೫೧೪

ಅಹಂಕಾರವ ಮರದು,
ದೇಹ

[1] ಗುಣಂಗಳ ಜರದು
ಇಹ ಪರವು ತಾನೆಂದರಿದ ಕಾರಣ,
ಸೋಹಂಭಾವ ಸ್ವಸ್ಥಿರವಾಯಿತ್ತು.
ಸಹಜದ[2] ಉದಯದ ನಿಲವಿಂಗೆ
ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ
ಗೊಹೇಶ್ವರ, ನಿಮ್ಮಶರಣನನುಪಮ ಸುಖಿಯಾಗಿದ್ದನು. ||೧೨೩||

೫೧೫

ವಾಯದ ಪಿಂಡಿಗೆ ಮಾಯದ ದೇವರಿಗೆ
ವಾಯಕ್ಕೆ ವಾಯವ ಬಳಲಿಸದೆ ಪೂಜಿಸಿರೊ.
ಕಟ್ಟುಗುಂಟಕ್ಕೆ ಬಂದ ದೇವರ ಪೂಜಿಸಲು
ಸೂಜಿಯ ಪವಣಿಸಿ ದಾರವ ಮರದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ.         ||೧೨೪||

೫೧೬

[3]ಅನ್ಯರ ಜೀವ[4] ಸೋಂಕದೆ
[5]ತನ್ನರ ಜೀವ[6] ಬಾಧೀಸದೆ, ರವಿಯ ಬೆಳಸಬಳಸದೆ
ಲಿಂಗದ ಬೆಳಸ ತಂದು,
ಜಂಗಮದಲ್ಲಿ ಬಳಸುತ್ತಿಪ್ಪಾತನೆ ಭಕ್ತನು.
ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು.            ||೧೨೫||

೫೧೭

ತ್ರಿವಿಧದ ನಿತ್ಯ[7] ತ್ರಿವಿಧದ ಅನಿತ್ಯವನಾರು ಬಲ್ಲರೊ?
ತ್ರಿವಿಧಕ್ಕೆ ತ್ರಿವಧವನಿತ್ತು
ತ್ರಿವಿಧ ಪ್ರಸಾದವ ಕೊಳಬಲ್ಲಡೆ,
ಆತನ ತ್ರಿವಿಧನಾಥನೆಂಬೆ,
ಆತನ ವೀರನೆಂಬೆ, ಆತನ ಧೀರನೆಂಬೆ,
ಆತನ ಗುಹೇಶ್ವರ ಲಿಂಗದಲ್ಲಿ ಅಚ್ಚ ಪ್ರಸಾದಿ ಎಂಬೆ.      ||೧೨೬||

೫೧೮

ಅಕ್ಕಟಾ ಜೀವನ ತ್ರಿವಿಧವೆ, ಮೂರಕ್ಕೆ ಮುಟ್ಟದೆ ಹೋದೆಯಲ್ಲಾ!
ಬಿಂದುವಿನ ಕೊಡನ ಹೊತ್ತು
ಅಂದಚಂದ[8]ದಿಂದ ಕಟ್ಟಿಆಡುವರಯ್ಯಾ.
ಗುಹೇಶ್ವರ, ನಿರಾಳವೆ ಐದರಿಂದ ಕೆಟ್ಟಿತ್ತು ಮೂರು ಲೋಕ.         ||೧೨೭||

೫೧೯

ಬಿಸುಜಂತೆ ಜವಳಿಗಂಬ ಲೇಸಾಯಿತ್ತು ಮನೆ,
ಲೇಸಾಯಿತ್ತು ಮೇಲುವೊದಿಕೆ.
ಮಗುಳೆಯಂಗಕ್ಕೆ ಕಿಚ್ಚನಿಕ್ಕಿ ಮನೆಯನಿಂಬು ಮಾಡಿದೆ
ಲಿಂಗ ಜಂಗಮಕ್ಕೆ.
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಕಾಣಾ ಗುಹೇಶ್ವರ.       ||೧೨೮||

೫೨೦

ಚಂದ್ರಕಾಂತದ ಗಿರಿಗೆ ಉದಕದ ಸಂಚು,
ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ,
ಪರುಷದ ಗಿರಿಗೆ ರಸದ ಸಂಚ,
ಬೆರಸುವ ಭೇದವಿನ್ನೆಂತೊ?
ಅಪ್ಪುವನು, ಅಗ್ನಿಯನು ಪಕ್ವ[9]ಕ್ಕೆ ತಂದು
ಅಟ್ಟುಂಬ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.       ||೧೨೯||

