೫೪೯

ಪದ್ಮದೊಳಗಣ, ಪತ್ರದೊಳಗಣ, ದ್ವಿದಳದೊಳಗಣ
ಸ್ವರದ ಬಯಕೆಯೊಳಗಣ, ಕರ್ಣಿಕಾ ಕುಹರದೊಳಗಣ
ಅಜಸ್ಥಲದೊಳಗಣ ಅಹಿಮಧ್ಯದೊಳಗಣ
ಹಲವುಕೋಟಿ ಪತ್ರದೊಳಗಣ ಕುಹರ ಪದ್ಮಮಧ್ಯದೊಳಗಣ
ಪ್ರಾಣವಿಪ್ಪುದೆಂದು ಆತ್ಮನ ನಿಶ್ಚೈಸುವೆನೆನುತ,
ಅನಂತ ಯೋಗಿಗಳು ಸಂಸಾರದ ವರ್ಮವ ಕೆಡಿಸಿಹೆವೆಂದು,
ಅನಂತ ನಾಳದಲ್ಲಿ ನಿರ್ಬಂಧವಮಾಡಿ ಅಮೃತರಾದೆಹೆವೆಂದು,
ಅಮೃತವ ದಣಿಯಲುಂಡೆಹೆವೆಂದು,
ನಾನಾ ಕುಟಿಲವಾದ ಭಾವದಲ್ಲಿ ಐದಾರೆ ಕಾಣೆವಯ್ಯ.
ನಿಮ್ಮ ಶಿವಾಚಾರದ ಕುಳವನರಿಯದೆ ಅನೇಕರು
ಬಂಧನದಲ್ಲಿ ಸಿಲುಕಿದರು ಕಾಣಯ್ಯ!
ನೀವು ಚತುರ್ವಿಧಸ್ಥಲ ಮಂಟಪವ ಮಾಡಿದ ಸಿಂಹಾಸನದ ಮೇಲಿರ್ದು
ನಿತ್ಯರಿಗೆ ಭಕ್ತಿಯ

[1]ನೀವುದ[2] ಕಂಡ ಭಕ್ತರು ನಿತ್ಯರು.
ನಿಮಗೆ ಶರಣಾಗತಿವೊಕ್ಕೆ; ಮಹಾಪ್ರಸಾದ,
ದೇವಾತ್ಮನು ಪರಿಭವಕ್ಕೆ ಬಪ್ಪನೆಯೆಂದರೆ ಅದು ಹುಸಿ ಕಾಣಿರೊ.
ಆ ಆತ್ಮನಿಪ್ಪ ನೆಲೆಯ ಕೇಳಿರೊ.
ಗುರು ಭಕ್ತಿಯಲ್ಲಿಪ್ಪ, ದಾಸೋಹದಲ್ಲಿಪ್ಪ, ಅರ್ಪಿತ ಪ್ರಸಾದದಲ್ಲಿಪ್ಪ
ಮಾಡುವಲ್ಲಿಪ್ಪ, ಮಾಡಿಸಿ ಕೊಂಬಲ್ಲಿಪ್ಪ,
ತನುಮನಧವೊಂದಾಗಿ ನಿವೇದಿಸುವಲ್ಲಿಪ್ಪ ಪರಿಪೂರ್ಣ
ಆತ್ಮಕನೆಂಬುದು ನಿತ್ಯರಿಗೆ ನೀವು ಕಾರುಣ್ಯವ ಮಾಡಿದಿರಿ.
ನಮ್ಮ ಕರುಣಕಟಾಕ್ಷೆಯಲ್ಲಿ ಬಸವಣ್ಣ ನಲ್ಲದೆ ಮಾಡುವರಿಲ್ಲ,
ಮಾಡಿಸಿಕೊಂಬವರಿಲ್ಲ.
ಅದುಕಾರಣ ನಿಮ್ಮ ಬಸವಣ್ಣ ಹೇಳಿತ್ತ ಮೀರೆ ಕಾಣಾಕಲಿದೇವಯ್ಯ. ||೬||

