೪೪೩

ಕಂಚು ಮುಟ್ಟು ಕಲ್ಲುಗುಂಡುಗಳ್ಹೇರುವಣ್ಣಗಳು ನೀವು ಕೇಳಿರೆ.
ಘಂಟೆಯ ನುಡಿಸಿ ಶಿವನ

[1]ಂಟು ಮಾಡಿಕೊಂಡೆಹೆನೆಂಬಿರಿ.
ಆ ಘಂಟೆಯ ಧ್ವನಿಗೆ ಒಂದು ಗೋಟಡಕೆಯ
ಸೋಲ ಗುರುರಾಯ[2]ನಾಥನು.       ||೬೧||

೪೪೩

ಕಟ್ಟಿಹೆ ಬಿಟ್ಟಿಹೆನೆಂಬ ದಂದುಗ
ನಿಮಗೇಕೆ?
ತೆರನನರಿಯದೆ ಹಲವು ತಪ್ಪಲ ತರಿ ತಂದು
ಮೇಲೊಟ್ಟಲೇಕೆ?
ಜಂಗಮ ಬಂದರೆ[3] ತೆರನರಿತು ಅರ್ಪಿಸಬಲ್ಲಡಲ್ಲಿ
ತಾನೆ[4] ಶಿವನು ತೆರಹಿಲ್ಲದಿಪ್ಪನೆಂದಾತ ನಮ್ಮಂಬಿಗ ಚೌಡಯ್ಯ. ||೬೨||

೪೪೫

ಹಸಿಯ ಸೊಪ್ಪು ಮುರಿದು ತರುವಾಗ
ನೀವೇನು ಆಡಿನ ಮಕ್ಕಳೆ?
ಹಸಿಯ ಸೊಪ್ಪು ತಂದು ಬಿಸಿ ಮಾಡಿ
ಶಶಿಧರನೆಂಬ ಜಂಗಮಕ್ಕೆ ನೀಡಲು,
ಆ ಲಿಂಗದ ಹಸಿವು ಹೋಯಿತ್ತೆಂದಾತ
ನಮ್ಮಂಬಿಗ ಚೌಡಯ್ಯ       ||೬೩||

೪೪೬

ಎನ್ನ ಮನೆಯೆಂಬವರಿಗೆ ಬ್ರಹ್ಮನಿಕ್ಕಿದ ಕೋಳವಾಯಿತ್ತು.
ಎನ್ನ ಸ್ತ್ರೀಯೆಂಬವಂಗೆ ವಿಷ್ಣುವಿಕ್ಕಿದ ಸಂಕಲೆ ಹೂಡಿತ್ತು.
ಎನ್ನ ಧನವೆಂಬವಂಗೆ ರುದ್ರನಿಕ್ಕದ ಆಸೆ ರೋ[5]ಷದ ಜಿಂಜಿಱೆ ಹೂಡಿತ್ತು.
ಎನ್ನ ಕುಲವೆಂಬವಂಗೆ ಈಶ್ವರನಿಕ್ಕಿದ ಸೆರೆ ಸಾಲೆಯ ಬಂಧಿಕಾನದೊಳು ಬಿದ್ದ ನೋಡಾ.
ಇಂತೀ ಕೊರಳುದ್ದಕ್ಕೆ [6]ಹೂಳಿಸಿಕೊಂಡು
ಮುಗಿಲುದ್ದಕ್ಕೆ ಹಾರಿಹೆನೆಂಬಂತೆ
ನಾನು ಭಕ್ತ, ನಾನು ಮಾಹೇಶ್ವರನೆಂಬ ನುಡಿಗೆ ನಾಚರುನೋಡಾ.
ಆ ಭಕ್ತನ ಮಠಕ್ಕೆ ಜಂಗಮ ನಿರಂತರ ಬರುತಿರಲು,
ಬ್ರಹ್ಮನಿಕ್ಕಿದ ಕೋಳ ಕಡಿಯಿತ್ತು.
ಆ ಭಕ್ತನ ಸ್ತ್ರೀಯು ಜಂಗಮಕ್ಕೆ ದಾಸೋಹವ[7] ನಿರಂತರ[8] ಮಾಡುತ್ತಿರಲು
ವಿಷ್ಣು ವಿಕ್ಕಿದ ಸಂಕಲೆ ಕಡಿಯಿತ್ತು.
ಆ ಭಕ್ತನು ಜಂಗಮಕ್ಕೆ ನಿರಂತರ ನಿರೂಪಾಧಿಯಲ್ಲಿ
ಧನವ ಸವಸುತ್ತಿರಲು,
ರುದ್ರನಿಕ್ಕಿದ [9]ಆಶೆ ರೋಷದ[10] ಜಿಂಜಿಱೆ ಕಡಿಯಿತ್ತು.
ಆ ಭಕ್ತನು ಜಾತಿ ಸೂತಕವಳಿದು
ಶಿವಭಕ್ತರ ಕುಲವ ವಿಚಾರಿಸದೆ
ಶಿವಕುಲವೆಂದರಿದು ನಿರಂತರ ಬೆರಸಿಕೊಂಡಿರುತ್ತಿರಲು,
ಈಶ್ವರನಿಕ್ಕಿದ ಕುಲದ ಸೆರೆ ಸಾಲಯೆ
ಬಂದಿಕಾನದಿಂದ ಹೊರವಂಟ ನೋಡಾ.
ಇಂತು ಅಧಿದೇವತೆಗಳು ಇಕ್ಕಿದ
ಪಾರುಪತ್ಯ, ಮಂತ್ರ ಶಕ್ತಿಗಳ
ಮೀರಿ [11]ಹೆಡ್ಡಿಲ್ಲದ[12] ಸಹಜರ ತೋರಿ ಬದುಕಿಸಯ್ಯಾ
ಕೂಡಲಚನ್ನಸಂಗಮದೇವಾ           ||೬೪||