೫೨೧

ಅನಾದಿಯ ಭ್ರೂಮಧ್ಯದಲೈದು ಕುದುರೆಯ ಕಟ್ಟಿದ,
ಕಂಬ ಮುರಿಯಿತ್ತು.
ಎಂಟಾನೆ ಬಿಟ್ಟೋಡಿದವು, ಹದಿನಾಱು ಪ್ರಜೆ ಬೊಬ್ಬೆಯನಿಡುತ್ತಿದ್ದರು.
ಶತಪತ್ರ ಕಮಲ ಕರ್ಣಿಕಾಮಧ್ಯದಲ್ಲಿ
ಗುಹೇಶ್ವರಲಿಂಗವು ಶಬ್ದ ಮುಗ್ಧವಾಗಿದ್ದನು.     ||೧೩೦||

ಇಂತೆಂಬ ಪರಶಿವನ ನಿರೂಪದಲ್ಲಿಯೆ ಹದಿನಾರು ಪ್ರಜೆ ಎಂದಡೆ ಏನೆಂಬ ಪರಿ ಎಂದಡೆ ಶರಣಸತಿ ಲಿಂಗಪತಿಗಳಿಬ್ಬರ ಚಿದಾಮೃತ ಬಿಂದು ಒಂದು ಷೋಡಶ ಮುಖ ಷೋಡಕ ಕಳೆಯಾಗಿಪ್ಪುದು. ಆ ಒಂದು ಷೋಡಶ ಮುಖ ಎಂದಡೆ ಕಳೆಯೆ ಹದಿನಾರು ಷಡುಸ್ಥಲಂಗಳಾಗಿ ಹಿಮದಣ ಮಹಾ ಮೂಲ ಪ್ರಸಂಗಗಳನು ತೋರಿಕೊಡುತ್ತಿಹವು. ಭೂತ ಭವಿಷ್ಯದ್ವರ್ತಮಾನಂಗಳನು ತೋರಿ ಕೊಡುತ್ತಿಹವು. ಅತೀತ ಅನಾಗತ ವರ್ತಮಾನವೆಂಬವನು ತೋರಿ ಕೊಡುತ್ತಿಹವು. ಹದಿನಾರು ಷಡುಸ್ಥಲಂಗಳೊಳಗೆರಡು ಷಡುಸ್ಥಲಂಗಳೊಳಗೆರಡು ಫಲಂಗಳೆ ಲಿಂಗ ಶರಣರಿಬ್ಬರಿಗಾದಿಯಾಗಿ ನಿಂದವು. ಹದಿನಾಲ್ಕು ಷಡುಸ್ಥಲಂಗಳೆ ಪ್ರಮಥರಿಗಾದಿಯಾಗಿ ನಿಂದವು. ಆ ಎರಡು ಸ್ಥಲಂಗಳೊಳಗೆ ನಿಂದು ನುಡಿಯಬಾರದು, ನಡೆಯಬಾರದು. ಮಾಟ ಕೂಟಂಗಳ ಮಾಡಿ ಜಯಿಸಬಾರದು. ಹದಿನಾಲ್ಕು ಷಡುಸ್ಥಲಂಗಳೊಳಗೆ ಸಿಕ್ಕಿದ ಭಕ್ತ ಮಾಹೇಶ್ವರರ ಪ್ರಸಾದಿ ಪ್ರಾಣಲಿಂಗ ಶರಣ ನೈಕ್ಯನೆಂಬಾರು ತಂಡದವರುಗಳಲ್ಲಿ ಶಿವನಿಪ್ಪನು. ಮನ ಮಾಯೆ ಶ್ರುತಿಗಳು, ಷಡುದೇವತೆ, ಷಡು ಸಮಯದವರು ಮೊದಲಾದ ನಾಲ್ಕು ತಂಡದ ಜೀವರುಗಳಲ್ಲಿ ಪರಶಿವನಿಲ್ಲ. ಇಂತೆಂಬ ಸೂತ್ರಕ್ಕೆ ಸಾಕ್ಷಿ.

