‘ಪರಮಮೂಲಜ್ಞಾನಷಟ್‌ಸ್ಥಲ ವಚನಗಳು’ ಎಂಬೀ ಕೃತಿ ವಚನಸಾಹಿತ್ಯ ಕ್ಷೇತ್ರದಲ್ಲಿಯೇ ಒಂದು ವಿಶಿಷ್ಟ ಕೃತಿ. ಇದನ್ನು ಸಂಗ್ರಹಿಸಿದವನು ಎನ್ನುವದಕ್ಕಿಂತಲೂ ರಚಿಸಿದವನು ಎಂದು ಹೇಳಬಹುದಾದ ವ್ಯಕ್ತಿ ಸೋಮನಹಳ್ಳಿಯ ಚಿಕ್ಕವೀರಣ್ಣೊಡೆಯರು. ಇವರೇ ಈ ಕೃತಿಯ ಕರ್ತೃಗಳು. ಇವರು ‘ಪರಮ ಮೂಲಜ್ಞಾನದ ಪಶಸ್ತಿ’ಯಲ್ಲಿ ತಮ್ಮ ಹೆಸರು ಹೇಳಿಕೊಳ್ಳುವುದಲ್ಲದೆ ತಮ್ಮ ಪೂರ್ವವೃತ್ತಾಂತವನ್ನೂ ವಿಶದವಾಗಿ ಹೇಳಿಕೊಂಡಿದ್ದಾರೆ. ಅದನ್ನು ಸ್ವಲ್ಪದರಲ್ಲಿ ಹೀಗೆ ಹೇಳಬಹುದು:

ಚಿಕ್ಕವೀರಣ್ಣೊಡೆಯರ ಪೂರ್ವಜರು ಕಾಶೀವಿಶ್ವನಾಥಯ್ಯರು. ಅವರು ಶ್ರೀಶೈಲದ ಸಮೀಪದ ವಣುಪುರದಲ್ಲಿ ವಾಸಿಸುತ್ತಿದ್ದ ಪಂಡಿತಾರಾಧ್ಯರಲ್ಲಿಗೆ ಪತ್ನಿ ಸಮೇತರಾಗಿ ಹಲವು ಶಿಷ್ಯರನ್ನೊಳಗೊಂಡು ಬರುವರು. ಪಂಡಿತಾರಾಧ್ಯರು ಆಗಲೇ ತಮ್ಮ ಸದಾಚಾರದಿಂದ ಮಹಾಶರಣರೆಂದು ಖ್ಯಾತಿ ಪಡೆದಿದ್ದರು. ಅವರ ದರ್ಶನಮಾತ್ರದಲ್ಲಿಯೇ ಕಾಶೀವಿಶ್ವನಾಥಯ್ಯನಿಗೆ ಜ್ಞಾನೋದಯವಾಯಿತು. ಆಗ ಅವರು ಶಿಷ್ಯನ ಮೇಲೆ ಕರುಣೆದೋರಿ ವೀರಶೈವ ದೀಕ್ಷೆಯನ್ನಿತ್ತು ಮಹೋಪದೇಶ ಮಾಡಿದ್ದಲ್ಲದೆ ಕಲ್ಯಾಣಕ್ಕೆ ತೆರಳಿ ಬಸವಾದಿ ಪ್ರಮಥರನ್ನು ಕಾಣುವಂತೆ ಆದೇಶ ನೀಡಿದರು. ಅವರ ಹೇಳಿಕೆಯಂತೆ ವಿಶ್ವನಾಥಯ್ಯನವರು ಕಲ್ಯಾಣಕ್ಕೆ ಬಂದು ಬಸವಾದಿ ಪ್ರಮಥರನ್ನು ಕಂಡು ಪುನೀತರಾಗಿ ಮರಳಿ ವಣುಪುರಕ್ಕೆ ಬಂದರು. ತನ್ನ ದೀಕ್ಷಾಗುರುಗಳಾದ ಪಂಡಿತಾರಾಧ್ಯರಿಗೆ ಕಲ್ಯಾಣದಲ್ಲಿ ನೆರೆದಿದ್ದ ಬಸವಾದಿ ಶಿವಶರಣರ ಘನತೆಯನ್ನೂ ಸರಳ ಜೀವನದ ಭವ್ಯತೆಯನ್ನೂ ಭಕ್ತಿಯ ದಿವ್ಯತೆಯನ್ನೂ ಬಣ್ಣಿಸಿ ಹೇಳಿ, ನಂತರ ಜೋಳದೇಶದ ರಾಜಧಾನಿಯಾದ ಕಾಂಚೀಪುರಕ್ಕೆ ಬಂದರು. ಆ ಪಟ್ಟಣ ವಾಸಿಗಳಾದ ವೀರಯ್ಯ, ಲಿಂಗ್ಯಯ ಎಂಬ ಸದ್ಗೃಹಸ್ಥರು ವಿಶ್ವನಾಥಯ್ಯನವರ ದಿವ್ಯತೇಜಸ್ಸನ್ನು ಕಂಡು, ಅವರನ್ನು ತಮ್ಮಲ್ಲಿಯೇ ಉಳಿಸಿಕೊಂಡರು. ಅಲ್ಲಿದ್ದಾಗಲೇ ವಿಶ್ವನಾಥಯ್ಯನಿಗೆ ಒಂದು ಶಿಶು ಉದಿಸಿತು. ತನ್ನ ಸದ್ಗುರುವೇ ತಮ್ಮ ಉದರದಲ್ಲಿ ಜನಿಸಿ ಬಂದನೆಂದು ಭಾವಿಸಿದ ವಿಶ್ವನಾಥಯ್ಯನವರು ತಮ್ಮ ಮಗುವಿಗೆ ಪಂಡಿತಾರಾಧ್ಯನೆಂದು ನಾಮಕರಣ ಮಾಡಿದರು. ಕೂಸು ಬೆಳೆದು ದೊಡ್ಡದಾಯಿತು. ಮದುವೆಯ ವಯಸ್ಸೂ ಸಮೀಪಿಸಿತು. ಹುಡುಗನ ಲಕ್ಷಣವನ್ನೂ ವಿದ್ಯಾಬುದ್ಧಿಯನ್ನೂ ಮೆಚ್ಚಿಕೊಂಡ ವೀರಯ್ಯನು ಆತನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು. ಕಾಲ ಗತಿಸಿತು. ಶ್ರೀ ವಿಶ್ವನಾಥಯ್ಯನಿಗೆ ತನ್ನ ದೀಕ್ಷಾಗುರುವಾದ ವಣುಪುರದ ಪಂಡಿತಾರಾಧ್ಯರನ್ನು ಕಾಣುವ ಹಂಬಲ ಉಂಟಾಯಿತು. ಅವನು ಅಲ್ಲಿಂದ ಹೊರಟು ವಣುಪುರಕ್ಕೆ ಬರುತ್ತಿರಲು ತನ್ನ ಗುರುಗಳು ಲಿಂಗೈಕ್ಯರಾದ ಸಂಗತಿಯನ್ನು ಯಾರೋ ಬಿತ್ತರಿಸಿದರು. ಗುರುವನ್ನು ಕಳೆದುಕೊಂಡ ವಿಶ್ವನಾಥಯ್ಯನಿಗೆ ಆ ಸುದ್ಧಿಯನ್ನು ಕೇಳಿ ಬಹಳ ವ್ಯಥೆಯಾಗಿರಬೇಕು.. ಅವರು ನಿಂತ ಸ್ಥಳದಲ್ಲಿಯೇ ಲಿಂಗೈಕ್ಯರಾದರು. ಅವರ ಮಡದಿ ಮತ್ತು ಮಗ ಪಂಡಿತಾರಾಧ್ಯ ವಿಶ್ವನಾಥಯ್ಯನ ಅಂತ್ಯಕ್ರಿಯೆಯನ್ನು ಮುಗಿಸಿ ಕೆಲವು ಕಾಲ ವಣುಪುರದಲ್ಲಿಯೇ ನಿಂತರು. ಅಲ್ಲಿದ್ದಾಗಲೇ ಪಂಡಿತಾರಾಧ್ಯನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಅವರಿಗೆ ವೀರಶೈವ ದೀಕ್ಷೆಮಡಿಸಿ ತಂದೆ ಪಂಡಿತಾರಾಧ್ಯರು ಊರುಬಿಟ್ಟು ಭಕ್ತೋದ್ಧಾರಕ್ಕಾಗಿ ದೇಶಸಂಚಾರ ಕೈಕೊಂಡರು. ಊರೂರು ಅಲೆಯುತ್ತ ಮುಂದೆ ಸಾಗಿದರು. ದಾರಿಯಲ್ಲಿ ಒಂದು ಊರು. ಆ ಊರಲ್ಲಿದ್ದ ಭೈರವಣ್ಣ ನಾಯಕನೆಂಬ ಒಬ್ಬ ಕ್ಷತ್ರಿಯ ಜಮೀನುದಾರನು ಪಂಡಿತಾರಾಧ್ಯರನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡು ಉಪಚರಿಸಿ ಬೀಳ್ಕೊಟ್ಟರು. ಆರಾಧ್ಯರ ಪಯಣ ಮತ್ತೊಂದೂರಿಗೆ ಸಾಗಿತು. ಆ ಊರಲ್ಲಿದ್ದ ಮಲ್ಲರಸನೆಂಬ ಭಕ್ತನು ಇವರನ್ನು ಕರೆದುಕೊಂಡು ಹೋಗಿ ಮೋಸ ಮಾಡಿದನು. ಹಿಂದಿನ ಹಳ್ಳಿಯಲ್ಲಿ ಆರಾಧ್ಯನು ಕ್ಷತ್ರಿಯರ ಮನೆಯಲ್ಲಿ ಊಟಮಾಡಿ ಬಂದುದು ಆತನಿಗೆ ಹೇಗೋ ಹೊಳೆದಿತ್ತು. ಅನುಚಾರಿಯಾದ ಈ ಪಂಡಿತಾರಾಧ್ಯನನ್ನು ಮುಗಿಸಿಯೇಬಿಡಬೇಕೆಂದು ಆತ ದೃಢನಿರ್ಧಾರಮಾಡಿ ಆತನಿಗೆ ವಿಷಬೆರೆಸಿದ ಅಡುಗೆಯನ್ನು ನೀಡಿದನು. ವಿಷವೇರಿ ಪಂಡಿತಾರಾಧ್ಯರು ಅಲ್ಲಿಯೇ ಲಿಂಗದೊಳಗಾದರು. ಅವರ ಸಮಾಧಿಯನ್ನು ಆ ಊರ ಶಿವ ದೇವಾಲಯದ ಮುಂದೆ ಮಾಡಲಾಯಿತು. ಅದೇನು ಚೋದ್ಯವೋ ಏನೋ? ಸಮಾಧಿಗೆ ಬಂದವರು ಇನ್ನೂ ದೂರ ಹೋಗಿರಲಿಲ್ಲ. ಪಂಡಿತಾರಾಧ್ಯರು ಬಹುಜನರ ಸಮಕ್ಷಮದಲ್ಲಿಯೇ ಲಿಂಗಜಂಗಮ ರೂಪ ತಾಳಿ ಸಮಾಧಿಯಿಂದ ಮೇಲೆದ್ದು ಬಂದರು. ಭಕ್ತರು ಉಘೇ ಉಘೇಯೆಂದು ಉದ್ಘೋಷ ಮಾಡಿದರು. ಅಂದಿನಿಂದ ಭಕ್ತರು ಅವರನ್ನು ಶಿವಸಂಕರದೇವರೆಂದು ಕರೆಯ ತೊಡಗಿದರು. ಶಿವಸಂಕಾರದೇವರು ಹಾಗೆಯೇ ಮುಂದುವರಿದು ಪುನಃ ವಣುಪುರಕ್ಕೆ ದಯಮಾಡಿಸಿದರು; ಹೆಂಡತಿ ಮಕ್ಕಳೊಡನೆ ಸುಖದಿಂದ ಇದ್ದರು. ಅವರಿಗೆ ಆಗೊಂದು ಸಂತಾನವಾಯಿತು. ಆ ಸಂತಾನದ ವಂಶಪರಂಪರೆಯಲ್‌ಇಯೇ ತಾವು ಹುಟ್ಟಿಬಂದುದಾಗಿ ಚಿಕ್ಕವೀರಣ್ಣೊಡೆಯರು ಹೇಳಿಕೊಂಡಿದ್ದಾರೆ.

ಈ ಕಥೆಯಲ್ಲಿ ಸತ್ಯವೆಷ್ಟೊ, ಸುಳ್ಳು ಎಷ್ಟೊ? ನಂಬಲು ಭಯವಾಗುವಂತೆ ಕಥೆ ಬೆಳೆದು ಬಂದಿದೆ. ವೀರಣ್ಣೊಡೆಯರೇ ಇದನ್ನು ಹೇಳಿರುವುದರಿಂದ ಅದರಲ್ಲಿ ಸ್ವಲ್ಪಾದರೂ ಸತ್ಯ ಇರಬೇಕೆನಿಸುತ್ತದೆ. ಬಸವಣ್ಣನವರ ಕಾಲದಿಂದ ಇತ್ತೀಚೆಗೆ, ತೀರ ಇತ್ತೀಚೆಗೆ ವೀರಣ್ಣೊಡೆಯರು ಬಾಳಿರಬೇಕು. ನಿಶ್ಚಿತ ಕಾಲ ತಿಳಿಯದು.

`ಪರಮಮೂಲಜ್ಞಾನಷಟ್‌ಸ್ಥಲ ವಚನಗಳು’ ಎಂಬೀ ಕೃತಿ ಉಳಿದ ಸ್ಥಲ ಕಟ್ಟುಗಳ ಸಂಗ್ರಹದಿಂದ ಭಿನ್ನವಾಗಿದೆ. ವಚನಗಳಿಗೆ ವಿವರಣೆ ನೀಡುವ ಪದ್ಧತಿಯಲ್ಲಿಯೇ ಆ ವೈಶಿಷ್ಟ್ಯವನ್ನು ಕಾಣಬಹುದು. ಈ ಕೃತಿಯಲ್ಲಿ ಸಂಗ್ರಹಕರನ ವಿವರಣೆ ಮೊದಲು ಬಂದಿದ್ದು ತದನಂತರ ಆ ವಿವರಣೆಯನ್ನು ಬೆಂಬಲಿಸಲು ಶರಣರ ವಚನಗಳು ಬಂದಿವೆ. ಅವು ಕೃತಿಕಾರನ ವಿಚಾರಧೋರಣೆಗೆ ಹೊಂದಿಕೊಂಡು ಬಂದಿದ್ದರೆ ತಾನು ನೀಡುವ ವಿಚಾರಧಾರೆಯೂ ಒಂದು ರೀತಿಯಲ್ಲಿ ಆಯ್ದುಕೊಂಡ ವಚನಗಳ ಸಾರವನ್ನು ಮೀರಿ ಹೋಗಿಲ್ಲ. ತನ್ನ ಈ ನೂತನ ಕ್ರಮವನ್ನು ಹೀಗೆ ಸಮರ್ಥಿಸಿಕೊಂಡಿದ್ದಾನೆ:

“ಸೋಮನಹಳ್ಳಿಯ ವೀರಣ್ಣೊಡೆಯರು ಬಸವಾದಿ ಪ್ರಮಥರ ಬಹುವಚನಗಳ ರಸವಂ ತೆಗೆದು ವಾಚ್ಯರೂಪಕವೆಂದು ಕಲ್ಪಿಸಿ ಅವರೊಳಗೆ ಕೆಲವು ವಚನಂಗಳಂ ತೆಗೆದು ಸಾಕ್ಷಿರೂಪಕವೆಂದು ಕಲ್ಪಿಸಿ ವೇದಾಂತ ಸಿದ್ಧಾಂತಗಳ ಬೆರಸದೆ ಪರಮಮೂಲಜ್ಞಾನವೆಂಬುದೊಂದು ಷಟ್‌ಸ್ಥಲವಂ ಮಾಳ್ಪೆನೆಂದು ಉದ್ಯೋಗಿಸುವಲ್ಲಿ” ಈ ಕೃತಿಯ ಹೆಗ್ಗಳಿಕೆ ಒಡಮೂಡಿದುದನ್ನು ಅರಿಯಬಹುದು . ವೇದಾಂತವನ್ನು ಬೆರಸಿ ಶಾಸ್ತ್ರಸಂಪಾದನೆಮಾಡುವುದು ಪೂರ್ವಕಾಲದಿಂದಲೂ ನಡೆದುಬಂದ ಒಂದು ಪದ್ಧತಿ. ಇನ್ನೊಂದು ಬಗೆಯ ಶಾಸ್ತ್ರಸಂಪಾದನೆಯೆಂದರೆ ಸಿದ್ಧಾಂತವನ್ನು ಬೆರಸಿ ಹೇಳುವುದು. ಇವೆರಡೂ ಪದ್ಧತಿಗಳನ್ನು ಬದಿಗಿಟ್ಟು ವಚನಗಳನ್ನೇ ಪ್ರಮಾಣವೆಂದು ಸ್ವೀಕರಿಸುವ ರೀತಿಯನ್ನು ಕೆಲವರಲ್ಲಿ ಕಾಣಬಹುದು. ಇದೊಂದು ನವ್ಯ ವಿಧಾನ. ಈ ವಿಧಾನದಲ್ಲಿ ವಿಷಯಮಂಡನೆಗೆ ಶಿವಶರಣರ ವಚನಗಳೇ ಸಾಕ್ಷಿ. ಈ ವಿಧಾನವನ್ನು ಅನುಸರಿಸಿ ವೀರಣ್ಣೊಡೆಯರು ತಮ್ಮ ಕೃತಿಯಲ್ಲಿ ತತ್ವಪ್ರತಿಪಾದನೆ ಮಾಡಲೆತ್ನಿಸಿದುದು ಗಮನಾರ್ಹವಾಗಿದೆ.

