೪೩

ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಮನಕ್ಕೆ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಅರುವಿಂಗೆ ಮಹಾಲಿಂಗವಾದಾತ ಬಸವಣ್ಣ.
ಎನ್ನ ಸ್ಥೂಲ ತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಸೂಕ್ಷ್ಮ ತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ.
ಎನ್ನ ಕಾರಣ ತನುವಿಂಗೆ ತೃಪ್ತಿಲಿಂಗವಾದಾತ ಬಸವಣ್ಣ.
ಇಂತೆಂದಱೆದೆನಾಗಿ ಗೌರೇಶ್ವರ ಲಿಂಗದಲ್ಲಿದ್ದೆ

[1] ನಯ್ಯಾ.            ||೪೩||

ಇಂತೆಂಬ ಪುರಾತನರಗಣಿತ ವಚನಂಗಳಿಂದ ಆ ಮಹಾಪರತತ್ವವು ಬಸವಣ್ಣನೆಂಬ ಶಕ್ತಿ ಪೀಠದ ಮೇಲೆ ಮೂರ್ತಿಗೊಂಡು, ಆ ಎರಡು ಮೂರ್ತಿಗಳು ಕೂಡಿ ಷಡುಸ್ಥಲ ಬ್ರಹ್ಮಿಗಳು ಮುಖ್ಯವಾದನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಪ್ರಮಥಗಣಂಗಳಿಗೆಯು, ಅವರ ಶಕ್ತಿಗಳಿಗೆಯೂ, ಆ ಒಂದು ಮಹಾಲಿಂಗವಾಗಿ, ಆ ಒಂದು ಮಹಾಲಿಂಗವೆ ಒಬ್ಬೊಬ್ಬರಿಗೆ ಆರಾರು ಲಿಂಗವಾದ ಭೇದಮಂ ಪೇಳ್ವೆವೆಂತೆನಲು: ಆ ಭವನೆಂಬ ಭಕ್ತನಾಚಾರ ಲಿಂಗವು, ಭಕ್ತನ ಗುರುಲಿಂಗವು, ಭಕ್ತನ ಶಿವಲಿಂಗವು, ಭಕ್ತನ ಜಂಗಮಲಿಂಗವು, ಭಕ್ತನ ಪ್ರಸಾದಲಿಂಗವು, ಭಕ್ತನ ಮಹಾಲಿಂಗವು ಇಂತಾರು ಲಿಂಗವಾದರು. ರುದ್ರನೆಂಬ ಮಹೇಶ್ವರನ ಆಚಾರ ಲಿಂಗವು, ಮಹೇಶ್ವರನ ಗುರುಲಿಂಗವು, ಮಹೇಶ್ವರನ ಶಿವಲಿಂಗವು, ಮಹೇಶ್ವರನ ಜಂಗಮಲಿಂಗವು, ಮಹೇಶ್ವರನ ಪ್ರಸಾದಲಿಂಗವು, ಮಹೇಶ್ವರನ ಮಹಾಲಿಂಗವು ಇಂತಾರು ಲಿಂಗವಾದರು. ಮೃಡನೆಂಬ ಪ್ರಸಾದಿಯಾಚಾರಲಿಂಗವು, ಪ್ರಸಾದಿಯ ಗುರುಲಿಂಗವು, ಪ್ರಸಾದಿಯ ಶಿವಲಿಂಗವು, ಪ್ರಸಾದಿಯ ಜಂಗಮಲಿಂಗವು, ಪ್ರಸಾದಿಯ ಪ್ರಸಾದಲಿಂಗವು, ಪ್ರಸಾದಿಯ ಮಹಾಲಿಂಗವು ಇಂತಾರು ಲಿಂಗವಾದರು. ಈಶ್ವರನೆಂಬ ಪ್ರಾಣಲಿಂಗಿ ಯಾಚಾರಲಿಂಗವು, ಪ್ರಾಣಲಿಂಗಿಯ ಗುರುಲಿಂಗವು, ಪ್ರಾಣಲಿಂಗಿಯ ಶಿವಲಿಂಗವು, ಪ್ರಾಣಲಿಂಗಿಯ ಜಂಗಮಲಿಂಗವು, ಪ್ರಾಣಲಿಂಗಿಯ ಪ್ರಸಾದಲಿಂಗವು, ಪ್ರಾಣಲಿಂಗಿಯ ಮಹಾಲಿಂಗವು ಇಂತಾರು ಲಿಂಗವಾದರು. ಸದಾಶಿವನೆಂಬ ಶರಣನಾಚಾರಲಿಂಗವು, ಶರಣನ ಗುರುಲಿಂಗವು, ಶರಣನ ಶಿವಲಿಂಗವು, ಶರಣನ ಜಂಗಮಲಿಂಗವು, ಶರಣನ ಪ್ರಸಾದಲಿಂಗವು, ಶರಣನ ಮಹಾಲಿಂಗವು ಇಂತಾರು ಲಿಂಗವಾದರು. ಶಾಂತ್ಯಾತೀತನೆಂಬೈಕ್ಯನ ಆಚಾರಲಿಂಗವು, ಐಕ್ಯನ ಗುರುಲಿಂಗವು, ಐಕ್ಯನ ಶಿವಲಿಂಗವು, ಐಕ್ಯನ ಜಂಗಮಲಿಂಗವು, ಐಕ್ಯನ ಪ್ರಸಾದಲಿಂಗವು, ಐಕ್ಯನ ಮಹಾಳಿಂಗವು ಇಂತಾರು ಲಿಂಗವಾದರು. ಈ ಮಹಾ ಷಡ್ವಿಧ ಲಿಂಗಂಗಳಿಗೆ ಸ್ಥಾನವಾವುವಯ್ಯ ಎಂದಡೆ: ಘ್ರಾಣ ವಾಚಾರಲಿಂಗಕ್ಕೆ ಸ್ಥಾನ, ಜಿಹ್ವೆ ಗುರುಲಿಂಗಕ್ಕೆ ಸ್ಥಾನ, ನೇತ್ರ ಶಿವಲಿಂಗಕ್ಕೆ ಸ್ಥಾನ, ತ್ವಕ್ಕು ಜಂಗಮಲಿಂಗಕ್ಕೆ ಸ್ಥಾನ, ಶ್ರೋತ್ರ ಪ್ರಸಾದಲಿಂಗಕ್ಕೆ ಸ್ಥಾನ, ಹೃದಯ ಮಹಾಲಿಂಗಕ್ಕೆ ಸ್ಥಾನ, ಇಂತಾದ ಸ್ಥಾನವೆಂದರಿದು ಭಕ್ತಮಹೇಶ್ವರರು, ಈ ಮಹಾ ಷಡ್ವಿಧ ಲಿಂಗಂಗಳಿಗೆ ಷಡುರುಚಿ ಆವವಯ್ಯಾ ಎಂದಡೆ: ಗಂಧವಾಚಾರಲಿಂಗಕ್ಕೆ, ರಸ ಗುರುಲಿಂಗಕ್ಕೆ, ರೂಪು ಶಿವಲಿಂಗಕ್ಕೆ, ಸ್ಪರ್ಶನ ಜಂಗಮಲಿಂಗಕ್ಕೆ, ಶಬ್ದ ಪ್ರಸಾದಲಿಂಗಕ್ಕೆ, ಪರಿಣಾಮ ಮಹಾಲಿಂಗಕ್ಕೆ ಈ ಷಡುರುಚಿಯ ಷಡುವಿಧ ಲಿಂಗಂಗಳಿಗೆ ಕೊಡುವುದಕ್ಕೆ ಹಸ್ತಂಗಳಾವುವಯ್ಯಾ ಎಂದಡೆ: ಆಚಾರಲಿಂಗಕ್ಕೆ ಸುಚಿತ್ತವೆಂಬ ಹಸ್ತದಲ್ಲಿ ಕೊಡುವುದು, ಗುರುಲಿಂಗಕ್ಕೆ ಸುಬುದ್ಧಿಯೆಂಬ ಹಸ್ತದಲ್ಲಿ ಕೊಡುವುದು, ಶಿವಲಿಂಗಕ್ಕೆ ನಿರಹಂಕಾರವೆಂಬ ಹಸ್ತದಲ್ಲಿ ಕೊಡುವುದು, ಜಂಗಮಲಿಂಗಕ್ಕೆ ಸುಮನವೆಂಬ ಹಸ್ತದಲ್ಲಿ ಕೊಡುವುದು, ಪ್ರಸಾದಲಿಂಗಕ್ಕೆ ಸುಜ್ಞಾನವೆಂಬ ಹಸ್ತದಲ್ಲಿ ಕೊಡುವುದು, ಮಹಾಲಿಂಗಕ್ಕೆ ಸದ್ಭಾವವೆಂಬ ಹಸ್ತದಲ್ಲಿ ಕೊಡುವುದು ಇಂತಪ್ಪ ಪರತತ್ವವೆಂಬ ಲಿಂಗಪತಿಯೂ ಶರಣಸತಿಯೆಂಬ ಬಸವಣ್ಣನೂ ಆ ಇಬ್ಬರೂ ಕೂಡಿ ಅನಂತ ಕೋಟಿ ಗಣಂಗಳ ಮೇಲೆ ತೊಂಬತ್ತಾಋಉ ಸಾವಿರ ಪ್ರಮಥಗಣಂಗಳಿಗೆ ಗುರುವಾಗಿ ದೀಕ್ಷೆಯಂ ಕೊಟ್ಟು ಲಿಂಗವಾಗಿ ಪೂಜೆಗೊಂಡು ಜಂಗಮವಾಗಿ ಬೋಧಿಸಿ ಮೂಲ ಪ್ರಣಮ ಮಂತ್ರಗಳಾಗಿ ಮಹಾನುಭಾವದಲ್ಲಿ ನೆಲೆಗೊಳಿಸಿ ಪ್ರಸಾದವಾಗಿ ಪರಿಣಾಮವತೋರಿಸಿ ಸರ್ವಾಂಗಲಿಂಗವೆನಿಸಿ ಮತ್ತೆ ತಾನೆ ಭಕ್ತರಾಗಿ ಅವರ ಪೂಜೆಯಂ ಮಾಡುತ್ತ ನಿರಾಕಾರಸ್ಥಲದೊಳಗನಂತ ಕಾಲವಿರುತ್ತಿರ್ದರು. ಇಂತಪ್ಪ ಲಿಂಗ ಶರಣರಿಬ್ಬರಿಂದ ಮೂಲ ಪ್ರಣಮಂಗಳು, ಹದಿನಾಲ್ಕು ಸಾವಿರಕ್ಷರಂಗಳು, ಅನಂತಕೋಟಿ ಗಣಂಗಳು, ಶಕ್ತಿಗಳು, ವಿಭೂತಿ ರುದ್ರಾಕ್ಷಿಗಳು, ಚಕ್ರ ಕಮಲ ಸತ್ಕೃ[2]ಯಗಳೈದು ತೆರದ ಜಪಂಗಳು, ಪಾದೋದಕ ಪ್ರಸಾದಂಗಳ ಲಿಂಗಕ್ಕೆ ಕೊಟ್ಟುಕೊಂಬುದು. ಇಂತಿವೆಲ್ಲವೂ ಉದೈಸಿ ಉಂಟಾಗಿ ವರ್ತಿಸುತ್ತಿರ್ದುದಕ್ಕೆ ದೃಷ್ಟವೇನು ಎಂದಡೆ: ಭೂಲೋಕದಲ್ಲೊಬ್ಬ ಕುಶಿಲಿಕ್ರಮುಕ ನಾರಿಕೇಳ, ಬಾಳೆ ಇವನೆಲ್ಲವ ಭೂಮಿಯ ಮೇಲೆ ಬಿತ್ತಿ ಸಲಹಿ. ದಡವನಿಂದಲು ಭೂಮಿಯಿಂದಲು, ಮರಪುಜಟ್ಟಿ ಈ ಎರಡರ ಶಾಂತಿ ಸೈರಣೆಯ ತಾಳುವೆಯಿಂದಲು, ಮರಪುಟ್ಟಿ, ಸಾಲೆ ಹೂವೆಸಳು ಮಣಿ ಮಾಲೆ ಹದುರು ಕಾಯಿ ಹಣ್ಣು ರಸ ವಾಸನೆ ಇವೆಲ್ಲಾ ಹುಟ್ಟಿ ಉಂಟಾಗಿ ವರ್ತಿಸುತ್ತಿಪ್ಪಂತೆ, ಆ ಲಿಂಗ ಶರಣರಿಬ್ಬರಿಂದುದೈಸಿ ವರ್ತಿಸಿರುತ್ತಿರ್ಪ ಲಿಂಗ ಹಸ್ತ ಶಕ್ತಿ ಭಕ್ತಿಗಳೆಂದರಿವುದು ಷಡುಸ್ಥಲ ಬ್ರಹ್ಮಿಗಳು. ಇಂತಪ್ಪ ಅನಂತಕೋಟಿ ರಂಗಳು ಲಿಂಗ ಶರಣರಿಬ್ಬರ ಲೀಲಾ ಸೂತ್ರದೊಳು ಅನಂತಕೋಟಿ ಪರಶಿವ ಲೋಕಂಗಳೊಳಗೆಯೆ ಪರಿಪೂರ್ಣವಾಗಿಪ್ಪರು. ಮುಂದೆ ಹುಟ್ಟುವ ಜಡಲೋಕ ಹದಿನಾಲ್ಕರೊಳಗೆಯೂ, ಈ ಹದಿನಾಲ್ಕು ಲೋಕದೊಳಗುಳ್ಳ ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನ ಮಾನವರೊಳಗೆಯೂ, ಇವರುಗಳು ಹಿಡಿದ ಚತುರ್ವಿಧ ಪದ ಮೊದಲಾದನಂತ ಪ್ರಪಂಚಿನೊಳಗೆಯೂ, ಭಿನ್ನ ಭಿನ್ನರಾಗಿಪ್ಪರು. ಮತ್ತೆ ತಾವೆಲ್ಲರು ಲಿಂಗಶರಣರಿಬ್ಬರೊಳಗಡಗಿ, ತಮ್ಮೊಳಗೆ ಲಿಂಗಶರಣರಿಬ್ಬರಡಗಿ ಅವರ ಚಿತ್ತಪದ್ಮದೊಳಗೆ ನೆಲೆಗೊಂಡು ಲಿಂಗಮಾರ್ಗಶರಣ ಮಾರ್ಗಂಗಳಿರ್ದ ಕಾರಣ ತಾವೆಲ್ಲರು ಏಕವಾಗುತ್ತ ಮತ್ತೆ ಅನೇಕರಾಗುತ್ತ ಅವರ ಚಿತ್ತಕೊಬ್ಬರೊಬ್ಬರಿಗೆ ಒಬ್ಬೊಬ್ಬರಾಗಿ ಇರುತಿಪ್ಪರು. ಇಂತೆಂಬನುಭವಕ್ಕೆ ಸಾಕ್ಷಿ.

