ಆ ಹುಡುಗ ಶಾಲೆಗೆ ರಜ ಇರುವಾಗಲೆಲ್ಲಾ ತನ್ನ ಮನೆಯ ದನಕರುಗಳ ಹಿಂಡನ್ನು ಹೊಡೆದುಕೊಂಡು ಬೆಟ್ಟದ ಕಡೆ ಹೋಗುತ್ತಿದ್ದ. ಬೆಟ್ಟದ ತಪ್ಪಲಲ್ಲಿ ಹರಿಯುವ ನದಿ, ಹಸಿರು ಹಸಿರಾಗಿ ಕಂಗೊಳಿಸುವ ಗಿಡಮರಗಳು, ಮೆತ್ತನೆಯ ಜಮಖಾನ ಹಾಸಿದಂತೆ ಸೊಂಪಾಗಿ ಬೆಳೆದ ಹಸಿರುಹುಲ್ಲು, ಹುಡುಗನಿಗೆ ಇದನ್ನೆಲ್ಲಾ ನೋಡುವುದೆಂದರೆ ತುಂಬಾ ಸಂತೋಷ.

ಮೊದಲ ಬಾರಿಗೆ ಕೊಳಲು ನುಡಿಸಿದ

ಒಂದೊಂದು ಸಲ ಅವನು ಸ್ನಾನ ಮಾಡಲು ನದಿಗೆ ಇಳಿಯುತ್ತಿದ್ದ. ಹಾಗೆ ಒಂದು ಸಲ ಸ್ನಾನ ಮಾಡುತ್ತಾ, ಈಜುತ್ತಾ ಇದ್ದ. ಆಗ ಒಂದು ಬಿದಿರಿನ ಉದ್ದವಾದ ತುಂಡು ಕಣ್ಣಿಗೆ ಬಿತ್ತು. ಅದರ ಒಂದು ಪಕ್ಕದಲ್ಲಿ ತೂತುಗಳು ಇದ್ದವು. ಅದು ಒಂದು ಕೊಳಲು ಎಂದು ಆತನಿಗೆ ಗೊತ್ತಾಯಿತು. ಸಂಜೆಯಾಗಿತ್ತು. ದನಕರುಗಳನ್ನು ಅಟ್ಟಿಕೊಂಡು ಮನೆಗೆ ಹೋದ. ಕೈಯಲ್ಲಿದ್ದ ಬಿದಿರಿನ ತುಂಡಿನಲ್ಲಿ ತೂತುಗಳಿರುವ ಭಾಗವನ್ನು ಸರಿಯಾಗಿ ಕತ್ತರಿಸಿದ. ಮಿಕ್ಕಭಾಗವನ್ನು ಹಾಗೆಯೇ ಇಟ್ಟುಕೊಂಡ. ತೂತುಗಳಿದ್ದ ತುಂಡನ್ನು ಬಾಯಿಗಿಟ್ಟು ನುಡಿಸಿದ ಕೊಳಲಿನ ಇಂಪಾದ ಧ್ವನಿ. ಇನ್ನೊಂದು ಭಾಗವನ್ನು ದನಗಳನ್ನು ಅಟ್ಟಿಕೊಂಡು ಹೋಗಲು ಇಟ್ಟುಕೊಂಡ. ಬಿದಿರಿನ ಒರಟಾದ ಕೊಳಲನ್ನು ತಮಾಷೆಗೆಂದು ಆಗಾಗ ನುಡಿಸುತ್ತಿದ್ದ. ಆ ಧ್ವನಿ ಅವನಿಗೆ ತುಂಬಾ ಇಷ್ಟವಾಗಿತ್ತು. ಅವನಿಗೇನೂ ಸಂಗೀತ ಬರುತ್ತಿರಲಿಲ್ಲ. ಸುಮ್ಮನೆ ತಾನು ಕೇಳಿದ್ದ ಹಾಡುಗಳು, ಯಾವ ಯಾವುದೋ ರಾಗಗಳು, ಧಾಟಿಗಳು – ಇವನ್ನು ಕೊಳಲಿನಲ್ಲಿ ನುಡಿಸಲು ಪ್ರಾರಂಭಿಸಿದ. ಮುಂದೆ ಅದರಲ್ಲಿ ಚೆನ್ನಾದ ಪಾಂಡಿತ್ಯವನ್ನು ಸಂಪಾದಿಸಿದ.

ಆ ಹುಡುಗ ಯಾರು ಗೊತ್ತೇ? ಪನ್ನಲಾಲ್ ಘೋಷ್.

ಬಿದಿರಿನ ಒಂದು ತುಂಡು ಕಣ್ಣಿಗೆ ಬಿದ್ದಿತು.

ಬಾನ್ಸುರಿ

ನೀವು ಕೊಳಲುವಾದನವನ್ನು ಕೇಳಿರಬೇಕು. ಚಿಕ್ಕವರಿಗೂ ದೊಡ್ಡವರಿಗೂ ಈ ವಾದ್ಯವಾದನ ತುಂಬಾ ಇಷ್ಟ. ನಮ್ಮ ಭಾರತದ ಪುರಾಣದ ಕಲೆಗಳಿಗೂ ಕೊಳಲಿಗೂ ಒಳ್ಳೆಯ ನಂಟು. ಶ್ರೀ ಕೃಷ್ಣನಿಗೆ ತುಂಬಾ ಪ್ರಿಯವಾದ ವಾದ್ಯ ಕೊಳಲು. ಅವನ ಕೊಳಲಿನ ಧ್ವನಿ ಎಂತಹವರನ್ನೂ ಆಕರ್ಷಿಸುತ್ತಿತ್ತು.

ಕೊಳಲಿಗೆ ಬೇರೆ ಹೆಸರುಗಳೂ ಉಂಟು. ವೇಣು, ಬಾನ್ಸುರಿ, ವಂಶ. ವಂಶ ಎಂದರೆ ಕೊಳಲು. ಇದು ತತ್ಸಮ. ಬಾನ್ಸುರಿ, ಬನ್ಸರೀ ಎಲ್ಲಾ ವಂಶ ಎಂಬ ಪದದಿಂದ ಹುಟ್ಟಿರುವ ತದ್ಭವ ಪದಗಳು. ದಿವಂಗತ ಪನ್ನಾಲಾಲ್ ಘೋಷ್ ಬಾನ್ಸುರಿ ವಾದಕ ಎಂದೇ ಪ್ರಸಿದ್ಧರಾಗಿದ್ದರು. ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದಲ್ಲಿ ಕೊಳಲಿಗೆ ಪ್ರಮುಖಸ್ಥಾನ ಒದಗಿಸಿಕೊಟ್ಟವರು ಪನ್ನಾಲಾಲ್ ಘೋಷ್. ಬಾಯಿಯಲ್ಲಿ ಹಾಡುವಂತೆ, ವೀಣೆಯಲ್ಲಿ ನುಡಿಸಿದಂತೆ ಕೊಳಲನ್ನು ನುಡಿಸುತ್ತಿದ್ದವರು ಪನ್ನಾಲಾಲ್ ಘೋಷ್ ಒಬ್ಬರೇ.

ಜನನ, ಮನೆತನ

ಅವರು ಹುಟ್ಟಿದ್ದು ಪೂರ್ವ ಬಂಗಾಳದಲ್ಲಿ. ಈಗ ಅದು ಬಾಂಗ್ಲಾದೇಶವಾಗಿದೆ. ಬಾಂಗ್ಲಾದೇಶದ ಬಾರಿಸಾಲ್ ಜಿಲ್ಲೆಯಲ್ಲಿ ೧೯೧೧ನೇ ಇಸವಿಯ ಜುಲೈ ೩೧ನೇ ತಾರೀಖು ಅವರು ಹುಟ್ಟಿದರು. ಅವರ ತಂದೆ ಅಕ್ಷಯ ಕುಮಾರ‍್ ಘೋಷ್ ಸರ್ಕಾರಿ ನೌಕರಿಯಲ್ಲಿದ್ದವರು. ಅವರಿಗೆ ಸಿತಾರ‍್ ನುಡಿಸುವುದೆಂದರೆ ತುಂಬಾ ಇಷ್ಟ. ದಿನವೂ ಆಫೀಸಿನಿಂದ ಮನೆಗೆ ಬಂದ ಮೇಲೆ ಸಿತಾರ‍್ ನುಡಿಸುತ್ತಿದ್ದರು. ಆಗ ಪನ್ನಾಲಾಲರಿಗೆ ಸಂಗೀತ ಎಂದರೆ ಇಷ್ಟವೇನೋ ಇತ್ತು. ಆದರೆ ಆ ಇಷ್ಟ ಪ್ರಬಲವಾದ ಆಸೆಯೇನೂ ಆಗಿರಲಿಲ್ಲ. ಆ ಸಂಗೀತದಲ್ಲಿ ಒಂದು ಸಾಮಾನ್ಯವಾದ ಅಭಿರುಚಿ ಅಷ್ಟೇ. ಸಂಗೀತ ಮೇಲೆಯೇ ಗೀಳುಹುಟ್ಟಿ ಅದರಲ್ಲಿಯೇ ತಲ್ಲೀನರಾಗಿ, ಸಂಗೀತವೇ ಅವರ ಪೂರ್ಣ ಉದ್ಯೋಗವಾಗಿದ್ದು ಅನೇಕ ವರ್ಷಗಳ ಅನಂತರ.

ಪೈಲ್ವಾನ್ ಪನ್ನಾಲಾಲ್

ಮೊದಮೊದಲು ಅಂದರೆ ಅವರ ಬಾಲ್ಯದಲ್ಲಿ ಅವರಿಗೆ ಅಂಗಸಾಧನೆಯಲ್ಲೇ ಹೆಚ್ಚು ಆಸಕ್ತಿ. ಮುಂದೆ ಪ್ರಸಿದ್ಧ ಸಂಗೀತಗಾರರೆಂದು ಹೆಸರು ಪಡೆದ ಪನ್ನಾಲಾಲ್ ಘೋಷ್. ಮೊದಲು ನಿಪುಣ ಕುಸ್ತಿ ಆಟಗಾರರೆಂದು ಹೆಸರು ಪಡೆದರು. ಚಿಕ್ಕ ಹುಡುಗ ಪನ್ನಾಲಾಲನಿಗೆ ಜೊತೆಯ ಹುಡುಗರೊಡನೆ ಕುಸ್ತಿ ಮಾಡುವುದೆಂದರೆ ತುಂಬಾ ಇಷ್ಟ.

ಹೀಗೆ ಒಂದು ದಿನ ಕುಸ್ತಿ ಆಟದಲ್ಲಿ ನಿರತರಾಗಿದ್ದಾಗ ಆತ ಇಬ್ಬರು ಕುಸ್ತಿ ಪಟುಗಳನ್ನು ಭೇಟಿಯಾದ. ಅವರನ್ನು ಎಲ್ಲರೂ ಕರೆಯುತ್ತಿದ್ದುದು ಬರ್ಕಾಡೆ ಮತ್ತು ತುಕಾಡೆ ಎಂದು. ಅವರು ಅಣ್ಣತಮ್ಮಂದಿರು. ಅವರ ಉದ್ಯೋಗ ಅಥವಾ ಕೆಲಸವೇ ಕುಸ್ತಿ ಆಡುವುದು. ಅವರದೊಂದು ಗರಡಿಮನೆ. ಅಲ್ಲಿ ಕಲಿಯಲು ಬರುವ ಮಕ್ಕಳಿಗೆ ಅಂಗಸಾಧನೆ ಮಾಡಿಸುವುದು, ಕುಸ್ತಿ ಪಟುಗಳನ್ನು ಹೇಳಿ ಕೊಡುತ್ತಿದ್ದರು. ಗರಡಿ ಮನೆಯ ಗುರುಗಳು ಅವರು.

ಒಂದು ಸಲ ಪನ್ನಾಲಾಲ್ ತನ್ನ ಜೊತೆಯ ಹುಡುಗರ ಜೊತೆ ಕುಸ್ತಿ ಆಡುತ್ತಿದ್ದ. ಚೆನ್ನಾಗಿ ಬೆಳೆದ ಹುಡುಗ. ಹುಡುಗರೊಂದಿಗೆ ತನಗೆ ಬರುವ ಪಟ್ಟುಗಳಿಂದಲೇ ಹೊಡೆದಾಡುತ್ತಿದ್ದ. ಬರ್ಕಾಡೆ, ತುಕಾಡೆ ಇದನ್ನು ನೋಡುತ್ತಿದ್ದರು. ಪನ್ನಾಲಾಲ್ ಪುಟ್ಟ ಪೈಲ್ವಾನನಂತೆಯೇ ಕಾಣುತ್ತಿದ್ದ. ಅವರಿಗೆ ಅವನು ಮೆಚ್ಚಿಗೆಯಾದ.

