ಬೆಳಿಗ್ಗೆ ಹತ್ತೂವರೆಯ ಚುರುಗುಟ್ಟುವ ಬಿಸಿಲಲ್ಲಿ ‘ಪನೋರಮ’ದ ಹೊರಗೆ ನಿಂತ ದೊಡ್ಡ ಕ್ಯೂ ನೋಡಿ ಗಾಬರಿಯಾಯಿತು. ಈ ದಿನ ಭಾನುವಾರ. ಶನಿವಾರ – ಭಾನುವಾರ ಮಾಸ್ಕೋನಗರ ದೇಶ – ವಿದೇಶಗಳ ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ. ಎಲ್ಲಾ ಹೋಟೆಲ್‌ಗಳ ಕೊಠಡಿಗಳೂ ಮೊದಲೇ ಸರ್ಕಾರದ ಮೂಲಕ ‘ಬುಕ್’ ಆಗಿರುತ್ತವೆ. ‘ಪನೋರಮ’ದ  ಹತ್ತಿರವಂತೂ ಜನದ ದೊಡ್ಡ ರೈಲು. ಈ ದಿನ ಹೇಗಪ್ಪ ಇದನ್ನು ನೋಡುವುದು ಎಂಬ ಚಿಂತೆ. ಆದರೆ ವೊಲೋಜ, ತಾನು ಮುಂದೆ ಹೋಗಿ ಬಾಗಿಲಲ್ಲಿದ್ದ ಅಧಿಕಾರಿಗಳಿಗೆ ನನ್ನ ಪಾಸ್‌ಪೋರ್ಟನ್ನು ತೋರಿಸಿ, ನನಗೆ ನಿಮಿಷಾರ್ಧದಲ್ಲಿ ಒಳಗೆ ಪ್ರವೇಶ ದೊರಕಿಸಿದ. ಬೇರೆ ದೇಶದವರಿಗೆ, ಅದರಲ್ಲೂ ರಷ್ಯಾ ದೇಶದವರಲ್ಲದವರಿಗೆ ಇಂಥ ಕಡೆ ಮೊದಲ ಪ್ರವೇಶ. ಇಲ್ಲಿನ ಜನ ಕ್ಯೂನಲ್ಲಿ  ನಿಂತು ನಿಧಾನಕ್ಕೆ ನೋಡಲಿ; ಬೇರೆ ದೇಶದಿಂದ ಬಂದವರು ಈ ದೇಶದಲ್ಲಿರುವುದೇ ಸ್ವಲ್ಪ ಕಾಲ; ಇರುವ ಅಲ್ಪಾವಕಾಶದಲ್ಲಿ ಇನ್ನೂ ಏನೇನು ಕಾರ್ಯಕ್ರಮಗಳಿವೆಯೋ; ಆದ್ದರಿಂದ ಅವರು ಮೊದಲು ನೋಡಲಿ – ಎಂಬ ಮಾನವೀಯ ಔದಾರ್ಯ. ಕ್ಯೂನಲ್ಲಿ ಬಾಲದ ಕಡೆಗಿದ್ದ ನಮ್ಮನ್ನು ಅದರಿಂದ ಬಿಡಿಸಿ ಒಳಗೆ ಕಳುಹಿಸಿದಾಗ ಕ್ಯೂನಲ್ಲಿ ನಿಂತ ಯಾರೊಬ್ಬರ ಮುಖದ ಮೇಲೂ ಅಸಮಾಧಾನದ ಗೆರೆ ಮೂಡಲಿಲ್ಲ. ಹೊರದೇಶದವರ ಬಗೆಗಿನ  ಈ  ಸೌಜನ್ಯ ಮೆಚ್ಚುವಂತಹುದು.