೪೪

ಲಿಂಗ, ನೀನೇ ಸಂಗ, ನಾ ನೀನೆನಲಿಕಿಲ್ಲ.       ||ಪ||

ತೋರಿ ತಪ್ಪಿಸಿ ಮಂಜುಮಾಡಿ; ಎನ್ನ
ಬೇಱು ಮಾಡಿಹೆನೆಂದಂಜಿ: ಎನ್ನ
ಬೇಱು ಮಾಡಲು ತೆಱಹಿಲ್ಲ ನೀನು ಕೂಡೆ
ಭರಿತನೆಂಬುದ ನಾ ಬಲ್ಲೆ.

ಅಡಗಿ ಮಾತಾಡುವ ಬೆಡಗು ! ನಿನ್ನ  ೧
ಬೆಡಗಿಗೆ ನಾ ಬೆಱಗಾದೆ. ನಿನ್ನ
ಬೆಡಗಿನ ಬೆಂಬಳಿಯವನು – ಎನ್ನ
ಬಿಡಬೀಸದಿರು ಕಂಡಾ ಲಿಂಗವೇ.     ೨

ಕಡಲೊಳಗಣ ನೊರೆತೆರೆಯು
ಕಡಲೊಳಗೇ ಅಳಿವಂತೆ !
ಕೊಡನೊಡೆದರೆ, ಬಟ್ಟಬಯಲು ಆ –
ವೆಡೆಯಲಿ ಸಿಲುಕಿತು ಹೇಳಾ.          ೩

ದಿಟ ಪರಮಾತುಮನೆನೆಸಿ, ಎನ್ನ
ಸಟೆದಿಟ ಮಾಡಿ ತೋಱದಿರಾ; ಎನ್ನ
ಸಟೆದಿಟಕೊಡೆಯನು ನೀನೇ; ಬೇಱೆ
ಪ್ರತಿ ನಿನಗುಳ್ಳಡೆ ಹೇಳಾ.  ೪

ಸಾಕಾರ – ನಿಕರ ನೀನೇ ಸಕ –
ಳೇಕೋದೇವ ಜಗದ್ಭರಿತ; ಸು –
ಧಾರಿಕ ನಿಜಲಿಂಗ ಸಂಗನಲ್ಲದೆ
ಬೇಱೆ ರೂಹಿಸಲು ತೆಱಹಿಲ್ಲ.            ೫

ಇಂತು ತೆರಹಿಲ್ಲದ ಲಿಂಗವನು, ಆ ಲಿಂಗದನಂತಕೋಟಿ [3]ಗಣಂಗಳನು[4] ಸಾಧ್ಯಾಸಾಧ್ಯರುಗಳು ಅರಿಯರು. ಭಾನುಕೋಟಿಗಳು ಅರಿಯರು. ಸಚರಾಚರ ಶೂನ್ಯ ನಿಃಶೂನ್ಯಂಗಳು ಅರಿಯರು. ಜಪ, ಸಮಾಧಿ, ಹೋಮ, ನೇಮಂಗಳು ಅರಿಯರು. ಕಾಯ ಜೀವಂಗಳು ಅರಿಯರು. ಅಣಿಮಾದಿ ಗುಣಂಗಳು ಅರಿಯರು. ಹಲವು ಶಬ್ದದೊಟ್ಟಿಲುಗಳು ಅರಿಯರು. ಲಿಂಗಶರಣರ ತಿಳಿದ ತಿಳಿವು, ಲಿಂಗ ನಿಜ ಪದದ ಘನವು. ಇಂತೆಂಬನುಭವಕ್ಕೆ ಸಾಕ್ಷಿ.

೪೫

ಸಾಧ್ಯಾಸಾಧ್ಯಗಳಿಗತೀತ
ವಾದ ಜ್ಯೋತಿ ನಿರವಯ   ||ಪ||

ಏನನೊಂದು ಹವಣಿಸುದಡೆ | ತಾನೆ ಸಹಜ ಘನತರ
ಬಾನುಕೋಟಿ ಕಲೆಗಳೆಂಬ | ವೇನು ನಿಲುಕದನುಪಮ   ೧

ಸಚರವಚರ ಶೂನ್ಯಾಶೂನ್ಯ | ನಿಚಯವಿಲ್ಲದಂದಿನ
ಅಚಲವಪ್ಪ ಮಹಾ ಘನದ | ರುಚಿರದೂರ್ಧ್ವ ನಿರಾಳ      ೨

ಜಪಸಮಾಧಿ ಹೋಮನೇಮ | ದುಪಮೆಗಳಿಗತೀತನು
ನಿಷ್ಪತ್ತಿ ನಿರಂಜನ ಸೂಕ್ಷ್ಮ | ದಪರಿಮಿತನಕಲ್ಪಿತ          ೩

