೫೫೮

ಕಲ್ಲ ಕಣಿಗಳ ತಂದು ಪ್ರತಿಮೆಗಳ ಮಾಡಿ,
ಕಲ್ಲುಕುಟಿಕನಲ್ಲಿಯೇ ಗುರುವಾದ, ಕಲ್ಲು ಶಿಷ್ಯನಾದ.
ಹಿಂದಣಾದಿಯನರಿಯದ ಗುರು ಮುಂದೆ ವೇದಿಸಲಿಲ್ಲ,
ಉಪದೇಶವ ಕೊಳ್ಳಲರಿಯದ ಶಿಷ್ಯನು.
ಈ ಎರಡು ಕಲ್ಲುಕುಟಿಕನಂತೆ ಕಾಣಾ ಕಲಿದೇವಯ್ಯ.     ||೧೩||

೫೫೯

ವೇಷವ ಹೊತ್ತವರ ಬಿಟ್ಟಿಯ ಹೊತ್ತವರೆಂಬೆ.
ಪಸರವನಿಕ್ಕುವರ ಕಂಚಗಾರರೆಂಬೆ.
ಲಿಂಗವತೋರಿ ಉಂಬವರ ಭಂಗಾರರೆಂಬೆ.
ಡವಡಂಬಟ್ಟ ಬೆವರಹಾರವ ಲಾಭವಾಗಿ ಬದುಕುವ
ಫಲದಾಯರೆಲ್ಲರೂ ಧರ್ಮಕಾಮ ಮೋಕ್ಷದಲ್ಲಿ ಸಿಕ್ಕಿದವರೆಂಬೆ.
ಅಲ್ಲಿಂದತ್ತ ನಿಮ್ಮ ಶ್ರೀ ಚರಣದ ಸೇವೆಯಮಾಡುವ ಲಿಂಗನಿಷ್ಠೆ
ನಿಜೈಕ್ಯರ ಕರದು ಎನಗೆ ತೋರಾ ಕಲಿದೇವಯ್ಯ.        ||೧೪||

೫೬೦

ತನು ಮನ ಧನವ ಬಳಲದೆ ಉದ್ದಂಡವೃತ್ತಿಯಲ್ಲಿ
ಧನವ ತಂದು ಗುರುಲಿಂಗ ಜಂಗಮಕ್ಕೆ ವೆಚ್ಚಿಸಿ ದಾಸೋಹವಮಾಡಿ
ಭಕ್ತನಾದೆಹೆನೆಂಬವನ ತೋರಿದಿರಯ್ಯಾ.
ಅದೇಕೆಂದಡೆ:
ಅವನು ಪರಧನ ಚೋರ, ಅವಪಾಪಿ
ಅವಂಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ ರೌರವನರಕ.
ಅವನ ಕಾಯಕವ ವಿಚಾರಿಸದೆ ಅವನ ಮನೆಯಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೇಳನೆಯ ಪಾತಕ.
ಇಂತಿವರ ಬದುಕು ಹಲಿ ಕಪಿಲೆಯ ತಿಂದು ಮಿಕ್ಕುದ
ನರಿ ತಿಂಬಂತೆ ಕಾಣಾ ಕಲಿದೇವಯ್ಯ.            ||೧೫||

