ಕಡಲೆಡೆಗೆ ನಡೆವ ಹೊಳೆ,
ಅತ್ತಿತ್ತ ತಲೆದೂಗಿ ದಾರಿಯುದ್ದಕು ನಿಂತು
ನಸುನಗುವ ಹಸಿರು ಬೆಳೆ.
ಒಂದೆರಡೆ ? ನೂರಾರು ಮಡು ;
ಸೋತ ನದಿ ಅಲ್ಲಲ್ಲಿ ಮಿಶ್ರಮಿಪ ನಿಲ್ದಾಣ ;
ಮತ್ತೆ ಪಯಣ.

ಎಂದು ಕಡೆ ? ಎಲ್ಲಿ ಕಡೆ ?
ಕಡಲಲ್ಲೆ ಬಿಡುಗಡೆ.
ಅಲ್ಲಿವರೆಗೂ ಇಲ್ಲ ಏನೊಂದು ನಿಲುಗಡೆ.
ನಡೆ, ನಡೆ, ಗುರಿಯ ಕಡೆ
ಕಡೆಯಲ್ಲಿ ಬಿಡುಗಡೆ.

ಹಲವು ಮಡುಗಳ ಸಾಲು ;
ಹೊಳೆಯುತಿವೆ ಬೆಳೆಯುತಿವೆ
ಮಡುವನೇ ಕಡಲೆಂದು ತಿಳಿದ ಸಾವಿರ ಮೀನು !
ನೂರು ಒಲವಿನ ಸಾಲು ;
ಹಸಿಯೊಲವು, ಹುಸಿಯೊಲವು
ಸಿಹಿಯೊಲವು, ಕಹಿಯೊಲವು
ಒಂದೊಂದರೊಳು ಉಂಟು ಏನೊ ಚೆಲುವು !

ಕಿರಿಯೊಲವಿನೀ ಮಡುವ
ದಾಟಿ ಮುನ್ನಡೆವುದೇ-
ಸಿಕ್ಕುವುದು ಮುಂದೊಮ್ಮೆ ಹಿರಿಯ ಕಡಲು.
ಮೇಲೆ ಬೆಳಕಿನ ಬೆರಳು
ದಾರಿ ತೋರುತಲಿರಲು
ಯಾತ್ರೆ ಸಾರ್ಥಕವಹುದು ಶ್ರದ್ಧೆಯಿರಲು.