೫೯೪

ಒಂದು ಕಯಯ ಬಯಲ ಎನಗೆ ಕೊಟ್ಟ.
ಒಂದು ಕೈಯ ಬಯಲ ಚನ್ನಬಸವಣ್ಣಂಗೆ ಕೊಟ್ಟ.
ನೀವು ಬಂದಹರೆಂದು ಎಂಟುಸಾರಿವ ವರುಷ,
ಒಗೆದೊಗೆದು ಬಿಳಿದು ಮಾಡುತ್ತಿದ್ದೆನು.
ಒಂದು ಬಿಳಿದ ಬಸವಣ್ಣ ಲಿಂಗಕ್ಕೆ ಕೊಡು ಎಂದಡೆ
ಲಿಂಗಕ್ಕೆ ಕೊಡಲೊಲ್ಲದೆ ತಲೆಯ ಸುತ್ತಿಕೊಂಡ,
ಮಡಿಯ ಕೂಲಿಯ ಬೇಡ ಹೋದಡೆ ಬಿಳಿದ ಹರಿದು ಮೇಲೆ ಬೀಸಾಟನು.
ನೀ ಉಟ್ಟ ಬೀಳುಡಿಗೆಯನು ಚನ್ನಬಸವಣ್ಣನ ಕೈಯ
ನಿರಾಳವನೆನಗೆ ಕೊಡಿಸಾ ಕಲಿದೇವಯ್ಯಾ.    ||೪೮||

೫೯೫

ಅಜಾಂಡ ಮೊದಲಾದ ಅಜಾಂಡದೊಳಗೆ
ಬ್ರಹ್ಮಾಂಡ ಕೋಟಿಗಳುಂಟು.
ಅಂತಾ ಅಜಾಂಡ ಬ್ರಹ್ಮಾಂಡಂಗಳೆಲ್ಲೊ ನಿಮ್ಮನರಿಯವು.
ನವಕೋಟಿ ಬ್ರಹ್ಮರೆಲ್ಲರು
ಹರ ನಿಮ್ಮ ಮಕುಟವನರಿಯದೆ ಭವಭಾರಿಗಳಾದರು.
ನವಕೋಟಿ ವಿಷ್ಣುಗಳೆಲ್ಲರು
ಶಿವ ನಿಮ್ಮ ಹರಣವನರಿಯದೆ ಭೂಭಾರಕರಾದರು.
ಜಡೆಯ ಕಟ್ಟಿ ಕರ್ಣಕುಂಡಲವನಿಕ್ಕಿ
ನಂದಿಯನೇರಿದನಂತಕೋಟಿ ರುದ್ರರೆಲ್ಲಾ ಕಡೆಯಾದ
ನವಕೋಟಿ ರುದ್ರರು ಮೊದಲಾದವರೆಲ್ಲರು
ಮಹಾದೇವ ನಿಮ್ಮಾದಿಮಧ್ಯಾವಸಾನವನರಿಯದೆ ಭವಭಾರಿಗಳಾದರು.
ಅಷ್ಟವೃಕ್ಷ ಫಲದೊಳಗೆ ಸ್ಥೂಲ ಸೂಕ್ಷ್ಮ ಕಾರಣವಾಗಿ
ಕೂಡಲಚೆನ್ನಸಂಗ ನಿಮ್ಮ ಶರಣ
ಅನಲಾಹುತಿಯ ಮೇಳದಂತಿಪ್ಪನು. ||೪೯||

೫೯೬

ಯತಿಗೆ ಲಾಂಛನವೇಕೆ? ಶುಚಿಗೆ ಮುಗ್ಗಲೇಕೆ?
ಕಲಿಗೆ ಕಜ್ಜವೇಕೆ? ದಿಟವುಳ್ಳ ಮನಕೆ ಶಿವಪೂಜೆಯೇಕೆ?
ಸಜ್ಜನ ಸ್ತ್ರೀಗೆ ಬೇರೆ ನೋಂಪಿಯೇಕೆ?
ಭೃತ್ಯಾಚಾರವನೊಳಕೊಂಡವರ ಮನವ
ಮಹಂತ ಸಕಳೇಶ್ವರ ನೀನೇ ಬಲ್ಲೆ.   ||೫೦||

ಬಸವೇಶ್ವರ ದೇವರು ತೃಣಪುರುಷನ ಮಾಡಿ ಮೀಮಾಂಸಕಂಗೆ ಉತ್ತರವ ಕೊಡು ಹೋಗೆನಲು ಆ ತೃಣ ಪುರುಷನು ಮಹಾ ಪ್ರಸಾದ ದೇವ ಎನುತ ಕೈಕೊಂಡು ಮೀಮಾಂಸಕಂಗೆ ಉತ್ತರವಂ ಕೊಟ್ಟು ಶಿವರಹಿತವಾದ ಕಾಳ್ಪುರಾಣಂಗಳೆಲ್ಲವಂ ಬಯಲು ಮಾಡಿ ನುಡಿಯಲು, ಶಿವನೆನ್ನ ತಲೆದೋರಿ ಎಲೆ ಬಸವೇಶ್ವರಾ ಎನಗುಪದೇಶವ ಮಾಡೆನಲು ಆತಂಗೆ ಉಪದೇಶವಂ ವೀರಶೈವ ದೀಕ್ಷೆಯಂ ಮಾಡಿ ಶೃತಿಗಳೆಲ್ಲವಂ ಬಿಡಿಸಿ ಷಡುಸ್ಥಲ ಮಾರ್ಗಕ್ರೀಯವಂ ನಿರೂಪಿಸಲು ಸ್ವಾಮೀ ಬಸವೇಶ್ವರಾ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಹುದೆ ಎಂದು ಕೇಳಲು, ಕೇಳೊ ಮೀಮಾಂಸಕಾ ಪೂರ್ವದಲ್ಲಿ ಪರಶಿವನು ಸಮಸ್ತ ಗಣಂಗಳ ಒಡ್ಡೋಲಗದಲ್ಲಿ ಒಪ್ಪುತ್ತಿರಲು ಆ ಸಮಯದಲ್ಲಿ ಸೂತ್ರಿಕನೆಂಬ ಶೈವರಿಯನು ಎಲೆ ಪರಶಿವಮೂರ್ತಿಯೆ ಜಂಗಮವಾದ ತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಹುದೆ ಎಂದು ಶಿವನ ಕೇಳಲು, ಪರಶಿವನು ಎಲೆ ಸೂತ್ರಿಕ ಕೇಳು ನಾನೆಂದಡೆಯೂ ಜಂಗಮ, ಜಂಗಮವೆಂದಡೆಯೂ ನಾನು. ಜಂಗಮಕ್ಕೆಯೂ ಎನಗೆಯೂ ಬೇಱಿಲ್ಲ. ಅದು ಕಾರಣ ಜಂಗಮವೆ ಅಧಿಕನು. ನೀನು ಕೇಳಿದ ವಾಕು ದೋಷಕ್ಕೆ ನೀನೆ ಮರ್ತ್ಯಕ್ಕೆ ಹೋಗಿ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ತುದಿನಾಲಿಗೆಯಲ್ಲಿ ಭುಂಜಿಸಿ ನರಕದಲ್ಲಿಯು ನರಕ ಜೀವಿಯಾಗಿರು ಹೋಗೆಂದುದೆ ಸಾಕ್ಷಿ.

