೪೯೪

ದಾರಿಗೊಂಡು ಹೋಗುವರೆಲ್ಲಾ ನೀವು ಕೇಳಿರೆ.
ಮೂರು ಬಟ್ಟೆ ಕೂಡಿದ ಠಾವಿನಲ್ಲಿ ಒಬ್ಬ ಹೆಮ್ಮಾರಿ ಇದ್ದಾಳೆ.
ಆ ಮಾರಿಯ ಬಾಯೊಳಗೆ ಮೂರು

[1]ಘಟ್ಟಗ[2]ಳಿಪ್ಪುವು.
ನಂಜಿನ ಸೋನೆ ಸುರಿವುತ್ತಿಪ್ಪುದು.
ಕಾಡುಗೊಣನ[3] ಮುಖದಲ್ಲಿ ಕತ್ತಲೆ ಕಾಣಲೀಸದು.
ಐದು ಬಾಯ ಹುಲಿಯಾಗುಳಿಸುತ್ತಿಪ್ಪುದು.
ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು ನೋಡಿರಣ್ಣಾ.||೧೦೪||

೪೯೫

ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ,
ಈ ಎರಡರ ನಡುವೊಂದಾಯಿತ್ತು ನೋಡಾ.
ಹುಲಿಯಲ್ಲ, ಹುಲ್ಲೆಯಲ್ಲ
ಕೆಲದಲ್ಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದರೆ
ಎಲೆ ಮರೆಯಾಯಿತ್ತು ಕಾಣಾ ಗುಹೇಶ್ವರಾ.     |೧೦೫||

೪೯೬

ವೇದವೆಂಬುದು ಓದಿನ ಮಾತು,
ಶಾಸ್ತ್ರವೆಂಬುಂದು ಸಂತೆಯ ಸುದ್ಧಿ,
ಪುರಾಣವೆಂಬುದು ಪುಂಡರ ಗೋಷ್ಠಿ,
ಆಗಮ ತರ್ಕವೆಂಬುದು ತಗರ ಹೋರಟೆ,
ಭಕ್ತಿ ಎಂಬುದು ತೋರುಂಬುವ ಲಾಭ,
ಗುಹೇಶ್ವರನೆಂಬುದು ನಿಜದರಿವಿನ ಘನವು.    ||೧೦೬||

೪೯೭

ಗುರುಸಾಹಿತ್ಯ[4]ವೆಂಬುವ[5] ಸಾಹಿತ್ಯವಾಗಿ,
ಹದಿನಾಲ್ಕು ತೆರೆದ ಭಕ್ತಿಸಾಧ್ಯವಾಯಿತ್ತು.
ಅಷ್ಟವಿಧಾರ್ಚನೆ ಸಾಹಿತ್ಯವಾಯಿತ್ತು.
ಘೋಡಶ ನಿಜವು ಸಾಹಿತ್ಯವಾಯಿತ್ತು.
ತ್ರಿವಿಧದ ಅರಿವು ಸಾಹಿತ್ಯವಾಯಿತ್ತು.
ಮಹಾಲಿಂಗದ [6]ನಿಲವು[7] ಸಾಧ್ಯವಾಯಿತ್ತು.
ಮಹಾಜಂಗಮದ ನಿಲವು ನಿತ್ಯವಾಯಿತ್ತು.
ನಿಮ್ಮ ನಂಬುಗೆವಿಡಿದು ಬಸವಣ್ಣನ ಪ್ರಸಾದವಕೊಂಡು ನಿತ್ಯವಾಯಿತ್ತು.
ನೀವು ಬಸವಣ್ಣನಿಂದ ಆದಿರಾಗಿ
ನಾನು ಬಸವಣ್ಣ, ಬಸವಣ್ಣಾ ಎನುತಿರ್ದೆನು
ಕಾಣಾ ಕಲಿದೇವಯ್ಯಾ.      ||೧೦೭||

೪೯೮

ಆಚಾರದರಿವು ಆಗಮವ ಕೂಡಿಕೊಂಡಿಹುದು,
ಗುರುವಿನಾಚಾರದರಿವು ನಿಷ್ಠೆಯ ಕೂಡಿಕೊಂಡಿಹುದು,
ನಿಃಕ್ರಿಯೆಯ ಕೂಡಿಕೊಂಡಿಹುದು.
ಈ ಚತುರ್ವಿಧದೊಳಗಾವಂಗವು ಅಲ್ಲ.
ಲಿಂಗದಾಚಾರದರಿವು ಕ್ರಿಯೆಯ ಕೂಡಿಕೊಂಡಿಹುದು.
ಸಮಯಾಚಾರದರಿವು ನಿಃಕ್ರಿಯೆಯ ಕೂಡಿಕೊಂಡಿಹುದು.
ಈ ಚತುರ್ವಿಧದೊಳಗಾವಂಗವು ಅಲ್ಲ.
ಕೂಡಲಚನ್ನಸಂಗ ನಮ್ಮ ಶರಣರ ಪರಿ ಬೇರೆ. ||೧೦೮||