೫೨೨

ಗುರುವಾದಡೆಯೂ ತನ್ನ ಶಿಷ್ಯನ ಕೈಯಲ್ಲಿ
ಜಂಗಮಕ್ಕೆ ಮಾಡಿಸೆ, ತಾ ಮಾಡಿಸಿಕೊಂಡನಾದಡೆ
ಶ್ವಾನವಡಲ ಹೊರದಂತೆ.
ಅದು ಹೇಂಗೆಂದಡೆ:
ತನ್ನ ಲಿಂಗವನಾ ಶಿಷ್ಯಂಗೆ ತಾನು ವ್ರತಗೇಡಿಯಾಗಿ ಹೋಹಲ್ಲಿ,
ಆ ಜಂಗಮವೆ ಸಾಕ್ಷಿಯಾಗಿದ್ದು
ವಿಭೂತಿ ವೀಳಯವ ತೆಕ್ಕೊಂಡು
ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳದು ಇರಲ್ಪಟ್ಟರಾಗಿ,
ಆ ಜಂಗಮಕ್ಕೆ ಮಾಡಿಸದೆ ಗುರುವಾದಡೂ ಆಗಲಿ
ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ
ಜಂಗಮದ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ.
ಅವರ ಬರುಕಾಯರೆಂಬೆ, ಬರುಮುಖಿಗಳೆಂಬೆ,
ಅಂಗಹೀನರೆಂಬೆ, ಲಿಂಗಹೀನರೆಂಬೆ
ಜಂಗಮದಲ್ಲಿ ಗುಣವ ನೋಡದೆ, ಅವಗುಣವನೋಡದೆ,
ರೂಪ ನೋಡದೆ, ಕೂರೂಪವ ನೋಡದೆ
ಕುಲವನೋಡದೆ, ಛಲವ ನೋಡದೆ
ಆಸೆಯ ನೋಡದೆ, ಕೋಪವ ನೋಡದೆ
ಶಾಂತವ ನೋಡದೆ, ವಿವೇಕವ ನೋಡದೆ
ಅವಿವೇಕದ ನೋಡದೆ, ಮಲಿನವ ನೋಡವೆ
ಅಮಲಿನವ ನೋಡದೆ, ರೋಗವ ನೋಡದೆ
ನಿರೋಗವ ನೋಡದೆ, ನಿರಾಸೆಯ ನೋಡದೆ
ಅಂಗದ ಮೇಲಣ ಲಿಂಗವ ನೋಡಿ ಜಂಗಮವೆಂದು ಭಾವಿಸಿ
ಜಸಕಲ ಪದಾರ್ಥಂಗಳಂ ಮಾಡಿ ನೀಡಿ
ಪಾದೋದಕ ಪ್ರಸಾದವ ಕೊಂಬ ಶರಣರ
ಬಸವಣ್ಣನೆಂಬೆ ಕಾಣಾ ಕೂಡಲಚನ್ನಸಂಗಮದೇವಯ್ಯಾ.           ||೧೩೧||

೫೨೩
ಅಚ್ಚ ಪ್ರಸಾದಿ ಅಚ್ಚಪ್ರಸಾದಿಗಳೆಂದು
ನಿಚ್ಚಕ್ಕೆ ನಿಚ್ಚ, ಹುಸಿವ ಹುಸಿಗಳ ಕಂಡೆವಯ್ಯಾ
ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ
ಅರ್ಪಿತವ ಮಾಡಬೇಕು[10].
ಈ ಅರ್ಪಿತ ಮುಖವನು ಮರದಿರಲ್ಲ?
ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ
ಹಿರಿಯರಿಗೆ ಭಂಗ ನೋಡಾ ಗುಹೇಶ್ವರಾ.      ||೧೩೨||

೫೨೪

ಹಾದಿಯಲ್ಲಿ ಶಿವದಾರವ ಕಂಡೆ,
ಬೀದಿಯಲ್ಲಿ ಬಿದ್ದ ಸೆಜ್ಜೆಯ ಕಂಡೆ,
ಪ್ರಾಣಲಿಂಗವ ಬೈಚಿಟ್ಟು ಕೊಂಡೆ.
ಕಾಯವಳಿದು ಜೀವ ನಿಮ್ಮಲ್ಲಿಗೆ ಬಂದಡೆ
ಎನ್ನಿಂದ ವ್ರತಗೇಡಿಗಳಿಲ್ಲ ಗುಹೇಶ್ವರಾ.          ||೧೩೩||