’ನಾವು ನಿನಗೆ ಸರಿಯಾಗಿ ಕುಸ್ತಿ ಆಡುವುದನ್ನು ಕಲಿಸುತ್ತೇವೆ, ಬರುತ್ತೀಯಾ? ’ ಎಂದು ಕೇಳಿದರು ’ಓಹೋ’ ಎಂದ ಹುಡುಗ.

ಸರಿ, ಅಂದಿನಿಂದಲೇ ಅವರ ಗರಡಿಮನೆಯಲ್ಲಿ ಪನ್ನಾಲಾಲ್ ಕುಸ್ತಿ ಕಲಿಯಲು ಪ್ರಾರಂಭ ಮಾಡಿದ. ಅಲ್ಲಿ ಮಲ್ಲಯುದ್ಧ, ಮುಷ್ಟಿಕಾಳಗ, ಕತ್ತಿವರಸೆ, ಬಂದೂಕದ ಗುರಿ ಮತ್ತು ಜಜುಟ್ಸು ಇವನ್ನೆಲ್ಲ ಹೇಳಿಕೊಡುತ್ತಿದ್ದರು. (ಜುಜುಟ್ಸು ಎನ್ನುವುದು ಜಪಾನ್ ದೇಶದಿಂದ ಬಂದ ಒಂದೂ ಶರೀರ ಶಿಕ್ಷಣದ ವಿದ್ಯೆ. ಯೋದ್ಧಂ + ಇಚ್ಛಾ = ಯಯುತ್ಸಾದಿಂ ಯುಯುತ್ಸು. ಅದನ್ನು ಕಲಿತರೆ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬಹುದೆಂದು ಗೊತ್ತಾಗುವುದು)

ಹುಡುಗ ಪನ್ನಾಲಾಲನಿಗೆ ಕುಸ್ತಿಯಾಟವೆಂದರೆ ಆಸಕ್ತಿ. ಬಹಳ ಚೂಟಿಯ ಹುಡುಗ. ಶಕ್ತಿವಂತ ಬೇರೆ. ಬರ್ಕಾಡೆ, ತುಕಾಡೆ ಹುಡುಗನಿಗೆ ಕುಸ್ತಿಪಂದ್ಯದ ವಿವಿಧ ವರಸೆಗಳು, ಒಳಗುಟ್ಟುಗಳು ಹೀಗೆ ಅಗತ್ಯವಾದ ವಿಧಾನಗಳನ್ನು ಹೇಳಿಕೊಟ್ಟರು.

ಪನ್ನಾಲಾಲನಿಗೆ ಇದನ್ನೆಲ್ಲ ಕಲಿಯುವ ಆಸಕ್ತಿ ಎಷ್ಟು ಇದ್ದಿತೆಂದರೆ ಈ ಎಲ್ಲಾ ವಿದ್ಯೆಗಳನ್ನು ಮೂರು ತಿಂಗಳಲ್ಲೇ ಕಲಿತುಬಿಟ್ಟ. ಚಿಗುರು ಮೀಸೆಯ ಈ ಹುಡುಗ ಎಲ್ಲವನ್ನೂ ಎಷ್ಟು ಬೇಗ ಕಲಿತುಬಿಟ್ಟನಲ್ಲಾ ಎಂದು ಎಲ್ಲರಿಗೂ ಆಶ್ಚರ್ಯ. ಸುತ್ತಮುತ್ತಲೆಲ್ಲ ಭಾರೀ ದೇಹದ ಯುವಕ ಪನ್ನಾಲಾಲ್. ಜಟ್ಟಿ ಪನ್ನಾಲಾಲ್ ಎಂದು ಹೆಸರು ಪಡೆದ. ಆಗಾಗ ಕುಸ್ತಿಪಂದ್ಯಗಳಲ್ಲಿ ಭಾಗವಹಿಸುತಿದ್ದ. ಗೆಲ್ಲುತ್ತಲೂ ಇದ್ದ. ಜನಗಳೆಲ್ಲ ಇವನನ್ನು ಮೆರವಣಿಗೆ ಮಾಡುತ್ತಿದ್ದರು. ಇವನಿಗೆ ಹಿಗ್ಗು. ಗುರುಗಳಾದ ಬರ್ಕಾಡೆ, ತುಕಾಡೆಯವರಿಗಂತೂ ತುಂಬಾ ಸಂತೋಷ.

ಮುಂದೆ ೧೯೩೬ರಲ್ಲಿ ಒಂದು ಕುಸ್ತಿ ಪಂದ್ಯಾವಳಿ ನಡೆಯಿತು. ಅದರ ಹೆಸರು ’ಬ್ಯಾಂಟಮ್ ವೇಟ್ ಚಾಂಪಿಯನ್ ಷಿಪ್. ತರುಣ ಪೈಲ್ವಾನ್ ಪನ್ನಾಲಾಲ್ ಅದರಲ್ಲಿ ಭಾಗವಹಿಸಿ ಮೊದಲ ಸ್ಥಾನವನ್ನೇ ಪಡೆದನು.

ಸಂಗೀತದ ಹಂಬಲ

ಈ ಚುರುಕು ಜಟ್ಟಿಗೆ ಒಂದು ದಿನ ಈಜುತ್ತಿದ್ದಾಗ ಒಂದು ಕೊಳಲು ಸಿಕ್ಕಿತು. ಈ ಪ್ರಸಂಗವನ್ನು ಆಗಲೇ ಹೇಳಿದೆಯಲ್ಲ? ಕೊಳಲನ್ನು ನುಡಿಸುವುದೆಂದರೆ ಅವನಿಗೆ ಬಹು ಆಸೆ, ಬಹು ಖುಷಿ. ಗರಡಿ ಮನೆಯಲ್ಲಿ ದಿನವೂ ಅಭ್ಯಾಸ ಮಾಡುತ್ತಿದ್ದ ಜಟ್ಟಿ ಪನ್ನಾಲಾಲ್ ಶಕ್ತಿಯ ಚಿಲುಮೆ ಆಗಿದ್ದನು. ಐದು ನಿಮಿಷಗಳಿಗಿಂತಲೂ ಜಾಸ್ತಿಯಾಗಿ ಒಂದು ಕಡೆ ಅವನಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಅವನಿಗೆ ಕೊಳಲು ನುಡಿಸುವುದರಲ್ಲೂ ಆಸಕ್ತಿ ಇತ್ತಲ್ಲ? ಆದ್ದರಿಂದ ಒಂದು ದಿನ ಅವನು ಯೋಗ ಸಾಧನೆ ಮಾಡುವ ಭಂಗಿಯಲ್ಲಿ ಐದು ನಿಮಿಷಗಳು ಕುಳಿತುಕೊಳ್ಳಲು ಪ್ರಯತ್ನಿಸಿದರು. ಮರುದಿನ ಇನ್ನೂ ಐದು ನಿಮಿಷ. ಹೀಗೆ ಐದೈದು ನಿಮಿಷ ಹೆಚ್ಚು ಮಾಡುತ್ತಾ ಯೋಗಾಸನದ ಭಂಗಿಯಲ್ಲಿ ಒಂದೇ ಕಡೆ ಹೆಚ್ಚು ಹೆಚ್ಚು ಹೊತ್ತು ಕುಳಿತು ಅಭ್ಯಾಸ ಮಾಡಿದನು. ಅಂಗಸಾಧನೆಯನ್ನು ಕಲಿತು ಉಕ್ಕುತ್ತಿರುವ ಹುಮ್ಮಸ್ಸಿನ ಯುವಕ ಅವನು. ಅಂತಹವರನು ಏನೂ ಮಾಡದೆ ಒಂದೇ ಕಡೆ ಕುಳಿತಿರುವುದನ್ನು ಪ್ರಯತ್ನಪಟ್ಟು ಕಲಿತ. ಅದರಲ್ಲಿ ಸಫಲನಾದ. ಆಗ ಅವನಿಗೆ ಕೊಳಲನ್ನು ನುಡಿಸುವುದಕ್ಕೆ ಅನುಕೂಲವಾಯಿತು. ಪನ್ನಾಲಾಲರು ಮೊದಲು ನುಡಿಸಿದ ಕೊಳಲು ತೂತುಗಳಿದ್ದ ಬಿದಿರಿನ ತುಂಡು. ಆಗ ಹುಡುಗನಿಗೆ ಸಂಗೀತದ ಆಳ ಬೇರುಗಳು ಯಾವುದೂ ತಿಳಿದಿರಲಿಲ್ಲ. ಒಬ್ಬ ಮುಗ್ಧನಾದ ಹಳ್ಳಿಯ ಹುಡುಗ ಪಿಳ್ಳಂಗೋವಿಯಲ್ಲಿ ಉಸಿರು ತುಂಬಿ ರಾಗದ ಅಲೆಗಳನ್ನು ಎಬ್ಬಿಸುತ್ತಿದ್ದನು.

ಘೋಷರ ತಾಯಿಗೆ ಧಾರ್ಮಿಕ ಶ್ರದ್ಧೆ. ಆಕೆ ತನ್ನ ಮಗನಿಗೆ ಕೊಳಲು ನುಡಿಸುವುದರಲ್ಲಿ ಉತ್ತೇಜನ ಕೊಟ್ಟರು. ಆದರೂ ನುಡಿಸುತ್ತಾ ನುಡಿಸುತ್ತಾ ಅವನ ಶ್ವಾಸಕೋಶಗಳಿಗೆ ತೊಂದರೆ ಆಗುವುದಿಲ್ಲವೇ ಎನ್ನುವ ಆಂತಕ ಆ ತಾಯಿಗೆ.

ಸಂತಾಲರ ಪರಿಚಯ

ಘೋಷರು ಶಾಲೆಯನ್ನು ಹದಿನಾರನೆಯ ವಯಸ್ಸಿಗೆ ಬಿಟ್ಟುಬಿಟ್ಟರು. ಉದ್ಯೋಗಕ್ಕೆಂದು ಕಲ್ಕತ್ತೆಗೆ ಹೋದರು. ಅಲ್ಲಿ ಕೆಲಸ ಹುಡುಗತೊಡಗಿದರು. ಕೆಲಸ ಸಿಕ್ಕಿತು. ಕೊಳವೆ ಬಾವಿ ಕೊರೆಯುವ ಕಂಪೆನಿ. ಕೊಳಲಿಗೆ ಸಂಬಂಧವಿಲ್ಲದ್ದು. ಸಂಗೀತದ ಧ್ವನಿಯೇ ಇಲ್ಲದ ಯಂತ್ರದ ಶಬ್ದಗಳು. ಕಂಪೆನಿ ಊರಿಗೆ ಸ್ವಲ್ಪ ದೂರದಲ್ಲಿ ಇತ್ತು. ಅಲ್ಲಿ ಸುತ್ತಮುತ್ತ ವಾಸಿಸುತ್ತಿದ್ದ ಜನರನ್ನು ’ಸಂತಾಲರು’ ಎಂದು ಕರೆಯುತ್ತಿದ್ದರು.  ಅವರು ಗುಡ್ಡಗಾಡು ಪ್ರದೇಶದವರು. ಆದಿವಾಸಿಗಳು, ಗಿರಿಜನರು ಅನ್ನುತ್ತಾರಲ್ಲ, ಹಾಗೆ. ಕಂಪೆನಿಯಲ್ಲಿ ಪನ್ನಾಲಾಲರಿಗೆ ಸೂಪರ‍್ ವೈಜರ‍್ ಕೆಲಸ. ಅಂದರೆ ಮೇಲ್ವಿಚಾರಣೆ ಮಾಡುವುದು. ಕಲ್ಕತ್ತದಲ್ಲಿ ನಲ್ಲಿಯಲ್ಲಿ ಬರುವ ನೀರು ಶುದ್ಧೀಕರಿಸದೆ ಇರುವ ಗಂಗಾನದಿಯ ನೀರು. ಕುಡಿಯಲು ಅಲ್ಲಿ ಕೊಳವೆ ಬಾವಿಗಳಿಂದ ಎತ್ತುವ ನೀರನ್ನು ಉಪಯೋಗಿಸುವರು. ಇದು ಅಲ್ಲಿನ ನೀರು ಸರಬರಾಜಿನ ವ್ಯವಸ್ಥೆ. ಪನ್ನಾಲಾಲರು ಕೆಲಸಕ್ಕೆ ಸೇರಿದ್ದು. ಇಂತಹ ಒಂದು ಕೊಳವೆ ಬಾವಿ ಕೊರೆಯುವ ಕಂಪೆನಿಗೆ. ಕೆಲಸ ಮೇಲೆ ಅವರು ದೂರದೂರದ ಹಳ್ಳಿಗಾಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಓಡಾಡಬೇಕಾಗಿತ್ತು.