೪೯೯

ಗುರುಭಕ್ತಿ ಗುರು ಭಜನೆಯಿಲ್ಲದ
ನರಕಿಯ ನೆರೆ[8] ಯಲ್ಲಿರಲಾಗದು.
ಶಿವಭಕ್ತಿ ಶಿವಭಜನೆಯಿಲ್ಲದ
ಪಾಪಿಯ ಸಂಗವ ಮಾಡಲಾಗದು,
ಷಡುದೇವತೆಗಳು, ಶೈವ ಸನ್ಯಾಸಿ
ಕಾಳಾ ಮುಖಿ, ಕಾಪಾಲಿ ಇಂತಿವರ ಗುರುವೆಂಬ
ಅನಾಮಿಕ[9]ರ ಮಾತನಾಡಿ[10]ಲಾಗದು.[11]
ತಟ್ಟು ಮ[12]ಟ್ಟಿಯನಿಟ್ಟಭ್ರಷ್ಟಂಗೆ
ಶಿಷ್ಯನಾದ ಕಷ್ಟನ ಮುಟ್ಟಲಾಗದು.
ವಿಭೂತಿ ರುದ್ರಾಕ್ಷೆಗಳಲ್ಲಿ ಪ್ರೀತಿ ಪ್ರೇಮವಿಲ್ಲದ
ಕರ್ಮಿಯ ಗುರುವೆಂಬ ಪಾತಕನ ಮಾತುಬೇಡಾ,
ಭಕ್ತಿಯಿಲ್ಲದವರಲ್ಲಿ ಯುಕ್ತಿಯಿಲ್ಲ.
ಇವೆಲ್ಲಾ ಗುಣವಿಲ್ಲದವರಲ್ಲಿ ಕರುಣವ ಪಡೆದು
ನಡೆದವನ ಸೊಲ್ಲುಬೇಡ ಕೂಡಲಚನ್ನ ಸಂಗಯ್ಯ
ನಿಮ್ಮ ಸಮಯಕ್ಕೆ ಸಮನಿಸದವನು ನಮಗೆ ಬೇಡವಯ್ಯಾ.        ||೧೦೯||

೫೦೦

ಕೆರೆಯಲುಂಡು ತೆರೆಯ [13]ಹೊಗಳುವರು.[14]
ಅತಿ[15]ಉತ್ಕಟ[16] ಪರಬ್ರಹ್ಮವನೆ ನುಡಿವರು.
ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ,
ಭವವ ಗೆಲಲರಿಯದೆ ರದ್ರ ರ[17] ಚತ್ರವನುಂಡು
ಇಲ್ಲವೆಯ ನುಡಿವ ಹಿರಿಯರಿಗೆ ಮಹದ ಮಾತೆಕೊ ಗುಹೇಶ್ವರಾ? ||೧೧೦||

೫೦೧

ವೇದ ವೇದಿಸಲರಿಯದೆ ಅಭೇದ್ಯ ಲಿಂಗವೆಂದು ನಡನಡುಗಿತ್ತು.
ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯ ಲಿಂಗವೆಂದು ಸಾರುತ್ತಲಿದೆ.
ಕರ್ತ ತರ್ಕಿಸಲರಿಯದೆ ಅತರ್ಕ್ಯ ಲಿಂಗವೆಂದು ಮನಂಗೊಳ್ಳವು.
ಆಗಮ ಅಗಮ್ಯ ಲಿಂಗವೆಂದು ಗಮನಿಸಲರಿಯದಿರ್ದವು.
ನರರು, ಸುರರು, ದೇವರ್ಕಳು ಲಿಂಗದನುವ ಕಾಣರು.
ನಮ್ಮ ಕೂಡಲಸಂಗನ ಪ್ರಮಾಣುವ ಶರಣರು ಬಲ್ಲರು.  ||೧೧೧||