‘ಪನೋರಮ’ ಎಂಬುದು ಬೋರ್ಡಿನೋ ಯುದ್ಧದ ಮ್ಯೂಸಿಯಂ. ೧೮೧೨ನೆ ಆಗಸ್ಟ್ ೨೬ನೆ ತಾರೀಖು ರಷ್ಯನ್ನರಿಗೂ, ನೆಪೋಲಿಯನ್ನನಿಗೂ ಮಾಸ್ಕೋಗೆ ಎಪ್ಪತ್ತೇಳು ಮೈಲಿ ದೂರದ ಬೋರ್ಡಿನೋ ಎಂಬಲ್ಲಿ ನಡೆದ ಯುದ್ಧದ ಒಂದು ದೃಶ್ಯದ ಪ್ರತಿ ನಿರ್ಮಾಣವೇ ‘ಪನೋರಮ.’ ಹದಿನೈದು ಗಂಟೆಗಳ ಕಾಲ ನಡೆದ ಈ ಯುದ್ಧ ರಷ್ಯನ್ ಇತಿಹಾಸದಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಮೊಟ್ಟಮೊದಲು ನೆಪೋಲಿಯನ್ ಸೋಲನ್ನು ಅನುಭವಿಸಿದ್ದು ಈ ಯುದ್ಧದಲ್ಲಿ.

ಈ ಮ್ಯೂಸಿಯಂ ಒಳಗೆ ಹೋಗುತ್ತಲೆ, ಈ ನಿರ್ಣಾಯಕವಾದ ಯುದ್ಧದ ಹಲವು ದೃಶ್ಯಗಳ ವರ್ಣಚಿತ್ರಗಳಿವೆ. ಈ ಯುದ್ಧದಲ್ಲಿ  ಮುಂದಾಳುಗಳಾಗಿ ಹೋರಾಡಿದ ಸೇನಾನಿಗಳ ಭಾವಚಿತ್ರಗಳಿವೆ. ಆ ಯುದ್ಧಕಾಲದಲ್ಲಿ ಬಳಸಲಾದ ಬಂದೂಕು ಮೊದಲಾದ ಆಯುಧ ವಿಶೇಷಗಳ, ಆಗಿನ ಸೈನಿಕರ ಉಡುಪುಗಳ ಸಂಗ್ರಹವಿದೆ. ಈ ವಸ್ತು ಸಂಗ್ರಹಾಲಯವನ್ನು ತೋರಿಸುವ ಮುನ್ನ ಸಂದರ್ಶಕರನ್ನು, ಇಪ್ಪತ್ತು ಮಂದಿಯ ಹಾಗೆ ವಿಂಗಡಿಸುತ್ತಾರೆ. ಆ ಗುಂಪಿಗೆ ಒಬ್ಬಳು ನಿರ್ದೇಶಕಿ ಅಥವಾ ಗೈಡ್ – ಕೈಯಲ್ಲಿ ಕರಿಯ ಬೆತ್ತವೊಂದನ್ನು ಹಿಡಿದು, ಒಂದೊಂದು ಗುಂಪನ್ನು ಪ್ರತಿಯೊಂದು ಚಿತ್ರದ ಎದುರು ನಿಲ್ಲಿಸಿ ರಷ್ಯನ್ ಭಾಷೆಯಲ್ಲಿ ಪಟಪಟನೆ ೧೮೧೨ನೆಯ ಇಸವಿಯ ಸಮಗ್ರ ಇತಿಹಾಸವನ್ನು ಅಂಕಿ ಅಂಶಗಳೊಡನೆ ಪರಿಚಯ ಮಾಡಿಕೊಡುತ್ತಾಳೆ. ಯುದ್ಧಕ್ಕೆ ಸಂಬಂಧಿಸಿದ ಕೆಲವು ಪಟಗಳನ್ನು ನೋಡುತ್ತಾ ವರ್ತುಲಾಕಾರದ ದೊಡ್ಡ  ವೇದಿಕೆಯೊಂದರ ಮೆಟ್ಟಿಲನ್ನು ಏರಿ ಹೋಗಿ, ವೃತ್ತಾಕಾರದ ವಿಕ್ಷಣ ವೇದಿಕೆಯ  ಮೇಲೆ ನಿಂತ ಕೂಡಲೆ ಕಾದಿರುತ್ತದೆ ವಿಸ್ಮಯ. ಕೂಡಲೇ ನಾವು ಸಾಕ್ಷಾತ್ತಾದ ರಣರಂಗದ ಸ್ತಬ್ಧ ದೃಶ್ಯವೊಂದರ ನಡುವೆ ನಿಂತ  ಅನುಭವವಾಗುತ್ತದೆ. ಯಾವ ಕಡೆ ತಿರುಗಿದರೂ, ಅದೇ ಯುದ್ಧದ ವಿವಿಧ ದೃಶ್ಯಗಳು. ‘ಈಗ ನಾವು