೫೬೧

ಮಹಾಜ್ಞಾನ ಗುರಿವಿನಲ್ಲಿ ಸಾಹಿತ್ಯ,
ಸುಜ್ಞಾನವು ತನ್ನಲ್ಲಿ ಸಾಹಿತ್ಯ, ಜ್ಞಾನವು ಲಿಂಗದಲ್ಲಿ ಸಾಹಿತ್ಯ.
ಇಂತು ಜ್ಞಾನ ಸುಜ್ಞಾನ ಮಹಾಜ್ಞಾನ ಜಂಗಮದಲ್ಲಿ ಸಾಹಿತ್ಯ.
ಇದು ಕಾರಣ ಸಕಲಾದಿ ಭೋಗಾದಿ ಭೋಗಂಗಳೆಲ್ಲವನು
ಜಂಗಮಕ್ಕೆ ಕೊಡದೆ ಲಿಂಗಕ್ಕೆ ಕೊಡಲಾಗದು.
ಅದೇನುಕಾರಣವೆಂದಡೆ:
ಸರ್ವಸುಖಾದಿಸುಖಂಗಳನು ಜಂಗಮಕ್ಕೆ ಅರ್ಪಿಸಿದಡೆ
ಆ ಸುಖಂಗಳನು ಸುಖಿಸಬಲ್ಲನಾಗಿ, ತನಗೆ ಪಸಾದವಾಯಿತ್ತು.
ಲಿಂಗಕ್ಕರ್ಪಿಸಿದಾಡುವ ಸುಖವನು ಸುಖಿಸಲರಿಯರಾಗಿ,
ತನಗೆ ಪ್ರಸಾದವಿಲ್ಲ, ಮುಕ್ತಿಯಿಲ್ಲ.
ಅದುಕಾರಣವಾಗಿ ಜಂಗಮಕ್ಕೆ ಮಾಡದೆ ಲಿಂಗಕ್ಕೆ ಆರುಮಾಡಿದಡೂ
ಅಲ್ಲಿ ಲಿಂಗಕ್ಕೆ ತೃಪ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಯ್ಯ.            ||೧೬||

೫೬೨

ಲಿಂಗವೇದಿ ಬಂದೆನ್ನಂಗಣವ ಮೆಟ್ಟಿದಡೆ
ಹೆಂಡತಿಗಂಡನನರಿವಂತೆ ಅರಿವೆ.
ಅವರ ಬೆನ್ನಲ್ಲಿ ಬಂದ ಮಂದಿ ಹಲವಾದಡೆ
ಅದ

[1]ಕ್ಕೆ ಪ್ರೀತಿ ಪ್ರೇಮವ ಮಾಡಿಚ್ಛೆಯಲ್ಲಿ
ಗಂಡನ ನೆರವಂತೆ ನೆರೆವೆ ಕಲಿದೇವಯ್ಯ.      ||೧೭||

೫೬೩

ಅನ್ಯಲಿಂಗ ಅನ್ಯಲಿಂಗ ಅನ್ಯಲಿಂಬಗವೆಂದೆಂಬಿರಿ
ಅನ್ಯಲಿಂಗವಾವುದು, ತನ್ನ ಲಿಂಗವಾವುದು
ಬಲ್ಲವರು ನೀವು ಹೇಳಿರೆ?
ಅಂಗದ ಮೇಲೆ ಲಿಂಗವುಳ್ಳವರ ಮನೆಯ ಹೊಗಲಾಗದು,
ಬಱುಕಾಯರಿಗೆ ನೀಡಲಾಗದು.[2]ಗುರುಲಿಂಗ ಜಂಗಮ ಪ್ರಸಾದವಿಲ್ಲದವರ ಕಂಡಡೆ[3] ಮಾಡುವಾತ ಭಕ್ತನಲ್ಲ ಕೂಡಲಚೆನ್ನ ಸಂಗಮದೇವಾ.   ||೧೮||

೫೬೪

ವೃಕ್ಷಾಶ್ರಮದಲ್ಲಿರ್ದು ಭಿಕ್ಷಾಪರಿಣಾಮಿಯಾಗಿರ್ದಡೇನು?
ಉಟ್ಟುದನುಳಿದು ಬತ್ತಲೆಯಾಗಿರ್ದಡೇನು?
ಕಾಲರಹಿತನಾದಡೇನು? ಕರ್ಮರಹಿತನಾದಡೇನು?
ಕೂಡಲಚನ್ನಸಂಗನ ಅನುಭಾವವಱೆಯದವರು
ಏಸುಕಾಲ ಇರ್ದಡೇನು, ವ್ಯರ್ಥಕಾಣಿರೋ.     ||೧೯||