೫೯೭
ಅದು ಕಾರಣ ಜಂಗಮದ ಪಾದತೀರ್ಥ ಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಬಾರದು ಎಂಬಾತನು ಲಿಂಗದ್ರೋಹಿ,
ಜಂಗಮದ್ರೋಹಿ, ಪಾದೋದಕ ಪ್ರಸಾದದ್ರೋಹಿಯಾದ
ಚಾಂಡಾಲರ ಮುಖವ ನೋಡಲಾಗದು.
ನೋಡಿದಡೆ ನಾಯಕ ನರಕ ತಪ್ಪದು
ಕೂಡಲಚನ್ನಸಂಗಮದೇವಾ.          ||೫೧||

೫೯೮
ಕಷ್ಟನ ಮನೆಯಲ್ಲಿ ಸೃಷ್ಟಿಗೀಶನುಂಬಾಗ ಎತ್ತ ಹೋದವು
ನಿಮ್ಮ ವೇದ ಶಾಸ್ತ್ರಾಗಮ ಪುರಾಣಂಗಳು?
ಕೆತ್ತ ಮುಚ್ಚುಳು ಜೇಡಗಚ್ಚರಿದೆಱೆವಾಗ ಇಕ್ಕಿದ
ಜನ್ನಿವಾರ

[1]ಬೀಯ[2]ವಾದವು.
ಮುಕ್ಕುಳಿಸಿದುದಕವ ತಂದೆರದಡೆ
ಎತ್ತಲಿದ್ದವು ನಿಮ್ಮ ವೇದಂಗಳು?
ನಿಮ್ಮ ವೇದ ಶಾಸ್ತ್ರಾಗಮ ಪುರಾಣಂಗಳ ದುಃಖ
ಬೇಡವೆಂದನಂಬಿಗರ ಚೌಡಯ್ಯ.     ||೫೨||

೫೯೯

ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು.
ಮನ ನಿಮ್ಮ ನೆನವ ಧ್ಯಾನಕ್ಕೆ ಸಂದುದು.
ಪ್ರಾಣ ನಿಮ್ಮ ರತಿಸುಖಕ್ಕೆ ಸಂದುದು.
ಇಂತು ತನು ಮನ ಪ್ರಾಣ ನಿಮಗೆ ಸಂದಿಪ್ಪ ನಿಸ್ಸಂಗಿಯಾದ
ನಿಶ್ಚಟ ಲಿಂಗೈಕ್ಯನು ಕಾಣಾ ಗುಹೇಶ್ವರ.         ||೫೩||

೬೦೦

ಖೇಚರ ಪವನದಂತೆ ಜಾತಿಯ ನಿಲವು.
ಮಾತಿನೊಳಗೆ ದಾತು ನುಂಗಿ ಉಗುಳದಿನ್ನೆಂತೊ!

ಭೂಚಕ್ರವಳಯವನು ಆಚಾರ್ಯ
ರಚಿಸಿದ ಗ್ರಾಮವೆಲ್ಲವನು ಸುಟ್ಟು
ನೇಮ ನೆಲಗತವಾಗಿ, ನೇಮ ನಾಮವ ನುಂಗಿ
ಗ್ರಾಮಾಶ್ರಯವ ನುಂಗಿ
ಗೋಹೇಶ್ವರಲಿಂಗ ಎನ್ನುತ್ತ ನಿರ್ವಯಲಾಯಿತ್ತು.          ||೫೪||

೬೦೧

ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿದ್ದು ದನಾರು ಬಲ್ಲರು?
ಅದು ದೂರವೆಂದು, ಸಮೀಪವೆಂದು
ಮಹಂತ ಗುಹೇಶ್ವರನ ಒಳಗೆಂದು ಹೊರಗೆಂದು
ಬರುಸೂರೆ ಹೋದರು.      ||೫೫||

೬೦೨

ಅರುವಿನ ಕುರುವಿದೇನೊ?
ಕುರುಹಿನ ಅರುಹಿದೇನೊ?
ಒಳಗನುಮಿಷನಂದಿನಾಥನಿರಲು ಪೂಜಿಸುವ ಭಕ್ತನಾರೋ?
ಪೂಜೆಗೊಂಬ ದೇವನಾರೋ?
ಹಿಂದು ಮುಂದು, ಮುಂದು ಹಿಂದಾದಡೆ
ಗುಹೇಶ್ವರ ನಾನು ನೀನು, ನೀನು ನಾನಾದೆನು.          ||೫೬||

