೪೬೪

ಮಡಿಲು ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದ್ದ

[1]ರೇನಯ್ಯ[2] ಕೊರಳ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದ್ದ[3]ರೇನಯ್ಯಾ[4] ಕಳವು [5]ಹಾದರ[6] ಅನ್ಯದೈವ ಭವಿಯ ಸಂಗವು
ಬಿಡದನ್ನಕ್ಕರ [7]ಭಕ್ತನೆನಿಸಬಾರದು.
ಆಚಾರಸಹಿತ ಭಕ್ತ, ಅನಾಚಾರ ಸಹಿತ ನರಕಿ.[8]ಕೂಡಲಚನ್ನಸಂಗಯ್ಯ[9]ನವರ ಬಲ್ಲನಾಗಿವಲ್ಲನವರ.    ||೮೨||

೪೬೫

ಅನ್ಯದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರ.
ನಂಬುಗೆ ಇಲ್ಲದ ಭಕ್ತನ ಮನೆಯ ಆರೋಗಣಿ ಸಂದೇಹದ ಕೂಳು.
ಮಾಡಿ ಹಮ್ಮ ನುಡಿವ ಭಕ್ತನ ಮನೆಯಾರೋಗಣೆ ಕಾರಿದ ಕೂಳು.
ನಿಮ್ಮನರಿದ ಸಜ್ಜನ [10]ಭಕ್ತನ ಮನೆಯ ಆರೋಗಣಿ,
ಸದಾಚಾರ, ಭ್ರತ್ಯಾಚಾರ, ಶಿವಾಚಾರದಿಂದ ಬಂದುದಾಗಿ,
ಲಿಂಗಾರ್ಪಿತವಯ್ಯಾ ಕೂಡಲಚನ್ನಸಂಗಮದೇವಾ       ||೮೩||

೪೬೬

ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತ[11]ಕೆ?
ಲಿಂಗಸಂಗಿಯಾದಡೆ ಅನಂಗ ಸಂಗವೇತ[12]ಕೆ?
ಈ ಕಂಡಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ
ಒಬ್ಬರ ಕೈವಿಡಿದು ಒಬ್ಬರಿಗೆ ಸನ್ನೆಯ ಮಾಡವ ಬೋಸರಗಿತ್ತಿಯಂತೆ.
ಪ್ರಾಣಲಿಂಗವಿದ್ದಂತೆ ಸ್ಥಾವರಕ್ಕೆ ಹರಸಿ
ಪೊಡಮಡುವ ಕೋಟಲೆಗೊಳಲೇತಕ್ಕೆ?
ಇದು ಕಾರಣ ಕೂಡಲಚನ್ನಸಂಗಯ್ಯ,
ಇಂತಪ್ಪ ಪಾಪಿಗಳನೆನಗೆ ತೋರದಿರಯ್ಯಾ.   ||೮೪||

೪೬೭

ಹೆಂಡರು ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ,
ಎನಗೆ ಕುಲದೈವ ಮನೆದೈವವಿಲ್ಲವೆಂಬ
ಭಂಡನ ಭಕ್ತಿಯ ಪರಿಯ ನೋಡಾ;
ತನ್ನ ಯುಕ್ತಿಯ ಪರಿಯ ನೋಡಾ.
ಯುಕ್ತಿ  ಶೂನ್ಯನ ಮುಂದೆ ಒಂದು ದೃಷ್ಟವ ಹೇಳಿಹೆನು.
ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ
ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ಆಗಲಿ.
ಅಕಟಕಟಾ ಲೌಕಿಕಕ್ಕೆ ಆಜ್ಞೆವುಂಟು, ಪಾರಮಾರ್ಥಕ್ಕೆ ಆಜ್ಞೆಯಿಲ್ಲ.
ಇದು ಕಾರಣ ಕೂಡಲಚನ್ನಸಂಗಯ್ಯಾ ಭಕ್ತನಾಗಿ ಭವಿಯಬೆರಸಿ
ಕುಲದೈವ ಮನೆದೈವಂಗಳಿಗೆ ಮಾಡುವ
ಅನಾಚಾರಿಗಳ ತೋರದಿರಯ್ಯಾ.    ||೮೫||

೪೬೮

ಶೀಲ ಶೀಲವೆಂದೇನೊ?
ಮಾಡಿದ ಮನೆ, ಹೂಡಿದ ಒಲೆ, ಅಟ್ಟುಂಬ ಮಡಕೆ
ಕಟ್ಟಿದ ಕೆರೆ, ಬಿತ್ತಿದ ಬೆಳೆ
ಇಂತಿವಕ್ಕೆ ಶೀಲವಲ್ಲದೆ, ತನ್ನ ಮನಕ್ಕೆ ಶೀಲವಿಲ್ಲ.
ಶೀಲವೆಂತೆಂದಡೆ:
ಲಿಂಗ ಬಂದು ಮನವನಿಂಬುಗೊಂಬುದೆ ಶೀಲ.
ಜಂಗಮ ಬಂದು ಧನವನಿಂಬುಗೊಂಬುದೆ ಶೀಲ.
ಪ್ರಸಾದ ಬಂದು ತನುವನಿಂಬುಗೊಂಬುದೆ ಶೀಲ.
ಇಂತಪ್ಪ ಶೀಲಕ್ಕೆ ನಮೋ ನಮೋ ಎಂಬೆ
ಉಳಿದ ದುಶ್ಶೀಲರ ನನ್ನತ್ತ ತೋರದಿರು
ಕೂಡಲಚನ್ನಸಂಗಮದೇವಾ           ||೮೬||