೪೪೭

ಪ್ರಥಮದಲ್ಲಿ ಪರುಷವೆಂಬ ಪರುಷನ ಗುಣದಿಂದ ಪಾದೋದಕ.
ದ್ವಿತೀಯದಲ್ಲಿ ಅಂಗಗುಣವಳಿಯಿತ್ತಾಗಿ
ಲಿಂಗ ಮುಖದಿಂದ ಬಂದುದು ಲಿಂಗೋದಕ.
ತೃತೀಯದಲ್ಲಿ ಮಹಾಗಣಂಗಳ[13]ಬರವಿನಿಂದ[14] ಬಂದುವಾಗಿ ಮಜ್ಜನೋದಕ.
ಚತುರ್ಥದಲ್ಲಿ ಚತುರ್ದಳ ಪದ್ಮ ವಿಕಸಿತವಾಗಿಪ್ಪುದರಿಂದ ಪುಷ್ಪೋದಕ.
ಪಂಚಮದಲ್ಲಿ ಲಿಂಗಕ್ಕೆ ಪರಮ ಪರಿಯಾಣವನಿಕ್ಕುವಾಗ ಅವಧಾನೋದಕ.
ಷಷ್ಠಮದಲ್ಲಿ ಲಿಂಗದಾರೋಗಿಣೆಯ ಅವಸರದಲ್ಲಿ ಆಪ್ಯಾಯನೋದಕ.
ಸಪ್ತಮದಲ್ಲಿ ಲಿಂಗಕ್ಕೆ ಹಸ್ತೋದಕ.
ಅಷ್ಟಮದಲ್ಲಿ ಅಷ್ಟಾಂಗ ಯೋಗ[15]ರಹಿತ[16]ಪರಮ ಪರಿಣಾಮೋದಕ.
ನವಮದಲ್ಲಿ ನಾಮಸೀಮೆಯಿಲ್ಲವಾಗಿ ನಿರ್ನಾಮೋದಕ.
ದಶಮದಲ್ಲಿ ೪ಹೆಸರಿಲ್ಲವಾಗಿ[17] ನಿತ್ಯೋದಕ,
ಇಂತು ದಶವಿಧ ಪಾದೋದಕ.
ಇನ್ನು ಏಕಾದಶ ಪ್ರಸಾದ:
ಪ್ರಥಮದಲ್ಲಿ ಮಹಾದೇವಂಗೆ ಮನದರ್ಪಿತ.
ದ್ವಿತೀಯದಲ್ಲಿ ಮಹೇಶ್ವರಂಗೆ ವೀರಾರ್ಪಿತ.
ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ.
ಚತುರ್ಥದಲ್ಲಿ ನಿವಿಷಯಾರ್ಪಿತ.
ಪಂಚಮದಲ್ಲಿ ಪಂಚವಕ್ರಾರ್ಪಿತ.
ಷಷ್ಠಮದಲ್ಲಿ ನಷ್ಟರೂಪಾಗಿ ನಿರೂಪಾರ್ಪಿತ
ಸಪ್ತಮದಲ್ಲಿ ಆತ್ಮಾರ್ಪಿತ
ಅಷ್ಟಮದಲಿ ತನ್ನ [18]ಮರದು[19] ಮಹಾರ್ಪಿತ
ನವಮದಲ್ಲಿ ಅಸಮ ಸಹಸ್ರನಾಳದಿಂದ ತೃಪ್ತಾರ್ಪಿತ
ದಶಮದಲ್ಲಿ ಚಿತ್ತಸುಯಿಧಾನಿಯಾಗಿ ಸುಷುಮ್ನನಾಳದಲ್ಲಿ ಅಮೃತಾರ್ಪಿತ
ಏಕಾದಶದೇಕ ಪ್ರಸಾದವ ನೋಡಹೋದ ತನ್ನ ನುಂಗಿತ್ತಯ್ಯ
ಹೇಳಬಾರದ ಘನವು [20]ಕಾಣ[21] ಬಾರದಾಗಿ
ಕೂಡಲ ಚನ್ನಸಂಗನಲ್ಲಿ ಉಪಮಿಸಬಾರದ ಮಹಾಘನವು.         ||೬೫||

