೫೮೦

ಬೇಡುವನವ ಯೋಗಿ, ಭಕುತಿ ಭಿಕ್ಷಾಂ
ದೇಹಿಯೆಂದು, ಬೇಡುವನವಯೋಗಿ.           ||ಪ||

ಸತ್ಯಶಿವದಾರ, ಅಱಿವೆ ಕಚ್ಚುಟ!
ಶಾಂತಿ ತ್ರಿಪುಂಡ್ರವ ಹೂಸಿ,
ಹೃದಯಕಮಲ ಸೆಜ್ಜೆ! ಪ್ರಾಣ
ಲಿಂಗ ಸಂಬಂಧಿಯಾಗಿಪ್ಪನವ್ವ.       ೧

ಸಮತೆ ಕಂಥೆ ಸುಮತಿ ಠೊಪ್ಪರ,
ನಿಸ್ಸಂದೇಹದ ಹಾವುಗೆ ಮೆಟ್ಟಿ,
ಕರುಣ ಖರ್ಪರ, ಶರಣುಕೋಲು!
ಮುದ್ರವಿಡಿದಿಪ್ಪನವ್ವ.         ೨

ಕಾಮ ಕುಳಿಯು, ಕ್ರೋಧ ಕೊರಡು,
ಮೋಹ ಮುಳ್ಳು, ಲೋಭ ಱೊಂಪೆ,
ಮದದ ಚೇಳು, ಮತ್ಸರದ ಹೊಳಹ –
ನಱೆದು ಸುಳಿವನವ್ವ!        ೩

ಸಂಸಾರದಹಂಕಾರದ
ಕತ್ತಲೆಯರಿದು ಸುಳಿವನವ್ವ!
ಪಂಚೇಂದ್ರಿಯವೆಂಬ ನಾಯಿಗಳು
ನೋಡುತಿರ್ದವು  ಗುಱೆನಲಮ್ಮದೆ   ೪

ಪಂಚಭಿಕ್ಷದ ರೇಕನಾಥ
ನಮಗೆ ಹುಟ್ಟಿನಲ್ಲಿಕ್ಕ!
ಲಿಂಗವ ಪಾಣಿ ಪಾತ್ರೆಯೆಂದು
ಅಂಗೈಯಲಿಕ್ಕಿದ ಗುರುವೆ. ೫

೫೮೧

ನುಲಿವಡೆಯರೆ ನಿಮ್ಮಾಳ್ದರಕೊಳ್ಳಿರೆ.
ಆಳ್ದರೆಂದವರಾರು? ಅವರು ನಿಮ್ಮಿಷ್ಟರು ದುಷ್ಟವಾದರು.
ಜಂಗಮವಾಗಿದಾರೆ ಇಹರೆ ಬೇಡವೆಂದೆನೆ?
ಹೋಹರ ನಿಲಿಸಾ ಭಕ್ತನಲ್ಲ.
ನಾವಿರಲೆ ಬಲ್ಲಿರಿ, ಕೈಯಲ್ಲಿಕೊಳ್ಳಿರೆ,
ಮುನ್ನವೆ ಕೊಂಡಿಹೆನೆ? ಎನ್ನನೇಕೆ ಒಲ್ಲೆಯಯ್ಯಾ?
ನೀ ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾವು.
ನಿಮ್ಮ ನೆಂಬುದಿಲ್ಲ, ಹೊಣೆಯ ಕೊಟ್ಟೆಹೆನು.
ಅವರಾರು? ಮಾಚಿದೇವ, ಮಹಾಪ್ರಸಾದ ಹೊಣೆಯಾಗಯ್ಯ.
ನಂಬೆನು ಜೀಯಾ, ಪತ್ರವಕೊಟ್ಟೆಹೆನು.
ಇರಲಿಕ್ಕೆ ಕೊಟ್ಟೆಹೆನು ಠಾವಿಲ್ಲ,
ಕರದಲ್ಲಿಯಲ್ಲ, ಉರದಲ್ಲಿಹುದು,
ನಂಬಿದೆನು, ಸುಖಿಯಾದೆ ಧಮೇಶ್ವರಾ.         ||೩೫||