೬೦೩

ಯುಗದುತ್ಸವವ ನೋಡಿರೆ!
ಆಱುಶಕ್ತಿಗಳಿಗಾಱು ಪ್ರಧಾನರುಂಟು.
ಅವರಾಗುಹೋಗನು ಶರಣರು ಬಲ್ಲರು.
ಆರು ದರುಶನಕ್ಕೆ ಯಾಚಕರಲ್ಲ.
ಆರು ದರುಶನಕ್ಕೆ ಮುಯ್ಯಾನುವರಲ್ಲ.
ವೇದ ಶಾಸ್ತ್ರ ಪುರಾಣ ಛಂದಸ್ಸು ನಿಘಂಟುಗಳೆಂಬುದಕ್ಕೆ ಭೇದಕನಲ್ಲ.
ಅದೇಕೆಂದಡೆ:
ಅವರಂಗದ ಮೇಲೆ ಲಿಂಗವಿಲ್ಲ, ಗುರುವಿಲ್ಲ, ಜಂಗಮವಿಲ್ಲ.
ಪಾದತೀರ್ಥಪ್ರಸಾದವಿಲ್ಲದ ಭಾಷೆ.
ಆ ಗುರುಲಿಂಗ ಜಂಗಮ ಪಾದತೀರ್ಥ ಪ್ರಸಾದ ಏಕವಾದ ಕಾರಣ,
ಪಂಚ ತಂಡದ ಪ್ರಾಣಿಗಳೆಲ್ಲ ಜೀಯಾ ಜೀಯಾ ಎನುತಿರ್ದರು.
ಆ ಆತ್ಮಂಗಳೆಲ್ಲ ವರವ ಬೇಡುತಿರ್ದವು.
ಗುಹೇಶ್ವರ, ಸಂಗನಬಸವಣ್ಣನ ಶ್ರೀ ಪಾದಕ್ಕೆ
ಈರೇಳು ಭುವನಂಗಳೆಲ್ಲವು ನಮೊ ನಮೊ ಎನುತಿರ್ದುವು.      ||೫೭||

೬೦೪

ದೇವಲೋಕದವರಿಗೆಯು ಬಸವಣ್ಣನೆ ದೇವರು.
ನಾಗಲೋಕದವರಿಗೆಯು ಬಸವಣ್ಣನೆ ದೇವರು.
ಮರ್ತ್ಯಲೋಕದವರಿಗೆಯು ಬಸವಣ್ಣನೆ ದೇವರು.
ಮೇರುಗಿರಿ, ಮಂದರಗಿರಿ, ಕೈಲಾಸಗಿರಿ
ಮೊದಲಾದವರಿಗೆಯು ಬಸವಣ್ಣನೆ ದೇವರು.
ಶ್ರೀ ಶೈಲ ಚೆನ್ನಮಲ್ಲಿಕಾರ್ಜುನಯ್ಯಾ, ನಿನಗೂ, ಎನಗೂ
ನಿಮ್ಮ ಶರಣರಿಗೆಯೂ ಬಸವಣ್ಣನೆ ದೇವರು.    ||೫೮||

೬೦೫

ಸ್ಥಲ ಹೋಯಿತ್ತೆನಗೆ, ನಿಃಸ್ಥಲವಾಯಿತ್ತೆನಗೆ,
ಬಸವ ಹೋದನೆನಗೆ ಬಸವನ ಜಂಗಮರು ಹೋದರೆನಗೆ.
ಗೋರಿ ಕಲ್ಲ ಮಾಡಹೋಯಿತ್ತೆನಗೆ, ಹೂವಿನ ವಿಮಾನ ಹೋಯಿತ್ತೆನಗೆ,
ಇನ್ನು ಬಸವಾ ಬಸವಾ ಎಂದೆನಾದಡೆ
ಕೂಡಲಚೆನ್ನ ಸಂಗಮದೇವಾ ನಿಮ್ಮಾಣೆ.       ||೫೯||

೬೦೬

ಚನ್ನಯ್ಯನ ಮನೆಯ ದಾಸಿ,
ಕಕ್ಕಯ್ಯನ ಮನೆಯ ದಾಸ
ಇವರಿಬ್ಬರು ಬೇಂಟೆಯನಾಡ ಹೋಗಿ
ಸಂಗಮವಾದಲ್ಲಿ ನಾನು ಹುಟ್ಟಿದೆನು ಕಾಣಾ
ಕೂಡಲಸಂಗಯ್ಯ ನಿಮ್ಮಾಣೆ.          ||೬೦||

೬೦೭

ಭಕ್ತಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ,
ಸ್ಥಿತಿಯಿಲ್ಲಾಗಿ ಲಯವಿಲ್ಲ.
ಮುನ್ನೆಲ್ಲಿಂದ ಬಂದನಲ್ಲಿಗೆ ಹೋಗಿ
ನಿತ್ಯನಾಗಿಪ್ಪ ಗುಹೇಶ್ವರ ನಿಮ್ಮ ಕಾರಣ.        ||೬೧||

೬೦೮

ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು,
ಉಡುವಾತ ಬಲ್ಲನಲ್ಲದೆ.
ಕವಿಯ ಮಾತ ಕವಿ ಬಲ್ಲನು.
ನಾಲಗೆ ಬಲ್ಲದು ರುಚಿಯ, ಭವದುಃಖಿಯೆತ್ತ ಬಲ್ಲನು ಲಿಂಗದ ಪರಿಯ.
ಮಡಿವಾಳ ಮಡಿವಾಳ ಎಂದು ನುಡಿವುದು ಜಗವೆಲ್ಲ.
ಹರಿಗೊಬ್ಬಮಡಿವಾಳನೆ?
ಮಡಿಯಿತು ಕಾಣಾ ಈರೇಳು ಭುವನವೆಲ್ಲವು,
ಮಡಿವಾಳ ಮಾಚಯ್ಯನ ಕೈಯಲ್ಲಿ.
ಮುಂದೆ ಮಡಿದಾತ ಪ್ರಭುದೇವರು.
ಹಿಂದೆ ಮಾಡಿದಾತ ಬಸವಣ್ಣನು.
ಇವರಿಬ್ಬರ ಕರುಣದ ಕಂದನು ನಾನು ಕಲಿದೇವಯ್ಯಾ.  ||೬೨||