೫೬೫

ಅನುಭಾವ ಅನುಭಾವವೆಂದೆಂಬಿರಿ:
ಅನುಭಾವವೆಂಬುದು ನೆಲದ ಮರೆಯ ನೀಧಾನ ಕಾಣಿಭೋ!
ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿಭೋ!
ಅನುಭಾವವೆಂಬುದು ರಚ್ಚೆಯ ಮಾತೆ?
ಅನುಭಾವವೆಂಬುದು ಸಂತೆಯ ಸುದ್ದಿಯೇ?
ಅನೂಭಾವವೆಂಬುದು ಬೀದಿಯ ಪಸರವೆ?
ಏನೆಂಬೆ ಹೇಳಾ ಮಹಾಘನವನು!
ಆನೆಯ ಮಾನದೊಳಗಿಕ್ಕಿದರಡಗುವುದೆ, ದರ್ಪಣದೊಳಗಡಗುವುದಲ್ಲದೆ?
ಕಂಡ ಕಂಡಲ್ಲಿ ಗೋಷ್ಠಿ, ನಿಂದನಿಂದಲ್ಲಿ ಅನುಭಾವ,
ಬಂದಬಂದಲ್ಲಿ ಪ್ರಸಂಗವ ಮಾಡುವ
ಪಾತಕರ ತೋರದಿರು ಕೂಡಲಚೆನ್ನಸಂಗಮದೇವಾ.    ||೨೦||

೫೬೬

ಮುನ್ನಿನಾದ್ಯರ ವಚನ ಲಿಂಗದ ನಡೆ, ಲಿಂಗದ ನುಡಿ;
ಜಂಗಮದ ನಡೆದ, ಜಂಗಮದ ನುಡಿ; ಪ್ರಸಾದದ ನಡೆ, ಪ್ರಸಾದದ ನುಡಿ;
ಶ್ರುತವ ತೋರಿ ನುಡಿವರು; ಅಲ್ಲಾ ಎಂದಡೆ ದೃಷ್ಟವ ತೋರಿ ನಡೆವರು.
ಇಂತಪ್ಪ ಪುರಾತನರ ವಚನಂಗಳಿಗೆ ಅನುಸಾರಿಯಾಗಿ
ಮಾಡಿದೆನೆಂಬ ಕರ್ಮಿಯನೇನೆಂಬೆ?[4]ಸ್ಥಳ ಕುಳದ[5] ಲಿಂಗಾನುಭಾವಿಗಳು ಕೇಳಿದಡೆ ಚಿಃ ಎಂಬರು!
ಹೊನ್ನು ಹಿತ್ತಾಳೆಯ ಕೆಲಸದಂತೆ,
ಸಿಂಹದ ನಡು ಸಣ್ಣವೆಂದಡೆ, ನಾಯ ನಡು ಸಣ್ಣದೆಂಬ
ಪಂಚಮಹಾಪಾತಕರ ನುಡಿಯ ಕೇಳಲಾಗದು.
ಓಡ ಹಿಡಿದು ಮಸಿಯಾಗಲೇಕೆ, ಕೂಡಲಚನ್ನಸಂಗಮದೇವಾ?    ||೨೧||

೫೬೭

ಎಂಜಲು ಮಾತನುಡಿವ ರಂಜಕರೆಲ್ಲರೂ
ಮಿಗೆಮಿಗೆ ಮೀಸಲ ತಾವೆತ್ತ ಬಲ್ಲರೊ!
ಮೀಸಲು ಎಂಜಲಹುದೆ? ಎಂಜಲು ಮೀಸಲಹುದೆ?
ಮಾತಿನ ಬಣಬೆಯ ಮೇದ ಪಶುಪ್ರಾಣಿಯಂತೆ
ಎಂಜಲುಮಾತ ನುಡಿವುತ್ತಿಹರು.
ಲಿಂಗ ಸಕೀಲ ಸಂಯೋಗದ ವರ್ಮಸ್ಥಲವನವರೆತ್ತ ಬಲ್ಲರು!
ಕೂಡಲಚೆನ್ನಸಂಗಯ್ಯನಲ್ಲಿ ಶಬ್ದ ಸೂತಕಿಗಳೆಲ್ಲರೂ ರೌರವನರಕಿಗಳು.     ||೨೨||

೫೬೮

ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು.
ಮುಂದಣ ಕವಿಗಳೆನ್ನ ಕರುಣದ [6]ಕಂದಗಳು[7].
ಆಕಾಶದ ಕವಿಗಳೆನ್ನ ತೊಟ್ಟಿಲಕೂಸು.
ಹರಿಬ್ರಹ್ಮಾದಿ ದೇವತೆಗಳೆನ್ನ ಕಕ್ಷೆಕುಳ.
ನೀ ಮಾವ ನಾನಳಿಯ ಗುಹೇಶ್ವರಾ. ||೨೩||

೫೬೯

ಕವಿತ್ವ [8]ಸಾಧಕ[9]ರೆಲ್ಲರೂ ಕಳವಳಿಸಿ ಹೋದರು;
ವಿದ್ಯಾಸಾಧಕರೆಲ್ಲರೂ ಬುದ್ಧಿಗೇಡಿಗಳಾದರು;
ತತ್ವಸಾಧಕರೆಲ್ಲರೂಭಕ್ತಿಹೀನರಾದರು;
ಲಿಂಗಸಾಧಕರೆಲ್ಲರೂ ಭವಭಾರಿಗಳಾದರು; ಕೂಡಲಚನ್ನಸಂಗಯ್ಯಾ
ನಿಮ್ಮ ಬಸವಣ್ಣ ಜಂಗಮಸಾಧಕನಾಗಿ ಸ್ವಯಲಿಂಗವಾದನು.      ||೨೪||

೫೭೦

ಗುರುವ ನರನೆಂದನಾದಡೆ, ಹಿಂದಣ ಭವಮಾಲೆ ಹಿಂಗದು;
ಗುರು ಶಬ್ದಕ್ಕೆ ರೋಷವ ಮಾಡಿದಡೆ, ಶ್ವಾನನ ಬಳಗದಲ್ಲಿಪ್ಪನು;
ಗುರೂಪದೇಶವ ಮೀರಿದನಾದಡೆ, ಪೂರ್ವದ ಕರ್ಮಹಿಂಗದು;
ಇದು ಕಾರಣ ಶ್ರೀಗುರುಲಿಂಗವು ಪರಶಿವನೆಂದಱೆವುದು.
ಕೂಡಲಚನ್ನಸಂಗಯ್ಯಾ, ಇದ ನಂಬದಿರ್ದಡೆ ಭವಹಿಂಗದು.       ||೨೫||

೫೭೧

ಅಱಿವಿಲ್ಲದ ಕಾರಣವೀಜೀವರು ಮರಳಿ ಭವಕ್ಕೆ ಬಂದರು.
ಅಱಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಗುರುವಿಲ್ಲ,
ಗುರುವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ,
ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ.
ಅಱಿವು[10]ಸಹಿತ[11] ಆಚಾರ, ಆಚಾರ[12]ಸಹಿತ[13] ಗುರು,
ಗುರು[14]ಸಹಿತ[15]ಲಿಂಗ, ಲಿಂಗ [16]ಸಹಿತ[17] ಜಂಗಮ,
ಜಂಗಮ[18]ಸಹಿತ[19] ಪ್ರಸಾದ, ಪ್ರಸಾದ[20]ಸಹಿತ[21] ಗಣತ್ವ;
ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ
ಈ ಸ್ಥಲವುಂಟಾದವರಿಗೆಲ್ಲಾ ಸ್ಥಲವುಂಟು;
ಆ ನಿಷ್ಕಳ ನಿರ್ವಾನ ಲಿಂಗೈಕ್ಯನ ಪೂರ್ವ.      ||೨೬||

೫೭೨

ಆಸೆಯಟಮಟದುದರ ಪೋಷಣಕೆ ಕೆಲ ವಿಕೃತ
ವೇಷಗಳ ನಟಿಸಿ ಬಹಿರಂಗಬಳಕೆಯ ಬಯಲು
ಹುಸಕರನೊಲ್ಲ: ವಿಶ್ವಾಸ ಭಕ್ತಿಯ ವೇಷದೊಳು ಶಿವನಿಪ್ಪನು.      ||ಪ||