೫೫೦

ಎಲೆ ಮನವೆ ಕೇಳಾ ಶಿವನು ನಿನಗೆ
ಅನಂತಾನಂತ ಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ
ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂ[3]ದು.
ಆ ಪ್ರಭಾ[4]ಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ
ಮಹಾಲಿಂಗೈಕ್ಯವನು ಮಹಾಲಿಂಗಯೋಗ [5]ಪ್ರಭಾವ[6]ವನು
ಅಷ್ಟಾಷಷ್ಠಿ ತೀರ್ಥಂಗಳನು ಶಿವನು
ಅನಂತ ಪ್ರಾಣಿಗಳಿಗೆ ಸಾಧನವೆಂದು ಮಾಡಿದನು.
ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ
ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಗೊಳಿಸಿದನು.
ಅದರ ಮೇಲೆ ಚತುರ್ವಿಧ ಪದಂಗಳ ಚೌ[7]ಕವಮಾಡಿ ಸ್ಥಲಂಗೊಳಿಸಿದನು.
ಅನಾದಿ ಸಂಸಿದ್ಧ ದಾದಿಲಿಂಗೇಶ್ವರ ದೇವರ ಸ್ಥಲಂಗೊಳಿಸಿ[8]ದನು[9].
ಎಲ್ಲಾ ಯಂತ್ರಕ್ಕೆ [10]ಅಮೃತ[11] ಕಳೆಯನೀಯಲೆಂದು
ಕಪಿಲಸಿದ್ಧ ಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು.
ಸಿದ್ಧ ಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ
ಗುರು ಮರ್ತ್ಯಕ್ಕೆ ಬಂದ ಕಾಣಾ ಮನವೆ.
ಆಚಾರಗೋಚರವಾಗಬೇಕೆಂದು ಅನಿರ್ವಯಲೆಂಬ ಸ್ವಾಮಿ
ತಾನೆ[12]ಯಾಗಿ[13] ಓಂಕಾರ ಊರ್ಧ್ವರೇತ ಶಿವನಾಗಿ
ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ.
ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ತೋರಿಹೆವೆನುತ
ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ.
ಜ್ಞಾನವಾಹನವಾಗಿ ತನುಮನಧನದ ಮೇಲೆ ನಡದು
ಅನಂತ ಮೂರ್ತಿಗಳ ಪವಿತ್ರವ ಮಾಡಲೆಂದು
ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು
ಜಂಗಮವಾಗಿ ಪ್ರಭುದೇವರು ಬಂದ ಕಾಣಾ ಮನವೆ.
ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ,
ಪ್ರಸಾದಿಯನುಭಾವದಾಭರಣವೆ ಜಂಗಮವಾಗಿ,
ಇಂತೀ ಚತುರ್ವಿಧ ಸ್ಥಲಂಗಳೆನ್ನ ಪ್ರಾಣನ ಕೊರಳಲ್ಲಿಹವಾಗಿ
ನಿಮ್ಮನುಮಿಷವಾಗಿ ನಾನೋಡುತ್ತಿರ್ದೆ ಕಾಣ ಕಲಿದೇವಯ್ಯ.      ||೭||

೫೫೧

ನಾನಾ ಭವಭಯ ಸಂಸಾರದ ಅ –
ಜ್ಞಾನ ಜಡವ ಪರಿಹರಿಸಿ,
ಜ್ಞಾನಾನುಗ್ರಹ ಜನ್ಮಜನಿತನನು
ಮಾಡಿದುದೆನ್ನಯ ಗುರುಕರುಣ.      ೧

ಕರ್ಮಜಾತ ಜನಿತೇಂದ್ರಿಯದಾ ದುಃ
ಕರ್ಮಂಗಳ  ಪೂರ್ವಾಶ್ರಯವ
ನಿರ್ಮೂಲನಂಗೆಯ್ದು, ಶಿವಜ್ಞಾನದ
ಮರ್ಮದ ತೋಱೆದ ಗುರು ಶರಣು.  ೨

ಕರಕಮಲವ ಶಿರದೊಳು ಕರುಣದೊಳಿಟ್ಟು,
ದುರಿತ ದುಃಕೃತ ಲಿಪಿಯನೆ ತೊಡೆದು,
ನರಜನ್ಮದ ಪೂರ್ವಾಶ್ರಯ ದೋಷವ
ಪರಿಹರಿಸಿದುದೆನ್ನಯ ಗುರುಕರುಣ.  ೩

ಅಂಗದೊಳಗೆ ಲಿಂಗವನರಿಸಿ, ಸ –
ರ್ವಾಂಗವ ಲಿಂಗಸ್ಥಲವೆನಿಸಿ,
ಮಂಗಳಮಯ ಪರಮಜ್ಞಾನದ ನಿಜ –
ದಂಗವ ತೋರಿದ ಗುರು ಶರಣು.೪