೫೦೨

ನುಡಿಯಲಾಗದಿನ್ನು, ನುಡಿಯಲಾಗದಿನ್ನು
ನುಡಿಯಲಾಗದಿನ್ನು ಜಡ ಮರ್ತ್ಯರೋಡನೆ     ||ಪಲ್ಲವಿ||

ಗಗನಾಕಾರ ಮಂಟಪದೊಳಗೆ
ಹೊಗಲುಪಾಯವಿಲ್ಲವೆಂದುದು ಘನ
ಕಂಗಳ ಲಿಂಗ ಕರಸ್ಥಲ ಜಂಗಮ
ಬಂದ ಸಂಬಂಧವನರಿಯರಾಗಿ      

ಆದಿ ಲಿಂಗವೆಂಬುದು ಬೇಱೆಲ್ಲ ಕಾಣಿಭೋ
ವಂಗಡದೆಗೆದು ನೀವು ನುಡಿಯದಿರಿಭೋ.
ವಂಗಡದೆಗೆದು ನುಡಿವರಿಗೊಂದೇ ಲೋಕವಿತ್ತು
ಮುಂದಿರ್ದ ಘನವ ನೀವಱೆಯಿರೆಲವೊ         

ತಲೆಯೊಳಗೆ ನಾಲಗೆಯ ಹಡೆದೆವೆಂದು
ಹಲವು ಪರಿಯಲಿ ನೀವು ಗಳಹದಿರಿ ಭೋ
ಅನ್ನಪಾನದ ಹಂಗು ಬೆನ್ನಿಂದ ಬಿಡದು;
ಇನ್ನು, ಸಂಸಾರಿ, ನಿಗನುಭಾವವೇ?
ವಿದ್ಯಾಬುದ್ಧಿ ಪರಸಂಬಂಧದ ಮೇಲೆ
ಹೊದ್ದುವುದಹಂಕಾರ ಘನವಾಗಿ
ವಿದ್ಯದಿ ತಾವು ಬಲ್ಲಿದರೆಂಬರು
ಸತ್ತರು ಹಲ[18]ವು ಅ[19]ರುಹಿರಿಯರು

ಕಂಗಳ ಲಿಂಗ ಕರಸ್ಥಲ ಜಂಗಮ
ಇಂತೆಂದುದು ಲಿಂಗ ಸಂಬಂಧವು.
ಇದನೊಲ್ಲೆನೆಂಬವರಾದ ಲೋಕಕ್ಕೆ
ಹೋದರೇನು ವಾಯವಾಯ ಗೊಹೇಶ್ವರ.     

೫೦೩

ಲಿಂಗೈಕ್ಯ, ಲಿಂಗವಂತ, ಲಿಂಗಪ್ರಾಣಿ,
ಪ್ರಾಣಲಿಂಗಿಗಳೆನಬಹುದು ಎನಬಹುದು.
ಉದಯಕಾಲ, ವಿಚಿತ್ರಕಾಲ, ತ್ರಿಕಾಲ
ಲಿಂಗಾರ್ಚಕರೆನಬಹುದು ಎನಬಹುದು.
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವ ತೊರದ
ನಿಸ್ಪೃಹರೆನಬಹುದು ಎನಬಹುದು.
ಧಾರಣೆ, ಪಾರಣೆ, ಒಡಲು ದಂಡಣೆ
ಕರಣದಂಡಣೆಗಳುಳ್ಳವರೆಂದೆನಬಹುದು.
ಶೀಲವಂತರು ಶೀಮೆವಂತರು,
ವರತೆಯ ಅಗ್ಘಣಿಯ ನೇಮಿಗಳೆಂದೆನಬಹುದು.
ನೇಮ, ವ್ರತ, ಪಾಕದ್ರವ್ಯಂಗಳನೊಲ್ಲೆವೆಂದೆನಬಹುದು,
ವೀರಶೈವ, ಶುದ್ಧಶೈವ, ಮಾರ್ಗಶೈವರು
ಪೂರ್ವಶೈವರೆಂದೆನಬಹುದು ಎನಬಹುದು.
ರಸವೇದಿಗಳು, ಶಬ್ದವೇದಿಗಳು, ಮಹಾನುಭಾವಿಗಳೆಂದೆನಬಹುದು.
ಇವರೆಲ್ಲರು ಶಿವಪಥದೊಳಗೆ ಮಾತಾಡುತ್ತಾಡುತ್ತಿರ್ದರಲ್ಲದೆ,
ಒಂದರ ಕುಳವು ತಿಳಿಯದು ನೋಡಾ.
ಆ ಒಂದ ದಾಸೋಹದಲ್ಲಿ ಬಸವಣ್ಣ ಸ್ವತಂತ್ರನಾದಕಾರಣ,
ಲಿಂಗವೆ ಬಸವಣ್ಣನೊಡನೊಡನಾಡುತ್ತಿರ್ದನಾಡುತಿರ್ದನು.
ಇದು ಕಾರಣ ಬಸವಣ್ಣನ ಮನ ಪರುಷ,
ಬಸವಣ್ಣನ ಭಾವ ಪರುಷ, ಬಸವಣ್ಣನ ನಡೆ ಪರುಷ,
ಬಸವಣ್ಣನ ನುಡಿ ಪರುಷ, ಬಸವಣ್ಣನ ಹಸ್ತ ಪರುಷ.
ತನು, ಮನ, ಧನವ ನಿವೇದಿಸಿದಾತ ಬಸವಣ್ಣ.
ಮನ ಪ್ರಾಣವ ನಿವೇದಿಸಿದಾತ ಬಸವಣ್ಣ.
ಅಂದಾದಿಯಾಗಿ ಬಸವಣ್ಣನ ನೆನದು ನೆನವುದೆ ಲಿಂಗಾರ್ಚನೆ.     ||೧೧೨||