೪೪೮

ಆಯತ ಸ್ವಾಯತ ಸಂಭಾವಿತವ
ಅನಾಯತಂಗಳು ಮುಟ್ಟಲಮ್ಮವು ನೋಡಾ.
ಅದೇಕೆಂದಡೇ
ಕಂಗಳ ಕೈಗಳಲ್ಲಿ ಅರ್ಪಿಸುವ,
ನಾಶಿಕದ ಕೈಗಳಲ್ಲಿ ಅರ್ಪಿಸುವ,
ಜಿಹ್ವೆಯ ಕೈಗಳಲ್ಲಿ ಅರ್ಪಿಸುವ,
ತ್ವಕ್ಕಿನ ಕೈಗಳಲ್ಲಿ ಅರ್ಪಿಸುವ,
ಶ್ರೋತ್ರದ ಕೈಗಳಲ್ಲಿ ಅರ್ಪಿಸುವ,
ಮನದ ಕೈಗಳಲ್ಲಿ ಅರ್ಪಿಸುವ,
ಭಾವ[22]ದ ಕೈಗಳಲ್ಲಿ ಅರ್ಪಿಸುವ
ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿಯೇ ಲಿಂಗಾರ್ಪಿತವಮಾಡಬಲ್ಲನಾಗಿ
ಕೂಡಲಚನ್ನಸಂಗಯ್ಯನಲ್ಲಿ ಆತನೆ ಮಹಾಪ್ರಸಾದಿ       ||೬೬||

೪೪೯

ರೂಪಾಗಿ ಬಂದುದ ಕಾಯದ ಕೈಯ[23]ಲ್ಲಿ ಕೊಡುವುದು.
ರುಚಿಯಾಗಿ ಬಂದುದ[24]ಮನ[25]ದ ಕೈಯಲ್ಲಿ ಕೊಡುವುದು.
ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು.
ಅರ್ಪಿಸುವ ತೆರನಿದು ಪ್ರಸಾದಿಗಯ್ಯಾ.

ಸಾಕ್ಷಿ:

ಇಷ್ಟಲಿಂಗಾರ್ಪಿತಂ ರೂಪಂ ರುಚಿಃ ಪ್ರಾಣಸಮರ್ಪಿತಾ|
ತೃಪ್ತಿರ್ಭಾವ ಸಮಾಯುಕ್ತಾ ಅರ್ಪಿತಂ ತ್ರಿವಿಧಾತ್ಮಕಂ||

ಎಂದುದಾಗಿ, ರೂಪು ರುಚಿಯ ತೃಪ್ತಿಯ ಕೊಡಬಲ್ಲಡೆ
ಕೂಡಲಚನ್ನಸಂಗಯ್ಯದಲ್ಲಿ ಮಹಾಪ್ರಸಾದಿಯಯ್ಯಾ     ||೬೭||

೪೫೦

ಭಕ್ತಿಗನುಭಾವವೆ ಬೀಜ ಕಾಣಿರೊ.
ಭಕ್ತಿಗನುಭಾವವೆ ಆಚಾರ ಕಾಣಿರೊ.
ಅನುಭಾವವಿಲ್ಲದವನ ಭಕ್ತಿಯಳತಟಗೊಳಿಸಿತ್ತು.
ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿರ್ದಡೆ
ಕೂಡಲಚನ್ನಸಂಗ[26]ಮದೇವ[27] ನರದಲ್ಲಿಕ್ಕುವ.            ||೬೮||