೫೨೫

ರೂಪಾದಿ ಸರ್ವಗತ
ರೂಪ ಶಿವನಲ್ಲ ನಿಜ
ರೂಪ ಜಂಗಮಲಿಂಗದೊಳಪ್ಪನು     ||ಪಲ್ಲವ||

“ಭೂಮಿಜನಯನ್ದೇವತಾಮಸಾದಿಗಳಖಿಳ
ತಾಮಸಾದಿಯಲಿ ಶಿವನಿರುತಿಪ್ಪಡೆ
ಸೀಮೆನಾಮಗಳು ಕೆಲ ಸಾಮಾನ್ಯ ಜಾತಿಹಿರಿ
ದಾ ಮಹಾ ಪ್ರಳಯಂಗಳೇಕಾದವು

ಸರ್ವಗತ ಶಿವನಹಡೆ ಸರ್ವಕೆ ಜನನಮರಣ
ನಿರ್ವಿಕಲ್ಪಂ ಕಲ್ಪ ಪುಣ್ಯ ಪಾಪ
ಸರ್ವವೇತಕೆ ಸುಖದ ಗರ್ವವೇತಕೆ ದುಃಖ
ದುರ್ವ್ಯಸನ ದುರಿತಂಗಳೇಕಾದವು

ಭೇದವಿಲ್ಲದೆ ಜೀವನಾದಿಯಲಿ ಶಿವನಿಪ್ಪ
ಡಾ ಜೀವವೊಂದೊಂದ ಕೊಲಲೇತಕೆ
ಆದಡೆಂತೆನೆ ಪುರುಷ ವೇದಿಸಲು ಲೋಹ ಹೊ
ನ್ನಾದತೆಱ ಲಿಂಗಸಂಗಿಗಳಲಿಹನು   

ಬೆಳೆದ ಬೆಳಸುಗಳೊಳಗೆ ಬೆಳೆಯಬಿತ್ತಿದನಿಹನೆ
ಹಲವು ಚಿತ್ರವ ಬರೆದನವರೊಳಿಹನೆ
ಅಳವಟ್ಟ ಕೆಲಸಂಗಳೊಳಗಿಹನೆ ಬಿನ್ನಾಣಿ
ತಿಳಿದು ನೋಡಲು ನಿತ್ಯ ನಿಜದೊಳಿಹನು      

ಎಲ್ಲ ಜೀವಂಗಳೊಳಗಿಲ್ಲ ಶಿವಸದ್ಭಕ್ತ
ರಲ್ಲಿ ಮಾಹೇಶ ಪ್ರಸಾದಿಗಳಲಿ
ತಲ್ಲಿಂಗ ಪ್ರಾಣಾಂಗದಲ್ಲಿ ಶರಣೈಕ್ಯ ನಿಜ
ದಲ್ಲಿ ಕೂಡಲಚನ್ನಸಂಗ ಭರಿತ        

೫೨೬

ಆಕಾಶವ ನುಂಗಿದ ಸರ್ಪನ ಫಣಾಮಣಿಯೊಳಗಣ ಕಪ್ಟೆ
ವಾಯುವನಲನ ಸಂಚವ ನುಂಗಿತ್ತಿದೇನೊ?
ರೂಹಿಲ್ಲದ ತಲೆಗೆ ಮೊಲೆ ಮೂರಾಯಿತ್ತ ಕಂಡೆ.
ಉಂಡಾಡುವ ಶಿಶುವಿನ ಕೈಯಲಿ ಮಾಣಿಕದಾರತಿಯ ಕಂಡೆ.
ಕಾಯವಿಲ್ಲದ ಹೆಣನು ವಾಯುವಿಲ್ಲದೆ
ಜವನೆಳದೊಯ್ವನೆಂಬ ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ. ||೧೩೫||

೫೨೭

ಆಕಾಶವ ಕಪ್ಪೆ ನುಂಗಿದಡಾಗಲೆ ರಾಹು ಹತ್ತಿತ್ತಲ್ಲಾ.
ನೋಡಿರೆ ಅಪೂರ್ವವ, ಅತಿಶಯವ
ಅಂಧಕ ಹಾವನೆ ಹಿಡಿದ,
ಇದು ಕಾರಣ ಲೋಕಕ್ಕೆ ಅರುಹದೆ ನಾನರಿದೆನು ಗುಹೇಶ್ವರಾ.     ||೧೩೬||

೫೨೮

ಉಂಡಡೇನೋ ಉಣದಿರ್ದಡೇನೋ,
ಶೋಭಿತವೇನೋ, ಅಶೋಭಿತವೇನೋ,
ಹುಟ್ಟುವುದಿಲ್ಲ, ಹೊಂದುವುದಿಲ್ಲಾಗಿ
ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರ.  ||೧೩೭||

