೫೪೫

ನೀರ ನೆಳಲನೆ ಕಡಿದು, ಮೇರುವೆಂಬುದನುಂಗಿ,
ಶಾರದೆಯೆಂಬವಳ ಬಾಯ ಕಟ್ಟಿ, ಕಾರಮೇಘದ ಬೆಳಸ ನೀರಹರಿ ನುಂಗಲು,
ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತ್ತು.
ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು
ನೀರಹೊಳೆಯವರೆಲ್ಲರ ಕೊಡನೊಡೆದವು.
ಕಾರೆಯ ಮುಳ್ಳೆದ್ದು ಕಲಿಗಳನಟ್ಟಿ ಸದೆವಾಗ,
ಸೋರುಮುಡಿಯಾಕೆ ಗೊರವನ ನೆರೆದಳು,
ಬಳ್ಳು, ಆನೆಯ ನುಂಗಿ, ಒಳ್ಳೆ ಸಮುದ್ರವ ಕುಡಿದು,
ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ
ಕೋಡಗವ ಹಡೆ೪ದಲ್ಲಿ, ಹತ್ತಿರಿದ್ದ ಹಾವಾಡಿಗನನದು ನುಂಗಿತ್ತು.
ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ
ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು,
ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ,
ಕಟ್ಟಿದಿರ ಕರ್ಪೂರದ ಜ್ಯೋತಿಯಂತೆ.           ||||

೫೪೬

ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ
ಸಚರಾಚರ ಸಂಭ್ರಮ ಸೂತಕ ಪಾತಕವೆಂಬ
ಘೋಷಣೆಗಳು ಹುಟ್ಟದಂದು,
ದೇವಲೋಕ ಮರ್ತ್ಯಲೋಕ ನಾಗಲೋಕ ಹುಟ್ಟದಂದು,
ಹುಟ್ಟಿಸುವಾಗ ಕರಸದರವೆಯಣ್ಣಾಧಾರ ಪಥ ಪಲ್ಲವಿಸಿ ಗರ್ಭವಾಯಿತ್ತೆಂದು
ಮಹಾದೇವಂಗೆ ದೇವಗಣಂಗಳು ಬಿನ್ನಹಂ ಮಾಡುವಲ್ಲಿ
ಪ್ರಾಣ ಗರ್ಭಿತರುಂಟೆ? ಅತಿರಥರುಂಟೆ?
ಕ್ಷೀರಸಾಗರದ ನಡುವೆ ಚೌಳ ನೀರುಂಟೆ?
ಸಂವಿತ್ತು ಸಿಂಹಾಸನದ ಮೇಲೆ ಕಂದನೈದಾನೆ.
ಇಂದು ಶಿವನು ಶಕ್ತಿಯ ಕೂಡಿಯಾಳಾಪವೊಕ್ಕನು ಕಾಣಾ.
ಕಾರುಣ್ಯದ ವಾಹನವನೇರಿಕೊಂಡು ಅಷ್ಟಗುಣವಿರಹಿತನು,
ತ್ರಿವಿಧಗುಣ ನಷ್ಟನು, ಸದ್ಗುಣ ಸಿಂಹಾಸನನು
ಸಪ್ತಸ್ವರಹಾರದೊಳು ಘನದೀಹಾರದೊಳು ಹೇಳುವೆ,
ಎನ್ನೊಡೆಯ ಬಂದುದ ಕಂಡು ಬಲವಿಡಿದೆ, ದೃಢವಿಡಿದೆ,
ಜ್ಞಾನವಿಡಿದೆ, ಕಲಿದೇವಾ ನಿಮ್ಮ ಬಸವನಡಿವಿಡಿದು ಘನವಾದೆ,
ನಮೋ ನಮೋಯೆಂಬೆ ನಿಮ್ಮ ಸಂಗನ ಬಸವಣ್ಣಂಗೆ   ||||

ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಆಯುಕ್ತ ವೈಯುಕ್ತ ಪುನ್ಯಾರಣ ವನ್ಯಾರಣ ವಿಶ್ವಾರಣ ವಿಶ್ವಾಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ. ಇಂತೀ ಹದಿನೆಂಟು ಯುಗಂಗಳಿಲ್ಲದಂದು, ಸಾಕ್ಷಾತ್ ಶಿವನ ಲೀಲೆಯಲ್ಲಿ ಪ್ರಕೃತಿ ಪುಟ್ಟಿತ್ತು. ಆ ಪ್ರಕೃತಿಯಲ್ಲಿ ಷಡುಮೂರ್ತಿಗಳು ಪುಟ್ಟಿದರು. ಆ ಷಡುಮೂರ್ತಿಗಳಲ್ಲಿ ಐವತ್ತೆರಡಕ್ಷರಂಗಳು ಪುಟ್ಟಿದವು. ಆ ಐವತ್ತೆರಡಕ್ಷರಂಗಳಲ್ಲಿ ಆಕಾಶವೆ ಸ್ವಯಂಭು. ಆ ಆಕಾಶದಲ್ಲಿ ವಾಯು ಪುಟ್ಟಿತ್ತು. ಆ ವಾಯುವಿನಲ್ಲಿ ಅಗ್ನಿ ಪುಟ್ಟಿತ್ತು. ಆ ಅಗ್ನಿಯಲ್ಲಿ ಅಪ್ಪು ಪುಟ್ಟಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಪುಟ್ಟಿತ್ತು. ಆ ಪೃಥ್ವಿಯ ಮಧ್ಯದಲ್ಲಿ ಮಹಾಮೇರುವಿನುದ್ದ ಆಳಗಾತ್ರ ಮಧ್ಯ ಅಗಲಮೆಷ್ಟುಂಟೆಂದಡೆ: ಹನ್ನೆರಡು ಅಂಗುಲ ಕೂಡಲು ಒಂದು ಗೇಣು. ಗೇಣು ಎರಡು ಕೂಡಲು ಒಂದು ಮೊಳ. ಮೊಳ ನಾಲ್ಕು ಆದಡೆ ಒಂದು ಮಾರು. ಮಾರು ಎರಡು ಕೂಡಲು ಒಂದು ಜಂಘೆ. ಜಂಘೆ ಏಳು ನೂರೆಪ್ಪತ್ತು ಆದಡೆ ಒಂದು ಪದಚಯ. ಪದಚಯವೆರಡುಸಾವಿರದೆಂಟು ನೂರಾದಡೆ ಒಂದು ಕೂಗಳತೆ. ಕೂಗಳತೆ ಎರಡು ಕೂಡಲು ಒಂದು ಹರುದಾರಿ. ಹರುದಾರಿ ನಾಲ್ಕು ಕೂಡಲು ಒಂದು ಗಾವುದ. ಅಂಥ ಗಾವುದ ಮೂರುಕೋಟಿಯೂ ಮೂರು ಲಕ್ಷವು ಮೂವತ್ತೆಂಟು ಸಾವಿರ ಯೋಜನ ಪ್ರಮಾಣಿನುದ್ದ. ಅಲ್ಲಿಂದ