೫೦೪

ಬಸವಣ್ಣನ ನೆನವುದೆ ಷೋಡಶೋಪಚಾರ,
ಬಸವಣ್ಣನ ನೆನವುದೆ ಪರಮತತ್ವ,
ಬಸವಣ್ಣನ ನೆನವುದೆ ಮಹಾನುಭಾವ,
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನದು
ಸಮಸ್ತಗಣಂಗಳೆಲ್ಲರು ಅತಿ ಶುದ್ಧರಾದರಯ್ಯಾ.           ||೧೧೩||

ಇಂತೆಂಬ ಮಹಾಸ್ತೋತ್ರಂಗಳಿಗೆ ಪಾತ್ರವಾದ ಪರಮಮೂಲಜ್ಞಾನಿ ಬಸವಣ್ಣನ ಸಪ್ತ ಚಕ್ರಂಗಳ ಸಪ್ತ ಕಮಲಂಗಳೆಂಬ ಪತ್ರಂಗಳೊಳಗಿಪ್ಪ ಹದಿ ನಾಲ್ಕು ಸಾವಿರಕ್ಷರಂಗಳೆ ಹದಿನಾಲ್ಕು ಷಡುಸ್ಥಲಂಗಳಾದ ಭೇದವ ಶ್ರುತಿ ಗುರು ಸ್ವಾನು ಭಾವಂಗಳಿಂದರಿದು ಸುಖಿಸಿ ಇಹಲೋಕ ಪರಲೋಕಂಗಳೊಳಗಿದ್ದೆಹೆನೆಂಬ ಭಕ್ತ ಮಾಹೇಶ್ವರರು ಮೂಲ ಮನವ ಖಂಡಿಸಿ ಆ ಮನದೊಳಗಡಗಿದ ಮೂಲ ಪ್ರಪಂಚುಗಳ ಖಂಡಿಸಿ, ಉಳಿದ ನಿಜವ ಮನದ ಕೈಯಲ್ಲಿ ನಿಜ ಸುಜ್ಞಾನ ಲಿಂಗವ ಹಿಡಿಸಿದಡೆ ಮತ್ತೆ ಕೂಡಿಹೆ ಅಗಲಿಹೆನೆಂಬುದಿಲ್ಲ. ಇಂತೆಂಬ ಸೂತ್ರಕ್ಕೆ ಸಾಕ್ಷಿ.

೫೦೫

ಮೂರು ಪುರದ ಹೆಬ್ಬಾಗಿಲೊಳಗೆ
ಒಂದು ಕೋಡಗ ಕಟ್ಟಿರ್ದುದ ಕಂಡೆ.
ಅದು ಕಂಡ ಕಂಡವರನೇಡಿಸುತ್ತ ಇದ್ದಿತ್ತು ನೋಡಾ.
ಆ ಪುರದ ಅರಸು ತನ್ನ ವಾಯದಳಸಹಿತ ಬಂದರೆ
ಒಂ[20]ಬಾರಿ ಮುರಿದು ನುಂಗಿತ್ತ ಕಂಡೆ.
ಆ ಕೋಡಗಕ್ಕೆ ಒಡಲುಂಟು ತಲೆಯಿಲ್ಲ,
ಕಾಲುಂಟು ಹೆಜ್ಜೆಯಿಲ್ಲ, ಕೈಯುಂಟು ಬೆರಳಿಲ್ಲ,
ಇದು ಕರಚೋದ್ಯ ನೋಡಾ.
ತನ್ನ ಕರದವರ ಮುನ್ನವೆ ತಾ ಕರವುದು
ಆ ಕೋಡಗ ತನ್ನ ಬಸುರಲ್ಲಿ ಬಂದ.
ಮದಗಜದ ನೆತ್ತಿಯನೇರಿ
ಗಾಳಿಯ ದೂಳಿಯ ಕೂಡಿ ಓಲಾಡುತ್ತಿಹುದ ಕಂಡೆ.
ಹತ್ತು ಕೇರಿಯೊಳಗೆ ಸುಳಿವ
ಹರಿಯ ನೆತ್ತಿಯ ಮೆಟ್ಟಿ ಹಬ್ಬುತ್ತಿಹುದು ಕಂಡೆ.
ಆ ಕೋಡಗದ ಕೈಯೊಳಗೆ [21]ಒಂದು[22] ಮಾಣಿಕ್ಯವ ಕೊಟ್ಟಡೆ
ನೋಡುತ್ತ, ನೋಡುತ್ತ ಬೆರಗಾದುದ ಕಂಡೆ.
ಕೂಡಲಿಲ್ಲ ಕಳೆಯಲಿಲ್ಲ ಗುಹೇಶ್ವರನ ನಿಲುವು ಪ್ರಾಣಲಿಂಗ
ಸಂಬಂಧವಿಲ್ಲದವರಿಗೆ ಕಾಣಬಾರದು.           ||೧೧೪||