ಅಶನ ದೊರಕದಡೆ ಉಪವಾಸಿ ತಾನೆಂದೆಂದು,
ವ್ಯಸನಗೂಡದಡೆ ನಿಸ್ಸಂಗಿ ತಾನೆಂದೆಂದು,
ವಸನ ಘಟಿಸದೆ ಕೌಪುಗಟ್ಟಿ; ಇಂತೊಂದೊಂದ ಕೊಂದೊಂದ ಗಳಿಸಿ, ತನಗೆ
ವಶವಲ್ಲ ಪ್ರಾಕೃತದ ಕರ್ಮ! ಮೈಸೋಭತೆಯ
ದೆಸೆಯಿಂದ ಲೋಚು – ಬೋಳಾಗಿ, ಜಡೆಗಟ್ಟಿ, ದಡೆ
ದೆಸೆಗಳಂ ತಿರುಗಿ ಭಿಕ್ಷಾಂದೇಹಿಯಾದ ಸಂದೇಹಿಗಳ ಶಿವನೊಲ್ಲನು.        ೧

ಧೃತಿಗೆಟ್ಟು ಕಂಡಕಂಡವರ್ಗೆ ವೇಷವ ತೋಱಿ;
ಮತಿಗೆಟ್ಟು, ಮೂಲಮಂತ್ರವನಲ್ಲಿಗಲ್ಲುಸುರಿ;
ಗತಿಗೆಟ್ಟು, ದೊರಕಿದಲ್ಲುಂಡುಂಡು; ಲಾಂಛನಾಡಂಬರವ ತೋರಿ; ಪರರ
ಸ್ತುತಿಗೆಯ್ದು ದೈನ್ಯದಿಂದ ಧಾತುಗೆಟ್ಟೊಡಲಾಶೆ –
ಗತಿ ತೃಷ್ಣೆಯಿಂದ ಕೆಲ ವ್ರತ ನೇಮ ಛಲಗಳಿಂ
ದಿತರ ಜನ ಮೆಚ್ಚಿ ಸುವರೊಳಗಿರನು ಶಿವನು ವಿಶ್ವಾಸವೇಷದೊಳಿಪ್ಪನು.   ೨

ಅಱಿತವಾಚಾರಕ, ಜ್ಞಾನಾನುಭವ, ಪರಿಣಾಮ –
ದೆಱಕ, ಯೋಗಾಕ್ಷರದ ಮಹಿಮೆ, ಸಮತಾಭಾವ
ಕಱಿಗೊಂಡು; ಆಶೆಯೆಂಬಜ್ಞಾನವಳಿದು ಮನಬೋಳಾದ ಬೋಳು! ಶಿವನ
ಕುಱುಹಿಂತುಟೆಂದು ತೋಱಲು ಸುಳಿವ ಲಾಂಛನದ
ಮಱೆಯ ಪರತತ್ವ ಬೋಳಲ್ಲದೆ, ವೃಥಾ ಕೇಶ –
ದೊಱೆದಾಶಾಪಾಶದಿಂದ ಹೊತ್ತು ತೊಳಲುವ ವೇಷಭಾರವೆ ಭವಭಾರವು.            ೩

ಮನಸು ಚಿತ್ತಿನೊಳಡಂಗಿರೆ ದಿಗಂಬರ ಭಾವ,
ತನು ಶೂನ್ಯವಾಗಲದು ಬೋಳು, ಆವಂಗದಿಂ
ಧನ ಬರಲು ಬಿಡುಹವೆ ನಿರಾಶತ್ವ, ಜಾಗ್ರತ್‌ಸ್ವಪ್ತನ ಸುಷುಪ್ತಿಯೊಳಳುಪಿನ
ತನುಸೋಂಕುಕ ರುಚಿ ರೂಪಿನೆಱಕವಿಲ್ಲದುದೆ ತಾ
ಘನ ಬ್ರಹ್ಮಚರ್ಯವೀ ಚತುರ್ವಿಧದೊಳು ಲಿಂಗ –
ದನುವನಂಗೀಕರಿಸಿ ಸುಳಿವುದೇ ಶಿವವೇಷ; ಅಲ್ಲದುದೆ ಉದ್ದೇಶವು.          ೪