ವೇದಾಂತ ಮತ್ತು ಸಿದ್ಧಾಂತಗಳಿಂದ ಭಿನ್ನವಾದ ಪ್ರತಿಪಾದನೆ ತಮ್ಮದೆಂದು ತಿಳಿಸಲು ವೀರಣ್ಣೊಡೆಯರು ತಮ್ಮ ಕೃತಿಯ ಆದಿಯಲ್ಲಿ ಉರಿಲಿಂಗದೇವರ ಒಂದು ವಚನವನ್ನು ಹಾಕಿದ್ದಾರೆ. ‘ವೇದಾಂತ ಸಿದ್ಧಾಂತವೆಂಬ ವಾಗಾದ್ವೈ ತವ ನುಡಿಯರು ನಮ್ಮ ಶರಣರು’ ಎಂಬುದೇ ಉರಿಲಿಂಗದೇವರ ವಚನ. ಈ ವಚನದ ಭಾವವನ್ನು ಅರಿತರೆ ವೀರಣ್ಣೊಡೆಯರ ವಾದ ಸರಿಯೆನಿಸುತ್ತದೆ. ಆಗಮಾಂತ ಮತದಲ್ಲಿ ಶರಣರು ಕ್ರಾಂತಿಯನ್ನು ಮಾಡಿದ್ದಾರೆನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಸಾಮಾಜಿಕ ಕ್ರಾಂತಿಗೆ ಈ ವೈಚಾರಿಕ ಕ್ರಾಂತಿ ನಾಂದಿ ಹಾಡಿದಂತಿದೆ. ಚಿಕ್ಕವೀರಣ್ಣೊಡೆಯರು ತಾವು ಹಮ್ಮಿಕೊಂಡ ಕಾರ್ಯವನ್ನು ಯಶಸ್ವಿಯಾಗಿಯೇ ಮಾಡಿದ್ದಾರೆನ್ನಬಹುದು. ನಿರಾಕಾರ ಪೀಠಿಕಾಸ್ಥಲವನ್ನು ಸರಿಯಾಗಿ ಓದಿದರೆ ಅಲ್ಲಿ ಎರಡು ಪ್ರಣಾಲಿಗಳು ಸ್ಪಷ್ಟವಾಗಿ ಬಂದಿರುವುದನ್ನು ಗುರುತಿಸದೆ ಇರಲಾರೆವು:

(೧) ವೈಚಾರಿಕ ಪ್ರಣಾಲಿಯನ್ನು ಪ್ರತಿನಿಧಿಸುವಾಗ ಅದು ನಿರಾಕಾರ ಪೀಠಿಕಾಸ್ತಲವೆನಿಸುತ್ತದೆ.

(೨) ತಾತ್ವಿಕ ಪ್ರಣಾಲಿಯನ್ನು ಅಂದರೆ ವಸ್ತುಸಿದ್ಧಾಂತವನ್ನು ನಿರೂಪಿಸುವಾಗ ಅದು ಆದಿಮೂಲ ಬ್ರಹ್ಮ ಲಕ್ಷಣಾತ್ಮಕವಾಗಿ ನಿಲ್ಲುತ್ತದೆ. ಇದೇ ಈ ಕೃತಿಯ ವೈಶಿಷ್ಟ್ಯ.

ಸೋಮನಹಳ್ಳಿಯ ಚಿಕ್ಕವೀರಣ್ಣೊಡೆಯರು ಪುರಾತನ ಶರಣರ ವಚನಗಳನ್ನು ಪರಮಮೂಲಜ್ಞಾನಕ್ಕೆ ಅನುಗುಣವಾಗಿ ವಿಭಾಗಕ್ರಮ ನೋಡಿ ಜೋಡಿಸಿದ್ದಾರೆ. ಅವುಗಳಿಗೆ ಸ್ಥಲವೆಂದು ಹೆಸರಿಸಿದ್ದಾರೆ. ಈ ವಿಷಯವನ್ನು ಕುರಿತು ಅವರು ಹೇಳುವುದು ಹೀಗೆ:

“ಪರಮಮೂಲಜ್ಞಾನವೆಂಬುದೊಂದು ಷಟ್‌ಸ್ಥಲವಂ ಮಾಳ್ಪೆನೆಂದು ಉದ್ಯೋಗಿಸುವಲ್ಲಿ ಬಸವೇಶ್ವರದೇವರು ತನ್ನ ಮೂಲವನೊಂದು ಪತ್ರದೊಳು ಬರೆತಂದು ಕನಸಿನಲ್ಲಿ ಕೈಯೊಳು ಕೊಡಲು, ಆ ಅಕ್ಷರಂಗಳು ಅನಂತದಕ್ಷರಂಗಳಾಗಿ ಕಾಣಿಸಲು ಅವೇ ಮೇಲ್ಪಂಕ್ತಿಯಾಗಿರ್ದ ಕಾರಣ ಆ ಮೇಲುಪಂಕ್ತಿಗಳಿಂದ (೧) ನಿರಾಕಾರ ಪೀಠಿಕಾಸ್ಥಲ (೨) ಸಾಕಾರ ಪೀಠಿಕಾಸ್ಥಲ (೩) ಆಕಾರ ಪೀಠಿಕಾ ಸ್ಥಲ (೪) ವೃಷಭ ಪಿಂಡಜ್ಞಾನಸ್ಥಲ (೫) ಯುಗಶ್ರುತಿ ವಿಡಂಬನಸ್ಥಲ (೬) ಭಕ್ತಜಂಗಮದ ಅರಿವಿನ ಸಂಭ್ರಮಸ್ಥಲ (೭) ಐಕ್ಯನ ಪರಿಪೂರ್ಣಸ್ಥಲ ಇಂತಪ್ಪ ಸ್ಥಲಂಗಳಂ ಜಂಗಮದ ಪ್ರಸಾದವ ಲಿಂಗಕ್ಕೆ ಕೊಟ್ಟುಕೊಂಡು ಸತ್ಯ ವಾವಂ ನುಡಿವ ಭಕ್ತರೊಡೆಯರಿಗೆ ಬಿನ್ನಹವ ಮಾಳ್ಪೆವು”. ಈ ಸ್ಥಲಕಟ್ಟುಗಳ ವಿಚಾರದಲ್ಲಿ ಈ ಗ್ರಂಥಕರ್ತೃ ಬಸವಣ್ಣನವರ ಆದೇಶವನ್ನು ಗಮನದಲ್ಲಿಟ್ಟುಕೊಂಡಿರುವುದೇನೋ ನಿಜ. ಆದರೆ ಈ ಸ್ಥಲಕಟ್ಟಿಗೆ ಶಾಸ್ತ್ರದ ಆಧಾರ ಇದೆಯೆ? ಎಂದು ಕೇಳುವುದು ಸ್ವಾಭಾವಿಕ. ಅದನ್ನು ಅರಿಯಲು ಚಿಕ್ಕವೀರಣ್ಣೊಡೆಯರ ಸ್ಥಲವಿಭಜನೆಯನ್ನು ಒಳಹೊಕ್ಕುನೋಡುವುದು ಒಳಿತು.