೫೨೯

ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ.
ಎಂಟರಲ್ಲಿ ಕಂಡುದಿಲ್ಲ, ಒಮದರಲ್ಲಿ ನಿಂದುದಿಲ್ಲ.
ಏನೆಂದೆಂಬೆ, ಎಂತೆಂದೆಂಬೆ.
ಕಾಯದಲ್ಲಿ ಅಳಿದುದಿಲ್ಲ, ಜೀವದಲ್ಲಿ ಉಳಿದುದಿಲ್ಲ.
ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ.            ||೧೩೮||

೫೩೦

ಶಬ್ದ, ಸ್ಪರ್ಶ, ರೂಪು, ರಸ, ಗಂಧ
ಪಂಚವಿಷಯ ಸಂಗತವಾದವುದೆಂದಡೆ:
ಶಬ್ದಗುರು, ಸ್ಪರ್ಶಲಿಂಗ, ರೂಪು ಜಂಗಮ
ರಸ ಪ್ರಸಾದ, ಗಂಧ ಅನುಭಾವ.
ಇಂತೀ ಪಂಚವಿಂಶತಿಯವನಲ್ಲವೆನಬಲ್ಲವನಾಗಿ ಬಸವಣ್ಣನು.
ಮನ, ಬುದ್ಧೀ, ಚಿತ್ತಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ:
ಮನ ಧ್ಯಾನ, ಬುದ್ಧಿವಂಚನೆ ಇಲ್ಲದುದು.
ಚಿತ್ತದಾಸೋಹ, ಅಹಂಕಾರ ಜ್ಞಾನ
ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು.
ಸತ್ವ, ರಜ, ತಮವೆಂಬೀ ತ್ರಿಕರಣವಾವುದೆಂದಡೆ:
ಸತ್ವಶುದ್ಧ, ರಜಸಿದ್ದ, ತಮಪ್ರಸಿದ್ಧ
ಇಂತೀ ತ್ರಿವಿಧ ಸನ್ನಹಿತನಾಗಿ ಬಸವಣ್ಣನು.
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವಾವುದೆಂದಡೆ:
ಕಾಮಪೂಜೆ, ಕ್ರೋಧ ಅನುಮಿಷ
ಲೋಭ ಭಕ್ತಿ, ಮೋಹ ಅಷ್ಟವಿದಾರ್ಚನೆ
ಮದ ಷೋಡಶೋಪಚಾರ
ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು.
ಮಹಾದೇವನು ಬಸವಣ್ಣನು.
ಮಹಾಲಿಂಗವು ಬಸವಣ್ಣಂಗೆ
ಮತ್ತೇನು ಅಪ್ರತಿಮ ಕಾಣಾ ಕಲಿದೇವಯ್ಯಾ.   ||೧೩೯||

೫೩೧

ವೇದ ಸಾಕು ಸಾಕು, ಶಾಸ್ತ್ರವಂತಿರಲಿ,
ಆಗಮ ಸಾಕು ಸಾಕು, ಪುರಾಣವಂತಿರಲಿ,
ಸಾಧಿಸಿದೆನು ಸದ್ಭಕ್ತರ, ಸದುಹೃದಯರ,
ಲಿಂಗ ಜಂಗಮದ ಪ್ರಸಾದವ ಸಜ್ಜನ [11]ಸದ್ಧರ್ಮರ[12]
ಕೂಡಲಸಂಗಮದೇವಾ.    ||೧೪೦||

ಇಂತೆಂಬ ಹದಿನಾಲ್ಕು ಷಡುಸ್ಥಲದನುಭವಂಗಳೆಲ್ಲವನು ವರದು ತೋರಿ ಕೊಟ್ಟಂಥಾ ಬಸವ, ಪ್ರಭು, ಸಿದ್ಧರಾಮ, ರೇವಣ್ಣ, ಮಡಿವಾಳ, ಚನ್ನಬಸವಣ್ಣ ನಿಂತಪ್ಪ ಮಹಾಗುರುಸ್ವಾಮಿಗಳ ಪ್ರಮಥಗಣ, ರುದ್ರಗಣ, ಭಕ್ತಗಣ ಮುಖ್ಯವಾದ ಸಕಲ ಪುರಾತನರೆಲ್ಲಾ ಸ್ತೋತ್ರಂಗಳ ಮಾಡುತ್ತಿಹರಾವಾಗವು ಇಂತೆಂಬ ಸೂತ್ರಕ್ಕೆ ಸಾಕ್ಷಿ.