ತನುಪ್ರಾಣದವಗುಣಾದಿಗಳ ಧಿಕ್ಕರಿಸಿ,ತ –
ನ್ನನುವಿಂಗೆ ತಂದು; ವ್ರತಬಂಧನಂಗಳ ಸತ್ಯ
ವನು ತೋಱದಖಿಳ ವಿಷಯಂಗಳನು ರೂಹಿಸುವನಲ್ಲಿಗಲ್ಲಿಗೆ ಹರಿಯದೆ
ಅನುಕರಿಸಿ ನಡೆದು, ಪರವೆಂಬಂಗ ಪಾತ್ರೆಯೊಳು
ಮನ ಲೀಯವಾದ; ಅಱಿವಱತ ಪರಮಜ್ಞಾನ –
ದನುರೂಪನಾದ ಮಹಿಮನ ಹುಲಿಗೆಱೆಯ ವರದ ಸೋಮೇಶನೆಂಬೆನು.   ೫

೫೭೩

ಸ್ಥಾವರ ಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ ಬಸವಣ್ಣನಲ್ಲದೆ?
ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು.
ಲಿಂಗಕ್ಕಾದಡೆಯು ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ?
ಗುರುವಿಂಗಾದಡೆಯು ಜಂಗಮವೆ ಬೇಕು, ಜಂಗಮವಿಲ್ಲದ ಗುರುವುಂಟೆ?
ಎಲ್ಲಿ ಜಂಗಮವಿದ್ದಲ್ಲಿ ಗುರುಲಿಂಗ ಜಂಗಮ ಪಾದೋದಕ
ಪ್ರಸಾದ ಅನುಭಾವ ಸನ್ನಹಿತವಾಗಿಹುದು.
ಇಂತಿವರ ಭೇದವ ಬಸವಣ್ಣಬಲ್ಲನು.
ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು
ನಮೋ ನಮೋ ಎಂಬೆನು ಕಾಣಾ ಕಲಿದೇವಯ್ಯ.       ||೨೭||

೫೭೪

ಅಂಗದ ಕೊನೆಯಲ್ಲಿ ಲಿಂಗಮುಂತಲ್ಲದೆ ಸಂಗವಮಾಡನಾ ಶರಣನು.
ನಯನದ ಕೊನೆಯಲ್ಲಿ ಲಿಂಗಮುಂತಲ್ಲದೆ ಅನ್ಯವ ನೋಡನಾ ಶರಣನು.
ಶ್ರೋತ್ರದ ಕೊನೆಯಲ್ಲಿ ಲಿಂಗಮುಂತಲ್ಲದೆ ಅನ್ಯವ ಕೇಳನಾ ಶರಣನು.
ಘ್ರಾಣದ ಕೊನೆಯಲ್ಲಿ ಲಿಂಗಮುಂತಲ್ಲದೆ ಪರಿಮಳವ ವೇಧಿಸನಾ ಶರಣನು.
ಜಿಹ್ವೆಯ ಕೊನೆಯಲ್ಲಿ ಲಿಂಗಮುಂತಲ್ಲದೆ ರುಚಿ[22]ಸನಾ ಶರಣನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣ ಸರ್ವಾಂಗಲಿಂಗಿಯಾದನು.      ||೨೮||

೫೭೫

ಶಿವನೆ ಬಸವಣ್ಣನ ರೂಪಾಗಿ
ಅವಿರಳತತ್ವಾಗಿರುತಿಪ್ಪ     ||ಪ||

ಪೃಥ್ವಿಯಂಗವಾಗಿ, ‘ಅ – ವಿತಥ’ವಿಲ್ಲದೆ
ಮಥನದಿ ಭಕ್ತ ಸುಚಿತ್ತದ
ಹಸ್ತದೊಳಾಚಾರಲಿಂಗವಾಗಿರ್ದು, ಮತ್ತೆ
ನಾಸಿಕದಲಿ ಗಂಧವ ಭೋಗಿಪ್ಪ[23].    ೧

ಜಲವೆ ಅಂಗವಾಗಿ, ಕುಲವಳಿವ
ಬಲುಹುಳ್ಳ ಮಾಹೇಶ್ವರ ಬುದ್ಧಿಯ
ಬಲೆಯೊಳು ಗುರುಲಿಂಗವಾಗಿ ಸಿಲುಕಿ
ಜಿಹ್ವೆಯೊಳು ರುಚಿಯನ್ನು ಭೋಗಿಪ್ಪ[24].         ೨