ಒಂದು ಸಲ ಹೀಗೆ ಹೋಗಿದ್ದಾಗ ಅವರಿಗೆ ಕೊಳಲಿನ ನಾದ ಕಿವಿಗೆ ಬಿತ್ತು. ಅದು ಎಲ್ಲಿಂದ ಬರುತ್ತಿದೆ ಎಂದು ತಿಳಿಯುವ ಕುತೂಹಲ. ಆದರೆ ಆಗ ಕೆಲಸದ ವೇಳೆ. ಹೋಗಲಾಗಲಿಲ್ಲ. ಕೊಳಲಿನ ಧ್ವನಿ ಬರುತ್ತಲೇ ಇತ್ತು ವಿರಾಮದ ವೇಳೆ ಬಂತು. ಆಗ ಅವರು ಕೊಳಲಿನ ಧ್ವನಿಯನ್ನು ಹಿಂಬಾಲಿಸುತ್ತಾ ಅದು ಬರುತ್ತಿದ್ದ ಜಾಗವನ್ನು ಹುಡುಕುತ್ತಾ ಹೋದರು. ಜಾಗ ಸಿಕ್ಕಿತು. ಅಲ್ಲಿ ಸಂತಾಲರ ಒಂದು ಗುಂಪು. ಅವರೆಲ್ಲ ನೃತ್ಯ ಮಾಡುತ್ತಿದ್ದರು. ಒಬ್ಬ ವ್ಯಕ್ತಿಯ ಕೈಯಲ್ಲಿ ಕೊಳಲು. ಆತ ಅವರೆಲ್ಲ ನರ್ತಿಸುತ್ತಾ ಹಾಡುತ್ತಿದ್ದಾಗ ಕೊಳಲು ನುಡಿಸುತ್ತಾ ಇದ್ದ. ಪನ್ನಾಲಾಲರ ಜೊತೆಯಲ್ಲಿದ್ದವರು ಅವರು ನೃತ್ಯ ಮಾಡುವುದನ್ನು ನೋಡುತ್ತಿದ್ದರು. ಆದರೆ ಪನ್ನಾಲಾಲರ ಗಮನವೆಲ್ಲಾ ಆ ಕೊಳಲು ವಾದನದ ಮೇಲೆಯೇ. ಆ ಜನರು ಇವರನ್ನು ಕರೆದು, ಕುಳ್ಳಿರಿಸಿ ಆದರಿಂದ ಮಾತನಾಡಿಸಿದರು.

ಆ ದಿನದಿಂದ ಪನ್ನಾಲಾಲರು ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿಗೆ ಹೋಗುವರು. ಕೊಳಲನ್ನು ನುಡಿಸಲು ಹೇಳಿ ಕೇಳುತ್ತಾ ಕೂಡುವರು. ಹೀಗೆ ಸಂತಾಲರು ಅವರ ಸ್ನೇಹಿತರಾದರು.

ಸಂತಾಲರಿಂದ ವಿದ್ಯೆ ಕಲಿತರು

ಜಟ್ಟಿಯಂತೆ ಕಾಣುತ್ತಿದ್ದ ಈ ಬಾಬು ಸಾಹೇಬರು ನಿಜವಾಗಲೂ ಜಟ್ಟಿಯೇ ಎಂದು ಗೊತ್ತಾದಾಗ ಸಂತಾಲರಿಗೆ ಹಿಗ್ಗೋ ಹಿಗ್ಗು. ಸಂತಾಲರಿಗೆ ಇವರಿಂದ  ಕುಸ್ತಿ ಆಟವನ್ನು ಕಲಿಯಲು ಆಸೆ. ಪನ್ನಾಲಾಲರಿಗೆ ಆ ಜನಗಳು ಕೊಳಲನ್ನು ನುಡಿಸಿದಂತೆ ನುಡಿಸುವ ಆಸೆ. ಹೀಗೆ ಇಬ್ಬರೂ ಒಬ್ಬರ ವಿದ್ಯೆ ಇನ್ನೊಬ್ಬರು ಕಲಿಯಲು ಪ್ರಾರಂಭ ಮಾಡಿದರು. ಸಂತಾಲರಿಗೆ ಶಾಸ್ತ್ರೀಯ ಸಂಗೀತವೇನೂ ಬರುತ್ತಿರಲಿಲ್ಲ. ಅವರು ತಮಗೆ ಬರುತ್ತಿದ್ದ ಜನಪದ ಹಾಡುಗಳು, ಧಾಟಿಗಳನ್ನು ಕೊಳಲಿನಲ್ಲಿ ನುಡಿಸುತ್ತಿದ್ದರು. ಅದು ಜನಪದ ಸಂಗೀತ. ಪನ್ನಾಲಾಲರಿಗೆ ಅದು ಅಷ್ಟು ಮೆಚ್ಚಿಗೆಯಾಗಲು ಕಾರಣವೇನು? ಇದುವರೆಗೆ ಪನ್ನಾಲಾಲರು ನೋಡಿದ್ದುದು ಸಣ್ಣ ಅಳತೆಯ ಕೊಳಲನ್ನು. ಆದರೆ ಸಂತಾಲರು ನುಡಿಸುತ್ತಿದ್ದುದು ಉದ್ದವಾದ ಕೊಳಲು. ಸಾಮಾನ್ಯವಾಗಿ ಕೊಳಲಿನಿಂದ ಬರುವ ಧ್ವನಿ ಸಿಳ್ಳೆಯಂತೆ. ಬಾಯಿಯಲ್ಲಿ ಸಿಳ್ಳೆ ಊದಿದರೆ ಮೆಲ್ಲಗೆ ಕೇಳಿಸುವ ಸಂಗೀತದ ನಾದ ಕೊಳಲಿನಲ್ಲಿ ನುಡಿಸಿದರೆ ಜೋರಾಗಿ ಕೇಳಿಸುತ್ತದೆ. ಸಂತಾಲರ ಹತ್ತಿರವಿದ್ದ ಉದ್ದವಾದ ಕೊಳಲಿನಲ್ಲಿ ಆ ತರಹ ಧ್ವನಿ ಬರುತ್ತಿರಲಿಲ್ಲ. ಬೇರೆ ತರಹ ಇತ್ತು. ಸಂಗೀತದಲ್ಲಿ ಇದನ್ನು ಮಂದ್ರಸ್ಥಾಯಿ ಅನ್ನುತ್ತಾರೆ. ಈ ಧ್ವನಿಯಿಂದ ಪನ್ನಾಲಾಲರಿಗೆ ಆ ಕೊಳಲುವಾದನ ಇಷ್ಟವಾಯಿತು. ಸ್ವಲ್ಪ ಕಾಲದಲ್ಲೇ ಅವರು ಸಂತಾಲರು ನುಡಿಸುತ್ತಿದ್ದ ಜನಪದ ಸಂಗೀತವನ್ನು ಕಲಿತುಬಿಟ್ಟರು. ಆ ಜನರು ತಾವೇ ತಯಾರಿಸಿದ್ದ ಒಂದು ಹೊಸದಾಗಿ ಮಾಡಿದ ಕೊಳಲನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟರು.

ತಂದೆಯ ಸಾವು

ಸ್ವಲ್ಪ ಕಾಲದಲ್ಲೇ ಪನ್ನಾಲಾಲರು ಕೊಳವೆ ಬಾವಿ ಕಂಪೆನಿಯ ಕೆಲಸವನ್ನು ಬಿಟ್ಟು ಮುದ್ರಣಾಲಯ ಒಂದರಲ್ಲಿ ಕೆಲಸಕ್ಕೆ ಸೇರಿದರು.

ಅದಾದ ಸ್ವಲ್ಪ ಸಮಯದಲ್ಲಿ ಅವರಿಗೆ ಊರಿನಲ್ಲಿ ತಂದೆಗೆ ತುಂಬಾ ಹುಷಾರಿಲ್ಲವೆಂಬ ಸುದ್ದಿ ತಲುಪಿತು. ಮಗನೊಡನೆ ಸ್ವಲ್ಪ ದಿನಗಳನ್ನು ಕಳೆಯಲು ತಂದೆ ಅಕ್ಷಯ ಕುಮಾರ‍್ ಘೋಷ್ ಇಷ್ಟಪಟ್ಟರು. ಪನ್ನಾಲಾಲರು ತಮ್ಮ ಊರಿಗೆ ಹೋದರು. ಅಲ್ಲಿ ತಂದೆಯೊಡನೆ ಕೆಲವು ದಿನಗಳನ್ನು ಕಳೆದರು. ಕೆಲಕಾಲದಲ್ಲೇ ಅಕ್ಷಯ ಕುಮಾರ‍್ ಘೋಷ್ ನಿಧನರಾದರು.

ಮಂದ್ರಸ್ಥಾಯಿಯ ನಾದ

ಪನ್ನಾಲಾಲರು ಮತ್ತೆ ಕಲ್ಕತ್ತಕ್ಕೆ ಬಂದರು. ಈಗ ಅವರಿಗೆ ಕೊಳಲಿನ ಗೀಳು ಹಿಡಿದಿತ್ತು. ಒಂದೇ ಸಮನೆ ಅಭ್ಯಾಸ ಮಾಡುತ್ತಿದ್ದರು. ಜೊತೆಗೆ ಬೇರೆ ಬೇರೆ ಅಳತೆಯ ಕೊಳಲಿನಲ್ಲಿ ಹೇಗೆ ಹೇಗೆ ಧ್ವನಿ, ನಾದ ಬರುತ್ತದೆಂಬ ಸಂಶೋಧನೆಯ ಕುತೂಹಲ ಬೇರೆ.

ಸಂಗೀತವಾದ್ಯಗಳಲ್ಲಿ ಕೊಳಲನ್ನು ಸುಷಿರ ವಾದ್ಯ ಅನ್ನುತ್ತಾರೆ. ಒಟ್ಟು ನಾಲ್ಕು ಬಗೆಯ ವಾದ್ಯಗಳು – ತಂತ್ರೀ, ಸುಷಿರ, ಅವನದ್ಧ ಮತ್ತು ಘನ. ತಂತ್ರೀ ಎಂದರೆ ತಂತಿಗಳು ಇರುವ ಸಂಗೀತ ವಾದ್ಯಗಳು ವೀಣೆ, ಸಿತಾರ‍್, ಗೋಟುವಾದ್ಯ, ಗಿಟಾರ‍್, ಮೆಂಡಲಿನ್ ಮುಂತಾದವು. ಸುಷಿರ ಎಂದರೆ ತೂತು ಉಳ್ಳದ್ದು. ಬಾಯಿಂದ ಬಿಡುವ ಗಾಳಿ ಈ ರಂಧ್ರಗಳ ಮುಖಾಂತರ ಹೊರನುಗ್ಗುವಾಗ ನಮಗೆ ಕೇಳಲು ಹಿತವಾದ ನಾದ. ಅಂತಹ ಸುಷಿರ ವಾದ್ಯಗಳು ಕೊಳಲು, ನಾದಸ್ವರ, ಕ್ಲಾರಿಯೊನೆಟ್ ಮುಂತಾದವು. ಅವನದ್ಧ ಎಂದರೆ ತಾಳವಾದ್ಯಗಳು – ಗೀತ, ವಾದ್ಯ ಮತ್ತು ನೃತ್ಯ. ಇವು ಮೂರರ ಸುಮಧುರ ಸಮ್ಮಿಲನವೇ ಸಂಗೀತ. ಅಂದರೆ ಹಾಡುವಾಗಲಾಗಲೀ, ವಾಧ್ಯ ನುಡಿಸುವುವಾಗವಾಗಲೀ ಒಂದು ಕ್ರಮಬದ್ಧತೆ (ಅಂದರೆ ಗತಿ, ಲಯ ಎಂದು ಸಂಗೀತದಲ್ಲಿ ಹೇಳುತ್ತಾರೆ) ಬರಲು ಈ ತಾಳ ವಾದ್ಯಗಳು. ಮೃದಂಗ, ತಬಲಾ ಬಾಂಜೋ ಇತ್ಯಾದಿ ತಾಳವಾದ್ಯಗಳು. ಘನವಾದ್ಯಗಳೆಂದರೆ ಗಲ್ ಎಂದು ನಾದ ಬರಿಸುವ ಜಾಗಟೆ, ಕೈಯಲ್ಲಿ ಹೊಡೆಯುವ ತಾಳಗಳು. ಹರಿಕಥೆ ಮಾಡುವವರು ಇದನ್ನು ಉಪಯೋಗಿಸುವುದನ್ನು ನೀವು ನೋಡಿದ್ದೀರಲ್ಲವೇ?

ಪನ್ನಾಲಾಲರಿಗೆ  ಉದ್ದವಾದ ಕೊಳಲಿನಿಂದ ಬರುತ್ತಿದ್ದ ನಾದ ಇಷ್ಟವಾಯಿತು ಎಂದು ಹಿಂದೆಯೇ ಹೇಳಿದೆ. ಕಾರಣ ಅದರಲ್ಲಿ ಬರುತ್ತಿದ್ದ ಮಂದ್ರಸ್ಥಾಯಿಯ ನಾದ. ಸಣ್ಣ ಕೊಳಲಿನಲ್ಲಿ ಬರುವುದು ತಾರಸ್ಥಾಯಿ.