[1]ಮೇಲೆ[2] ಆ ಶಿವನೆ ಬಲ್ಲನು.   ಮಹಾಮೇರುವಿನ ಗಾತ್ರ ಒಂದು ಕೋಟಿಯು ಮೂರು ಲಕ್ಷವು ಮೂವತ್ತೆಂಟು ಸಾವಿರ ಯೋಜನ ಪ್ರಮಾಣಿನ ಅಗಲವು. ಅಲ್ಲಿಂದ ಕೆಳಗೆ ಆ ಶಿವನೆ ಬಲ್ಲನು. ಆ ಮಹಾಮೇರುವಿನ ಮಧ್ಯದ ಗಾತ್ರವರುವತ್ತಾರು ಲಕ್ಷ ಮುವತ್ತು ಮೂರು ಸಾವಿರ ಯೋಜನೆ ಪ್ರಮಾಣಿನ ಗಾತ್ರ. ಆ ಮಹಾಮೇರುವಿನ ಶಿಖರದ ಅಗಲವು ಒಂದು ಕೋಟಿಯು ಇಪ್ಪತ್ತೆಂಟು ಲಕ್ಷ ಯೋಜನ ಪ್ರಮಾಣು. ಅದರ ಬುಡದಗಲವು ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಯೋಜನ ಪ್ರಮಾಣು. ಇಂತಪ್ಪ ಮಹಾಮೇರುವೆಯ ಪ್ರವೇಷ್ಠಿಸಿಕೊಂಡು ಇಹ ಪಂಚ ಶತಕೋಟಿ ವಿಸ್ತೀರ್ಣ ಭೂಮಂಡಲದೊಳಗೆ ನವಖಂಡ ಪೃಥ್ವಿಯು ಐವತ್ತೆರಡು ಕೋಟಿ. ಅವಾವವು  ಎಂದಡೆ: ಮರುತಖಂಡ ಹತ್ತು ಕೋಟಿಯು ಐವತ್ತೈದು ಲಕ್ಷ ಐವತ್ತೈದು ಸಾವಿರ ಯೋಜನೆ ಪ್ರಮಾಣು. ಈಶಾನ್ಯಖಂಡ ಒಂಭತ್ತು ಕೋಟಿ ಐವತ್ತೈದು ಲಕ್ಷ ಐವತ್ತೊಂದು ಸಾವಿರ ಯೋಜನ ಪ್ರಮಾಣು. ಉತ್ತರ ಖಂಡ ಎಂಟು ಕೋಟಿ ಐವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣು. ಭರತಖಂಡ ಏಳುಕೋಟಿ ಐವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣು. ವರುಷ ಖಂಡವಾರು ಕೊಟಿಯು ಐವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣು. ತ್ರೇತಾಖಂಡ ಐದುಕೋಟಿ ಐವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣು, ದಕ್ಷಿಣ ಖಂಡ ನಾಲ್ಕು ಕೋಟಿ ಐವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣು. ಅಗ್ನಿಖಂಡ ಮಾರುಕೋಟಿ ಮೂವತ್ತೈದು ಲಕ್ಷವು ಐವತ್ತೈದು ಸಾವಿರ ಯೋಜನ ಪ್ರಮಾಣುಆ ಐವತ್ತೆರಡು ಕೋಟಿ ಭೂಮಿಯೊಳಗೆ ಸಪ್ತ ದ್ವೀಪಂಗಳಾದವು. ಅವಾವವು ಎಂದಡೆ: ಒಂದು ಲಕ್ಷ ಯೋಜನ ಪ್ರಮಾಣಿನಲ್ಲಿ ಜಂಬೂದ್ವೀಪ. ಎರಡು ಲಕ್ಷ ಯೋಜನ ಪ್ರಮಾಣಿನಲ್ಲಿ ಪಚ್ಚದ್ವೀ, ಮೂರು ಲಕ್ಷ ಯೋಜನ ಪ್ರಮಾಣಿನಲ್ಲಿ ಕ್ಲುಶದ್ವೀಪ. ನಾಲ್ಕು ಲಕ್ಷ ಯೋಜನ ಪ್ರಮಾಣಿನಲ್ಲಿ ಕ್ರೌಂಚ ದ್ವೀಪ. ಐದು ಲಕ್ಷ ಯೋಜನ ಪ್ರಮಾಣಿನಲ್ಲಿ ಶಾಲ್ಮಲಿದ್ವೀಪ. ಆರುಲಕ್ಷ ಯೋಜನ ಪ್ರಮಾಣಿನಲ್ಲಿ [3]ಶಾಖ[4] ದ್ವೀಪ. ಏಳುಲಕ್ಷ ಯೋಜನ ಪ್ರಮಾಣಿನಲ್ಲಿ [5]ಪುಷ್ಕರ[6] ದ್ವೀಪ. ಇಂತೀ ಸಪ್ತದ್ವೀಪಂಗಳ ಪ್ರವೇಷ್ಟಿಸಿಕೊಂಡಿಹ ಸಮುದ್ರವಾವವೆಂದಡೆ; ಒಂದು ಕೋಟಿ ಯೋಜನ ಪ್ರಮಾಣಿನ ಗಾತ್ರದಲ್ಲಿ ಲವಣ ಸಮುದ್ರ. ಎರಡು ಲಕ್ಷ ಯೋಜನ ಪ್ರಮಾಣಿನ ಗಾತ್ರದಲ್ಲಿ ಇಕ್ಷಾಸಮುದ್ರ. ಮೂರು ಕೋಟಿ ಯೋಜನ ಪ್ರಮಾಣ ಗಾತ್ರದಲ್ಲಿ ಮಧುಸಮುದ್ರ. ನಾಲ್ಕು ಕೋಟಿ ಯೋಜನ ಗಾತ್ರದಲ್ಲಿ ದಧಿಸಮುದ್ರ. ಐದು ಕೋಟಿ ಯೋಜನ ಗಾತ್ರದಲ್ಲಿ ಘೃತ ಸಮುದ್ರ. ಆರು ಕೋಟಿ ಯೋಜನ ಪ್ರಮಾಣಿನ ಗಾತ್ರದಲ್ಲಿ ಕ್ಷೀರಸಮುದ್ರ. ಏಳುಕೋಟಿ ಯೋಜನ ಪ್ರಮಾಣಿನ ಗಾತ್ರದಲ್ಲಿ ಸ್ವಾದೋದಕ ಸಮುದ್ರ. ಇಂತೀ ಸಪ್ತ ಸಮುದ್ರ ಮಧ್ಯದಲ್ಲಿ ಅಷ್ಟಕುಲ ಪರ್ವತಂಗಳಿಹವು. ಅವಾವಾವವು ಎಂದಡೆ: ನೂರು ಲಕ್ಷ ಯೋಜನ ಪ್ರಮಾಣಿನಲ್ಲಿ ಮೇರುಪರ್ವತವಿಹುದು. ತೊಂಬತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ಮಾನುಷ್ಯ ಪರ್ವತವಿಹುದು. ಎಂಬತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ರಜತ ಪರ್ವತವಿಹುದು. ಎಪ್ಪತ್ತು ಲಕ್ಷ ಐಒಜನ ಪ್ರಮಾಣಿನಲ್ಲಿ ನೀಲಪರ್ವತವಿಹುದು. ಅರುವತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ಹಿಮಪರ್ವತವಿಹುದು. ಐವತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ಕೀಲಪರ್ವತವಿಹುದು. ನಲವತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ಮಂದರಪರ್ವತವಿಹುದು. ಮೂವತ್ತು ಲಕ್ಷ ಯೋಜನ ಪ್ರಮಾಣಿನಲ್ಲಿ ಅಸಿತಪರ್ವತವಿಹುದು. ಇಂತೀ ಅಷ್ಟ ಕುಲಪರ್ವತಂಗಳ ಪ್ರಮಾಣು. ಆ ಮಹಾಮೇರುವಿಗೆ ಅಷ್ಟದಿಕ್ಪಾಲರುವಾವವುವೆಂದಡೆ : ಅಗ್ನಿ, ಯಮ, ನೈಋತ್ಯ, ವರುಣ, ವಾಯವ್ಯ, ಕುಬೇರ, ಈಶಾನ್ಯಇಂತೀ ಅಷ್ಟ ದಿಕ್ಕುಗಳ ಪ್ರಮಾಣು., ಇಂತೀ ಅಷ್ಟದಿಕ್ಕುಗಳಲ್ಲಿರುತ್ತಿಹ ದಿಗ್ಗಜಗಳಾವವು ಎಂದಡೆ: ಐರಾವತ ಪುಂಡರೀಕ ವಾಮನ ಕುಮುದ ಅಂಜನ ಪುಷ್ಪದಂತ ಸಾರ್ವಭೌಮ ಶಾರ್ದೂಲ ಸುಪ್ರತೀಕಇಂತೀ ದಿಗ್ಗಜಂಗಳ ಪ್ರಮಾಣು. ಈ ಭೂಮಿ ಮೂರು ಕೋಟಿ ದಳವಾಗಿಹುದು. ಈ ಭೂಮಿಗಾಧಾರವಾಗಿ ಶೇಷನಿಹನು. ಶೇಷಂಗಾಧಾರವಾಗಿ ಕಮಟನಿಹನು. ಅಲ್ಲಿಂದತ್ತ ಪಾತಾಳ ಭೂಮಿ. ಆ ಭೂಮಿಗೆ ಆಕಾಶಕ್ಕೆ ತೊಂಬತ್ತಾರು ಕೋಟಿ ತಾಳಪ್ರಮಾಣಿನುದ್ದ. ಇಂತಿವರ ಪ್ರಮಾಣುವನಾರು ಬಲ್ಲರಯ್ಯ ಎಂದಡೆ : ಪ್ರಭು, ಸಿದ್ಧರಾಮ, ರೇವಣ್ಣ, ಮಡಿವಾಳ, ಚನ್ನಬಸವಣ್ಣ ಮುಖ್ಯವಾದ ಪ್ರಮಥರಲ್ಲದೆ ಮತ್ತಾರೂ ಅರಿಯರು ಕಾಣಾ ಕೂಡಲಸಂಗಮದೇವಾ.