ಅಲ್ಲಿಗಲ್ಲಿಗೆ ಕಾಯಜೀವ | ವಿಲ್ಲರಳಿವಿನುಳಿವಿನ
ಸೊಲ್ಲಿನೊಳಗು ಹೊರಗಣಾತ್ಮ | ದಂಗಸಂಗ ರಹಿತನು ೪

ಅಣಿಮಾದಿ ಗುಣವಿರಹಿ | ಅನುಪಮಿತನಗೋಚರ
ಘನಕೆ ಘನಾನಂದ ಪ್ರಭೆಯ | ಚಿನುಮಯಾದಿ ನಿರಾಳ  ೫

ಹಲವಶಬ್ದಕಿಂಬುಗೊಡದ | ಸುಳುಹು ಸೂಕ್ಷ್ಮದೊಳಗಣ
ಬೆಳಗಿನಿಂದ ನಿಜದನಿಲವ | ಸ್ಥಲವತೋರಬಪ್ಪುದೆ        ೬

ಬೆಳಗಿನೊಳಗೆ ತೊಳಗಿ ಬೆಳಗಿ | ಹೊಳವಜ್ಯೋತಿ ಕಾಂತಿಯ
ಬೆಳಗು ಗುಹೇಶ್ವರನ ಘನದ | ತಿಳಿವು ಲಿಂಗ ನಿಜಪದ   ೭

ಇಂತಪ್ಪ ಮಹಾಘನ ಲಿಂಗದ ನಿಜಪದವನೆ ಆದಿ ಮಾಡಿಕೊಂಡು ಚರಿಸುವಂದನಂತಕೋಟಿ ಗಣಂಗಳೆಲ್ಲರು ಅವ ಲೋಕಂಗಳೊಳಗಿರ್ದಡೆಯೂ ಕರ್ಮ ಕಾಂಡಿಗಳಲ್ಲ, ಷಡುಬ್ರಹ್ಮ ಮೂರ್ತಿಗಳಲ್ಲ. ಪರಮ ಶುದ್ಧಿಯ ನುಡಿವಲ್ಲಿ ತಾವಿಲ್ಲದಿಹಯರು. ತಂದೆ ತಾಯಿಗಳಿಂದಾದವರಲ್ಲ, ಷಡುವರ್ಣಂಗಳಿಂದಾದವರಲ್ಲ. ಮಾಸಂಗಳು ತುಂಬಿ ಹುಟ್ಟಿ ಹದಿನಾಲ್ಕು ಲೋಕಂಗಳಾದಿಮಾಡಿಕೊಂಡು ನಿಂದವರಲ್ಲ. ಮಹಾಘನದ ಬೆಳಗು ತಾವೆಯಾಗಿಪ್ಪರು. ನುಡಿಯ ಸಂತೋಷದ ಬಿಂದುವಿನವರಲ್ಲ. ಚತುರ್ವಿಧಪದ ಭ್ರಮಿತರಲ್ಲ. ಭವ ಸಮುದ್ರದಲ್ಲಾದವರಲ್ಲ. ಎಚ್ಚರಿಕೆ ಕನಸು ಮರವೆಯೆಂಬಿವರಲ್ಲಾದವರಲ್ಲ. ಶ್ರುತಿಗಳ ಕುಳದಿಂದಾದವರೆಲ್ಲ. ರಂಜಕದ ಗಣಿತ ಗುಣಿತರಲ್ಲ. ಧ್ವನಿ ಇಂದ್ರಿಯ ಕಳೆಯ ಸುಖದ ಸತಿಯ ಸಂಗದವರಲ್ಲ. ಮಲತ್ರಯದಿಂದಾದವರಲ್ಲ. ತ್ರಿವಿಧ ಸಂಕಲೆಯ ಬಂಧನದವರಲ್ಲ. ಚಂದ್ರ ಸೂರ್ಯರಿಂದಾದವರಲ್ಲ. ಇಂದ್ರ ಚಾಪದ ಪರಿಯರಲ್ಲ. ಪರಿಮಳವನುಂಡ ತುಂಬಿಯಂತೆ ಸ್ವಾನುಭಾವದಲ್ಲಿ ಬೆರಸಿ ಲಿಂಗದ ಹಂಗಳನಿದಿರುತಿಪ್ಪರು. ಇಂತೆಂಬ ವಚನ ವ್ಯಾಖ್ಯಾನಂಗಳಿಗೆ ಸಾಕ್ಷಿ.

೪೬

ಕರ್ಮಕಾಯನು ಅಲ್ಲ ಬ್ರಹ್ಮ ಮಾರುತಿಯಲ್ಲ
ಪರಬ್ರಹ್ಮವ ನುಡಿವಲ್ಲಿ ತಾನಿಲ್ಲದ ನಿರ್ಮೋಹಿ             ||ಪ||

ಮಾತೆಪಿತರುಗಳುದರದ ಜಾತಜನಿತನುವಲ್ಲ
ಶ್ವೇತ ಪೀತ ಕಪೋತ ಷಡುವರಣ ರಹಿತ
ನವಮಾಸ ತುಂಬಿದ ಮೂರುತಿ ತಾನಲ್ಲ
ಅವಿರಳ ಲಿಂಗದ ಕಳೆಯ ಬೆಳಗು ತಾ ಶರಣ.

ನಡೆಯ ಕಲಿವಲ್ಲಿ ನೋಡಿ ಯ ಹಂಗಿಗನಲ್ಲ
ನುಡಿಯ ಸಡಗರದಲಾದ ಬಿಂದು ತಾನಲ್ಲ
ಪದುಮಪರಿಮಳಕೆರಗುವ ಭ್ರಮರ ತಾನಲ್ಲ
ಭವದ ಕುಳವನು ಗೆಲಿದ ನಿಭ್ರಾಂತ ಶರಣ.     ೨

ಜಾಗ್ರ ಸ್ವಪ್ನ ಸುಷುಪ್ತಿಯಾಗು ಅನುಮಿಷನಲ್ಲ
ಆಗಮ ಕುಳದಲಾದ ಭೋಗಿ ತಾನಲ್ಲ
ತೇಜಸ ರಂಜನೆಯ ಗಣಿತ ಗುಣಿತನು ಅಲ್ಲ
ಸಹಜ ನಿತ್ಯನು ತಾನಭೇದ್ಯ ಶರಣ.  ೩

ಬಿಂದುಕಳೆಯ ಸುಖದ ಶಯನ ಸಂಪರ್ಕನಲ್ಲ
ಬಿಂದು ಚಂದದಲಿ ಕಂದಮೂಲವಗೆಲಿದ
ಸಂದಳಿದ ಸ್ವಯಸುಖವನೊಂದುಮಾಡಿ ತ್ರಿ
ಬಂಧ ಭೇದವಗೆಲಿದ ನಿಷ್ಕಾಮಿ ಶರಣ.          ೪

ಚಂದ್ರಧಾರನುವಲ್ಲ ಚಂದ್ರಪೂರಿತನಲ್ಲ
ಇಂದ್ರಜಾಪದ ಪರಿಯ ಪ್ರಭಾವ ತಾನಲ್ಲ
ಭೃಂಗನುಂಗಿದ ರುಚಿಯನೊಂದು ಮಾಡಿ
ಗುಹೇಶ್ವರನೆಂಬ ಲಿಂಗದ ಹಂಗನಳಿದ ಶರಣ.            ೫