ಒಳಹೊಱಗೆನ್ನದೆ, ಎನ್ನೊಳು ತನ್ನಯ
ಹೊಳೆವ ಜ್ಞಾನಜ್ಯೋತಿಯ ಬೆಳಗ
ತಿಳಿವಂತೆನ್ನಯ ಕಂದೆಱವೆಯ ಪು –
ಟ್ಟಿಸಿ ಸಲಹಿದ ಶ್ರೀ ಗುರುವೆ ಶರಣು.  ೫

ಉರಿ ಕರ್ಪುರವ ಸೋಂಕಿದಂತೆನ್ನೊಳು
ಬೆರಸಿಪ್ಪ ಮಹಾಘನವನು ತೋಱೆ
ಪರಮ ಸುಖದೊಳಿರಿಸಿದ ಸಿದ್ಧಸೋಮೇಶ
ಕರುಣಾಮೃತಗುರುವೆ ಶರಣು.        ೬

೫೫೨

ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು
ಲಿಂಗಪ್ರಾಣಿಯಾದ.
ಲಾಂಛನದ ಪೂರ್ವಾಶ್ರಯವ ಕಳೆಯಲೆಂದು
ಜಂಗಮಪ್ರಾಣಿಯಾದ.
ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮಹಾಪ್ರಸಾದಿಯಾದ.
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು
ಮಹಾ[14]ಲಿಂಗ[15]ವಾಗಿ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.           ||೯||

೫೫೩

ನಿರಾಳ ನಿತ್ಯವು ಎಲ್ಲಾ ಸ್ಥಾನವು ಚೆನ್ನಾಯಿತ್ತು.
ಎಲ್ಲಾ ಗಣಂಗಳು ಚೆನ್ನಾದರು.[16]ಸಿದ್ಧ[17]ಗಣ ಮಂದಿರಗಣ ಚೆನ್ನಾ[18]ಯಿತ್ತು.[19] ತಾಂಡವ ಅಂಡವ ಚೆನ್ನಾಯಿತ್ತು.
ತ್ರಿಕಾಂಡವ ಭೂಕಾಂಡವ ಚೆನ್ನಾಯಿತ್ತು.
ದೇವಲೋಕ ಮರ್ತ್ಯಲೋಕ ಚೆನ್ನಾಯಿತ್ತು
ದೇವಗಣಂಗಳು ಶಿವಗಣಂಗಳು ಚೆನ್ನಾಯಿತ್ತು.
ಮಹಾಲೋಕದ ಮಹಾಗಣಂಗಳು ಚೆನ್ನಾಯಿತ್ತು.
ಅತೀತ ಆಚಾರಘನ ಚೆನ್ನಾಯಿತ್ತು.
ಪ್ರಸಾದ ನಿರವಯ ಜಂಗಮ ಚೆನ್ನಾಯಿತ್ತು.
ಗಂಗಾ ಬಸವ ಚೆನ್ನಾಯಿತ್ತು.
ಅನಾಗತ ಮೂರ್ತಿಯಾದಾಕಾರವನು ಕರಸ್ಥಲದಲ್ಲಿ
ಹಿಡಿದು ಬೆಳಗಾಗಿರ್ದ ಜ್ಞಾನವು ಚೆನ್ನಾಯಿತ್ತು.
ಮಾಡಿದ ಎನ್ನನು, ಚೆನ್ನಮಾಡಿದ ಕಲಿದೇವಾ
ನಿಮ್ಮ ಶರಣ ಬಸವ ಚೆನ್ನಬಸವನು.  ||೧೦||

೫೫೪

ರಾಮ ಕೇಳ ಧ್ಯಾನ ಸೋಮ ಕೇಳನುಭಾವ ಸಿದ್ಧ
ರಾಮಕೇಳಾನಂದ ನಿಂದ ನಿಜವ      ||ಪ||

ಎಂಟೆ೪ಸಳಕಮಲದ ನವಬ್ರಹ್ಮಪುರದೊಳಗೆ
ಎಂಟುಬೀದಿಯೊಳೆಂಟು ಕರಿಗಳುಂಟು
ಎಂಟು ಕರಿಗಳ ಸುಟ್ಟು ಕಂಟಕಂಗಳಗೆಲಿದು
ದಾಂಟಿದೆನು ಸಂಸಾರ ಸಾಗರವನು.            ೧