೫೩೨

ಗುರುವೆ ಶರಣು ಎನ್ನ ಗುರವೆ ಶರಣು ಎನ್ನ
ಪರಿಭವವ ಕಳೆದ ಶಿಕ್ಷಾಗುರುವೆ ಶರಣು          ||||

ಒರೆದೊರೆದು ಭಕ್ತಿಯನು ಬಗೆದೋಱೆ ಮರವೆಯನು
ಹಱೆದು ಸಂಸಾರವನು ಕೆಲಕೊತ್ತಿಸಿ
ಇರುಳು ಹಗಲೆನ್ನದನವರತ ಬೋಧಿಸಿಯೆನ್ನ
ಪರಮಸುಖದೊಳಗಿರಿಸಿ ಪೂರೆದ ಗುರುವೆ    

ಸಿರಿಗಂಧವನು ಕಡಿದು ಕೊರೆದು ಸಣ್ಣಿಸುವಂತೆ
ಕರುಣದಿಂದೆನ್ನ ಪೂರ್ವಾಪರವನು
ಶಿರವ ಹಿಡಿದೆತ್ತಿ ತೋರಿಸಿ ಭಕ್ತಿ ಸಂಪದವ
ದೊರೆಕೊಳಿಸಿ ಪಾಲಿಸಿದ ಪರಮಗುರುವೆ.[13]    ೨

ಅಂಗಲಿಂಗದ ನೋಟವನು ಪ್ರಾಣಭಾವದೊಳು
ಹಿಂಗದಿರಿಸುವ ಭೇದವನು ತೋರಿಸಿ
ಅಂಗದಾಚಾರ ಸ್ಥಳದೊಳು ನೆಲೆಸಿರುತಿಪ್ಪ
ಸಂಗಿ ಚಿನ್ಮೂರ್ತಿ ಶ್ರಿ ಗುರುಲಿಂಗವೆ೧.          

ಕಾಯಪ್ರಸಾದವಿದು ಪ್ರಾಣಪ್ರಸಾದವಿದು
ಭಾವಪ್ರಸಾದವಿದುಯೆಂದು ತೊರಿ
ಆಯಸವ ಬಿಡಿಸಿಯೆ ನಿರಾಯಸವ ತೋರಿಸಿದ
ಮಾಯಾರಹಿತಯೆನ್ನ ಗುರುಲಿಂಗವೆ[14].        

ಒಳಗನರುಹಿಸಿ ತಿಳುಹಿ ಹೊಱಗ ಬೋಧಿಸಿ ನಿಲಿಸಿ
ಒಳಗುಹೊರಗೆಂದೆಂಬವೆರಡ ಕೆಡಿಸಿ
ಕಳೆಯಲಿಮಗದೊಳೊಚ್ಚ ತವನೊಪ್ಪುಗೊಳಿಸಿದ
ಕರುಣಿ ಗುರುಪುರದ ಮಲ್ಲಿನಾಥ ಗುರವೆ[15]     

೫೩೩

ಸುಖ ಒಂದು ಕೋಟಾನು ಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖ ಒಂದುಕೋಟಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ.
ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ ಬಸವಣ್ಣಾ ಬಸವಣ್ಣಾ ಎನುತ
ನೆನವುತಿದೇನೆ ಕಾಣಾ ಕಲಿದೇವಯ್ಯ.           ||೧೪೨||

೫೩೪

ಬಸವಣ್ಣನೆ ಗುರು, ಪ್ರಭುವೆ ಲಿಂಗ,
ಸಿದ್ಧರಾಮೇಶ್ವರನೆ ಜಂಗಮ, ಮಡಿವಳಯ್ಯನೆ ತಂದೆ,
ಚನ್ನಬಸವಣ್ಣನೆ ಪರಮಾಧ್ಯರು.
ಇನ್ನು ನಾನು ಶುದ್ಧನಾದೆನು ಕಾಣಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನ.         ||೧೪೩||