೫೮೨

ಬನ್ನಿ, ಕರಣಿಕರು ನೀವು ಲೆಕ್ಕವ ಹೇಳಿ.
ಧಾನ್ಯಧಾನ್ಯಂಗ ಸಂಚವನು, ಹೊಸ ಜೋಳವಱುವತ್ತು ಖಂಡುಗ,
ವೆಳ್ವಿಗೆ ಶಾಲಿಧಾನ್ಯ ಮೂವತ್ತು ಖಂಡುಗ,
ಗೋದಿ ಹನ್ನೆರಡು ಲಕ್ಷ ಖಂಡುಗ, ಕಡಲೆ ಚೌವೀಸ ಲಕ್ಷ ಖಂಡುಗ,
ಹೆಸರು ಮೂವತ್ತಾಱು ಲಕ್ಷ ಖಂಡುಗ, ನವಣೆ ಹಾರಕ ಬರಗು
ಸಾವೆ ದಳಶಂಗಳೆಂಬ ಧಾನ್ಯವೈವತ್ತು ಲಕ್ಷ ಖಂಡುಗ.
ಹೊಸ ಸುಗ್ಗಿಯ ವೇಳೆಗೆ ಬಹಂತ ಭತ್ತವಗಣಿತ.
ಮಹಾದಾನಿ ಸೊಡ್ಡಳನಾರೋಗಣೆಯವಸರಕ್ಕಳವಟ್ಟ
ಸೈದಾನವನಿನಿತು ಅವಧರಿಸಯ್ಯಾ ಸಂಗನಬಸವಣ್ಣ.   ||೩೬||

೫೮೩
ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ?
ಅನ್ನ ಪಾನಾದಿಗಳೊಳಗಣ ಅನ್ನಪಾನಾದಿಗಳೆನ್ನಬಹುದೆ ನಿಮ್ಮ ಪ್ರಸಾದವ?
ಸಾಧನದೊಳಗಣ ಸಂಯೋಗವೆಂತಿರ್ದುದಂತಿರ್ದುದಾಗಿ,
ಇದು ಕಾರಣ ಶ್ರುತಿ ಸ್ಮೃತಿಗಳಿಗಗೋಚರ ಕೂಡಲಚನ್ನಸಂಗಮದೇವಾ
ನಿಮ್ಮಶರಣನು, ನಿಮ್ಮ ಪ್ರಸಾದವು.  ||೩೭||

೫೮೪

ದಾಸೋಹವೆ ಭೃತ್ಯತ್ವವು.
ಅತಿ ಪ್ರೇಮ ಕಿಂಕಿಲವು ಸಂಗನಬಸವಣ್ಣಂಗಲ್ಲದೆ ಮತ್ತಾರಿಗೆಯೂ ಇಲ್ಲ.
ಇಂತಪ್ಪ ಭಕ್ತಿಸ್ಥಲವನರಿಯದೆ,
ಎಲ್ಲರೂ ಅಂದಂತೆ ಅಂದು ಬಂದಲ್ಲಿಯೆ ಬಂದರು.
ಇವ ನಿಕರಿಸಿ ಜಂಗಮವೆ ಲಿಂಗವೆಂದು ಸಂಗಸಾಹಿತ್ಯ.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯ ಕಲಿದೇವಾ.    ||೩೮||