ಇನ್ನು ಕಕ್ಷೆ, ಕರಸ್ಥಲ, ಕಂಟ, ಉರಸೆಜ್ಜೆ, ಉತ್ತಮಾಂಗ, ಅಮಳೈಕ್ಯ ಅಂಗಸೋಂಕುಗಳೆಂಬ ಷಡುಸ್ಥಾನಂಗಳಲ್ಲಿ ಲಿಂಗವ ಧರಿಸುವಂಥಾ ಕ್ರಮ ಕಟ್ಟಣೆಗಳ ಷಡುಸ್ಥಲ ಬ್ರಹ್ಮಿಗಳಿಗೆ ಬಿನ್ನಹಂ ಮಾಡಿಹೆನದು ಹೇಗೆಂದಡೆ: ಷಡುಸ್ಥಾನಂಗಳಲ್ಲಿ ಲಿಂಗಂಗಳನಳವಡಿಸಿಕೊಂಡು ವೀರಶೈವ ಮಾರ್ಗದೊಳಗೆ ನುಡಿದು ನಡವಂಥಾ ಭಕ್ತಮಾಹೇಶ್ವರರು ತಮ್ಮಂಗದ ಮೇಲಿರ್ದ ಲಿಂಗಂಗಳಿಗೆ ಸಲುವಂಥಾ ಆಚಾರವನೆ ಹಿಡಿವುದು. ಸಲ್ಲದಂಥವನೆ ಬಿಡುವುದು. ಹಾಂಗೆ ಬಿಡದಿರ್ದಡೆ ಹೇಂಗೆ ಧರಿಸಿಕೊಂಡಿರ್ದಡೆಯೂ ಪ್ರಯೋಜನವಿಲ್ಲ. ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ.

೪೫೧

ಕಕ್ಷೆಯಲ್ಲಿ ಲಿಂಗವ ಧರಿಸಿ ಬಳಿಕ
ಅನ್ಯಕ್ಕಾಸೆಯಿಲ್ಲದಿರಬೇಕು.
ಮಾ[28]ಯದ ಉಸುರು ಎಡೆಯಾಡದಿರಬೇಕು.
ಸಂಸಾರ ಸಾಗರವ ಹೊದ್ದದೆ ಮನವು
ಮಹಾಸ್ಥಾನದಲ್ಲಿ ಇಂಬುಗೊಂಡಿರಬೇಕು.
ಕೂಡಲಚನ್ನಸಂಗಯ್ಯನಲ್ಲಿ ಏಕಾರ್ಥವಾಗಿ
ಕಕ್ಷೆಯಲ್ಲಿ ಲಿಂಗವ ಧರಿಸುವಡಿ[29]ದೆ ಕ್ರಮ        ||೬೯||

೪೫೨

ಕರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ
ಲಿಂಗದಲ್ಲಿ ಅನುಮಿಷನಾಗಿರಬೇಕು.
ಜಂಗಮವ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಿರಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು.
ತನ್ನ ನಿಲುಕಡೆಯ ತಾನೆ ಅರಿಯಬೇಕು.
ಇದು ಕಾರಣ ಕೂಡಲಚನ್ನಸಂಗಯ್ಯನಲ್ಲಿ
ಕರಸ್ಥಲದ ನಿಜವನರಿವಡಿದೆ ಕ್ರಮ.   ||೭೦||

೪೫೩

ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ
ಅತ್ಯಂತ ವಿಶೇಷ ಸ್ಥಳವುಗಳ ಶರಿರಾರ್ಥ
ಮಹಾರ್ಥದಲ್ಲಿ, ಮಹಾಲಿಂಗ ಸಂಪಾದನೆಯಲ್ಲಿ,
ತ್ರಿವಿಧ ಸಂಪಾದನೆಯಲ್ಲಿ,
ನಾದ ಬಿಂದು ಸಂಪಾದನೆಯಲ್ಲಿ, ಮಾರ್ಗಕ್ರಿಯಾ ಸಂಪಾದನೆಯಲ್ಲಿ,
ಭಕ್ತಿ ಸಂಪಾದನೆಯಲ್ಲಿ, ಭಾವನಿಷ್ಠೆಯಲ್ಲಿ
ಅರ್ಪಿತ ನಿಷ್ಠೆಯಲ್ಲಿ ಆಗಳವೆ ಮಹಾಸ್ಥಲವು
ಅತ್ಯಂತ ವಿಶೇಷಸ್ಥಲವಾಗಿ ಗಳ[30]ದಲ್ಲಿ
ಧರಿಸಿದಡೆ ಕೂಡಲಚನ್ನಸಂಗಯ್ಯನು            ||೭೧||