ನಿರಾಕಾರ ಪೀಠಿಕಾಸ್ಥಲ (ವಸ್ತು ಮತ್ತು ವಿಧಾನ): ನಿರಾಕಾರ ಪೀಠಿಕಾಸ್ಥಲದಲ್ಲಿ ಹೇಳಿದಂತೆ `ವಸ್ತು’ ನಿರಾಕಾರವಾಗಿದೆ. ಆ ವಸ್ತು ಆಕಾರದ ವಿವಿಧ ಹಂತಗಳನ್ನಾಶ್ರಯಿಸಿ ವ್ಯಷ್ಟಿಸೃಷ್ಟಿಯಾಗಿರುವಂತೆ ವಿಚಾರ ಸತ್ವವು ನಿರಾಕಾರ ಅವಸ್ಥೆಯಿಂದ ವೈಚಾರಿಕ ವೈವಿಧ್ಯತೆಯನ್ನು ತಾಳುತ್ತದೆ. ಇವು ಸಮಸಮವಾಗಿ ನಡೆದಿವೆಯೆಂಬುದನ್ನು ತೋರಿಸಲು ಸಂಪಾದಕರು ಯತ್ನಿಸಿದ್ದಾರೆ. ಆದರೆ ಈ ಸ್ಥಲವು ಷಟ್‌ಸ್ಥಲದ ಆದಿಯಲ್ಲಿ ಬರುವ ಪಿಂಡಸ್ಥಲ ಮತ್ತು ಪಿಂಡಜ್ಞಾನಸ್ಥಲಗಳ ರೀತಿಯಿಂದ ಭಿನ್ನವಾಗಿದೆ. ಅಲ್ಲಿಯೇ ಸ್ಥಲಕಟ್ಟಿ ಕ್ರಾಂತಿಯ ಹೊಳಪು  ಜಳಪಿಸಿದೆ. ಇಲ್ಲಿ ವಸ್ತುಸಿದ್ಧಾಂತವು ಮಹತ್ವಪೂರ್ಣವಾಗಿರುವಷ್ಟೇ ಆ ವಸ್ತುಸಿದ್ಧಿಯ ತಂತ್ರವಿಧಾನವೂ ಅಷ್ಟೇ ಮಹತ್ವದ್ದಾಗಿದೆ.

ಸಾಕಾರ ಪೀಠಿಕಾಸ್ಥಲ: ಸಾಕಾರ ಪೀಠಿಕಾಸ್ಥಲದಲ್ಲಿ ನಿರಾಕಾರದ ಇನ್ನೊಂದು ಮುಖ ವ್ಯಕ್ತವಾಗಿದೆ. ಚಿಚ್ಛಕ್ತಿಯ ಆವಿರ್ಭಾವದೊಡನೆ ಜ್ಞಾನ ಹಾಗೂ ಕ್ರಿಯಾಶಕ್ತಿಗಳು ಹೊರಹೊಮ್ಮುತ್ತವೆ. ಅಲ್ಲಿಯೇ ವ್ಯಷ್ಟಿಯ ಅಭಿವ್ಯಕ್ತಿಗಳ ಉಗಮವಿದೆ. ಇದರ ಜ್ಞಾನ ಆಗುವ ಬಗೆ ಹೇಗೆ? ಅದಕ್ಕೆ ಪ್ರಮಣವೇನು? ಎಂಬೀ ಪ್ರಶ್ನೆಗಳು ಉದ್ಭವಿಸದೆ ಇರವು. ಈ ಪ್ರಶ್ನೆಗಳನ್ನು ಎತ್ತಿಕೊಂಡೇ ಭಾರತೀಯ ವಿದ್ವಾಂಶರು ವೇದವೇ ಕೊನೆಯ ಪ್ರಮಾಣವೆಂದು ಅಂಗೀಕರಿಸಿದ್ದಾರೆ. ಇದೇ ಅವರಿಗೊಂದು ಆಪ್ತವಾಕ್ಯ. ಪರಂಪರಾಗತವಾಗಿ ಬಂದ ಈ ಪ್ರಮಾಣವನ್ನು ಎಲ್ಲ ಆಚಾರ್ಯರೂ ಒಪ್ಪಿದ್ದಾರೆ. ಆದರೆ ಇದನ್ನು ಅತಿಕ್ರಮಿಸಿದ್ದಾರೆ ವೀರಶೈವ ಶರಣರು. ಅವರು ಪ್ರಮಾಣಶಾಸ್ತ್ರವನ್ನು ಅಲ್ಲಗಳೆದಿದ್ದರೂ ವಸ್ತುಸಿದ್ಧಿಯ ವಿಚಾರವನ್ನು ಕೈಬಿಡಲಿಲ್ಲ. ಮೇಲಾಗಿ ಜ್ಞಾನವು ಅಸಾಧ್ಯವೆಂದು ಘೋಷಿಸಲಿಲ್ಲ. ಆದರೆ ಅದಕ್ಕೆ ಪರಿಹಾರವನ್ನು ಮಾತ್ರ ತೋರಿಸದೆ ಬಿಡಲಿಲ್ಲ. ಅವರ ಪ್ರಮಾಣವೇ `ಅನುಭಾವ’. ಈ ಬಗೆಗೆ ಪ್ರಾಜ್ಞರು ಇನ್ನೂ ವಿಚಾರ ಮಾಡಬಹುದು. ಇದಕ್ಕೆ ಚಿಕ್ಕವೀರಣ್ಣೊಡೆಯರು ಚಿದ್ಬ್ರಂಹ್ಮಾಂಡವೆಂದು ಕರೆದಿದ್ದಾರೆ.

ಆಕಾರ ಪೀಠಿಕಾಸ್ಥಲ (ಮನ, ಮಾಯೆ ಮತ್ತು ಜೀವ ವಿವರಣೆ): ಮೂರನೆಯ ಸ್ಥಲವೇ ಆಕಾರ ಪೀಠಿಕಾಸ್ಥಲ. ಇದರಲ್ಲಿ ಮನ, ಮಾಯೆ  ಮತ್ತು ಜೀವ ಈ ತ್ರಿವಿಧವನ್ನು ವಿಡಂಬಿಸುವ ಪೂರ್ವದಲ್ಲಿ ಅವುಗಳ ಉತ್ಪತ್ತಿಯನ್ನು ವಿವರಿಸಲಾಗಿದೆ. ವೀರಶೈವ ಪರಿಭಾಷೆಯಲ್ಲಿ ಮನವೆಂದರೆ ಚಿತ್ತು; ಇದು ಸಾಮಾನ್ಯ ಮನವನ ಮನವಲ್ಲ; ನಿರಾಕಾರದಲ್ಲಿ ಹೊರಹೊಮ್ಮಿದ ಆದಿ ಚಿತ್ತು; ಅದೇ ಘನಮನ. ಅದು ಆದಿ ಮತ್ತು ಅನಾದಿಗಳ ಸಂಗದಿಂದಾದ ಮನವಲ್ಲ; ಅವರೆಡನ್ನು ಮೀರಿ ನಿಂತ ಪರತತ್ವ. ಶಕ್ತಿಯೇ ಚೈತನ್ಯ; ಶಿವನೇ ಚೈತನ್ಯಾತ್ಮಕನು. ಹರಿಹರಬ್ರಹ್ಮರಿಂದಿತ್ತಲಿದ್ದ ಏಕಲಿಂಗ – ಒಬ್ಬನೇ ಶರಣ. ಆ ಶರಣನೇ ಶಕ್ತಿ; ಆ ಶಕ್ತಿಯುಕ್ತನೇ ಶಿವನು. ಶಿವನೇ ಶರಣನೆಂಬುದು ಸಿದ್ಧಾಂತ. ಶರಣ ಸತಿ ಲಿಂಗ ಪತಿಯೆಂಬುದು ಅನ್ಯೋನ್ಯ ಅಭೇದ್ಯ ತತ್ವ; ಶಕ್ತ್ಯಾತ್ಮಕ ಶಿವತತ್ವ. ಇದು ಮನದ ಮೂಲೋತ್ಪತ್ತಿ.

ಮನದಲ್ಲಿ ಇಚ್ಛೆಯಂಕುರಿಸುತ್ತದೆ. ಈ ಇಚ್ಛೆಯೇ ಸಕಲನಿಷ್ಕಲರೂಪವೆನಿಸಿತು. ಇದೇ ನಿಜಹಂಕಾರ, ಮಹದಹಂಕರ. ಈ ಮಹದಹಂಕಾರವು ಪುರುಷ ರೂಪ ಪಡೆದು ಅನಾದಿ ಇಲ್ಲವೆ ಮಹಾಮಾಯೆಯೆಂದು ಪ್ರಸಿದ್ಧವಾಯಿತು; ಸ್ತ್ರೀ ರೂಪವನ್ನು ಧರಿಸಿ ಆದಿಯೆಂಬ ಹೆಸರಿನಲ್ಲಿ ಅಧೋಮಾಯೆಯೆಂದು ಹೆಸರಾಯಿತು. ಇದು ಮಾಯಾವಿವರಣೆ. ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ; ಮನದ ಮುಂದಣ ಆಸೆ ಮಾಯೆ. ಅಜ್ಞಾನವೇ ಮಾಯೆಯೆಂದರೂ ನಡೆದೀತು.