ಇಂತಪ್ಪ ಶರಣರ ಗುರುವೆಂದು ಭಾವಿಸಿ, ಅವರ ಪಾದಕಮಲವನೆ ಗತಿ ಮತಿಯ ಮಾಡಿಕೊಂಡು ಅವರ ವಾಕ್ಯವನೆ ಪರುಷವೆಂದು ತಿಳಿದು, ಸಜ್ಜನ ಸದ್ಭಾವ ಸದಾಚಾರದಿಂದವರ ಸ್ತೋತ್ರಗಳಂ ಮಾಡುತ್ತಿಪ್ಪ ಭಕ್ತ ಮಾಹೇಶ್ವರರು ಜಾತ ಜಾತರಲ್ಲ, ಖೇಚರ ಭೂಚರರಲ್ಲ, ಅನ್ಯ ಸುಖವನಾಚರಿಸುವರಲ್ಲ, ಭ್ರಾಂತ ವಿಭ್ರಾಂತರಲ್ಲ, ಆ ಪರತತ್ವವನು ಈ ಜೀವ ತತ್ವವೆಂದು ಸಾಧಿಸುವರಲ್ಲ, ಅಷ್ಟ ತನುವಿಡಿದವರಲ್ಲ. ಅಷ್ಟಮದವ ನಿಲಿಸಿ ಲಿಂಗ[5] ಅಷ್ಟದಳದಲ್ಲಿರಿಸಿ[6]ಪ್ಪರು. ಆಕಾರ ನಿರಾಕಾರ ಸಾಕಾರವಾಗಿಪ್ಪರು. ಮನವಿಕಾರರಲ್ಲ. ಆಕಾರಕ್ಕಾಕಾರವಾಗಿ ನಿರಾಕಾರಕ್ಕೆ ನಿರಾಕಾರವಾಗಿ ಸಾಕಾರಕ್ಕೆ ಸಾಕಾರವಾಗಿ ಏಕಾಂತದಲ್ಲಿ ನಿಜನಿವಾಸಿಗಳಾಗಿಪ್ಪರು. ತಮ್ಮನರಿದ ಜೀವರಲ್ಲಿ ಭಿನ್ನವಿಲ್ಲದವರ ಸುಖವನೊಪ್ಪುಗೊಂಬುತ್ತ ಎಲ್ಲಿಯೂ ತಾವೆಯಾಗಿಪ್ಪರು. ತುಂಬಿ ಪರಿಮಳಕ್ಕೆರಗುವಶಂತೆ ಲಿಂಗದಲ್ಲಿ ಸಂಯೋಗವಾಗಿ ಸುಖ ಲೇಪವಿಲ್ಲದೆ ಪ್ರಭುವಿನ ಸ್ವರೂಪವಾಗಿಪ್ಪರು. ಇಂತೆಂಬನುಭಾವಕ್ಕೆ ಸಾಕ್ಷಿ.

೪೭

ಗುರುಚರಣವೆ ಗತಿ ಗುರುಚರಣವೆ ಮತಿ
ಗುರುಶಬ್ದ ಪರುಷ ಪಾವನವೆನಗೆ[ನಗುರೋಧಿಕಂ ನಗುರೋದಧಿಕಂ
ನಗುರೋರಧಿಕಂ ಏನುತಿರ್ದವು ಶ್ರುತಿ]         ||ಪ||

ಜಾತನಲ್ಲ ಅಜಾತ ಜನಿತನಲ್ಲ
ಖೇಚರನಲ್ಲ ಭೂಚರನಲ್ಲ
ಚರಿಸುವನಲ್ಲ ಅನ್ಯಸುಖಂಗಳ
ಭ್ರಾಂತನಲ್ಲದ ನಿಭ್ರಾಂತ ಲಿಂಗೈಕ್ಯನು.         ೧

ಯತ್ರ ತತ್ರ ಶಿವತತ್ವ ಸಾಧಕನಲ್ಲ
ಅಷ್ಟತನು ಮೂರುತಿಯಲ್ಲ
ಅಷ್ಟಮದಂಗಳ ಮೆಟ್ಟಿ ನಿಲಿಸಿದ
ಅಷ್ಟದಳ ಕಮಲಪೂಜಿತ ನೀನೆ.       ೨

ಆಕಾರ ನಿರಾಕಾರ ಸಾಕಾರ ಸನುಮತನು
ಮಾತರಿಸುವವನಲ್ಲ ಮನದಿಚ್ಛೆಗೆ
ಆಕಾರ ನಿರಾಕಾರ ಸಾಕಾರ ಸನುಮತನು
ಏಕಾಂತದೊಳಿಪ್ಪ ನಿಜಸ್ವರೂಪಂಗೆ. ೩

ಜೀವಜೀವಜೀವಾದಿಗಳೊಳಗಣ
ಅನ್ಯಭಿನ್ನಭಾವಕನಲ್ಲ
ಸಮಸ್ತವಾದ ಸಮಸುಖ ಭೋಗಿ
ಅಣುರೇಣು ಸ್ಥೂಲ ಸೂಕ್ಷ್ಮ ಭರಿತನು ನೀನೆ.    ೪

ಭೃಂಗ ಕುಸುಮ ಪರಿಮಳಕೆರಗುವಂತೆ
ಲಿಂಗಸಂಗಸುಖ ನಿರ್ಲೇಪಾ
ಅಂಗಲಿಂಗಸಂಗವಾಗಿಪ್ಪ ಶಿವಯೋಗಿ
ಸಂಗ ಕೂಡಲಸಂಗನಲ್ಲಿ ಪ್ರಭುದೇವಾ.          ೫