೫೪೭

ಆದಿ ಅನಾದಿಯಿಂದತ್ತಣ ನಿತ್ಯ ಸಿಂಹಾಸನವೆಂಬ
ಮಹಾ ಮೇರು ಮಂದಿರದ ಮೇಲೆ ಇರ್ದಂತೆಯೆ
ಆಧಾರ ಮೂರ್ತಿಗಳನು ನಿರ್ಮಿಸಿದಿರಿ.
ನಮಗಾಶ್ರಯವಾವುದು ದೇವ ಎಂದು ಗಣಂಗಳು ಬಿನ್ನಹವಂ ಮಾಡಲು
ವಿಶ್ವಶೋ ಪ್ರತಿಪಾಲಕನು ವಿಶ್ವಾಧಾರಕನು ಶಿವನು
ಸರ್ವ ಜೀವ ಜಾಲಂಗಳಿಗೆ [7]ಶೈತ್ಯಕಾಲವಾಗಬೇಕೆಂದು
ಅನಂತ ಮೂರ್ತಿಗಳಿಂಗೆ ಕಾರುಣ್ಯವ ಮಾಡಿದ ಕಂದನು.
ತಮ್ಮ ತಮ್ಮ ಆಧಾರದಲ್ಲಿ ಒಮ್ಮಿಂದವು ಪಾದಘಾತದೊಳು
ಅನಂತ ಸುಖವುತ್ಪತ್ಯದೊಳು ಶಿವ, ಶಿವ ಚೈತನ್ಯವನಾಗವೆ
ನಿರ್ಮಿಸುವೆನೆಂದು ಪೃಥ್ವಿಗೆ ಕಾರುಣ್ಯದ ಮಾಡಿದ ಕಂದನು.
ತೇಜ ಜ್ಞಾನದೊಳು ಶುದ್ಧತಿಗೆ ನಿಮ್ಮ ಮುಖದಲ್ಲಿಯೆಯೆಂದು
ತೇಜಕ್ಕೆ ಕಾರುಣ್ಯದ ಮಾಡಿದ ಕಂದನು.
ವಾಯು ಮನ ಪ್ರಾಣ ಗಂಧ ಪರಿಮಳದಲ್ಲಿ ಶೈತ್ಯದೊಳು
ಸುಖಮಿರು ಕಂಡಾ ಎಂದು ವಾಯುವಿಗೆ ಕಾರುಣ್ಯವ ಮಾಡಿದ ಕಂದನು.
ಗಗನದ ಸರ್ವಕ್ಕಾಶ್ರಯವಾಗಿರು ಕಂಡಾ ಎಂದು
ಆಕಾಶಕ್ಕೆ ಕಾರುಣ್ಯವ ಮಾಡಿದ ಕಂದನು.
ಚಂದ್ರ ಸೂರ್ಯರು ಆತ್ಮರು ನಿಮ್ಮ ನಿಮ್ಮ ಸ್ಥಲಗಳಲ್ಲಿಯೆ
ಒಬ್ಬೊಬ್ಬರು ಅಗಲದಿರಿಯೆಂದು ಅಷ್ಟ ತನಂಗಳಿಗೆ
ಕಾರುಣ್ಯವ ಮಾಡಿದ ಕಂದನು.
ಮಹಾಪ್ರತಿಪಾಲಕನು ಶರಣರ ಹೃದಯದ ಸಿಂಹಾಸನವನು
ಎನ್ನ ಪ್ರಾಣವ ಪಾವನವ ಮಾಡಿದ ಕಂದನು.[8]ವೈದ್ಯನೆ[9] ಕಲಿದೇವ ನಿಮ್ಮ ಶರಣಬಸವಣ್ಣಂಗೆ ಜಯತು ಜಯತು.೩