೪೬೯

ಶೀಲ ಶೀಲವೆಂದು ಗರ್ಭೀಕರಿಸಿ  ನುಡಿವುತ್ತಿಪ್ಪರು,
ಶೀಲವಾವುದೆಂದರಿಯರು.
ಇದ್ದುದ ವಂಚನೆಯ ಮಾಡದಿಪ್ಪುದೆ ಶೀಲ,
ಇಲ್ಲದುದಕ್ಕೆ ಕಡನ ಬೇಡದಿಪ್ಪುದೆ ಶೀಲ,
ಪರಧನ, ಪರಸತಿಯರಿಗಳುಪದಿಪ್ಪುದೆ ಶೀಲ.
ಪರದೈವ ಪರಸಮಯಕ್ಕೆ ಎಳಸದಿಪ್ಪುದೆ ಶೀಲ.
ಗುರುನಿಂದೆ, ಶಿವನಿಂದೆ, ಜಂಗಮನಿಂದೆಯ ಕೇಳದಿಪ್ಪುದೆ ಶೀಲ.
ಕೂಡಲಚನ್ನಸಂಗಯ್ಯನ ಶರಣರ ಬರವಿಂಗೆ
ಮುಯ್ಯಾಂತು[13]ನಿಂದು[14] ಪರಿಣಮಿಸಬಲ್ಲಡೆ ಅಚ್ಚಶೀಲ ||೮೭||

೪೭೦

ಭಕ್ತರ ಮಠಕ್ಕೆ ಬಂದು ಒಳಹೊರಗೆಂಬುದು ಶೀಲವೆ?
ಎನ್ನ ಲಿಂಗಕ್ಕೆ ಒಳ್ಳಿಹ ಅಗ್ಘವಣಿಯಂ ತನ್ನಿ,
ಒಳ್ಳಿಹ ಪುಷ್ಪವ ತನ್ನಿ, ಒಳ್ಳಿಹ ಓಗರವ ತನ್ನಿ,
ಒಳ್ಳಿಹ ಓಗರವ ಮಾಡಿ ಎಂಬುದು ಶೀಲವೇ ಅಲ್ಲ.
ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ
ಅಷ್ಟಮದಂಗಳ ಕೊಂದಾತನೆ ಶೀಲವಂತ
ಕೂಡಲಚನ್ನಸಂಗಮದೇವಾ           ||೮೮||

೪೭೧

ಸುಖಶೀಲವೆ[15] ಲಿಂಗಧ್ಯಾನ.
ಸಮಶೀಲವೆ[16] ಜಂಗಮಪ್ರೇಮ.
ಮಹಾಶೀಲವವರಂತೆ ಎಂಬುದು.
ಈ ತ್ರಿವಿಧವನರಿಯಬಲ್ಲಡೆ ಕೂಡಲಚನ್ನಸಂಗಯ್ಯನೆಂಬೆ           ||೮೯||

೪೭೨

ಸುಖವಿಲ್ಲ ಸೂಳಿಗೆ, ಪಥವಿಲ್ಲ ಶೀಲಕ್ಕೆ,
ಮಾಡಲಾಗದು ನೇಮವ, ನೋಡಲಾಗದು ಶೀಲವ,
ತಥ್ಯವೆಂಬುದೆ ತತ್ಸೀಲ.
ಗುಹೇಶ್ವರನೆಂಬ ಲಿಂಗವನರಿಯಬಲ್ಲವಂಗಿದೆ ಶೀಲ     ||೯೦||

ಇನ್ನು ಜಂಗಮಸ್ಥಲದೊಳಗೆ ತಾಳು ಬೋಳು ಕಟ್ಟಿಗೆಕರ್ಪರ, ಆಚಾರ ಕರ್ಪರ, ವಿಚಾರ ಕರ್ಪರ, ದೇಶಾಂತರಭಕ್ತಿ ಲಿಂಗಕ್ರೀಗಳು. ಇಂತಿವೆಲ್ಲವನು ಪುರಾತನರ ವಚನಂಗಳ ಬಲ್ಲಂಥಾ ಭಕ್ತ ಮಾಹೇಶ್ವರರಿಗೆ ಬಿನ್ನಹಂ ಮಾಡಿಹೆನದು ಹೇಂಗೆನಲು: ತಾಳಾದರೆ ಶರೀರದವನಗುಣವ ತಾಳಬೇಕು. ಬೋಳಾದರೆ ಆಸೆಯೆಂಬ ಸಂಸಾರವ ಬೋಳೈಸಬೇಕು. ಕಟ್ಟಿಗೆಯಾದರೆ ಲಿಂಗಕ್ಕೆ ಸಲ್ಲದುದ ಕಟ್ಟದಿರಬೇಕು. ಕರ್ಪರವಾದರೆ ಪರತತ್ವದಲ್ಲಿ ಪರಿಣಾಮಿಯಾಗಿರಬೇಕು. ದೇಶಾಂತರವಾದರೆ ತನ್ನ ಲಿಂಗಾಂಗವ ನೋಯಿಸದೆ ಜಂಗಮ ಪ್ರಸಾದವ ಲಿಂಗಕ್ಕೆ [17]ಕೊಂಡು[18]ಕೊಂಬ ಭಕ್ತರೊಡೆಯರ ನೋಡಿಹೆನೆಂದು ಚರಿಸಬೇಕು. ಭಕ್ತಿಯಾದರೆ ತನ್ನಲ್ಲಿ ದ್ರವ್ಯಂಗಳು ಒದಗಿರ್ದಡೆ ಭಕ್ತ ಮಾಹೇಶ್ವರರ ಕೂಡಿಕೊಂಡರ್ಪಿಸಬೇಕು. ಕ್ರೀಯಾದಡೆ ಕಳವು ಪಾರದ್ವಾರ ಹಿಂಸೆಗಳ ಮಾಡದಿರಬೇಕು. ಆಚಾರ ಕರ್ಪರವಾದಡೆ ಶೀಲವೆಂಬ ಕುರುಹ ತೋ[19]ರಿ ಬೇಡ[20]ದಿರಬೇಕು. ವಿಚಾರಕರ್ಪರವಾದಡೆ ಸೊಮ್ಮು ಸಂಬಂಧವ ತೋ[21]ರಿ ಬೇಡ[22]ದಿರಬೇಕು. ಅವಿಚಾರ ಕರ್ಪರವಾದಡೆ ಭವಿಭಕ್ತರೆಂಬ ನಾಮ ಸೀಮೆಯ ವಿಚಾರಿಸದೆ ಬೇಡ ಬೇಕು. ಇಂತಿವೆಲ್ಲವು ಅಳವಟ್ಟಡೆ ಗುರುಲಿಂಗಜಂಗಮಗಳಹುದು. ಈ ಹಜ್ಜೆಯಳವಡದಿರ್ದಡೆ ಅಲ್ಲ, ಭಕ್ತನಿಗಹುದು. ತಮ್ಮ ಚಿತ್ತಕ್ಕೆ ಜಾಡ್ಯರಂತೆ ಹೆಳವರಂತೆ ವೇಷವ ಹೊತ್ತವರಂತೆ ತೋರುವದು. ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ.

