ಉತ್ತರಕನ್ನಡದ ಮಾಳಂಜಿಯ ಅಪ್ಪೆಮರದ ಕೆಳಗೆ ಅಂದು ಜನಜಾತ್ರೆ. ಬೆಳಗ್ಗೆ ಆರಕ್ಕೆ ಬಂದು ಕುಳಿತವರು ನೂರಕ್ಕೂ ಹೆಚ್ಚು ಜನ. ಆಮೇಲಾಮೇಲೆ ಲೆಕ್ಕಕ್ಕೆ ಸಿಗಲಿಲ್ಲ. ಅವರೆಲ್ಲಾ ಯಾರದೋ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ.

ಕುಡುಗೋಲು ಹಿಡಿದು ಲುಂಗಿ ಉಟ್ಟು ಬರುತ್ತಿರುವವರನ್ನು ನೋಡಿ ಅವರೆಲ್ಲಾ ಪಿಸುಗುಟ್ಟುತ್ತಾರೆ. ನಾಗಪ್ಪನಾಯ್ಕ ಬಂದ ನಾಗಪ್ಪನಾಯ್ಕ. ಅವನೊಂದಿಗೆ ಇನ್ನೂ ನಾಲ್ಕು ಜನ ಸಿದ್ಧರಾಗಿ ಬಂದಿದ್ದಾರೆ. ಮರಕ್ಕೆ ಪೂಜೆ ಮೊದಲು. ಎಲ್ಲರೂ ಸರಸರನೆ ಮರ ಹತ್ತಿ ಚಕಚಕನೆ ಮಿಡಿಗಳನ್ನು ಕೊಯ್ಯುತ್ತಾರೆ. ಗೊಣಿಚೀಲ, ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ತುಂಬಿ ಇಳಿಸುತ್ತಾರೆ. ನಾಲ್ಕಾರು ತಾಸುಗಳಲ್ಲಿ ಮರವೆಲ್ಲಾ ಖಾಲಿ. ಅದೋ ಅಲ್ಲೊಂದು ಇಲ್ಲೊಂದು ಅಷ್ಟೆ. ಮತ್ತೆರೆಡು ತಾಸುಗಳಲ್ಲಿ ಕೊಯ್ದ ಮಿಡಿಗಳೆಲ್ಲಾ ಖಾಲಿ. ಜನರೂ ಖಾಲಿ. ನಾಗಪ್ಪನಾಯ್ದ ಹಣ ಎಣಿಸುತ್ತಾನೆ. ಹತ್ತು ಸಾವಿರ, ಇಪ್ಪತ್ತು ಸಾವಿರ, ಇಪ್ಪತ್ತೈದು ಸಾವಿರ, ಇಪ್ಪತ್ತೇಳು ಸಾವಿರದ ಆರುನೂರು. ಕೊಡುವವರಿಗೆಲ್ಲಾ ಕೊಟ್ಟು ಇಪ್ಪತ್ತು ಸಾವಿರ ಜೇಬಿಗೆ ಹಾಕಿಕೊಳ್ಳುತ್ತಾನೆ.

ಹಿಂದೆ ಮರದ ಕೆಳಗೆ ಹೊಡೆದಾಟವಾಗಿದ್ದೂ ಇದೆ. ಪ್ರತಿವರ್ಷ ನಂಗೆ ನಂಗೆ ಅನ್ನೋ ಗದ್ದಲ, ಹಕ್ಕು ಸ್ಥಾಪನೆಗೆ ಹೋರಾಟ ಹೀಗೆಲ್ಲಾ ಉಂಟು. ಈಗ ಜನರೇ ಒಬ್ಬರಿಗೊಬ್ಬರು ಒಪ್ಪಂದ ಮಾಡಿಕೊಂಡು ಹೀಗೆ ಒಂದೇ ದಿನ ಬರುತ್ತಾರೆ. ಮಿಡಿ ಬೆಳೆದದ್ದು ನೋಡಿ ದಿನ ನಿರ್ಧಾರ ಎನ್ನುತ್ತಾರೆ ನಾಗಪ್ಪನಾಯ್ಕ.

ಇದು ಮಾಳಂಜಿಗ್ರಾಮದ ಕೆಳಗಿನಮನೆಯ ನಾಗಪ್ಪನಾಯ್ಕರ ಹೊಲದ ಮಧ್ಯೆ ಇರುವ ಜೀರಿಗೆ ಮಾವಿನಮರದ ಕತೆ.

ಇದೀಗ ಮೂರೋ ನಾಲ್ಕೋ ತಲೆಮಾರು ಕಂಡಿದೆ. ಅಡಿಕೆಗೋ, ಭತ್ತಕ್ಕೋ, ಉಪ್ಪಿನಕಾಯಿ, ಕೈಸಾಲ, ಮನೆಸಾಲ ಹೀಗೆಲ್ಲಾ ವಿನಿಮಯಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಕಾಲವನ್ನೂ ಈ ಮರ ಕಂಡಿದೆ.