ಜೀವವೆಂದರೆ ಸಾಮಾನ್ಯ ಜೀವವಲ್ಲ; ಅದೊಂದು ವಿಶ್ವಜೀವ. ಈ ವಿಶ್ವ ಜೀವದುತ್ಪತ್ತಿ ಮಹಾಮಾಯೆ ಮತ್ತು ಅಧೋಮಾಯೆಗಳಿಂದ ಆದುದು. ಮನ ಮತ್ತು ಮಾಯೆ ಇವೆರಡೂ ಕೂಡಿ ಆ ವಿಶ್ವಜೀವಕ್ಕೆ ನಿಜಾತ್ಮ ಶಿವ, ಉಪಮಾತೀತ, ವ್ಯೋಮತೀತ, ನಿರವಯ, ಶರಣ, ಪರಶಿವ ಎಂದು ಹೆಸರಿಸಿದವು. ಈ ವಿವರಣೆಯನ್ನು ಅಂಬಿಗರ ಚೌಡಯ್ಯ ಹೀಗೆ ಹೇಳಿದ್ದಾನೆ:

ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ ಶರಣನ
ಲೀಲೆಯಿಂದ ಮಹಾಜ್ಯೋತಿ ಪುಟ್ಟಿತ್ತು.
ಆ ಜ್ಯೋತಿಯ ಬೆಳಕಿನಲ್ಲಿ ಅರಿವು ಮರವೆಂಬ
ಭೂತಾತ್ಮ ಮಹಾತ್ಮಂಗಳು ಪುಟ್ಟಿದವು.
ಆ ಆತ್ಮಂಗಳಿಂದ ಜ್ಞಾನಾತ್ಮ ಶುದ್ಧಾತ್ಮ ನಿರ್ಮಲಾತ್ಮ ಪರಮಾತ್ಮ
ಅಂತರಾತ್ಮ ಜೀವಾತ್ಮಂಗಳು ಹುಟ್ಟಿದವು.
ಆ ಜ್ಞಾನಾತ್ಮನಲ್ಲಿ ಮಹಾಭಾವ ಜ್ಞಾನಂಗಳು ಪುಟ್ಟಿ
ತ್ರಿಯಕ್ಷರವಾದವು. ಆ ತ್ರಿಯಕ್ಷರಂಗಳಲ್ಲಿ ಓಂಕಾರ ಪುಟ್ಟಿತ್ತು.
ಆ ಓಂಕಾರದಲ್ಲಿ ಪಂಚಾಕ್ಷರಂಗಳು ಪುಟ್ಟಿದವು.
ಆ ಪಂಚಾಕ್ಷರಂಗಳಲ್ಲಿ ಐವತ್ತೆರಡಕ್ಷರಂಗಳು ಪುಟ್ಟಿದವು.
ಇಂತೀ ಅಕ್ಷರಂಗಳೆಲ್ಲವು ಷಡಾತ್ಮರ ತೃಣವೆಂದಾತನಂಬಿಗರ ಚೌಡಯ್ಯ !

ಈ ಸ್ಥಲದ ಕೊನೆಯಲ್ಲಿ ಮಾಯೆಯ ಕಾರ್ಯವನ್ನೂ ಪ್ರಾಬಲ್ಯವನ್ನೂ ಅದರಿಂದಾಗುವ ತೊಂದರೆಗಳನ್ನೂ ತಿಳಿಸಲಾಗಿದೆ. ಸಾಮಾನ್ಯ ಜೀವನಲ್ಲಿ ಪಂಚೇಂದ್ರಿಯ, ಅರಿಷಡ್ವರ್ಗ, ಅಷ್ಟಮದ, ತಾಪತ್ರಯ, ಅಹಂಕಾರ, ಪಂಚಭೂತಗಳು ಮುತ್ತಿರುತ್ತವೆ. ಇಂತಹ ಸಾಮಾನ್ಯ ಜೀವವನ್ನೇ ವಿಶ್ವಜೀವವೆಂದು ಭಾವಿಸಿ ಪೂಜಿಸುವವರೆಲ್ಲ ಅರೆಮರುಳರು, ಇದೇ ಗ್ರಂಥಕರ್ತನ ವಿಚಾರಧಾರೆ. ಬ್ರಹ್ಮ, ವಿಷ್ಣು, ರುದ್ರರು ಆದಿಯಾಗಿ ಚರಾಚರಸೃಷ್ಟಿ ಅಂತ್ಯವಾಗಿ ಎಲ್ಲದೂ ಕ್ಷಣಿಕ,  ನಶ್ವರ. ನಿತ್ಯಸತ್ಯವೆಂಬುದು ಶರಣತತ್ವವೊಂದೇ. ಆದ್ದರಿಂದ ಎಲ್ಲ ಪೌರಾಣಿಕ, ವೈದಿಕ ದೇವತೆಗಳೆಲ್ಲ ಪ್ರಳಯಕ್ಕೊಳಗಾದವರು. ಇದು ಜೀವ ಶಬ್ದದ ವಿಶಾಲ ಅರ್ಥವನ್ನು ಕೊಡಬಲ್ಲುದು. ಮುಂದೆ ಸೃಷ್ಟಿಯ ಕ್ರಮತತ್ವವನ್ನು ಬೋಧಿಸಲಾಗಿದೆ.

ಋಷಭ ಪಿಂಡಜ್ಞಾನಸ್ಥಲ (ಸೃಷ್ಟಿಯ ಕ್ರಮತತ್ವ): ಋಷಭ ಪಿಂಡ ಜ್ಞಾನಸ್ಥಲದಲ್ಲಿ ಪಶುವರ್ಗದ ವರ್ಗೀಕರಣವನ್ನು ಮಾಡಲಾಗಿದೆ. ಈ ವರ್ಗೀಕರಣದ ಪ್ರಕಾರ ಪಶುಗಳು ಐದು ಬಗೆಯಾಗಿದ್ದಾರೆ:

(೧) ನಿಃಕಲರು: ಷಡುಸಾದಾಖ್ಯನಾಯಕರು; ಆಕಾಶವೇ ಇವರಿಗೆ ಅಂಗ.

(೨) ಸಕಲರು: ೪೨ ಕೋಟಿ ರುದ್ರರು; ವಾಯುವೇ ಇವರಿಗೆ ಅಂಗ.

(೩) ಪ್ರಳಯಾಕಲರು: ನವಕೋಟಿ ವಿಷ್ಣುಗಳು, ನವಕೋಟಿ ಬ್ರಹ್ಮರು; ಅಗ್ನಿಯೇ ಇವರಿಗೆ ಅಂಗ.

(೪) ವಿಜ್ಞಾನಕಲರು: ದೇವ ದಾನವ ಮಾನವರು; ಅಪ್ಪುವೇ ಇವರಿಗೆ ಅಂಗ.

(೫) ಸಕಲ ಕಲರು: ಮಾನವರುಗಳು; ಪೃಥ್ವಿಯೇ ಇವರಿಗೆ ಅಂಗ.