ಇಂತಪ್ಪ ಲಿಂಗ ಶರಣರಿಬ್ಬರು, ಭಕ್ತ ಜಂಗಮಗಲಾಗಿ[7]ರುತ್ತ[8] ಅನಂತಲೋಕಂಗಳ ರಕ್ಷಿಸಲೆಂದು ದೇಹಿಗಳೆಂಬಂತೆ [9]ಮಾರ್ಗದಿಂ ನಿಜಲೀಲೆಯಿಂದ ಅನಂತರುಗಳಿಗೆ ಉಪದೇಶ ಕರ್ತುಗಳಾಗಿ ಪರಮಾನಂದದೊಳು ಅಖಂಡಿತರಾಗಿರುತ್ತ, ಚರಿಸುತ್ತ ಪರಾಪರ ತತ್ವವನರುಪುತ್ತ, ಅಂತರಿದವರ ಸಲಹುತ್ತ ಮಹಾಜ್ಞಾನಿಗಳ ಹೃದಯದೊಳಗೆ ಬೆಳಗುತ್ತ ಮಹಾಘನದ ಮಹತ್ವವನೆ ತೋರುತ್ತ, ಪರಮ ಪ್ರಸನ್ನ ಮೂರ್ತಿಗಳಾಗುತ್ತ, ಪರಮ ಜ್ಞಾನ ಪ್ರಕಾಶವ ತೋರುತ್ತ, ಕರುಣಾಮೃತಮಯದ ತೋರುತ್ತ, ಸಮಸ್ತ ಜೀವ ಜಾಲಂಗಳೊಳಗೆ ಭಿನ್ನಾ ಭಿನ್ನರಾಗಿರುತ್ತ, ಉಪಮಾತೀತರಾಗಿ ನಿಶ್ಚಿಂತ ನಿರಾಳವ ತೋರುತ್ತ, ಮಾಯಾ ಶಕ್ತಿ ಸ್ವತಂತ್ರವ ತೋರುತ್ತ, ಪರಾಪರ ಬ್ರಹ್ಮದ ಪರಿಣಾಮವ ತೋರುತ್ತ, ಸಾಯಸನ್ನಿವಿಲ್ಲದ ಭೇದವ ಹೇಳಿ ಆಸೆಯ ಬಿಡಿಸುತ್ತ, ಇಂತಪ್ಪವರ ಅಹುದೆಂತಿದರ ಹೃದಯದಲ್ಲಿ ಮಹಾ ಚೋದ್ಯ ಪ್ರಸಂಗಂಗಳೆಂಬ ತತ್ವಂಗಳ ತೋರಿ ರಕ್ಷಿಸುತ್ತಿರುತ್ತಿಹರು. ಇಂತೆಂಬ ವಚನ ವ್ಯಾಖ್ಯಾನಂಗಳಿಗೆ ಸಾಕ್ಷಿ.

೪೮

ಶಿವನೆ ಜಂಗಮ ರೂಪು ಧರಿಸಿ ಲೋ –
ಕವನುದ್ಧರಿಸಲೆಂದು ಚರಿಸುತ್ತಿಪ್ಪ     ||ಪ||

ಮಾನುಷ ಚರ್ಮಾವೃತನಾಗಿ ಸಮಾ –
ಧಾನವಿಡಿದು ನಿಜಲೀಲೆಯೊಳು
ಆತನ ಬೋಧಾರೂಪನಾಗಿ ಪರ
ಮಾನಂದದ ಲೀಲೆಯೊಳಿರುತಿಹನು.           ೧

ಚರಿಸಿ ಪರಾಪರ ಬೋಧಾರೂಪಿಂದ
ಪೊರೆವನು ಭಕ್ತ ಜನಂಗಳನು
ಶರಣರ ಸರ್ವಾಂಗದೊಳು ಬೆಳಗುತಿಪ್ಪ
ಪರಿಪೂರ್ಣ ಮಹಾ ಘನಮಹಿಮೆ.     ೨

ಪರಮ ಪ್ರಸನ್ನಮೂರುತಿ ಜಂಗಮಲಿಂಗ
ಪರಮಜ್ಞಾನ ಪ್ರಕಾಶಿತ
ಕರುಣಾಮೃತಮಯ ಸಚರಾಚರಗಮ್ಯ
ನಿರುಪಮ ನಿರಾಳ ನಿಶ್ಚಿಂತನು.       ೩

ಶಕ್ತಿರಹಿತ ಶಕ್ತಿಗಾಧಾರೂಪ ವಿ –
ರಕ್ತಿವಿಡಿದು ರಾಗವರ್ಜಿತ
ಭಕ್ತಿಪಿಂಡ ನಿರ್ದೇಹ ನಿರ್ಮಲ ನಿಜ
ಶಕ್ತಿ ಸ್ವತಂತ್ರ ಮಹಂತನು. ೪

ಪರಿಣಾಮಿಯು ಪರಾಪರಬೊಮ್ಮ
ನಿರಭೇದ್ಯ ನಿರ್ಲೇಪ ಶರಣಾಗತ
ಪರರಕ್ಷಾಮಣಿಯಲ್ಲಮಪ್ರಭುವೆ
ನಮೋ ನಮಕೋ ಕೂಡಲಸಂಗಯ್ಯ. ೫

ಇಂತೆಂಬ ಬಸವಪ್ರಭು ಮುಖ್ಯವಾದನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಪ್ರಮಥ ಗಣಂಗಳಾದಿ ಮಾಡಿಕೊಂಡು ಪಾದೋದಕ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಂಥ ಭಕ್ತ ಮಾಹೇಶ್ವರರ ಶರೀರವು ಮುತ್ತಿನೊಳಗಡಗಿದ ಉದಕದಂತೆ, ಸ್ಫಟಿಕದ ಘಟದೊಳಗಡಗಿದ ಪ್ರಭೆಯಂತೆ, ವಾಯುವಿನೊಳಗಡಗಿದ ಗಂಧದಂತೆ, ಉರಿಯೊಳಗಡಗಿದ ಕರ್ಪುರದಂತೆ, ಪಂಚಭೂತ ಪಿಂಡವಳಿದು ನಿರ್ಮಲ ಮಹಾಲಿಂಗದಲ್ಲಿ ಐಕ್ಯರಹರು. ಇಂತೆಂಬನು ಭವಕ್ಕೆ ಸಾಕ್ಷಿ.

೪೯

ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು.
ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು.
ವಾಯುವಿನ ಸಂಚದ ಪರಿಮಳದ ನಿಲವಿನಂತೆ.
ಲಿಂಗೈಕ್ಯ ಸಂಬಂಧವರು ಗುಹೇಶ್ವರಾ.          ||೪೯||

೫೦

ಪಂಚಭೌತಿಕದ ಸಂಗದಿಂದ ಜ್ಯೋತಿಯಾಯಿತ್ತು.
ಪಂಚಭೌತಿಕದ ಸಂಗದಿಂದ ಕರ್ಪುರವಾಯಿತ್ತು.
ಈ ಎರಡರ ಸಂಗ ಏನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ?     ||೫೦||