ಇಂತಪ್ಪ ಶರಣಸತಿ ಲಿಂಗಪತಿಗಳಿಬ್ಬರು ಪ್ರಕೃತಿ ವಿಕೃತಿಗಳು ಐವತ್ತೆರಡಕ್ಷರಂಗಳು, ಷಡು ಪ್ರಧಾನರುಗಳು ಷಡ್ಭೂತಂಗಳು ಶೇಷ, ಕಮಟ ದಿಗ್ಗಜಂಗಳು ಸಪ್ತ ಸಮುದ್ರಂಗಳು ಸಪ್ತ ದ್ವೀಪಂಗಳು ಅಷ್ಟಕುಲ ಪರ್ವತಂಗಳು ಮಾಯಾಖ್ಯ ಪ್ರಣಮ ಪಂಚಾಕ್ಷರಿಗಳು, ಅನಂತ ಶ್ರುತಿಗಳು ಅಷ್ಟದಿಕ್ಪಾಲಕರು ಇಂತಿವು ಮುಖ್ಯವಾದ ಪಂಚತಂಡ ಮೂರ್ತಿಗಳಿಲ್ಲದಂದಿರ್ದ ಅನುಭವ ಪ್ರಸಾದರಸವಜ್ರದ ಮಹಾಮೇರು ಮಂದಿರವೆಂಬ ನಿತ್ಯ ಸಿಂಹಾಸನದ ಮೇಲೆ ಇರ್ದಂತೆಯೆ ಅಲ್ಲಿ ತಮ್ಮ ಅನಂತಕೋಟಿ ಗಣಂಗಳು ನೋಡಬೇಕೆಂದು ತಮ್ಮ ವಿನೋದಲೀಲೆಯಿಂದ ಮನ ಮಾಯೆ [10]ಷಡುಸ್ಥಲ[11] ಸ್ಥೂಲಪ್ರಣವ ಪಂಚಾಕ್ಷರಿ ಪಂಚ ವಿಂಶತಿ ತತ್ವ ಪಂಚ ತಂಡದವರುಗಳೆಲ್ಲರನುತ್ಪತ್ಯ ಸ್ಥಿತಿ ಲಯಂಗಳ ಮಾಡುತ್ತಿಹರು. ಮತ್ತೊಂದು ನಿತ್ಯ ಸಿಂಹಾಸನವೆಂಬ ಶ್ರೀ ಕಲ್ಯಾಣಪುರದ ಮೇಲಿರ್ದಂತೆಯೆ ತಮ್ಮ ಲೀಲೆಯಿಂದನಂತ ಕೋಟಿ ಗಣಂಗಳು ಸಮೇತವಾಗಿ ಪಂಚತಂಡದವರುಗಳೊಳಗೆ ತಮ್ಮನರಿದವರುಗಳ ಪುಣ್ಯಪಾಪಂಗಳ ಕಳದು ಮೂಲಪ್ರಣಮ ಪಂಚಾಕ್ಷರೀ ಲಿಂಗವಿಭೂತಿ ರುದ್ರಾಕ್ಷಿ ಪಾದೋದಕ ಪ್ರಸಾದವೆಂಬ ವೀರಶೈವ ದೀಕ್ಷೆಗಳ ಕರುಣದಿಂದುಪದೇಶಿಸಿ ತ್ರಿವಿಧ ದಾಸೋಹಂಗಳಂ ಮಾಡಿಸಿ ನಿರ್ಮಲವ[12] ಮಾಡುತ್ತಿಹರು. ಮತ್ತೊಂದು ನಿತ್ಯ ಸಿಂಹಾಸನವೆಂಬ ಆ ಶ್ರೀಗಿರಿಪುರದ ಮೇಲಿರ್ದಂತೆಯೆ ತಮ್ಮ ಲೀಲೆಯಿಂದ ಅನಂತ ಕೋಟಿ ಗಣಂಗಳು ಸಹಿತ ನಿಃಕಲರು ಸಕಲರು ಪ್ರಳಯಾಕಲರು ವಿಜ್ಞಾನಕಲರು ಸಕಲಾಕಲರೆಂಬ ಪಂಚ ತಂಡದವರುಗಳ ಕೈಯಲ್ಲಿ ಪೂಜೆಗೊಂಡು ಫಲಪದವಿಗಳ ಕೊಡುತ್ತಿಹರು. ಮತ್ತೆ ಶ್ರೀ ಕಲ್ಯಾಣಪುರಕ್ಕೂ ಶ್ರೀಗಿರಿಪುರಕ್ಕೂ ಪ್ರಸಾದರಸ ವಜ್ರಗಿರಿಪುರಕ್ಕೂ ತಮ್ಮ ನರಿದವರಿಗೆ ನಿಚ್ಚಣಿಗೆಯಂತೆ ನಿಂದಿಹರು. ಇಂತು ನಿಂದ ಸೋಪಾನದಮೇಲೆ ವೀರಶೈವಮಾರ್ಗದಲ್ಲಿ ನಡದು ಪುಣ್ಯಪಾಪರಹಿತವಾದ ನಿಜವಿರ್ಮಲದವರೆಲ್ಲಾ ಮಾಯಾಯೋನಿಜ ಕೈಲಾಸಂಗಳ ಮೀರಿ ಹೋಗುತ್ತಿಹಾಗವರು ಪ್ರಾದೇಶಿಕಾಪುರವೆಂಬ ರಜತಗಿರಿಯ ಮೇಲೆ ಕುಳಿತು ತಲೆಯ ಮೇಲೆ ತೊಡೆಯ ಮೇಲೆ ಮನ ಮಾಯೆಗಳ ಹೇರಿಕೊಂಡು ಮಾಯಾ ಶಕ್ತನಾದ ಪ್ರಾದೇಶಿಕ ಪರಮೇಶ್ವರ ಭೃಂಗಿಗಳೊಳಗೆ ಒಬ್ಬ ಭೃಂಗಿ ಕಂಡು ಕೈಗಳಂ ಮುಗಿವವಸ್ಥೆಯಲ್ಲಿ ತನ್ನೊಡೆಯನಿಗೆ ಬಂದು ಕೈಮುಗಿಯಲಾಕ್ಷಣ ತನ್ನೊಡತಿ ಎರಡು ಕೈಗಳನೇಕ ಮುಗಿಯನೀತನೆಂದು ತನ್ನ ಪುರುಷನ ಕೇಳಿದಡೆ ಅವನು ನಿಮಗೊಂದು ಕೈಯ ಮುಗಿದಂತೆಯಾದೀತೆಂದು ಮುಗಿಯನು ಎಂದನು. ಎಂದಡೆ ಪಾರ್ವತಿಯ ರಕ್ತ, ಚರ್ಮ ನನ್ನವಲ್ಲವೆ ಹಾಕೈ ಎಂದಳು. ಸಾಯಬೇಡ ನೀನು ವೀರಶೈವ ರೊತ್ತಿಗೆ ಹೋಗೆಂದು ಹೊರವಡಿಸಿದಡೆ ಭೃಂಗಿ ರಜತಗಿರಿಯಿಂದ ಕೆಳಯಿಕೆ  ಇಳಿದು ಇಂದುಮುಖಿ ಪರಶಿವಲೋಕ ನಿಶ್ಚೈಸಿ ನಿಜಸಮಾಧಿಯಲ್ಲಿ ಪರತತ್ವವನು ಆಹ್ವಾನಿಸಲೊಡನೆ ಪರಶಿವನ ತ್ರಿಪಾದನೆಂಬ ಗಣೇಶ್ವರನೀತನ ಭಕ್ತಿ ಜ್ಞಾನ ವೈರಾಗ್ಯಂಗಳಿಗೆ ಮೆಚ್ಚಿ ಮುಂದೆ ನಿಂದು ಮತ್ತೊಂದು ಪಾದವ ಕೊಟ್ಟು ಚೈತನ್ಯನಂ ಮಾಡಿ ಇತ್ತ ಕಲ್ಯಾಣಪುರದ ಬಸವಣ್ಣನ ಶ್ರೀಪಾದದೊತ್ತಿಗೆ ಕಳುಹಿದಡೆ ಬಂದು ಶರಣನಂ ಕಂಡು ವೀರಶೈವ ದೀಕ್ಷೆಗಳಂ ಪಡದು ಬಸವಣ್ಣನ ಮುಂದೆ ನೃತ್ಯವನಾಡಿಕೊಂಡಿರ್ದ ಕೆಲದಿನದ ಮೇಲೆ ತ್ರಿಪಾದ ಭೃಂಗೀಶ್ವರನು ಬಸವ ಪ್ರಭು ಸಿದ್ಧರಾಮರಿಗೆ ಬೀಳ್ಕೊಂಡು ತನ್ನ ಮೊದಲ ಮೇಳದವರ ಕರತರಬೇಕೆನುತ ಭಿನ್ನಹ ಮಾಡಿ ರಜತಾದ್ರಿಗೆ ಇಂದವರ ಕೈಲಿ ಕಾಣಿಸಿಕೊಂಡು ಬನ್ನಿರೈ, ಅರಿವು ಮರವೆಯನುಳ್ಳ ಯೋನಿಜ ಕೈಲಾಸಂಗಳೊಳಗೆ ಸಿಕ್ಕಿ ಮಾಯಾಸಕ್ತರಾಗಬೇಡೆಂದು ಬೋಧಿಸಲು ತನ್ನ ಮದ್ದಣಿಗ ನಂದಿಮಹಾಕಾಳನೆಂಬವ ನಿಜಕೈಲಾಸವಿನ್ನಾವುದೆನುತ ಬೆಸಗೊಂಡುಯೆಂದಾಕ್ಷಣವೆ ದೇಹವ ಕೊಡಹಿ ಬಿಸುಟು ತಲ್ಲಣಂಗೊಂಬಲ್ಲಿ ಮಾಯಾಶಕ್ತನೀತಾ, ಉದ್ದೇಶ ದೇಹ ದಂಡಣೆ ಶೈವರಿಗುಂಟೆ? ಒಂದು ಮಾತಿಂಗೆ ನಮ್ಮ ಮೆಲೆ ಕೊಲೆಯ ಹಾಕಿ ಕೇಳಿದಡೆ ನಿರ್ಮಾಯ ಭೃಂಗಿ ತನ್ನ ಹೃದಯ ಕಮಲ ಪತ್ರಂಗಳೊಳಗೆ ತಗನ್ನ ಗುರುಸ್ವಾಮಿ ಬಸವಣ್ಣ ಬರದಿರಿಸಿದ ಷಡುಸ್ಥಲಂಗಳಂ ತೆಗೆದುಕೊಡಲು ಮದ್ದಣಿಗನೋಡಿ ತಿಳಿದು ನೋಡುವಾಗವವರಲ್ಲಿ ಯೋನಿಜ ಕೈಲಾಸಂಗಳನು ಪಂಚವಿಂಶತಿ ತತ್ವಂಗಳನು ಪಂಚ ತಂಡದವರುಗಳನು ೧ಪ್ರಣಮ೨ ಪಂಚಾಕ್ಷರಿ ಗಳನು ದ್ವೈತಾದ್ವೈತಂಗಳ ಕೊಸರುವ ಅನಂತ ಶ್ರುತಿಗಳನು ಇಂತಿವೆಲ್ಲವನು ನಿಲಿಸಿ ಅನುಭಾವ ಪ್ರಸಾದ ರಸವಜ್ರ, ಕೈಲಾಸ, ಕಲ್ಯಾಣ ಕೈಲಾಸ, ಪರಶಿವತತ್ವ ಮೂವತ್ತಾರು ಮುಖ್ಯವಾದ ಅನಂತಕೋಟಿ ತತ್ವಂಗಳನು ಪೂರ್ವಪ್ರಣಮ ಪಂಚಾಕ್ಷರಿಗಳನು ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿಗಳನು ತ್ರಿವಿಧ ದಾಸೋಹಗಳನು ಐದು ಪ್ರಕಾರದ ಜಪಂಗಳನು ಇಂತಿವು ಮುಖ್ಯವಾದನಂತಕೋಟಿ ವೀರಶೈವಾನುಭಾವಂಗಳೆಲ್ಲವನು ಸ್ವರೂಪಿಸಿಕೊಡುತ್ತಿರ್ದುದಂ ಕೇಳಿ ಬೆರಗಾಗಿ ಅಷ್ಟರಿಂದಂ ಮೇಲೆ ನಂದಿ ತಾ ಮೊದಲು ನೆಮ್ಮಿರ್ದ ನಂತ ಶ್ರುತಿ ಮಂತ್ರ ಪಂಚಮುಖ ತ್ರಿಣೇತ್ರಂಗಳನುಳ್ಳವರು ಮುಖ್ಯವಾದ ಪಂಚ ಮುಖ ತಂಡದವರುಗಳೆಲ್ಲರ ನಿರಾಕರಿಸಿ ತನ್ನ ಬೋಧಾಗುರು ಭೃಂಗೀಶ್ವರನ ಮುಂದಿಕ್ಕಿಕೊಂಡು ತನ್ನ ಮೇಳದವರೆಂಟು ತಂಡ ಗಣೇಶ್ವರರೆಂಬುವರ ಕೂಡಿಕೊಂಡು ಬೆಳ್ಳಿಯ ಬೆಟ್ಟದ ಮೇಲೆ ಅರ್ತಿಯಾಗಿ ಸುಳಿದು ಬರುತ ಕಾಳೆಗಳೊಳಗೆ ಬಸವಪ್ರಭು ಸಿದ್ಧರಾಮರೆಂಬ ಧ್ವನಿಗಳನು ಮಾಯಾಕೋಳಾಹಳವೆಂಬ ಧ್ವನಿಗಳನು ಮರೆಹೊಕ್ಕವರ ಕಾಯ್ವರು, ಮಾರಾಂತವರ ಕೊಲುವುದಕ್ಕೆ ಶರಣಾಗತ ವಜ್ರಪಂಜರವೆಂಬ ಪರಮೇಶ್ವರನ ತೊಡೆಯ ಮೇಲಿರ್ದ ಮಾಯಾಶಕ್ತಿ ಪಾರ್ವತಿಯೆಂಬವಳು ಕೇಳಿಯೆಂದು ಇಲ್ಲದ ಈ ಬಿರಿದಿನ ಕಹಳೆಗಳಾಗಿವೆಯೆಂದೆನುತ ತನ್ನ ಗಂಡನಂ ಬೆಸಗೊಂಡಡವನು ವಾಙ್ಮನಂಗಳಿಗೆ ಅಗೋಚರವಾದ ಪರತತ್ವಂಗಳಲ್ಲಿ ವೀರಶೈವ ದೀಕ್ಷೆಗಳಂ ಕೊಂಡು ಶಿಷ್ಯರಾದವರು ಕಾಣೆದೇವಿಯೆನುತ ಹೇಳಿದನು. ಹೇಳಿದಡವಳು ಎನ್ನಿಂದ ಬಲ್ಲಿದರಾರೆಂದು ಕೇಳಿದಳು. ಕೇಳಿದಡೈ ಮುಖ ನನ್ನ ನಿನ್ನೊಳಗೆ ಸಿಕ್ಕದವರುಂಟು ಕಾಣೆಯೆಂದನು. ಎಂದಡೈಮುಖಿಯಿವರ ನಿರ್ಮಾಯತ್ವವ ನೋಡಬೇಕೆನುತ ತನ್ನೋಲಗದ ರುದ್ರಕರ್ಣಿಕೆಯರೊಳ ಗೊಬ್ಬಳ ಕರದು ಪರಸತಿಯರೆಂಬ ಮಾಯೆಗಳನೊಲ್ಲೆನೆಂಬವರ ಬಿರಿದಿನವರ ಮುಂದೆ ನಿಲ್ಲೆಂದು ಕಳುಹಿದಡಾ ರುದ್ರಕರ್ಣಿಕೆ ಬಂದವರ ಮುಂದೆ ನಿಂದಾಕ್ಷಣ ನಂದಿಮಹಾಕಾಳನವಳ ರೂಪು ಲಾವಣ್ಯಗಳಂ ನೋಡಿ ಮನಸೋತು ತನ್ನ ಗುರು ಭೃಂಗೀಶ್ವರನಿಗೆ ಎಲೆ ದೇವಾ ನನಗೆ ಪರಸತಿಯೆಂಬ ಮಾಯ ಸೋಂಕಿತೆಂದು ಬಿನ್ನಹಂ ಮಾಡಿದಡಾ ಮಹಾಗುರುಸ್ವಾಮಿ ಕಂಡೆಯ ಕಾಳನನು ಮುನ್ನವೆ ಯೋನಿಜ ಕೈಲಾಸಂಗಳಲ್ಲಿ ಮನ ಮಾಯೆಗಳೆಂಬ ಅರಿವು ಮರವೆಗಳುಂಟು. ಇಲ್ಲಿರಬೇಡವೆಂದು ನಿರೂಪವ ಕೊಟ್ಟುದ ಮರೆದೆಯಾ ಎಂದನು. ಎಂದಡೆ ಮದ್ದಣಿಗ ಎನ್ನಗಿನ್ನೆಂತೆನು ದೈನ್ಯಂ ಬಡುಹದ ನೋಡಿ ಕರುಣಮಂ ತಾಳಿ ಅಂಜಬೇಡೆಂದು ಅಂಬಿಕೆಯ ಬಿಡಿಸಿ ಯೋನಿಜ ಕೈಲಾಸಂಗಳೊಳಗಣ ಪ್ರಸಂಗಂಗಳಿನ್ನೂ ಕೆಲವುಂಟು ಚೆನ್ನಾಗಿ ಕೇಳೆಂದನು. ಭೃಂಗೀಶ್ವರ ನೀಮುನ್ನ ಪ್ರಾದೇಶಿಕ ಪರಮೇಶ್ವರನ ಪರಮೇಶ್ವರಿಯ ತಲೆಗಳಿಗೆ ಪುಷ್ಪವನಡಸುವ ಪುಷ್ಪದತ್ತ ಪುಷ್ಪದತ್ತೆಯರು ಗರ್ವಮೇರುವಿಗಿಳಿದು ಪುಷ್ಪಂಗಳೆತ್ತುವಲ್ಲಿ ನೋಟ ಬೇಟವ ಮಾಡಿ ಸುರತ ಸುಖದೊಳಗಿದು ಮತ್ತೆ ಪುಷ್ಪಂಗಳ ತರುವಾಗ ಮತ್ತೆ ಕೆಲ ಪುಷ್ಪದತ್ತರು ಕಂಡುಬಂದೈ ಮುಖನಿಗೆ ಹೇಳಿದಡಾತ ಕಾಮಕಲೆಗಳ ನೋಡಿ ದೇವಿಯರಿಗೆ ನವ ರತ್ನ ಖಚಿತ ಆಭರಣಂಗಳ ತೊಡಿಸುವ ರುದ್ರಕರ್ಣಿಕೆಯರ ಪರಸತಿಯರೆಂದರಿಯದೆ ನೀವು ಪರಪುರುಷನೆಂದರಿದೆ. ಇತ್ತಂಡವು ಕಳವು ಪರರದಾರಂಗಳಂ ಮಾಡುವರು. ಮರ್ತ್ಯಲೋಕಕ್ಕೆ ಹೋಗಿಯೆನುತ ನೂಕಿಸಿದ. ನೂಕಿಸಿದಡವ ರೈ ಮುಖನರಮನೆಯಿಂದ ಇಳಿದು ಪ್ರಸಾದ ರಸವಜ್ರ ಕೈಲಾಸದ ಮರುಳು ಕಂಕಣದ ಕೆಳಗೆ ನಿಂದು ಮೇಲಿರ್ದ ಗಣಂಗಳಿಗೆ ತಮ್ಮ ಸ್ಥಿತಿಯನೆಲ್ಲವನು ತಪ್ಪದೆ ಬಿನ್ನಹಂ ಮಾಡಿ ದೈನ್ಯಂ ಬಿಡುವಹದ ಮರೆಹೊಕ್ಕವರ ಕಾಯುವ ಮಾರಾಂತವರ ಕೊಲುವ ಗಣೇಶ್ವರರೊಳಗೊಬ್ಬ ಗಣೇಶ್ವರನ ಕೇಳಿ ಬೆಸಗೊಂಡು ಅಂಜಬೇಡ. ನೀನು ಭೂಲೋಕಕ್ಕೆ ಇಳಿದು ಒಬ್ಬ ಬಡವನ ಬಸುರೊಳು ಜನಿಸು. ಈ ಸತಿಯರು ಸೂಳೆಯರ ಬಸುರಲ್ಲಿ ಜನಿಸಿ ಅಷ್ಟರಿಂದಂ ಮೇಲೆ ಸತಿಪತಿಗಳಾಗಿ ಶೈವ ಮಾರ್ಗವಿಡಿದು ಲಿಂಗನಿಷ್ಟಾಪರರಾಗಿರ್ದಡೆ ಅಲ್ಲಿಗೆ ನಾವು ಬಂದು ವೀರಶೈವ ದೀಕ್ಷೆಯಂ ಮಾಡಿ ಗುರುಲಿಂಗ ಜಂಗಮವಾಗಿ ಪೂಜೆಗೊಂಡು ತ್ರಿವಿಧ ದಾಸೋಹಂಗಳಂ ಮಾಡಿ ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಡಬಳಿಕ ನಿಮ್ಮೂಳಿಗವ ಮಾಡಿಲ್ಲಿಗೆಯೆ ಐಮುಖನರಮನೆಗಳ ದಾಟಿಸಿಕೊಂಡು ಬಂದೆಹೆವು ಹೋಗೆಂದಡೆ, ಇವನು ಕಾಸ್ಯಪ ಕೈಲಾಸಂಗಳಿಂದಲು ಮರ್ತ್ಯಕ್ಕೆ ಹೋದಲ್ಲಿ ಪ್ರಪಂಚು ಘನವಲ್ಲಿ ಗೈದು ನಿಮ್ಮ ಕಂಡೆಹೆನೆಯಂದಡಾಗುರು ನಮ್ಮ ನಂಬಿ ಹೋಗೆನಲು ಪುಷ್ಪ ದತ್ತರು ಇತ್ತ ಬಂದು ಜನಿಸಿ ಪರಶಿವತತ್ವವೆಂದಂತಿರುವ ಸಮಯದೊಳು ರೇಣುಕನೆಂಬ ಗಣೇಶ್ವರನು ನಂದಿಕೇಶ್ವರ ಭೃಂಗೀಶ್ವರ, ವೀರಭದ್ರ ದೇವರು ಘಂಟಾರ್ಕ, ಗಜಕರ್ಣ, ಶಂಖುಕರ್ಣ, ಸಹನೇಶ, ಗಗನೇಶ ಅಂತಪ್ಪನವರು ಸಹಿತ ಮಹಾಮೇರು ಮಂದಿರದೊಳಗಿಳಿದು ಭಕ್ತಿ ಹಸೆಗೆ ಚಿತ್ತೈಸಿ ಅದರ ಮೇಲೆ ದಕ್ಷಿಣ ಮುಖವಾಗಿ ನಡದು ಅನಂತ ಯೋಜನಂಗಳ ಮೀರಿ ದಕ್ಷಿಣ ಕೈಲಾಸದಡಿಯ ಸೋಪಾನವ ನಾಲ್ವರು ಗಣೇಶ್ವೇರೇರಿ ಶಿಖಾಗ್ರದಲ್ಲಿಗೆ ಬಂದು ಮಡಿಯೆದ್ದು ಕಲ್ಯಾಣಕ್ಕೆ ಗಮಿಸಿ ಬಸವಣ್ಣ ಸಮೇತವಾಗಿರುತ್ತಿರ್ದರು. ಮತ್ತೈವರು ಶ್ರೀಶೈಲವ ಪ್ರವೇಷ್ಟಿಸಿಕೊಂಡಿರ್ದ ಸೋಮೇಶ್ವರಲಿಂಗದ ಸಿದ್ಧೇಶ್ವರಲಿಂಗದ ಭೀಮೇಶ್ವರಲಿಂಗದ ಬಾಲಬ್ರಹ್ಮೇಶ್ವರಲಿಂಗದ ಕಲ್ಲೇಶ್ವರಲಿಂಗದ ಇಂತಪ್ಪ ಐದು ಲಿಂಗದ ಗರ್ಭಂಗಳೊಳಗೆ ಬಂದು ಬ್ರಹ್ಮರಂಧ್ರದ ಮೇಲೆ ಮೂಡಿರ್ದು ರೂಪುಗಾಣಿಸಿ ಚೋಳದೇಶದ ತಾಮ್ರಲಿಂಗದ ಸೀಮೆಗೆ ಬಿಜಯಂ ಮಾಡಿದಾಕ್ಷಣವೆ ನಂಬಿ ಕಂಡು ನಮಸ್ಕರಿಸಿ ಮಠಕ್ಕೆ ಕರಕೊಂಡುವೈದ ಬಳಿಕ ಅವರು ಶೈವವ ಬಿಡಿಸಿ ವೀರಶೈವ ದೀಕ್ಷೆಗಳಂ ಮಾಡಿ ಜಮಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಿಸಿ ತನುಮನ ಧನವ ಸವಸಿ ಪ್ರಸಾದ ಪ್ರಣಮ ಪಂಚಾಕ್ಷರಿಗಳ ನುಡಿಸಿಷಡುಸ್ಥಲಂಗಳ ಕಾಣಿಸಿ ತ್ರಿವಿಧಕ್ಕೆ ಮಾಡಿಸಿದೆಷ್ಟೋ ವರುಷದ ಮೇಲೆ ಬಸವಣ್ಣನ ಕಾಣಿಸಿ ಕರ್ಣ ನಿಚ್ಚಣೆಗೆಯಲ್ಲಿ ಪ್ರಸಾದ ರಸವಜ್ರ ಕೈಲಾಸಂಗಳಿಗೆ ಕಳುಹಿಬಿಡಲುಅವರು ಪರಶಿವ ಲೋಕದೊಳಗೆ ಪರಮಾನಂದ ಸುಖಿಗಳಾಗಿ ಐದಾರೆ ಕೇಳೈ ಮತ್ತೆಯು ಈ ಚತುರ್ವಿಧಪದಯೋನಿಜ ಕೈಲಾಸಂಗಳದಾಟಿಸೂದಕ್ಕೆ ಮರ‍್ತ್ಯರ ಮನದ ಮೈಲಿಗೆಯ ತೊಳದು ಕಳವ ಮಹಾವೀರಶೈವವನುಳ್ಳ ವೀರಮಡಿವಾಳದೇವರು, ರೇವಣಸಿದ್ಧಯ್ಯದೇವರು ಮರುಳುಸಿದ್ದದೇವರು, ಪಂಡಿತಾರಾಧ್ಯದೇವರು, ಏಕಾಂತರಾಮಯ್ಯ ದೇವರು ಅಂತಪ್ಪ ಸ್ವಾಮಿಗಳು ಷಡುದೇವತೆಗಳ ಕೆಳಗಣವರಿಲ್ಲಿಯ ಸೆರಗುಸೋಂಕು ಕರ್ಣ ಮಥನ ಕರ್ಕ ಸಂಗಳಿಂದ ಮರ‍್ತ್ಯಕ್ಕೆ ಹೋದ ಸಾಮವೇದಿ, ಹಲಾಯುಧ, ತಿರುಜ್ಞಾನಿ, ವಾಗೀಶ, ಸಿರಿಯಾಳ, ನಂಬಿ, ಚೆನ್ನಯ್ಯ, ಕಲಿಕಾಮ, ಚೇರಮ, ಚೋಳರು, ನಿಡುಮಾರ, ಮಾನಕಂಜರ, ಚೊಕ್ಕಜೆಡೆಯಾರು, ನರಸಿಂಗಮೊನೆಯಾರು ಇವರುಗಳೆಲ್ಲಾ ಕಲಿಗಣನಾಥನಂತಾಗಬೇಕೆನುತ ಅರಸಿಕೊಂಡು ಬಂದು ಕಂಡ ಶೈವವ ಬಿಟ್ಟು ವೀರಶೈವ ದೀಕ್ಷೆಗಳಂ ಪಡದು ಹದಿನಾಲ್ಕು ಷಡುಸ್ಥಲಂಗಳೊಳಗಣ ಅನುಭವಂಗಳಂ ಬೋಧಿಸಿಕೊಂಡು ತಮ್ಮ ತಮ್ಮ ನೆಲೆಗಳಿಗೈದಿ ಜಂಗಮ ಪ್ರಸಾದವ ತಮ್ಮ ತಮ್ಮ ಲಿಂಗಂಳಿಗೆ ಕೊಟ್ಟಾರೋಗಿಸಿ ಷಡುಸಮಯದ ವರುಗಳನೆಲ್ಲಾ ಮುರಿದು ಹಾಕಿ ಗುರುಲಿಂಗ ಜಂಗಮಕ್ಕೆ ಅರ್ಥ ಪ್ರಾಣಾಇಮಾನಂಗಳನೊಪ್ಪಿಸಿ ಮಾಡಿಸಿಕೊಂಡವರು ದಣಿದೊಪ್ಪಿದ ಬಳಿಕ ಶ್ರೀ ಕಲ್ಯಾಣದ ಸೀಮೆಯ ಸಗರದ ಬೆಟ್ಟಕ್ಕೆ ಬಿಜಯಂ ಮಾಡಿದಲ್ಲಿ ಧೂಪದ ವೀರಣ್ಣ ಗೊಗ್ಗವ್ವೆಯನು ಕಂಡು ಶರಣೆಂದು ಅವರ ಶೇಷಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಿದವರಿಗೆ ಒಬ್ಬ ಕಾಳಾಮುಖಿ ಅಮಳೈಕ್ಯದೊಳು ಲಿಂಗವ ಧರಿಸಿರ್ದದನರಿಯದೆ ಭವಿಯೆಂದು ನಿಂದಿಸಿದಡೆ ಐಮುಖ ಕೋಪಿಸಿ ಇಬ್ಬರನು ತನ್ನ ರಮನೆಯಿಂದ ನೂಂಕಿಸಲಾಗಿಬ್ಬರು ಮತ್ತೆ ಮರ‍್ತ್ಯಕ್ಕೆ ಬಂದು ಶಿವಭಕ್ತರಲ್ಲಿ ಜನಿಸಿ, ಪಂಡಿತಾ ರಾಧ್ಯದೇವರಲ್ಲಿ ವೀರಶೈವ ದೀಕ್ಷೆಗಳಂ ಪಡದು ಲಿಂಗವ ಕರಸ್ಥಲದೊಳಗೆ ಮೂರ‍್ತಿಗೈಸಿಕೊಂಡು ಭಕ್ತಿಜ್ಞಾನ ವೈರಾಗ್ಯವಿಡಿದು ಕಲ್ಯಾಣಕ್ಕೆ ನಡದು ಬಸವಣ್ಣ ಪ್ರಭು ಸಿದ್ಧರಾಮ ರೇವಣ ಮಡಿವಳ ಚೆನ್ನಬಸವಣ್ಣ ನವರಂ ಕಂಡು ಕೆಲ ವರುಷದ ಮೇಲೆ ಕಾರಿಕಾಲಮ್ಮೆಯರು ಐಮುಖನ ನವಕೈಲಾಸಂಗಳಂ ದಾಂಟಿ ಶರಣಾಗತ ವಜ್ರಪಂಜರವ ಹೊಕ್ಕಡೆ ಪರಶಿವನೊಪ್ಪಿರಿಸಿಕೊಂಡಿರುತ್ತಿರ್ದನು. ಅಷ್ಟರಿಂದಂ ಮೇಲೆ ಛಪ್ಪನ್ನ ದೇಶಂಗಳೊಳಗೆ ಇರ್ದ ಅನಂತಕೋಟಿ ಭಕ್ತ ಮಹೇಶ್ವರರೆಲ್ಲಾ ಶ್ರೀ ಕಲ್ಯಾಣಕ್ಕೆ ಗಮಸಿ ಬಸವಣ್ಣನಂ ಕಂಡು ಸರ್ವಪದಾರ್ಥಂಗಳ ಬೇಡಿ ಆರೋಗಿಸುತ್ತ ಬಸವಣ್ಣ ಮೆರವ ಅನಂತ ಪವಾಡಂಗಳ ನೋಡುತ್ತ ಕೆಲ ಸಂವತ್ಸರ ತ್ರಿವಿಧ ದಾಸೋಹಂಗಳಂ ತಾವು ಮಾಡುತ್ತ ಛಪ್ಪನ್ನ ದೇಶದ ಪುರಾತನರ ಅನಂತಕೋಟಿ ಪವಾಡಂಗಳವಿಸ್ತರಿಸುತ್ತಿರ್ದಂತೆಯೇ ಕರ್ಣ ನಿಚ್ಚಣಿಗೆಯ ಮೇಲೆ ಮಹಾಮೇರುಮಂದಿರಕ್ಕೆ ಹೋಗಿ ಅಲ್ಲಿಯೂ ಬಸವಣ್ಣ ಪ್ರಭು ಸಿದ್ಧರಾಮ ನಂದೀಶ್ವರ ಭೃಂಗೀಶ್ವರ ವೀರಭದ್ರಾದಿ ಪ್ರಮಥರೊಳಗಿರುತ್ತಿರ್ದರು. ಆ ಪರಶಿವ ಲೋಕಕ್ಕೂ ಐಮುಖನ ಅರಮನೆಗೂ ಒಂದು ಹೆಸರುಂಟು. ಮತ್ತೆ ಅಷ್ಟರಿಂದಂ ಮೇಲೆ ರೇವಣಸಿದ್ದೇಶ್ವರ ಮರುಳಸಿದ್ಧೇಶ್ವರ ಏಕಾಂತರಾಮೇಶ್ವರ ಪಂಡಿತಾರಾಧ್ಯರು ಸಕಳೇಶ್ವರ ಗಣೇಶನೆಂಬ ಶಿವಯೋಗೀಶ್ವರ ಮಹಾದೇವಿಯಕ್ಕಗಳು ಇಂತಪ್ಪ ಜಂಗಮ ದೇವರುಗಳು ಬೀಳ್ಕೊಂಡು ಕಲ್ಯಾಣಕ್ಕೆ ಗಮಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ನಡದು ಐಮುಖನ ರಮನೆಗಳದಾಮಟಿ ಪರಶಿವಲೋಕವ ಹೊಕ್ಕು ಪರಶಿವಾದಿ ಬಸವಾದಿ ಪ್ರಮಥರೊಳಗೆ ಪರಮ ಸುಖಿಗಳಾಗಿಯೈದಾರೆ. ತಳಗುದಲೊಬ್ಬ ಶಿವಭಕ್ತ ಐಮುಖನರಮನೆಗೆ ರುದ್ರಕರ್ಣಿಕೆ ತನ್ನೊಡತಿಯು ಮಹಾಮ್ಮಾಯಕೈಯಲ್ಲಿ ಕಳುಹಿಸಿಕೊಂಡು ಬನವಸೆಯ ಅರಸಿನ ಸತಿಯ ಗರ್ಭದಲ್ಲಿ ಹುಟ್ಟಿ ನರ್ತನ ಗೀತ ಪಾತ್ರವ ಸಾಧಿಸಿ ಮಧುಕೇಶ್ವರನ ಪೂಜಿಸಿ ನಾಟ್ಯವ ಸಾಧಿಸಿ ವಾದವಗೆಲಿಸಬೇಕೆಂದು ಬೇಡುತ್ತಿರುವಾಗ ಅವರಲ್ಲಿ ಮಹಾಕಾಳನೆಂಬ ಮದ್ದಣಿಗ ಪ್ರಸಾದ ರಸವಜ್ರ ಕೈಲಾಸಕ್ಕೆ ಹೋಗಿ ಭೃಂಗೀಶ್ವನಿಂದ ಮಹಾ ವಿದ್ಯಂಗಳಂ ಪಡದು ಬಸವಣ್ಣಂಗೆಯಿದು ನಿರೂಪವಿಡಿದು ತಳಗುದವೊಬ್ಬ ನಿರಹಂಕಾರನೆಂಬ ಶಿವಭಕ್ತರಿಗೆ ಮಗನಾಗಿ ಮದ್ದಳೆವಿಡಿದು ಬನವಸೆಗೈದಿ ರುದ್ರ ಕರ್ಣಿಕೆಯ ಕೂಡೆ ವಾದಿಸಿ ಅವಳ ವಿದ್ಯೆಗೆ ಸೆರೆವಿಯಾಗಿ ಮೃದಂಗವ ನುಡಿಸಿ ಮೂರ್ಛೆ ಓಗಿಸಿ ನಾಚಿಸಿ ಮುರಿದೋಡಿಸಿದ ಬಳಿಕ ಮದ್ದಣೆಯ ಬಿಸುಟು ಮತ್ತೆ ಕಲ್ಯಾಣಕ್ಕೆ ಸರಿದು ಬಸವಣ್ಣನ ಹಸ್ತದಲ್ಲಿ ವೀರಶೈವ ದೀಕ್ಷೆಗಳ ಪಡದು ಹದಿನಾಲ್ಕು ಷಡುಸ್ಥಲ ಮಾರ್ಗದೊಳಗೆ ತ್ರಿವಿಧ ದಾಸೋಹಂಗಳಂ ಮಾಡಿ ಹೆನೆನುತ ಬಸವಪ್ರಭು ಸಿದ್ಧರಾಮರ ಬೆಸನದಿಂ ಬಳ್ಳಿಗಾವಿಗೆ ಬಂದು ಒತ್ತಿನ ಜಂಬೂರಿಗೆ ತನ್ನ ತಂದೆ ತಾಯಿಗಳ ಕರಕೊಂಡು ಹೊಗಲಲ್ಲಿ ತನುಮನ ಧನವ ಸವದು ಗುರುಲಿಂಗ ಜಂಗಮಕ್ಕೆ ಮಾಡಿದ ಕೆಲವರುಷದ ಮೇಲೆ ಷಡುಸಮಯದವರು ವಾದಿಸಿದವರ ವೇದಂಗಳ ಎಲ್ಲವಕ್ಕೆ ತಾ ಗುರುಸ್ವಾಮಿ ಹಾವಿನಹಾಳ ಕಲ್ಲಿ ದೇವರು ಶ್ರುತಿಗಳ ಶುನಕನ ಬಾಯಲ್ಲಿ ಓದಿಸಿ ವಾದಿಗಳ ಗೆಲಿದು ಕಲ್ಯಾಣಕ್ಕೆ ಬಂದಿರುವಂತೆ ತಾನು ನಾಯನಾಳಿಗೆಯೊಳು ನುಡಿಸಿ ತೋರಿ ನಾಚಿಸಿದ ಮತ್ತೆ ನಿರಹಂಕಾರ ಸುಜ್ಞಾನ ಶಿವಭಕ್ತರು ಸಹಿತ ಬಸವಣ್ಣನ ಸಮೀಪಕ್ಕೆ ಗಮಿಸಿ ಸತ್ಯ ಶುದ್ಧ ಕಾಯಕ ವಿಡಿದು ದಾಸೋಹಿಯಾಗಿರುತ್ತಿರ್ದನು. ಅಷ್ಟರಿಂದಂ ಮೇಲೆ ವಾದಿಸಿ ಬಂದವಳ ಮತ್ತೊಬ್ಬ ರುದ್ರ ಕರ್ಣಿಕೆಯ ಬೆಳ್ಳಿಯಬೆಟ್ಟದಿಂ ಬಂದು ಕರಕೊಂಡು ಹೋಗಿ ಬಾಗಿಲಲ್ಲಿ ನಿಂದು ತನ್ನ ಗುರುವಿನಲ್ಲಿ ಲಿಂಗವ ಪಡದು ಒಳಹೊಕ್ಕು ಪರಮೇಶ್ವರನ ಓಲಗದೊಳಗೆ ನಿಂದಿರಲಲ್ಲಿ ಇಂತಪ್ಪ ಜಂಗಮ ದೇವರುಗಳು ಮುಖ್ಯವಾದ ಎರಡುಸಾವಿರ ಲಕ್ಷದ ಮೇಲೆ ಎರಡು ತೊಂಭತ್ತಾರು ಸಾವಿರ ಜಂಗಮದೇವರುಗಳೆಲ್ಲಾ ದಕ್ಷಿಣ ಕೈಲಾಸಕ್ಕೆ ಬಿಜಯಂ ಮಾಡಲು ಲಿಂಗ ಜಂಗಮವಾಗಿ ಮಹಾಮೇರುಮಂದಿರವ ಮುಟ್ಟಿರುತ್ತಿರ್ದರು. ಮತ್ತೆ ಕಲ್ಯಾಣದಿಂ ಕೆಲಪುರಾತನರು ತಮ್ಮ ತಮ್ಮ ಜಂಗಮ ದೇವರುಗಳ ಕರ್ಣನಿಚ್ಚಣಿಗೆಯ ಮೇಲೆ ಬಿಜಯಂಗೈಸಿಕೊಂಡು ಶರಣಾಗತ ವಜ್ರಪಂಜರವೆಂಬ ಮಹಾಬಿರಿದಿನ ವಜ್ರ ಕೈಲಾಸಕ್ಕೆ ಗಮಿಸಿ ನಿತ್ಯತ್ವವನುಳ್ಳ ಪರಮಾನಂದ ಸುಖಿಗಳಾಗಿರುತ್ತಿರ್ದರು. ಮತ್ತೆ ಬಸವ ಪ್ರಭುಸಿದ್ದರಾಮ ಮಡಿವಳ ಚನ್ನಬಸವಣ್ಣ ಮುಸುಡಿಯ ಚೌಡಯ್ಯ ಸುರಗಿಯ ಚೌಡಯ್ಯ ಕಲಿಕೇತಯ್ಯ ಮೋಳಿಗೆಯಮಾರಯ್ಯ ಬಿಬ್ಬಿಬಾಚಯ್ಯ ಸೊಡ್ಡಳಬಾಚಯ್ಯ ಶಿವಲೆಂಕಮಂಚಣ್ಣ ಮೊರಟದಬಂಕಿತಂದೆ ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಗಣಂಗಳೆಲ್ಲಾ ಚಿದ್ಬ್ರಹ್ಮಾಂಡ ಪ್ರಕಾಶ ಬ್ರಹ್ಮಾಂಡ ಅನುಭವ ಬ್ರಹ್ಮಾಂಡ ಭಕ್ತಿಯೆಂಬ ಹಸೆ, ಶಕ್ತಿಯೆಂಬ ಹಸೆ, ಚೈತನ್ಯವೆಂಬ ಹಸೆ, ಹದಿನಾಲ್ಕು ಷಡುಸ್ಥಲದನುಭವ ಪ್ರಸಾದರಸ ವಜ್ರದ ಮಹಾಮೇರು ಮಂದಿರವೆಂಬ ಕೈಲಾಸ ಗೋಸಿದ್ಧಿ ಗಿರಿಯೆಂಬ ದಕ್ಷಿಣ ಕೈಲಾಸ ಕಲ್ಯಾಣವೆಂಬ ಬಿಂದ್ವಾಕಾಶ, ನೆನವಭಕ್ತರ ಮಾಹೇಶ್ವರರ ಹೃದಯಕಮಲ ಕೈಲಾಸ ಅಂತಪ್ಪ ಮಹಾಸ್ಥಾನಂಗಳೊಳಗೈಕ್ಯವಾಗಿರುತ್ತಿರ್ದರು. ಇಂತೀ ಮೂಲ ಪ್ರಸಂಗವನರಿದ ಕಾರಣದಿಂದಿಡಗೂರ ನಾಗಯ್ಯ ಸೋಸಲ ಭೈರಿದೇವಯ್ಯ ಈಚನಕೆರೆಯ ವೀರಯ್ಯ ಕೋಳಿಯಕಾದಿಸುವ ವೀರಯ್ಯ ಕರಸ್ಥಲದ ವೀರಯ್ಯ ಕರಸ್ಥಲದ ನಾಗಯ್ಯ ಗೆಲ್ಲಗೂಳಯ್ಯ ಸೊರಟಿ ಶಾಂತಯ್ಯ ಸಿದ್ಧಯ್ಯ ಬಿಲ್ಲಮರುಳಯ್ಯ ಪ್ರಸಾದ ವೀರಯ್ಯ ಹಿಮಗಿರಿಯಯ್ಯ ಸೋಲೂರ ಬಸವಯ್ಯ ಕಳಲೆಯ ಚಿಕ್ಕ ವೀರಯ್ಯ ಉಮ್ಮತೂರ ವೀಮಲ್ಲಯ್ಯ ಬಯಲಪ್ರಭು ಬಿಟ್ಟಮಂಡೆಯ ಪ್ರಭು ಮೊಗ್ಗೆಯ ಮಾರಯ್ಯ ಮಾಹಿದೇವ ಪ್ರಭುಶಂಕರ ದೇವರು ಇಂತಪ್ಪ ನೂತನ ಗಣಂಗಳೆಲ್ಲರೂ ಶೈವಪ್ರಣಮ ಪಂಚಾಕ್ಷರಿ ಮಂತ್ರೋಪದೇಶವೆಂಬ ಶೈವದೀಕ್ಷೆಗಳ ಕಳೆಯಬೇಕೆಂದವರು. ವೇದ ಶಾಸ್ತ್ರಗಮ ಪುರಾಣಂಗಳೆಂಬ ವಿಥೀ ಒಸರಿನ ಮಾತು ಗೀತೆಂದರು. ಷಡುದೇವತೆಗಳ ದಾಂಟಬೇಕೆಂದರು. ಆರರಿಂದಂ ಮೇಲೆ ತೋರ ಬಲ್ಲಾತನೆ ಗುರುವೆಂದರು. ಮೂಲಪ್ರಣಮ ಪಂಚಾಕ್ಷರಿಗಳೆಂಬ ವೀರಶೈವ ದೀಕ್ಷೆಗಳಂ ಪಡದು ಬಸವಾದಿ ಪ್ರಮಥರ ಷಡುಸ್ಥಲಂಗಳೊಳಗೆ ನಿಂದು ಜಂಗಮಪಾದ ತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಆರೋಗಿಸಿ ಲಿಂಗೈಕ್ಯರಾಗಬೇಕೆಂಬುದಕ್ಕೆ ಸಾಕ್ಷಿ.

