರು ನರ್ತಿಸಿರುವ ಹೆಗ್ಗಳಿಯ ಸಂದರ್ಭಗಳೆಂದರೆ, ಸಾರ್ಕ್‌ಸಮ್ಮೇಳನ, ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಉತ್ಸವ, ಅಮೇರಿಕಾದ ಹಿಂದೂ ಅಸೋಸಿಯೇಷನ್ನ ಆಶ್ರಯದಲ್ಲೂ ರಾಜ್ಯ ಅಕಾಡೆಮಿಯ, ಮದರಾಸ್ ಉತ್ಸವ ಮತ್ತು ನೃತ್ಯಗ್ರಾಮದ ವಸಂತ ಹಬ್ಬ.

ಇತ್ತೀಚೆಗೆ ಪ್ರದರ್ಶನ ಶಿಕ್ಷಣಗಳನ್ನು ಬದಿಗೊತ್ತಿ, ನಂದಿನೀ ಆಳ್ವರೊಂದಿಗೆ ವರ್ಷಂಪ್ರತಿ ’ಬೆಂಗಳೂರ ಹಬ್ಬ’ವನ್ನು ಜರುಗಿಸಿ ಖ್ಯಾತನಾಮರಾಗಿದ್ದಾರೆ.

ಇಂದು ಈ ಪ್ರತಿಭಾನ್ವಿತ ಕಲಾವಿದೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೬-೯೭ನೇ ಸಾಲಿನ ಪ್ರಶಸ್ತಿ ಮತ್ತು ’ಕರ್ನಾಟಕ ಕಲಾಶ್ರೀ’ ಬಿರುದು ನೀಡಿ ಗೌರವಿಸಿದೆ.