೫೮೫

ತಾರಾಧಾರ, ಭಾಹೆವ, ಸೋಹಂಭಾವ,
ಭಾವಾಂತರ, ವಾಮಶಕ್ತಿ, ಮೋಹಶಕ್ತಿ,
ಕನ್ಯಾಶಕ್ತಿ, ಬಾಲಶಕ್ತಿ, ಗಣಶಕ್ತಿ, ಮಂದಿರಶಕ್ತಿ
ಶಿವದೇವ, ಈಶ್ವರ, ಮಹಾದೇವ ಪರಾಪರ ಶಿವ
ಇಂತಿವೆಲ್ಲವ ಬಸವಣ್ಣ ತಪ್ಪಿಸಿ, ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ
ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ,
ನಾಲ್ಕೂ ಪದದತ್ತ ಹೊದ್ದಲೀಯದೆ,
ಅಭಿನವ ಕೈಲಾಸದತ್ತ ಹೋದ್ದಲೀಯದೆ,
ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ
ಜಂಗಮನಿರಾಕಾರವೆಂದು ತೋರಿ,
ಆ ಜಂಗಮ ಪ್ರಸಾದವ ಲಿಂಗಕ್ಕಿತ್ತಾರೋಗಿಸಿ
ಬಸವಣ್ಣ ತೋರಿದ ಕಾರಣ ನಿರವಯದ ಹಾದಿಯ
ಬಸವಣ್ಣನಿಂದ ಕಂಡೆನು ಕಾಣಾ ಕಲಿದೇವಯ್ಯ.            ||೩೯||

೫೮೬

ಕಂಗಳ ನೋಟವು, ಕಾಯದ ಕರದಲಿ
ಲಿಂಗದಕೂಟವು, ಶಿವಶಿವ ಚೆಲುವನು
ಜಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ         ||ಪ||

ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕ್ಕೆಲ್ಲಾ;
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊಱೆದವಳೆಂದೆನ್ನ.
ಗಗನ ಗಿರಿಯ ಮೇಲಿರ್ದಹನೆಂದಡೆ,
ಲಗುನಿಯಾಗಿ ನಾನಱಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲೆದಾರತಿಯ   ೧

ಭಕುತಿರತಿಯ ಸಂಭಾಷೆಯಿಂದವೆ
ಯುಕುತಿಯ ಮಱೆದೆನು, ಕಾಯದ ಜೀವದ
ಪ್ರಕೃತಿಯ ತೊಱೆದೆನು, ಸುತ್ತಿದ ಮಾಯಾ ಪಾಶವ ಹಱಿದೆನಲಾ!
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ,
ಮುಕುತಿಯ ಫಲಗಳದಾಂಟಿಯೆ ಬಂದೆನು,
ನಕುತಿಯಾದೆನಾ ಪ್ರಾಣಲಿಂಗಕೆ ಮನವೊಲಿದಾರತಿಯ            ೨

ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇಱೊಂದೆನಿಸದೆ ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚ ನಿರಂಜನ ಚನ್ನಮಲ್ಲಿಕಾರ್ಜುನ –
ಗೆತ್ತುವೆನಾರತಿ ಈರತಿಯಿಂದವೆ ಮನವೊಲಿದಾರತಿಯ.           ೩

೫೮೭

ಕಾಲಚಕ್ರದ ವಚನ:

ಏಕಂ ಏಕಾದ ವಸ್ತುವ ಲೋಕಾದಿ ಲೋಕಂಗಳರಿಯವು.
ಶೂನ್ಯ ನಿಷ್ಕಲ, ಸ್ಥೂಲ ಸೂಕ್ಷ್ಮಕಾರಣವೆನುತಿಪ್ಪರೆಲ್ಲರು
ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ
ಭೂತಪ್ರಾಣಿಗಳೆತ್ತ ಬಲ್ಲರು ಆತನ, ಘನವ.
ಚಿಟುಕು ಮುನ್ನೂಱಱುವತ್ತು ಕೂಡಲು ಒಂದು ವಿಘಳಿಗೆ.
ಆ ವಿಫಗಳಿಗೆ ಅಱುವತ್ತು ಕೂಡಲು ಒಂದು ದಿನ.
ಆ ದಿನ ಮೂವತ್ತು ಕೂಡಲು ಒಂದು ಮಾಸ.
ಆ ಮಾಸ ಹನ್ನೆರಡು ಕೂಡಲು ಒಂದು ವರುಷ.
ಆ ವರುಷ ಆಱವತ್ತು ಕೂಡಲು ಒಂದು ಸಂವತ್ಸರ.
ಇಂತೀ ಕಾಲಚಕ್ರಂಗಳು ಈ ಪರಿಯಲ್ಲಿ ತಿರುಗುತ್ತಿಹವು ಕಾಣಿರೇ.
ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಣೆಯೊಳು
ತಿರುಗಿ ಬರುತ್ತಿಹರು ಕಾಣಿರೆ.
ಕೃತಯುಗ ಮೂವತ್ತೆರಡು ಲಕ್ಷ ವರುಷ ವರ್ತಿಸಿ ನಿಂದಿತ್ತು.
ತ್ರೇತಾಯುಗ ಹದಿನಾರು ಲಕ್ಷ ವರುಷ ವರ್ತಿಸಿ ನಿಂದಿತ್ತು.
ದ್ವಾಪಾರ ಎಂಟು ಲಕ್ಷ ವರುಷ ವರ್ತಿಸಿ ನಿಂದಿತ್ತು.
ಕಲಿಯುಗ ನಾಲ್ಕು ಲಕ್ಷ ವರುಷ ವರ್ತಿಸಿ ನಿಂದಿತ್ತು.
ಇಂತೀ ನಾಲ್ಕು ಯುಗಂಗಳೊಂದಾಗಿ ಕೂಡಿ ಮೇಳೈಸಿದಡೆ
ಅರುವತ್ತು ಲಕ್ಷ ವರುಷ ವರ್ತಿಸಿ ನಿಂದಿತ್ತು.
ಇಂತೀ ನಾಲ್ಕು ಯುಗಂಗಳಿಪ್ಪತ್ತೊಂದು ಬಾರಿ ತಿರುಗಿದಡೆ
ಸುರಪತಿಗೆ ಪರಮಾಯು.
ಅಂಥಾ ಸುರಪತಿ ಹದಿನೇಳು ಬಾರಿ ತಿರುಗಿದಡೆ ಬ್ರಹ್ಮಂಗೆ ಒಂದು ಜಾವ.
ಅಷ್ಟಾಶತ ಸಹಸ್ರ ಋಷಿಯರು ಒಂದು ಸಾವಿರಬಾರಿ ತಿರುಗಿದಡೆ
ಬ್ರಹ್ಮಂಗೆ ಆಯುಷ್ಯ ನೂಱಪ್ಪುದು.
ಅಂಥಾ ಬ್ರಹ್ಮ ಸಾವಿರಬಾರಿ ತಿರುಗಿದಡೆ,
ವಿಷ್ಣುವಿಂಗೆ ಒಂದು ಜಾವವಪ್ಪುದು.
ಅಂಥಾವಿಷ್ಣು ಒಂದು ಜಾವವಾದಲ್ಲಿ,
ಬ್ರಹ್ಮ ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿಹೊಂದುವನು.
ಅಂಥಾ ವಿಷ್ಣುವಿನ ಒಂದು ದಿನದಲ್ಲಿ
ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ.
ಅಂಥಾ ಭೂತಸಂಹಾರಂಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟು ಸಹಸ್ರ
ವರುಷ ತಿರುಗಲು ಪೃಥ್ವಿಗೊಮ್ಮೆ ಜಲಪ್ರಳಯ.
ಅಂತಾ ಜಲಪ್ರಳಯ ಎಂಟು ಬಾರಿ ತಿರುಗಲು