ಬೇರೆ ಬೇರೆ ಸ್ಥಾಯಿಯ ಕೊಳಲುಗಳು

ನೀವು ಸಂಗೀತದಲ್ಲಿ ಬರುವ ಸರಿಗಮಪದನಿ ಧ್ವನಿಗಳನ್ನು ಕೇಳಿರಬೇಕು. ಅಭ್ಯಾಸ ಮಾಡುವವರು ಪ್ರಾರಂಭಿಸುವ ಮೊದಲು ಸ ಪ ಸ  ಎಂದು ಹೇಳಿಕೊಳ್ಳುತ್ತಾರೆ. ತಾವು ಹೇಳುವ ಶ್ರುತಿಯನ್ನು ಸರಿಯಾಗಿ ಹಿಡಿಯುವ ರೀತಿ ಅದು. ಸ ಪ ಸ ದಲ್ಲಿ ಮೊದಲ ಸ ಧ್ವನಿ ತಗ್ಗಿಸಿ ಹಾಡುವುದು; ಎರಡನೆಯ ಸ ಧ್ವನಿ ಏರಿಸಿ ಹಾಡುವುದು. ಮೊದಲ ಸ ಹಾಡಿ ಪ ಯಿಂದ ಮೇಲಿನ ಸ ಹಾಡುವ ಧ್ವನಿ ಅಥವಾ ಸ್ಥಾಯಿಗೆ ಮಧ್ಯಮ ಸ್ಥಾಯಿ ಎಂದು ಹೆಸರು. ಮೊದಲ ಸ ಅಥವಾ ತಗ್ಗು ಸ್ಥಾಯಿಯ ಸ ಗಿಂತ ತಗ್ಗು ಧ್ವನಿಯ ನಿ ದ ಪ … ಸ್ವರಗಳಲ್ಲಿ ಹಾಡುವುದಕ್ಕೆ ಮಂದ್ರಸ್ಥಾಯಿ ಎಂದು ಹೆಸರು.  ಧ್ವನಿ ಏರಿಸಿ ಹಾಡುವ ಮೇಲಿನ ಸ ಯಿಂದ ರಿ ಗ ಮ ಪ ಸ್ವರಗಳಲ್ಲಿ ಹಾಡುವುದಕ್ಕೆ ತಾರಸ್ಥಾಯಿ ಎಂದು ಹೆಸರು. ಬೇರೆ ಬೇರೆ ಕೊಳಲಿನಲ್ಲಿ ಬೇರೆ ಬೇರೆ ಸ್ಥಾಯಿಯಲ್ಲಿ ಬರುವಂತೆ ನುಡಿಸುವುದರಲ್ಲಿ ಪನ್ನಾಲಾಲರಿಗೆ ಆಸಕ್ತಿ ಮತ್ತು ಕುತೂಹಲ.

ಈಗ ಪನ್ನಾಲಾಲರಿಗೆ ಕೆಲವು ಸಂಗೀತಗಾರರ ಪರಿಚಯವಾಗಿತ್ತು. ಅವರುಗಳು ಆಗಾಗ ಸೇರುತ್ತಿದ್ದರು. ಸಂಗೀತ ಸಾಧನೆ ಮಾಡುತ್ತಿದ್ದರು. ಬೇರೆ ಗಾಯಕರು ಹಾಡುತ್ತಿದ್ದರೆ ಅವರು ಕೊಳಲು ನುಡಿಸುವರು. ತಮ್ಮ ಸಂಗೀತದ ಧ್ವನಿಮುದ್ರಣವನ್ನು ಮಾಡಿಕೊಂಡರು.

ಚಲನಚಿತ್ರ ರಂಗ

ಈ ವೇಳೆಗೆ ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕರಾದ ಎಸ್.ಡಿ. ಬರ್ಮನ್ ಮತ್ತು ಅನಿಲ್ ವಿಶ್ವಾಸರು ಇವರ ಸ್ನೇಹಿತರಾದರು. ಅವರಿಗೆ ಚಲನಚಿತ್ರ ಸಂಗೀತದಲ್ಲಿ ಪನ್ನಾಲಾಲರ ಕೊಳಲುವಾದನ ಇದ್ದರೆ ತುಂಬಾ ಚೆನ್ನಾಗಿರುತ್ತದೆ ಅನಿಸಿತು. ಹಾಗೆ ನುಡಿಸಲು ಘೋಷರು ಒಪ್ಪಿದರು. ಅವರ ಕೊಳಲಿನ ವಾದನದ ಮೂಲಕ ಸಾಮಾನ್ಯ ಜನರೂ ಅವರ ಹೆಸರನ್ನು ತಿಳಿಯುವಂತಾಯಿತು.

೧೯೩೫ನೆಯ ಇಸವಿಯಲ್ಲಿ ಅಖಿಲ ಬಂಗಾಳ ಸಂಗೀತ ಸಮ್ಮೇಳನ ನಡೆಯಿತು. ಸಂಗೀತ ಸ್ಪರ್ಧೆ ಒಂದರಲ್ಲಿ ಪನ್ನಾಲಾಲರು ಭಾಗವಹಿಸಿದರು. ಅವರಿಗೆ ಮೊದಲ ಬಹುಮಾನ ಸಿಕ್ಕಿತು.

ನ್ಯೂ ಥಿಯೇಟರ‍್ಸ್ ಆಫ್ ಕಲ್ಕತ್ತ ಎನ್ನುವುದು ಕಲ್ಕತ್ತದ ಚಲನಚಿತ್ರ ಸಂಸ್ಥೆ. ಪನ್ನಾಲಾಲರು ಅಲ್ಲಿ ಕೆಲಸಕ್ಕೆ ಸೇರಿದರು. ಸಂಬಳ ತಿಂಗಳಿಗೆ ನೂರು ರೂಪಾಯಿ. ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದಾಗಿನಿಂದ ಪನ್ನಾಲಾಲರಿಗೆ ಸುಸಂಬದ್ಧವಾದ ರೀತಿಯಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ತುಂಬಾ ಆಸೆಯಾಗಿತ್ತು. ಅವರು ಸೇರಿದ್ದ ಚಲನಚಿತ್ರ ಸಂಸ್ಥೆಯಲ್ಲಿ ಖುಷೀ ಮಹಮ್ಮದರೆಂಬುವರು ಉತ್ತಮ ಹಾರ್ಮೋನಿಯಂ ವಾದಕರು ’ನಾನು ನಿಮ್ಮ ಶಿಷ್ಯನಾಗಬೇಕ” ಎಂದು ಘೋಷರು ಕೇಳಿದಾಗ ಅವರು ತತ್ ಕ್ಷಣ ಒಪ್ಪಿದರು.

’ಕಲ್ಕತ್ತೆಗೆ ಆಗಾಗ ಪ್ರಸಿದ್ಧ ಸಂಗೀತ ವಿದ್ವಾಂಸರು ಬಂದು ಸಂಗೀತ ಕಛೇರಿ ನಡೆಸುತ್ತಿದ್ದರು. ಇಂತಹ ಸಂಗೀತ ಕೇಳುವ ಸದವಕಾಶವನ್ನು ಪನ್ನಾಲಾಲರು ಎಂದೂ ಬಿಡುತ್ತಿರಲಿಲ್ಲ. ಆ ವಿದ್ವಾಂಸರ ಸಂಗೀತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ತವಕ ಪಡುತ್ತಿದ್ದರು. ಮನೆಗೆ ಬಂದು ಹಾಗೆಯೇ ನುಡಿಸಲು ಪ್ರಯತ್ನಪಡುತ್ತಿದ್ದರು.

ಎಡಕ್ಕೆ : ಸಂತಾಲರು ಕೊಳಲನ್ನು ಕೊಟ್ಟರು ಬಲಗಡೆ : ನಿಮ್ಮ ಬಳಿ ಕಲಿಯುವುದು ತುಂಬಾ ಇದೆ

ಪ್ರಯೋಗಧೀರರು

ಹೀಗೆ ೧೯೩೬ ರಿಂದ ಪನ್ನಾಲಾಲರು ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕೊಳಲು ನುಡಿಸಲು ಪ್ರಾರಂಭ ಮಾಡಿದರು. ಕೊಳಲಿನ ತಾಂತ್ರಿಕ ಜ್ಞಾನದ ಬಗ್ಗೆ ಪನ್ನಾಲಾಲರು ಅಭ್ಯಾಸ ಮಾಡುತ್ತಲೇ ಇದ್ದರು. ಸಂಗೀತದಲ್ಲಿ  ಗಾಯನಕ್ಕೆ ಪ್ರತ್ಯೇಕ ಶೈಲಿ, ತಂತೀವಾದ್ಯಗಳಿಗೆ ಒಂದು ಪ್ರತ್ಯೇಕ ಶೈಲಿ ಇದೆ. ಆದರೆ ಕೊಳಲಿಗೇ ಆದ ಪ್ರತ್ಯೇಕ ಶೈಲಿ ಇಲ್ಲ. ಅದರಲ್ಲಿ ಬಹುವಾಗಿ ಗಾಯನ ಶೈಲಿಯ ಪ್ರಬಂಧಗಳನ್ನೇ ನುಡಿಸಬೇಕು. ಆದರೆ ರೂಢಿಯಲ್ಲಿದ್ದ ಚಿಕ್ಕ ಅಳತೆಯ ಕೊಳಲಿನಲ್ಲಿ ಹೆಚ್ಚು ಸ್ಥಾಯಿಯ ಧ್ವನಿಯೇ ಬರುವುದು. ಮನುಷ್ಯ ಶಾರೀರದ ಮಂದ್ರಸ್ಥಾಯಿ ಬರುವುದಿಲ್ಲ. ಗಾಯನ ಶೈಲಿಯ ಪ್ರಬಂಧಗಳು ಮನುಷ್ಯನ ಧ್ವನಿಗೆ ಅನುಕೂಲವಾಗಿ ರಚಿಸಲ್ಪಟ್ಟಿರುವುದು. ಅವುಗಳನ್ನು ತಾರಸ್ಥಾಯಿ ಸಿಲ್ಳೆಧ್ವನಿಯ ಕೊರಳಿನಲ್ಲಿ ನುಡಿಸುವುದು ಅಸಹಜ.

ಪನ್ನಾಲಾಲರು ಅನೇಕ ಪ್ರಯೋಗಗಳನ್ನು ಮಾಡಿ ಹೆಚ್ಚು ದಪ್ಪನಾದ, ಮೊದಲಿನ ಕೊಳಲಿಗಿಂತ ಉದ್ದವಾದ ಎರಡು ಮೂರು ಕೊಳಲುಗಳನ್ನು ತಮ್ಮ ಬಳಕೆಗೆ ತಂದರು. ಅವನ್ನೇ ವೇದಿಕೆಯ ಮೇಲೆ ನುಡಿಸುವಾಗಲೂ ಉಪಯೋಗಿಸಿದರು.

ಕೊಳಲಿನಲ್ಲಿ ಹೀಗೆ ತಾಂತ್ರಿಕ ಅಭಿವೃದ್ಧಿಯನ್ನು ಸಾಧಿಸಿದರು. ಹಾಗೆಯೇ ಸಂಗೀತದ ಪ್ರಾಮಾಣಿಕ ಕಲಾವಿದರೂ ಆದರು. ಅಂದರೆ ದಿನವೂ ಅಭ್ಯಾಸ ಮಾಡುತ್ತಿದ್ದರು. ವಿದ್ವಾಂಸರ ಸಂಗೀತ ಕಛೇರಿಗಳನ್ನು ತಪ್ಪದೆ ಕೇಳುತ್ತಿದ್ದರು. ಏನಾದರೂ ತಪ್ಪು ಆದರೆ ಮತ್ತೆ ನುಡಿಸಿ ನುಡಿಸಿ ತಮ್ಮ ಮನೋಧರ್ಮದಂತೆಯೇ ನುಡಿಸುವುದನ್ನೂ ಸಾಧಿಸಿದರು. ನಮ್ಮದು ಮನೋಧರ್ಮ ಸಂಗೀತ. ಅಂದರೆ ಪಾಠಕ್ರಮದಂತೆ ಸಂಗೀತ ಕಲಿತು, ಬೇರೆ ವಿದ್ವಾಂಸರ ಸಂಗೀತವನ್ನೂ ಕೇಳಬೇಕು. ಆನಂತರ ನಾವೇ ಸಂಗೀತ ಸಾಧನೆ ಮಾಡಿ ನಮ್ಮ ಮನಸ್ಸಿನ ಕಲ್ಪನೆಯಂತೆ ಹಾಡುವುದು.