ಬೋರ್ಡಿನೋ ಯುದ್ಧದ ನಡುವೆ ಇದ್ದೇವೆ; ಈಗ ೧೮೧೨ನೆಯ ಇಸವಿಯ ಆಗಸ್ಟ್ ೨೬ನೇ ತಾರೀಖು – ಮಧ್ಯಾಹ್ನ ಹನ್ನೆರಡು ಗಂಟೆ’ – ಎನ್ನುತ್ತಾಳೆ  ಮಾರ್ಗದರ್ಶಕಿ, ಈ ಒಂದು ಗಳಿಗೆಯಲ್ಲಿ ನಡೆದ  ಯುದ್ಧದ ಸಾಕ್ಷಾತ್ ಚಿತ್ರ ಎದುರಿಗೆ, ಹಿಂದೆ ಮುಂದೆ: ಈ ಕಡೆ ಅರೆಸುಟ್ಟು ಕುಸಿದ ಮನೆಗಳಲ್ಲಿ ಹೊತ್ತಿ ಆರಿದ ಬೆಂಕಿ ಇನ್ನೂ ಕೆಂಡವಾಗಿದೆ : ಆಕಾಶಕ್ಕೇರಿದ ಬೆಂಕಿಯ ಜ್ವಾಲೆ; ಹೊಗೆ ಎದ್ದು ನೀಲಿಯಾಕಾಶದಲ್ಲಿ ತೇಲುತ್ತಿದೆ; ಮುಗ್ಗರಿಸುವ ಕುದುರೆಗಳು; ರಕ್ತದ ಕಲೆ; ಸತ್ತು ಬಿದ್ದ ಸೈನಿಕರು; ಗೋಧಿಯ ಹೊಲದ ಪೈರನ್ನು ತುಳಿದು ಧಾವಿಸುವ ಅಶ್ವಾರೋಹಿಗಳು; ಆಗ ತಾನೆ ಏನನ್ನೋ ಬೇಯಿಸುತ್ತಿದ್ದು, ಶತ್ರುವಿನ ದಾಳಿಯಿಂದ ಆ ಸ್ಥಳವನ್ನು ಸೈನಿಕರು ಬಿಟ್ಟಾಗ, ಬೆಂಕಿಯ ಮೇಲೆ ನೇತಾಡುವ ಕಡಾಯಿ; ರಣರಂಗದ ಫಿರಂಗಿಯ ಧೂಮ; ದಟ್ಟ ಹಸುರಿನ ನೆಲದ ಏರಿಳಿವುಗಳಲ್ಲಿ ಚದುರಿದ ಸೈನ್ಯ ; ಹರಿಯುವ ಹಳ್ಳವೊಂದನ್ನು ದಾಟುತ್ತಿರುವ ಕುದುರೆಗಳು ಮತ್ತು ಸೈನಿಕರು; ದೂರದೂರದ ಹಸುರು ಕಾಡುಗಳ ಮೇಲೆ ನೀಲಿಯಾಕಾಶದಲ್ಲಿ ತೇಲುವ ಮೋಡ; ತರಕಾರಿ ಬೆಳೆದ, ಆದರೆ ಯುದ್ಧದಿಂದ ಅಸ್ತವ್ಯಸ್ತವಾದ ಹಳ್ಳಿ ಮನೆಯ ಹಿತ್ತಲ ತೋಟ. ಇಡೀ ಒಂದು ರಣರಂಗದ ದೃಶ್ಯವೇ ಸಾಕ್ಷಾತ್ತಾಗಿ ಸ್ತಬ್ಧ ಚಿತ್ರವಾಗಿ ನಮ್ಮ ಸುತ್ತ ಕಾಣುತ್ತದೆ. ವೀಕ್ಷಣಾ ವೇದಿಕೆಯಿಂದ ಸುತ್ತ ನಲವತ್ತು ಅಡಿ ದೂರದಲ್ಲಿ, ನಾನೂರು ಅಡಿ ಉದ್ದ, ಮೂವತ್ತೈದು ಅಡಿ ಅಗಲದ ಭಿತ್ತಿಯ ಮೇಲೆ ಈ ಮಹಾದೃಶ್ಯವನ್ನು ಚಿತ್ರಿಸಲಾಗಿದೆ. ಇದನ್ನು ಯೋಜಿಸಿ, ನಿರ್ಮಿಸಿದವನು ಫಾನ್ಜ್‌ರುಬೊ ಎಂಬ ಶಿಕ್ಷಣತಜ್ಞ. ೧೯೧೨ರಲ್ಲಿ ನಿರ್ಮಿತವಾದ ಈ ದೃಶ್ಯ – ಯೋಜನೆ ಆಶ್ಚರ್ಯಕರವಾಗಿದೆ. ಇದನ್ನು ನೋಡುವ ನಮಗೆ ಅದೊಂದು ಚಿತ್ರ ಎಂದು ಅನ್ನಿಸುವುದೇ ಇಲ್ಲ; ವಾಸ್ತವವೆಂಬ ಭ್ರಮೆಯನ್ನು ಕೊಡುವುದರಲ್ಲಿ ಅದು ತುಂಬ ಯಶಸ್ವಿಯಾಗಿದೆ. ರಷ್ಯಾ ದೇಶದ ಜನ, ಪರಾಕ್ರಮಣವನ್ನು ಹೇಗೆ ಧೈರ್ಯದಿಂದ ಎದುರಿಸಿದರೆಂಬ ಇತಿಹಾಸದ ಪುಟವೊಂದನ್ನು ಜನತೆಯ ಮುಂದಿಡುವುದರ ಮೂಲಕ ಈ ದೇಶ ತನ್ನ ಐತಿಹಾಸಿಕ ಪ್ರಜ್ಞೆಯನ್ನು ಹೇಗೆ ಕಾಯ್ದುಕೊಂಡಿದೆ ಎಂಬುದನ್ನು ಯಾರಾದರು ಗುರುತಿಸಬಹುದು.

ಒಂದೂವರೆಯ ವೇಳೆಗೆ ಮಹಾದೇವಯ್ಯನವರ ಮನೆಗೆ ಬಂದೆ. ಹೋಳಿಗೆಯ ಕಂಪು ಮನೆಯನ್ನೆಲ್ಲ ತುಂಬಿತ್ತು. ಈ ದಿನ ಗೌರಿ ಹಬ್ಬವಂತೆ. ಮನೆಯ ನೆನಪು ಬಂತು. ನಾನಿಲ್ಲದ ಮನೆಯಲ್ಲಿ, ನಮ್ಮವರು ಕೊರತೆಯನ್ನನುಭವಿಸುತ್ತ ಈ ದಿನ ಹಬ್ಬ ಮಾಡುತ್ತಿದ್ದಾರೆ ಅನ್ನಿಸಿತು. ಹಬ್ಬದ ಈ ಊಟವಂತೂ ನನ್ನ ಪಾಲಿಗಾಯಿತು. ಗಡದ್ದಾಗಿ ಉಂಡು ಒಂದು ನಿದ್ದೆ ತೆಗೆದದ್ದಾಯಿತು ಅವರ ಮನೆಯಲ್ಲೆ. ಅವರ ಕುಮಾರ ಕಂಠೀರವ ಕುರ್ಚಿಗಳನ್ನು ತಲೆಕೆಳಗು ಮಾಡಿ ದರದರ ಎಳೆದಾಡುತ್ತ, ಪುಸ್ತಕದ ಹಾಳೆಗಳನ್ನು ಹರಿದು ತೂರುತ್ತ, ಬೊಂಬೆಗಳಿಗೆ ಜರಾಸಂಧ ಚಿಕಿತ್ಸೆ ಮಾಡುತ್ತಾ ಆಟವಾಡುತ್ತಿದ್ದ. ಹಸುಳೆಯ ಆಟದ ಗದ್ದಲಕ್ಕೆ ಎದ್ದು ನೋಡಿದರೆ ಆಗಲೆ ನಾಲ್ಕೂವರೆ. ಬಿಸಿಬಿಸಿ ಕಾಫಿ ಕುಡಿದು, ಊರಿನಿಂದ ಏನಾದರೂ ಕಾಗದ ಬಂದಿದೆಯೆ ಎಂದು ನೋಡಲು ‘ಇಂಡಿಯನ್ ಎಂಬೆಸಿ’ಗೆ ಹೊರಟೆವು.  ಭಾನುವಾರ  ಇಂಡಿಯಾದಿಂದ ವಿಮಾನ ಬರುವ ದಿನ; ಭಾರತೀಯ ರಾಯಭಾರ ಕಛೇರಿಯ ವಿಳಾಸ ಕೊಟ್ಟವರ ಕಾಗದಗಳು ಬರುವ ದಿನ. ಇಲ್ಲಿ ಓದುವ ಎಲ್ಲ ಭಾರತೀಯ ವಿದ್ಯಾರ್ಥಿಗಳೂ ತಮ್ಮ ಪತ್ರಗಳನ್ನು ಈ ವಿಳಾಸಕ್ಕೆ ಬರಮಾಡಿಕೊಳ್ಳುತ್ತಾರೆ. ನಾವು ಹೋದ ವೇಳೆ ಭಾರತೀಯ ರಾಯಭಾರ ಕಛೇರಿಯ ಅಂಗಳದಲ್ಲಿ ನೂರಾರು ಭಾರತೀಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸೇರಿದ್ದರು. ಮಾಸ್ಕೋದಲ್ಲಿ ಸುಮಾರು ಮುನ್ನೂರು ಭಾರತೀಯ ವಿದ್ಯಾರ್ಥಿಗಳು ವಿವಿಧ ವಿಷಯದ ಅಭ್ಯಾಸಕ್ಕೆ ಬಂದಿದ್ದಾರಂತೆ.