ವಿಷ್ಣುವಿಂಗೆ ಮರಣ, ರುದ್ರಂಗೆ ಒಂದು ನಿಮಿಷ.
ಅಂತಾ ರುದ್ರನ ಒಂದುನಿಮಿಷದಲ್ಲಿ
ಅತಳ, ವಿತಳ, ಸುತಳ, ಮಹೀತಳ, ತಳಾತಳ, ರಸಾತಳ, ಪಾತಾಳ
ಇಂತು ಕೇಳಗೇಳು ಲೋಕ, ಮೇಲೇಳು ಲೋಕ.
ಮೇಲೆ – ಭೂಲೋಕ, ಭುವರ್ಲೋಕ, ಸುವರ್ಲೋಕ,
ಜನರ್ಲೋಕ, ಮಹರ್ಲೋಕ, ತಪರ್ಲೋಕ, ಸತ್ಯರ್ಲೋಕ
ಮೊದಲಾಗಿ ಇಂತೀ ಲೋಕಾದಿ ಲೋಕಂಗಳೆಲ್ಲವು ಮುಳುಗಿ ಹೋದವು.
ಮಹಾಪ್ರಳಯದಲ್ಲಿ ಆ ಪರಶಿವಲೋಕ ಒಂದೆ ಉಳಿಯೆ,
ಆ ರುದ್ರಂಗೆ ಒಂದು ದಿನ.
ಅಂಥಾ ದಿನ ಮುನ್ನು ಱಱುವತ್ತು ಕೂಡಲು ಒಂದು ವರುಷ.
ಅಂಥಾ ವರುಷ ಶತಕೋಟಿ ಕೂಡಲು ರುದ್ರಂಗೆ ಪರಮಾಯು.
ಅಂಥಾ ರುದ್ರರು ಅನೇಕರು ಹೋದಲ್ಲಿ
ಈಶ್ವರಂಗೆ ಮೂರು ಜಾವ.
ಅಂಥಾ ಈಶ್ವರರುವನೇಕರು ಹೋದಲ್ಲಿ
ಸದಶಿವಂಗೆರಡು ಜಾವ.
ಅಂಥಾ ಸದಾಶಿವರು ಅನೇಕರು ಹೋದಲ್ಲಿ
ಪರಮೇಶ್ವರಂಗೆ ಒಂದು ಜಾವ.
ಅಂಥಾ ಪರಮೇಶ್ವರರು ಅನೇಕರು ಹೋದಲ್ಲಿ
ಮಹಾಪ್ರಳಯವೆಂಬುದೊಂದಾಯಿತ್ತು.
ಮತ್ತಂಶಂಕರಂ, ಶಶಿಧರಂ, ತ್ರಿಯಂಬಕಂ
ಗಂಗಾಪತಿ, ಅಂಬಿಕಾಪತಿ, ಉಮಾಪತಿ, ಪಶುಪತಿ,
ನಂದಿ, ಭೃಂಗಿ, ವೀರಭದ್ರಾದಿಯಾದ ಪ್ರಮಥಗಣೇಶ್ವರರು
ಅನುಭಾವ ರಸಾಮೃತವೆಂಬ ತಪೋರಾಜ್ಯವನುಂಡು
ನಿತ್ಯ ತೃಪ್ತರಾಗಿ ಭಕ್ತಿರಾಜ್ಯಂಗೆಯ್ವುತ್ತಿಹರು.
ಮತ್ತಂ ಸರ್ವಾಗತ ಮೊದಲಾದ ಸಮಸ್ತ ರುದ್ರರು
ಲೋಕಾದಿ ಲೋಕಂಗಳು ಕೂಡಿ ಭೂತ ವರ್ತಿಸಿ ನಿಂದಿತ್ತು,
ಕೆಲಕಾಲ ಅವು ತೊಡದು ಹೋದವು.
ಮತ್ತಂ ಶೂನ್ಯವರ್ತಿಸಿ ನಿಂದಿತ್ತು,
ಕೆಲಕಾಲ ಅದು ತೊಡದು ಹೋಯಿತ್ತು.
ಮತ್ತಂ ಕಾಳಾಂಧರ ವರ್ತಿಸಿತ್ತು,
ಕೆಲಕಾಲ ಅದು ತೊಡದು ಹೋಯಿತ್ತು.
ಮತ್ತಂ ಮಹಾ ಪ್ರಕಾಶದ ಬೆಳಗು ಪ್ರವೇಷ್ಠಿಸಿಕೊಂಡಿದ್ದಿತ್ತು.
ಅಂಥಾ ಕಾಲಂಗಳು ಇಂಥಾ ಪರಿಯಲ್ಲಿ
ತಿರುಗುತ್ತಿಹವು ಕಾಣಿರೆ!
ಅಂತಹ ಕಾಲಂಗಳೂ ಅಱಿಯವು;
ಅಂತಹ ದಿವಸಂಗಳೂ ಅಱಿಯವು.
ಅಂತಹ ದೈವಂಗಳೂ ಅಱಿಯವು.
ಅಗಮ್ಯ, ಅಗೋಚರ, ಅಪ್ರಮಾಣ,
ಉಪಮಿಸಬಾರದ ವಸ್ತುವನು
ಅಂತು ಇಂತು ಎಂತು ಎನಲಿಲ್ಲ.
ಗೋಹೇಶ್ವರ ಲಿಂಗವು ನಿರಂಜನ ನಿರಾಳ
ನಿರಾಕಾರ, ನಿರಾಲಂಬ, ನಿರಾಮಯ
ವಸ್ತುವಿಂಗೆ ನಮೋ ನಮೋ ಎಂಬೆನು.        ||೪೧||