ವಿದೇಶ ಪ್ರವಾಸ

ಇಷ್ಟು ಹೊತ್ತಿಗೆ ಪನ್ನಾಲಾಲರು ಪ್ರಸಿದ್ಧರಾಗಿದ್ದರು. ಕಲಾಪ್ರೇಮಿಗಳಾಗಿದ್ದ ದೊಡ್ಡ ಮನುಷ್ಯರೂ, ಸಾಮಾನ್ಯರೂ ಅವರನ್ನು ಹೊಗಳುತ್ತಿದ್ದರು. ಸರೈಕಲಾ ಅನ್ನುವ ಒಂದು ಸಣ್ಣ ರಾಜ್ಯದ ರಾಜಕುಮಾರ ಒಬ್ಬ ಕಲಾ ಪ್ರೇಮಿ. ಅವರದೊಂದು ನೃತ್ಯಮಂಡಲಿ. ಅವರು ತಮ್ಮ ನೃತ್ಯಮಂಡಲಿಯನ್ನು ಯೂರೋಪ್ ಯಾತ್ರೆಗೆ ಕರೆದುಕೊಂಡು ಹೊರಟಾಗ ಪನ್ನಾಲಾಲ ಘೋಷರನ್ನೂ ಕರೆದರು. ಘೋಷರು ಅವರ ಜೊತೆ ಹೊರಟರು. ಈ ಪ್ರವಾಸ ಆರು ತಿಂಗಳು ನಡೆಯಿತು. ಈ ಪ್ರವಾಸದಿಂದ ಅವರಿಗೆ ತುಂಬಾ ಲಾಭವಾಯಿತು. ಅವರ ಸಂಶೋಧಕ ಬುದ್ಧಿಗೆ ಇದರಿಂದ ಪ್ರಯೋಜನವಾಯಿತು.

ಪ್ರವಾಸ ಮುಗಿಸಿಕೊಂಡು ಸ್ವದೇಶಕ್ಕೆ ವಾಪಸಾದಾಗ ಅವರ ಸಂಗೀತದ ಗುರುಗಳಾದ ಖುಷೀ ಮಹಮ್ಮದರು ಕಾಲವಶವಾಗಿದ್ದರು. ಆದ್ದರಿಂದ ಬೇರೆ ಗುರುಗಳನ್ನು ಹುಡುಕಬೇಕಾಯಿತು. ಗಿರಿಜಾಶಂಕರ ಚಕ್ರವರ್ತಿ ಒಬ್ಬ ಶ್ರೇಷ್ಠ ಸಂಗೀತಗಾರರು. ಪನ್ನಾಲಾಲರು ಇವರಲ್ಲಿ ತಮ್ಮ ಸಂಗೀತ ಶಿಕ್ಷಣವನ್ನು ಮುಂದುವರಿಸಿದರು.

ವಿವಾಹ

ಪನ್ನಾಲಾಲರಿಗೆ ಹದಿನಾರು ವರ್ಷ ವಯಸ್ಸಾಗಿದ್ದಾಗ ಪರುಲ ಎಂಬ ಹುಡುಗಿಯೊಡನೆ ವಿವಾಹವಾಗಿತ್ತು. ಆಕೆಗೆ ಆಗ ಒಂಬತ್ತು ವರ್ಷ. ಪರುಲ್ ಗೆ ಒಳ್ಳೆ ಶಾರೀರ ಚೆನ್ನಾಗಿ ಹಾಡುವರು. ಚಲನಚಿತ್ರದಲ್ಲಿ ಜನಪ್ರಿಯ ಹಿನ್ನೆಲೆಗಾಯಕಿಯಾಗಿದ್ದರು. ಭಾರತೀಯ ಚಲನಚಿತ್ರದ ಮೊದಲ ಹಿನ್ನಲೆ ಗಾಯಕಿ ಶ್ರೀಮತಿ ಪರುಲ್. ಈ ದಂಪತಿಗಳಿಗೆ ಏಕೈಕ ಪುತ್ರಿ ಶಾಂತಿಸುಧಾ. ಈಕೆಯ ಪತಿ ಈಗ ಪ್ರಖ್ಯಾತ ಕೊಳಲು ವಾದಕರಾದ ದೇವೇಂದ್ರ ಮುರುಡೇಶ್ವರ.

ಸಂಗೀತ ನಿರ್ದೇಶಕರು

ಪನ್ನಾಲಾಲರಿಗೆ ದೇಶದ ಮೂಲೆ ಮೂಲೆಗಳಿಂದ ಕೊಳಲು ವಾದನಕ್ಕಾಗಿ ಆಹ್ವಾನಗಳು ಬರತೊಡಗಿದವು. ಅನೇಕ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಲು ಕರೆಗಳು ಬರತೊಡಗಿದವು. ಏಕೆಂದರೆ ಅವರ ಕೊಳಲು ವಾದನ ಉತ್ತಮ ನಾದ ಹೊಂದಿತ್ತು. ಉಪಯೋಗಿಸುತ್ತಿದ್ದ ಕೊಳಲು ವಿಶಿಷ್ಟ ಬಗೆಯದಾಗಿತ್ತು. ೧೯೪೦ರಲ್ಲಿ ಅವರು ಕಲ್ಕತ್ತ ಬಿಟ್ಟು ಮುಂಬಯಿಗೆ ಬಂದರು, ಕಲ್ಕತ್ತದ ಚಲನಚಿತ್ರ ಸಂಸ್ಥೆಯಲ್ಲಿ ಕೆಲಸಮಾಡಿದ್ದರೆಂದು ಹಿಂದೆಯೇ ಹೇಳಿದೆ. ಆದ್ದರಿಂದ ಇವರಿಗೆ ಚಿತ್ರ ಸಂಗೀತದ ಅನುಭವ ಚೆನ್ನಾಗಿ ಇತ್ತು.  ಈ ಅನುಭವವನ್ನು ಮುಂಬಯಿಯಲ್ಲಿ ಇನ್ನೂ ಹೆಚ್ಚಿಸಿಕೊಂಡರು. ಸ್ವತಃ ಸಂಗೀತ ನಿರ್ದೇಶಕರಾಗುವ ಅವಕಾಶ ಸಿಕ್ಕಿತು. ಇದರಿಂದ ಹಣದ ಸಂಪಾದನೆಯ ಜೊತೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡರು. ಸ್ವಲ್ಪ ದಿನಗಳಲ್ಲೇ ಇವರ ಕೊಳಲುವಾದನದ ಅಭ್ಯಾಸಕ್ಕೆ ಇದರಿಂದ ತೊಂದರೆಯಾಗತೊಡಗಿತ್ತು. ಆಗ ಪನ್ನಾಲಾಲರು ಚಲನಚಿತ್ರದ ಕೆಲಸವನ್ನು ಸ್ವಲ್ಪ ದಿನಗಳು ಬಿಟ್ಟುಬಿಟ್ಟರು. ತಮ್ಮ ಸಂಗೀತಾಭ್ಯಾಸಕ್ಕೆ ಪೂರ್ಣ ಅವಕಾಶ ಮಾಡಿಕೊಂಡರು. ಪ್ರಸಿದ್ಧ ಸಂಗೀತ ವಿದ್ವಾಂಸರನ್ನು ತಮ್ಮ ಮನೆಗೆ ಕರೆದು ಅವರ ಸಂಗೀತವನ್ನು ಕೇಳುತ್ತಿದ್ದರು. ತಮ್ಮ ಸಂಗೀತವನ್ನು ಅವರಿಗೆ ಕೇಳಿಸುತ್ತಿದ್ದರು. ಇದರಿಂದ ಅವರಿಗೆ ಹೊಸ ಹೊಸ ವಿಷಯಗಳು ತಿಳಿಯುವಂತಾಯಿತು. ಇಷ್ಟಾದರೂ ಅವರಿಗೆ ನನಗೆ ಸಂಗೀತದಲ್ಲಿ ಒಬ್ಬ ಒಳ್ಳೆಯ ಗುರು ಸಿಗಬಾರದೇ? ನನ್ನ ಕಲೆ ಮೇಲೆ ಏರಲು ಸಾಧ್ಯವಾಗುವುದೇ? ಎಂಬ ಯೋಚನೆ ಬರುತ್ತಿತ್ತು.

ಗುರು ದೊರೆತರು

ಅದೃಷ್ಟವಶಾತ್ ಪನ್ನಾಲಾಲರಿಗೆ ೧೯೪೭ನೇ ಇಸವಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಸಂಗೀತ ಕಲಾಕಾರರಾದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಸಾಹೇಬರ ಭೇಟಿಯಾಯಿತು. ಅವರು ಪ್ರಖ್ಯಾತ ಸಿತಾರ‍್ ವಾದಕ ರವಿಶಂಕರರಿಗೂ ಗುರುಗಳು. ಖಾನ್ ಸಾಹೇಬರ ಕಛೇರಿ ಮುಗಿದಿತ್ತು. ಸೇರಿದ್ದ ಸಂಗೀತ ರಸಿಕರು ಒಬ್ಬೊಬ್ಬರಾಗಿ ಸಭಾಂಗಣದಿಂದ ಹೊರ ಹೋಗುತ್ತಿದ್ದರು. ಖಾನ್ ಸಾಹೇಬರು ನಿಂತಿದ್ದರು. ಸಭಿಕರಲ್ಲಿ ಒಬ್ಬರು ಅವರ ಕಡೆಗೇ ಬಂದರು. ಬಂದವರೇ ಖಾನ್ ಸಾಹೇಬರ ಕಾಲುಗಳನ್ನು ಬಿಗಿಯಾಗಿ ಹಿಡಿದು ಬಿಟ್ಟರು. ಖಾನ್ ಸಾಹೇಬರು ಅವಾಕ್ಕಾಗಿ ನೋಡಿದರು. ಒಳ್ಳೆ ಪೈಲ್ವಾನನಂತಿದ್ದಾನೆ. ತಮ್ಮ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಬಿಟ್ಟಿದ್ದಾನೆ. ಖಾನ್ ಸಾಹೇಬರು ಬಗ್ಗಿ ಆತನ ಬೆನ್ನು ಮುಟ್ಟಿ,

”ಏಳು ತಮ್ಮಾ, ಏಳು’ ಎಂದರು

’ಇಲ್ಲಾ ಉಸ್ತಾದರೇ, ನೀವು ನನಗೊಂದು ಭಾಷೆ ಕೊಡಬೇಕು. ಆಮೇಲೇ ಏಳುವುದು”

’ಏನು ? ಏನದು ಭಾಷೆ”

’ನೀವು ನನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಬೇಕು ’

”ಆಗಲಿ ಮೊದಲು ನೀನು ಕಾಲುಬಿಟ್ಟು ಏಳು. ನೀನು ಯಾರು ಎಂದು ಹೇಳು.’

ಪೈಲ್ವಾನ್ ಎದ್ದರು. ಅವರ ಮುಖ ಹಿಗ್ಗಿನಿಂದ ಅಗಲವಾಗಿತ್ತು.

’ನನ್ನನ್ನು ಪನ್ನಾಲಾಲ್ ಘೋಷ್”ಎಂದು ಕರೆಯುವರು.

ಖಾನ್ ಸಾಹೇಬರು ಸಂತೋಷ, ಆಶ್ಚರ್ಯಗಳಿಂದ ಘೋಷರನ್ನೇ ನೋಡಿದರು.

’ಬಾನ್ಸುರಿ ವಾದಕ ಪನ್ನಾಲಾಲ್ ಘೋಷ್ ನೀವೇ ಏನು”

”ಹೌದು ಉಸ್ತಾದರೆ’

ಘೋಷರ ಕೊಳಲುವಾದನವನ್ನು ಕೇಳಿ ಮೆಚ್ಚಿದ್ದರು ಖಾನ್ ಸಾಹೇಬರು. ಆದರೆ ಅವರನ್ನು ನೋಡಿರಲಿಲ್ಲ. ಈ ದಿನ ನೋಡಿ ಸಂತೋಷಪಟ್ಟರು.”ಅಷ್ಟು ಒಳ್ಳೆಯ  ಸಂಗೀತಗಾರ, ಕೊಳಲುವಾದಕ. ನನ್ನ ಬಳಿ ಕಲಿಯುವುದು ಇನ್ನೂ ಏನಿದೆ?’ ಎಂದು ಕೇಳಿದರು.

’ಇದೆ, ತುಂಬಾ ಇದೆ’ ಎಂದರು ಘೋಷರು.

’ಸರಿ, ನಿಮ್ಮ ಖುಷ”

’ಘೋಷರು ಖಾನ್ ಸಾಹೇಬರ ಬಳಿ ಆರು ತಿಂಗಳ ಕಾಲ ಸಂಗೀತಾಭ್ಯಾಸ ನಡೆಸಿದರು. ಆನಂತರವೂ ಸಮಯ ಸಿಕ್ಕಾಗಲೆಲ್ಲಾ ಉಸ್ತಾದರ ಬಳಿ ಹೋಗಿ ಕಲಿಯುತ್ತಿದ್ದರು. ತಮ್ಮ ಕೊಳಲು ವಾದನದ ಕಛೇರಿಗಳಲ್ಲಿ ಹೊಸ ಹೊಸ ರಚನೆಗಳನ್ನು ನುಡಿಸುತ್ತಿದ್ದರು.