ಇಂತಪ್ಪ ಪ್ರಾಣಲಿಂಗ ಸಂಬಂಧವ ನೋಡಿ ಕಂಡು, ಪರಶಿವ, ಪರಶಕ್ತಿ, ಪರಮಶರಣ ಬಸವಣ್ಣನೆಂಬ ಗುರು,ಲಿಂಗ, ಜಂಗಮವನರಿದು ಭಕ್ತಿಯ ಮಾಡುವಂಥಾ ಕ್ರಮ ಕಟ್ಟಣೆಯ ಕ್ರಿಯಗಳಂ ಬಿಟ್ಟು ಷಡುದರುಶನದ ವೇಷಧಾರಿಗಳು ಮಾಡುವ ನೇಮ, ತಪ, ಜಪ, ನಿತ್ಯ ಉಪಚಾರ, ಶೂನ್ಯ ಇವು ಮೊದಲಾದ ಅನಂತ ಕ್ರಿಯಗಳಂ ಮಾಡಿ ಶ್ರುತಿಗಳು ಹೇಳಿದಂತಿರ್ದಡೆ ಜಡ ಪಂಚಮುಖರೆಂಬ ಷಡುಬ್ರಹ್ಮರು ಪ್ರಸನ್ನವಾಗುವರಲ್ಲದೆ ಈ ಷಡುಬ್ರಹ್ಮರಿಂದತ್ತತ್ತಣ ಪರಶಿವ ಬಸವಾದಿ ಪ್ರಪಥರು ಪ್ರಸನ್ನವಾಗರು. ಅದೇನುಕಾರಣವೆಂದಡೆ: ಆ ಪರಬ್ರಹ್ಮದ ಶರಣಬಸವಣ್ಣನ ಹದಿನಾಲ್ಕು ಷಡುಸ್ಥಲ ಲಂಗಳೊಳಗಿರ್ದ ಮೂಲ ಪ್ರಣಮಕ್ರಿಯಾನುಭಾವಂಗಳಲ್ಲಿ ನಿಂದು ತಮಂಧಾಕಾರವನುಳ್ಳ ಮನಮಾಯೆಗಳು ಮುಖ್ಯವಾದ ಪಂಚಾಂಗ ಪಂಚತಂಡದವರುಗಳೆಲ್ಲರ ನೂಕಿ ತರಹರಿಸರಾಗಿ ಪ್ರಸನ್ನವಾಗರು, ಅದು ಕಾರಣ ಮಾಯಾಶಕ್ತಿಯ ಪ್ರಣಮ ಪಂಚಾಕ್ಷರಿಯ ಶ್ರುತಿಗಳೊಳಗಿರ್ದಂತೆ, ನೇಮವ ಮಾಡಿದಡೆ ಬ್ರಹ್ಮ ಪ್ರಸನ್ನವಾಗುವನು. ತಪವ ಮಾಡಿದಡೆ ವಿಷ್ಣು ಪ್ರಸನ್ನವಾಗುವನು. ಜಪ ಶಿವಪೂಜೆಯ[23] ಮಾಡಿದಡೆ ರುದ್ರ ಪ್ರಸನ್ನವಾಗುವನು. ನಿತ್ಯಾನುಷ್ಠಾನ ನೇಮವ ಮಾಡಿದಡೆ ಈಶ್ವರ ಪ್ರಸನ್ನವಾಗುವನು. ನಿತ್ಯ ಷೋಡಶೋಪಚಾರವ ಮಾಡಿದಡೆ ಸದಾಶಿವ ಪ್ರಸನ್ನವಾಗುವನು. ಶೂನ್ಯವನಾಚರಿಸಿದಡೆ ಪರಮೇಶ್ವರ ಪ್ರಸನ್ನವಾಗುವನು. ಇಂತೆಂಬ ಪುರಾತನರ ಸಾರಾಯ ವಚನುಗಳಿಗೆ ಸಾಕ್ಷಿ.