ದಶವಾಹನಂಗಳಿಂದೆಸೆದು ದೀರೇಳ್ಭುವನ
ಅಸುರ ಪಡೆ ಅರವತ್ತು ಅಱುಕೋಟಿ
ವಶವಳಿದು ಬೇಳಾಗಿ ಬೆಂಡಾಗಿ ಸಂತೈಸಿ
ಶಶಿಯ ಸಲಹುತಲಿರ್ದೆನನುದಿನದಲಿ.           ೨

ಐದು ಮುಖವೈದುಕಳೆ ಐದುಸಮರಸದಲ್ಲಿ
ನಾದಬಿಂದುವಿನ ಕಳೆ ಶಿವಕಳೆಯೊಳು
ಎಯ್ದೆಯಾರಕ್ಷರದ ಅದೃಷ್ಟ ಮಣಿಫಳದ
ಭೇದ್ಯ ಭೇದವಕಪ್ಪ ನಿಜವಿಪ್ಪುದು.     ೩

ಆಧಾರಮಂ ಬಲಿದು ಊರ್ಧ್ವಮುಖದಲಿನಿಂದು
ಮೇದಿನಿಯ ಕಳೆ ಮೊಳೆಯನೊಂದು ಮಾಡಿ
ಭೇದಾದಿಭೇದದ ಮೂಲ ಪ್ರಣವವ ತಿಳಿದು
ನಾದಬೆಳಗಿನ ಕಳೆಯ ನೋಡಿ ಕಂಡೆ.           ೪

ಸರ್ಪನ ಹೆಡೆಯಮೇಲೆ ಉತ್ಪತ್ತಿ ಸಕಲಲೋಕ
ಇಪ್ಪತ್ತೈದು ಗ್ರಾಮದಲಿ ತೊಳಗಿ ಬೆಳಗಿ
ಉಪ್ಪರಿಗೆ ಉರಿಯನೆಲೆ ಚಪ್ಪರವಮೆಟ್ಟಿ ನಿಲೆ
ತಪ್ಪದದು ಪರಕೆ ಪರವಾದ ಘನವು.  ೫

ಉರಿಯಬೊಂಬೆಯಮಾಡಿ ಸಿರಿಯ ಸೀರೆಯನುಡಿಸಿ
ಪರಿಪರಿಯ ಕೇರಿಕೇರಿಯಲಿ ಸುಳಿಸಿ
ಉರಿಯಬೊಂಬೆಯನೆರೆದು ಸಿರಿಯಸೀರೆಯ ಸೆಳೆದು
ಪರಮಪರಿಣಾಮದೊಳಗೋಲಾಡಿದೆ.           ೬

ಅಷ್ಟ ಕುಳಗಳ ಮೆಟ್ಟಿ ಸುಟ್ಟು ಶುದ್ಧೈಸಲು
ಬಟ್ಟಬಯಲಿನ ಘಟ್ಟಿ ದೃಷ್ಟವಾಗಿ
ನೆಟ್ಟನೇ ದೃಷ್ಟ ತನ್ನಷ್ಟವೆಂದಗ್ರಜವು
ಷಷ್ಟದಳ ಪೀಠಗಳ ಮೆಟ್ಟಿನಿಂದೆ.      ೭

ನಿಟಿಲ ಭ್ರೂಮಧ್ಯದ ಸ್ಪಟಿಕವರ್ಣದ ಜ್ಯೋತಿ
ಘಟದೊಳಗೆ ತಾನಾಗಿ ತೊಳಗಿ ಬೆಳಗಿ
ವಟವೃಕ್ಷದ ಕೆಳಗೆ ಲೋಕಾದಿಲೋಕಗಳು
ಘಟಿಕೆಯಂತಡಗಿದ ಪರಾಪರವಿದು.  ೮

ಆಕಾಶದಮೇಲೆ ಅರಿದ ತಲೆಯನು ಕಂಡೆ
ಬೇಕುಬೇಡೆನ್ನದದು ಸಾಕೆನ್ನದು
ಲೋಕಾದಿಲೋಕದೊಳಗೇಕೋಭರಿತನಾಗಿ
ಸಾಕಾರವಡಗಿದ ಪರಮಯೋಗಿ.    ೯