ಉಸ್ತಾದ್ ಅಲ್ಲಾವುದ್ದೀನ್ ಖಾನರು ತಮ್ಮ ಶಿಷ್ಯರಿಂದ ಹಣ ತೆಗೆದುಕೊಳ್ಳುತ್ತಲೇ ಇರಲಿಲ್ಲ. ಶಿಷ್ಯರಿಗೆ ತೊಂದರೆಯಾಗಬಾರದೆಂದು ಅವರು ತಾವೇ ಪೇಟೆಗೆ ಹೋಗಿ ತರಕಾರಿಗಳನ್ನು ಕೊಂಡು ತರುತ್ತಿದ್ದರು. ಅದೂ ಶಿಷ್ಯರಿಗಾಗಿ. ಇದು ಪನ್ನಾಲಾಲರಿಗೆ ತುಂಬಾ ನೋವನ್ನು ಉಂಟುಮಾಡುತ್ತಿತ್ತು. ಅವರಿಗೆ ಗುರುಸೇವೆ ಮಾಡಬೇಕೆಂದು ಆಸೆ. ಉಸ್ತಾದರು ಗುರುಸೇವೆ ಎಂದಾಗಲಿ ಗುರುದಕ್ಷಿಣೆ ಎಂದಾಗಲಿ ಕೇಳುತ್ತಿದ್ದುದು ಏನು ಗೊತ್ತೇ? ’ನಾನು ಹೇಳಿಕೊಟ್ಟ ವಿದ್ಯೆಗೆ ಪ್ರತಿಯಾಗಿ ನೀವು ಶಿಷ್ಯರು ಸಂಗೀತದಲ್ಲಿ ಶಾಶ್ವತವಾದ ಭಕ್ತಿ ಶ್ರದ್ದೆಗಳನ್ನು ಇಟ್ಟುಕೊಳ್ಳಿ’ ಎಂತಹ ಆದರ್ಶ ಗುರು!

ಮಹಾತ್ಮ ಗಾಂಧೀಯವರ ಸನ್ನಿಧಿಯಲ್ಲಿ

ಇದೇ ಸಮಯದಲ್ಲಿ ಪನ್ನಾಲಾಲರಿಗೆ ದೆಹಲಿ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರ ಕೆಲಸ ಸಿಕ್ಕಿತು. ಘೋಷರ ಬಾನ್ಸುರೀ ವಾದನದ ನಾದ ವೈಖರಿ ದೇಶದಲ್ಲೆಲ್ಲ ಜನರಿಗೆ ತಲುಪಲು ಸಾಧ್ಯವಾಯಿತು. ಪನ್ನಾಲಾಲ್ ಘೋಷರು ಅಸಂಖ್ಯಾತ ವಾದ್ಯ ಸಂಗೀತ ರಚನೆಗಳನ್ನು ಆಕಾಶವಾಣಿಯಲ್ಲಿ ಬಿತ್ತರಿಸಿದ್ದಾರೆ.

ಮಹಾತ್ಮ ಮೆಚ್ಚಿಕೆ

ಪನ್ನಾಲಾಲರ ಜೀವನದಲ್ಲಿ ಅವರು ಮತ್ತು ಅವರ ಪತ್ನಿ ಆಗಾಗ್ಗೆ ಮೆಲುಕು ಹಾಕುವ ಘಟನೆಯೊಂದಿತು. ಅದು ಭಾರತ ಬಿಟ್ಟು ಹೊರಡಿ ಚಳುವಳಿಯ ಕಾಲದಲ್ಲಿ ಮಹಾತ್ಮಗಾಂಧಿಯವರಿಗೆ ಸಂಬಂಧಿಸಿದ್ದು. ಮಹಾತ್ಮಾಜೀ ಸೆರೆಯಲ್ಲಿದ್ದರು. ಅಸ್ವಸ್ಥತೆಯ ಕಾರಣದಿಂದ ಮುಂಬಯಿಯ ಜುಹು ಪ್ರದೇಶದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗ ಗಾಯಕರು, ವಾದಕರು ಅವರ ಬಳಿ ಸ್ವಲ್ಪ ಹೊತ್ತು ಹಾಡುತ್ತಿದ್ದರು. ನುಡಿಸುತ್ತಿದ್ದರು. ಪನ್ನಾಲಾಲರನ್ನೂ ಒಂದು ದಿವಸ ಆಹ್ವಾನಿಸಲಾಯಿತು. ಎಲ್ಲ ಸಂಗೀತಗಾರರಂತೆ ಅವರಿಗೂ ಹತ್ತು ನಿಮಿಷಗಳ ಅವಕಾಶ. ಪನ್ನಾಲಾಲರಿಗೆ ಏನು ನುಡಿಸುವುದೆಂದು ತೋಚದೆ ನಡುಕ ಹುಟ್ಟಿತು. ಆದರೆ ತಕ್ಷಣವೇ ಆತ್ಮವಿಶ್ವಾಸ ಸಹಾಯಕ್ಕೆ ಬಂತು. ನುಡಿಸತೊಡಗಿದರು. ನಲವತ್ತು ನಿಮಿಷಗಳ ಇಂಪಾದ ವಾದನ. ಮಹಾತ್ಮಾ ಗಾಂಧಿ ಅದನ್ನು ಮನಸ್ಸಿಟ್ಟು ಕೇಳಿದರು. ಅನಂತರ ಪನ್ನಾಲಾಲರು ಅವರಿಗೆ ನಮಸ್ಕರಿಸಿದರು. ಗಾಂಧೀಜಿ ಮೆಲುನಕ್ಕು ಕಾಗದ ಮೇಲೆ ಹೀಗೆ ಬರೆದು ತೋರಿಸಿದರು – ’ಬಾನ್ಸುರೀ ತುಂಬಾ ಚೆನ್ನಾಗಿ ನುಡಿಸಿದೆ’

ಘೋಷರು ತಮ್ಮದಾಗಿ ಇಟ್ಟುಕೊಂಡಿದ್ದ ಅಮೂಲ್ಯ ವಸ್ತುಗಳಲ್ಲಿ ಈ ಕಾಗದವೂ ಒಂದು.

ನುಡಿಸುವ ಚೇತನ ಇನ್ನಿಲ್ಲ

ಕೊಳಲಿನ ಮೇಲೆ ಮಾಂತ್ರಿಕ ಸ್ಪರ್ಶವಿದ್ದ ಪನ್ನಾಲಾಲರದು ಅಕಾಲ ಮರಣ. ಕೇವಲ ೪೯ನೆಯ ವಯಸ್ಸಿನಲ್ಲಿ ೧೯೬೦ ಏಪ್ರಿಲ್ ೩೦ರಂದು ಹೃದಯಾಘಾತದಿಂದ ನಿಧನರಾದರು.

ಘೋಷರ ಹಠಾತ್ ಮರಣ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳೆಲ್ಲರನ್ನೂ ದಿಗ್ಭ್ರಮೆಗೊಳಿಸಿತು. ಉತ್ತರ ಪ್ರದೇಶದ ಹಾಥರಾಸ್ ನಿಂದ ಹೊರಡುವ ಸಂಗೀತ್ ಎನ್ನುವ ಒಂದು ನಿಯತಕಾಲಿಕ ಸಂಗೀತಕ್ಕೆ ಮೀಸಲಾಗಿದ್ದು, ಅದು ಒಂದು ಲೇಖನವನ್ನು ಪ್ರಕಟಿಸಿ ಸಂಗೀತ ಸಾಮ್ರಾಟನಿಗೆ ಗೌರವ ತೋರಿಸಿತು.

ಆಕಾಶವಾಣಿ ವಾದ್ಯವೃಂಧ

ನಿಧನರಾದಾಗ  ಘೋಷರು ಆಕಾಶವಾಣಿಯ ದೆಹಲಿ ಕೇಂದ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಪ್ರತಿ ಬುಧವಾರ ರಾತ್ರಿ ಪನ್ನಾಲಾಲ್ ಘೋಷರು ತಾವೇ ರಚಿಸಿದ ವಾದ್ಯವೃಂದ ಕಾರ್ಯಕ್ರಮವನ್ನು ಶ್ರೋತೃಗಳಿಗೆ ಕೇಳಿಸುತ್ತಿದ್ದರು. ಇಂತಹ ವಾದ್ಯವೃಂದದ ಅನೇಕ ರಚನೆಗಳು ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕ ಪ್ರಸಾರವಾಗುತ್ತಿದ್ದವು.

ಅನೇಕ ಸಂಗೀತ ಸಮ್ಮೇಳನಗಳಲ್ಲಿ ಅಲ್ಲದೆ ವಿದೇಶಗಳಲ್ಲೂ ಅವರು ಕೊಳಲುವಾದನವನ್ನು ನಡೆಸಿ ಸಾಕಷ್ಟು ಪ್ರಸಿದ್ಧಿಯಾಗಿದ್ದರು. ಇವರ ಕಾರ್ಯಕ್ರಮದಲ್ಲಿ ತಬಲಾ ಸಾಥಿಯಾಗಿ ಇವರ ತಮ್ಮ ನಿಖಿಲಘೋಷ್ ಇರುತ್ತಿದ್ದರು.

ತಾಂತ್ರಿಕ ಜ್ಞಾನ

ಕೊಳಲಿನಲ್ಲಿ ಸುಶ್ರಾವ್ಯವನ್ನು ಹೆಚ್ಚಿಸಲು ಅವರು ಅನೇಕ ಪ್ರಯೋಗಗಳನ್ನು ಮಾಡಿದ್ದರಲ್ಲವೇ? ಹಾಗೆ ಮಾಡಿದಾಗ ಅವರಿಗೆ ಅನುಭವವಾದ ವಿಷಯಗಳೂ, ಜರ್ಮನ್ ದೇಶದ ಸುಪ್ರಸಿದ್ಧ ಸುಷಿರವಾದ್ಯ ವಾದಕ ಥಿಯೋಬೋಲ್ಡ್ ಭೋಂ ಅವರ ತತ್ವಗಳೂ ಒಂದೇ ಆಗಿದ್ದವು.

ಭಾರತದಲ್ಲಿ ಬಹುಕಾಲದಿಂದಲೂ ಬಳಕೆಯಲ್ಲಿರುವ ಕೊಳಲು ಸುಮಾರು ಹದಿನೆಂಟರಿಂದ ಇಪ್ಪತ್ತು ಅಂಗುಲ ಉದ್ದ ಉಳ್ಳದ್ದು. ಅದರ ನಾದ ಮೋಹಕ. ಇಂತಹ ಕೊಳಲಿನ ಆಕಾರವನ್ನು ಹೆಚ್ಚಿಸಿ ಆ ವಾದನ ಕಲೆಗೆ ಇನ್ನೊಂದು ವಿಶೇಷ ರುಚಿಯನ್ನು ಕೊಟ್ಟ ಸಾಧನೆ ಪನ್ನಾಲಾಲ್ ಘೋಷರದು. ಆಕಾರದಲ್ಲಿ ಇನ್ನೂ ದಪ್ಪ, ಉದ್ದದಲ್ಲಿ ಇನ್ನು ಎಂಟು ಹತ್ತು ಅಂಗುಲಗಳು ಹೆಚ್ಚಾಗಿರುವ ಕೊಳಲನ್ನು ರೂಢಿಗೆ ತಂದ ಕೀರ್ತಿ ಇವರಿಗೇ ಸೇರಿದ್ದು.  ಕೊಳಲನ್ನು ಅಂತಹ ಆಕಾರಕ್ಕೆ ತಂದಾಗ ಕೊಳಲಿನ ನಾದ ತಗ್ಗು ಅಥವಾ ಮಂದ್ರಸ್ಥಾಯಿಯಾಯಿತು. ಮನುಷ್ಯರ ಧ್ವನಿಗೆ  ಹತ್ತಿರವಾಯಿತು. ಬೇರೆ ಕೊಳಲಿಗೂ ಇದಕ್ಕೂ ನುಡಿಸುವುದರಲ್ಲಿ, ವಾದ್ಯವಿಧಾನದಲ್ಲಿ ವ್ಯತ್ಯಾಸವೇನೂ ಇಲ್ಲ. ಆದರೆ ವಾದ್ಯ ತುಂಬ ದೊಡ್ಡದಾಯಿತು. ಅದಕ್ಕಾಗಿ ದೂರದೂರವಿರುವ ರಂಧ್ರಗಳಲ್ಲಿ ಬೆರಳುಗಳನ್ನು  ಹಿಗ್ಗಿಸಿ ಹಿಡಿದು ನುಡಿಸುವುದು ತುಂಬಾ ಕಷ್ಟ. ತುಂಬಾ ಶ್ರಮ. ಇದಕ್ಕಾಗಿ ವಾದಕನಿಗೆ ಸಾಧನೆಯೊಂದೇ ಸಾಲದು, ಜೊತೆಗೆ ದೇಹದಾರ್ಢ್ಯವೂ ಇರಬೇಕು. ಪನ್ನಾಲಾಲರು ಜಟ್ಟಿಯಾಗಿದ್ದುದು ಸಹಾಯವೂ ಆಯಿತು. ಅಲ್ಲದೆ ಪನ್ನಾಲಾಲರು ತಮ್ಮ ಕೈಯಿನ ಬೆರಳುಗಳಿಗೆ ಶಸ್ತ್ರಕ್ರಿಯೆ ಮಾಡಿಸಿಕೊಂಡಿದ್ದರು. ಉದ್ದವಾದ ಕೊಳಲಿನಲ್ಲಿ ದೂರದೂರದಲ್ಲಿ ಬೆರಳು ಚಾಚಲು ಇದರಿಂದ ಅನುಕೂಲವಾಯಿತು.