ಅಂಚೆ ಆರು ಗಂಟೆಯ ವೇಳೆಗೆ ವಿಮಾನ ನಿಲ್ದಾಣದಿಂದ ಬಂತು. ಅದನ್ನೆಲ್ಲ ವಿಂಗಡಿಸಿ, ಏಳು ಗಂಟೆಯ ವೇಳೆಗೆ ಒಬ್ಬಾತ ಒಂದೊಂದೇ ಕಾಗದವನ್ನೆತ್ತಿ ವಿಳಾಸಗಳನ್ನು ಕೂಗಿ ಹೇಳುತ್ತಿದ್ದ. ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳ ಮುಖ, ತಮ್ಮ ಹೆಸರನ್ನು ಕೂಗಿದ ಕೂಡಲೆ ಬತ್ತಿಯನ್ನು ಎತ್ತರಿಸಿದ ದೀಪದಂತಾಗುತ್ತಿತ್ತು. ಕಾತರದಿಂದ ಕೈ ಚಾಚಿ ಕಾಗದವನ್ನು ತೆಗೆದುಕೊಂಡು, ಕೊಠಡಿಯ ಮೂಲೆಗಳಿಗೆ ಹೋಗಿ ದೀಪದ ಬೆಳಕಿನಲ್ಲಿ ಕಾಗದ ಓದುವಾಗಿನ ಆ ಸಂಭ್ರಮವನ್ನು ಹೀಗೇ ಎಂದು ಹೇಳಲಾಗುವುದಿಲ್ಲ. ಅದೊಂದು ಚಿನ್ನದ ಗಳಿಗೆ, ಕಾಗದದಲ್ಲಿ ಯಾವ ಯಾವ ಮುಖ, ಯಾವ ಯಾವ ತಮ್ಮೂರಿನ ನೋಟಗಳು ತೆರೆದು, ಯಾವ ಯಾವ  ಹೃದಯದ ಕರೆಗಳು ಮೊರೆಯುತ್ತವೆಯೋ ಅವರವರಿಗೇ ಗೊತ್ತು. ಈ ಕಾಗದಗಳು ಸಾವಿರಾರು ಮೈಲಿ ದೂರದಿಂದ ತರುವ ಸುಖ – ದುಃಖಗಳು ಕಾಯುವ ಈ ಹೃದಯಕ್ಕೆ ಅಗತ್ಯವಾದುವು.

ನಾನು ಈ ವಿಳಾಸವನ್ನು ಕೊಟ್ಟು ಕಾಗದ ಬರೆಯಿರೆಂದು ಹೇಳಿದ್ದರೂ, ನನಗೇನೂ ಪತ್ರವಿರಲಿಲ್ಲ. ಆದರೆ ಭಾರತದ ವಿವಿಧ ಭಾಗಗಳಿಂದ ಅಷ್ಟೊಂದು ವಿದ್ಯಾರ್ಥಿಗಳಿಗೆ ಪತ್ರ ಬಂದಾಗ, ಅವರು ಪಟ್ಟ ಆ ಸಂಭ್ರಮದಲ್ಲಿ ನನಗೆ ಕಾಗದ ಬಾರದ ಚಿಂತೆ ಮರೆತೇಹೋಯಿತು.