೪೭೩

ತಾಳು, ಬೋಳು ಕರ್ಪರವೆಂಬರು,
ತಾಳಾವುದು, ಬೋಳಾವುದು ಕರ್ಪರವಾವುದು ಎಂದರಿಯರು
ಕಾಯದ ಕಳವಳದ ಅವಗುಣವ ತಾಳಬಲ್ಲಡೆ ತಾಳು,
ಸಂಸಾರ ವಿಷಯವ ಬೋಳೈಸಬಲ್ಲಡೆ ಬೋಳು,
ಪರದಲ್ಲಿ ಪರಿಣಾಮಿಸಬಲ್ಲಡೆ ಕರ್ಪರ.
ಅಲ್ಲದಿರ್ದಡೆ ಕೂಡಲಚನ್ನಸಂಗಮದೇವಾ,
ಇವರೆಲ್ಲ ಡೊಂಬರ ಬೋಳು.          ||೯೧||

೪೭೪

ತನು ಬತ್ತಲೆಯಿದ್ದ ಡೇನು[23] ಮನ ಸುಚಿಯಾಗದನ್ನಕ್ಕರ.
ಮಂಡೆ ಬೋಳಾದಡೇನು, ಭಾವ ಬಯಲಾಗದನ್ನಕ್ಕರ.
ಭಸ್ಮವ ಹೂಸಿದಡೇನು, ಕರಣಾದಿ ಗುಣಂಗಳನೊತ್ತಿ
ಮೆಟ್ಟಿ ಸುಡದನ್ನಕ್ಕರ.
ಇಂತೀ ಆಸೆಯ ವೇಷದ ಭಾಷೆಗೆ ನೀ ಸಾಕ್ಷಿಯಾಗಿ.
ಚಿಃ ಎಂಬೆನು ಕಾಣಾ ಗುಹೇಶ್ವರಾ.    ||೯೨||

೪೭೫

ಕುರಹ ಮುಟ್ಟಲು [24]ಕೂದಲು ಹರಿಯದೆ ಬೋಳಾಗಬೇಕು.
ಕಾಯ ಬೋಳೋ? [25]ಕಪಾಲ[26]ಬೋಳೊ?
ಹುಟ್ಟುವುದು ಬೋಳೊ? ಹುಟ್ಟದಿಹುದು ಬೋಳೊ?
ಅವುದು ಬೋಳು ಹೇಳಾ ಗುಹೇಶ್ವರಾ           ||೯೩||

೪೭೬

ಭಸ್ಮವ ಹೂಸಿ ಬತ್ತಲೆಯಿದ್ದಡೇನು, ಬ್ರಹ್ಮಚಾರಿಯೆ?
ಅಸನವನುಂಡು ವ್ಯಸನವ ಮರದಡೇನು, ಬ್ರಹ್ಮಚಾರಿಯೆ?
ಭಾವ ಬತ್ತಲೆಯಿರ್ದು, ಮನ ದಿಗಂಬರವಾದಡದು
ನಿರ್ವಾಣವು ಕಾಣಾ ಗುಹೇಶ್ವರಾ.     ||೯೪||

೪೭೭

ಆಚಾರ ಕರ್ಪರ ಒಂದು, ವಿಚಾರ ಕರ್ಪರ ಒಂದು,
ಅವಿಚಾರ ಕರ್ಪರ ಒಂದು –
ಈ ತ್ರಿವಿಧ ಕರ್ಪರದೊಳಗೆ
ಆಚಾರ ಕರ್ಪರ, ಕರ್ಪರಲಾಂಛನವ ತೋರಿ
ಬೇಡೂದಾಗಿ ಜಾಡ್ಯನೆಂಬೆ.
ವಿಚಾರ ಕರ್ಪರ ಸೊಮ್ಮು ಸಂಬಂಧವ ತೋರಿ
ಬೇಡೂದಾಗಿ ಹೆಳವನೆಂಬೆ.
ಅವಿಚಾರ ಕರ್ಪರ ನೇಮ ಸೀಮೆಗಳ ಮೀರಿ
ಲಾಂಛನವತೋರಿ ಬೇಡೂದಾಗಿ ನಿರುಪಾಧಿಕನೆಂಬೆ
ಕೂಡಲ ಚನ್ನಸಂಗಮದೇವಾ          ||೯೫||

೪೭೮

ಆಸೆಯೆಂಬ ಶೂಲದ ಮೇಲೆ,
ವೇಷವೆಂಬ ಹೆಣನ ತಂದು ಕುಳ್ಳಿರಿಸಿ
ಧರೆಯ ಮೇಲೆ ಉಳ್ಳ ಅರುಹಿರಿಯರೆಲ್ಲಾ[27] ಹೀಂಗೆ ಸವದರು ನೋಡಾ.
ಆಸೆಯ ಮುಂದಿಟ್ಟುಕೊಂಡು [28]ಸುಳಿವೆ[29] ಹಿರಿಯರ ಕಂಡು ಹೇಸಿಕೆಯಾಯಿತ್ತು ಗುಹೇಶ್ವರಾ        ||೯೬||