ಶತಪತ್ರ ಶತಲಿಪಿಯು ಶತಸಹಸ್ರದಳವು
ಶತಕೋಟಿ ಸೋಮ ಸೂರ್ಯಪ್ರಕಾಶ
ಶತಪತ್ರವನು ಮೆಟ್ಟಿ ಹತಮಾಡಿ ಗತಿಗೆಡಿಸಿ
ಅತಿಶಯದ ಮಣಿಮಂಟಪದೊಳು ನಿಂದೆನು.  ೧೦

ಸತ್ವರಜ ತಮಗಳನು ಸುಟ್ಟು ನಿಟ್ಟೊರಸಿ
ಸಪ್ತೇಳುಸಾಗರವ ಕಿತ್ತೆತ್ತಿದೆ.
ಸಪ್ತೇಳು ಸಾಗರದ ಮಾಮರಂಗಳ ನಡುವೆ
ಮತ್ತೊಂದು ಸೋಜಿಗವ ನೋಡಿಕಂಡೆ.         ೧೧

ಹೃತ್ಕಮಲ ಕರ್ಣಿಕಾ ವಾಸದೊಳಗಿರುತಿರ್ಪ
ಇಕ್ಕೆ ಹಿಕ್ಕೆಗಳ ತಾನೋಂದು ಮಾಡಿ
ಸಿಕ್ಕಿಲ್ಲ ತೊಡಕಿಲ್ಲದರ್ಕಜನ ಪಂಜರವ
ಮಿಕ್ಕುಮೀರೆಯೇ ನಿಂದ ಪರಮಯೋಗಿ.       ೧೨

ಅಂಗಕಳೆ ಲಿಂಗದಲಿ ಲಿಂಗಕಳೆಯಂಗದಲಿ
ಅಂಗಲಿಂಗವೆಂಬ ಉಭಯವಳಿದು
ಮಂಗಳ ಮಹಬೆಳಗಿನ ಬೆಳಗಿನೊಳಗೆ
ಕಂಗಳೆ ಪ್ರಾಣವಾಗಿರುತಿರ್ದೆನು.     ೧೩

ನಿತ್ಯ ನಿಜದಾ ಬೆಳಗಿನ ಬೆಳಗಿನೊಳಗೆ
ಮುತ್ತು ಮಾಣಿಕ್ಯ ನವರತ್ನದಲ್ಲಿ
ಸುತ್ತಿರ್ದ ಅಮರಗಣ ತಿಂಥಿಣಿಯನೆ ಕಂಡು
ನಿಶ್ಚಿಂತದಿಂದ ನಿಬ್ಬೆಱಗಾದೆನು.       ೧೪

ಪಂಚಮುಖ ಪಂಚವಿಂಶತಿ ತತ್ವಂಗಳನರಿದು
ಪಂಚಾಕ್ಷರಿಯ ಕಳೆಯನೊಂದು ಮಾಡಿ
ಪಂಚವಿಂಶತಿ ತತ್ವದ ವಂಚನೆಯನತಿಗಳೆದು
ಸಂಚಲವನತಿಗಳೆದ ಪರಮಯೋಗಿ.           ೧೫

ತ್ರಿವಿಧಮುಖ ತ್ರಿವಿಧಸ್ಥಾನ ತ್ರಿವಿಧಕೋಣೆಗಳೊಳಗೆ
ತ್ರಿವಿಧಲಿಂಗಾರ್ಚನೆಗೆ ತ್ರಿವಿಧಪೂಜೆ
ತ್ರಿವಿಧಲಿಂಗಾರ್ಚನೆಗೆ ತ್ರಿವಿಧಪ್ರಸಾದಕ್ಕೆ
ತ್ರಿವಿಧ ಪರಿಣಾಮಿ ತಾನಾದ ಶರಣ.  ೧೬

ಏಕರಸಮಯವಾಗಿ ಏಕೋರಸ ಸಜ್ಜೀನ
ಆಕಾರ ನಿರಾಕಾರಯೇಕವಾಗಿ
ಆಕಾರವಡಗಿ ನದಿಯೊಳಗೆ ನದಿಬೆರೆದಂತೆ
ಸಾಕಾರವಡಗಿದನೆ ಪರಮಯೋಗಿ. ೧೭