ಊರು ಕೇರಿ ದಾಟಿ, ಸುತ್ತಲ ಹಳ್ಳಿಗಳನ್ನು ದಾಟಿ, ತಾಲ್ಲೂಕು ದಾಟಿ, ಜಿಲ್ಲೆ ದಾಟಿ, ರಾಜ್ಯ ದಾಟಿ ದೇಶವನ್ನೂ ದಾಟುವಷ್ಟು ಪರಿಮಳ ಹೊಂದಿದೆ. ತಾತಜ್ಜನ ಕಾಲದಿಂದಲೂ ಇದರೊಂದಿಗೆ ಸಂಬಂಧ ಇರುವವರಿದ್ದಾರೆ. ಇದರ ಗುಣ ಕೇಳಿ ಬಂದವರು, ವಾಸನೆ ಕೇಳಿ ಬಂದವರು, ರುಚಿ ನೋಡಿ ಬಂದವರು, ಕೊನೆಗೆ ಸುದ್ದಿ ಮಾತ್ರ ಕೇಳಿ ಬಂದವರು ಇದ್ದಾರೆ. ಅವರೆಲ್ಲಾ ಖಾಯಂ ನೆಂಟರಾಗುತ್ತಿದ್ದಾರೆ. ಹೆಚ್ಚಿದ ಬೇಡಿಕೆ, ಮಾಡಲಾಗದ ಪೂರೈಕೆ ಜೀರಿಗೆಮಿಡಿಯ ಬೆಲೆಯನ್ನು ಹೆಚ್ಚಿಸಿದೆ.

ಕೆಲವರದು ವರ್ಷದ್ದು ವರ್ಷಕ್ಕೆ ಖಾಲಿ. ಕೆಲವರದು ಎರಡು ವರ್ಷ, ಕೆಲವರದು ಐದು ವರ್ಷ ಬಾಳಿಕೆ ಬಂದ ದಾಖಲೆ ನೀಡುತ್ತಾರೆ. ಜೀರಿಗೆ ಕಂಪು ಹೋಗಿಲ್ಲ, ಕೊಬ್ಬರಿ ರುಚಿ ಕೆಟ್ಟಿಲ್ಲ, ಹಳಸಿಲ್ಲ, ಕೊಳೆತಿಲ್ಲ ಗುಣಗಾನ.

ಒಂದು ಗುಂಟೆಯಷ್ಟು ಜಾಗಕ್ಕೆ ಹರಡಿಕೊಂಡ ಮರ ಬಿರುಬಿಸಿಲಿನಲ್ಲಿ ನಿಂತಿದೆ. ಗಾಳಿ, ಸಿಡಿಲು, ಗುಡುಗುಗಳಿಗೆ ಎದೆಯೊಡ್ಡಿದೆ. ನೆಲದೊಳಗೆ ಅದ್ಯಾರು ಅಷ್ಟು ಗಟ್ಟಿಯಾಗಿ ನಿಲ್ಲಿಸಿದ್ದಾರೋ ಅವರೇ ರುಚಿಯನ್ನೂ ಕೊಟ್ಟರಬೇಕು. ಹೊಳೆದಂಡೆಯದು ಮಾತ್ರ ರುಚಿ ಎನ್ನುವುದಕ್ಕೆ ಇದು ಅಪವಾದ ಕೂಡ.

ಮಾಳಂಜಿಗಿಂತಲೂ ರುಚಿಯಾದ, ದೀರ್ಘ ಬಾಳಿಕೆಯ, ಸುವಾಸನಾಯುಕ್ತ ತಳಿಗಳು ಇನ್ನೂ ಅನೇಕವಿವೆ. ಆದರೆ ಅತಿ ಪ್ರಚಾರದ ಕಾರಣ ಮಾಳಂಜಿಯೇ ಹೆಚ್ಚು ಜನಪ್ರಿಯ. ಹೆಚ್ಚು ಹಣಪ್ರಿಯ.

ಇದರ ಕಸಿಗಿಡಗಳೂ ಈಗ ಕಾಯಿಗಳನ್ನು ಬಿಡುತ್ತಿವೆ. ಅನೇಕರು ಮರ ನೆಚ್ಚಿಕೊಂಡರೆ ನೂರೇ ಮಿಡಿಗಳು ಗತಿ. ಅದರ ಬದಲು ಮನೆಯಲ್ಲಿ ಒಂದು ಗಿಡ ನೆಡುವುದೇ ಒಳ್ಳೆಯದೆನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಇದೇ ಒಳ್ಳೆಯ ತೀರ್ಮಾನ. ತಳಿ ಉಳಿಸಿ ಬೆಳೆಸುವ ಹಾದಿಯಲ್ಲಿ ಒಂದು ಹೆಜ್ಜೆ. ಮಾಳಂಜಿಗೆ ಜಯವಾಗಲಿ.