ಇಂತು ವಾಙ್ಮನಾತೀತವಾದ ಲಿಂಗದಲ್ಲಿ ಐಕ್ಯರಾಗುತ್ತ[10] ಮರ್ತ್ಯಲೋಕದಲ್ಲಿಹುದುತ್ತಮ. ಅದೆಂತೆಂದಡೆ: ಅರಿದಿಹೆ ಮರದಿಹೆನೆಂಬವೆರಡಂ ಬಿಟ್ಟು ನೆರೆ ತಿಳಿದು ಲಿಂಗದಲ್ಲಿ ಭಾವ ಬೇರಿಲ್ಲದೆ ಸಕಲ ಶ್ರುತಿಗಳೆಲ್ಲವನೂ ನೀಕರಿಸಿ ಪರಸ್ತ್ರೀ, ಪರದ್ರವ್ಯ, ಪರಹಿಂಸೆ, ಮನ[11]ವೆಂಬವಂ ನೂಕಿ, ಷಡುದರುಶನ ದವರುಗಳ ಹಾಡಿ ಮತ್ತೆ [12]ಭಾಷೆಗಳೆಂಬಿವಂ ಕೈವಿಡಿಯದೆ ಪ್ರಾಣ ನಿ:ಪ್ರಾಣವಿಲ್ಲದೆ ಉಂಟಿಲ್ಲವಾದೆಹೆನೆಂಬ ಮಹತ್ವವಂ ನುಡಿಯದೆ ಸಂಭ್ರಮದ ಮಾತುಗಳ ಬಿಟ್ಟು ಆದಿ ಅನಾದಿಯಿಂದತ್ತತ್ತಣ ಆದ್ಯರ ಷಡುಸ್ಥಲ ಮಾರ್ಗವ ನೆಮ್ಮಿ ಮಹಾಜ್ಞಾನ ಪರಿಪೂರ್ಣನಾಗಿಪ್ಪಾತನೆ ಲಿಂಗೈಕ್ಯನು. ಇಂತೆಂಬ ವಚನ ವ್ಯಾಖ್ಯಾನಂಗಳಿಗೆ ಸಾಕ್ಷಿ.

ಅಱೆಯಲಿಲ್ಲ ಮಱೆಯಲಿಲ್ಲ
ನೆಱೆತಿಳಿದು ಕುಱುಹಳಿದ ಲಿಂಗೈಕ್ಯನು.         ||ಪ||

“ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ”
ಎಂಬ ಶ್ರುತಿಮತವನು ಹಿಡಿವನಲ್ಲ
ಅತಿಶಯದ ಘನಲಿಂಗ ದಿಟಘಟಿಸಿ ಸ್ವಯವಾಗಿ
ಮೃತಿ ಜನನ ರಹಿತ ತಾ ಲಿಂಗೈಕ್ಯನು.          ೧

ಭರಭರದ ವರವಣೆಯ ಹರಿವಪ್ರಕೃತಿಯ ಜಲದ
ತೆರೆತೆರೆಯ ಲಂಘನೆಯ ಭರಿತನಲ್ಲ
ಶರೀರಧಾರನು ಅಲ್ಲ ಶಬುದ ಮುಗುದನು ಅಲ್ಲ
ಪರಗಮನ ರಹಿತ ತಾ ಲಿಂಗೈಕ್ಯನು. ೨

ಒಪ್ಪಗೆಟ್ಟಾರು ದರುಶನದ ಗತಿಮತಿ ವಿಡಿಯ
ಲೆಪ್ಪದಲಿ ಸವೆದ ಬಹು ಭಾಷಿಯಲ್ಲ
ಇಪ್ಪನು ಅಷ್ಟತನುವಿನ ಹಂಗು ಹಿಡಿದು ತಾ
ನಪ್ಪಿ ಮೈಮರೆದಾತ ಲಿಂಗೈಕ್ಯನು.   ೩

ಪ್ರಾಣಚೇತನವಿಡಿದು ಗಮನರೂಪನು ಅಲ್ಲಿ ನಿಃ
ಪ್ರಾಣಿಯಾಗಿ ಜಡದೇಹಿಯಲ್ಲ
ಕಾಣಲಿಕೆ ಬಯಲೆಂಬ ಮೂರುತಿಯು ತಾನಲ್ಲ
ಹೂಣೇ ಹೊಕ್ಕೆರಡಳಿದ ಲಿಂಗೈಕ್ಯನು.            ೪

ಸಂಭ್ರಮದ ನುಡಿಯ ಸಡಗರದವನು ತಾನಲ್ಲ
ಎಂಬನಲ್ಲಾ ಎನಿಸಿಕೊಂಬನಲ್ಲಾ
ಅಂದಾದಿಯಾಗಿ ತಾ ನಿಂದ ನಿಲವು ಸುಜ್ಞಾನ
ದಂಧ ಬರಿತನು ಕೂಡಲಚನ್ನಸಂಗಾ.

ಇಂತು ಮಹಾಜ್ಞಾನಭರಿತನಾದ ಲಿಂಗೈಕ್ಯನು ಮರ್ತ್ಯದಲ್ಲಿರ್ದಡೆಯೂ ಶ್ರುತ ಗುರು ಸ್ವಾನುಭಾವದಿಂದ ತುದಿ ಮೊದಲು ನಡುವಿಲ್ಲದ ಲಿಂಗವನು ಹಿಡಿಯಲು ಬಿಡಲು ತೆರಹಿಲ್ಲವೆಂದರಿದು, ಅರಿಯಲಾಗಿ ಕೊಳಗದೊಳಗೆ ಬಯಲು, ಬಯಲೊಳಗೆ ಕೊಳಗವಿಪ್ಪಂತೆ, ಲಿಂಗದೊಳಗೆ ತಾನು ತನ್ನೊಳಗೆ ಲಿಂಗವಿಹುದು. ಆಕಾರ ನಿರಾಕಾರ ಏಕವಾಯಿತ್ತು. ಆಗಲೆ ಒಂದು ಹೇಮ ಹಲವು ಪ್ರಕಾರವಾಗಿ, ಹಲವು ಪ್ರಕಾರ ಒಂದಾದಂತೆ ಲಿಂಗವೆ ಶರಣ, ಶರಣನೆ ಲಿಂಗವಾಗಿ, ತನು ಮನ ಪ್ರಾಣಲಿಂಗದೊಳು ಸಚ್ಚಿದಾನಂದವವಾಗಿರುತ್ತಿಹವು. ಇಹ ಕಾರಣ ಆತನಾವ ಲೋಕದೊಳಗಿರ್ದಡೆಯೂ ಲಿಂಗದೇಹಿಯಲ್ಲದೆ, ಸಮಸ್ತ ಜಡದೇಹಿಗಳಂತಲ್ಲ. ಇಂತೆಂಬ ವಚನ ವ್ಯಾಖ್ಯಾನಂಗಳಿಗೆ ಸಾಕ್ಷಿ.