೫೮೮

ಬಯಲ ಲೀಲೆಯಿಂದ ಹುಟ್ಟಿದಳವ್ವೆ.
ಆ ಅವ್ವೆಯ ಬಸುರಲ್ಲಿ ಐವರು ಮಕ್ಕಳು ಬಂದರು.
ಒಬ್ಬಾತ ಜಗಸ್ವರೂಪನಾದ,
ಒಬ್ಬಾತ ಜಗದ ಪ್ರಾಣ ಸ್ವರೂಪನಾದ,
ಒಬ್ಬಾತ ಜಗದ ಕಾಯ ಸ್ವರೂಪನಾದ;
ಇಬ್ಬರು ಮಕ್ಕಳುತ್ಪತ್ಯ ಸ್ಥಿತಿ ಲಯಂಗಳ –
ನಡಸುವ ಅಧಿಕಾರಿಗಳಾದರು.
ಐಮುಖನರಮನೆಯ ಸುಖವನೆ ನಿತ್ಯವೆಂದು
ನಾನು ಬಗೆದ ಕಾರಣ ಮರ್ತ್ಯಕ್ಕೆ ಬರಲಾದೆನು.
ಇನ್ನು ಮರ್ತ್ಯ ನಿತ್ಯವೆಂದು ಬಗೆದು ಕೈಲಾಸವ ಹೊಕ್ಕೆನಾದಡೆ,
ಮರ್ತ್ಯದ ಬಟ್ಟೆಯ ಮೆಟ್ಟಿದೆನಾದಡೆ
ಚನ್ನ ಮಲ್ಲಿಕಾರ್ಜುನಯ್ಯನ ಪಾದದಾಣೆ.        ||೪೨||

೫೮೯

ಭೂತಳದ ಮತಿವಂತರು ಆತುಮನ ಸ್ಥಲವಿಡಿಯಲು,
ಮಾತು ಮಾಣಿಕವ ನುಂಗಿ, ಜಾತಿ ಧರ್ಮವನುಡುಗಿ,
ಭ್ರಾಂತು ಭ್ರಮೆಗಳ ಸುಟ್ಟು, ಚಿದ್ಭಸ್ಮವ ಧರಿಸಿ
ಅಣಿಮಾದಿಗುಣಂಗಳ ಗತಿಯ ಪಥವ ಮೀಱಿ
ಭ್ರಾಂತಳಿದು, ಜ್ಯೋತಿ ಬೆಳಗುತ್ತದೆ; ಗುಹೇಶ್ವರಾ.       ||೪೩||