ಅಗ್ನಿ ಅಂಗವಾಗಿಪ್ಪ ಪ್ರಸಾದಿಯ
ಹಂಗಿಲ್ಲದ ನಿರಹಂಕಾರ ಹಸ್ತದಿ
ಭಂಗವಳಿದು ಶಿವಲಿಂಗವಾಗಿರ್ದು.
ಕಂಗಳಲಿ ರೂಪನ್ನು ಭೋಗಿಪ್ಪ[25].     ೩

ಅನಿಲನಂಗವಾದ ಪ್ರಾಣಲಿಂಗಿಯ ಸು
ಮನವೆಂಬ ಹಸ್ತದೊಳನುಶ್ರುತ
ಘನಮಹಾ ಚರಲಿಂಗವಾಗಿ ಸಿಲುಕಿ ಸ್ಪ
ರ್ಶನೇಂದ್ರಿಯದಲ್ಲಿ ಭೋಗಿಪ್ಪ[26].      ೪

ಆಕಾಶವೆ ಅಂಗವಾಗಿಪ್ಪ ಶರಣನ
ವಿಕಸಿತ ಸುಜ್ಞಾನ ಹಸ್ತದಿ
ಏಕೋ ಪ್ರಸಾದಲಿಂಗವಾಗಿರ್ದು
ಶ್ರೋತ್ರೇಂದ್ರಿಯದಲ್ಲಿ ಭೋಗಿಪ್ಪ[27].   ೫

ಭಾವಾಂಗ ಹಸ್ತವಾದ ಶಿವೈಕ್ಯಂಗೆ
ಸ್ವಾನುಭಾವ ಸಮರಸದಲ್ಲಿ
ಅನುಭಾವದೊಳು ಮಹಾಲಿಂಗವಾಗಿರ್ದು
ವಿವರಿಸಬಾರದ [28]ಭೋಗಾನುಭೋಗಂ.[29]     ೬

ಸರ್ವಾಂಗವು ಲಿಂಗಸಂಗಿಯಾಗಿರ್ದು,
ಸರ್ವೇಂದ್ರಿಯ ಸನುಮತವಾಗಿ,
ನಿರ್ವಾಹ ಕೂಡಲಚೆನ್ನ ಸಂಗಯ್ಯನಲ್ಲಿ,
ಉರ್ವಿಗೆ ಶರಣ ಮಹಂತಂ ಭೋ.    ೭

೫೭೬

ಭಕ್ತರೆ ಕುಲಜರೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ!
ವ್ಯಾಕುಳ ನಿರಾಕುಳವೆಂಬೆರಡು ಕುಳ ನೋಡಾ.
ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ.
ವ್ಯಾಕುಳವೆ ಪಾಪ, ನಿರಾಕುಳವೆ ನಿಷ್ಪಾತ.
ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ.
ಸಾಕ್ಷಿ:
ಭವಬೀಜಂ ತಥಾ ಭಕ್ತಿರ್ಭಕ್ತಿ ಬೀಜಂ ತಥಾಶಿವಃ|
ಶಿವಬೀಜಂ ತಥಾ ಜ್ಞಾನಂ ತ್ರೈಲೋಕ್ಯದುರ್ಲಭಂ||
ಎಂದುದಾಗಿ,
ಅಜ್ಞಾನಿಗೆ ಕತ್ತಲೆಯುಂಟು, ಸುಜ್ಞಾನಿಗೆ ಕತ್ತಲೆಯಿಲ್ಲ.
ಜಾತಂಗೆ ಹೊಲೆಯುಂಟು, ಅಜಾತಂಗೆ ಹೊಲೆಯಿಲ್ಲ.
ಕುಲದೀಪ ಕೂಡಲಚೆನ್ನಸಂಗಾ ನಿಮ್ಮಶರಣನು.          ||೩೦||