೪೭೯

ಕಲ್ಪಿತದಿಂದ ಮಾಡುವ ಭಕ್ತ ನಿರ್ಧನಿಕನಾದಡೆ,
ತನ್ನ ಕೈಯ ಧನವ ವೆಚ್ಚಿಸಿ ದಾಸೋಹವ ಮಾಡಿಸಿ
ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ
ಅವನ ದಾಸೋಹಕ್ಕೆ ನಿಲಿಸಿ ತಾ ಕರ್ತನಾಗಿ ನಿಂದು
ಪರಿಣಾಮಿಸಬಲ್ಲಡೆ ಜಂಗಮವೆಂಬೆ.
ಅವರಿಗೆ ನಮೋ ನಮೋ ಎಂಬೆ.
ಅಂತಲ್ಲದೆ, ಮುನ್ನ ಮಾಡಿದಿರಿ. ಈಗ ಮಾಡಿರಿ ಇದೇನಿಭೋ
ಎಂದು ಜರೆದು ಝಂಕಿಸಿ ಹೋಹವರ ಜಂಗಮವೆಂತೆಂಬೆನು?
ಎನ್ನೆನು. ಅದೇನು ಕಾರಣವೆಂದಡೆ,
ಆತ ಶೂನೆಗಾರ, ಆತ ದೋಷಾರ್ಥಿ, ಆತ ಭವಭಾರಿ
ಕೂಡಲ ಚನ್ನಸಂಗಯ್ಯ.     ||೯೭||

೪೮೦

ಬಿರುಗಾಳಿ ಬೀಸಿ ಮರದ ಮುರಿವಂತೆ
ಸುಳುಹ ಸುಳಿಯದೆ, ತಂಗಾಳಿ ಪರಿಮಳದೊಡಗೂಡಿ
ಸುಳಿವಂತೆ ಸುಳಿಯಬೇಕು.
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದು [30]ಜಂಗಮವಾಗಲರಿಯದ[31] ನಿಂದು ಭಕ್ತನಾಗಲರಿಯದ
ಉಭಯ ಭ್ರಷ್ಟರನೇನೆಂಬೆ ಗುಹೇಶ್ವರಾ         ||೯೮||

೪೮೯

ಸುಳಿವ ಜಂಗಮಕ್ಕೆ ಕಾಲಿಲ್ಲದೆ ಸುಳಿಯಬೇಕು.
ಮಾಡುವ ಭಕ್ತಂಗೆ ಕೈಯಿಲ್ಲದೆ ಮಾಡಬೇಕು.
ಸುಳಿವ ಜಂಗಮಕ್ಕೆ ಕಾಲಿರ್ದಡೇನು,
ಅನ್ಯ ಗೃಹಕ್ಕೆ ಗಮಿಸದಿರ್ದಡೆ ಸಾಕು.
ಮಾಡುವ ಭಕ್ತಂಗೆ ಕೈಯಿರ್ದಡೇನು,
ಲಿಂಗ[32]ಜಂಗಮ[33]ಕ್ಕಲದೆ ಮಾಡದಿರ್ದಡೆ ಸಾಕು.
ಇದೀಗ ಭಕ್ತಜಂಗಮದಿರವು.
ಇಂತೀ ಉಭಯದ ಕುಳಸ್ಥಳವು
ಕೂಡಲಚನ್ನಸಂಗಯ್ಯನಲ್ಲಿ ಸನ್ಮತವಾದವರಿಗಲ್ಲದಿಲ್ಲ.  ||೯೯||

೪೯೦

ಬರಿಯ ಬೋಳುಗಳೆಲ್ಲಾ ಜಂಗಮವೆ?
ಜಡಜೀವಿಗಳೆಲ್ಲ ಜಂಗಮವೆ? ವೇಷಧಾರಿಗಳೆಲ್ಲಾ ಜಂಗಮವೆ?
ಅಲ್ಲ. ಇನ್ನಾವುದು ಜಂಗಮವೆಂದಡೆ:
ನಿಸ್ಸೀಮನೆ ಜಂಗ, ನಿಚೈಕ್ಯನಗೆ ಜಂಗಮ, ನಿರಾಭಾರಿಯೆ ಜಂಗಮ.
ಇಂತಾದ ಜಂಗಮದ ಸುಳುಹ ಕಾಣದೆ
ಕೂಡಲಚನ್ನಸಂಗಯ್ಯನು ತಾನೆ ಜಂಗಮವಾದ.         ||೧೦೦||

೪೯೧

ಸಚರಾಚರ ಚತುರ್ವಳಯದೊಳಗೆ ತಿರುಗು
ವೇಷಧಾರಿಯ ನನಗೆ ತೋರದಿರು.
ಆಸೆಯ ಧಿಕ್ಕರಿಸಿ, ನಿರಾಸೆಯ ಪತಿಕರಿಸಿದವರ
ವೇಷವ ಕಂಡಡೆ ನಿನ್ನ ಸರಿಯೆಂಬೆ,
ಕೂಡಲಚನ್ನ ಸಂಗಮದೇವಾ.         ||೧೦೧||