೪೫೪

ಉರಸ್ಥಲದಲ್ಲಿ ಲಿಂಗವಧರಿಸಿದ[31] ಬಳಿಕ
ಮನದ ಕೊನೆ[32]ಯಲಿ[33] ಲಿಂಗವನಗಲದಿರಬೇಕು.
ಉರಗುರುಸ್ಥಲ ಉರಲಿಂಗಸ್ಥಲ, ಉರಜಂಗಮಸ್ಥಲ
ಉರಪ್ರಸಾದಿಸ್ಥಲ ಉರಮಹಾಸ್ಥಲ ಉರನನುಭಾವಸ್ಥಲ[34]ವೆಂದರಿದ[35] ಬಳಿಕ
ಅನ್ಯ ಮಿಶ್ರಗಳ ಹೊದ್ದಲಾಗದು.
ತಟ್ಟು, ಮುಟ್ಟು, ತಾಗು ನಿರೋಧಂಗಳಿಗೆ ಗುರಿಯಾಗಲಾಗದು.
ಇಂದ್ರಿಯಂಗಳ ಕೂಡಿ ಮನಸ್ಥಾಪಗೊಳಲಾಗದು.
ಲಿಂಗಸ್ವಾಯತವಾಗಿ, ಪ್ರಾಣಲಿಂಗಪ್ರಾಣಿಗಿದು ಚಿನ್ಹ
ಕೂಡಲಚನ್ನಸಂಗಮದೇವಾ.          ||೭೨||

೪೫೫

ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ
ಅನ್ಯರಿಗೆ ತಲೆವಾಗಲಾಗದು; ಮಾನವರ ಬೇಡಲಾಗದು.
ಹಸಿವು ತೃಷೆ, ವಿಷಯಂಗಳು ಲಿಂಗದಲ್ಲಿ ನಿಕ್ಷೇಪವಾಗಬೇಕು.
ಜಾಗ್ರ, ಸ್ವಪ್ನ ಸುಷುಪ್ತಿಯಲ್ಲಿ
ಲಿಂಗದ ನಿಲುಕಡೆಯನರಿದು ತೆರಹಿಲ್ಲದಿರಬೇಕು.
ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ,
ಮಹಾತ್ಮಂಗೆ ಕೂಡಲಚನ್ನಸಂಗಮ ದೇವನಲ್ಲಿದೆ [36]ಕ್ರಮ[37]        ||೭೩||

೪೫೬

ಅಮಳೈಕ್ಯದಲ್ಲಿ ಲಿಂಗವ ಧರಿಸುವಡೆ
ಅನ್ನ ಪಾ[38]ನಂಗಳ[39] ಹಂಗಳಿಯಬೇಕು.
ಅಹಂಕಾರ ಮಮಕಾರ ಮೊದಲಾದಷ್ಟ ಮದಂಗಳಳಿಯಬೇಕು.
ಅನುಭಾವ ಘನವೇದ್ಯ ವಾ[40]ಗಬೇಕು.
ಕಾಮನ ಕಣ್ಣತೆರೆಯದಿರಬೇಕು.
ಶಬ್ದ ನಿಕ್ಯಬ್ದವಾ[41]ಗಿರ[42]ಬೇಕು
ಮಹಾ[43]ಶ್ರಯದಲ್ಲಿ ಮನವು ಲೀಯವಾಗಬೇಕು.
ಕೂಡಲಚನ್ನಸಂಗಯ್ಯನಲ್ಲಿ ಅಮಳೈಕ್ಯದೊಳು
ಲಿಂಗವ ಧರಿಸಿ ಪರಮ ಪರಿಣಾಮಿಯಾಗಬೇಕು.          ||೭೪||