ಇವರೆಲ್ಲರು ಮಲ ಮಯಾ ಕರ್ಮಗಳಿಗೆ ವಶವಾಗಿರುವರು. ಇದರಿಂದ ನಿಷ್ಕಲರು ಸಕಲರೊಳಗೆ, ಸಕಲರು ಪ್ರಳಯಾಕಲರೊಳಗೆ, ಪ್ರಳಯಾಕಲರು ವಿಜ್ಞಾನಕಲರೊಳಗೆ ಜನಿಸುವರು. ಇವರು ತಮ್ಮ ಪಾಪ ಪುಣ್ಯದ ಏರುಪೇರಿನ ಪದವಿಗಳನ್ನೂ ಮುಕ್ತಿಗಳನ್ನೂ ಹೊಂದುವರು. ಇದು ಲಿಂಗಾಂಗ ಸಾಮರಸ್ಯ ತತ್ವಕ್ಕೆ ಬಲು ದೂರ. ಇವೆರಡರ ಪ್ರತಿಪಾದನೆಯಿಂದ ಒಂದು ಇನ್ನೊಂದರಿಂದ ಹೇಗೆ ಭಿನ್ನವೆಂಬುದನ್ನು ಅರಿಯಬಹುದು. ಇದೇ ಋಷಭ ಪಿಂಡಜ್ಞಾನ ಸ್ಥಲ ಶರಣರಲ್ಲದವರು ಆಪ್ತವಾಕ್ಯ, ನಿಗಮಾಗಮ ಶಾಸ್ತ್ರಗಳನ್ನು ಪ್ರಮಾಣವೆಂದು ನಂಬುತ್ತಾರೆ. ಶರಣರು ಇವನ್ನು ಮನ ಮಾಯೆಗಳ ಸಂಕಲ್ಪ ವಿಕಲ್ಪಗಳೆಂದು ಹೇಳಿ, ನೂತನ ಪ್ರಮಾಣವೊಂದನ್ನು ಮುಂದಿಡುವರು. ಇದರಮೇಲಿಂದ ಶಿವ ಶರಣರು ಸಂಪ್ರದಾಯದಲ್ಲಿರುವ ಲೋಪದೋಷಗಳನ್ನು ಖಂಡಿಸಿ ಜನಜೀವನದಲ್ಲಿ ಹೊಸ ಮೌಲ್ಯಗಳನ್ನು ಸ್ಥಾಪಿಸಲು ಹೆಣಗಿದರೆಂಬುದು ಸ್ಪಷ್ಟವಾಗುತ್ತದೆ. ಗೋಸಿದ್ಧಿಯೆಂಬುದೇ ವೃಷಭಸಿದ್ಧಿ. ಅದು ಅಂಗದಲ್ಲಿ ಚಿತ್ಕಳೆಯನ್ನು ಅಳವಡಿಸುವ ಪರಿ; ಅದೇ ಶಕ್ತಿಪಾತ ತಂತ್ರ; ಅಂಗವು ಲಿಂಗವಾಗುವ ಹದನ.

ಯುಗಶ್ರುತಿ ಕುಲಂಗಳುತ್ಪತ್ಯಸ್ಥಲ (ಯುಗಶ್ರುತಿ ಕುಲಂಗಳ ವಿವರಣೆ): ಚಿಕ್ಕವೀರಣ್ಣೊಡೆಯರು ಯುಗಶ್ರುತಿಕುಲಂಗಳುತ್ಪತ್ಯಸ್ಥಲದಲ್ಲಿ ಮೊದಲಿಗೆ ಆರು ಯುಗಗಳನ್ನು ಹೆಸರಿಸಿದ್ದಾರೆ:

(೧) ಅನಂತಯುಗ (೨) ಅದ್ಭುತಯುಗ (೩) ತಮಂಧಯುಗ (೪) ತಾರಜಯುಗ (೫) ತಾಂಡಜಯುಗ (೬) ಭಿನ್ನಜಯುಗ

ಈ ಯುಗಜುಗಂಗಳಲ್ಲಿ ಕೈಲಾಸದಿಂದುಪರಿಯಾದ ಲೋಕದಲ್ಲಿ ಹಾಗೂ ಮರ್ತ್ಯದಲ್ಲಿ ಶಿವಾಚಾರದ ಬೆಳವಣಿಗೆಯಾದುದನ್ನು ಈ ಕೃತಿಯ ಕರ್ತೃ ನಿವೇದಿಸುವನು. ಆಮೇಲೆ ಭೂಲೋಕದಲ್ಲಿ ಪ್ರತಿಯೊಂದು ಯುಗದಲ್ಲಿ ಒಂದೊಂದು ಶೈವಪ್ರಭೇದದ ಅನುಷ್ಠಾನ ನಡೆದುದನ್ನು ಬಿತ್ತರಿಸುವನು.  ಆಯಾ ಯುಗದಲ್ಲಿ ಶೈವರ ಶಾಸ್ತ್ರಗ್ರಂಥಗಳೂ ಭಿನ್ನಭಿನ್ನವಾದುದನ್ನು ಅರಿಯಬಹುದು:

(೧) ಅನಂತನೆಂಬ ಯುಗದಲ್ಲಿ ಕಾಳಾಮುಖಪಂಥವಿದೆ. ಇದರ ಶಾಸ್ತ್ರವು ಅಥರ್ವಣವೇದ, ನಿಶ್ಯಬ್ದಶಾಸ್ತ್ರ, ಪರಮರಹಸ್ಯ, ಲೈಂಗ್ಯಪುರಾಣಗಳಲ್ಲಿದೆ.

(೨) ಅದ್ಭುತಯುಗದಲ್ಲಿ ಯೋಗಿ ಇರುವನು. ಇವನ ಶಾಸ್ತ್ರಸಾಹಿತ್ಯವೆಂದರೆ ಸಾಮವೇದ, ಗೌಣಶಾಸ್ತ್ರ, ವೀರಾಗಮ ಮತ್ತು ಲಭ್ಯಪುರಾಣಗಳಲು.

(೩) ತಮಂಧಯುಗದಲ್ಲಿ ಸನ್ಯಾಸಿ ಇರುವನು. ಈತನ ಶಾಸ್ತ್ರಸಾಹಿತ್ಯವು ಯಜುರ್ವೇದ, ಸೂಕ್ಷ್ಮಾಗಮ, ಉತ್ತರವಾತುಲತಂತ್ರ, ವೇದಪುರಾಣಗಳಲ್ಲಿದೆ.

(೪) ತಾರಜಯುಗದಲ್ಲಿ ಶ್ರವಣನಿರುವನು. ಈತನ ಶಾಸ್ತ್ರಸಾಹಿತ್ಯವೆಂದರೆ ಋಗ್ವೇದ, ಪಶ್ಯಂತೀಶಾಸ್ತ್ರ, ವಾತುಲ, ಸ್ಕಂದಪುರಾಣಗಳು.

(೫) ತಾಂಡಜ ಯುಗದಲ್ಲಿ ಜೋಗಿ ಇರುವನು. ಇವನ ಶಾಸ್ತ್ರಸಾಹಿತ್ಯವೆಂದರೆ ಪ್ರೌಢಲಕ್ಷಿತ ವೇದ, ಮಧ್ಯಮಶಾಸ್ತ್ರ, ಅಚ್ಯುತ ಪುರಾಣ, ಕಾಮಿಕಾಗಮಗಳು.

(೬) ಭಿನ್ನಜಯುಗದಲ್ಲಿ ಪಾಶುಪತಿ ಇದ್ದಾನೆ. ಈತನ ಶಾಸ್ತ್ರಸಾಹಿತ್ಯವೆಂಬುದು ಉತ್ತರಖಂಡೆಯೆಂಬ ವೇದ, ವೈಖರಿ ಶಾಸ್ತ್ರ, ಪಂಚಾಕ್ಷರೀ ಕಲ್ಪ, ಬ್ರಹ್ಮಾಂಡ ಪುರಾಣಗಳು.

ಈ ಷಡುಶೈವರೆಲ್ಲರೂ ಲಿಂಗಧಾರಿಗಳು. ಇವರು ಕ್ರಮವಾಗಿ ಸ್ಫಟಿಕ ವರ್ಣದ ಲಿಂಗ, ಮಾಣಿಕ್ಯವರ್ಣದ ಲಿಂಗ, ಮಾಂಜಿಷ್ಟವರ್ಣದ ಲಿಂಗ, ಕಪಿಲ ವರ್ಣದ ಲಿಂಗ, ನೀಲವರ್ಣದ ಲಿಂಗ, ಪೀತವರ್ಣದ ಲಿಂಗಗಳನ್ನು ಅಮಳೋಕ್ಯ, ಉತ್ತಮಾಂಗ, ಉರಸೆಜ್ಜೆ, ಕಂಠ, ಕರತಳ ಮತ್ತು ಕಕ್ಷಗಳಲ್ಲಿ ಧರಿಸುವರು. ಈ ಷಡುಶೈವರ ಉಲ್ಲೇಖವು ತಂತ್ರಗಳಲ್ಲಿದ್ದು ಇವರು ಶೈವದಲ್ಲಿರುವ ಪ್ರಭೇದಗಳನ್ನು ಒಪ್ಪುತ್ತಾರೆ. ತಾವು ವೈದಿಕತಾಂತ್ರಿಕರೆಂಬುದನ್ನು ತಮ್ಮ ಪ್ರಮಾಣಶಾಸ್ತ್ರ ಸಾಹಿತ್ಯದಲ್ಲಿ ಹೇಳಿಕೊಂಡಿದ್ದಾರೆ. ಈ ಷಡುಶೈವರು ವೀರಶೈವರಿಂದ ಭಿನ್ನರು. ಇವರೇ ಷಡುದರ್ಶನದವರು. ಶೈವಧರ್ಮಗಳ ಅಭ್ಯಾಸಕ್ಕೆ ಈ ಸ್ಥಲದಲ್ಲಿ ಅವಕಾಶವಿದ್ದುದನ್ನು ಗಮನಿಸಬಹುದು.