ಕೊಳಲಿನಂಥ ವಾದ್ಯದಲ್ಲಿ ಬಾಯಿ ಹಾಡುಗಾರಿಕೆಯಂತೆ, ವೀಣೆಯಂತೆ ನುಡಿಸುತ್ತಿದ್ದವರು ದಿವಂಗತ ಪನ್ನಾಲಾಲ್ ಒಬ್ಬರೇ. ತಾರಸ್ಥಾಯಿಗಿಂತ ಮೇಲಿನದಾದ ಅತಿ ತಾರಸ್ಥಾಯಿ, ಮಂದ್ರಕ್ಕಿಂತ ತಗ್ಗಿನದಾದ ಅತಿಮಂದ್ರಸ್ಥಾಯಿ ನುಡಿಸುತ್ತಿದ್ದರು. ಆಗ ಇವರು ಒಂದೇ ಕೊಳಲನ್ನು ಉಪಯೋಗಿಸುತ್ತಿರಲಿಲ್ಲ. ಬದಲು ಎರಡು ಕೊಳಲುಗಳನ್ನು ಆಯಾ ಸಮಯಕ್ಕೆ ಸರಿಯಾಗಿ ಉಪಯೋಗಿಸುತ್ತಿದ್ದರು. ನುಡಿಸುತ್ತಾ ವಾದ್ಯವನ್ನು ಬಹುಬೇಗ ಬದಲಾಯಿಸಿಬಿಡುತ್ತಿದ್ದರು. ಕೇಳುವವರಿಗೆ ಸ್ವಲ್ಪವೂ ಗೊತ್ತಾಗುತ್ತಿರಲಿಲ್ಲ. ಸಂಗೀತದ ಆಯಕಟ್ಟಿನ ಸ್ಥಳವನ್ನು ಚೆನ್ನಾಗಿ ತಿಳಿದಿದ್ದವರು ಪನ್ನಾಲಾಲರು. ಗಾಯನದ ವಿಶೇಷ ಅಂಗಗಳಾದ ಗಮಕ (ಆಯಾ ರಾಗದ ಮುಖ್ಯಸ್ವರಗಳನ್ನು ಜಗ್ಗಿಸಿ ಹಾಡುವುದು) ಮೀಂಡ್ (ಗಮಕದಂತೆಯೇ ಸ್ವರಗಳ ಜಾರುವಿಕೆಯನ್ನು ಸುಂದರವಾಗಿ ನಿರೂಪಿಸುವುದು) ಇವುಗಳನ್ನು ಬಹು ಚೆನ್ನಾಗಿ ನುಡಿಸುತ್ತಿದ್ದರು.

ತಮ್ಮ ವೇಣುವಾದನದಲ್ಲಿ ಘೋಷರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜಾತಿಯನ್ನು ನುಡಿಸಿ, ಅದರಲ್ಲಿ ಕೊಳಲಿಗೆ ಒಂದು ಸ್ಥಾನ ದೊರಕಿಸಿಕೊಟ್ಟರು. ನಿಧಾನದ ಗತಿಯಲ್ಲಿ ನುಡಿಸುವ ವಿಲಂಬಿತ್, ಶೀಘ್ರಗತಿಯಲ್ಲಿ ನುಡಿಸುವ ಠುಮರಿ, ಪ್ರದರ್ಶಿಸಲು ಕಷ್ಟವೆನಿಸುವ ತಾಳಗಳು ಎಲ್ಲವನ್ನೂ ನುಡಿಸುತ್ತಿದ್ದರು.

ಹೀಗೆ ಸಿಳ್ಳೆಯಂತೆ ನಾದ ಹೊರಡಿಸುತ್ತಿದ್ದ ಕೊಳಲಿನ ಆಕಾರವನ್ನು ಹಿಗ್ಗಿಸಿ ಮಂದ್ರವೇಣುವಾದನ ನಿರ್ಮಿಸಿದವರು ಪನ್ನಾಲಾಲ್ ಘೋಷರು. ಅದು ಅವರ ಶಿಷ್ಯರಿಂದ ಈಗ ಮುಂದುವರಿಸಲ್ಪಡುತ್ತಿದೆ.

ಪನ್ನಾಲಾಲ್ ಘೋಷರು ಒಂದು ಹೊಸ ರಾಗವನ್ನು ನಿರ್ಮಿಸಿದರು. ಅದರ ಹೆಸರು ’ದೀಪಾವಳಿ’ ಎಂದು.

ಶಿಷ್ಯರು

ಘೋಷರ ಪ್ರಖ್ಯಾತ ಶಿಷ್ಯರಾಗಿ ಅವರ ಶೈಲಿಯನ್ನು ಮುಂದುವರಿಸುತ್ತಿರುವವರಲ್ಲಿ, ದೇವೇಂದ್ರ ಮುರುಡೇಶ್ವರ, ವಿಜಯರಾಘವರಾವ್, ಹರಿಪಾದ ಚೌಧರಿ ಮುಖ್ಯರಾದವರು.

ದೇವೇಂದ್ರ ಮುರುಡೇಶ್ವರರು ಪನ್ನಾಲಾಲ ಘೋಷರ ಪಟ್ಟ ಶಿಷ್ಯರು. ಒಂದು ಭಾಗದಲ್ಲಿ ಅವರ ಉತ್ತರಾಧಿಕಾರಿ.

ಮೊದಲು ಮುರುಡೇಶ್ವರರು ಕಲಿಯಲು ಪ್ರಾರಂಭಿಸಿದ್ದು ಬಾಯಿ ಹಾಡುಗಾರಿಕೆ. ಅನಂತರ ಮುಂಬಯಿಯಲ್ಲಿ ತಬಲಾವಾದನ. ಅದರಲ್ಲಿ ಸಾಕಷ್ಟು ಪ್ರವೀಣರಾದರು. ೧೯೪೧ರಲ್ಲಿ ಮೊದಲ ಸಲ ಪನ್ನಾಲಾಲ್ ಘೋಷರ ಕೊಳಲಿನ ಧ್ವನಿಮುದ್ರಿಕೆಯೊಂದನ್ನು ಕೇಳಿದಾಗ ವಿವರಿಸಲಾಗದಷ್ಟು ಸಂತೋಷ. ಅಲ್ಲಿಂದ ಮುಂದೆ ಅವರಿಗೆ ಬೇರೆಯ ಸಂಗಿತವೇ ಬೇಡವಾಯಿತು. ಆ ಕೊಳಲಿನ ನಾದ, ಆ ವಾದನ ಮತ್ತು ಅದನ್ನು ಹೇಗೆ ಕಲಿಯಬೇಕೆಂಬುದೇ ಸದಾ ಧ್ಯಾನವಾಯಿತು. ಪನ್ನಲಾಲ್ ಘೋಷರವರೂ ಆಗ ಮುಂಬಯಿಯಲ್ಲಿಯೇ ಇದ್ದರೂ ಮುರುಡೇಶ್ವರರು ಅವರನ್ನು ನೋಡಿದ್ದು ಆರು ವರ್ಷಗಳಾದ ಮೇಲೆ.

ದೇವೇಂದ್ರ ಮುರುಡೇಶ್ವರರ ತಬಲಾ ಗುರುಗಳಾದ ಅಹಮದ್ ಹುಸೇನ್ ಸಾಹೇಬರ ತಬಲಾ ಕಛೇರಿ ಏರ್ಪಾಡಾಗಿದ್ದಿತು. ಮುರುಡೇಶ್ವರರೂ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ಪನ್ನಾಲಾಲ್ ಘೋಷರೂ ಬಂದಿದ್ದರು. ಅವರನ್ನು ನೋಡಿಯೇ ಮುರುಡೇಶ್ವರರಿಗೆ ಉತ್ಸಾಹ. ’ಅವರನ್ನು ಪರಿಚಯ ಮಾಡಿಸಿ ಕೊಡಿ’ ಎಂದು ಖಾನ್ ಸಾಹೇಬರನ್ನು ಬೇಡಿಕೊಂಡರು. ಗುರುಗಳು ಪರಿಚಯ ಮಾಡಿಸಿದಾಗ ಘೋಷರು ಹಸನ್ಮುಖದಿಂದ ಮಾತನಾಡಿದರು. ಅವರ ಮನೆಗೆ ಬರುವಂತೆಯೂ ಕರೆದಾಗ ಮುರುಡೇಶ್ವರರಿಗೆ ತುಂಬಾ ತುಂಬಾ ಸಂತೋಷ.

ಮುರುಡೇಶ್ವರರು ಅವರ ಮನೆಗೆ ಹೋದರು. ಪನ್ನಾಲಾಲರು ಅವರನ್ನು ತಬಲಾ ನುಡಿಸುವಂತೆ ಹೇಳಿದರು.

’ತಕ, ತಕಿಟ, ತಕ ತಕಿಟ… ತದಿಕಿಟ, ತದಿಕಿಟ..’

ವಿಧವಿಧವಾದ ರಚನೆಗಳನ್ನೆಲ್ಲಾ ನುಡಿಸಿದರು ಮುರುಡೇಶ್ವರರು.

ನನಗೆ ಕೊಳಲು ಕಲಿಯಬೇಕೆಂದು ತುಂಬಾ ಆಸೆ’ ಮುರುಡೇಶ್ವರರು ಸ್ವಲ್ಪ ಧೈರ್ಯಮಾಡಿ ಕೇಳಿದರು.

’ನೀವು ತಬಲಾವಾದ್ಯವನ್ನೇ ಇಷ್ಟು ಚೆನ್ನಾಗಿ ನುಡಿಸುವಿರಿ, ಕೊಳಲು ಏಕೆ ಕಲಿಯಬೇಕು?’

ಆದರೆ ದೇವೇಂದ್ರ ಮುರುಡೇಶ್ವರರಿಗೆ ಆ ರೀತಿಯ ಕೊಳಲು ವಾದನವನ್ನು ಕಲಿಯಲು ಅಪಾರ ಆಸೆ. ಒತ್ತಾಯದ ಪ್ರಾರ್ಥನೆ ಮಾಡಿದರು. ತಮ್ಮ ಗುರುಗಳ ಕೈಲಿ ಹೇಳಿಸಿದರು. ಪನ್ನಾಲಾಲರು ಕಡೆಗೆ ಒಪ್ಪಿದರು.

ಶಿಷ್ಯನ ಪರೀಕ್ಷೆ

ದೇವೇಂದ್ರರ ಮನೆಯಿಂದ ಇಪ್ಪತ್ತು ಮೈಲಿಗಳ ದೂರದಲ್ಲಿ ಪನ್ನಾಲಾಲರ ಮನೆ. ಮಲಾಡ್ ಅನ್ನುವ ಸ್ಥಳ. ಹಗಲು ಹೊತ್ತು ಜೀವನೋಪಾಯಕ್ಕಾಗಿ ಒಂದು ಉದ್ಯೋಗ. ಅದು ಒಂದು ಕಠಿಣ ಪರಿಶ್ರಮದ ಕೆಲಸವೇ. ಅದಾದ ನಂತರ ಸಂಜೆ ಪನ್ನಾಲಾಲರ ಮನೆಗೆ ಹೋಗುತ್ತಿದ್ದುದು. ಅವರ ಹಿಂದೆ ತಂಬೂರಿ ಮೀಟುತ್ತಾ ಕುಳಿತಿದ್ದು ಅವರ ಕೊಳಲುವಾದನವನ್ನು ಕೇಳುತ್ತಿರುವುದು. ರಾತ್ರಿ ಹನ್ನೊಂದೂ ಮುಕ್ಕಾಲು ಗಂಟೆಯಾಗುತ್ತಲೇ ಘೋಷ್‌ ರವರು ಇನ್ನೂ ನುಡಿಸುತ್ತಿದ್ದರೂ ಅವರ ಅಪ್ಪಣೆ ಪಡೆದು ರೈಲ್ವೈ ಸ್ಟೇಷನ್ನಿಗೆ ಓಡಿ ಬರುವುದು. ರಾತ್ರಿ ಹನ್ನೆರಡು ಗಂಟೆಗೆ ಕಡೆಯ ಗಾಡಿ. ಅದರಲ್ಲಿ ಹತ್ತಿ ಇಪ್ಪತ್ತು ಮೈಲಿ ದೂರ ಇರುವ ಮುಂಬಯಿಗೆ ಓಡಿ ಬರುವುದು.