೫೦೬

ಲಿಂಗವಾದಡೆಯೂ  ಬಸವಣ್ಣ ನಿಲ್ಲದೆ ಲಿಂಗವಿಲ್ಲ.
ಗುರುವಾದಡೆಯೂ ಬಸವಣ್ಣನಿಲ್ಲದೆ ಗುರುವಿಲ್ಲ.
ಜಂಗಮವಾದಡೆಯೂ ಬಸವಣ್ಣನಿಲ್ಲದೆ ಜಂಗಮವಿಲ್ಲ.
ಪ್ರಸಾದವಾದಡೆಯೂ ಬಸವಣ್ಣ ನಿಲ್ಲದೆ ಪ್ರಸಾದವಿಲ್ಲ.
ಅನುಭಾವವಾದಡೆಯೂ ಬಸವಣ್ಣ ನಿಲ್ಲದೆ
ನುಡಿಯಲಾಗದು ಕಾಣಾ ಕಲಿದೇವಯ್ಯಾ.      ||೧೧೫||

೫೦೭

ದೇವಲೋಕದವರೆಲ್ಲಾ ವ್ರತಗೇಡಿಗಳೆಂಬೆ.
ಮರ್ತ್ಯ ಲೋಕದವರೆಲ್ಲ ಭಕ್ತದ್ರೋಹಿಗಳೆಂಬೆ.
[24]ದೇವ[25] ಸಂಭ್ರಮ ಗಣಪದವಿಯ ಪಡೆದವರೆಲ್ಲರು
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ.
ಅನಂತ ಶೀಲರ ಕಂಡಡೆ ಕೈಕೂಲಿಕಾರರೆಂಬೆ.
ಗುಹೇಶ್ವರಾ [26]ನಿಮ್ಮೊಳೈಕ್ಯವನರಿಯದೆ ಮರ್ತ್ಯವರಾಗಿ.[27]       ||೧೧೬||

೫೦೮

ಪ್ರಥಮವೇದಿಗಳೆಲ್ಲಾ ಗತಿಯಲ್ಲಿಯೆ ಸಿಲುಕಿದರು.
ಅತೀತ, ಅನಾಗತ, ವರ್ತಮಾನರೆಂ[28]ಬವರೆಲ್ಲರು ಮತಿಯಲ್ಲಿ ಸಿಲುಕಿದರು.
ಶಬ್ಧ ಶ್ರುತಿವಂತರೆಲ್ಲರು ವೇದ ಆಗಮಂಗಳಲ್ಲಿಯೆ ಸಿಲುಕಿದರು.
ಇಂತವರು ಲಿಂಗೈಕ್ಯರೇ? ಅಲ್ಲಲ್ಲ, ಮತ್ತೆಂತೆಂದಡೆ:
ನುಡಿದುದ ನುಡಿಯ, ನಡೆದುದ ನಡೆಯ,
ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು.
ನಿಸ್ಸೀಮನು ಕೂಡಲಚನ್ನಸಂಗಾ ಲಿಂಗೈಕ್ಯನು.            ||೧೧೭||

೫೦೯

ಹಾಲ ನೇಮವ ಹಿಡಿದಾತನು ಬೆಕ್ಕಾಗಿ ಹುಟ್ಟುವನು.
ಕಡಲೆಯ ನೇಮವ ಹಿಡಿದಾತನು ಕುದುರೆಯಾಗಿ ಹುಟ್ಟುವನು.
ಅಗ್ಘಣಿ ನೇಮವ ಹಿಡಿದಾತನು ಕಪ್ಪೆಯಾಗಿ ಹುಟ್ಟುವನು.
ಪುಷ್ಪದ ನೇಮವ ಹಿಡಿದಾತನು ತುಂಬಿಯಾಗಿ ಹುಟ್ಟುವನು.
ಇವು ಷಡುಸ್ಥಲಕ್ಕೆ ಹೊರಗು.
ಭಕ್ತಿಯಿಲ್ಲದವರ ಮೆಚ್ಚುವನೆ ಗುಹೇಶ್ವರನು?    ||೧೧೮||