೫೯೦

ಹೋಹಾ ವೇದವೆ ತತ್ವವಾದೊಡೆ
ಮಾದಾರ ಚೆನ್ನನ ಮನೆಯಲ್ಲಿ ಉಂಬಾಗೊಬ್ಬ.,
ನಿಧಾನವುಳ್ಳ ಪದ್ಯರಾರು ಇಲ್ಲದಾದರೆ, ಶಾಸ್ತ್ರತತ್ವವಾದಡೆ
ಶಿವರಾತ್ರಿಯ ಬೇಡಂಗಿತ್ತದನೊಬ್ಬ ಸ್ತೋತ್ರಗೆಯ್ಯಲಾಗದೆ
ಆಗಮ ವಿಧಿಯಲ್ಲಿ ಮಂತ್ರಮೂರುತಿಯೆಂಬ ಮಾತದಂತಿರಲಿ,
ಅದ ಕೇಳಲಾಗದು, ಭ್ರಾಂತು ಬೇಡ.
ಭಾವಮೂರ್ತಿಗಳ ಪ್ರಮಾಣಿಸದೆ
ಆ ಕುಲವ ಕುಲವಲ್ಲವೆಂದುರೆಹೊಕ್ಕ ಕಕ್ಕಯ್ಯನ ಮನೆಯ,
ಅಕ್ಕಟ ನಿಮ್ಮತರ್ಕ ಮುಕ್ಕಾಯಿತ್ತು.
ಲೋಕವರಿಯದೆ? ಕಲ್ಲಿಲಿಟ್ಟು ಕಾಲಿಲೊದ್ದಡೆ
ಅಲ್ಲಿ ಮೂರ್ತಿ ನುಡಿಯಿತ್ತಲ್ಲಾ.
ಬಲ್ಲಿದ ದ್ವಿಜರೆಲ್ಲಾ ಹೇಳಿರೆ ಕೇಳಿರೆ
ಸಲ್ಲದು ನಿಮ್ಮ ಮಾತು ನಿಲ್ಲಲಿ.
ಬಲ್ಲಿದ ನಡದುದೆ ಬಟ್ಟೆ.
ಮಹಾಲಿಂಗ ಕಲ್ಲೇಶ್ವರಧಾರಿಗಳು ನಿಸ್ಸೀಮರು.           ||೪೪||

೫೯೧

ಆಗಮಾಚಾರವಲ್ಲದೆ ಭಕ್ತರಲ್ಲವೆಂಬ ಭ್ರಮಿತರು ನೀವು ಕೇಳಿರೆ.
ಮುಕ್ಕುಳಿಸಿದ ನೀರ ಮಜ್ಜನಕೆರವದು ಆಗಮಾಚಾರವೆ?
ಸರುವ ಕಟ್ಟಿ ಪತ್ರಿಯ ಹರಿದು ಹಾಕುವದಾವ ಮಂತ್ರದೊಳಗು?
ಸಱಸಿ ಹರಿತಂದು ಸುಱನೆ ಕಲ್ಲಲಿಡಹುದು ಇದಾವ ಮಂತ್ರದೊಳಗು?
ಅವ ಪೂಜೆಯೊಳಗೂ ಬಹುಬುದ್ಧಿ ಬೇಡ ಶರಣೆಂದು ಶುದ್ಧರಪ್ಪುದು.
ಮಹಾಲಿಂಗ ಕಲ್ಲೇಶ್ವರದೇವರು ಎಲ್ಲವ ಬಲ್ಲರು.           ||೪೫||

೫೯೨

ಮಧುರವಾಣಿಯ ಉದರದಲ್ಲಿ ಒಂದು ನಿಜ ಕುಕ್ಕುಟ ಕೂಗುತ್ತಿದೆ.
ಮೂವರ ಮೊಲೆಯನುಂಡು ಮರೆದೊರಗಬೇಡೆಂದು,
ಬೆಳಗಾಯಿತ್ತು, ಅರ್ಕೇಶ್ವರಲಿಂಗವ ನೋಡುವ ಬನ್ನಿಯೆಂದು
ಕೂಗುತ್ತಿದ್ದಿತ್ತು.     ||೪೬||