೪೫೭

ಸದ್ಗುರು ಕಾರುಣ್ಯವುಳ್ಳ ಭಕ್ತ ಮಾಹೇಶ್ವರರ
ಲಿಂಗ ಓಸರಿಸಿದಡೆ ವ್ರತಗೇಡಿಯೆಂದು ಕಳೆಯಬಾರದು,
ಕೊಳಬಾರದು, ಕಾರುಣ್ಯ ಉಂಟಾಗಿ,
ಅದು ಹೇಗೆಂದಡೆ:
ಲಿಂಗವನರಿಸಿ ನೋಡಿ ಕಂಡಡೆ ಎತ್ತಿ ಧರಿಸಿಕೊಂಬುವುದು,
ಕಾಣದಿರ್ದಡೆ ಸರ್ವಸುಖವನು ಬಿಟ್ಟು
ಲಿಂಗ ಬಹನ್ನಕ್ಕರ ಧ್ಯಾನಾರೂಢನಾಗಿರಬೇಕು,
ತಥಾಪಿ ಕಾಣದಿರ್ದಡೆ ಪ್ರಾ[44]ಣ ತಾ ಹೋ[45]ದರೂ ಹೋಗುವುದಲ್ಲದೆ
ಮತ್ತೊಂದು ಲಿಮಗವ ಮಾಡಿಕೊಳಲಿಲ್ಲ;
ತನ್ನ ತಾ ಬಾಧೆ ಮಾಡಿಕೊಳಲಿಲ್ಲ.
ಅದೇಕೆಂದಡೆ:
ಶಸ್ತ್ರ ಸಮಾಧಿ ಜಲಾಂತರ ವನಾಂತರ ದಿಗುಬಲಿ ದಹನ
ಈ ಆರರಲ್ಲಿ ಸತ್ತಡೆ ಅಘೋರನರಕದಲ್ಲಿಕ್ಕುವ
ಕೂಡಲಚನ್ನಸಂಗಮದೇವ ||೭೫||

ಇನ್ನು ಅನ್ಯದೈವಂಗಳನುಭವಿಗಳನು ಕಳವು ಹಾದರ ಮನಭವಿಗಳನು, ಪರಪುರುಷರೆಂಬ ಲಿಂಗಂಗಳನು, ಇಂತಿವೆಲ್ಲವನು ಬೆರಸೂದ ಬಿಡಿಸಿ ಗುರುಲಿಂಗ ಜಂಗಮವೆಂಬ ಏಕಲಿಂಗನಿಷ್ಠಾಪರನು ಭಕ್ತಿ, ಮಾಟ, ಕೂಟ ಶೀಲಂಗಳನು ಬಸವಾದಿ ಪ್ರಮಥರ ವಚನಂಗಳ ಬಲ್ಲಂಥಾ ಭಕ್ತ ಮಾಹೇಶ್ವರರಿಗೆ ಬಿನ್ನಹಂ ಮಾಡಹೆನದೆಂತೆಂದಡೆ: ಬಸವಾದಿ ಪ್ರಮಥರ ಸಮಯವಾಗಿರ್ದವರು ಹಿಂದೆ ಹೇಳಿ ಕಳದವೆಲ್ಲರನು ಬೆರಸಿದಡೆ ಭಕ್ತರಲ್ಲ, ಜಂಗಮವಲ್ಲ, ಅದೇಕೆಂದಡೆ : ಅವನೆಲ್ಲವನು ಮುನ್ನವೆ ಹೇಳಿಸಿಬಿಟ್ಟು ಮಹಾಲಿಂಗವ ಅಂಗದ ಮೇಲೆ ಸ್ಥಾಪಿಸಿ ಕೊಂಡಬಳಿಕ ಮತ್ತವ ಹಿಡಿವವರು, ಅತ್ತಲು ಅಲ್ಲ ಇತ್ತಲು ಅಲ್ಲವಾಗಿ ಹೋದಹರೆಂದು ಭಕ್ತ ಜಂಗಮವಲ್ಲವೆಂದೆನು. ಇಂತಪ್ಪನುಭವತುರಗಿದ [46]ಸೂತ್ರ[47]ಕ್ಕೆ ಸಾಕ್ಷಿ.

೪೫೮

ಸೂಳೆ, ಸುರೆ, ಬೆಕ್ಕು, ನಾಯಿ, ಅನ್ಯದೈವ
ತಾಳಹಣ್ಣು ಇನಿತುಳ್ಳನ್ನಕ್ಕರ ಭಕ್ತನೆ? ಅಲ್ಲಲ್ಲ.
ಅವನು ಗುರುದ್ರೋಹಿ.
ಹಂದೆಯ ಹೇಲ ತಿಂದು ಒಂದರ ಮುಸುಡನೊಂದು ಮೂಸುವಂತೆ
ಕಾಣಾ ಕಲಿದೇವಯ್ಯಾ.      ||೭೬||

೪೫೯

ಮಾರಿ ಮಸಣಿ ಜಕ್ಕಿ ಜಲದೇವರು
ಮೈಲಾರ ಮುಂತಾಗಿ, ಈ ದೇವರೆಲ್ಲರು
ಅಕ್ಕಸಾಲೆಯ ಕುಪ್ಪಟ್ಟಿಗೆಗೆ ಬಂದರಾಗಿ
ಇದೆ ಸುಡುಗಾಡು ಕಾಣಾ ಕಲಿದೇವಯ್ಯಾ.      ||೭೭||

೪೬೦

ಭವಿಯ ಮನೆಯಲ್ಲಿ ಭವಿಪಾಕವಲ್ಲದೆ,
ಭಕ್ತರ ಮನೆಯಲ್ಲಿ ಭವಿಪಾಕವಿಲ್ಲ.
ಆ ಭಕ್ತನೂ ಸ್ತ್ರೀಯೂ ಲಿಂಗ ಮುಂತಾಗಿ,
ಗುರುಲಿಂಗ ಜಂಗಮಕ್ಕೆ ಬೇಕೆಂದು
ಭಕ್ತಿರತಿಯಿಂದ ಲಿಂಗಹಸ್ತದಲ್ಲಿ ಮಾಡಿದ
ಸರ್ವದ್ರವ್ಯ ಸಕಲ ಪದಾರ್ಥಂಗಳೆಲ್ಲ ಶುದ್ಧಪಾಕ
ಅತ್ಯಂತ ಪವಿತ್ರ ಲಿಂಗಕ್ಕೆ ಸಲುವುದು.
ಅದನತಿಗಳದಡೆ ದ್ರೋಹ.
ಲಿಂಗಕ್ಕೆ ಕೊಟ್ಟು ಕೊಳಬಹುದು ಕೂಡಲಚನ್ನಸಂಗಮದೇವಾ.     ||೭೮||

೪೬೧

ಭಕ್ತನೆ ದೇವನೆಂದರಿದು
ಭಕ್ತನ ಮಠವನರಿಸಿಕೊಂಡು ಹೋಗಿ
ಯುಕ್ತಿಯನರಸುವ ಪಾತಕರ ವಿಧಿಗಿನ್ನೆಂತೊ?
ಭಕ್ತನ ಮಠಕ್ಕೆ ಅದು ಇದು ಎಂಬ
ಸಂದೇಹಿ ಪಾತಕ ನೀ ಕೇಳೊ.
ಭಕ್ತನ ಮಠದೊಳಗೆ ಭಕ್ತಿಯ ರಸದ ಬೆಳಸು,
ಲಿಂಗದ ದ್ರವ್ಯ ಪ್ರಸಾದದ ರಾಶಿ;
ಇಂತಪ್ಪ ಪ್ರಸಾದ.
ಅಲ್ಲಿಗೆ ಹೊಗಿ ಸೂತಕವನರಸುವ
ಪಾತಕರ ಮೆಚ್ಚುವನೆ ಕೂಡಲಸಂಗಮದೇವ? ||೭೯||

೪೬೨

ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ,
ಭವಿಯೊಡತಣ ಸಂಗವು ಭಂಗವೆಂದರಿಯರು.
ಭವಿಯೊಡತಣ ಸಂಗವ ಮಾಡುವರು
ಕೂಡಲಚನ್ನಸಂಗಯ್ಯ ಅವರು ಅತ್ತಲುವಲ್ಲ ಇತ್ತಲುವಲ್ಲ ||೮೦||