೫೧೦

ಅಗ್ಘವಣಿಯು ಪತ್ರೆ, ಪುಷ್ಟ, ಧೂಪ, ದೀಪ
ನಿವಾಳಿಯಲ್ಲಿ ಪೂಜಿಸಿ[29] ಬಳಲುತ್ತಿದ್ದಾರೆ.
ಏನೆಂದರಿಯರು, ಎಂತೆಂದರಿಯರು,
ಜನ ಮರುಳೊ, ಜಾತ್ರೆಮರುಳೊ
ಎಂಬಂತೆಲ್ಲರು ಪೂಜಿಸಿ ಏನನೂ ಕಾಣದೆ
ಲಯವಾಗಿ ಹೋದರು ಗುಹೇಶ್ವರಾ. ||೧೧೯||

೫೧೧

ನೇಮಕ್ಕೊಳಗಾದ ಬ್ರಹ್ಮ.
ತಪಕ್ಕೊಳಗಾದ ವಿಷ್ಣು.
ಜಪಕ್ಕೊಳಗಾದ ರುದ್ರ.
ನಿತ್ಯಕ್ಕೊಳಗಾದ ಈಶ್ವರ.
ಉಪಚಾರಕ್ಕೊಳಗಾದ ಸದಾಶಿವ.
ಶೂನ್ಯಕ್ಕೊಳಗಾದ ಪರಮೇಶ್ವರ.
ಇವರೆಲ್ಲಾ ಪ್ರಳಯಕ್ಕೊಳಗಾದರು
ನಿಃಕಳಂಕಮಲ್ಲಿಕಾರ್ಜುನಾ.            ||೧೨೦||

ಇಂತೆಂಬ ಪುರಾತನ ಮಹಾಶರಣರುಗಳ ವಚನ ಸಮುದ್ರ ಮಧ್ಯದಲ್ಲಿರ್ದ ಸ್ಥಲಕುಳವೆಂಬ ಸ್ಫಟಿಕದ ಶಿಲೆಯ ಮೇಲೆ ನಿಂದು ತರಹರಿಸಿಕೊಂಡು [30]ವಿಷಯ ಉಳ್ಳ ಇಟ್ಟಿಯ ಪಣ್ಣು[31], ಕಿಱುಗುಳ್ಳದ ಹಣ್ಣುಗಳು ಒಳಗೆ ವಿಷ ಹೊರಗೆದಾತಾಗಿಪ್ಪಂತೆ ವೇಷ ಭೂಷಣ ನಾನಾ ಪ್ರಪಂಚು ಕಲ್ಮಷವನೊಳಕೊಮಡ ಶರೀರವೆಂಬ ಶಿಲೆಯನು ಗುರುಲಿಂಗ ಜಂಗಮಲಿಂಗವೆಂಬೆ. ಲಿಂಗನಿಷ್ಠಾಪರವನುಳ್ಳ ಹಸ್ತಂಗಳಲ್ಲಿ ಹಿಡಿದು ಪಂಚ ಸದಾಚಾರವೆಂಬ ಚ, ಬಕಾರದೊಳಗದ್ದಿ ಪ್ರಸಾದಭಾಜನದಲ್ಲಿ ತುಂಬಿ ಸುಜ್ಞಾನಾಗ್ನಿಯೊಳು ಕುದಿಸಿ ಮರೆಹೊಕ್ಕಡೆ ಕಾವೆ, ಮಾರಾಂತರ ಕೊಲುವೆನೆಂಬ ಬಿರುದಿನ ಗರುಡಿಸಾಧಕದಿಂ ಚಾರಿವರಿದು, ಬೀಸಿ ಒಗೆದು ತೊಳದು ಮಹಾಜ್ಞಾನವೆಂಬ ಬಿಸಿಲಿನೊಳಗೆ ಹರಹಿ, ಒಣಗಿಸಿ ತ್ರಿವಿಧಭಕ್ತಿ ಪಾದೋದಕ ಪ್ರಸಾದವೆಂಬ ಚಳೆಯವಂ ಕೊಟ್ಟುಶಿವಾಹಂಕಾರವೆಂಬ ಕೊರಡ ಮೇಲೆ ಇರಿಸಿ ಏಕೋಭಾವವೆಂಬ ಕೊಡತಿಯಲ್ಲಿ ಮೃದುವಪ್ಪಂತೆ ಘಟ್ಟಿಸಿ ತಂದು, ಇಷ್ಟಲಿಂಗವೆಂಬ ಮಂಟಪದೊಳಗೆ ಹೊಕ್ಕು ಪ್ರಾಣಲಿಂಗವೆಂಬ ಹಸೆಯ ಮೇಲೆ ಸ್ವಸ್ಥ ಪದ್ಮಾಸನವಿಕ್ಕಿ, ಹದಿನಾಲ್ಕು ಷಡು[32]ಸ್ಥಲದನುಭಾವವೆಂಬ ಸೂಜಿಯಲ್ಲಿ ಮನವೆಂಬ ದಾರವ ಸಂಧಾನಿಸಿ ಅಭಿನ್ನ ಹಸ್ತಂಗಳಿಂದ ಪಿಡಿದು ಸುಗುಣವೆಂಬ ಧೂಪದ ತುಂಬಿ ತೃಪ್ತಿಲಿಂಗಕ್ಕೆ ಹೊದ್ದಿಸುತ್ತಲಿಪ್ಪ ಕಡುಗಲಿಭಕ್ತ ಮಾಹೇಶ್ವರರ ಕಂಡು ಕಾಮ ಕಾಲಗಳೆಂಬ ಮನ ಮಾಯೆಗಳು ಮೊದಲಾದ ಷಡುದೇವತೆ ಶ್ರುತಿ ನಾನಾ ತತ್ವಕರಣಂಗಳೆಲ್ಲಾ ಬಿ[33]ದ್ದು ಓ[34]ಡಿದವು ಇಂತೆಂಬ ಸೂತ್ರಕ್ಕೆ ಸಾಕ್ಷಿ.

