ಪದ್ಮಿನಿ ರಾವ್‌ರವರು ಗುರುಕುಲ ಪದ್ಧತಿಯಲ್ಲಿ ಗುರು ಕಿಟ್ಟಪ್ಪಪಿಳ್ಯೈಯವರಲ್ಲಿ ತಂಜಾವೂರು ಶೈಲಿಯ ಭರತನಾಟ್ಯವನ್ನು ಅಭ್ಯಸಿಸಿ, ನಂತರ ಲೀಲಾ ರಾಮನಾಥನ್ ರಿಂದ ಭರತನಾಟ್ಯ ಕಲಿತು, ಕೊರಾಡಂ ನರಸಿಂಹರಾಯರ ಬಳಿ ಕೂಚಿಪುಡಿ ನಾಟ್ಯದ ಪರಿಚಯವನ್ನು ಪಡೆದರು. ಡಾ|| ವೆಂಕಟಲಕ್ಷ್ಮಮ್ಮ ಹಾಗೂ ಕಳಾನಿಧಿ ನಾರಾಯಣರಿಂದ ಅಭಿನಯದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ’ನೃತು’ ಹಾಗೂ ’ನಟ್ಟುವಾಂಗಕ್ಕೆ’ ಹಾಗೂ ಮುಂಬೈನ ’ಭೂಬಾಬಾಯ್ ಮೆಮೋರಿಯಲ್ ಟ್ರಸ್ಟ್‌’ನವರಿಂದಲೂ ವಿಶೇಷ ವಿದ್ಯಾರ್ಥಿ ವೇತನವನ್ನು ಹೊಂದಿದ್ದರು.

ರಾಜ್ಯದ ಹೊರಗೂ ಒಳಗೂ ಅನೇಕ ಕಾರ್ಯಕ್ರಮಪಗಳನ್ನಿತ್ತು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೆಲವು ಸಾಕ್ಷ್ಯ ಚಿತ್ರಗಳು ಹಾಗೂ ಕಿರುಚಿತ್ರಗಳಿಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೂಲಕ ಪ್ರದರ್ಶನ ನೀಡಿ ಹಿರಿಮೆಗೆ ಪಾತ್ರಾಗಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್, ಮಾರ್ಗ ಪಬ್ಲಿಕೇಷನ್ಸ್ ಹಾಗೂ ಕರ್ನಾಟಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ’ಹೊಯ್ಸಳ ಆರ್ಟ್‌ಲೆಗಸಿ’ಯಲ್ಲಿ ನರ್ತಿಸಿದ ಹಿರಿಮೆ ಯೊಂದೆಡೆಯಾದರೆ, ’ನವಸಂಧಿ ನೃತ್ಯ’ದ ಪ್ರದರ್ಶನವು ಮೈಲಿಗಲ್ಲಾಗಿದೆ ಅಲ್ಲದೆ ’ಚಿನ್ನಯ್ಯನವರ ಜಾವಳಿಗಳು’ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಪೊನ್ನಯ್ಯ ಲಲಿತಕಲಾ ಅಕಾಡೆಮಿಯನ್ನು ಸ್ಥಾಪಿಸಿ ಉತ್ತಮ ಕಲಾವಿದರನ್ನು ತಯಾರಿಸಿದ್ದಾರೆ.. ನವರಾತ್ರಿ ನವಶಕ್ತಿ, ಅಷ್ಟಲಕ್ಷ್ಮಿ ಮುಂತಾದ ನೃತ್ಯನಾಟಕಗಳನ್ನು ಸಂಯೋಜಿಸಿದ್ದಾರೆ. ೧೯೯೦ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯು ನಡೆಸಿದ ನೃತ್ಯ ಶಿಬಿರದ ನಿರ್ದೇಶಕಿಯಾಗಿ ಹುಬ್ಬಳ್ಳಿಯಲ್ಲಿನ ಕಲಾಕ್ಷೇತ್ರದಲ್ಲಿ ಎಂದು ತಿಂಗಳು ರಾಜ್ಯ ಹಾಗೂ ಕೇಂದ್ರ ಅಕಾಡೆಮಿಯ ವತಿಯಿಂದ ’ನೃತ್ಯ ಹಾಗೂ ನಟುವಾಂಗ’ದಲ್ಲಿ ಶಿಬಿರವನ್ನು ಏರ್ಪಡಿಸಿದ್ದರು.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಫೆಲೋಷಿಪ್ ದೊರೆಯುತ್ತಿದೆ. ಮುಂಬೈನ ಸುರಸಿಂಗಾರ್ ಸಂಸದ್‌ನಿಂದ ’ಶೃಂಗಾರ ಮಣಿ’ ಬೆಂಗಳೂರಿನ ಸ.ಜ.ಪ. ಸಂಸ್ಥೆಯಿಂದ ’ನಾಟ್ಯಕಲಾ ಚತುರೆ’ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ’ಶ್ರೇಷ್ಠ ಭರತನಾಟ್ಯ ಗುರು’ ಎಂಬ ಪ್ರಶಸ್ತಿ ದೊರೆತಿದೆ. ಕೆ.ಎಸ್. ಇ.ಇ.ಬಿ. ಪಠ್ಯ ವಸ್ತು ಸಮಿತಿ ಸದಸ್ಯೆ, ಕರ್ನಾಟಕ ಸರ್ಕಾರದ ಪಠ್ಯ ಪುಸ್ತಕ ನಿರ್ದೇಶನಾಲಯದ ಪುಸ್ತಕ ಸಮಿತಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಸಾಹಿತ್ಯದ ನೃತ್ಯಕ್ಕೆ ಅಳವಡಿಸಬೇಕೆನ್ನುವ ಹೆಬ್ಬಯಕೆಯುಳ್ಳ ಈ ಕಲಾವಿದೆಯ ಪ್ರತಿಭೆ ಹಾಗೂ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ೧೯೯೪-೯೫ರ ಪ್ರಶಸ್ತಿ ನೀಡಿ ಗೌರವಿಸಿದೆ.