ಇನ್ನು ಷಡಾಂಗಕ್ಕೆ ಷಡ್ವಿಧ ಲಿಂಗಂಗಳನುಂಟುಮಾಡಿಕೊಂಬ ಲಕ್ಷಣಮಂ ಹದಿನಾಲ್ಕು ಷಡುಸ್ಥಲದ ಪ್ರಾಜ್ಞಂಗೆ ಬಿನ್ನಹಂ ಮಾಡಿಹೆನದು ಹೇಗೆಂದಡೆ: ಸ್ಥೂಲ ತನುವಿನ ಹಂಗ ಬ್ರಹ್ಮಂಗೆ ಹಾಕಿದಾಗವೆ ಭಕ್ತಿ ಸ್ಥಲವಾಯಿತ್ತು. ಸೂಕ್ಷ್ಮ ತನುವಿನ ಹಂಗ ವಿಷ್ಣುವಿಂಗೆ ಹಾಕಿದಾಗವೆ ಮಹೇಶ ಸ್ಥೂಲವಾಯಿತ್ತು. ಕಾರಣ ತನುವಿನ ಹಂಗ ರುದ್ರಂಗೆ ಹಾಕಿದಾಗವೆ ಪ್ರಸಾದಿ ಸ್ಥಲವಾಯಿತ್ತು. ನಿಃಕಾಯದ ತನುವಿನ ಹಂಗ ಈಶ್ವರಂಗೆ ಹಾಕಿದಾಗವೆ ಪ್ರಾಣಲಿಂಗಿ ಸ್ಥಲವಾಯಿತ್ತು. ನಿರಂಜನ ತನುವಿನ ಹಂಗ ಸದಾಶಿವಂಗೆ ಹಾಕಿದಾಗವೆ ಶರಣ ಸ್ಥಲವಾಯಿತ್ತು. ನಿರವಯ ತನುವಿನ ಹಂಗ ವ್ಯೂಮಾತೀತಂಗೆ ಹಾಕಿದಾಗವೆ ಐಕ್ಯಸ್ಥಲವಾಯಿತ್ತು. ಈ ಷಡಾಂಗದ ಹಂಗ ಷಡುದೇವತೆಗಳು ಅಳಡವಡಿಸಿಕೊಂಡು ಹೋಗಿ ಸರ್ವ ಜೀವರೊಳಗಡಗಿದ ಬಳಿಕ ಉಳಿದ ನಿಜಸ್ಥಲ ತನುವಿಂಗೆ ಆಚಾರಲಿಂಗ. ಉಳಿದ ನಿಜ ಸೂಕ್ಷ್ಮ ತನುವಿಂಗೆ ಗುರುಲಿಂಗ. ಉಳಿದ ನಿಜ ಕಾರಣ ತನುವಿಂಗೆ ಶಿವಲಿಂಗ ಉಳಿದ ನಿಃಕಾಯಕ್ಕೆ ಜಂಗಮ ಲಿಂಗ. ಉಳಿದ ನಿಜ ನಿರಂಜನ ತನುವಿಂಗೆ ಪ್ರಸಾದ ಲಿಂಗ. ಉಳಿದ ನಿಜ ನಿರವಯಲತನುವಿಂಗೆ ಮಹಾಲಿಂಗ. ಇಂತಾದ ಭಕ್ತ ಮಾಹೇಶ್ವರರು ಮಹಾಲಿಂಗದಲ್ಲಿ ಬಯಲಾಗುತ್ತಿಹರು. ಇಂತೆಂಬನುಭವಕ್ಕೆ ಸಾಕ್ಷಿ.

೫೩೫

ಸ್ಥೂಲದ ಬ್ರಹ್ಮನಳವಡಿಸಿಕೊಂಡನು.
ಸೂಕ್ಷ್ಮವ ವಿಷ್ಣುವಳವಡಿಸಿಕೊಮಡನು.
ಕಾರಣವ ರುದ್ರನಳವಡಿಸಿಕೊಂಡನು.
ನಿಃಕಾಯವ ಈಶ್ವರನಳವಡಿಸಿಕೊಂಡನು.
ನಿರಂಜನವ ಸದಾಶಿವನಳವಡಿಸಿಕೊಂಡನು.
ನಿರವಯವ ವ್ಯೋಮಾತೀತನಳವಡಿಸಿಕೊಂಡನು.
ಈ ಷಡುಸ್ಥಲದವರೆಲ್ಲಾ ಬಯಲನಳವಡಿಸಿಕೊಂಡು
ಬಯಲಾಗಿ ಹೋದರು ಗುಹೇಶ್ವರಾ
ನಿಮ್ಮ ಶರಣ ನಿಜಲಿಂಗಾಂಗವಾಗಿರ್ದನು.      ||೧೪೪||