೬೦೯

ವೇದ ಶಾಸ್ತ್ರ ಆಗಮ ಪುರಾಣಂಗಳ ನೋದಿದವರು ಹಿರಿಯರೆ?
ಕವಿ ಗಮಕಿ ಗೀತ ವಾದಿ ವಾಗ್ಮಿಗಳು ಹಿರಿಯರೆ?
ನಟಿನಿ ಬಾಣ ವಿಲಾಸಿ ಸುವಿದ್ಯವ ಕಲಿತ ಡೊಂಬ ನೀನು ಕಿರಿಯನೆ?
ಹಿರಯತನವಾವುದೆಂದಡೆ:
ಗುಣ ಜ್ಞಾನ ಆಚಾರ ಧರ್ಮ ಕೂಡಲಸಂಗನ ಶರಣರು
ಸಾಧಿಸಿದ ಸಾಧನೆಯೇ ಹಿರಿಯತನ.            ||೬೩||

೬೧೦

ಲಿಂಗ ಒಳಗೊ ಹೊರಗೊ ಬಲ್ಲಡೆ ನೀವು ಹೇಳಿರೆ!
ಲಿಂಗ ಎಡನೊ ಬಲನೊ ಬಲ್ಲಡೆ ನೀವು ಕೇಳಿರೆ!
ಲಿಂಗ ಹಿಂದೊ ಮುಂದೊ ಬಲ್ಲಡೆ ನೀವು ಹೇಳಿರೆ!
ಲಿಂಗ ಸ್ಥೂಲವೊ, ಸೂಕ್ಷ್ಮವೊ ಬಲ್ಲಡೆ ನೀವು ಹೇಳಿರೆ!
ಲಿಂಗ ಪ್ರಾಣವೊ, ಪ್ರಾಣ ಲಿಂಗವೊ
ಬಲ್ಲಡೆ ನೀವು ಹೇಳಿರೆ ಗುಹೇಶ್ವರನನು.         ||೬೪||

೬೧೧

ಹೊಗಬಾರದು ಕಲ್ಯಾಣವ ನಾರಾದಡು.
ಹೊಕ್ಕಡೇನು, ಕಲ್ಯಾಣದ ಕಡೆಯ ಕಾಣಬಾರದು.
ಕಲ್ಯಾಣದ ಚಾರಿತ್ರವಾದೆವೆಂದು ದೇವ ದಾನ ಮಾನವರೆಲ್ಲರು[3]ಪರಿಣಾಮಿ[4]ಸುತಿರ್ದರು ನೋಡಾ.
ಅನಂತ ಮೂರ್ತಿಗಳು ಅನಂತ ಮನುಗಳು
ಅನಂತ ಮುನಿಗಳು, ಅನಂತ ಸ್ಥೂಲ ಮೂರ್ತಿಗಳು,
ಅನಂತ ಸೂಕ್ಷ್ಮ ಮೂರ್ತಿಗಳು, ಅನಂತ ಧ್ಯಾನಾರೂಢರು,
ಪುಣ್ಯಪಾಪಕ್ಕಭಿಲಾಷೆಯ ಮಾಡುವರು.
ಪೂಜಕರು, ಯೋಗಿಗಳು, ಭೋಗಿಗಳು ದ್ವೈತಾದ್ವೈತಿಗಳು,
ಕಾಮಿಗಳು ನಿಷ್ಕಾಮಿಗಳು ಆಶ್ರಮಿಗಳಿ
ಇಂತಿವೆಲ್ಲರು ಎಂತು ಹೋಗತಬಹುದೊ ಕಲ್ಯಾಣವನು?
ಲಿಂಗನಿಷ್ಠಂಗಲ್ಲದೆ ಲಿಂಗ ಗಂಭೀರಂಗಲ್ಲದೆ, ಲಿಂಗವೇದ್ಯಂಗಲ್ಲದೆ
ಪಾದ ತೀರ್ಥಪ್ರಸಾದ ಕುಳದನ್ವಯಂಗಲ್ಲದೆ
ಎಂತು ಕಲ್ಯಾಣವ ಹೋಗಬಹುದು?
ಕಲ್ಯಾಣವಾವುದೆಂದಡೆ:
ಆಸೆಗೆಡೆಗೊಡದಿಪ್ಪುದೆ ಕಲ್ಯಾಣ.
ಆಸೆಯ ತಲೆಯ ಮೆಟ್ಟಿ ನಿಂದುದೆ ಕಲ್ಯಾಣ
ಷಡುದೇವತೆ, ಷಡುವರ್ಗ ರಹಿತವಾದುದೆ ಕಲ್ಯಾಣ.
ನಿಂದ್ಯ ಸ್ತುತಿಯಳಿದುದೆ ಕಲ್ಯಾಣ.
ನಿಂದುದು ನಿವಾಸವಾದುದೆ ಕಲ್ಯಾಣ
ಪರಮ ಶಾಂತಿ ನೆಲೆಗೊಂಡುದೆ ಕಲ್ಯಾಣ.
ಕಲ್ಯಾಣವೆಂಬ ಮಹಾಘನದೊಳಗೆ ಬಸವಣ್ಣನು
ನಾನೂ ಹದುಳಾಗಿರ್ದೆವು ಕಾಣಾ ಕಲಿದೇವಯ್ಯ.         ||೬೫||