ಶೈವ ಷಡುಸ್ಥಲದವರ ಉತ್ಪತ್ತಿಯಲ್ಲಿ ಕುಲಗಳ ಉತ್ಪತ್ತಿಯೊಡನೆ ಶ್ರುತಿಗಳ ಉತ್ಪತ್ತಿಯನ್ನೂ ವಿವರಿಸಲಾಗಿದೆ. ಪರಶಿವನ ಮುಖದಿಂದ ಆಯಾ ಶೈವರಿಗೆ ಬೇಕಾದ ಶ್ರುತಿಗಳು ಜನಿಸಿವೆ.. ಕಾಳಾಮುಖರ ಶಾಸ್ತ್ರಸಾಹಿತ್ಯ ಒಬ್ಬ ಅಧಿಕಾರಿಯಿಂದ ಬಮದರೆ ಸನ್ಯಾಸಿಯ ಶಾಸ್ತ್ರಸಾಹಿತ್ಯ ಮತ್ತೊಬ್ಬ ಅಧಿಕಾರಿಯಿಂದ ಜನಿಸಿದವು. ಶ್ರವಣನ ಸಾಹಿತ್ಯ ಒಬ್ಬ ಅಧಿಕಾರಿಯ ಮುಖದಿಂದ ಬಂದಿದ್ದರೆ ಯೋಗಿಯ ಶಾಸ್ತ್ರಸಾಹಿತ್ಯ ಮತ್ತೊಬ್ಬ ಅಧಿಕಾರಿಯ ಮುಖದಿಂದ ಲಭ್ಯವಾಗಿದೆ. ಜೋಗಿಯ ಶಾಸ್ತ್ರಸಾಹಿತ್ಯ ಒಮ್ಮುಖವಾಗಿ ಬಂದಿದ್ದರೆ ಪಾಶುಪತಶಾಸ್ತ್ರಕುಲಂಗಳ ಉತ್ಪತ್ತಿಯನ್ನು ಹೇಳುವಲ್ಲಿ ಚಿಕ್ಕವೀರಣ್ಣೊಡೆಯರು ವಚನಗಳ ಆಧಾರಕೊಟ್ಟು ಸಮರ್ಥಿಸಿದ್ದಾರೆ. ಸರ್ವಶಾಸ್ತ್ರಗಳಿಗಿಂತಲೂ ಷಟ್‌ಸ್ಥಲಶಾಸ್ತ್ರವೇ ಪರಮವೆಂದು ಹೇಳಿದುದು ಗ್ರಂಥಕರ್ತನ ಅಗಾಧ ಪಾಂಡಿತ್ಯವನ್ನು ಪ್ರದರ್ಶಿಸುತ್ತದೆ.

ಭಕ್ತಜಂಗಮದರಿವಿನ ಸಂಭ್ರಮ ಸ್ಥಲ: ಈ ಸ್ಥಲದಲ್ಲಿ ಆಚಾರ ವಿಚಾರಗಳ ನಾನಾಮುಖಗಳನ್ನು ಚರ್ಚಿಸಲಾಗಿದೆ. ಒಂದೆಡೆ ತಾತ್ವಿಕ ಮಹೋನ್ನತ ವಿಚಾರಳವಟ್ಟಿದ್ದರೆ ಇನ್ನೊಂದೆಡೆ ಅನುಭಾವದ ಹಸುಗೆ ಬೆಸೆದಿರುವುದನ್ನು ಕಾಣುತ್ತೇವೆ. ಮಗುದೊಂದೆಡೆ ನೈತಿಕಾಚಾರಕ್ಕೆ ನೆಲಗಟ್ಟು ಹಾಕಿದ್ದರೆ ಮತ್ತೊಂದು ತಾಣದಲ್ಲಿ ವ್ಯಕ್ತಿಸಮಾಜಗಳ ಬಂಧುರ ಹೊಂದಾಣಿಕೆಯನ್ನು ಹೆಣೆಯಲಾಗಿದೆ. ವ್ಯಕ್ತಿಗತ ಮುಕ್ತಿ, ಸಾಮೂಹಿಕ ಮುಕ್ತಿಗಳ ವಿಚಾರಕ್ಕೆ ಇಲ್ಲಿ ಪ್ರಾಧಾನ್ಯವಿದೆ. ಭಕ್ತ ಯಾರು? ಜಂಗಮ ಯಾರು? ಜಂಗಮಲಿಂಗದ ಆರಾಧನೆ ಭಕ್ತನಿಗೆ ಮುಕ್ತಿಯನ್ನೀಯುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಲಿಂಗವ ಪೂಜಿಸಿ ಲಿಂಗವೇ ಆಗುವ ಅಂಗನ ಮನೋಧರ್ಮವನ್ನು ಈ ಸ್ಥಲದಲ್ಲಿ ಅರಿಯಬಹುದು.

ಐಕ್ಯನ ಪರಿಪೂರ್ಣಸ್ಥಲ: ಈ ಸ್ಥಲದಲ್ಲಿ ಸಾಧಕನಾದ ಭಕ್ತ ಪರಿಪೂರ್ಣ ಸ್ಥಿತಿಗೆ ಬಂದುದನ್ನು ಹೃದಯಂಗಮವಾಗಿ ವಚನಗಳ ಆಧಾರ ಕೊಟ್ಟು ತಿಳಿಸಲಾಗಿದೆ. ಆತ್ಮಜ್ಞಾನ ಅನುಭಾವ ಐಕ್ಯನ ಸ್ಥಿತಿಗೇರುವ ಸಾಧನಗಳು. ದೀಕ್ಷೆ ವೀರಶೈವದಲ್ಲಿ ಬಹು ಮುಖ್ಯವಾದ ವಿಷಯ. ಅದಿಲ್ಲದೆ ಭಕ್ತನಿಗೆ ಅಂಗವಿಲ್ಲ, ಲಿಂಗವಿಲ್ಲ, ಲಿಂಗಾಂಗ ಸಾಮರಸ್ಯವಿಲ್ಲ. ಆದ್ದರಿಂದ ಲಿಂಗದೀಕ್ಷೆ ಮಾಡುವ ಗುರುವಿನ ಲಕ್ಷಣಗಳನ್ನು ಇಲ್ಲಿ ಖಚಿತಪಡಿಸಲಾಗಿದೆ. ಲಿಂಗಾಚಾರಕ್ಕೂ ಶಿವಾಚಾರಕ್ಕೂ ಮುಖ್ಯವಾದ ನಿಷ್ಠೆಯನ್ನು ಇಲ್ಲಿ ಪ್ರತಿಪಾದಿಸಲಾಗಿವೆ. ಜಂಗಮಲಿಂಗ ಸಾಧಕನು ಸ್ವಯಲಿಂಗನಾಗಬಲ್ಲನೆಂದು ಬೋಧಿಸುವ ವಚನಗಳು ಇಲ್ಲಿ ಮಾರ್ಮಿಕವಾಗಿ ಬಂದಿವೆ. ಜಂಗಮ ವ್ಯಕ್ತಿಯಲ್ಲ; ಅದೊಂದು ಅದ್ಭುತ ಶಕ್ತಿ. ಜಂಗಮವೆಂದರೆ ಆಚಾರಸಹಿತ ಅರಿವು. ಬಸವಣ್ಣನೊಬ್ಬ ವೀರಶೈವದ ಜೀವಜೀವಾಳ, ಯುಗಪುರುಷ. ಅವನಲ್ಲಿ ಅರಿವು ಆಚಾರಗಳ ಸಮಸಮನ್ವಯಗೊಂಡಿವೆ. ಇದನ್ನರಿತು ಆಚರಿಸುವವನೇ ಪರಿಪೂರ್ಣಶರಣ. ಇವೇ ಮೊದಾಲದ ವಿಷಯಗಳು ಈ ಸ್ಥಲದಲ್ಲಿ ಪರಿಪೂರ್ಣವಾಗಿ ವಿವೇಚಿಸಲ್ಪಟ್ಟಿವೆ. ಲಿಂಗಾಂಗ ಸಾಮರಸ್ಯದ ಮೂಲವನ್ನು ಇಲ್ಲಿ ತಳಸೋಸಿ ನೋಡಲಾಗಿದೆ. ಇಲ್ಲಿ ಆನುಷಂಗಿಕವಾಗಿ ಹಲವಾರು ವೀರಶೈವ ಶರಣ ಶರಣೆಯರ ಸಾಧನೆ ಸಿದ್ಧಿಗಳನ್ನು ಹೇಳಿದುದು ಮಾರ್ಮಿಕವಾಗಿದೆ. ಶರಣರ ಚರಿತ್ರೆಗಳ ಮೇಲೆ ಹೊಸಬೆಳಕು ಬೀಳುವಂತೆ ಬರೆದುದನ್ನು ಗಮನಿಸಬೇಕು.