೪೯೨

ಹೊರವೇಷದ [34] ವಿಭೂತಿ ರುದ್ರಾಕ್ಷೆಗಳನಳವಡಿಸಿಕೊಂಡು
ವೇದಶಾಸ್ತ್ರಾಗಮಪುರಾಣಂಗಳೆಂಬಂತರಂಗದ
ವಚನ ಬಹುಪಾಠಿಕರಾದ ನೇಮದ ಹಿರಿಯರು ಮಹವನೆತ್ತ ಬಲ್ಲರೊ?
ಅನ್ನದಾನ ಹೊನ್ನದಾನ ವಸ್ತ್ರದಾನಂಗಳನೀವವರ
ಬಾಗಿಲ ಮುಂದೆ ಮಣ್ಣ ಪುತ್ಥಳಿಯಂತಿಹ
ನಿತ್ಯ ನೇಮದ ಹಿರಿಯರು ಮಹವನೆತ್ತ ಬಲ್ಲರೊ?
ಇದು ಕಾರಣ, ಈ ಎಲ್ಲಾ ಅರುವುಳ್ಳವರು
ಲಕ್ಷ್ಮೀಯ ದ್ವಾರಪಾಲಕರಾದರು.
ಆ ಮಹದರುವಿಂಗೆ ಇದು ವಿಧಿಯೆ
ಕೂಡಲಚನ್ನಸಂಗಮದೇವಯ್ಯ,
ನೀ ಮಾಡಿದ ಮರುಹು ಎಂತುಟಯ್ಯಾ.         ||೧೦೨||

೪೯೩

ಸಕಲ ಪ್ರಾಣಿಗಳಿಗೆ ಲೇಸಾಗಲಿ ಎಂದು
ಮಜ್ಜನಕ್ಕೆರವ ವೇಷಲಾಂಛನಧಾರಿಯ ವೇಷಕ್ಕೆ ಶರಣೆಂಬೆ.
ಆ ಲಾಂಛನದ ಹೆಚ್ಚು ಕುಂದನರಸದೆ
ಸಕಲ ಪದಾರ್ಥವ ತನಗೋಸ್ಕರ ತಂದು ನೀಡುವೆ.
ಭಕ್ತಿಯಿಂದ ಮನೆಗೆ ಬಂದಡೆ ಪರಿಣಾಮವ ಕೊಡುವೆ.
ಆತನಿದ್ದಡೆ ಹೋಗೆ, ಕೂಡಲಚನ್ನ ಸಂಗಯ್ಯನಲ್ಲಿ
ಅನುವಿಲ್ಲವಾಗಿ [35]ಮನವು[36] ಮುನಿದುದಿಲ್ಲ.     ||೧೦೩||