ಅಱುವರ್ಣದ ಕ್ಷೇತ್ರ ಅಱುವರ್ಣದ ಬೀಜ
ಆಱುವರ್ಣದ ವೃಕ್ಷ ಮಳೆದೋಱಲು
ಆಱಾಱ ಈರಾಱು ವೃಕ್ಷ ಪಲ್ಲವಿಸಿತ್ತು
ಅಮೃತಫಳರಸತುಂಬಿ ತೊಟ್ಟಿಟ್ಟುದು.           ೧೮

ಉದಯಾಸ್ತಮಾನವೆಂಬೆರಡಳಿದ ಶಿವಯೋಗಿ
ಸದಮಲದ ಬೆಳಗಿನ ಬೆಳಗಿನೊಳಗೆ
ಪದಫಲವನೊದೆದು ನಿಜದಲ್ಲಿ ನಿರ್ವಯಲಾದ
ಚಿದ್ರೂಪ ಚಿನ್ಮಯನು ಚಿತ್ಪ್ರಕಾಶ.     ೧೯

ಗಮನ ನಿರ್ಗಮನಕ್ಕೆ ಗಮನ ನಿರ್ಗಮನವಾಯಿತು.
ಘನಕೆ ಘನವು ನಿರ್ಗಮನವಾಯಿತ್ತು.
ಘನಸ್ನೇಹವಳಿದು ತಾನುತಾನಾದಲ್ಲಿ
ಮನಕಗೋಚರವಾದ ಪರವು ತಾನೆ.            ೨೦

ಹೆಜ್ಜೆಯಿಲ್ಲದ ಮೃಗವು ಹಲವು ದ್ವೀಪಕೆ ಹೋಗಿ
ವೆಜ್ಜವಿಲ್ಲದಮಣಿಯನೋಡಿ ಕಂಡು
ಪ್ರಜ್ವಲಿಸುವ ಬೆಳಗಿನ ದಾರವನೆ ಹೊಸೆದು
ವೆಜ್ಜವಿಲ್ಲದ ಮಣಿಯ ಪವಣಿಸಿದೆನು.  ೨೧

ತುಟ್ಟ ತುದಿಯ ಕೊನೆಯ ಮೊನೆಯಮೇಲೊಂದು
ಮುಟ್ಟಬಾರದ ಘನವ ನೋಡಿ ಕಂಡೆ.
ಮತ್ತೆ ಸೋಹಂ ಸೋಹಮೆಂದೆಂಬ ಮದವಳಿದು
ಚಿತ್ತಬ್ರಹ್ಮದ ಸುದ್ದಿ ಮುಗ್ಧವಾಯಿತು.  ೨೨

ಹಾಳಮೇಲಣ ಮಣಿಯ ಕಾಣಲಾರಳವಲ್ಲ
ಕೋಣೆಕೋಣೆಯ ಪೌಳಿ ಪೌಳಿಯೊಳಗೆ
ಮೇಲುಗಿರಿ ಶಿಖರ ಪಶ್ಚಿಮದ್ವಾರವನು ಪೊಗಲು
ಕಾಣಬಾರದ ಕದಳಿಯುಂಟು ನೋಡಾ.         ೨೩

ನೋಟ ಸಮರಸವಾಗಿ ಕೂಟ ನಿಬ್ಬಿರಗಾಯ್ತು
ನೋಟಕೂಟವೆಂಬ ಉಭಯವಳಿದು
ದಾಟಿ ನಿಜದಲ್ಲಿ ನಿರ್ವಯಲಾದ ಶಿವಯೋಗಿ
ಕೂಟಕ್ಕೆ ತೆಱಹಳಿದ ಪರಮತಾನು.  ೨೪

ಖೇಚರತ್ವದ ನಿಲವ ಭೂಚರರು ಬಲ್ಲರೆ
ವಾಚಾಳಕರಮಾತಿಗಿದು ಸಲ್ಲದು
ಆಚಾರದನುಭಾವ ಭಕ್ತಿ ನೆಲೆಗೊಂಡಂಗೆ
ಸೂಚಿಸುವುದಾ ಮಹಾ ಪರಮಪದವು.          ೨೫

ಬ್ರಹ್ಮರಂಧ್ರದ ಕೊನೆಯ ವರ್ಮಾದಿ ವರ್ಮವದು
ನಿರ್ಮಾಯ ನಿರ್ಮೋಹಿತಂಗಲ್ಲದೆ
ವರ್ಮವನರಿದ ನಿರ್ಮಲ ನಿತ್ಯಂಗಲ್ಲದೆ
ಕರ್ಮಭವ ಭಾರಿಗಳಿ[20]ಗಿದು ಸಲ್ಲದು[21].          ೨೬

ಮುಖ ಕಮಲ ಶಿಖರ ಸಿಂಹಾಸನಾಗ್ರದ ಮೇಲೆ
ಮಕರ ತೋರಣವದಱ ಕೆಲಕೆಲದಲಿ
ಸಕಲಗಣತಿಂಥಿಣೆಯ್ಯುಜಯತು ಜಯತೆಂದೆನಲು
ಸುಖಿ ಗೋಹೇಶ್ವರನ ಶರಣರು ಸಿದ್ಧರಾಮ.    ೨೭

೫೫೫

ಹಣವಿನಾಸೆಗೆ ಹದಿನೆಂಟು ಜಾತಿಯ ತಂದು
ಭಕ್ತರ ಮಾಡುವಿರಯ್ಯ.
ಮಾಡಿದರೇನು ಮಾಡಲಿಕೆ; ತಮ್ಮಂತೆ ಮಾಡರಾಗಿ.
ಲಿಂಗವಕೊಟ್ಟು ಲಿಂಗದ್ರೋಹಿಗಳಾದರು,
ಪ್ರಸಾದವ ಕೊಟ್ಟು ಪ್ರಸಾದದ್ರೋಹಿಗಳಾದರು,
ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕರಾದರು.
ಇಂತೀ ತ್ರಿವಿಧ ಅಂಗದೊಳು ವಠಾರಿಸಿ ಮಾಡುವ ವಠಾರಿಗಳನೋಡಿರೆ    !
ಹೊನ್ನ ಹಂದಿಯ ತಂದು ಬಿನ್ನಾಣದಲಿ ಕೊಂದು ತಿಂಬ
ಕುನ್ನಿಗಳನೇನೆಂಬೆ ಕಲಿದೇವಯ್ಯ.    ||೧೦||

೫೫೬

ಹಲಬರ ನಡುವೆ ಕುಳ್ಳಿರ್ದು
ಗುರುಲಿಂಗ[22]ಜಂಗಮ[23] ವಿಭೂತಿ ವೀಳ್ಯವ ಹರಿದು ಕೊಟ್ಟು,
ಆ ಗುರುವಿನಲ್ಲಿ ಕಾರುಣ್ಯವೇಕೆಂದು ಎದ್ದಾಡುವ
ಗುರುಹಲಬರ ಬಾರಿಕ ಕಾಣಾ ಕಲಿದೇವಯ್ಯ.  ||೧೧||

೫೫೭
ತನ್ನ ಪ್ರಾಣಲಿಂಗವನನ್ಯರಿಗೆ ಕೊಟ್ಟು ಮನ್ನಿಸರೇಕೆ?
ಗುರುವೆಂದು ಬೆಬ್ಬನೆಬೆರೆವವರ ನೋಡಾ ಅಯ್ಯಾ.
ಬಿನ್ನಾಣದಿಂದ ಪಂಚ ಪರ್ವತಮಾಡಿ ನಂಬಿಸಿ
ಹಣವ ಕೊಂಬ ಲಿಂಗದೆರೆಯರ ನೋಡಾ ಕಲಿದೇವಯ್ಯ.            ||೧೨||


[1] ನಿಜವ (ಬ)

[2] ನಿಜವ (ಬ)

[3] ಯದೆ (ಬ)

[4] + ವ (ಅ)

[5] ಪ್ರಬಂಧ (ಬ)

[6] ಪ್ರಬಂಧ (ಬ)

[7] + ಏ (ಬ)

[8] x (ಅ)

[9] x (ಅ)

[10] ಮಂತ್ರ (ಬ)

[11] ಮಂತ್ರ (ಬ)

[12] x (ಅ)

[13] x (ಅ)

[14] ಗುರು (ಚಬವ)

[15] ಗುರು (ಚಬವ)

[16] ಸ್ಥಿರ (ಅ)

[17] ಸ್ಥಿರ (ಅ)

[18] ದರು (ಬ)

[19] ದರು (ಬ)

[20] ಗಸಾಧ್ಯವು (ಅ)

[21] ಗಸಾಧ್ಯವು (ಅ)

[22] x (ಅ)

[23] x (ಅ)