೫೧೨

ಪೃಥ್ವಿಯ ಕುಳ ಮಂಟಪದ ಮೇಲೆ ಪ[35]ದ ಶಿಲೆ ಬಿಗಿದು
ತಳ ಕಂಬ ಕಳಸದ ಮೇಲೆ ಕೆಸರುಗಲ್ಲು
ಒಂದು ಮಠಕೆ ಒಂಬತ್ತು ತುಂಬಿಯಾಳಾಪ,
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ,
ಅಂಗಜನ ಪಡೆಕೋಟಿ ಮುಂಡವೆದ್ದಾಡುವಲ್ಲಿ
ರಣ ಉಂಡ ಭೂಮಿಯನು ಮೀರಿದೆ ಗುಹೇಶ್ವರಾ         ||೧೨೧||

೫೧೩

ಕಾಯದಲ್ಲಿ ಕಳವಳವೆಡೆಗೊಂಡಡೆ,
ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
ಕಾಯದ ಕಳವಳವಯವೆಂದರಿಯಬಲ್ಲಡೆ
ದೇವ ಗುಹೇಶ್ವರನ ನಿಲುವ ತಾನೆ ನೋಡಾ.  ||೧೨೨||


[1] ಘಟಂಗ (ಬ)

[2] ಘಟಂಗ (ಬ)

[3] x (ಅ)

[4] ವಾಯಿತೆಂಬವಂಗೆ(ಬ)

[5] ವಾಯಿತೆಂಬವಂಗೆ(ಬ)

[6] ರಿವು (ಬ)

[7] ರಿವು (ಬ)

[8] ರ ಮನೆ(ಬ)

[9] ನಮಾತಕೇಳ(ಬ)

[10] ನಮಾತಕೇಳ(ಬ)

[11] + ನಡಿಸಲಾಗದು(ಬ)

[12] ಮು.(ಬ)

[13] ಹೋಗುವರು(ಬ)

[14] ಹೋಗುವರು(ಬ)

[15] ಉತ್ಕೃಷ್ಟ(ಬ)

[16] ಉತ್ಕೃಷ್ಟ(ಬ)

[17] ವ (ಬ)

[18] (ಬ)

[19] (ಬ)

[20] + ದೆ(ಬ)

[21] x (ಬ)

[22] x (ಬ)

[23] ಗಳ (ಬ)

[24] x (ಅ)

[25] x (ಅ)

[26] ಲಿಂಗೈಕ್ಯವನರಿಯರಾಗಿ (ಬ)

[27] ಲಿಂಗೈಕ್ಯವನರಿಯರಾಗಿ (ಬ)

[28] ವೆಂ (ಬ)

[29] + ಪೂಜಿಸಿ (ಬ)

[30] ವಿಷಪಣ್ಣಿಟ್ಟಿಯ (ಬ)

[31] ವಿಷಪಣ್ಣಿಟ್ಟಿಯ (ಬ)

[32] ಡಂಗ (ಬ)

[33] ಟ್ಟೋ(ಬ)

[34] ಟ್ಟೋ(ಬ)

[35] ಪಾ(ಬ)