ಇಂತಪ್ಪ ಸರ್ವಾಸೆಗಳ ಖಂಡಿಸುವ ಪರಿ ಹೇಂಗೆಂದಡೆ: ಅನಾದಿಯೆಂಬ ಮನ, ಆದಿಯೆಂಬ ಮಾಯೆ. ಆ ಮನವು ಪಂಚಮುಖವ ತಾಳಿ ಕಾಲವ್ಯಾಘ್ರನಾಗಿಹುದು. ಆ ಮಾಯೆ ಪಂಚಮುಖವ ತಾಳಿ ಹೆಮ್ಮಾರಿಯಾಗಿಬಹುದು. ಈ ಕಾಲಮಾಯೆಗಳೆರಡು ಮೇರುಗಿರಿಯ ಮೇಲೆ ಇರ್ದ ಪರಮೇಶ್ವರನಿಗೆಯು ಅದರ ಕೆಳಗಣ ನೆಲ ಪಟ್ಟಣದೊಳಗಿರ್ದ ಕುಬೇರನಿಗೆಯೂ, ಮಾನುಷ್ಯಗಿರಿಯಮೇಲಿರ್ದ ಸದಾಶಿವನಿಗೆಯೂ, ಅದರ ಕೆಳಗಣ ನೆಲ ಪಟ್ಟಣದೊಳಗಿರ್ದ ಇಂದ್ರನಿಗೆಯೂ, ನೀಲಗಿರಿಯ ಮೇಲಿರ್ದ ರುದ್ರನಿಗೆಯೂ, ಅದರ ಕೆಳಗಣ ನೆಲ ಪಟ್ಟಣದೊಳಗಿರ್ದ ಅಗ್ನಿಗೆಯೂ, ಹಿಮಗಿರಿಯಮೇಲಿರ್ದ ಸಪ್ತ ಋಷಿಯರಿಗೆಯೂ, ಅದರ ಕೆಳಗಣ ನೆಲಪಟ್ಟಣದೊಳಿಗಿರ್ದ ಯಮನಿಗೆಯೂ, ಕೀಲಗಿರಿಯಮೇಲಿರ್ದ ದೇವೇಂದ್ರನಿಗೆಯೂ, ಅದರ ಕೆಳಗಣ ನೆಲಪಟ್ಟಣದೊಳಗಿರ್ದ ನೈಋತ್ಯನಿಗೆಯೂ, ಮಂಧರ ಗಿರಿಯಮೇಲಿರ್ದ ವಿಷ್ಣುವಿಗೆಯೂ, ಅದರ ಕೆಳಗಣ ನೆಲಪಟ್ಟಣದೊಳಗಿರ್ದ ವರುಣನಿಗೆಯೂ, ಅಸಿತಗಿರಿಯಮೇಲಿರ್ದ ಬ್ರಹ್ಮನಿಗೆಯೂ, ಅದರ ಕೆಳಗಣ ನೆಲ ಪಟ್ಟಣದೊಳಗೆರ್ದ ವಾಯುವ್ಯನಿಗೆಯೂ, ಎಂಟು ಕರ್ತೃಗಳಿಗೆಯೂ, ಎಂಟು ಭೃತ್ಯರುಗಳಿಗೆಯೂ, ಇವರ ಕೆಳಗಣ ಪಡೆಗಳಿಗೆಯೂ, ಅಂತು ಹದಿನಾರು ತಂಡಂಗಳಿಗೆಲ್ಲಕ್ಕೂ ತಂದೆ ತಾಯಿಗಳಾಗಿ, ಹೆಂಡರು ಮಕ್ಕಳಾಗಿ, ತನುತ್ರಯಂಗಳಾಗಿ, ಮಲತ್ರಯ, ಕರ್ಮತ್ರಯಂಗಳಾಗಿ, ಭಾವತ್ರಯಂಗಳಾಗಿ, ಗುಣತ್ರಯಂಗಳಾಗಿ, ಅಹಂಕಾರ ತ್ರಯಂಗಳಾಗಿ, ವಿಷಯ ತ್ರಯಂಗಳಾಗಿ, ಪದತ್ರಯಂಗಳಾಗಿ, ಲೋಕತ್ರಯಂಗಳಾಗಿ, ವೇದತ್ರಯಂಗಳಾಗಿ ಇಂತಿವು ಮುಖ್ಯವಾದ ಪಂಚವಿಂಶತಿ ತತ್ವಂಗಳಾಗಿ, ಸಕಲಕರಣಂಗಳಾಗಿ, ವರ್ತಿಸುತ್ತಿರ್ಪವಾಗಿ, ದಿಕ್ಪಾಲಕರ ಕೆಳಗಣವರು ನೆರರುಗಳಿಗೆ ಪ್ರಳಯ ಉಂಟೆಂದು ಕೆಲ ವೇದಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ದೇವೇಂದ್ರನ ಕೆಳಗಣವರು, ದಿಕ್ಪಾಲಕರಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ಕೆಳಗಣವರು ದೇವೇಂದ್ರ ಮೊದಲಾದ ದೇವರ್ಕಳಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳ ಮಾಡಿ ತರ್ಕಿಸುತ್ತಿಹರು. ಬ್ರಹ್ಮನ ಕೆಳಗಣವರು ಸಪ್ತ ಋಷಿಯರುಗಳು ಮೊದಲಾದ ದೇವರ್ಕಗಳಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ವಿಷ್ಣುವಿನ ಕೆಳಗಣವರು ಬ್ರಹ್ಮ ಮೊದಲಾದ ಬ್ರಹ್ಮರುಗಳಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ರುದ್ರನ ಕೆಳಗಣವರು ವಿಷ್ಣು ಮೊದಲಾದ ವಿಷ್ಣುಗಳಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ಈಶ್ವರನ ಕೆಳಗಣವರು ರುದ್ರ ಮೊದಲಾದ ರುದ್ರರುಗಳಿಗೆ ಪ್ರಳಯ ಉಂಟಎಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ಸದಾ ಶಿವನ ಕೆಳಗಣವರು ಈಶ್ವರ ಮೊದಲಾದ ಈಶ್ವರರು ಗಳಿಗೆ ಪ್ರಳಯ ಉಂಟೆಂದು ಕೆಲ ವೇದ ಶಾಸ್ತ್ರಾಗಮ ಪುರಾಣಂಗಳಂ ಮಾಡಿ ತರ್ಕಿಸುತ್ತಿಹರು. ಬಸವ ಪ್ರಭು ಸಿದ್ಧರಾಮನ ಕೆಳಗಣವರು ಸಕಲ ಪುರಾತನ ಪರಮೇಶ್ವರ ಮೊದಲಾದ ಪರಮೇಶ್ವರರಿಗೆಯೂ ಹಿಂದೆ ಹೇಳಿದ ಒಂಬತ್ತು ತಂಡ. ಅಂತು ಪರಮೇಶ್ವರ ತಂಡ ಮುಖ್ಯವಾದವಾಗಿ ಹತ್ತು ತಂಡಂಗಳಿಗೆಯೂ ಪ್ರಳಯ ಉಂಟಾದ ಕಾರಣ ಸಹಜವನೆ ಮೂಲ ಪ್ರಣಮು, ಮೂಲ ಪಂಚಾಕ್ಷರಿ, ಮೂಲ ಷಡಾಕ್ಷರಿ, ಅಂತು ನಿತ್ಯ ತತ್ವವಾಗಿರ್ದ ಹನ್ನೆರಡು ಮೂಲ ಪ್ರಣಮಂಗಳಿಂದುದೈಸಿದ ಹದಿನಾಲ್ಕು ಸಾವಿರಕ್ಷರಂಗಳು ಮಹಾ ಸುವಾಕ್ಯಂಗಳನೆ ಹದಿನಾಲ್ಕು ತೆರದ ಭಕ್ತಿಗೆಯೂ, ಹದಿನಾಲ್ಕು ತೆರದ ಷಡುಸ್ಥಲಂಗಳ ಮಾಡಿ ನಿರೂಪಂಗಳಂ ಕೊಟ್ಟು ಇರುತ್ತಿಹರು. ಅದು ಕಾರಣ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಮೇಶ್ವರರೆಂಬೀ ಷಡುಸ್ಥಲ ಬ್ರಹ್ಮರ ಶ್ರುತಿಗಳರಿವು ಆಚಾರವಾಗಿಹುದು. ಇಲ್ಲಿಯ ಗುರುವಿನ ಆಚಾರದರಿವು ನಿಷ್ಠೆಯಾಗಿಬಹುದು. ಇಲ್ಲಿಯ ಲಿಂಗದಾಚಾರದರಿವು ಕ್ರೀಯಾಗಿಹುದು. ಇಲ್ಲಿಯ ಸಮಯಾಚಾರದರಿವು ನಿಃಕ್ರಿಯೆಯಾಗಿಬಹುದು. ಈ ನಾಲ್ಕು