ಕೃತಿಯ ಫಲಶ್ರುತಿ: `ಪರಮೂಲಜ್ಞಾನ ಷಟ್‌ಸ್ಥಲ ವಚನಗಳು’ ಎಂಬೀ ಕೃತಿಯ ಫಲಪ್ರಾಪ್ತಿಯ ವಿಷಯ ಹೀಗಿದೆ:

ಆ ಮೂಲ ಜ್ಞಾನಾನಂದವೆಂಬ ಷಡುಸ್ಥಲ;
ವೇದಾಂತಿಗೆ ವೇದ್ಯವ ಕೊಡುವದು.
ಆರೂಢನಿಗೆ ರೂಪಕೆಯ ಕೊಡುವದು.
ವೈದ್ಯನಿಗೆ ಪ್ರಸಿದ್ಧವ ಕೊಡುವದು.
ವೈಯಾಕರಣಿಗೆ ಶಬ್ದ ಸಾರವ ಕೊಡುವದು.
ಕವಿಗಮಕಿ ವಾದಿವಾಗ್ಮಿಗಳಿಗೆ ಭರಿತವಾಕುಗಳ ಕೊಡುವದು.

ಹೀಗೆ ಆತ್ಮವಿಶ್ವಾಸದಿಂದ, ಸದ್ಭಾವನೆಯಿಂದ ಶೃತಿಗೊಳಿಸಿದ ಈ ಗ್ರಂಥದುದ್ದಕ್ಕೂ ಪ್ರಾಮಾಣಿಕತೆ, ನಿಷ್ಠೆ, ತತ್ವವಿವೇಚನೆ ಬಂದಿರುವುದನ್ನು ಕೃತಿಯನ್ನು ಇಡಿಯಾಗಿ ಓದಿ ಅರಿಯಬಹುದು.

ಶೈಲಿ: ಚಿಕ್ಕವೀರಣ್ಣೊಡೆಯರು ಸಕಲ ಶಾಸ್ತ್ರಗಳನ್ನು ಓದಿ ತಿಳಿದ ಘನ ವಿದ್ವಾಂಸರು. ಅವರು ಕೊಟ್ಟ ಅಭ್ಯಾಸಪೂರ್ಣ ವಿವರಣೆಗಳು ಅವರ ಪಾಂಡಿತ್ಯಕ್ಕೆ ಉತ್ತಮ ನಿದರ್ಶನವಾಗಿವೆ. ಷಟ್‌ಸ್ಥಲದ ಅಭ್ಯಾಸವನ್ನು ಅವನು ಆಳವಾಗಿ ಮಾಡಿದ್ದನೆಂಬುದಕ್ಕೆ ಅವನ ಸ್ಥಲವಿಂಗಡಣೆಯೇ ಸಾಕ್ಷಿ. ಹೀಗಿದ್ದರೂ ಒಂದೊಂದು ಸಲ ಭಾವೋದ್ರೇಕದಿಂದ ವಿಚಾರಸರಣಿಯ ಎಲ್ಲೆಯನ್ನು ಆತ ಮರೆಯುತ್ತಾನೆ. ಅವನ ವಿಷಯಸಂಗ್ರಹ ದೊಡ್ಡದು. ಒಮ್ಮೆಮ್ಮೆ ಅದನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಈತನಿಗೆ ದುಸ್ತರವೆನಿಸುತ್ತದೆ. ಪ್ರಮಾಣವೆಂದ ವಚನಸಂಪತ್ತನ್ನು ಬಳಸಿಕೊಂಡಂತೆ ಶರಣರ ಸ್ವರವಚನಗಳನ್ನೂ ಈ ಕೃತಿಯಲ್ಲಿ ಬಳಸಲಾಗಿದೆ. ಷಟ್ಪದಿ, ತ್ರಿಪದಿ, ಚೌಪದಿ ಛಂದಸ್ಸಿನಲ್ಲಿರುವ ಎಷ್ಟೋ ಹಾಡುಗಳನ್ನು ಇಲ್‌ಇ ಉದಾಹರಿಸಲಾಗಿದೆ. ತಾನು ಬರೆದ ಗದ್ಯಕ್ಕೆ ಒಮ್ಮೊಮ್ಮೆ ಮುದ್ರಿಕೆಯೊತ್ತಿ ಅದಕ್ಕೂ ವಚನದೀಕ್ಷೆ ಕೊಟ್ಟ ಪ್ರಸಂಗಗಳೂ ಉಂಟು. ಏನೇ ಇದ್ದರೂ ಕೃತಿಕಾರನ ಪಾಂಡಿತ್ಯವನ್ನೂ ತುಲನಾತ್ಮಕ ವಿಚಾರಧಾರೆಯನ್ನೂ ಕಂಡು ತಲೆದೂಗಬಹುದು.

ಒಟ್ಟಿನಲ್ಲಿ, ಈ ಸಂಗ್ರಹಕೃತಿ ಅನೇಕ ಮಹತ್ವಪೂರ್ಣ ಅಂಶಗಳನ್ನೂ ಚಾರಿತ್ರಿಕ ಘಟನೆಗಳನ್ನೂ ಒಳಗೊಂಡಿರುವುದರಿಂದ ಮಹತ್ವದ್ದೆನಿಸಿದೆ. ಸಾಹಿತ್ಯಾಭ್ಯಾಸಿಗಳು, ಸಂಶೋಧಕರು, ತತ್ವವೇತ್ತರು ಈ ಕೃತಿಯನ್ನು ಆಸ್ಥೆಯಿಂದ ಬರಮಾಡಿಕೊಳ್ಳುವರೆಂದು ಆಶಿಸುತ್ತೇನೆ.

ಶರಣಸಾಹಿತ್ಯದ ಸಂಸ್ಕರಣ ಪ್ರಕಟಣ ಕಾರ್ಯಗಳ ಅವಶ್ಯಕತೆಯ ಹಿರಿಮೆಯನರಿದು ನಮ್ಮ ಮಾನ್ಯ ಕುಲಪತಿಗಳಾದ ಡಾ. ಆರ್. ಸಿ. ಹಿರೇಮಠ, ಕುಲಸಚಿವ ಶ್ರೀ ಕೆ.ಪಿ. ಸುರೇಂದ್ರನಾಥ ಮತ್ತು ವ್ಯಾಸಂಗ ವಿಸ್ತರಣ – ಪ್ರಕಟನ ವಿಭಾಗದ ನಿರ್ದೇಶಕರಾದ ಶ್ರೀ ಚೆನ್ನವೀರ ಕಣವಿ ಅವರುಗಳು ಸಹಕಾರ, ಸಲಹೆ, ಪ್ರೋತ್ಸಾಹವಿತ್ತುದಕ್ಕಾಗಿ ಕೃತಜ್ಞತೆಗಳು.

ಈ ಕೃತಿಯನ್ನು ಪ್ರಕಟಿಸುವಲ್ಲಿ ಸಂಶೋಧನ ಸಹಾಯಕರಾದ ಡಾ.ವ್ಹಿ. ಎಸ್‌.ಕಂಬಿ ಹಾಗೂ ಶ್ರೀ ವ್ಹಿ. ಬಿ. ರಾಜೂರ ಅವರು ಶ್ರದ್ಧೆಯಿಂದ ಕಾರ್ಯಮಾಡಿದ್ದಾರೆ. ಶ್ರೀ ಸಂಗಣ್ಣ ಕುಪ್ಪಸ್ತ ಅವರು ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸಿದ್ದಾರೆ. ಇವೆರಲ್ಲರಿಗೂ ನಮ್ಮ ವಂದನೆ.

ಕ.ವಿ. ಮುದ್ರಣಾಲಯದ ಅಧಿಕರಿಗಳಾದ ಶ್ರೀ ಜಿ.ಬಿ. ಮನ್ವಾಚಾರ್ಯರು ಎಂದಿನಂತೆ ಈ ಕೃತಿಯನ್ನು ಅಂದವಾಗಿ ಮುದ್ರಿಸಿದ್ದಾರೆ. ಅವರಿಗೂ ಅವರ ಸಿಬ್ಬಂದಿಗೂ ಸಂಪಾದಕರು ಋಣಿ.

 – ಸಂಪಾದಕರು