೫೨

ಅಱೆಯದ ಮುನ್ನವೆ ಅಱಿತ ಅಱಿವನು
ಮಱೆಯದೆ ನಿನ್ನ ನೀನೇ ತಿಳಿದುನೋಡು ಕಂಡಾ.        ||ಪ||

ಆಕಾಶವನೆಸುವೆನೆಂದಂಬ ತೊಡಚಲು
ಏಕೋಗುರಿಯಾಗಿ ಮೊನೆಗೆ ಮುಳುಗಿ ನಿಂದುದು,
ಆಕಾರ ನಿರಾಕಾರವೆಂಬುಭಯನಾಮದ
ಏಕಾರ್ಥ ಒಂದೆಯೆಂದು ತಿಳಿದುನೋಡು ಕಂಡಾ.        ೧

ಅಳೆಯಲುಬೇಕೆಂದು ಬಯಲರಾಶಿಯಮಾಡಿ
ಕೊಳದೊಳಗಿರ್ದ ಬಯಲ ಸುರಿವ ಪರಿಯೆಂತೊ
ಅಳೆಯಲು ಮೊಗೆಯಲು ಸುರಿಯಲಿಲ್ಲದ ಬಯಲು
ತಿಳಿದುನೋಡು ನಿನ್ನ ನೀನೇ, ತಿಳಿವಡೆ ನೀನೆ.            ೨

ಬಂಗಾರದ ತೊಡಿಗೆಯಾಭರಣವೆನಿಸಿತು,
ಶೃಂಗಾರವ ಮಾಡೆ ಹಲವು ನಾಮವಿಡಿದು
ಉಂಗುರ ಕಂಕಣ ಚಲುವಂದಿಗೆ ಮುಕುಟ
ಹಿಂಗದೆ ಅವನಳಿಯೆ ಮುನ್ನಿನ ಬಂಗಾರವೆ ಮೊದಲು.  ೩

ಮುನ್ನವೆ ಮುನ್ನವೆ ನೀರು ಬಳಿಕ ನೀರು ತಾ
ಅನಿಲನಿಂದಲಿ ಬಲಿದು ವಾರಿಕಲ್ಲೆಂದೆನಿಸಿತು
ನಿನ್ನ ದೇಹ ಮನಃಪ್ರಾಣವಿಂದ್ರಚಾಪವು
ಮುನ್ನಿನಂತೆ ಸಚ್ಚಿದಾನಂದ ನೀನೆ ಕಂಡಾ.     ೪

ಅಡಿಯಿಲ್ಲದ ನಡುವಿಲ್ಲದ ನುಡಿಯಿಲ್ಲದ ಬಯಲು
ಎಡೆಯಿಲ್ಲದಿಪ್ಪುದು ಜಗವನೊಡಗೂಡಿ
ಹಿಡಿಯಲು ಬಿಡಲಿಲ್ಲದ ಬೆಡಗು ನಿಜಗುಣನ
ನುಡಿಯನೊಳಕೊಂಡು ನಿಂದ ಸಹಜ ನೀನೆ ಕಂಡಾ.    ೫

ಇಂತಪ್ಪ ಸಹಜವನುಳ್ಳ ಶರಣನೂ, ಬಸವೆನೆಂಬ ತಾಯಿಂದ ಆ ಪರತತ್ವದಲ್ಲಿ ಐಕ್ಯವಾಗಿ ಬಸವಣ್ಣನ ಸ್ತೋತ್ರವಂ ಮಾಡಿ, ಸರ್ವಪ್ರಪಂಚವನ್ನೆಲ್ಲ ವರ್ಜಿಸಿ ಎಂದು ನಿರೂಪಿಸುತಿರ್ದನು. ಅದು ಹೇಂಗೆನಲು: ನಿರ್ಭಯ ನಮೋ ನಮೋ. ನಿರ್ಭಯಾತೀತಾಯ ನಮೋ ನಮೋ. ಅಕ್ಷಯಾಯ ನಮೋ ನಮೋ. ಅಕ್ಷಯಾತೀತಾಯ ನಮೋ ನಮೋ. ಉರ್ಧ್ವಮುಖಾಯ ನಮೋ ನಮೋ. ವಾಙ್ಮನಾಯ ನಮೋ ನಮೋ, ವಾಙ್ಮನಾತೀತಾಯ ನಮೋ ನಮೋ. ಮೂಲ ಪ್ರಣವ ಮಂತ್ರ ಸ್ವರೂಪಾಯ ನಮೋ ನಮೋ. ಪ್ರಥಮಗಣ ಸ್ವರೂಪಾಯ ನಮೋ ನಮೋ. ಪ್ರಥಮಗಣ ಸಮ್ಮೇಳನಾಯ ನಮೋ ನಮೋ. ಭಕ್ತಗಣ ಸ್ವರೂಪಾಯ ನಮೋ ನಮೋ. ಪ್ರಥಮಗಣ ಸ್ವರೂಪಾಯ ನಮೋ ನಮೋ. ಪ್ರಥಮಗಣ ಸಮ್ಮೇಳನಾಯ ನಮೋ ನಮೋ. ಭಕ್ತಗಣ ಸ್ವರೂಪಾಯ ನಮೋ ನಮೋ. ಭಕ್ತಗಣ ಯುಕ್ತಾಯ ನಮೋ ನಮೋ. ಭಕ್ತಗಣ ಸ್ವರೂಪಾಯ ನಮೋ ನಮೋ. ಭಕ್ತಗಣ ಯುಕ್ತಾಯ ನಮೋ ನಮೋ. ರುದ್ರ ಗಣ ಸ್ವರೂಪಾಯ ನಮೋ ನಮೋ, ರುದ್ರಗಣ ಯುಕ್ತಾಯ ನಮೋ ನಮೋ, ಭಕ್ತಿಸ್ವರೂಪಾಯ ನಮೋ ನಮೋ, ಶಕ್ತಿಸ್ವರೂಪಾಯ ನಮೋ ನಮೋ, ವರ್ತಿ ಸ್ವರೂಪಾಯ ನಮೋ ನಮೋ. ಗುರುಸ್ವರೂಪಾಯ ನಮೋ ನಮೊ. ಲಿಂಗ ಸ್ವರೂಪಾಯ ನಮೋ ನಮೋ. ಜಂಗಮ ಸ್ವರೂಪಾಯ ನಮೋ ನಮೋ. ಬಸವಾಯತೆ ಜಯತು ರಕ್ಷಿಪುದೆನ್ನನು.

ನಿರಾಕಾರ ಪೀಠಿಕಾಸ್ಥಲ ಸಮಾಪ್ತ


[1] ಜಪಿಸಿದೆ (ಬ)

[2] ಶಕ್ತಿ (ಬ)

[3] ಶರಣರನು (ಬ)

[4] ಶರಣರನು (ಬ)

[5] ದೃಷ್ಟಮದದಲ್ಲಿ (ಬ)

[6] ದೃಷ್ಟಮದದಲ್ಲಿ (ಬ)

[7] x (ಬ)

[8] x (ಬ)

[9] ಗುರು (ಬ).

[10] ದುತ್ತಮ (ಆ)

[11] + ಜೀವ (ಬ)

[12] + ಬಹು (ಬ).