ಅರುವಿನ ಪರಿಯ ಪುರಾತನರ ಷಡುಸ್ಥಲಗಳ ಭಕ್ತ ಮಾಹೇಶ್ವರರ ಅರಿವಿನ ಪರಿಯದೇನು ಕಾರಣವೆಂದಡೆ, ಅವರ ಶ್ರುತಿಗಳೊಳಗೆ ಮೂಲಜೀವ ಪಶುವೆಂಬ ಪರಮೇಶ್ವರನ ಪಂಚಮುಖಂಗಳಲ್ಲಿ ಪಂಚ ಕಪಿಲೆಗಳು ಪುಟ್ಟಿದವೆಂಬವು. ಅವರ ಗೋಮಿತ ಪಂಚವರ್ಣದ ವಿಭೂತಿಯ ಇತ್ತೆಂಬವು. ಮತ್ತೆ ಬ್ರಹ್ಮತೊಟ್ಟು, ವಿಷ್ಣುನಾಳ, ರುದ್ರಮಣಿ ಮುಖ, ದೇವರ್ಕಳು ಖೇಚರ ಇಂತಿವರು ಕೂಡಿ ರುದ್ರಾಕ್ಷೆಯಾಯಿತ್ತೆಂಬವು. ಮತ್ತೆ ರುದ್ರನ ಲಿಂಗವಲ್ಲ ಅಹುದೆಂಬವು. ಮತ್ತೆ ಈಶ್ವರನೆ ಲಿಂಗವೆಂಬವು. ಮತ್ತೆ ಸದಾಶಿವನು ಲಿಂಗವೆಂಬವು. ಮತ್ತೆ ಪರಮೇಶ್ವರನೆ ಕರ್ಮಸಾದಾಖ್ಯರಿಗೆ ಪ್ರಣಮ ಪಂಚಾಕ್ಷರಿ ಲಿಂಗವಾದವೆಂಬವು. ಎಂಡೆಯೂ ಎನ್ನಲಿ. ಪರಮೇಶ್ವರನು ಹಮ್ಮಿದ ಜೀವಾತ್ಮನಾದನೆನಹುದೆ ಪಂಚ ಸಾದಾಖ್ಯರಿಗೆ ಪಂಚಾವಸ್ಥೆಯುಂಟೆನ್ನಬಹುದೆ. ಮತ್ತೆ ಇವರಿಗೆ ಪ್ರಳಯ ಉಂಟೆನ್ನಬಹುದೆ. ಮತ್ತೆ ಅಜ ಹರಿ ಇಂದ್ರರ ಭವಿಗಳೆನ್ನಬಹುದೆ. ಮತ್ತೆ ಬ್ರಹ್ಮ, ವಿಷ್ಣು, ರುದ್ರರ ತ್ರಿಪುಂಡ್ರ ತ್ರಿರೇಖೆ ಎನಬಹುದೆ. ಮತ್ತೆ ಮೂದೇವರಿಂದತ್ತಣ ಮಹಾಲಿಂಗವನೆನಬಹುದೆ. ಮತ್ತೆ ಸರ್ವಾತ್ಮರ ಶಿವನೆನಬಹುದೆ. ಮತ್ತೆ ಸರ್ವಾತ್ಮರ ಪಶುವೆನಬಹುದೆ, ಮತ್ತೆ ಪ್ರಾಣವಧೆಯ ಮಾಡಲದಹುದನಬಹುದೆ. ಮತ್ತೆ ಹಿಂಸೆಯ ಮಾಡಲಾಗದೆನ್ನಬಹುದೆ. ಮತ್ತಂಗದ ಮೇಲೆ ಲಿಂಗ ಹುಟ್ಟಿದ ಶಿಶು ಸ್ಥಾವರಲಿಂಗದ ಗದ್ದುಗೆಯ ಲಿಂಗ ಬೇಕೆಂಬವು. ಮತ್ತೆ ಸ್ಥಾವರಲಿಂಗಗಳಿಗೆ ಭಕ್ತಿಯ ಮಾಡಬೇಕೆಂಬವು. ಮತ್ತೆ ಅಂಗದ ಮೇಲೆ ಲಿಂಗವಿದ್ದವರು ಸ್ಥಾವರವ ಮನ್ನಿಸಬೇಕೆಂಬವು. ಮತ್ತೆ ಬಹುಲಿಂಗ ಪೂಜೆ ಬೇಡವೆಂಬವು. ಮತ್ತೆ ಸ್ಥಾವರಲಿಂಗವಿದ್ದ ಕ್ಷೇತ್ರಕ್ಕೆ ಪ್ರಳಯವಿಲ್ಲವೆಂಬವು. ಮತ್ತೆ ಸ್ಥಾವರಲಿಂಗವಿದ್ದ ಕ್ಷೇತ್ರಕ್ಕೆ ಪ್ರಳಯ ಉಂಟೆಂಬವು. ಮತ್ತೆ ತಮ್ಮ ಶಿವನಿರ್ದ ಕೈಲಾಸಕ್ಕೆ ಪ್ರಳಯ ಉಂಟೆಂಬವು. ಮತ್ತೆ ಕೈಲಾಸದಲ್ಲಿ ಕರಣೇಂದ್ರಿಯಂಗಳು ಉಂಟೆಂಬವು. ಮತ್ತೆ ಶಿವನ ತೊಡೆಯ ಮೇಲೆ ಮಾಯೆ ಉಂಟೆಂಬವು. ಮತ್ತೆ ಮರ್ತ್ಯಲೋಕದೊಳಗೆ ಮಲತ್ರಯಂಗಳು ಕರಣಂಗಳು ಉಂಟಲ್ಲದೆ ರಜತಾದ್ರಿಯಲ್ಲಿ ಇಲ್ಲವೆಂಬವು. ಮತ್ತಲ್ಲಿ ರುದ್ರಕರ್ಣಿಕೆಯರ ನೋಟಬೇಟಂಗಳ ಸೋಂಕುವಿಡಿದು ಮತ್ತೆ ಮರ್ತ್ಯಕ್ಕೆ ಇಳಿತಹರೆಂಬವು. ಮತ್ತೆ ಮಾಯೆಯ ನಿರಾಕಾರವ ಮಾಡಿ ಷಡುದೇವರುಗಳ ಷಡುಸ್ಥಲದವರೆಂಬವು. ಮತ್ತೆ ಅಜಹರಿ ಸುರಪ ಭೈರವ ಬಸ್ತಿ ಮೈಲಾರನಿಂತಪ್ಪವನನ್ಯದೈವಂಗಳೆಂಬವು. ಮತ್ತಿವರ ಪೂಜೆಗಳೆಲ್ಲರು ಶಿವನ ಮುಟ್ಟಿಹವೆಂಬವು. ಮತ್ತಿವರ ಮನದಲ್ಲಿ ನೆನಯಬಾರದೆಂಬವು. ಮತ್ತಿವರ ಪದವಿಗಳ ಬೇಡಿಕೊಳ್ಳಬೇಕೆಂಬವು. ಮತ್ತಿವರ ಪದಂಗಳು ಬೇಡವೆಂದು ಜರಿದು ಚತುರ್ವಿಧ ಮೋಕ್ಷವ ಬೇಡಿಕೊಳ್ಳಬೇಕೆಂಬವು. ಮತ್ತಾ ಪದಂಗಳನು ಜಡನೆಂದುಜರಿದು ಶಿವನ ಕಾಣೆನೆನುತ್ತಿಹವು. ಮತ್ತೆ ಶಿವನು ಶಿವಶಕ್ತಿಯೂ ಒಂದೆ ಎಂಬವು. ಮತ್ತೆ ಶಿವನು ಪರಿಪೂರ್ಣನೆಂಬವು. ಮತ್ತೆ ಗುರುಲಿಂಗ ಜಂಗಮ ಒಂದು ಎಂಬವು. ಮತ್ತೆ ಲಿಂಗವೆ ನಿರ್ಮಲನು, ಜಂಗಮವೆ ಮಲಿನನೆಂಬವು. ಮತ್ತೆ ಗುರುವಿಂಗು, ಲಿಂಗಕ್ಕೂ ಜಂಗಮವೆ ಘನವೆಂದು ಸ್ತೋತ್ರವ ಮಾಡುವುವು. ಮತ್ತ ತದ್ದಿನಂಗಳ ಸಂಕಲ್ಪವ ಮಾಡಬೇಡೆಂಬವು. ಮತ್ತೆ ಮಾಡದಿರಬಾರದೆಂಬವು. ಮತ್ತೆ ಜಂಗಮ ಪ್ರಸಾದವ ಲಿಂಗಕ್ಕೆ ಸಲ್ಲದು, ಲಿಂಗಪ್ರಸಾದವ ಜಂಗಮಕ್ಕೆ ಸಲುಹುದೆಂಬವು. ಮತ್ತೆ ಭಕ್ತನೆ ಶಿವನು ಶಿವನೆ ಭಕ್ತನೆಂಬವು. ಮತ್ತೆ ಪ್ರಳಯಕಾಲಕ್ಕೆ ಭಕ್ತರೆಲ್ಲಾ ಸಾವರು, ಶಿವನೊಬ್ಬನೆ ಉಳಿವನೆಂಬವು. ಮತ್ತೆ ಪ್ರಳಯಕಾಲಕ್ಕೆ ಭಕ್ತರೆಲ್ಲಾ ಸಾವರು, ಶಿವನೊಬ್ಬನೆ ಉಳಿವನೆಂಬವು. ಹೀಗೆ ಸ್ಥೂಲ ಪ್ರಣಮ ಪಂಚಾಕ್ಷರಿಗಳು ಯುಕ್ತವಾದ ವೇದಶಾಸ್ತ್ರಾಗಮ ಪುರಾಣಂಗಳನು ಮನಮಾಯೆಯ ಷಡುದೇವತೆಗಳನು ಮರ್ತ್ಯರುಗಳನು ಇಂತಿವೆಲ್ಲವನು ಬೇರ್ಪಡಿಸಿ ತೆಗೆದು ಹಾಕಿನಿಂದ ಭಕ್ತ ಮಾಹೇಶ್ವರರನಲ್ಲದೆ ಪರಶಿವ ಬಸವಾದಿ ಪ್ರಮಥರುಗಳೊಪ್ಪರು. ಇಂತೀ ಜಡತತ್ವಂಗಳನು ಹಲವು ಮಾತು ಮಂತ್ರ ಜಡಕ್ರಿಯಗಳನೊಪ್ಪರೆಂಬುದಕ್ಕೆ ಸಾಕ್ಷಿ.