ಇನ್ನೊಂದು ಪ್ರಕಾರದ ಲಿಂಗಧಾರಣಂಗಳ ಜಂಗಮ ಪ್ರಸಾದವ ಲಿಂಗಕ್ಕೆ ಇತ್ತಾರೋಗಿಸಿ ಸಜ್ಜನ, ಸದ್ಭಾವ, ಸದಾಚಾರದೊಳಗಿರ್ದ ಭಕ್ತ ಮಾಹೇಶ್ವರರಿಗೆ ಬಿನ್ನಹಂ ಮಾಡಿಹೆನದು ಹೇಗೆಂದಡೆ: ಭಕ್ತನ ಬ್ರಹ್ಮವೆಂಬ ಕಕ್ಷೆಯಲ್ಲಿ ಆಚಾರ ಲಿಂಗ ಗ್ರಹಣವಾಗಿಹುದು. ಮಾಹೇಶ್ವರನ ವಿಷ್ಣುವೆಂಬ ಕರಸ್ಥಲದಲ್ಲಿ ಗುರು ಲಿಂಗಗ್ರಹಣವಾಗಿಹುದು. ಪ್ರಸಾದಿಯ ರುದ್ರನೆಂಬ ಉತ್ತಮಾಂಗದಲ್ಲಿ ಶಿವಲಿಂಗ ಗ್ರಹಣವಾಗಿಹುದು. ಪ್ರಾಣಲಿಂಗಾಂಗಿಯ ಈಶ್ವರನೆಂಬ ಅಮಳೈಕ್ಯದಲ್ಲಿ ಜಂಗಮ ಲಿಂಗ ಗ್ರಹಣವಾಗಿಹುದು. ಶರಣನ ಸದಾಶಿವನೆಂಬ ಮುಖ ಸೆಜ್ಜೆಯಲ್ಲಿ ಪ್ರಸಾದ ಲಿಂಗ ಗ್ರಹಣವಾಗಿಹುದು. ಇಂತಾದ ಕಾರಣ ಷಡುದೇವತೆ ಸಾದಾಖ್ಯ ನಾಯಕರು ಬಯಲೆಂಬ ಮಾಯಾಮಿಥ್ಯೆಯಲ್ಲಿ ಹುಟ್ಟಿ ಬಯಲೆಂಬ ಮಿಥ್ಯವನೆ ಪೂಜಿಸಿ ಬಯಲಾಗಿ ಹೋದರು. ಹೋದರಾಗಿ ಷಡುಸ್ಥಲ ಸಾಧಕರು ನಿತ್ಯವನೆ ಪೂಜಿಸಿ ಮಿಥ್ಯವನಳಿದು ಸುಖಿಯಾಗಿರ್ದರು. ಇಂತೆಂಬ ವ್ಯಾಖ್ಯಾನಂಗಳಿಗೆ ಸಾಕ್ಷಿ.

೫೩೬

ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ.,
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ.
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ,
ಸರ್ವಾಂಗ[16]ದಲ್ಲಿ ಲಿಂಗವ ಧರಿಸಿಕೊಂಡಾತ ಉಪಮಾತೀತ.
ಇವರೆಲ್ಲರು ಬಯಲಲ್ಲಿ ಹುಟ್ಟಿ ಬಯಲಿಲ್ಲ ಬೆಳದು
ಬಯಲನೆ ಪೂಜಿಸಿ ಬಯಲಾಗಿ ಹೋದರು.
ನಾನು ನಿತ್ಯವ ಪೂಜಿಸಿ ಮಿಥ್ಯವನಳಿದು ಅರಿವಿನಲ್ಲಿ
ಸುಖಿಯಾಗಿರ್ದೆನು ಕಾಣಾ ಗುಹೇಶ್ವರಾ.        ||೧೪೫||


[1] ವ (೨೫೭)

[2] x (ಬ)

[3] ಅನ್ಯರಜವ (ಬ)

[4] ಅನ್ಯರಜವ (ಬ)

[5] ತನ್ನರಜವ (ಬ)

[6] ತನ್ನರಜವ (ಬ)

[7] ಕಟ್ಟಾ (ಬ)

[8] ಕಟ್ಟಾ (ಬ)

[9] ಕ್ಷ (೨೫೭)

[10] + ಲಿಂಗಕ್ಕೆ (ಅವಚಂ)

[11] ಸದರ್ಥರ(ಬ)

[12] ಸದರ್ಥರ(ಬ)

[13] + ಶರಣು(ಬ)

[14] + ಶರಣು(ಬ)

[15] + ಶರಣು(ಬ)

[16] + ಸೆಜ್ಜೆ(ಬ)