೫೯೩

ನೋಡ ನೋಡ! ಒಂದು ವಿಪರೀತ ಜಪದಿಂ
ಕೂಡಿ, ಪರಬೊಮ್ಮವನು ಉಪಮಿಸಲುಬಹುದೆ?          ||ಪ||

ಪ್ರಣವ ಮಂತ್ರವನ್ನುಚ್ಚರಿಸುತ್ತಿರೆ
ಪ್ರಣಮ ಫಣಿಯಾಗಿ ಹೆಡೆಯೆತ್ತಿಯಾಡಿತಲ್ಲಾ!
ಅಣಿಮಾದಿಯಷ್ಟಸಿದ್ಧಿ ಎಲ್ಲವನು
ಮಣಿಮಂತ್ರ ಮಾಲೆ ನುಂಗಿದ ಪರಿಭಾವವನು.            ೧

ನಿದ್ರೆಗೆಯ್ದಾ ಸರ್ಪನೆದ್ದಾಡುವನ್ನಬರ,
ಹದ್ದು ಹೊಯ್ದಾ ಕಾಶಕಾಚರಿಸಲು,
ಹದ್ದಿಂಗೆ ಹೆಡೆಯಾಗೆ, ಹದ್ದು ಸಿದ್ದರನುಂಗಿ
ಸಿದ್ಧರೆಲ್ಲರು ಬುದ್ಧಿ ಮಱೆದರಲ್ಲಾ.       ೨

ಸರ್ಪನುಸುರನೆ ತೆಗೆದು ಸಪುರವಮಾಡಿ
ಜಪದ ಮಣಿಮಾಲೆಯನು ಪವಣಿಸುತಲಿ,
ತಪ್ಪದಂಧಕನು ತನ್ನೊಪ್ಪವನು ನೋಡುತಿರೆ
ದರ್ಪಣದಿ ಪ್ರತಿಬಿಂಬ ತೋಱುತಿಹುದು!        ೩

ಫಣಿಯ ಹೆಡೆಯ ಮಣಿಯ ಮೇಲೊಂದು ಮಣಿಯು
ಎಣಿಸುವಡೆ ದಿನಮಣಿಯ ಕೋಟಿತೇಜ!
ಮಣಿಯ ವಿರಳದ ನಡುವೆ ತ್ರಿಣಯನವಯಕಂಡು
ಪ್ರಣವಗೆಯ್ದಂಧಕನ ಬೆಱಗು ನಿಬ್ಬೆಱಗು          ೪

ಮಣ್ಣಿಲ್ಲದ ಹಾಳ ಮೇಲೊಂದು ಮಣಿಯ
ಕಣ್ಣಿಲ್ಲದಂಧಕನು ನೋಡಿ ಕಂಡ!
ಬಣ್ಣವಿಲ್ಲದ ನೂಲ ಬಲಮುರಿಯನೇ ಹೊಸೆದು
ಸಣ್ಣನವಿರಳ ಮಣಿಯ ಪವಣಿಸಿದನು.            ೫

ಹೃದಯ ಕಮಲದ ಬೆಳಗಿನ ಸೂತ್ರವಿಡಿದಿಪ್ಪ
ರುದ್ರಾಕ್ಷಿ – ಭದ್ರಾಕ್ಷಿ – ಸ್ಫಟಿಕ – ಶಂಖ!
ಉದಯಾಸ್ತಮಾನವೆಂಬೆರಡಳಿದು ನಿಂದಲ್ಲಿ
ಸದ್ಭಾವವಿಡಿದು ಜಪಿಸುವ ಮಾಲೆಯು.          ೬

ನಖದ ಕೊನೆಯಲಿ ಶಕ್ತಿ, ಶಿಖಿಯ ಕೊನೆಯಲಿ ಮುಕ್ತಿ!
ಸುಖವಾಗಿ ಗುರುಹೇಳಿದುದೇ ಸತ್ಯವು!
ಸಕಲ ನಿಃಕಲದ ಸಮರಸದ ಪರಿಣಾಮದಲ್ಲಿ
ಸುಖಿ ಗುಹೇಶ್ವರಲಿಂಗ ನಿಮ್ಮಶರಣ. ೭