[1] ಡೇನು(ಬ)

[2] ಡೇನು(ಬ)

[3] ಡೇನು(ಬ)

[4] ಡೇನು(ಬ)

[5] ಪರದ್ವಾರ (ಬ)

[6] ಪರದ್ವಾರ (ಬ)

[7] + ಲಿಂಗ (ಬ)

[8] ಕೂಡಲಚನ್ನಸಂಗಮದೇವ (ಬ)

[9] ಕೂಡಲಚನ್ನಸಂಗಮದೇವ (ಬ)

[10] + ಸದ್ (ಬ)

[11] x (ಬ)

[12] x (ಬ)

[13] x (ಬ)

[14] x (ಬ)

[15] x (ಬ)

[16] x (ಬ)

[17] ಕೊಟ್ಟು (ಬ)

[18] ಕೊಟ್ಟು (ಬ)

[19] ರ (ಬ)

[20] ರ (ಬ)

[21] ರ (ಬ)

[22] ರ (ಬ)

[23] ನಯ್ಯಾ (ಬ)

[24] ದೆ(ಬ)

[25] ಕಪ್ಪರ (ಬ)

[26] ಕಪ್ಪರ (ಬ)

[27] ಲ್ಲರೂ (ಬ)

[28] ಸಾವ (ಬ)

[29] ಸಾವ (ಬ)

[30] ವಹಂತ (ಬ)

[31] ವ(ಬ)

[32] ಚರ (ಬ)

[33] ಚರ (ಬ)

[34] ಶ್ರೀ (ಬ)

[35] x (ಬ)

[36] x (ಬ)