೬೧೨

ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ
ಈ ಐದರಿಂದೊದಗಿದ ತನುವಿನ ಭೇದವ ನೋಡಿದಡೆ,
ತಮ್ಮ ತಮ್ಮ ವಿಶ್ವಾಮಕ್ಕೆ ತನುಸವೆದು ಹೋಗುತ್ತಿವೆ,
ತಮ್ಮ ತಮ್ಮ ವಿಶ್ರುತಿಗೆ ಮನಸೋತು ಹೋಗುತ್ತಿದೆ,
ತಮ್ಮ ತಮ್ಮ ವಿಶ್ರಾಮಕ್ಕೆ ಪ್ರಾಣ ಸವೆದು ಹೋಗುತ್ತಿದೆ,
ಮುಂದೆ ದೇವರ ತಂದೆಹೆನೆಂದಡೆ, ಕಾಣಬಾರದು.
ಅಕಟಕಟಾ ಇದನರಿಯದೆ ಈ ಷಡುದೇವರು
ಜಡದೇಹಿಗಳೆಲ್ಲರು ಜಡವನೆ ಪೂಜಿಸಿ
ತಾವು ಹತ್ತಿದರೆಲ್ಲಾ ಕೈಲಾಸದ ಬಟ್ಟೆಯನು.
ಅಲ್ಲಿ ಉಪಾಯುತವಲ್ಲದೆ ಪ್ರಳಯ ತಪ್ಪದು.
ಅದು ಕಾರಣ ನಾನು ಅಚಲಲಿಂಗ ಸೋಂಕಿನ
ಸ್ವಾನುಭಾವದ ಸಮ್ಯಜ್ಞಾನದವಲಂಬರಿಗರುಹಿದ
ಕಾರಣ ಕೈಲಾಸದ ಬಟ್ಟೆಹಿಂದಾಯಿತ್ತು.
ನಾನು ಬಂದ ಬಯಲಲೋಕದ ಬಟ್ಟೆ ಮುಂದಾಯಿತ್ತು.
ನಾನು ಮಹಾಬಯಲಲೋಕದೊಳಗಿದ್ದೆ ಕಾಣಾ
ಕೂಡಲಚನ್ನಸಂಗಯ್ಯ.      ||೬೬||

೬೧೩

ಲಿಂಗ ಲಿಂಗವೆಂದಲ್ಲಿ ತಪ್ಪಿತ್ತು,
ಜಂಗಮ ಜಂಗಮವೆಂದಲ್ಲಿ ತಪ್ಪಿತ್ತು.
ಪ್ರಸಾದ ಪ್ರಸಾದವೆಂದಲ್ಲಿ ತಪ್ಪಿತ್ತು
ಇಂತಿ ತ್ರಿವಿಧ ಸಂಚದ ನಿಕ್ಷೇಪವ ಬಲ್ಲಡೆ
ಇಹಲೋಕದೊಳಗಿರ್ದಡೇನು? ಪರಲೋಕದಲ್ಲಿರ್ದಡೇನು?
ಆ ಮಹಾಲೋಕದಿಂದ ಮರ್ತ್ಯಕ್ಕೆ ಬಂದಡೇನು?
ಆ ಮಹಾಲೋಕಕ್ಕೆ ಹೋದಡೇನು?
ಹದಿನಾಲ್ಕು ಲೋಕದೊಳಗಿರ್ದಡೇನು?
ನಿಸ್ಸಾರವಂ ಬಿಟ್ಟಡೆ ನಿಜಲಿಂಗ ಸಾರಾಯ ಭೋಗಿಯ
ಕೂಡಲಚನ್ನಸಂಗನಲ್ಲಿ ನಿರ್ಲೇಪವಾದ ಶರಣ. ||೬೭||

೬೧೪

ಲೋಕವಿರಹಿತ ಶರಣ, ಶರಣವಿರಹಿತ ಲೋಕ.
ಹದಿನಾಲ್ಕು ಲೋಕ ಒಬ್ಬ ಶಿವಶರಣನ ಕ್ಷುಕ್ಷಿಯೊಳಗು.
ಅರಿವು ಮಱಹಿಲ್ಲದ ಘನವು ಗೊಹೇಶ್ವರ, ನಿಮ್ಮ ಶರಣಾ.           ||೬೮||

೬೧೫

ಧರೆಯು ಬ್ರಹ್ಮಾಂಡವು ಚಂದ್ರ ಸೂರ್ಯ ತಾರಾಮಂಡಲವೆಲ್ಲವು
ಇಲ್ಲಿಂದಿತ್ತಲೆ ನೋಡಾ.
ನರನಲ್ಲ ಸುರನಲ್ಲ ಭ್ರಾಂತನಲ್ಲ ಶಿವ ಶರಣನು.
ಲಿಂಗಸಹಿತಪಾರಮಹಿಮನು ನೋಡಾ.
ಸುರಾಸುರರೆಲ್ಲರು ನಿಮ್ಮ ವಶದಲ್ಲಿ ಸಿಲುಕಿದರು.
ಸರಸದೊಳಗಲ್ಲ ಹೊರಗಲ್ಲ [5]ಕೇಳಭವಾ[6] ಗೊಹೇಶ್ವರ.  ||೬೯||

೬೧೬

ದೇವಲೋಕದವರೆಲ್ಲ ಎನ್ನ ಹೊರಗೆಂಬರು, ಅದು ತಾ ದಿಟವೆ?
ಮರ್ತ್ಯಲೋಕದವರೆಲ್ಲ ಎನ್ನ ಹೊರಗೆಂಬರು, ಅದು ತಾ ದಿಟವೆ?
ಸತ್ಯಸಾತ್ವಿಕ ಭಕ್ತರೆಲ್ಲಾ ಎನ್ನ ಹೊರಗೆಂಬರು, ಅದು ತಾ ದಿಟವೆ?
ಇವರೆಲ್ಲಾ ಬ್ರಹ್ಮಾಂಡದೊಳಗು ನಾನಿಮ್ಮೊಳಗು ಗುಹೇಶ್ವರಾ.    ||೭೦||

೬೧೭

ನಾನಾವಿಧ ಬ್ರಹ್ಮಾಂಡದಾಲಯ
ಸ್ಥಾನವೆನಿಪ ಮಾತಾಶ್ರಯರೂಪ.    ||ಪ||

ಇನಮಂಡಲಕಿರಣಾವಳಿಯ
ತನ್ನೊಳಗೇ ಗರ್ಭೀಕರಿಸಿಪ್ಪಂತೆ
ನೆರೆದ ಜಗಂಗಳನೆಲ್ಲವ ನಿಮ್ಮಯ ಉ –
ದರದೊಳಡಗಿಸಿದ ಗುರುವೆ            ೧

ಭಾಂಡದೊಳಗೆ ದ್ರವ್ಯಗಳಿಪ್ಪಂತೆ ನಿಜ
ಪಿಂಡದೊಳಗೆ ಶಿವತತ್ವದ
ಖಂಡಾಖಂಡಿತವನಾಲಿಂಗಿಸಿ
ನಿಂದ ನಿರ್ಲೇಪ ನಿರಂಜನನೆ.         ೨