೫೭೭

ಹೊನ್ನುಳ್ಳಾತ ಭಕ್ತನಲ್ಲ, ಹೆಣ್ಣುಳ್ಳಾತ ಶರಣನಲ್ಲ,
ಮಣ್ಣುಳ್ಳಾತ ಲಿಂಗೈಕ್ಯನಲ್ಲ.
ಹೊನ್ನು ಜೀವ, ಹೆಣ್ಣು ಪ್ರಾಣ, ಮಣ್ಣು ದೇಹ.
ಹೊನ್ನು ಭವಿ, ಹೆಣ್ಣು ಭವ, ಮಣ್ಣ ಹಮ್ಮು.
ಇಂತೀ ತ್ರಿವಿಧವಳಿದ ನಿಃಸ್ಥಲದವರ ಪೂರ್ವ ಕೂಡಲಚೆನ್ನಸಂಗಯ್ಯ         ||೩೧||

೫೭೮
ಕಾಗಿಯರೆಂದವನಲ್ಲದೆ ಭಕ್ತನಲ್ಲ,
ಕೋಣನರೆಂದವನಲ್ಲದೆ ಮಹೇಶ್ವರನಲ್ಲ,
ಕೋಡಗನರೆಂದವನಲ್ಲದೆ ಪ್ರಸಾದಿಯಲ್ಲ,
ನಾಯರೆಂದವನಲ್ಲದೆ ಪ್ರಾಣಲಿಂಗಿಯಲ್ಲ,
ಎರುಹರೆಂದವನಲ್ಲದೆ ಶರಣನಲ್ಲ.
ಇಂತಿವರೈವರ ತಿಂದವರನಲ್ಲದೆ ಲಿಂಗೈಕ್ಯನಲ್ಲ ಕಾಣಾ ಗುಹೇಶ್ವರ.          ||೩೨||

೫೭೯

ಸಮತೆ ಸಯವಾದ ಶರಣಂಗೆ ಅಱಿವು ಮಱಿವುಗಳುಂಟೆ?
ಉಪಮೆ ನಿಃಸ್ಥಲವಾದ ಶರಣಂಗೆ ಶಬ್ದ ಸಂದಣಿಯುಂಟೆ?
ಅಖಂಡಿತ ಲಿಂಗಕ್ಕೆ ಅಪ್ರಮಾಣ ಶರಣಂಗೆ
ಸೀಮೆ ಸಂಬಂಧವೆಂಬ ಸಂಕಲ್ಪವುಂಟೆ?
ಇದುಕಾರಣ, ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣಂಗೆ ಬಂಧನವಿಲ್ಲ.         ||೩೩||


[1] x (ಅ)

[2] ವೀರಶೈವವಿಲ್ಲದ ಗುರುಲಿಂಗ ಜಂಗಮ ಕಂಡು (ಅ,ಬ)

[3] ವೀರಶೈವವಿಲ್ಲದ ಗುರುಲಿಂಗ ಜಂಗಮ ಕಂಡು (ಅ,ಬ)

[4] x (ಬ)

[5] x (ಬ)

[6] ಮಕ್ಕಳು (ಆ)

[7] ಮಕ್ಕಳು (ಆ)

[8] ಕಲಿಕ (ಬ)

[9] ಕಲಿಕ (ಬ)

[10] ಸಾಹಿತ್ಯ (ಬ)

[11] ಸಾಹಿತ್ಯ (ಬ)

[12] ಸಾಹಿತ್ಯ (ಬ)

[13] ಸಾಹಿತ್ಯ (ಬ)

[14] ಸಾಹಿತ್ಯ (ಬ)

[15] ಸಾಹಿತ್ಯ (ಬ)

[16] ಸಾಹಿತ್ಯ (ಬ)

[17] ಸಾಹಿತ್ಯ (ಬ)

[18] ಸಾಹಿತ್ಯ (ಬ)

[19] ಸಾಹಿತ್ಯ (ಬ)

[20] ಸಾಹಿತ್ಯ (ಬ)

[21] ಸಾಹಿತ್ಯ (ಬ)

[22] + ಯನಿಶ್ಚೈ (ಚಬವ)

[23] ಪ್ಪೆ (ಆ)

[24] ಪ್ಪೆ (ಆ)

[25] ಪ್ಪೆ (ಆ)

[26] ಪ್ಪೆ (ಆ)

[27] ಪ್ಪೆ (ಆ)

[28] ಭೋಗಂ ಭೋ (ಶಿ. ಗೀತಾಂಜಲಿ)

[29] ಭೋಗಂ ಭೋ (ಶಿ. ಗೀತಾಂಜಲಿ)