ಇಂತಪ್ಪ ಮಹಾ ಪರಮಮೂಲಜ್ಞಾನದ ಲೀಲೆಯ ಕಥಾಗರ್ಭದ ಯಥಾರ್ಥದ ತಾತ್ಪರಿಯಾಯದ ಪ್ರಸಂಗಗಳನು ಪರಶಿವನಪ್ಪ ಪ್ರಭುಬಸವಾದಿ ಪ್ರಮಥರು ಬಲ್ಲರು. ಅವರ ಷಡುಸ್ಥಲಂಗಳ ಚನ್ನಾಗಿ ತಿಳಿದು ಓದಿ ವಿಚಾರಿಸಿ ಕಾಣಲಾಗಿ ಮಹಾರ್ಥಂಗಳ ಜ್ಞಾನದೃಷ್ಟಿಯಲ್ಲಿ ಕಂಡ ಭಕ್ತ ಮಾಹೇಶ್ವರರೆ ಬಲ್ಲರು. ಮತ್ತೆ ವೇಗೀದ ಶಾಸ್ತ್ರಗೀಸ್ತ್ರ ಅಗಮಗೀಗಮ ಪುರಾಣ ಗಿರಾಣವೆಂಬ ಎಂಜಲು ಮಾತಂಗಳ ಗಣೆಯವರಂತೆ ಲಾಗಿನವರಂತೆ ನಟ್ಟುವರಂತೆ ಪಾಣ್ಟರಂತೆ ಗಳಹೀನಾಗಿ ನುಡಿದ ಪದ – ಗಿದ ಫಲ – ಗಿಲ ಭೋಗ – ಗೀಗ ಇಂದ್ರ – ಗಿಂದ್ರ ಅಜ – ಗಿಜ ಹರಿ – ಗಿರಿ ರುದ್ರ – ಗಿದ್ರ ಈಶ್ವರ – ಗೀಶ್ವರ ಸದಾಶಿವ – ಗಿದಾಶಿವ ಪರಮೇಶ್ವರ – ಗಿರಮೇಶ್ವರ ಶೈವಮಂತ್ರೋಪದೇಶ – ಗಿಯ್ವಮಂತ್ರೋಪದೇಶ ಮನ – ಗಿನ ಮಾಯೆ – ಗೀಯೆ ಲೋಕ – ಗೀಕ ಇಂತಿವೆಲ್ಲವರೊಳಗೆ ಹೊದಕುಳಿಗೊಂಬವರಾರೂ ಅರಿಯರು. ಇಂತೆಂಬ ಪುರತಾನರಗಣಿತ ವಚನ ಸಾರಾಯವೆನಿಸುವ ಪರಮಮೂಲ ಜ್ಞಾನಾಮೃತ ಪ್ರಸಂಗಂಗಳಿಗೆ ಸಾಕ್ಷಿ.