ಸಕಲಪ್ರಪಂಚ ಗರ್ಭೀಕರಿಸಿ
ಸಕಲಪ್ರಪಂಚೆಂದರಿಯದ
ಉಪಮಾತೀತ ಮಹಂತ ನಿಮ್ಮ
ನಿಜವನಾರು ಬಲ್ಲರುಹೇಳಾ.           ೩

ಅಣುಮಾತ್ರದ ಬೀಜದೊಳಗೆ
ಘನವೃಕ್ಷವು ಅಡಗಿಪ್ಪಂತೆ ನಿಜ
ತನುವಿನೊಳಗೆ ತೋಱುವ ತೋಱಿಕೆ ನಿ
ಮ್ಮನುವಿನೊಳಡಗಿತ್ತದನೇನೆಂಬೆ.   ೪

ಸರ್ವಾಚಾರ ಸಂಪತ್ತಿನ
ಸರ್ವಾನುಭಾವ ಸತ್ಕ್ರೀಗಳ
ಗರ್ಭೀಕರಿಸಿಕೊಂಡಿಪ್ಪ
ಕೂಡಲಸಂಗನಲ್ಲಿ ಅಲ್ಲಮಪ್ರಭುವೆ.   ೫

೬೧೮

‘ಯತೋವಾಚೋ ನಿವರ್ತಂತೆ’ ಎಂಬ ಶ್ರುತಿಗೆಯೂ ಬಸವಾ.
‘ಏಕಮೇವನದ್ವಿತೀಯ’ಯೆಂಬ ಶ್ರುತಿಗೆಯೂ ಬಸವಾ.   ||ಪ||

ಅಕಾರ ನಾದ ಉಕಾರ ಬಿಂದು ಬಸವಾ
ಮಕಾರ ಕಳೆ ತ್ರಿವಿಧರೂಪನೆ ಬಸವಾ
ಓಂಕಾರ ಪ್ರಣಮಸ್ವರೂಪನೆ ಬಸವಾ
ನಕಾರದ್ವಿಶನವಿತಚರಣೆ ಬಸವಾ     ೧

ಬಕಾರ ಗುರು ಭವನಾಶಂ ಬಸವಾ
ನಕಾರ ಸಕಲ ಚೈತನ್ಯನೆ ಬಸವಾ
ವಕಾರ ಚರ ಜಂಗಮಸ್ಯ ಬಸವಾ
ಏಕತ್ರಿವಿಧರೂಪ ನೀನೇ ಬಸವಾ      ೨

ವಿಶ್ವರೂಪನಮಳ ಬಸವಾ
ವಿಶ್ವತೋಮುಖಕಾದಿಯೆನಿಪ ಬಸವಾ
ವಿಶ್ವ ವ್ಯಾಪಿ ವೀರಶೈವನೆ ಬಸವಾ
ವಿಶ್ವಪಾಲ ಸತ್ಯಜ್ಞಾನಿ ಬಸವಾ        ೩

ಭಕ್ತಿಯುಕ್ತಿ ಮುಕ್ತಿ ನೀನೇ ಬಸವಾ
ನಿತ್ಯಸತ್ಯ ಕರ್ತರೂಪನೆ ಬಸವಾ
ಅತ್ಯಧಿಕ ಮೃತ್ಯುದೂರನೆ ಬಸವಾ
ಅತ್ಯತಿಷ್ಠದ್ದಶಾಂಗುಲ ನೀನೇ ಬಸವಾ           ೪

ಶರಣ ಜನದ ಭಕ್ತಿನಿಧಿಯೆ ಬಸವಾ
ಶರಣಜನದ ಕಲ್ಪತರುವೆ ಬಸವಾ
ಶರಣಜನದ ಹರಣ ನೀನೆ ಬಸವಾ
ಶರಣ ಕೂಡಲಚನ್ನ ಸಂಗನಬಸವಾ. ೫

೬೧೯

ಅಸಮಾಕ್ಷನವತಾರ ಪಶುಪತಿ ನೀನೇ ಬಸವಾ
ಬಸವಾ ನಮೋ ನಮೋ ಬಸವಾ.  ||ಪ||

ಐಮುಖನರಮನೆಗೆ ಜ್ಯೋತಿ ನೀನೆ ಬಸವಾ
ಐಮುಖನಾದಿಶಕ್ತಿ ನೀನೇ ಬಸವಾ
ಐಮುಖನಾದಿಗಾಧಾರ ನೀನೆ ಬಸವಾ
ಐಮುಖನ ಲೀಲೆವಿಡಿದು ಶರಣನಾದೆ ಬಸವಾ ೧

ಪ್ರಾಣವಾಯುವಿನ ಹಂಗು ವಾಯು ಪ್ರಾಣನ ಹಂಗು
ಜಗಜಾಲಕೆ ಹಾಕಿದ ಬಲೆ ಬಸವಾ
ಆ ಪ್ರಾಣವಾಯುವಿನ ಹಂಗು ನಿನಗಿಲ್ಲವಾಗಿ ಬಸವಾ
ಚಿತ್ರದ ಫಲರಸವ ಕೊಡುತಿಹನೆ ಬಸವಾ       ೨
ಪರತತ್ವ ನೀನು ಪ್ರಾಣಲಿಂಗಿ ಜಂಗಮಪ್ರಾಣನೀ ಬಸವಾ
ತತ್ವವಿಲ್ಲದೆ ತನುವ ಸೃಷ್ಟಿಪನೆ ಬಸವಾ ತೃಣ
ಗಾತ್ರಕೆ ಜೀವವನಿತ್ತು ವರ್ಚಿಸುತಿಹೆ ಬಸವಾ
ಚಿತ್ರದ ಫಲರಸವ ಕೊಡುತಿಹೆ ಬಸವಾ.         ೩