೪೬೩

ಶಿವಮಂತ್ರ ಸಂಸ್ಕಾರವಿಲ್ಲದ ತನುಭವಿಗಳು
ತಮ್ಮ ಲಿಂಗಕ್ಕೆ ಮಾಡುವನ್ನಕ್ಕರ,
ಭವಿಮಿಶ್ರವ ಕಳೆದೆವೆಂದು ಎಂತೆನಬಹುದು?
ಶಿವಮಂತ್ರ ಸಂಸ್ಕಾರವಾಗಿ ಜಾತಿಸೂತಕ,
ಪ್ರೇತಸೂತಕ, ಎಂಜಲುಸೂತಕ, ಜನನಸೂತಕ, ರಜಸ್ಸೂತಕವೆಂಬ
ಪಂಚಸೂತಕವುಳ್ಳ ಮನಭವಿಗಳು
ತಮ್ಮ ಲಿಂಗಕ್ಕೆ ಪದಾರ್ಥವ ಮಾಡುವನ್ನಕ್ಕರ
ಭವಿತನ ಹಿಂಗದು.
ತನು ಒಂದನೆ ಭವಿ, ಮನ ಎರಡನೆ ಭವಿ, ಧನ ಮೂರನೆ ಭವಿ,
ಈ ತ್ರಿವಿಧವ ಕಚ್ಚಿದ ಭವಿಗಳು
ಭವಿಮಿಶ್ರವ ಕಳೆದೆವೆಂದು ಎಂತೆನಬಹುದು?
ತನುಭವಿಹಸ್ತದಿಂದ ಪಂಚಮಹಾಪಾತಕ,
ಮನಭವಿಹಸ್ತದಿಂದ ಘೋರನರಕ.
ಇವನರಿದು ಇಂತಪ್ಪ ಭವಿಗಳನೊಳಗಿಟ್ಟುಕೊಂಡು
ನಾವು ಭವಿಮಿಶ್ರವ ಕಳೆದೆವೆಂಬ ಲಜ್ಜೆಗೆಟ್ಟ
ದುರಾಚಾರಿಗಳ ಸಜ್ಜನ ಸದ್ಭಕ್ತರು ಮೆಚ್ಚುವರೆ
ಕೂಡಲಚನ್ನಸಂಗಮದೇವಾ?         ||೮೧||


[1] ನು (ಬ)

[2] ಯ (೨೫೭)

[3] x (ಬ)

[4] x (ಬ)

[5] ದೋ (ಅ)

[6] x (ಬ)

[7] x (ಬ)

[8] x (ಬ)

[9] ಆ ಸಂಕಲೆ (ಅ)

[10] ಆ ಸಂಕಲೆ (ಅ)

[11] ಇದ್ದು ಇಲ್ಲದ (ಚಬವ)

[12] ಇದ್ದು ಇಲ್ಲದ (ಚಬವ)

[13] ಭರದಿಂದನಿಂದದು (ಬ)

[14] ಭರದಿಂದನಿಂದದು (ಬ)

[15] ವಾದಲ್ಲಿ (ಚಬವ)

[16] ವಾದಲ್ಲಿ (ಚಬವ) / ಹುಸಿಯಿಲ್ಲವಾಗಿ (ಚಬವ)

[17] ಹುಸಿಯಿಲ್ಲವಾಗಿ (ಚಬವ)

[18] ಮಱೆದಲ್ಲಿ (ಚಬವ)

[19] ಮಱೆದಲ್ಲಿ (ಚಬವ)

[20] ಕೇಳ (ಚಬವ)

[21] ಕೇಳ (ಚಬವ)

[22] ಹ್ಯ(ಬ)

[23] ಗಳ (ಬ)

[24] ಪ್ರಾಣ (ಚಬವ)

[25] ಪ್ರಾಣ (ಚಬವ)

[26] ಯ್ಯ ಅಘೋರ (ಬ)

[27] ಯ್ಯ ಅಘೋರ (ಬ)

[28] ವಾ (ಬ)

[29] x (ಬ)

[30] + ಸ್ಥಲ (ಬ)

[31] ಕೊಂಡ (ಬ)

[32] ಯಿಂದ (ಅ)

[33] ಯಿಂದ (ಅ)

[34] x (ಬ)

[35] x (ಬ)

[36] ಮುಕ್ತಿ ಪಥವಯ್ಯ (ಚಬವ)

[37] ಮುಕ್ತಿ ಪಥವಯ್ಯ (ಚಬವ)

[38] ನಾದಿಗಳ (ಬ)

[39] ನಾದಿಗಳ (ಬ)

[40] ನಾ (ಬ)

[41] ಗ(ಬ)

[42] ಗ(ಬ)

[43] ಹದಾ (ಬ)

[44] ರೂಢನಾಗಿಪ್ಪನು (ಬ)

[45] ರೂಢನಾಗಿಪ್ಪನು (ಬ)

[46] ಶಾಸ್ತ್ರ (ಬ)

[47] ಶಾಸ್ತ್ರ (ಬ)