೫೪೮

ಆಧಾರಕಾಲದಲ್ಲಿ ಅನಾದಿಯನಾಡುತ್ತಿಪ್ಪರು ದೇವಗಣಂಗಳು.
ಸಿಂಹಾಸನ ಕಾಲದಲ್ಲಿ ಅತೀತನಾಡುತ್ತಿಪ್ಪರು ಮಹಾಪುರುಷರು.
ಮಂದರಗಿರಿಯ ಕಾಲದಲ್ಲಿ ಶಂಕೆಯನಾಡುತ್ತಿಪ್ಪರು ಕಾಲಪುರುಷರು.
ಅವಕಾಲದಲ್ಲಿಯೂ ನಂದಿಕೇಶ್ವರನ ಶಬ್ದವನಾಡುತ್ತಿಪ್ಪರು
ನಂದಿಗಣಂಗಳು.
ಕಲಿಕಾಲದಲ್ಲಿ ಉತ್ಪತ್ಯದ ಮಾತನಾಡುತ್ತಿಪ್ಪರು ಪುರುಷಗಣಂಗಳು.
ಪ್ರಜ್ವಲಿತ ಕಾಲದಲ್ಲಿ ಭವಂನಾಸ್ತಿಯೆನುತ್ತಿಪ್ಪರು ಗುರುಕಾರುಣ್ಯವುಳ್ಳವರು.
ದೇವಾದಿದೇವನು ಕಾಲಾದಿದೇವನು ಎಲ್ಲಾ ಕಾಲಸೂತ್ರವನಾಡಿಸುತ್ತಿಹನು.
ಸದೃಶಕಾಲಾದಿದೇವನು ಎಲ್ಲಾ ವಿಸ್ತಾರಕನು; ಗುರುವಿಸ್ತಾರಕನು,
ಜಂಗಮಾಕಾರನು, ಪ್ರಸಾದಕಾಯನು ಜ್ಞಾನಸಿಂಹಾಸನದ ಮೇಲೆ
ಕಲಿದೇವಾ, ನಿಮ್ಮಶರಣ ಬಸವಣ್ಣನ ನಿಲವು.  ||೫||


[1] ಕೆಳಗೆ (ಬ)

[2] ಕೆಳಗೆ (ಬ)

[3] ಕಾಮ (ಬ)

[4] ಕಾಮ (ಬ)

[5] ಅಂಕುರ (ಬ)

[6] ಅಂಕುರ (ಬ)

[7] ಸ (ಬ)

[8] ವಂದ್ಯನೆ (ಬ)

[9] ವಂದ್ಯನೆ (ಬ)

[10] x (ಬ)

[11] x (ಬ)

[12] ರ (ಬ)