ಕಾಲಸಂಹಾರಿಯ ಕರದೋಯೆನಿಸಿದೆ ಬಸವಾ
ಬಲಿಕೆಯೆನಿಸಿದ ಪ್ರಳಯದಲುಳುಹಿನೀ ಬಸವಾ
ಕಲ್ಯಾಣವ ಕೈಲಾಸವೆಂದೆನಿಸಿದೆ ಬಸವಾ
ಅಲ್ಲಿಲ್ಲೆನ್ನದೆ ಪ್ರಮಥರನಿಲ್ಲಿಸಿದೆ ಬಸವಾ.        ೪

ಕೂಡಲೆನಲೊಂದೆ ಸಂಗವೆಂದಡೇಕ ಬಸವಾ
ಗಾಡಿಕಾರ ಶರಣ ನೀನು ನೀನಾದೆ ಬಸವಾ
ಹೀನಪಾಡಿದ ಗೀತದ ಬೆಡಗಿಗೆ ಸಾರುತ ಬಸವಾ
ಕೂಡಲಚನ್ನಸಂಗನ ಹಿಂಗದ ಸಂಗನಬಸವಾ.            ೫

೬೨೦

ಪ್ರಾಣಲಿಂಗವಿದೇಕೊ ಎಂದೆಂಬರು
ಕಾಣಿಸಬಹುದೆ ಕರಣದ ಕಂಗಳಿಗೆ
ಹೇಳುವಡರಿದಿದ ಹೆಸರಿಡಬಾರದು ಕೇಳುವರಾರಿದನು. ||ಪ||

ಕತ್ತಲೆಯೊಳಡಗಿದ ಜ್ಯೋತಿಯಂತಿದ್ದಿತ್ತು
ಮುತ್ತಿನೊಳಱತ ಉದಕದಂತೆ
ಭಿತ್ತಿಯ ಮೇಲೆ ಬರೆಯದಮುನ್ನ ತೋರುವ ಚಿತ್ರದ ಪರಿಯಂತೆ
ಬತ್ತಲಿಪ್ಪವನ ಮನದ ಶಿಲೆ
ಯಂತಿಪ್ಪುದುನೋಡಾ ಯೋಗಿಯ ಹೃದಯವು
ಚಿತ್ತದಿ ಲಿಂಗವು ಕಾಣಿಸಬಹುದೆ ಮಿಥ್ಯವಾದಿಗಳಿಗೆ        ೧

ಒಂದು ಮೊದಲಿಗಿಲ್ಲ ಎರಡೆಂಬುದೇನಿದು
ಹೊಂದುತ ಹುಟ್ಟುತ ಇಹ ನಷ್ಟದ
ಒಂದೈದ ಈರೈದದ ಇಪ್ಪತ್ತೈದರ ದಂದುಗದವನಲ್ಲಾ
ಕೊಂದು ಕಳೆಯಬೇಕಾರೇಳೆಂಟನು
ವಂದಿಸಿ ಹತ್ತನು ಬಿಗಿದಪ್ಪಳಿಸಿ
ಒಂದುಳಿಯದ ಉಳಿತದ ಒಲುಮೆಯ ಸಂದ ಯೋಗಿ ನೋಡಾ  ೨

ಅಷ್ಟು ಅಗ್ನಿಯೊಳೊದಗಿದಂತಿರ್ದಿತ್ತು
ಸಪ್ಪೆಯೊಳರತ ರುಚಿಯಂತೆ
ತುಪ್ಪದ ನೆಲನು ನೋಡಿ ನೋಡಿ ತನ್ನೊಪ್ಪವಡಗಿದಂತೆ
ಕರ್ಪುರದ ಗಿರಿಯನು ಉರಿಕೊಂಡಾಕ್ಷಣ

ವಪ್ಪಚ್ಚಿ ಬೂದಿಯನುಡುಗಲುಂಟೆ
ನಿಷ್ಠೆಯೊಳು ನಿರ್ನಾಮವಾದ ನಿಜ ಗೊಹೇಶ್ವರಲಿಂಗ ನೋಡ ನೋಡಯ್ಯಾ.         ೩

೬೨೧

ಮನದ ಕೊನೆಯ ಮೊನೆಯ ಮೇಲೆ
ನೆನದ ನೆನಹು ಜನನ ಮರಣವ ನಿಲಿಸಿತ್ತು.
ಸುಜ್ಞಾನ ಜ್ಯೋತಿಯು ಉದಯ ಭಾನು ಕೋಟಿಗಳ ಮೀರಿತ್ತು
ಸ್ವಾನುಭಾವದುದಯ ಶೂನ್ಯಜ್ಞಾನವನಡಗಿಸಿತ್ತು
ಘನವನೇನೆಂಬೆ ಗುಹೇಶ್ವರಾ.         ||೭೫||