ಒಂದು ವರ್ಷ ಹೀಗೆ ನಡೆಯಿತು. ಒಂದಕ್ಷರ ಪಾಠವೂ ಇಲ್ಲ. ಕಲಿಯಬೇಕೆಂಬ ಆತಂಕ, ಶ್ರಮದ ಫಲ – ದೇವೇಂದ್ರರು ಬಡವಾಗಿ ಬಿಟ್ಟರು. ಪನ್ನಾಲಾಲರ ಪತ್ನಿ ಇದನ್ನು ಗಮನಿಸಿದರು. ಪನ್ನಾಲಾಲರಿಗೂ ಹೇಳಿದರು. ಪನ್ನಾಲಾಲರು ಮುರುಡೇಶ್ವರರನ್ನು ಹತ್ತಿರ ಕೂಡಿಸಿಕೊಂಡು ಅವರ ವಿಷಯವನ್ನೆಲ್ಲ ವಿಚಾರಿಸಿದರು. ಅನಂತರ ಹೇಳಿದರು, ’ಮಗು, ನಿನಗೆ ಪಾಠ ಹೇಳದೇ ಇದ್ದುದು ಅಸಡ್ಡೆಯಿಂದ ಏನೂ ಅಲ್ಲ.  ನನ್ನಲ್ಲಿ ಹತ್ತಾರು ಮಂದಿ ಸಂಗೀತ ಕಲಿಯಲು ಬಂದು ಹೋಗಿದ್ದಾರೆ. ಬಂದವರಲ್ಲಿ ಚಂಚಲ ಸ್ವಭಾವದವರೇ ಹೆಚ್ಚು. ಸಂಗೀತವು ಸುಲಭವಾಗಿ ದೊರೆಯುವ ವಿದ್ಯೆಯಲ್ಲ. ಅದರಲ್ಲಿ ಭಕ್ತಿ, ಶ್ರದ್ಧೆ ಇರಬೇಕು. ಸಂಯಮ, ಸಾಧನೆಗಳಿಲ್ಲದೆ ಸಿದ್ಧಿಸುವುದಿಲ್ಲ. ಉಪಾಸಕನು ಅದಕ್ಕಾಗಿ ಕಷ್ಟಪಡಲು ಸಿದ್ಧಿನಿರಬೇಕು. ನಿನಗೆ ಆ ಶ್ರದ್ಧೆ ಇದೆಯೇ, ದೃಢ ಮನಸ್ಸಿದೆಯೇ ಎಂಬುದನ್ನು ಪರೀಕ್ಷಿಸಲು ಹೀಗೆ ಮಾಡಿದೆ’.

ಇದನ್ನು ಕೇಳಿದಾಗ ಶಿಷ್ಯನ ಸಂತೋಷ ಹೇಳಲಿಕ್ಕಾಗದಷ್ಟು ಗುರುವಿನ ಬಗ್ಗೆ ಭಕ್ತಿ, ಪ್ರೇಮ ಇನ್ನೂ ಹೆಚ್ಚಾಯಿತು. ಅನಂತರ ಪಾಠ ಕ್ರಮವಾಗಿ ನಡೆಯಿತು. ಒಂದು ವರ್ಷದ ಕಾಲದಲ್ಲಿ ಅವರು ಏನೂ ಕಲಿಸದಿದ್ದರೂ ಸಂಗೀತ ಚೆನ್ನಾಗಿ ಮನದಟ್ಟಾಗಿತ್ತು. ಆದ್ದರಿಂದ ಕಲಿಸಲು ಪ್ರಾರಂಭಿಸಿದ ಒಂದು ವರ್ಷದಲ್ಲೇ ಬೇಕಾದಷ್ಟು ಕಲಿತುಬಿಟ್ಟರು. ಪನ್ನಾಲಾಲರು ತಮ್ಮ ಜೊತೆಯಲ್ಲಿ ನುಡಿಸಲು ಕರೆದುಕೊಂಡು ಹೋಗಲು ಪ್ರಾರಂಭಿಸಿದರು.

೧೯೫೦ರಲ್ಲಿ ಪಂಡಿತ್ ರವಿಶಂಕರರು ದೆಹಲಿಯ ಆಕಾಶವಾಣಿ ವಾದ್ಯವೃಂದದ ನಿರ್ದೇಶಕರಾದ ಮೇಲೆ ದೇವೇಂದ್ರ ಮುರುಡೇಶ್ವರರನ್ನು ಆಕಾಶವಾಣಿ ಸಂಸ್ಥೆಗೆ ಸೇರುವಂತೆ ಆಹ್ವಾನ ಕಳಿಸಿದರು. ಅವರ ಮನೆಯವರೆಲ್ಲ ಅವರು ಈ ಉದ್ಯೋಗವನ್ನು  ಒಪ್ಪಿಕೊಳ್ಳುವುದು ಬೇಡ ಎಂದರು. ಅವರ ತಾಯಿಯವರು ಮಾತ್ರ ’ನಿನಗೆ ಸಂಗೀತದಲ್ಲಿಯೇ ಜೀವನ ನಡೆಸುವ ಆಸಕ್ತಿ ಮತ್ತು ಧೈರ್ಯ ಇದ್ದರೆ ಒಪ್ಪಿಕೋ’ ಎಂದು ಹೇಳಿ ಹರಸಿ ಕಳುಹಿಸಿದರು.

ದೇವೇಂದ್ರ ಮುರುಡೇಶ್ವರರ ಕೊಳಲಿನ ವಾದನ ಅದರಲ್ಲಿಯೂ ಅದರ ನಾದ ಮಾಧುರ್ಯ ಜನಪ್ರಿಯವಾಯಿತು. ಬಹುಕಾಲದಿಂದಲೂ ಪ್ರಚಾರದಲ್ಲಿದ್ದ ತುಂಡು ಕೊಳಲನ್ನು ನುಡಿಸುತ್ತಿದ್ದ ಕಲಾವಿದರಲ್ಲಿ ಅನೇಕರು ಘೋಷರು ಕಂಡು ಹಿಡಿದ ಮಂದ್ರ ವೇಣುವಾದನವನ್ನು ನುಡಿಸಲು ಆರಂಭಿಸಿದರು.

ಕೆಲವು ಮಹತ್ವಪುರಿತ ಘಟನೆಗಳು

ದೇವೇಂದ್ರ ಮುರುಡೇಶ್ವರರಿಗೆ ಎಲ್ಲರೊಡನೆ ಸಂಜೆಯ ಹೊತ್ತು ಪಾಠ ನಡೆಯುತ್ತಿತ್ತು. ಕ್ರಮೇಣ ಅವರನ್ನು ಬೆಳಗಿನ ಹೊತ್ತು ಬರಹೇಳಲಾರಂಭಿಸಿದರು. ಬೇರೆ ಶಿಷ್ಯರು ಆಕ್ಷೇಪಿಸಿದಾಗ ಅವರು ಹೀಗೆ ಹೇಳಿದರು, ಸಂಗೀತವು ಒಂದು ಸ್ಪರ್ಧೆ ಇದ್ದಂತೆ. ಬೇಗ ಗ್ರಹಿಸಿದವರಿಗೆ ಮುಂದೆ ಹೇಳಿಕೊಡಬೇಕು. ನಾಲ್ಕಾರು ವರ್ಷಗಳಲ್ಲಿ ಕಲಿಯಬೇಕಾದುದನ್ನು ಅವನು ಒಂದು ವರ್ಷದಲ್ಲಿ ಕಲಿತಿದ್ದಾನೆ. ನೀವೂ ಹಾಗೆಯೇ ಕಲಿಯಿರಿ. ನಿಮಗೂ ವಿಶೇಷ ಗಮನ ಕೊಡುತ್ತೇನೆ’.

ಅವರು ತುಂಬಾ ನಿರ್ಮಲ ಹೃದಯದವರು. ಸಂಗೀತ ಕಲಿಸುವಾಗ ಬಿಚ್ಚು ಮನಸ್ಸಿನಿಂದ ಹೇಳಿಕೊಡುತ್ತಿದ್ದರು. ಹಾಗೆಯೇ ಮಾತನಾಡುವರೂ ಕೂಡ.

ನಿಧನರಾಗುವ ಮುನ್ನ ಅವರು ಆಡಿದ ಮಾತುಗಳು ಯಾವಾಗಲೂ ನೆನಪಿಡುವಂಥವು. ಪಟ್ಟಶಿಷ್ಯನಿಗೆ ಹೀಗೆ ಹೇಳಿದ್ದರು. ’ಮಗು, ಇಂದು ನನ್ನ ಆಸೆಗಳನ್ನು, ಆಶೋತ್ತರಗಳನ್ನು ಬೆಳೆಸಿಕೊಂಡು ಹೋಗಲು ನೀನು ಸಮರ್ಥನಾಗಿದ್ದೀಯೆ. ನಮ್ಮ ಸಂಗೀತ ಕಲೆಯು ಬಹು ಶ್ರೇಷ್ಠ ಸಂಪ್ರದಾಯ. ಇದನ್ನು ಬೆಳೆಸಿಕೊಂಡು ಹೋಗುವುದು ಸುಲಭವಾದ ಕೆಲಸವಲ್ಲ. ತುಂಬಾ ಅಡ್ಡಿ ಆತಂಕಗಳು. ನಮ್ಮ ಧ್ಯೇಯಗಳಿಂದ ನಮ್ಮನ್ನು ಹಿಂದಕ್ಕೆ ಎಳೆಯುವುದು ಹಣ. ಬಹು ಎಚ್ಚರಿಕೆಯಿಂದ ಇರಬೇಕು. ಆನಂದಮಯವಾದ ಒಳ್ಳೆಯ ಕಲೆ ಇರುವ ಕಡೆಗೆ ಹಣ ಬರುವುದೇ ವಿನಾ ಅದನ್ನು ಹುಡುಕಿಕೊಂಡು ಹೋಗಿ ನಾವು ಕೀಳಾಗಬಾರದು.’

’ನಮ್ಮ ಜೀವನ ಬೇರೆಯವರಿಗೆ ಉದಾಹರಣೆಯಾಗಿರಬೇಕು. ಗೌರವಯುತವಾಗಿರಬೇಕು. ವಯಸ್ಸಾಗುತ್ತಾ ಆಗುತ್ತಾ ನೀನು ಯೋಚಿಸಿದಾಗ ಈ ವಿಷಯ ಗೊತ್ತಾಗುವುದು’.

’ನಾದಶುದ್ಧಿಯಿಂದ, ಭಾವಪುಷ್ಟಿಯಿಂದ ಕೂಡಿದ ಸಂಗೀತ ಕೊಡುವ ಆನಂದವನ್ನು ಎಂತಹ ಐಶ್ವರ್ಯವೂ ಕೊಡಲಾರದು.

ಪನ್ನಾಲಾಲರ ಅಕಾಲ ಮರಣದಿಂದ ಭಾರತದ ಶ್ರೇಷ್ಠ ಸಂಗೀತಗಾರರ ಮೊದಲ ಪಂಕ್ತಿಯಲ್ಲಿ ಒಂದು ಸ್ಥಾನ ಬರಿದಾಯಿತು. ಆದರ್ಶ ಎಂದರೆ ಎಲ್ಲದಕ್ಕಿಂತ ಶ್ರೇಷ್ಠವಾದುದರಲ್ಲಿ ಪ್ರೀತಿ. ಭಾರತದ ಅತ್ಯಂತ ಶ್ರೇಷ್ಠವಾದ ಕಲೆ ಹುಟ್ಟಿರುವುದು ಆದರ್ಶದ ಕಲ್ಪನೆಯ ಬಗ್ಗೆ ಇರುವ ಪ್ರೀತಿಯಿಂದ. ಕಲ್ಪನೆಯಿಂದ ಇಂತಹ ಸೃಷ್ಟಿ ಸಮೃದ್ಧವಾಗುತ್ತದೆ, ಪ್ರತಿಭೆಯಿಂದ ಬೆಳಗುತ್ತದೆ. ಇಂದ್ರಿಯಗಳಿಗೆ ಇಂತಹ ಅತ್ಯುನ್ನತ ಕಲೆ ಗೋಚರಿಸುವುದಿಲ್ಲ. ಆದರೆ ಕಲ್ಪನೆಗೆ ಹೋಗಿ ಅರ್ಥವಾಗುತ್ತದೆ. ಪನ್ನಾಲಾಲರ ಸಂಗೀತ ಕಲೆ ಇದೇ ಆಗಿದ್ದುದು.

ಇಂತಹ ಮಹಾನ್ ಸಂಗೀತಗಾರ ಕಾಲವಾಗಿದ್ದರೂ ಅವರ ಸಂಗೀತ ಇನ್ನೂ ಇದೆ. ಅವರ ಕೊಳಲು ವಾದನದ ಧ್ವನಿಮುದ್ರಿತ ಸಂಗೀತ ಆಗಾಗ ಆಕಾಶವಾಣಿಯ ಕೇಂದ್ರಗಳಲ್ಲಿ ಪ್ರಸಾರವಾಗುತ್ತದೆ.