ಇದು ಪ್ರಭುಮನೋಮಂಗಳವಾಸಸೌಖ್ಯಪ್ರವರ್ಧ ಸನ್ನಿಧಾನ.
ಇದು ಪ್ರಭುಸಚ್ಚರಿತ್ರವಿಚಿತ್ರ ಷಡುಸ್ಥಲಬ್ರಹ್ಮತತ್ವ ಸಂಪದ.
ಇದು ದ್ವೈತಾದ್ವೈತವಿಲ್ಲದ ಸಂಜೀವನದ ಬೆಳಗು.
ಇದು ಷಡ್ವಿಂಶತತ್ವಾವಿಲ್ಲದ ಸಂಜೀವನದ ಬೆಳಗು.
ಇದು ಷಡ್ವಿಂತತ್ವಾಕಾರನಿರಾಕಾರ ನಿಜಸಾರಾಯವಚನ.
ಇದು ಪರಮಾನುಭಾವಸುಖಸಂಕಥಾ ಗರ್ಭಕಾರಣಮಾಂಗಲ್ಯ ತಂತ್ರ.
ಇದು ನಿಜಶಬ್ದ ಬ್ರಹ್ಮರೂಪ ರೂಪಿತನಿಃಶಬ್ದವೇದ್ಯ.
ಇದು ಷಡುದೇವತೆಗಳಿಗೆಯೂ ಶೈವ ಪಂಚಾಕ್ಷರಿಗಳಿಗೆಯೂ
ಸಕಲವೇದ ಶಾಸ್ತ್ರಾಗಮ ಪುರಾಣ ಶ್ರುತಿಸ್ಮೃತಿಗಳಿಗೆಯೂ
ಷಡುದರುಶನದವರುಗಳಿಗೆಯೂ ಇಂತಿವರುಗಳಿಗೆಲ್ಲರಿಗೆಯೂ
ಶಿರೋರತ್ನಮಾಲಾಮಂಜರಿ.
ಇದು ಸಾರಾಯ ಪುರಾತನರ ಗಣಪೂಜ್ಯ.
ಇದು ಶುದ್ಧ ವಿದ್ಯಾ ಪರಮತತ್ವಪೀಠ.
ಇದು ಭಕ್ತಂಗೆ ನಿತ್ಯ, ಮಹೇಶ್ವರಂಗೆ ಮಹಿಮೆ
ಪ್ರಸಾದಿಗೆ ಪರಮಾಮೃತ, ಪ್ರಾಣಲಿಂಗಿಗೆ ಪರಿಪೂರ್ಣ
ಶರಣಂಗೆ ಕರುಣ, ಐಕ್ಯಂಗೆ ಅಜಾತ.
ಇದು ರಾಜಯೋಗಿಜನಮನೋಮಧ್ಯಸ್ಥಲಸುಸಂತರ್ಪಣ.
ಇದು ಪರಮವೀರಶೈವಾಚಾರಸಂಪನ್ನಚರಿತ್ರ ಜ್ಞಾನಸೂತ್ರ.
ಇದರ ಮೂಲಾದ್ಯಂತವನರಿವ ಶಿವಯೋಗಿ ನಿತ್ಯಾನಂದ ಪರಿಪೂರ್ಣನು.
ಇದರ ಘನವನರಿದು ಶ್ರದ್ಧೆಯಿಂ ಕೇಳಿ ಧರಿಸಿದಾತನೆ ಸದ್ಯೋನ್ಮುಕ್ತನು.
ಪರಶಿವಲೋಕದ ಪದ ಪ್ರಾಪ್ತನು.
ಆ ಮೂಲಜ್ಞಾನಾನಂದವೆಂಬ ಷಡುಸ್ಥಲ.
ವೇದಾಂತಿಗೆ ವೇದ್ಯವ ಕೊಡುಹುದು.
ಆರೂಢನಿಗೆ ರೂಪಿಕೆಯ ಕೊಡುಹುದು.
ವೈದ್ಯನಿಗೆ ಪ್ರಸಿದ್ಧವ ಕೊಡುಹುದು ಶಬ್ದಸಾರವ ಕೊಡುಹುದು.
ಕವಿ ಗಮಕಿ ವಾದಿ ವಾಗ್ಮಿಗಳಿಗೆ ಭರಿತ ವಾಕುಗಳ ಕೊಡುಹುದು.
ಇದನು ಬರದೋದಿದಾತನೆ ನಿರ್ಮಳಾತ್ಮಕನಪ್ಪನು.
ಇದು ಬಸವ, ಪ್ರಭು, ಸಿದ್ದರಾಮ, ಮಡಿವಾಳ, ಚೆನ್ನಬಸವಣ್ಣಾದಿಯಾದ
ಸಕಲ ಪ್ರಮಥರುಗಳ ವಚನಂಗಳ ವ್ಯಾಖ್ಯಾನ.
ಇದನು ಎನ್ನಲ್ಲಿ ತೋರಿದಷ್ಟನು, ಅಲ್ಪದಿಂದ ಅನ್ವಯಂಗಳ ಮಾಡಿದೆನು.
ಇಲ್ಲಿ ತಪ್ಪುಳ್ಳಡೆ ಮಹಾನುಭಾವಿಗಳು ತಿದ್ದಿಕೊಂಡು ಸುಖಿಸುವುದು.
ಇದನು ಅಂಷ್ಟಾಗಯೋಗಿಗಳು ತಿಳಿದು ಸುಖಿಸುವುದು.
ಅಂತುಮಲ್ಲದೆ ವೀರಶೈವ ಸಿದ್ದಾಂತ ಸ್ವರೂಪವ ತಿಳಿದು ಸುಖಿಸಿ ಮಹಾನುಭಾವಗೋಷ್ಠಿಯಂ ಮಾಡಿ ಪರಿಣಾಮಿಸೂದು. ಈ ಪರಮಮೂಲಜ್ಞಾನವೆಂಬ ಷಡುಸ್ಥಲ ಬಸವಪ್ರಭು ಸಿದ್ಧರಾಮ ರೇವಣ್ಣ ಮಡಿವಾಳ ಚನ್ನಬಸವಣ್ಣ ಮಾಯಿ ದೇವರುಗಳಿಂದ, ಸಮಸ್ತರುಗಳಿಂದ, ಆದಿ ಅನಾದಿಯೆಂಬ ಮನಮಾಯೆ ಪರಮೇಶ್ವರ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ ಅಷ್ಟಾತ್ಮರುಗಳಿಂದತ್ತ ಮುನ್ನವೆ ಉಂಟಾಗಿರ್ದ ಕಾರಣ, ಸತ್ಯವಾಕ್ಯವ ನುಡಿವ ಭಕ್ತಮಾಹೇಶ್ವರರಿಗೆ ಬಿನ್ನಹಂ ಮಾಡಿ ಒಪ್ಪಿಸಿದರೆಂದರಿವುದು, ಸಕಲಪುರಾತನರ ಕೃಪೆಯುಳ್ಳವರು.

ಪರಮಮೂಲಜ್ಞಾನಷಟ್‌ಸ್ಥಲ ಸಮಾಪ್ತ ಮಂಗಳಮಹಾ


[1] ಭಿನ್ನ (ಚಬವ)

[2] ಭಿನ್ನ (ಚಬವ)

[3] ಭಾವಿ (ಶೂ)

[4] ಭಾವಿ (ಶೂ)

[5] ಕೇಳುಭಾವ (ಅವಚಂ)

[6] ಕೇಳುಭಾವ (ಅವಚಂ)